ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩೪
ಕದಳಿಯ ಕರ್ಪೂರ


`ನಿಜ ಮಹಾದೇವಿ ; ಆದರೆ ಈ ಪರ್ವತಾಗ್ರದಿಂದ ಈಗ ಇಳಿದು ಬಾ ತಾಯಿ. ಇದೋ ನಿನ್ನ ತಾಯಂದಿರು ನಿನ್ನನ್ನು ಕರೆಯುತ್ತಿದ್ದಾರೆ ಎನ್ನುತ್ತಾ ಪ್ರಭುದೇವ, ಗಂಗಾಬಿಕೆ ನೀಲಾಂಬಿಕೆಯರತ್ತ ನೋಡಿದ. ಇಬ್ಬರೂ ಮುಂದೆ ಸರಿದು ಮಹಾದೇವಿಯ ಬಳಿಗೆ ಬಂದು ಅವಳ ಮೈದಡವುತ್ತಾ ಸಂತೈಸತೊಡಗಿದರು. ಅವರ ಸ್ಪರ್ಶದಿಂದ ಮಹಾದೇವಿ ಸಂಪೂರ್ಣವಾಗಿ ಎಚ್ಚೆತ್ತವಳಂತೆ ಕಾಣಿಸಿದಳು. ನಿದ್ದೆಯ ಆಚೆಗಿನ ಅರಿವಿನ ಎಚ್ಚರದಿಂದ ಇಳಿದು ಈಗ ಜಾಗ್ರದವಸ್ಥೆಗೆ ಬಂದಂತೆ ತೋರಿತು.

``ಎಲ್ಲರನ್ನೂ ಗುರುತಿಸುವವಳಂತೆ ನೋಡಿ ಅವರಿಗೆ ನಮಸ್ಕರಿಸಲು ಉದ್ಯುಕ್ತಳಾಗುತ್ತಿದ್ದಂತೆಯೇ :

``ಅದೆಲ್ಲಾ ಬೇಡ, ಮಹಾದೇವಿ. ಪ್ರಭು ಹೇಳಿದ : ``ಮನವೇ ಲಿಂಗವಾದ ಬಳಿಕ ನೆನೆವುದಿನ್ನಾರನ್ನು ? ಭಾವವೇ ಐಕ್ಯವಾದ ಬಳಿಕ ಬಯಸುವುದಿನ್ನಾರನ್ನು? ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ ನಾ ನೀನೆಂಬ ಭೇದವಳಿದು, ಪೂಜ್ಯ ಪೂಜಕರೆಂಬ ಸಂಬಂಧವೂ ಅಡಗಿ, ಸ್ವಯಂ ಪೂರ್ಣತೆಯಲ್ಲಿ ಲೀನವಾಗುತ್ತದೆ.

``ನಿಜ ಪ್ರಭುವೇ, ನಿಮ್ಮ ದಯೆಯಿಂದ ಇಂದು ನನಗೆ ಅದು ಲಭಿಸಿತು:

ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ ;
ಮನ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ !
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ !
ಚನ್ನಮಲ್ಲಿಕಾರ್ಜುನಾ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯ.

``ಇದೇ ಸತಿಪತಿಭಾವದ ಉಚ್ಚತಮವಾದ ನಿಲುವು. ನಿನ್ನಂತರಂಗದ ಮಧುರಭಕ್ತಿ, ಸಮರಸದ ಅಮರತ್ವವನ್ನು ಪಡೆದು ಧನ್ಯವಾಯಿತು. ಪ್ರಭುದೇವ ಮೆಚ್ಚಿ ನುಡಿದ.

``ಇಂತಹ ಸಮರಸದ ಅಮರಸತಿಯನ್ನು ಪಡೆದು ಕಲ್ಯಾಣವೇ ಧನ್ಯವಾಯಿತು ಪ್ರಭುವೇ ಬಸವಣ್ಣನೂ ದನಿಗೂಡಿದ.

ಗಂಗಾಂಬಿಕೆ, ನೀಲಾಂಬಿಕೆಯರು ಮಹಾದೇವಿಯನ್ನು ಪೂಜಾಗೃಹದಿಂದ ಹೊರಗೆ ಕರೆದುಕೊಂಡು ಬಂದರು. ಪ್ರಸಾದನಿಲಯದತ್ತ ತಿರುಗಿದರು. ಬಸವಣ್ಣ ಪ್ರಭುದೇವರು ಮಹಾಮನೆಯ ಮುಂಭಾಗದ ವಿಶಾಲವಾದ ಬಯಲಿನಲ್ಲಿ ಶಿಲಾಪೀಠದ ಕಡೆಗೆ ನಡೆಯತೊಡಗಿದರು.

ಆಕಾಶದಲ್ಲಿ ಮೇಲೇರಿಬರುತ್ತಿದ್ದ ಚಂದ್ರನ ಹಾಲುಕಿರಣಗಳು ಭೂಮಿಯನ್ನು ತಬ್ಬಿ ತಣಿಸುತ್ತಿದ್ದುವು. ಅಮೃತದತ್ತ ಕಡಲಿನಲ್ಲಿ ತೇಲುತ್ತಿರುವ ಧರ್ಮದ ನೌಕೆಯಂತೆ,