ಕನ್ನಡಿಗರ ಕರ್ಮ ಕಥೆ/ನಿಗ್ಗರದ ಉತ್ತರ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೨೧೯-೨೨೬

೨೪ನೆಯ ಪ್ರಕರಣ

ಬಾದಶಹನ ಪತ್ರವು

ಮೇಲೆ ಹೇಳಿದ ಪ್ರಸಂಗವು ಒದಗಿ ಎಂಟು ದಿವಸವಾಗಿರಬಹುದು, ಆಗಿರಲಿಕ್ಕಿಲ್ಲ; ಅಷ್ಟರಲ್ಲಿ ವಿಜಾಪುರದ ಬಾದಶಹರು ತನ್ನ ಎರಡನೆಯ ವಕೀಲನ ಮುಖಾಂತರ ರಣಮಸ್ತಖಾನನ ಸಂಬಂಧದಿಂದ ರಾಮರಾಜನಿಗೆ ಸಷ್ಟವಾಗಿ ಪತ್ರ ಬರೆದು ಕೇಳಿದನು. ಬಾದಶಹನು ತನ್ನ ಆ ಪತ್ರದಲ್ಲಿ ರಾಮರಾಜನಿಗೆ ನಿಮ್ಮ ಕಡೆಗೆ ನಮ್ಮ ವಕೀಲನನ್ನಾಗಿ ಕಳಿಸಿದ್ದ ರಣಮಸ್ತಖಾನನನ್ನು, ನೀವು ನಮ್ಮನ್ನು ಕೇಳದೆ ನೌಕರಿಗೆ ಹಾಗೆ ಇಟ್ಟುಕೊಂಡಿರಿ ? ಆತನು ನಮ್ಮ ಮೇಲೆ ತಿರುಗಿಬಿದ್ದು ನಿಮ್ಮ ಕಡೆ ಬಂದಿರಬಹುದು; ಅಥವಾ ನೀವೇ ಆತನನ್ನು ಮೋಸಗೊಳಿಸಿ ನಿಮ್ಮ ಕಡೆಗೆ ಮಾಡಿಕೊಂಡಿರಬಹುದು, ಹ್ಯಾಗಿದ್ದರೂ ರಣಮಸ್ತಖಾನನಂಥ ದ್ರೋಹಿಗೆ ನೀವು ಆಶ್ರಯ ಕೊಡತಕ್ಕದ್ದಿದ್ದಿಲ್ಲ. ಇದರಿಂದ ನಮ್ಮ ನಿಮ್ಮ ಸ್ನೇಹಸಂಬಂಧಕ್ಕೆ ಕೊರತೆಯುಂಟಾಗಿರುತ್ತದೆ. ನಮ್ಮ ವಿಶ್ವಾಸದವನೆಂದು ರಣಮಸ್ತಖಾನನನ್ನು ನಿಮ್ಮ ಕಡೆಗೆ ವಕೀಲನನ್ನಾಗಿ ನಿಯಮಿಸಿ ಕಳುಹಿಸಿರಲು, ಆತನು ಈಗ ವಿಶ್ವಾಸಘಾತ ಮಾಡಿರುವದರಿಂದ ಸ್ವಾಮಿ ದ್ರೋಹವು ಆತನಿಂದ ಘಟಿಸಿರುವದು, ಆದ್ದರಿಂದ ನೀವು ಈ ಮಾತಿನ ಪೂರ್ಣ ವಿಚಾರಮಾಡಿ ನಮ್ಮ ಮನುಷ್ಯನನ್ನು ನಮ್ಮ ಕಡೆಗೆ ತಿರುಗಿ ಕಳಿಸಬೇಕು. ಆತನ ಅಪರಾಧಕ್ಕಾಗಿ ಆತನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ಕೊಡುವವರಿದ್ದೇವೆ. ನೀವು ಆ ದ್ರೋಹಿಯನ್ನು ನಮ್ಮ ಕಡೆಗೆ ಕಳಿಸಿಕೊಡದಿದ್ದರೆ, ನಮ್ಮ ನಿಮ್ಮ ಸ್ನೇಹಸಂಬಂಧವನ್ನು ಮುರಿಯುವ ಉದ್ದೇಶದಿಂದ ನೀವು ಬುದ್ಧಿಪೂರ್ವಕವಾಗಿಯೇ ಈ ಕೆಲಸ ಮಾಡಿರುವಿರೆಂದು ನಾವು ತಿಳಿಯುತ್ತೇವೆ. ಇದ್ದದ್ದರಲ್ಲಿ ನೆಟ್ಟಗಾಯಿತು, ರಣಮಸ್ತನು ಹೀಗೆ ಪ್ರಸಿದ್ಧ ರೀತಿಯಿಂದ ನಿಮ್ಮ ನೌಕರಿಗೆ ನಿಲ್ಲದೆ, ಗುಪ್ತರೀತಿಯಿಂದ ನಮ್ಮ ದ್ರೋಹ ಬಗೆದಿದ್ದರೆ ನಮಗೆ ಬಹಳ ತ್ರಾಸವಾಗುತ್ತಿತ್ತು. ಆತನು ಹೋದದ್ದರಿಂದ, ಅಥವಾ ನಿಮ್ಮನ್ನು ಕೂಡಿಕೊಂಡಿದ್ದರಿಂದ ಅಂಥವೇನೂ ನಮ್ಮ ಹಾನಿಯಾಗುತ್ತದೆನ್ನುವ ಹಾಗಿಲ್ಲ; ಆದರೆ ಹೀಗಾದದ್ದು ನಮ್ಮ ನಿಮ್ಮ ಸ್ನೇಹಸಂಬಂಧದ ದೃಷ್ಟಿಯಿಂದ ನೆಟ್ಟಗಾಗಲಿಲ್ಲೆಂಬದಿಷ್ಟೇ ನಾವು ನಿಮಗೆ ತಿಳಿಸಿದೆವು, ರಣಮಸ್ತಖಾನನು ನಮ್ಮ ತಾಬೆದಾರನು, ನಮ್ಮ ಅಪರಾಧಿಯು; ಆದ್ದರಿಂದ ಆತನನ್ನು ನಮ್ಮ ಎರಡನೆಯ ವಕೀಲನ ವಶಕ್ಕೆ ಒಪ್ಪಿಸಬೇಕು. ನಿಜವಾಗಿ ನೋಡಿದರೆ, ಆತನಿಂದ ನಿಮಗೇನೂ ಪ್ರಯೋಜನವಾಗಲಿಕ್ಕಿಲ್ಲ. ಆತನನ್ನು ನಂಬಿ ನೀವು ಕೆಡುವ ಸಂಭವವೇ ವಿಶೇಷವಾಗಿರುತ್ತದೆ; ಆದರೆ ನಮ್ಮ ನಿಮ್ಮ ಸ್ನೇಹಸಂಬಂಧಕ್ಕೆ ಸುಮ್ಮನೆ ಬಾಧೆ ಬರಬಾರದೆಂದು ನಾವು ನಿಮ್ಮನ್ನು ಹೀಗೆ ಕೇಳಿಕೊಂಡಿದ್ದೇವೆ. ನಮ್ಮ ಕೇಳಿಕೆಯಂತೆ ರಣಮಸ್ತನು ನಮ್ಮ ಅಪರಾಧಿಯೆಂದು ತಿಳಿದು, ಆತನನ್ನು ಕೂಡಲೇ ನಮ್ಮ ವಕೀಲನ ಸ್ವಾಧೀನಪಡಿಸಬೇಕು. ಸದ್ಯಕ್ಕೆ ನಿಮಗೆ ನಾವು ಇಷ್ಟೇ ಸೂಚಿಸುವೆವು. ಸುಜ್ಞರಿಗೆ ಹೆಚ್ಚಿಗೆ ಬರೆಯಲವಶ್ಯವಿಲ್ಲ.

ಬಾದಶಹನು ರಾಮರಾಜನಿಗೆ ಬರೆದ ಪತ್ರದ ಸಾರಾಂಶವು ಮೇಲೆ ಬರೆದಂತೆ ಇತ್ತು. ಬಾದಶಹನ ಮೂಲಪತ್ರವು ಆಗಿನ ಪದ್ಧತಿಯಂತೆ ಬಹು ವಿಸ್ತಾರವಾಗಿ ಬರೆಯಲ್ಪಟ್ಟಿತ್ತು. ಬಾದಶಹನ ವಕೀಲನು ನೆರೆದ ದರ್ಬಾರದಲ್ಲಿ ಆ ಪತ್ರವನ್ನು ರಾಮರಾಜನಿಗೆ ಕೊಟ್ಟನು. ರಾಮರಾಜನು ಅದನ್ನು ತಕ್ಕೊಂಡನು. ಆತನು ತಾನೇ ಕೈಮುಟ್ಟಿ ಅದನ್ನು ಒಡೆದು, ಮನಸ್ಸಿನಲ್ಲಿಯೇ ಓದಿ ಒಮ್ಮೆ ನಕ್ಕನು. ಉಳಿದವರಿಗೆ ಅದರೊಳಗಿನ ಸಂಗತಿಯೇನೂ ಗೊತ್ತಾಗಲಿಲ್ಲ. ಅವರು ಒಂದೇಸವನೇ ರಾಮರಾಜನ ಕಡೆಗೆ ನೋಡುತ್ತಲಿದ್ದರು. ಆಗ ರಾಮರಾಜನು ಆ ವಕೀಲನನ್ನು ಕುರಿತು-ತಾವು ಕೊಟ್ಟ ಈ ಪತ್ರವು ನಮಗೆ ಮುಟ್ಟಿತು. ಅದನ್ನು ಕುರಿತು ನಾವು ಪೂರ್ಣ ವಿಚಾರಮಾಡಿ ಆಮೇಲೆ ಉತ್ತರ ಬರೆಯುವೆವು. ಈಗಲೇ ಅದರ ಉತ್ತರವನ್ನು ಬರೆಯುತ್ತಿದ್ದೆವು; ಆದರೆ ಹಾಗೆ ಮಾಡಿದರೆ, ಏನೂ ವಿಚಾರಮಾಡದೆ ಉತ್ತರ ಬರೆದರೆಂದು ನಿಮ್ಮ ಒಡೆಯರು ಅನ್ನಬಹುದು; ಆದ್ದರಿಂದ ವಿಚಾರಕ್ಕಾಗಿ ನಾಲ್ಕು ದಿನ ತಡೆದು, ಆಮೇಲೆ ನಮ್ಮ ವಕೀಲನ ಕೈಯಿಂದ ನಿಮ್ಮ ಕಡೆಗೆ ಉತ್ತರವನ್ನು ಕೊಟ್ಟುಕಳಿಸುವೆವು. ಈಗ ತೊಂದರೆ ಕೊಟ್ಟ ಬಗ್ಗೆ ತಾವು ಕ್ಷಮಿಸಬೇಕು-ಎಂದು ಹೇಳಿದನು. ರಾಮರಾಜನ ಆ ನಗೆಯ ರೀತಿಯೂ, ಮಾತಿನ ಬಗೆಯೂ ಬಾದಶಹನ ವಕೀಲನನ್ನು ಸಿಟ್ಟಿಗೆಬ್ಬಿಸುವ ಹಾಗಿದ್ದವು. ಅದನ್ನು ನೋಡಿ ಆ ವಕೀಲನು ಅಲ್ಲಿ ಕುಳಿತುಕೊಳ್ಳಲಾರದೆ ಹೊರಟುಹೋಗುವದಕ್ಕಾಗಿ ಎದ್ದುನಿಂತುಕೊಂಡನು. ಅಷ್ಟರಲ್ಲಿ ಆತನಿಗೆ ಪ್ರತಿಕೂಲವಾದ ಮತ್ತೊಂದು ಪ್ರಸಂಗವು ಒದಗಿತು. ರಾಮರಾಜನು ತನ್ನ ಬಳಿಯಲ್ಲಿಯೇ ನಿಂತುಕೊಂಡಿದ್ದ ರಣಮಸ್ತಖಾನನನ್ನು ನೋಡಿ ನಕ್ಕು, ಬಾದಶಹನ ಆ ಪತ್ರವನ್ನು ಆತನ ಕೈಯಲ್ಲಿ ಕೊಟ್ಟನು. ಅದನ್ನು ನೋಡಿದ ಕೂಡಲೇ ಆ ವಕೀಲನು ಸಿಟ್ಟಿನಿಂದ ಹುಬ್ಬು ಗಂಟಿಕ್ಕಿ, ಏನೋ ಒಟಗುಟ್ಟುತ್ತ ದರ್ಬಾರದ ರೀತಿಯಿಂದ ಕುರ್ನಿಸಾತ ಮೊದಲಾದದ್ದನ್ನೇನೂ ಮಾಡದೆ, ದರ್ಬಾರದಿಂದ ಹೊರಬಿದ್ದು ಹೋಗಿ, ಮೇಣೆಯಲ್ಲಿ ಕುಳಿತುಕೊಂಡು ತನ್ನ ಬಿಡಾರಕ್ಕೆ ನಡೆದನು. ವಕೀಲನು ಹೊರಟುಹೋದ ಕೂಡಲೇ, ರಾಮರಾಜನು ಬೇಗನೆ ದರ್ಬಾರು ಮುಗಿಸಿ, ರಣಮಸ್ತಖಾನನಿಗೆ- “ಈ ಪತ್ರವನ್ನು ಮನಸ್ಸುಗೊಟ್ಟು ಓದಿ, ಇನ್ನು ಒಂದು ಪ್ರಹರದ ಮೇಲೆ ತನ್ನ ಬಳಿಗೆ ಬರಬೇಕೆಂದು ಹೇಳಿ ಆತನನ್ನು ಕಳಿಸಿದನು. ಬಾದಶಹನ ಪತ್ರವನ್ನು ಓದಿದಾಗಿನಿಂದ ರಾಮರಾಜನ ವೃತ್ತಿಯು ಒಂದು ವಿಧವಾಯಿತು. ಆ ವೃತ್ತಿಯಲ್ಲಿ ಆನಂದವು ವಿಶೇಷವಾಗಿತ್ತು. ಈ ಪತ್ರದ ಉಪಯೋಗವು ಬಹಳ ಚೆನ್ನಾಗಿ ಆಗುವದೆಂದು ರಾಮರಾಜನು ತಿಳಕೊಂಡನು. ನಿನ್ನನ್ನು ಬೆನ್ನಿಗೆ ಹಾಕಿಕೊಂಡದ್ದರಿಂದ, ತಾನು ಎಂಥ ವಿಪತ್ತಿಗೆ ಗುರಿಯಾಗಬೇಕಾಯಿತೆಂಬದನ್ನು ಆತನು ರಣಮಸ್ತಖಾನನ ಮನಸ್ಸಿನಲ್ಲಿ ತುಂಬಬೇಕಾಗಿತ್ತು. ಅದೇ ಉದ್ದೇಶದಿಂದಲೇ ಆತನು ರಣಮಸ್ತಖಾನನ ಕೈಯಲ್ಲಿ ಬಾದಶಹನ ಪತ್ರವನ್ನು ಕೊಟ್ಟಿದ್ದನು. ರಣಮಸ್ತಖಾನನು ಕೇವಲ ಕೃತಜ್ಞತೆಯಿಂದ ಬಾದಶಹನ ವಿರುದ್ಧವಾಗಿ ತನಗೆ ಸಹಾಯ ಮಾಡಬೇಕೆಂಬುದೇ ರಾಮರಾಜನ ಉದ್ದೇಶವಾಗಿತ್ತು.

ಇತ್ತ ರಣಮಸ್ತಖಾನನು ಆ ಪತ್ರವನ್ನು ಏಕಾಂತದಲ್ಲಿ ಸ್ವಸ್ಥವಾಗಿ ಕುಳಿತು ಲಕ್ಷಪೂರ್ವಕವಾಗಿ ಓದಿ, ತನ್ನೊಳಗೆ ನಕ್ಕನು. ವಿಚಾರಮಾಡಿ ನೋಡಿದರೆ, ಅದರೊಳಗಿನ ಸಂಗತಿಯು ಅವನ ಎದೆಯೊಡೆಸುವ ಹಾಗೆ ಇದ್ದದ್ದರಿಂದ ಪತ್ರವನ್ನು ಆತನು ಭಯಗ್ರಸ್ತನಾಗಿ ಓದಬೇಕಾಗಿತ್ತು; ಆದರೆ ಭಯದ ಚಿಹ್ನವು ಲೇಶವಾದರೂ ಆತನ ಮುಖದಲ್ಲಿ ತೋರಲಿಲ್ಲ. ಇನ್ನು ರಾಮರಾಜರು ತನ್ನನ್ನು ಬಾದಶಹರ ಕಡೆಗೆ ಕಳಿಸದೆ, ತನ್ನ ಪಕ್ಷವಹಿಸಿ, ಬಾದಶಹನಿಗೆ ಏನಾದರೂ ಪತ್ರ ಬರೆಯುವರೆಂದು ಆತನು ನಿಶ್ಚಯವಾಗಿ ತಿಳಕೊಂಡಿದ್ದನು, ಆದರೂ ಅವನು ಆ ಪತ್ರವನ್ನು, ಪೆಟ್ಟಿನ ಮೇಲೆ ಪೆಟ್ಟು ಎರಡು ಸಾರೆ ಓದಿ, ಅದರೊಳಗಿನ ಸಂಗತಿಯನ್ನೆಲ್ಲ ಅಕ್ಷರಶಃ ತನ್ನ ತಲೆಯಲ್ಲಿ ತುಂಬಿಕೊಂಡಂತೆ ಮಾಡಿದನು, ಆಮೇಲೆ ಸ್ವಸ್ಥಮನಸ್ಸಿನಿಂದ ಊಟ ಮಾಡಿ-ಉಪಚಾರಗಳಾದ ಮೇಲೆ, ಆತನ ರಾಮರಾಜನ ಬಳಿಗೆ ಹೋದನು. ಆತನು ಬರುತ್ತಲೇ ರಾಮರಾಜನು ತನ್ನ ಬಳಿಯಲ್ಲಿದ್ದ ಜನರನ್ನೆಲ್ಲ ಹೊರಗೆ ಕಳಿಸಿ, ರಣಮಸ್ತಖಾನನಿಗೆ-ಯಾಕೆ ? ಓದಿದಿರೋ ಪತ್ರವನ್ನು ? ಅದಕ್ಕೆ ಉತ್ತರವೇನು ಬರೆಯಬೇಕು ? ಎಂದು ಕೇಳಿದನು. ಅದಕ್ಕೆ ರಣಮಸ್ತಖಾನನು

ರಣಮಸ್ತಖಾನ- (ಅತ್ಯಂತ ನಮ್ರಭಾವದಿಂದ) ಸರಕಾರ್‌, ತಾವು ಹೀಗೆಯೇ ಉತ್ತರ ಬರೆಯಿರೆಂದು ನಾನು ಹಾಗೆ ಹೇಳಲಿ ? ತಾವು ದೊಡ್ಡವರು, ವಿಚಾರವಂತರು, ಕರ್ತೃತ್ವಶಾಲಿಗಳು, ತಮ್ಮ ಮನಸ್ಸಿಗೆ ಬಂದಂತೆ ಉತ್ತರ ಬರೆಯಿರಿ. ತಾವು ಸಮರ್ಥರಿರುತ್ತೀರಿ. ನನ್ನ ಸಲುವಾಗಿ ನಿಮ್ಮ ಮೇಲೆಯೂ, ನಿಮ್ಮ ರಾಜ್ಯದ ಮೇಲೆಯೂ ಭಯಂಕರ ಪ್ರಸಂಗವನ್ನು ತಂದುಕೊಂಡು, ನನ್ನನ್ನು ಕಾಪಾಡಿರೆಂದು ನಾನು ತಮಗೆ ಹ್ಯಾಗೆ ಹೇಳಬೇಕು ! ತಮ್ಮ ಸವಿಮಾತಿಗೆ ಮರುಳಾಗಿ ಹಿಂದುಮುಂದಿನ ವಿಚಾರವಿಲ್ಲದೆ ನಾನು ತಮ್ಮ ಆಶ್ರಯಕ್ಕೆ ಬರಬೇಕಾದರೆ, ಮುಂದೆ ಆದದ್ದು ಆಗಲೆಂಬ ನಿಶ್ಚಯದಿಂದ ಬಂದಿದ್ದೇನೆ. ಅತ್ತ ವಿಜಾಪುರದ ದರ್ಬಾರದಲ್ಲಿದ್ದು, ಒಂದರಹಿಂದೊಂದು ಅಪಮಾನವನ್ನು ಸಹಿಸಲಿಕ್ಕೆ ನನ್ನ ಮನಸ್ಸು ಒಪ್ಪದಾಯಿತು. ನಾನು ಉತ್ತರ ಹಿಂದುಸ್ತಾನ, ಪಂಜಾಬ ಮೊದಲಾದವುಗಳ ಕಡೆಗೆ ಹೋಗಿ, ಯಾವ ಅರಸರ ಬಳಿಯಲ್ಲಾದರೂ ಇದ್ದು ಹೊಟ್ಟೆಯ ತುಂಬಿಕೊಳ್ಳಬೇಕೆಂದು ಮಾಡಿದ್ದೆನು ; ಹಾಗೆ ಮಾಡಿದ್ದರೆ ಬಾದಶಹರಿಗೆ ನನ್ನ ನೆನಪು ಸಹ ಉಳಿಯುತ್ತಿದ್ದಿಲ್ಲ ; ಆದರೆ ತಮ್ಮ ಸವಿಮಾತುಗಳು ನನ್ನನ್ನು ತಮ್ಮ ಕಡೆಗೆ ಎಳಕೊಂಡವು, ತಮ್ಮ ಕಡೆಗೆ ಬಂದದ್ದರಿಂದಲೇ ಬಾದಶಹರು ನನ್ನ ಮೇಲೆ ಇಷ್ಟು ಸಿಟ್ಟಾಗಿರುವರು. ಹಾಗೆ ಅವರು ಸಿಟ್ಟಾದದ್ದರಲ್ಲೇನೂ ಆಶ್ಚರ್ಯವಿಲ್ಲ. ಅವರ ಸ್ಥಿತಿಯಲ್ಲಿ ತಮಗಾದರೂ ಸಿಟ್ಟು ಬರುತ್ತಿತ್ತು. ಒಳ್ಳೇ ವಿಶ್ವಾಸದ ಸ್ಥಳದ ಮೇಲೆ ನಿಯಮಿಸಲಿಕ್ಕೆ ಯೋಗ್ಯನಾಗುವವರೆಗೆ ಬಾದಶಹರು ನನ್ನ ಯೋಗ್ಯತೆಯನ್ನು ಹೆಚ್ಚಿಸಿರಲು, ನಾನು ಒಮ್ಮೆಲೆ ಶತ್ರುಪಕ್ಷವನ್ನು ವಹಿಸಿದ ಬಳಿಕ, ಆವರಿಗೆ ಸಿಟ್ಟು ಬಾರದೆ ಏನು ಮಾಡೀತು ? ಆದ್ದರಿಂದ ಮಹಾರಾಜ, ನೀವು ವಿಚಾರಮಾಡಿ-ಪೂರ್ಣ ವಿಚಾರಮಾಡಿ, ನನಗೆ ಆಶ್ರಯವನ್ನು ಕೊಡಬೇಕು; ಇಲ್ಲವೆ ಬಾದಶಹರಿಗೆ ಒಪ್ಪಿಸಬೇಕು. ನೀವು ಹಾಗೆ ಮಾಡಿದರೂ ನನಗೆ ವ್ಯತ್ಯಾಸವಾಗುವ ಹಾಗಿಲ್ಲ. ನಾನು ಪೂರಾ ದಡ್ಡತನದಿಂದ ನಿಮ್ಮನ್ನು ಆಶ್ರಯಿಸಿ,ನಿಮ್ಮನ್ನು ಅವಲಂಬಿಸಿ ಕುಳಿತುಕೊಂಡಿರುತ್ತೇನೆ.

ರಾಮರಾಜ- “ನಾನು ಪೂರಾ ದಡ್ಡತನದಿಂದ ನಿಮ್ಮನ್ನು ಆಶ್ರಯಿಸಿದೆನೆಂದು ಯಾಕೆ ಅನ್ನುತ್ತೀರಿ ?

ರಣಮಸ್ತಖಾನ- ಹಾಗನ್ನದೆ ಮತ್ತೇನು ಮಾಡಲಿ ? ಸರಕಾರ್, ನನ್ನಿಂದ ಪೂರಾ ದಡ್ಡತನವಾಗಿದೆ. ನಾನು ಕೇವಲ ರಾಜದ್ರೋಹವನ್ನಷ್ಟೇ ಮಾಡಲಿಲ್ಲ. ನನ್ನಿಂದ ಮಾತೃದ್ರೋಹವೂ ಘಟಿಸಿರುತ್ತದೆ. ನನ್ನ ತಾಯಿಯು ಆತ್ಯಂತ ಧರ್ಮಿಷ್ಠಳು; ಅತ್ಯಂತ ದೃಢನಿಶ್ಚಯದವಳು. ಆಕೆಯು ನನ್ನ ಸಂರಕ್ಷಣ ಮಾಡುವಾಗ ಪಟ್ಟ ಶ್ರಮವನ್ನು ಮನಸ್ಸಿನಲ್ಲಿ ತಂದರೆ, ಆಕೆಯ ಕಾಲಿಗೆ ನನ್ನ ಮೈದೊಗಲ ಜೋಡುಮಾಡಿ ಹಾಕಿದರೂ ಆಕೆಯ ಉಪಕಾರವು ತೀರದು ! ಹೀಗಿದ್ದು ಆಕೆಯ ಮನಸ್ಸಿಗೆ ಬಾರದ ಕೆಲಸವನ್ನು ನಾನು ಮಾಡಿದೆನು. ನಿಮ್ಮ ಶಬ್ದಜಾಲದಲ್ಲಿ ಸಿಕ್ಕು, ಆ ಮಾತೃದೈವತ್ವನ್ನು ಕೂಡ ನಿರಾಕರಿಸಿ, ನಿಮ್ಮ ಬಳಿಗೆ ಬಂದುಬಿಟ್ಟೆನು. ಹೀಗೆ ನಾನು ಬಂದದ್ದನ್ನು ಕೇಳಿ ನನ್ನ ತಾಯಿಯು ಸಂತಾಪಗೊಂಡು ಪ್ರಾಣವನ್ನರ್ಪಿಸಿದಳೋ, ದೇಶತ್ಯಾಗ ಮಾಡಿದಳೋ ಯಾರಿಗೆ ಗೊತ್ತು ? ಆಕೆಯು ಕುಂಜವನದಿಂದ ಹೊರಟು ಹೋಗಿ, ಈಗ ಎಂಟು ದಿನಗಳಾಗುತ್ತ ಬಂದವು. ತಾಯಿಯ ಈ ಸ್ಥಿತಿಯ ಸ್ಮರಣವಾದ ಕೂಡಲೆ ನನ್ನ ಕೈ ಖಡ್ಗದಿಂದ ನನ್ನ ಶಿರಚ್ಛೇದ ಮಾಡಿಕೊಳ್ಳಬೇಕೆನ್ನುವ ಹಾಗೆ ನನಗೆ ಆಗುತ್ತದೆ. ಈಗ ಅನಾಯಾಸವೇ ಬಾದಶಹರಿಂದ ದೇಹಾಂತ ಪ್ರಾಯಶ್ಚಿತ್ತವು ನನಗೆ ಒದಗುವದರಿಂದ, ನನ್ನನ್ನು ವಿಜಾಪುರಕ್ಕೆ ಕಳಿಸಿಬಿಡಿರಿ; ಅಂದರೆ ಎಲ್ಲ ಪಾಪಗಳಿಗಾಗಿ ನನಗೆ ಪ್ರಾಯಶ್ಚಿತ್ತವು ದೊರೆತಂತಾಗುವದು. ರಾಜದ್ರೋಹ-ಮಾತೃದೋಹಗಳಿಗಾಗಿ ದೇಹಾಂತ ಪ್ರಾಯಶ್ಚಿತ್ತದ ಹೊರತು, ಬೇರೆ ಪ್ರಾಯಶ್ಚಿತ್ತವು ಯೋಗ್ಯವಾಗಲಾರದು. ದೇಹಾಂತ ಪ್ರಾಯಶ್ಚಿತ್ತದಿಂದಲಾದರೂ ನನ್ನ ಪಾಪದ ಕ್ಷಲನವಾಗುವದೋ ಇಲ್ಲವೋ ಯಾರಿಗೆ ಗೊತ್ತು ?

ರಾಮರಾಜ-ಎಲಲಾ! ನಿಮಗೆ ಬಹಳ ಪಶ್ಚಾತ್ತಾಪದಂತೆ ತೋರುತ್ತದೆ. ಆದ್ದರಿಂದ ಈಗ ನಿಮ್ಮ ಸಂಗಡ ಮಾತಾಡುವದರಿಂದ ವಿಶೇಷ ಪ್ರಯೋಜನವಾಗಕ್ಕಿಲಿಲ್ಲ, ನಿಮ್ಮ ತಾಯಿಯು ಇಲ್ಲದಹಾಗಾದ್ದರಿಂದ, ನಿಮ್ಮ ಮನಸ್ಸು ಬಹಳ ನೊಂದಿರುವದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಮಾತೃವಿಷಯವೇ ಅಂಥಾದ್ದು ; ಆದರೆ ನಾವು ನಿಮ್ಮ ಸಲುವಾಗಿ ನಿಮ್ಮ ತಾಯಿಯನ್ನು ಹುಡುಕಿಸಲಿಕ್ಕೆ ಎಷ್ಟು ಮಾತ್ರವೂ ಉದಾಸೀನ ಮಾಡಿರುವದಿಲ್ಲ. ನೀವು ಹೇಳುವ ಮಾರ್ಗದಿಂದ ಶೋಧಮಾಡುತ್ತಲೇ ಇರುವೆವು. ಅಂದಬಳಿಕ ನೀವು ಹೀಗೆ ಉದಾಸೀನರಾಗುವದೇಕೆ ? ಉದಾಸೀನ ಮಾಡಿದರೆ, ನಿಮ್ಮ ಮಾಸಾಹೇಬರ ಶೋಧವಾದಂತಾಗುವದೋ ?

ರಣಮಸ್ತಖಾನ- ಅವರ ಶೋಧವಾಗುವದರಿಂದಾದರೂ ನನಗೇನು ಪ್ರಯೋಜನವಾಗುವಹಾಗಿದೆ ? ಅವರು ಇನ್ನು ನನ್ನ ಮುಖಾವಲೋಕನವನ್ನು ಸಹ ಮಾಡುವ ಹಾಗಿಲ್ಲ. “ನಾನು ನಿಮ್ಮನ್ನು ಕಾಣಲಿಕ್ಕೆ ಬರುತ್ತೇನೆಂದು ಅವರಿಗೆ ನಾನು ಹೇಳಿಕಳಿಸಿದರೆ, ಅವರು ಎಷ್ಟು ನಿಷ್ಠುರವಾದ ಉತ್ತರ ಕೊಟ್ಟಾರೆಂಬದನ್ನು ಹೇಳಲಿಕ್ಕಾಗದು, ಅವರು ಬಹು ನಿರ್ಧಾರದ ಸ್ವಭಾವದವರು. ಹೀಗೆ ಮಾಡಬೇಕು, ಇಲ್ಲವೆ ಹೀಗೆ ಮಾಡಬಾರದು, ಎಂದು ಒಮ್ಮೆ ನಿರ್ಧಾರವಾದರೆ ತೀರಿತು. ಮುಂದೆ ಎಂಥ ಪ್ರಸಂಗಗಳು ಒದಗಿದರೂ ಅವರ ನಿಶ್ಚಯದಲ್ಲಿ ಅಂತರವಾಗಲಿಕ್ಕಿಲ್ಲ. ಅವರು ಸುರಕ್ಷಿತವಾಗಿರುವರೆಂಬ ಸುದ್ದಿಯಷ್ಟು ಈಗ ನನಗೆ ತಿಳಿದರೆ ಸಾಕು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಒಂದು ವಿಧದಿಂದ ನೆಟ್ಟಗಾಯಿತೆಂತಲೇ ನಾನು ತಿಳಿಯುವೆನು ! ಯಾಕೆಂದರೆ, ನನ್ನ ಕೈಯಿಂದ ಇನ್ನು ಏನಾದರೂ ಅನನ್ವಿತ ಕೃತ್ಯಗಳೂ ಘಟಿಸಬೇಕಾಗಿದ್ದರೆ, ಅವನ್ನು ನೋಡುವ ಪ್ರಸಂಗವಾದರೂ ಅವರಿಗೆ ತಪ್ಪಿತು.

ರಾಮರಾಜ- (ಚಮತ್ಕಾರದ ಧ್ವನಿಯಿಂದ) ಅವರು ಇಷ್ಟು ದೃಢನಿಶ್ಚಯದ ಸ್ವಭಾವದವರಿರುತ್ತಾರೆಯೆ ? ಅವರು ತಿರುಗಿ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲೆನ್ನುತ್ತೀರಾ ?

ರಣಮಸ್ತಖಾನ್-ಇಲ್ಲ, ಅವರು ತಿರುಗಿ ನನ್ನ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನಾನು ತಮ್ಮ ಪಾಲಿಗೆ ಸತ್ತಿರುವೆನೆಂತಲೇ ಅವರು ತಿಳಕೊಂಡಿರುವರು. ತಮಗೆ ಅವರ ಸ್ವಭಾವದ ಪರಿಚಯವಿಲ್ಲ, ಅವರು ಬಹಳ ಕ್ರಿಯಾವಂತರು; ಬಹು ನಿಸ್ಪೃಹಿಗಳು; ಅವರ ಸ್ವಭಾವವು ಪ್ರೇಮವಿದ್ದಷ್ಟೇ ಕಠೋರವು ಆಗಿರುವದು. ಪ್ರೇಮಮಾಡುವ ಪ್ರಸಂಗದಲ್ಲಿ ಅವರು ಅತ್ಯಂತ ಪ್ರೇಮ ಮಾಡುವರು; ಪ್ರೇಮದ ಭರದಲ್ಲಿ ಅವರು ತಮ್ಮ ಜೀವದ ಹಂಗು ಸಹ ತೊರೆಯುವರು; ಆದರೆ ಯಾವದೊಂದು ಕಾರಣದಿಂದ ಅವರು ಒಬ್ಬರನ್ನು ದ್ವೇಷಿಸಹತ್ತಿದರೆಂದರೆ, ತಿರುಗಿ ಅವರ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನನ್ನ ಮನಸ್ಸಿನೊಳಗಿನ ವಿಚಾರಗಳು ಅನ್ಯರಿಗೆ ಗೊತ್ತಾಗವು ಮಹಾರಾಜ, ನನ್ನ ತಾಯಿಯೆಂದರೆ ನನ್ನ ಸರ್ವಸ್ವವು; ನನ್ನ ತಾಯಿಯು ನನ್ನ ಪಂಚಪ್ರಾಣವು. ನನ್ನ ತಾಯಿಯು ನನ್ನನ್ನು ಸಂರಕ್ಷಿಸುವಾಗ ಮಣ್ಣಿಗೆ ಮಣ್ಣು ಕೂಡಿದಳು. ಅಂಥವಳ ದ್ರೋಹವನ್ನು ಬಗೆದು ನಾನು ನಿಮ್ಮನ್ನು ಕೂಡಿಕೊಂಡೆನು.

ಮುಂದೆ ಆತನಿಂದ ಮಾತಾಡುವದಾಗಲೊಲ್ಲದು, ಆತನು ಸುಮ್ಮನೆ ಕುಳಿತುಕೊಂಡನು. ಆಮೇಲೆ ಮತ್ತೆ ಅವರು ರಾಮರಾಜನನ್ನು ಕುರಿತು-ಸರಕಾರ್-ಇನ್ನು ಹೇಳುವದೇನು ! ನೀವು ವಿಚಾರಮಾಡಿರಿ, ನನ್ನನ್ನು ವಿಜಾಪುರಕ್ಕೆ ಕಳಿಸುವದಾದರೆ ಕಳಿಸಿಬಿಡಿರಿ. ನೀವು ನನಗೆ ಆಶ್ರಯಕೊಟ್ಟು ಇಡಿಯ ರಾಜ್ಯದ ಮೇಲೆ ಸಂಕಟವನ್ನಾದರೂ ಯಾಕೆ ತಂದುಕೊಳ್ಳುತ್ತೀರಿ ! ಸರ್ವಥಾ ತಂದುಕೊಳ್ಳಬೇಡಿರಿ, ನನ್ನಿಂದ ನಿಮಗೆ ಅಷ್ಟು ಪ್ರಯೋಜನವಾಗದು. ಯಾರಿಗೆ ಗೊತ್ತು, ಮುಂದೆ ಎಲ್ಲಿಯಾದರೂ ನನ್ನ ಪ್ರಾಮಾಣಿಕತನದ ಬಗ್ಗೆ ನಿಮಗೆ ಸಂಶಯ ಉತ್ಪನ್ನವಾದರೆ, ಕೆಲಸವೇ ಮುಗಿದು ಹೋಯಿತು ? ಆಮೇಲೆ ಇತ್ತಕಡೆಯಿಂದಲೂ ಅತಂತ್ರನು, ಅತ್ತಕಡೆಯಿಂದಲೂ ಅತಂತ್ರನು ಆಗುವೆನು. ಈವೊತ್ತೇ ನಿಮ್ಮ ಮನಸ್ಸಿಗೆ ಬಂದಂತೆ ಮಾಡಿಬಿಡಿರಿ. ನನಗೆ ಪ್ರಾಯಶ್ಚಿತ್ತವಾಗಿಬಿಟ್ಟರೆ, ಮುಂದೆ ನನ್ನ ವಿಷಯವಾಗಿ ಶಂಕಿಸಲಿಕ್ಕೆ ಯಾರಿಗೂ ಆಸ್ಪದವಾದರೂ ಉಳಿಯಲಿಕ್ಕಿಲ್ಲ...... ಎಂದು ನುಡಿಯುತ್ತಿರಲು, ರಾಮರಾಜನು ನಡುವೇ ಬಾಯಿಹಾಕಿ-ಕ್ಷತ್ರಿಯರು ಒಮ್ಮೆ ಬೆನ್ನಿಗೆ ಹಾಕಿಕೊಂಡರೆ, ಬೆನ್ನು ಬಿದ್ದವನು ವೈರಿಯಾಗಿದ್ದರೂ ಆತನ ಉಪೇಕ್ಷೆಯಾಗಲಾರದು. ಆತನು ಮೃತ್ಯುವಿನ ಮುಖಕ್ಕೆ ಎಂದೂ ಬೀಳನು; ಅಂದಬಳಿಕ ನೀವಂತು ನಾನು ಕರೆದಿದ್ದರಿಂದಲೇ ಅಲ್ಲ, ಆಗ್ರಹದಿಂದ ಕರೆದದ್ದರಿಂದ ನನ್ನ ಕಡೆಗೆ ಬಂದವರು. ಇಂಥವರನ್ನು ಇನ್ನು ನಾನು ಶತ್ರುವಿಗೆ ಒಪ್ಪಿಸಬಹುದೋ ? ಇಂಥ ಸಂಶಯವಾದರೂ ನಿಮ್ಮ ಮನಸ್ಸಿನಲ್ಲಿ ಹ್ಯಾಗೆ ಉತ್ಪನ್ನವಾಯಿತು ? ಛೇ, ಛೇ, ಇಂಥ ಅಂಜಬುರುಕುತನವು ನನ್ನಿಂದ ಎಂದೂ ಆಗಲಿಕ್ಕಿಲ್ಲ. ನಿಮ್ಮ ಮೇಲೆ ನನ್ನ ಸಂಪೂರ್ಣ ಪ್ರೇಮವಿರುತ್ತದೆ, ನೀವು ನನಗೆ ಹೊಟ್ಟೆಯ ಮಗನಂತೆ ಕಾಣುವದರಿಂದ, ನಾನು ಇಷ್ಟು ಆಗ್ರಹಮಾಡಿ ನಿಮ್ಮನ್ನು ನನ್ನ ಕಡೆಗೆ ಬರಮಾಡಿಕೊಂಡು ನೌಕರಿಗೆ ಇಟ್ಟುಕೊಂಡಿರುತ್ತೇನೆ, ಯಾವಾಗಲೂ ನೀವು ನನ್ನ ಬಳಿಯಲ್ಲಿಯೇ ಇರಬೇಕೆಂದು ನಿಮ್ಮನ್ನು ಅಂಗರಕ್ಷಕರನ್ನಾಗಿ ನಿಯಮಿಸಿ ಕೊಂಡಿರುವೆನು. ಇನ್ನು ನಾನು ನಿಮಗೆ ಹೆಚ್ಚಿಗೆಯೇನು ಹೇಳಲಿ ? ಇಂಥ ನಿಮ್ಮನ್ನು ನಾನು ಬಾದಶಹನಿಗೆ ಒಪ್ಪಿಸುವೆನೆ? ಇದೆಂಥ ನಿಮ್ಮ ತಿಳುವಳಿಕೆಯು? ತಿರುಗಿ ನನ್ನಮುಂದೆ ಇಂಥ ಮಾತು ಆಡಬೇಡಿರಿ, ಎಂದೂ ಮಾತಾಡಬೇಡಿರಿ. ನನ್ನ ರಾಜ್ಯದ ಮೇಲೆ ಬೇಕಾದ ಪ್ರಸಂಗ ಬರಲಿ, ಅದನ್ನು ನೋಡಿಕೊಳ್ಳಲಿಕ್ಕೆ ನಾನು ಸಮರ್ಥನಿದ್ದೇನೆ. ಈ ಮುಸಲ್ಮಾನ ರಾಜ್ಯಗಳು ನಮ್ಮ ಸುತ್ತುಮುತ್ತು ಮುತ್ತಿಕೊಂಡಿರುವಾಗ, ಹಿಂದು ರಾಜ್ಯವನ್ನು ನಾವು ಈ ಮುಸಲ್ಮಾನ ಬಾದಶಹರ ಗದರಿಕೆಗೆ ಬೆದರಿ ಸಂರಕ್ಷಿಸಿಕೊಂಡಿರುವೆವೋ ? ಛೇ ಛೇ! ಇಂಥ ವಿಚಾರವನ್ನು ಸಹ ಮನಸ್ಸಿನಲ್ಲಿ ತಂದುಕೊಳ್ಳಬೇಡಿರಿ. ಇನ್ನು ಮೇಲೆ ನೀವು ಹಿಂದೂ ರಾಜರ ನೌಕರರಾಗಿರುತ್ತೀರಿ. ಹಿಂದುಗಳೇ ಆಗಿರುತ್ತೀರಿ, ನಾವು ಇನ್ನು ನಿಮ್ಮ ವಿಷಯವಾಗಿ ಅಭಿಮಾನಪಡುವಂತೆ, ನೀವಾದರೂ ನಮ್ಮ ವಿಷಯವಾಗಿ ಅಭಿಮಾನಪಡಿರಿ; ಮತ್ತು ನಿಮ್ಮ ವಶಕ್ಕೆ ನಾನು ಈಗ ಕೊಡಬೇಕಾಗಿರುವ ಪಠಾಣ ಸೈನ್ಯವನ್ನು ಇನ್ನಿಷ್ಟು ಹೆಚ್ಚಿಸಿರಿ. ಬೇರೆ ಸೈನ್ಯಗಳನ್ನೂ ವ್ಯವಸ್ಥೆಗೊಳಿಸಿರಿ. ಇನ್ನು ಹಿಂದೂ ರಾಜ್ಯವನ್ನು ರಕ್ಷಿಸುವ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಸ್ಥಿರವಾಗಲಿ, ಬಾದಶಹರು ನಿಮ್ಮನ್ನು ಅವಮಾನಗೊಳಿಸಿದಂತೆ ಇಲ್ಲಿ ಯಾರೂ ನಿಮ್ಮನ್ನು ಅವಮಾನಗೊಳಿಸಲಾರರು-ಎಂದು ಹೇಳಿದನು. ಇದನ್ನೆಲ್ಲ ರಣಮಸ್ತಖಾನನು ಸುಮ್ಮನೆ ಕೇಳಿಕೊಂಡು, ಕೃತಜ್ಞತಾಪೂರ್ವಕವಾಗಿ ಸಮಾಧಾನವನ್ನು ಪ್ರಕಟಿಸಿ, ರಾಮರಾಜನ ಅಪ್ಪಣೆಯನ್ನು ಪಡೆದು ಹೊರಟುಹೋದನು.


****