ಪುಟ:ನಡೆದದ್ದೇ ದಾರಿ.pdf/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೦೮

ನಡೆದದ್ದೇ ದಾರಿ

ಹದಿನಾರು ವರ್ಷಗಳಾದರೂ ಬೆಂಗಳೂರಿನಲ್ಲಿಯೇ, ಹಾಗೂ ಸಮೀಪದ
ಊರುಗಳಲ್ಲಿ, ಪೋಸ್ಟ್‌ ದೊರಕಿಸಿಕೊಳ್ಳುವಲ್ಲಿ ಈ ವರೆಗೂ ಆಕೆ
ಯಶಸ್ವಿಯಾಗಿದ್ದಳು. ಆದರೆ ಈ ಸಲ ಆಕೆ ಬೆಂಗಳೂರಿನಿಂದ ರಾಮನಗರಕ್ಕೆ
ಬರಲೇಬೇಕಾಗಿತ್ತು. ಪ್ರಮೋಶನ್‌ ಬಂದಿದ್ದರಿಂದ ವರ್ಗಾವಣೆಯನ್ನು ನಿರಾಕರಿಸುವ
ಹಾಗಿರಲಿಲ್ಲ. ಮಕ್ಕಳೂ ಈಗ ದೊಡ್ಡವರಾಗಿದ್ದರು. ಮನೆಯಲ್ಲಿ ಮನೋಹರನ
ತಾಯಿ ಇದ್ದರು. ಹೀಗಾಗಿ ಕಳೆದ ಎಂಟು-ಹತ್ತು ತಿಂಗಳುಗಳಿಂದ ಆಕೆ ರಾಮನಗರದಲ್ಲಿ
ಒಬ್ಬಳೇ ಇದ್ದಳು.

ಈ ಮಧ್ಯೆ ವಾರಾಂತ್ಯದಲ್ಲಿ ಎರಡು ಸಲ ಮಾತ್ರ ಬೆಂಗಳೂರಿಗೆ ಹೋಗಿ
ಬರಲು ಸಾಧ್ಯವಾಗಿತ್ತು. ಅವಸರದಿಂದ ಹೋಗುವುದು, ಗಂಡ-ಮಕ್ಕಳ ಮುಖವನ್ನೂ
ಸರಿಯಾಗಿ ನೋಡುವುದಾಗಿರುತ್ತಿರಲಿಲ್ಲ, ಅಷ್ಟರಲ್ಲೇ ಮತ್ತೆ ಅವಸರದಿಂದ ಹೊರಟು
ಬಂದುಬಿಡುವುದು. ಬಂದ ನಂತರ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು.
ಮನೋಹರನೇ ನಾಲ್ಕಾರು ಸಲ ಬಂದು ಇದ್ದು ಹೋಗಿದ್ದ. ಚಿಂತಿಸಬೇಡ,
ಹೇಗಾದರೂ ಮೂರು ವರ್ಷ ಕಳೆಯಲಿ, ಮತ್ತೆ ಬೆಂಗಳೂರಿಗೇ ಟ್ರಾನ್ಸ್‌ಫರ್‌
ಮಾಡಿಸಿಕೊಳ್ಳಲು ಪ್ರಯತ್ನಿಸೋಣ, ಅಂತ ಸಮಾಧಾನ ಮಾಡಿದ್ದ. ಆದರೆ
ಸ್ವಭಾವತಃ ಕುಟುಂಬವತ್ಸಲೆಯೂ ಭಾವುಕಳೂ ಆಗಿದ್ದ ಯಶಸ್ವಿನಿಗೆ ಈ ಅಗಲಿಕೆಯ
ಅನುಭವ ಬಹಳ ನೋವಿನದಾಗಿತ್ತು. ಇಡಿಯ ದಿನ ಕೋರ್ಟಿನ ಕಲಾಪಗಳಲ್ಲಿ
ಸಮಯ ಹೇಗೋ ಕಳೆದುಹೋಗುತ್ತಿತ್ತು. ಸಂಜೆ ಕ್ವಾರ್ಟರ್ಸಿಗೆ ಮರಳಿದಾಗ ಮನೆಯ
ನೆನಪಾಗಿ ಬಹಳ ಏಕಾಕಿಯೆನ್ನಿಸಿ ದುಃಖವಾಗುತ್ತಿತ್ತು. ಅಮ್ಮ-ಅಮ್ಮ ಅಂತ ಹಿಂದೆ-
ಮುಂದೆ ಸುತ್ತಾಡುವ ಮಗಳು. ಸ್ಕೂಲು ಬಿಟ್ಟು ಬಂದೊಡನೆ ಆಕೆಯ ತೊಡೆಯ
ಮೇಲೆ ತಲೆಯಿರಿಸಿ ಮಲಗುವ ಮಗ, ತಾಯಿಯಂತೆ ಆದರಿಸಿ ಉಪಚರಿಸುತ್ತಿದ್ದ ಅತ್ತೆ,
ಮತ್ತು ರಾತ್ರಿಗಳಲ್ಲಿ ತನ್ನ ಬಿಸಿಯಪ್ಪುಗೆಯಲ್ಲಿ ಜಗತ್ತು ಮರೆಸುತ್ತಿದ್ದ ಗಂಡ -ಈ
ಎಲ್ಲರಿಂದ ಇಷ್ಟು ದೂರವಾಗಿ ಒಬ್ಬಳೇ ಹೀಗೆ ಒದ್ದಾಡುತ್ತ ಯಾಕಿರಬೇಕು ? ಸಾಕಷ್ಟು
ವರ್ಷ ದುಡಿದದ್ದಾಗಿದೆ. ಇನ್ನು ವ್ಹಾಲಂಟರಿ ರಿಟಾಯರ್‌ಮೆಂಟ್‌ ಏಕೆ
ತಗೊಳ್ಳಬಾರದು ? ಮನಃಶಾಂತಿಯೇ ಇಲ್ಲದಿದ್ದರೆ ಈ ನೌಕರಿ, ಹಣ, ಅಂತಸ್ತು,
ಕೀರ್ತಿಗಳಿಂದ ಏನು ಪ್ರಯೋಜನ ? -ಹೀಗೆ ಯೋಚಿಸಿ ಯಶಸ್ವಿನಿ
ಹೈರಾಣಾಗುತ್ತಿದ್ದಳು.

ಈಗ ಕೋರ್ಟಿಗೆ ಬೇಸಿಗೆ ಬಿಡುವು ಸುರುವಾಗಲಿತ್ತು. ಯಶಸ್ವಿನಿ ತುಂಬ
ಆಸ್ಥೆ ಯಿಂದ ಗಂಡ-ಮಕ್ಕಳಿಗಾಗಿ ಹಲವಾರು ವಸ್ತುಗಳನ್ನು ಖರೀದಿಸಿದಳು. ಎಲ್ಲಾ
ಸಾಮಾನು ನೀಟಾಗಿ ಪ್ಯಾಕ್‌ ಮಾಡಿದಳು. ದೀರ್ಘವಾದ ರಜೆ ಇದೆ, ನಾನು ಮನೆಗೆ