ಪ್ರಶ್ನೆಗಳಿಗೆ ಸರಳರೂಪ ಕೊಟ್ಟು ಬಿಡಿಸಿಬಿಡುತ್ತಿದ್ದ. ಆತನ ಈ ಸುಲಭೀಕರಣದ ಸಾಮರ್ಥ್ಯ ಹೊಸದೇನಲ್ಲ. ಇಪ್ಪತ್ತು ವರ್ಷಗಳಿಂದಲೂ ತನಗೆ ಪರಿಚಿತವಾಗಿದ್ದುದೇ. ತನಗೆ ಕಠಿಣವಾಗಿ ತೋರಿದ ಪ್ರಸಂಗಗಳಲ್ಲೆಲ್ಲ ಈ ಹಿಂದೆ ಆಕೆ ಕಣ್ಣುಮುಚ್ಚಿ ಆತ ತೋರಿದ ದಾರಿ ಗುಂಟ ಸಾಗಿದ್ದುಂಟು. ಈಗಲೂ ಹಾಗೆಯೇ ಮಾಡಿಬಿಟ್ಟರೆ, ಎಲ್ಲ ಸುರಳೀತವಾಗುವುದರಲ್ಲಿ ಸಂಶಯವಿಲ್ಲ. ಹಿಂದೆಲ್ಲ ಆತ ಅಂದದ್ದಕ್ಕೆಲ್ಲ ವಿಚಾರ ಮಾಡದೆ ಹ್ಞೂ ಅಂದದ್ದಿಲ್ಲವೆ?
-'ನೀ ಯಾಕಿಷ್ಟು ವಿಚಾರ ಮಾಡ್ತಿ ಮಿನಿ? ನಾನು-ನೀನು ಹೀಂಗ ಒಂದ ದಿನಾ ಕೂಡಬೇಕಂತ ವಿಧೀ ಸಂಕಲ್ಪ ಇತ್ತು. ತಡಾ ಆಗಿ ಕೂಡಿದೆವು ಅನ್ನೋದೇನೋ ಖರೆ. ಆದರ ಇದರಿಂದ ನಮ್ಮ ಪ್ರೀತಿಯೊಳಗ ಕಡಿಮೆ ಆದೀತಂತ ನನಗನ್ಸೂದಿಲ್ಲ. ಮಂದೀ ಕಣ್ಣಾಗ ಇದು ತಪ್ಪು, ಪಾಪ ಖರೆ. ಆದರ ನಾ ಒಪ್ಪೂದಿಲ್ಲ ಇದು ಪಾಪ ಅಂತ. ಮಿನಿ, ನಾ ನಿನ್ನ ಎಷ್ಟ-ಎಷ್ಟ ಪ್ರೀತಿ ಮಾಡತೀನಿ, ನೀ ಹೇಳು-ಇದಕ್ಕ ಪಾಪ ಅನಬೇಕೇನು? ತಪ್ಪು ಅನಬೇಕೇನು?' -ಆತನ ಧ್ವನಿಯಲ್ಲಿ ಕಣ್ಣೀರಿತ್ತು. ಅದೆಷ್ಟು ಶಕ್ತಿಯುತವಾಗಿತ್ತೆಂದರೆ ಆತನನ್ನು ಅಲ್ಲಗಳೆಯುವುದು ಆಕೆಗೆ ಸಾಧ್ಯವೇ ಇರಲಿಲ್ಲ.
'ಮಂದೀನ್ನ ತಗೊಂಡು ಏನ್ಮಾಡೋದು ಮಿನಿ? ಮಂದೀ ಗರಜು ನನಗ ಎಂದೂ ಇಲ್ಲ. ಮಂದೀದು ಬಿಡು, ಸ್ವಥಾ ನನ್ನ ಹೆಂಡತೀದೂ ನಾ ಈ ವಿಷಯದಾಗ ಕೇಳೋದಿಲ್ಲ. ಎಂದರೆ ಒಂದಿನಾ ಆಕೀಗೆ ಇದೆಲ್ಲಾ ಗೊತ್ತಾತೂ ಅಂತ ತಿಳಿ. ಆಗ ನಾ ಆಕೀಗೆ ಸ್ಪಷ್ಟ ಹೇಳ್ತೀನಿ- ಹೌದು, ನಾ ಮೀನಾಕ್ಷೀನ್ನ ಪ್ರೀತಿ ಮಾಡ್ತೀನಿ ಅಂತೀನಿ. ಮೀನಾಕ್ಷಿ ಅಗ್ನಿಸಾಕ್ಷಿ ಆಗಿ ಕೈ ಹಿಡೀದಿದ್ರೇನಾತು, ನಮ್ಮಿಬ್ಬರ ಲಗ್ನ ದೇವರೆ ಸಾಕ್ಷಿ ಆಗಿ ಆಗೇದ ಅಂತೀನಿ. ನಾ ನಿನ್ನ ಕೈಬಿಡೂದಿಲ್ಲ ಮಿನಿ, ನಾ ಯಾರಿಗೂ ಅಂಜೂದಿಲ್ಲ. ನನ್ನ ನಂಬತೀಯಲ್ಲs....?' -ಎದೆ ಸೆಟಿಸಿ ನಿಂತ ಭವ್ಯವಾದ ಆತನ ಆಕೃತಿ, ಉದ್ವೇಗದಿಂದ ಬೆವರಿದ್ದ ಹಣೆ, ಧ್ವನಿಯಲ್ಲಿ ಅಚಲ ವಿಶ್ವಾಸ....ಆಕೆ ನಂಬದಿರುವುದು ಹೇಗೆ ಸಾಧ್ಯವಿತ್ತು?
-'ನಾ ನಿನ್ನ ಯಾಕ ಪ್ರೀತಿ ಮಾಡ್ಲಿಕ್ಕೆ ಸುರೂ ಮಾಡಿದೆ ಅಂತ ಕೇಳ್ತೀಯಲ್ಲ ಮಿನಿ, ಏನ ಹೇಳ್ಲಿ? ಯಾವದರೆ ಕಾರಣದ ಸಲುವಾಗಿ ಮಾಡಿದರೆ ಅದು ಖರೆ ಪ್ರೀತಿ ಹ್ಯಾಂಗಾದೀತು? ಪ್ರೀತಿ ಅಂದರೆ- it just happens... ಅದಕ್ಕ ಕಾರಣ- ಪರಿಣಾಮದ ಸಂಬಂಧ ಇಲ್ಲ.' - ಆತನ logic ಆಕೆಗೆ ಎಂದೂ ತಪ್ಪಾಗಿ ತೋರಿಲ್ಲ. ಆತ ನಿಜವಾಗಿ ಧೈರ್ಯವಂತ ಅಂತ ಅನ್ನಿಸಿದೆ ದಿನಗಳೂ ತನ್ನ ಜೀವನದಲ್ಲಿ ಇಲ್ಲದ್ದಿಲ್ಲ. -'ಜೋಗಕ್ಕೆ ಹೋಗ್ಬೇಕು ಅಂತ ಮೊನ್ನೆ ನೀ ಅಂದಾಗಿನಿಂದ್ಲೂ ಅದನ್ನs