ದೃಷ್ಟಿಗೆ ಕಂಗೊಳಿಸುವವು. ಅದರಂತೆ ವಾಸ್ತವಿಕ-ನಿರೂಪಣ ಕಥೆಗಳು ಬೇರೊಂದು ಬಗೆಯಲ್ಲಿ ಬಗೆಗೊಳ್ಳುವವು.
ಮೂಡಪಡುವಲ ಭೇದವಿಲ್ಲದೆ, ಶೀತೋಷ್ಟ ವಲಯಗಳ ತಾರತಮ್ಯವಿಲ್ಲದೆ ಎಲ್ಲೆಲ್ಲಿಯೂ ಮನುಷ್ಯನು ಕಾಣಿಸಿಕೊಂಡಿದ್ದಾನಷ್ಟೆ? ಬಣ್ಣ ಬೇರೆಯಾಯಿತೇ ಹೊರತು, ಮನುಷ್ಯನ ಮೂಲಗುಣವು ಬೇರೆಯಾಗಲಾರದು. ಮೈಬಣ್ಣದಲ್ಲಿ ಒಂದು ವೈವಿಧ್ಯ ಕಂಡುಬಂದರೆ, ಮಾತಿನ ಬಣ್ಣನೆಯಲ್ಲಿ ನೂರೊಂದು ವೈವಿಧ್ಯ ಕಂಡು ಬರುವವು. ನಿಸರ್ಗಕ್ಕೆ ಬೇರೆ ಬೇರೆ ಪರಿಸ್ಥಿತಿಗಳಿದ್ದರೂ ಅಲ್ಲಿ ಬೀಳುವ ಮಳೆಯಾಗಲಿ, ಬೀಸುವ ಗಾಳಿಯಾಗಲಿ ಒಂದೇ ಆಗಿರುತ್ತದೆ. ಒಂದೇ ಮಳೆಯು ಇಲ್ಲಿ ರಪರಪನೆ ಸುರಿಯುತ್ತದೆ; ಅಲ್ಲಿ ಪಟಪಟನೆ ಉದುರುತ್ತದೆ. ಒಂದೆಡೆಯಲ್ಲಿ ಜಿಟಿಜಿಟಿಯೆನಿಸಿದ್ದೇ ಇನ್ನೊಂದೆಡೆಯಲ್ಲಿ ದನದನ್ ಎನಿಸುತ್ತದೆ. ಗಾಳಿಯು ಸಹ ಸುಯ್ಯನೆ ಬೀಸುವುದಕ್ಕೂ ಭರ್‍ರನೆ ಬೀಸುವುದಕ್ಕೂ ನೃಸರ್ಗಿಕವಾದ ಪರಿಸ್ಥಿತಿ ಭೇದವೇ ಕಾರಣವಲ್ಲವೇ? ಒಬ್ಬನೇ ಮಳೆರಾಯನು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ವಾದ್ಯವೈಭವಗಳಲ್ಲಿ ಇಳಿದು ಬರುವಂತೆ, ಒಬ್ಬನೇ ಗಾಳಿರಾಯನು ಬೇರೆ ಬೇರೆ ಪರಿಸರಗಳಲ್ಲಿ ಬಗೆಬಗೆಯ ಬಣ್ಣ ತೊಟ್ಟು ಬಗೆಬಗೆಯ ನಡಿಗೆಯಲ್ಲಿ ಬಂದರೆ ಆಶ್ಚರ್ಯವೇನು?
ಒಂದೇ ಕಥೆಯು ಬಣ್ಣ ನಡಿಗೆಗಳಲ್ಲಿ ಹಲವಾಗಿ ಕಾಣುವಂತೆ, ಹಲವಾರು ಬಣ್ಣ ನಡಿಗೆಗಳಲ್ಲಿಂಯೂ ಒಂದೇ ಗತ್ತು ಕಂಡುಬರುತ್ತದೆ; ಒಂದೇ ಸೊತ್ತು ತೇಲಿ ಬರುತ್ತದೆ. ಜಗತ್ತಿನೊಳಗಿನ ಕಥಾಕೋಟಿಗೆಲ್ಲ ಒಂದೇ ಜೀವ ಮಿಡಿಯುತ್ತದೆಂದು ಬಲ್ಲವರು ಕಂಡುಹಿಡಿದಿದ್ದಾರೆ. ಮೂಲಬೀಜ ಒಂದೇ ಇದ್ದರೂ ಅದು ಮೊಳೆತು ಅಗಿಯಾಗಿ, ಗಿಡಮರಗಳ ರೂಪ ತಳೆಯುವವರೆಗೆ ಬೇರು-ಬೊಡ್ಡಿ, ತೊಂಗ- ತಿಸಿಲು, ಎಲೆಮುಗುಳು, ಹೂ ಹಣ್ಣುಗಳ ವಿವಿಧ ರೂಪತಳೆದರೂ ಕೊನೆಗೆ ಬೀಜರೂಪದಲ್ಲಿ ಸಮಾಪ್ತಿಗೊಳ್ಳುತ್ತದೆ. "ಸರ್ವತಃ ಪಾಣಿಪಾದಂ, ತತ್ ಸರ್ವತೋಕ್ಷಿ ಶಿರೋಮುಖಂ, ಸರ್ವತಃ ಶ್ರುತಿ-ಮಲ್ಲೋಕೆ ಸರ್ವಮಾವೃತ್ಯಕಿಷ್ಠತೇ" ಎನ್ನುವ ರೀತಿಯಲ್ಲಿ ಭಗವಂತನು ವ್ಯಾಪಿಸಿದ್ದಾನಂತೆ. ಕಥಾವಲ್ಲರಿಯೂ ಭಗವಂತನಂತೆ ಎಲ್ಲೆಲ್ಲಿಯೂ ತನ್ನ ಕೈಕಾಲುಗಳನ್ನು ಚಾಚಿದೆ. ತನ್ನ ಕಣ್ಣು ಮುಖಗಳನ್ನು ಅರಳಿಸಿದೆ; ಹೊರಳಿಸಿದೆ.
ಮಾತಿನಲ್ಲಿ ಕಥೆಮೊಳೆತು, ಸಂವಾದದಲ್ಲಿ ಚಿಗಿತು, ಹಾಡಿನಲ್ಲಿ ಕುಡಿವರಿದು, ಪುರಾಣದಲ್ಲಿ ಹೂತು, ತತ್ತ್ವಜ್ಞಾನದಲ್ಲಿ ಸಫಲವಾಗುವುದರಿಂದ “ಕಥೆಗಳಿಗೆ ಇತಿಯಿಲ್ಲ; ಕಥೆಗಳಿಗೆ ಮಿತಿಯಿಲ್ಲ; ಕಥೆಯಿಲ್ದ ಜಗವಿಲ್ಲ” ಎಂದು ಕಥಿಸದೆ ಗತ್ಯಂತರವಿಲ್ಲ. ಮಹಾಕಾವ್ಯವು ಕಥೋಪಕಥೆಗಳ ಜಾಳಿಗೆ; ಕಥೆಯ ಏರಿಳಿತದಲ್ಲಿಯೇ ಕೀರ್ತನವು ಹೆಜ್ಜೆಹಾಕುವಂಥದು. ನಾಟಕಕ್ಕೆ ಕಥೆಯೇ ಅಸ್ಥಿಪಂಜರ. ಹಾಡುಲಾವಣಿಗಳಲ್ಲಿ