ಕನ್ನಡಿಗರ ಕರ್ಮ ಕಥೆ/ಆಶಾಭಂಗ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೨೪೭-೨೫೫

೨೭ನೆಯ ಪ್ರಕರಣ

ಆಶಾಭಂಗ

ಲೈಲಿಯು ಬಂದಾಗ ರಾಮರಾಜನು ಒಬ್ಬನೇ ಕುಳಿತಿದ್ದನು ಲೈಲಿಯು ಬಂದಕೂಡಲೆ ರಾಮರಾಜನು ತನ್ನ ಸೇವಕರಿಗೆ ಹೊರಗೆ ತೋಟದಲ್ಲಿ ಹೋಗಿರೆಂದು ಹೇಳಿ, ಲೈಲಿಯನ್ನು ಕುರಿತು-ಮಾರ್ಜಿನೆ, ಮಾರ್ಜಿನೆ ಹೇಳು ನನಗೆ ಎಲ್ಲ ನಿಜವಾದ ವೃತ್ತಾಂತವನ್ನು ಹೇಳು. ನಿನ್ನ ಗುರುತನ್ನು ನಾನು ಎಷ್ಟೋ ದಿನಗಳ ಹಿಂದೆ ಹಿಡಿದಿರುವೆನು, ಇನ್ನು ಮುಚ್ಚಿಕೊಳ್ಳುವದರಲ್ಲೇನೂ ಅರ್ಥವಿಲ್ಲ. ನೀವು ಇಲ್ಲಿಂದ ಹೋದಬಳಿಕ ಏನಾಯಿತೆಂಬದನ್ನೆಲ್ಲ ನನ್ನ ಮುಂದೆ ಹೇಳು, ಇಂದು ಆಕೆಯ ಮುಖದಿಂದಲೇ ಎಲ್ಲಾ ವೃತ್ತಾಂತವನ್ನು ಕೇಳಬೇಕೆಂದು ನಾನು ಬಹಳವಾಗಿ ಅಪೇಕ್ಷಿಸಿದ್ದೆನು; ಆದರೆ ಆಕೆಯು ಹಾಗೆ ಹೇಳಲಿಚ್ಚಿಸುವದಿಲ್ಲ; ಸದ್ಯಕ್ಕೆ ಆಕೆಯನ್ನು ನಾನು ಬಲಾತ್ಕರಿಸುವದಿಲ್ಲ. ನೀನಂತು ಎಲ್ಲ ವೃತ್ತಾಂತವನ್ನು ಹೇಳಲೇಬೇಕು. ಹೇಳು ಸ್ವಲ್ಪವಾದರೂ ಮುಚ್ಚಬೇಡ. ನೀವು ಇಲ್ಲಿಂದ ಹೋದಬಳಿಕ ಎಲ್ಲಿಗೆ ಹೋದಿರಿ ? ಮುಂದೆ ಏನೇನಾಯಿತು ? ನಾನು ನಿಮ್ಮನ್ನು ಇಲ್ಲಿ ಎಷ್ಟು ಹುಡುಕಿಸಿದೆನು. ನೀವು ಸಿಕ್ಕಿದ್ದರೆ, ನಿಮ್ಮ ಬೆನ್ನ ಹಿಂದೆಯೇ ಬಂದು ನಿಮ್ಮನ್ನು ಕರಕೊಂಡು ಬರುತ್ತಿದ್ದೆನು; ನಿಮ್ಮನ್ನು ಅಡ್ಡ ಹಾದಿಗೆ ಹೋರಗೊಡುತ್ತಿದ್ದಿಲ್ಲ; ಆದರೆ ಏನು ಮಾಡಲಿ ? ನಿಮ್ಮ ಗೊತ್ತೇಹತ್ತಲಿಲ್ಲ; ಆದ್ದರಿಂದ ನಾನು ಹುಡುಕುತ್ತ ಸುಮ್ಮನೆ ಕುಳಿತುಕೊಳ್ಳಬೇಕಾಯಿತು, ನನಗೊಂದು ಮುಖ್ಯ ಮಾತು ಗೊತ್ತಾಗಬೇಕಾಗಿದೆ; ಅದು ನನಗೆ ಗೊತ್ತಾದಂತೆ ಆಗಿದ್ದರೂ, ನಿಮ್ಮ ಮುಖದಿಂದ ಕೇಳಿಕೊಳ್ಳಬೇಕಾಗಿರುವುದು. ನೀವು ನಿಜವಾದ ಸಂಗತಿಯನ್ನು ಹೇಳಿದರೆ, ನನಗೆ ಎಷ್ಟೊಂದು ಆನಂದವಾಗುವಹಾಗಿದೆ ಹೇಳು, ಮಾರ್ಜಿನೇ, ಸುಮ್ಮನೆ ನಿಂತುಕೊಳ್ಳಬೇಡ. ಬಾಯಿ ಬಿಚ್ಚಿ ಮಾತಾಡು ಎಂದನು. ರಾಮರಾಜನ ಮುಖದಿಂದ “ಮಾರ್ಜಿನೆ” ಎಂಬ ಶಬ್ದವು ಹೊರಬಿದ್ದದ್ದನ್ನು ಕೇಳಿ ಲೈಲಿಯು ಬೆಚ್ಚಿಬಿದ್ದಳು. ಆಕೆಗೆ ಏನೂ ತೋಚದ್ದರಿಂದ, ರಾಮರಾಜನ ಮೋರೆಯನ್ನು ನೋಡುತ್ತ ಸುಮ್ಮನೆ ನಿಂತುಕೊಂಡಳು. ಆಗ ರಾಮರಾಜನು ಮತ್ತೆ ಲೈಲಿಗೆ- “ಹೂ, ಮಾತಾಡು ರಣಮಸ್ತಖಾನನು ಯಾರು ? ಆತನ ವೃತ್ತಾಂತವನ್ನು ಕೇಳಿಕೊಳ್ಳಲಿಕ್ಕೆ ನಾನು ಅತ್ಯಂತ ಆತುರನಾಗಿದ್ದೇನೆ. ನಾನು ಆತನನ್ನೇ ಕೇಳಬೇಕೆಂದು ಮಾಡಿದ್ದೆನು. “ನೀನು ಎಲ್ಲಿಯವನು ? ನಿನ್ನ ತಾಯಿ-ತಂದೆಗಳು ಯಾರು ? ಅವರು ವಿಜಾಪುರದವರೋ? ಮತ್ತೆ ಎಲ್ಲಿಂದಾದರೂ ವಿಜಾಪುರಕ್ಕೆ ಬಂದವರೋ ?” ಎಂದೇ ಆತನನ್ನು ಕೇಳಿ, ಆತನಿಗೆ ತನ್ನ ಜನ್ಮ ವೃತ್ತಾಂತವು ಗೊತ್ತಿಲ್ಲದ ಪಕ್ಷದಲ್ಲಿ, ನಾನೇ ನಿಜವಾದ ಸಂಗತಿಯನ್ನು ಆತನಿಗೆ ಹೇಳಬೇಕೆಂದು ಮಾಡಿದ್ದೆನು ; ಆದರೆ ಮೊದಲು ಮೆಹೆರ್ಜಾನಳನ್ನು ಕಂಡು ಆಕೆಯಿಂದ ಯಾವತ್ತು ಸಂಗತಿ ಕೇಳಿಕೊಂಡು, ಆಕೆಯ ಮನಸ್ಸಿಗೆ ಬಂದರೆ ಅವನ ಜನ್ಮ ವೃತ್ತಾಂತವನ್ನು ಆತನ ಮುಂದೆ ಹೇಳಬೇಕು. ಇಲ್ಲದಿದ್ದರೆಬಿಡಬೇಕು ಎಂಬ ವಿಚಾರವು ಉತ್ಪನ್ನವಾದ್ದರಿಂದ ಅಷ್ಟಕ್ಕೆ ಬಿಟ್ಟೆನು. ಈಗ ಮೆಹೆರ್ಜಾನಳನ್ನು ಕೇಳುವದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಅದೇ ಉದ್ದೇಶದಿಂದಲೇ ನಿಮ್ಮನ್ನು ವಿಜಯನಗರದಿಂದ ಇಲ್ಲಿಗೆ ನಿನ್ನೆ ಕಳಿಸಿದೆನು. ನೀವು ಮೊದಲು ಇದ್ದಾಗಿನಂತೆಯೇ ಕುಂಜವನದ ಸ್ಥಿತಿಯು ಈಗ ಆಗಿದೆಯೋ ಇಲ್ಲವೋ ನೋಡಿರಿ. ಇದನ್ನು ನೋಡಿ ನಿಮಗೆ ಹಿಂದಿನದೆಲ್ಲ ನೆನಪಾಗಿ ನನಗೆ ನೀವು ಅನುಕೂಲವಾದೀತೆಂದು ತಿಳಿದು, ಈಗ ನಾಲ್ಕು ದಿವಸಗಳಲ್ಲಿ ಕುಂಜವನವನ್ನು ಬಹು ಶ್ರಮಪಟ್ಟು ವ್ಯವಸ್ಥೆಗೊಳಿಸಿದ್ದೇನೆ. ನಿಮ್ಮ ಮೇಲೆ ನನ್ನ ಪ್ರೇಮವು ಮೊದಲು ಇದ್ದಂತೆ ಈಗಲೂ ಇರುತ್ತದೆ. ನಾನು ಮಹತ್ವಾಕಾಂಕ್ಷೆಯಿಂದ ಕೃಷ್ಣದೇವರಾಯರ ಮಗಳನ್ನು ಲಗ್ನವಾದದ್ದೇನೋ ನಿಜ. ಆದರೆ ರಾಜಕನ್ನೆಯ ಮನಸ್ಸನ್ನು ಒಲಿಸಿಕೊಳ್ಳಲಿಕ್ಕೆ ನಾನು ಎಂದೂ ಯತ್ನಿಸಿರುವದಿಲ್ಲ. ನಿಜವಾದ ಪ್ರೇಮವು ಹುಟ್ಟಿದರೆ ಒಮ್ಮೆಯೇ ಹುಟ್ಟುವದು. ಹುಟ್ಟಿದ ಬಳಿಕ ಅದು ನಾಶಹೊಂದಲಾರದು. ರೂಪಾಂತರಿಸಲಾರದು. ಮಾರ್ಜಿನೇ, ಮಾರ್ಜಿನೇ, ಮೆಹೆರಜಾನಳ ಮೇಲಿದ್ದ ನನ್ನ ಪ್ರೇಮದ ಪರಿವರ್ತನಗಳು (ನಕಲುಗಳು) ಬೇಕಾದಷ್ಟು ಆಗಬಹುದು; ಆದರೆ ಮೆಹೆರಜಾನಳ ಮೇಲಿನ ನನ್ನ ನಿಜವಾದ ಪ್ರೇಮವು ಮೆಹೆರಜಾನಳಲ್ಲಿಯೇ ಉಳಿದಿರುವದು ಅದರ ಮರೆವು ನನಗೆ ಎಂದಿಗೂ ಆಗದು” ಎಂದನು.

ಈ ಮೇರೆಗೆ ನುಡಿಯುವಾಗ ರಾಮರಾಜನ ಕಣ್ಣುಗಳಲ್ಲಿ ನೀರು ಬಂದವು. ಆತನು ಏನೂ ಮಾಡಲಾರದೆ ಸುಮ್ಮನೆ ಕುಳಿತುಕೊಂಡಿದ್ದನು. ಇದನ್ನು ನೋಡಿ ಮಾರ್ಜಿನೆಯ ಮನಸ್ಸು ಕರಗಿತು. ಆಕೆಯು ರಾಮರಾಜನಿಗೆ ಎಲ್ಲ ನಿಜವಾದ ಸಂಗತಿಯನ್ನು ಹೇಳಿ, ಆತನನ್ನು ಸಮಾಧಾನಗೊಳಿಸಬೇಕೆಂದು ಮಾಡಿದಳು. ಇದನ್ನು ಆಕೆಯು ಮಾತಾಡತಕ್ಕವಳು, ಅಷ್ಟರಲ್ಲಿ ರಾಮರಾಜನು- “ಮಾರ್ಜೀನೆ. ನಿನ್ನ ಒಡೆಯಳು ಎಷ್ಟು ನಿಷ್ಠುರಳು! ಆಕೆಗೆ ನಿಜವಾದ ಪ್ರೇಮದ ಗುರುತೇ ಇದ್ದಂತೆ ತೋರುವದಿಲ್ಲ. ಒಂದು ಕಾರ್ಯದ ನಿಮಿತ್ತದಿಂದ ನಾನು ಮಾಡಿದ ಕಡ್ಡಿಯಷ್ಟು ತಪ್ಪನ್ನೇ ಗುಡ್ಡದಷ್ಟು ಮಾಡಿ ಆಕೆಯು ನಿರ್ದಯಳಾದಳು. ನನ್ನಿಂದಾದ ಉಪಕಾರವನ್ನೆಲ್ಲ ಮರೆತು, ನನಗೆ ಆಗದವಳಂತೆ ಆಕೆಯು ಒಮ್ಮೆಲೆ ಹೊರಟುಹೋಗಿಬಿಟ್ಟಳು, ಎಂದು ನುಡಿದನು. ಈ ಮಾತುಗಳು ಲೈಲಿಯ ಮನಸ್ಸನ್ನು ತಿರುಗಿಸಿದವು. ರಾಮರಾಜನು ತನ್ನ ಒಡೆಯಳಿಗೆ ನಿಷ್ಣುರಳೂ, ಪ್ರೇಮರಹಿತಳೂ, ನಿರ್ದಯಳೂ ಎಂದು ಹೆಸರಿಟ್ಟಿದ್ದು ಮಾರ್ಜಿನೆಯ ಮನಸ್ಸಿಗೆ ಸರಿಬರಲಿಲ್ಲ. ಅತ್ಯಂತ ಪ್ರೇಮಲ ಸ್ವಭಾವದ ತನ್ನ ಪ್ರಿಯ ಮೆಹೆರಜಾನಳು, ತನ್ನ ಕುಲಶೀಲಗಳನ್ನೂ, ಆಸ್ತೇಷ್ಟರನ್ನೂ ಲಕ್ಷಿಸದೆ, ಸರ್ವಸ್ವವನ್ನು ಈತನಿಗೆ ಒಪ್ಪಿಸಿ, ತನ್ನ ಕುತ್ತಿಗೆಯನ್ನು ಈತನ ಕೈಯಲ್ಲಿ ಕೊಟ್ಟಿರುವಾಗ, ಈತನೇ ನಿಷ್ಠುರತನದಿಂದ ಮೆಹೆರಜಾನಳ ಕುತ್ತಿಗೆಯನ್ನು ಕೊಯ್ದಿರಲು, ತಿರುಗಿ ಮೆಹೆರಜಾನಳನ್ನೇ ಈತನು ಹಳಿಯುತ್ತಾನಲ್ಲ, ಎಂದು ಆಕೆಯು ರಾಮರಾಜನ ಮೇಲೆ ಸಿಟ್ಟಾದಳು. ನಿಜವಾದ ವೃತ್ತಾಂತವನ್ನು ಈತನ ಮುಂದೆ ಹೇಳುವದಂತು ಇರಲಿ, ಈತನಿಗೆ ನಮ್ಮ ಗುರುತು ಕೂಡ ಹತ್ತಗೊಡಬಾರದೆಂದು ತಿಳಿದು, ಆಕೆಯು ಸುಮ್ಮನೆ ನಿಂತು ಕೊಂಡು ಬಿಟ್ಟಳು. ತಾನು ಇಷ್ಟು ದೈನ್ಯದಿಂದ ಹೇಳಿಕೊಂಡರೂ, ಕಣ್ಣೀರು ಹಾಕಿದರೂ ಮಾರ್ಜಿನೆಗೆ ದಯ ಹುಟ್ಟಲಿಲ್ಲೆಂದು ತಿಳಿದು, ರಾಮರಾಜನು ಸ್ವಲ್ಪ ತ್ರಾಸಗೊಂಡು ಮಾರ್ಜಿನೆಗೆ - ಯಾಕೆ ? ಸುಮ್ಮನೆ ನಿಂತೆ ? ಮಾತಾಡುವದಿಲ್ಲವೇನು? ನಾನೇನು ಕಲ್ಲಿನಮುಂದೆ ಮಾತಾಡುತ್ತಿರುವೆನೋ ? ಮಾತಾಡು, ಹೇಳು, ನಾನು ಕೇಳಿದ್ದನ್ನೆಲ್ಲ ಹೇಳು, ಎಂದು ಕೇಳಿದನು. ಅದಕ್ಕೆ ಮಾರ್ಜಿನೆಯು ತಟ್ಟನೆ ರಾಮರಾಜನನ್ನು ಕುರಿತು

ಮಾರ್ಜಿನೆ-ಏನು ಹೇಳಲಿ ? ನೀವು ಏನು ಕೇಳುತ್ತೀರೆಂಬದೇ ನನಗೆ ತಿಳಿಯಲೊಲ್ಲದು, ಅಂದಬಳಿಕ ಅದರ ಉತ್ತರವನ್ನು ನಾನು ಹ್ಯಾಗೆ ಕೊಡಬೇಕು?

ರಾಮರಾಜ- ನಿನಗೆ ತಿಳಿಯಲೊಲ್ಲದೊ ? ನಾನು ಏನು ಕೇಳುತ್ತೇನೆಂಬುದು ನಿನಗೆ ತಿಳಿಯಿಲ್ಲದೆ ಮಾರ್ಜಿನೆ, ನನಗೆ ಉಳಿದದ್ದನ್ನೇನೂ ಹೇಳಬೇಡ, ಒಂದೇಮಾತು ಹೇಳು. ಈ ರಣಮಸ್ತಖಾನನು ಅವನೇ ಏನು ? ನೀವು ಇಲ್ಲಿಂದ ಹೋದಬಳಿಕ ಈತನು ಎಷ್ಟು ದಿನಗಳ ಮೇಲೆ, ಎಲ್ಲಿ ಹುಟ್ಟಿದನು ? ಎಂದು ನುಡಿಯುತ್ತಿರಲು, ಮಾರ್ಜಿನೆಯು ನಡುವೇ ಬಾಯಿ ಹಾಕಿ ಮಾರ್ಜೀನೆ-ಸುಮ್ಮನೆ ಯಾಕೆ ನನ್ನನ್ನು ಕೇಳುತ್ತೀರಿ ? ನನಗೆ ಏನೂ ಗೊತ್ತಿಲ್ಲ; ಮತ್ತು ನೀವು ಏನು ಕೇಳುತ್ತೀರೆಂಬದೂ ನನಗೆ ತಿಳಿಯಲೊಲ್ಲದು.

ರಾಮರಾಜ-ಹೀಗೆ ಹೇಳುವದಕ್ಕಿಂತ “ನಾನೂ ಏನೂ ಹೇಳುವದಿಲ್ಲವೆಂದು" ಸ್ಪಷ್ಟ ಹೇಳಬಾರದೆ ?

ಮಾರ್ಜೀನೆ-ನನಗೆ ಏನೂ ಗೊತ್ತಿಲ್ಲದ ಬಳಿಕ ನಾನು ಹೇಳಲಾದರೂ ಏನು ? ನಾವು ನಿಮಗೆ ಯಾರ ಹಾಗೆ ಕಾಣುತ್ತೇವೆ ? ನಮ್ಮನ್ನು ನೀವು ಯಾರೆಂದು ತಿಳಿದಿರುತ್ತೀರಿ ? ನಮ್ಮ ಮಾಸಾಹೇಬರನ್ನು ನೀವು ಯಾರೆಂದು ಭಾವಿಸಿರುತ್ತೀರಿ ? ನಮ್ಮ ಮಾಸಾಹೇಬರು ಒಬ್ಬ ಬಡ ವಿಧವೆಯು, ಪತಿಯು ಮರಣ ಹೊಂದಿದ ಬಳಿಕ, ಪಾಪ ! ಅಲ್ಲಾನ ಧ್ಯಾನ ಮಾಡುತ್ತ ಅವರು ಕಾಲಹರಣ ಮಾಡುತ್ತಿರುವರು. ಉತ್ತರ ಹಿಂದುಸ್ತಾನದ ಕಡೆಗಿದ್ದವರು, ಈಗ ದಕ್ಷಿಣ ಹಿಂದುಸ್ತಾನದ ಕಡೆಗೆ ಬಂದಿರುತ್ತಾರೆ. ಅವರು ತಮ್ಮ ಮಗನ ಮೂರ್ಖತನದಿಂದ ಹೀಗೆ ಸಂಕಟಕ್ಕೆ ಗುರಿಯಾಗಿರುತ್ತಾರೆ.

ಇದನ್ನು ಕೇಳಿ ರಾಮರಾಜನಿಗೆ ಏನೂ ತೋಚದಾಯಿತು. ಆತನು ಲೈಲಿಗೆ ನೀನು ನನಗೆ ನಮ್ಮ ಮೆಹೆರಜಾನಳ ಭೆಟ್ಟಿಯನ್ನು ಮಾಡಿಸಿಬಿಡು. ನಾನು ಆಕೆಯನ್ನೇ ಕೇಳುವೆನು, ಎಂದು ಹೇಳಿದನು. ಇದನ್ನು ಕೇಳಿ ಮಾರ್ಜೀನೆಯು ಏನೂ ತೋಚದೆ ಸುಮ್ಮನೆ ನಿಂತುಕೊಂಡಳು. ಆಮೇಲೆ ಆಕೆಯು ರಾಮರಾಜನಿಗೆ ನಿಮ್ಮ ಮೆಹೆರಜಾನಳು ! ನಿಮ್ಮ ಮೆಹೆರಜಾನ ಯಾರೆಂಬುದೇ ನನಗೆ ಗೊತ್ತಾಗಲೊಲ್ಲದು; ಅಂದಬಳಿಕ ನಾನು ಆಕೆಯ ಬಳಿಗೆ ನಿಮ್ಮನ್ನು ಹ್ಯಾಗೆ ಕರಕೊಂಡು ಹೋಗಲಿ ? ಅನ್ನಲು, ರಾಮರಾಜನು ಈಕೆಯು ಒಳ್ಳೆಯ ಮಾತಿನಿಂದ ಹಾದಿಗೆ ಬರುವಹಾಗೆ ಕಾಣುವದಿಲ್ಲ, ಸ್ವಲ್ಪ ಗುಡುಗು ಹಾಕಿ ನೋಡೋಣವೆಂದು

ರಾಮರಾಜ-ನೀನು ಯಾರ ಸಂಗಡ ಈ ಹುಡಗಾಟಿಕೆಯನ್ನು ಮಾಡುತ್ತೀಯೆಂಬುದು ನಿನಗೆ ಗೊತ್ತಿರುವದಷ್ಟೆ ?

ಲೈಲಿ-ಇಲ್ಲ, ನನಗೆ ಯಾವದೂ ಗೊತ್ತಿಲ್ಲ. ನೀವು ಯಾರೆಂಬದನ್ನು ನಾನರಿಯೆ.

ರಾಮರಾಜ-ನಿನ್ನ ನೂರು ವರ್ಷಗಳು ತುಂಬಿದವೆಂದು ತಿಳಿದುಕೋ.

ಲೈಲಿ-ನಿಜವಾಗಿಯೇ ನನ್ನ ನೂರು ವರ್ಷಗಳು ತುಂಬಿದ್ದರೆ, ಪರವರದಿಗಾರ ಖುದಾನು ನನ್ನನ್ನು ಅನುಗ್ರಹಿಸಿದನೆಂದಲೇ ನಾನು ತಿಳಿಯುವೆನು. ನನಗಂತು ನನ್ನ ಜೀವವು ಬೇಡಾಗಿರುತ್ತದೆ.

ರಾಮರಾಜ-ಇನ್ನು ಮೇಲೆ ನಾನೇ ರಣಮಸ್ತಖಾನನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳುವೆನು.

ಲೈಲಿ-ಏನೂ ಚಿಂತೆಯಿಲ್ಲ. ಅವಶ್ಯವಾಗಿ ಹೇಳಿರಿ. ಅದನ್ನು ಕೇಳಿ ಆತನಿಗೆ ಆನಂದವಾದರೆ ನೆಟ್ಟಗೇ ಆಯಿತು. ಮಾಸಾಹೇಬರಿಗೊ, ಆತನಿಗೂ ಇನ್ನು ಯಾವ ಸಂಬಂಧವೂ ಉಳಿದಿರುವದಿಲ್ಲ. ತಮ್ಮ ಮಗನು ಸ್ವಾಮಿ ದ್ರೋಹಿಯಾದದ್ದರಿಂದ, ಆತನು ತಮ್ಮ ಪಾಲಿಗೆ ಸತ್ತನೆಂದ ಮಾಸಾಹೇಬರು ತಿಳಕೊಂಡಿರುವರು.

ಮುದುಕಿಯು ಯಾವುದಕ್ಕೂ ಗುಟ್ಟುಕೊಡುವದಿಲ್ಲೆಂಬ ಮಾತು ರಾಮರಾಜನಿಗೆ ಗಟ್ಟಿಮುಟ್ಟಿ ಗೊತ್ತಾಯಿತು. ಇನ್ನು ಹೆಚ್ಚು ಅಲೆದಾಡುವದರಲ್ಲಿ ಅರ್ಥವಿಲ್ಲೆಂದು ತಿಳಿದು, ಅಲ್ಲಿಂದ ಹೊರಟುಹೋಗಬೇಕೆಂದು ಆತನು ನಿಶ್ಚಯಿಸಿದನು. ಇಷ್ಟು ಪ್ರಯತ್ನ ಮಾಡಿದರೂ ತನ್ನ ಕೋರಿಕೆಯು ಕೈಗೂಡದ್ದರಿಂದ, ಆತನಗೆ ಬಹು ವಿಷಾದವಾಯಿತು. ಆತನಿಗೆ ಆ ಸ್ಥಾನವನ್ನು ಬೇಗನೇ ಬೀಡಲಿಕ್ಕೆ ಬೇರೆ ಕಾರಣಗಳೂ ಒದಗಿದವು. ಯುದ್ಧ ಪ್ರಸಂಗವಿರಲು, ವೈರಿಗಳ ಕಡೆಯ ಸುದ್ದಿಗಳನ್ನು ತಿಳಿಕೊಂಡು ಬರುವದಕ್ಕಾಗಿ ವಿಜಯನಗರದ ಗುಪ್ತಚಾರರು ಅಲ್ಲಲ್ಲಿ ತಿರುಗುತ್ತಿದ್ದರಷ್ಟೇ. ಅವರಲ್ಲಿ ಒಬ್ಬನು ವಿಜಾಪುರದ ಕಡೆಯಿಂದ ಅವಸರದಿಂದ ಬಂದು, ರಾಮರಾಜನಿಗೆ ಬೇಗನೆ ಸುದ್ದಿಯನ್ನು ಮುಟ್ಟಿಸಬೇಕೆಂದು ವಿಜಯನಗರಕ್ಕೆ ಹೋಗಿದ್ದನು. ಆದರೆ ರಾಮರಾಜನು ಕುಂಜವನದಲ್ಲಿರುವನೆಂಬದು ಗೊತ್ತಾದ್ದರಿಂದ ಆ ಸೇವಕನು ಕುಂಜವನಕ್ಕೆ ಬಂದು, ರಾಮರಾಜನಿಗೆ ತಾನು ಬಂದಿರುವ ಸುದ್ದಿಯನ್ನು ಹೇಳಿಕಳಿಸಿದನು. ಆಗ ರಾಮರಾಜನು ಆತನನ್ನು ಕರೆಸಿಕೊಂಡು, ಹೊಸ ಸುದ್ದಿಯೇನೆಂದು ಕೇಳಲು, ಸೇವಕನು- ಮಹಾರಾಜರೇ, ಶತ್ರುಗಳು ಮೂವರಿದ್ದವರು ನಾಲ್ವರಾದರು. ಹುಸೇನಶಹನು ಉಳಿದ ಮೂರು ಬಾದಶಹರನ್ನು ಕೂಡಕೊಳ್ಳುವನೋ, ಇಲ್ಲವೋ ಎಂಬದು ಈ ವರೆಗೆ ಅನುಮಾನಪಕ್ಷವಾಗಿತ್ತು; ಆದರೆ ಆತನೂ ಈಗ ಕೂಡಿಕೊಂಡನು. ಆತನು ತನ್ನ ಸೈನ್ಯದೊಡನೆ ಹೊರಟಿರುವನು. ಇಷ್ಟು ಹೊತ್ತಿಗೆ ಆತನು ಅರ್ಧಹಾದಿಗೆ ಸಹ ಬಂದಿರಬಹುದು ಎಂದು ಹೇಳಿದನು. ಇದನ್ನು ಕೇಳಿದಕೂಡಲೆ ರಾಮರಾಜನು ಮನಸ್ಸಿನಲ್ಲಿ ಬೆದರಿದರೂ, ಹೊರಗೆ ಅದರ ಲಕ್ಷಣ ತೋರುಗೊಡದೆ-ಇದೇ ಏನು ನಿನ್ನ ಮಹತ್ವದ ಸುದ್ದಿಯು ! ಯಾವ ಶಹನು ಕೂಡಿ ನಮ್ಮನ್ನೇನು ಮಾಡುವನು ? ಎಲ್ಲಾ ಶಹರೂ ಒಟ್ಟುಗೂಡಿ ಒಮ್ಮೆಲೇ ನಮ್ಮಮೇಲೆ ಸಾಗಿ ಬಂದುಬಿಡಲಿ. ಅಂದರೆ ಅವರೆಲ್ಲರಿಗೆ ಒಮ್ಮೆ ಚೆನ್ನಾಗಿ ಕೈತೋರಿಸಿಬಿಡೋಣ. ಮುಸಲ್ಮಾನರ ನಾಶಕಾಲವೇ ಒದಗಿದಂತೆ ಕಾಣುತ್ತದೆ. ಹಿಂದಕ್ಕೆ ಪರಶುರಾಮನು ಇಪ್ಪತ್ತೊಂದು ಸಾರೆ ಕ್ಷತ್ರಿಯ ಸಂಹಾರಮಾಡಿ ಪೃಥ್ವಿಯನ್ನು ನಿಃಕ್ಷತ್ರಿಯವಾಗಿ ಮಾಡಿದಂತೆ ಈಗ ನಾವು ಪೃಥ್ವಿಯನ್ನು ನಿರ್ಮುಸಲ್ಮಾನವಾಗಿ ಮಾಡೋಣ ! ಹೋಗು, ವೈರಿಗಳ ಸೈನ್ಯಗಳು ಎಲ್ಲಿಯವರೆಗೆ ಬಂದಿವೆಯೆಂಬದನ್ನು ನೋಡಿ ಬಂದು ಹೇಳು. ಅಂಥ ಮಹತ್ವದ ಸುದ್ದಿಗಳೇನಾದರೂ ಇದ್ದರೆ, ನನ್ನ ತನಕ ಹೇಳಲಿಕ್ಕೆ ಬಾ, ಹಾಗೆಮಾಡದೆ, ಇಂಥ ಕ್ಷುಲ್ಲಕ ಸುದ್ದಿಗಳನ್ನು ಹೇಳಲಿಕ್ಕೆ ಬಂದು ತೊಂದರೆಯನ್ನು ಕೊಡಬೇಡ, ಎಂದು ನುಡಿದನು. ಈ ಮಾತುಗಳನ್ನು ಕೇಳಿ ಸೇವಕನು ಆಶ್ಚರ್ಯಪಡುತ್ತ ಹೊರಟು ಹೋದನು. ರಾಮರಾಜನೂ ಅಸಮಾಧಾನದಿಂದ ಕುಂಜವನವನ್ನು ಬಿಟ್ಟು ವಿಜಯನಗರಕ್ಕೆ ಬಂದು ಮುಟ್ಟಿದನು.

ವಿಜಯನಗರಕ್ಕೆ ಬಂದಬಳಿಕ ಎಷ್ಟೋ ಮಹತ್ವದ ಸುದ್ದಿಗಳನ್ನು ರಾಮರಾಜನು ಕೇಳಿದನು. ಶತ್ರುಗಳ ಸೈನ್ಯಗಳು ಬೇಗನೆ ವಿಜಯನಗರದ ಗಡಿಯನ್ನು ಬಂದು ಮುಟ್ಟುವವೆಂಬದನ್ನೂ, ತುಂಗಭದ್ರೆಯ ಕಾಳಹೊಳೆಯ ಸ್ಥಳವನ್ನು ಹುಡುಕುವದಕ್ಕಾಗಿ ಶತ್ರುಗಳ ಗುಪ್ತಚಾರರು ತಿರುಗಾಡುತ್ತಿರುವರೆಂಬದನ್ನೂ, ಆ ಸ್ಥಳವು ಗೊತ್ತಾಗುವವರೆಗೆ ಶತ್ರುಗಳು ಪತ್ರಗಳನ್ನು ಕಳಿಸುತ್ತ, ಉತ್ತರಗಳನ್ನು ಬರಮಾಡಿಕೊಳ್ಳುತ್ತ ಕಾಲಹರಣ ಮಾಡುವಂತೆ ತೋರುತ್ತದೆಂಬದನ್ನೂ, ರಾಮರಾಜನು ಕೇಳಿದನು. ತಾನಾದರೂ ಶತ್ರುಗಳ ಗುಪ್ತಚಾರರನ್ನು ಶೋಧಿಸುವದಕ್ಕಾಗಿಯೂ, ಶತ್ರುಗಳ ದಂಡಿನ ಚಲನವಲನಗಳನ್ನು ನೋಡಿಕೊಂಡು ಬರುವದಕ್ಕಾಗಿಯೂ ಗುಪ್ತಚಾರರನ್ನು ನಿಯಮಿಸಿರುವನೆಂಬ ಬಗ್ಗೆ ರಾಮರಾಜನಿಗೆ ಸಮಾಧಾನವಾಯಿತು. ತಾನು ಶತ್ರುಗಳನ್ನು ತುಂಗಭದ್ರೆಯನ್ನು ದಾಟಗೊಡದೆ, ತುಂಗಭದ್ರೆಯಲ್ಲಿಯೇ ಅವರ ನಾಶಮಾಡಿದರಾಯಿತೆಂದು ಆತನು ತಿಳಕೊಂಡನು. ಮೊದಲ ಉಸಲಿಗೇ ಶತ್ರುಗಳಿಗೆ ಚೆನ್ನಾಗಿ ಕೈ ತೋರಿಸಿದರೆ, ಅವರು ಚಿವುಗುಟ್ಟುತ್ತ ಕುಳಿತುಕೊಳ್ಳುವರು. ಆಮೇಲೆ ತಾವು ಮುಂದಕ್ಕೆ ಸಾಗಿಹೋಗಬೇಕು. ಅಂದರೆ ಪೂರ್ಣವಾಗಿ ಶತ್ರುಗಳ ನಿಃಪಾತವಾಗುವದು ಪರಮೇಶ್ವರನ ಮನಸ್ಸಿನಲ್ಲಿ ಭರತಖಂಡದ ತುಂಬೆಲ್ಲ ಹಿಂದೂ ರಾಜ್ಯವಾಗುವದು, ಇದ್ದದ್ದರಿಂದಲೇ ಈ ಎಲ್ಲ ಮುಸಲ್ಮಾನ ಬಾದಶಹರಿಗೆ ಈ ಬುದ್ದಿಯು ಹುಟ್ಟಿರುತ್ತದೆ, ಇಲ್ಲದಿದ್ದರೆ ಎಂದೂ ಹುಟ್ಟುತ್ತಿದ್ದಿಲ್ಲ, ಎಂದು ಆತನು ನಂಬಿಬಿಟ್ಟಿದ್ದನು. ಈ ವಿಚಾರದ ಹೊರತು, ಸೋಲಿನ ವಿಚಾರವು ರಾಮರಾಜನ ಮನಸ್ಸಿನಲ್ಲಿ ಬರುತ್ತಿರಲಿಲ್ಲವೆಂತಲೇ ಹೇಳಬಹುದು. ತಾನು ಸ್ವತಃ ಸೈನ್ಯಾಧಿಪತ್ಯವನ್ನು ಕೈಕೊಂಡು ತನ್ನ ಇಬ್ಬರು ಶೂರ ಬಂಧುಗಳನ್ನು ಎಡಬಲಗಳಲ್ಲಿ ಸೈನ್ಯವಾಗಿ ಇರಿಸಿಕೊಂಡು ತಾನು ಮಧ್ಯದಲ್ಲಿ ಸೈನ್ಯದೊಡನೆ ನಿಂತು, ವೈರಿಗಳಿಗೆ ಎದುರಾಗಬೇಕೆಂದು ನಿಶ್ಚಯಿಸಿದನು.

ಸೈನ್ಯದೊಳಗಿನ ವೀರರಲ್ಲಿ ತನಗೆ ಭೆಟ್ಟಿಯಾದವರಿಗೆಲ್ಲ ರಾಮರಾಜನು ಶ್ರೀ ವಿಜಯವಿಠ್ಠಲನು, ನಮಗೆ ಅತ್ಯುತ್ತಮ ಪ್ರಸಂಗವನ್ನು ಒದಗಿಸಿ ಕೊಟ್ಟಿರುತ್ತಾನೆ. ಈ ಪ್ರಸಂಗದಲ್ಲಿ ನಾವು ಭಾರತೀಯ ವೀರರಂತೆ ಯುದ್ಧ ಮಾಡಿದರೆ, ಭರತಖಂಡದ ತುಂಬ ನಮ್ಮ ಸಾಮ್ರಾಜ್ಯವಾಗಬಹುದು. ಈ ಪ್ರಸಂಗದಲ್ಲಿ ನಾವು ಮುಗ್ಗರಿಸಿದರೆ, ನಮ್ಮ ಇದ್ದ ರಾಜ್ಯವೂ ಹೋಗುವದು. ಮನುಷ್ಯನಿಗೇನು, ರಾಜ್ಯಕ್ಕೇನು, ಇಂಥ ಮಹತ್ವದ ಪ್ರಸಂಗವು ಒಂದೆಂದರೆ ಒಂದೇಸಾರೆ ಬರುವದು ಆ ಪ್ರಸಂಗದಲ್ಲಿ ಮನುಷ್ಯನು ತನ್ನ ಪ್ರತಾಪದಿಂದ ತಲೆಯನ್ನಾದರೂ ಎತ್ತಬೇಕು, ಹೇಡಿತನದಿಂದ ರಸಾತಲಕ್ಕಾದರೂ ಇಳಿಯಬೇಕು, ಅಂಥ ಪ್ರಸಂಗವೇ ಈಗ ನಿಮಗೆ, ನಿಮ್ಮ ರಾಜ್ಯಕ್ಕೆ ಒದಗಿರುತ್ತದೆಂದು ತಿಳಿಯಿರಿ. ಈ ಪ್ರಸಂಗದಲ್ಲಿ ನೀವು ಎದೆಗೊಟ್ಟು ಕಾದಿ ಜಯಶೀಲರಾಗಿ ಎಲ್ಲರ ಎದೆಯಮೇಲೆ ಕೂಡುವಿರೋ, ಹೇಡಿತನದಿಂದ ಹಿಂದಕ್ಕೆ ಸರಿದು, ವೈರಿಗಳ ತುಳಿತದಿಂದ ಹುಡಿಯಾಗಿ ಹಾರಿಹೋಗುವಿರೋ? ನಿಮ್ಮ ಸಾಮ್ರಾಜ್ಯದ ಗೌರವವನ್ನು ಕಾಯ್ದುಕೊಳ್ಳಿರಿ. ಈ ಕಾಲಕ್ಕೆ ನೀವು ನಿಮ್ಮ ಗೌರವವನ್ನು ಕಾಯ್ದುಕೊಂಡರೆ, ನಿಮ್ಮ ಶತ್ರುಗಳು ಇನ್ನೂ ಐವತ್ತು ವರ್ಷ ತಲೆ ಮೇಲಕ್ಕೆತ್ತದ ಹಾಗಾಗುತ್ತದೆ; ತಲೆ ಮೇಲಕ್ಕೆತ್ತುವದೇಕೆ, ಶತ್ರುಗಳೇ ಉಳಿಯುವದಿಲ್ಲೆಂದು ತಿಳಿಯಿರಿ. ಅದರಿಂದ ನಿಮ್ಮ ಸಾಮ್ರಾಜ್ಯವು ಬೆಳೆಯಬಹುದು; ಮತ್ತು ಆಸೇತು ಹಿಮಾಚಲ ಏಕಛತ್ರಾಧಿಪತ್ಯವಾಗಬಹುದು. ಈ ಮುಸಲ್ಮಾನರು ಈಗ ೩೦೦ ವರ್ಷಗಳಲ್ಲಿ ಉತ್ತರಹಿಂದುಸ್ತಾನದೊಳಗೆ ಮನಸ್ಸಿಗೆ ಬಂದಂತೆ ಕುಣಿಯುತ್ತ ಬಂದಿರುತ್ತಾರೆ, ಅವರನ್ನು ಮಾತಾಡಿಸುವವರು ಯಾರೂ ಇಲ್ಲದಾಗಿದೆ. ಇನ್ನು ನಾವು ಆ ಕೆಲಸವನ್ನು ಮಾಡಬೇಕೆಂದು ಶ್ರೀ ನರಸಿಂಹನ ಇಚ್ಛೆಯಿದ್ದಂತೆ ತೋರುತ್ತದೆ, ಆದ್ದರಿಂದ ನೀವು ಯುದ್ದದಲ್ಲಿ ಹಿಂಜರಿಯದೆ, ವಿಜಯನಗರದ ಸಾಮ್ರಾಜ್ಯದ ಗೌರವವನ್ನು ಕಾಯಿರಿ, ಎಂದು ಹೇಳುತ್ತಿದ್ದನು.

ರಾಮರಾಜನು ಸ್ವಭಾವತಃ ಬಹು ಉದ್ಧಟನು, ಆತನ ಔದ್ಧತ್ಯದ ಮೂಲಕ ಬರಿಯ ಮುಸಲ್ಮಾನರೇ ಅಲ್ಲ, ಸ್ವಜನರಲ್ಲಿ ಬಹುಜನರು ಆತನ ಶತ್ರುಗಳಾಗಿದ್ದರು; ಆದರೆ ರಾಮರಾಜನ ಮುಂದೆ ಅವರ ಆಟ ನಡೆಯುವ ಹಾಗಿಲ್ಲದ್ದರಿಂದ ಅವರು ಸುಮ್ಮನೆ ಕೈಮುಚ್ಚಿಕೊಂಡು ಕುಳಿತುಕೊಂಡಂತೆ ಆಗಿತ್ತು. ರಾಮರಾಜನು ಸದಾಶಿವರಾಜನನ್ನು ಸೆರೆಯಲ್ಲಿಟ್ಟು ತಾನೇ ಅರಸನಾಗಿ ಕಾರಭಾರವನ್ನು ನಡಿಸುತ್ತಿದ್ದನಷ್ಟೆ ? ಅವನು ವರ್ಷದಲ್ಲಿ ಒಂದು ದಿನ ಮಾತ್ರ ಸದಾಶಿವರಾಯನ ಪಾದವಂದನ ಮಾಡಿ ಆತನಿಗೆ ಅರಸುತನದ ಮರ್ಯಾದೆಯನ್ನು ನಡೆಸುತ್ತಿದ್ದನು. ಈ ಕಾರಣದಿಂದ ಸದಾಶಿವರಾಜನ ಪಕ್ಷದವರು ರಾಮರಾಜನ ವೈರಿಗಳಾಗಿದ್ದರು. ಕೆಲವರು ರಾಮರಾಜನ ಉದ್ಧಟತನಕ್ಕಾಗಿ ಆತನನ್ನೂ, ಆತನ ಇಬ್ಬರು ಬಂಧುಗಳನ್ನೂ ಅಂದರೆ ತಿರುಮಲ-ವೆಂಕಟಾದ್ರಿಗಳನ್ನೂ ದ್ವೇಷಿಸುತ್ತಿದ್ದರು. ಕೆಲವರು ರಣಮಸ್ತಖಾನನನ್ನು ಹಿಂದುಮುಂದಿನ ವಿಚಾರವಿಲ್ಲದೆ ರಾಮರಾಜನು ಏರಿಸುತ್ತ ನಡೆದದ್ದನ್ನು ನೋಡಿ, ಮಾತ್ಸರ್ಯ ತಾಳಿ ದ್ವೇಷಿಗಳಾಗಿದ್ದರು; ಆದರೆ ನಾಲ್ವರು ಮುಸಲ್ಮಾನ ಬಾದಶಹರು ಒಟ್ಟುಗೂಡಿ ತಮ್ಮ ಮೇಲೆ ಸಾಗಿಬರುವದನ್ನು ನೋಡಿ ವಿಜಯನಗರದವರು ತಮ್ಮೊಳಗಿನ ಅಂತಃಕಲಹಗಳನ್ನು ಮರೆತರು. ಅವರು ಮುಸಲ್ಮಾನರ ಮೇಲೆ ಮುಗಿಬಿದ್ದು ಹೋಗಿ, ಅವರನ್ನು ದಿಕ್ಕಾಪಾಲಾಗಿ ಯಾವಾಗ ಓಡಿಸೇವೆಂದು ಸ್ಪೂರ್ತಿಗೊಳ್ಳಹತ್ತಿದರು. ಈ ಸಂಬಂಧದಿಂದ ರಣಮಸ್ತಖಾನನ ಉತ್ಕಂಠೆಯನ್ನೂ, ಈರ್ಷೆಯನ್ನೂ ವರ್ಣಿಸುವದಂತು ತೀರ ಅಸಾಧ್ಯವಾಗಿತ್ತು. ಆತನು ವಿಜಯನಗರ ರಾಜ್ಯದ ಅಭಿಮಾನವನ್ನು ವಹಿಸುವಾಗ ತಾನು ಮುಸಲ್ಮಾನ ಜಾತಿಯವನೆಂಬದನ್ನು ಸಹ ಮರೆಯುವಂತೆ ತೋರುತ್ತಿತ್ತು. ಆತನು ಜನರಿಗೆ-ನಾನು ವಿಜಯನಗರದ ರಾಯರನ್ನು ಕೂಡಿದ್ದರಿಂದ, ಸ್ವಜನದ್ರೋಹಿಯೂ, ಸ್ವಾಮಿ ದ್ರೋಹಿಯೂ ಆದೆನೆಂದು ಜನರು ಅನ್ನಬಹುದು; ಆದರೆ ನಾನು ಅಂಥ ದ್ರೋಹವನ್ನೇನೂ ಮಾಡಿರುವದಿಲ್ಲೆಂದು ಸ್ಪಷ್ಟವಾಗಿ ಹೇಳುವೆನು. ವಿಜಾಪುರದ ಬಾದಶಹರ ಹಿತವನ್ನು ನಾನೇ ಮನಮುಟ್ಟಿ ಸಾಧಿಸುತ್ತಿರಲು, ಬಾದಶಹರು ನಿಷ್ಕಾರಣವಾಗಿ ನನ್ನನ್ನು ಅಪಮಾನಗೊಳಿಸಿದರು. ಅದರ ಸೇಡು ತೀರಿಸುವದಕ್ಕಾಗಿ, ನಾನು ಹೇಳಿಕೇಳಿ ರಾಯರನ್ನು ಕೂಡಿಕೊಂಡಿದ್ದೇನೆ. ಬಹುಜನ ಮುಸಲ್ಮಾನರು ಹಿಂದು ಜನರ ದಂಡಿನಲ್ಲಿರುವರಷ್ಟೇ? ಅವರಲ್ಲಿ ನಾನೊಬ್ಬನು. ಆದರೆ ಬಾದಶಹರಿಂದಾದ ಅಪಮಾನದಿಂದ ಬಾದಶಹರ ಮೇಲೆ ರೊಚ್ಚಿಗೆದ್ದು ನಾನು ಒಳಗಿಂದೊಳಗೆ ರಾಮರಾಜರಿಗೆ ಸಹಾಯ ಮಾಡಿದರೆ, ಸ್ವಾಮಿದ್ರೋಹವು ನನ್ನ ಪಾಲಿಗೆ ಬರುತ್ತಿತ್ತು. ಹಾಗೇನು ನಾನು ಮಾಡಿರುವುದಿಲ್ಲ. ನಾನು ಇತ್ತ ಬಂದದ್ದರಿಂದ ಮುಸಲ್ಮಾನ ಬಾದಶಹರ ಹಾನಿಯು ಎಷ್ಟರಮಟ್ಟಿಗೆ ಆಗಿರುತ್ತದೆಂಬದನ್ನು ಮಹಾರಾಜರು ಯುದ್ದದಲ್ಲಿಯ ನನ್ನ ಪರಾಕ್ರಮವನ್ನು ನೋಡಿ ತರ್ಕಿಸಬಹುದು, ಎಂದು ನುಡಿಯುತ್ತಿದ್ದನು. ಅದನ್ನು ಕೇಳಿ ರಾಮರಾಜನು- “ರಕ್ತಸಂಬಂಧವಿದ್ದ ಕಡೆಗೆ ಮನಸ್ಸು ಒಲಿಯತಕ್ಕದ್ದು” ಎಂದು ತರ್ಕಿಸಿ, ಕೌತುಕಪಡುತ್ತಿದ್ದನು. ಕೌತುಕದ ಭರದಲ್ಲಿ ಆತನು ಏಕಾಂತದಲ್ಲಿ ರಣಮಸ್ತಖಾನನನ್ನು ಅಪ್ಪಿಕೊಂಡು ತಮ್ಮಾ, ನೀನು ನನ್ನು ಹೊಟ್ಟೆಯ ಮಗನು” ಎಂದು ಹೇಳಿ, ಎಲ್ಲ ವೃತ್ತಾಂತವನ್ನು ಆತನಿಗೆ ತಿಳಿಸಬೇಕೆಂದು ಮಾಡಿದ್ದನು. ಆದರೆ ಯಾರಿಗೆ ಗೊತ್ತು ? ತನ್ನ ವೃತಾಂತವನ್ನು ಕೇಳಿ ಆತನಿಗೆ ಸಮಾಧಾನವಾಗುವದೊತ್ತಟ್ಟಿಗುಳಿದು, ಆತನು ಸಿಟ್ಟಿಗೆದ್ದರೆ ಮಾಡುವದೇನು ? ಎಂದು ಶಂಕಿಸಿ, ರಾಮರಾಜನು ಅಷ್ಟಕ್ಕೆ ಸುಮ್ಮನಾಗುತ್ತಿದ್ದನು. ವಿಜಯನಗರದ ರಾಜ್ಯದಲ್ಲಿ ಅರಬ ಹಾಗು ಪಠಾಣ ಜನರ ವರ್ಚಸ್ಸು ವಿಶೇಷವಾಗಿತ್ತು. ಹಿಂದೂಜನರು ಬಹುದಿನ ಸಾಮ್ರಾಜ್ಯ ಸುಖವನ್ನು ಅನುಭವಿಸಿದ್ದರಿಂದ ಡೌಲಿಗೆ ಬಿದ್ದಿದ್ದರು. ಅವರಿಗೆ ಆಹಂಭಾವ ಬಹಳ. ಯುದ್ಧಪ್ರಸಂಗ ಒದಗಿದಾಗ ಅವರನ್ನು ಒಟ್ಟುಗೂಡಿಸಬೇಕಾದರೆ ಸಾಕುಬೇಕಾಗುತ್ತಿತ್ತು. ಅದರಿಂದ ಯುದ್ಧಾರಂಭಕ್ಕೆ ಮುಸಲ್ಮಾನ ಸೈನಿಕರೇ ವೈರಿಗಳಿಗೆ ಎದುರಾಗಬೇಕಾಗುತ್ತಿತ್ತು. ಹಿಂದಿನಿಂದ ಹಿಂದೂ ಸೈನ್ಯದ ಯೋಜನೆಯಾಗುವ ಪ್ರಸಂಗ ಬರುತ್ತಿತ್ತು. ಈವರೆಗಾದ ಅನೇಕ ಕಾಳಗಗಳಲ್ಲಿ ಕೇವಲ ಮುಸಲ್ಮಾನ ದಂಡಾಳುಗಳ ಸಹಾಯದಿಂದಲೇ ವಿಜಯನಗರದವರಿಗೆ ಜಯವು ದೊರೆತಿತ್ತು. ಇದರಿಂದ ಮುಸಲ್ಮಾನ ಸೈನಿಕರ ವರ್ಚಸ್ಸು ವಿಜಯನಗರದ ರಾಜ್ಯದಲ್ಲಿ ಹೆಚ್ಚಲಿಕ್ಕೆ ಕಾರಣವಾಗಿತ್ತು; ಅದರಿಂದ ಮುಸಲ್ಮಾನ ಸೈನ್ಯದ ಮುಖ್ಯಸ್ಥನಾಗಿರುವ ರಣಮಸ್ತಖಾನನ ಮನಸ್ಸನ್ನು ನೋಯಿಸುವದು ಈ ಪ್ರಸಂಗದಲ್ಲಿ ಹಿತಕರವಲ್ಲೆಂದು ತಿಳಿದು, ರಣಮಸ್ತಖಾನನ ಜನ್ಮವೃತ್ತಾಂತವನ್ನು ಮತ್ತೆ ಯಾವಾಗಾದರೂ ಅವನಿಗೆ ಹೇಳೋಣವೆಂದು ರಾಮರಾಜನು ಸ್ಮರಿಸುತ್ತ ಬಂದಿದ್ದನು.


****