ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೬
ಕದಳಿಯ ಕರ್ಪೂರ


``ನಿನ್ನ ಭಾವನೆಗಳು ಎಷ್ಟು ಉದಾತ್ತವಾದವುಗಳು, ಮಗಳೇ. ಅಷ್ಟರಲ್ಲಿ ಮಹಾದೇವಿ ಈ ವಚನವನ್ನು ಹೇಳಲು ತೊಡಗಿದಳು :
``ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆನವ್ವಾ.... ಇದನ್ನು ಹೆಜ್ಜೆ ಹೆಜ್ಜೆಯಾಗಿ ಕೇಳುತ್ತಾ ಗುರುಗಳ ಸಂತೋಷ ಉಕ್ಕಿ ಹರಿಯಿತು. ``ಸಾವ ಕೆಡುವ, ಗಂಡರನೊಯ್ದು ಒಲೆಯೊಳಗೆ ಇಕ್ಕು ಈ ಮಾತನ್ನು ಕೇಳಿ ಮುಗುಳುನಗೆ ಸುಳಿಯಿತು ಅವರ ಮುಖದ ಮೇಲೆ :
``ಎಷ್ಟು ದಿಟ್ಟತನವಮ್ಮಾ ನಿನ್ನದು. ಆದರೆ ನಿನ್ನ ತಂದೆ ತಾಯಿಗಳು ಈ ಮಾತನ್ನು ಕೇಳಬೇಕಲ್ಲ, ಮಗಳೆ... ಎನ್ನುತ್ತಾ ವಿಚಾರಪರರಾದರು.
``ನನಗೂ ಅದೇ ಯೋಚನೆ, ಗುರುಗಳೇ. ನಿಮ್ಮ ಮಾತನ್ನೂ ಅವರು ಕೇಳಲಾರರೇ ? ಬೇಡಿಕೆಯ ಧ್ವನಿಯಿತ್ತು.
``ಅದು ಅಷ್ಟು ಸುಲಭವಲ್ಲಮ್ಮ. ಪ್ರಪಂಚದ ದೃಷ್ಟಿಯಲ್ಲಿ ನೀನು ಹೆಣ್ಣು. ಗಂಡಿನ ಆಶ್ರಯವನ್ನು ಪಡೆದೇ ಬಾಳಬೇಕಾದವಳು. ಸನ್ಯಾಸಿಯಾದ ನಾನು ಅದಕ್ಕೆ ವಿರುದ್ಧವಾಗಿ ಹೇಳುವಂತಿಲ್ಲ. ಇಂದಿನ ಸಮಾಜದ ಸಂಪ್ರದಾಯಗಳು ಹಾಗಿವೆ. ಆದರೂ ನಿರಾಶಳಾಗಬೇಡ. ಅತ್ಯುತ್ಕಟವಾದ ಸತ್ಸಂಕಲ್ಪಕ್ಕೆ ಮಲ್ಲಿಕಾರ್ಜುನನ ಕೃಪೆ ಸದಾ ಇದ್ದೇ ಇರುತ್ತದೆ. ಧೈರ್ಯವಿತ್ತರು ಗುರುಲಿಂಗರು.
``ಆ ಶ್ರದ್ಧೆಯೇ ನನಗೆ ಸ್ಫೂರ್ತಿದಾಯಕ. ಅವರ ಕರುಣೆಯೇ ನನ್ನನ್ನು ಉಳಿಸಬೇಕು. ನಿಮ್ಮ ಹರಕೆಯೇ ನನಗೆ ಧೈರ್ಯವನ್ನು ಕೊಡಬೇಕು.
``ನಿನ್ನ ನಿಷ್ಠೆಯೇ ನಿನಗೆ ಎಲ್ಲಕ್ಕೂ ಮಿಗಿಲಾದ ಹರಕೆ, ತಾಯಿ ಎಂಬ ಮಾತೇ ಅವರ ಆಶೀರ್ವಾದವಾಗಿ ಪರಿಣಮಿಸಿತು.
ಗುರುಗಳಿಂದ ಬೀಳ್ಕೊಂಡ ಮಹಾದೇವಿ ಮಠದಿಂದ ಹೊರಟಾಗ ಅವಳ ಮನಸ್ಸಿನಲ್ಲೇನೋ ಒಂದು ನೆಮ್ಮದಿ ಮೂಡಿತ್ತು. ಅಲ್ಲಮನ ವಚನಗಳ ವ್ಯಕ್ತಿತ್ವ ಅವಳ ಮುಂದೆ ನಿಲ್ಲುತ್ತಿತ್ತು. `ನಿನಗಾಗಿ ಸತ್ತವರನಾರನೂ ಕಾಣೆ' ಎಂಬ ಮಾತನ್ನು ಮತ್ತೆ ಮತ್ತೆ ಹೇಳಿಕೊಂಡಳು. ಗುರುಗಳು ಹೇಳಿದ ಮಾತು ಸುಳಿಯಿತು.
`ನಿಜ, ದೈವಕೃಪೆ ಯಾವ ರೂಪದಿಂದಲೋ ಬರುತ್ತದೆ. ಬಂದೇ ಬರುತ್ತದೆ. ಚೆನ್ನಮಲ್ಲಿಕಾರ್ಜುನ ನನ್ನ ಕೈಬಿಡಲಾರ' ಎಂಬ ಆಲೋಚನೆ ಅವಳಿಗೆ ಧೈರ್ಯವನ್ನಿತ್ತಿತ್ತು.
ದೂರದ ದಿಗಂತದಲ್ಲಿ ಶುಭೋದಯವನ್ನು ಸಾರುವಂತೆ ಸೂರ್ಯ ತನ್ನ ಹೊಂಗಿರಣವನ್ನು ಮೇಲಕ್ಕೆ ಚಿಮ್ಮುತ್ತಿದ್ದ. ಆದರೆ ನಾಳೆಯ ಶುಭೋದಯಕ್ಕಾಗಿ ಇಂದು ಬರುವ ಕತ್ತಲನ್ನು ಎದುರಿಸಲೇಬೇಕೆಂಬುದನ್ನು ಸೂಚಿಸುವಂತೆ ಅವನ ಉಜ್ವಲವಾದ ಕಾಂತಿಬಿಂಬ, ಪಡುವಣ ಪರ್ವತದ ಅಂಚಿನಲ್ಲಿ ಮರೆಯಾಗುತ್ತಿತ್ತು.