ಕನ್ನಡಿಗರ ಕರ್ಮ ಕಥೆ/ಒಳಸಂಚುಗಳು
೯ನೆಯ ಪ್ರಕರಣ
ಒಳಸಂಚುಗಳು
ತನ್ನನ್ನು ಸೆರೆಮನೆಯಲ್ಲಿಟ್ಟದ್ದಕ್ಕಾಗಿ ಕೃಷ್ಣದೇವರಾಯನ ಮೇಲೆ ಅಚ್ಯುತರಾಯನ ಸಿಟ್ಟು ವಿಶೇಷವಾಗಿದ್ದದರಿಂದ, ಅಚ್ಯುತರಾಯನು ತಾನು ಸಿಂಹಾಸನವೇರಿದ ಕೂಡಲೆ ಕೃಷ್ಣದೇವರಾಯನ ಪಕ್ಷದ ರಾಮರಾಜನೇ ಮೊದಲಾದವರನ್ನು ಅಧಿಕಾರದಿಂದ ದೂರ ಮಾಡಿದನು. ಅಚ್ಯುತರಾಯನು ಪುಕ್ಕ ಸ್ವಭಾವದವನು, ರಾಜ್ಯಕಾರಭಾರಕ್ಕೆ ಎಷ್ಟುಮಾತ್ರವೂ ಯೋಗ್ಯನಾದವನಲ್ಲ. ಆತನು ಎರಡನೆಯವರ ಬೊಗಸೆಯಿಂದ ನೀರು ಕುಡಿಯುವ ಯೋಗ್ಯತೆಯ ಮನುಷ್ಯನಾದದ್ದರಿಂದ, ಯಾವತ್ತು ರಾಜ್ಯಕಾರಭಾರವು ಆತನ ಹೊಸ ಮಂತ್ರಿಯಾದ ಹೋಜೆ ತಿರುಮಲರಾಯನ ಕೈಸೇರಲು, ಅವನೇ ನಿಜವಾದ ರಾಜನಾದನು. ತಿರುಮಲನಲ್ಲಿ ಕರ್ತೃತ್ವ ಶಕ್ತಿಯು ಲೇಶವಾದರೂ ಇದ್ದಿಲ್ಲ ; ಆದರೆ ಡೌಲು ಬಹಳ. ಬಾಯಿಂದ ದೊಡ್ಡ ದೊಡ್ಡ ಮಾತುಗಳಾಡುವುದು ಹೆಚ್ಚು. ಬರುಬರುತ್ತ ಆತನ ಸೊಕ್ಕಿನ ನಡತೆಗೆ ಅವನ ಪಕ್ಷದ ಜನರುಸಹ ಬೇಸತ್ತರು. ಯಾವಾಗ ಯಾರ ಅಪಮಾನವಾದೀತೆಂಬುದರ ನಿಯಮ ಉಳಿಯಲಿಲ್ಲ. ತಿರುಮಲನ ಪ್ರೀತಿಯ ಸೇವಕನಾದ ಮಣಿಮಲ್ಲನೆಂಬವನ ಪ್ರಸ್ಥವು ಹೆಚ್ಚಾಯಿತು ; ಮಣಿಮಲ್ಲನ ಒಪ್ಪಿಗೆಯ ಹೊರತು ರಾಜ್ಯಕಾರಭಾರದ ಒಂದು ಕಡ್ಡಿ ಕೂಡ ಕದಲದಾಯಿತು. ರಾಜದರ್ಬಾರದೊಳಗಿನ ದೊಡ್ಡ ದೊಡ್ಡ ಜನರು ಕೂಡ ಮಣಿಮಲ್ಲನ ಮರ್ಜಿಯನ್ನು ಹಿಡಿಯಬೇಕಾಯಿತು. ಇದು ಬಹು ಜನರಿಗೆ ಸಹನವಾಗಲಿಲ್ಲ. ಕೆಲವರು ಈ ಸ್ಥಿತಿಯು ಹಿತಕರವಾದದ್ದಲ್ಲವೆಂದು ತಿರುಮಲನಿಗೆ ಹೇಳಲು, ಅದರಿಂದ ಪ್ರಯೋಜನವಾಗುವದೊತ್ತಟ್ಟಿಗೆ ಉಳಿದು, ತಿರುಮಲನು ಆ ಎಲ್ಲ ಸಂಗತಿಯನ್ನು ಮಣಿಮಲ್ಲನಿಗೆ ತಿಳಿಸಿದ್ದರಿಂದ, ಆ ಜನರ ಮೇಲೆ ಮಣಿಮಲ್ಲನ ಡಂಕು ಮಾತ್ರ ಕುಳಿತಿತು ! ದರ್ಬಾರದ ಈ ಸ್ಥಿತಿಯು, ಹೊಂಚುಹಾಕಿಕೊಂಡು ಕುಳಿತಿದ್ದ ರಾಮರಾಜನ ಕಾರ್ಯಸಾಧನಕ್ಕೆ ಬಹಳ ಅನುಕೂಲವಾಯಿತು. ಆತನು ಮೊದಲು ಅಚ್ಯುತರಾಯನ ಪಕ್ಷಕಟ್ಟಿದ ಹಾಗೆ ತೋರಿಸಿ, ತಿರುಮಲನ ನಿಂದೆಯನ್ನು ಜನರ ಮುಂದೆ ಮಾಡಹತ್ತಿದನು. ಮುಂದೆ ಬರುಬರುತ್ತ ತಿರುಮಲನನ್ನು ಶ್ಲಾಘಿಸಹತ್ತಿ, ಮಣಿಮಲ್ಲನನ್ನು ನಿರಾಕರಿಸಹತ್ತಿದನು. ಮೊದಮೊದಲಿಗೆ ಇದರಿಂದ ಏನೂ ಪ್ರಯೋಜನವಾಗದಿದ್ದರೂ ಬರಬರುತ್ತ ಜನರು ರಾಮರಾಜನ ಮಾತಿಗೆ ಒಪ್ಪಿಕೊಳ್ಳಹತ್ತಿದರು, “ಅಚ್ಯುತರಾಯನೂ ಅಲ್ಲ. ತಿರುಮಲನೂ ಅಲ್ಲ. ಮಣಿಮಲ್ಲನಂಥ ಕ್ಷುದ್ರಮನುಷ್ಯನು ರಾಜ್ಯದ ಸೂತ್ರಗಳನ್ನಲ್ಲಾಡಿಸಿ ದೊಡ್ಡ ದೊಡ್ಡ ಮರ್ಯಾದಸ್ಥರ, ಹಾಗೂ ಶೂರರ ಅಪಮಾನ ಮಾಡುವದು ಯೋಗ್ಯವಾಗಬಹುದೋ,” ಎಂದು ರಾಮರಾಜನು ಜನರನ್ನು ಕೇಳಹತ್ತಿದನು. ರಾಮರಾಜನ ಮಾತು ಬಹುಜನರಿಗೆ ಒಪ್ಪಿಗೆಯಾಗಿ, ಬರಬರುತ್ತ ರಾಮರಾಜನ ಪಕ್ಷವು ಸಮರ್ಥವಾಗ ಹತ್ತಿತ್ತು, ಹೀಗೆ ತನ್ನ ಮನಸ್ಸಿನಂತೆ ಎಲ್ಲ ಅನುಕೂಲತೆಯಾದದ್ದನ್ನು ನೋಡಿ, ರಾಮರಾಜನು ಒಂದು ದಿನ ಬಂಡಾಯವನ್ನು ಹೂಡಿ ತಿರುಮಲರಾಯನನ್ನು ಸೆರೆಹಿಡಿದು, ಆತನನ್ನು ಕಾರಾಗೃಹದಲ್ಲಿಡಬೇಕೆಂದು ಮಾಡಿದನು; ಆದರೆ ಈ ಸಂಗತಿಯು ಗುಪ್ತವಾಗಿ ಉಳಿಯಲಿಲ್ಲ, ತಿರುಮಲನ ಕಿವಿಗೆ ಮುಟ್ಟಿತು. ಆಗ ಆತನು ಗಾಬರಿಯಾಗಿ ಮುಂದೆಗಾಣದೆ ಆಲೋಚಿಸಹತ್ತಿದನು.
ಈ ಹಿಂದಿನ ಪ್ರಕರಣದಲ್ಲಿ ಹೇಳಿದಂತೆ, ವಿಜಯನಗರದ ರಾಯರ ಸೇಡು ತೀರಿಸಿಕೊಳ್ಳಲಿಕ್ಕೆ ಹೊಂಚುಹಾಕಿದ್ದ ವಿಜಾಪುರದ ಇಬ್ರಾಹಿಮ ಆದಿಲ ಶಹನು, ಈಗ ತುಂಗಭದ್ರೆಯ ಆಚೆಯಲ್ಲಿದ್ದ ದರ್ಗೆಯಲ್ಲಿ ತನ್ನ ಸೈನ್ಯದ ತಳ ಊರಿದ್ದನು, ಆತನು ಹೊತ್ತು ನೋಡಿ ವಿಜಯನಗರವನ್ನು ಕೈವಶ ಮಾಡಿಕೊಳ್ಳತಕ್ಕವನಿದ್ದನು. ವಿಜಯನಗರದೊಳಗಿನ ಈ ಅಂತಃಕಲಹದ ಸುದ್ದಿಗಳು ಕ್ಷಣಶಃ ಮುಟ್ಟುವಂತೆ ಆತನು ಗುಪ್ತಚಾರರನ್ನಿಟ್ಟಿದ್ದನು. ಇತ್ತ ಮೊದಲೇ ಗಾಬರಿಯಾಗಿದ್ದ ತಿರುಮಲನಿಗೆ ಹೆಚ್ಚು ಹೆಚ್ಚು ಭಯಂಕರವಾದ ಒಳಸಂಚಿನ ಸುದ್ದಿಗಳೂ ಮುಟ್ಟಹತ್ತಿದವು. ತನ್ನ ಮೇಲೆ ಎಲ್ಲರೂ ತಿರುಗಿಬಿದ್ದು ತನ್ನನ್ನೂ, ಅಚ್ಯುತರಾಯನನ್ನೂ ಇನ್ನೂ ನಾಲ್ಕೆಂಟು ದಿನಗಳಲ್ಲಿ ಹಿಡಿದು ಕೊಲ್ಲುವರೆಂಬ ವರ್ತಮಾನವನ್ನು ಸಹ ಆತನು ಕೇಳಿದನು. ತನ್ನ ಪ್ರಾಣರಕ್ಷಣೆ ಮಾಡಿಕೊಳ್ಳುವದಕ್ಕಾಗಿ ಬೇಕಾದದ್ದನ್ನು ಮಾಡಿಕೊಳ್ಳಲಿಕ್ಕೆ ಆತನು ಸಿದ್ಧನಾದನು. ಆಗ ಮಣಿಮಲ್ಲನು ತಿರಮಲನಿಗೆ ನೀವು ಆದಿಲಶಹನನ್ನು ವಿಜಯನಗರಕ್ಕೆ ಕರೆಸಿಕೊಂಡು, ಆತನ ಸ್ನೇಹವನ್ನು ಸಂಪಾದಿಸಿರಿ; ಅಂದರೆ ಎಲ್ಲ ಅರಿಷ್ಟವು ಹಿಂಗುವದು, ಎಂದು ಹೇಳಿದನು. ವಿವೇಕಭ್ರಷ್ಟನಾದ ತಿರುಮಲನಿಗೆ ಕುದ್ರ ಮಣಿಮಲ್ಲನ ಈ ಅದೂರದರ್ಶಿತನದಲ್ಲಿ ದೋಷಗಳು ತೋರಿಲಿಲ್ಲ. ಹೀಗೆ ಮಾಡಿದರೆ, ಮುಂದೆ ಸುಲ್ತಾನನನ್ನು ತಿರುಗಿ ಕಳಿಸಲಿಕ್ಕೆ ಎಷ್ಟು ಕಠಿಣವಾದೀತೆಂಬುದರ ಎಚ್ಚರವು ಆ ತಿಳಿಗೇಡಿ ಮಂತ್ರಿಗೆ ಹುಟ್ಟಲಿಲ್ಲ. ಕೂಡಲೆ ಆತನು ಸುಲ್ತಾನನ ಕಡೆಗೆ ವಕೀಲನನ್ನು ಕಳಿಸಿದನು. ಆದಿಲಶಹನು ವಕೀಲನ ಮಾತುಗಳನ್ನು ಕೇಳಿ ಪರಮಾನಂದಪಟ್ಟನು. “ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತೆ ಆತನಿಗೆ ಬಹಳ ಸಂತೋಷವಾಯಿತು. ಸುಲ್ತಾನನು ತಿರುಮಲನ ಮಾತಿಗೆ ಸಂತೋಷದಿಂದ ಒಪ್ಪಿಕೊಂಡ ಬಳಿಕ, ವಿಜಯನಗರವನ್ನು ಪ್ರವೇಶಿಸುವ ದಿನವನ್ನು ಅವರಿಬ್ಬರೂ ಗುಪ್ತ ರೀತಿಯಿಂದ ಗೊತ್ತುಮಾಡಿಕೊಂಡರು. ಇತ್ತ ರಾಮರಾಜನೂ ತಿರುಮಲನನ್ನು ಸೆರೆ ಹಿಡಯುವ ದಿನವನ್ನು ಗುಪ್ತರೀತಿಯಿಂದ ಗೊತ್ತುಮಾಡಿದ್ದನು. ತಿರಮಲನು ಬಾದಶಹನೊಡನೆ ನಡೆಸಿದ ಕಾರಸ್ಥಾನದ ಗಂಧವು ಸಹ ರಾಮರಾಜನಿಗೆ ಬಡಿದಿದ್ದಿಲ್ಲ. ರಾಮರಾಜನು ತಿರುಮಲನನ್ನು, ಗೊತ್ತುಮಾಡಿದ ದಿವಸ ಸೆರೆಹಿಡಿಯಬೇಕೆಂದು ಸಂಚುಗಾರರೊಡನೆ ಯೋಚಿಸುತ್ತಿರುವದರೊಳಗೆ ರಾಮರಾಜನ ಪಕ್ಷದವನೊಬ್ಬನು ತಿರುಮಲನ ಕಡೆಗೆ ಒಡೆದು, ರಾಮರಾಜನ ಒಳಸಂಚಿನ ದಿವಸವನ್ನು ತಿರುಮಲನಿಗೆ ತಿಳಿಸಿದನು ಕೂಡಲೆ ತಿರುಮಲನು ಬಾದಶಹನನ್ನು ವಿಜಯನಗರಕ್ಕೆ ಕರೆಯಕಳುಹಿದನು. ಅತ್ತ ಹಾದಿಯನ್ನೇ ನೋಡುತ್ತ ಕುಳಿತಿದ್ದ ಬಾದಶಹನು ತಡಮಾಡದೆ ಸೈನ್ಯದೊಡನೆ ಹೊರಟು ತುಂಗಭದ್ರೆಯನ್ನು ದಾಟಿ ವಿಜಯನಗರವನ್ನು ಪ್ರವೇಶಿಸಿದನು. ತಿರುಮಲನೂ, ಅಚ್ಯುತರಾಯನೂ ಆತನನ್ನು ಎದುರುಗೊಂಡು ಕರೆತಂದು ವಿಜಯನಗರದ ಸಿಂಹಾಸನದ ಮೇಲೆ ಕೂಡ್ರಿಸಿ, ವಿಲಕ್ಷಣ ರೀತಿಯಿಂದ ಆತನ ಆದರ ಸತ್ಕಾರವನ್ನು ಮಾಡಿದರು, ಈ ವರೆಗೆ ಬಾದಶಹನು ವಿಜಯನಗರದ ಅರಸರ ಘನವಾದ ಐಶ್ವರ್ಯವನ್ನು ಜನರ ಮುಖದಿಂದ ಕೇಳುತ್ತ ಬಂದಿದ್ದನು; ಆತನಿಗೆ ಅದರ ಅನುಭವವಾಗಿದ್ದಿಲ್ಲ. ಈಗ ಆತನು ರಾಯರ ಐಶ್ವರ್ಯವನ್ನು ಕಣ್ಣುಮುಟ್ಟ ನೋಡಿ ಬೆರಗಾದನು. ಈ ಪ್ರಸಂಗದಲ್ಲಿ ತಿರುಮಲನು ಒಳ್ಳೆ ಸಂಕಟದಲ್ಲಿ ಸಿಕ್ಕಿರುವದರಿಂದ ಆತನು ಹೇಳಿದ ಹಾಗೆ ಕೇಳುವನೆಂದು ತಿಳಿದು ಸುಲ್ತಾನನು ತಿರುಮಲನಿಗೆ ಬಹು ದೊಡ್ಡ ರಕಮಿನ ಕಪ್ಪವನ್ನು ಕೇಳಿದನು; ಮತ್ತು ಇಂದಿನಿಂದ ವಿಜಯನಗರದ ಅರಸರು ವಿಜಾಪುರದ ಬಾದಶಹರ ಮಾಂಡಲೀಕತ್ವವನ್ನು ಒಪ್ಪಿಕೊಳ್ಳಬೇಕೆಂದು ಹೇಳಿದನು. ಅದಕ್ಕೆಲ್ಲ ತಿರುಮಲನು ಒಪ್ಪಿಕೊಂಡನು.
ವಿಜಾಪುರದ ಬಾದಶಹನು ಅಕಸ್ಮಾತ್ತಾಗಿ ರಾಜಧಾನಿಯನ್ನು ಪ್ರವೇಶಿಸಿದ್ದನ್ನೂ ತಿರುಮಲನು ಬಾದಶಹನ ಬೇಡಿಕೆಗಳನ್ನೆಲ್ಲ ಪೂರ್ಣ ಮಾಡಿದ್ದನ್ನೂ ಕೇಳಿ ವಿಜಯನಗರದ ಜನರಿಗೆ ಬಹಳ ವ್ಯಸನವಾಯಿತು; ಆದರೆ ಅವರ ಸೈನ್ಯದ ಸಿದ್ಧತೆ ಇದ್ದಿಲ್ಲ. ಮೇಲೆ ಬಾದಶಹನು ತಮ್ಮ ಮನೆಯಲ್ಲಿ ಬಂದು ಕುಳಿತುಕೊಂಡಿದ್ದನು. ಆತನನ್ನು ಹೊರಗೆ ಹಾಕದ ಹೊರತು ಯಾವ ಕೆಲಸ ಮಾಡಲಿಕ್ಕೂ ಬರುವಹಾಗಿದ್ದಿಲ್ಲ. ವಿಜಯನಗರದ ಪವಿತ್ರ ಸಿಂಹಾಸನದ ಮೇಲೆ ಕೇವಲ ಸ್ವಾರ್ಥಾಭಿಲಾಷೆಯಿಂದ ತಿರುಮಲನು ಸುಲ್ತಾನನನ್ನು ಕೂಡ್ರಿಸಿದ್ದಕ್ಕಾಗಿ ಜನರು ಸಂತಾಪಗೊಂಡರು. ಘನವಾದ ಯೋಗ್ಯತೆಯ ರಾಯರ ಚರಣಗಳ ಮೇಲೆ ಬಹುಜನ ಮಾಂಡಲಿಕರಾಜರು ಶಿರಸ್ಸುಗಳನ್ನಿಡುತ್ತಿರಲು, ಅಂಥ ರಾಯನು ಈಗ ಮುಸಲ್ಮಾನ ಬಾದಶಹನ ಮುಂದೆ ತಲೆಬಾಗಿಸುವ ಪ್ರಸಂಗ ತಂದದ್ದಕ್ಕಾಗಿ ಪ್ರತಿ ಒಬ್ಬರು ತಿರುಮಲನ ಮೇಲೆ ಹಲ್ಲು ಕಡಿಯಹತ್ತಿದರು: ಆದರೆ ಮಾಡುತ್ತಾರೇನು? ಬಾದಶಹನನ್ನು ವಿಜಯನಗರದಿಂದ ಹೊರಗೆ ಹಾಕದ ಹೊರತು ಏನು ಮಾಡಲಿಕ್ಕೂ ಬರುವ ಹಾಗಿದ್ದಿಲ್ಲ. ತನ್ನ ಒಳಸಂಚು ಸಫಲವಾಗುವದೊತ್ತಟ್ಟಿಗೆ ಉಳಿದು, ಮುಸಲ್ಮಾನ ಬಾದಶಹನು ರಾಜಧಾನಿಯಲ್ಲಿ ಬಂದು ಕುಳಿತಿದ್ದಕ್ಕಾಗಿ ರಾಮರಾಜನಿಗೆ ಬಹಳ ಸಂತಾಪವಾಯಿತು. ಆದರೆ ಆತನು ಅದನ್ನೆಲ್ಲ ನುಂಗಿಕೊಂಡನು. ತಿರುಮಲನನ್ನು ಮೋಸಗೊಳಿಸಿ, ಅವನ ಮುಖಾಂತರ ಬಾದಶಹನನ್ನು ರಾಜಧಾನಿಯ ಹೊರಗೆ ಕಳಿಸಬೇಕೆಂದು ಆತನು ಯೋಚಿಸಿದನು. ಆಗ ರಾಮರಾಜನು ಪ್ರಮುಖರೊಡನೆ ತಿರುಮಲನ ಬಳಿಗೆ ಹೋಗಿ ವಿನಯದಿಂದ ಆತನನ್ನು ಕುರಿತು- “ನೀವು ನಮಗೆ ಸರ್ವಥಾ ವಂದ್ಯರು. ನಿಮ್ಮ ವಿಷಯವಾಗಿ ನಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಸಂಶಯವಿಲ್ಲ; ಆದರೆ ಈಗಿನ ಪ್ರಸಂಗದಲ್ಲಿ ನೀವು ವಿಜಯನಗರದ ಮೇಲೆ ಬಹು ದೊಡ್ಡ ಸಂಕಟವನ್ನು ತಂದಿರುವಿರಿ. ಬಾದಶಹನನ್ನು ಕರೆತಂದು ಸತ್ಕರಿಸಿದ್ದೆಲ್ಲ ಸರಿಯೆ; ಆದರೆ ಇದರ ಪರಿಣಾಮವು ನೆಟ್ಟಗಾದೀತೆಂದು ತೋರುವದಿಲ್ಲ. ವೈರಿಯನ್ನು ಮನೆಯೊಳಗೆ ಕರಕೊಳ್ಳುವದು ಸುಲಭವು; ಆದರೆ ಆತನನ್ನು ಹೊರಗೆ ಹಾಕುವದು ಕಠಿಣವಷ್ಟೇ ಅಲ್ಲ, ಅಶಕ್ಯವೆಂತಲೂ ಹೇಳಬಹುದು. ನಮ್ಮ ಹಿಂದುಗಳ ರಾಜ್ಯವನ್ನು ನುಂಗಬೇಕೆಂದು ಜಪ್ಪು ಹಾಕಿಕೊಂಡು ಮುಸಲ್ಮಾನರ ಬಾದಶಹರು ಬಹುದಿವಸದಿಂದ ಕುಳಿತಿರುವರೆಂಬುದು ನಿಮಗೆ ಗೊತ್ತಿಲ್ಲವೆ ? ಹೀಗಿದ್ದು ನೀವು ಈಗ ಅನಾಯಾಸವಾಗಿ ಅವರ ಕಾರ್ಯಕ್ಕೆ ಅನುಕೂಲ ಮಡಿಕೊಟ್ಟಿರುವಿರಲ್ಲ? ಅದಕ್ಕೆ ಏನೆನ್ನಬೇಕು ? ನೀವು ಸ್ವಭಾವಿಕವಾಗಿ ಈ ಕಾರ್ಯ ಮಾಡಿದಿರಿ ; ಆದರೆ ಪರಿಣಾಮವು ಬಹು ಭಯಂಕರವಾಗುವ ಹಾಗೆ ತೋರುತ್ತದೆ. ನೀವು ಬಾ, ಅಂದಕೂಡಲೆ ಬಾದಶಹನು ಬಂದಂತೆ, ನೀವು ಹೋಗೆಂದ ಕೂಡಲೆ ಆತನು ಈಗ ಹೋಗಲಾರನು. ನೀವು ಹ್ಯಾಗಾದರೂ ಮಾಡಿ ಆತನನ್ನು ತಿರುಗಿ ಕಳಿಸಿಕೊಡಿರಿ. ನಾವೆಲ್ಲರು ಬೇಕಾದ ಆಣೆ ಮಾಡಿ ಹೇಳೆಂದರೂ ಹೇಳುತ್ತೇವೆ, ನಿಮ್ಮ ಮಾತನ್ನು ನಾವು ಸರ್ವಥಾಮೀರುವದಿಲ್ಲ. ನೀವು ಹೇಳಿದ ಹಾಗೆ ಕೇಳುತ್ತೇವೆ. ಆದರೆ ವಿಜಯನಗರದ ಮೇಲೆ ಬಂದಿರುವ ಈ ಕಠಿಣ ಪ್ರಸಂಗವನ್ನು ದೂರಮಾಡಿರಿ” ಎಂದು ಹೇಳಿಕೊಂಡು ತಿರುಮಲನಿಗೆ ಮಿತಿಮೀರಿ ದೊಡ್ಡಸ್ತನವನ್ನು ಕೊಟ್ಟನು. ಮೂರ್ಖನಾದ, ತಿರುಮಲನು ಜನರ ಈ ದೊಡ್ಡಸ್ತಿಕೆಗೆ ಮರುಳಾದನು. ತಾನು ಹೋಗೆಂದರೆ ಬಾದಶಹನು ಹೋಗುವದಿಲ್ಲೆಂದು ರಾಮರಾಜನು ಆಡಿದ್ದಕ್ಕಾಗಿ ತಿರುಮಲನಿಗೆ ಬಹಳ ಸಿಟ್ಟು ಬಂದಿತು, ಅಚ್ಯುತರಾಯನು ತನ್ನ ಕೈಯೊಳಗಿರುವಂತೆ, ಆದಿಲಶಹನೂ, ತನ್ನ ಕೈಯೊಳಗಿರುವನೆಂದು ಆ ತಿಳಿಗೇಡಿ ತಿರುಮಲನು ತಿಳಕೊಂಡಿದ್ದನು. ಜನರು ಸುಮ್ಮನಾದ ಮೇಲೆ ಆತನು ಅವರನ್ನು ಕುರಿತು ಆದ್ಯತೆಯಿಂದ- “ನಿಮಗೆ ರಾಜಕಾರಣದ ಸಂಗತಿಗಳೂ ಏನೂ ತಿಳಿಯುವುದಿಲ್ಲ. ನೀವು ನನ್ನ ವಿರುದ್ಧವಾಗಿ ಒಳಸಂಚು ನಡಿಸಿದ್ದಕ್ಕಾಗಿ ಈಗ ನಾನು ಬಾದಶಹನನ್ನು ಕರೆಸಿರುವದಿಲ್ಲ. ನಾಲೈದು ಜನ ಮುಸಲ್ಮಾನ ಬಾದಶಹರು ನಮ್ಮ ರಾಜ್ಯವನ್ನು ನುಂಗಲಿಕ್ಕೆ ಹೊಂಚುಹಾಕಿ ಕುಳಿತು ಕೊಂಡಿರುವದರಿಂದ ಅದರೊಳಗಿನ ಒಬ್ಬದೊಡ್ಡ ಬಾದಶಹನನ್ನು ನಮ್ಮ ಕಡೆಗೆ ಮಾಡಿ ಇಟ್ಟುಕೊಂಡಿರುವದು ನೆಟ್ಟಗೆಂದು ತಿಳಿದು, ಬಾದಶಹನನ್ನು ಕರೆಸಿದ್ದೇನೆ. ನಿಮ್ಮ ಒಳಸಂಚನ್ನು ಮುರಿಯುವ ಸಾಮರ್ಥ್ಯವು ನನ್ನಲ್ಲಿಲ್ಲೆಂದು ತಿಳಿಯಬೇಡಿರಿ. ನಿಮ್ಮನ್ನು ಸಾಲಗಿಡಕ್ಕೆ ತೂಗಹಾಕಿ ಕೊಲ್ಲಿಸುತ್ತಿದ್ದೆನು. ಇಲ್ಲವೆ ನೆಲದಲ್ಲಿ ಹುಗಿಸುತ್ತಿದ್ದನು. ವಿಜಯನಗರದ ಅಭಿಮಾನವು ನಿಮಗೇ ಇರುವದಿಲ್ಲ. ಆ ರಾಜ್ಯದ ವಿಷಯವಾಗಿ ನಿಮಗಿಂತ ಹೆಚ್ಚು ಅಭಿಮಾನವು ನಮಗಿರುತ್ತದೆ. ನಿಮ್ಮ ಸಂಚಿನ ಸಂಗತಿಗಳೆಲ್ಲ ನಮಗೆ ಗೊತ್ತಾಗಿರುವವು; ಆದರೆ ಮನೆಹೊಲಸು ತೆಗೆಯಲಿಕ್ಕೆ ಇದು ಸಮಯವಲ್ಲ. ಮೊದಲು ಹೊರಗಿನ ವೈರಿಗಳ ಸಮಾಚಾರವನ್ನು ತಕ್ಕೊಳ್ಳಬೇಕಾಗಿದೆ. ಈ ಮಾತು ನಿಮಗೆ ಹ್ಯಾಗೆ ತಿಳಿಯಬೇಕು. ಹೋಗಿರಿ, ನಿಮ್ಮ ಮೇಲೆ ನನ್ನ ಸಿಟ್ಟೂ ಇಲ್ಲ, ಲೋಭವೂ ಇಲ್ಲ. ನೀವು ನನ್ನ ಕಾಲು ಬೀಳಲಿಕ್ಕೆ ಬಂದದ್ದೇ ಸಾಕಾಯಿತು. ಇನ್ನು ನಾನು ನಿಮಗೆ ಹೆಚ್ಚಿಗೆ ಹೇಳುವುದಿಲ್ಲ. ಸುಮ್ಮನೆ ಇಲ್ಲದ ಚಿಂತೆಯಿಂದ ಕೊರಗಬೇಡಿರಿ, ನೋಡಿರಿ, ಇನ್ನು ಬಾದಶಹನನ್ನು ಹಾ ಹಾ ಅನ್ನುವದರೊಳಗೆ ಹ್ಯಾಗೆ ಹೊರಗೆ ಹಾಕುತ್ತೇನೆಂಬುದನ್ನು !”
ತಿರುಮಲನ ಈ ಮಾತುಗಳನ್ನು ಕೇಳಿ ಜನರು ಚಕಿತರಾದರು. ರಾಮರಾಜನಿಗೆ ಇನ್ನು ಏನು ಮಾತಾಡಬೇಕೆಂದು ತಿಳಿಯದೆ ಹೋಯಿತು. ಆತನು ತಿರುಗಿ ಬಹಳ ಮಾತಾಡಲಿಲ್ಲ; ಆದರೆ ಆತನಿಗೆ ತಿರುಮಲನ ಒಂದು ಮಾತೂ ನಿಜವೆಂದು ತೋರಲಿಲ್ಲ. ತನ್ನ ಸ್ನೇಹಿತರು ತಿರುಮಲನ ಮಾತಿನಿಂದ ಮೋಸ ಹೋಗಿದ್ದರೆ, ಅವರನ್ನು ಎಚ್ಚರಗೊಳಿಸಬೇಕೆಂದು ಆತನು ನಿಶ್ಚಯಿಸಿದನು. ಆತನು ತಿರುಮಲನ ಮಾತಿಗೆ ಹೆದರಿ, ಅಥವಾ ಮರುಳಾಗಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಿರುಮಲನ ಕಿವಿಗೆ, ಆತನ ಎದೆಯೊಡೆದು ನೀರಾಗುವಂಥ ಸುದ್ದಿಗಳೂ ಮುಟ್ಟುವಂತೆ ಏನು ವ್ಯವಸ್ಥೆ ಮಾಡಬೇಕೆಂದು ಆತನು ಯೋಚಿಸುತ್ತಲಿದ್ದನು. ಮುಂದೆ ಬಾದಶಹನ ಒಳಸಂಚಿನ ಭಯಂಕರವಾದ ಸುದ್ದಿಗಳು ತಿರುಮಲನ ಕಿವಿಗೆ ಮುಟ್ಟುವಂತೆ ರಾಮರಾಜನು ಮಾಡಿದನು. ಒಂದು ದಿನ, ಬಾದಶಹನು ವಿಜಯನಗರದಲ್ಲಿಯೇ ಕಾಲು ಊರಿ ನಿಲ್ಲುವ ಹವಣಿಕೆಯಲ್ಲಿರುತ್ತಾನೆಂಬ ಸುದ್ದಿಯು ತಿರುಮಲನಿಗೆ ಹತ್ತಿತು, ಅದನ್ನು ಕೇಳಿ ತಿರುಮಲನು-ಇನ್ನು ಮೇಲೆ ಬಾದಶಹನು ಪಟ್ಟಣ ಬಿಟ್ಟು ಹೋಗದಿದ್ದರೆ ಪರಿಣಾಮವಾಗಲಿಕ್ಕಿಲ್ಲ. ತಾನು ಒಪ್ಪಿಕೊಂಡಂತೆ ರಾಯರು ಬಾದಶಹನ ಮಾಂಡಲಿಕರಾಗುವದೊತ್ತಟ್ಟಿಗುಳಿದು, ನಮ್ಮ ಇಡಿಯ ರಾಜ್ಯವೇ ನಷ್ಟವಾದೀತೆಂಬ ಭಯವು ಆತನನ್ನು ಬಾಧಿಸಹತ್ತಿತು. ಅಷ್ಟರಲ್ಲಿ ಬಾದಶಹನು ತಿರುಮಲರಾನನ್ನು ಸೆರೆಹಿಡಿದು ತೋಫಿನಬಾಯಿಗೆ ಕೊಡಬೇಕೆಂದು ಮಾಡಿರುತ್ತಾನೆಂಬ ಸುದ್ದಿಯು ಹತ್ತಿತು. ಮತ್ತೊಂದು ದಿನ, ಬಾದಶಹನು ವಿಜಾಪುರದಿಂದ ಹೊಸ ದಂಡು ತರಿಸಿ ವಿಜಯನಗರವನ್ನು ಒಮ್ಮೆಲೆ ಸುಲಿದು ಸುಟ್ಟು ಸೂರೆ ಮಾಡಿ. ಹೆಂಗಸರನ್ನು ಸೆರೆ ಹಿಡಕೊಂಡು ಹೋಗಬೇಕೆಂತಲೂ, ದೇವಾಲಯಗಳನ್ನು ನಾಶಮಾಡ ಬೇಕೆಂತಲೂ, ಮಾಡಿರುತ್ತಾನೆಂಬ ಸುದ್ದಿಯನ್ನು ತಿರುಮಲನು ಕೇಳಿದನು. ಈ ಸುದ್ದಿಗಳೆಲ್ಲ ಹುಟ್ಟಲಿಕ್ಕೆ ರಾಮರಾಜನೇ ಕಾರಣನೆಂದು ವಾಚಕರು ಅರಿತಿರಬಹುದು. ಒಂದರ ಹಿಂದೊಂದರಂತೆ ಇಂಥ ಸುದ್ದಿಗಳನ್ನು ಕೇಳಿದ ತಿರುಮಲನ ಎದೆಯೊಡೆದು ನೀರಾಯಿತು. ಹಾ ಹಾ ಅನ್ನುವದರೊಳಗೆ ಬಾದಶಹನನ್ನು ಕಳಿಸುವೆನೆಂದು ಡೌಲು ಬಡೆದಿದ್ದ ಆತನಿಗೆ, ತಿರುಗಿ ಹೋಗೆಂದು ಬಾದಶಹನಿಗೆ ಹ್ಯಾಗೆ ಹೇಳಬೇಕೆಂಬುದೇ ಈಗ ತಿಳಿಯದಾಯಿತು.
ಇತ್ತ ಆದಿಲಶಹನು ವಿಜಯನಗರದ ಐಶ್ವರ್ಯವನ್ನೂ, ರಾಯರಿಂದ ತನಗಾದ ಸತ್ಕಾರವನ್ನೂ ನೋಡಿ, ಆಸೆಬುರುಕತನದಿಂದ ವಿಜಯನಗರವನ್ನು ಬಿಟ್ಟು ಹೋಗದಾದನು. ತಾನು ಹೇಳಿದಂತೆ ತಿರುಮಲರಾಯನು ಕೇಳಿದ್ದನ್ನು ನೋಡಿ, ಬಾದಶಹನ ಬಾಯಲ್ಲಿ ನಿಜವಾದ ನೀರು ಒಡೆದವು. ಕೆಲವು ದಿನಗಳವರೆಗಾದರೂ ವಿಜಯನಗರದಲ್ಲಿ ಇರಬೇಕೆಂದು ಆತನು ನಿಶ್ಚಯಿಸಿದನು ; ಆದರೆ ಅತ್ತ ಧೂರ್ತನಾದ ರಾಮರಾಜನು ಬಾದಶಹನಿಗೂ ಉಚ್ಚಾಟನೆಯನ್ನು ಕೊಡದೆ ಇರಲಿಲ್ಲ. ತಿರುಮಲನು ತನ್ನನ್ನು ಕರೆ ತಂದಿರುವುದು ತನ್ನನ್ನು ನಾಶಗೊಳಿಸುವದಕ್ಕಾಗಿಯೇ ಎಂಬ ಸಂಶಯವು ಬಾದಶಹನಿಗೆ ಉತ್ಪನ್ನವಾಗುವಂತೆ ರಾಮರಾಜನು ಯುಕ್ತಿಯನ್ನು ಮಾಡಿದನು. ತಿರುಮಲನು ದಕ್ಷಿಣದ ನಿಟ್ಟಿನ ತನ್ನ ಸೈನ್ಯವನ್ನು ಮೆಲ್ಲಮೆಲ್ಲನೆ ಬರಮಾಡಿಕೊಳ್ಳುತ್ತಿದ್ದು, ಅದು ಬಂದಕೂಡಲೆ ತುಂಗಭದ್ರೆಯತ್ತಣ ಹಾದಿಯನ್ನು ಕಟ್ಟಿ, ತನ್ನ ನಾಶಮಾಡುವನೆಂಬ ಸಂಗತಿಯು ಬಾದಶಹನ ಕಿವಿಗೆ ಬಿದ್ದಿತು. ಈ ಮಾತಿನ ನಂಬಿಗೆಯು ಬಾದಶಹನಿಗೆ ಆಗಬೇಕೆಂದು ರಾಮರಾಜನು ಒಂದು ಯುಕ್ತಿಯನ್ನು ಮಾಡಿದನು. ಒಂದು ದಿವಸ ತಿರುಮಲನು ಬಾದಶಹನ ಭೆಟ್ಟಿಗೆ ಹೋದಾಗ, ತಿರುಮಲನ ನಂಬಿಗೆಯ ಸೇವಕನ ಮುಖಾಂತರ ಒಂದು ಪತ್ರವು ಬಾದಶಹನ ಸೇವಕರ ಕೈಗೆ ಸಿಗುವಂತೆ ರಾಮರಾಜನು ಕಪಟವನ್ನು ರಚಿಸಿದನು. ರಾಮರಾಜನ ಯುಕ್ತಿಯು ಸಫಲವಾಗಿ, ತಿರುಮಲನು ಹೋದಬಳಿಕ ಬಾದಶಹನ ಸೇವಕರು ಆ ಪತ್ರವನ್ನು ಬಾದಶಹನ ಕೈಯಲ್ಲಿ ಕೊಟ್ಟರು. ಪತ್ರವು ಕನ್ನಡದಲ್ಲಿ ಸಂಕ್ಷಿಪ್ತವಾಗಿ ಸಂದಿಗ್ಧ ರೀತಿಯಿಂದ ಬರೆಯಲ್ಪಟ್ಟಿತ್ತು. ದಕ್ಷಿಣದ ಒಬ್ಬ ದೊಡ್ಡ ಕಿಲ್ಲೇದಾರನು ಬರೆದಂತೆ ಅದು ಬರೆದಿದ್ದು, ಆ ಪತ್ರದಲ್ಲಿ "ನೀವು ಅಜ್ಞಾಪಿಸಿದಂತೆ ಸೈನ್ಯವನ್ನು ಕಳಿಸಿಕೊಟ್ಟಿರುತ್ತೇನೆ. ಸಾಮಗ್ರಿಯು ಪರಿಪೂರ್ಣವಾಗಿರುತ್ತದೆ. ನಿಮ್ಮ ಇಚ್ಛೆಯೂ ಪೂರ್ಣವಾದರೆ ಹಾದಿಯೊಳಗಿನದೊಂದು ದೊಡ್ಡ ಮುಳ್ಳನ್ನು ಕಿತ್ತಿ ಚಲ್ಲಿದ ಹಾಗಾಗುತ್ತದೆ.” ಎಂದು ಬರೆದಿತ್ತು. ಈ ಪತ್ರದ ಸಂಗತಿಯನ್ನು ಕೇಳಿದ ಕೂಡಲೆ ಬಾದಶಹನು ಸಂತಪ್ತನಾಗಿ, ಈಗಲೇ ತಿರುಮಲನನ್ನು ಕರೆಸಿ ಈ ಪತ್ರದ ಅರ್ಥವೇನೆಂದು ಕೇಳಿ, ಅವನ ತಲೆ ಹಾರಿಸಬೇಕೆಂದು ಮಾಡಿದನು ; ಆದರೆ ಆತನ ಮಂತ್ರಿಯಾದ ಆಸದಖಾನನು- “ಹೀಗೆ ಅವಸರ ಮಾಡುವದು ಸರಿಯಲ್ಲ, ಸ್ವಲ್ಪ ಸಮಾಧಾನ ತಾಳಬೇಕು. ಇಲ್ಲದಿದ್ದರೆ ಸಂಕಟಕ್ಕೆ ಗುರಿಯಾಗಿ ಪೇಚಾಡಬೇಕಾದೀತು, ತಿರುಮಲನು ಈಗಲೇ ತುಂಗಭದ್ರೆಯ ಕಡೆಯ ಮಾರ್ಗವನ್ನು ಕಟ್ಟಿ ನಮ್ಮನ್ನು ನಾಶಮಾಡಿದರೆ ಏನು ಮಾಡಬೇಕು ? ಆದ್ದರಿಂದ ಈಗ ದೊರೆತದ್ದರಲ್ಲಿ ಸಂತುಷ್ಟರಾಗಿ ನಾವು ಮೊದಲು ತುಂಗಭದ್ರೆಯನ್ನು ದಾಟಿಹೋಗೋಣ. ಒಂದು ಸೈನ್ಯದ ಭಾಗವು ಮಾತ್ರ ತುಂಗಭದ್ರೆಯ ಈಚೆಯ ಕಡೆಗೆ ಇರಲಿ,” ಎಂದು ಹೇಳಿದನು.
ಹೀಗೆ ಆಲೋಚನೆಗಳು ನಡೆದಿರುವಾಗ ಮತ್ತೊಂದು ಚಮತ್ಕಾರದ ಸಂಗತಿಯು ಒದಗಿತು. ಬಾದಶಹನು ಒಂದು ದಿನ ಮುಂಜಾನೆ ಒಂದು ಸವಾರರ ಟೋಳಿಯನ್ನು ತುಂಗಭದ್ರೆಯ ಆಚೆಗೆ ಹೋಗಲಿಕ್ಕೆ ಕಳಿಸಿರಲು, ತುಂಗಭದ್ರೆಯ ಕಾವಲುಗಾರರು “ತಿರುಮಲರಾಯರು ಪ್ರತಿಬಂಧಿಸಲಿಕ್ಕೆ ಹೇಳಿದ್ದಾರೆಂದು” ಆ ಸವಾರನನ್ನು ಮುಂದಕ್ಕೆ ಹೋಗಗೊಡಲಿಲ್ಲ. ಈ ವರಮಾನವನ್ನು ಆ ಟೋಳಿಯ ಮುಖ್ಯಸ್ಥನು ಬಾದಶಹನ ಮುಂದೆ ಹೇಳಲು, ಆತನು ಗಾಬರಿಯಾದನು. ತಿರುಮಲನು ಮಹಾಕಪಟಿಯಿದ್ದು ನಮ್ಮ ನಾಶಮಾಡಲಿಕ್ಕೆ ಹಿಂದು ಮುಂದು ನೋಡುವವನಲ್ಲವಾದ್ದರಿಂದ, ನಾವು ಇನ್ನು ಬೇಗನೆ ವಿಜಯನಗರವನ್ನು ಬಿಡಬೇಕೆಂದು ಮಂತ್ರಿಯೊಡನೆ ಬಾದಶಹನು ಆಲೋಚಿಸಿದನು. ತಿರುಮಲನ ವಿಷಯವಾಗಿ ಸಂಶಯ ಬಂದಂತೆ ಈಗ ತಾನು ತೋರಿಸಿದರೆ, ಈಗಲೇ ಅನರ್ಥವಾದೀತೆಂದು ತಿಳಿದು, ಬಾದಶಹನು ತನ್ನ ಸಂಶಯವನ್ನು ಹೊರಗೆ ತೋರಗೊಡದೆ, ತಿರುಮಲನ ಸಮ್ಮತಿಯಿಂದ ತುಂಗಭದ್ರೆಯನ್ನು ದಾಟಲಿಕ್ಕೆ ಆತುರನಾದನು. ಹೀಗೆ ಚಾಣಾಕ್ಷನಾದ ರಾಮರಾಜನು ಬಾದಶಹನ ವಿಷಯವಾಗಿ ತಿರುಮಲನಲ್ಲಿಯೂ ತಿರುಮಲನ ವಿಷಯವಾಗಿ ಬಾದಶಹನಲ್ಲಿಯೂ ಸಂಶಯವು ಉತ್ಪನ್ನವಾಗುವಂತೆ ಮಾಡಿದನು. ಬಾದಶಹನು ಒಂದು ದಿನ ತಿರುಮಲನನ್ನು ಕರಿಸಿ, ನಾನು ಇನ್ನು ವಿಜಾಪುರಕ್ಕೆ ಹೋಗುವೆನೆಂದು ಹೇಳಲು, ತಿರುಮಲನು ಮನಸ್ಸಿನಲ್ಲಿ ಸಂತೋಷಪಟ್ಟರೂ ಲೋಕರೀತಿಯಂತೆ ಬಾದಶಹನಿಗೆ- “ಇಷ್ಟು ಅವಸರವೇಕೆ ? ಇನ್ನು ನಾಲ್ಕು ದಿನ ಇದ್ದು ಹೋಗಬೇಕು.” ಮನಸ್ಸಿನಲ್ಲಿ-ಈ ಠಕ್ಕನ ಸಿದ್ಧತೆಯು ಇನ್ನೂ ಪೂರ್ಣವಾದಂತೆ ತೋರುವದಿಲ್ಲ! ಆದ್ದರಿಂದಲೇ ಇನ್ನು ನಾಲ್ಕು ದಿನ ಇರೆಂದು ನನಗೆ ಹೇಳುತ್ತಾನೆ; ಆದರೆ ಈತನಿಂದ ಕಪ್ಪ ಕಾಣಿಕೆಯ ರಕಮನ್ನು ಇಸಕೊಂಡು, ಮಾಂಡಲೀಕತ್ವವನ್ನು ಒಪ್ಪಿಕೊಂಡ ಪತ್ರದ ಮೇಲೆ ಈತನ ಸಹಿ ಮಾಡಿಸಿಕೊಂಡು ಬೇಗನೆ ವಿಜಯನಗರವನ್ನು ಬಿಡಬೇಕು ಎಂದು ಯೋಚಿಸಿ ಕಪ್ಪದ ಹಣವನ್ನು ಬೇಗನೆ ಕೊಡಲಿಕ್ಕೂ, ಕರಾರ ಪತ್ರದ ಮೇಲೆ ಬೇಗನೆ ಸಹಿ ಮಾಡಲಿಕ್ಕೂ ತಿರುಮಲನಿಗೆ ಆಗ್ರಹ ಮಾಡಹತ್ತಿದನು. ಆಗ ತಿರುಮಲನು- “ನಾನು ಬೇಗನೆ ಕಪ್ಪದ ಹಣವನ್ನು ಕೊಡದಿದ್ರೆ, ಅದನ್ನೇ ನೆವಮಾಡಿ ಈತನು ಏನಾದರೂ ಅನರ್ಥ ಮಾಡಿಯಾನೆಂದು ತಿಳಿದು, ಕಪ್ಪದ ಎರಡು ಕೋಟಿ ರೂಪಾಯಿಗಳನ್ನೂ, ಬೇರೆ ನಜರಾಣಿಗಳನ್ನೂ ಕೊಟ್ಟು, ಕರಾರ ಪತ್ರಿಕೆಯ ಮೇಲೆ ಸಹಿ ಮಾಡಿದನು. ಆ ಪತ್ರದಲ್ಲಿ ವಿಜಯನಗರದ ಅರಸರು ವಿಜಾಪುರದ ಬಾದಶಹನ ಮಾಂಡಲೀಕರೆಂದು ಸ್ಪಷ್ಟವಾಗಿ ಒಪ್ಪಿಕೊಂಡಿತ್ತು. ಬಾದಶಹನು ತನ್ನ ಕೆಲಸವಾದ ಮೇಲೆ ಮತ್ತೆ ತಿರುಮಲನಿಗೆ- “ನಮ್ಮ ದರ್ಗೆಯು ಇನ್ನು ನಮ್ಮ ಸ್ವಾಧೀನದಲ್ಲಿರಬೇಕು. ನಮ್ಮ ವಕೀಲನೊಬ್ಬನು ನಿಮ್ಮ ರಾಜಧಾನಿಯಲ್ಲಿರುವನು, ಆತನಿಗೆ ದರ್ಗೆಗೆ ಸಮೀಪವಾಗಿರುವ ಕುಂಜವನವನ್ನು ಇರಲಿಕ್ಕೆ ಕೊಡಬೇಕು,” ಎಂದು ಹೇಳಿದನು. ಅದಕ್ಕೂ ತಿರುಮಲನು ಒಪ್ಪಿಕೊಂಡನು ಆತನಿಗೆ ಬಾದಶಹನು ಬೇಗನೆ ರಾಜಧಾನಿಯನ್ನು ಬಿಟ್ಟು ಹೋದರೆ ಸಾಕಾಗಿತ್ತು. ಈ ಮೇರೆಗೆ ತನ್ನ ಮನೋದಯಗಳೆಲ್ಲ ಪೂರ್ಣವಾದಂತೆಯಾದ್ದರಿಂದ ಬಾದಶಹನು ತಾನು ಇಂದೇ ತುಂಗಭದ್ರೆಯನ್ನು ದಾಟಿ ಹೋಗಿ ತಿರುಮಲನ ಕಪಟದ ಕೃತ್ಯಗಳಿಗಾಗಿ ಅವನ ಪ್ರಾಯಶ್ಚಿತ್ತ ಮಾಡಬೇಕೆಂದು ಯೋಚಿಸಿ ವಿಜಯನಗರವನ್ನು ಬಿಟ್ಟುಹೋದನು.
ಬಾದಶಹನು ರಾಜಧಾನಿಯನ್ನು ಬಿಟ್ಟು ಹೋದದ್ದರಿಂದ ತಿರುಮಲನಿಗೂ, ರಾಮರಾಜನಿಗೂ ಕೂಡಿಯೇ ಸಂತೋಷವಾಯಿತು. ಬಾದಶಹನು ಹೋದದ್ದರಿಂದ ರಾಮರಾಜನಿಗೆ ತನ್ನ ಒಳಸಂಚಿನ ಕಾರ್ಯವನ್ನು ನಡಿಸಲಿಕ್ಕೆ ಒಂದು ದಿವಸ ಅವಕಾಶವು ಸಹ ಬೇಕಾಗಿದ್ದಿಲ್ಲ. ಅದರಂತೆ ಆತನ ಸಿದ್ಧತೆಯೂ ಆಗಿತ್ತು. ಯಾವತ್ತೂ ಸೈನಿಕರನ್ನು, ಒಡಕೊಂಡಿದ್ದರಿಂದ ರಾಮರಾಜನು ಅಕಸ್ಮಾತ್ತಾಗಿ ತಿರುಮಲನ ಮನೆಯನ್ನು ಮುತ್ತಿದನು. ಮೊದಲೇ ಅಂಜುಬುರುಕನಾದ ತಿರುಮಲನಿಗೆ ಈ ಆಕಸ್ಮಿಕ ಪ್ರಸಂಗದಿಂದ ಹುಚ್ಚೇ ಹಿಡಿಯಿತೆಂದು ಹೇಳಬಹುದು. ರಾಮರಾಜನು ತಿರುಮಲನನ್ನು ಸೆರೆಹಿಡಿಯಬೇಕೆಂದು ಮಾತ್ರ ಮಾಡಿದ್ದನು. ಆದರೆ ತಿರುಮಲನು ಇನ್ನು ಮೇಲೆ ತನ್ನ ಜೀವವು ಉಳಿಯದೆಂದು ನಿಶ್ಚಯಿಸಿದನು ತನ್ನ ಮಿತ್ರನಾದ ಆದಿಲಶಹನಿಗೆ ಸುದ್ದಿಯನ್ನು ಕಳಿಸಲಿಕ್ಕೂ ಆತನಿಗೆ ಮಾರ್ಗವಿಲ್ಲದೆ ಹೋಯಿತು. ತಾನು ಬಾದಶಹನನ್ನು ಕರೆಸಿ ಮಿತಿಮೀರಿ ಕಪ್ಪ ಕೊಟ್ಟದ್ದೂ, ಆತನ ಮಾಂಡಲಿಕತ್ವವನ್ನು ಒಪ್ಪಿಕೊಂಡದ್ದೂ ಅಪರಾಧವಾಯಿತೆಂದು ಆತನು ಈಗ ಪಶ್ಚಾತ್ತಾಪ ಪಡಹತ್ತಿದನು. ಇನ್ನು ಮೇಲೆ ತಾನು ಎಷ್ಟು ಪಶ್ಚಾತ್ತಾಪಪಟ್ಟು, ಎಷ್ಟು ಬೇಡಿಕೊಂಡರೂ ಜನರು ತನ್ನನ್ನು ದೇಶದ್ರೋಹಿ ಎಂದು ತಿರಸ್ಕರಿಸಿ ತನ್ನ ಪ್ರಾಣಹರಣ ಮಾಡುವರಲ್ಲದೆ, ತನ್ನನ್ನು ಕ್ಷಮಿಸರೆಂದು ಆತನು ತಿಳಿದುಕೊಂಡನು. ಈ ವಿಚಾರಗಳಿಂದ ಆತನಿಗೆ ಹುಚ್ಚೇ ಹಿಡಿದಂತಾಯಿತು. ಆತನು ಅರಮನೆಯ ಗಜಶಾಲೆಯೊಳಗಿನ ಆನೆಗಳನ್ನೆಲ್ಲ ತರಿಸಿ ಅವುಗಳ ಬಾಲವನ್ನು ಕತ್ತಿರಿಸಿ, ಕಣ್ಣುಗಳನ್ನು ಕಳೆದು ತನ್ನ ವೈರಿಗಳ ನಾಶಮಾಡುವದಕ್ಕಾಗಿ ಅವನ್ನು ಹೊರಗೆ ಬಿಟ್ಟನು. ತಾನು ಈಗ ಎರಡು ವರ್ಷಗಳಿಂದ ತನ್ನ ಮನೆಯಲ್ಲಿ ತುಂಬಿಕೊಂಡಿದ್ದ ಬಹು ಬೆಲೆಯುಳ್ಳ ಮುತ್ತು ರತ್ನಗಳ ಆಭರಣಗಳನ್ನು ತರಿಸಿ, ಅವುಗಳೊಳಗಿನ ಮುತ್ತು ರತ್ನಗಳನ್ನು ಒಡೆದು ಚೂರು ಚೂರು ಮಾಡಿದನು. ಈ ಶ್ರೇಷ್ಠವಾದ ಅಲಂಕಾರಗಳನ್ನು ವಿಜಯನಗರದ ಪರಾಕ್ರಮಶಾಲಿಗಳಾದ ಎಷ್ಟೋ ಅರಸರು ಹಲವು ರಾಜ್ಯಗಳನ್ನು ಮಣ್ಣುಗೂಡಿಸಿ ಸಂಪಾದಿಸಿದ್ದರು. ಅಂಥವನ್ನು ಈ ದುಷ್ಟ ತಿರುಮಲನು ಕೆಲವು ತಾಸುಗಳಲ್ಲಿ ನಾಶಮಾಡಿಬಿಟ್ಟನು! ಆಮೇಲೆ ಆತನು ಕಂಬಕ್ಕೆ ಕತ್ತಿಯನ್ನು ಕಟ್ಟಿ, ಅದರ ಮೇಲೆ ಕಸುವಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡನು. ಪ್ರಿಯವಾಚಕರೇ, ಕನ್ನಡಿಗರ ಅಭಿಮಾನಾಸ್ಪದವಾದ ಈ ಪ್ರಬಲ ರಾಜ್ಯದ ಐಶ್ವರ್‍ಯ ನಾಶವನ್ನು ತಿರುಮಲನು ಈ ಮೇರೆಗೆ ಹಲವು ಬಗೆಯಿಂದ ಮಾಡಿದ್ದನ್ನು ನೋಡಿ. ನಿಮಗೆ ಬಹು ವ್ಯಸನವಾಗಿರಬಹುದಲ್ಲವೆ? ಆದರೆ ಉಪಾಯವಿಲ್ಲ. ಈ ಜಗತ್ತಿನ ರೂಪಾಂತರದ ಕಡೆಗೆ ಲಕ್ಷ್ಯಕೊಟ್ಟು, ಈ ಜಗತ್ತಿನಲ್ಲಿ ಯಾವದೂ ಸ್ಥಿರವಲ್ಲೆಂಬುದನ್ನು ಲಕ್ಷಿಸಿ, ಸಮಾಧಾನ ಮಾಡಿಕೊಂಡು ಮುಂದಿನ ಸಂಗತಿಯನ್ನು ನೀವು ಓದಬೇಕು.
ಈ ಮೇರೆಗೆ ತಿರುಮಲನ ಅಂತ್ಯವಾದ ಬಳಿಕ ರಾಜ್ಯದ ಸೂತ್ರಗಳು ಮತ್ತೆ ರಾಮರಾಜನ ಕೈಯಲ್ಲಿ ಬಂದವು, ಆತನು ಮೊದಲು ಬಾಶಹನ ಸಮಾಚಾರವನ್ನು ತೆಗೆದುಕೊಂಡು, ಸಾಧಿಸಿದರೆ, ತಾವು ಕೊಟ್ಟಿದ್ದ ಕಪ್ಪದ ದೊಡ್ಡ ರಕಮ್‌ಅನ್ನು ಕಸಕೊಳ್ಳಬೇಕೆಂದು ಒಮ್ಮೆ ಯೋಚಿಸಿದನು ; ಆದರೆ ಈ ಕೆಲಸವು ಸುಲಭವಲ್ಲ ಎಂಬಮಾತು ಲಕ್ಷ್ಯಕ್ಕೆ ಬಂದದ್ದರಿಂದ, ಆತನು ಮೊದಲು ತನ್ನ ಮನೆಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಂಡ ಬಳಿಕ ಹಿಂದುಗಡೆ ಬಾದಶಹನ ಸಮಾಚಾರ ತಕ್ಕೊಳೋಣವೆಂದು ನಿಶ್ಚಯಿಸಿ ಮೊದಲು ತಿರುಮಲನ ಪಕ್ಷದ ಜನರ ಮೊದಲಿನ ಅಧಿಕಾರಗಳನ್ನು ಅವರ ಕಡೆಗೆ ಬಿಟ್ಟು - "ನಾನು ತಿರುಮಲನಿಗೆ ಕೇಡು ಬಗೆಯುತ್ತಿದ್ದಿಲ್ಲ; ಆತನು ಜೀವದಿಂದಿದ್ದರೆ ಆತನಿಗೇ ಮಂತ್ರಿ ಪದವಿಯನ್ನು ಕೊಟ್ಟು, ಅತನ ಕೈಕೆಳಗೆ ನಾನು ಇರುತ್ತಿದ್ದೆನು. ರಾಜ್ಯದ ಗೌರವವನ್ನು ನಷ್ಟಪಡಿಸಿದ್ದರಿಂದ ನಾನು ತಿರುಮಲನ ಗೊಡವಿಗೆ ಹೋಗಬೇಕಾಯಿತು" ಎಂದು ಹೇಳಿದನು. ಇದರಿಂದ ತಿರುಮಲನ ಪಕ್ಷದವರಿಗೆ ಸಮಾಧಾನವಾಯಿತು. ಮುಸಲ್ಮಾನರ ಕೈಯು ತಮ್ಮ ರಾಜ್ಯದಲ್ಲಿ ಸೇರಿದ್ದಕ್ಕಾಗಿ ರಾಮರಾಜನಿಗೆ ಬಹಳ ಅಸಮಾಧಾನವಾಗಿತ್ತು. ಮೊದಲು ಆತನು ಮುಸಲ್ಮಾನರದೊಂದು ಮಸೀದೆಯು (ದರ್ಗೆಯು) ತನ್ನ ರಾಜ್ಯದಲ್ಲಿದ್ದದ್ದಕ್ಕಾಗಿ ಅಸಮಾಧಾನಪಡುತ್ತಿರಲು, ಈಗ ಆ ದರ್ಗೆಯು ಮುಸಲ್ಮಾನರ ಕೈಸೇರಿದ್ದಲ್ಲದೆ, ತನ್ನ ಕುಂಜವನವು ಸಹ ಬಾದಶಹನ ವಕೀಲನ ವಾಸಸ್ಥಳವಾಯಿತೆಂದು ಆತನು ಬಹಳ ಅಸಮಾಧಾನ ಪಟ್ಟನು. ಆತನು ಬಾದಶಹನಿಗೆ- “ಕುಂಜವನದ ಬದಲು ಬೇರೆ ಸ್ಥಳವನ್ನು ನಿಮ್ಮ ವಕೀಲನಿಗೆ ಇರಲಿಕ್ಕೆ ಕೊಡುತ್ತೇವೆ” ಎಂದು ತಿಳಿಸಲು, ಅದಕ್ಕೆ ಬಾದಶಹನು- “ನಮ್ಮ ವಕೀಲನಿಗೆ ಅದೇ ಸ್ಥಳವು ಯೋಗ್ಯವಾದದ್ದು ಎರಡನೆಯ ಸ್ಥಳವು ನಮಗೆ ಬೇಕಾಗಿಲ್ಲ. ಕುಂಜವನವನ್ನು ನೀವು ಕೊಡದಿದ್ದರೆ, ನಮ್ಮ ವಕೀಲನು ನಿಮ್ಮಲ್ಲಿರುವದಕ್ಕೆ ನಿಮ್ಮ ಒಪ್ಪಿಗೆಯಿರುವದಿಲ್ಲೆಂದು ತಿಳಿದು, ನಾವು ಯೋಗ್ಯವ್ಯವಸ್ಥೆ ಮಾಡುವೆವು” ಎಂದು ಸ್ವಲ್ಪ ಕಠೋರತನದಿಂದ ಉತ್ತರವನ್ನು ಬರೆದು ಕಳಿಸಿದನು. ಅದನ್ನು ಓದಿ ರಾಮರಾಜನು ಸಿಟ್ಟು ಬೆಂಕಿಯಾದನು. “ನೀವು ಮಾಡತಕ್ಕದ್ದನ್ನು ಅವಶ್ಯವಾಗಿ ಮಾಡಿರಿ, ನಾನಂತು ಕುಂಜವನವನ್ನು ನಿಮಗೆ ಕೊಡುವದಿಲ್ಲ” ಎಂದು ಸ್ಪಷ್ಟವಾಗಿ ಬರೆಯಬೇಕೆಂದು ಆತನು ಯೋಚಿಸಿದನು; ಆದರೆ ಮತ್ತೆ ವಿಚಾರ ಮಾಡಿ, ಇದು ಹೀಗೆ ಏರಿಹೋಗಲಿಕ್ಕೆ ಸಮಯವಲ್ಲ, ಈಗ ಸಮಾಧಾನ ಮಾಡಿಕೊಳ್ಳುವದೇ ಯೋಗ್ಯವು, ಎಂದು ತಿಳಿದು, ಬಾದಶಹನ ವಕೀಲನಿಗೆ ಕುಂಜವನವನ್ನು ತೆರವು ಮಾಡಿಕೊಟ್ಟನು. ಇತ್ತ ಬಾದಶಹನು ರಾಮರಾಜನಿಗೆ-“ನಿಮ್ಮ ರಾಜ್ಯದಲ್ಲಿ ಸ್ವಸ್ಥತೆಯಾದ ಬಳಿಕ ನೀವು ಸೇರಿಸುವ ಮೊದಲನೆಯ ದರ್ಬಾರಕ್ಕೆ ನಮ್ಮ ವಕೀಲನು ಬರುವನು; ಆದ್ದರಿಂದ ದರ್ಬಾರು ನೆರವೇರಿಸಲಿಕ್ಕೆ ಎಂಟು ದಿವಸಗಳಿರುತ್ತಲೆ ನಮಗೆ ದರ್ಬಾರದ ದಿವಸವನ್ನು ತಿಳಿಸಬೇಕು;" ಎಂದು ಪತ್ರವನ್ನು ಬರೆದನು. ಆ ಪತ್ರವನ್ನು ವಿಶೇಷವಾಗಿ ಆ ಪತ್ರದೊಳಗಿನ ಔದ್ಧತ್ಯದ ಬರಹವನ್ನು ನೋಡಿ ರಾಮರಾಜನ ಸರ್ವಾಂಗವು ತಪ್ತವಾಯಿತು; ಆದರೆ ಇದು ತಡಕೊಂಡು ಹೋಗತಕ್ಕ ಕಾಲವು; ಮುಂದುವರಿದು ಹೋಗತಕ್ಕ ಕಾಲವಲ್ಲೆಂಬ ಮಾತು ಲಕ್ಷ್ಯದಲ್ಲಿ ಬಂದದ್ದರಿಂದ, ಆತನಿಗೆ ಬಹಳ ವ್ಯಸನವಾಯಿತು. ಆತನು ಹೆಚ್ಚಿನ ಉಸಾಬರಿಗೆ ಹೋಗದೆ, ದರ್ಬಾರದ ದಿನವನ್ನು ಗೊತ್ತು ಮಾಡಿ ಅದನ್ನು ಮುಂಗಡವಾಗಿ ಬಾದಶಹನಿಗೆ ಆತನ ಇಚ್ಛೆಯಂತೆ ತಿಳಿಸಿದನು.
****