ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮ ಕಥೆ/ರಾಮರಾಜನ ಪಶ್ಚಾತ್ತಾಪ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೫೪–೬೦

೬ನೆಯ ಪ್ರಕರಣ

ರಾಮರಾಜನ ಪಶ್ಚಾತ್ತಾಪ


ದರ್ಗಾದಿಂದ ವಿಜಯನಗರವು ಒಳ್ಳೆ ಹದಿನೆಂಟು ಹರದಾರಿಯಿತ್ತು. ಗಾಡಿಗೆ ಹೂಡಿದ ಎತ್ತುಗಳು ಅತ್ಯುತ್ತಮವಿದ್ದದ್ದರಿಂದ ಅದಕ್ಕೆ ಹಾದಿ ನಡೆಯುವ ಲಕ್ಶ್ಯವಿದ್ದಿಲ್ಲ. ಬೆಳಗಾಗುವದರೊಳಗೆ ವಿಜಯನಗರಕ್ಕೆ ಮುಟ್ಟಬೇಕೆಂಬ ಆತುರದಿಂದ ಧನಮಲ್ಲನು ಎತ್ತುಗಳನ್ನು ಒತ್ತರದಿಂದ ನಡೆಸಹತ್ತಿದನು. ಆತನ ಮನಸ್ಸಿಗೆ ಸ್ವಸ್ಥವಿದ್ದಿಲ್ಲ. ಕೇವಲ ಮೆಹರ್ಜಾನಳ, ಹಾಗು ಮಾರ್ಜೀನೆಯ ಕಾವಲಿಗಾಗಿ ತನ್ನನ್ನು ನಿಯಮಿಸಿರಲು, ತಾನು ಹೀಗೆ ಅವರನ್ನು ಕಳಕೊಂಡ ಸುದ್ದಿಯನ್ನು ಕೇಳಿದರೆ ರಾಮರಾಜನು ಏನು ಮಾಡುವನೋ ಎಂಬ ಭಯದಿಂದ ಅವನ ಮನಸ್ಸು ಅಸ್ವಸ್ಥವಾಯಿತು. ಆತನಿಗೆ ಏನೂ ತೋಚಲೊಲ್ಲದು. ಅರುಣೋದಯ ಸಮಯಕ್ಕೆ ಆತನ ರಥವು ರಾಮರಾಜನ ಮನೆಯ ಬಾಗಿಲಿಗೆಹೋಯಿತು. ಎತ್ತುಗಳೂ ರಾತ್ರಿ ಒಂದೇ ಸಮನೆ ನಡೆದು ಬಂದದ್ದರಿಂದ ಬಹಳ ದಣಿದಿದ್ದವು. ಆದ್ದರಿಂದ ಧನಮಲ್ಲನು ಮೊದಲು ಎತ್ತುಗಳ ಯೋಗಕ್ಷೇಮವನ್ನು ತೆಗೆದುಕೊಂಡನು. ಧನಮಲ್ಲನು ರಾಮರಾಜನ ನಂಬಿಗೆಯವರಲ್ಲಿ ಒಬ್ಬನಾಗಿದ್ದನು. ಧನಮಲ್ಲನು ಮಧ್ಯರಾತ್ರಿಯಲ್ಲಿ ಬಂದು ನನ್ನನ್ನು ಕಾಣಬೇಕು ಎಂದು ಹೇಳಿದರೂ, ಕೂಡಲೇ ನನ್ನನ್ನು ಎಬ್ಬಿಸಿ ಸುದ್ದಿಯನ್ನು ಹೇಳಬೇಕೆಂದು ರಾಮರಾಜನು ಎಲ್ಲರಿಗೆ ಕಟ್ಟಪ್ಪಣೆ ಮಾಡಿದ್ದನು; ಆದರೆ ಈಗ ಧನಮಲ್ಲನು ಅಷ್ಟು ಅವಸರ ಮಾಡಲಿಲ್ಲ. ಮಹಾರಾಜರು ಎದ್ದು ಪ್ರಾತರ್ವಿಧಿಗಳನ್ನು ತೀರಿಸಿಕೊಂಡ ಕೂಡಲೆ ನಾನು ಬಂದಿದ್ದ ಸುದ್ದಿಯನ್ನು ಹೇಳಬೇಕೆಂದು ಕಾವಲುಗಾರರಿಗೆ ಸನ್ನೆಯಿಂದ ತಿಳಿಸಿದ್ದನು. ಇತ್ತ ಎತ್ತುಗಳ ವ್ಯವಸ್ಥೆಯಾಗುವದರೊಳಗೆ ರಾಮರಾಜನು ಧನಮಲ್ಲನನ್ನು ಕರೆಸಿಕೊಂಡನು. ಧನಮಲ್ಲನು ಒಳಗೆ ಬಂದಕೂಡಲೆ ಎಲ್ಲ ಸೇವಕರನ್ನು ರಾಮರಾಜನು ಹೊರಗೆ ಕಳಿಸಿದನು. ಒಂದು ಕೂಗಿನ ಅಳತೆಯಲ್ಲಿ ನಿಂತಿರುವಂತೆ ಒಬ್ಬ ಸೇವಕನಿಗೆ ಮಾತ್ರ ಅಪ್ಪಣೆಯಾಗಿತ್ತು. ಧನಮಲ್ಲನು ಏನು ಹೇಳುವನೆಂಬುದನ್ನು ಕೇಳಲಿಲ್ಲ ರಾಮರಾಜನು ಬಹು ಉತ್ಸುಕನಾಗಿರುವಂತೆ ತೋರುತ್ತಿತ್ತು. ಧನಮಲ್ಲನು ಸಂಶಯದ ಮುದ್ರೆಯಿಂದ ಒಮ್ಮೆ ಎಲ್ಲ ಕಡೆಗೆ ನೋಡಿದನು. ಆಗ ರಾಮರಾಜನು ಆತನನ್ನು ಕುರಿತು-ಹೂಂ, ಮಾತಾಡು; ಇತ್ತ ನಿನ್ನ ಮಾತು ಯಾರಿಗೂ ಕೇಳಿಸುವ ಹಾಗಿಲ್ಲ. ಸುಮ್ಮನೆ ಅತ್ತಿತ್ತ ನೋಡಿ ಹೊತ್ತುಗಳೆಯಬೇಡ, ಅನ್ನಲು ಕನ್ನಡಿಗನಾದ ಧನಮಲ್ಲನು ರಾಮರಾಜನಿಗೆ ಕನ್ನಡ ಮಾತುಗಳಿಂದ-ಮಹಾರಾಜ, ಪಾರಿವಾಳಗಳು ಹಾರಿಹೋದವು ; ಅವು ನನ್ನನ್ನು ಮೋಸಗೊಳಿಸಿದವು, ಎಂದು ಹೇಳಿದನು-ತಿಳಿಗೇಡಿಯೇ ಏನು ಬೊಗಳುವೆ ? ಮೂಕನ ಸೋಗಿನಿಂದ ನಿನ್ನನ್ನು ಅವರ ಬಳಿಯಲ್ಲಿದ್ದು ಇವರ ಸಲುವಾಗಿಯೇ ಏನು ? ಪಾರಿವಾಳಗಳೂ ಹಾರಿ ಹೋದವಂತೆ, ಮೋಸ ಮಾಡಿದವಂತೆ ! ಮೂರ್ಖಾ, ನೀನೇನು ಕತ್ತೆಯನ್ನು ಕಾಯುತ್ತಿದ್ದೆ? ಅವರನ್ನು ಯಾಕೆ ಹೋಗಗೊಟ್ಟೆ ? ಬೊಗಳು, ಎನಾಯಿತೆಂಬುದನ್ನು ಬೇಗನೆ ಬೊಗಳು” ಎಂದು ರೇಗಿ ಕೇಳಲು, ಧನಮಲ್ಲನು-ನೀವು ಸಮಾಧಾನದಿಂದ ಕೇಳಿಕೊಂಡರೆ ಎಲ್ಲ ಸುದ್ದಿಯನ್ನು ಹೇಳುತ್ತೇನೆ. ಎಲ್ಲವನ್ನು ಕೇಳಿದ ಬಳಿಕ ಅದರಲ್ಲಿ ನನ್ನ ಅಪರಾಧವೇನೂ ಇಲ್ಲೆಂದು ನಿಮಗೆ ಕಾಣಬಹುದು. ಸುದ್ದಿಯನ್ನು ಕೇಳಿಕೊಳ್ಳದೆ ಸುಮ್ಮನೆ ಹೆಸರಿಡುವದಾಗಿದ್ದರೆ, ಅಲ್ಲಿ ಮೂಕನಾಗಿದ್ದಂತೆ ಇಲ್ಲಿಯೂ ನಾನು ಮೂಕನೆಂತಲೇ ತಿಳಿಯಿರಿ !

ಧನಮಲ್ಲನ ಈ ಎಟ್ಟಿ ಮಾತುಗಳನ್ನು ಕೇಳಿ, ರಾಮರಾಜನು ತನ್ನ ಸಿಟ್ಟನ್ನು ನುಂಗಿಕೊಳ್ಳಬೇಕಾಯಿತು ; ಯಾಕೆಂದರೆ, ಧನಮಲ್ಲನು ವಿಲಕ್ಷಣ ಮನುಷ್ಯನೆಂಬುದು ರಾಮರಾಜನಿಗೆ ಗೊತ್ತಿತ್ತು: ಆದ್ದರಿಂದ ಆತನು ಸಮಾಧಾನದಿಂದ ಧನಮಲ್ಲನನ್ನು ಕುರಿತು-ಹೂ, ಮಾತಾಡು. ಮಾತಾಡು, ಏನು ಹೇಳುವದನ್ನು ಬೇಗನೆ ಹೇಳು, ಅನ್ನಲು, ಧನಮಲ್ಲನು ನಡೆದ ಸಂಗತಿಯನ್ನೆಲ್ಲ ಹೇಳಿದನು. ಆತನಿಲ್ಲದಾಗ ಮೆಹರ್ಜಾನಳೂ, ಮಾರ್ಜೀನೆಯೂ ಆಡಿದ ಮಾತುಗಳು ಅವನಿಗೆ ಗೊತ್ತಿಲ್ಲದ್ದರಂದ ಅವಷ್ಟನ್ನು ಮಾತ್ರ ಹೇಳಲಿಲ್ಲ. ರಾಮರಾಜನು ಧನಮಲ್ಲನ ಎಲ್ಲ ಮಾತುಗಳನ್ನು ಲಕ್ಶ್ಯಪೂರ್ವಕವಾಗಿ ಕೇಳಿ ಕೊಂಡ ಮೇಲೆ, ವಿಚಾರಮಗ್ನನಾಗಿ ಕೆಲಹೊತ್ತಿನ ಮೇಲೆ ಧನಮಲ್ಲನನ್ನು ಕುರಿತು

ರಾಮರಾಜ-ಅವರು ತಮ್ಮ ಸಂಗಡ ಏನೇನು ಸಾಮಾನು ಒಯ್ದಿದ್ದಾರೆ?

ಧನಮಲ್ಲ-ಅವರು ಒಂದು ರಿಂಬಿಯನ್ನೂ ಸಹ ಸಂಗಡ ತಕ್ಕೊಂಡು ಹೋಗಿರುವದಿಲ್ಲ. ಪ್ರತಿ ಒಂದು ಸಾರೆ ದರ್ಗಾಕ್ಕೆ ಹೋಗುವಾಗ ಒಯ್ಯತಿದ್ದ ಸಾಮಾನುಗಳನ್ನು ಸಹ ಈ ಸಾರೆ ಅವರು ಒಯ್ದಿರುವದಿಲ್ಲ. ಅಂದ ಬಳಿಕ ಅವರು ತಿರುಗಿ ಬರಲಿಕ್ಕಿಲ್ಲೆಂಬ ಕಲ್ಪನೆಯಾದರೂ ನನಗೆ ಹ್ಯಾಗಾಗಬೇಕು ?

ರಾಮರಾಜ ದರ್ಗೆಯಲ್ಲಿ ನೀನೇನು ಶೋಧಮಾಡಿದೆ ? ಧನಮಲ್ಲ-ಮಾಡಲಿಕ್ಕೆ ಶಕ್ಯವಿದ್ದ ಮಟ್ಟಿಗೆ ಎಲ್ಲ ಕಡೆಗೂ ಶೋಧ ಮಾಡಿದೆನು. ಇನ್ನು ಹೀಗೆ ಸುಮ್ಮನೆ ಶೋಧ ಮಾಡುತ್ತ ಕಾಲಹರಣ ಮಾಡುವದಕ್ಕಿಂತ ಸನ್ನಿಧಿಯಲ್ಲಿ ಎಲ್ಲ ಸಂಗತಿಗಳನ್ನು ಹೇಳಿ ಮುಂದಿನ ಹಾದಿಯನ್ನು ಕಂಡುಕೊಳ್ಳುವುದು ಯೋಗ್ಯವೆಂದು ತೋರಿದ್ದರಿಂದ, ತಮ್ಮ ಬಳಿಗೆ ಬಂದೆನು.

ಧನಮಲ್ಲನ ಈ ಉತ್ತರದ ಕಡೆಗೆ ರಾಮರಾಜ ಲಕ್ಷ್ಯವಿದ್ದಂತೆ ತೋರಲಿಲ್ಲ. ಆತನ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾಗಿ ಮನಸ್ಸನ್ನು ಚಂಚಲವಾಗಿ ಮಾಡಿದ್ದವು. ಸ್ವಲ್ಪ ಹೊತ್ತಿನ ಮೇಲೆ ಆತನು ಧನಮಲ್ಲನಿಗೆ-ಈಗ ನೀನು ಹೋಗು, ಸಂಜೆಯವರೆಗೆ ವಿಶ್ರಮಿಸು, ಸಂಜೆಯಮುಂದೆ ನಾನು ನಿನ್ನನ್ನು ಕರೆಸುವೆನು. ಏನು ಮಾಡಬೇಕೆಂಬುದರ ವಿಚಾರವು ಮುಂದೆ, ಈಗ ಬೇಡ, ಹೂ ನಡೆ, ಈಗ ನೀನು ನನ್ನ ಎದುರಿಗೆ ಸಹ ನಿಲ್ಲಬೇಡ, ಎಂದು ಹೇಳಿ, ಧನಮಲ್ಲನ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡನು. ಧನಮಲ್ಲನಿಗಾದರೂ ಇಷ್ಟೇ ಬೇಕಾಗಿತ್ತು. ಬೆಳತನಕ ನಿದ್ದೆಗೆಟ್ಟು ದಣಿದಿದ್ದರಿಂದ ಯಾವಾಗ ನೆಲವನ್ನು ಕಂಡೇನೆಂಬ ಹಾಗೆ ಆತನಿಗೆ ಆಗಿತ್ತು, ಕೂಡಲೇ ಆತನು ಅಲ್ಲಿಂದ ಹೊರಟುಹೋದನು. ಇತ್ತ ರಾಮರಾಜನು ನಡೆದ ಸಂಗತಿಯನ್ನು ಕುರಿತು ಬಗೆಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡನು. ಮೆಹರ್ಜಾನಳು ತಾನಾಗಿ ಹೋದದ್ದರಿಂದ ತನ್ನ ಮಂತ್ರಿ ಪದವಿಯ ಪ್ರಾಪ್ತಿಗಾಗಿ ಒದಗಿದ್ದೊಂದು ವಿಘ್ನ ನಿವಾರಣೆ ಆಯಿತೆಂಬಂತೆ ತೋರಿ, ಆತನಿಗೆ ಕೆಲಮಟ್ಟಿಗೆ ಸಮಾಧಾನವಾದಂತೆ ಆಯಿತು. ಹಾಗೆ ಸಮಾಧಾನವಾಗಿರದಿದ್ದರೆ, ಆತನು ಧನಮಲ್ಲನ ವಿಶ್ರಾಂತಿಗೆ ಆಸ್ಪದವನ್ನು ಕೊಡುತ್ತಿದ್ದಿಲ್ಲ, ಮೆಹರ್ಜಾನಳನ್ನು ಹುಡುಕಿಕೊಂಡು ಬಾರದಿದ್ದರೆ ನಿನ್ನನ್ನು ನಿಲ್ಲಿಸಿ ಸುಡಿಸುವೆನೆಂದು ಆತನು ಧನಮಲ್ಲನಿಗೆ ಹೇಳಬಹುದಾಗಿತ್ತು. ಮೆಹೆರ್ಜಾನಳ ಮೇಲಿದ್ದ ರಾಮರಾಜನ ಪ್ರೇಮವನ್ನು ಮನಸ್ಸಿನಲ್ಲಿ ತಂದರೆ, ರಾಮರಾಜನ ಈ ಬೇಸರದ ಕೃತಿಯು ವಿಲಕ್ಷಣವಾಗಿ ತೋರಬಹುದು ; ಆದರೆ ಪ್ರಬಲ ಮಹತ್ವಾಕಾಂಕ್ಷಿಯು ಹೀಗೆ ಪ್ರೇಮ ಭಂಗವನ್ನು ಮಾಡಿದ್ದು ಆಶ್ಚರ್ಯವಲ್ಲ! ಆದರೆ ಸ್ವಲ್ಪ ಹೊತ್ತಿನ ಮೇಲೆ ರಾಮರಾಜನ ಒಂದೊಂದೇ ಪ್ರೇಮದ ಕೃತಿಗಳ ಸ್ಮರಣವಾಗಿ, ಆತನ ಮನಸ್ಸು ಮತ್ತೆ ಅಸ್ವಸ್ಥವಾಯಿತು. ಆತನ ಹಾಸಿಗೆಯ ಮೇಲೆ ಹೋಗಿ ಮಲಗಿಕೊಂಡು ನಿದ್ದೆ ಮಾಡಿ ಸಮಾಧಾನಪಡಬೇಕೆಂದು ಮಾಡಿದನು; ಆದರೆ ಮೆಹರ್ಜಾನಳ ವಿಯೋಗ ದುಃಖವು ಆತನನ್ನು ಬಾಧಿಸಹತ್ತಿದ್ದರಿಂದ ನಿದ್ದೆ ಬರುವದೊತ್ತಟ್ಟಿಗುಳಿದು, ಆತನ ಕಣ್ಣೋಳಗಿಂದ ನೀರುಗಳು ಸುರಿಯಹತ್ತಿದವು. ಆತನು ಮೊದಮೊದಲು ಕಣ್ಣೀರುಗಳನ್ನು ಒರೆಸಿಕೊಂಡನು ; ಆದರೆ ಅವು ಸತತವಾಗಿ ಧಾರೆಯಿಟ್ಟು ಸುರಿಯಹತ್ತಲು, ಆತನು ಮೋರೆಯ ಮೇಲೆ ಸೆರಗನ್ನು ಹಾಕಿಕೊಂಡು, ಸುಮ್ಮನೆ ಮಲಗಿಬಿಟ್ಟನು. ಅತ್ತು ಅತ್ತು ಆತನ ದುಃಖವೇಗವು ಕಡಿಮೆಯಾಗಹತ್ತಿತು. ಕಡೆಗೆ ಆತನು ಎದ್ದು ಕುಳಿತು ಕಣ್ಣೀರು ಒರೆಸಿಕೊಂಡ; ಮನಸ್ಸಿನಲ್ಲಿ ಎನೋ ನಿಶ್ಚಯಿಸಿ, ಸೇವಕನನ್ನು ಗಟ್ಟಿಯಾಗಿ ಒದರಿದನು. ಆಗ ಸೇವಕನು ಬಂದು ಕೈ ಜೋಡಿಸಿ ನಿಂತುಕೊಳ್ಳಲು ರಾಮರಾಜನು - ಹೋಗು, ನನ್ನ ಕುದುಯರೆಯನ್ನೂ, ಬೇಟೆಯ ಯಾವತ್ತೂ ಎಂದು ಈ ಮೇರೆಗೆ ರಾಮರಾಜನು ಬಡಬಡ ಮಾತಾಡಿದ್ದನ್ನು ಕೇಳಿ ತಿರುಮಲರಾಯ ವಿಚಾರಮಗ್ನನಾದನು. ತಿರುಮಲರಾಯನು ರಾಮರಾಜನ ಅಣ್ಣನಾಗಿದ್ದರೂ, ಅವರಿಬ್ಬರ ವಯಸ್ಸಿನಲ್ಲಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಅಂತರವಿದ್ದಿಲ್ಲ. ಇದಲ್ಲದೆ, ರಾಮರಾಜನ ವರ್ಚಸ್ಸಿನ ಮುಂದೆ, ತಿರುಮಲರಾಯನ ಮತಿಯು ಕುಂಠಿತವಾಗುತ್ತಿತ್ತು. ಚಿಕ್ಕಂದಿನಿಂದಲೂ ಅಣ್ಣನ ಮೇಲೆ ರಾಮರಾಜನ ವರ್ಚಸು ಬಹಳ, ರಾಮರಾಜನು ಆಜ್ಞಾಪಿಸಬೇಕು. ತಿರುಮಲರಾಯನು ಅದರಂತೆ ನಡೆಯಬೇಕು. ಈ ಕ್ರಮವು ಚಿಕ್ಕಂದಿನಿಂದ ಆ ಬಂಧುಗಳಲ್ಲಿ ನಡೆಯುತ್ತ ಬಂದಿತ್ತು. ಆದ್ದರಿಂದ ತಿರುಮಲರಾಯನು ರಾಮರಾಜನ ವಿರುದ್ದ ಮಾತಾಡಲಾರದೆ, ಸೌಮ್ಯದಿಂದ-ಸರಿ, ನೀನು ಹೇಳುವ ಮಾತು ಆಯೋಗ್ಯವೆಂದು ನಾನು ಹೇಳುವದಿಲ್ಲ. ವೈರಿಗಳ ವಿಷಯವಾಗಿ ನಾವು ಜಾಗರೂಕರಾಗಿರುವದೇ ನೆಟ್ಟಗೆ; ಆದರೆ ಪ್ರತ್ಯಕ್ಷ ಕೃಷ್ಣದೇವರಾಯರೇ ಕರೆದಿರಲು. ನೀನು ಬಾರದಿದ್ದರೆ ವ್ಯತ್ಯಾಸ ವಾಗಲಿಕ್ಕಿಲ್ಲವೇ? ಮೂರು-ನಾಲ್ಕು ದಿನಗಳಲ್ಲಿಯೇ ಲಗ್ನ ಮುಹೂರ್ತವನ್ನಿಟ್ಟರೆ ಹ್ಯಾಗೆ? ನೀನು ಮಹಾರಾಜರನ್ನು ಕಂಡು ಅವರ ಒಪ್ಪಿಗೆಯನ್ನೇ ಪಡೆದು ಹೋಗುವದು ನೆಟ್ಟಗೆ ಕಾಣುತ್ತದೆ, ಅನ್ನಲು ರಾಮರಾಜನು ಆತುರದಿಂದ-ಅಷ್ಟಕ್ಕಷ್ಟಕ್ಕೆ ಮಹಾರಾಜರನ್ನು ಕೇಳುತ್ತ ಕುಳಿತುಕೊಳ್ಳುವದರಲ್ಲಿ ಅರ್ಥವೇನು ? ರಾಜಕಾರ್ಯದ ಸಲುವಾಗಿಯೇ ನಾನು ಹೋಗುವದರಿಂದ, ಅವರಿಗೆ ವ್ಯತ್ಯಾಸವಾಗದೆ, ನನ್ನ ಕರ್ತವ್ಯ ತತ್ಪರತೆಗಾಗಿ ಅವರು ಸಂತೋಷ ಪಡಬಹುದು. ರಾಜಪುತ್ರಿಯ ವಿವಾಹ ಮುಹೂರ್ತವನ್ನು ಎಲ್ಲಿಯಾದರೂ ಮೂರು-ನಾಲ್ಕು ದಿನಗಳಲ್ಲಿ ನಿರ್ಧರಿಸುವ ಸಂಭವವುಂಟೆ ? ಸುಮ್ಮನೆ ಇಲ್ಲದ ಸಂಶಯಕ್ಕೆ ಗುರಿಯಾಗಿ, ಕಾಲಹರಣಮಾಡುವದು ಸರಿಯಲ್ಲ. ತಾವು ಮಹಾರಾಜರ ಬಳಿಗೆ ಹೋಗಿ ಲಗ್ನಮುಹೂರ್ತವನ್ನು ನಿರ್ಧರಿಸಿರಿ. ಹಿರಿಯರಿದ್ದ ಬಳಿಕ ನನ್ನ ಅವಶ್ಯವೇನಿದೆ ? ನಾನು ಬೇಗನೆ ಬರುವೆನು. ಒಂದು ಪಕ್ಷದಲ್ಲಿ ಮುಹೂರ್ತವು ಒತ್ತರಿಸಿದರೆ ನಾನೇನು ದೂರ ಹೋಗುವುದಿಲ್ಲ ; ಕರೆಕಳುಹಿದರೆ ಕೂಡಲೆ ಬರುವೆನು, ಎಂದು ಹೇಳಿದನು. ಅದನ್ನು ಕೇಳಿ ತಿರುಮಲ ರಾಯನು ಹೆಚ್ಚು ಮಾತಾಡಲಾರದೆ ತಮ್ಮನ ಒಪ್ಪಿಗೆಯನ್ನು ಪಡೆದು, ಆತನಿಗೆ ಬೇಗನೆ ಬರಬೇಕೆಂದು ಹೇಳಿ ಹೊರಟುಹೋದನು. ಇತ್ತ ರಾಮರಾಜನು ಧನಮಲ್ಲನನ್ನು ಕರೆಕಳುಹಲು, ದಣಿದು ಹೆಣವಾಗಿ ಬಿದ್ದುಕೊಂಡಿದ್ದ ಆತನು, ಒಟಗುಟ್ಟುತ್ತ ನಿರ್ವಾಹವಿಲ್ಲದೆ ತನ್ನ ಕುದುರೆಯನ್ನು ಹತ್ತಿಕೊಂಡು ರಾಮರಾಜನ ಬಳಿಗೆ ಬಂದನು. ಆಮೇಲೆ ಅವರಿಬ್ಬರು ತಮ್ಮ ಕುದುರೆಗಳನ್ನು ಒತ್ತರದಿಂದ ನಡೆಸುತ್ತ ಕುಂಜವನದ ಕಡೆಗೆ ಸಾಗಿದರು. ಹಾದಿಯಲ್ಲಿ ಹೋಗಹೋಗುತ್ತ ರಾಮರಾಜನು ಧನಮಲ್ಲನನ್ನು ಕುರಿತು - ಧನಮಲ್ಲ, ಏನೇನು ಸಂಗತಿಯು ವರ್ತಿಸಿತೆಂಬುದನ್ನು ಇನ್ನೊಮ್ಮೆ ಹೇಳು, ಎಂದು ಕೇಳಲು, ಧನಮಲ್ಲನು ಯಾವತ್ತು ವೃತ್ತಾಂತವನ್ನು ಒಂದುಳಿಯದಂತೆ ಹೇಳಹತ್ತಿದನು ; ಆದರೆ ವಿಚಾರ ಮಗ್ನನಾದ ರಾಮರಾಜನ ಲಕ್ಷ್ಯವು ಪೂರ್ಣವಾಗಿ ಅತ್ತ ಕಡೆಗೆ ಇದ್ದಿಲ್ಲ. ಆದರೂ ಆತನು ಸುದ್ದಿಯನ್ನು ಕೇಳುವವನಂತೆ ನಟಿಸುತ್ತಿದ್ದನು. ಈ ಸ್ಥಿತಿಯಲ್ಲಿ ಅವರು ಒತ್ತರದಿಂದ ಸಾಗುತ್ತ ಕುಂಜವನದ ಸನಿಯಕ್ಕೆ ಬಂದರು. ಆಗ ರಾಮರಾಜನು ಧನಮಲ್ಲನ್ನನು ಕುರಿತು-ನೀನು ಸಂಗನಪಲ್ಲಿಗೆ ಹೋಗಿ, ಮೆಹರ್ಜಾನ – ಮಾರ್ಜೀನೆಯರ ವೃತ್ತಾಂತವನ್ನು ತಿಳಿದು ಬಂದು ನನಗೆ ಹೇಳು. ಅವರು ನಿನ್ನೆ ರಾತ್ರಿಯಲ್ಲಿ ಎಲ್ಲಿಗೂ ಹೋಗಿರಲಿಕ್ಕಿಲ್ಲ; ಅಲ್ಲಿಯೇ ಎಲ್ಲಿಯಾದರೂ ಗುಪ್ತ ರೀತಿಯಿಂದ ವಾಸಿಸಿರಬಹುದು. ನಡೆ, ಬೇಗನೆ ಹೋಗಿ ಬಾ ಅವರ ಸುದ್ದಿಯನ್ನು ತರದಿದ್ದರೆ ನಿನ್ನ ಪರಿಣಾಮವಾಗಲಿಕ್ಕಿಲ್ಲ. ನಡೆ, ನಿಲ್ಲಬೇಡ, ಎಂದು ಹೇಳಲು ಧನಮಲ್ಲನು ಮನಸ್ಸಿನಲ್ಲಿ ತಳಮಳಗೊಳ್ಳುತ್ತ ಸಂಗನಪಲ್ಲಿಯ ಹಾದಿಯನ್ನು ಹಿಡಿದನು.

ಇತ್ತ ರಾಮರಾಜನು ಕುಂಜವನವನ್ನು ಪ್ರವೇಶಿಸಿದನು. ಮೆಹರ್ಜಾನಳ ಮೇಲೆ ಆತನ ಪ್ರೇಮ ಬಹಳ. ಮಂತ್ರಿಪದವಿಯ ಮಹತ್ವಾಕಾಂಕ್ಷೆಯಿಂದ ತಾನು ಮೆಹರ್ಜಾನಳನ್ನು ನಿರಾಕರಿಸಿದ್ದಕ್ಕಾಗಿ ಆತನಿಗೆ ಈಗ ಪೂರ್ಣ ಪಶ್ಚಾತ್ತಾಪವಾಗಿತ್ತು. ಮೆಹರ್ಜಾನಳ ಸಹವಾಸದಲ್ಲಿರುವಾಗ ಆನಂದಕ್ಕೆ ಕಾರಣವಾದ ಸ್ಥಳಗಳೆಲ್ಲ, ಈಗ ಆತನ ದುಃಖಕ್ಕೆ ಕಾರಣವಾದವು. ಕುಂಜವನದೊಳಗಿನ ಮಂದಿರ, ಆ ಮಂದಿರದೊಳಗಿನ ಶಯನಗೃಹ ವನಮಧ್ಯದಲ್ಲಿದ್ದ ಪುಷ್ಕರಣಿ, ಅದರ ಸುತ್ತಲಿನ ಮನೋಹರವಾದ ಲತಾಮಂಟಪಗಳು ಇವುಗಳನ್ನು ನೋಡಿ ರಾಮರಾಜನಿಗೆ ಬಹಳ ವ್ಯಸನವಾಯಿತು. ಆತನು ದುಃಖವೇಗವನ್ನು ತಡೆಯಲಾರದೆ ಪುಷ್ಕರಣಿಯಲ್ಲಿ ಸ್ನಾನಮಾಡಿ ವಿಶ್ರಾಂತಿಯನ್ನು ಹೊಂದಬೇಕೆಂದು ಭಾವಿಸಿ, ತನ್ನ ಉಡುಪು ತೊಡಪುಗಳನ್ನು ಕಳೆದಿಟ್ಟನು. ಇನ್ನು ಆತನು ಪುಷ್ಕರಣಿಯಲ್ಲಿ ಧುಮುಕತಕ್ಕವನು, ಅಷ್ಟರಲ್ಲಿ ಹಿಂದಕದಕೆ ಮೆಹರ್ಜಾನಳು ನುಡಿದ ಅಪಘಾತದ ಶಬ್ದದ ನೆನಪಾಗಿ, ತಾನು ಎಲ್ಲಿ ಪುಷ್ಕರಣಿಯಲ್ಲಿ ಮುಳುಗಿ ಸಾಯುವೆನೋ ಎಂದು ಅಂಜಿ, ಮತ್ತೆ ಆತನು ಉಡುಪು-ತೊಡಪುಗಳನ್ನು ಧರಿಸಿಕೊಳ್ಳಹತ್ತಿದನು. ಆ ಪುಷ್ಕರಣಿಯ ತೀರದಲ್ಲಿ ನಿಲ್ಲುವ ಧೈರ್ಯವು ಆತನಿಗೆ ಆಗಲೊಲ್ಲದು. ಆತನು ಅವಸರದಿಂದ ಅಲ್ಲಿಂದ ಹೊರಟು ಒಂದು ಲತಾಮಂಟಪವನ್ನು ಪ್ರವೇಶಿಸಿದನು, ಮಧ್ಯಾಹ್ನವು ತಿರುಗಿ ಹೋಗಿದ್ದರೂ, ಆತನಿಗೆ ಹಸಿವೆ-ನೀರಡಿಕೆಗಳ ಪರಿವೆಯು ಉಳಿದಿದ್ದಿಲ್ಲ. ಗ್ಲಾನಿಯು ಬಂದಂತಾಗಿ ಆತನು ಲತಾಮಂಟಪದ ಪೀಠದಲ್ಲಿ ಒರಗಿದನು. ಅರೆನಿದ್ದೆಯಲ್ಲಿ ಆತನಿಗೆ ಕನಸಿನ ಮೇಲೆ ಕನಸುಗಳು ಬೀಳಹತ್ತಿದವು. ಹೀಗೆ ಸ್ವಪ್ನಾವಸ್ಥೆಯಲ್ಲಿ ಎರಡು ತಾಸುಗಳು ಕಳೆದು ಹೋಗಿರಬಹುದು. ಮುಂದೆ ಒಂಭತ್ತು ತಾಸಿನ ಸುಮಾರಕ್ಕೆ ಆತನು ಕನಸಿನಲ್ಲಿ ಪಕ್ಕನೆ ಎದ್ದು ನಿಂತು, ಖಡ್ಗವನ್ನು ಹಿರಿದು ಮುಂದಕ್ಕೆ ಧುಮುಕಲಿಕ್ಕೂ, ಧನಮಲ್ಲನು ಆತನ ಎದುರಿಗೆ ಬಂದು ನಿಲ್ಲಲಿಕ್ಕೂ ಗಂಟೇ ಬಿದ್ದಿತು, ಮೊದಲೇ ಅಂಜುತ್ತಂಜುತ್ತ ಬರುತ್ತಿದ್ದ ಧನಮಲ್ಲನು, ತನ್ನ ಮೇಲೆ ರಾಮರಾಜನು ಹೀಗೆ ಧುಮುಕಿದ್ದನ್ನು ನೋಡಿ ಮತ್ತಷ್ಟು ಬೆದರಿದನು, ರಾಮರಾಜನಿಗೆ ತಾನು ಯಾರ ಮೇಲೆ ಧುಮುಕಿದೆನೆಂಬದರ ಎಚ್ಚರವು ಉಳಿದಿದ್ದಿಲ್ಲ; ಆದರೆ ಈ ಸ್ಥಿತಿಯು ಬಹಳ ಹೊತ್ತು ಉಳಿಯಲಿಲ್ಲ. ರಾಮರಾಜನು ಪೂರ್ಣವಾಗಿ ಎಚ್ಚತ್ತು, ಧನಮಲ್ಲನನ್ನು ನೋಡಿ “ಯಾವಾಗ ಬಂದೆ? ಮೆಹರ್ಜಾನಳು ಎಲ್ಲಿರುವಳು?” ಎಂದು ಕೇಳಿದನು. ಅದಕ್ಕೆ ಧನಮಲ್ಲನು ಬಾಯಿಬಿಚ್ಚಿ ಮಾತಾಡದೆ, ಸನ್ನೆ ಮಾಡಿ ಏನೋ ತಿಳಿಸಹತ್ತಿದನು. ರಾಮರಾಜನು ಸಂತಾಪಗೊಂಡು, ಕವಕ್ಕನೆ ಆತನ ಮೈ ಮೇಲೆ ಹೋಗಿ, 'ಥೂ ಮೂರ್ಖಾ ಇನ್ನು ಮೇಲೆ ಯಾತಕ್ಕೆ ಈ ಸೋಗು? ಮೆಹರ್ಜಾನಳೂ ಎಲ್ಲಿರುವಳು? ಬಾಯಿಬಿಚ್ಚಿ ಹೇಳು ಎಂದು ಕೇಳಲು, ಧನಮಲ್ಲನು ತತ್ತರಿಸುತ್ತ ಅವರು ನಿನ್ನೆ ವಿಜಾಪುರದ ಕಡೆಗೆ ಹೋದರಂತೆ, ಎಂದು ಹೇಳಿದನು. ಆಗ ರಾಮರಾಜನ ಸಿಟ್ಟು ತಲೆಗೇರಿತು. ಆತನು ಸಂತಾಪದಿಂದ ಉರಿಯುತ್ತ-ಡೊಣಗಾ, ನಿನ್ನನ್ನು ನಾನು ಸುಮ್ಮನೆ ಬಾವುಗನ ಹಾಗೆ ಸಾಕಿದೆನು. ನಿನ್ನ ಬದಲು ಒಂದು ನಾಯಿಯನ್ನು ಸಾಕಿದ್ದರೆ, ನಿನಗಿಂತಲೂ ಅದು ಕಾವಲಿನ ಕೆಲಸವನ್ನು ಚೆನ್ನಾಗಿ ಮಾಡುತ್ತಿತ್ತು. ಹೋಗು ನನ್ನೆದುರಿಗೆ ನಿಲ್ಲಬೇಡ, ಮೆಹರ್ಜಾನಳು ಎಲ್ಲಿರುವಳೆಂಬುದನ್ನು ಗೊತ್ತು ಹಚ್ಚಿ, ಆಕೆಯನ್ನು ಕರಕೊಂಡೇ ನನ್ನೆದುರಿಗೆ ಬಾ, ಹಾಗೆ ಮಾಡದೆ, ನೀನು ಎಲ್ಲಿಯಾದರೂ ವಿಜಯನಗರದಲ್ಲಿ ನನ್ನ ಕಣ್ಣಿಗೆ ಬಿದ್ದರೆ, ನಿನ್ನನ್ನು ಶೂಲಕ್ಕೇರಿಸುವೆನು. ಇಲ್ಲವೆ ನಿಲ್ಲಸಿ ಸುಡಿಸುವೆನು, ಎಂದು ಗದ್ದರಿಸಿದನು. ಆಗ ಧನಮಲ್ಲನೂ ಸಿಟ್ಟು ಬೆಂಕಿಯಾಗಿದ್ದನು. ಆತನ ಕಣ್ಣುಗಳು ಕೆಂಪಗೆ ಗುಲಗುಂಜೆಯ ಹಾಗೆ ಆಗಿದ್ದವು. ಆತನ ಬಾಹುಗಳು ಸ್ಫುರಣಹೊಂದಿದವು. ಅಷ್ಟರಲ್ಲಿ ರಾಮರಾಜನು ಮತ್ತೆ ಧನಮಲ್ಲನ ಮೈಮೇಲೆ ಹೋಗಿ-ನಡೆ, ಹಾಳಾಗಿ ಹೋಗು, ನನ್ನೆದುರಿಗೆ ನಿಲ್ಲಬೇಡ, ಎಂದು ನುಡಿದು, ಅಶ್ವಾರೂಢನಾಗಿ ಕುಂಜವನದಿಂದ ಹೊರಬಿದ್ದು, ವಿಜಯನಗರದ ಕಡೆಗೆ ಸಾಗಿದನು. ಆಗ ಧನಮಲ್ಲನು ಅತ್ಯಂತ ಸಂತಪ್ತ ಮುದ್ರೆಯಿಂದ ರಾಮರಾಜನನ್ನು ನೋಡುತ್ತ, ಸ್ಥಳಬಿಟ್ಟು ಕದಲದೆ ಅವಡುಗಚ್ಚಿ ತಲೆಯಲ್ಲಾಡಿಸಿದನು. ಅತ್ತ ರಾಮರಾಜನು ಪಶ್ಚಾತ್ತಾಪದಿಂದ ವಿಜಯನಗರಕ್ಕೆ ಸಾಗಲು, ಧನಮಲ್ಲನು ಆ ರಾತ್ರಿ ಕುಂಜವನದಲ್ಲಿ ಉಳಿದುಕೊಂಡು ತುಂಗಭದ್ರೆಯನ್ನು ದಾಟಿ ಉತ್ತರದಿಕ್ಕಿಗೆ ಸಾಗಿದನು. ಆತನ ಹೃದಯದಲ್ಲಿ ತನ್ನ ಒಡೆಯನ ಸೇಡುತೀರಿಸಿಕೊಳ್ಳುವ ವಿಚಾರವು ಉತ್ಪನ್ನವಾಗಿ, ಅದು ಭರದಿಂದ ಬೆಳೆಯತೊಡಗಿತು.

****