ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದಿದ್ದ ಗಿರಿಜವ್ವ, ಅತ್ತೆಯ ಮನ ನೋಯಿಸಲಾರದೆ ಅಂದಳು:
"ಹೂಂ"
ಮಳೆ ಬಂದು ಮಗನನ್ನು ತೋಯಿಸಬಹುದೆಂದು ಮುದುಕಿಯ ಹೃದಯ ಕ್ಷಣಕಾಲ ಚಡಪಡಿಸಿತು. ಬಳಿಕ ಏನನ್ನೊ ನೆನಪುಮಾಡಿಕೊಳ್ಳುತ್ತ ಮನಸಿನಲ್ಲೆ ಆಕೆ ಗುಣಿಸಿ ನೋಡಿದಳು.

"ಅಲ್ಲಾ, ಸುಗ್ಗಿ ಆದ್ಮೇಲಲ್ವಾ ಮಳೆ ಬರೋದು? ಮಾವಿನ ಕಾಯಿ ಬಲಿತೇ ಇಲ್ಲ ಇನ್ನೂ?"


ವಾಸ್ತವ ಪ್ರಪಂಚಕ್ಕೆ ಅತ್ತೆ ಇಳಿದಳೆಂದು ಸೊಸೆಗೆ ತುಸು ಸಮಾಧಾನವೆನಿಸಿತು.


"ಹೂಂ, ಬರೇ ಮೋಡ. ಮಳೆ ಬರೋ ಹಂಗಿಲ್ಲ."

"ಬರದೇ ಇದ್ದರೆ ವಾಸಿ. ಪುಟ್ಟಬಸ್ಯಾ ಈಗೆಲ್ಲಿದಾನೋ? ಎಷ್ಟು ಕಷ್ಟವಾಗ್ತೇತೊ ಮಗನಿಗೆ?"

ಎಂದಿನ ಜಾಡನ್ನೆ ಮತ್ತೆ ಹಿಡಿದ ವಿಚಾರಸರಣಿ.


ಸೊಸೆ ಮೌನವಾಗಿದ್ದಳೆಂದು ಅತ್ತೆಯೇ ಅಂದಳು:


" ಅಲ್ಲಾ, ಒಬ್ಬರಾದರೂ ಬರಬೇಡವಾ ಈ ದಾರಿಯಾಗಿ ? ಏನಾ ಯ್ತೂಂತ ಒಂದು ಸುದ್ದೀನಾದರೂ ಸಿಗಬೇಡವಾ? ಹಿಂಗೂ ಮಾಡ್ಬೌದಾ ಶಿವ?


ಆ ಮಾತನ್ನು ಗಿರಿಜೆಯೂ ಎಷ್ಟೋ ಸಾರೆ ಅಂದುಕೊಂಡಿದ್ದಳು. ಗಂಡ ಎಲ್ಲಿರುವನೆಂಬ ವಾರ್ತೆಯಾದರೂ ಬಂದಿದ್ದರೆ? ಅಷ್ಟರಿಂದಲೆ ಮನಸ್ಸಿಗೆ ಎಷ್ಟೋ ನೆಮ್ಮದಿ ದೊರೆಯುತ್ತಿತ್ತು.


ಭಾರವಾಗಿ ಬಾಗಿದ ತಲೆ ಅತ್ತೆಯ ತೊಡೆಯ ಮೇಲೆ ಒರಗಿತು.


ಕಂಬಳಿಯನ್ನು ಆಕೆಯ ಮೈಗೂ ಹೊದಿಸುತ್ತ ಗಂಗವ್ವ ಕೇಳಿದಳು:


"ನಿದ್ದೆ ಬಂತೇನೆ?"


"ಇಲ್ಲ."


ಹಗಲು ರಾತ್ರೆಗಳನ್ನು ಎಣಿಸುತ್ತ ಕಾಲ ಕಳೆಯುವವರಿಗೆ ಸರಿಯಾದ ನಿದ್ದೆಯಾದರೂ ಹೇಗೆ ಬರಬೇಕು? ಆ ವಿಶ್ರಾಂತಿ ಸುಖ, ಅವರ ಪಾಲಿಗೆ ಬಹಳ ಕಾಲದಿಂದಲೇ ಇಲ್ಲದೆ ಹೋದ ಸಿರಿವಂತಿಕೆ.