ಕೌಶಿಕ ಅತ್ತಿತ್ತ ತಿರುಗಾಡುತ್ತಿದ್ದ. ನೆನ್ನೆ ಸಂಜೆಯ ಘಟನೆಯನ್ನೇ ಮಥಿಸುತ್ತಿತ್ತು ಅವನ ಮನಸ್ಸು.
``ನಾನು ಮಾಡಿದುದರಲ್ಲಿ ತಪ್ಪೇನಿದೆ ? ಎಂದಿದ್ದರೂ ಮಹಾದೇವಿ ನನ್ನವಳಾಗಲೇಬೇಕು ತಾನೆ ! ಎನ್ನುವುದು ಒಂದು ಮನಸ್ಸು.
``ಅದು ಅಷ್ಟು ಸುಲಭವಲ್ಲ. ಅವಳು ಹೇಳಿದ ಮಾತುಗಳನ್ನು ನೆನೆಸಿಕೊ. ಅವಳಿಗೆ ಕೊಟ್ಟ ವಾಗ್ದಾನವನ್ನು ಸ್ಮರಿಸಿಕೋ ಎಂದು ಎಚ್ಚರಿಸುವುದು ಅದರ ಇನ್ನೊಂದು ಮುಖ.
``ಅವಳಾವುದೋ ಭಾವನೆಯ ಲೋಕದಲ್ಲಿದ್ದಾಳೆ. ಹೆಣ್ಣಿಗೆ ಅದು ಸಹಜವಾದ ಪ್ರವೃತ್ತಿಯಲ್ಲ. ಅದೆಷ್ಟು ದಿನ ಇರಬಲ್ಲದು ?... ಆದರೆ ನೆನ್ನೆಯ ದಿನ ಹೇಗೆ ಸಿಡಿದು ಗರ್ಜಿಸಿದಳು. ಈಗಲೂ ಅವಳ ಕೋಪ ಇಳಿದಿದೆಯೋ ಇಲ್ಲವೊ... ಇತ್ಯಾದಿಯಾಗಿ ಹರಿದಿತ್ತು ಕೌಶಿಕನ ಮನಸ್ಸು.
ಅಷ್ಟರಲ್ಲಿ ಮಹಾದೇವಿಯೇ ಬರುತ್ತಿದ್ದುದನ್ನು ಕಂಡು ಚಕಿತನಾದ.
`ತಾನೇ ನನ್ನನ್ನು ಹುಡುಕಿಕೊಂಡು ಬರುತ್ತಿದ್ದಾಳೆ. ಮುಖ ಉಗ್ರವಾಗಿಲ್ಲ. ಎಂದಿಗಿಂತ ಪ್ರಸನ್ನವಾಗಿ ಉತ್ಸಾಹದ ಕಾಂತಿಯಿಂದ ಹೊಳೆಯುತ್ತಿದೆ. ನಿನ್ನೆಯ ಕೋಪ ಇಳಿದಿದೆ ಹಾಗಾದರೆ.... ಎಂದು ಆಲೋಚಿಸುತ್ತಿರುವಷ್ಟರಲ್ಲಿ ಮಹಾದೇವಿ ಬಳಿಗೆ ಬಂದಿದ್ದಳು.
``ಬಾ ಮಹಾದೇವಿ ಪೂಜೆಯಾಯಿತೇ?
``ಆಯಿತು, ಈ ದಿನ ಒಂದು ವಿಶೇಷ ಸಮಾಚಾರವನ್ನು ತಿಳಿಸಬೇಕೆಂದು ಬಂದೆ. ಕಲ್ಯಾಣದಿಂದ ಬಂದ ಜಂಗಮರು ಇಂದು ಅತಿಥಿಯಾಗಿ ಬರುತ್ತಾರೆ ಎಂದು ತಾನು ಗುರುಗಳ ಬಳಿಯಲ್ಲಿ ಅವರನ್ನು ಕಂಡುದನ್ನೂ, ಅವರಿಗೆ ಆಹ್ವಾನವಿತ್ತುದನ್ನೂ ಉತ್ಸಾಹದಿಂದ ತಿಳಿಸಿದಳು.
``ಆಗಲಿ ಮಹಾದೇವಿ, ನಿನ್ನ ಭಕ್ತಿ ಸಾಧನೆಗೆ ನನ್ನ ಅಡ್ಡಿಯಿಲ್ಲ. ಇದುವರೆಗೂ ಇಲ್ಲದ ಅವಳ ಉತ್ಸಾಹದ ನಗುಮುಖವನ್ನೂ ಸಂಭ್ರಮವನ್ನೂ ಕಂಡು ಕೌಶಿಕನ ಆಸೆ ಗಗನಕ್ಕೇರಿತ್ತು. ಆ ಅಮಲಿನಲ್ಲಿಯೇ ಹೇಳಿದ :
``ಈಗ ಬೇಕಾದುದೇನು ಹೇಳು ?
``ಅವರು ಯಾವ ಸಮಯಕ್ಕೆ ಬರುತ್ತಾರೋ ತಿಳಿಯದು. ಅವರ ಸ್ವಾಗತಕ್ಕೆ ಉಪಚಾರಕ್ಕೆ ತಕ್ಕ ವ್ಯವಸ್ಥೆಯಾಗಬೇಕು.
``ಆಗಬಹುದು. ಏನು ಬೇಕಾದರೂ ಏರ್ಪಾಡನ್ನು ಮಾಡು. ಅರಮನೆಯೇ ನಿನ್ನ ಅಪ್ಪಣೆಯನ್ನು ಕಾದು ನಿಂತಿದೆ. ನೀನು ಹೇಳಿದ ಮಾತನ್ನು ಯಾರೂ