ಕೊಡದವನು. ತನ್ನ ಪ್ರಾಂತ್ಯದ ನೆರೆಹೊರೆಯವರಲ್ಲಿ ತಾನೇ ದುಷ್ಟನಾಗಿ ವರ್ತಿಸುತ್ತಿದ್ದಾನೆ. ನಾಲ್ಕೈದು ಸಲ ಶಿಕ್ಷೆಯನ್ನು ವಿಧಿಸಿದ್ದಾಯಿತು. ಕೊನೆಗೆ ಈಗ ಚಕ್ರವರ್ತಿಗಳ ಸನ್ನಿಧಾನಕ್ಕೆ ಕಳುಹಿಸಲಾಗಿದೆ. ಅವನು ಕ್ಷತ್ರಿಯ.
ಅರಸನು ವಿಚಾರಣೆಯನ್ನು ಆರಂಭಿಸಿದನು. ಮೊದಲು ಬ್ರಾಹ್ಮಣನು ಬಂದನು. ಅರಿಕೆ ಮಾಡಿದನು ; “ದೇವರು ಚಿತ್ತವಿಸಬೇಕು. ನನಗೆ ತಾವು ಹೇಳುವ ಧರ್ಮದಲ್ಲಿ ವಿಶ್ವಾಸವೂ ಇಲ್ಲ : ಶ್ರದ್ಧೆಯಿಲ್ಲ ; ಭಕ್ತಿಯಿಲ್ಲ ಆದ್ದರಿಂದ, ನನಗೆ ತೋರಿದಂತೆ ನಾನು ಇರಲು ಅಪ್ಪಣೆಯಾಗಬೇಕು.”
ಅರಸನು ಧರ್ಮಾಧಿಕಾರಿಯ ಮುಖವನ್ನು ನೋಡಿದನು. ಅತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಪುರಷನಿಗೂ ಚಕ್ರವರ್ತಿಗೂ ಜಯವಾಗಲಿ. ಈತನು ತನಗೆ ಧರ್ಮದಲ್ಲಿ ವಿಶ್ವಾಸವಿಲ್ಲ ಶ್ರದ್ಧೆಯಿಲ್ಲ ಭಕ್ತಿಯಿಲ್ಲ ಎಂದ ಮಾತ್ರಕ್ಕೆ ಸ್ವತಂತ್ರವಾಗುವುದು ಮೋಕ್ಷವಿಚಾರದಲ್ಲಿಯೇ ಹೊರತು ಧರ್ಮವಿಚಾರದಲ್ಲಲ್ಲ. ಧರ್ಮವಿಚಾರದಲ್ಲಿ ಪುರುಷನು ಸ್ವತಂತ್ರನಲ್ಲ. ಜನ್ಮ ವಿಚಾರದಲ್ಲಿ ಎಷ್ಟು ಮಟ್ಟಿಗೆ ಪುರುಷನು ಪರತಂತ್ರನೋ ಧರ್ಮವಿಚಾರದಲ್ಲಿಯೂ ಪುರುಷನು ಅಷ್ಟೇ ಮಟ್ಟಿಗೆ ಪರತಂತ್ರನು. ದೀಕ್ಷಾಚಾರದವರೂ ಇದನ್ನು ಮೌನವಾಗಿ ಅಂಗೀಕರಿಸಿ ಹುಟ್ಟಿದ ಮಕ್ಕಳಿಗೇ ದೀಕ್ಷೆಯನ್ನು ಕೊಟ್ಟು ಧರ್ಮವಿಚಾರದಲ್ಲಿ ಪುರುಷನ ಪಾರತಂತ್ರ್ಯವನ್ನು ಒಪ್ಪಿಕೊಳ್ಳುವರು. ಆ ಪಾರತಂತ್ರ್ಯವೇ ಸಕಲ ಸಂಪ್ರದಾಯಗಳ ಮೂಲವು. ಅದರಿಂದ ಅದನ್ನು ವಿರೋಧಿಸಿದರೆ ಸಮಾಜದ ಅಸ್ತಿಭಾರವೇ ಸಡಿಲವಾಗುವುದರಿಂದ ಸಾಮಾನ್ಯವಾಗಿ ಯಾರೂ ಅದನ್ನು ವಿರೋಧಿಸಕೂಡದು. ಹಾಗೆಂದರೆ ಪುರುಷನಿಗೆ ಧರ್ಮಾಂತರ ಮಾಡಿಕೊಳ್ಳಲು ಅವಕಾಶವಿಲ್ಲವೇ? ಹಾಗಾದರೆ ಧರ್ಮವು ಪ್ರಗತಿಯ ವಿರೋಧಿಯೇ? ಎಂದರೆ ಒಂದು ಧರ್ಮದಲ್ಲಿ ಹುಟ್ಟಿದವನು ಆ ಧರ್ಮವನ್ನು ಬಿಡಬೇಕಾದರೆ, ಆ ಧರ್ಮವನ್ನು ವಿರೋಧಿಸಲು, ತಿರಸ್ಕರಿಸಲು, ತ್ಯಾಗಮಾಡಲು, ತಕ್ಕಷ್ಟು ಕಾರಣಗಳನ್ನು ತನ್ನ ದಾಯಾದಿಗಳ ಎದುರು ವಿವರಿಸಿ, ಅದನ್ನು ತ್ಯಾಗಮಾಡಬೇಕು. ತಮ್ಮ ಸಮಾಜವು ಧರ್ಮಕಾಮಿಯೂ, ಧರ್ಮೇಚ್ಛುವೂ, ಧರ್ಮಿಷ್ಠವೂ ಆದುದರಿಂದ, ಧರ್ಮಾಂತರವನ್ನು ಇಚ್ಚಿಸುವವನು ಪರಧರ್ಮವನ್ನು ಬಯಸುವಾಗ, ಪೂರ್ವಧರ್ಮದ ಆಶ್ರಮದಲ್ಲಿ ಇಲ್ಲದಿದ್ದರೆ ತನಗೆ ಪ್ರಾಪ್ತವಾಗುತ್ತಿದ್ದ ಪ್ರೇಯೋಭಾಗವನ್ನು ಬಯಸಕೂಡದು. ಈತನು ತಾನು ಧರ್ಮದಲ್ಲಿ ತೋರಿಸುವ ಅವಿಶ್ವಾಸ, ಅಶ್ರದ್ಧೆ ಅಭಕ್ತಿಗಳ ಕಾರಣವನ್ನು ದಾಯಾದಿಗಳ ಎದುರಿನಲ್ಲಿ ವಿವರಿಸಿಲ್ಲವಾದ್ದರಿಂದ, ಈತನು ಅಪೇಕ್ಷಿಸುವುದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ