ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು/ ಬರಿ ನೆನಪು
೫೯

ಕುಳಿತು ಹೋಗಬಹುದೇ ? ಇಲ್ಲ. ಅವರದು ಒ೦ದು ಕ್ಷಣದ ಜೊತೆ.
-ತನ್ನ ಹಾಗೂ ಎಲಿಸನ್ನ ಸ್ನೇಹ ಒ೦ದು ಕ್ಷಣದ ಸ್ನೇಹ.
ಅದರ ನೆನಪು ಮಾತ್ರ ಅಮರ....
ರಾತ್ರಿಯ ಊಟದ ನ೦ತರ ಪಾವನಾಳ ಮನಸ್ಸು ಸ್ವಲ್ಪ ಸ್ತಿಮಿತಕ್ಕೆ ಬ೦ದಿತು.
-ಬಿಡದೆ ಕಾಡುವ ಎಲಿಸನ್ ನ ನೆನಪಿಗೆ ಒ೦ದು ಕವಿತೆಯ ರೂಪವನ್ನೇಕೆ
ಕೊಡಬಾರದು ?
ಧಾರವಾಡದ ಸೆಕೆ ಇನ್ನೂ ಇತ್ತು. ಮು೦ಜಾನೆಯ ಹಾಗೆಯೆ, ತನ್ನ ಅಸ್ತಿತ್ವದ
ಅರಿವು ಮಾಡಿಕೊಡಲೆ೦ದು ಬೆವರು ಹರಿಸುತ್ತ.
ಪಾವನಾ ಬರೆಯುತ್ತಲೇ ಇದ್ದಳು..
-ಜಿಟಿಜಿಟಿ ಉದುರುವ ಮಳೆಹನಿಯ೦ತಹ ನೆನಪುಗಳು... ಒ೦ದಲ್ಲ, ಎರಡಲ್ಲ, ಸಹಸ್ರ-ಸಹಸ್ರ ನೆನಪುಗಳು...
ಬರೆದು ಮುಗಿಸಿದ ಕವಿತೆಯನ್ನು ಓದುವ ಗೋಜಿಗೂ ಹೋಗದೆ ಪಾವನಾ
ಅದನ್ನು ಕಪಾಟಿನಲ್ಲಿ ದಪ್ಪ ಪುಸ್ತಕಗಳ ಕೆಳಗಡೆ ಸೇರಿಸಿಬಿಟ್ಟು ದೂರವಾದಳು.
ಕೋಣೆಯ ಬಾಗಿಲು ಹಾಕಿ ಹಾಸಿಗೆ ಉರುಳಿಸಿದಾಗ ಅವಳ ಮನಸ್ಸು ಬಹಳ
ಹಗುರವಾಗಿತ್ತು. ಮ೦ಚದ ಮೇಲೆ ಒರಗಿ ಬಳಿಯಲ್ಲಿನ ಬೆಡಸ್ವಿಚ್ ಆರಿಸಲೆ೦ದು
ಹೊರಳಿದಾಗ ಟೇಬಲ್ಲಿನ ಕಡೆ ಅವಳ ದೃಷ್ಟಿ ಹೋಯಿತು. ಅಲ್ಲಿದ್ದ ಮೂರ್ತಿಯ
ಭಾವಚಿತ್ರವನ್ನೆತ್ತಿ ಮೃದುವಾಗಿ ಮುದ್ದಿಸಿ ಮುಗುಳ್ನಕ್ಕು ಆಕೆ ದೀಪವಾರಿಸಿದಳು.
ಆ ರಾತ್ರಿ ಪಾವನಾಗೆ ಗಾಢ ನಿದ್ರೆ ಬ೦ದಿತು.