ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧. ಆತಂಕ Anxiety Syndromes ಆತಂಕವು ಅತಿಯಾದಾಗ ಅಂತಕನು ಹತ್ತಿರ ಬರುತ್ತಾನೆ ಎನ್ನುವ ನಾಣ್ಣುಡಿಯಿದೆ. ಅಕ್ಷರಗಳ ಪಲ್ಲಟದಿಂದಲೇ ಒಂದರ ಮೇಲೆ ಇನ್ನೊಂದರ ಪರಿಣಾಮವನ್ನು ಲಕ್ಷಣವಾಗಿ ಸೂಚಿಸಬಹುದು. ಸುಸೂತ್ರವಾಗಿ ಯಾವ ಕೆಲಸವನ್ನಾಗಲೀ ಯೋಜಿಸಿದಂತೆ ಮಾಡಲಾಗದಿದ್ದರೆ, ಆತಂಕವುಂಟಾಗುತ್ತದೆ. ಆಗ ಮನಸ್ಸು ಎನ್ನುವುದು ಒಂದಿದೆ ಎನ್ನುವ ಅರಿವೂ ಉಂಟಾಗುತ್ತದೆ. ಯೋಚನೆಗಳು ಸುಸೂತ್ರವಾಗಿ ರೂಪುಗೊಂಡು, ಎಣಿಸಿದಂತೆಯೇ ಕೆಲಸವು ಆಗುವಾಗ, ಮನಸ್ಸು ಇದೆ ಎಂಬ ಅರಿವೇ ಬರುವುದಿಲ್ಲ. ಹಸಿವಾದಾಗಲೇ ಹೊಟ್ಟೆ ಎಂದೊಂದು ಅಂಗವಿದೆ ಎನ್ನುವುದು ನಮ್ಮ ಗಮನಕ್ಕೆ ಎದ್ದು ಬರುತ್ತದೆ. ಹಾಗೆಯೇ ಮನಸ್ಸು ಕೂಡ. ಬಯಸಿದಂತೆ ಬಾಳಲು ಸಾಧ್ಯವೇ ? ಯೋಚಿಸಿದಂತೆ ನಡೆಯಲು ಪರಿಸರವೂ ತೊಡಕಿಕೊಳ್ಳದೇ ಇರಬೇಕು. ಪರಿಸರದ ಮೇಲೆ ನಮ್ಮ ಪೂರ್ಣ ಹತೋಟಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಆತಂಕವು ಸರ್ವವ್ಯಾಪಿಯಾಗಿದೆ. ಆದರೆ ಮನಸ್ಸಿನಲ್ಲಿ ಆತಂಕವು ಕಂಡುಬರುವಂತೆ ಪ್ರಕೃತಿಯು ಏಕೆ ವ್ಯವಸ್ಥೆಯನ್ನು ಮಾಡಿತು? ಇದರಿಂದ ಮನಸ್ಸಿಗೆ ಯಾವುದಾದರೂ ಲಾಭವಾಗುತ್ತದೆಯೇ ? ಅನುಕೂಲವೇನಾದರೂ ಉಂಟೆ ? ವಿಚಾರ ಮಾಡೋಣ. 'ಒಂಭತ್ತು ಗಂಟೆಗೆ ಸರಿಯಾಗಿ ತಟ್ಟೆ ಹಾಕಿ ಊಟವನ್ನು ಬಡಿಸ್ತೀನಿ. ಅಲ್ಲಿನ ತನಕ ಅಡಿಗೆಯ ಮನೆಯ ಬಾಗಿಲ ಹತ್ತಿರ ಸುಳಿಯಬೇಡಿ, ಅಂದ್ರೆ ಐದೈದು ನಿಮಿಷಗಳಿಗೂ ಅಡಿಗೆ ಮನೆಯ ಬಾಗಿಲಲ್ಲಿ ಇಣುಕಿ, ಆಯ್ತನೆ ಅಡಿಗೆ? ಎಂದು ಕೇಳ್ತಾ ಇದ್ದರೆ, ಮನಸ್ಸಿಗೆ ಚಿಟ್ಟು ಹಿಡಿದು ಹೋಗುತ್ತೆ. ಆಗ ಮಾಡಿದ ಅಡಿಗೆಯು ಕೆಟ್ಟಹೋಗುತ್ತೆ' ಎಂದು ಅವಸರ ಸ್ವಭಾವದ ಗಂಡನನ್ನು ಹೆಂಡತಿಯು ಹತೋಟಿಯಲ್ಲಿ ಹೋಗುವುದು, ಎಲ್ಲರ ಅನುಭವಕ್ಕೂ ಬಂದ ಸರ್ವೆ ಸಾಮಾನ್ಯ ವಿಷಯ. ತಲೆಗೆ ಚಿಟ್ಟು ಹಿಡಿಯಿತು ಎಂದರೆ ಆತಂಕವಾಯಿತು ಎಂದು.