ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಪ್ರತಿಭಟಿಸುವಂತೆ, ಆತನ ಕೈಯನ್ನು ಬಲವಾಗಿ ಹಿಡಿದುಕೊಂಡಳು ಗಿರಿಜಾ. ತಾನು ಆಸಹಾಯಳೆಂಬುದು ತಿಳಿದೂ ಆಕೆ ಚಡಪಡಿಸಿದಳು. ಕತ್ತಿನ ನರಗಳು ಬಿಗಿದುಬಂದುವು. ಹನಿಗೂಡಿದುವು ಕಣ್ಣುಗಳು.... ಆ ಜೀವನ ವೇದನೆಯನ್ನು ಅರ್ಥಮಾಡಿಕೊಳ್ಳುತ್ತ ಪುಟ್ಟಬಸವ ನೆಂದ: "ಆಳಬಾರದು." ಕ್ಷೀಣವಾಗಿದ್ದ ಸ್ವರದಲ್ಲಿ ಗಿರಿಜಾ ಉತ್ತರವಿತ್ತಳು: "ಇಲ್ಲ." "ನೀನು ವೀರನಾರೀಂತ ತಿಳ್ಕೊ ಗಿರಿಜಾ. ಗಂಡಂದಿರು ಒಳ್ಳೇ ಕೆಲಸಕ್ಕೆ ಹೊರಟಾಗ ವೀರಪತ್ನೀರು ಏನ್ಮಾಡ್ತಾರೆ ಗೊತ್ತಾ?" ಆಳಲಿನ ಅಣೆಕಟ್ಟು ಇನ್ನು ಬಿರಿಯುವೆನೆಂದು ಬೆದರಿಕೆ ಹಾಕಿತು. ಆದರೂ ಗಿರಿಜಾ ಅನದನ್ನು ತಡೆದಳು. ಪದಗಳು ಒಂದೊಂದಾಗಿ ಹೊರಬಿದ್ದುವು. "ಯಾವುದು....ಹೊರಡ್ತೀರಾ ನೀವು?" ಬಯಸಿದುದರ ಬದಲು ಮಗುವಿಗೆ ಇನ್ನೇನನ್ನೊ ಕೊಟ್ಟು ರಮಿಸುವವನಂತೆ ಪುಟ್ಟಬಸವನೆಂದ: "ಎಲ್ಲರೂ ಸೇರ್ರ್ಕೊಂಡು ನನ್ನನ್ನು ನಾಯಕ ಅಂತ ಮಾಡವರೆ ಗೊತ್ತೈತಾ? ನಂಜಯ್ನೋರು - ಎಲ್ರೂ - ನನಗೇ ದೊಡ್ಡಸ್ಥಾನ ಕೊಟ್ಟವರೆ." ಆಕೆಯ ಗಂಡ ನಾಯಕನಾಗದೆ ಕೆಳಗಿನ ಸ್ಥಾನದಲ್ಲಿ ಇದ್ದುದಾದರೂ ಯಾವತ್ತು? ಆದರೂ ಗಿರಿಜಾ, ಮಹತ್ವದ್ದೇನನ್ನೋ ಗಂಡ ಹೇಳಿದನೆಂದು ಆ ಮಾತನ್ನು ಮೆಲುಕು ಹಾಕಿದಳು. ಪುಟ್ಟಬಸವ ಮುಂದುವರಿಸಿದ: "ನಮ್ಮ ಸೈನ್ಯಕ್ಕೆಲ್ಲ ಇನ್ನು ನಾನೇ ಸೇನಾಧಿಪತಿ. ಕೊಡಗಿನ ಸೈನ್ಯ, ಕನ್ನಡಜಿಲ್ಲೇದು -ಎಲ್ಲದಕ್ಕೂ.... ಇಂಗ್ಲೀಷರನ್ನು ಓಡಿಸಿ ರಾಜರನ್ನು ವಾಪಸು ಬರಮಾಡಿಕೊಳ್ಳೋನು ನಾನೇ." ಅದೀಗ ದೊಡ್ಡ ವಿಷಯವೆಂಬುದು ಗಿರಿಜೆಗೆ ಸ್ಪಷ್ಟವಾಯಿತು. ಆಕೆ ಉದ್ಗಾರವೆತ್ತಿದಳು: