ವಿಷಯಕ್ಕೆ ಹೋಗು

ಪುಟ:Mahakhshatriya.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಧರ್ಮವಿಲ್ಲ. ಅದರಿಂದ ಕೊಡು ಕೊಡು, ಕೊಟ್ಟು ಬದುಕು, ಇದೇ ನಿನಗೆ ನನ್ನ ಸಂದೇಶ” ಎಂದು ಪಾದಗಳಿಗೆ ತಲೆಯಿಟ್ಟಿರುವ ಮಗನಿಗೆ ಮನಃಪೂರ್ವಕವಾಗಿ ಆಶೀರ್ವಾದ ಮಾಡಿದನು. ವಿರಜಾದೇವಿಯಂತೂ ಮಗನಿಗೆ ತನ್ನ ಹೃದಯವನ್ನೇ ಆಶೀರ್ವಾದವಾಗಿ ಕೊಟ್ಟಳು.

ಅರಸನು ಕೊನೆಯದಾಗಿ ಅಗ್ನಿ ವಾಯುಗಳ ಕಡೆಗೆ ತಿರುಗಿದನು : “ನಮ್ಮ ಆಳ್ವಿಕೆಯಲ್ಲಿ ತಮಗೆ ಏನಾದರೂ ಕಷ್ಟವಾಗಿದ್ದರೆ, ಅದನ್ನು ದಯೆಯಿಂದ ಕ್ಷಮಿಸಬೇಕು” ಎಂದು ಕೈಮುಗಿದನು. ಅವರಿಬ್ಬರೂ ಅರಸನಿಗೆ ಕೈಮುಗಿದು. “ದೇವ, ಮನುಷ್ಯರು ಅನುಗ್ರಾಹ್ಯರು ಎಂಬ ಅಹಂಕಾರವು ನಮಗಿತ್ತು. ತಮ್ಮ ಸನ್ನಿಧಾನದಲ್ಲಿದ್ದು ನಮಗೆ ಈ ಅಹಂಕಾರವು ಕಳೆಯಿತು. ಧರ್ಮಾಚರಣದಿಂದ ಮಾನವರು ದೇವತೆಗಳಾದರೆ ಅವರು ಅತೀದೇವಮಾನವರಾಗುವರು ಎಂದು ತಿಳಿಯಿತು. ಇನ್ನು ನಾವೂ ಅವರೂ ಪರಸ್ಪರ ಸಂಭಾವನೆಯಿಂದ ಕ್ಷೇಮವಾಗಿರುವೆವು. ಹೀಗೆ ನಮ್ಮ ಕಣ್ಣಿಗೆ ಅಂಜನಹಾಕಿದ ತಮ್ಮನ್ನು ನಾವು ಗುರು ಗೌರವದಿಂದ ನೋಡಲು ಅಪ್ಪಣೆಯಾಗಬೇಕು. ಕೊನೆಯದಾಗಿ ಒಂದು ಮಾತು. ನಮಗಿಬ್ಬರಿಗೂ ವಿಶ್ವರೂಪಾಧಿಕಾರವುಂಟು. ಆಗ ವಿಶ್ವವೆಲ್ಲವೂ ನಾವು ಹೇಳಿದಂತೆ ಕೇಳಬೇಕು. ಇದು ನಮಗೆ ಗೊತ್ತಿತ್ತು. ಆದರೆ ಇಂದ್ರನು ಹತ್ಯಾಭೀತನಾಗಿ ಕಣ್ಮರೆಯಾದಾಗ ನಾವು ವಿಶ್ವರೂಪಧಾರಣಮಾಡಿ ಆತನನ್ನು ಉಳಿಸಬಹುದು ಎಂಬುದು ಮಾತ್ರ ನಮಗೆ ಮರೆತುಹೋಗಿತ್ತು. ಅದನ್ನು ಮತ್ತೆ ನೆನಪಿಗೆ ತಂದವರು ತಾವು. ಹೀಗೆ ನಮ್ಮ ನಮ್ಮ ಆತ್ಮಶಕ್ತಿಯ ಪರಿಚಯ ಮಾಡಿಕೊಟ್ಟು ಕಾಪಾಡಿದ ತಾವು ಗುರುಗಳಲ್ಲದೆ ಇನ್ನೇನು ?” ಎಂದು ಮುಂತಾಗಿ ನಾನಾವಿಧವಾಗಿ ಹೊಗಳಿ ಬೇಡ ಬೇಡವೆನ್ನುತ್ತಿದ್ದರೂ ಆತನಿಗೆ ನಮಸ್ಕಾರ ಮಾಡಿದರು.

ಅಂದು ಶಿಬಿಕೋತ್ಸವದ ಕೊನೆಯ ದಿನ. ಎಲ್ಲೂ ಇಲ್ಲದ ಜನ. ಸಪ್ತರ್ಷಿಗಳು ನಹುಷನನ್ನು ಕೈಹಿಡಿದು ಕರೆದುಕೊಂಡು ಬಂದು, ಪೂಜೆಯನ್ನು ಒಪ್ಪಿಸಿಕೊಂಡು ಅಲಂಕೃತವಾಗಿ ಸಿದ್ಧವಾಗಿದ್ದ ಶಿಬಿಕೆಯಲ್ಲಿ ಕೂರಿಸಿದರು. ಆತನು ಅಲ್ಲಿ ಸುರಕ್ಷಿತವಾಗಿ ಸುಸ್ಥಿತನಾಗಿ ಕುಳಿತ ಮೇಲೆ, ಪಲ್ಲಕ್ಕಿಯನ್ನು ಎತ್ತಿಕೊಂಡು ನಡೆದರು. ಅದುವರೆಗೆ, ಇತರರು ನೂರಾರು ಜನ ಸೇವಕರು ಪಲ್ಲಕ್ಕಿಯನ್ನು ಹೊರುತ್ತಿದ್ದು ಸಪ್ತರ್ಷಿಗಳು ನೆಪಕ್ಕೆ ಹೆಗಲು ಕೊಡುತ್ತಿದ್ದರು. ಇಂದು ಸಪ್ತರ್ಷಿಗಳು ಎಲ್ಲರನ್ನೂ ನಿವಾರಿಸಿ ತಾವೇ ಪಲ್ಲಕ್ಕಿಯನ್ನು ಎತ್ತಿಕೊಂಡರು. ರತ್ನಖಚಿತವಾದ ಪಲ್ಲಕ್ಕಿ ಆನೆಗಿಂತ ತೂಕವಾದುದು. ಆದರೂ ಶಿಬಿಕಾಧಿದೇವಿಯು ಹೊರುತ್ತಿರುವವರು ಸಪ್ತರ್ಷಿಗಳೆಂದು ತನ್ನ ಭಾರವನ್ನೆಲ್ಲಾ ತಾನೇ ವಹಿಸಿಕೊಂಡಳು. ಸಪ್ತರ್ಷಿಗಳು