ಮೊದಲ ಬೆಂಚಿನಲ್ಲಿದ್ದ ನನ್ನ ಎದುರಾಳಿ ತಿರುಗಿನೋಡಲಿಲ್ಲ. ನೋಡುವ ಧೈರ್ಯ ಅವನಿಗೆ ಇರಲಿಲ್ಲ. ಅವಮಾನದಿಂದ ನನ್ನ ಮೈ ಉರಿ ಯುತಿತ್ತು. ನಾನು ಬಿಸಿಯುಸಿರು ಬಿಡುತ್ತಿದ್ದೆ. ಕಂಬನಿ ಈಗಲೋ ಮತ್ತೆಯೋ ಕೆಳಕ್ಕೆ ಧುಮುಕಲು ಸಿದ್ಧವಾಗಿತ್ತು.
ಆ ರಾತ್ರೆ ತಂದೆ ಎಂದಿನಂತೆ ಕೇಳಿದ:
"ಈ ದಿನ ಏನು ಓದ್ದೆ ಚಂದ್ರು?".
ನಾನು ಯಾವುದೋ ಪಾಠದಹೆಸರು ಹೇಳಿದೆ. ನನಗೆ ದೊರತ ಹೊಸ ಶಿಕ್ಷೆಯ ವಿಷಯವೆತ್ತಲಿಲ್ಲ. ಅದನ್ನು ಹೇಳಿದ್ದರೆ ಅವನಿಗೆ ಖಂಡಿತವಾಗಿಯೂ ತುಂಬ ನೋವಾಗುತಿತ್ತು ಅಂಥ ಸಂಕಟಕ್ಕೆ ಕಾರಣನಾಗಲು ನಾನು ಇಷ್ಟಪಡಲಿಲ್ಲ. ಮೊದಲ ಬಾರಿಗೆ ತಂದೆಯಿಂದ ಸತ್ಯಸಂಗತಿಯನ್ನು ನಾನು ಬಚ್ಚಿಟ್ಟೆ.
ಹಾಗೆ ದಿನಗಳು ಉರುಳಿದವು. ಹಳ್ಳಿಯ, ತಾಯಿಯ, ಗೋಪಿ ಹಸುವಿನ ನೆನಪೆಲ್ಲಾ, ಹೊಸ ಅನುಭವಗಳ ಎಡೆಯಲ್ಲಿ ಮೆಲ್ಲ ಮೆಲ್ಲನೆ ಮರೆಯಾಗುತ್ತಿತ್ತು. ನಾನು ತಾಯಿಯಿಲ್ಲದ ಏಕಾಕಿ ಎಂಬ ವಿಷಯ ನನ್ನ ಪಾಲಿಗೆ ಸರ್ವೆ ಸಾಮಾನ್ಯವಾಯಿತು.
ಅದೊಂದು ಭಾನುವಾರ, ತಂದೆ ನನ್ನನ್ನು ಕ್ಷೌರದಂಗಡಿಗೆ ಕರೆದೊಯ್ದು.
ಹಾದಿಯಲ್ಲಿ "ಚಂದ್ರೂ ನಾವೀಗ ಪ್ಯಾಟೆಯವರು. ಜುಟ್ಟಿನ ಬದಲು ಕ್ರಾಪು ಬಿಟ್ಕೊಬೇಕು. ಅಲ್ಲವಾ?"ಎಂದ.
ನನಗೆ ಆಶ್ಚರ್ಯವೆನಿಸಿತು ದೀರ್ಘ ಕಾಲದಿಂದ ಹಗಲೂ ರಾತ್ರೆಯೂ ನನ್ನ ನೂರಾರು ಭಯಭೀತಿಗಳಿಗೆ ಕಾರಣವಾಗಿದ್ದ ಜಟ್ಟನ್ನು ಕತ್ತರಿಸುವ ಮಾತನ್ನಾಡುತ್ತಿದ್ದಾನೆ ತಂದೆ! ಇದು ನಿಜವಿರ ಬಹುದೆ? ಇದು ಸಾಧ್ಯವೆ? ಕ್ರಾಪಿನ ಹಲವಾರು ಹುಡುಗರು ಮುಂದೆ ಯಾವ ಹೆದರಿಕೆಯೂ ಇಲ್ಲದೆ ನಾನು ಇನ್ನು ನಡೆಯುವುದು ಸಾಧ್ಯವೆ?
ಕ್ಷೌರಿಕನ ಅಂಗಡಿಯಲ್ಲಿ ಅಸಾಧ್ಯವಾದ್ದೆನ್ನುವುದೇ ಇರಲಿಲ್ಲ. ಆತನ ಕತ್ತರಿ ಕರಕ್ ಕರಕ್ ಎಂದು ನನ್ನ ಜುಟ್ಟನ್ನು ಬಲಿತೆಗೆದು ಕೊಂಡಿತು.ತ ಲೆಯಿಂದ ದೊಡ್ಡದೊಂದು ಭಾರ ಇಳಿದ ಹಾಗಾಯಿತು. ಆ ಕ್ಷೌರಿಕ ಕ್ರಾಪು ಬಿಡಿಸಿದ.