“ನೋಡು, ವಿರೂಪಾಕ್ಷ ತಾಯಿಮನೆಯವರ ಪ್ರಭಾವಕ್ಕೆ ನಾನು ಎಷ್ಟು ಒಳಪಟ್ಟಿರುವೆನೆಂಬುದಕ್ಕೆ ನಾನು ಸತತವಾಗಿ ಸುರಾಪಾನ ಮಾಡುತ್ತಿರುವುದೇ ಸಾಕ್ಷಿ. ವೇದಾಧ್ಯಯನದಿಂದ ಲಭಿಸಿದ ಪುಣ್ಯದ ಬಲದಿಂದ ನಾನು ಈ ಸುರಾಪಾನದ ಪಾಪವನ್ನು ಅಡಗಿಸಿಟ್ಟಿರುವೆನು. ಇದೊಂದನ್ನು ಬಿಟ್ಟರೆ, ನನ್ನನ್ನು ಶುಕ್ರ ಬೃಹಸ್ಪತಿಗಳು ಇಬ್ಬರೂ ಸಮಗಟ್ಟಲಾರರು. ಇದನ್ನು ನಾನು ತಿಳಿಯೆನೆನ್ನುವೆಯಾ ? ನಾನಿದನ್ನು ಬಲ್ಲೆ, ಸಂಪೂರ್ಣವಾಗಿ ಬಲ್ಲೆ. ಆದರೂ ಇದನ್ನು ಮಾತೃಪ್ರೀತ್ಯರ್ಥವಾಗಿ ಮಾಡುತ್ತಿರುವೆನು. ನೀವೂ ಅದರಂತೆಯೇ ಲೋಕಹಿತವನ್ನು ಆಚರಿಸಿ, ಲೋಕ ಕಂಟಕರಾಗುವುದಕ್ಕೆ ಬದಲು, ಲೋಕರಕ್ಷಕರಾಗಿ, ನಿಮಗೂ ಯಜ್ಞಭಾಗವೂ ಬರುವಂತೆ ನಾನು ಏರ್ಪಡಿಸುವೆನು. ನಾನು ನನ್ನ ಪ್ರಾಣವನ್ನು ಕೊಟ್ಟಾದರೂ ಇದನ್ನು ಸಾಧಿಸುವೆನು. ಮಾತೃಕುಲ ಪಿತೃಕುಲಗಳೆರಡನ್ನು ಒಟ್ಟು ಸೇರಿಸಿದನೆಂದು ನನಗೆ ಖ್ಯಾತಿ ಬರಲಿ. ಇನ್ನು ಮುಂದೆ ದೇವಾಸುರರು ಯುದ್ಧವನ್ನು ಬಿಟ್ಟು ಪ್ರೀತಿಯಿಂದಿರಲಿ.”
ವಿರೂಪಾಕ್ಷನು ತಲೆಯಲ್ಲಾಡಿಸಿ ಹೇಳಿದನು : “ವಿಶ್ವರೂಪ, ನೀನು ವಿದ್ಯಾ ತಪೋಜನಗಳಲ್ಲಿ ಹಿರಿಯನು ಎಂದು ನಾವು ಒಪ್ಪಿದರೂ, ಸಹಜವಾದ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂಬುದನ್ನು ನೀನೂ ಮನಗಾಣುವವನಾಗು. ಸಿಂಹವು ಮಾಂಸವನ್ನು ತಿನ್ನುವ ಜಂತು. ಅದನ್ನುನೀನಾವ ಮಂತ್ರಬಲದಿಂದ ಹುಲ್ಲುತಿನ್ನುವಂತೆ ಮಾಡಬಲ್ಲೆ ? ನಿನಗೆ ಅಂತಹ ಮಂತ್ರಬಲವಿರುವುದಾದರೆ ಹುಲ್ಲನ್ನು ಮಾಂಸ ಮಾಡುವುದು ಸರಿಯೇ ಹೊರತು ಸಿಂಹವನ್ನು ಹುಲ್ಲು ತಿನ್ನುವಂತೆ ಮಾಡುವುದು ಸರಿಯಲ್ಲ. ಇನ್ನೊಂದು ಗುಟ್ಟು ಹೇಳುವೆ ಕೇಳು. ದೇವದಾನವರಿಬ್ಬರೂ ಪ್ರಾಜಾಪತ್ಯರೇ ! ಇಬ್ಬರೂ ಪ್ರಜಾಪತಿಯ ಸಂತಾನಗಳೇ ಹೊರತು ಬೇರೆ ಬೇರೆಯಲ್ಲ. ಆದರೂ ನಾವು ನಾವು ದ್ವೇಷಿಗಳಾಗಿರುವುದೇಕೆ ಬಲ್ಲೆಯಾ ? ನಮ್ಮ ನಮ್ಮ ದ್ವೇಷವು ಅರ್ಥಮೂಲವು. ನಾವು ದಾನವರು ಹಿರಿಯರು. ಆದ್ದರಿಂದ, ಈ ವಂಶದ ಸಂಪತ್ತೆಲ್ಲವೂ ದಾನವರಾದ ನಮಗೇ ಸೇರಬೇಕು. ಆದರೂ ಏನೋ ಸಂಚು ಮಾಡಿ, ತಾವು ಧರ್ಮಪರರು, ನಾವು ಅಧರ್ಮಪರರು ಎಂಬ ಆಟ ಹೂಡಿ, ಈ ದೇವತೆಗಳು ನಮಗೆ ಮೋಸಮಾಡಿ, ನಮ್ಮ ವಂಶದ ಸಂಪತ್ತನ್ನೂ ತಾವು ಕೊಳ್ಳೆ ಹೊಡೆದುಬಿಟ್ಟರು. ಈ ಸಂಕಟವನ್ನು ನಮ್ಮ ಕುಲವು ಮರೆಯುವುದೆಂತು? ಅದರಿಂದ ದೇವದಾನವರ ಸ್ನೇಹವೆಂಬುದು ಸಾಧ್ಯವಿಲ್ಲದ್ದು. ಜೊತೆಗೆ ಒಂದು ವೇಳೆ ಅದಾದರೂ ಹಿಂದೆ ಅಮೃತಮಂಥನ ಕಾಲದಲ್ಲಿ ಆದಂತೆ ದೇವತೆಗಳ ಅಭಿವೃದ್ಧಿಗೇ ಆಗುವುದು. ಅದರಿಂದ, ಅದು ಸಾಧ್ಯವಿಲ್ಲ.