ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪರಿಚ್ಛೇದ

ಎರಡನೆಯ ಪರಿಚ್ಛೇದ.


ಎರಡು ಮೂರು ವರ್ಷಗಳು ಕಳೆದುಹೋದುವು. ಕಾರ್ಯರೂಪವಾದ ಹೆಜ್ಜೆಪಾಡನ್ನು ಪ್ರತಿಯೊಬ್ಬ ಮನುಷ್ಯನ ಜೀವನದ ಮಾರ್ಗದಲ್ಲಿಯೂ ಗುರುತುಮಾಡಿ, ಆ ಎರಡು ಮೂರು ವರ್ಷದ ಕಾಲವು ಅತೀತದ ರಾಜ್ಯದಲ್ಲಿ ಅಂತರ್ಧಾನವಾಗಿ ಹೋಯಿತು.

ಸೊಗಸಾಗಿ ಅಲಂಕರಿಸಲ್ಪಟ್ಟಿದ್ದ ಕೊಠಡಿಯಲ್ಲಿ ವಿಧವಿಧವಾದ ದೀಪಗಳು ಉರಿಯುತ್ತ ಬೆಳಕಾಗಿದೆ. ಶೋಭನೆಯು ಕಲ್ಲಿನ ಮೇಜಿನ ಬಳಿ ಇದ್ದ ಒಂದು ಸೋಫಾದಮೇಲೆ ಕುಳಿತುಕೊಂಡು ಜಪಾನ ದೇಶದ ಪಾನದಾನದಿಂದ ಚಿಗರು ವೀಳ್ಯದೆಲೆಯನ್ನು ತೆಗೆದು ಗಂಡನಿಗೋಸ್ಕರ ಮಡಿ ಸಿಡುತ್ತಾಳೆ. ಪಾರ್ಶ್ವದಲ್ಲಿ ಮತ್ತೊಂದು ಸೋಫಾದಮೇಲೆ ರಮೇಶನು ಅರ್ಧ ಶಾಯಿತನಾಗಿ ಒರಗಿಕೊಂಡು ಸಂಸ್ಕೃತದ ರತ್ನಾವಳಿ ನಾಟಕವನ್ನು ಓದುತ್ತ ಹೆಂಡತಿಗೆ ಅದರ ಅರ್ಥವನ್ನು ಹೇಳುತ್ತಾನೆ. ರಮೇಶನು ವಿಲಾಯತಿಯಿಂದ ಹಿಂದಿರಿಗಿ ಬಂದವನಾದರೂ ಸಂಸ್ಕೃತಾಭ್ಯಾಸವನ್ನು ಬಿಟ್ಟಿರಲಿಲ್ಲ. ಶೋಭನೆಯು ವೀಳ್ಯವನ್ನು ಸಿದ್ದಪಡಿಸಿದುದಾಯಿತು. ಕೈಯನ್ನು ತೊಳೆದುಕೊಂಡು ಗಲ್ಲದ ಮೇಲೆ ಕೈಯಿಟ್ಟುಕೊಂಡು ಗಂಡನನ್ನು ನೋಡುತ್ತ ರತ್ನಾವಳಿಯನ್ನು ಕೇಳತೊಡಗಿದಳು. ಓದುತ್ತಿದ್ದ ಹಾಗೆ ರಮೇಶನು, “ಶೋಭನೆ! ಈ ದಿನ ಮಾಲತಿಯು ಎಲ್ಲಿ? ರತ್ನಾವಳಿಯನ್ನು ಕೇಳುವುದಕ್ಕೆ ಬರಲಿಲ್ಲ'ವೆಂದು ಹೇಳಿದನು.

ಶೋಭನೆಯು ಮೆಲ್ಲ ಮೆಲ್ಲನೆ ಬಿಸುಸುಯ್ದ ಮೃದುಸ್ವರದಿಂದ, 'ನಾನವಳನ್ನು ಕರೆತಂದು ಬಿಡಲೆ?” ಎಂದಳು,

ರಮೇಶ-ಬೇಡ,ಅವಳು ಎಲ್ಲಿಯೋ ಹೂವೆತ್ತುತ್ತಿರಬೇಕು, ಇಲ್ಲವಾದರೆ, ಹಕ್ಕಿಗೆ ಮಾತನ್ನು ಕಲಿಸುತ್ತಿರಬೇಕು, ಅಥವಾ ನದಿಯಲ್ಲಿ ದುಂಡುದುಂಡು ಕಲ್ಲುಗಳನ್ನು ಆರಿಸುತ್ತಿರಬೇಕು-ನೀನವಳನ್ನು ಎಲ್ಲೆಂದು ಹುಡುಕುಬಲ್ಲೆ? ತಾನಾಗಿಯೇ ಬರುವಳು.

ಯುವಕನು ಪುನಃ ಓದತೊಡಗಿದನು :―