ಕನ್ನಡಿಗರ ಕರ್ಮ ಕಥೆ/ಔದಾಶೀನ್ಯ
೧೭ನೆಯ ಪ್ರಕರಣ
ಔದಾಶೀನ್ಯ
ರಣಮಸ್ತಖಾನನು ವಿಜಾಪುರಕ್ಕೆ ಹೋಗಿ ನೂರಜಹಾನಳನ್ನು ಆಕೆಯ ಆಪ್ತರಿಗೆ ಒಪ್ಪಿಸಿದನು. ಆತನು ಒಂದು ದಿನ ಬಾದಶಾಹನ ದರ್ಶನಕ್ಕೆ ಹೋದಾಗ ವಿಜಯನಗರದ ದರ್ಬಾರದಲ್ಲಿ ನಡೆದ ಸಂಗತಿಯನ್ನೆಲ್ಲ ವಿಜ್ಞಾಪಿಸಲು, ಅದನ್ನು ಕೇಳಿ ಬಾದಶಹನಿಗೆ ಸಂತಾಪವಾಯಿತು. ಸಂತಾಪದ ಭರದಲ್ಲಿ ಆತನು ಈಗಲೇ, ವಿಜಯನಗರದಮೇಲೆ ದಾಳಿ ಮಾಡಿ ರಾಮರಾಜನ ಸೊಕ್ಕು ಇಳಿಸಬೇಕೆಂದು ಮಾಡಿದನು. ಹಿಂದಕ್ಕೆ ಸನ್ ೧೪೦೬ನೇ ಇಸವಿಯಲ್ಲಿ ಗೋವಳಕೊಂಡದ ಬಾದಶಹನಾದ ಫಿರೋಜಶಹನ ಕಾಲದಲ್ಲಿ ಇಂಥ ಪ್ರಸಂಗವೇ ಒದಗಿತ್ತು. ಆಗಿನ ವಿಜಯನಗರದ ಅರಸು ದೇವರಾಜನು ಗೋವಳಕೊಂಡದ ರಾಜ್ಯದೊಳಗಿನ ಒಬ್ಬ ಚಲುವೆಯಾದ ಒಕ್ಕಲಿಗನ ಮಗಳನ್ನು ಅಪಹರಿಸಿಕೊಂಡು ಬಂದಿದ್ದನು. ಅದರ ಸೇಡು ತೀರಸುವದಕ್ಕಾಗಿ ಫಿರೋಜಶಹನು ವಿಜಯನಗರದ ರಾಜ್ಯದ ಮೇಲೆ ದಂಡೆತ್ತಿ ಹೋಗಿ, ದೇವರಾಜನನ್ನು ಸೋಲಿಸಿ, ವಿಜಯನಗರದ ಅರಸು ಮನೆತನಕ್ಕೆ ಸಂಬಂಧಿಸಿದ ಒಬ್ಬ ಕುಮಾರಿಯನ್ನು ತಾನು ಲಗ್ನ ಮಾಡಿಕೊಂಡು ಆಕೆಯನ್ನು ತನ್ನ ಜನಾನಖಾನೆಯಲ್ಲಿ ಸೇರಿಸಿಕೊಂಡಿದ್ದನು. ಈಗಂತು ರಾಮರಾಜನು ಕೂಡಿದ ದರ್ಬಾರದಲ್ಲಿ ಒಬ್ಬ ದೊಡ್ಡ ಸರದಾರನ ಮಗಳ ಲಜ್ಜಾಹರಣ ಮಾಡಿದ್ದನು. ಆದ್ದರಿಂದ ರಾಮರಾಜನ ಸಮಾಚಾರವನ್ನು ನೆಟ್ಟಗೆ ತಕ್ಕೊಳ್ಳಬೇಕೆಂದು ಬಾದಶಹನು ಆರಂಭದ ಆವೇಶದಲ್ಲಿ ನಿಶ್ಚಯಿಸಿದನು. ಆ ಸಂಬಂಧದಿಂದ ಆಲೋಚಿಸುವದಕ್ಕಾಗಿ ಮುಖ್ಯ ಮುಖ್ಯ ಮುತ್ಸದ್ದಿಗಳ ಗುಪ್ತ ದರ್ಬಾರವನ್ನು ನೆರಸಿದನು. ಆದರೆ ದರ್ಬಾರದ ಕೆಲಸವು ಅತ್ಯಂತ ಗುಪ್ತವಾಗಿ ನೆರವೇರಿಸಿದ್ದರಿಂದ ಜನರಿಗೆ ಅದರ ಸುದ್ದಿಯೇನೂ ಗೊತ್ತಾಗಲಿಲ್ಲ. ಅದರ ಸಂಬಂಧದಿಂದ ಜನರಲ್ಲಿ ತರ್ಕವಿತರ್ಕಗಳಿಗೆ ಕಾರಣವಾಯಿತು. ವಿಜಯನಗರದ ಮೇಲೆ ಸೇಡು ತೀರಿಸುವದಕ್ಕಾಗಿ ಈ ಗುಪ್ತ ದರ್ಬಾರವು ಕೂಡಿರುವದರಿಂದ, ಇನ್ನು ಬೇಗನೆ ವಿಜಯನಗರದ ಸಂಗಡ ಯುದ್ಧವು ಉತ್ಪನ್ನವಾಗುವದೆಂದು ಜನರು ಅಲ್ಲಲ್ಲಿ ಮಾತಾಡಹತ್ತಿದರು. ಆಗ ವಿಜಾಪುರದಲ್ಲಿ ಎಲ್ಲಿ ಹೋದರೂ ಈ ಯುದ್ಧದ ವಿಷಯವನ್ನೇ ಕುರಿತು ಜನರು ಮಾತಾಡುತ್ತಲಿದ್ದರು. ಒಬ್ಬ ಸರದಾರನ ಮಗಳ ಮಾನಖಂಡನ ಮಾಡಿದ್ದನ್ನು ಬಾದಶಹನು ಎಂದಿಗೂ ಸೈರಿಸಿಕೊಳ್ಳಲಾರನೆಂದು, ಎಲ್ಲರು ನಿಶ್ಚಯಿಸಿದ್ದರು. ಇನ್ನು ಬೇಗನೆ ವಿಜಯನಗರದ ಮೇಲೆ ಸಾಗಿಹೋಗಬೇಕಾಗುವದೆಂದು, ಪ್ರತಿಯೊಬ್ಬ ಮುಸಲ್ಮಾನನು ಸ್ಫೂರ್ತಿಗೊಂಡನು. ಪ್ರತಿಯೊಂದು ಮನೆಯಲ್ಲಿ ಮಸೀದೆಯಲ್ಲಿ ಜನರು ತಮ್ಮ ತಮ್ಮೊಳಗೆ “ಬಾದಶಹನು ಈ ಪ್ರಸಂಗದಲ್ಲಿ ಹಿಂದಕ್ಕೆ ಸರಿಯಲಾಗದೆಂ"ದು ಪ್ರತಿಯೊಬ್ಬರ ಬಾಹುಗಳು ಸ್ಪುರಿಸಹತ್ತಿದವು. ಪ್ರತಿಯೊಬ್ಬರು ಬಾಯಿಗೆ ಬಂದಂತೆ ಪೌರುಷದ ಮಾತುಗಳನ್ನು ಆಡಹತ್ತಿದರು. ವಿಜಯನಗರದಲ್ಲಿ ಅಪಾರವಾದ ಸಂಪತ್ತು ತುಂಬಿರುವದೆಂಬ ಸುದ್ದಿಯನ್ನು ಅವರು ಕೇಳಿಯೇ ಇದ್ದರು; ಆದ್ದರಿಂದ ಯುದ್ಧದ ಕೊನೆಯಲ್ಲಿ ಆ ಪಟ್ಟಣವನ್ನು ಸುಲಿಯಲಿಕ್ಕೆ ತಮಗೆ ಆಸ್ಪದ ದೊರೆಯಬೇಕೆಂದು ಪ್ರತಿ ಒಬ್ಬ ಮುಸಲ್ಮಾನ ವೀರನು ದಂಡಿನಲ್ಲಿ ಸೇರಲಿಕ್ಕೆ ಆತುರ ಪಡಹತ್ತಿದನು. ದಂಡು ಕೂಡಲಿಕ್ಕೆ ಯಾವಾಗ ಆರಂಭವಾಗುವದೋ ಎಂದು ಅವರು ಎದುರು ನೋಡಹತ್ತಿದರು. ಆದರೆ ಬಾದಶಹನು ಗುಪ್ತ ದರ್ಬಾರದಲ್ಲಿ ನಡೆಸಿದ ಆಲೋಚನೆಯ ಪರಿಣಾಮವು ಇದಕ್ಕೆ ತೀರ ವಿರುದ್ಧವಾಗಿ ಆಯಿತು. ಬಾದಶಹನು ದೊಡ್ಡ ದರ್ಬಾರ ನಡೆಸಿ, ರಾಮರಾಜನು ನೂರಜಹಾನಳ ಲಜ್ಞಾಹರಣ ಮಾಡಿದ ಯಾವತ್ತು ವೃತ್ತಾಂತವನ್ನು ದರ್ಬಾರದಲ್ಲಿ ನಿವೇದಿಸುವಂತೆ ರಣಮಸ್ತಖಾನನನ್ನು ಆಜ್ಞಾಪಿಸಿದನು. ಆಗ ರಣಮಸ್ತಖಾನನು ತನ್ನ ವಾಕ್ಚಾತುರ್ಯವನ್ನೆಲ್ಲ ಒಟ್ಟು ಗೂಡಿಸಿ, ಅತ್ಯಂತ ಆವೇಶದಿಂದ ಆ ವೃತ್ತಾಂತವನ್ನೆಲ್ಲ ನಿವೇದಿಸಿದನು. ಅದನ್ನು ಕೇಳಿ ಯಾವತ್ತು ದರ್ಬಾರದ ಜನರು ರೊಚ್ಚಿಗೆದ್ದರು. ಈಗಲೇ ರಾಮರಾಜನ ಶಾಸನ ಮಾಡಲಿಕ್ಕೆ ವಿಜಯನಗರದ ಮೇಲೆ ಸಾಗಿಹೋಗತಕ್ಕದ್ದೆಂಬ ಉದ್ಗಾರಗಳು ಅಲ್ಲಲ್ಲಿ ಹೊರಡಹತ್ತಿದವು. ಬಾದಶಹನು ಬಹು ಶಾಂತಮುದ್ರೆಯನ್ನು ತಾಳಿದ್ದನು. ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಜನರಿಗೆ ಮಾತಾಡಗೊಟ್ಟು, ಅವರು ಆಡುವ ಮಾತುಗಳನ್ನೆಲ್ಲ ಆತನು ಸಮಾಧಾನದಿಂದ ಕೇಳಿಕೊಳ್ಳುತ್ತಲಿದ್ದನು.
ಈ ಮೇರೆಗೆ ದರ್ಬಾರದಲ್ಲಿ ಒಮ್ಮೆಲೆ ಎದ್ದ ಜನರ ಉದ್ದಾರದ ತರಂಗಗಳು ಸ್ವಲ್ಪ ಶಾಂತವಾದ ಮೇಲೆ, ಬಾದಶಹನು ಆಜ್ಞಾಪಿಸಿದ್ದೇನೆಂದರೆ-ರಣಮಸ್ತಖಾನನು ವರ್ಣಿಸಿದ ಸಂಗತಿಯು ತಾಪದಾಯಕವೆಂಬುದೇನೋ ನಿಜ. ಆದರೆ ಅಷ್ಟಕ್ಕಾಗಿ ಇಷ್ಟು ರೊಚ್ಚಿಗೇಳುವದು ಸರಿಯಲ್ಲ ; ಈ ಸಂಬಂಧದಿಂದ ರಾಮರಾಜನು ಏನು ಹೇಳುವನೆಂಬದನ್ನು ಮೊದಲು ಕೇಳಿ ಕೊಂಡು , ಆಮೇಲೆ ಮಾಡತಕ್ಕದ್ದನ್ನು ಮಾಡಬೇಕು.” ಬಾದಶಹನ ಈ ಅಪ್ಪಣೆಯನ್ನು ಕೇಳಿ, ದರ್ಬಾರದ ಜನರು ಬಹಳ ನಿರಾಶೆಪಟ್ಟರು. ಬಾದಶಹನು ಹೀಗೆ ಆಜ್ಞಾಪಿಸಬಹುದೆಂಬದು ಯಾರ ಕನಸು ಮನಸುಗಳಲ್ಲಿಯೂ ಬಂದಿದ್ದಿಲ್ಲ. ಎಲ್ಲ ಜನರು ಖಿನ್ನರಾದರು. ಅವರಿಗೆ ಪರಮಾಶ್ಚರ್ಯವಾಯಿತು. ಅವರು ಬಾದಶಹನನ್ನುದ್ದೇಶಿಸಿ “ಇನ್ನೇನು ರಾಮರಾಜನನ್ನು ವಿಚಾರಿಸುವದು ? ರಣಮಸ್ತಖಾನನು ಎಲ್ಲ ಸಂಗತಿಗಳನ್ನು ಹೇಳಿಯೇ ಇದ್ದಾನೆ. ಪ್ರತ್ಯಕ್ಷ ನಮ್ಮ ವಕೀಲನು ದರ್ಬಾರದಲ್ಲಿದ್ದು, ಹೀಗೆ ಮಾಡುವದು ಯೋಗ್ಯವಲ್ಲೆಂದು ಆತನು ನಿರ್ಧಾರದಿಂದ ನಿಷೇಧಿಸುತ್ತಿರಲು, ಅದನ್ನು ಲೆಕ್ಕಿಸದೆ ರಾಮರಾಜನು ಒಬ್ಬ ಸರದಾರನ ಮಗಳ ಮಾನಖಂಡನ ಮಾಡಿದ ಬಳಿಕ ಇನ್ನೇನು ಉಳಿಯಿತು ? ಈ ಪ್ರಸಂಗದಲ್ಲಿ ರಾಮರಾಜನನ್ನು ಕೇಳುವ ಕಾರಣವಿಲ್ಲ, ಆತನ ಹಂಗು ಇಡದೆ ವಿಜಯನಗರದ ಮೇಲೆ ದಂಡೆತ್ತಿ ಹೋಗಲು ಸೈನ್ಯಕ್ಕೆ ಅಪ್ಪಣೆಯನ್ನು ಕೊಡಬೇಕು. ಆ ಹಿಂದುರಾಜನು ಬಹಳ ಅಂಗಲಾಚಿ ಹೇಳಿಕೊಂಡರೆ, ಬೇಕಾದರೆ ಆತನಿಂದ ಅಪಾರವಾದ ಕಪ್ಪವನ್ನು ಸ್ವೀಕರಿಸಿ, ಆತನ ಮನೆತನಕ್ಕೆ ಸಂಬಂಧಿಸಿದ ಒಬ್ಬ ಕನ್ಯೆಯನ್ನು ಜನಾನಖಾನೆಯಲ್ಲಿ ಸೇರಿಸಿಕೊಳ್ಳತಕ್ಕದ್ದು ಎಂದು ಪೌರುಷದ ಮಾತುಗಳನ್ನು ಆಡಿದ್ದಲ್ಲದೆ, ಅದರಂತೆ ತಮ್ಮ ತಮ್ಮೊಳಗೂ ಮಾತಾಡಿಕೊಳ್ಳಹತ್ತಿದರು ! ಆದರೆ ಬಾದಶಹನು ಈ ಪ್ರಸಂಗದಲ್ಲಿ ಬಹು ಸಮಾಧಾನವನ್ನು ತಾಳಿದನು. ಆತನು ತನ್ನ ಮಾತನ್ನು ತಿರುಗಿಸಲಿಲ್ಲ. ರಾಮರಾಜನ ವಿಚಾರವನ್ನು ಕೇಳಿಕೊಂಡ ಹೊರತು ಏನೂ ಮಾಡುವ ಹಾಗಿಲ್ಲೆಂದು ಸ್ಪಷ್ಟವಾಗಿ ಹೇಳಿದನು. ಅದನ್ನು ಕೇಳಿ ಜನರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಬಾದಶಹನು ಇಂದು ಹೀಗೆ ವಿಲಕ್ಷಣ ರೀತಿಯಿಂದ ನಡೆದದ್ದನ್ನು ನೋಡಿ ಜನರು ಬಾದಶಹನ ಬುದ್ದಿಯು ಭ್ರಂಶವಾಯಿತೆಂತಲೂ, ಆತನು ರಾಮರಾಜನಿಗೆ ಹೆದರುವನೆಂತಲೂ ಭಾವಿಸ ಹತ್ತಿದರು. ಈ ಅಂಜುಬುರುಕತನದಿಂದ ರಾಮರಾಜನು ಮತ್ತಷ್ಟು ಸೆಟೆಯಲು, ಬಾದಶಹರ ಗೌರವಕ್ಕೆ ಬಾಧೆಬರುವದೆಂದು ತಿಳಿದು, ಬಾದಶಹರ ಮನಸ್ಸನ್ನು ತಿರುಗಿಸಲಿಕ್ಕೆ ಅವರ ವಿಶ್ವಾಸದ ಕೆಲವು ಜನರಿಗೆ ಸೂಚಿಸಿದರು. ಆದರೆ ಅಂದು ಬಾದಶಹನ ಮುಂದೆ ಯಾರ ಆಟವೂ ನಡೆಯಲಿಲ್ಲ. ಕಡೆಗೆ ಬಾದಶಹನು ತನ್ನ ಮನಸ್ಸಿನಂತೆ ಪತ್ರವನ್ನು ಬರೆದು ಸಿದ್ಧಮಾಡಿ, ಅದನ್ನು ಒಯ್ದು ರಾಮರಾಯನಿಗೆ ಕೊಡುವಂತೆ ರಣಮಸ್ತಖಾನನಿಗೆ ಆಜ್ಞಾಪಿಸಿದನು. ಅದಕ್ಕೆ ರಣಮಸ್ತಖಾನನು- “ಇಂಥ ಪತ್ರವನ್ನು ನಾನು ತಕ್ಕೊಂಡು ಹೋಗಿ ರಾಮರಾಜನಿಗೆ ಮುಟ್ಟಿಸುವದು ಬಹಳ ಅಪಮಾನಕರವಾದದ್ದರಿಂದ, ಬಾದಶಹರು ದಯಮಾಡಿ ನನ್ನನ್ನು ಕಳಿಸಬಾರದು.” ಎಂದು ಪ್ರಾರ್ಥಿಸಿದನು. ಇದಕ್ಕಾಗಿ ಬಾದಶಹನು ರಣಮಸ್ತಖಾನನ ಮೇಲೆ ಸಿಟ್ಟಾಗಿ, ಕಡೆಗೆ ಬೇರೊಬ್ಬ ಸರದಾರನಿಗೆ ಆ ಪತ್ರವನ್ನು ರಾಮರಾಜನಿಗೆ ಒಯ್ದು ಕೊಡುವಂತೆ ಆಜ್ಞಾಪಿಸಲಿಕ್ಕೆ ಸಹ ಹಿಂದುಮುಂದು ನೋಡಲಿಲ್ಲ.
ಬಾದಶಹನ ಈ ಕೃತಿಯಂತು ದರ್ಬಾರದ ಜನರ ಮನಸ್ಸಿಗೆ ಎಷ್ಟು ಮಾತ್ರವೂ ಬರಲಿಲ್ಲ. ಈ ಸಂಬಂಧದಿಂದ ಬಾದಶಹನು ಬಹಳ ಅನ್ಯಾಯ ಮಾಡಿದನೆಂದು ಅವರು ಭಾವಿಸಹತ್ತಿದರು. ಆದರೆ ಬಾದಶಹನ ಮುಂದೆ ಯಾರ ಆಟ ನಡೆಯುವದು ? ಅವರೆಲ್ಲರೂ ಬಾಯಿಮುಚ್ಚಿಕೊಂಡು ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. ಇತ್ತ ಬಾದಶಹನು ಕಳಿಸಿದ ಸರದಾರನು ವಿಜಯನಗರಕ್ಕೆ ಹೋಗಿ, ರಾಮರಾಜನಿಗೆ ಪತ್ರವನ್ನು ಕೊಟ್ಟನು. ಪತ್ರದೊಳಗಿನ ಸಂಗತಿಯನ್ನು ಓದಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ರಾಮರಾಜನ ಗುಪ್ತಚಾರರೂ ಬಾದಶಹನ ಗುಪ್ತ ದರ್ಬಾರದಲ್ಲಿ ನಡೆದ ಸಂಗತಿಯನ್ನು ಹೇಳಿ, ಬಾದಶಹನು ರಣಮಸ್ತಖಾನನಿಗೆ ಕೆಲವು ದಿನ ದರ್ಬಾರಕ್ಕೆ ಬಾರದಿರುವಂತೆ ಆಜ್ಞಾಪಿಸಿದ್ದನ್ನು ತಿಳಿಸಿದ್ದನು. ಚಾರನ ಈ ಗುಪ್ತಮಾತನ್ನು ಕೇಳಿಯಂತು ರಾಮರಾಜನು, ತನಗೆ ಬಾದಶಹನು ಹೆದರುವನೆಂದು ಭಾವಿಸಿದನು. ಆ ಪತ್ರವನ್ನು ತಂದ ವಕೀಲನ ಮುಂದೆ ರಾಮರಾಜನು, ರಣಮಸ್ತಖಾನನನ್ನು ಬಹಳವಾಗಿ ನಿಂದಿಸಿದನು. ಆತನು ಆ ವಕೀಲನಿಗೆ, “ಒಬ್ಬ ಅನುಭವಿಕನಾದ ವಕೀಲನನ್ನೇ ಕಳಿಸಿಕೊಟ್ಟಿದ್ದರೆ, ಇಂಥ ಪ್ರಸಂಗವೇ ಬರುತ್ತಿದ್ದಿಲ್ಲ. ನಾನು ಮಾಡಿದ್ದು ಅನ್ಯಾಯವಲ್ಲ. ಅಂಥ ಪ್ರಸಂಗದಲ್ಲಿ ಬೇರೆ ಯಾರಿದ್ದರೂ ನನ್ನ ಹಾಗೆಯೇ ಮಾಡುತ್ತಿದ್ದರು. ನಮಗೆ ಸಂಶಯ ಬಂದಬಳಿಕ ಬುರುಕಿ ತೆಗೆಸಿ ನೋಡಿದರೆ ತಪ್ಪೇನು ? ವಿಜಾಪುರದ ಬಾದಶಹರೊಬ್ಬರು ನಮ್ಮ ಮಿತ್ರರಿರುವರು. ಆದರೆ ಅಹಮದನಗರ ಗೋವಳಕೊಂಡಗಳ ಬಾದಶಹರ ಸಂಗಡ ನಮ್ಮ ಮಿತ್ರತ್ವವಿಲ್ಲ. ವಿಜಾಪುರದವರ ಹೆಸರು ಹೇಳಿ ಬೇರೆ ಯಾರಾದರು ನಮ್ಮ ವಿರುದ್ಧ ಒಳಸಂಚು ನಡಿಸಿದ ಸಂಶಯ ಬಂದರೆ, ಅದರ ನಿವಾರಣವನ್ನು ನಾವು ಮಾಡಿಕೊಳ್ಳಬಾರದೋ?” ಎಂದು ಕೇಳಲು, ಹೊಸದಾಗಿ ಬಂದ ಆ ವಕೀಲನು- “ಅಲಬತ್, ಅಲಬತ್, ತಾವು ಸಂಶಯ ನಿವಾರಣವನ್ನು ಮಾಡಿಕೊಳ್ಳಲೇಬೇಕು. ಈ ಮಾತನ್ನು ಮನಸ್ಸಿನಲ್ಲಿ ತಂದು ಕೊಂಡೇ ಬಾದಶಹರು ನನ್ನನ್ನು ತಮ್ಮ ಬಳಿಗೆ ಕಳಿಸಿದ್ದಾರೆ. ತಾವು ಈಗ ಹೇಳುವ ಸಂಗತಿಗಳ ಮೇಲಿಂದ ತಮ್ಮ ಕಡೆಗೆ ಏನೂ ತಪ್ಪು ಇದ್ದಂತೆ ನನಗೆ ತೋರುವದಿಲ್ಲ. ತಮಗೆ ಒದಗಿದ ಪ್ರಸಂಗವೇ ಬಾದಶಹರಿಗೆ ಒದಗಿದ್ದರೆ, ಅವರೂ ತಮ್ಮಂತೆಯೇ ನಡೆಯುತ್ತಿದ್ದರು. ರಣಮಸ್ತಖಾನನಂಥ ಏರಿಕೆಯ ರಕ್ತದ ತರುಣನನ್ನು ವಕೀಲನನ್ನಾಗಿ ಕಳಿಸತಕ್ಕದ್ದೇ ಇದ್ದಿಲ್ಲ; ಆದರೆ ಕೆಲವು ಅಂತಸ್ಥ ಮುರುವತ್ತುಗಳಿಂದ ಆತನನ್ನು ಬಾದಶಹರು ನಿಯಮಿಸಿ ಕಳಿಸಬೇಕಾಯಿತು. ನೆಟ್ಟಗಾಯಿತು, ಬಾದಶಹರಿಗೆ ರಣಮಸ್ತಖಾನನ ನಿಜವಾದ ಯೋಗ್ಯತೆಯು ಈಗಾದರೂ ಗೊತ್ತಾದದ್ದು ನೆಟ್ಟಗಾಯಿತು. ತಾವು ಹೇಳಿದ ಮಾತುಗಳನ್ನೆಲ್ಲ ನಾನು ಬಾದಶಹರ ಚರಣದೆಡೆಯಲ್ಲಿ ವಿಜ್ಞಾಪಿಸಿಕೊಳ್ಳುವೆನು, ತಾವೂ ಪತ್ರವನ್ನು ಬರೆದೆ ಬರೆಯುವಿರಿ, ಬೇಗನೆ ಪತ್ರವನ್ನು ಕೊಟ್ಟು ನನ್ನನ್ನು ದಾಟಹಾಕಬೇಕು ಎಂದು ಹೇಳಿದನು. ವಕೀಲನ ಈ ಮಾತುಗಳನ್ನು ಕೇಳಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ಆತನು ಆ ವಕೀಲನ ಮಾನ-ಮರ್ಯಾದೆಗಳನ್ನು ಅತ್ಯುತ್ತಮ ರೀತಿಯಿಂದ ಮಾಡಿದನು. ಪತ್ರೋತ್ತರವನ್ನಾದರೂ ಬೇಗನೆ ಬರೆದು ವಕೀಲನ ಕೈಯಲ್ಲಿ ಕೊಟ್ಟನು. ವಕೀಲನು ರಾಮರಾಜನ ಅನುಜ್ಞೆಯನ್ನು ಪಡೆದು ವಿಜಾಪುರಕ್ಕೆ ಹೋದನು.
ವಕೀಲನು ವಿಜಾಪುರಕ್ಕೆ ಹೋಗಿ ರಾಮರಾಜನ ಆ ಪತ್ರವನ್ನು ಬಾದಶಹನ ಕೈಯಲ್ಲಿ ಕೊಟ್ಟನು. ಬಾದಶಹನು ಅದನ್ನು ಏಕಾಂತದಲ್ಲಿ ಓದಿದನು. ಆ ಪತ್ರದಲ್ಲಿ ರಾಮರಾಜನು- “ಆ ತರುಣ ಸ್ತ್ರೀಯ ಲಜ್ಜಾಹರಣ ಮಾಡುವ ಉದ್ದೇಶವು ನಮ್ಮದಿದ್ದಿಲ್ಲ. ನಮ್ಮ ವಿರುದ್ಧವಾಗಿ ಒಳಸಂಚುಗಳು ನಡೆದು, ಗುಲುಬುರ್ಗೆಯ ಕಡೆಯಿಂದ ಅಹಮ್ಮದನಗರದ ಕಡೆಗೆ ಇವರು ಪತ್ರಗಳನ್ನು ಒಯ್ಯುತ್ತಾರೆಂಬ ಸಂಶಯವು ನಮಗೆ ಬಂದಿತು. ಹೀಗೆ ಒಳಸಂಚುಗಳು ನಡೆದಿರುವವೆಂದು ಅಲ್ಲಿದ್ದ ನಮ್ಮ ಗುಪ್ತಚಾರರು ನಮಗೆ ಹೇಳಿದ್ದರು ; ಆದ್ದರಿಂದ ಹಾಗೆ ನಾವು ಬುರುಕಿ ತೆಗೆದು ಶೋಧಿಸಿ ನೋಡಬೇಕಾಯಿತು. ನಮ್ಮ ಸ್ಥಿತಿಯಲ್ಲಿ ತಾವು ಇದ್ದರೆ, ತಾವೂ ನಮ್ಮ ಹಾಗೆಯೇ ನಡೆಯಬೇಕಾಗುತ್ತಿತ್ತು. ನಮಗೂ ತಮಗೂ ಸ್ನೇಹವಿರುತ್ತದೆ. ಅದನ್ನು ಮುರಿಯುವ ಇಚ್ಛೆಯು ನಮಗೆ ಎಳ್ಳಷ್ಟಾದರೂ ಇರುವದಿಲ್ಲ. ಆದರೆ ಅಷ್ಟಕ್ಕಾಗಿ ಸುಮ್ಮನೆ ತಮ್ಮ ಹೆಸರಿನಿಂದ ನಮ್ಮನ್ನು ಬೆದರಿಸಿ ಅನ್ಯರು ಬೇಕಾದ ಹಾಗೆ ಒಳಸಂಚುಗಳನ್ನು ನಡೆಸಿದರೆ, ತಾವು ಬೆದರಿ ಅವನ್ನು ನಡಿಸಿಕೊಡಬೇಕೆಂದು ನೀವು ಸರ್ವಥಾ ಹೇಳುವುದಿಲ್ಲೆಂಬ ನಂಬಿಗೆಯು ನಮಗೆ ಇರುತ್ತದೆ. ಹೀಗೆಂದು ನಾವು ನಿಮ್ಮ ತರುಣ ವಕೀಲರಿಗೆ ಬೇಕಾದಷ್ಟು ಹೇಳಿದೆವು. ಆದರೆ ಅವರು ನಮ್ಮ ದರ್ಬಾರದಲ್ಲಿ ನಮ್ಮ ಮುಂದೆ ನಮ್ಮ ತಿರಸ್ಕಾರವನ್ನು ಮಾಡಿದರು. ಆಗಲೇ ಅವರನ್ನು ಪ್ರತಿಬಂಧದಲ್ಲಿಡುತ್ತಿದ್ದೆವು; ಆದರೆ ತಮ್ಮ ಮೋರೆಯನ್ನು ನೋಡಿ ನಾವು ಹಾಗೆ ಮಾಡಲಿಲ್ಲ. ಆ ನಿಮ್ಮ ತರುಣ ವಕೀಲರು, ನಿಮ್ಮ ಹೆಸರು ಹೇಳಿ ನಮ್ಮನ್ನು ಬಹಳವಾಗಿ ಗದ್ದರಿಸಿದರು; ನಾವು ನಾಳೆ ವಿಜಾಪುರಕ್ಕೆ ಹೋಗಿ ಬಾದಶಹರಿಗೆ ಎಲ್ಲ ಸಂಗತಿಯನ್ನು ತಿಳಿಸಿದರೆ, ನಿಮ್ಮ ರಾಜ್ಯದ ಮೇಲೆ ದಂಡೆತ್ತಿ ಬರಲಿಕ್ಕೆ ವಿಳಂಬವಾಗದೆಂಬರ್ಥವನ್ನು ಸೂಚಿಸಿ ನಮ್ಮನ್ನು ಬೆದರಿಸುವ ಪ್ರಯತ್ನವನ್ನೂ ಒಂದೆರಡು ಸಾರೆ ಮಾಡಿದರು; ಆದರೆ ಅದರ ಕಡೆಗೆ ಲಕ್ಷ್ಯಗೊಡದೆ ನಮಗೆ ಯೋಗ್ಯವೆಂದು ತೋರಿದ ಮಾರ್ಗದಿಂದ ನಮ್ಮ ಸಂಶಯವನ್ನು ನಿವಾರಣವನ್ನು ನಾವು ಮಾಡಿಕೊಂಡು, ಕೂಡಲೇ ನಾವಾಗಿಯೇ ಆ ತರುಣಿಯನ್ನೂ, ಬೇರೆ ಜನರನ್ನೂ ಆ ನಿಮ್ಮ ವಕೀಲರಿಗೆ ಒಪ್ಪಿಸಿ ಬಿಟ್ಟೆವು. ಪುನಃ ನಮ್ಮ ರಾಜ್ಯದಲ್ಲಿ ಅವರ ಕೂದಲು ಕೊಂಕದಂತೆ ವ್ಯವಸ್ಥೆ ಮಾಡಿದೆವು. ಅವರ ಸಂರಕ್ಷಣಕ್ಕಾಗಿ ಜನರನ್ನು ಕೊಟ್ಟೆವು. ವಿಜಾಪುರದವರೆಗೆ ಸಹ ಅವರನ್ನು ಕಳುಸುವ ವ್ಯವಸ್ಥೆ ಮಾಡುವೆವೆಂದು ನಿಮ್ಮ ವಕೀಲರ ಮುಂದೆ ಹೇಳಿದೆವು. ಇದಲ್ಲದೆ, ಮೂರು ದಿನ ನಸುಕಿನಲ್ಲಿಯೇ ನಾವು ಸ್ವತಃ ನಿಮ್ಮ ವಕೀಲರ ಬಳಿಗೆ ಹೋಗಿ, ಅವರಿಗೆ ನಾನಾ ಪ್ರಕಾರದ ಆಶ್ವಾಸನೆಗಳನ್ನು ಕೊಟ್ಟೆವು; ಅದಕ್ಕೆ ಅವರು ಒಪ್ಪಿಗೆಯನ್ನು ಇತ್ತರು ; ಆದರೆ ತಿರುಗಿ ಮತ್ತೇನು ಅವರ ಮನಸ್ಸಿನಲ್ಲಿ ಬಂದಿತೋ ಏನೋ ಅವರು ಸ್ವತಃ ತಮ್ಮ ತನಕ ಓಡಿ ಬಂದಿದ್ದಾರೆ! ತಾವು ಬಹು ಯೋಗ್ಯ ವಿಚಾರ ಮಾಡಿದಿರಿ. ಇಲ್ಲದಿದ್ದರೆ ವ್ಯರ್ಥವಾಗಿ ಉಭಯ ಪಕ್ಷಗಳ ಅರ್ಥಹಾನಿ ಪ್ರಾಣಹಾನಿಗಳಾಗಬೇಕಾಗುತ್ತಿತ್ತು. ತಾವು ತಿರುಗಿ ವಕೀಲರನ್ನು ಕಳಿಸುವಾಗ ಯೋಗ್ಯ ಮನುಷ್ಯನನ್ನು ಕಳಿಸುವ ವ್ಯವಸ್ಥೆಯಾಗಬೇಕು. ಹೆಚ್ಚಿಗೆ ಏನೂ ಇಲ್ಲ.” ಇತ್ಯಾದಿ ಸಂಗತಿಗಳನ್ನು ಬರೆದು ನಂತರ ಕಡೆಗೆ ವಿನೋದದಿಂದ-“ಇದೆಲ್ಲ ಕಾಮ ದೇವರ ಆಟವಿರುತ್ತದೆ. ನೀವು ನಿಮ್ಮ ವಕೀಲರ ಲಗ್ನವನ್ನು ಆ ಕುಮಾರಿಯೊಡನೆ ಮಾಡಿರಿ; ಅಂದರೆ ನಮ್ಮ ಮೇಲಿನ ನಿಮ್ಮ ವಕೀಲರ ಸಿಟ್ಟು ಶಾಂತವಾಗುವದು ಅವರಿಬ್ಬರ ವಿವಾಹವು ಅವರಿಬ್ಬರಿಗೂ ಬಹು ಇಷ್ಟವಾಗುವದೆಂಬದು, ಇಲ್ಲಿರುವಾಗ ಅವರ ವರ್ತನೆಯಿಂದ ನಮಗೆ ನಂಬಿಗೆಯಾಗಿದೆ. ಆ ವಿವಾಹಕ್ಕೆ ನಮ್ಮನ್ನು ಕರಿಸಿದರೆ, ನಾವು ಬಹಳ ಸಂತೋಷದಿಂದ ಬಂದು ಅಕ್ಷತೆಯನ್ನು ಹಾಕುವೆವು. ನಿಮ್ಮ ವಕೀಲನ ಮೇಲೆ ನಮ್ಮ ಪ್ರೇಮವು ವಿಶೇಷವಾಗಿರುತ್ತದೆ. ಅವರಲ್ಲಿ ತಾರುಣ್ಯದ ರಂಗು ಬಹಳವಿರುತ್ತದೆಂಬ ದಿಷ್ಟೇ ಅವರಲ್ಲಿಯ ದೋಷವು; ಆದರೆ ಕಾಲಾಂತರದಿಂದ ಅದು ಹೊರಟು ಹೋಗಬಹುದು. ಅವರ ಮೇಲೆ ತಾವು ಸಿಟ್ಟಾಗಿರುವಿರೆಂದು ಕೇಳಿದ್ದೇವೆ. ಆದರೆ ಹಾಗೆ ಮಾಡದೆ, ಈವರೆಗೆ ಮಾಡಿದ ಅವರ ಚಾಕರಿಗೆ ಲಕ್ಷ್ಯಗೊಟ್ಟು ಅವರಿಗೆ ಪತ್ನಿಯನ್ನು ದೊರಕಿಸಿಕೊಡತಕ್ಕದ್ದು. ಅದರಂಥೆ ಅವರ ಪದವಿಯನ್ನಾದರೂ ಹೆಚ್ಚಿಸತಕ್ಕದ್ದು, ಅವರಿಗೆ ಸರದಾರ ಪದವಿಯನ್ನು ಕೊಡಬೇಕು ಎಂದು ನಾವು ಮನಃಪೂರ್ವಕವಾಗಿ ಶಿಫಾರಸು ಮಾಡುತ್ತೇವೆ. ನಮ್ಮ ಪದರಿನಲ್ಲಿ ಅವರು ಇರುತ್ತಿದ್ದರೆ, ನಾವು ಹಾಗೆ ನಿಶ್ಚಯವಾಗಿ ಮಾಡುತ್ತಿದ್ದೆವು.”
ಹೀಗೆ ಪತ್ರದ ಕಡೆಯಲ್ಲಿ ಬರೆದಿದ್ದ ವಿನೋದದ ಮಾತುಗಳನ್ನು ಓದಿದ ಕೂಡಲೇ ಬಾದಶಹನಿಗೆ ನಗೆ ಬಂದಿತು. ಆತನು ರಣಮಸ್ತಖಾನನನ್ನು ಕರೆಸಿಕೊಂಡು ಪತ್ರವನ್ನು ಓದಿ ತೋರಿಸಿದನು. ಆಮೇಲೆ ಮತ್ತೆ ಗುಪ್ತಾಲೋಚನೆಗಳಾದವು. ಬಳಿಕ ಬಾದಶಹನು ಮತ್ತೆ ದರ್ಬಾರು ಸೇರಿಸಿ-ರಾಮರಾಜನ ಪತ್ರವು ಬಂದು ಅದರಿಂದ ಬಾದಶಹರ ಸಮಾಧಾನವಾಗಿರುತ್ತದೆ. ಆ ಸಂಬಂಧದಿಂದ ಇನ್ನು ಮಾಡತಕ್ಕದ್ದೇನೂ ಉಳಿಯಲಿಲ್ಲ. ಇದು ರಣಮಸ್ತಖಾನನ ಕಾರಣವಿಲ್ಲದ ಉತಾವಳಿಯ ಪರಿಣಾಮವಾದದ್ದರಿಂದ, ಆತನು ಇನ್ನುಮೇಲೆ ತನ್ನ ಸ್ಥಿತಿಯನು ಸುಧಾರಿಸಿಕೊಳ್ಳತಕ್ಕದ್ದು. ಈಗ ನಾವು ಪುನಃ ಆತನನ್ನು ವಕೀಲನನ್ನಾಗಿ ವಿಜಯನಗರಕ್ಕೆ ಕಳಿಸುತ್ತೇವೆ; ಆದರೆ ಆತನೊಬ್ಬನ ಮೇಲೆ ನಮ್ಮ ವಿಶ್ವಾಸವಾಗದ್ದರಿಂದ, ಆತನ ಮೇಲೆ ಕಣ್ಣಿಡುವದಕ್ಕಾಗಿ ಖಾನಖನಾನ ಮಹಮೂದಖಾನ್ ಎಂಬವನನ್ನು ಕಳಿಸಿಕೊಡುವೆವು. ಖಾನಖನಾನನೇ ಮುಖ್ಯನು; ರಣಮಸ್ತಖಾನನು ಆತನ ಕೈ ಕೆಳಗಿನವನಾಗಿ ನಡೆಯತಕ್ಕದ್ದು, ಎಂದು ಜಾಹೀರು ಮಾಡಿದನು. ಇದರಿಂದ ದರ್ಬಾರದ ಜನರ, ವಿಶೇಷವಾಗಿ ತರುಣರ ಉತ್ಸಾಹವು ಕಡಿಮೆಯಾಯಿತು. ಹೀಗೆ ಮಾಡಿದ್ದರಿಂದ ಬರಿಯ ವಿಜಾಪುರದ ಬಾದಶಹನದಷ್ಟೇ ಅಲ್ಲ, ಇಡಿಯ ಮುಸಲಮಾನ ಬಾದಶಹರ ಮಹತ್ವವು ಕಡಿಮೆಯಾಗಿ, ಇದರಿಂದ ರಾಮರಾಜನು ಮತ್ತಷ್ಟು ಏರುವನೆಂದು ಆ ತರುಣರು ತಿಳಕೊಂಡರು. ರಣಮಸ್ತಖಾನನ ಗೌರವವನ್ನೇ ಕಡಿಮೆ ಮಾಡತಕ್ಕದಿದ್ದರೆ ಹೀಗೆ ದರ್ಬಾರದಲ್ಲಿ ಮಾಡದೆ, ಬಾದಶಹನು ಗುಪ್ತರೀತಿಯಿಂದ ಮಾಡತಕ್ಕದ್ದಿತ್ತೆಂದು ಅವರು ತಮ್ಮೊಳಗೆ ಮಾತಾಡಿಕೊಳ್ಳಹತ್ತಿದರು. ಅದರಂತೆ ಈಗ ಮೇಲೆಯೊಬ್ಬರನ್ನು ನಿಯಮಿಸಿ ಪುನಃ ರಣಮಸ್ತಖಾನನನ್ನು ವಿಜಾಪುರದ ವಕೀಲನನ್ನಾಗಿ ನಿಯಮಿಸಿ ಕಳಿಸಿದ್ದು ನೆಟ್ಟಗಾಗಲಿಲ್ಲೆಂದು ತರುಣರ ಮತವಾಯಿತು. ಕೆಲವರು ವೃದ್ದರಿಗೂ, ವಿಚಾರವಂತರಿಗೂ ಮಾತ್ರ ಬಾದಶಹನ ಕೃತಿಯು ಸಮರ್ಪಕವಾಗಿ ತೋರಿತು. ಇಷ್ಟು ಕುಲ್ಲಕ ಕಾರಣಕ್ಕಾಗಿ ಉಭಯ ಪಕ್ಷದ ಅರ್ಥ ಹಾನಿ-ಪ್ರಾಣಹಾನಿಗಳನ್ನು ಮಾಡಗೊಡೆಯಿದ್ದದ್ದು ಬಹುಯೋಗ್ಯವಾಯಿತೆಂದು ಅವರು ಭಾವಿಸಿದರು. ರಣಮಸ್ತಖಾನನ ಮೇಲೆ ಒಬ್ಬ ತಿಳುವಳಿಕೆಯ ವಕೀಲನನ್ನು ಕಳಿಸಿದ್ದೂ ಅವರಿಗೆ ಸಮರ್ಪಕವಾಗೆ ತೋರಿತು. ಸ್ವತಃ ರಣಮಸ್ತಖಾನನಿಗೆ ಬಾದಶಹನ ಈ ಕೃತಿಯು ಸ್ವಾಭಾವಿಕವಾಗಿಯೇ ಸೇರಲಿಲ್ಲ. ಆತನು ಬಾದಶಹರಿಗೆ-ನನ್ನ ಮಾನಹಾನಿಯನ್ನು ಇಷ್ಟು ಮಾಡಬಾರದೆಂತಲೂ, ನನ್ನನ್ನು ತಿರುಗಿ ವಿಜಯನಗರಕ್ಕಾದರೂ ಕಳಿಸಬಾರದೆಂತಲೂ, ವಿಜಾಪುರದಲ್ಲಿ ತಮ್ಮ ಬಳಿಯಲ್ಲಿಯೇ ನನ್ನನ್ನು ಇಟ್ಟುಕೊಳ್ಳಿರೆಂತಲೂ ಬಹಳವಾಗಿ ಹೇಳಿಕೊಂಡನು. ಆದರೆ ಬಾದಶಹನು ಆತನ ಮಾತನ್ನು ಕೇಳಲಿಲ್ಲ. ನನ್ನ ಅಪ್ಪಣೆಯನ್ನು ನೀನು ಪಾಲಿಸಬೇಕೆಂದು ನಿಷ್ಠುರವಾಗಿ ಹೇಳಿದನು. ಅದರಿಂದ ರಣಮಸ್ತಖಾನನಿಗೆ ವಿಜಯನಗರಕ್ಕೆ ಹೋದಹೊರತು ಎರಡನೆಯ ಮಾರ್ಗವೇ ಉಳಿಯದಾಗಲು, ಅವನು ಸುಮ್ಮನೆ ಅದಕ್ಕೆ ಒಪ್ಪಿಕೊಂಡನು. ರಣಮಸ್ತಖಾನನ ಸಂಗಡ ಖಾನಖನಾನ ಮಹಮೂದಖಾನನೂ ಹೊರಟನು. ಅವರಿಬ್ಬರೂ ವಿಜಯನಗರಕ್ಕೆ ಬಂದರು. ರಣಮಸ್ತಖಾನನು ಬಹಳ ಲಜ್ಜೆಯಿಂದ ಕುಂಜವನವನ್ನು ಪ್ರವೇಶಿಸಿದನು. ಪಾಪ ಏನು ಮಾಡ್ಯಾನು ! ಬರುವಾಗ ವಿಜಾಪುರದಲ್ಲಿ ನೂರಜಹಾನಳನ್ನು ಕಾಣಲಿಕ್ಕೆ ಸಹ ಆತನಿಗೆ ಸಂಧಿಯು ದೊರೆಯಲಿಲ್ಲ. ಆದರೆ ಆಕೆಯು ತನ್ನ ಪ್ರತಿಜ್ಞೆಯಂತೆ ನಿಶ್ಚಯವಾಗಿ ನಡೆಯುವಳೆಂಬ ನಂಬಿಗೆಯು ಆತನಿಗಿತ್ತು. ವಿಜಾಪುರಕ್ಕೆ ಹೋದನಂತರ ಆಕೆಯ ಸಂಗಡ ಪ್ರತ್ಯಕ್ಷ ಮಾತಾಡುವದಂತು ಇರಲಿ, ಆಕೆಗೆ ಪತ್ರ ಬರೆದು ಕಳಿಸಲಿಕ್ಕೆ ಸಹ ರಣಮಸ್ತಖಾನನಿಗೆ ಅನುಕೂಲವಾಗಲಿಲ್ಲ. ಆತನು ತಿರುಗಿ ವಿಜಯನಗರಕ್ಕೆ ಬರಲಿಕ್ಕೆ ತಿಂಗಳ ಮೇಲೆ ಹಿಡಿಯಿತು. ಈ ಅವಧಿಯಲ್ಲಿ ಆತನು ತನ್ನ ತಾಯಿಗೆ ಪತ್ರ ಹಾಕಿದ್ದನು. ಆತನ ತಾಯಿಯ ಕಡೆಯಿಂದಲೂ ಆತನಿಗೆ ಪತ್ರಗಳು ಬಂದಿದ್ದವು. ರಣಮಸ್ತಖಾನನು ಕುಂಜವನಕ್ಕೆ ಬಂದ ಕೂಡಲೆ ಆತನು ಮೊದಲು ತನ್ನ ತಾಯಿಯ ದರ್ಶನ ಮಾಡಿಕೊಂಡು ಅಕೆಯ ಚರಣಕ್ಕೆರಗಿದನು, ಮಗನನ್ನು ನೋಡಿ ತಾಯಿಗೆ ಬಹಳಸಂತೋಷವಾದರೂ, ಬಾದಶಹನಿಂದ ಆತನು ನಿರಾಕರಿಸಲ್ಪಟ್ಟಿದ್ದಕ್ಕಾಗಿ ಆಕೆಯು ದುಃಖಿತಳಾಗಿದ್ದಳು. ರಣಮಸ್ತಖಾನನು ವಿಜಾಪುರದ ದರ್ಬಾರದಲ್ಲಿ ನಡೆದ ಸಂಗತಿಗಳನ್ನು ಒಂದುಳಿಯದಂಥೆ ಯಥಾವತ್ತಾಗಿ ತಾಯಿಯ ಮುಂದೆ ಹೇಳಿ, ತನ್ನ ಅಪಮಾನವು ಬಹಳವಾಯಿತೆಂದು ಆಕೆಯ ಮುಂದೆ ಆಡಿತೋರಿಸಿದನು. ಇನ್ನು ಮೇಲೆ ರಾಮರಾಜನು ನನ್ನನ್ನು ನಿರಾಕರಿಸುವನೆಂಬುದನ್ನು ಆತನು ತನ್ನ ತಾಯಿಯ ಮುಂದೆ ಹೇಳದೆಯಿರಲಿಲ್ಲ.
****