ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೬
ಕರ್ನಾಟಕ ಗತವೈಭವ


'ಕರ್ನಾಟಕ' ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಇವೇ ಮುಂತಾದ ಭಾಗಗಳಿದ್ದವು, ಆದರೆ ಮುಂದೆ ಬರಬರುತ್ತ 'ಕರ್ನಾಟಕ' ವೆಂಬ ಭಾಗವೇ ಹೆಚ್ಚು ಪ್ರಬಲವಾದುದರಿಂದ, ಅದೇ ಹೆಸರು ಕನ್ನಡ ದೇಶಕ್ಕೆಲ್ಲ ರೂಢವಾಯಿತು; ಮತ್ತು ಇತಿಹಾಸ ದೃಷ್ಟಿಯಿಂದ ನೋಡಿದರೆ, ಕನ್ನಡ ದೇಶಕ್ಕೆ 'ಕರ್ನಾಟಕ' ವೆಂಬ ಹೆಸರೇ ಒಪ್ಪುತ್ತದೆಂದು ಕಂಡು ಬರುವದು. ಯಾಕೆಂದರೆ, ಕನ್ನಡ ಭಾಷೆಗೆ 'ಕರ್ನಾಟಕ' ಎಂಬ ಹೆಸರು ಬಹು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಮಹಾಭಾರತದಲ್ಲಿಯೂ ಕೂಡ 'ಕರ್ನಾಟಕ' ದ ಉಲ್ಲೇಖವು ಬಂದಿದೆ. ಕನ್ನಡಿಗರು ತಮ್ಮ ವೈಭವದ ಕಾಲದಲ್ಲಿ ತಮಗೆ 'ಕರ್ನಾಟಕ' ರೆಂತಲೇ ಹೇಳಿಕೊಳ್ಳುತ್ತಿದ್ದರು, ಚಾಲುಕ್ಯರ ದಂಡಿಗೆ 'ಕರ್ನಾಟಕ ಬಲ' ವೆಂಬ ಹೆಸರಿರುವುದಾಗಿ ಶಿಲಾಲಿಪಿಗಳಿಂದ ತಿಳಿದುಬರುತ್ತದೆ, ವಿಜಯನಗರದ ಸಾಮಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ 'ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ' ಎಂಬ ಬಿರುದಿತ್ತು, ಇವೆಲ್ಲ ಸಂಗತಿಗಳನ್ನು ಮನಸ್ಸಿನಲ್ಲಿ ತಂದುಕೊಂಡರೆ, ಭಾಷಾದೃಷ್ಟಿಯಿಂದಲೂ, ರಾಜ್ಯ ವಿಸ್ತಾರದ ದೃಷ್ಟಿಯಿಂದಲೂ ಸಾರ್ಥಕವಾದ ಈ 'ಕರ್ನಾಟಕ' ಎಂಬ ಹೆಸರನ್ನೇ ಕನ್ನಡಿಗರೆಲ್ಲರೂ ಅಭಿಮಾನಪೂರ್ವಕವಾಗಿ ಎತ್ತಿಕೊಂಡಿರುವದೇನೂ ಆಶ್ಚರ್ಯವಲ್ಲ.
ರಲಿ; ಇನ್ನು ಕನ್ನಡ ಭಾಷೆಯು ಹಿಂದೆ ಎಲ್ಲಿಯ ವರೆಗೆ ಹಬ್ಬಿತ್ತೆಂಬು ದನ್ನು ವಿಚಾರಮಾಡುವ, ೯ನೆಯ ಶತಮಾನದಲ್ಲಿ ಅದು ಉತ್ತರದಲ್ಲಿ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿಯವರೆಗೆ ಹಬ್ಬಿತ್ತೆಂಬುದಕ್ಕೆ ನೃಪತುಂಗನ ಕವಿ ರಾಜಮಾರ್ಗದಲ್ಲಂತೂ ಬಲವಾದ ಪ್ರಮಾಣವಿದೆ. (ಶಿರೋಲೇಖದ ಪದ್ಯವನ್ನು ನೋಡಿರಿ.) ಇದೇ ವಿಧಾನವನ್ನು ೧೬ನೆಯ ಶತಮಾನದಲ್ಲಿಯ ನಂಜುಂಡನೆಂಬ ಕವಿಯು ತನ್ನ ಪರದಾರ ಸೋದರ ರಾಮನಾಥ ಚರಿತವೆಂಬ ಗ್ರಂಥದ ಎರಡನೆಯ ಸಂಧಿಯಲ್ಲಿ 'ಕಾವೇರಿಯಿಂದ ಗೋದಾವರಿದಾವರೆಗಮಿರ್ದಾ ವಸುಧಾ ತಳವಳಯ | ಭಾವಿಸೆ ಕರ್ನಾಟಕ ಜನಪದವದನವನೊಲಿದು ಬಣ್ಣಿಸುವನು ||' ಎಂಬುದಾಗಿ ಬಲಪಡಿಸಿರುವನು. ಸಾರಾಂಶ:-ಕರ್ನಾಟಕದ ವ್ಯಾಪ್ತಿಯು, ಆಗಿನ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಇತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಪದ್ಯಗಳನ್ನು ಅನೇಕರು ಓದಿದ್ದರೂ, ಕನ್ನಡನಾಡಿನ