ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯ನೆಯ ಪ್ರಕರಣ - ಕಲ್ಯಾಣದ ಚಾಲುಕ್ಯರು
೬೫

ಸಿಂಹಾಸನವನ್ನು ಆಕ್ರಮಿಸಿದನು. ಇನ್ನು ವಿಕ್ರಮನು ತನ್ನ ಮೇಲೆ ಏರಿಬರುವನೆಂದು ತಿಳಿದು ಆ ರಾಜಿಗನು ವಿಕ್ರಮನ ಅಣ್ಣನಾದ ಸೋಮೇಶ್ವರನ ಕಿವಿಯೂದಿ ಅವನನ್ನು ವಿಕ್ರಮನಿಗೆ ವಿರುದ್ಧವಾಗಿ ನಿಲ್ಲಿಸಿದನು. ಈ ಹೊತ್ತಿನಲ್ಲಿ ವಿಕ್ರಮನು ತೋರಿಸಿದ ಶೌರ್ಯ ಧೈರ್ಯಗಳು ವಿಲಕ್ಷಣವಾಗಿದ್ದುವು. ಇತ್ತ ಮೇಲ್ಗಡೆಯಿಂದ ತನ್ನ ಅಣ್ಣನಾದ ಸೋಮೇಶ್ವರನು ಬೆನ್ನಟ್ಟಿ ಬರುತ್ತಿದ್ದನು. ಇತ್ತ ರಾಜಿಗನ ಸೈನ್ಯವು ದಕ್ಷಿಣದಿಂದ ವಿಕ್ರಮನನ್ನು ಮೇಲಕ್ಕೆತ್ತಬೇಕೆಂದು ಹವಣಿಸಿತು. ಆದರೆ ವಿಕ್ರಮನು ತನ್ನ ಅಣ್ಣನನ್ನು ಅಲಕ್ಷಿಸಿ, ರಾಜಿಗನ ಸೈನ್ಯವನ್ನು ಸೋಲಿಸಬೇಕೆಂದು ದಕ್ಷಿಣಕ್ಕೆ ಸಾಗಿದನು. ರಾಜಿಗನ ಸೈನ್ಯದ ಹತ್ತಿರ ಬಂದು ತಲ್ಪುವಷ್ಟರಲ್ಲಿ ಅಣ್ಣನ ಸೈನ್ಯವು ವಿಕ್ರಮನ ಸೈನ್ಯದ ಬೆನ್ನು ಹಿಂದೆ ಬಂದು ನಿಂತಿತು. ವಿಕ್ರಮನು ಈ ಆತ್ಮಘಾತಕತನದ ಕೃತ್ಯವು ಸರಿಯಲ್ಲವೆಂದು ತನ್ನ ಅಣ್ಣನಿಗೆ ಉಪದೇಶಿಸಿದನು. ಆದರೆ ಸೋಮೇಶ್ವರನಿಗೆ ಅದನ್ನು ಆಲಿಸುವಷ್ಟು ಬುದ್ದಿಯು ಎಲ್ಲಿತ್ತು ? ಆದುದರಿಂದ ನಿರುಪಾಯನಾಗಿ, ಅತ್ಯಂತ ಧೈರ್ಯ ತಾಳಿ, ಬೆನ್ನ ಹಿಂದಿನ ಮತ್ತು ಬೆನ್ನ ಮುಂದಿನ – ಹೀಗೆ ಎರಡೂ ಕಡೆಯ ಸೈನ್ಯಗಳೊಂದಿಗೆ ಒಮ್ಮೆಲೆ ಯುದ್ದ ಮಾಡುವುದನ್ನೇ ನಿಶ್ಚಯಿಸಿದನು. ಮತ್ತು ರಾಜಿಗನ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದ್ದರಿಂದ ರಾಜಿಗನು ಪಲಾಯನ ಸೂಕ್ತವನ್ನು ಹೇಳಿದನು. ಇತ್ತ ಸೋಮೇಶ್ವರ ನನ್ನಂತೂ ಸೆರೆಯಾಳಾಗಿಯೇ ಹಿಡಿದನು. ಮುಂದೆ ಅವನನ್ನು ಸಿಂಹಾಸನದಿಂದ ತಳ್ಳಿ ತಾನೇ ಪಟ್ಟವೇರಿ ರಾಜ್ಯವಾಳಲು ಪ್ರಾರಂಭಿಸಿದನು.
ಬಗೆಯಾಗಿ ಈ ವಿಕ್ರಮನು ತಮ್ಮ ತಂದೆಯ ಕಾಲಕ್ಕೂ ಅಣ್ಣನ ಕಾಲಕ್ಕೂ ತಾನೇ ಯಾವತ್ತು ಶೂರಕೃತ್ಯಗಳನ್ನು ಮಾಡಿ ಹೆಸರುವಾಸಿಯಾಗಿ ೧೦೭೬ ನೇ ಇಸವಿಯಲ್ಲಿ ಪಟ್ಟವೇರಿದನು. ಇವನೇ ಕನ್ನಡಿಗರೆಲ್ಲರಿಗೂ ಅತ್ಯಂತ ಅಭಿಮಾನಾಸ್ಪದನಾದ ಅರಸನು, ಇವನು ನಮ್ಮ ಅರಸರೊಳಗೆ ಎಲ್ಲಕ್ಕೂ ಶ್ರೇಷ್ಟನಾದ ಅರಸನು, ಇವನ ಕಾಲಕ್ಕೆ ಕರ್ನಾಟಕದ ರಾಜ್ಯ ವಿಸ್ತಾರವು ಪರಮಾವಧಿಯನ್ನು ಮುಟ್ಟಿತು. ಇವನು ವಿದ್ಯಾ ಪಕ್ಷಪಾತಿಯಾದುದರಿಂದ ವಿದ್ವಾಂಸರೆಲ್ಲರೂ ಇವನನ್ನೇ ಆಶ್ರಯಿಸಿದರು. ಬಿಲ್ಲಣನು ಇವನ ಆಸ್ಥಾನದಲ್ಲಿ ವಿದ್ಯಾಪತಿ ಯಾಗಿದ್ದನು, ಅವನೇ 'ವಿಕ್ರಮಾಂಕ ದೇವಚರಿತ' ವೆಂಬ ಇವನ ವಿಷಯವಾದ ಕಾವ್ಯವನ್ನು ಬರೆದಿರುವನು.