ಅದರಿಂದ ದೇವತೆಗಳು ಕಾಲನು ಪ್ರೇರಿಸಿದಂತೆಯೇ ಮಾಡುವರು. ಆದರೆ, ಕರ್ತೃತ್ವವು ತಮ್ಮದಲ್ಲವೆಂದು ತಿಳಿದಿರುವುದರಿಂದ ಅವರು ಫಲದ ವಿಚಾರದಲ್ಲಿ ಉದಾಸೀನರು.”
“ಆದರೂ ನೀನಿಷ್ಟು ಚಿಂತಿಸುತ್ತಿರುವೆಯಲ್ಲ?”
“ಚಿಂತೆಯೂ ಜೀವನದ ವ್ಯಾಪಾರಗಳಲ್ಲೊಂದು, ಶಚಿ. ಆದರೆ ಮನಸ್ಸು ಚಿಂತೆಯನ್ನು ಚಿಕ್ಕದು ಮಾಡಲಾರದೆ ಅದಕ್ಕೆ ಹೆದರಿ, ಅದನ್ನು ದೊಡ್ಡದು ಮಾಡಿಸುವುದು. ಆಗ ಅದು ಶತ್ರುವಾಗಿ, ಬಲಿಷ್ಠನಾದ ಶತ್ರುವಿನಂತೆ, ಧಾಳಿಮಾಡಿ ಹೆದರಿಸುವುದು. ಸುಖವನ್ನು ತದ್ವಿರುದ್ಧವಾಗಿ ನೋಡಿ ಸ್ನೇಹಿತನಂತೆ ಭಾವಿಸುತ್ತ ಅದರಲ್ಲಿ ಕರಗುವುದು. ಮನಸ್ಸಿನ ರಾಗದ್ವೇಷಗಳಿಂದಲೇ ಸುಖದುಃಖಗಳು. ಅದಿರಲಿ, ಈಗ ಬೃಹಸ್ಪತ್ಯಾಚಾರ್ಯರ ವಿಷಯವಾಗಿ ಹೇಳು. ನೀನು ಬಂದು ಪ್ರಸಂಗ ವಶದಿಂದ ನನಗೆ ಮರೆತುಹೋಗಿದ್ದ ಒಂದು ಅಂಶವನ್ನು ನೆನಪಿಗೆ ತಂದೆ. ಈಗ ನೀನು ಉಪಶ್ರುತಿ ದೇವಿಯನ್ನು ಅನುಸಂಧಾನಮಾಡಿ ಬೃಹಸ್ಪತಿಯಿರುವೆಡೆಯನ್ನು ಕಂಡುಹಿಡಿ. ಆತನು ಈಚೆಗೆ ಬರಲು ಒಪ್ಪದಿದ್ದರೆ ಉಪಬೃಂಹಣಮಾಡು. ಆಗ ಆತನು ಪ್ರತ್ಯಕ್ಷನಾಗಿಯೇ ಆಗುವನು. ಆಗ ಆತನನ್ನು ಒಪ್ಪಿಸಿ ಮತ್ತೆ ದೇವಾಚಾರ್ಯನಾಗುವಂತೆ ನೀನು ಪ್ರೇರೇಪಿಸು.
ಶಚಿಯು ಗಂಭೀರಭಾವದಿಂದ ಕೇಳಿದಳು : “ಆಗ ವಿಶ್ವರೂಪಾಚಾರ್ಯನು ಏನಾಗುವನು ?”
ಇಂದ್ರನೂ ಗಂಭೀರವಾಗಿಯೇ ಹೇಳಿದನು : “ವಿಶ್ವರೂಪಾಚಾರ್ಯನಿಗೆ ಬೃಹಸ್ಪತ್ಯಾಚಾರ್ಯನಿಗಿರುವಂತೆ ದೆವತೆಗಳ ಮೇಲೆ ಸಹಜವಾದ ಅಭಿಮಾನವಿಲ್ಲ. ಆ ಸಹಜವಾದ ಅಭಿಮಾನವು ಆತನಿಗೆ ಬರುವಂತೆಯೂ ಇಲ್ಲ. ಪಿತೃವಂಶದಿಂದ ದೇವತೆಯಾಗಿ ಮಾತೃವಂಶದಿಂದ ದಾನವನಾದವನಿಗೆ ಪಿತಾಮಹ-ಮಾತಾಮಹರಿಬ್ಬರಲ್ಲಿಯೂ ಅಭಿಮಾನವಿರುವುದು ಏನು ವಿಶೇಷ ? ಅದರಿಂದ ಬೃಹಸ್ಪತಿಯು ದೊರೆತರೆ ಈತನನ್ನು ಬಿಡಲೇಬೇಕು.”
“ನೀನಾಗಿ ಆಚಾರ್ಯನೆಂದು ವರಿಸಿರುವವನನ್ನು ಅದೆಂತು ಬಿಡುವೆ ?”
“ಇದೇ ರಹಸ್ಯ. ವರಿಸುವಾಗ ಆತನನ್ನು ಆಜೀವವಾಗಿ ವರಿಸಿಲ್ಲ ಅಥವಾ ಕಾಲವನ್ನು ಗೊತ್ತುಮಾಡಿಲ್ಲ ಅದರಿಂದ ನಾನು ಆತನನ್ನು ಬೇಕಾದಾಗ ಬಿಡಬಹುದು”
“ಇದರಿಂದ ಪಾಪವಿಲ್ಲವೇ ?”
“ನನ್ನ ಅನುಕೂಲಕ್ಕೆಂದು ಸ್ವಕಾಮನೆಯಿಂದ ಮಾಡಿದರೆ ಫಲಾಫಲಗಳು