ಬೆಳೆಯುವ ಬೆಳಕು
ಮಾಡಿಕೊಡಲಿ. ಅದಕ್ಕೆ ನೀನು ನಿಮಿತ್ತ ಕಾರಣಳಾಗು.”
“ಈ ಬಂಜೆಗೆ ಅಂತಹ ಭಾಗ್ಯವುಂಟೆ, ತಾಯಿ?” ಆಗಲೂ ಮಕ್ಕಳಿಲ್ಲದ ಕೊರಗೇ ಮುಂದಾಗಿ ನನ್ನಿಂದ ಈ ಮಾತನ್ನು ಆಡಿಸಿತು.
“ಆ ನಿಂದೆಯಿಂದಲೂ ನೀನು ದೂರವಾಗುತ್ತೀಯ, ‘ಬಂಜೆ’ ಎಂಬ ಕಳಂಕದಿಂದ ದೂರವಾಗಿ, ಜಗತ್ತಿಗೆ ವಂದ್ಯಳಾದ ಮಗಳನ್ನು ಕಾಣುವ ಭಾಗ್ಯ ನಿನ್ನದಾಗುತ್ತದೆ. ನೀನಿನ್ನು ಬಂಜೆಯಲ್ಲ.”
ಎನ್ನುತ್ತಿದ್ದಂತೆಯೇ ನನ್ನ ಕೈಲಿದ್ದ ಬೆಳಕಿನ ಮೂರ್ತಿ ಪುಟಿದೆದ್ದು ನನ್ನ ದೇಹವನ್ನೆಲ್ಲಾ ವ್ಯಾಪಿಸಿದಂತಾಯಿತು. ಮುಂದಿನ ಮೂರ್ತಿಯೂ ಅದೃಶ್ಯವಾಗಿತ್ತು.
ಎಚ್ಚರಾದ ಮೇಲೂ ದೇಹ ಭಾವಾವೇಗದಿಂದ ಕಂಪಿಸುತ್ತಿತ್ತು. ಆ ದೃಶ್ಯ, ಆ ಮಾತು, ಆ ಘಟನೆ-ನನಸಿಗಿಂತಲೂ ಹೆಚ್ಚು ಸ್ಪಷ್ಟತರವಾಗಿ ಕಾಣುತ್ತಿತ್ತು. ‘ನೀನಿನ್ನು ಬಂಜೆಯಲ್ಲ’ ಎಂಬ ಮಾತು ಕಿವಿಯಲ್ಲಿ ಮೊಳಗಿತು. ಭಾವಾವೇಗವನ್ನು ತಾಳಲಾರದೆ ‘ಅವರಿಗೆ’ ಅದನ್ನು ತಿಳಿಸಿದೆ. ಅವರು ಮೊದಲು ನಕ್ಕರೂ ಕ್ರಮೇಣ ಕೇಳುತ್ತಾ ಕೇಳುತ್ತಾ ಹೋದಂತೆ ಗಂಭೀರರಾದರು.
ಇದಾದ ಕೆಲವು ದಿನಗಳಲ್ಲಿಯೇ ತಿಳಿಯಿತು ‘ನೀನಿನ್ನು ಬಂಜೆಯಲ್ಲ’ ಎಂಬ ಮಾತಿನ
ಸತ್ಯ. ನಾನು ಗರ್ಭವತಿಯಾಗಿದ್ದೆ.
- * *
ಹೀಗೆ ಲಿಂಗಮ್ಮನ ಮನಸ್ಸಿನ ಮುಂದೆ ಹಿಂದಿನ ಸ್ಮರಣೆಯ ಮೆರವಣಿಗೆ ನಡೆದಿತ್ತು. ಶಿಶು ಗರ್ಭಕ್ಕೆ ಬಂದಂದಿನಿಂದ ತಾನು ಕಂಡ ಅನುಭವಗಳು, ತನ್ನಲ್ಲಿ ತಲೆದೋರುತ್ತಿದ್ದ ದೈವಿಕ ಬಯಕೆಗಳು, ಜನನದ ಸನ್ನಿವೇಶ, ಮರುಳುಸಿದ್ಧರು ನುಡಿದ ಮಂಗಳಕರವಾದ ಮುನ್ಸೂಚನೆ, ಗುರುಲಿಂಗದೇವರ ಅಪಾರವಾದ ಅನುಗ್ರಹ ಎಲ್ಲವೂ ಅವಳ ಮನಸ್ಸನ್ನು ತುಂಬಿದುವು. ಈ ಎಲ್ಲ ಘಟನೆಗಳ ಮುನ್ಸೂಚನೆಯ ನಿರೀಕ್ಷೆಗನುಗುಣವಾಗಿಯೇ ಮಹಾದೇವಿಯ ಜೀವನ ರೂಪುಗೊಳ್ಳುತ್ತಿತ್ತು. ಬಾಲ್ಯದಿಂದಲೂ ಅವಳಲ್ಲಿ ಕಾಣುತ್ತಿರುವ ದೈವಿಕವಾದ ಹಂಬಲ, ವಯಸ್ಸಿಗೆ ಮೀರಿದ ಮಾನಸಿಕ ಪರಿಪಕ್ವತೆ, ಆತ್ಮವೀಕ್ಷಣೆಯ ಅಂತರ್ದೃಷ್ಟಿ-ಇವೆಲ್ಲವುಗಳನ್ನು ನೆನೆದಳು ಲಿಂಗಮ್ಮ.
ಆಕೆಯ ದೃಷ್ಟಿ ಪೂಜೆಯ ಕೋಣೆಯತ್ತ ತಿರುಗಿತು. ಲಿಂಗಮ್ಮನ ಬೆಳಗಿನ ಕೆಲಸವೆಲ್ಲಾ ಮುಗಿಯುತ್ತಾ ಬಂದಿದ್ದರೂ, ಮಹಾದೇವಿಯ ಪೂಜೆ ಇನ್ನೂ ಮುಗಿದಿರಲಿಲ್ಲ.