ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬಲೆ
೧೧೫


ಇದೊಂದು ಒಳ್ಳೇ ಬಿಸಿಬಿಸಿ ಸುದ್ದಿಯಾಗಿತ್ತು ಜನರಿಗೆ.

``ಅದೃಷ್ಟ ಅಂದರೆ ಹೀಗಿರಬೇಕು. ಇದ್ದಕ್ಕಿದ್ದಂತೆ ರಾಜನ ಹೆಂಡತಿ ಆಗುವುದು ಸಾಮಾನ್ಯವೇನಯ್ಯಾ? ಎನ್ನುವುದು ಒಂದು ಅಭಿಪ್ರಾಯವಾದರೆ,

``ಸುಮ್ಮನೆ ಇರಯ್ಯ, ಮಹಾದೇವಿಯಂತಹ ಹೆಂಡತಿ ಸಿಗಬೇಕಾದರೆ ಪುಣ್ಯ ಮಾಡಿದ್ದ ರಾಜ. ಭಾಗ್ಯ ಮಹಾದೇವಿಯದಲ್ಲ ; ಆತನದು ಎಂಬುದು ಇನ್ನೊಂದು ಅಭಿಪ್ರಾಯವಾಗಿತ್ತು.

``ಅದು ಸರಿ, ಅಂತಹ ಏಕೈಕನಿಷ್ಠಾವಂತ ಶಿವಭಕ್ತರೆಂದು ನಾವು ತಿಳಿದಿದ್ದ ಆ ದಂಪತಿಗಳು ಅದು ಹೇಗೆ ಮಗಳನ್ನು ರಾಜನಿಗೆ ಕೊಟ್ಟರು ?

``ರಾಜನಿಗೆ ಹೆದರಿ ಕೊಟ್ಟಿರಬೇಕು, ಪಾಪ ! ಅದೂ ನಿಜ ಅನ್ನು, ರಾಜನನ್ನು ಎದುರುಹಾಕಿಕೊಂಡು ಬದುಕುವುದಕ್ಕಾಗುತ್ತದೆಯೇ?

``ರಾಜನೇ ಮನೆಯ ಬಾಗಿಲಿಗೆ ಬಂದಿರುವಾಗ ಆ ಸಂಪತ್ತನ್ನು ತಿರಸ್ಕರಿಸಲು ಯಾರಿಗಾದರೂ ಮನಸ್ಸು ಬರುತ್ತದೇನಯ್ಯ ?

``ಅದಿರಲಿ, ಕಳುಹಿಸುವವರು ಮದುವೆಯನ್ನಾದರೂ ಮಾಡಿ ಕಳುಹಿಸಬಾರದಿತ್ತೇ ಅಂತಃಪುರಕ್ಕೆ ? ಹಾಗೇ ಒಪ್ಪಿಸುವುದೇ?

``ಮದುವೆ ಆಯಿತಲ್ಲ !

``ಅದಾವಾಗಪ್ಪ ಮದುವೆ ಆದದ್ದು, ಯಾರಿಗೂ ಗೊತ್ತಿಲ್ಲದಂತೆ ?

``ಆಯ್ತಂತೆ ಅರಮನೆಯಲ್ಲಿ ; ಸಂಕ್ಷೇಪವಾಗಿ ಶಾಸ್ತ್ರ ಮುಗಿಸಿದರಂತೆ. ಇದು ಜನಜಂಗುಳಿಯಲ್ಲಿ ನಡೆಯುತ್ತಿದ್ದ ಸಂಭಾಷಣೆಯ ಒಂದು ರೂಪ. ಮನಸ್ಸಿಗೆ ತೋಚಿದಂತೆ ಜನ ನಾಲಗೆಯನ್ನು ಹರಿಯಬಿಡುತ್ತಿದ್ದರು. ಒಬ್ಬೊಬ್ಬರು ಹೇಳಿದುದು ನಿಜವೇ ಎಂಬಂತೆ ಕಿವಿಯಿಂದ ಕಿವಿಗೆ ಅದು ಹರಡುತ್ತಿತ್ತು. ಅದೂ ಇಂತಹ ಸಂದರ್ಭಗಳಲ್ಲಿ ಅನೇಕರಿಗೆ ನಾಲಗೆ ಬಹಳ ಹರಿತವಾಗುತ್ತದೆ. ಸ್ತ್ರೀಸಾಮ್ರಾಜ್ಯದಲ್ಲಿಯೂ ಕುಳಿತಲ್ಲಿ ನಿಂತಲ್ಲಿ ಇದೇ ಮಾತು. ಬಂಗಾರಮ್ಮ, ನಂಜಮ್ಮನಂತಹ ಕುಹಕಿಗಳಿಗಂತೂ ಇದೊಂದು ಸುವರ್ಣಸಂಧಿ ಸಿಕ್ಕಿದಂತಾಗಿತ್ತು.

ಓಂಕಾರಶೆಟ್ಟಿ - ಲಿಂಗಮ್ಮರಿಗೆ ಮಗಳನ್ನು ಕಳೆದುಕೊಂಡ ದುಃಖದ ಜೊತೆಗೆ, ಅದಕ್ಕಿಂತ ಹೆಚ್ಚಾಗಿಯೇ ಎನ್ನುವಂತೆ, ಜನರ ತಪ್ಪು ತಿಳುವಳಿಕೆಯ ತಿರಸ್ಕಾರದ ಮಾತುಗಳು ಚುಚ್ಚಿ ನೋವನ್ನುಂಟುಮಾಡುತ್ತಿದ್ದವು. ಅವರ ಅಂತರಂಗವನ್ನು ಬಲ್ಲ ಕೆಲವರು ಇಲ್ಲದಿರಲಿಲ್ಲ. ನಿಜಸಂಗತಿಯೇನೆಂಬುದನ್ನು ಅವರು ತಿಳಿದಿದ್ದರು ; ಸಹಾನುಭೂತಿಯನ್ನು ತೋರಿಸುತ್ತಿದ್ದರು. ಆದರೆ ಅವರ ಮಾತನ್ನು ಯಾರೂ ನಂಬುತ್ತಿರಲಿಲ್ಲ.