ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮ ಕಥೆ/ಮಾತೃದ್ರೋಹೋಪಕ್ರಮ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೭೩-೧೮೨

೧೯ನೆಯ ಪ್ರಕರಣ

ಮಾತೃದ್ರೋಹೋಪಕ್ರಮ

ಈ ಮೇರೆಗೆ ರಾಮರಾಜನು ಸಿಟ್ಟಿನಿಂದ ಹೋಗುವದನ್ನು ರಣಮಸ್ತಖಾನನು ಜನರು ನೋಡಿ ಸಮಾಧಾನ ಪಟ್ಟರು. ಅವರಿಬ್ಬರು ಕೂಗಿ ಕೂಗಿ ಮಾತಾಡಿ ಕಲಹ ಬೆಳಿಸಿದ್ದನ್ನು ಕೆಲವರು ಕೇಳಿದ್ದರು. ಇವರಿಬ್ಬರ ಕಲಹವು ಆ ರಣಮಸ್ತಖಾನನ ಜನರಿಗೆ ಬಹು ಇಷ್ಟವಾಗಿ ತೋರಿತು. ಅವರಲ್ಲಿ ಕೆಲವರು “ನಾನು ಹೀಗೆ ಆಗುವದೆಂದು ಮೊದಲೇ ತರ್ಕಿಸಿದ್ದೆವು” ಎಂದು ಹೇಳಿದರು. ಕೆಲವರು ಹೀಗಾದದ್ದು ಬಹಳ ನೆಟ್ಟಗಾಯಿತು. ರಾಮರಾಜನು ಬಹು ಸವಿಮಾತಿನವನಾದ್ದರಿಂದ ನಮ್ಮ ತರುಣ ಸರದಾರನ ಮನಸ್ಸನ್ನು ಎಲ್ಲಿ ಕೆಡಿಸುವನೋ ಎಂಬ ಅಂಜಿಕೆಯು ನಮಗೆ ಬಹಳವಾಗಿ ಇತ್ತು, ತಾನು ಇಂಥ ದೊಡ್ಡ ರಾಜ್ಯದ ಶ್ರೇಷ್ಠ ಅಧಿಕಾರಿ ಎಂದರೇನು ? ಸಂಗಡ ಯಾರನ್ನು ಕರಕೊಳ್ಳದೆ ತಾನು ಒಬ್ಬನೇ ನಮ್ಮ ಛಾವಣಗೆ ಬರುವದೆಂದರೇನು ? ಇದೆಲ್ಲ ಆತನ ಕಪಟನಾಟಕದ ಆರಂಭವೆಂದು ನಾವು ತಿಳಿದಿದ್ದೆವು; ಆದರೆ ಇಂದಿನ ಅವರ ಜಗಳದಿಂದ ಒಂದು ಅರಿಷ್ಟವು ಹಿಂಗಿದಹಾಗಾಯಿತು ಎಂದು ಮಾತನಾಡಿದರು. ಹೀಗೆ ಒಬ್ಬರು ಒಂದು ವಿಧವಾಗಿ, ಮತ್ತೊಬ್ಬರು ಮತ್ತೊಂದು ವಿಧವಾಗಿ ಮಾತಾಡಿ ಎಲ್ಲರೂ ಸಮಾಧಾನ ಪಟ್ಟರು ; ಆದರೆ ರಣಮಸ್ತಖಾನನಿಗೆ ಮಾತ್ರ ಸಮಾಧಾನವಾಗಿದ್ದಿಲ್ಲ. ರಾಮರಾಜನು ಹೋದಬಳಿಕ ಅವನು ವಿಚಾರಮಗ್ನನಾದನು. ಈಗ ತಾನು ನಡೆಸಿದ ಒಳಸಂಚನ್ನು ತನ್ನ ತಾಯಿಗೆ ಹೇಳಬೇಕೋ ಹೇಳಬಾರದೋ ಎಂಬ ವಿಚಾರವು ಆತನಲ್ಲಿ ಉತ್ಪನ್ನವಾಯಿತು. ಈ ವರೆಗೆ ಆತನು ಹೀಗೆ ಎಂದೂ ಆಲೋಚಿಸದೆ, ನಡೆದ ಸಂಗತಿಗಳನ್ನೆಲ್ಲ ಆಗಾಗ್ಗೆ ಸರಳ ಮನಸ್ಸಿನಿಂದ ತನ್ನ ತಾಯಿಯ ಮುಂದೆ ಹೇಳುತ್ತ, ಆಕೆಯ ಆಲೋಚನೆಗಳನ್ನು ಕೇಳಿಕೊಳ್ಳುತ್ತ ಬಂದಿದ್ದನು. ನೂರಜಹಾನಳೊಡನೆ ಪ್ರೇಮ ಸಲ್ಲಾಪಗಳೂ, ಪ್ರೇಮಸಂಧಿಯೂ ಆದಂದಿನಿಂದ ಆತನ ಈ ಸ್ಥಿತಿಯು ರೂಪಾಂತರಿಸಹತ್ತಿತು. ದಿನದಿನಕ್ಕೆ ಆತನು ಹೆಚ್ಚು ಹೆಚ್ಚು ಮೂಕನೂ ಉದಾಸೀನನೂ ಆಗಹತ್ತಿದನು. ನನ್ನ ತಾಯಿಯು ಒಳ್ಳೆಯ ಚತುರಳು, ತೀಕ್ಷ್ಣ ದೃಷ್ಟಿಯವಳು ಮೇಲಾಗಿ ಅತ್ಯಂತ ಸತ್ ಶೀಲಳು ತಗಲುದಾಟುಗಳನ್ನು ತಡೆಯದವಳು; ಅಂದಬಳಿಕ ವಿಶ್ವಾಸಘಾತದ ಮಜಲಿಗೆ ಬಂದಿರುವ ನನ್ನ ನೀಚ ಒಳಸಂಚನ್ನು ಆಕೆ ಹ್ಯಾಗೆ ಒಪ್ಪಿಕೊಂಡಾಳು? ಆಕೆಯು ಒಪ್ಪಿಕೊಳ್ಳದ ಬಳಿಕ ನನ್ನ ಕಾರ್ಯವು ಸಾಧಿಸುವ ಬಗೆ ಹೇಗೆ? ಆದ್ದರಿಂದ ನನ್ನ ವಿಚಾರಗಳನ್ನೂ, ಉದ್ದೇಶವನ್ನೂ ನನ್ನ ಹೊರತು ಬೇರೆ ಯಾರಿಗೂ ಗೊತ್ತಾಗದಂತೆ ನಾನೇ ಎಚ್ಚರಪಡುವದು ಅವಶ್ಯವು, ಎಂದು ಆತನು ನಿಶ್ಚಯಿಸಿದನು. ನೂರಜಹಾನಳು ಬರುವದಕ್ಕಿಂತ ಮೊದಲು ರಣಮಸ್ತಖಾನನ ಪ್ರೇಮವು ಆತನ ತಾಯಿಯಲ್ಲಿಯೇ ಒಟ್ಟುಗೂಡಿತ್ತು; ಆದ್ದರಿಂದ ಆತನಿಗೆ ತನ್ನ ತಾಯಿಯ ಪ್ರತ್ಯಕ್ಷ ದೇವತಾಸ್ತ್ರೀಯಂತೆ ಕಾಣುತ್ತಿದ್ದಳು. ಆದರೆ ಆತನು ನೂರಜಹಾನಳ ಮುಂದೆ “ರಾಮರಾಜನ ಶೀರಸನ್ನು ತುಂಡರಿಸಿ ನಿನಗೊಪ್ಪಿಸುವೆನೆಂದು ಪ್ರತಿಜ್ಞೆ ಮಾಡಿದ ದಿವಸ, ಆ ಪ್ರೇಮದಲ್ಲಿ ಸಮನಾಗಿ ಎರಡು ಭಾಗವಾಗಿ ಒಂದು ಭಾಗವು ನೂರಜಹಾನಳಲ್ಲಿ, ಒಂದು ಭಾಗವು ಮಾಸಾಹೇಬರಲ್ಲಿ ಹಂಚಲ್ಪಟ್ಟವು. ಮುಂದೆ ರಣಮಸ್ತಖಾನನು ನೂರಜಹಾನಳನ್ನು ಕರಕೊಂಡು ವಿಜಾಪುರಕ್ಕೆ ಹೋದ ಬಳಿಕ, ಅಲ್ಲಿ ತನ್ನ ಕುಲಶೀಲಗಳನ್ನು ಸ್ಪಷ್ಟವಾಗಿ ಹೇಳಿ, ನೂರಜಹಾನಳ ಹಳವಂಡವು ನೂರಜಹಾನಳಲ್ಲಿ ಒಟ್ಟುಗೂಡುತ್ತ ಹೋಗಿ, ತಾಯಿಯ ಮೇಲಿನ ಆತನ ಮಮತೆಯು ಕಡಿಮೆಯಾಗಲು ಆತನ ದೂಷಿತ ಮನಸ್ಸಿನಲ್ಲಿ ಸ್ವಾರ್ಥಮೂಲವಾದ ವಿಶ್ವಾಸಘಾತಾದಿ ದುಗ್ವಿಚಾರಗಳು ಉತ್ಪನ್ನವಾಗ ಹತ್ತಿದವು. ಆಯಾ ಕಾಲದಲ್ಲಿ ಹೀಗೆ ತನ್ನ ಮನಸ್ಸಿನ ರೂಪಾಂತರವಾದದ್ದು ರಣಮಸ್ತಖಾನನ ಅನುಭವಕ್ಕೆ ಬರಲಿಲ್ಲ. ತನ್ನ ತಾಯಿಯು ವಿಜಾಪುರದಿಂದ ತಿರುಗಿ ಬಂದಿದ್ದರೂ ಚಿಂತೆಯಿಲ್ಲೆಂದು ಆತನು ಭಾವಿಸಹತ್ತಿದನು; ಯಾಕೆಂದರೆ ತನ್ನ ಕಪಟಕೃತಿಯು ಫಲಿಸಲಿಕ್ಕೆ ತಾಯಿಯು ಸಾನಿಧ್ಯವು ಆತನಿಗೆ ಘಾತಕವಾಗಿ ತೋರಹತ್ತಿತ್ತು ! ಆದರೆ ರಣಮಸ್ತಖಾನನ ಈ ತೋರಿಕೆಗೂ ಆತನ ತಾಯಿಯ ಬರುವಿಕೆಗೂ ಏನೂ ಸಂಬಂಧವಿದ್ದಿಲ್ಲ. ಆತನ ತಾಯಿಯು ತಾನು ಬರುವ ಹಾಗೆ ವಿಜಾಪುರದಿಂದ ಹೊರಟು ಕುಂಜವನಕ್ಕೆ ಒಂದು ದಿನ ಬಂದುಬಿಟ್ಟಳು.

ಮಾಸಾಹೇಬರು ಬರುವದರೊಳಗಾಗಿ ರಣಮಸ್ತಖಾನನ ಮನಸ್ಸಿನ ನಿಶ್ಚಯವಾಗಿ ಆತನು ತನ್ನ ಒಳಸಂಚಿನಂತೆ ಕೃತಿಗಳನ್ನು ನಡೆಸಹತ್ತಿದನು. ಮಹಮೂದಖಾನನ ಪರವಾನಿಗೆಯನ್ನು ಪಡೆದು ವಿಜಯನಗರದ ದರ್ಬಾರಕ್ಕೆ ದಿನಾಲು, ಇಲ್ಲವೆ ಒಂದು ದಿನ ಬಿಟ್ಟು ಒಂದು ದಿನ ಹೋಗಹತ್ತಿದನು. ಮಧ್ಯರಾತ್ರಿಯಲ್ಲಿ ಸಹ ಆತನು ಅಕಸ್ಮಾತ್ತಾಗಿ ವಿಜಯನಗರಕ್ಕೆ ಹೋಗುತ್ತಲಿದ್ದನು. ತನ್ನ ವಿಚಾರವನ್ನು ತನ್ನ ತಾಯಿಗೆ ತಿಳಿಸಲಿಕ್ಕಿಲ್ಲೆಂದು ನಿಶ್ಚಯವನ್ನಂತು ಆತನು ಯಾವಾಗೋ ಮಾಡಿಬಿಟ್ಟನು. ಮಾಸಾಹೇಬರು ಬಂದ ಬಳಿಕ ರಣಮಸ್ತಖಾನನು ಒಮ್ಮೆ ಅವರ ದರ್ಶನಕ್ಕೆ ಹೋದನು. ಆಗ ಹೆಚ್ಚಿನ ಮಾತಿಲ್ಲ. ಕಥೆಯಿಲ್ಲ. ಸುಮ್ಮನೆ ಕುಳಿತುಕೊಂಡನು, ತಾವು ಹೋಗುವಾಗ ಮಗನ ಮೋರೆಯ ಮೇಲಿದ್ದ ವರ್ಚಸ್ಸು ಸಹ ಈಗ ಇದ್ದಂತೆ ಮಾಸಾಹೇಬರಿಗೆ ತೋರಲಿಲ್ಲ. ರಣಮಸ್ತಖಾನನು ವಿಜಾಪುರದ ಕಡೆಯ ಸುದ್ದಿಯನ್ನು ಕೇಳುವ ವಿಷಯವಾಗಿಯೂ ಆತುರವನ್ನು ತೋರಿಸದಾದನು, ಇದನ್ನು ನೋಡಿ ಮಾಸಾಹೇಬರಿಗೆ ಬಹಳ ವಿಷಾದವಾಯಿತು. ಅವರಾಗಿಯೇ ಹೇಳಿದ ನಾಲ್ಕು ಮಾತುಗಳನ್ನು ಕೇಳಿಕೊಂಡು ರಣಮಸ್ತಖಾನನು ಸುಮ್ಮನೆ ತಾಯಿಯ ಬಳಿಯಿಂದ ಹೊರಟುಹೋದನು. ಹೆಚ್ಚು ಹೊತ್ತು ಕುಳಿತು ಕೊಳ್ಳಲಿಲ್ಲ ಸಹ, ಹೀಗೆ ಮಗನ ಸ್ಥಿತಿಯು ಯಾಕೆ ಹೀಗೆ ಆಗಿರಬಹುದೆಂಬ ವಿಚಾರದಲ್ಲಿ ಮಾಸಾಹೇಬರು ಮತ್ತೆ ತೊಡಗಿದರು, ನೂರಜಹಾನಳ ಕಾಲಲ್ಲಿ ತನ್ನ ಮಗನ ಹಾಡು ಹೀಗಾಗಿದ್ದರೆ ಆಕೆಯ ಪ್ರಾಪ್ತಿಯಂತೂ ಅತ್ಯಂತ ದುರ್ಲಭವಾಗಿರುವದರಿಂದ, ಮಗನ ಪರಿಣಾಮವು ನೆಟ್ಟಗೆ ಕಾಣುವದಿಲ್ಲೆಂದು ಅವರು ಚಿಂತಿಸಹತ್ತಿದರು. ಅವರು ತಮ್ಮ ಸೇವಕರನ್ನು ಕರೆಸಿ- “ನಾವು ಊರಿಗೆ ಹೋದಬಳಿಕ ಏನು ನಡೆಯಿತು ? ಎಂದು ಕೇಳಲು, ಅವರು-ರಾಮರಾಜನು ಕುಂಜವನಕ್ಕೆ ಬಂದಂದಿನಿಂದ ಆತನು ರಣಮಸ್ತಖಾನನೊಡನೆ ಜಗಳವಾಡಿ ಸಿಟ್ಟಿನಿಂದ ಹೊರಟುಹೋದವರೆಗೆ ಯಾವತ್ತೂ ಸುದ್ದಿಯನ್ನು ಹೇಳಿ, ಮಧ್ಯರಾತ್ರಿಯಲ್ಲಿ ಒಮ್ಮೆ ಖಾನರು ವಿಜಯನಗರದ ಕಡೆಗೆ ಹೋಗುವರೆಂಬದನ್ನೂ ಹೇಳಿದರು. ಅದನ್ನು ಕೇಳಿದ ಬಳಿಕಂತು ಮಾಸಾಹೇಬರು ಮತ್ತಷ್ಟು ಸಂಶಯಗ್ರಸ್ತರಾದರು. ಅವರು ಮನಸ್ಸಿನಲ್ಲಿ, ರಾಮರಾಜನೊಡನೆ ಆದ ಜಗಳಕ್ಕೂ, ರಣಮಸ್ತಖಾನನು ಮಧ್ಯರಾತ್ರಿಯಲ್ಲಿ ವಿಜಯನಗರದ ಕಡಗೆ ಹೋಗಲಿಕ್ಕೂ ಸಂಬಂಧವೇನು ? ಮೇಲಾಗಿ ರಣಮಸ್ತಖಾನನು ದಿನಾಲು, ಇಲ್ಲವೆ ಎರಡು ದಿವಸಗಳಿಗೊಮ್ಮೆ ವಿಜಯನಗರದ ದರ್ಬಾರಕ್ಕೆ ಹೋಗುತ್ತಾನೆಂತಲೂ ಜನರು ಹೇಳುತ್ತಾರೆ. ಇದರ ಗೂಢವೇನಿರಬಹುದು ? ರಾಮರಾಜನು ತನ್ನ ಸವಿ ಮಾತುಗಳಿಂದ ಮಗನ ಮನಸ್ಸನ್ನು ಮತ್ತೆ ತಿರುಗಿಸಿ ಕೊಂಡಿರಬಹುದೇನು? ಅಥವಾ ಜಗಳವೇ ಮೋಸದ್ದಿರುವುದೋ ? ಮಧ್ಯ ರಾತ್ರಿಯಲ್ಲಿ ಮಗನು ಹೋಗಲಿಕ್ಕೆ ಗುಪ್ತ ರಾಜಕಾರಣವಾಗಲಿ, ಪರಸ್ತ್ರೀ ಲಂಪಟತ್ವವಾಗಲಿ ಕಾರಣವಾಗಿರಬೇಕು. ಆದರೆ ನೂರಜಹಾನಳ ಪ್ರಾಪ್ತಿಯು ಅವಶ್ಯವಾಗಿ ತೋರಿದ ಕೂಡಲೇ ಅನ್ಯ ಸ್ತ್ರೀಯಲ್ಲಿ ಲಂಪಟನಾಗುವಷ್ಟು ತನ್ನ ಮಗನು ಚಂಚಲ ಮನಸ್ಸಿನವನೂ, ಕುದ್ರನೂ ಅಲ್ಲೆಂಬುದು ಮಾಸಾಹೇಬರಿಗೆ ಗೊತ್ತಿತ್ತು. ಆದ್ದರಿಂದ ಮಗನು ಮಧ್ಯರಾತ್ರಿಯಲ್ಲಿ ವಿಜಯನಗರದ ಕಡೆಗೆ ಹೋಗಲಿಕ್ಕೆ ಗುಪ್ತ ಒಳಸಂಚೇ ಕಾರಣವೆಂದು ಅವರು ತರ್ಕಿಸಿದರು. ರಾಮರಾಜನು ಒಳ್ಳೆ ಸವಿಮಾತಿನವನೆಂದು ಮಾಸಾಹೇಬರು ಜನರಿಂದ ಕೇಳಿದ್ದರಲ್ಲದೆ, ಅವರಿಗೂ ಆ ಮಾತಿನ ಅನುಭವವು ಚೆನ್ನಾಗಿ ಬಂದಿತ್ತು; ಆದ್ದರಿಂದ ರಾಮರಾಜನು ಕಡೆಗೆ ತನ್ನ ಮಗನನ್ನು ಗೊತ್ತಿಗೆ ಹಚ್ಚದೆ ಬಿಡನೆಂದು ತಿಳಿದು, ಬೇಗನೆ ಮಗನನ್ನು ಎಚ್ಚರಗೊಳಿಸಬೇಕೆಂದು ಅವರು ನಿಶ್ಚಯಿಸಿ, ತಾವೇ ಈ ಕೆಲಸವನ್ನು ಮಾಡಬೇಕೆಂದು ಗೊತ್ತು ಮಾಡಿದರು. ಮಗನನ್ನು ಯಾವ ಉಪಾಯದಿಂದ ಎಚ್ಚರಗೊಳಿಸಬೇಕೆಂದು ಮಾಸಾಹೇಬರು ಆಲೋಚಿಸುತ್ತಲೇ ಇದ್ದರು. ಅವರ ಪರಮೇಶ್ವರನ ಪ್ರಾರ್ಥನೆಯೂ, ಜಪವೂ ಎತ್ತೋಹೋದವು. ಒಂದು ದಿನ ಅವರು ನಸುಕಿನಲ್ಲಿ ರಣಮಸ್ತಖಾನನು ಎದ್ದಿರುವನೋ ಇಲ್ಲವೋ ನೋಡಿಬರಲಿಕ್ಕೆ ಲೈಲಿಯನ್ನು ಕಳಿಸಿದರು. ಆದರೆ ಖಾನನು ಇನ್ನೂ ಎದ್ದಿದ್ದಿಲ್ಲ. ನಿನ್ನೆ ಮಧ್ಯರಾತ್ರಿಯಲ್ಲಿ ಹೋದವರು ಬೆಳಗು ಮುಂಜಾನೆ ಬಂದದ್ದರಿಂದ ಇನ್ನೂ ಎದ್ದಿರುವದಿಲ್ಲೆಂದು ಸೇವಕರು ಹೇಳಿದರು. ಲೈಲಿಯು ಖಾನನನ್ನು ಎಬ್ಬಿಸಲಾರದೆ- “ಎದ್ದ ಕೂಡಲೇ ಮಾಸಾಹೇಬರು ಕರೆದಿರುವರೆಂದು ಹೇಳಿ ಕಳಿಸಿಕೊಡಿರಿ” ಸೇವಕರಿಗೆ ಹೇಳಿ, ತಿರುಗಿಬಂದು ಮಾಸಾಹೇಬರ ಮುಂದೆ ಎಲ್ಲ ಸಂಗತಿಯನ್ನು ಹೇಳಿದಳು.

ಇತ್ತ ರಣಮಸ್ತಖಾನನು ತಾಯಿಯ ಸಂಗಡ ನೆಟ್ಟಗೆ ಮಾತಾಡದೆ ತಾನು ತಟ್ಟನೆ ಹೊರಟುಬಂದದ್ದಕ್ಕಾಗಿ ಪಶ್ಚಾತ್ತಾಪಪಡಹತ್ತಿದನು. ಆ ಪಶ್ಚಾತ್ತಾಪದಲ್ಲಿ ಆ ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಆತನು ಹೀಗೆ ಪಶ್ಚಾತ್ತಾಪಪಡುವಾಗ ತಾಯಿಯ ಒಂದು ತಪ್ಪು ಆತನ ಮನಸ್ಸಿಗೆ ಹೊಳೆಯಲು, ಆತನ ಪಶ್ಚಾತ್ತಾಪವು ಕಡೆಮೆಯಾಗಹತ್ತಿತು. ತನ್ನ ತಾಯಿಯ ಪ್ರೇಮವು ತನ್ನ ಮೇಲೆ ವಿಶೇಷವಿರುತ್ತದೇನೋ ನಿಜ; ಆದರೆ ಆಕೆಯು ತನ್ನ ಮನಸ್ಸಿನೊಳಗಿನ ಮಾತುಗಳನ್ನೆಲ್ಲ ನನ್ನ ಮುಂದೆ ಇಲ್ಲಿಯವರೆಗೆ ಎಲ್ಲಿ ಹೇಳಿದ್ದಾಳೆ ? ಆಕೆಯು ನನ್ನ ತಂದೆಯ ಹೆಸರನ್ನು ನನ್ನ ಮುಂದೆ ಯಾಕೆ ಹೇಳಬಾರದು ? ಹೀಗೆ ಗುಪ್ತಪಾಗಿ ಇಡುವದು ಯೋಗ್ಯವೋ ? ಈಗ ಕೆಲವು ವರ್ಷಗಳ ಹಿಂದೆ ನಾನು ಸತ್ಯಾಗ್ರಹ ಮಾಡಿದಾಗ ನನ್ನ ಕುಲವೃತ್ತಾಂತವನ್ನು ಲೈಲಿಯ ಕೈಯಿಂದ ಹೇಳಿಸಿದ ಹಾಗೆ ಮಾಡಿದಳು. ಅದರಂತೆ ಈಗ ನಾನಾದರೂ ನನ್ನ ಒಳಸಂಚಿನ ಸುದ್ದಿಯನ್ನು ಮಾಸಾಹೇಬರ ಮುಂದೆ ಹೇಳದಿದ್ದರೆ ತಪ್ಪೇನು ? ಎಂದು ಆತನು ತನ್ನ ಸಮಾಧಾನ ಮಾಡಿಕೊಳ್ಳುವಾಗ ಸರಿರಾತ್ರಿಯಾಯಿತು; ಆದರೂ ಆತನಿಗೆ ನಿದ್ದೆ ಬರಲಿಲ್ಲ. ಕೂಡಲೇ ಆತನು ತನ್ನ ಕುದುರೆಗೆ ಜೀನು ಹಾಕಿಸಿ ತರಿಸಿ ವಿಜಯನಗರದ ಕಡೆಗೆ ಒಬ್ಬನೇ ಹೋದವನು ಬೆಳಗುಮುಂಜಾನೆ ಬಂದು ಮಲಗಿಕೊಂಡಿದ್ದನು. ಎರಡು ತಾಸು ಹೊತ್ತು ಏರಿದರೂ ಆತನಿಗೆ ಎಚ್ಚರವಾಗಲಿಲ್ಲ. ಇತ್ತ ಮಾಸಾಹೇಬರಂತು, ಮಗನು ಯಾವಾಗ ಎದ್ದಾನೆಂದು ಚಡಪಡಿಸಹತ್ತಿದರು. ಅವರು ಮಗನು ಎದ್ದಿರುವನೋ ಇಲ್ಲವೋ ನೋಡಿ ಬರಲಿಕ್ಕೆ ಒಂದು ತಾಸಿನಲ್ಲಿ ನಾಲ್ಕು ಸಾರೆ ಸೇವಕರನ್ನು ಓಡಾಡಿಸಿದರು; ಆದರೆ ಆತನು ಇನ್ನೂ ಎದ್ದಿದ್ದಿಲ್ಲ. ವಾಸಾಹೇಬರು ಅತ್ಯಂತ ಆತುರರಾಗಿದ್ದರು. ಅವರ ಮನಸ್ಸಿಗೆ ಸಮಾಧಾನವಾಗಲೊಲ್ಲದು. ಇನ್ನು ಆತನು ಏಳುವ ಹಾದಿಯನ್ನು ನೋಡದೆ ತಾವೇ ಆತನ ಕೋಣೆಯವರೆಗೆ ಹೋಗಿ ಆತನನ್ನು ಎಬ್ಬಿಸಿ, ಹೇಳುವದನ್ನು ಹೇಳಿಬಿಡೋಣ ಎಂದು ನಿಶ್ಚಯಿಸಿ, ಆತನ ಕೋಣೆಯ ಕಡೆಗೆ ಹೊರಟರು. ಇಂದಿನವರೆಗೆ ಮಾಸಾಹೇಬರು ಹೀಗೆ ಎಂದೂ ಮಾಡಿದ್ದಿಲ್ಲ. ಅವರು ರಣಮಸ್ತಖಾನನ ಮಲಗುವ ಕೊನೆಯ ಬಾಗಿಲಿಗೆ ಹೋಗಿ ಅಲ್ಲಿದ್ದ ಸೇವಕನಿಗೆ “ನಿಮ್ಮ ಖಾನರನ್ನು ಎಬ್ಬಿಸಿ, ನಾನು ಬಂದಿದ್ದೇನೆಂದು ಅವರಿಗೆ ಹೇಳು” ಎಂದು ಸೂಚಿಸಿದರು. ಮಾಸಾಹೇಬರು ಬಳಿಯಲ್ಲಿರದಿದ್ರೆ ಕೂಗಿ ಎಬ್ಬಿಸುವ ಧೈರ್ಯವು ಆ ಸೇವಕನಿಗೆ ಎಂದೂ ಆಗುತ್ತಿದ್ದಿಲ್ಲ. ಸೇವಕನು ಮಾಸಾಹೇಬರು ಬಂದಿದ್ದಾರೆಂಬ ಧೈರ್ಯದಿಂದ ರಣಮಸ್ತಖಾನನನ್ನು ಗಟ್ಟಿಯಾಗಿ ಕೂಗಿ ಎಬ್ಬಿಸಿ “ಮಾಸಾಹೇಬರು ತಮ್ಮನ್ನು ಕಾಣಲಿಕ್ಕೆ ಬಂದಿದ್ದಾರೆಂದು” ಕೂಗಿ ಹೇಳಿದನು. “ಮಾಸಾಹೇಬರು ಬಂದಿದ್ದಾರೆಂಬ ಶಬ್ದವು ಕಿವಿಗೆ ಬಿದ್ದ ಕೂಡಲೇ ರಣಮಸ್ತಖಾನನು ತನ್ನ ಪಲ್ಲಂಗದಿಂದ ಕೆಳಗೆ ಬಂದುನಿಂತು- “ಬಂದೆನು, ಈಗ ಬಂದೆನು, ನಾನು ಅವರ ಕೋಣೆಗೆ ಬರುತ್ತೇನೆಂದು ಹೇಳು. ಅವರು ಇಲ್ಲಿಯವರೆಗೆ ಬರುವ ಆಯಾಸವನ್ನು ಯಾಕೆ ಮಾಡಿಕೊಂಡರು? ಅವರು ತಮ್ಮ ಕೋಣೆಯನ್ನು ಮುಟ್ಟುವದರೊಳಗಾಗಿ, ನಾನು ಬಂದೆನೆಂದು ಹೇಳು” ಎಂದು ಗಟ್ಟಿಯಾಗಿ ನುಡಿದು, ಹತ್ತಿರ ಹೂಜಿಯಲ್ಲಿಟ್ಟಿದ್ದ ನೀರಿನಿಂದ ಬಾಯಿಮುಕ್ಕಳಿಸಿಕೊಂಡು ಮೋರೆಯನ್ನು ತೊಳಕೊಂಡನು.

ರಣಮಸ್ತಖಾನನು ತನ್ನ ಸೇವಕನಿಗೆ ಹೇಳಿದ್ದನ್ನು ಮಾಸಾಹೇಬರು ಕೇಳಿ ಕ್ಷಣಮಾತ್ರ ವಿಚಾರಮಗ್ನನಾದರು. ತಾವು ಇಲ್ಲಿಯೇ ಇರಬೇಕೊ, ತಮ್ಮ ಕೋಣೆಗೆ ಹೋಗಬೇಕೋ ಎಂದು ಅವರು ಆಲೋಚಿಸತೊಡಗಿದರು. ಕಡೆಗೆ ಅವರು ತಮ್ಮ ಕೋಣೆಗೆ ಹೋಗುವದೇ ನೆಟ್ಟಗೆ, ಅಲ್ಲಿ ಸಮಾಧಾನದಿಂದ ಮಾತಾಡಲಿಕ್ಕೆ ಅನುಕೂಲವಾದಂತೆ ಬೇರೆ ಸ್ಥಳದಲ್ಲಿ ಆಗಲಿಕ್ಕಿಲ್ಲ. ಎಂದು ನಿಶ್ಚಯಿಸಿ ರಣಮಸ್ತಖಾನನಿಗೆ- “ಹಾಗಾದರೆ ನಾನು ಮುಂದೆ ಹೋಗುತ್ತೇನೆ; ನೀನು ಬೇಗನೆ ಬಾ” ಎಂದು ಹೇಳಲು, ಖಾನನು 'ಹೂ' ಎಂದು ಒಪ್ಪಿಗೆಯನ್ನಿತ್ತನು. ಕೂಡಲೇ ಮಾಸಾಹೇಬರು ತಮ್ಮ ಕೋಣೆಗೆ ಹೋಗಿ ತಮ್ಮ ಆಸನದಲ್ಲಿ ಕುಳಿತುಕೊಂಡರು. ರಣಮಸ್ತಖಾನನು ಅವರ ಬೆನ್ನು ಹಿಂದೆಯೇ ಬಂದನು. ನಿದ್ದೆಗೆಟ್ಟಿದ್ದರಿಂದ ಆತನ ಮುಖವು ನಿಸ್ತೇಜನವಾಗಿತ್ತು. ಸದಾ ಚಿಂತಾಮಗ್ನನಾಗಿರುತ್ತಿದ್ದದ್ದರಿಂದ ಅವನ ಕಣ್ಣುಗಳು ಒಳನಟ್ಟಿದ್ದವು. ಆತನ ಉಲ್ಲಸಿತ ವೃತ್ತಿಯು ಎಷ್ಟೋ ಹೊರಟುಹೋಗಿತ್ತು ನೂರಜಹಾನಳ ಪ್ರಕರಣವು ಉಪಸ್ಥಿತವಾಗುವದಕ್ಕಿಂತ ಮೊದಲಿನ ರಣಮಸ್ತಖಾನನಲ್ಲಿಯೂ, ಈಗಿನ ರಣಮಸ್ತಖಾನನಲ್ಲಿಯೂ ಭೂಮ್ಯಾಕಾಶದಷ್ಟು ಅಂತರವಾಗಿತ್ತು. ಇದನ್ನು ನೋಡಿ ಮಾಸಾಹೇಬರ ಹೊಟ್ಟೆಯಲ್ಲಿ ಬಹಳ ಕಷ್ಟವಾಯಿತು. ಅವರು ಬಾಯಿಂದ ಮಾತಾಡದೆ ಕೈಚಾಚಿ ಮಗನನ್ನು ಹತ್ತಿರ ಕರೆದರು. ಆತನ ಬೆನ್ನಮೇಲೆ ಕೈಯಿಟ್ಟು, ಆತನ ನಿಸ್ತೇಜವಾದ ಮುಖವನ್ನು ದಿಟ್ಟಿಸಿ ನೋಡಿ, ಅವರು ಆತನನ್ನು ಕುರಿತು ಅತ್ಯಂತ ವಾತ್ಸಲ್ಯದಿಂದ- “ಬಾಳಾ, ರಣಮಸ್ತ, ನನ್ನ ಜೀವಕ್ಕೆ ನೀನೊಂದೇ ಆಧಾರ ತಂತುವೆಂಬದನ್ನು ನೀನು ಅರಿಯೆಯಾ ? ನಿನ್ನ ಜೀವಕ್ಕೆ ನೀನೊಂದೇ ಆಧಾರ ತಂತುವೆಂಬದನ್ನು ನೀನು ಅರಿಯೆಯಾ? ನಿನ್ನ ಜೀವಕ್ಕೇನಾಗುತ್ತದೆಂಬದನ್ನು ನನ್ನ ಮುಂದೆ ಹೇಳುವದಿಲ್ಲವೇ ? ನನ್ ಮೇಲಿದ್ದ ನಿನ್ನ ವಿಶ್ವಾಸವು ಎತ್ತ ಹೋಯಿತು ? ನನ್ನನ್ನು ನೀನು ಹೀಗೆ ವಂಚಿಸುವ ಕಾರಣವೇನು ? ನಿನ್ನ ಮನಸ್ಸನ್ನು ಯಾವ ಚಿಂತಾರೋಗವು ಆವರಿಸಿತು ?” ಎಂದು ಇನ್ನೂ ಏನೇನೋ ಹೇಳುತ್ತಿರಲು, ರಣಮಸ್ತಖಾನನು ನಡುವೆ ಬಾಯಿ ಹಾಕಿ- “ಮಾಸಾಹೇಬರೇ, ನೀವು ನನ್ನನ್ನು ಏನೇನೋ ಕೇಳುವಿರಿ; ಆದರೆ ನನಗೆ ಅವುಗಳ ಉತ್ತರವನ್ನು ಹೇಳಲಿಕ್ಕೆ ಬರುವದಿಲ್ಲ. ನನ್ನ ಜೀವಕ್ಕೆ ಏನಾಗಿದೆ ಎಂಬುದು ನನಗೆ ಗೊತ್ತಾಗದಿರಲು, ನಿಮಗೇನು ಹೇಳಲಿ ? ನನ್ನ ಜೀವಕ್ಕೆ ಏನಾಗುತ್ತದೆಂಬುದು ನನಗೇ ನಿಶ್ಚಯವಾಗಿ ತಿಳಿಯಲೊಲ್ಲದು” ಎಂದು ಹೇಳಿದನು. ಹೀಗೆ ಮಗನು ನಡುವೆ ಉತ್ತರ ಕೊಟ್ಟಾನೆಂದು ಮಾಸಾಹೇಬರು ತಿಳಿದಿದ್ದಿಲ್ಲ. ಆತನು ತಮ್ಮ ಮಾತುಗಳನ್ನು ಕೇಳುತ್ತ ಸುಮ್ಮನೆ ಕುಳಿತುಕೊಂಡಾನೆಂದು ಅವರು ಮಾಡಿದ್ದರು. ಅಷ್ಟರಲ್ಲಿ ಮಗನ ಈ ಉತ್ತರವನ್ನು ಕೇಳಿ ಅವರು ಕ್ಷಣಮಾತ್ರ ಸುಮ್ಮನೆ ಕುಳಿತುಕೊಂಡರು. ಆಮೇಲೆ ಅವರು ರಣಮಸ್ತಖಾನನಿಗೆ ಹೀಗೆ ನೀನು ಮಾತಾಡಿದರೆ ನನಗೆ ಹ್ಯಾಗೆ ಸಮಾಧಾನವಾಗಬೇಕು? ಸಣ್ಣವನಿರುವಾಗ ನಿನಗೆ ಮಾತಾಡಲಿಕ್ಕೆ ಬರುತ್ತಿದ್ದಿಲ್ಲ. ಏನಾಗುತ್ತದೆಂಬುದನ್ನು ಹೇಳಲಿಕ್ಕೆ ಬರುತ್ತಿದ್ದಿಲ್ಲ. ಆಗ ನೀನು ಅಳುವದನ್ನು ನೋಡಿ ತರ್ಕದಿಂದ ನಿನಗಾದ ಬೇನೆ ಬೇಸರಿಕೆಗಳನ್ನೂ, ಹಸಿವೆ ನೀರಡಿಕೆಗಳನ್ನು, ತಿಳಕೊಂಡು ನಾನು ತಕ್ಕ ಉಪಾಯ ಮಾಡಿ ನಿನ್ನನ್ನು ದೊಡ್ಡವನಾಗಿ ಮಾಡಿದೆನು. ಈಗ ನಿನಗೆ ಮಾತಾಡಲಿಕ್ಕೆ ಬರುತ್ತದೆ, ಹೇಳಲಿಕ್ಕೆ ಬರುತ್ತದೆ. ಹೀಗಿದ್ದು ನೀನು- 'ನನಗೆ ತಿಳಿಯುವದಿಲ್ಲೆಂದು ಉತ್ತರ ಕೊಟ್ಟರೆ, ನನಗೆ ಹ್ಯಾಗೆ ಸಮಾಧಾನವಾಗಬೇಕು? ನಿನ್ನ ಮನಸ್ಸಿನೊಳಗಿರುವದನ್ನು ನನಗೆ ಹೇಳಬಾರದೆಂದು ನೀನು ಬುದ್ಧಿಪೂರ್ವಕವಾಗಿ ಬಚ್ಚಿಡುವದೇನು ನನಗೆ ಗೊತ್ತಾಗುವುದಿಲ್ಲವೇ? ಛೇ, ಛೇ ಹೀಗೆ ಮಾಡಬೇಡ, ನಿನ್ನ ಸಲುವಾಗಿಯೇ ನಾನು ಪ್ರಾಣಧಾರಣ ಮಾಡಿರುವೆನು, ನಿನ್ನ ಸಲುವಾಗಿಯೇ ಸೋಸಬಾರದ ಕಷ್ಟಗಳನ್ನು ನಾನು ಸೋಸಿದೆನು, ನಿನ್ನ ಸಲುವಾಗಿಯೇ ನಾನು ಆತ್ಮಹತ್ಯೆಯನ್ನು ಮಾಡಿಕೊಂಡಿರುವದಿಲ್ಲ. ನನ್ನ ಪ್ರಾಣದ ವಿಶ್ರಾಂತಿ ಸ್ಥಾನವು ನೀನು, ಅಂಥ ನೀನು ನನಗೆ ಇಂದು ಎರವಾಗುತ್ತಿಯಾ? ಈವರೆಗೆ ನಮ್ಮಿಬ್ಬರಲ್ಲಿ ಭೇದವಿಲ್ಲ, ಈಗ ಆ ಭೇದವು ಉಂಟಾಗಿದೆ, ನನ್ನ ಮುಂದೆ ನೀನು ಏನೂ ಮುಚ್ಚಿಕೊಳ್ಳತಕ್ಕವನಲ್ಲ, ಇಂದೇ ಯಾಕೆ ಹೀಗೆ ಮಾಡುತ್ತೀ ?”

ರಣಮಸ್ತಖಾನ-ನಾನೇನು ಮಾಡುತ್ತೇನೆ? ಏನೂ ಮಾಡುವದಿಲ್ಲ.

ಮಾಸಾಹೇಬ-ಛೇ, ಛೇ, ಛೇ ನೀನು ಏನೂ ಮಾಡುವದಿಲ್ಲೆಂಬ ಮಾತು ಸುಳ್ಳು, ನೀನು ಈಗ ಏನೋ ಒಳಸಂಚು ನಡಿಸಿರುತ್ತೀ, ನನ್ನ ಮುಂದೆ ಮಾತ್ರ ಅನ್ನು ಹೇಳುವದಿಲ್ಲ. ಬೇಡ, ಬೇಡ; ನೀನು ಈಗ ಏನು ಒಳಸಂಚು ನಡಿಸಿರುತ್ತೀಯೆಂಬದನ್ನು ನನ್ನ ಮುಂದೆ ಹೇಳು.

ರಣಮಸ್ತಖಾನ-ಒಳಸಂಚು ಯಾತರದು ? ನಾನು ಒಳಸಂಚು ನಡೆಸಿರುವೆನೇ ? ಯಾರ ಸಂಗಡ ? ನಾನು ಯಾರವನೆಂಬದನ್ನೇ ನನಗೆ ಹೇಳಲಿಕ್ಕೆ ಬಾರದಿರುವಾಗ ನನ್ನ ಒಳಸಂಚುನ್ನು ಯಾರು ಕೇಳುವರು ? ನನ್ನನ್ನು ಒಳಸಂಚಿನಲ್ಲಿ ಕೂಡಿಸಿಕೊಳ್ಳುವವರಾದರೂ ಯಾರು ? ಮಾಸಾಹೇಬರೇ, ಸುಮ್ಮನೆ ಇಲ್ಲದ್ದೊಂದು ಕಲ್ಪಿಸಿ ನನಗೆ ಪ್ರಶ್ನೆ ಮಾಡಬೇಡಿರಿ. ಯಃಕಶ್ಚಿತವಾದ ನಾನು ಎಲ್ಲಿಯಾದರೂ ಹ್ಯಾಗಾದರೂ ಹುಟ್ಟಿದಂತಂತೆ, ಯಃಕಶ್ಚಿತನಾದ ನಾನು ಎಲ್ಲಿಯಾದರೂ ಹ್ಯಾಗಾದರೂ ಸಾಯುವೆನು ! ನೆರೆಯವರಂತೆ ಮಹತ್ಕೃತ್ಯಗಳನ್ನು ಮಾಡಿ ದೊಡ್ಡಸ್ತನವನ್ನು ಪಡೆಯುವದು ನನಗೆ ಶಕ್ಯವಿಲ್ಲ. ನಾನು ಏನಾದರೂ ಮಾಡುತ್ತಿದ್ದರಷ್ಟೇ ನಿಮ್ಮ ಮುಂದೆ ಅದನ್ನು ಮುಚ್ಚುವದು ! ನನ್ನಿಂದ ಇಂಥ ಮಹತ್ಕೃತ್ಯವಾದೀತು ಎಂಬ ಆಶಯವನ್ನೇ ನೀವು ಬಿಟ್ಟುಬಿಡಿರಿ. ನನಗೆ ಬೇಕಾಗಿರುವ ಹೆಂಡತಿಯನ್ನು ಸಂಪಾದಿಸಿಕೊಳ್ಳಲಾರದ ನಾನು ಬೇರೆ ಮಹತ್ಕೃತ್ಯಗಳನ್ನೇನು ಮಾಡೇನು?

ಮಾಸಾಹೇಬ-ರಣಮಸ್ತ, ನೀನಾಡುವ ಮಾತುಗಳ ಮರ್ಮವು ನನಗೆ ತಿಳಿಯುವದಿಲ್ಲೆಂದು ನೀನು ಭಾವಿಸಬೇಡ. ನೀನು ಎಲ್ಲಿಯಾದರೂ ಹ್ಯಾಗಾದರೂ ಹುಟ್ಟಿ ಯಃಕಶ್ಚಿತನಾಗುವಂತೆ ತೋರಿದ್ದರೆ, ನಿನಗೆ ನಾನು ಜನ್ಮವನ್ನೇ ಕೊಡುತ್ತಿದ್ದಿಲ್ಲ. ಪ್ರತಿಜ್ಞೆಯ ಮೂಲಕ ನಿಜವಾದ ಸಂಗತಿಯನ್ನು ಈಗ ನುಡಿಯದೆ ಸುಮ್ಮನಿರುವ ನನ್ನನ್ನು ನೀನೂ ಮಾತಿನಿಂದ ಚಲಿಸುವೆಯಾ ? ಆಗಲಿ, ರಣಮಸ್ತ, ಬಹಳ ಜಾಣನಾಗಿರುವೆ. ನಿನ್ನ ತಾಯಿಯ ಯೋಗ್ಯತೆಯು ಈಗ ನಿನಗೆ ಕ್ಷುಲ್ಲಕವಾಗಿ ತೋರಹತ್ತಿತಲ್ಲವೆ ? ಹಾಗೆ ಆಗಲಿ. ನೀನು ಯಾವ ಒಳಸಂಚಿನೊಳಗೂ ಇಲ್ಲದಿದ್ದರೆ, ನೀನು ದಿನಾಲು ವಿಜಯನಗರದ ದರ್ಬಾರಕ್ಕೆ ಯಾಕೆ ಹೋಗುತ್ತಿರುವೆ? ನಿನ್ನೆ ರಾತ್ರಿ ಯಾರಿಗೂ ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ? ಹೀಗೆ ನೀನು ಆಗಾಗ್ಗೆ ರಾತ್ರಿ ಹೊರಗೆ ಹೋಗುವದೇಕೆ ?

ರಣಮಸ್ತಖಾನ-ಯಾಕೆಂದರೆ, ನನ್ನ ತೆಲಯ ಮೇಲ ಮೆಣಸು ಅರೆಯುವದಕ್ಕಾಗಿ ನಿಯಮಿಸಲ್ಪಟ್ಟಿರುವ ಮುಖ್ಯ ವಕೀಲನಾದ ಮಹಮೂದಖಾನನ ಅಪ್ಪಣೆಯನ್ನು ಮೀರಲಾರದ್ದಕ್ಕಾಗಿ ವಿಜಯನಗರದ ದರ್ಬಾರಕ್ಕೆ ಆಗಾಗ್ಗೆ ನಾನು ಹೋಗುತ್ತೇನೆ; ಮತ್ತು ರಾತ್ರಿ ನಿದ್ದೆ ಬಾರದಹಾಗಾಗಲು, ಹಲವು ವಿಚಾರಗಳು ಉತ್ಪನ್ನವಾಗಿ ಮನಸ್ಸು ವ್ಯಥೆಪಡುತ್ತದೆ. ಆ ವ್ಯಥೆಯನ್ನು ಸಮಾಧಾನ ಮಾಡಿಕೊಳ್ಳುವದಕ್ಕಾಗಿ ಎಲ್ಲಿಯಾದರೂ ತಿರುಗಾಡಲಿಕ್ಕೆ ಹೋಗುತ್ತೇನೆ. ಹೀಗೆ ತಿರುಗಾಡುವದರಿಂದ ಮನಸ್ಸಿಗೆ ಸಮಾಧಾನವಾಗುವ ಕಾರಣ ಯಾವಾಗಲೂ ರಾತ್ರಿ ಹೊರಗೆ ಹೋಗುತ್ತಿರುವೆನು !

ಮಾಸಾಹೇಬ-ಅಪ್ಪಾ, ರಣಮಸ್ತಾ, ನೀನು ನನ್ನ ಸಂಗಡ ಇಷ್ಟು ಸ್ಪಷ್ಟವಾಗಿ ಮಾತಾಡೀಯೆಂದು ನಾನು ತಿಳಿದಿದ್ದಿಲ್ಲ. ಆಗಲಿ, ಹ್ಯಾಗಿದ್ದರೂ ಬಿಟ್ಟುಹೋಗುವ ಮಾತಲ್ಲ. ನಿನ್ನ ಹೊರತು ನನಗೆ ಗತಿಯಿಲ್ಲ. ಆದ್ದರಿಂದ ನಿನ್ನ ಮನಸ್ಸಿನಲ್ಲಿ ಬರುವ ವಿಚಾರಗಳಾದರೂ ಯಾವವು ಹೇಳು, ಅವುಗಳ ಸಂಬಂಧದಿಂದ ನನಗೇನಾದರೂ ಉಪಾಯಗಳು ತೋಚಿದರೆ ಹೇಳುವೆನು. ನಾನು ನಿನ್ನ ಸುಖ ದುಃಖಗಳ ಭಾಗಿ ಅಲ್ಲವೇ ? ಸ್ವತಃ ನನ್ನ ಸುಖ-ದುಃಖಗಳೇನಿರುವವು ಹೇಳು? ನಿನ್ನ ಸುಖ-ದುಃಖಗಳೇ ನನ್ನ ಸುಖ-ದುಃಖಗಳು ! ಈ ಮಾತು ಚಿಕ್ಕಂದಿನಿಂದಲೂ ನಿನ್ನ ಅನುಭವಕ್ಕೆ ಬಂದಿದೆ. ಸಣ್ಣವನಿರುವಾಗ ನೀನು ಸುಖದಿಂದ್ದರೆ ನಾನು ಸುಖದಿಂದಿರುತ್ತಿದ್ದೆನು, ನೀನು ದುಃಖದಿಂದಿದ್ದರೆ ನಾನು ದುಃಖದಿಂದಿರುತ್ತಿದ್ದೆನು. ಈಗ ಮಾತ್ರ ನಿನ್ನ ಸುಖ-ದುಃಖದ ಪಾಲನ್ನು ನನಗೆ ಯಾಕೆ ಕೊಡದಾದೆ ?

ರಣಮಸ್ತಖಾನ-ಮಾಸಾಹೇಬ. ನಾನು ಅಜ್ಞಾನಿಯಾಗಿರುವತನಕ ನನ್ನ ಸುಖ-ದುಃಖದ ಪಾಲನ್ನು ನಿಮಗೆ ಕೊಡುವದು ಬಿಡುವದು ನನ್ನ ಕೈಯೊಳಗಿದ್ದಿಲ್ಲ. ಈಗ ನನಗೆ ಚೆನ್ನಾಗಿ ತಿಳಿಯುತ್ತದೆ. ನನಗೆ ಈಗ ಲೇಶವಾದರೂ ಸುಖವಿಲ್ಲದೆ ಬರಿಯ ದುಃಖವೇ ಆಗುತ್ತಿರಲು, ನಿಮ್ಮನ್ನು ಬರಿಯ ದುಃಖಕ್ಕೆ ಪಾಲುಗಾರರನ್ನಾಗಿ ನಾನು ಯಾಕೆ ಮಾಡಲಿ ? ನಾನು ಸಣ್ಣವನಿರುವಾಗ ನನ್ನ ಬಾಲಲೀಲೆಯಿಂದ ನನಗೂ ನಿಮಗೂ ಕೂಡಿಯೇ ಸುಖವಾಗುತ್ತಿರಬಹುದು; ನನ್ನ ಬೇನೆಬೇಸರಿಕೆಗಳಿಂದ ನಮಗೂ ನಿಮಗೂ ಕೂಡಿಯೇ ದುಃಖವಾಗುತ್ತಿರಬಹುದು; ಆದರೆ ನನಗೆ ಈಗ ಸುಖವಿಲ್ಲ. ಹೆಜ್ಜೆ ಹೆಜ್ಜೆಗೆ ನನ್ನ ಮಾನಹಾನಿಯಾಗುತ್ತಿದೆ. ನನಗೆ ಬೇಕಾಗಿರುವ ವಸ್ತುವು ದೊರೆಯುವುದಿಲ್ಲ. ಇದರಿಂದ ನನ್ನ ಮನಸ್ಸು ಯಾವಾಗಲೂ ಉದ್ವಿಗ್ನವಾಗಿರುತ್ತದೆ. ಅಂದಬಳಿಕ ನನ್ನ ದುಃಖದ ಕಾರಣವನ್ನೆಲ್ಲ ನಿಮಗೆ ಹೇಳಿ ಸುಮ್ಮನೆ ನಿಮ್ಮ ಮನಸ್ಸನ್ನು ಯಾಕೆ ಉದ್ವಿಗ್ನವಾಗಿ ಮಾಡಬೇಕು? ನನ್ನ ಮಾರ್ಗದಲ್ಲಿರುವ ತೊಂದರೆಗಳು ನನಗೇ ಗೊತ್ತು. ಅವು ನಿಮಗೆ ಹ್ಯಾಗೆ......(ನಡುವೆ ಅಷ್ಟಕ್ಕೆ ಸುಮ್ಮನಾಗಿ ಮತ್ತೆ) ಇನ್ನು ಮುಂದೆ ನನ್ನ ಉಸಾಬರಿಯನ್ನು ಬಿಟ್ಟುಬಿಡಿರಿ. ಪರಮೇಶ್ವರನ ಚಿಂತನದಲ್ಲಿ ಕಾಲಹರಣ ಮಾಡುವ ನಿಮ್ಮ ಕ್ರಮವನ್ನು ಹಾಗೆಯೇ ನಡಿಸಿರಿ. ಅದರಿಂದಲೇ ನಿಮಗೆ ಸುಖವಾಗುವದು ನನ್ನ ಬೆನ್ನುಹತ್ತುವದರಿಂದ ನಿಮಗೆ ಸುಖವಾಗಲಿಕ್ಕಿಲ್ಲ. ನನ್ನ ಕರ್ಮವನ್ನು ನಾನು ಭೋಗಿಸುವೆನು. ನನ್ನ ಚಿಂತೆಯನ್ನು ನೀವು ಬಿಟ್ಟುಬಿಡಿರಿ ನೋಡೋಣ. ನನ್ನಿಂದ ನಿಮಗೆ ಎಂದಿಗೂ ಸುಖವಾಗದು, ಇನ್ನು ನಾನು ಹೋಗುವೆನು. ನೀವು ಕರೆದದ್ದರಿಂದ ನಾನು ನೆಟ್ಟಗೆ ಮೋರೆಯನ್ನು ಸಹ ತೊಳೆದುಕೊಳ್ಳದೆ ಹಾಸಿಗೆಯಿಂದ ಎದ್ದ ಕೂಡಲೇ ಹಾಗೆಯೇ ಬಂದಿದ್ದೇನೆ.

ಈ ಮೇರೆಗೆ ನುಡಿದು ರಣಮಸ್ತಕಾನನು ಎದ್ದು ಹೋಗಿಬಿಟ್ಟನು. ಆತನು ತನ್ನ ತಾಯಿಯ ಕಡೆಗೆ ಹೊರಳು ಸಹ ನೋಡಲಿಲ್ಲ. ಇದನ್ನು ನೋಡಿ ಮಾಸಾಹೇಬರು ಆಶ್ಚರ್ಯಮಗ್ನರಾಗಿ ಸ್ತಬ್ದವಾಗಿ ಕುಳಿತುಬಿಟ್ಟರು! ತಾವು ಮಗನೊಡನೆ ನಡೆಸುವ ಸಂಭಾಷಣದ ಪರ್ಯವಸಾನವು ಹೀಗಾದೀತೆಂದು ಅವರಿಗೆ ತೋರಿದ್ದಿಲ್ಲ. ತಮ್ಮ ಮಗನು ತಮ್ಮ ಸಂಗಡ ಇಷ್ಟು ಔದಾಶೀನ್ಯದಿಂದಲೂ, ನೈಷ್ಠುರ್ಯದಿಂದಲೂ, ಕಠೋರತನದಿಂದಲೂ ನಡೆದುಕೊಂಡಾನೆಂದು ಅವರು ಕನಸು-ಮನಸುಗಳಲ್ಲಿ ಎಣಿಸಿದ್ದಿಲ್ಲ. ಅವರ ಕಲ್ಪನೆಗೆ ಮೀರಿದ ವಿಷಯವನ್ನು ಅವರು ಇಂದು ಕಣ್ಣಿನಿಂದ ನೋಡಿದರು, ಕಿವಿಯಿಂದ ಕೇಳಿದರು, ಮನಸ್ಸಿನಿಂದ ಅನುಭವಿಸಿದರು. ಅವರು ಅತ್ಯಂತ ಶೂನ್ಯಹೃದಯರಾದದ್ದರಿಂದ ಮಗನು ಹೊರಟುಹೋದದ್ದು ಸಹ ಅವರಿಗೆ ಗೊತ್ತಾಗಲಿಲ್ಲ. ಐದು ಪಳವಾಯಿತು, ಹತ್ತು ಪಳವಾಯಿತು, ಗಳಿಗೆಯಾಯಿತು, ನಾಲ್ಕು ಗಳಿಗೆಯಾಯಿತು, ಆದರೂ ಅವರು ಹಾಗೆಯೇ ಸ್ತಬ್ದವಾಗಿ ಕುಳಿತಿದ್ದರು. ಮುಂದೆ ಅವರು ಎಚ್ಚತ್ತು ಮಗನ ಸ್ಥಿತಿಯನ್ನು ಕುರಿತು ಆಲೋಚಿಸತೊಡಗಿದರು. ಮಾಸಾಹೇಬರು ಒಳ್ಳೆ ಚತುರರು, ಬಹು ವಿಚಾರವಂತರು, ದೂರದರ್ಶಿಗಳು; ಶಾಂತಸ್ವಭಾವದವರು. ಅವರು ವಿಚಾರದ ಕೊನೆಯಲ್ಲಿ ತಮ್ಮ ಮಗನು ಬಾದಶಹನ ಸೇಡು ತೀರಿಸಿಕೊಳ್ಳುವದಕ್ಕಾಗಿ ರಾಮರಾಜನ ಸಂಗಡ ಒಳಸಂಚು ನಡೆಸಿರುವದೇ ನಿಶ್ಚಯವೆಂದು ತರ್ಕಿಸಿ, ಅದರ ಶೋಧದ ಉಪಾಯಗಳನ್ನು ಯೋಚಿಸಹತ್ತಿದರು !

****