ಇಂದು ಎನಗೆ ಗೋವಿಂದ

ವಿಕಿಸೋರ್ಸ್ದಿಂದ
ಇಂದು ಎನಗೆ ಗೋವಿಂದ
by ಶ್ರೀ ರಾಘವೇಂದ್ರ ಸ್ವಾಮಿಗಳು

ಇಂದು ಎನಗೆ (ಶ್ರೀ)ಗೋವಿಂದ ನಿನ್ನ ಪಾದಾರವಿಂದವ ತೋರೋ ಮುಕುಂದನೆ |
ಸುಂದರ ವದನನೇ ನಂದಗೋಪನ ಕಂದ ಇಂದಿರ ರಮಣ || ಪ ||

ನೊಂದೆನಯ್ಯ ನಾ ಭವಬಂಧನದೊಳು ಸಿಲುಕಿ |
ಮುಂದೆ ದಾರಿ ಕಾಣದೇ ಕುಂದಿದೆ ಜಗದೊಳು |
ಕಂದನಂತೆಂದೆನ್ನ ಕುಂದುಗಳೆಣಿಸದೆ |
ತಂದೆ ಕಾಯೋಕೃಷ್ಣ ಕಂದರ್ಪ ಜನಕನೇ || ೧ ||

ಮೂಢತನದೀ ಬಲುಹೇಡಿಜೀವನನಾಗಿ |
ದೃಢಭಕ್ತಿಯನ್ನು ಮಾಡಲಿಲ್ಲವೊ ಹರಿಯೇ |
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೇ |
ಗಾಡಿಕಾರ ಕೃಷ್ಣ ಬೇಡಿಕೊಂಬೆ(ಡೆ)ನೊ ನಿನ್ನ || ೨ ||

ಧಾರುಣಿಯೊಳು ಬಹುಭಾರ ಜೀವನನಾಗಿ |
ದಾರಿತಪ್ಪಿ ನಡದೆ ಸೇರಿದೇ ಕುಜನರ |
ಆರು ಕಾಯುವರಿಲ್ಲ ಸೇರಿದೇ ನಿನಗಯ್ಯ |
ಧೀರ ವೇಣುಗೋಪಾಲ ಪಾರುಗಾಣಿಸೊ ಹರಿಯೇ || ೩ ||

ಇಂದು ಎನಗೆ (ಶ್ರೀ)ಗೋವಿಂದ ನಿನ್ನ ಪಾದಾರವಿಂದವ ತೋರೋ ಮುಕುಂದನೆ |
ಸುಂದರ ವದನನೇ ನಂದಗೋಪನ ಕಂದ ಇಂದಿರ ರಮಣ ||

ಆಲಾಪನ[ಸಂಪಾದಿಸಿ]

ವರ್ಗ[ಸಂಪಾದಿಸಿ]