ಉದ್ಯೋಗಪರ್ವ: ೦೩- ಮೂರನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಉದ್ಯೋಗಪರ್ವ: ೦೩- ಮೂರನೆಯ ಸಂಧಿ[ಸಂಪಾದಿಸಿ]

ವಿದುರನಿಂದ ಧೃತರಾಷ್ಟ್ರನಿಗೆನೀತಿಬೋಧೆ[ಸಂಪಾದಿಸಿ]

ಸೂಚನೆ:ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯ ನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ||

ಬಂದನಾ ಧೃತರಾಷ್ಟ್ರರಾಯನ
ಮಂದಿರಕೆ ಕಂಡನು ಮಹೀಶನ
ನೊಂದೆರೆಡು ಮಾತಿನಲಿ ಸೂಚಿಸಿ ಮನೆಗೆ ಮರಳಿದನು
ಅಂದಿನಿರುಳೊಳು ನಿದ್ರೆಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ || ೧ ||

ನಾಳೆ ಸಭೆಯಲಿ ಬಂದು ಸಂಜಯ
ಹೇಳುವನು ಸುದ್ದಿಯನು ಸಂಧಿಯೊ
ಕಾಳಗವೊ ಮುಂದರಿಯಬಾರದು ದುಗುಡ ವಾಯ್ತೆನಗೆ
ಹೇಳು ನಿರುತವನಿಂದಿನಿರುಳೊಳು
ಬೀಳುಕೊಂಡುದು ನಿದ್ರೆಯೆನೆ ಭೂ
ಪಾಲಕನ ಸಂತೈಸಿ ಬಳಿಕಿಂತೆಂದನಾ ವಿದುರ || ೨ ||

ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಲವಂಗೆ ಕಾಮದ
ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ
ಕಳವಿನೊಳು ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ || ೩ ||

ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದಿಸದಿರೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ || ೪ ||

ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನ ಮುಖ ನಾಲ್ಕು
ತನ್ನ ನೆನಹೆಂತಂತೆ ಕಾರ್ಯವು
ಚಿನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ || ೫ ||

ಒಂದು ವರ್ಣವನರುಹಿದವ ಗುರು
ವೊಂದಪಾಯದೊಳುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮ ಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲಯೋನಿಯೊಳರಸ ಕೇಳೆಂದ || ೬ ||

ತನ್ನ ಕಾರಿಯ ಕಾರಣವನುಳಿ
ದನ್ನಿಗರ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ || ೭ ||

ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿಭಾರಕರ
ಭಾವಿಸಲು ಸರ್ವಜ್ಞ ಸರ್ವ ಗು
ಣಾವಲಂಬನನೊಬ್ಬ ನರ್ಜುನ
ದೇವ ಸಾಲದೆ ನಾಡ ನಾಯ್ಗಳಲೇನು ಫಲವೆಂದ ||8||

ದೀಪ ದೀಪವ ತೊಳಲಿ ಕರ್ಮಕ
ಳಾಪದಲಿ ಕುದಿ ಕುದಿದು ನಾನಾ
ರೂಪಿನಿಂದಾರ್ಜಿಸಿದ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ -- || ೯ ||

ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಲ್ಲದೆ ವಿಷದ ಫಣಿಯಂತೆ
ಕಾಪಥವ ನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ || ೧೦ ||

ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವೊಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ || ೧೧||

ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವೊಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ , ೧೧

ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರೆ ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜ ಬೇಕೆಂದ || ೧೨ ||

ಉರಗನವುಡಿದೊಡದರ ವದನದೊ
ಳಿರದೆ ಮೇಣಾ ದಷ್ಟದೇಹದೊ
ಳಿರದೆ ರುಧಿರವು ಹರೆವವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರೆವುದರಸಂಗಲಸಿದಾ ಪ್ರಜೆ
ಗಿರದುಭಯ ಹಿಂಗುವುದನರಿ ಭೂಪಾಲ ಕೇಳೆಂದ || ೧೩ ||

ಹರಿವ ನದಿ ತನ್ನಿಚ್ಛೆಯೊಳು ದಡ
ವೆರಡ ಕಿಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದೊಡುಭಯ ವಂಶವನು
ನೆರಪುವರು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದೊಳು ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ || ೧೪ ||

ಧರೆಯೊಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರ್ಯೋಧನನು ದಶ
ಶಿರನು ಗೋಗ್ರಹಣದೊಳು ವನಭಂಗದೊಳು ಮುಂಕೊಂಡು
ಅರಿಭಟರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಹೇಳೆಂದನಾ ವಿದುರ || ೧೫ ||

ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದೊಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿ ನೃಪಾಲಕರ
ಧರೆಸಹಿತ ತತ್ಸಕಲಬಲಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ || ೧೬ ||

ಏಸುಧರ್ಮದಲಾರ್ಜಿಸಿದ ಧನ
ವೈಸು ಸಿರಿವರ್ಧಿಸುವುದದರಿಂ
ದೇಶ ಮಂಗಳ ಪುತ್ರಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮದ ಹಿಡಿಯಧರ್ಮವ ಬಿಟ್ಟು ಕಳೆಯೆಂದ || ೧೭ ||

ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಯದು
ಅರಸಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ವಿಪ್ರವೈರಿಗೆ
ನಿರುತ ಬದ್ಧದ್ವೇಷ ಲೇಸಲ್ಲೆಂದನಾ ವಿದುರ || ೧೮ ||

ಧರೆಯೊಳಗೆ ರವಿ ಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು ಕಣಾ ಸಂನ್ಯಾಸಿಯಾಗಿಯೆ ಯೋಗ ಮಾರ್ಗದಲಿ
ಹರಣವನು ಬಿಟ್ಟವರು ಘನಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ || ೧೯ |\

ಮಾತೃ ಪಿತೃಗಳು ಶತ್ರು ಭಾವವ
ನಾತು ನಿಜ ಸಂತಾನದಲಿ ಸಂ
ಪ್ರೀತಿಯನು ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ || ೨೦ ||

ಸುರರ ಮೇಳದಲಾಡುವವರಿ
ಬ್ಬರೆ ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸೆಂದನಾ ವಿದುರ|| ೨೧||

ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರ ಸಿದ್ಧವಲೆ
ಅರಸು ಕುಲದೊಳು ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯೊ
ಳುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ || ೨೨ ||

ನರಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀ ಎರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳೆಂದ || ೨೩ ||


ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಳು ತಜ್ಜನಪದದ ಧನವ
ಕುಂದಿಸದೆ ನೃಪಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ || ೨೪ ||

ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಖರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಡುವರಲ್ಲದೆ
ಸೀಮೆವಿಡಿದಿಹುದಾಗದೆಂಬುದ
ನಾ ಮಧಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ || ೨೫ ||

ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡುಜಾರುವ ಗಾವಿಲರ ಕೊಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ || ೨೬ ||

ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ || ೨೭ ||

ಬೆಳಸು ಘನ ತೃಣವಧಿಕ ಜಲನಿ
ರ್ಮಳವೆನಿಪ ಕಾಲದಲಿ ಪರಮಂ
ಡಳಕೆ ನಡೆವುದು ದುಷ್ಟಘಾತ ವಿಹೀನನೆಂದೆನಿಸಿ
ಬಲುಹಹುದು ನಿಜ ಬಲಕೆ ಬರವಾ
ನೆಲನ ಮುಟ್ಟಲು ವೈರಿ ಸೇನಾ
ವಳಿಗೆ ಹೀನತೆಯಾಗುವುದು ಧೃತರಾಷ್ಟ್ರ ಕೇಳೆಂದ || ೨೮ ||

ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ || ೨೯ ||

ಎಲ್ಲಿಹುದು ಋಣ ಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ (|| ೩೦ ||

ರಕ್ಷಿಸಿದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದೊಳು
ಲಕ್ಷಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮರಕ್ಷೆಯ
ಲಕ್ಷಿಸುವುದನುನಯವಲೈ ಧೃತರಾಷ್ಟ್ರ ಕೇಳೆಂದ || ೩೧ ||

ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ || ೩೨ ||

ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ || ೩೩ ||

ಹಿರಿದು ಮನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮ ದರ್ಮವನಾವ ಬಯಸುವನವನ ಭವನದಲಿ
ನಿರುತ ವೃದ್ಧ ಜ್ಞಾನಿ ವಂಶೋ
ತ್ತರ ದರಿದ್ರ ಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ || ೩೪ ||

ರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ || ೩೫ ||

ಆವುದೀ ಲೋಕಕ್ಕೆ ಹಿತವದ
ನೋವಿ ನಡೆಸುವ ಜನಕೆ ನಿಂದೆಯ
ದಾವುದದನಾಚರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣಿಪ ತತ್ತ್ವವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ || ೩೬ ||

=೩೭-೪೦[ಸಂಪಾದಿಸಿ]

ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನವು ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಯತಿಗಳನು ಪೂಜಿಸಿ
ವಿತತ ಧರ್ಮದ ಕೀರ್ತಿಯನು ಪಡೆದವನೆ ಸುತನೆಂದ || ೩೭ ||

ವರುಷವೈದರೊಳರಸೆನಿಸಿ ದಶ
ವರುಷ ದಾಸ್ತ್ವದೊಳು ಭಾವಿಸಿ
ಬರಲು ಹರಿನಾರನೆಯ ವರುಷವು ಮಿತ್ರನೆಂದೆನಿಸಿ
ಪರಿವಿಡಿಯೊಳಾರೈದು ಮದಮ
ತ್ಸರವ ಕಿಡಿಸದೆ ನೆರೆದ ಮಕ್ಕಳ
ನರಮೃಗಗಳನು ಮಾಡಿದೈ ಧೃತರಾಷ್ಟ್ರ ಕೇಳೆಂದ || ೩೮ ||

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ || ೩೯ ||

ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ || ೪೦ ||

ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತಹಂಕರಿಸಿ
ಕನಲಿ ವಿಪ್ರಸಭಾಸ್ಥಳದೊಳೊ
ಬ್ಬನ ವಿಭಾಡಿಸಿ ನುಡಿಯೆ ನರಕದಿ
ಮುಣುಗಿದಲ್ಲದೆ ಬೇರೆಗತಿಯಿಲ್ಲೆಂದನಾ ವಿದುರ || ೪೧ ||

ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರಿಯನನನುವರ
ದೊಳಗೆ ತಲೆಗಾಯ್ದವನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನ ನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ರಿಳಿವರೈ ಕುಲಕೋಟಿ ಸಹಿತ ಮಹಾಂಧ ನರಕದೊಳು || ೪೨ ||

ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬುವನು
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ||೪೩ ||

ಹರುಷದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನ ವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು || ೪೪ ||

ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತನನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳ್ವಂದಿಸುವರೈ ತ್ರೈಮೂರುತಿಗಳೆಂದ || ೪೫||

ಬಿಸುಟು ಕಳೆವುದು ನೀತಿಶಾಸ್ತ್ರವ
ನುಸಿರದಾಚಾರಿಯನ ವೇದ
ಪ್ರಸರವಿಲ್ಲದ ಋತ್ವಿಜನ ರಕ್ಷಿಸದ ಭೂಭುಜನ
ಒಸಯದಬಲೆಯನೂರೊಳಾಡುವ
ಪಶುವಕಾವನನಡವಿಗುರಿಯಹ
ನುಸಿಯ ನಾಪಿತನಿಂತರುವರನು ರಾಯ ಕೇಳೆಂದ || ೪೬ ||

ವ್ಯಸನವೇಳರ ಕಾಲುಕಣ್ಣೀಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುವಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯ ನೀಕ್ಷಿಸದೆ ತಾ
ಮಸದೊಳಿರುತಿಹುದುಚಿತವೇ ಹೇಳೆಂದನಾ ವಿದುರ || ೪೭ ||

ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತಥ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳೆಂದ || ೪೮ ||

ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗೆಯ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ || ೪೯ ||

ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ದಾನವಿಲ್ಲದ ಸುದತಿ ಸೂರಿಗಳಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ || ೫೦ ||

ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ || ೫೧ ||

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವ[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ