ಕನ್ನಡಿಗರ ಕರ್ಮ ಕಥೆ/ಒಳಸಂಚು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೬೧-೧೭೨

 

೧೮ನೆಯ ಪ್ರಕರಣ

ಒಳಸಂಚು

ಬಾದಶಹನು ಕಳಿಸಿದ ಇಬ್ಬರೂ ವಕೀಲರಿಗೆ ಇರಲಿಕ್ಕೆ ಕುಂಜವನವು ಸಾಲುವಂತಿದ್ದಿಲ್ಲ; ಆದ್ದರಿಂದ ರಾಮರಾಜನು ಖಾನಖನಾನ ಮಹಮೂದಖಾನನಿಗೆ ಬೇರೆ ಸ್ಥಳವನ್ನು ಇರಲಿಕ್ಕೆ ಕೊಟ್ಟು, ರಣಮಸ್ತಖಾನನನ್ನು ಕುಂಜವನದಲ್ಲಿಯೇ ಇರಗೊಟ್ಟನು. ಇದೊಂದು ಪರಿಯಿಂದ ರಣಮಸ್ತಖಾನನಿಗೆ ಯಾರ ಉಪದ್ರವವೂ ಇಲ್ಲದೆ ಸ್ವತಂತ್ರದಿಂದ ಇರಲಿಕ್ಕೆ ಅನುಕೂಲವಾಯಿತು; ಆದರೆ ವಿಜಾಪುರದಿಂದ ಬಂದಂದಿನಿಂದ ಆತನ ವೃತ್ತಿಯಲ್ಲಿ ಬಹಳ ಹೆಚ್ಚು ಕಡಿಮೆಯಾಗಿತ್ತು. ರಣಮಸ್ತಖಾನನು ವಿಜಾಪುರದಿಂದ ಬಂದಕೂಡಲೆ ಆತನನ್ನು ರಾಮರಾಜನು ಬುದ್ಧಿ ಪೂರ್ವಾಕವಾಗಿ ಒಮ್ಮೆ ತನ್ನ ಬಳಿಗೆ ಕರೆಸಿಕೊಂಡು, ಏಕಾಂತದಲ್ಲಿ ಆತನನ್ನು ಕುರಿತು-ಆದ ಮಾತಿನ ಸಲುವಾಗಿ ನಾನು ಎಷ್ಟು ಮಾತ್ರವೂ ಮನಸ್ಸಿನಲ್ಲಿ ಸಿಟ್ಟು ಹಿಡಿದಿರುವದಿಲ್ಲ. ನಿಮ್ಮ ಈಗಿನ ವಯಸ್ಸಿನಲ್ಲಿ ಇಂಥ ತಪ್ಪುಗಳು ಆಗತಕ್ಕವೇ; ಆದ್ದರಿಂದ ನಾನು ಎಲ್ಲ ಸಂಗತಿಗಳನ್ನು ಮರೆತು ಬಿಟ್ಟಂತೆ, ನೀವೂ ಮರೆತು ಬಿಡಿರಿ. ನಿಮ್ಮ ವಿಷಯವಾಗಿ ನನ್ನ ಅಭಿಪ್ರಾಯವೇನಿರುತ್ತದೆಂಬದನ್ನು ನಾನು ಬಾದಶಹರಿಗೆ ಬರೆದು ತಿಳಿಸಿದ್ದೆನು. ಅವರು ನನ್ನ ಪತ್ರದಂತೆ ನಿಮ್ಮ ಮದುವೆಯನ್ನು ಮಾಡಿಕೊಡತಕ್ಕದ್ದಿತ್ತು. ನಿಮ್ಮ ಅಧಿಕಾರವನ್ನಾದರೂ ಹೆಚ್ಚಿಸ ತಕ್ಕದ್ದಿತ್ತು; ಆದರೆ ಹಾಗೆ ಮಾಡದೆಯಿದದ್ದಕ್ಕಾಗಿ ನನಗೆ ಬಹಳ ಆಶ್ಚರ್ಯವಾಗಿದೆ. ನನ್ನ ಪದರಿನಲ್ಲಿ ನೀವು ಇರುತ್ತಿದ್ದರೆ ನಿಶ್ಚಯವಾಗಿ ನಿಮ್ಮ ಲಗ್ನವನ್ನು ಮಾಡಿಕೊಟ್ಟು ನಿಮ್ಮ ಪದವಿಯನ್ನು ಹೆಚ್ಚಿಸುತ್ತಿದ್ದೆನು. ಯಾಕೆಂದರೆ, ರಾಜಕಾರಣದ ದೃಷ್ಟಿಯಿಂದ ನಿಮ್ಮ ನಡೆತೆಯು ಯೋಗ್ಯವಲ್ಲದಿದ್ದರೂ ರಾಜ್ಯದ ಗೌರವ ಕಾಯುವ ದೃಷ್ಟಿಯಿಂದ ಅದು ಯೋಗ್ಯವಾದದ್ದೇ ಇತ್ತೆಂಬದನ್ನು ನಾನು ಬಲ್ಲೆನು. ನಿಮಗೆ ಜಾಗರೂಕರಾಗಿರುವ ಬಗ್ಗೆ ಸೂಚನೆ ಕೊಡುವದಕ್ಕಿಂತ ಹೆಚ್ಚಿನ ಕೆಲಸವನ್ನೇನು ಬಾದಶಹರು ಮಾಡತಕ್ಕದ್ದಿದ್ದಿಲ್ಲ. ನಾನು ನಿಮ್ಮ ವಯಸ್ಸಿನಲ್ಲಿರುವಾಗ ನನ್ನ ಸ್ವಭಾವವು ನಿಮ್ಮಂತೆಯೇ ಇತ್ತು ; ಆದರಿಂದ ನೀವು ಮನಸ್ಸಿನಲ್ಲಿ ಖಿನ್ನರಾಗಬೇಡಿರಿ. ನಿಮ್ಮಂಥ ತರುಣನೂ, ಉತ್ಸಾಹಶಾಲಿಯೂ ಆದವನು ನನ್ನ ಬಳಿಯಲ್ಲಿದ್ದರೆ, ಆತನನ್ನು ಸೈನ್ಯದ ಮೇಲೆ ನಿಯಮಿಸುತ್ತಿದ್ದೆನು. ನಿಮ್ಮ ಶೌರ್ಯವನ್ನೂ ನಿಮ್ಮ ತೇಜಸ್ಸನ್ನೂ ನಾನು ಬಲ್ಲೆನು. ಒಟ್ಟಿನಮೇಲೆ, ನಿಮ್ಮ ವೃತ್ತಿಯನ್ನೆಲ್ಲ ನಾನು ಮನಸ್ಸಿನಲ್ಲಿ ತಂದರೆ, ನಾನು ನಿಮ್ಮಷ್ಟು ವಯಸ್ಸಿನಲ್ಲಿದ್ದಾಗಿನ ನನ್ನ ವೃತ್ತಿಯ ಸ್ಮರಣವು ಅಚ್ಚಳಿಯದೆ ನನಗೆ ಆಗುತ್ತದೆ; ಕನ್ನಡಿಯಲ್ಲಿ ನೋಡಿದಹಾಗೆ ಅದು ನನಗೆ ಸ್ಪಷ್ಟವಾಗಿ ಕಾಣುವದು, ಎಂದು ಹೇಳಿದನು. ರಾಮರಾಜನ ಈ ಮಾತುಗಳನ್ನು ಕೇಳಿ ರಣಮಸ್ತಖಾನನಿಗೆ ವಿಷಾದವಾಯಿತೋ, ಸಿಟ್ಟುಬಂತೋ, ಸಂತೋಷವಾಯಿತೋ ಎಂಬದನ್ನು ಹೇಳಲಿಕ್ಕೆ ಬರುವ ಹಾಗಿದ್ದಿಲ್ಲ. ಯಾಕೆಂದರೆ ಅವನ ಮುಖಚರ್ಯದಲ್ಲಿ ಯಾವ ವಿಕಾರವೂ ತೋರುತ್ತಿದ್ದಿಲ್ಲ. ಬಾದಶಹನು ತನಗೆ ಬುದ್ಧಿಗಲಿಸಿದ್ದರಿಂದ ರಣಮಸ್ತಖಾನನನಿಗೆ ಬಹಳ ವಿಷಾದವಾಗಿತ್ತು. ರಾಮರಾಜನಿಗೆ ಪ್ರತ್ಯುತ್ತರವಾಗಿ ಏನೂ ಮಾತಾಡದೆ, ಅವನಿಗೆ ಅನುಕೂಲವಾಗುವಂತೆ ಬರಿಯ ಗೋಣು ಆಡಿಸಿ ರಣಮಸ್ತಖಾನನು ಕುಂಜವನಕ್ಕೆ ಹೊರಟುಹೋದನು.

ವಿಜಾಪುರದಿಂದ ಬಂದಂದಿನಿಂದ ರಣಮಸ್ತಖಾನನ ವೃತ್ತಿಯು ಬಹಳ ಉದಾಸೀನವಾಯಿತು. ಆತನು ಬಹುತರ ಯಾರ ಸಂಗಡವೂ ವಿಶೇಷ ಮಾತಾಡದಾದನು. ತನ್ನ ತಾಯಿಯ ಸಂಗಡ ಸಹ ಆತನು ಹೆಚ್ಚು ಮಾತಾಡುತ್ತಿದ್ದಿಲ್ಲ. ಆಕೆಯಾಗಿಯೇ ಆತನನ್ನು ಕರೆದುಕೊಂಡು ಹೋಗಿ ಏನಾದರೂ ಕೇಳಿದರೆ ನಾಲ್ಕು ಮಾತುಗಳನ್ನು ಆಡುತ್ತಿದ್ದನು. ಮೊದಲಿನಂತೆ ಆತನು ಆದದ್ದನ್ನೆಲ್ಲ ಒಂದುಳಿಯದಂತೆ ತಾಯಿಯ ಮುಂದೆ ಹೇಳಿ, ಏನು ಮಾಡಬೇಕಾದದ್ದನ್ನು ತಾಯಿಯನ್ನು ಕೇಳಿ ಮಾಡದಾದನು. ಆತನು ಈಗ ಏಕಾಂತದಲ್ಲಿ ಬಹಳ ಹೊತ್ತುಗಳೆಯಹತ್ತಿದನು. ತಾಸು ತಾಸು, ಮೂರು ಮೂರು ತಾಸು ಕುಂಜವನದಲ್ಲಿ ಆತನು ಕುಳಿತುಕೊಂಡು, ಇಲ್ಲವೆ ಪುಷ್ಕರಣಿಯ ದಂಡೆಗುಂಟ ತಿರುಗಾಡಿ ಕಾಲಹರಣ ಮಾಡುತ್ತಿದ್ದನು. ಆದ್ದರಿಂದ ಬಾದಶಹನಿಂದಾದ ಅಪಮಾನವು ಈತನ ಮನಸ್ಸಿಗೆ ಬಹಳ ಹೊತ್ತಿತ್ತೆಂದು ಬಹುತರ ಎಲ್ಲರೂ ತರ್ಕಿಸಹತ್ತಿದರು. ಲೈಲಿಯೂ ಆತನ ತಾಯಿಯೂ ಮಾತ್ರ ಹೀಗಾಗಲಿಕ್ಕೆ ಬೇರೆ ಕಾರಣವನ್ನು ಕಲ್ಪಿಸಿದರು. ನೂರಜಹಾನಳ ಮೇಲೆ ಈತನ ಪ್ರೇಮವು ವಿಶೇಷವಾಗಿದ್ದು, ಆಕೆಯು ಪ್ರಾಪ್ತವಾಗುವದು ಅಶಕ್ಯವಾಗಿ ತೋರುವದರಿಂದ ಅಪಮಾನವೊಂದು ಕೂಡಿತೆಂತಲೂ ಅವರು ತಿಳಿದರು. ನಿಜವಾದ ಕಾರಣವು ಇಂಥದೇ ಎಂದು ಯಾರಿಗೂ ಗೊತ್ತಾಗುವ ಸಂಭವ ಇದ್ದಿಲ್ಲ. ಲೈಲಿಯು ರಣಮಸ್ತಖಾನನ ಮನಸ್ಸಿನಲ್ಲಿದ್ದದ್ದನ್ನು ತಿಳಕೊಳ್ಳುವದಕ್ಕಾಗಿ ಪ್ರಯತ್ನ ಮಾಡುತ್ತಲಿದ್ದಳು. ಒಮ್ಮೆ ಆಕೆಯು ರಣಮಸ್ತಖಾನನನ್ನು ಕುರಿತು ಸಲಿಗೆಯಿಂದ - “ನೀವು ಇಷ್ಟು ಉದಾಸೀನರಾಗಿರುವ ಕಾರಣವೇನು? ನೂರಜಹಾನಳ ಚಿಂತೆಯು ನಿಮ್ಮನ್ನು ಬಾಧಿಸುವದೋ? ನಾನು ಒಮ್ಮೆ ವಿಜಾಪುರಕ್ಕೆ ಹೋಗಿ ನೂರಜಹಾನಳನ್ನು ಕಂಡು ಆಕೆಯ ಮನಸಿನಲ್ಲಿದ್ದದ್ದನ್ನು ತಿಳಿಕೊಂಡು ಬರಲೇನು? ಅಥವಾ ನೂರಜಹಾನಳದಾದರೂ ಏನು ಪ್ರತಿಷ್ಠೆಯು? ಆಕೆಯಿಲ್ಲದಿದ್ದರೆ ಆಕೆಯಂಥ ನೂರಾರು ಮಂದಿ ತರುಣಿಯರು ನಿಮ್ಮ ಕಾಲಮೇಲೆ ಉರುಳಾಡುತ್ತ ಬಂದಾರು.” ಎಂದು ನುಡಿಯಲು, ರಣಮಸ್ತಖಾನನು ಸುಮ್ಮನೆ ಮುಗುಳುನಗೆ ನಕ್ಕನು ಮಾತ್ರ ; ಬಾಯಿಂದ ಪಿಟ್ಟೆಂದು ಮಾತಾಡಲಿಲ್ಲ ! ಆಗ ಲೈಲಿಯು ನಿರಾಶೆಪಟ್ಟು, ಮಾಸಾಹೇಬರ ಬಳಿಗೆ ಹೋಗಿ-ನಿಮ್ಮ ಮಗನ ಮನಸ್ಸಿನೊಳಗಿದ್ದದ್ದನ್ನು ತಿಳಿಕೊಳ್ಳುವದು ಸುಲಭವಲ್ಲೆಂದು ಹೇಳಿದಳು. ಅದನ್ನು ಕೇಳಿ ಮಾಸಾಹೇಬರಿಗೆ ಬಹಳ ಅಸಮಾಧಾನವಾಯಿತು. ತಾವು ಸ್ವತಃ ಒಮ್ಮೆ ಮಗನನ್ನು ಕೇಳಿ ನೋಡಬೇಕೆಂದು ಅವರು ಮಾಡಿದರು. ಆದರೆ ಹಾಗೆ ಮಾಡಲಿಕ್ಕೆ ಅವರಿಗೆ ಒಮ್ಮೆಲೆ ಧೈರ್ಯವಾಗಲೊಲ್ಲದು. ಮಗನು ಮೊದಲಿನಂತೆ ಈಗ ಸರಳ ಮನಸ್ಸಿನಿಂದ ಮನಸ್ಸು ಬಿಚ್ಚಿ ತಮ್ಮ ಸಂಗಡ ಮಾತಾಡುವದಿಲ್ಲವಾದ್ದರಿಂದ, ಈಗ ತಾವು ಕೇಳಿದರೆ ಆತನು ಏನು ಉತ್ತರಕೊಡವನೋ ಎಂದು ಅವರು ಶಂಕಿಸಹತ್ತಿದರು; ಆದರೂ ತಾಯಿಯ ಕರುಳು ! ಕೇಳದೆ ಸುಮ್ಮನೆ ಹ್ಯಾಗೆ ಬಿಡಬೇಕು? ಮಾಸಾಹೇಬರು ಹಾಗೆಯೇ ನಾಲ್ಕೆಂಟು ದಿನ ಹೋಗಬಿಟ್ಟು, ಆಮೇಲೆ ಒಂದು ದಿನ ಮಗನನ್ನು ಕರಕೊಂಡು ಹೋಗಿ- “ಬಾಳಾ ರಣಮಸ್ತ, ನೀನು ಇಷ್ಟು ಉದಾಸೀನನು ಯಾಕಾಗಿರುವೆ ? ನಿನ್ನ ಮೋರೆಯ ಮೇಲಿನ ಕಳೆಯೇ ಹೋಯಿತಲ್ಲ ! ನಿನ್ನ ಮನಸ್ಸಿನಲ್ಲಿದ್ದದ್ದನ್ನು ನನ್ನ ಮುಂದೆ ಹೇಳುವದಿಲ್ಲವೇ?” ಎಂದು ಅತ್ಯಂತ ಕಾರುಣ್ಯದಿಂದ ಕೇಳಿದರೂ ರಣಮಸ್ತಖಾನನು ಉತ್ತರಕೊಡದೆ ಬಹಳ ಹೊತ್ತು ಸುಮ್ಮನೆ ಕುಳಿತುಕೊಂಡನು. ಅದನ್ನು ನೋಡಿ ಮಾಸಾಹೇಬರ ನೇತ್ರಗಳು ಅಶ್ರುಪೂರ್ಣವಾಗಲು ಅವರು ಗದ್ಗದ ಸ್ವರದಿಂದ ಮತ್ತೆ ಮಗನನ್ನು ಕುರಿತು-"ಮಾತಾಡುವದಿಲ್ಲೇನಪ್ಪಾ ? ರಣಮಸ್ತ, ಮಾತಾಡುವದಿಲ್ಲವೆ ? ನೀನು ಹೀಗೆ ಉದಾಸೀನ ಮಾಡಿದ ಬಳಿಕ ನನ್ನನ್ನು ಕೇಳುವವರಾರು ? ನಿನ್ನ ಸ್ಥಿತಿಯನ್ನು ನೋಡಿ ನನಗೆ ಅನ್ನವು ಸವಿಹತ್ತುವದಿಲ್ಲ. ಅಲ್ಲಾನ ಧ್ಯಾನದಲ್ಲಿಯೂ ಮನಸ್ಸು ನಿಲ್ಲದಾಗಿದೆ.” ಅನ್ನಲು, ರಣಮಸ್ತಖಾನನು ತಟ್ಟನೆ ತಾಯಿಯನ್ನು ಕುರಿತು-ಮಾಸಾಹೇಬ, ನಿಜವಾಗಿಯೆಂದರೆ, ನನ್ನ ಮನಸ್ಸಿನ ಅಸಮಾಧಾನಕ್ಕೆ ಬೇರೆ ಕಾರಣವೇನೂ ಇಲ್ಲವೇ ಇಲ್ಲ. ಅಂದಬಳಿಕ ನಾನೇನು ಕಾರಣವನ್ನು ಹೇಳಲಿ ? ನನ್ನ ಮನಸ್ಸಿನ ಅಸಮಾಧಾನದ ಕಾರಣವನ್ನು ನಿಮ್ಮ ಮುಂದೆ ಈ ಮೊದಲೇ ಹೇಳಿಬಿಟ್ಟಿದ್ದೇನೆ. ಬಾದಶಹರು ನನ್ನನ್ನು ಅವಮಾನಗೊಳಿಸಿದ್ದು ನನಗೆ ದುಸ್ಸಹವಾಗಿದೆ. ಇದರ ಹೊರತು ಬೇರೆ ಕಾರಣವೇನೂ ಇರುವದಿಲ್ಲ. ನಾನು ಆವೇಶದಿಂದ ಮುಂದಕ್ಕೆ ಸಾಗುತ್ತಿರುವಾಗ, ಬಾದಶಹರು ನನ್ನ ಕಾಲುಗಳನ್ನೇ ಮುರಿದಂತಾಯಿತು. ಮಹತ್ವಾಕಾಂಕ್ಷೆಗಳೆಲ್ಲ ಲಯವಾದವು. ಇನ್ನು ವಿಜಾಪುರ ರಾಜ್ಯದಲ್ಲಿ ಕೆಲಸ ಮಾಡದೆ ಬೇರೆದೊಂದು ರಾಜ್ಯದಲ್ಲಿ ಕೆಲಸಮಾಡಿ ದೈವವನ್ನು ಪರೀಕ್ಷಿಸಬೇಕೆಂದು ಮಾಡಿದ್ದೇನೆ. ನನಗೆ ಏನೂ ತಿಳಿಯದಾಗಿದೆ. ಒಮ್ಮೊಮ್ಮೆಯಂತು ವಿಲಕ್ಷಣ ವಿಚಾರ ಮನಸ್ಸಿನಲ್ಲಿ ಬರುತ್ತವೆ. ನನ್ನ ಮನಸ್ಸಿನಲ್ಲಿದ್ದದ್ದನ್ನು ಈಗ ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನು ಮೇಲೆ ನನ್ನನ್ನು ಏನೂ ಕೇಳಬೇಡಿರಿ. ಅದರಿಂದ ನನ್ನ ತಾಯಿಯು ತಿರುಗಿ ಏನು ಮಾತಾಡುವಳೆಂಬದರ ಹಾದಿಯನ್ನು ಸಹ ಆತನು ನೋಡಲಿಲ್ಲ.

ಮಗನು ಹೀಗೆ ತಟ್ಟನೆ ಹೊರಟುಹೋದದ್ದನ್ನು ನೋಡಿ ಮಾಸಾಹೇಬರಿಗೆ ಬಹಳ ಆಶ್ಚರ್ಯವಾಯಿತು. ಆದರೂ ಆವೇಶದ ಭರದಲ್ಲಿ ಹೋಗಿರುವನು; ಇನ್ನೊಮ್ಮೆ ಕರಿಸಿ ಸಮಾಧಾನದಿಂದ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದರೆ ಕೇಳುವೆನೆಂದು ಮಾಸಾಹೇಬರು ಸಮಾಧಾನ ಮಾಡಿಕೊಂಡರು. ಕೆಲವು ದಿವಸ ಆತನನ್ನು ಮಾತಾಡಿಸದೆ ಹಾಗೇ ಬಿಡಬೇಕೆಂದು ಅವರು ಮಗನ ಉಸಾಬರಿಯನ್ನು ಬಿಟ್ಟು ಬಿಟ್ಟರು ; ಆದರೆ ಅವರಿಂದ ಹಿತವಾಗಲಿಲ್ಲ. ರಣಮಸ್ತಖಾನನ ಸ್ಥಿತಿಯು ದಿನದಿನಕ್ಕೆ ಕೆಡುತ್ತ ಹೋಯಿತು. ಆತನು ರಾತ್ರಿಯಲ್ಲಿ ಸಹ ಮನಬಂದಂತೆ ತಿರುಗಹತ್ತಿದನು. ಅದನ್ನು ನೋಡಿ ಮಾತ್ರ ಮಾಸಾಹೇಬರು ಬಹಳ ಚಿಂತೆಗೊಳಗಾದರು. ಇನ್ನು ಮೇಲೆ ಮಗನನ್ನು ಹಾದಿಗೆ ಹಚ್ಚದಿದ್ದರೆ ಪರಿಣಾಮವಾಗದೆಂದು ಅವರು ತಿಳಕೊಂಡರು. ಲೈಲಿಯೊಡನೆ ಅವರ ಆಲೋಚನೆಗಳು ನಡೆದವು. ಬರಿಯ ಬಾದಶಹನ ಅಪಮಾನದಿಂದ ಹೀಗಾಗಿರದೆ, ನೂರಜಹಾನಳ ಹಳಬಂಡವೇ ಮಗನನ್ನು ಈ ಮನೆಗೆ ತಂದು ಬಿಟ್ಟಿತೆಂದು ಮಾಸಾಹೇಬರು ನಿಶ್ಚಯಿಸಿದರು. ನೂರಜಹಾನಳ ಸಂಬಂಧದಿಂದ ಏನಾದರೂ ಹೆಚ್ಚು ಕಡಿಮೆಯಾದ್ದರಿಂದ ಮಗನ ಸ್ಥಿತಿಯು ಹೀಗಾಗಿದೆ, ಆದ್ದರಿಂದ ನಾವಿಬ್ಬರೂ ವಿಜಾಪುರಕ್ಕೆ ಹೋಗಿ ನಿಜವಾದ ಸಂಗತಿಗಳನ್ನು ತಿಳಕೊಂಡು ಬರೋಣವೆಂದು ಮಾಸಾಹೇಬರು ಲೈಲಿಯೊಡನೆ ಆಲೋಚಿಸಿದರು. ಅವರ ಆಲೋಚನೆಯು ನಿಶ್ಚಿತವಾಯಿತು. ಆ ನಿರ್ಧಾರದ ಸ್ತ್ರೀಯು ಕೂಡಲೇ ಮಗನನ್ನು ಕರೆಸಿ, “ನಾನು ಲೈಲಿಯನ್ನು ಕರಕೊಂಡು ವಿಜಾಪುರಕ್ಕೆ ಹೋಗಿ ಎಲ್ಲ ಸಂಗತಿಗಳನ್ನು ತಿಳಕೊಂಡು ಬರುತ್ತೇನೆ” ಎಂದು ಹೇಳಿದಳು. ತನ್ನ ತಾಯಿಯ ಕೈಯಿಂದ ಇನ್ನು ಯಾವ ಕೆಲಸವೂ ಆದೀತೆಂದು ರಣಮಸ್ತಖಾನನಿಗೆ ತೋರಲಿಲ್ಲ; ಆದ್ದರಿಂದ ಆತನು ಮಾಸಾಹೇಬರನ್ನು ಕುರಿತು- “ನೀವು ಹೋಗಿ ಮಾಡುವದೇನು? ಬಾದಶಹರು ತಮ್ಮ ಅಪ್ಪಣೆಯನ್ನು ಎಂದೂ ತಿರುಗಿಸುವವರಲ್ಲ. ಒಂದು ಪಕ್ಷದಲ್ಲಿ ಅವರು ತಮ್ಮ ಅಪ್ಪಣೆಯನ್ನು ತಿರುಗಿಸಿದರೆ, ಅದರಿಂದ ವಿಶೇಷ ಪ್ರಯೋಜನವಾಗದು. ಇದಲ್ಲದೆ ಇಲ್ಲಿ ಇರಲಿಕ್ಕೆ ಈಗ ನನ್ನ ಮನಸ್ಸೂ ಒಡಂಬಡುವದಿಲ್ಲ” ಅನ್ನಲು, ಮಾಸಾಹೇಬರು-ಏನೇ ಆಗಲಿ, ನಾವು ವಿಜಾಪುರಕ್ಕೆ ಹೋಗಿ ಬರುವತನಕ ನೀನು ಸ್ವಸ್ಥವಾಗಿರು, ಕೆಲಸವಾಗುವದಿಲ್ಲೆಂದು ಕಂಡುಬಂದರೆ, ಏನು ಮಾಡಬೇಕೆಂಬುದನ್ನು ನಾವಿಬ್ಬರೂ ಕೂಡಿ ಆಲೋಚಿಸೋಣ, ಎಂದು ಬಹಳ ಪ್ರಕಾರವಾಗಿ ಹೇಳಿ, ವಿಜಾಪುರಕ್ಕೆ ಹೋಗಲಿಕ್ಕೆ ಮಗನ ಅನುಮತಿಯನ್ನು ಪಡೆದರು. ರಣಮಸ್ತಖಾನನು ಸಂಗಡ ತಕ್ಕಷ್ಟು ಜನರನ್ನು ಕೊಡಲು, ಆ ನಿಶ್ಚಯದ ಸ್ವಭಾವದ ಹೆಣ್ಣುಮಗಳು ಲೈಲಿಯೊಡನೆ ವಿಜಾಪುರಕ್ಕೆ ಹೋದಳು.

ಮಾಸಾಹೇಬರು ವಿಜಾಪುರಕ್ಕೆ ಹೋದಬಳಿಕ ಇತ್ತ ರಣಮಸ್ತಖಾನನನ್ನು ಕೇಳುವವರೇ ಇಲ್ಲದಾಯಿತು. ಅವರು ಹೋದ ಮೂರು-ನಾಲ್ಕು ದಿನಗಳ ಮೇಲೆ ರಾಮರಾಜನು, ಹಿಂದಕ್ಕೆ ಒಮ್ಮೆ ಬಂದಂತೆ ನಸುಕಿನಲ್ಲಿ ಕುಂಜವನಕ್ಕೆ ಬಂದನು. ಆತನು ತಾನು ಬಂದ ಸುದ್ದಿಯನ್ನು ರಣಮಸ್ತಖಾನನಿಗೆ ಹೇಳಿಕಳಿಸುಲು ಖಾನನು ಎದುರಿಗೆ ಬಂದು ರಾಮರಾಜನನ್ನು ವಿನಯದಿಂದ ಕರಕೊಂಡು ಹೋದನು. ಆಗ ರಾಮರಾಜನು ರಣಮಸ್ತಖಾನನಿಗೆ- “ಖಾನಸಾಹೇನ, ಪುನಃ ಕುಂಜವನವನ್ನು ನೋಡುವ ಹಾಗಾದ್ದರಿಂದ ಮತ್ತೆ ಬಂದೆನು; ಅದ್ರೆ ನಿಮ್ಮ ಒಪ್ಪಿಗೆ ಇರುವದಷ್ಟೇ ?” ಎಂದು ಕೇಳಲು, ರಣಮಸ್ತಖಾನನು ಅತ್ಯಂತ ವಿನಯದಿಂದ-ಕುಂಜವನವು ತಮ್ಮದು, ನನ್ನ ಪರವಾನಿಗೆಯೇತಕ್ಕೆ ? ಅವಶ್ಯವಾಗಿ ಒಳಗೆ ಹೋಗಬಹುದು, ಎಂದು ಹೇಳಿದನು. ಅದಕ್ಕೆ ರಾಮರಾಜನು-ನಡೆಯಿರಿ, ನಾವಿಬ್ಬರೂ ಪುಷ್ಕರಣಿಯ ಕಡೆಗೆ ಹೋಗೋಣ. ನಿಮ್ಮೊಡನೆ ನಾನು ಕೆಲವು ಮಾತುಗಳನ್ನು ಆಡಬೇಕಾಗಿದೆ. ಏಕಾಂತಕ್ಕೆ ತಕ್ಕ ಸ್ಥಳವಿದ್ದರಿಂದ ಅತ್ತ ನೀವು ಬಂದರೆ ಎರಡೂ ಕೆಲಸಗಳಾಗುವವು, ಅನ್ನಲು ರಣಮಸ್ತಖಾನನು- “ನನ್ನೊಡನೆ ಯಾವ ಮಾತುಗಳನ್ನಾಡುವನೋ” ಎಂದು ಆಲೋಚಿಸುತ್ತ ರಾಮರಾಜನೊಡನೆ ಹೊರಟನು. ಆತನನ್ನು ಕಟ್ಟಿಕೊಂಡು ರಾಮರಾಜನು ಸಂದಿಗೊಂದಿಗಳು ಕೂಡ ಉಳಿಯದಂತೆ ಕುಂಜವನವನ್ನೆಲ್ಲ ತಿರುಗಿದನು. ಇವರಿಬ್ಬರು ಹೀಗೆ ತಿರುಗುವದನ್ನು ನೋಡಿ ರಣಮಸ್ತಖಾನನಿಗೆ ಜನರು ಆಶ್ಚರ್ಯಪಟ್ಟು, ತಮ್ಮೊಳಗೆ ಗುಜುಗುಟ್ಟಹತ್ತಿದರು. ಕುಂಜವನದಲ್ಲಿ ಓಡಾಡುತ್ತಿರುವಾಗ ರಾಮರಾಜನು ರಣಮಸ್ತಖಾನನಿಗೆ-ನಾನು ನಿಮಗೆ ಮತ್ತೆ ಮತ್ತೆ ಹೇಳುವ ಕಾರಣವಿಲ್ಲ. ಹಿಂದಕ್ಕೆ ಆದದ್ದನ್ನು ನೀವು ಮನಸ್ಸಿನಲ್ಲಿ ಹಿಡಯಬೇಡಿರಿ. ನಿಮ್ಮನ್ನು ನೋಡಿದಾಗಿನಿಂದ ನಿಮ್ಮ ವಿಷಯವಾಗಿ ನನ್ನಲ್ಲಿ ಆದರವು ಉತ್ಪನ್ನನವಾಗಿದೆ. ನಾನು ಬಾದಶಹರ ಕಡೆಗೆ ಕಳಿಸಿದ ಪತ್ರದಲ್ಲಿ ನಿಮಗೆ ಅನುಕೂಲವಾಗಿಯೇ ಬರೆದಿದ್ದೆನು. ಅವರು ಅದನ್ನು ನಿಮಗೆ ಹೇಳಿದರೋ ಇಲ್ಲವೋ ? ಅವರೇ ನಿಮ್ಮ ಲಗ್ನಮಾಡದೆ ಕಳಿಸಿದ್ದಕ್ಕಾಗಿಯೂ, ನಿಮ್ಮ ಮೇಲೆ ಒಬ್ಬ ವಕೀಲನನ್ನು ನಿಯಮಿಸಿ ಕಳಿಸಿದ್ದಕ್ಕಾಗಿಯೂ ನನಗೆ ಬಹಳ ವಿಷಾದವಾಗಿದೆ. ನಿಮ್ಮಂಥ ತರುಣ ಶೂರರು ವಕೀಲ ಕೆಲಸದಲ್ಲಿ ಕೊಳೆಯವದು ನನಗೆ ನೆಟ್ಟಗೆ ಕಾಣುವದಿಲ್ಲ. ನೀವು ಸೈನ್ಯದಲ್ಲಿ ಅಧಿಕಾರವನ್ನು ಪಡೆದು ಪರಾಕ್ರಮವನ್ನು ತೋರಿಸುತ್ತ ಸೇನಾಪತಿಯ ಪದವಿಯನ್ನು ಹೊಂದಲಿಕ್ಕೆ ತಕ್ಕವರಾಗಿರುತ್ತೀರಿ. ನಮ್ಮ ದಂಡಿನಲ್ಲಿ ಪಠಾಣರೂ, ಬೇರೆ ಮುಸಲ್ಮಾನರೂ ಬಹು ಜನರು ಇದ್ದಾರೆ. ವಿಜಾಪುರದ ದಂಡನಲ್ಲಿಯಾದರೂ ಹಿಂದೂ ದಂಡಾಳುಗಳು ಬಹು ಜನರು ಇರುವರು. ಅವರಲ್ಲಿ ಉತ್ತರ ಹಿಂದುಸ್ತಾನದ ರಜಪೂತರು ಸಹ ಇರುವರು. ಅವರು ತೀರ ಸ್ವಲ್ಪ ಜನರು ಇರಬಹುದು. ಆದರೆ ಇರುವದು ನಿಜ. ನಮ್ಮಲ್ಲಿರುವ ಮುಸಲ್ಮಾನ ಸೈನ್ಯದ ಮೇಲೆ ನಿಮ್ಮಂಥವರು ಅಧಿಕಾರಿಗಳಿದ್ದರೆ, ಬಹಳ ಒಪ್ಪುವದು. ಎಂದು ನುಡಿಯುತ್ತಿರಲು, ರಣಮಸ್ತಖಾನನು ರಾಮರಾಜನನ್ನು ಕೆಕ್ಕರಿಸಿ ನೋಡಹತ್ತಿದನು. ಆಗ ರಾಮರಾಜನು ತನ್ನ ಮಾತನ್ನು ಅಷ್ಟಕ್ಕೆ ಬಿಟ್ಟು ರಣಮಸ್ತಖಾನನಿಗೆ-ನಿಮಗೆ ನನ್ನ ಮಾತುಗಳು ಸೇರದಿದ್ದರೆ ನಾನು ಆಡುವದಿಲ್ಲ. ಸುಮ್ಮನೆ ಮಾತಿಗೆ ಮಾತು ಬಂದು ಆಡಿದೆನು. ಹೇಳಿರಿ, ನನ್ನ ಮಾತಿನಲ್ಲಿ ಯಾವ ಮಾತು ನಿಮಗೆ ಸೇರಲಿಲ್ಲ? ಎಂದು ಕೇಳಲು, ರಣಮಸ್ತಖಾನನು-ನಿಮ್ಮ ಮಾತು ಸೇರದಿರಲಿಕ್ಕೆ ನೀವು ಈಗ ಅಯೋಗ್ಯ ಮಾತು ಆಡಿದ್ದೇನು ? ನೀವು ಒಂದು ಪಕ್ಷದಲ್ಲಿ ಅಂಥ ಮಾತುಗಳನ್ನು ಆಡಿದರೂ ಯೋಗ್ಯವಾದವನ್ನಷ್ಟು ಮಾತ್ರ ನಾನು ಗ್ರಹಿಸುವನು. ಆಡಿರಿ, ನಿಮ್ಮ ಮಾತುಗಳನ್ನೆಲ್ಲ ನಾನು ಕೇಳುತ್ತೇನೆ, ಸಂಕೋಚವಿಲ್ಲದೆ ಮಾತಾಡಿರಿ, ಎನ್ನಲು, ರಾಮರಾಜನು-ಸುಮ್ಮನೆ ನಾನು ಉದ್ದಕ್ಕೆ ಮಾತಾಡುತ್ತ ಹೋಗುವರಿಂದ ಪ್ರಯೋಜನವೇನು ? ಹತ್ತು ಮಾತಿಗೆ ಒಂದಾದರೂ ನೀವು ಉತ್ತರ ಕೊಟ್ಟರೆ, ಮಾತಾಡಲಿಕ್ಕೆ ನೆಟ್ಟಗೆ. ನಿಮಗೆ ಮಾತಾಡಲಿಕ್ಕೇನು ಬಂದದ್ದು ? ಆಡಿರಿ. ನಿಮಗೆ ತಿಳಿದದ್ದನ್ನು ನೀವು ಸ್ಪಷ್ಟವಾಗಿ ಆಡಿರಿ. ಸುಮ್ಮನೆ ವಿನೋದಕ್ಕಾಗಿ ಆಡುವ ಮಾತುಗಳೆಂತಲೇ ನಾವು ತಿಳಿಯೋಣ. ಅನ್ನಲು ರಣಮಸ್ತಖಾನನು ರಾಮರಾಜನನ್ನು ನೋಡುತ್ತ ಸುಮ್ಮನೆ ನಿಂತುಕೊಂಡನು.

ರಾಮರಾಜ-ಖಾನಸಾಹೇಬ, ಹೀಗೆ ಆಶ್ಚರ್ಯಪಡುವದೇಕೆ ? ನೀವು ನಮ್ಮ ಸೈನ್ಯದಲ್ಲಿ ಚಾಕರಿಗೆ ನಿಂತುಕೊಳ್ಳಿರಿ; ನಾನು ನಿಮಗೆ ದೊಡ್ಡ ಅಧಿಕಾರ ಕೊಡುತ್ತೇನೆ. ನಮ್ಮ ಹಿಂದೂ ಸರದಾರರ ಪಂಕ್ತಿಯಲ್ಲಿ ನಿಮ್ಮನ್ನು ಕೂಡಿಸುತ್ತೇನೆ. ನಿಮ್ಮನಂತು ನನ್ನ ಅಂಗರಕ್ಷಕರನ್ನಾಗಿ ನಿಯಮಿಸುವೆನು. ಯಾಕೆ ? ಏನೂ ಮಾತಾಡಲೊಲ್ಲಿರಿ ? ನಾನೇನು ಅಯೋಗ್ಯ ಮಾತುಗಳನ್ನಾಡಿರುವದಿಲ್ಲ. ನಿಮಗೆ ಅಯೋಗ್ಯವಾಗಿ ಕಂಡರೆ ಹೇಳಿರಿ.

ರಣಮಸ್ತಖಾನ-(ಹುಬ್ಬು ಗಂಟಿಕ್ಕಿ) ನಿಮ್ಮ ಯಾವತ್ತು ಮಾತುಗಳನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಗಿದೆ ! ನಮ್ಮ ಒಡೆಯನ ಮೇಲೆ ತಿರುಗಿ ಬೀಳಲಿಕ್ಕೆ ಹೇಳಿದರೆ, ನಾನು ತಿರುಗಿ ಬಿದ್ದೇನೆಂಬ ನಂಬಿಗೆಯಾದರೂ ನಿಮಗೆ ಹ್ಯಾಗಾಯಿತು ?

ರಾಮರಾಜ-ತಿರುಗಿ ಬೀಳುವದೆ ? ಒಡೆಯನ ಮೇಲೆ ತಿರುಗಿ ಬೀಳುವದೇ ಖಾನಸಾಹೇಬ ! ಒಡೆಯನ ಮೇಲೆ ತಿರುಗಿ ಬೀಳಿರೆಂದು ಯಾರು ನಿಮಗೆ ಉಪದೇಶಿಸಿದರು ? ಇಂಥ ನೀಚತನಕ್ಕೆ ನಾನು ಸರ್ವಥಾ ಹೋಗತಕ್ಕವನಲ್ಲ; ಬಾದಶಹರಿಗೆ ನಿಮ್ಮ ಚಾಕರಿಯು ಮನಸ್ಸಿಗೆ ಬಂದಿರುವದಿಲ್ಲ; ನೀವು ಮನಃಪೂರ್ವಕವಾಗಿ ಸ್ವಾಮಿನಿಷ್ಠೆಯಿಂದ ಮಾಡಿದ ಕೆಲಸದ ಅಭಿನಂದನ ಮಾಡದೆ, ಅವರು ನಿಮ್ಮ ಉಪಹಾಸ ಮಾಡಿದರು ; ನಿಮ್ಮ ಸ್ವಾತಂತ್ರ್ಯವನ್ನು ನಷ್ಟಪಡಿಸಿ ನಿಮ್ಮ ಮೇಲಾಧಿಕಾರಿಯಾಗಿ ಬೇರೊಬ್ಬ ವಕೀಲನನ್ನು ಕಳಿಸಿಕೊಟ್ಟರು; ಆದ್ದರಿಂದ ನೀವು ಸ್ಪಷ್ಟರೀತಿಯಿಂದ ಬಾದಶಹರಿಗೆ- “ನಿಮ್ಮ ಚಾಕರಿಯನ್ನು ನಾನು ಒಲ್ಲೆನು” ಎಂದು ಹೇಳಿ ನನ್ನನ್ನು ಕೂಡಿಕೊಳ್ಳಿರೆಂದಿಷ್ಟೇ ನಿಮಗೆ ನಾನು ಹೇಳಿದೆನು. ಈ ಸರಳ ಮಾರ್ಗದಲ್ಲಿ ಒಡೆಯನ ಮೇಲೆ ತಿರುಗಿ ಬಿದ್ದ ಹಾಗೆ ಎಲ್ಲಿ ಆಗುತ್ತದೆ ? ನಾವು ಮಾಡುವ ಕೆಲಸವು ನಮ್ಮ ಯಜಮಾನನ ಮನಸ್ಸಿಗೆ ಬಾರದಿರುವಾಗ, ಮತ್ತೊಬ್ಬರು ನಮ್ಮನ್ನು ಆದರದಿಂದ ಚಾಕರಿಗೆ ಇಟ್ಟುಕೊಳ್ಳುತ್ತಿರಲು, ನಾವು ನಮ್ಮ ಮೊದಲಿನ ಯಜಮಾನನಿಗೆ ಸ್ಪಷ್ಟವಾಗಿ ಹೇಳಿ, ಆ ಎರಡನೆಯವರ ಚಾಕರಿ ಮಾಡುವಲ್ಲಿ ದ್ರೋಹವೇನು ? ಇದರಿಂದ ಒಡೆಯನ ಮೇಲೆ ತಿರುಗಿ ಬಿದ್ದಹಾಗೆ ಹ್ಯಾಗಾಯಿತು ? ಹೀಗೆ ಹೇಳದೆ ನಾನು ನಿಮಗೆ- “ನೀವು ಬಾದಶಹನ ನೌಕರರಾಗಿಯೇ ಇದ್ದು ಗುಪ್ತರೀತಿಯಿಂದ ನಮಗೆ ಸಹಾಯ ಮಾಡಿರಿ; ನಿಮ್ಮ ಬಾದಶಹರು ನಡಿಸಿದ ಒಳಸಂಚುಗಳನ್ನೂ, ಅವರ ಕಡೆಯ ಗುಪ್ತವಾದ ಸುದ್ದಿಗಳನ್ನೂ ನಮಗೆ ಗುಪ್ತರೀತಿಯಿಂದ ಹೇಳಿರಿ” ಎಂದು ಹೇಳಿದ್ದರೆ, ಆ ಮಾತು ಬೇರೆಯಾಗಿತ್ತು. ಆ ಪ್ರಸಂಗದಲ್ಲಿ ಸ್ವಾಮಿದ್ರೋಹವೆಂಬ ನಿಮ್ಮ ಮಾತಿಗೆ ನಾನು ಒಪ್ಪಿಕೊಳ್ಳುತ್ತಿದ್ದೆನು ; ಆದರೆ ಈಗ ನಾನು ನಿಮಗೆ ಹಾಗೆ ಹೇಳುವದಿಲ್ಲ. ಬಾದಶಹನಿಗೆ ನೀವು- “ನಿಮ್ಮ ಚಾಕರಿಯನ್ನು ನಾನು ಮಾಡುವದಿಲ್ಲೆಂದು ಸ್ಪಷ್ಟವಾಗಿ ತಿಳಿಸಿ, ನೀವು ನಮ್ಮ ಕಡೆಗೆ ಬರಬೇಕೆಂದು ನಿಮಗೆ ಹೇಳುತ್ತೇನೆ. ಹೀಗೆ ಹೇಳಲಿಕ್ಕೆ ನಿಮಗೆ ಪ್ರತಿಬಂಧವೇನು? ನನಗಂತು ಯಾವ ಪ್ರತಿಬಂಧವಿದ್ದಂತೆಯೂ ತೋರುವದಿಲ್ಲ.

ರಣಮಸ್ತಖಾನ-(ಸ್ವಲ್ಪ ಸಿಟ್ಟಿನಿಂದ) ತಮ್ಮ ಎಲ್ಲ ಮಾತುಗಳನ್ನು ನಾನು ಈವರೆಗೆ ಲಕ್ಷ್ಯಪೂರ್ವಕವಾಗಿ ಕೇಳಿಕೊಂಡನು. ಇನ್ನು ಯಾವ ಮಾತು ಹೇಳುವ ಅವಶ್ಯಕತೆಯೂ ಉಳಿದಿರುವದಿಲ್ಲ: ಆದರೆ ನನ್ನಷಕ್ಕೆ ನಾನು ವಿಚಾರಮಾಡುವದನ್ನು ಮಾಡುವೆನು. ತಿರುಗಿ ತಾವು ಈ ಸಂಬಂಧದಲ್ಲಿ ನನ್ನನ್ನು ಏನೂ ಕೇಳಬಾರದು.

ರಾಮರಾಜ-ನನ್ನ ಮಾತಿನಿಂದ ತಮಗೆ ಸ್ವಲ್ಪ ಸಿಟ್ಟು ಬಂದಂತೆ ತೋರುತ್ತದೆ. ಆದರೆ ನಿಜವಾಗಿ ಸಿಟ್ಟು ಬರಲಿಕ್ಕೆ ಕಾರಣವಿಲ್ಲ. ನೀವು ಬಾದಶಹರ ಚಾಕರಿಗೆ ಬೇಸತ್ತಿರುವದರಿಂದ, ನಿಮ್ಮ ಪರಾಕ್ರಮವನ್ನು ಪ್ರಕಟಿಸಲಿಕ್ಕೆ ಮಾರ್ಗ ದೊರೆಯಬೇಕೆಂದು ಸೂಚಿಸಿದೆನಷ್ಟೇ. ನಮಗೆ ನಮ್ಮ ಸೈನ್ಯವಿರುತ್ತದೆ. ಸೇನಾಪತಿಗಳಿರುತ್ತಾರೆ. ಎಲ್ಲ ತರದ ಅನಕೂಲತೆಗಳೂ ಇರುತ್ತವೆ. ಆದರೂ ಬಾದಶಹನ ಸೈನ್ಯದ ಸ್ಥಿತಿಯನ್ನು ಬಲ್ಲ ಶೂರ ವೀರನೊಬ್ಬನ ಆವಶ್ಯಕತೆಯು ನಮಗಿರುತ್ತದೆ. ಅಂತೇ ನಾನು ನಿಮ್ಮನ್ನು ಕೇಳಿದೆನು. ನೀವು ಒಪ್ಪಿಕೊಳ್ಳದಿದ್ದರೆ ಮತ್ತೆ ಯಾರಾದರೂ ಒಪ್ಪಿಕೊಂಡಾರು, ಇದರೊಳಗೇನು? ಆದಿರಲಿ ಬಿಡಿರಿ. ನಿಮಗೆ ಬೇಡಾಗಿದ್ದರೆ ಆ ಮಾತನ್ನೇ ಬಿಟ್ಟುಬಿಡೋಣ.

ಈ ಮೇರೆಗೆ ನುಡಿದು, ರಾಮರಾಜನು ಸುಮ್ಮನಾಗಿ ಕುಂಜವನವನ್ನು ನೋಡುತ್ತ ಸಾಗಿದನು. ರಣಮಸ್ತಖಾನನೂ ಸುಮ್ಮನೆ ಆತನ ಬೆನ್ನುಹತ್ತಿ ನಡೆದಿದ್ದನು. ರಾಮರಾಜನು ಯಾವತ್ತು ಕುಂಜವನವನ್ನು ತಿರುವಿ ಹಾಕಿದನು. ಪುಷ್ಕರಣಿಯನ್ನಂತು ಎರಡು ಸಾರೆ ಆತನು ಸುತ್ತಿ ಬಂದನು. ಕೆಲವು ಹೊತ್ತಿನ ಮೇಲೆ ರಣಮಸ್ತಖಾನನನ್ನು ಕುರಿತು “ಆಗಲೇ ನೀವು ಪ್ರಶ್ನೆಮಾಡಿದಿರಲ್ಲ ? ಆದಕ್ಕೆ ಉತ್ತರವನ್ನು ನಾನು ಈಗ ಕೊಡುತ್ತೇನೆ; ಆದರೆ ಇಲ್ಲಿ ಬೇಡ ನಮ್ಮ ಬಂಗಲೆಯಲ್ಲಿ ನಡೆಯಿರಿ” ಎಂದು ಹೇಳಲು, ರಾಮರಾಜನು ಉತ್ಸುಕತೆಯಿಂದ ರಣಮಸ್ತನ ಮುಖವನ್ನು ನೋಡಿ ಸಂತೋಷಪಟ್ಟು-ಆಗಲಿ, ಬಂಗಲೆಯಲ್ಲಿಯೇ ಹೇಳಿರಿ, ಎಂದು ಬಂಗಲೆಯ ಕಡೆಗೆ ನಡೆದನು. ಬಂಗಲೆಗೆ ಹೋದ ಬಳಿಕ ರಣಮಸ್ತಖಾನನು ರಾಮರಾಜನನ್ನು ಉಚ್ಚಾಸನದಲ್ಲಿ ಕುಳ್ಳಿರಿಸಿ, ಆತನನ್ನು ಕುರಿತು ನಾನು ನನ್ನಷ್ಟಕ್ಕೆ ಈ ಮಾತಿನ ವಿಚಾರ ಮಾಡುತ್ತೇನೆಂದು ಆಗಲೆ ನಿಮಗೆ ಹೇಳಿದ್ದೆನಲ್ಲವೆ? ಆದರೆ ಈಗ ನನ್ನ ನಿಶ್ಚಯವಾಗಿರುತ್ತದೆ. ಬಾದಶಹನ ಚಾಕರಿಯಿಂದ ನನ್ನ ಗೌರವವು ಹೆಚ್ಚುವದಿಲ್ಲೆಂಬದು ನನಗೆ ಪೂರಾ ಗೊತ್ತಾಯಿತು. ಬಾದಶಹನು ನನ್ನ ಅಪಮಾನ ಮಾಡಿದ್ದಕ್ಕಾಗಿ ಆತನ ಸೇಡು ತೀರಿಸಿಕೊಳ್ಳಬೇಕೆಂಬ ಬುದ್ದಿಯು ನನ್ನಲ್ಲಿ ಉತ್ಪನ್ನವಾಗಹತ್ತಿದೆ. ಆದ್ದರಿಂದ ನಾನು ನಿಮ್ಮ ಚಾಕರಿಯನ್ನು ಮಾಡಲು ಒಪ್ಪಿಕೊಳ್ಳುತ್ತೇನೆ; ಆದರೆ ಸದ್ಯಕ್ಕೆ ನಾನು ಅದನ್ನು ಗುಪ್ತರೀತಿಯಿಂದ ಮಾಡಲು ಒಪ್ಪಿಕೊಳ್ಳುವೆನು. ಇಂದು ನಾನು ಬಾದಶಹರಿಗೆ- “ನಿಮ್ಮ ಚಾಕರಿಯನ್ನು ನಾನು ಮಾಡುವದಿಲ್ಲೆಂದು ಸ್ಪಷ್ಟವಾಗಿ ಹೇಳುವದಿಲ್ಲ. ನಾನು ಪ್ರಸಿದ್ದ ರೀತಿಯಿಂದ ಬಾದಶಹನ ಚಾಕ್ರಿಯನ್ನು ಗುಪ್ತರೀತಿಯಿಂದ ನಿಮ್ಮ ಚಾಕ್ರಿಯನ್ನು ಮಾಡುವೆನು. ಹೀಗೆ ಮಾಡದೆ ಪ್ರಸಿದ್ದ ರೀತಿಯಿಂದ ನಿಮ್ಮ ಚಾಕರಿಯನ್ನು ಮಾಡಿದರೆ ಆಗ ತಕ್ಕಷ್ಟು ಲಾಭವಾಗದು. ನಾನು ಇಲ್ಲಿ ಬಾದಶಹನ ವಕೀಲನಾಗಿ ಬಂದಿರುವ ದೃಷ್ಟಿಯಿಂದ ಆಗಬಹುದಾದ ಲಾಭಗಳನ್ನು ಮಾಡಿಕೊಂಡರೆ ನಿಮ್ಮ ಹಿತವು ಸಂಪೂರ್ಣವಾಗಿ ಸಾಧಿಸುವದು. ನಿಮ್ಮ ಹಿತಚಿಂತನ ಮಾಡಬೇಕೆಂದು ನಾನು ನಿರ್ಧರಿಸಿರುವೆನು, ಮೂವರು ಬಾದಶಹರ ಒಳಸಂಚುಗಳ ಗೊತ್ತು ನಿಮಗೆ ಹತ್ತಿದರೇ ಲಾಭವಾಗುವದು. ಇಲ್ಲದಿದ್ದರೆ ಲಾಭವೇನು ಆಗುವದು? ನಿಮ್ಮ ರಾಜ್ಯವನ್ನು ನುಂಗಿ ನೀರು ಕುಡಿದು, ಅದನ್ನು ತನ್ನೊಳಗೆ ಹಂಚಿಕೊಳ್ಳಬೇಕೆಂದು ಮೂವರೂ ಬಾದಶಹರು ಯತ್ನಿಸುತ್ತಿದ್ದಾರೆ. ಅವರ ಒಳಸಂಚುಗಳು ನನಗೆ ಗೊತ್ತಾಗುತ್ತ ಹೋದಂತೆ, ನಾನು ಅವನ್ನು ನಿಮಗೆ ತಿಳಿಸುತ್ತ ಹೋಗಿ ನಿಮ್ಮನ್ನು ಎಚ್ಚರಗೊಳಿಸುವೆನು. ಅದಲ್ಲದೆ ನಡನಡುವೆ ನನ್ನಿಂದಾಗ ಸಹಾಯವನ್ನೂ ಮಾಡುತ್ತ ಹೋಗುವೆನು. ಎಂದು ನುಡಿದು ರಣಮಸ್ತಖಾನನು ಒಮ್ಮೆಲೆ ಸುಮ್ಮನಾಗಿ ಗೂಢವಿಚಾರದಲ್ಲಿ ಮಗ್ನನಾದವನಂತೆ ಕುಳಿತು ಕೊಂಡನು.

ಇಷ್ಟು ಅನುಕೂಲವಾಗಿ ರಣಮಸ್ತಖಾನನು ಮಾತಾಡಬಹುದೆಂದು ರಾಮರಾಜನು ತಿಳಿದಿದ್ದಿಲ್ಲ. ಬಹಳವಾದರೆ ಖಾನನು ಪ್ರಸಿದ್ಧರೀತಿಯಿಂದ ತನ್ನ ಚಾಕರಿಯನ್ನು ಮಾಡಲಿಕ್ಕೆ ಒಪ್ಪಿಕೊಳ್ಳಬಹುದೆಂದು ಅತನು ತಿಳಿದಿದ್ದನು; ಆದರೆ “ಕುರುಡ ಬೇಡಿದ್ದು ಒಂದು ಕಣ್ಣು, ದೇವರು ಕೊಟ್ಟದ್ದು ಎರಡು ಕಣ್ಣು” ಎಂಬಂತೆ ರಣಮಸ್ತಖಾನನು ಈಗ ಆಡಿದ್ದನ್ನು ಕೇಳಿ ರಾಮರಾಜನಿಗೆ ಪರಮಾಶ್ಚರ್ಯವಾಯಿತು. ಹೀಗೆ ಆತನಿಗೆ ಆಶ್ಚರ್ಯವಾದದ್ದನ್ನು ತಿಳಿದೋ ಏನೋ ಅನ್ನುವಂತೆ, ರಣಮಸ್ತಖಾನನು ರಾಮರಾಜನನ್ನು ಕುರಿತು- ನನ್ನ ಮಾತನ್ನು ಕೇಳಿ ನೀವು ಆಶ್ಚರ್ಯಪಟ್ಟದ್ದು ಸೋಜಿಗವಲ್ಲ ! ಆದರೆ ನಾನು ಪ್ರಸಿದ್ಧರೀತಿಯಿಂದ ನಿಮ್ಮನ್ನು ಕೂಡಿಕೊಂಡರೆ, ಯಾವ ಕಾಲದಲ್ಲಿ ನನ್ನ ಘಾತವಾದೀತೆಂಬದನ್ನು ಹೇಳಲಾಗುವದಿಲ್ಲ; ಯಾಕೆಂದರೆ ಮೂವರು ಬಾದಶಹರಿಗೂ ಸಂಬಂಧಿಸಿದ ಹಲವು ಸಂಗತಿಗಳು ನನಗೆ ಗೊತ್ತಾಗುತ್ತದೆ. ಅವುಗಳನ್ನು ನಾನು ನಿಮಗೆ ತಿಳಿಸಿದರೆ, ಸರ್‍ವಸ್ವದ ಘಾತವಾದೀತೆಂದು ತಿಳಿದು ಆ ಮೂವರೂ ಬಾದಶಹರೂ ಏನಾದರೂ ಹಂಚಿಕೆ ಮಾಡಿ, ನನ್ನನ್ನು ಕೊಲ್ಲಿಸದೆ ಬಿಡರು ; ಆದ್ದರಿಂದ ಹೀಗಾಗಗೊಡುವದು ಇಷ್ಟವಲ್ಲ. ನಿಷ್ಕಾರಣವಾಗಿ ನನ್ನ ಮಾನ ಖಂಡನ ಮಾಡಿದ್ದಕ್ಕಾಗಿ ನಾನು ಬಾದಶಹನ ಸೇಡು ತೀರಿಸಿಕೊಳ್ಳವದು ಆವಶ್ಯಕವಾಗಿದೆ. ಇದರ ಸಂಗಡ ಬೇರೆ ಸಾಧಿಸಬೇಕಾಗುವ ನನ್ನ ಕಾರ್ಯಗಳನ್ನು ಸಾಧಿಸಿಕೊಳ್ಳಲಿಕ್ಕೆ ಬರಬಹುದು. ಯೋಗ್ಯ ಪ್ರಸಂಗದಲ್ಲಿ ನಾನು ನಿಮ್ಮನ್ನು ಕೂಡಿಕೊಂಡೆನೆಂದರೆ, ಚೆನ್ನಾಗಿ ಅವರ ಹಲ್ಲು ಮುರಿದಂತಾಗುವದು, ಆದ್ದರಿಂದ ಆಗಲೆ ನಿಮಗೆ ಹೇಳಿದಂತೆ, ನಾನು ನಿಮ್ಮ ನೌಕರನೂ ಆಗಿರುವೆನು. ನನಗೆ ಗೊತ್ತಾದ ಗುಪ್ತ ಸಂಗತಿಗಳನ್ನು ನಿಮ್ಮ ಮುಂದೆ ಹೇಳುತ್ತ ಹೋಗುವೆನು. ಅದರಂತೆ ನೀವು ಸಿದ್ದತೆ ಮಾಡಿಕೊಳ್ಳುತ್ತ ಸಾಗಿದರಾಯಿತು. ನನ್ನ ಈ ಕೃತಿಯು ನಮ್ಮ ತಾಯಿಯ ಮನಸ್ಸಿಗೆ ಎಷ್ಟು ಮಾತ್ರಕ್ಕೂ ಬರಲಿಕ್ಕಿಲ್ಲ; ಆಕೆಯು ಇದಕ್ಕೆ ಸರ್ವಥಾ ಒಪ್ಪಿಕೊಳ್ಳಲಾರಳು. ನಾನು ಇಂಥ ಕೃತಿಯಲ್ಲಿ ತೊಡಗಿರುವೆನೆಂಬ ಸುದ್ದಿಯು ಹತ್ತಿದರೆ ಸಾಕು, ಆಕೆಯು ನನ್ನ ಮೂಖಾವಲೋಕನ ಮಾಡಲಿಕ್ಕಿಲ್ಲ. ಆಕೆಯು ಒಳ್ಳೆಯ ನಿರ್ಧಾರದವಳೂ, ಅತ್ಯಂತ ಚತುರಳೂ ಇರುವಳು. ಈ ದಿನ ಆಕೆಯು ಇಲ್ಲಿ ಇಲ್ಲದಿದ್ದರಿಂದಲೇ ನಮಗೆ ಸಮಾಧಾನದಿಂದ ಮಾತಾಡಲಿಕ್ಕೆ ಆಸ್ಪದವುಂಟಾಗಿದೆ. ಆಕೆಯು ಇಲ್ಲಿ ಇರುತ್ತಿದ್ದರೆ, ಇಷ್ಟು ಮಾತಾಡಲಿಕ್ಕೂ ಮಾರ್ಗವಿದ್ದಿಲ್ಲ. ಹೇಳಿರಿ, ನಿಮಗೆ ನನ್ನ ಮಾತು ಮಾನ್ಯವಾಗಿರುವದೋ ಇಲ್ಲವೋ ? ಸದ್ಯಕ್ಕೆ ನನಗೆ ನಿಮ್ಮಿಂದ ಸಂಬಳ ಬೇಕಾಗಿಲ್ಲ, ಅಧಿಕಾರ ಬೇಕಾಗಿಲ್ಲ, ನನಗೆ ಬಾದಶಹನ ಸೇಡು ತೀರಿಸಿಕೊಳ್ಳಲಿಕ್ಕೆ ಆಸ್ಪದ ದೊರೆತರೆ ಸಾಕು. ಯಾಕೆ? ಮಾತಾಡಿರಿ, ಈಗ ಸುಮ್ಮನೆ ಯಾಕೆ ಕುಳಿತುಕೊಂಡಿರಿ ? ಇದರಲ್ಲಿ ನಿಮ್ಮ ಹಾನಿಯೇನೂ ಇರುವದಿಲ್ಲ, ಸಂಪೂರ್ಣ ಲಾಭವೇ ಇರುತ್ತದೆ. ಹೂ! ಯಾಕೆ ಮಾತಾಡಲೊಲ್ಲಿರಿ? ಎಂದು ಆತುರಪಡಹತ್ತಿದನು. ಅದಕ್ಕೆ ರಾಮರಾಜನು ಸಂತೋಷಾತಿಶಯದಿಂದ- ನನಗೆ ಮಾತಾಡಲಿಕ್ಕೆ ನೀವು ಆಸ್ಪದವನ್ನೇ ಇಟ್ಟಿಲ್ಲವೆಂದ ಬಳಿಕ ನಾನೇನು ಮಾತಾಡಲಿ? ಒಂದು ಬೇಡಿದರೆ ಎರಡು ಸಿಕ್ಕಂತಾದವು. ಸಂತೋಷವು ಬಹಳ ಸಂತೋಷವು! ನೆಟ್ಟಗಾಯಿತು, ಬಹಳ ನೆಟ್ಟಗಾಯಿತು! ಇದರಲ್ಲಿ ನನ್ನ ಲಾಭವು ಸಂಪೂರ್ಣವಾಗುತ್ತದೆಂದೇನು ನನಗೆ ತಿಳಿಯುವದಿಲ್ಲವೇ? ನಿಮ್ಮ ಮಾತಿಗೆ ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎತ್ತ ಕಡೆಯಿಂದೇ ಆಗಲಿ, ನಮ್ಮಿಬ್ಬರ ವಿಚಾರೈಕ್ಯವಾಗಬೇಕೆಂಬುದೇ ನನ್ನ ಮುಖ್ಯಹೇತುವು.

ರಾಮರಾಜನು ಹೀಗೆ ಒಪ್ಪಿಕೊಂಡದನ್ನು ನೋಡಿ ರಣಮಸ್ತಖಾನನು ಸರಿ ಸರಿ ! ನಿಮ್ಮ ಹೇತುವು ಸಾಧಿಸಿದ ಹಾಗಾಯಿತಷ್ಟೇ ? ಆದರೆ ಇನ್ನು ಮುಂದಿನ ಸಂಗತಿಗಳ ವಿಚಾರವನ್ನು ನೆಟ್ಟಗೆ ಮಾಡಲಿಕ್ಕೆ ಬೇಕು, ಆ ವಿಚಾರಗಳೇನೆಂಬುದನ್ನು ನಾನು ಹೇಳುತ್ತೇನೆ ಕೇಳಿರಿ-ಇನ್ನು ಮೇಲೆ ನೀವು ಇತ್ತಕಡೆಗೆ ಎಂದೂ ಬರಬಾರದು. ನೀವು ಮೇಲಿಂದ ಮೇಲೆ ಇತ್ತಕಡೆಗೆ ಬರಹತ್ತಿದಿರೆಂದರೆ, ನಮ್ಮ ಜನರು ಎನಾದರೂ ಕುತರ್ಕಗಳನ್ನು ಕಲ್ಪಿಸಿ ಅನರ್ಥವನ್ನು ಉಂಟು ಮಾಡುವರು. ಮಹಮೂದಖಾನನ ಕಡೆಯಿಂದಲೂ ಸ್ವತಃ ಬಾದಶಹರ ಕಡೆಯಿಂದಲೂ ನನ್ನ ಮೇಲೆ ಗುಪ್ತಚಾರರು ನಿಯಮಿಸಲ್ಪಟ್ಟಿರಬಹುದು, ಅಂಥ ಗುಪ್ತಚಾರರು ನನ್ನ ಸೇವಕರಲ್ಲಿಯೇ ಇರಲಿಕ್ಕಿಲ್ಲೆಂದು ಯಾರು ಹೇಳಬೇಕು? ಇನ್ನು ಮೇಲೆ ಕೆಲಸ ಬಿದ್ದಾಗ ನಾನೇ ನಿಮ್ಮ ಕಡೆಗೆ ಬರುತ್ತ ಹೋಗುವೆನು, ಇಲ್ಲವೇ ಪ್ರಸಿದ್ಧ ರೀತಿಯಿಂದ ನನ್ನನ್ನು ನೀವು ಕರಿಸಿಕೊಳ್ಳುತ್ತ ಹೋಗಿರಿ. ನಾನು ಮಹಮೂದಖಾನನ ಒಪ್ಪಿಗೆಯನ್ನು ಪಡೆದು ತಮ್ಮಕಡೆ ಬರುತ್ತ ಹೋಗುವೆನು. ನಿಮ್ಮ ಕಡೆಯ ಸುದ್ದಿಗಳನ್ನು ತಿಳಕೊಳ್ಳಲಿಕ್ಕೆ ಅನುಕೂಲವಾಗಬೇಕೆಂದು ಮಹಮೂದಖಾನನಿಗೆ ಹೇಳಿ, ಎರಡು ದಿನಕ್ಕೊಮ್ಮೆ ನಿಮ್ಮ ದರ್ಬಾರಕ್ಕೆ ಬರಲಿಕ್ಕೆ ಆತನಿಂದ ಅಪ್ಪಣೆಯನ್ನು ಒಮ್ಮೆಲೆ ತಕ್ಕೊಂಡು ಇಟ್ಟು ಬಿಡುವೆನು. ನನ್ನ ದರ್ಬಾರದಿಂದ ಇತ್ತಕಡೆಗೆ ಬಂದೆನೆಂದರೆ, ನನ್ನ ಮನಸ್ಸಿಗೆ ಯೋಗ್ಯ ತೋರಿದಂತೆ ಮಹಮೂದಖಾನನಿಗೆ ಏನಾದರೂ ಹೇಳಿಬಿಡುವೆನು. ನನ್ನ ಸಲುವಾಗಿ ನೀವು ಯಾವಾಗಲೂ ಸಂಶಯವನ್ನು ವ್ಯಕ್ತಮಾಡಿರಿ. ಕೂಡಿದ ದರ್ಬಾರದಲ್ಲಿ ಯಾದರೂ ನೀವು ನನ್ನ ವಿಷಯವಾಗಿ ಸಂಶಯವನ್ನು ಪ್ರಕಟಿಸತಕ್ಕದ್ದು. ನನ್ನೊಡನೆ ಒಳಗಿನ ಸಂಬಂಧವು ಬೇರೆಯಿರುತ್ತದೆಂಬುದರ ಗೊತ್ತನ್ನು ಯಾರಿಗೂ ಹತ್ತಗೊಡಬೇಡಿರಿ. ಈಗ ಸದ್ಯಕ್ಕೆ ನನಗೂ ನಿಮಗೂ ಲಗ್ಗೆ ಜಗಳವಾಯಿತೆನ್ನುವ ಹಾಗೆ ಜನರಿಗೆ ಇಲ್ಲಿಂದ ನೀವು ಸಂತಾಪಗೊಂಡು ಹೋಗುತ್ತೀರೆನ್ನುವ ಹಾಗೆ ಜನರಿಗೆ ತೋರಿಸಿರಿ. ತಿರುಗಿ ನೀವು ಇತ್ತ ಕಡೆಗೆ ಎಂದೂ ಬರಬೇಡಿರಿ, ಎಂದು ಹೇಳಿದನು. ಅದಕ್ಕೆ ರಾಮರಾಜನು-ಆಗಲಿ, ಹಾಗೆಯೇ ಆಗಲಿ, ಒಳ್ಳೆ ಯೋಗ್ಯ ವಿಚಾರವು! ರಣಮಸ್ತಖಾನ. ಚಿಕ್ಕ ವಯಸ್ಸಿನ ನಿಮ್ಮಲ್ಲಿ ಇಷ್ಟು ರಾಜಕಾರಣ ಕುಶಲತ್ವವು ಇದ್ದೀತೆಂದು ನನಗೆ ತೋರಿದ್ದಿಲ್ಲ. ಇಂದು ಅದು ನಿಮ್ಮಲ್ಲಿದ್ದದ್ದನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ನಿಮ್ಮ ವಿಚಾರವು ಬಹು ಸಮರ್ಪಕವಾಗಿರುತ್ತದೆ. ನಾನು ನಿಮ್ಮ ಮಾತಿನಂತೆ ಅಕ್ಷರಶಃ ನಡೆಯುವೆನು. ಆದರೆ ನೀವು ಮೇಲಿಂದ ಮೇಲೆ ನನ್ನನ್ನು ಕಾಣದೆ ಮಾತ್ರ ಇರಬೇಡಿರಿ, ನಿಮ್ಮನ್ನು ಕಾಣದಿದ್ದರೆ.... ಎಂದು ನುಡಿಯುತ್ತಿರಲು, ರಣಮಸ್ತಖಾನನು ನಡುವೆ ಬಾಯಿ ಹಾಕಿ ಅದರ ಸಂಶಯವನ್ನು ನೀವು ಹಿಡಿಯಬಾರದು. ಅದರಂತೆ ನಾನೆಲ್ಲ ನಡೆದುಕೊಳ್ಳುವೆನು. ಸದ್ಯಕ್ಕೆ ನೀವು ಸಂತಾಪಗೊಂಡಂತೆ ಇಲ್ಲಿಂದ ಹೊರಟು ಹೋಗಿರಿ. ನಮ್ಮಿಬ್ಬರಲ್ಲಿ ವೈಮನಸ್ಸು ಉಂಟಾದ ವರ್ತಮಾನವು ಮಹಮೂದಖಾನನಿಗೂ, ಗುಪ್ತಚಾರರ ಮುಖಾಂತರ ಗೊತ್ತಾಗಲೆಬೇಕು. ನೀವು ಅತ್ತ ಹೋದನಂತರ ನಾನು ನಿಮಗೆ ಬಾಯಿಂದ ಬಂದಹಾಗೆ ಅಂದೆನು. ಅದನ್ನು ನೀವು ಮನಸ್ಸಿಗೆ ಹಚ್ಚಿಕೊಳ್ಳಬೇಡಿರಿ. ತಿರುಗಿ ನನ್ನ ಮೇಲೆ ಸಿಟ್ಟಾದಂತೆ ತೋರಿಸಿರಿ, ಎಂದು ಹೇಳಿದನು. ಅದಕ್ಕೆ ರಾಮರಾಜನು-ಇಲ್ಲ, ಮನಸ್ಸಿಗೆ ಹಚ್ಚಿಕೊಳ್ಳುವದಿಲ್ಲ. ನಿಮ್ಮ ವಿಷಯವಾಗಿ ನನ್ನಲ್ಲಿ ತಿರಸ್ಕಾರವು ಉತ್ಪನ್ನವಾದಂತೆ ತೋರಿಸುವೆನು. ಇಲ್ಲಿಂದ ನಿಮ್ಮನ್ನು ವಿಜಾಪುರಕ್ಕೆ ಕರೆಸಿಕೊಳ್ಳಬೇಕೆಂದು ಬಾದಶಹನಿಗೆ ಸಹ ತಿಳಿಸುವೆನು, ಎಂದು ನುಡಿದನು. ಮತ್ತೆ ಕೆಲವು ಮಾತುಕಥೆಗಳು ನಡೆದ ಬಳಿಕ ರಾಮರಾಜನು ಸಂತಾಪದಿಂದ ಬಂಗಲೆಯಿಂದ ಹೊರಬಿದ್ದು, ಸಿಟ್ಟಿನಿಂದ ಉರಿಯುತ್ತ ವಿಜಯನಗರದ ಕಡೆಗೆ ಸಾಗಿದನು.


****