ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೨೫ ನಡೆದದ್ದೇ ದಾರಿ
ಹದಿನೈದು ದಿನಗಳ ರಜೆ ಹಾಕಿ ತವರಿಗೆ ಬಂದಳು. ಒಬ್ಬಳೇ ಏಕೆ ಬಂದೆ ಅಂತ ಕೇಳಿದವರಿಗೆ ಗಂಡ ಮದುವೆಗೆ ಬರುತ್ತನೆಂದು ಹೇಳಿದಳು. ಆತನೀಗ ಅಸಿಸ್ಟಂತಟ್ ಮ್ಯಾನೇಜರ್, ತುಂಬ ಕೆಲಸ, ಹಾಗೆಲ್ಲ ರಜೆ ಸಿಗುವುದಿಲ್ಲ, ಅಂತ ಸತ್ಯವನ್ನೇ ಹೇಳಿದಳು. ಬರುವಾಗ ತಮ್ಮನಿಗಾಗಿ ಏನಾದರೂ ಒಳ್ಳೆಯ ಪ್ರಜೆಂಟೇಶನ್ ತಗೊಂಡು ಬರ್ರಿ ಅಂತ ಗಂಡನಿಗೆ ಹೇಳಿ ಬಂದಿದ್ದಳು.
ಕಣ್ಣು ಸರಿಯಾಗಿ ಕಾಣಿಸುತ್ತಿದ್ದರೂ ಮುಂಬಯಿಯಿಂದ ಬಂದ ಲಕ್ಶ್ಮಿಯನ್ನು ನೋಡಲೆಂದು ಇಮಾಮ್ ಬಿ ಕೋಲೂರಿಕೊಂಡು ಬಂದಳು. 'ಎಷ್ಟ ದುಬಲೀಪತಲೀ ಆಗೀದಿ ಬೇಟೀ' ಅಂದಳು. ನೆಟಿಕೆ ಮುರಿದಳು.ಹತ್ತನೆಯ ಸಲ ಬಸಿರಾಗಿದ್ದ ಹಮೀದಾಬಾನು ರಕ್ತಹೀನತೆಯಿಂದ ಬಿಳಿಚಿಕೊಂಡು ಜೀವಂತ ಶವದ ಹಾಗೆ ಕಾಣುತ್ತಿದ್ದಳು.ಇನ್ನು ಮತ್ತೆ ಹೆರಿಗೆಯಾದರೆ ಆಕೆಯ ಜೀವಕ್ಕೆ ಅಪಾಯವೆಂದು ಕಳೆದ ಸಲವೇ ಡಾಕ್ಟರು ಹೇಳಿದ್ದರಂತೆ. ಹಾಗೆಂದು ಆಕೆಯ ಒಂಬತ್ತನೆಯ ಮಗು ಹುಟ್ಟಿದ ನಂತರ ಬಂದಿದ್ದ ಆಕೆಯ ಗಂಡನಿಗೆ ಇಮಾಮ್ ಬೀ ಹೇಳಿದಾಗ ಆತ- 'ಜೀವ ಕೊಡುವಾತ- ಉಳಿಸುವಾತ- ತೆಗೆದುಕೊಂಡು ಹೋಗುವಾತ ಅಲ್ಲಾ, ನಮ್ಮ ಕೈಯಲ್ಲೇನಿದೆ?' ಅಂತ ಕೈಯಾಡಿಸಿಬಿಟ್ಟಿದ್ದ. ಯಥಪ್ರಕಾರ ಆತ ತಿರುಗಿ ಹೋಗುವಾಗ ಅಲ್ಲಾನ ಕೃಪೆಯನ್ನು ಸಾಬೀತು ಮಾಡಿಯೇ ಹೊಗಿದ್ದ. ಆ ಭಡವನನ್ನು ಮನೆಯ ಹೊಸ್ತಿಲು ತುಳಿಸಗೊಡಬಾರದೆಂದು ಈಗೀಗ ದೊಡ್ದವರಾಗತೊಡಗಿರುವ ಮಕ್ಕಳೂ ಹೇಳುತ್ತಿವೆ. ಈ ಒಂಬತ್ತು ಮಕ್ಕಳಲ್ಲಿ ಹಿರಿಯ ಮೂವರೂ ಯಾರ್ಯಾರ ಮನೆಯಲ್ಲೋ ಕೆಲಸಕ್ಕಿದ್ದಾರೆ. ಉಳಿದ ಆರು ಮಕ್ಕಳು ತಾಯಿ ಅಜ್ಜಿಯೊಡನೆ ಅರೆಹೊಟ್ಟೆ ಉಂಡು ಕಟ್ಟಿಗೆಯಂಥ ಕೈಕಾಲು-ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಜೀವವಿಲ್ಲದ ಕಣ್ಣುಗಳಿಂದ ಜಗತ್ತನ್ನು ನೋಡುತ್ತ ಹೇಗೋ ಬದುಕಿಕೊಂಡಿವೆ. ಈ ಪೀಳಿಗೆಗೆ ಶೀಘ್ರವೇ ಮತ್ತೊಂದು ದುರ್ದೈವೀ ಹೊಸ ಜೀವ ಸೇರಲಿದೆ. ಈಗಲಾದರೂ ಹಮೀದಾಬಾನು ಬುದ್ದಿ ಕಲಿಯಬಾರದೆ? ಆಕೆಯ ಹಾಗೂ ಈ ಮಕ್ಕಳ ಅನುವು-ಆಪತ್ತು, ಜಡ್ಡು-ಜಾಪತ್ತು, ಹೊಟ್ಟೆ-ಬಟ್ಟೆ ಯಾವುದರ ಖಬರೂ ಇಲ್ಲದೇ ವರ್ಷಕ್ಕೊಂದು ಸಲ ಬಂದು ಕೆಲದಿನ ಇದ್ದು ಮಜಾಮಾಡಿ ಹೋಗುವ ಸುವ್ವರ್ ನನ್ನು ಹಮೀದಾಬಾನು ಯಾಕೆ ಹತ್ತಿರ ಸೇರಿಸಬೇಕು? ಯಾವ ಸುಖಕ್ಕಾಗಿ?- ಇದು ಮುದುಕಿ ಇಮಾಮ್ ಬೀಯ ವ್ಯಥೆ. ಹಮೀದಾಬಾನು ನಿರೀಕ್ಷಿಸಿಯೇ ಇದ್ದಂತೆ ಲಕ್ಷ್ಮಿ ಕೋಪದಿಂದ ಕೇಳಿದಳು. 'ನೀನ್ಯಾಕೆ ಆತನನ್ನು ಒದ್ದು ಓಡಿಸುವುದಿಲ್ಲ ಹಮೀದಾ? ಇಂಥ ಗಂಡನನ್ನು ಕಟ್ಟಿಕೊಂಡೇನು ಉಣ್ಣುವುದಿದೆ? ಈತನೂ ಒಬ್ಬ ಗಂಡಸೇ?'