ಸ್ನೇಹಿತರೆಲ್ಲ ಟೀಗೆ ಬಂದಿದ್ದರು. ಅವರೆಲ್ಲ ಡ್ರಾಯಿಂಗ್ ರೂಮಿನಲ್ಲಿ ಕೂತು ಅಂದಿನ
ಪೇಪರಿನಲ್ಲಿ ಬಂದಿದ್ದ, ಅವ್ವನ ತವರೂರಿನಿಂದ ಅಸೆಂಬ್ಲಿಯ ಮೆಂಬರಾಗಿ ಆರಿಸಿ
ಬಂದಿದ್ದ ಶೆಟ್ಟರ ಸದಾಶಿವರಾಯನ ಆಕಸ್ಮಿಕ ಮರಣದ ಬಗ್ಗೆ ವಿನೋದವಾಗಿ
ಚರ್ಚಿಸುತ್ತಿದ್ದರು. 'ಇವನು ಪಕ್ಕಾ ಲಫಂಗ ಇದ್ದ ಬಿಡು' ಎಂದ ಒಬ್ಬ ಯಾವನೋ.
ಕೂಡಲೇ ಒಳಗಿನ ಕೋಣೆಯಿಂದ ಚೀರಾಟ ಕೇಳಿಸಿತು. 'ಯಾವನೋ ಅವನು
ಹಾಗಂದವನು ? ನಿನಗೇನು ಗೊತ್ತೋ ಹುಚ್ಮುಂಡೇಗಂಡ ?' - ಎಂದು ಕೂಗಾಡುತ್ತ
ಅವ್ವ ಹೊರಬಂದಳು. ರಾಜನ ಗೆಳೆಯರೆಲ್ಲ ಅವಳ ಅವತಾರ ಕಂಡು
ಸ್ತಂಭಿತರಾಗಿದ್ದರು. ಅವಳ ಕೂದಲು ಕೆದರಿತ್ತು. ಬಳೆ ಒಡೆದುಕೊಂಡು ಕೈಗೆಲ್ಲ ರಕ್ತ
ಬಂದಿತ್ತು. ಹಣೆಯ ಬೆವರಿನಿಂದ ಕುಂಕುಮವೆಲ್ಲ ಕರಗಿ ಹರಿದುಹೋಗಿತ್ತು. ಅವಳನ್ನು
ಅಂದು ಸುಮ್ಮನಿರಿಸಬೇಕಾದರೆ ಸಾಕಾಗಿಹೋಗಿತ್ತು ಮಾಲತಿಗೆ.
ಗೆಳೆಯರನ್ನು ಬೀಳ್ಕೊಂಡು ಬಂದ ರಾಜ ಮಾಲತಿಯೆದುರು ಕೂಗಾಡಿದ್ದ;
“ನೀನೇ ನೋಡಿದೆಲ್ಲ ಮಮ್ಮೀ, ಗೆಳೆಯರ ಮುಂದ ನನಗಾದ ಅಪಮಾನ ? ಈ
ಮುದುಕಿ ಸಲುವಾಗಿ ಮನೀಗೆ ಗೆಳೆಯಾರ್ನ ಕರಿಯೋದೂ ಕಠಿಣ ಆಗೇದ. ನಾ ನಿನಗ
ಸಾವಿರ ಸರೆ ಹೇಳೀನಿ, ಆಕಿನ್ನ ಮೆಂಟಲ್ ಹಾಸ್ಪಿಟಲಿಗೆ ಸೇರಿಸೋಣೂಂತ. ನೀ
ಕೇಳೂದಿಲ್ಲ. ನಮಗೆಲ್ಲಾ ಆಕೀ ಕಾಲಾಗ ಪೂರಾ ತಲೀಕೆಟ್ಟು ನಾವೇ
ಮೆಂಟಲ್ಹಾಸ್ಪಿಟಲಿಗೆ ಹೋಗ್ತಿವಿ. ನೀನೂ-ನಿಮ್ಮವ್ವ ಆರಾಮಾಗಿರ್ರಿ."
ಒಣಗಿದ ಗಂಟಲಿನಿಂದ ಮಗನನ್ನು ಸಮಾಧಾನ ಮಾಡಲೆತ್ನಿಸಿದ್ದಳು,
ಮಾಲತೀ ; 'ಹಾಂಗನಬಾರದಪಾ ರಾಜೂ, ಆಕೀಗೆ ತಲಿಗೆ ತ್ರಾಸಾಗೇದಷ್ಟs, ತಲೀ
ಕೆಟ್ಟಿಲ್ಲ. ಇನ್ನಷ್ಟ ದಿವಸ ಸಹನ ಮಾಡಿಕೋಬೇಕು. ಆಕೀಗೂ ವಯಸ್ಸಾತು. ಇನ್ನೆಷ್ಟು
ದಿವ್ಸ ಇರ್ತಾಳ ?'
ಅವ್ವ ಹೇಳಿದಂತೆ ಅವ್ವನ ಸಾವಿನ ದಾರಿ ಕಾಯುತ್ತಿರುವೆನೇ ತಾನೂ ಸಹ ?
- ನಿಟ್ಟುಸಿರು ಬಿಟ್ಟು ಕೆಲಸ ಮುಂದುವರಿಸಿದಳು ಮಾಲತಿ.
ಅಂದೆಲ್ಲ ಅವ್ವ ಊಟ ಮಾಡಿರಲಿಲ್ಲ. ಮಾಲತಿ ಸೋತು ಸುಮ್ಮನಾಗಿದ್ದಳು.
ರಾತ್ರಿ ಮಕ್ಕಳು ಮಲಗಿದ ನಂತರ ಅವ್ವನನ್ನು ಸಮಾಧಾನ ಮಾಡಲೆಂದು ಅವಳ
ರೂಮಿಗೆ ಹೋಗಿದ್ದಳು-ಹಗಲಿಡೀ ಒದರಾಡಿದ್ದ ಅವ್ವ ರಾತ್ರಿ ಹಾಸಿಗೆಯ ಮೇಲೆ
ಮಲಗಿ ಕಣ್ಣೀರಿಡುತ್ತಿದ್ದಳು. ಮಾಲತಿಯ ಕರುಳು ಚುರೆಂದಿತು. “ಏನಾತವಾ ?
ಹೇಳು. ನನಗ, ನಿನ್ನ ಮಾಲತಿಗೆ, ಹೇಳೂದಿಲ್ಲೇನು ?' ಎಂದು ಬಹಳ ಹೊತ್ತು
ಒತ್ತಾಯಿಸಿದಾಗ, 'ಮಾಲೀ, ನಾ ಇವತ್ತ ವಿಧವಾ ಆದೆ' ಎಂದು ಅತ್ತಿದ್ದಳು ಅವ್ವ.
ಎಂಥ ಮಾತು ! ಬೆಚ್ಚಿದ ಮಾಲತಿ ಮೊದಲು ಸುತ್ತಲೂ ನೋಡಿದ್ದಳು. -