ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೯೩


ತಪಸ್ಸು ಸಿದ್ಧಿಸುವ ಪುಣ್ಯ ಮುಹೂರ್ತವನ್ನು ನೆನೆಯುತ್ತಾ ಅನುಭವಮಂಟಪದತ್ತಲೇ ನೋಡುತ್ತಾ ನಿಂತಿದ್ದಳು.

ಅಷ್ಟರಲ್ಲಿ ಬೊಮ್ಮಣ್ಣ ಸಂಭ್ರಮದಿಂದ ಓಡಿಬರುತ್ತಾ :

``ದಯಮಾಡಿಸಬೇಕು, ತಾಯಿ.... ಪ್ರಭುದೇವರು ಕರೆದುತರುವಂತೆ ಹೇಳಿದ್ದಾರೆ. ಅಣ್ಣನವರೂ ಶರಣೆಯರೂ ತಮ್ಮ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ.

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಮಹಾದೇವಿಯ ಮನಸ್ಸಿನಲ್ಲಿ ಮಿಂಚಿನ ಬೆಳಕು ಸಂಚರಿಸಿದಂತಾಯಿತು. ಹೃದಯ ಉಕ್ಕೇರಿತು. ಆ ಮಹಾಶಕ್ತಿಗಳ ಎದುರಿನಲ್ಲಿ ತಾನು ಹೋಗಿ ಅವರೊಡನೆ ನುಡಿಯುವುದು ಹೇಗೆಂಬ ಅಳುಕೂ ಬಾರದಿರಲಿಲ್ಲ. ಈ ಎಲ್ಲ ಭಾವನೆಗಳೂ ಮನದಲ್ಲಿ ಮಥಿಸುತ್ತಿದ್ದಂತೆಯೇ ಮಹಾದೇವಿ ಅನುಭವಮಂಟಪದ ಬಾಗಿಲಲ್ಲಿ ನಿಂತಿದ್ದಳು.

ಕಿನ್ನರಿ ಬೊಮ್ಮಣ್ಣ ಅವಳನ್ನು ಅನುಭವಮಂಟಪದ ಒಳಗೆ ಕರೆದುತಂದುಬಿಟ್ಟು ತಾನು ಪಕ್ಕಕ್ಕೆ ಸರಿದು ಶರಣರ ಗುಂಪನ್ನು ಸೇರಿದ. ಮಹಾದೇವಿ ಒಳಗೆ ಪ್ರವೇಶಿಸಿ ನಾಲ್ಕು ಹೆಜ್ಜೆ ನಡೆದಳು. ಎತ್ತರವಾದ ಪೀಠದ ಮೇಲೆ ಕುಳಿತಿರುವ ತೇಜಸ್ವಿಯಾದ ಮೂರ್ತಿಯೇ ಮೊಟ್ಟಮೊದಲು ಆಕೆಯ ಕಣ್ಣಿಗೆ ಗೋಚರಿಸಿತು.

ಪ್ರಭುದೇವನ ಆ ದಿವ್ಯಮಂಗಳ ವಿಗ್ರಹವನ್ನು ಕಂಡು ಮುಂದುವರಿಯುತ್ತಿದ್ದಂತೆಯೇ ಶರಣರೆಲ್ಲಾ ಮೇಲೆದ್ದು ನಿಂತರು. ``ಮಹಾದೇವಿಗೆ ಶರಣಾರ್ಥಿ ಎಂಬ ಧ್ವನಿ ಅನುಭವಮಂಟಪವನ್ನು ಅನುರಣಗೊಳಿಸಿತು. ಮಹಾದೇವಿ ವಿನಯದಿಂದ ಬಾಗಿ ನೆಲ ಮುಟ್ಟಿ ಅದನ್ನು ಸ್ವೀಕರಿಸಿದಳು.

ಈ ಸಂಭ್ರಮ ಕ್ಷಣಕಾಲ ಮಾತ್ರ. ಏಕೆಂದರೆ ಅಲ್ಲಮಪ್ರಭು ಇದಾವುದನ್ನೂ ಮೆಚ್ಚದವನಂತೆ ಗಂಭೀರವಾದ ನೋಟದಿಂದ ಮಹಾದೇವಿಯನ್ನೇ ನೋಡುತ್ತಿದ್ದ. ಅನಂತರ ಶರಣರ ಗುಂಪಿನ ಮೇಲೆಲ್ಲಾ ಒಮ್ಮೆ ದೃಷ್ಟಿಯನ್ನು ಹರಿಸಿದ. ಮಂತ್ರ ಮುಗ್ಧರಾದಂತೆ ಶರಣರು ತಮ್ಮ ತಮ್ಮ ಸ್ಥಳದಲ್ಲಿ ಕುಳಿತರು.

ಪ್ರಭುವಿನ ತೀಕ್ಷ್ಣದೃಷ್ಟಿಯನ್ನು ಮಹಾದೇವಿ ಗುರುತಿಸಿದಳು. ಮಹಾವೈರಾಗ್ಯ ನಿಧಿಯಾದ ಜ್ಞಾನಯೋಗಿ ಅಲ್ಲಮಪ್ರಭು, ಸುಲಭವಾಗಿ ಯಾರನ್ನೂ ಮೆಚ್ಚುವವನಲ್ಲನೆಂಬುದನ್ನು ಕೇಳಿ ಬಲ್ಲ ಮಹಾದೇವಿ, ತಾನೀಗ ಕಠಿಣವಾದ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಗಿದೆಯೆಂಬುದನ್ನು ಊಹಿಸಿದಳು.

ಸುತ್ತಲೂ ನೋಡಿದಳು. ಶರಣರೆಲ್ಲಾ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಒಮ್ಮೆ ಪ್ರಭುವಿನತ್ತ, ಒಮ್ಮೆ ತನ್ನತ್ತ ನೋಡುತ್ತಿದ್ದರು. ಪ್ರಭುದೇವನ ಪೀಠದ ಬುಡದಲ್ಲಿ, ಬಲಭಾಗದಲ್ಲಿ ಕುಳಿತಿರುವವನೇ ಬಸವಣ್ಣನೆಂಬುದನ್ನು