ಕನ್ನಡಿಗರ ಕರ್ಮ ಕಥೆ/ರಾಮರಾಜನ ಸ್ವಚ್ಚಂದವೃತ್ತಿಯು
₩
೨೬ನೆಯ ಪ್ರಕರಣ
ರಾಮರಾಜನ ಸ್ವಚ್ಛಂದವೃತ್ತಿಯು
ರಣಮಸ್ತಖಾನನನ್ನು ತಮ್ಮ ಕಡೆಗೆ ಕಳಿಸಬೇಕೆಂದು ರಾಮರಾಜನಿಗೆ ಬರೆದ ಪತ್ರಕ್ಕೆ ಆತನು ಏನು ಉತ್ತರ ಬರೆಯುವನೆಂಬುವದು ವಿಜಾಪುರದ ಬಾದಶಹನಿಗೆ ಗೊತ್ತಾಗದ ಹಾಗೆ ಆಗಿತ್ತು. ಬಾದಶಹನು ರಾಮರಾಜನ ಉತ್ತರಕ್ಕೆ ಮಹತ್ವಕೊಡದೆ, ತನ್ನ ಸಮರ ಸನ್ನಾಹವನ್ನು ಮಾಡುವಹಾಗೆ ಮಾಡುತ್ತಲೇ ಇದ್ದನು. ಇಬ್ಬರು ಬಾದಶಹರೊಡನೆ ನಡೆಸಿದ ಆತನ ಒಳಸಂಚು ಪೂರ್ಣಸಿದ್ದವಾದ ಹಾಗೆ ಆಗಿತ್ತು. ಬಹಮನಿ ಬಾದಶಹರಲ್ಲಿ ನಾಲ್ಕು ಶಾಖೆಗಳಾಗಿ ಅವರಲ್ಲಿ ಪರಸ್ಪರ ಮಾತ್ಸರ್ಯವು ಹೆಚ್ಚಿದ್ದರಿಂದ ಪರಸ್ಪರರು ಹೊಡೆದಾಡಿ ಎಲ್ಲರೂ ಬಲಹೀನರಾದಂತೆ ಆಗಿತ್ತು. ಈ ಬಾದಶಹರು ಒಬ್ಬರು ಮತ್ತೊಬ್ಬರನ್ನು ಮುರಿಯುವದಕ್ಕಾಗಿ ಪರಧರ್ಮದ ಅರಸರನ್ನು ಪ್ರಾರ್ಥಿಸಿ ತಮ್ಮ ಸಹಾಯಕ್ಕೆ ಕರಕೊಳ್ಳಲಿಕ್ಕೆ ಹೇಸುತ್ತಿಲ್ಲ. ವಿಜಾಪುರದ ಆದಿಲಶಹನು ತನ್ನ ಶತ್ರುಗಳನ್ನು ಹಣ್ಣು ಮಾಡುವದಕ್ಕಾಗಿ ಎರಡುಸಾರೆ ರಾಮರಾಜನ ಸಹಾಯವನ್ನು ಕೇಳಿಕೊಂಡು, ಅವನ ಕಡೆಯಿಂದ ತನ್ನ ಶತ್ರುಗಳ ಮೇಲೆ ದಾಳಿ ಮಾಡಿಸಿದನು, ಈ ದಾಳಿಯಲ್ಲಿ ರಾಮರಾಜನು ಸಂಪೂರ್ಣ ಜಯಶಾಲಿಯಾದದ್ದನ್ನು ನೋಡಿ ಮೊದಮೊದಲು ಅಲ್ಲಿ ಆದಿಲಶಹನಿಗೆ ಬಹಳ ಸಂತೋಷವಾಯಿತು. ಆದರೆ ಈ ಸಮಾಧಾನವು ಬಹಳ ಹೊತ್ತು ನಿಲ್ಲಲಿಲ್ಲ. ರಾಮರಾಜನು ಈ ಜಯದಿಂದ ಬಹಳ ಉನ್ಮತ್ತನಾದನು. ತುಂಗಭದ್ರೆಯಿಂದ ರಾಮೇಶ್ವರದವರೆಗೆ ಈಗ ಆತನ ರಾಜ್ಯವು ವಿಸ್ತ್ರತವಾಗಿ, ಎಲ್ಲ ಮುಸಲ್ಮಾನ ಬಾದಶಹರು ಆತನಿಗೆ ಅಂಜಿ ನಡೆಯಹತ್ತಿದರು. ಈ ಸ್ಥಿತಿಯಲ್ಲಿ ರಾಮರಾಜನು ಜಾಗರೂಕನಾಗಿ ಕಣ್ಣು ತೆರೆದು ನಡೆದಿದ್ದರೆ ಬಹಳ ನೆಟ್ಟಗಾಗುತ್ತಿತ್ತು! ಆದರೆ, ಮದ ಮೋಹಗಳೆಂಬ ಇಬ್ಬರು ಪ್ರಬಲ ವೈರಿಗಳ ಇರುಕಿನಲ್ಲಿ ಸಿಕ್ಕು ಆತನು ತೀರ ಅಂಧನಾಗಿದ್ದನು. ತಾನು ಬಾಯಿಂದ ಅಂದಂತೆ ಆಗುವದೆಂತಲೂ, ಕೈಯಿಂದ ಮಾಡತೊಡಗಿದ್ದು ಸಾಧಿಸುವದೆಂತಲೂ ಆತನು ನಂಬಿದ್ದನು. ಈ ನಂಬಿಗೆಯು ಆತನ ಉನ್ಮತ್ತತನಕ್ಕೆ ಕಾರಣವಾಗದಿದ್ದರೆ, ಆತನ, ಹಾಗೂ ವಿಜಯನಗರದ ರಾಜ್ಯವು ವಿಜಯವೂ, ವಿಸ್ತಾರವೂ ಯಾವಾಗಲೂ ಆಗುತ್ತಲೇ ಹೋಗುತ್ತಿದ್ದವು; ಆದರೆ ದುರ್ದೈವದಿಂದ ಹಾಗಾಗಲಿಲ್ಲ. ಆತನನ್ನು ಉನ್ಮತ್ತತನವು ಸಂಪೂರ್ಣವಾಗಿ ಮುಸುಕಿಬಿಟ್ಟಿತು. ತನ್ನ ವಿರುದ್ದವಾಗಿ ಮೂವರು ನಾಲ್ವರು ಬಾದಶಹರು ಒಟ್ಟಾಗುತ್ತಿರುವರೆಂಬ ಸುದ್ದಿಯು ಆತನಿಗೆ ಗೊತ್ತಾಗಿದ್ದರು, ಅದರ ಮಹತ್ವವು ಆತನಿಗೆ ಅರಿವಾದಂತೆ ತೋರಲಿಲ್ಲ. ಹದಿನೆಂಟು ಮಂದಿ ಬಾದಶಹರು ಒಟ್ಟಾದರೇನಾಯಿತು ? ಅವರೆಲ್ಲರ ಮಗ್ಗಲು ಮುರಿಯೋಣವೆಂದು ಆತನು ಭಾವಿಸಹತ್ತಿದನು. ಹೀಗೆ ಬರಿಯ ಭಾವಿಸುತ್ತಿದ್ದನೆಂಬುದಿಷ್ಟೇ ಅಲ್ಲ, ಇಂಥ ಪ್ರಸಂಗವು ಒಮ್ಮೆ ಬಂದು ಹೋಗಲೆಂದು ಆತನು ಇಚ್ಚಿಸಹತ್ತಿದನು ! ಹೀಗೆ ಈ ಎಲ್ಲ ಬಾದಶಹರ ಎಲಬು ದುಂಡಗೆ ಮಾಡಿದೆನೆಂದರೆ, ಮುಂದೆ ಉತ್ತರದ ಕಡೆಗೆ ಸಹ ತನ್ನ ರಾಜ್ಯವನ್ನು ಹಬ್ಬಿಸಲಿಕ್ಕೆ ಪ್ರತಿಬಂಧವಾಗದೆಂದು ಆತನು ತಿಳದಿದ್ದನು.
ರಾಮರಾಜನ ಈ ವಿಚಾರವು ಅಯೋಗ್ಯವಾದದ್ದೆಂದು ಹೇಳುವ ಹಾಗಿದ್ದಿಲ್ಲ. ಒಂದು ದೃಷ್ಟಿಯಿಂದ ಅದು ಯೋಗ್ಯವಾದದ್ದಾಗಿತ್ತು; ಆದರೆ ತನ್ನ ಸಾಮರ್ಥ್ಯದ ವಿಷಯವಾಗಿ ಇದ್ದ ಆತನ ವಿಶ್ವಾಸವು ಇರುವಷ್ಟಕ್ಕಿಂತ ಬಹಳ ಹೆಚ್ಚು ಇತ್ತು. ಆತನ ಸೈನ್ಯವು ಬಹು ಪ್ರಚಂಡವಾದದ್ದೆಂಬುದೇನೋ ನಿಜ, ಆದರೆ ಆ ಸೈನ್ಯದಲ್ಲಿ ಈಗ ವ್ಯವಸ್ಥೆಯಿದ್ದಿಲ್ಲ. ಸೈನಿಕರು ಸೋಮಾರಿಗಳೂ, ಡಾಂಭಿಕರೂ ಚಕ್ಕಂದಕ್ಕೆ ಮೆಚ್ಚಿದವರೂ ಆಗಿದ್ದರು. ಈ ಸ್ಥಿತಿಯ ಜ್ಞಾನವು ರಾಮರಾಜನಿಗೆ ಆಗಿದ್ದಿಲ್ಲ. ತಾರುಣ್ಯದಲ್ಲಿಯು ಸಾಮರ್ಥ್ಯದ ಯೋಗದಿಂದ ಬಹು ದಿವಸಗಳವರೆಗೆ ವಿಜಯವನ್ನು ಸಂಪಾದಿಸುತ್ತ ಬಂದಿದ್ದ ಒಬ್ಬಾನೊಬ್ಬ ವೃದ್ದನು, ಮೊದಲಿನಂತೆ ಈಗಲಾದರೂ ತನ್ನ ಶರೀರ ಸಾಮರ್ಥ್ಯದ ಸಹಾಯದಿಂದ ಜಯವನ್ನು ಸಂಪಾದಿಸುವೆನೆಂದು ವಿಶ್ವಾಸವಿಡುವಂತೆ ರಾಮರಾಜನ ಸ್ಥಿತಿಯು ಆಗಿತ್ತು. ವಿಜಯನಗರದ ರಾಜ್ಯವು ಸ್ಥಾಪಿಸಲ್ಪಟ್ಟು ಎರಡೂವರೇ ನೂರು ವರ್ಷಗಳು ಆಗುತ್ತ ಬಂದಿದ್ದವು. ಇಷ್ಟು ದಿವಸ ಅದು ಮುಸಲ್ಮಾನರ ಅಬ್ಬರಕ್ಕೆ ಸೊಪ್ಪುಹಾಕದೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಭರದಿಂದ ಬೆಳೆಯುತ್ತ ಬಂದಿತ್ತು ಆದರೆ ಸೃಷ್ಟಿಕ್ರಮವಿಡಿದು ಬಹುದಿವಸ ಅವಾಡವ್ಯವಾಗಿ ಬೆಳೆದವೃಕ್ಷವೂ ಒಳಗಿಂದೊಳಗೆ ಟೊಕಳಿಹಾಯುವಂತೆ ದಕ್ಷಿಣದಲ್ಲಿ ಇಷ್ಟುವರ್ಷ ವಿಸ್ತರಿಸಿದ್ದ ವಿಜಯನಗರದ ರಾಜ್ಯವು ಒಳಗಿಂದೊಳಗೆ ಶಿಥಿಲವಾಗಿತ್ತೆಂದು ಹೇಳಬಹುದು. ದೊಡ್ಡ ವೃಕ್ಷದ ನೆರಳೆಂದು ಬಹುಜನರು ಆಶ್ರಯಿಸಿದ್ದರೂ, ಗಿಡವು ಬಿರುಗಾಳಿಯಿಂದ ಬೀಳುವಾಗ ಗಿಡದ ಬುಡದಲ್ಲಿರುವವರು ತಪ್ಪಿಸಿಕೊಂಡು ಹೋಗುವಂತೆ, ವಿಜಯನಗರದ ದಂಡಿನಲ್ಲಿ ಸೇರಿಕೊಂಡಿದ್ದ ಜನರಲ್ಲಿ ಪ್ರಸಂಗದೊಳಗೆ ಕಾಲುವೆಗೆಯುವವರೇ ಬಹಳ ಜನರಿದ್ದರಲ್ಲದೆ, ರಾಜ್ಯದ ಸಂರಕ್ಷಣಕ್ಕೆ ಹೆಣಗುವವರು ಬಹಳ ಜನರು ಇದ್ದಿಲ್ಲ. ಯಾವ ಮಾತಿನಲ್ಲಿಯೇ ಆಗಲಿ, ಅವಾಡವ್ಯ ವ್ಯವಹಾರದ ಲಕ್ಷಣವು ಹೀಗೆಯೇ ಸರಿಯೆಂದು ಸಾಧಾರಣವಾಗಿ ಹೇಳಬಹುದು. ತನ್ನ ಸೈನ್ಯದ ಜನರಲ್ಲಿ ಮೊದಲಿನ ಸಾಮರ್ಥ್ಯವು ಉಳಿದಿದ್ದಿಲ್ಲೆಂಬ ಮಾತು ರಾಮರಾಜನಿಗೆ ಗೊತ್ತಿದ್ದಂತೆ ತೋರಲಿಲ್ಲ. ಮೂರು ನಾಲ್ಕುಜನ ಬಾದಶಹರು ಒಟ್ಟುಗೂಡಿ ಬಂದರೆ ತನ್ನ ಸೈನ್ಯವು ತಡೆಯಲಿಕ್ಕಿಲ್ಲೆಂಬ ಮಾತಾದರೂ ಆತನಿಗೆ ಗೊತ್ತಿರಬೇಕಾಗಿತ್ತು; ಆದರೆ ಅದೂ ಗೊತ್ತಿದ್ದಂತೆ ತೋರಲಿಲ್ಲ. ಈ ಮಾತು ಆತನಿಗೆ ಗೊತ್ತುರುವದೊತ್ತಟ್ಟಿಗುಳಿದು, ತಾನು ದಿಗ್ವಿಜಯ ಮಾಡಬೇಕೆಂತಲೂ, ಆ ಸೇತು ಹಿಮಾಚಲ ತನ್ನ ರಾಜ್ಯವನ್ನು ಹಬ್ಬಿಸಬೇಕೆಂತಲೂ, ತನ್ನ ಅಶ್ವಮೇಧದ ಕುದುರೆಯನ್ನು ಇಡಿಯ ಭರತಖಂಡದಲ್ಲಿ ತಿರುಗಿಸಿ, ತಾನು ಸಾರ್ವಭೌಮನಾಗಬೇಕೆಂತಲೂ ಆತನು ಭಾವಿಸುತ್ತಿದ್ದನು. ತಾನು ಜಯಶಾಲಿಯಾಗುವನೆಂಬದೊಂದೇ ಗುಂಗು ಆತನ ತಲೆಯಲ್ಲಿ ಹೊಕ್ಕುಬಿಟ್ಟಿದ್ದರಿಂದ, ತನ್ನ ಗುಂಗಿಗೆ ಪ್ರತಿಕೂಲ ಸಂಕಟಗಳೇನಿರುವವೆಂಬ ವಿಚಾರದಕಡೆಗೆ ಆತನ ಮನಸ್ಸು ತಿರುಗಲೇ ಇಲ್ಲ. ಆತನ ಅಣ್ಣನಾದ ತಿರುಮಲನಾದರೂ ಯೋಗ್ಯ ವಿಚಾರಗಳನ್ನು ರಾಮರಾಜನಿಗೆ ಸಚಿಸ ಬಹುದಾಗಿತ್ತು. ತಿರುಮಲನು ಯಾವತ್ತು ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು ; ಆದರೆ ಸೈನ್ಯದ ಅಂತಃಸ್ಥಿತಿಯು ಆತನಿಗೂ ಗೊತ್ತಿತ್ತೆಂದು ಹೇಳಬಹುದಾಗಿತ್ತು, ಇಷ್ಟುದಿನ ಮುಸಲ್ಮಾನರಿಗೆ ಸೊಪ್ಪು ಹಾಕದೆಯಿದ್ದ ನಮ್ಮ ಸೈನ್ಯವು ಈಗ ಹ್ಯಾಗೆ ಅದಕ್ಕೆ ಬಗ್ಗುವದೆಂಬ ವಿಚಾರದಿಂದ ಆತನು ಸಂತುಷ್ಟನಾಗಿದ್ದನು, ಅದರಲ್ಲಿ ರಣಮಸ್ತಖಾನನು ತನ್ನ ಕಡೆಗಾದದ್ದರಿಂದ, ವಿಜಾಪುರದ ರಾಜ್ಯದೊಳಗಿನ ಬಹು ಮಹತ್ವದ ಒಬ್ಬ ಮನುಷ್ಯನನ್ನು ತಾವು ಒಳಗೊಂಡಿರುವದರಿಂದ, ತಮಗೆ ವಿಶೇಷತರದ ಅನುಕೂಲತೆಯಾದಂತಾಗಿದೆಯೆಂದು ಆತನು ಹುಗುತ್ತಲಿದ್ದನು; ಆದರೆ ಆ ರಣಮಸ್ತಖಾನನೇ ತಮಗೂ ತಮ್ಮ ರಾಜ್ಯಕ್ಕೂ ಮೃತ್ಯುಸ್ವರೂಪಿಯಾಗಿರುವನೆಂಬದು ಆತನಿಗೇನು ಗೊತ್ತು?
ಈ ಮೇರೆಗೆ ಮದ-ಮೋಹಗಳೆಂಬ ಎರಡು ವಿಕಾರಗಳಿಂದ ಪೀಡಿತನಾದ ರಾಮರಾಜನು ತಾನು ಅಶ್ವಮೇಧ ಮಾಡಬೇಕೆಂಬ ಗುಂಗಿನಲ್ಲಿರುವಾಗ ಆತನಿಗೆ ಶತ್ರುಗಳ ಕಡೆಯ ಒಳಸಂಚುಗಳ ಸುದ್ದಿಗಳು ಸಹ ಗೊತ್ತಾಗದಂತಾದವು. ಒಂದು ಪಕ್ಷದಲ್ಲಿ ಆ ಸುದ್ದಿಗಳು ಗೊತ್ತಾದರೆ ಆತನು- “ಮಾಡಲಿ, ಅವರು ಬೇಕಾದದ್ದು ಮಾಡಲಿ. ಈ ಬಾದಶಹನು ಆ ಬಾದಶಹನ ಮಗಳನ್ನು ಲಗ್ನಮಾಡಿಕೊಂಡರೆ, ಆ ಬಾದಶಹನು ಈ ಬಾದಶಹನ ಮಗನಿಗೆ ತನ್ನ ತಂಗಿಯನ್ನು ಕೊಟ್ಟರೆ. ಸೈನ್ಯದ ಸಾಮರ್ಥ್ಯ ಹೆಚ್ಚಿದ ಹಾಗಾಗುವದೊ ? ಆ ಮಕ್ಕಳಿಗೆ ಮಾಡಬೇಕಾಗಿದ್ದ ಒಕ್ಕಟ್ಟನ್ನು ಗಟ್ಟಿ ಮುಟ್ಟಿಯಾಗಿ ಮಾಡಿಕೊಂಡು ಒಮ್ಮೆಲೆ ಜಿಟ್ಟಿಯ ಹಿಂಡಿನಂತೆ ನಮ್ಮ ಮೇಲೆ ಸಾಗಿಬರಬೇಕೆಂದು ಹೇಳಬೇಕು. ವಿಜಯನಗರದ ರಾಯರನ್ನು ಕೆಣಕುವದು ಅವರಿಗೆ ಸುಲಭವಾಗಿ ಕಂಡಿತೆ; ಆದರೆ ಕೆಣಕಿ ನೋಡಲಿ, ಜಟ್ಟಿಗಳ ಹಿಂಡು ಬೆಂಕಿಯಲ್ಲಿ ಪಟಪಟ ಬಿದ್ದು ನಾಶವಾಗುವಂತೆ, ಅವರ ನಾಶವಾಗಬೇಕಾದೀತು” ಎಂದು ದರ್ಬಾರದ ಜನರ ಸಮಕ್ಷಮ ನುಡಿದು, ಅವರಿಂದ- “ಮಹಾಪ್ರಭೋ, ಹೌದು ಆ ಮುಸಲರ ಗತಿಯು ಹೀಗೆಯೇ ಆಗಬೇಕೆಂದು ಈಶ್ವರೀಸಂಕೇತವಿರುತ್ತದೆ. ಅಂತೇ ಅವರಿಗೆ ಅಂಥ ಬುದ್ದಿಯು ಉತ್ಪನ್ನವಾಗಿರುವದು, ಆಗಲಿ, ಒಮ್ಮೆ ಈ ಎಲ್ಲ ಮಹಮದೀಯರ ಉಚ್ಛೇದವಾಗಿ ಹೋಗಲಿ. ಅಂದರೆ, ಭರತಖಂಡದಲ್ಲಿ ಸರ್ವತ್ರ ವೈದಿಕ ಧರ್ಮದ ಪ್ರಸಾರವಾಗುವದು” ಎಂದು ಹೊಗಳಿಸಿಕೊಳ್ಳುವದರಲ್ಲಿಯೇ ಆ ರಾಯನ ಕಾಲಹರಣವಾಗಹತ್ತಿತು.
ಇದಕ್ಕೆ ವಿರುದ್ಧವಾದ ಸ್ಥಿತಿಯು ಮುಸಲ್ಮಾನ ಬಾದಶಹರಲಿತ್ತು. ವಿಜಾಪುರದ ಆದಿಲಶಹನು ಈಗ ಬಹು ದಿವಸಗಳಿಂದ ನಡೆಸಿದ್ದ ಕಪಟೋಪಾಯಗಳಿಂದ ಆತನೊಬ್ಬನೇ ವಿಜಯನಗರದ ರಾಜ್ಯವನ್ನು ಗೊತ್ತಿಗೆ ಹಚ್ಚಬಹುದಾಗಿತ್ತು. ಆದರೂ ಆತನು ಧೂರ್ತತ್ವದಿಂದ ಅಹಮ್ಮದನಗರ-ಗೋವಳಕೊಂಡಗಳ ಬಾದಶಹರ ಸಂಗಡ ಒಕ್ಕಟ್ಟು ಬೆಳೆಸಿದನು. ವಿಜಯನಗರದ ದಂಡಿನವರ ಹುಳುಕು ಬಾದಶಹನಿಗೆ ಗೊತ್ತಿದ್ದರೂ, ಆ ಪ್ರಚಂಡ ಸೈನ್ಯದಿಂದ ಎಲ್ಲಿಯಾದರೂ ತನಗೆ ಅಪಾಯ ಉಂಟಾದರೆ, ತನ್ನ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲೆಂದು ಆತನು ಜಾಗರೂಕನಾಗಿದ್ದನು. ತಾವು ಮೂವರೂ ಒಕ್ಕಟ್ಟಾಗಿಯೇ ಹಿಂದುಗಳ ಪ್ರಚಂಡ ರಾಜ್ಯವನ್ನು ನಾಶಮಾಡಬೇಕೆಂದು ಆತನು ನಿಶ್ಚಯಿಸಿದನು. ಪರಸ್ಪರರಲ್ಲಿ ವಿಶ್ವಾಸವು ಉತ್ಪನ್ನವಾಗುವದಕ್ಕಾಗಿ ಅಹಮ್ಮದನಗರದ ಹುಸೇನ ನಿಜಾಮಶಹನು, ತನ್ನ ಮಗಳಾದ ಚಾಂದಬೀಬಿ ಎಂಬವಳನ್ನು ವಿಜಾಪುರದ ಅಲಿ ಆದಿಲಶಹನಿಗೆ ಲಗ್ನಮಾಡಿಕೊಟ್ಟನು. ಅಲಿ ಆದಿಲಶಹನು ತನ್ನ ತಂಗಿಯನ್ನು ಹುಸೇನ ನಿಜಾಮಶಹನ ಮಗನಿಗೆ ಲಗ್ನಮಾಡಿ ಕೊಟ್ಟನು. ಈ ಎಲ್ಲ ಸಂಬಂಧಗಳು ಕೇವಲ ರಾಜಕಾರಣದ ಸಲುವಾಗಿಯೇ ಆದವು. ಈ ಲಗ್ನ ಸಮಾರಂಭದ ನೆವದಿಂದ ಇವರ ವಕೀಲರು ಅವರ ಕಡೆಗೆ, ಅವರ ವಕೀಲರು ಇವರ ಕಡೆಗೆ ಎಡತಾಕಹತ್ತಿದರು. ಅವರ ಆಲೋಚನೆಗಳು ಮುಗಿದವು. ಬೀದರದ ಬಾದಶಹನೆಂಬ ನಾಲ್ಕನೆಯ ಬಾದಶಹನೂ ಅವರನ್ನು ಬಂದು ಕೂಡಿದನು. ಎಲ್ಲರೂ ತಮ್ಮ ತಮ್ಮ ಸೈನ್ಯಗಳನ್ನು ತಕ್ಕೊಂಡು ವಿಜಾಪುರಕ್ಕೆ ಬರಬೇಕೆಂತಲೂ ಇಂಥ ಇಂಥವರು ಇಂಥ ಇಂಥ ಕಡೆಯಿಂದ ಸಾಗಿ ಹೋಗಬೇಕೆಂತಲೂ ಆಲೋಚನೆಗಳು ಆಗಹತ್ತಿದವು. ಇತ್ತ ರಾಮರಾಜನನ್ನು ವಿಚಾರಮಗ್ನನನ್ನಾಗಿ ಮಾಡುವುದಕ್ಕಾಗಿ ವಿಜಾಪುರದ ಬಾದಶಹನು ರಣಮಸ್ತ ಖಾನನನ್ನು ಕಳಿಸಿಕೊಡುವ ನೆವದಿಂದ ಪತ್ರಗಳನ್ನು ಓಡಾಡಿಸಹತ್ತಿದನು. ರಣಮಸ್ತಖಾನನನ್ನು ಕಳಿಸುವದಿಲ್ಲೆಂದು ರಾಮರಾಜನು ಉತ್ತರವನ್ನು ಕಳಿಸಿದ ಬಳಿಕ, ಬಾದಶಹನು ಮತ್ತೆ ತನ್ನ ವಕೀಲನನ್ನು ಕಳಿಸಿ ವಿಜಯನಗರದ ರಾಜ್ಯದ ಹದ್ದಿನಲ್ಲಿರುವ ಕೆಲವು ಕೋಟೆಗಳನ್ನು ಕೊಡಬೇಕೆಂದು ರಾಮರಾಜನನ್ನು ಕೇಳಿದನು. ತನ್ನ ವಕೀಲನನು ಅಪಮಾನಗೊಳಿಸಿ ಕಳಿಸಿಕೊಡಬೇಕೆಂತಲೇ ಬಾದಶಹನು ಹೀಗೆ ರಾಮರಾಜನ ಬಳಿಗೆ ವಕೀಲನನ್ನು ಕಳಿಸಿ ಕೊಟ್ಟಿದ್ದನು. ಯಾಕೆಂದರೆ, ಒಡಂಬಡಿಕೆಯ ಕರಾರುಗಳನ್ನು ಮುರಿಯುಲಿಕ್ಕೆ ರಾಮರಾಜನಿಂದ ಕೆಲವು ಕಾರಣಗಳು ಒದಗಿದವೆಂದು ತೋರಿಸುವದು ಬಾದಶಹನ ಉದ್ದೇಶವಾಗಿತ್ತು.
ಸಂಕಟಗಳು ಒದಗಬಹುದೆಂಬ ಸಂಶಯವಿರುವ ವರೆಗೆ ರಾಮರಾಜನು ಯಾವ ಲಕ್ಷ್ಯವಿಲ್ಲದವನಂತೆ ವರ್ತಿಸಿದನು; ಆದರೆ ಶತ್ರುಗಳ ಸೈನ್ಯಗಳು ವಿಜಾಪುರದಲ್ಲಿ ಒಟ್ಟುಗೂಡಿದವೆಂಬದನ್ನು ಕೇಳಿದ ಕೂಡಲೆ ಎಚ್ಚತ್ತು ತನ್ನ ಸೈನ್ಯವನ್ನು ವ್ಯವಸ್ಥೆಗೊಳಿಸಹತ್ತಿದನು. ಶತ್ರುಗಳ ಪ್ರಚಂಡ ಸೈನ್ಯದ ಮುಂದೆ ತನ್ನ ಸೈನ್ಯವು ತಡೆಯಲಿಕ್ಕಿಲ್ಲೆಂದು ಆತನಿಗೆ ತೋರಹತ್ತಿತು. ಅವನು ಈ ಪ್ರಸಂಗದಲ್ಲಿ ತಾನು ಕೈಕಾಲಗೆಡುವದು ಯೋಗ್ಯವಲ್ಲೆಂದು ತಿಳಿದು, ತುಂಗಭದ್ರೆಯ ಕಾಳಹೊಳೆಯಿರುವ ಕಡೆಯಿಂದ ಶತ್ರುಗಳು ಬಾರದಂತೆ ಮಾಡಿ, ಪ್ರಸಂಗ ನೋಡಿ ತಾನು ತುಂಗಭದ್ರೆಯನ್ನು ಆ ಮಾರ್ಗದಿಂದ ದಾಟಿಹೋಗಿ, ಶತ್ರುಗಳ ಮೇಲೆ ಬೀಳಬೇಕೆಂದು ಮಾಡಿದನು. ಈ ಕೆಲಸಕ್ಕಾಗಿ ತಿರುಮಲನನ್ನು ನಿಯಮಿಸಿದನು. ವೆಂಕಟಾದ್ರಿ, ಇಳೋತ್ತಮ ರಾಯರೆಂಬವರ ಕೈಯಲ್ಲಿ ದೊಡ್ಡ ದೊಡ್ಡ ಸೈನ್ಯಗಳನ್ನು ಕೊಟ್ಟು ಬೇರೆ ಬೇರೆ ಕಡೆಯಲ್ಲಿ ಶತ್ರುಗಳನ್ನು ತರಬಲು ನಿಯಮಿಸಿದನು. ತಾನು ಸ್ವತಃ ಮಧ್ಯಭಾಗದಲ್ಲಿದ್ದು, ತನ್ನ ಸಂರಕ್ಷಣಕ್ಕಾಗಿ ರಣಮಸ್ತಖಾನನಿಂದ ನಡೆಸಲ್ಪಡುತ್ತಿರುವ ಪಠಾಣ ಸೈನ್ಯವನ್ನು ಇಟ್ಟುಕೊಳ್ಳಬೇಕೆಂದು ಮಾಡಿದನು. ರಾಮರಾಜನು ರಣಮಸ್ತಖಾನನನ್ನು ಬೇರೆ ಕಡೆಗೆ ಕಳಿಸಲಿಲ್ಲ. ಪ್ರಸಂಗದಲ್ಲಿ ಈ ಸ್ವಾಮಿದ್ರೋಹಿಯಾದ ರಣಮಸ್ತನೇ ಬಾದಶಹನ ಮೇಲಿನ ಸಿಟ್ಟಿನಿಂದ ತನಗೆ ಮನಮುಟ್ಟ ಸಹಾಯ ಮಾಡಬಹುದೆಂದು ಆ ರಾಯನು ತಿಳಕೊಂಡನು. ಆತನು ರಣಮಸ್ತನಿಗೆ- “ನಿನ್ನನ್ನು ವಿಜಾಪುರಕ್ಕೆ ಕಳಿಸದೆ ಇದ್ದದ್ದರಿಂದ ಎಲ್ಲ ಬಾದಶಹರು ಒಟ್ಟುಗೂಡಿ ನಮ್ಮ ಮೇಲೆ ಯುದ್ಧಕ್ಕೆ ಬರಬೇಕಾಯಿತು. ಆದರೆ ಪೃಥ್ವಿಯೊಳಗಿನ ಎಲ್ಲ ಬಾದಶಹರು ಒಟ್ಟುಗೂಡಿ ಬಂದರೂ ನಾವು ಹೆದರುವಹಾಗಿಲ್ಲ. ನಾವು ಸ್ವಸ್ಥ ಕುಳಿತುಕೊಳ್ಳುವದರಿಂದ ಯುದ್ಧವು ನಡೆಯದೆಂದು ತಿಳಿದು, ನಾವು ಈಗ ಮುಂದಕ್ಕೆ ಸಾಗಿಹೋಗಬೇಕಾಗಿರುವದು. ಮುಂದಕ್ಕೆ ಸಾಗಿಹೋದ ಕೂಡಲೆ ತುಂಗಭದ್ರೆಯ ಕಾಳಹೊಳೆಯ ಕಡೆಯಲ್ಲಿಯೇ ಶತ್ರುಗಳ ದೂಳಹಾರಿಸಬೇಕು; ಅಂದರೆ ಅವರು ಮುಂದಕ್ಕೆ ಸಾಗಿ ಬರಲಾರರು” ಅನ್ನಲು, ಅದಕ್ಕೆ ರಣಮಸ್ತಖಾನನು ತಲೆಯಲ್ಲಾಡಿಸಿ- ನನ್ನ ಮೇಲೆ ನಿಮ್ಮ ವಿಶ್ವಾಸವು ಕುಳಿತುಕೊಳ್ಳುವಂತೆ ನನ್ನ ಕೈಯಿಂದ ಏನಾದರೂ ಕೆಲಸವಾಗಬೇಕಾಗಿರುವದು; ಆದ್ದರಿಂದ ನನ್ನನ್ನು ಆ ತುಂಗಭದ್ರೆಯ ಕಾಳಹೊಳೆಯ ಕಡೆಗೆ ಕಳಿಸಿ ನನ್ನ ಪರಾಕ್ರಮವನ್ನು ನೋಡಿರಿ. ಶತ್ರುಗಳನ್ನು ಎಲ್ಲಿಯೋ ಒತ್ತಟ್ಟಿಗೆ, ಒಯ್ದು, ಅವರಲ್ಲಿ ಒಬ್ಬನೂ ಉಳಿಯದಂತೆ ವ್ಯವಸ್ಥೆ ಮಾಡುವೆನು ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ರಾಮರಾಜನಿಗೆ ಕೌತುಕವಾಯಿತು; ಆದರೆ ಆತನು ರಣಮಸ್ತಖಾನನನ್ನು ಕುರಿತು- “ನೀನು ಇನ್ನೂ ಹುಡುಗನು. ನಿನ್ನನ್ನು ಅಂಥ ಮಹತ್ವದ ಸ್ಥಳಕ್ಕೆ ಕಳಿಸಿದರೆ, ನಮ್ಮ ಸೈನಿಕರು ಹ್ಯಾಗೆ ಒಡಂಬಟ್ಟಾರು? ಆ ಕೆಲಸವನ್ನು ನನ್ನ ಬಂಧುವಾದ ತಿರುಮಲನು ಮಾಡುವನು. ಆತನೇ ಆ ಕೆಲಸ ಮಾಡಲಿಕ್ಕೆ ವಿರಾಧಿವೀರನು. ನೀನು ಮಧ್ಯಭಾಗದಲ್ಲಿಯೇ ಇರಬೇಕಾಗುವದು. ನಿಮ್ಮ ಪರಾಕ್ರಮವನ್ನು ನಾನು ಕಣ್ಣುಮುಟ್ಟಿ ನೋಡಬೇಕಾಗಿದೆ” ಎಂದು ಹೇಳಿದನು. ಆಗ ರಣಮಸ್ತಖಾನನು ನಿರ್ವಾಹವಿಲ್ಲದೆ- “ಹಾಗೇ ಆಗಲಿ, ನನ್ನ ಪರಾಕ್ರಮವನ್ನು ತಾವು ಕಣ್ಣಮುಟ್ಟಿ ನೋಡಬಹುದು, ಅದನ್ನು ತಮಗೆ ತೋರಿಸುವ ಇಚ್ಛೆಯು ನನಗೆ ವಿಶೇಷವಾಗಿರುತ್ತದೆ. ಶತ್ರುವು ಮೈಮೇಲೆ ಬಂದು ಬೀಳಲಂದರಾಯಿತು. ಆಗ ನನ್ನ ಹಾಗು ನನ್ನ ಸೈನ್ಯದ ಪರಾಕ್ರಮವು ಗೊತ್ತಾಗುವದು” ಎಂದು ಹೇಳಿದನು. ರಣಮಸ್ತಖಾನನು ಹೀಗೆ ಸಮಾಧಾನದಿಂದ, ಆದರೆ ಧಿಮಾಕಿನಿಂದ ಕೊಟ್ಟ ಉತ್ತರವನ್ನು ಕೇಳಿ, ರಾಮರಾಜನು ಬಹಳ ಸಂತೋಷಪಟ್ಟು- “ನೀನು ನಿಜವಾದ ಶೂರನ ಹೊಟ್ಟೆಯಲ್ಲಿ ಹುಟ್ಟಿರುವೆ” ಎಂದು ನುಡಿದನು. ಹೀಗೆ ನುಡಿಯುತ್ತಿರವಾಗ ರಣಮಸ್ತಖಾನನ್ನು ಆತನು ಅತ್ಯಂತ ವಾತ್ಸಲ್ಯದಿಂದ ಎವೆಯಿಕ್ಕದೆ ನೋಡಿದನು. ಈ ಸಂಭಾಷಣಗಳಾದ ಒಂದೆರಡು ದಿನಗಳ ಮೇಲೆ ಶತ್ರುಗಳ ಸೈನ್ಯಗಳು ವಿಜಾಪುರದಿಂದ ಹೊರಟು ಮುಂದಕ್ಕೆ ಸಾಗಿಬಂದವೆಂಬ ಸುದ್ದಿಯು ಬಂದಿತು. ವಿಜಯನಗರದಲ್ಲಿದ್ದ ವಿಜಾಪುರದ ವಕೀಲನು ಹೊರಟುಹೋದನು. ಇನ್ನು ಮೇಲೆ ಯುದ್ಧವು ನಿಶ್ಚಯವಾಗಿ ಅರಂಭವಾಗುವದೆಂದು ಎಲ್ಲರಿಗೆ ಗೊತ್ತಾಯಿತು; ಆದರೆ ರಾಮರಾಜನು ತನ್ನ ಮತದಿಂದ ಪರಮಾವಧಿಯಾಗಿ ಸೈನ್ಯವನ್ನು ಸಜ್ಜುಗೊಳಿಸಿದ್ದರಿಂದ, ಆತನಿಗೆ ಯಾತರ ಹೆದರಿಕೆಯೂ ಇದ್ದಿಲ್ಲ.
ರಾಮರಾಜನು ಸ್ವಚ್ಛಂದವೃತ್ತಿಯವನು. ಒಮ್ಮೆ ಏನಾದರೂ ಮಾಡಬೇಕೆಂದು ಅವನ ಮನಸ್ಸಿನಲ್ಲಿ ಹೊಕ್ಕರೆ, ಅದನ್ನು ಅವನು ಮಾಡಿಯೇ ತೀರುವನು. ರಣಮಸ್ತಖಾನನು ತನ್ನ ಮಗನೆಂತಲೂ, ಮಾಸಾಹೇಬರು ತನ್ನ ಪ್ರಿಯ ಮೆಹೆರಜಾನಳೆಂತಲೂ, ಲೈಲಿಯು ಆಕೆಯ ದಾಸಿಯೆಂತಲೂ ಆತನ ನಿಶ್ಚಯಿಸಿದ್ದನು, ಧನಮಲ್ಲನು ಆತನ ನಿಶ್ಚಯವನ್ನು ಬಲಪಡಿಸಿದ್ದನು. ಆದ್ದರಿಂದ ತಾನು ಒಮ್ಮೆ ಪ್ರತ್ಯಕ್ಷ ಮೆಹೆರಜಾನಳನ್ನು ಕಂಡು ಆಕೆಯ ಕ್ಷಮೆ ಬೇಡಬೇಕೆಂದು ಒಮ್ಮೆ ರಾತ್ರಿ ಆತನು ಕುಂಜವನಕ್ಕೆ ಹೋದದ್ದನ್ನು ವಾಚಕರು ಬಲ್ಲರು. ಆಗ ಮಾಸಾಹೇಬರು ಪುಷ್ಕರಣಿಯಲ್ಲಿ ಹಾರಿಕೊಂಡನೆಂತಲೂ, ವಾಚಕರು ನೆನಪಿನಲ್ಲಿಟ್ಟುಕೊಂಡಿರಬಹುದು. ಈ ಪ್ರಸಂಗ ಒದಗಿದ ಬಳಿಕ ಕುಂಜವನದಲ್ಲಿ ರಣಮಸ್ತಖಾನನ ಜನರು ಯಾರೂ ಉಳಿದಿದ್ದಿಲ್ಲ. ಒಂದು ರೀತಿಯಿಂದ ಈಗ ಕುಂಜವನವು ಹಾಳುಬಿದ್ದಂತೆ ಆಗಿತ್ತು; ಇತ್ತ ಮೂವರು ಬಾದಶಹರು ವಿಜಯನಗರದ ಮೇಲೆ ಸಾಗಿಬರುತ್ತಿರುವರೆಂಬ ಸುದ್ದಿಗಳು ಬರತೊಡಗಿದ್ದವು. ಈ ಸ್ಥಿತಿಯಲ್ಲಿ ರಾಮರಾಜನು ನಿಶ್ಚಿಂತ ಪುರುಷನಂತೆ ಕುಂಜವನಕ್ಕೆ ಹೋಗಿ, ಅಲ್ಲಿಯ ಕಾವಲುಗಾರರಿಗೆ- “ನೀವು ಕುಂಜವನವನ್ನೂ, ಅಲ್ಲಿಯ ಬಂಗಲೆಯನ್ನೂ, ಪುಷ್ಕರಿಣಿಯನ್ನೂ ಮೊದಲಿನಂತೆ ಇನ್ನು ನಾಲ್ಕು ದಿನಗಳಲ್ಲಿ ಶೃಂಗರಿಸಲಿಕ್ಕೆ ಬೇಕೆಂದು ಆಜ್ಞಾಪಿಸಿದನು. ಸಾವಿರಾರು ಜನರನ್ನು ಬಿಟ್ಟಿಯ ಹಿಡಿದರೂ ಚಿಂತೆಯಿಲ್ಲ. ಕುಂಜವನವು ಮೊದಲಿನಂತೆ ಆಗಲಿಕ್ಕೆ ಬೇಕೆಂತಲೂ ಹಾಗೆ ಆಗದಿದ್ದರೆ ನಿಮಗೆ ಶಾಸನ ವಾದೀತೆಂತಲೂ ನಿಷ್ಟುರವಾಗಿ ಹೇಳಿದನು. ಯುದ್ಧಪ್ರಸಂಗ ಒದಗಿರಲು ರಾಮರಾಜನು ಹೀಗೆ ತೊಟ್ಟಪಟ್ಟಿಗಳ ವ್ಯವಸ್ಥೆ ಮಾಡುವದನ್ನು ನೋಡಿ ಕಾವಲುಗಾರರಿಗೆ ಆಶ್ಚರ್ಯವಾಯಿತು; ಆದರೆ ರಾಮರಾಜನಿಗೆ ವಿರುದ್ಧವಾಗಿ ಯಾರು ಮಾತಾಡಬೇಕು ? ಅವರು ಈ ಕುಂಜವನದಲ್ಲಿಯೇ ಯುದ್ದದ ಒಳಸಂಚುಗಳೇನಾದರೂ ನಡೆಯಬೇಕಾಗಿರಬಹುದು ಎಂದು ತಿಳಿದರು. ಹ್ಯಾಗಿದ್ದರೂ ಅವರು ರಾಮರಾಜನ ಅಪ್ಪಣೆಯಂತೆ ನಡೆಯಲೇಬೇಕಾಗಿತ್ತು. ಅವರು ಹಗಲು ರಾತ್ರಿ ಶ್ರಮಪಟ್ಟು ನಾಲ್ಕು ದಿನಗಳಲ್ಲಿ ಕುಂಜವನವನ್ನು ಶೃಂಗರಿಸಿದರು, ಮೂರನೆಯ ದಿವಸ ಸಂಜೆಗೆ ಮೆಹೆರ್ಜಾನಳೂ (ಮಾಸಾಹೇಬರೂ) ಮಾರ್ಜೀನೆಯೂ ಎಲ್ಲಿಂದಲೋ ಕುಂಜವನಕ್ಕೆ ಬಂದು ತಾವು ಹಿಂದಕ್ಕೆ ಇದ್ದ ಬಂಗಲೆಯಲ್ಲಿ ಇರತೊಡಗಿದರು. ಹೀಗೆ ಇವರಿಬ್ಬರು ಹೆಣ್ಣು ಮಕ್ಕಳು ಎಲ್ಲಿಗೋ ಹೋದವರು, ಅಕಸ್ಮಾತ್ತಾಗಿ ಬಂದದ್ದನ್ನು ನೋಡಿ ಕಾವಲುಗಾರರಿಗೆ ಪರಮಾಶ್ಚರ್ಯವಾಯಿತು. ಅವರಿಗೆ ಮಾಸಾಹೇಬರು ಪುಷ್ಕರಣಿಯಲ್ಲಿ ಹಾರಿಕೊಂಡರೆಂಬದು ಗೊತ್ತಿಲ್ಲ. ಮಾಸಾಹೇಬರು ತಮ್ಮ ದಾಸಿಯೊಡನೆ ಎಲ್ಲಿಯೋ ಹೊದರೆಂದು ಅವರು ತಿಳಕೊಂಡಿದ್ದರು.
ಈ ಪುಷ್ಕರಣಿಯಲ್ಲಿ ಹಾರಿಕೊಂಡ ಮಾಸಾಹೇಬರನ್ನು ರಾಮರಾಜನು ಹೊರಗೆ ತೆಗೆದು, ಕುಂಜವನದಿಂದ ಹೊರಡಿಸಿ, ಬೇರೆಕಡೆಯಲ್ಲಿಡಿಸಿದ್ದನು; ಆದರೆ ಅವರಿಗೆ ತನ್ನ ಗುರುತು ಹತ್ತುಗೊಟ್ಟಿದ್ದಿಲ್ಲ; ಅವರೊಡನೆ ತಾನು ಮಾತಾಡಿದ್ದಿಲ್ಲ. ತಮ್ಮನ್ನು ರಾಮರಾಜನೇ ತೆಗೆದನೆಂದು ಮಾಸಾಹೇಬರಿಗೂ ಗೊತ್ತಾಗಿದ್ದಿಲ್ಲ. ಅವರು ಎಚ್ಚರದಪ್ಪಿ ಬಿದ್ದವರು ತಿರುಗಿ ಎಚ್ಚತ್ತು ನೋಡುವಾಗ ಯಾವ ಮನೆಯಲ್ಲಿಯೋ ಮಂಚದ ಮೇಲೆ ಮಲಗಿದ್ದರು. ತಾವು ಪುನಃ ಬದುಕಿ ಉಳಿದದ್ದಕ್ಕಾಗಿ ಅವರಿಗೆ ಪರಮಾವಧಿ ವ್ಯಸನವಾಗಿತ್ತು ಅದರಲ್ಲಿ ಅವರು ಕುಂಜವನವನ್ನು ಸ್ಮರಿಸಲು ಕೂಡ ಇಚ್ಛಿಸದಿರುವಾಗ ಈಗ ಪುನಃ ಕುಂಜವನದ ವಾಸವು, ಅದರಲ್ಲಿ ತಾವು ಹಿಂದಕ್ಕೆ ತಾರುಣ್ಯದಲ್ಲಿ ಇದ್ದ ಬಂಗಲೆಯಲ್ಲಿಯೇ ಇರುವ ಪ್ರಸಂಗವು ಒದಗಿದ್ದರಿಂದ ಅವರಿಗೆ ಬಹಳ ವ್ಯಸನವಾಯಿತು. ಅವರಿಗೆ ಅನ್ನ-ನೀರುಗಳು ಬೇಡಾದವು. ಲೈಲಿಯ ಸಂಗಡ ಸಹ ಅವರು ಅಪರೂಪವಾಗಿ ಮಾತಾಡಹತ್ತಿದರು. ಹೀಗಿರುವಾಗ ಧನಮಲ್ಲನು ಅವರ ಕಣ್ಣಿಗೆ ಬಿದ್ದನು. ಅವನನ್ನು ಕಂಡಕೂಡಲೆ ಭಯದಿಂದ ಮಾಸಾಹೇಬರ (ಮೆಹೆರ್ಜಾನಳ) ಸರ್ವಾಂಗದಲ್ಲಿ ಕಂಪನವು ಉತ್ಪನ್ನವಾಯಿತು. ಈ ಕೃಷ್ಣಸರ್ಪವು ಹಿಂದಕ್ಕೆ ಒಂದುಸಾರೆ ಅಕಸ್ಮಾತ್ ಬಂದು, ನಡುವೆ ಕೆಲವು ದಿನ ಆಕಸ್ಮಾತ್ ಗುಪ್ತವಾಗಿ, ಈಗ ಮತ್ತೆ ಎಲ್ಲಿಂದ ಬಂದಿತೆಂದು ಅವರು ಚಿಂತಿಸಿದರು. ಪುನಃ ಈತನು ಮೊದಲಿನಂತೆ ರಾಮರಾಜನ ನೌಕರನಾಗಿ ನನ್ನನ್ನು ಕಾಯಲಿಕ್ಕೆ ಬಂದಿರುವನೆಂದು ಅವರು ತರ್ಕಿಸಿದರು. ಧನಮಲ್ಲನು ಮೊದಲಿನಂತೆ ಮೂಕನಾಗಿಯೇ ಇದ್ದನು. ಇದನ್ನೆಲ್ಲ ಮನಸ್ಸಿನಲ್ಲಿ ತಂದು ಮಾಸಾಹೇಬರು ತಮ್ಮ ಲೈಲಿಯನ್ನು ಕುರಿತು- “ಲೈಲಿ, ಈ ಅರಿಷ್ಟವು ಮತ್ತೆ ಎಲ್ಲಿಂದ ಬಂದೀತು? ಇದನ್ನು ನೋಡಿದ ಕೂಡಲೆ ನನ್ನ ಹೃದಯವು ತಲ್ಲಣಿಸುತ್ತದೆ ಈ ದುರುಳನಿಂದ ನನ್ನ ಅಂತವಾಗುವದೆಂಬ ಭಾವನೆಯು ನನಗಾಗಹತ್ತಿದೆ. ಈತನನ್ನು ಹೊರಗೆ ಹಾಕುವದಂತು ನನ್ನ ಕೈಯೊಳಗಿಲ್ಲ; ಆದರೆ ನೀನು ಈತನು ನನ್ನ ಕಣ್ಣಿಗೆ ಬೀಳದಂತೆ ಮಾಡು, ಎಂದು ಹೇಳಿದರು. ಈಗ ಲೈಲಿಯ ಕೈಯಿಂದ ಏನೂ ಆಗುವಹಾಗಿದ್ದಿಲ್ಲ ; ಆದರೆ ಕರ್ಮಧರ್ಮ ಸಂಯೋಗದಿಂದ ರಾಮರಾಜನೇ ಧನಮಲ್ಲನಿಗೆ ಬಂಗಲೆಯೊಳಗೆ ಹೋಗಲಾಗದೆಂದು ಆಜ್ಞಾಪಿಸಿದ್ದನು. ಮಾಸಾಹೇಬರು ಹೊರಗೆ ಬಾರದಂತೆಯೂ, ಹೊರಗೆ ಬಂದರೂ ಪುಷ್ಕರಣಿಯ ಕಡೆಗೆ ಅವರು ಕಾಲು ಇಡದಂತೆಯೂ, ಪುಷ್ಕರಣಿಯಲಿ ಕಾಲು ಇಟ್ಟರೂ ಅವರು ಪುಷ್ಕರಣಿಯಲ್ಲಿ ಹಾರಿಕೊಳ್ಳದಂತೆಯೂ, ಅವರು ಪುಷ್ಕರಣಿಯಲ್ಲಿ ಹಾರಿಕೊಂಡರೂ ನೀನು ಕೂಡಲೇ ಅವರನ್ನು ಹೊರಗೆ ತೆಗೆದು ನನಗೆ ಸುದ್ದಿಯನ್ನು ಮುಟ್ಟಿಸುವಂತೆಯೂ ವ್ಯವಸ್ಥೆ ಮಾಡಬೇಕೆಂದು ರಾಮರಾಜನು ಧನಮಲ್ಲನಿಗೆ ಹೇಳಿದ್ದನು. ಆದ್ದರಿಂದ ಧನಮಲ್ಲನು ಬಂಗಲೆಯ ಹೊರಗೇ ಅದನ್ನು ಸುತ್ತು ಮುತ್ತು ಕಾಯುತ್ತಲಿದ್ದನು.
ಹೀಗಿರುವಾಗ, ರಾಮರಾಜನು ಬಂದನೆಂಬ ಸುದ್ದಿಯನ್ನು ಒಬ್ಬ ಸೇವಕನು ಮಾಸಾಹೇಬರ ಬಳಿಗೆ ಬಂದು ಹೇಳಿದನು. ಅದನ್ನು ಕೇಳಿದ ಕೂಡಲೆ ಮಾಸಾಹೇಬರ ಹುಬ್ಬುಗಳು ಗಂಟಿಕ್ಕಿದವು. ಅವರ ಸರ್ವಾಂಗವು ಸಂತಪ್ತವಾಯಿತು. ಮುಖವು ಕೆಂಪಾಯಿತು. ತುಟಿಗಳು ಥರಥರ ನಡುಗಹತ್ತಿದವು. ಅವರು ಆ ಸೇವಕನಿಗೆ- “ಹೋಗು, ನೀನು ಹೋಗಿ ಅವರಿಗೆ ಸ್ಪಷ್ಟವಾಗಿ ಹೇಳು. ನಾನು ಪರಪುರಷರ ಮುಖವನ್ನು ನೋಡವದಿಲ್ಲ. ನಾನು ಪರಾಧೀನಳಿರುವೆನೆಂದು ತಿಳಿದು, ಬಲಾತ್ಕಾರದಿಂದ ಅವರು ಒಳಗೆ ಬಂದರೆ. ಅವರ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ” ಎಂದು ನುಡಿದು, ಮಾಸಾಹೇಬರು ತಮ್ಮ ಬುರುಕಿಯನ್ನು ಮೈತುಂಬ ಹೊದ್ದುಕೊಂಡರು. ಈ ಪ್ರಸಂಗವನ್ನು ನೋಡಿ ಲೈಲಿಯು ಇನ್ನು ಪರಿಣಾಮವು ನೆಟ್ಟಗಾಗದೆಂದು ಭಾವಿಸಿ, ಒಮ್ಮೆ ಮಾಸಾಹೇಬರನ್ನೂ, ಒಮ್ಮೆ ಸೇವಕನನ್ನೂ ನೋಡುತ್ತ ನಿಂತುಕೊಂಡಳು. ಇತ್ತ ಸೇವಕನು ಇಂಥ ಉದ್ಧಟತನದ ಉತ್ತರವನ್ನು ಮಹಾರಾಜರ ಮುಂದೆ ಹ್ಯಾಗೆ ಹೇಳಬೇಕೆಂದು ಯೋಚಿಸುತ್ತ ಕೆಲವುಹೊತ್ತು ಸುಮ್ಮನೆ ನಿಂತುಕೊಂಡನು, ರಾಮರಾಜನ ಬಳಿಗೆ ಹೋಗಲಿಕ್ಕೆ ಆತನ ಕಾಲುಗಳು ಏಳದಾದವು. ಕಡೆಗೆ ಆತನು ದಾಸಿಯ ಕಡೆಗೆ ಹೊರಳಿ, ಆಕೆಯನ್ನು ಕುರಿತು- “ಮಹಾರಾಜನಿಗೆ ಈ ಮಾತುಗಳನ್ನು ನಾನು ಹ್ಯಾಗೆ ಹೇಳಲಿ ? ಮಹಾರಾಜರನ್ನು ಇಲ್ಲಿಂದ ಹೊರಗೆಹಾಕಲಿಕ್ಕೆ ಯಾರು ಸಮರ್ಥರು ? ನಾನು ಹೋಗಿ ಹೀಗೆ ಇದ್ದಕ್ಕಿದ್ದ ಹಾಗೆ ಹೇಳಿದರೆ ಅವರು ನನ್ನ ತಲೆ ಹಾರಿಸುವದರಲ್ಲಿ ಸಂಶಯವಿಲ್ಲ. ನೀವು ಮೊದಲು ಮಹಾರಾಜರನ್ನು ಒಳಗೆ ಬರಗೊಡಿರಿ. ಆಮೇಲೆ ಏನು ಹೇಳುವದನ್ನು ಅವರ ಮುಂದೆ ಹೇಳಿ ಬಿಡರಿ; ಆದರೆ ಇಂಥ ಭಯಂಕರವಾದ ಉತ್ತರವನ್ನು ಹೇಳುವ ಪ್ರಸಂಗವನ್ನು ನನ್ನ ಪಾಲಿಗೆ ಮಾತ್ರ ತರಬೇಡಿರಿ: ಎಂದು ಹೇಳಿದನು. ಅದಕ್ಕೆ ಮಾಸಾಹೇಬರು ಏನೂ ಮಾತಾಡಲಿಲ್ಲ; ಆದರೆ ಅದರ ಬಲವನ್ನು ನೋಡಿ ಲೈಲಿಯು, ಆ ಸೇವಕನನ್ನು ಕುರಿತು-ಅಪ್ಪಾ, ನೀನೇನು, ಹೇಳಿ ಕೇಳಿ ನೌಕರನು, ಕೈಯೊಳಗಿನ ಕಲ್ಲು ಇದ್ದ ಹಾಗೆ. ಅವರ ಮಾತನ್ನು ಇಲ್ಲಿ ಹೇಳಿದಂತೆ, ಇವರ ಮಾತನ್ನು ಅಲ್ಲಿ ಹೇಳಿಬಿಡೆಂದರಾಯಿತು. ಸುಮ್ಮನೆ ನಿನ್ನ ತಲೆ ಯಾಕೆ ಹಾರಿಸುವರು ? ಹೋಗು, ಈಗ ಹೇಳಿದಷ್ಟು ನಿಮ್ಮ ಮಹಾರಾಜರ ಮುಂದೆ ಹೇಳು ಹೋಗು, ಎಂದು ಹೇಳಿದಳು; ಆದರೂ ಆ ಸೇವಕನ ಕಾಲುಗಳು ಏಳುಲೊಲ್ಲವು. ಆತನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಕೊಂಡು–ಮಾಸಾಹೇಬ, ನಿಮ್ಮ ಈ ಮಾತುಗಳ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ ಎಂದನು. ಅದನ್ನು ಕೇಳಿ ಮಾಸಾಹೇಬರು ಸ್ವಲ್ಪ ಹೊತ್ತು ಸಂತಾಪದಿಂದ ಏನೂ ಮಾತನಾಡಲಿಲ್ಲ. ಆಮೇಲೆ ಅವರು ಆ ಸೇವಕನನ್ನು ಕುರಿತು ತಟ್ಟನೆ- “ನನ್ನನ್ನು ಛಲಿಸಬೇಕೆಂದು ನಿಮ್ಮ ಮಹಾರಾಜರು ನಿನ್ನನ್ನು ನನ್ನ ಬಳಿಗೆ ಕಳಿಸಿರುವರೋ ಏನು ? ನಾನು ಕೊಟ್ಟ ಉತ್ತರವನ್ನು ನಿನ್ನ ಒಡಯನಿಗೆ ಹೇಳು, ಮತ್ತು ಸ್ಪಷ್ಟವಾಗಿ ಹೀಗೆಯೂ ತಿಳಿಸುವೈರಿಗಳ ಕಡೆಯ ಹೆಣ್ಣುಮಕ್ಕಳನ್ನು ಹೀಗೆ ಪ್ರತಿಬಂಧದಲ್ಲಿಟ್ಟು, ಈವರೆಗೆ ಯಾವ ಹಿಂದೂ ಅರಸನೂ ಪೀಡಿಸಿರುವದಿಲ್ಲ; ಅಂಥ ನೀಚ ಕೆಲಸವನ್ನು ಈಗ ನೀವು ಮಾಡಿ ಕೀರ್ತಿಯನ್ನು ಸಂಪಾದಿಸುವಿರಿ. ಇದರಿಂದ ನಿಮ್ಮ ವಂಶದ ಹಾಗೂ ಇಡಿಯ ಕ್ಷತ್ರಿಯ ಕುಲದ ಉದ್ದಾರವು ಬಹಳ ಚೆನ್ನಾಗಿ ಆಗುವದು !”
ಮಾಸಾಹೇಬರ ಈ ಮಾತುಗಳನ್ನು ಕೇಳಿ, ಇನ್ನು ಈ ಹೆಣ್ಣು ಮಗಳ ಮುಂದೆ ನಿಂತುಕೊಳ್ಳುವುದರಲ್ಲಿ ಅರ್ಥವಿಲ್ಲೆಂದು ತಿಳಿದು, ಆ ಸೇವಕನು ರಾಮರಾಜನ ಬಳಿಗೆ ಹೋಗಿ ತನ್ನಿಂದಾದಷ್ಟು ಸೌಮ್ಯರೀತಿಯಿಂದ, ಎಡಚಡಚಾಡುತ್ತ ಮಾಸಾಹೇಬರು ಕೊಟ್ಟ ಉತ್ತರವನ್ನು ಹೇಳಿದನು, ಅದರಿಂದ ರಾಮರಾಜನ ಸಮಾಧಾನವಾಗಲಿಲ್ಲ. ಸೇವಕನು ಎನೋ ಮುಚ್ಚುತ್ತಾನೆಂದು ತಿಳಿದು ರಾಮರಾಜನು ಆವನನ್ನು ಕುರಿತು-"ನೀನು ಯಥಾಸ್ಥಿತವಾಗಿ ಇದ್ದದ್ದನ್ನೆಲ್ಲ ಹೇಳು. ಒಂದು ಮಾತನ್ನು ಸಹ ಮುಚ್ಚಬೇಡ” ಎಂದು ಗದರಿಸಿದನು, ಆಗ ಸೇವಕನು ನಿರುಪಾಯನಾಗಿ, ಮಾಸಾಹೇಬರು ಆಡಿದ ಎಲ್ಲ ಮಾತುಗಳನ್ನು ಇದ್ದಕ್ಕಿದ್ದ ಹಾಗೆ ಹೇಳಿದನು. ಅದನ್ನು ಕೇಳಿ ರಾಮರಾಜನು ಅರ್ಧತಾಸು ಸುಮ್ಮನೆ ನಿಂತುಕೊಂಡನು. ಆಮೇಲೆ ಆತನು ಸೇವಕನಿಗೆ ಆಕೆಯ ವೃದ್ದ ದಾಸಿಯಾದ ಲೈಲಿಯು ಇರುತ್ತಾಳಲ್ಲ, ಆಕೆಯನ್ನು ಇತ್ತ ಕಡೆಗೆ ಕರಕೊಂಡು ಬಾ ಎಂದು ಹೇಳಿದನು. ಅದರಂತೆ ಸೇವಕನು ಹೋಗಿ ಲೈಲಿಯನ್ನು ಕರೆದನು. ಲೈಲಿಯು ಮಾಸಾಹೇಬರ ಕಡೆಗೆ ನೋಡಿ ಏನೋ ಮಾತಾಡಬೇಕೆನ್ನುತ್ತಿರಲು, ಮಾಸಾಹೇಬರು, ಹೋಗು, ನೀನು ಹೋಗಲಿಕ್ಕೇನೂ ಪ್ರತಿಬಂಧವಿಲ್ಲ; ಆದರೆ ಆತನು ನನ್ನ ಬಳಿಗೆ ಬರಲಾಗದು ಸರ್ವಥಾ ಇಲ್ಲಿಗೆ ಬರಲಾಗದೆಂದು ಆತನಿಗೆ ಸಷವಾಗಿ ಹೇಳು, ಬಂದರೆ ನಾನು ಮುಖಾವಲೋಕವನ್ನು ಮಾಡಲಿಕ್ಕಿಲ್ಲವೆಂತಲೂ ತಿಳಿಸು ಎಂದು ಹೇಳಲು ಲೈಲಿಯು ದಿಟ್ಟತನದಿಂದ ರಾಮರಾಜನ ಎದುರಿಗೆ ಬಂದು ನಿಂತುಕೊಂಡಳು.
- * * *