ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಸಭಾಪರ್ವ: ೨ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾ೦ಗದಲಿ ರಣದಲಿ
ಕಲಿ ಜರಾಸ೦ಧನನು ಸೀಳಿದು ಬಿಸುಟನಾ ಭೀಮ||ಸೂ||

ಪದವಿಭಾಗ-ಅರ್ಥ: ಬಲಿಮಥನ (ಕೃಷ್ಣ) ಫಲುಗುಣರು ಸಹಿತ+ ಅಗ್ಗಳೆಯನು(ಶ್ರೇಷ್ಠ ವೀರನು)+ ಏಕಾ೦ಗದಲಿ(ಒಬ್ಬನೇ) ರಣದಲಿ(ಯುದ್ಧದಲ್ಲಿ) ಕಲಿ (ವೀರ) ಜರಾಸ೦ಧನನು ಸೀಳಿದು ಬಿಸುಟನು+ ಆ ಭೀಮ
ಅರ್ಥ:ಕೃತಯುಗದಲ್ಲಿ ವಾಮನಾವತಾರಮಾಡಿ ಬಲಿಯನ್ನು ಮಥನ- ಸೋಲಿಸಿದ ಕೃಷ್ಣನು ಭೀಮ ಫಲ್ಗುಣರು ಸಹಿತ ದಂಡೆತ್ತಿ ಹೋದಾಗ, ಅಲ್ಲಿ ಶ್ರೇಷ್ಠ ವೀರನಾದ ಆ ಭೀಮನು ಒಬ್ಬನೇ ಮಲ್ಲಯುದ್ಧದಲ್ಲಿ ವೀರ ಜರಾಸ೦ಧನನ್ನು ಸೀಳಿ ಬಿಸುಟನು. [೧][೨] [೩] [೪]

ರಾಜಸೂಯಕ್ಕೆ ಗೋವಿ೦ದನ ಮತದಲಿ ತೂಗಿ ನೋಡುವೆವಿದರ ತೂಕವನು ಎಂದ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲಮ೦ತ್ರಾಳೋಚನೆಗೆ ಭೂ
ಪಾಲ ಕರಸಿದನನುಜರನು ಧೌಮ್ಯಾದಿ ಮ೦ತ್ರಿಗಳ |
ಮೇಳವದ ತನಿವೆಳಗುಗಳ ಮಣಿ
ಮೌಳಿಮ೦ಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ದರಿತ್ರೀಪಾಲ, ಮ೦ತ್ರಾಳೋಚನೆಗೆ (ರಾಜತಂತ್ರದ ವಿಚಾರ ವಿಮರ್ಶೆಗೆ) ಭೂಪಾಲ ಕರಸಿದನು+ ಅನುಜರನು(ತಮ್ಮಂದಿರನ್ನು) ಧೌಮ್ಯ+ ಆದಿ ಮ೦ತ್ರಿಗಳ ಮೇಳವದ ತನಿವೆಳಗುಗಳ(ತನಿ- ಅತಿಶಯವಾದ ಬೆಳಗುಗಳ) ಮಣಿಮೌಳಿಮ೦ಡಿತರು ಕಿರೀಟಧಾರಿಗಳು)+ ಉಪ್ಪರದ(ಉನ್ನತಿ) ಪಡಿಸೂಳು(ಕಾಪು- ; ಆರ್ಭಟ, ಬೊಬ್ಬೆ ೪ ಆಧಿಕ್ಯ, ಹೆಚ್ಚಳ) ಪಾಯ+ ಅವಧಾರಿನಲಿ (ಎಚ್ಚರಿಕೆಯ ಕಾವಲಿವರ ಕೂಗು) ಹೊಕ್ಕರು ಸಭಾ ಸ್ಥಳವ. (ಪಡಿ- ಕಾಪು, ಅಂಕವಣಿ, ದ್ವಾರಬಂಧ)
ಅರ್ಥ:ಮುನಿ ವೈಶಂಪಾಯನು ಹೇಳಿದ,'ಕೇಳು ಜನಮೇಜಯ ರಾಜನೇ, ರಾಜಸುಯಯಾಗ ಮಾಡುವ ಯೋಜನೆಗೆ ರಾಜತಂತ್ರದ ವಿಚಾರ ವಿಮರ್ಶೆಗಾಗಿ ಭೂಪಾಲ ಧರ್ಮಜನು ತಮ್ಮಂದಿರನ್ನೂ, ಪುರೋಹಿತ ಧೌಮ್ಯ ಮೊದಲಾದವರನ್ನೂ, ಮ೦ತ್ರಿಗಳ ಮಂಡಲವನ್ನೂ, ಅತಿಕಾಂತಿಯ ಮಣಿಗಳ ಕಿರೀಟಧಾರಿಗಳಾದ ಸಾಮಂತ ರಾಜರನ್ನೂ ಕರಸಿದನು. ಬಲವಾದ ಕಾವಲಿನಲ್ಲಿ ಓಲಗದ ಆರ್ಭಟದೊಡನೆ ಕಾವಲಿನವರು 'ಅವಧಾರು' ಎಂದು ಎಚ್ಚರಿಕೆಯ ಕೂಗು ಹಾಕುತ್ತಿರಲು ಅವರು ಸಭಾ ಸ್ಥಳವನ್ನು ಹೊಕ್ಕರು.
ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾ೦ಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬ೦ದರೋಲಗಕೆ |
ನೃಪತಿ ಹದನೇನಮರ ಮುನಿವರ
ನುಪಚರಿತ ಮ೦ತ್ರಾರ್ಥ ಸಿದ್ದಿಗೆ
ರಪಣ ನಮಗು೦ಟೀಗ ಬೆಸಸೆ೦ದರು ಯುಧಿಷ್ಠಿರಗೆ || ೨ ||
ಪದವಿಭಾಗ-ಅರ್ಥ:ದ್ರುಪದ, ಧೃಷ್ಟದ್ಯುಮ್ನ, ಮತ್ಸ್ಯಾಧಿಪತಿ, ಕೇಕಯ, ಪಾ೦ಡವಾತ್ಮಜರು (ಪಾಂಡವರ ಮಕ್ಕಳು) ಪತಿಕಾರ್ಯ(ಹಿರಿಯರಮಾತಿನಲ್ಲಿ ಶ್ರದ್ಧೆಯುಳ್ಳವರ) ವಿಚಾರನಿಷ್ಠರು ಬ೦ದರ+ ಓಲಗಕೆ(ರಾಜಸಭೆಗೆ), ನೃಪತಿ ಹದನೇನು(ಕಾರಣ, ವಿಚಾರ ಏನು), ಅಮರ ಮುನಿವರನ (ಬೃಹಸ್ಪತಿ)+ ಉಪಚರಿತ ಮ೦ತ್ರಾರ್ಥ ಸಿದ್ದಿಗೆ ರಪಣ(ರಕ್ಷಿಸುವ ಸಾಧನ, ಸಹಾಯ,ಸಾಮರ್ಥ್ಯ) ನಮಗು೦ಟೆ+ ಈಗ ಬೆಸಸು(ಹೇಳು)+ ಎಂದರು ಯುಧಿಷ್ಠಿರಗೆ.
ಅರ್ಥ:ಆ ಸಭೆಗೆ ದ್ರುಪದ, ಧೃಷ್ಟದ್ಯುಮ್ನ, ಮತ್ಸ್ಯಾಧಿಪತಿ ವಿರಾಟ, ಕೇಕಯರಾಜ, ಹಿರಿಯರಮಾತಿನಲ್ಲಿ ಶ್ರದ್ಧೆಯುಳ್ಳವರಾದ ಪಾಂಡವರ ಮಕ್ಕಳು, ವಿಚಾರನಿಷ್ಠರು ರಾಜಸಭೆಗೆ ಬ೦ದರು. ಯುಧಿಷ್ಠಿರನನ್ನು ಕುರಿತು, ಅವರು ನೃಪತಿಯೇ, ವಿಚಾರ ಏನು? ವಿಶೇಷ ಜ್ಞಾನಿಗಳ (ಉಪಚಾರದ) ಸಮಾನ ಮ೦ತ್ರಾರ್ಥದ ಸಿದ್ಧಿಗಾಗಿ- ದೊಡ್ಡ ಕಾರ್ಯಸಾದನೆಗೆ ಸಾಧನ, ಸಹಾಯಮಾಡುವ ಕೆಲಸ ನಮಗು೦ಟೆ? ಈಗ ಅದೇನು ಹೇಳು ಎಂದರು.
ಧರೆ ನಮಗೆ ವಶವರ್ತಿ ಖ೦ಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ |
ಮರೆಸಿತೆ೦ಬುದು ಲೋಕವೀ ನಿ
ಬ್ಬರದ ಹೆಸರೆಮಗಿ೦ದು ಬೊಪ್ಪನ
ಸಿರಿಯನೇವಣ್ಣಿಸುವೆನೆ೦ದನು ಸುಯ್ದು ಯಮಸೂನು || ೩ ||
ಪದವಿಭಾಗ-ಅರ್ಥ: ಧರೆ ನಮಗೆ ವಶವರ್ತಿ ಖ೦ಡೆಯಸಿರಿ (ಶೌರ್ಯ ಸಾಮರ್ಥ್ಯ, ಖಂಡೆಯ - ಕತ್ತಿ) ನಮಗೆ ಮೈವಳಿ(ಹತ್ತಿರ, ಸಾಮರ್ಥ್ಯ) ಯುಧಿಷ್ಠಿರನ+ ಅರಸುತನ ನಳ ನಹುಷ ನೃಗ ಭರತಾದಿ ಭೂಮಿಪರ(ಭೂಮಿ- ಪ- ಪಾಲಿಸುವ ಮಹಾರಾಜರ ) ಮರೆಸಿತೆ೦ಬುದು ಲೋಕವು+ ಈ ನಿಬ್ಬರದ (ಅತಿಶಯ, ನಿರ್ಭರ) ಹೆಸರು+ ಎಮಗೆ+ ಇಂದು ಬೊಪ್ಪನ (ತಂದೆಯ)ಸಿರಿಯನು(ಸ್ವರ್ಗದಲ್ಲಿ ಸಂಪತ್ತು)+ ಏವಣ್ಣಿಸುವೆನು+ ಎ೦ದನು ಸುಯ್ದು ಯಮಸೂನು (ಧರ್ಮಜ).
ಅರ್ಥ:ಧರ್ಮಜನು,'ಈ ಭೂಮಿ- ರಾಜ್ಯವು ನಮಗೆ ನಮಗೆ ವಶವರ್ತಿಯಾಗಿದೆ; ಶೌರ್ಯ ಸಾಮರ್ಥ್ಯ ನಮ್ಮ ಬಳಿ ಇದೆ; ಯುಧಿಷ್ಠಿರನ ಅರಸುತನವು ನಳ, ನಹುಷ, ನೃಗ, ಭರತಾದಿ ಮಹಾರಾಜರ ಮರೆಸಿತೆ೦ಬುದು ಆಗಿಲ್ಲ. ಲೋಕದಲ್ಲಿ ಈ ಅತಿಶಯದ ಹೆಸರು ನಮಗೆ ಇಂದು ಇಲ್ಲದೆ, ತಂದೆಯ ಸಿರಿಯನ್ನು ಏನೆಂದು ಬಣ್ಣಿಸುವೆನು?,'ಎನ್ನುತ್ತಾ ಸುಯ್ದು-ಯಮಸೂನು ನಿಟ್ಟುಸಿರುಬಿಟ್ಟನು.
ಅಲ್ಲಿಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾ೦ಡು ಕ್ಷಿತೀಶ್ವರ
ನಿಲ್ಲಿವೈಭವಕೇನುಫಲ ನಾನವರ ಸದ್ಗತಿಗೆ |
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯ೦ಗೆ ಮಖವಿದು
ದುರ್ಲಭವು ಕೈ ಕೊ೦ಡೆವಾವುದು ಮ೦ತ್ರವಿದಕೆ೦ದ || ೪ ||
ಪದವಿಭಾಗ-ಅರ್ಥ: ಅಲ್ಲಿ ಸುರರಲಿ ಸುಪ್ರತಿಷ್ಠಿತನಲ್ಲ (ಗೌರವವುಳ್ಳವನಲ್ಲ) ಗಡ ಪಾ೦ಡು ಕ್ಷಿತೀಶ್ವರನು (ರಾಜ),+ ಇಲ್ಲಿ ವೈಭವಕೆ+ ಏನುಫಲ ನಾನು+ ಅವರ ಸದ್ಗತಿಗೆ ಇಲ್ಲಿ ರಚಿಸಿದ ರಾಜಸೂಯದಿಂ+ನೆ+ ಎಲ್ಲವಹುದು+ ಅಯ್ಯ೦ಗೆ ಮಖವಿದು(ಮಖವು ಇದು- ಯಾಗವು ಇದು) ದುರ್ಲಭವು, ಕೈಕೊ೦ಡೆವು+ ಆವುದು ಮ೦ತ್ರವು+ ಇದಕೆ+ ಎ೦ದ
ಅರ್ಥ:ಧರ್ಮಜನು,'ಅಲ್ಲಿ ದೇವಲೋಕದ ಸುರರ ಮಧ್ಯದಲ್ಲಿ ರಾಜ ಪಾಂಡು ಸುಪ್ರತಿಷ್ಠಿತನಲ್ಲ ಗಡ,- ಪಾ೦ಡು ಗೌರವವುಳ್ಳವನಲ್ಲ. ಇಲ್ಲಿ ನಾನು ವೈಭವದಿಂದ ಇರುವುದಕ್ಕೆ- ಇದ್ದು ಏನುಫಲ?- ಅರ್ಥವಿಲ್ಲ.- ಏನೂ ಫಲವಿಲ್ಲ. ನಾನು ಅವರ ಸದ್ಗತಿಗೆ ಇಲ್ಲಿ ಆಚರಿಸಿದ ರಾಜಸೂಯದಿಂದ ತಂದೆಗೆ ಅಲ್ಲಿ ಗೌರವ- ಎಲ್ಲವೂ ಆಗುವುದು.ಆದರೆ ಈ ಯಾಗವು ದುರ್ಲಭವು- ಸುಲಭಸಾಧ್ಯದ್ದಲ್ಲ. ಈ ಯಾಗಕ್ಕೆ ಮನಮಾಡಿ ಕೈಕೊ೦ಡೆವಾದರೆ, ಅದಕ್ಕೆ ಮುಂದಿನ ಯಾವುದು ಮ೦ತ್ರವು- ಕಾರ್ಯಸಾಧನೆಯ ಉಪಾಯಗಳೇನು?' ಎ೦ದ.
ಆಗಲಿದಕೇನರಸ ದೀಕ್ಷಿತನಾಗು
ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆ೦ದು |
ಆ ಗರುವರುಬ್ಬೇಳೆ ತಪ್ಪೇ
ನಾಗಲೀ ಗೋವಿ೦ದ ಮತದಲಿ
ತೂಗಿ ನೋಡುವೆವಿದರ ತೂಕವನೆ೦ದನಾ ಭೂಪ || ೫ ||
ಪದವಿಭಾಗ-ಅರ್ಥ: ಆಗಲಿ+ ಇದಕೇನು+ ಅರಸ ದೀಕ್ಷಿತನಾಗು, ನಿರುಪಮ ರಾಜಸೂಯಕೆ, ಭಾಗ (ಕಡಿಮೆ ಬೀಳುವ ಭಾಗದ ಧನವನ್ನು) ಧನವನು ಭೂಮಿಪರ ಸದೆದು+ ಎಳೆದು ತಹೆವು+ ಎಂದು ಆ ಗರುವರು (ಶ್ರೇಷ್ಠರು ಬಲಶಾಲಿಗಳು)+ ಉಬ್ಬಿ+ ಏಳೆ (ಉತ್ಸಾಹತೊರಲು) ತಪ್ಪೇನು+ ಆಗಲಿ+ ಈ ಗೋವಿ೦ದ ಮತದಲಿ ತೂಗಿ ನೋಡುವೆವು+ ಇದರ ತೂಕವನು+ ಎ೦ದನು+ ಆ ಭೂಪ.
ಅರ್ಥ:ಧರ್ಮಜನ ಪ್ರಶ್ನೆಗೆ ಅಲ್ಲಿದ್ದ ರಾಜರು,'ಆಗಲಿ ಇದಕ್ಕೇನು; ನಿರುಪಮ- ಶ್ರೇಷ್ಠವಾದ ರಾಜಸೂಯಕ್ಕೆ ಅರಸನೇ ದೀಕ್ಷಿತನಾಗು; ಭೂಮಿಪರಾದ ರಾಜರನ್ನು ಹೊಡೆದು ಸೋಲಿಸಿ ಕಡಿಮೆ ಬೀಳುವ ಭಾಗದ ಧನವನ್ನು ಎಳೆದು ತರುವೆವು,' ಎಂದು ಆ ಶ್ರೇಷ್ಠರಾದ ಅರಸರು ಉತ್ಸಾಹತೊರಲು, ಧರ್ಮಜನು ನೀವು ಹೇಳಿದ್ದರಲ್ಲಿ ತಪ್ಪೇನು- ತಪ್ಪಿಲ್ಲ. ಆಗಲಿ. ಆದರೂ ಈ ಮಹತ್ಕಾರ್ಯದ ಭಾರವನ್ನು, ಈ ನಮ್ಮ ಗೋವಿ೦ದ- ಕೃಷ್ಣನ ಆಭಿಪ್ರಾಯದ ತಕ್ಕಡಿಯಲ್ಲಿ ಇದರ ತೂಕವನ್ನು ನಾವು ತೂಗಿ ನೋಡುವೆವು (ನಮಗೆ ಇದರ ಭಾರವನ್ನು ಹೊರಲು ಸಾಧ್ಯವೇ ಎಂದು) ಎ೦ದನು, ಆ ಭೂಪಾಲ ಧರ್ಮಜ.

ಇಂದ್ರಪ್ರಸ್ಥಕ್ಕೆ ಕೃಷ್ಣನ ಅಗಮನ - ಯಾಗಕ್ಕೆ ವಿರೋಧಿಗಳ ವಿವರ[ಸಂಪಾದಿಸಿ]

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣ ಭವನ
ಸ್ಥಳದಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ |
ಒಳಗೆ ಬ೦ದನು ಪಾವುಡವ ಮು೦
ದಿಳುಹಿದನು ಕೃಷ್ಣ೦ಗೆ ಪಾ೦ಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ || ೬ ||
ಪದವಿಭಾಗ-ಅರ್ಥ: ಕಳುಹಿದನು ಸಾರಥಿಯನು+ ಆ ರಥ ಕೆಲವು ದಿವಸಕೆ ಕೃಷ್ಣ ಭವನಸ್ಥಳದ(ಅರಮನೆಯ) ಹೊರ ಬಾಹೆಯಲಿ (ಬದಿ)ಚಾಚಿತು ಚಪಳ ಗಮನದಲಿ (ಅತಿ ವೇಗದಲ್ಲಿ), ಒಳಗೆ ಬ೦ದನು ಪಾವುಡವ(ತಲೆಗೆ ಸುತ್ತುವ ವಸ್ತ್ರ, ಪೇಟ) ಮು೦ದೆ+ ಇಳುಹಿದನು ಕೃಷ್ಣ೦ಗೆ ಪಾ೦ಡವ ತಿಲಕನು+ ಅಟ್ಟಿದ(ಕಳುಹಿಸಿದ) ಹದನ(ವಿಚಾರ) ಬಿನ್ನಹ ಮಾಡಿದನು(ವಿಜ್ಞಾಪನೆ- ವಿನಯಪೂರ್ವಕ ಹೇಳುವುದು) ಬಳಿಕ.
ಅರ್ಥ:ಯುಧಷ್ಠಿರನು ದ್ವಾರಕೆಗೆ ಸಾರಥಿಯನ್ನು ಕಳುಹಿಸಿದನು. ಸಾರಥಿಯೊಡನೆ ಆ ರಥ ಕೆಲವು ದಿವಸಕ್ಕೆ ಅತಿವೇಗದಲ್ಲಿ ಚಲಿಸಿ ಕೃಷ್ಣನ ಅರಮನೆಯ ಹೊರಬದಿಯಲ್ಲಿ ಚಾಚಿ ನಿಂತಿತು. ಸಾರಥಿಯು ಕೃಷ್ಣನ ಅರಮನೆಯ ಒಳಗೆ ಬ೦ದನು. ತನ್ನ ಪೇಟವನ್ನು ಗೌರವ ಪೂರ್ವಕವಾಗಿ ಮು೦ದೆ ಇಳುಹಿ ಇಟ್ಟನು. ಬಳಿಕ ಕೃಷ್ಣನಿಗೆ ಪಾ೦ಡವತಿಲಕ ಧರ್ಮಜನು ಕಳುಹಿಸಿದ ವಿಚಾರವನ್ನು ಬಿನ್ನಹಮಾಡಿದನು.
ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕ೦ಸನ ಮಾವನ೦ತಿವರ |
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ || ೭ ||
ಪದವಿಭಾಗ-ಅರ್ಥ: ತಿಳಿದನು+ ಅಲ್ಲಿಯ ರಾಜಕಾರ್ಯದ ನೆಲೆಯನು+ ಅಕ್ರೂರ+ ಆದಿ ಸಚಿವರ ತಿಳುಹಿದನು, ಶಿಶುಪಾಲ, ಕ೦ಸನ ಮಾವನ+ ಅ೦ತು+ ಇವರ ಕೊಲುವಡಿದು ಹದ ನಮ್ಮ ಭಾವನ ನಿಳಯದ+ ಉತ್ಸಹ ಸೌಮನಸ್ಯವ() ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ.
ಅರ್ಥ:ಕೃಷ್ಣನು ಧರ್ಮರಾಯನ ಮುಂದಿನ ರಾಜಸೂಯ ಯಾಗದ ಕಾರ್ಯದ ವಿಷಯವನ್ನು ತಿಳಿದನು. ಅಲ್ಲಿಯ ರಾಜಕಾರ್ಯದ ನೆಲೆಯನನ್ನು - ಹೊಣೆ ಮತ್ತು ಕಷ್ಟವನ್ನು ಅಕ್ರೂರ ಮೊದಲಾದ ಸಚಿವರಿಗೆ ತಿಳುಹಿದನು. ಶಿಶುಪಾಲ, ಕ೦ಸನ ಮಾವ ಜರಾಸಂಧ ಇವರನ್ನು ಅ೦ತು- ಕೊನೆಗೆ ಇವರನ್ನು ಕೊಲ್ಲುವುದಾದರೆ ಇದು ಹದವಾದ ಸಮಯ ಎಂದುಕೊಂಡನು. ನಮ್ಮ ಭಾವ ಧರ್ಮಜನ ನಿಲಯದ ಕಾರ್ಯದಲ್ಲಿ ಉತ್ಸಾಹ ಮತ್ತು ಸೌಮನಸ್ಯವ- ಮನಸಾರೆ ಕೆಲಸಮಾಡಲು ನಮ್ಮ ಸಹಾಯ ಬಳಸುವುದಾದರೆ ಸರಿಯಾದ ಹೊತ್ತು ಇದು; ನಮ್ಮ ಮನೋರಥ- ಬಯಕೆಯ ಸಿದ್ದಿಯೂ ನಮಗೆ ಆಗುವುದು ಎ೦ದ.
ಎ೦ದು ವಸುದೇವಾದಿ ಯಾದವ
ವೃ೦ದವನು ಬಲಭದ್ರ ರಾಮನ
ಹಿ೦ದಿರಿಸಿ ಬಳಿಕಿ೦ದ್ರಸೇನನ ಕೂಡೆ ವೊಲವಿನಲಿ |
ಬ೦ದನಿ೦ದ್ರಪ್ರಸ್ಥ ಪಟ್ಟಣ
ಕ೦ದು ವೊಸಗೆಯ ಗುಡಿಯ ತೋರಣ
ದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ || ೮ ||
ಪದವಿಭಾಗ-ಅರ್ಥ: ಎ೦ದು ವಸುದೇವ+ ಆದಿ ಯಾದವವೃ೦ದವನು(ಯಾದವರ ಸಮೂಹವನ್ನು) ಬಲಭದ್ರ ರಾಮನ ಹಿ೦ದಿರಿಸಿ(ದ್ವಾರಕೆಯಲ್ಲಿ ಕಾವಲಿರಿಸಿ ಬಳಿಕ+ ಇ೦ದ್ರಸೇನನ ಕೂಡೆ ವೊಲವಿನಲಿ (ಪ್ರೀತಿಯಿಂದ) ಬ೦ದನು+ ಇ೦ದ್ರಪ್ರಸ್ಥ ಪಟ್ಟಣಕೆ+ ಅ೦ದು ವೊಸಗೆಯ(ಹೇಳಿಕೆಯ ಬರವಿಗೆ) ಗುಡಿಯ(ಬಾವುಟ) ತೋರಣದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ.
ಅರ್ಥ:ಪಾಂಡವರಿಗೆ ಸಹಾಯ ಮಾಡಲು ತಕ್ಕಸಮಯ ಎ೦ದುಕೊಂಡು ಕೃಷ್ಣನು ವಸುದೇವ ಮೊದಲಾದ ಯಾದವರ ಸಮೂಹವನ್ನು ಕರೆದುಕೊಂಡು, ಬಲಭದ್ರ ರಾಮನನ್ನು ದ್ವಾರಕೆಯಲ್ಲಿ ಕಾವಲಿರಿಸಿ, ಬಳಿಕ ಸಾರಥಿ ಇ೦ದ್ರಸೇನನ ಕೂಡೆ ಒಲವಿನಿಂದ ಇ೦ದ್ರಪ್ರಸ್ಥ ಪಟ್ಟಣಕ್ಕೆ ಬ೦ದನು. ಅವನು ಬಂದಾಗ, ಇಂದ್ರಪ್ರಸ್ಥದಲ್ಲಿ ಅ೦ದು ತಮ್ಮ ಕರೆಯಹೇಳಿಕೆಯ ಬರವಿಗೆ ಹಬ್ಬದಂತೆ ಅವನನ್ನು ಎದುರುಗೊಳ್ಳಲು ಬಾವುಟಗಳ ಮತ್ತು ತೋರಣದಿ೦ದ ಕನ್ನಡಿ ಕಳಶದೊಡನೆ ಬರಮಾಡಿಕೊಂಡು ಕೃಷ್ನನನ್ನು ಕೊ೦ಡಾಡಿದರು. (ಕರೆದಾಕ್ಷಣ ಬಂದನಲ್ಲವೇ!)
ಪುರಕೆ ಬಿಜಯ೦ಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊ೦ಡು ಬಾಂಧವ ಜನವನುಚಿತದಲಿ |
ಹರಸಿ ಮಧುರ ಪ್ರೀತಿಯಿ೦ದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ || ೯||
ಪದವಿಭಾಗ-ಅರ್ಥ: ಪುರಕೆ ಬಿಜಯ೦ಗೈಸಿ (ಆದರದಿಂದ ಬರಮಾಡಿಕೊಂಡು) ತಂದರು ಹರಿಯನು+ ಅರಮನೆಗೆ+ ಅನಿಬರು (ಎಲ್ಲರೂ)+ ಅಂತಃಪುರದ ಕಾಣಿಕೆಗೊ೦ಡು (ಬಂದು) ಬಾಂಧವ ಜನವನು+ ಉಚಿತದಲಿ ಹರಸಿ ಮಧುರ ಪ್ರೀತಿಯಿ೦ದ+ ಆದರಿಸಿ ಮಂತ್ರಾಳೋಚನೆಯ(ರಹಸ್ಯ ಮಾತುಕತೆಯ) ಮಂದಿರದೊಳು+ ಏಕಾಂತದಲಿ ಭೂಪತಿಗೆ+ ಎಂದನು+ ಅಸುರಾರಿ.
ಅರ್ಥ:ರಾಜ ಧರ್ಮಜ ಮತ್ತು ಸೋದರರು ಕೃಷ್ಣನನ್ನು ಇಂದ್ರಪ್ರಸ್ಥ ಪುರಕ್ಕೆ ಆದರದಿಂದ ಬರಮಾಡಿಕೊಂಡು ಕರೆತಂದರು. ಅವರೆಲ್ಲರೂ ಅರಮನೆಗೆ ಬಂದು ಅಂತಃಪುರದಲ್ಲಿ ಕಾಣಿಕೆಯನ್ನು ಪಡೆದು ಬಂಧುಬಾಂಧವ ಜನರನ್ನು ಉಚಿತವಾಗಿ ಹರಸಿ, ಮಧುರಪ್ರೀತಿಯಿ೦ದ ಆದರಿಸಿ, ರಹಸ್ಯ ಮಾತುಕತೆಯ ಏಕಾಂತ ಮಂದಿರಕ್ಕೆ ಹೋಗಿ, ಅಲ್ಲಿ ಭೂಪತಿ ಧರ್ಮಜನಿಗೆ ಅಸುರಾರಿ ಕೃಷ್ಣನು ಹೀಗೆಂದನು;
ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶ೦ಕಿತವೇನು ಸಂಸ್ಖಲಿತ |
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲುಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ || ೧೦ ||
ಪದವಿಭಾಗ-ಅರ್ಥ: ಏನು ಕರೆಸಿದಿರೈ, ಪ್ರಯೋಜನವೇನು, ನಿಮ್ಮ+ ಉತ್ಸಾಹ ಶಕ್ತಿಯೊಳು+ ಏನು ದುರ್ಘಟವು+ ಏನು ಶ೦ಕಿತವು+ ಏನು ಸಂಸ್ಖಲಿತ ದಾನವರ ಕೌರವರ ವೈರದೊಳು+ ಏನು ವಿಗ್ರಹವಿಲ್ಲಲೇ (ಯುದ್ಧ, ವಿರೋಧ), ಹದನೇನು ವಿಚಾರವೇನು+ ಎನಲು ಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ.
ಅರ್ಥ:ಕೃಷ್ಣನು ವಿವರವಾಗಿ ತಿಳಿದುಕೊಳ್ಳಲು ದರ್ಮಜನನ್ನು ಕುರಿತು,'ಏನು ಕಾರಣ ನನ್ನನ್ನು ಕರೆಸಿದಿರಿ?, ನನ್ನಿಂದ ಏನು ಪ್ರಯೋಜನವಾಗಬೇಕು?, ನಿಮ್ಮ ಉತ್ಸಾಹ, ಶಕ್ತಿಯಲ್ಲಿ ಏನಾದರೂ ದುರ್ಘಟನೆಯಾಯಿತೆ? ಏನು ಶ೦ಕಾಸ್ಪವಾದುದು ಏನಾದರೂ ಇದೆಯೇ? ಸಂಸ್ಖಲಿತ- ಮೇಲೆಬಿದ್ದ, ನುಗ್ಗಿಬಂದ ದಾನವರಿಂದ, ಅಥವಾ ಕೌರವರ ವೈರತ್ವದಿಂದ ಏನು ಉಪಟಳವಿಲ್ಲ ಅಲ್ಲವೇ? ವಿಚಾರವೇನು? ಎನ್ನಲು, ಕೃಷ್ಣನಿಗೆ ನೃಪತಿ ಧರ್ಮಜನು ವಿನಯದಲ್ಲಿಹೀಗೆ ಹೇಳಿದನು.
ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾ೦ಗದಲಿ |
ಮುನಿಯಹೇಳಿಕೆ ಬೊಪ್ಪಗಮರೇ೦
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆ೦ದ || ೧೧ ||
ಪದವಿಭಾಗ-ಅರ್ಥ: ದನುಜರಲಿ ಕುರುಸೇನೆಯಲಿ ಭಯವು+ ಎನಗೆ, ಭಾರಿಯೆ ನಿಮ್ಮ ಘನ ಪದವನಜವು+ ಇದು ಸೀಸಕವಲೇ (ಕವಚ) ತನ್ನ+ ಉತ್ತಮಾ೦ಗದಲಿ(ಎದೆ- ತಲೆ), ಮುನಿಯ ಹೇಳಿಕೆ ಬೊಪ್ಪಗೆ+ ಅಮರೇ೦ದ್ರನಲಿ ಸಮರಸವಿಲ್ಲ ಗಡ, ನಮ್ಮ+ ಇನಿಬರಲಿ ಸಾಮರ್ಥ್ಯವಿದ್ದುದಕೆ+ ಏನು ಫಲವೆ೦ದ.
ಅರ್ಥ:ಕೃಷ್ಣನ ಪ್ರಶ್ನೆಗೆ, ಧರ್ಮಜನು,'ದನುಜರು ಯಾ ರಾಕ್ಷಸರಿಂದಾಗಲಿ, ಕುರುಸೇನೆಯಿಂದಾಗಲಿ ನನಗೆ ಭಯವಿಲ್ಲ. ಭಾರಿಯೆ, ನಿಮ್ಮ ಘನವಾದ ಪಾದಕಮಲವು ಇದು ಇರುವಾಗ, ನನಗೆ ನನ್ನ ಎದೆ- ತಲೆಗೆ ಸೀಸಕವ ಕವಚದಂತಿದೆ. ಮುಖ್ಯವಾಗಿ ಇಲ್ಲಿಗೆ ಬಂದ ನಾರದ ಮುನಿಯ ಹೇಳಿಕೆಯಂತೆ ನನ್ನ ತಂದೆಗೆ ಸ್ವರ್ಗದ ಅಮರೇ೦ದ್ರನ ಆಸ್ಥಾನದಲ್ಲಿ ಮಹಾರಾಜರ ಜೊತೆ ಸಮರಸವಿಲ್ಲ ಗಡ, ಸಮಾನ ಸ್ಥಾನವಿಲ್ಲ. ಅವನು ಚಿಂತಿತನಾಗಿದ್ದಾನೆ. ನಮ್ಮ ಈ ಐವರು ಪಾಂಡವರಲ್ಲಿ ಸಾಮರ್ಥ್ಯವಿದ್ದುದಕ್ಕೆ ಏನು ಫಲಮ ಏನು ಉಪಯೊಗ,' ಎ೦ದ.
ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆ೦ದು ಮುನಿಯುಪದೇಶಿಸಿದ ತನಗೆ |
ಕ್ರತು ಮಹಾಕ್ರತು ಸಕಲ ಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸ೦ಕಲ್ಪವಾಯ್ತಿದಕೇನು ಹದನೆ೦ದ || ೧೨ ||
ಪದವಿಭಾಗ-ಅರ್ಥ: ಪಿತನ(ತಂದೆಯ) ಪರಮಪ್ರೀತಿಗೆ (ಪ್ರೀತಿಯಾಗಲು)+ ಉನ್ನತ ಗತಿಗೆ ನಿರ್ಮಳ ರಾಜಸೂಯ ಕ್ರತುವೆ ಸಾಧನವೆ೦ದು ಮುನಿಯು+ ಉಪದೇಶಿಸಿದ ತನಗೆಕ್ರತು ಮಹಾಕ್ರತು ಸಕಲ ಧರಣೀಪತಿಗಳ (ರಾಜರ)+ ಅರ್ಥವ( ಧನ- ಸಂಪತ್ತು) ಗುಣದಲಿ (ಸುಲಬದಲ್ಲಿ ಸಾಮಗುನದಲ್ಲಿ)+ ಈಯರು (ಕೊಡರು), ವ್ರತವೆನಗೆ ಸ೦ಕಲ್ಪವಾಯ್ತು+ ಇದಕೇನು ಹದನ+ ಎ೦ದ.
ಅರ್ಥ:ಧರ್ಮಜನು ಕೃಷ್ನನ್ನು ಕುರಿತು, ತನ್ನ ತಂದೆಗೆ ಪರಮಪ್ರೀತಿಗಯಾಗಲು ಮತ್ತು ಉನ್ನತ ಗತಿಗೆ, ನಿರ್ಮಲವಾದ ಶ್ರೇಷ್ಠ ರಾಜಸೂಯ ಕ್ರತುವನ್ನು ಮಾಡುವುದು ಸಾಧನವೆ೦ದು ಮುನಿಯು ಉಪದೇಶಿಸಿದನು. ತನಗೆ ಮಹಾಕ್ರತು- ಯಾಗ ಮಾಡಲು ಸಂಪತ್ತು ಬೇಕು; ಸಕಲ ರಾಜರು ಧನ - ಸಂಪತ್ತನ್ನು ಸಾಮಗುಣದಿಂದ ಕೇಳಿದರೆ ಕೊಡುವುದಿಲ್ಲ. ಈ ವ್ರತವನ್ನು ಮಾಡಬೇಕೆಂದು ನನಗೆ ಮನಸ್ಸಿನಲ್ಲಿ ಸ೦ಕಲ್ಪವಾಯ್ತು. ಇದಕ್ಕೆ ಏನು ಹದನ- ಪರಿಹಾರ,' ಎ೦ದ.
ತಿರುಗಿದರೆ ಸ೦ಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ |
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವ ಸಾ
ಗರದಿನಿದು ಮಿಗಿಲೇ ಮುರಾ೦ತಕಯೆ೦ದನಾ ಭೂಪ || ೧೩ ||
ಪದವಿಭಾಗ-ಅರ್ಥ:ತಿರುಗಿದರೆ ಸ೦ಕಲ್ಪ ಹಾನಿಯ, ಪರಮ ಪಾತಕವು+ ಇದು ಮಹಾ ನಿಷ್ಠುರದ ಮಖವು+ ಇನ್ನು+ ಅಮರ ಮುನಿಪತಿ ದೇವಲೋಕದಲಿ ಹರಹುವನು(ಪ್ರಚಾರಮಾಡುವನು), ಪರಿಹಾಸ್ಯಮಯ ಸಾಗರವ(ಸಮುದ್ರ) ದಾಟಿಸು ಜೀಯ ಭವ ಸಾಗರದಿಂ+ ನಿ+ ಇದು ಮಿಗಿಲೇ ಮುರಾ೦ತಕ+ ಯೆ+ ಎ೦ದನು+ ಆ ಭೂಪ.
ಅರ್ಥ:ಧರ್ಮಜನು ತಾನು ಮನಸ್ಸಿನಲ್ಲಿ ಸಂಕಲ್ಪ ಮಾಡಿ, ಯಾಗ ಮಾಡದೆ ಹಿಂತಿರುಗಿದರೆ ಸ೦ಕಲ್ಪ ಹಾನಿಯಾಗುವುದು. ಅದು ಪರಮ ಪಾತಕವು- ಕೆಡುಕು. ಇದು ಮಹಾ ನಿಷ್ಠುರದ ಯಾಗವು, ಬಲಿಷ್ಠರಾಜರನ್ನು ಎದುರಿಸಬೇಕಾಗುವುದು. ಇನ್ನು ಅಲ್ಲಿ ಅಮರಮುನಿಪತಿ- ನಾರದನು ದೇವಲೋಕದಲ್ಲಿ ನಮ್ಮ ದೌರ್ಬಲ್ಯವನ್ನು ಹರಹುವನು. ಈ ಪರಿಹಾಸ್ಯಮಯ ಸಾಗರವನ್ನು ಮುರಾ೦ತಕ ಕೃಷ್ಣಾ ದಾಟಿಸು, ಜೀಯ ಈ ಭವ ಸಾಗರದಿಂದ ರಾಟಿಸು. ಇದು ನಿನಗೆ ದೊಡ್ಡದೇ,' ಎ೦ದನು.
ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು |
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಗೆಯಾಯ್ತೆನುತ ತೂಗಿದನು ಸಿರಿಮುಡಿಯ || ೧೪ ||
ಪದವಿಭಾಗ-ಅರ್ಥ: ನಕ್ಕನು+ ಅಸುರವಿರೋಧಿ ಮುನಿ ಹಾಯಿಕ್ಕಿದನಲಾ (ಹಾಯ್+ ಇಕ್ಕಿದನಲ್ಲಾ) ಬಲೆಯನು+ ಅಕಟಾ ಸಿಕ್ಕಿದಿರಲಾ ಸ್ವಾಮಿದ್ರೋಹರು (ದುಷ್ಟರಾಜರು) ಸದರವೇ (ಆದರೆ ಅವರು ಸುಲಭದಲ್ಲಿ ವಶರಾಗುವರೇ?) ನೃಪರು ಅಕ್ಕಜದ (ಅಕ್ಕರೆಯ/, ಹೊಟ್ಟೆಕಿಚ್ಚು, ಆಶ್ಚರ್ಯ, ಪ್ರೀತಿ) ಮಖವು (ಯಜ್ಞವು)+ ಇದರ(ಕಷ್ಟಗಳ - ದುಷ್ಟರಾಜರ) ಚೂಣಿಗೆ (ಎದುರು? ಯುದ್ಧದಲ್ಲಿ ಮುಂದೆ ಇರುವ ಸೈನ್ಯ) ಚುಕ್ಕಿಯಾಯಿತು(ಸುಲಭವೆಂದು,ಯಾಗ ಗಟ್ಟಿ ಕೂತಿತು) ಮನ ಮಹೀಶನ ಮಕ್ಕಳಾಟಿಗೆಯಾಯ್ತು (ಹಾಸ್ಯಸ್ಪದವಾಯ್ತು)+ ಎನುತ ತೂಗಿದನು ಸಿರಿಮುಡಿಯ(ತಲೆಯನ್ನು)
ಅರ್ಥ: ಅಸುರವಿರೋಧಿ ಕೃಷ್ಣನು ಧರ್ಮಜನ ಮಾನ್ನು ಕೇಳಿ ನಕ್ಕನು. ಈ ನಾರದ ಮುನಿ ಧರ್ಮಜನಿಗೆ ಬಲೆಯನ್ನು ಬೀಸಿ ಹಿಡಿದ, ಅಕಟಾ ಇವರು ಅದರಲ್ಲಿ ಸಿಕ್ಕಿಕೊಂಡದರು. ಸ್ವಾಮಿದ್ರೋಹಿಗಳಾದ ದುಷ್ಟರಾಜರು ಸುಲಭದಲ್ಲಿ ವಶರಾಗುವರೇ?. ತಂದೆಯಮೇಲಿನ ಅಕ್ಕರೆಯಿಂದ ಮಾಡುವ ಯಾಗದ ಎದುರು, ಈ ರಾಜರನ್ನು ಎದುರಿಸುವ ಕಷ್ಟವು ಚುಕ್ಕಿಯಾಯಿತು- ಚುಕ್ಕಿಯಂತೆ ಚಿಕ್ಕದಾಗಿ ಕಂಡಿತು. ಯಾಗದ ವಿಷಯ ಸುಲಭದಲ್ಲಿ ಮಹೀಶನ ಮನಸ್ಸಿನಲ್ಲಿ ಗಟ್ಟಿ ಕೂತಿತು, ಎಂದು ತನ್ನ ಮನಸ್ಸಿನಲ್ಲಿ ಯೋಚಿಸಿ; ಇದು ಮಕ್ಕಳಾಟಿಕೆಯಂತೆ ಹಾಸ್ಯಸ್ಪದವಾಯ್ತು ಎನ್ನುತ್ತಾ ತನ್ನ ಸಿರಿಮುಡಿಯನ್ನು ತೂಗಿದನು.
ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮು೦ದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿ೦ದು ಬಿದ್ದ ವಿಘಾತಿ ಬಲುಹೆ೦ದ ೧೫
ಪದವಿಭಾಗ-ಅರ್ಥ: ಕೆದರಿ (ಬೆದಕು ಚೆದರಿಸು- ಕೆಣಕಿ) ಸಪ್ತದ್ವೀಪಪತಿಗಳ ಸದೆದು (ಯುದ್ಧದಲ್ಲಿ ಸೋಲಿಸಿ) ರಚಿಸುವ ರಾಜಸೂಯದ ಹದನನು (ಕಾರ್ಯವನ್ನು, ವಿಚಾರವನ್ನು)+ ಅಂಗೈಸುವನು (ಸಾಧಿಸುವವನು)+ ಅದು+ ಆರು (ಯಾರು)+ ಈ ವರ್ತಮಾನದಲಿ; ಸುದತಿಯರ ಸೂಳೆಯರ ಮು೦ದೆ+ ಉಬ್ಬಿದೆಯಲಾ (ಶಕ್ತಿತೋರಿದೆಯಲ್ಲಾ- ಮಿತಿಮೀರಿ ಒಪ್ಪಿದೆ) ನಾರದನ ಘಲ್ಲಣೆಗೆ (ಕಾಟ, ತೊಂದರೆ)+ ಇದು ಸುದುರ್ಘಟವು+ ಇ೦ದು ಬಿದ್ದ ವಿಘಾತಿ(ನಾಶ) ಬಲುಹು (ದೊಡ್ಡದು, ಸಾಮರ್ಥ್ಯ)+ ಎ೦ದ.
ಅರ್ಥ:ಕೃಷ್ನನು ಧರ್ಮಜನನ್ನು ಕುರಿತು,'ಸಪ್ತದ್ವೀಪಪತಿಗಳಾದ ರಾಜರನ್ನು ಯುದ್ಧದಲ್ಲಿ ಸೋಲಿಸಿ, ರಚಿಸುವ-ಮಾಡುವ ರಾಜಸೂಯದ ಕಾರ್ಯವನ್ನು ಸಾಧಿಸುವವನು ಈ ವರ್ತಮಾನದಲ್ಲಿ ಅದು ಯಾರು ಇದ್ದಾರೆ? ರಾಜನೇ ನಾರದನು ಹೇಳಿದನು ಎಂದು ಕಾರ್ಯ ನೆಡೆಸಲು ಸಂಕಲ್ಪಿಸಿ, ಸುದತಿಯರ ಸೂಳೆಯರ ಮು೦ದೆ ನೀನು ಉಬ್ಬಿದೆಯಲ್ಲಾ! ಇದು ಸರಿಯೇ? ನಾರದನ ಕಾಟದಿಂದ ಬಂದ ಇದು ಒಂದು ಸುದುರ್ಘಟನೆಯು (ಶುಭವಾದ ದುರ್ಘಟನೆಯು). ಇ೦ದು ಮೇಲೆಬಿದ್ದ ಯುದ್ಧದ ವಿನಾಶ ಬಲುದೊಡ್ಡದು,' ಎ೦ದ.
ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನುಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು |
ಕುದುಕುಳಿಗಳೀಚೆಯಲಿ ಕ೦ಸನ
ಮುದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆ೦ದ || ೧೬ ||
ಪದವಿಭಾಗ-ಅರ್ಥ: ಮೊದಲಲೇ ನಿಮ್ಮವರು ನಿಮ್ಮ+ ಅಭ್ಯುದಯವನು ಸೇರುವರೆ ಕೌರವರು+ ಅದರೊಳು+ ಅಗ್ಗದ ಕರ್ಣ ಶಕುನಿ ಜಯದ್ರಥಾದಿಗಳು, ಕುದುಕುಳಿಗಳು(ದ್ವೇಷಿಸುವರು, ವ್ಯಾಕುಲ ಮನಸ್ಸಿನವನು, ಅಸೂಯಾಪರರು)+ ಈಚೆಯಲಿ ಕ೦ಸನ ಮುದಮುಖನ(ಗರ್ವಿಷ್ಠ) ಪರಿವಾರವಿದೆ, ದೂರದಲಿ ಮಗಧನ ಹೊರೆಯಲಿ+ ಅದನೇ ಬಣ್ಣಿಸುವೆನು+ ಎ೦ದ.
ಅರ್ಥ:ಕೃಷ್ಣನು ಧರ್ಮಜನನ್ನು ಕುರಿತು,'ಮೊದಲಲ್ಲೇ ನಿಮ್ಮವರು ವಿರೋಧಿಗಳು; ಕೌರವರು ನಿಮ್ಮ ಅಭ್ಯುದಯವನ್ನು ಹಿತದಿಂದ ಸೇರುವರೆ? ಸಹಿಸುವರೇ? ಅದರಲ್ಲಿ ಉತ್ತಮ ವೀರರಾದ ಕರ್ಣ ಶಕುನಿ ಜಯದ್ರಥ ಮೊದಲಾದವರು ಇದ್ದಾರೆ. ಅವರು ಅಸೂಯಾಪರರು. ಈಚೆಯಲ್ಲಿ ಕ೦ಸನ ಗರ್ವಿಷ್ಠ ಪರಿವಾರವಿದೆ, ದೂರದಲ್ಲಿ ಮಗಧನ ಹೊರೆ- ಭಾರದ- ಬಲಿಷ್ಟ ವೀರನಿದ್ದಾನೆ, ಅದನ್ನು ಏನೆಂದು ಬಣ್ಣಿಸುವೆನು!' ಎ೦ದ.
ಕಾಲಯವನಾ ದ೦ತವಕ್ರ ನೃ
ಪಾಲರಲಿ ದುರುದು೦ಬಿಯೈ ಶಿಶು
ಪಾಲ ಪೌ೦ಡ್ರಕರೆ೦ಬರಿಗೆ ಸಮದ೦ಡಿಯೆಮ್ಮೊಡನೆ |
ಖೂಳರೀರ್ವರು ಹ೦ಸ ಡಿಬಿಕರು
ಸಾಲುವನ ಮುರ ನರಕರಾಳನ
ಮೇಳವವನೇನೆ೦ಬೆನೈ ಭೂಪಾಲ ಕೇಳೆ೦ದ || ೧೭ ||
ಪದವಿಭಾಗ-ಅರ್ಥ:ಕಾಲಯವನ+ ಆ ದ೦ತವಕ್ರ ನೃಪಾಲರಲಿ (ರಾಜರಲ್ಲಿ) ದುರುದು೦ಬಿಯೈ(ಅಪಾಯಕಾರಿ ಗುಂಗೆಹುಳ) ಶಿಶುಪಾಲ ಪೌ೦ಡ್ರಕರು+ ಎ೦ಬರಿಗೆ ಸಮದ೦ಡಿಯು+ ಎಮ್ಮೊಡನೆ; ಖೂಳರು+ ಈರ್ವರು ಹ೦ಸ ಡಿಬಿಕರು(ಡಿಬಿಕ-ಜರಾಸಂದನ ಮಂತ್ರಿ ಹಂಸನ ಸಹೋದರ) ಸಾಲುವನ(ಸಾಲ್ವ) ಮುರ ನರಕರ+ ಆಳನ (ಗಾಢ) ಮೇಳವವನು (ಜೊತೆಯನ್ನು)+ ಏನೆ೦ಬೆನೈ ಭೂಪಾಲ ಕೇಳೆ೦ದ.
ಅರ್ಥ:ಕೃಷ್ಣನು,'ಕಾಲಯವನ, ಆ ದ೦ತವಕ್ರ, ರಾಜರಲ್ಲಿ ಅಪಾಯಕಾರಿ ಹುಳಗಳು; ಶಿಶುಪಾಲ ಪೌ೦ಡ್ರಕರು ಎ೦ಬುವವರಿಗೆ ನಮ್ಮೊಡನೆ ಸಮದ೦ಡಿಯು- ವಿರೋಧವು. ಹ೦ಸ ಡಿಬಿಕರು ಈರ್ವರು ಖೂಳರು. ಸಾಲ್ವನ ಮುರನ ನರಕರ ಗಾಢ ಜೊತೆಯನ್ನು ಏನೆ೦ಧು ಹೇಳಲಿ ಭೂಪಾಲನೇ ಕೇಳು,'ಎಂದ.
ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭ೦ಗಕೆ ಬ೦ದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು |
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆ೦ದ || ೧೮ ||
ಪದವಿಭಾಗ-ಅರ್ಥ: ಕೆಲವರು+ ಇದರೊಳು ನಮ್ಮ ಕೈಯಲಿ ಕೊಲೆಗೆ ಭ೦ಗಕೆ ಬ೦ದು ಬಿಟ್ಟರು, ಕೆಲಕೆ ಸರಿವವನಲ್ಲ(ಎದುರು ನಿಂತರೆ ಬಿಡುವವನಲ್ಲ) ಮಲೆವರ(ಎದುರಿಸಿದವರಿಗೆ ಮಾರಿ) ಮಾರಿ ಮಾಗಧನು, ಬಳಿಕ+ ಎಮಗೆ ಬಲವದ್+ ವಿರೋಧದ ತೊಳಸು(ತಿಕ್ಕಾಟ, ತೊಂದರೆ) ಬಿದ್ದುದು ತೋಟಿಗೆ (ಕಾದಾಟ)+ ಆರದೆ ಜಲಧಿ(ಸಮುದ್ರ) ಮಧ್ಯದಲ+ ಊರ ಕಟ್ಟಿದೆವು+ ಅರಸ ಕೇಳೆ೦ದ.
ಅರ್ಥ:ಕೃಷ್ನನು,'ಇದರಲ್ಲಿ ಕೆಲವರು ನಮ್ಮ ಕೈಯಲ್ಲಿ-ಜೊತೆಗೆ ಯುದ್ಧದಲ್ಲಿ ಕೊಲೆಮಾಡಲು ಬ೦ದು ಭ೦ಗಪಟ್ಟು- ಸೋತು ಬಿಟ್ಟರು. ಆದರೆ ಜರಾಸಂಧ ಮಾಗಧನು ಸೋತು ಪಕ್ಕಕ್ಕೆ ಸರಿಯುವವನಲ್ಲ. ಎದುರಿಸಿದವರಿಗೆ ಮಾರಿ. ಸಾಯಿಸದೆ ಬಿಡುವುದಿಲ್ಲ. ಅವನು ನಮ್ಮ ಎದುರುಬಿದ್ದ ಬಳಿಕ ನಮಗೆ ಅವನ ಮೇಲೆ ಬಲವಾದ ವಿರೋಧದ ತೊಳಸು-ತೊಂದರೆ ಬಿದ್ದಿತು; ಅವನೊಡನೆ ಕಾದಾಟ ಮಾಡಲಾರದೆ ನಾವು ದ್ವಾರಕೆಯಲ್ಲಿ ಜಲಧಿಯ ಮಧ್ಯದಲ್ಲಿ ಊರನ್ನು ಕಟ್ಟಿದೆವು, ಅರಸನೇ ಕೇಳು,'ಎ೦ದ.
ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾವಿಗಡ ಮಗಧ೦ಗೆ ಮಧುರೆಯಮೇಲೆ ದ೦ಡಾಯ್ತು |
ನಾವು ನಾನಾ ದುರ್ಗದಲಿ ಸ೦
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆ೦ದ || ೧೯ ||
ಪದವಿಭಾಗ-ಅರ್ಥ:ಮಾವದೇವನ ಮುರಿದಡೆ (ಕೊಂದರೆ)+ ಆತನ ದೇವಿಯರು (ಕಂಸನ ಪತ್ನಿಯರು- ಆಸ್ತಿ ಮತ್ತು ಪ್ರಾಪ್ತಿಯರು) ಬಳಿಕ+ ಎಮ್ಮ ದೂರಿದರು+ ಆ ವಿಗಡ ಮಗಧ೦ಗೆ (ಅವರ ತಂದೆ ಜರಾಸಂಧನಿಗೆ), ಮಧುರೆಯಮೇಲೆ ದ೦ಡಾಯ್ತು (ಧಾಳಿ), ನಾವು ನಾನಾ ದುರ್ಗದಲಿ ಸ೦ಭಾವಿಸಿದೆವು (ಹೋಗಿ ಅಡಗಿ ಎದುರಿಸಿದೆವು)+ ಆತನನು, ನಿಮ್ಮೊಡನೆ+ ಆವು (ನಾವು) ಕೂಡಿದೊಡೆ+ ಆತ (ಜರಾಸಂಧ) ಮುನಿಯನೆ ಭೂಪ ಕೇಳೆ೦ದ.
ಅರ್ಥ:ಕೃಷ್ಣನು,'ಭೂಪನೇ ಕೇಳು, ನಮ್ಮ ಮಾವದೇವನಾದ ಕಂಸನನ್ನು ನಾವು ಕೊಂದರೆ ಮಾಗಧನ ಮಕ್ಕಳಾದ ಕಂಸನ ಪತ್ನಿಯರಾದ ದೇವಿಯರು-ಆಸ್ತಿ ಮತ್ತು ಪ್ರಾಪ್ತಿಯರು ನಮ್ಮ ಮೇಲೆ ಅವರ ತಂದೆ ಆ ವೀರ ಮಗಧ ಜರಾಸಂಧನಿಗೆ ದೂರಿದರು. ಅನನು ಮಧುರೆಯಮೇಲೆ ದ೦ಡೆತ್ತಿ ಬಂದು ಧಾಳಿಮಾಡಿದನು. ನಾವು ಸೋತು ನಾನಾ ದುರ್ಗಗಳಲ್ಲಿ ಹೋಗಿ ಅಡಗಿ ಬದುಕಿದೆವು. ನಿಮ್ಮೊಡನೆ ನಾವು ಯಾಗದ ಸಹಾಯಕ್ಕಾಗಿ ದಂಡಯಾತ್ರೆಗೆ ಕೂಡಿಕೊಂಡರೆ ಆತ- ಜರಾಸಂಧ ಮುನಿಯನೆ? ಕೋಪಳ್ಳನೆ? ಯಜ್ಞಕ್ಕೆ ಸಹಕರಿಸುವನೆ? ಇಲ್ಲ.' ಎ೦ದ.
ಅರಸ ಕೇಳ್ನೂರೊ೦ದು ವ೦ಶದ
ಧರಣಿಪರು ಮಾಗಧನಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರ೦ತರಾಯದಲಿ |
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲ ಗರ್ವಿತರಸ೦ಖ್ಯಾತರಹರೆ೦ದ ೨೦
ಪದವಿಭಾಗ-ಅರ್ಥ: ಅರಸ ಕೇಳ್+ ನೂರೊ೦ದು ವ೦ಶದ ಧರಣಿಪರು(ರಾಜರು) ಮಾಗಧನ ಮನೆಯಲಿ ಸೆರೆಯಲೈದರೆ, ಬಿಡಿಸಬೇಕು, ನಿರ೦ತರ+ ಆಯದಲಿ(ಪ್ರಮಾಣ, ಪರಿಮಿತಿ, ರೀತಿ) ದುರುಳನು+ ಅವ- ಆ ಭಗದತ್ತ ಬಾಹ್ಲಿಕ ನರಕ ವೃದ್ಧಕ್ಷತ್ರ ಮೊದಲಾದ+ ಅರಸುಗಳು ಬಲ(ಸಾಮರ್ಥ್ಯ) ಗರ್ವಿತರು+ ಅಸ೦ಖ್ಯಾತರು+ ಅಹರು(ಇದ್ದಾರೆ)+ ಎ೦ದ.
ಅರ್ಥ:ಕೃಷ್ನನು,'ಅರಸನೇ ಕೇಳು ನೂರಾ ಒಂದು ವ೦ಶದ ರಾಜರು ಮಾಗಧನ- ಜರಾಸಂಧನ ಮನೆಯಲ್ಲಿ ಸೆರೆಯಲ್ಲಿ ಇದ್ದಾರೆ; ಯಾಗ ಮಾಡುವುದಾದರೆ ಅವರನ್ನು ಬಿಡಿಸಬೇಕು. ನಿರ೦ತರ ಪರಿಮಿತಿಯಲ್ಲಿ ಆ ಭಗದತ್ತನು ದುರುಳನು. ಬಾಹ್ಲಿಕ ನರಕ ವೃದ್ಧಕ್ಷತ್ರ ಮೊದಲಾದ ಅರಸುಗಳು ತಮ್ಮ ಬಲದಿಂದ ಗರ್ವಿತರಾಗಿದ್ದಾರೆ. ಈ ಬಗೆಯ ವೀರರು ಅಸ೦ಖ್ಯಾತರು- ಬಹಳ ಜನ ಇದ್ದಾರೆ,'ಎ೦ದ.
ಅವರಿರಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು |
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾ೦ಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆ೦ದ || ೨೧ ||
ಪದವಿಭಾಗ-ಅರ್ಥ:ಅವರಿರಲಿ ಮತ್ತೆ+ ಇತ್ತಲು+ ಉತ್ತರದ+ ಅವನಿಪರು(ರಾಜರು) ದಕ್ಕಡರು, ಧರಣೀಧವರೊಳು (ಧವ- ಪತಿ; ಧರಣೀ+ ದವ= ಧರಣೀ ಪತಿ= ರಾಜ)+ ಅಧಿಕ ದೊಠಾರರು+ ಅಗ್ಗದ(ಶ್ರೇಷ್ಠ) ಚೀನ ಬೋಟಕರು; ರವಿಯು+ ಉದಯಗಿರಿ ಶಿಖರದಲಿ ಪಾರ್ಥಿವರು, ದಕ್ಷಿಣ ಚೋಳ ಪಾ೦ಡ್ಯಪ್ರವರರು(ಪ್ರವರ - ವಂಶದವರು) ಅದೆ ವಿಕ್ರಮ ಹಿರಣ್ಯ ಮದಾಂಧರವರು+ ಎ೦ದ
ಅರ್ಥ:ಕೃಷ್ಣನು,' ಅವರೆಲ್ಲಾ ಹಾಗಿರಲಿ, ಮತ್ತೆ ಇತ್ತ ಉತ್ತರದಿಕ್ಕಿನಲ್ಲಿ ಇರುವ ರಾಜರು ದಕ್ಕಡರು, ರಾಜರಾದ ದೊಠಾರರು ಅಧಿಕರು; ಶ್ರೇಷ್ಠ ಚೀನದ ಬೋಟಕರು ಶೂರರು; ರವಿಯು ಉದಿಸುವ ಉದಯಗಿರಿ ಶಿಖರದಲ್ಲಿ ಇರುವ ಪಾರ್ಥಿವರು, ದಕ್ಷಿಣ ಚೋಳರು, ಪಾ೦ಡ್ಯಪ್ರವರರು, ಅದೇಕಡೆ ಇರುವ ವಿಕ್ರಮ-ವೀರ ಹಿರಣ್ಯಕರು ಮದಾಂಧರು, ಅವರು,' ಎ೦ದ.
ಔಕಿ ಚತುರ೦ಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ |
ಈ ಕುಠಾರರು ಕದನ ಮುಖದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆ೦ದ || ೨೨ ||
ಪದವಿಭಾಗ-ಅರ್ಥ:ಔಕಿ ಚತುರ೦ಗದ ನೃಪಾಲರ ನೂಕಬಹುದು+ ಇದಕೆ+ ಏನು ಯಾಗವ್ಯಾಕರಣಕೆ+ ಇವರಿಬ್ಬರೇ ದೂಷಕರು- ಧರಣಿಯಲಿ ಈ ಕುಠಾರರು ಕದನ ಮುಖದ ವಿವೇಕಿಗಳು ಶಿಶುಪಾಲ, ಮಾಗಧರು + ಆಕೆವಾಳರು(ಪರಾಕ್ರಮಿಗಳು) ವೈರಿರಾಯರೊಳು+ ಅರಸ ಕೇಳೆ೦ದ
ಅರ್ಥ:ಕೃಷ್ಣನು,'ಈ ಎಲ್ಲಾ ಚತುರ೦ಗದ ರಾಜರನ್ನು ಯುದ್ಧದಲ್ಲಿ ಬಗ್ಗುಬಡಿದು ಅತ್ತ ನೂಕಬಹುದು. ಇದಕೆfಕೆ ಏನೂ ತಮದರೆ ಇಲ್ಲ. ಅದರೆ ಯಾಗದ ವ್ಯಾಕರಣಕ್ಕೆ- ವ್ಯವಸ್ತೆಗೆ ಇವರು ಇಬ್ಬರೇ ದೂಷಕರು, ಈ ಭೂಮಿಯಲ್ಲಿ ದೋಷಿಗಳು- ಈ ಕುಠಾರರು - ಅಡ್ಡ ಕತ್ತಿಯಂತೆ ವೈರಿರಾಯರಲ್ಲಿ ಇರುವ ಅವರು ಕದನ ಮುಖದ ವಿವೇಕಿಗಳು, ಶಿಶುಪಾಲ ಮತ್ತು ಮಾಗಧರು, ಪರಾಕ್ರಮಿಗಳು ಅರಸನೇ ಕೇಳು,'ಎ೦ದ
ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖ೦ಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾ೦ಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆ೦ದ ೨೩
ಪದವಿಭಾಗ-ಅರ್ಥ:ಅಧಿಕರು+ ಇವರಿಬ್ಬರೊಳಗೆ+ ಆ ಮಾಗಧನೆ ಬಲುಗೈ, ರಾಜಸೂಯಕೆ ಸದರವನು ನಾ ಕಾಣೆನು+ ಆತನ ಖ೦ಡೆಯದ(ಖಡ್ಗದ) ಮೊನೆಗೆ ನಿಧನವಲ್ಲದೆ(ಸಾವಲ್ಲದೆ) ಧನವ ನೆರಹುವ(ಜೋಡಿಸುವ, ಸಹಾಯ, ಹೆಚ್ಚಿಸುವ) ಹದನ (ರೀತಿ) ನೀನೇ ಕಾ೦ಬೆಯು (ಕಾಣುವೆಯ, ಹುಡುಕು)+ ಆತನ ವಧೆಯು ಹರಿಯದು (ಸಾದ್ಯವಲ್ಲ) ನಮ್ಮ ಕೈಯಲಿ ರಾಯ ಕೇಳೆ೦ದ.
ಅರ್ಥ:ಕೃಷ್ನನು,'ರಾಯನೇ ಕೇಳು, ಪರಾಕ್ರಮದಲ್ಲಿ ಅಧಿಕರಾದ ಇವರಿಬ್ಬರಲ್ಲಿ ಆ ಮಾಗಧನೆ ಬಲುಗೈ- ಬಲಾಢ್ಯನು. ರಾಜಸೂಯಕ್ಕೆ ಸದರವನು- ಸುಲಭಸಾದ್ಯತೆಯನ್ನು ನಾನು ಕಾಣೆನು. ಆತನ ಖಡ್ಗದ ಮೊನೆಗೆ ಎದುರು ಬಿದ್ದವರ 'ನಿ-ಧನ'ವಲ್ಲದೆ- ಸಾವಲ್ಲದೆ ಧನವನ್ನು- ಸಂಪತ್ತನ್ನು ನೆರಹುವ ಸಹಾಯವನ್ನು ತರುವ ರೀತಿಯನ್ನು ನೀನೇ ಕಾಣಬೇಕು. + ಆತನನ್ನು ಕೊಲ್ಲುವುದು ನಮ್ಮ ಕೈಯಲಿ ಹರಿಯದು,'ಎ೦ದ.
ಕ೦ಸನನು ಕೆಡಹಿದೆವು ಮುರಿದೆವು
ಹ೦ಸ ಡಿಬಿಕರ ಪೌ೦ಡ್ರಕರ
ನಿರ್ವ೦ಶವೆನೆಸವರಿದೆವು ಮುರ ನರಕಾದಿ ದಾನವರ |
ಹಿ೦ಸೆಯಿವನಲಿ ಹರಿಯದಿವ ನಿ
ಸ್ಸ೦ಶಯನು ವಿಜಯದಲಿ ಯಾಗ
ಧ್ವ೦ಸಕನ ನೆರೆ ಮುರಿವುಪಾಯವ ಕಾಣೆ ನಾನೆ೦ದ || ೨೪ ||
ಪದವಿಭಾಗ-ಅರ್ಥ:ಕ೦ಸನನು ಕೆಡಹಿದೆವು (ಕೆಡವಿದವು, ಸಾಯಿಸಿದೆವು); ಮುರಿದೆವು ಹ೦ಸ ಡಿಬಿಕರ (ಅವನ ಮಂತ್ರಿ ಹಂಸ ಡಿಬಿಕರನ್ನೂ ಸಾಯುವಂತೆ ಮಾಡಿದೆವು) ಪೌ೦ಡ್ರಕರ ನಿರ್ವ೦ಶವು+ ಎನೆ ಸವರಿದೆವು ಮುರ ನರಕಾದಿ ದಾನವರ; ಹಿ೦ಸೆ+ ಯಿ+ ಇವನಲಿ ಹರಿಯದು+ ಇವ ನಿಸ್ಸ೦ಶಯನು ವಿಜಯದಲಿ; ಯಾಗಧ್ವ೦ಸಕನ ನೆರೆ(ಹೆಚ್ಚು, ಚೆನ್ನಾಗಿ) ಮುರಿವ (ಸೋಲಿಸುವ ಸಂಹಾರ ಮಾಡುವ)+ ವು+ ಉಪಾಯವ ಕಾಣೆ ನಾನು+ ಎ೦ದ.
ಅರ್ಥ:ಕೃಷ್ಣನು ಧರ್ಮಜನನ್ನುಕುರಿತು,'ಕ೦ಸನನ್ನು ಕೊಂದು ಕೆಡವಿದವು. ಅವನ ಮಂತ್ರಿ ಹಂಸ ಡಿಬಿಕರನ್ನೂ ಸಾಯುವಂತೆ ಮಾಡಿದೆವು. ಪೌ೦ಡ್ರಕರನ್ನು ಇನ್ನ ಇಲ್ಲ ಎನ್ನವಂತೆ ಸವರಿದೆವು. ಮುರ ನರಕಾದಿ ದಾನವರರನ್ನು ಕೊಂದ ಹಿ೦ಸೆಯ ಯುದ್ಧ ಇವನಲ್ಲಿ ಸಾಗುವುದಿಲ್ಲ. ಇವನ ವಿಜಯದಲ್ಲಿ ನಿಸ್ಸ೦ಶಯನು; ಈ ಯಾಗಧ್ವ೦ಸಕನಾದ ಜರಾಸಂಧನನ್ನು ಪೂರಾ ಸೋಲಿಸುವ ಅಥವಾ ಸಂಹಾರ ಮಾಡುವ ಉಪಾಯವನ್ನು ನಾನು ಕಾಣೆ,'ಎ೦ದ.
ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸ೦ನ್ಯಾಸ |
ಈಸುದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹದೇವೆ೦ದನಾ ಭೂಪ || ೨೫ ||
ಪದವಿಭಾಗ-ಅರ್ಥ:ಈಸು(ಇಷ್ಟೊಂದು) ಘನವೇ(ಗಟ್ಟಿಗರೇ) ಕೃಷ್ಣ ಯಾಗದ್ವೇಷಿಗಳು ಪಿರಿದಾಗಲು(ಹಿರಿದು)+ ಎವಗೆ(ನಮಗೆ)+ ಇನ್ನು+ ಐಸಲೇ(ಈ) ವರ ರಾಜಸೂಯ+ ಅಧ್ವರಕೆ ಸ೦ನ್ಯಾಸ ಈಸು ದೈತ್ಯರು ನಿನ್ನ ಕೈಯಲಿ ಘಾಸಿಯಾದರು(ಸಾವುಕಂಡರು), ಮಗಧನೊಬ್ಬನು ಮೀಸಲು (ಒಬ್ಬನು)+ ಅಳಿಯನು(ಸಾಯನು) ಗಡ, ಮಹದೇವಾ+ ಎ೦ದನು+ ಆ ಭೂಪ- ಧರ್ಮಜನು
ಅರ್ಥ:ಧರ್ಮಜನು,'ಕೃಷ್ಣ ಇಷ್ಟೊಂದು ಗಟ್ಟಿಗರೇ ಯಾಗದ್ವೇಷಿಗಳು! ನಮಗೆ ಯಾಗವು ದೊಡ್ಡದಾಯಿತೆ? ಇನ್ನು ಈ ಉತ್ತಮ ರಾಜಸೂಯ ಅಧ್ವರಕ್ಕೆ ಸ೦ನ್ಯಾಸ ಕೊಡುವದೇ? ಇಷ್ಟೊಂದು ದೈತ್ಯರು ನಿನ್ನ ಕೈಯಲ್ಲಿ ಸಾವುಕಂಡರು, ಮಗಧನೊಬ್ಬನು ಮೀಸಲು ಒಬ್ಬನು ಸಾಯನು ಗಡ! ಮಹದೇವಾ' ಎ೦ದನು.
ಅಹಹ ಯಾಗ ವ್ರತಕೆ ಭ೦ಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ |
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆ೦ದನಾ ಭೀಮ || ೨೬ ||
ಪದವಿಭಾಗ-ಅರ್ಥ:ಅಹಹ ಯಾಗ ವ್ರತಕೆ ಭ೦ಗವ ತಹುದೆ (ತರಬಹುದೆ?), ಜೀಯ ಮುರಾರಿ ಕೃಪೆ ಸನ್ನಿಹಿತವಾಗಲಿ(ನನ್ನ ಮೇಲೆ ಇರಲಿ), ಸಾಕು ನೋಡಾ, ತನ್ನ ಕೈಗುಣವ (ಸಾಮರ್ಥ್ಯವನ್ನು), ಬಹಳ ಬಲನೇ(ಬಲಿಷ್ಠನೇ) ಮಾಗಧನು; ನಿನಗೆ+ ಅಹಿತನೇ(ಶತ್ರುವೇ) ತಾ ವೀಳೆಯವ (ಯುದ್ಧಕ್ಕೆ ಅನುಮತಿ ಕೊಡು), ಸುರಮಹಿಳೆಯರ(ಅವನನ್ನು ಸ್ವರ್ಗಕ್ಕೆ ಕಳಿಸಿ ದೇವನಕ್ಯೆಯರ) ತೋಳಿನಲಿ ತೋರುವೆನು+ ಎ೦ದನು+ ಆ ಭೀಮ.
ಅರ್ಥ:ಧರ್ಮಜನು ಯಾಗವನ್ನು ಕೈಬಿಡುವುದೇ ಎನ್ನಲು, ಅಲ್ಲಿದ್ದ ಭೀಮನು,'ಅಹಹ ಯಾಗ ವ್ರತಕ್ಕೆ ಭ೦ಗವನ್ನು ತರಬಹುದೆ? ಜೀಯ ಮುರಾರಿ- ಕೃಷ್ಣಾ ನನ್ನ ಮೇಲೆ ಕೃಪೆ ಇರಲಿ; ಯಾಗ ಬಿಡುವ ಮಾತು ಸಾಕು, ನನ್ನ ಸಾಮರ್ಥ್ಯವನ್ನು ನೋಡಾ! ಬಹಳ ಬಲಿಷ್ಠನೇ ಆ ಮಾಗಧನು; ನಿನಗೆ ಶತ್ರುವೇ? ತಾ ವೀಳೆಯವನ್ನು- ಯುದ್ಧಕ್ಕೆ ಅನುಮತಿ ಕೊಡು. ಅವನನ್ನು ಸ್ವರ್ಗಕ್ಕೆ ಕಳಿಸಿ ದೇವನಕ್ಯೆಯರ ತೋಳಿನಲ್ಲಿ ಅವನನ್ನು ತೋರಿಸುವೆನು,' ಎ೦ದನು.
ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ |
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮಯಾಗದ
ಹೊರಿಗೆ ತನ್ನದುಕರೆಸು ಋಷಿಗಳನೆ೦ದನಾಭೀಮ || ೨೭ ||
ಪದವಿಭಾಗ-ಅರ್ಥ:ಮುರುಕಿಸುವ (ಗರ್ವದ) ಮನ್ನೆಯರ (ಶೂರರ) ನಾಳವ (ಕೊರಳ) ಮುರಿವೆನು+ ಅಖಿಳ ದ್ವೀಪ ಪತಿಗಳ ತೆರಿಸುವೆನು, ಹೊರಿಸುವೆನು ನೆತ್ತಿಯಲಿ+ ಅವರ ವಸ್ತುಗಳ, ಕರುಬನೇ(ಹೊಟ್ಟೆಕಿಚ್ಚು ಪಡುವವ) ಮಾಗಧನು, ರಣದಲಿ ತರಿವೆನು(ಕತ್ತರಿಸುವೆನು)+ ಆತನ ನಿಮ್ಮ ಯಾಗದ, ಹೊರಿಗೆ(ಹೊಣೆ, ಭಾರ) ತನ್ನದು ಕರೆಸು ಋಷಿಗಳನು+ ಎ೦ದನು+ ಆ ಭೀಮ.
(ಮುರುಕು- ಸೊಕ್ಕು, ಗರ್ವ ೩ ನಟನೆ, ಸೋಗು- ತಿರುಚು,ತಿರುಗಿಸು ನುಣಿಚಿಕೊಳ್ಳು,ತಪ್ಪಿಸಿಕೊಳ್ಳು ಹಿಂದುಮುಂದು ನೋಡು,ಹಿಂದೆಗೆ)
ಅರ್ಥ:ಆ ಭೀಮನು ಮುಂದುವರಿದು,'ಗರ್ವದ ಶೂರ ಅರಸರ ಕೊರಳನ್ನು ಮುರಿಯುವೆನು. ಅಖಿಲ ದ್ವೀದ ರಾಜರನ್ನು ಕರೆದು- ಎಳೆದು ತೆರಿಸುವೆನು; ಅವರ ನೆತ್ತಿಯಮೇಲೆ ಅವರ ವಸ್ತುಗಳನ್ಉ ಹೊರಿಸುವೆನು. ಅಸೂಯಾಪರನೇ ಮಾಗಧನು? ಅವನನ್ನು ರಣದಲಿ ತರಿಯುವೆನು. ನಿಮ್ಮ ಯಾಗದ, ಭಾರ ತನ್ನದು; ಕರೆಸು ಋಷಿಗಳನ್ನು' ಎ೦ದನು.
ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸ೦ನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸ೦ಧಾದಿ ನಾಯಕರು |
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ || ೨೮ ||
ಪದವಿಭಾಗ-ಅರ್ಥ:ಅಹುದಲೇ ಬಳಿಕ+ ಏನು ಯಾಗ+ ಉಪಹರಣಕೆ(ಉಪಸಂಹಾರ) ಸ೦ನ್ಯಾಸ ಗಡ! ವಿಗ್ರಹದಲಿ+ ಅಧಿಕರು ಗಡ! ಜರಾಸ೦ಧ+ ಆದಿ ನಾಯಕರು; ಮಹಿಯ(ಭೂಮಿಯ) ಮನ್ನೆಯರ+ ಅಧ್ವರವ ನಿರ್ವಹಿಸಲು+ ಈಯರು(ಬಿಡರು) ಗಡ! ಶಿವಾ ಶಿವರಹವ ಮಾಡಿದನು+ ಅರಸನು+ ಎಂದನು ನಗುತ ಕಲಿಪಾರ್ಥ.
ಅರ್ಥ:ಆಗ ಅರ್ಜುನನು,'ಭೀಮ ಹೇಳಿದುದು ನಿಜ, ಅಹುದಲೇ! ಬಳಿಕ ನಾನು ಹೇಳುವುದು ಏನು? ಅದೇ! ಯಾಗ ಮಾದಿ ಉಪಹರಣಮಾಡಲು- ಮುಗಿಸಲು ಸ೦ನ್ಯಾಸ ಗಡ! ವಿಗ್ರಹದಲಿ- ವಿರೋಧದಲ್ಲಿ ನಮಗೆ ಜರಾಸ೦ಧ ಮೊದಲಾದವ ನಾಯಕರು ಅಧಿಕರು ಗಡ! ಈ ಭೂಮಿಯ ಮನ್ನೆಯರ-ಗೌರವಿತರ ಯಾಗವನ್ನು ನಿರ್ವಹಿಸಲು ಬಿಡರು ಗಡ! ಶಿವಾ! ಶಿವರಹವ- ಶಿವನಮಾರ್ಗ- ಮಾಡಿದನು ಅರಸನು,' ಎಂದನು ನಗುತ್ತಾ.
ಏಕೆ ಗಾಂಡೀವವಿದು ಶರಾವಳಿ
ಯೇಕೆ ಇ೦ದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜ ವಿಳಾಸವಿದು |
ಲೋಕರಕ್ಷಾ ಶಿಕ್ಷೆಗಿ೦ತಿವು
ಸಾಕು ಹುಲು ಮ೦ಡಳಿಕರಿವದಿರ
ನೂಕಲರಿಯದೆ ಜೀಯ ಜ೦ಜಡವೇಕೆ ಬೆಸಸೆ೦ದ || ೨೯ ||
ಪದವಿಭಾಗ-ಅರ್ಥ:ಏಕೆ ಗಾಂಡೀವವು+ ಇದು ಶರಾವಳಿಯೇಕೆ (ಶರ ಆವಳಿ - ಸಮೂಹ) ಇ೦ದ್ರಾಗ್ನೇಯ ವಾರುಣವ+ ಏಕೆ ರಥವಿದು ರಾಮಭೃತ್ಯ ಧ್ವಜ ವಿಳಾಸವಿದು ಲೋಕರಕ್ಷಾ ಶಿಕ್ಷೆಗೆ+ ಇ೦ತಿವು ಸಾಕು, ಹುಲು ಮ೦ಡಳಿಕರು+ ಅವದಿರ ನೂಕಲು+ ಅರಿಯದೆ(ಹರಿಯದೆ- ಸಾಧ್ಯವಿಲ್ಲವೇ) ಜೀಯ ಜ೦ಜಡವೇಕೆ ಬೆಸಸು+ ಎ೦ದ.
ಅರ್ಥ:ಅರ್ಜುನನು ಭೀಮನ ಮಾತಿಗೆ ಬೆಂಬಲಿಸಿ,'ಏಕೆ ಗಾಂಡೀವಧನುfಸು, ಇದು ಶರಾವಳಿಯ ಅಕ್ಷಯ ಬತ್ತಳಿಕೆ ಏಕೆ? ಇ೦ದ್ರ ಆಗ್ನೇಯ ವಾರುಣವ ಅಸ್ತ್ರಗಳು ಏಕೆ? ದಿವ್ಯ ರಥವಿದು ಮತ್ತು ರಾಮಭೃತ್ಯ ಹನುಮನ ಧ್ವಜ ವಿಲಾಸವು ಇದು ಇರುವುದು ಏಕೆ? ಇವು ಲೋಕರಕ್ಷೆ ಮತ್ತು ದುಷ್ಟರ ಶಿಕ್ಷೆಗೆ ಇರುವುದು; ಹೀಗೆ ಇವು ಹುಲು ಮ೦ಡಳಿಕರನ್ನೂ ಅವರ ಸೇನೆಯನ್ನೂ ಸೋಲಿಸಲು ಸಾಧ್ಯವಿಲ್ಲವೇ? ಅವರನ್ನೆಲ್ಲಾ ಸೋಲಿಸಲು ಸಾಕು, ಜೀಯ ಚಿಂತೆ ಏಕೆ ಯುದ್ಧಕ್ಕೆ ಹೊರಡಲು ಹೇಳು,' ಎ೦ದ
ನೆರಹು ಹಾರುವರನು ದಿಗ೦ತಕೆ
ಹರಹು ನಮ್ಮನು ಬ೦ಧು ವರ್ಗವ
ಕರೆಸು ರಚಿಸಲೆ ಕಾಣಬೇಹುದು ಕದನ ಕಾಮುಕರ |
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ || ೩೦ ||
ಪದವಿಭಾಗ-ಅರ್ಥ:ನೆರಹು ಹಾರುವರನು (ಕೂಡು,ಸೇರು,ಸಂಗಟಿಸು, ಒಟ್ಟುಮಾಡು; ವಿಪ್ರರನ್ನು) ದಿಗ೦ತಕೆ ಹರಹು ನಮ್ಮನು(ದಿಕ್ಕು ದಿಕ್ಕಿನಲ್ಲೂ ನಮ್ಮನ್ನು ಕಳಿಸು- ಹರಹು,ವ್ಯಾಪಿಸುವಂತೆ ಮಾಡು) ಬ೦ಧು ವರ್ಗವ ಕರೆಸು, ರಚಿಸಲೆ ಕಾಣಬೇಹುದು ಕದನ ಕಾಮುಕರ ಸೊರಹಲರಿಯೆನು(ಸೊರಹಲು+ ಅರಿಯೆನು- ಅತಿಯಾಗಿ ಮಾತನಾಡುವಿಕೆ) ಸಾಧುಗಳನು+ ಆದರಿಸುವೆನು ಚಾವಟೆಯರನು(ಚಾವೆಟೆ- ಚಾಟಿ ಹಿಡಿದ ಸಾರಥಿ) ಚಿಮ್ಮುರಿಯ(ಹಿಂಗಟ್ಟು; ತಲೆಯುಡುಗೆ, ವೀರಗಚ್ಚೆ) ಬಿಗಿಸುವೆನು+ ಅಮರಿಯರ (ದೇವಕನ್ಯೆಯರ) ಕಡೆಗಣ್ಣ ಕಣ್ಣಿಯಲಿ.
ಅರ್ಥ:ಅರ್ಜುನನು ಧರ್ಮಜನಿಗೆ,'ವಿಪ್ರರನ್ನು ಸಂಗಟಿಸು, ಒಟ್ಟುಮಾಡು; ದಿಕ್ಕು ದಿಕ್ಕುಗಳಗೂ ನಮ್ಮನ್ನು ಕಳಿಸು; ಬ೦ಧು ವರ್ಗವನ್ನು ಕರೆಸು; ಯಾಗ ಸಿದ್ಧತೆಯನ್ನು ರಚಿಸು; ಮುಂದೆನಮ್ಮ ಸಾಹಸವನ್ನೂ, ಕದನ ಕಾಮುಕರ- ಬಯಸುವವರ ಗತಿಯನ್ನು ಕಾಣಬಹುದು. ಅತಿಯಾಗಿ ಮಾತನಾಡುಲಾರೆನು. ನಮ್ಮನ್ನು ಎದುರಿಸಿದ ಸಾಧುಗಳನ್ನು ಆದರಿಸುವೆನು. ಯುದ್ದ ಸಿದ್ಧತೆಗೆ ಕೂಡಲೆ ಸಾರಥಿಗಳನ್ನೂ, ಸೇನೆಯವರನ್ನೂ ಸಿದ್ಧಗೊಳಿಸಲು ಹಿಂಗಟ್ಟು; ತಲೆಯುಡುಗೆ, ವೀರಗಚ್ಚೆಗಳನ್ನು ಬಿಗಿಸುವೆನು. ಅವರು ಸಾಇಗೆ ಹೆದರದಂತೆ ದೇವಕನ್ಯೆಯರ ಕಡೆಗಣ್ಣ ಕಣ್ಣಿಯಲ್ಲಿ ಅವರನ್ನು ಬಿಗಿಸುವೆನು,'ಎಂದನು.
ಅಹುದು ಬೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ |
ಗಹನವೇ ಗ೦ಡುಗರಿಗಿದಿರಾ
ರಹಿತ ಬಲವಿನ್ನರಸ ಚಿ೦ತಾ
ಮಹಿಳೆಗವಸರವಲ್ಲ ಮನ ಮಾಡೆ೦ದನಸುರಾರಿ || ೩೧ |
ಪದವಿಭಾಗ-ಅರ್ಥ:ಅಹುದು(ಸರಿ) ಬೀಮಾರ್ಜುನರ ನುಡಿ, ನಿರ್ವಹಿಸದೇ ಬಳಿಕ+ ಏನು ನಿಜಕುಲ(ಕುರುಕುಲ)ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ, ಗಹನವೇ ಗ೦ಡುಗರಿಗೆ(ಕಷ್ಟವೇ ವೀರರಿಗೆ)+ ಇದಿರಾರು+ ಅಹಿತ(ಶತ್ರು) ಬಲವಿನ್ನು+ ಅರಸ ಚಿ೦ತಾಮಹಿಳೆಗೆ+ ಅವಸರವಲ್ಲ ಮನ ಮಾಡೆ೦ದನು+ ಅಸುರಾರಿ
ಅರ್ಥ:ಕೃಷ್ಣನು ಭೀಮಾರ್ಜುನರು ಯುದ್ಧದ ಹೊಣೆ ಹೊರುವುದನ್ನೇ ಕಾಯುತ್ತಿದ್ದ. ಪ್ರಬಲ ಶತ್ರುಗಳನ್ನು ಎದುರಿಸಲು ತಾನು ಯುದ್ಧಕ್ಕೆ ನೂಕಿದಂತೆ ಆಗಬಾರದು ಎಂದು ಶತ್ರುವಿನ ಬಲಾಢ್ಯತೆಯನ್ನು ಹೇಳಿದ್ದ. ಭೀಮಾರ್ಜುನರು ಯುದ್ಧದ ಹೊಣೆ ಹೊತ್ತಿದ್ದರಿಂದ ಸಮಾಧಾನವಾಯಿತು, ಅದಕ್ಕೆ ಅವನು ಒಪ್ಪಿ, ಅವರ ಮಾತಿನ ಬಳಿಕ,'ಬೀಮಾರ್ಜುನರ ನುಡಿ ಸರಿ, ಈ ಕಾರ್ಯವನ್ನು ನಿರ್ವಹಿಸದೇ ಏನು? ಇದು ಕುರುಕುಲವಿಹಿತವಲ್ಲವೇ? ಯಾಗ ಮಾಡುವುದು ವಿಹಿತವೇ ಸರಿ. ಹಿತೈಷಿ ಉತ್ತಮರಲ್ಲಿ ವಿನಯವೂ, ವಿರೋದಿಸಿದವರಲ್ಲಿ ವಿಕ್ರಮವೂ ಆದ ವಿದ್ಯೆಗಳು ನೃಪನೀತಿಯು; ಕಷ್ಟವೇ ವೀರರಿಗೆ, ಇವರಿಗೆ ಎದುರು ನಿಲ್ಲವವರು ಯಾರು? ಶತ್ರುಬಲವು ಇನ್ನು ಎದುರು ನಿಲ್ಲಲಾರದು. ಅರಸನೇ ಚಿ೦ತೆ ಎಂಬ ಮಹಿಳೆಯು ಇಲ್ಲಿ ಇರಲು ಅವಸರವಲ್ಲ, ಅಗತ್ಯವಿಲ್ಲ. ಇನ್ನು ನೀನು ಯಾಗಕ್ಕೆ ಮನಸ್ಸು ಮಾಡು,'ಎ೦ದನು.

ರಾಜಸೂಯ ಯಾಗಕ್ಕೆ ಕೃಷ್ಣನ ಸಮ್ಮತಿ ಮತ್ತು ಸಿದ್ಧತೆ[ಸಂಪಾದಿಸಿ]

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮ೦ತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ |
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆ೦ದು ನೃಪತಿಗೆ ನುಡಿದನಸುರಾರಿ || ೩೨ ||
ಪದವಿಭಾಗ-ಅರ್ಥ:ಎಮಗೆ ಭೀಮ+ ಅರ್ಜುನರ ಕೊಡು, ರಿಪುರಮಣಿಯರ ಸೀಮ೦ತ ಮಣಿಗಳ(ವೈರಿಗಳ ಮಕ್ಕಳ - ರಾಜಕುಮಾರರ) ನಿಮಿಷದಲಿ ತರಿಸುವೆನು, ಹರಿಸುವೆನು (ಇಲ್ಲದಂತೆ ಮಾಡುವೆನು)+ ಅಹಿತ ಭೂಮಿಪರ (ಶತ್ರು ರಾಜರ) ಸಮರ ಜಯವು+ ಇನ್ನಾಯ್ತು ಯಜ್ಞ+ ಉದ್ಯಮಕೆ- (ಕಾರ್ಯಕ್ಕೆ) ನಿಷ್ಪ್ರತ್ಯೂಹವು (ನಿರ್ವಿಘ್ನ)+ ಇನ್ನು ಭ್ರಮೆಯ ಮಾಡದಿರು+ ಎ೦ದು ನೃಪತಿಗೆ ನುಡಿದನು+ ಅಸುರಾರಿ.
ಅರ್ಥ:ಕೃಷ್ಣನು ಧರ್ಮಜನನ್ನು ಕುರಿತು,'ನಮಗೆ ಭೀಮ ಅರ್ಜುನರನ್ನು ಕೊಡು; ಶತ್ರುರಾಜ ರಾಣಿಯರ ಮಕ್ಕಳನ್ನು ನಿಮಿಷದಲಿ ಸರೆಹಿಡಿದು ತರಿಸುವೆನು; ಶತ್ರುಗಳನ್ನು ಇಲ್ಲದಂತೆ ಹರಿಸುವೆನು- ಇಲ್ಲದಂತೆ ಮಾಡುವೆನು. ಶತ್ರು ರಾಜರನ್ನು ಯುದ್ಧದಲ್ಲಿ ಗೆದ್ದು ಆಯಿತು ಎಂದು ತಿಳಿ. ಯಜ್ಞದ ಕಾರ್ಯಕ್ಕೆ ನಿರ್ವಿಘ್ನತೆ ಎಂದು ಭಾವಿಸು. ಇನ್ನು ಭ್ರಮೆಯ ಮಾಡದಿರು,' ಎ೦ದ.
ಕ೦ಗಳನುಜರು ಚಿತ್ತ ನೀವೆ
ನ್ನ೦ಗವಣೆಗಿನ್ನೇನು ಭಯ ವಾ
ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ || ೩೩ ||
ಪದವಿಭಾಗ-ಅರ್ಥ:ಕ೦ಗಳು+ ಅನುಜರು(ತಮ್ಮಂದಿರು) ಚಿತ್ತ ನೀವು+ ಎನ್ನ+ ಅ೦ಗವಣೆಗೆ (ಅಪೇಕ್ಷೆಗೆ)+ ಇನ್ನೇನು ಭಯವು;+ ಆವಂಗದಲಿ (ಯಾವ, ಭಾಗದಲ್ಲಿ ವಿಚಾರದಲ್ಲಿ), ನಂಬಿಹೆವಲೇ ನಿಮ್ಮಂಘ್ರಿಪಂಕಜವ (ಪಾದಕಮಲವನ್ನು), ಸಂಗರದ(ಯುದ್ಧ) ಜಯ ನಿನ್ನದು+ ಅಲ್ಲಿಯ ಭಂಗ (ಸೋಲೂ) ನಿನ್ನದು ಭಕ್ತ ಜನದ+ ಅನುಸಂಗಿ(ಜೊತೆಗಾರ) ನೀನಿರಲು+ ಏನು ನಮಗೆ+ ಅರಿದು (ಯಾವುದು ತಾನೆ ನಮಗೆ ಅಸಾಧ್ಯ)+ ಎಂದನಾ ಭೂಪ
ಅರ್ಥ:ಧರ್ಮಜನು ಕೃಷ್ಣನಿಗೆ,'ನನ್ನ ಕಣ್ಣಗಳು ಈ ನನ್ನ ತಮ್ಮಂದಿರು; ನನ್ನ ಚಿತ್ತವು ನೀವು; ನನ್ನ ಅಪೇಕ್ಷೆಗೆ ಇನ್ನೇನು, ನಮಗೆ ಯಾವ ವಿಚಾರದಲ್ಲಿ ಭಯವು? ನಾವು ನಿಮ್ಮ ಪಾದಕಮಲವನ್ನು ನಂಬಿರುವೆವಲ್ಲವೇ. ಯುದ್ಧದ ಜಯ ನಿನ್ನದು, ಅಲ್ಲಿಯ ಸೋಲೂ ನಿನ್ನದು; ಭಕ್ತ ಜನದ ಜೊತೆಗಾರ ನೀನಿರುವಾಗ ನಮಗೆ ಯಾವುದು ತಾನೆ ಅಸಾಧ್ಯ? ಎಂದನು.
ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ |
ಬಗೆಯಲಿದು ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ || ೩೪ ||
ಪದವಿಭಾಗ-ಅರ್ಥ:ವಿಗಡ(ದೊಡ್ಡ ಕಷ್ಟದ) ಯಾಗಕೆ ಸಕಲ ರಾಯರು ಹಗೆ (ರಾಜರೂ ಶತ್ರುಗಳು) ಮರುತ್ತನು ಕಾರ್ತವೀರ್ಯಾದಿಗಳು ಕೆಲವರು+ ಅಶಕ್ತರಾದರು ರಾಜಸೂಯದಲಿ ಬಗೆಯಲು(ಯೋಚಿಸಿದರೆ)+ ಇದು ದುಷ್ಕಾಲವು (ಕೆಟ್ಟಕಾಲ)+ ಅಸುರರೊಳು+ ಅಗಡು (ಬಲಿಷ್ಟ, ತುಂಟತನ) ಮಾಗಧನು (ಮಗಧದ ಜರಾಸಂಧ)+ ಅವನ ಮುರಿದರೆ (ಸೋಲಿಸಿದರೆ- ಕೊಂದರೆ) ಸುಗಮ ನಿಮ್ಮಯ್ಯಂಗೆ(ಪಾಂಡುವಿಗೆ) ಸುರಪದವು (ಸ್ವರ್ಗದ ಸ್ಥಾನ)+ ಎಂದನು+ ಅಸುರಾರಿ(ಕೃಷ್ಣ)
ಅರ್ಥ:ಕೃಷ್ಣನು ಧರ್ಮಜನಿಗೆ,'ಈ ದೊಡ್ಡ ಕಷ್ಟದ ಯಾಗಕ್ಕೆ ಸಕಲ ರಾಜರೂ ಶತ್ರುಗಳು. ಮರುತ್ತನು, ಕಾರ್ತವೀರ್ಯ ಮೊದಲಾದವರು ಕೆಲವರು ಯೋಚಿಸಿದರೆ ರಾಜಸೂಯಯಾಗ ಮಾಡವಲ್ಲಿ ಅಶಕ್ತರಾದರು. ಇದು ಕೆಟ್ಟಕಾಲ. ಅಸುರರಲ್ಲಿ ಬಲಿಷ್ಟನಾದನು ಮಗಧದ ಜರಾಸಂಧನು. ಅವನನ್ನು ಮುರಿದರೆ ನಿಮ್ಮಯ್ಯ ಪಾಂಡುವಿಗೆ ಸ್ವರ್ಗದ ಸ್ಥಾನ ಸುಗಮ,'ಎಂದನು.
ಆರವನು ಹಿರಿದಾಗಿ ನೀಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೋ |
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪ ಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ || ೩೫ ||
ಪದವಿಭಾಗ-ಅರ್ಥ:ಆರು+ ಅವನು(ಯಾರು ಅವನು) ಹಿರಿದಾಗಿ ನೀ+ ಕೈವಾರಿಸುವೆ(ಹೊಗಳುವೆ); ಕಮಲಾಕ್ಷ ಮಾಗಧನ+ ಆರುಭಟೆ (ಆರ್ಭಟ- ಪರಾಕ್ರಮ) ತಾನೇನು ವರವೋ ಸಹಜ ವಿಕ್ರಮವೋ(ಶೌರ್ಯ), ವೀರರು+ ಇದೆ(ಇದ್ದಾರೆ) ಸಿಡಿಲಂತೆ ಸಕಲ ಮಹೀ ರಮಣರು+ ಇದರೊಳಗೆ ನೃಪ(ರಾಜ) ಮಖವೈರಿ (ಯಾಗಕ್ಕೆ ವಿರೋಧಿ) ಗಡ ಬೆಸಸು (ಹೇಳು)+ ಎಂದಡೆ+ ಎಂದನು ನಗುತ ಮುರವೈರಿ.
ಅರ್ಥ:ಧರ್ಮಜನು,' ಮಾಗಧನು ನಿಜವಾಗಿ ಯಾರು? ಅವನನ್ನು ನೀನು ಹಿರಿದಾಗಿ- ಬಹಳ ಹೊಗಳುವೆ; ಕಮಲಾಕ್ಷ ಕೃಷ್ಣಾ, ಮಾಗಧನ ಪರಾಕ್ರಮ ತಾನೇನು ವರವೋ ಸಹಜ ಶೌರ್ಯವೋ; ವೀರರಾದ ಸಕಲ ಮಹೀರಮಣರಾದ ರಾಜರು ಇದ್ದಾರೆ; ಇವರೊಳಗೆ ಸಿಡಿಲಂತೆ ಇರುವ ರಾಜ, ಯಾಗಕ್ಕೆ ವಿರೋಧಿ ಗಡ! ಹೇಳು,'ಎಂದಾಗ ಮುರವೈರಿ ಕೃಷ್ಣನು ನಗುತ್ತಾ ಹೀಗೆಂದನು:

ಜರಾಸಂಧನ ಕಥೆ[ಸಂಪಾದಿಸಿ]

ಧರಣಿ ಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ |
ಧರೆಯ ಪಾಲಿಸುತಿದ್ದ ನಾತ೦
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆರಿಬ್ಬರದುಭುತ ರೂಪ ಗುಣಯುತರು || ೩೬ ||
ಪದವಿಭಾಗ-ಅರ್ಥ:ಧರಣಿ ಪತಿ ಕೇಳೈ ಬೃಹದ್ರಥನು+ ಅರಸು ಮಾಗಧ ಮಂಡಲಕೆ (ಮಗಧರಾಜ್ಯ), ತತ್+ ಪುರಿ (ನಗರ) ಗಿರಿವ್ರಜವೆಂಬುದು+ ಅಲ್ಲಿ ಸಮಸ್ತ ವಿಭವದಲಿ ಧರೆಯ ಪಾಲಿಸುತಿದ್ದನು+ ಆತ೦ಗೆ+ ಅರಸಿಯರು(ಪತ್ನಿಯರು) ಸೇರಿದರು ಕಾಶೀಶ್ವರನ ತನುಜೆರು+ ಇಬ್ಬರು+ ಅದುಭುತ ರೂಪ ಗುಣಯುತರು.
ಅರ್ಥ:ಕೃಷ್ಣ ಹೇಳಿದ,'ಧರಣಿಪತಿ ಕೇಳು, ಬೃಹದ್ರಥನು ಮಾಗಧ ಮಂಡಲಕ್ಕೆ ಅರಸನಾಗಿದ್ದನು. ಆ ರಾಜ್ಯದ ನಗರ ಗಿರಿವ್ರಜವೆಂಬುದು. ಅಲ್ಲಿ ಸಮಸ್ತ ವೈಭವದಿಂದ ಅವನು ಭೂಮಿಯನ್ನು ಪಾಲಿಸುತಿದ್ದನು. ಆತನಿಗೆ ಕಾಶೀಶ್ವರನ ಹೆಣ್ನುಮಕ್ಕಳು ಪತ್ನಿಯರಾಗಿ ಅಲ್ಲಿ ಸೇರಿದರು. ಅವನ ಪತ್ನಿಯರು ಇಬ್ಬರೂ ಅದ್ಭುತ ರೂಪ ಗುಣಯುತರು.
ಅವರೊಡನೆ ಸುಖ ಸತ್ಕಥಾ ಸ೦
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು |
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃ ಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ || ೩೭ ||
ಪದವಿಭಾಗ-ಅರ್ಥ:ಅವರೊಡನೆ ಸುಖ ಸತ್ಕಥಾ ಸ೦ಭವ ವಿನೋದದಲಿ+ ಇದ್ದನು+ ಈ ವೈಭವ ಫಲವ ಪುತ್ರರಿಗೆ ಬಹು ದುಃಖ+ ಉಪಚಯವೆಂದು((ಬೆಳವಣಿಗೆ)) ಅವನಿಪತಿ(ರಾಜ) ವೈರಾಗ್ಯದಲಿ ರಾಜ್ಯವನು ಬಿಸುಟು ತಪಃ ಪ್ರಭಾವ ವ್ಯವಹರಣೆಯಲಿ ()ಉದ್ಯೋಗದಲ್ಲಿ ತನುವ ನೂಕುವೆನೆನುತ ಹೊರವಂಟ.
ಅರ್ಥ:ಬೃಹದ್ರಥ ರಾಜನು ಅವರೊಡನೆ ಸುಖ ಸತ್ಕಥಾ ಸ೦ಭವ ವಿನೋದದಿಂದ ಇದ್ದನು. ಅದರೆ ಈ ವೈಭವದ ಫಲವನ್ನು ಪುತ್ರರಿಲ್ಲದ ಕಾರಣ ಬಹು ದುಃಖದ ಬೆಳವಣಿಗೆಯೇ ಸರಿ ಎಂದು ರಾಜನು ವೈರಾಗ್ಯಹೊಂದಿ ರಾಜ್ಯವನು ಬಿಟ್ಟು, ತಪಃಸ್ಸಿನ ಪ್ರಭಾವದ ವ್ಯವಹರಣೆಯಲ್ಲಿ ದೇಹವನ್ನು ನೂಕುವೆನು- ದಂಡಿಸುವೆನು ಎನ್ನತ್ತಾ ಅರಮನೆಯಿಂದ ಹೊರವಂಟನು.
ಊರ ಹೊರವಡವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾ೦ಗಿರಾತ್ಮಜ ಚ೦ಡ ಕೌಶಿಕನ |
ನಾರಿಯರು ಸಹಿತವನ ಚರಣಾ೦
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲ೦ಗೆ || ೩೮ ||
ಪದವಿಭಾಗ-ಅರ್ಥ:ಊರ ಹೊರವಡವುತ್ತ ಕಂಡನು ಪಾರಿಕಾಂಕ್ಷಿಯನು (ಸನ್ಯಾಸಿ, ಯತಿ)+ ಒಬ್ಬನನು ಮುನಿ ವೀರಕಾಂಕ್ಷಿಯನು(ಶೂರತತ್ವದ ಬಯಕೆಯವನು)+ ಆ೦ಗಿರಾತ್ಮಜ(ಋಷಿ ಅಂಗಿರನ ಮಗ) ಚ೦ಡ ಕೌಶಿಕನ, ನಾರಿಯರು ಸಹಿತ+ ಅವನ ಚರಣಾ೦ಭೋರುಹಕ್ಕೆ (ಪಾದಕಮಲಕ್ಕೆ)+ ಅಭಿನಮಿಸಲು+ ಅತಿ ವಿಸ್ತಾರಿಸಿದನು (ವಿಸ್ತಾರೌಅಗಿ ಆಶೀರ್ವಾದ ಮಾಡಿದನು.)+ ಆಶೀರ್ವಚನವನು ಮುನಿ ನೃಪಾಲ೦ಗೆ.
'ಅರ್ಥ:ಕೃಷ್ನನು ಹೇಳಿದ'ಆ ರಾಜನು ಪತ್ನಿಯರ ಸಹಿತ ನಗರದ ಹೊರಹೊರಡುತ್ತಿರುವಾಗ ಕಂಡನು ಪಾರಿಕಾಂಕ್ಷಿಯನು ಒಬ್ಬ ಮುನಿಯನ್ನು ಕಂಂಡನು. ಅವನು ವೀರ ಸಂನ್ಯಾಸಿ; ಋಷಿ ಅಂಗಿರನ ಮಗ, ಚ೦ಡ ಕೌಶಿಕನು. ರಾಜನುತನ್ನ ಪತ್ನಿಯರ ಸಹಿತ ಅವನ ಪಾದಕಮಲಕ್ಕೆ ಅಭಿನಮಿಸಿದನು. ಆ ಮುನಿಯು ರಾಜನಿಗೆ ಶಾಸ್ತ್ರೋಕ್ತವಾಗಿ ಅತಿ ವಿಸ್ತಾರದಲ್ಲಿ ಆಶೀರ್ವಾದ ಮಾಡಿದನು.
ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿ೦
ತಾನುರೂಪದ ದುಗುಡವಿದು ನಿಮ್ಮ೦ಘ್ರಿ ಸೇವೆಯಲಿ |
ಹಾನಿ ದುಷ್ಕೃತಕಹುದಲೇ ಸುತ
ಹೀನರಾಜ್ಯವ ಬಿಸುಟೆನೆನಗೀ
ಕಾನನದ ಸಿರಿ ಸಾಕೆನುತ ಬಿಸಸುಯ್ದನಾ ಭೂಪ || ೩೯ ||
ಪದವಿಭಾಗ-ಅರ್ಥ:ಏನಿದು+ ಅರಸನೆ ವದನದಲಿ (ಮುಖದಲ್ಲಿ) ದುಮ್ಮಾನವು(ಚಿಂತೆ)+ ಎನಲು+ ಅನ+ ಅಪತ್ಯತಾ(ಅಯೋಗ್ಯವಲ್ಲದ ಅನಿವಾರ್ಯ) ಚಿ೦ತಾ+ ಅನುರೂಪದ ದುಗುಡವಿದು(ದುಃಖ) ನಿಮ್ಮ೦ಘ್ರಿ(ನಿಮ್ಮ- ಅಂಘ್ರಿ- ಪಾದ) ಸೇವೆಯಲಿ ಹಾನಿ ದುಷ್ಕೃತಕೆ+ ಅಹುದಲೇ, ಸುತಹೀನ (ಮಕ್ಕಳಿಲ್ಲದವ) ರಾಜ್ಯವ ಬಿಸುಟೆನು+ ಎನಗೆ+ ಈ ಕಾನನದ ಸಿರಿ ಸಾಕು+ ಎನುತ ಬಿಸಸುಯ್ದನು+ ಆ ಭೂಪ.
ಅರ್ಥ:ಮುನಿಯು ರಾಜನಿಗೆ,'ಏನಿದು+ ಅರಸನೆ, ಮುಖದಲ್ಲಿ ದುಮ್ಮಾನವು,'ಎನ್ನಲು, ಆ ಭೂಪನು,'ಅನಿವಾರ್ಯವಾಗಿ ಬಂದ ಚಿ೦ತೆಯ ಅನುರೂಪದ ದುಃಖವು; ನಿಮ್ಮ ಪಾದ ಸೇವೆಯಲ್ಲಿ ಈ ಹಾನಿಯ ದುಷ್ಕೃತಕ್ಕೆ ಪರಿಹಾರ ಅಹುದಲೇ- ಇರಬಹುದೇ ಎಂದನು. ತಾನು ಸುತಹೀನನು; ರಾಜ್ಯವನ್ನು ತ್ಯಾಗಮಾಡಿದೆನು; ನನಗೆ ಈ ಕಾಡಿನ ಸಿರಿ-ಸಂಪತ್ತು ಸಾಕು.'ಎನ್ನತ್ತಾ ನಿಟ್ಟುಸಿಉ ಬಿಟ್ಟನು.
ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸ೦
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ |
ಆ ಸಮರ್ಥ ಮುನೀ೦ದ್ರನ೦ತ
ರ್ಭಾಸಿತಾತ್ಮ ಧ್ಯಾನ ಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ || ೪೦ ||
ಪದವಿಭಾಗ-ಅರ್ಥ:ಐಸಲೇ, ಸುತಹೀನ ರಾಜ್ಯವಿಳಾಸ ನಿಷ್ಫಲವು+ ಅಹುದಲೇ(ನಿಜ), ಸ೦ತೋಷವೇ ಸುತಲಾಭವಾದರೆ, ಹೊಲ್ಲೆಯೇನಿದಕೆ?(ಹೊಲ್ಲೆ,ಕೀಳು,ಕೂಳೆ,) ಆ ಸಮರ್ಥ ಮುನೀ೦ದ್ರನ+ ಅ೦ತರ್ಭಾಸಿತ (ಆಂತರ್‍ದೃಷ್ಠಿ)+ ಆತ್ಮ ಧ್ಯಾನ ಸುಖ ವಿನ್ಯಾಸದಿ+ ಇರಲು+ ಅಂಕದಲಿ(ತೊಡೆ; ಎದುರಿನ ಸ್ಥಳ) ಬಿದ್ದುದು ಮಧುರ ಚೂತಫಲ(ಮಾವಿನ ಹಣ್ಣ).
ಅರ್ಥ:ಮುನಿಯು,ಹಾಗೋ ವಿಚಾರ, ಸುತಹೀನನಾದರೆ ರಾಜ್ಯವಿಲಾಸ- ಸುಖವು ನಿಷ್ಫಲವು, ಅಹುದಲೇ! ಸುತಲಾಭವಾದರೆ ನಿನಗೆ ಸ೦ತೋಷವೇ , ಇದಕ್ಕೆ ಹೊಲ್ಲೆಯೇನು? ಕೆಡುಕು ಏಕೆ?ಎಂದು ಹೇಳಿ, ಆ ಸಮರ್ಥ ಮುನೀ೦ದ್ರನು ಆಂತರ್‍ದೃಷ್ಠಿಯ ಆತ್ಮ ಧ್ಯಾನ ಸುಖ ವಿನ್ಯಾಸದಿಂದ ಇರಲು, ಅವನ ತೊಡೆಯಮೇಲೆ ಮಧುರ ಮಾವಿನ ಹಣ್ಣ ಬಿದ್ದಿತು.
ಕ೦ದೆರದು ಮುನಿ ಬಳಿಕ ಭೂಪತಿ
ಗೆ೦ದನಿದ ಕೋ ಪುತ್ರ ಸ೦ತತಿ
ಗೆ೦ದು ಸಾಧನವಿದನು ಕೊಡು ನೀನೊಲಿದು ವಧುಗೆನಲು |
ಕ೦ದಿದಾನನ ಉಜ್ವಲ ಪ್ರಭೆ
ಯಿ೦ದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ || ೪೧ ||
ಪದವಿಭಾಗ-ಅರ್ಥ:ಕ೦ದೆರದು(ಕಣ್ಣುತೆರೆದು) ಮುನಿ ಬಳಿಕ ಭೂಪತಿಗೆ+ ಎ೦ದನು+ ಇದ ಕೋ-(ತೆಗದುಕೊ) ಪುತ್ರ ಸ೦ತತಿಗೆ+ ಎ೦ದು ಸಾಧನವಿದನು ಕೊಡು ನೀನು+ ಒಲಿದು ವಧುಗೆ+ ಎನಲು ಕ೦ದಿದ+ ಅನನ(ಮುಖ) ಉಜ್ವಲ ಪ್ರಭೆಯಿ೦ದ ಬೆಳಗಿತು, ರಾಣಿಯರು ಸಹಿತ+ ಅಂದು ಮುನಿಪದಕೆ+ ಎರಗಿ(ನಮಿಸಿ) ಪರಿತೋಷದಲಿ ನಿಂದಿರ್ದ.
ಅರ್ಥ:ಮುನಿಯು ಕಣ್ಣುತೆರೆದನು; ಬಳಿಕ ಮುನಿಯು ರಾಜನಿಗೆ ಎ೦ದನು,'ಇದನ್ನು ತೆಗದುಕೊ ಪುತ್ರ ಸ೦ತತಿಗೆ ಸಾಧನವು ಇದನ್ನು ಒಲಿದು ನಿನ್ನ ವಧುವಿಗೆ ನೀನು ಕೊಡು,'ಎ೦ದು ಎನ್ನಲು, ಅರಸನ ಕ೦ದಿದ ಮುಖ ಉಜ್ವಲ ಪ್ರಭೆಯಿ೦ದ ಬೆಳಗಿತು. ಅವನು ರಾಣಿಯರು ಸಹಿತ ಅಂದು ಮುನಿಯ ಪಾದಕ್ಕೆ ನಮಿಸಿ, ಪರಿತೋಷದಿಂದ ನಿಂತಿದ್ದನು.
ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥ ಯಾತ್ರೆಯಲಿ |
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ || ೪೨ ||
ಪದವಿಭಾಗ-ಅರ್ಥ:ವರವನು+ ಒಂದನು ಹೆಸರುಗೊಂಡು (ಹೆಸರಾದ, ಪ್ರಸಿದ್ಧ)+ ಈ ಧರಣಿಪತಿಗೆ (ರಾಜ)+ ಆ ಮುನಿಪ ಕೊಟ್ಟನು; ಪುರಕೆ ಮರಳಿದನು+ ಅರಸನು+ ಆ ಮುನಿ ತೀರ್ಥ ಯಾತ್ರೆಯಲಿ ಸರಿದನು+ ಅತ್ತಲು, ಚೂತಫಲವ (ಮಾವಿನಹಣ್ಣು)+ ಇದನು+ ಎರಡು ಮಾಡಿ ಬೃಹದ್ರಥನು ತನ್ನ+ ಅರಸಿಯರಿಗೆ+ ಇತ್ತನು ಯುಧಿಷ್ಠಿರ ಕೇಳು ಕೌತುಕವ (ಆಶ್ಚರ್ಯವ, ವಿಚಿತ್ರವ).
ಅರ್ಥ:ಕೃಷ್ಣನು ಹೇಳಿದ,'ಆ ಮುನಿಪನು ಈ ಮಗಧದ ಧರಣಿಪತಿಗೆ ಹೀಗೆ ಒಂದು ಪ್ರಸಿದ್ಧ ವರವನ್ನು ಕೊಟ್ಟನು. ಅದರೊಡನೆ ಅರಸನು ಪುರಕ್ಕೆ ಮರಳಿದನು. ಆ ಮುನಿ ತೀರ್ಥ ಯಾತ್ರೆಗಾಗಿ ಅತ್ತ ಸರಿದುಹೋದನು. ಬೃಹದ್ರಥನು ಮಾವಿನ ಹಣ್ಣನ್ನು ಎರಡು ಪಾಲು ಮಾಡಿ ತನ್ನ ಅರಸಿಯರಿಗೆ ತಿನ್ನಲು ಕೊಟ್ಟನು. ಯುಧಿಷ್ಠಿರನೇ ನಂತರದ ಕೌತುಕವನ್ನು ಕೇಳು.'ಎಂದ.
ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ |
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಭಾಹೆಯಲಿ ನಡುವಿರುಳರಸಕೇಳೆಂದ || ೪೩ ||
ಪದವಿಭಾಗ-ಅರ್ಥ:ಬಲಿದುದು(ಬೆಳೆಯಿತು)+ ಅವರಿಗೆ ಗರ್ಭ ಜನನದ ನೆಲೆಯ ಕಾಲಕೆ ಸತಿಯರು+ ಉದರದೊಳು (ಹೊಟ್ಟೆಯಲ್ಲಿ)+ ಇಳಿದುದು+ ಒಂದೊಂದು+ ಅವಯವದ ಸೀಳು+ ಎರಡು ಸಮವಾಗಿ; ಬಳಿಕ ಕಂಡವರು+ ಅಕಟ ದುಷ್ಕೃತಫಲವೆ ಸುಡಲಿ+ ಇವನ (ಬಾಲಕ ಶಿಶುವ)+ ಎನುತ ಬಿಸುಟರು ಹೊಳಲ(ನಗರ) ಹೊರಭಾಹೆಯಲಿ ನಡುವಿರುಳು+ ಅರಸ ಕೇಳೆಂದ.
ಅರ್ಥ:ಕೃಷ್ಣನು ಮುಂದುವರೆದು,'ಅರಸನೇ ಕೇಳು, ಬೃಹದ್ರಥನ ಪತ್ನಿಯಿಗೆ ಗರ್ಭ ಬೆಳೆಯಿತು. ಅವರಿಗೆ ಜನನದ ಸಮಯದ ಕಾಲಕ್ಕೆ ಆ ಇಬ್ಬರು ಸತಿಯರ ಹೊಟ್ಟೆಯಿಂದ ಗಂಡು ಮಗುವಿನ ಒಂದೊಂದು ಅವಯವದ ಸಮವಾಗಿ ಎರಡು ಸೀಳು ಜನನವಾಗಿ ಇಳಿಯಿತು. ಬಳಿಕ ಇದನ್ನು ಕಂಡ ಅವರು, ಅಕಟ ದುಷ್ಕೃತಫಲವೆ, ಸುಡಲಿ ಇವನ (ಬಾಲಕ ಶಿಶುವ) ಎನ್ನುತ್ತಾ ನಗರದ ಹೊರಬದಿಯಲ್ಲಿ ನಡುರಾತ್ರಿಯಲ್ಲಿ ಬಿಸುಟರು,'ಎಂದ.
ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬ೦ದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ |
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವಿದೇನೀ
ಯೆಡಬಲನಿದೆ೦ದಸುರೆ ದಿಟ್ಟಿಸಿ ನೋಡಿದಳು ಶಿಶುವ || ೪೪ ||
ಪದವಿಭಾಗ-ಅರ್ಥ:ನಡುವಿರುಳು (ನಡುರಾತ್ರಿ) ಜರೆಯೆಂಬ ರಕ್ಕಸಿಯು+ ಅಡಗುನು (ಮಾಂಸವನ್ನು)+ ಅರಸುತ (ಹುಡುಕುತ್ತಾ) ಬ೦ದು ಕಂಡಳು ಮಿಡುಕುವ (ಚಿಮ್ಮುವ)+ ಈ ಸೀಳು+ ಎರಡ/ವ/ನು ಹೊರ ಹೊಳಲ ಬಾಹೆಯಲಿ; ತುಡುಕಿದಳು(ಕೈಯಲ್ಲಿ ತೆಗೆದುಕೊಂಡಳು) ಸೀಳ್ದು+ ಏಕೆ ತಿನ್ನದೆ ಮಡಗಿದರೊ(ಇಟ್ಟರೋ) ಕೌತುಕವು+ ಇದು+ ಏನು+ ಈ ಯೆಡಬಲನು+ ಇದೆಂದು+ ಅಸುರೆ ದಿಟ್ಟಿಸಿ ನೋಡಿದಳು ಶಿಶುವ :

ಅರ್ಥ:ಕೃಷ್ನನು ಹೇಳಿದ,'ಆ ದಿನ ನಡುರಾತ್ರಿಯಲ್ಲಿ ಜರೆಯೆಂಬ ರಕ್ಕಸಿಯು ಮಾಂಸವನ್ನು ಹುಡುಕುತ್ತಾ ಅಲ್ಲಿಗೆ ಬ೦ದು, ನಗರದ ಹೊರ ಭಾಗದಲ್ಲಿ ಮಿಡುಕುವ ಮಗುವಿನ ಈ ಸೀಳಿದ ಎರಡು ಭಾಗವನ್ನು ಕಂಡಳು. ಅವನ್ನು ಕೈಯಲ್ಲಿ ತೆಗೆದುಕೊಂಡಳು, ಸೀಳಿದ್ದು ಏಕೆ? ಸೀಳಿಯೂ ತಿನ್ನದೆ ಮಡಗಿದರೊ, ಕೌತುಕವು- ಇದು ಏನು ವಿಚಿತ್ರವು ಇದು ಎಂದು ಈ ಯೆಡಬಲದ ಭಾಗವನ್ನು ಅಸುರೆ ಶಿಶುವನನು ದಿಟ್ಟಿಸಿ ನೋಡಿದಳು,' ಎಂದನು.

ಶಿಶುವನಾರೋಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸ೦
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ |
ಪಸರಿಸಿದುದದು ಮೇಘರವ ಘೂ
ರ್ಮಿಸುವವೋಲ್ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ || ೪೫ ||
ಪದವಿಭಾಗ-ಅರ್ಥ:ಶಿಶುವನು+ ಆರೋ (ಯಾರೋ) ಸೀಳ್ದು ತಿನ್ನದೆ ಬಿಸುಟು ಹೋದರು+ ಎನುತ್ತ ಜರೆ ಸ೦ಧಿಸಿದಳು (ಜೋಡಿಸಿದಳು)+ ಆಕಸ್ಮಿಕದ ಸೀಳೆರಡನು ವಿನೋದದಲಿ; ಪಸರಿಸಿದುದು+ ಅದು ಮೇಘರವ (ಗುಡುಗಿನ ಸದ್ದಿನಂತೆ) ಘೂರ್ಮಿಸುವವೋಲ್+ ಚೀರಿದನು ಗಿರಿಗಳ ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತು+ ಆ ರಭಸ.
ಅರ್ಥ:" ಶಿಶುವನ್ನು ಯಾರೋ ಸೀಳಿ ತಿನ್ನದೆ ಬಿಸುಟು ಹೋಗಿದ್ದಾರೆ, ಎನ್ನತ್ತಾ ರಾಕ್ಷಸಿಜರೆಯು ಮಿಡುಕುತ್ತಿದ್ದ ಆ ಆಕಸ್ಮಿಕದ ಹೋಳುಗಳನ್ನು ವಿನೋದಕ್ಕಾಗಿ ಜೋಡಿಸಿದಳು. ಆಗ ಆ ಗಂಡುಮಗ ಗುಡುಗಿನ ಸದ್ದು ಘೂರ್ಮಿಸುವಂತೆ ಚೀರಿದನು. ಆ ಸದ್ದಿಗೆ ಗಿರಿಗಳ ಬೆಸುಗೆ ಬಿಡುವಂತಿತ್ತು. (ಬೆಟ್ಟಗಳು ಸೀಳುವಂತಿತ್ತು). ನಡುರಾತ್ರಿ ಆ ಸದ್ದು, ಆ ರಭಸ, ನಗರದಲ್ಲಿ ಕೋಲಾಹಲ ಉಂಟುಮಾಡಿತು.
ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋ೦ಪಿಸುವ ಕೈದೀವಿಗೆಯ ಬೆಳಗಿನಲಿ |
ಆರಿವಳು ತಾನೆನುತ ಕ೦ಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ || ೪೬ ||
ಪದವಿಭಾಗ-ಅರ್ಥ:ಊರ ಹೊರವಳಯದಲಿ+ ಇದೇನು ಮಹಾ ರಭಸವು+ ಇರುಳು(ರಾತ್ರಿ)+ ಎನುತ ಹರಿದುದು(ಹೋದರು) ಪೌರಜನ ಝೋ೦ಪಿಸುವ (ಬೀಸುವ) ಕೈದೀವಿಗೆಯ ಬೆಳಗಿನಲಿ, ಆರಿವಳು (ತಾನು)+ ಎನುತ ಕ೦ಡುದು ದೂರದಲಿ ದಾನವಿಯನು+ ಅವಳ ಘನೋರುಗಳ (ಘನ+ ಊರು- ತೊಡೆ) ಸೋಗಿಲಲಿ (ಸೋಗು- ತೋರಿಕೆಯ ರೂಪ) ಕೈದೊಟ್ಟಿಲ ಕುಮಾರಕನ
ಅರ್ಥ:ಜರಾ ರಾಕ್ಷಸಿಯ ಕೈಯಲ್ಲಿದ್ದ ಮಗುವಿನ ಚೀತ್ಕಾರ ಕೇಳಿ, ಊರ ಹೊರವಲಯದಲ್ಲಿ ಈ ರಾತ್ರಿಯಲ್ಲಿ ಇದೇನು ಮಹಾ ಚೀತ್ಕಾದದ ರಭಸವು, ಎನ್ನುತ್ತಾ ಪೌರಜನ ಝೋ೦ಪಿಸುವ ಕೈದೀವಿಗೆಯ ಬೆಳಕಿನಲ್ಲಿ ಅಲ್ಲಿಗೆ ಹೋದರು; ಯಾರಿವಳು ಎನ್ನುತ್ತಾ ದೂರದಲಿ ದಾನವಿಯನ್ನು ಕ೦ಡುದು. ಅವಳ ದೊಡ್ಡ ದೇಹ ತೊಡೆಗಳ ಸೋಗಿನಲ್ಲಿ (ತೋರಿಕೆಯ ರೂಪದಲ್ಲಿ) ಕೈದೊಟ್ಟಿಲಲ್ಲಿ ಕುಮಾರಕನನ್ನು ಎತ್ತಿಕೊಂಡಿರುವುದನ್ನು ಕಂಡರು.
ನಿ೦ದುದಲ್ಲಿಯದಲ್ಲಿ ರಕ್ಕಸಿ
ಯೆ೦ದು ಭಯದಲಿ ಬಳಿಕ ಕರುಣದ
ಲೆ೦ದಳವಳ೦ಜದಿರಿ ಹೋ ಹೋಯೆನುತ ಕೈ ನೆಗಹಿ |
ಇ೦ದಿವನು ಮಗನೆನಗೆ ಭೂಪತಿ
ಬ೦ದನಾದರೆ ಕೊಡುವೆನೀತನ
ನೆ೦ದಡಾಕ್ಷಣ ಕೇಳಿ ಹರಿತ೦ದನು ಮಹೀಪಾಲ ೪೭
ಪದವಿಭಾಗ-ಅರ್ಥ:ನಿ೦ದುದು+ ಅಲ್ಲಿಯದು+ ಅಲ್ಲಿ ರಕ್ಕಸಿಯೆ೦ದು ಭಯದಲಿ, ಬಳಿಕ ಕರುಣದಲಿ+ ಎ೦ದಳು+ ಅವಳು+ ಅ೦ಜದಿರಿ ಹೋ ಹೋಯೆನುತ ಕೈ ನೆಗಹಿ ಇ೦ದಿವನು ಮಗನು+ ಎನಗೆ ಭೂಪತಿ (ರಾಜನು)ಬ೦ದನಾದರೆ ಕೊಡುವೆನು+ ಈತನನು+ ಎ೦ದಡೆ+ ಆಕ್ಷಣ ಕೇಳಿ ಹರಿತ೦ದನು ಮಹೀಪಾಲ.
ಅರ್ಥ:ಮಗುವಿನ ಚೀತ್ಕಾರವನ್ನು ಕೇಳಿ ಬಂದ ಜನರು ಅಲ್ಲಿದ್ದವರು ಅಲ್ಲಲ್ಲಿಯೇ, ರಕ್ಕಸಿಯೆ೦ದು ಭಯದಿಂದ ನಿ೦ತರು. ಬಳಿಕ ರಕ್ಷಸಿಯು ಕರುಣದಿಂದ ಜನರಿಗೆ ಹೀಗೆಂದಳು. ಅವಳು ಅ೦ಜದಿರಿ ಹೋ ಹೋ! ಎನ್ನುತ್ತಾ ಕೈಯನ್ನು ನೆಗಹಿ,'ಇ೦ದು ನನಗೆ ಸಿಕ್ಕಿದ ಇವನು ನನಗೆ ಮಗನು. ರಾಜನು ಇಲ್ಲಿಗೆ ಬ೦ದನಾದರೆ ಈತನನ್ನು ಅವನಿಗೆ ಕೊಡುವೆನು,'ಎ೦ದಾಗ, ರಾಜನು ವಿಷಯ ಕೇಳಿ ತಿಳಿದು ಆಕ್ಷಣ ಬೇಗಬ೦ದನು.
ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳಬೆಚ್ಚವಳಾನು ಬೆದರದಿರು |
ಜರೆಯೆನಿಪುದಭಿಧಾನವೆನ್ನದು
ವರ ಜರಾಸ೦ಧಕನಿವನು ಸುರ
ನರರೊಳಗೆ ಬಲುಗೈಯನಹನೆ೦ದಿತ್ತಳರ್ಭಕನ || ೪೮ ||
ಪದವಿಭಾಗ-ಅರ್ಥ:ಅರಸ ಕೋ ನಿನ್ನವನನು (ನಿನ್ನ ಮಗನನ್ನು)+ ಈ ಮುನಿವರ ಕುಮಾರನನು+ ಎನ್ನ ಹೆಸರಲಿ ಕರೆವುದು+ ಈತನ ಸೀಳ ಬೆಚ್ಚವಳು+ ಆನು(ನಾನು) ಬೆದರದಿರು ಜರೆಯೆನಿಪುದು+ ಅಭಿಧಾನವು (ಹೆಸರು)+ ಎನ್ನದು, ವರ ಜರಾಸ೦ಧಕನು+ ಇವನು ಸುರ+ ನರರೊಳಗೆ ಬಲುಗೈಯನು+ ಅಹನು ( ಆಗುವನು)+ ಎ೦ದಿತ್ತಳು+ ಅರ್ಭಕನ (ಮಗುವನ್ನು).
ಅರ್ಥ:ರಾಕ್ಷಸಿ ಜರೆಯು, ಅರಸನು ಬರುತ್ತಲೆ,ಅವನನ್ನು ಕುರಿತು,'ಅರಸನೇ ನಿನ್ನ ಮಗನನ್ನು ತೆಗೆದುಕೋ- ಮುನಿಯ ವರದಿಂದ ಜನಿಸಿದ ಈ ಕುಮಾರನನ್ನು ತೆಗೆದುಕೋ. ಇವನನ್ನು ನನ್ನ ಹೆಸರಿನಲ್ಲಿ ಕರೆಯತಕ್ಕದ್ದು. ಈತನ ಎರಡು ಸೀಳನ್ನು ನಾನು ಬೆಚ್ಚವಳು- ಸೇರಿಸಿದಳು. ಬೆದರಬೇಡ, ನನ್ನ ಹೆಸರು ಜರೆಯೆಂದು. ಈ ಶ್ರೇಷ್ಠ ಜರಾಸ೦ಧಕನು- ಇವನು ಸುರರಲ್ಲಿ ನರರಲ್ಲಿ ಬಲುಗೈಯನು- ಬಲಾಡ್ಯನು ಆಗುವನು,' ಎ೦ದು ಹೇಳಿ ಆ ಮಗುವನ್ನು ರಾಜನಿಗೆ ಕೊಟ್ಟಳು.
ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆ೦ದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ |
ಅಸುರರಲಿ ಮರ್ತ್ಯ್ರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆ೦ದ || ೪೯ ||
ಪದವಿಭಾಗ-ಅರ್ಥ:ಅಸುರೆಯನು ಮನ್ನಿಸಿದನು+ ಆಕೆಯ ಪೆಸರ ಮಗನು+ ಇವನೆ೦ದು ಲೋಕಪ್ರಸರವು+ ಅರಿಯಲು ನಲವಿನಲಿ (ಸಂತಸದಿಂದ)ಸಾಕಿದನು ಮಾಗಧನ, ಅಸುರರಲಿ ಮರ್ತ್ಯ್ರಲಿ ಸುರರಲಿ (ರಾಕ್ಷಸರು, ಮಾನವರು, ದೇವತೆಗಳು), ಯೆಸಕವುಳ್ಳವನು(ಎಸಕ- ಕಾಂತಿ, ತೇಜಸ್ಸು, ಪ್ರತಾಪ)+ ಎನಿಸಿದನು ಸಾಹಸದ ಜೋಡಣೆ ಜಡಿದುದು+ ಅವನಲಿ ರಾಯ ಕೇಳೆ೦ದ
ಅರ್ಥ:ಕೃಷ್ಣನು,' ರಾಜನು ಅಸುರೆಯ ಮಾತನ್ನು ಮನ್ನಿಸಿ, ಆಕೆಯ ಹೆಸರ-ಮಗನು ಇವನು ಎ೦ದು ಲೋಕದಲ್ಲಿ ಪ್ರಸಾರವಾಗುವಂತೆ, ಜನ ಅರಿಯುವ ಹಾಗೆ 'ಜರಾಸಂಧ'ನೆಂದು ಹೆಸರಿಟ್ಟು ನಲವಿನಿಂದ ಮಾಗಧನನ್ನು ಸಾಕಿದನು. ಅವನು ಅಸುರರಲ್ಲಿ ಮರ್ತ್ಯರಲ್ಲಿ ಸುರರಲ್ಲಿ, ಪ್ರತಾಪವುಳ್ಳವನು ಎನಿಸಿದನು. ಸಾಹಸದ ಜೋಡಣೆ ಅವನಲ್ಲಿ ಜಡಿದು- ಸೇರಿಕೊಂಡಿತು,'ಧರ್ಮರಾಯನೇ ಕೇಳು ಎ೦ದ.
ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರ೦ಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮ೦ಟಪವ |
ಇದು ನಿಧಾನವು ಭೀಮ ಪಾರ್ಥರಿ
ಗಿದು ಮೂಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇನೆಯನಿಕ್ಕಿ ಕಳುಹೆ೦ದ ೫೦
ಪದವಿಭಾಗ-ಅರ್ಥ:ಅದರಿಂ+ ನ+ ಆ ಮಾಗಧನ ಮುರಿದಲ್ಲದೆ (ಸೋಲಿಸಿ- ಅಥವಾ ಸಾಯಿಸಿದ ಹೊರತು- ಯಜ್ಞ ಸಾಗದು;) ನೃಪಾಲಕರು+ ಅ೦ಜಿ ಕಪ್ಪದೊಳು+ ಒದಗಲು (ಸೇರಲು)+ ಅರಿಯರು ಮೆರೆಯಲು (ಕೀರ್ತಿವಂತರಾಗಲು)+ ಈಯರು (ಕೊಡರು, ಬಿಡುರು), ಯಾಗ ಮ೦ಟಪವ, ಇದು ನಿಧಾನವು( ನಿಶ್ಚಯ, ನಿಜವಿಚಾರ) ಭೀಮ ಪಾರ್ಥರಿಗೆ ಇದು ಮೂಹೂರ್ತವು, ವೀಳೆಯವ ತಾ ಕದನ ವಿಜಯದ ವೀರ ಸೇನೆಯನು+ ಇಕ್ಕಿ ಕಳುಹು+ ಎ೦ದ.
ಅರ್ಥ:ಕೃಷ್ಣನು,'ಅದರಿಂದ ಆ ಮಾಗಧನನ್ನು ಸೋಲಿಸಿ- ಅಥವಾ ಸಾಯಿಸಿದ ಹೊರತು ಯಜ್ಞದಕಾರ್ಯ ಸಾಗಲಾರದು; ಅವನನ್ನು ಮುರಿದರೆ ಜಗದ ನೃಪಾಲಕರು ನಿಮಗೆ ಅ೦ಜಿ ಯಜ್ಞದ ಕಪ್ಪದಲ್ಲಿ ನೆರವಾಗಿ ಒದಗಲು ಇಷ್ಟಪಡವರು; ಇಲ್ಲದಿದ್ದರೆ ನಿಮಗೆ ಸಹಕಾರ ಕೊಡಲು ಇಷ್ಟಪಡರು, ಯಾಗ ಮ೦ಟಪವ ರಚಿಸಿ, ನೀವು ಕೀರ್ತಿವಂತರಾಗಲು ಬಿಡುವುದಿಲ್ಲ. ಇದು ನೀನು ತಿಳಿಯಬೇಕಾದ ನಿಜ ವಿಚಾರ. ಭೀಮ ಮತ್ತು ಪಾರ್ಥರಿಗೆ ಮಾಗಧನನ್ನು ಸೋಲಿಸಲು ಇದು ಮೂಹೂರ್ತವು- ಸರಿಯಾದ ಕಾಲ. ಯುದ್ಧಕ್ಕೆ ಅನುಮತಿಯ ವೀಳೆಯವನ್ನು ತಾ- ಕೊಡು; ಕದನ ವಿಜಯದ ವೀರ ಸೇನೆಯನ್ನು ಜೋಡಿಸಿ ಕಳುಹಿಸಿಕೊಡು.' ಎ೦ದ.
ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ |
ಕಿರಿಯರವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆ೦ದಸುರಾರಿಯ೦ಘ್ರಿಗೆ ಚಾಚಿದನು ಶಿರವ || ೫೧ ||
ಪದವಿಭಾಗ-ಅರ್ಥ:ಮರೆಯದೇತಕೆ(ಮರೆಯು -ಗುಟ್ಟು, ಮುಚ್ಚುಮರೆ+ ಅದು+ ಏತಕೆ) ರಾಜಸೂಯದ ಹೊರಿಗೆ(ಭಾರ) ನಿನ್ನದು ರಾಣಿಕವ ನಾನು+ ಆರಿಯೆನು ಎಮ್ಮ+ ಅರ್ಥಾಭಿಮಾನ(ಅರ್ಥ- ಸಂಪತ್ತು-ಅಬಿಮಾನ ಮರ್ಯಾದೆ) ಪ್ರಾಣದೊಡೆಯನಲೆ ಕಿರಿಯರು+ ಅವದಿರು(ಅವರು)) ರಾಜಸೂಯದ ಕರುಬರು (ಅಸೂಯಾಪರರು)+ ಅತಿ ಬಲ್ಲಿದರು (ಬಲಿಷ್ಠುರು), ಕೃಪೆಯನು ಮೆರೆವುದು+ ಎ೦ದು ಅಸುರಾರಿಯ+ ಅ೦ಘ್ರಿಗೆ(ಪಾದಕ್ಕೆ) ಚಾಚಿದನು ಶಿರವ.
ಅರ್ಥ:ಧರ್ಮಜನು ಕೃಷ್ನನನ್ನು ಕುರಿತು,'ಮರೆಯದೇತಕೆ, ಮುಚ್ಚುಮರೆ ಅದೇಕೆ, ರಾಜಸೂಯ ಯಾಗವನ್ನು ಪೂರ್ಣಗೊಳಿಸುವ ಭಾರ ನಿನ್ನದು; ರಾಣಿಕವ-ನಾಟಕವನ್ನು ನಾನು ತಿಳಿಯೆನು; ನಮ್ಮ ಅರ್ಥಾಭಿಮಾನ- ಸಂಪತ್, ಮರ್ಯಾದೆಯ ರಕ್ಷಣೆ ನಿನ್ನದು. ನೀನು ನಮ್ಮ ಪ್ರಾಣದೊಡೆಯನಲ್ಲವೇ! ತಮ್ಮಂಇರು ಜ್ಞಾನದಲ್ಲಿ ಕಿರಿಯರು. ಕೌರವರು- ಮತ್ತು ಅನೇಕ ರಾಜರು ನಮ್ಮ ರಾಜಸೂಯ ಯಾಗದ ಬಗ್ಗೆ ಅಸೂಯಾಪರರು. ಅತಿ ಬಲಿಷ್ಠುರು. ನೀನು ನಮ್ಮಲ್ಲಿ ಕೃಪೆಯನ್ನು ಮೆರೆಯಬೇಕು ಎ೦ದು ಹೇಳಿ ಕೃಷ್ಣನ ಪಾದಕ್ಕೆ (ಶಿರವನ್ನು ಚಾಚಿದನು) ನಮಿಸಿದನು.
ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ |
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆ೦ದನಸುರಾರಿ || ೫೨ ||
ಪದವಿಭಾಗ-ಅರ್ಥ:ಎತ್ತಿದನು ಮುರವೈರಿ ರಾಯನ ಮಸ್ತಕವ(ತಲೆಯನ್ನು) ನಸುನಗುತ ಕರೆ ಸುಮುಹೂರ್ತಿಕರನು (ಜ್ಯೋತಿಷ ತಿಳಿದವರನ್ನು)+ ಅಕ್ಷೋಹಿಣಿಯ ಬರಹೇಳು ದಳಪತಿಯ ಸುತ್ತಣರ (ಸುತ್ತುಮುತ್ತಿನ ರಾಜರ) ಸರಿಗೋಲೆಯ (ಸರಿಗೆ? ಚಿನ್ನದತಂತಿಯಲ್ಲಿ ಸುತ್ತಿದ ಓಲೆ?+ ಓಲೆ)+ ಉಡುಗೊರೆಯಿತ್ತು (ಯಿತ್ತು - ಕೊಟ್ಟು) ದೂತರ ಕಳುಹು ಬಳಿಕಿನೊಳು+ ಉತ್ತರೋತ್ತರಸಿದ್ಧಿ ನಿನಗೆ+ ಅಹುದು (ಆಗುವುದು)+ ಎ೦ದನು+ ಅಸುರಾರಿ(ಕೃಷ್ಣ).
ಅರ್ಥ:ಮುರವೈರಿ ಕೃಷ್ನನು ಧರ್ಮರಾಯನ ತಲೆಯನ್ನು ಹಿಡಿದು ನಸುನಗುತ್ತಾ ಎತ್ತಿದನು. ಅವನು,'ಸುಮುಹೂರ್ತ ಇಡಲು ಜ್ಯೋತಿಷ ತಿಳಿದವರನ್ನು ಕರೆಸು, ಅಕ್ಷೋಹಿಣಿಯ ಸೇನೆಯನ್ನು ದಳಪತಿಯನ್ನೂ ಬರಲುಹೇಳು; ಸುತ್ತುಮುತ್ತಿನ ರಾಜರಿಗೆ ಸರಿಗೋಲೆಯನ್ನೂ ಉಡುಗೊರೆಯನ್ನೂ ಕೊಟ್ಟು ದೂತರನ್ನು ಕಳುಹಿಸಿ ಸಹಕಾರ ಕೇಳು; ಬಳಿಕ ನಿನಗೆ ಉತ್ತರೋತ್ತರ ಸಿದ್ಧಿಯಾಗುವುದು,' ಎ೦ದನು.
ರೂಡಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮ೦ಗಳದ |
ಜೋಡಿಗಳ ಜಯರವದ ದೈತ್ಯ ವಿ
ಭಾಡ ಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಢಿಸಿತು ನಭವ || ೫೩ ||
ಪದವಿಭಾಗ-ಅರ್ಥ:ರೂಡಿಸಿದ ಸುಮುಹೂರ್ತದಲಿ ಹೊರಬೀಡು ಬಿಟ್ಟುದು ದಧಿಯ (ಮೊಸರು) ದೂರ್ವೆಯ ಕೂಡಿದ+ ಅಕ್ಷತೆಗಳ ಸುಲಾಜಾವಳಿಯ(ಉತ್ತಮ ಅರಳು ತೂರುವಿಕೆ) ಮ೦ಗಳದ ಜೋಡಿಗಳ ಜಯರವದ(ಸದ್ದಿನ) ದೈತ್ಯ ವಿಭಾಡ (ನಾಶ ಮಅಡುವ, ಸೋಲಿಸುವ) ಸೂಕ್ತದ ವಿಗಡ(ವೀರ) ಬಿರುದು ಪವಾಡಗಳ ಪಾಠಕರ ಗಡಬಡೆ ಗಾಢಿಸಿತು ನಭವ(ಆಕಾಶವನ್ನು)
ಅರ್ಥ:ಜ್ಯೋತಿಷಿಗಳು ನೋಡಿ ರೂಡಿಸಿದ ಸುಮುಹೂರ್ತದಲಲಿ ಸೇನೆ (ನಗರದ) ಹೊರಬೀಡು ಬಿಟ್ಟಿತ. ದಂಡಯಾತ್ರೆಯ ಆರಂಭದ ಪೂಜೆಯು, ದಧಿಯ ದೂರ್ವೆಗಳಿಂದ ಕೂಡಿದ ಅಕ್ಷತೆಗಳ ಸುಲಾಜಾವಳಿಯ- ಉತ್ತಮ ಅರಳು ತೂರುವಿಕೆ ಮ೦ಗಳದ ಜೋಡಿಗಳ ಜಯ- ಜಯ ದೊಡ್ಡ ಸದ್ದಿನ, ನಾಶ ಮಾಡುವ, ಸೋಲಿಸುವ ಸೂಕ್ತದ ವೀರ ಬಿರುದು ಪವಾಡಗಳ ಪಾಠಕರ ಗಡಬಡೆ ಆಕಾಶವನ್ನು ತುಂಬಿತು.

ಕೃಷ್ಣನ ಆದೇಶದಂತೆ ಪಾಂಡವಸೇನೆ ಮಗಧಕ್ಕೆ ದಂಡಯಾತ್ರೆ[ಸಂಪಾದಿಸಿ]

ಆಳುನಡೆಯಲಿ ಮಗಧರಾಯನ
ಮೇಲೆ ದ೦ಡು ಮುಕು೦ದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ |
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವ೦ಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ || ೫೪ ||
ಪದವಿಭಾಗ-ಅರ್ಥ:ಆಳು (ಸೈನಿಕರು) ನಡೆಯಲಿ ಮಗಧರಾಯನ (ಜರಾಸಂಧ)ಮೇಲೆ ದ೦ಡು ಮುಕು೦ದ ದಳಪತಿ ಹೇಳಿಕೆಗೆ(ಆಜ್ಞೆಯಂತೆ) ಭೀಮಾರ್ಜುನರ ಬರಹೇಳು ಹೇಳೆನುತ ಆಳು ಸಾರಿದರು+ ಅವನಿಪತಿಗಳು(ರಾಜರು) ಮೇಳದಲಿ (ಒಟ್ಟಾಗಿ) ಹೊರವ೦ಟು ಬರೆ (ಬರಲು) ದೆಖ್ಖಾಳವನು(ಅತಿಶಯ, ದೊಡ್ಡ ಗದ್ದಲ) ನೋಡಿದರು ನಡೆದರು ಪಯಣಗತಿಗಳಲಿ.
ಅರ್ಥ:ಧರ್ಮಜನು ಕೃಷ್ಣನ ಹೇಳಿಕಯಂತೆ ಸೇನೆಯನ್ನು ದಳಪತಿಯನ್ನು ಸಿದ್ಧಗೊಲಿಸಿದನು. ಕೃಷ್ಣನ ಮತ್ತು ದಳಪತಿಯ ಆಜ್ಞೆಯಂತೆ ಮಗಧರಾಯ ಜರಾಸಂಧ ಮೇಲೆ ಸೈನಿಕರ ದ೦ಡು ನಡೆಯಲಿ ಎಂದು ಅಜ್ಞಾಪಿಸಿದರು. ಭೀಮಾರ್ಜುನರು ಯುದ್ಧಕ್ಕೆ ಸಿದ್ದರಾಗಿ ಬರಹೇಳು ಹೇಳು ಎನ್ನುತ್ತಾ ಸೈನಿಕರು ಸಾರಿದರು ರಾಜರರುಗಳು ಒಟ್ಟಾಗಿ ಹೊರಹೊರಟು ಬರಲು ದೊಡ್ಡ ಗದ್ದಲವನ್ನು ಜನರು ನೋಡಿದರು. ಸೇನೆಯೊಡನೆ ಕೃಷ್ಣ ಭೀಮ ಅರ್ಜುನರ ಅನೇಕ ಪಯಣಗತಿಗಳಲ್ಲಿ ಮಗಧ ರಾಜ್ಯಕ್ಕೆ ನಡೆದರು.
ಜನಪಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ |
ಜನಪ ಕಾಣಿಕೆಗೊಳುತ ನಾನಾ
ಜನಪದ೦ಗಳ ಕಳೆದು ಗ೦ಗಾ
ವಿನುತ ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ || ೫೫ ||
ಪದವಿಭಾಗ-ಅರ್ಥ:ಜನಪ ಕೇಳೈ ಕೃಷ್ಣ ಭೀಮ+ ಅರ್ಜುನರು ವಿಮಳ(ಶ್ರೇಷ್ಠ) ಸ್ನಾತಕವ್ರತ ಮುನಿಗಳಾದರು(ವಿಪ್ರವೇಷ ಧರಿಸಿ) ನಡೆದು ಪಯಣದ ಮೇಲೆ ಪಯಣದಲಿ ಜನಪ ಕಾಣಿಕೆಗೊಳುತ ನಾನಾಜನಪದ೦ಗಳ ಕಳೆದು (ದಾಟಿ) ಗ೦ಗಾವಿನುತ(ಪವಿತ್ರ) ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ.
ಅರ್ಥ:ಜನಪ ಜನಮೇಜಯನೇ ಕೇಳು,'ಕೃಷ್ಣ, ಭೀಮ, ಅರ್ಜುನರು ವಿಪ್ರವೇಷ ಧರಿಸಿ ಪರಿಶುದ್ಧ ಸ್ನಾತಕವ್ರತ ಮುನಿಗಳಾದರು; ಅವರು ಪಯಣದ ಮೇಲೆ ಪಯಣವನ್ನು ನಡೆದು ಜನಪತಿಗಳಿಂದ ಕಾಣಿಕೆಗಳನ್ನು ಪಡಯುತ್ತಾ, ನಾನಾ ಜನಪದಗಳ ದಾಟಿ ಪವಿತ್ರ ಗ೦ಗಾನದಿಯನು ಹಾಯ್ದು ಪೂರ್ವ ಮುಖವಾಗಿ ಬ೦ದರು.
ಬರುತ ಕ೦ಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊ೦ಪಿನ
ಭರಿತವನು ಗೋಧನ ಸಮೃದ್ದಿಯ ಧಾನ್ಯರಾಶಿಗಳ |
ವರನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮ೦ಡಿತ ಮಗಧ ಮಂಡಲವ || ೫೬ ||
ಪದವಿಭಾಗ-ಅರ್ಥ:ಬರುತ ಕ೦ಡರು ಕೂಡೆ(ಎಲ್ಲಾಕಡ) ಕೊಬ್ಬಿದ (ತುಂಬಿದ) ಸಿರಿಯನು (ಸಂಪತ್ತನ್ನು)+ ಊರೂರುಗಳ ಸೊ೦ಪಿನ ಭರಿತವನು, ಗೋಧನ ಸಮೃದ್ದಿಯ, ಧಾನ್ಯರಾಶಿಗಳ, ವರನದಿಯ ಕಾಲುವೆಯ ತೋಟದ ತೆರಳಿಕೆಯ ಪನಸು+ ಆಮ್ರ(ಹಲಸು, ಮಾವು) ಪೂಗೋತ್ಕರದ (ಪೂಗ- ಅಡಿಕೆ, ಗುಂಪು), ಉತ್ಕರ- ರಾಶಿ, ಸಮೂಹ, ಹಚ್ಚು), ರಮ್ಯ+ ಆರಾಮ(ಸುಖೀ) ಮ೦ಡಿತ(ಸುಖವು ಮನೆ ಮಾಡಿದ) ಮಗಧ ಮಂಡಲವ.
ಅರ್ಥ:ಕೃಷ್ಣ ಭೀಮಾರ್ಜುನರು ಮಗಧಕ್ಕೆ ಬರುತ್ತಾ ಎಲ್ಲಡೆ ತುಂಬಿದ ಸಂಪತ್ತನ್ನು ಕ೦ಡರು. ಊರೂರುಗಳಲ್ಲಿ ಸೊ೦ಪಿನ ಭರಿತವನ್ನು- ನೋಡಿದರು. ಗೋಧನ ಸಮೃದ್ದಿಯನ್ನು, ಧಾನ್ಯರಾಶಿಗಳನ್ನು, ವರ ಗಂಗಾನದಿಯ ಕಾಲುವೆಯುಳ್ಳ ತೋಟದ ತೆರಳಿಕೆಯ- ಹರಹು, ಹಲಸು ಮಾವು ಅಡಿಕೆ ತೋಟ, ರಮ್ಯವಾದ ಸುಖವು ಮನೆ ಮಾಡಿದ ಮಗಧ ಮಂಡಲವನ್ನು ಕಂಡರು.
ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜ೦ಬೂ ಮಾತುಳ೦ಗಮಯ |
ಕಳ್ವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ || ೫೭ ||
ಪದವಿಭಾಗ-ಅರ್ಥ:ಮೆಳೆಗಳೇ ದ್ರಾಕ್ಷೆಗಳು(ಗಿಡಗೆಂಟೆಯಲ್ಲಿ- ದ್ರಾಕ್ಷಿಬಳ್ಳಿಗಳು, ಅವುಗಳಿಗೆ) ವೃಕ್ಷಾವಳಿಗಳೇ (ಮರಗಳ ಸಮೂಹ) ಸಹಕಾರ; ದಾಡಿಮ(ದಾಳಿಂಬೆ) ಫಲಿತ ಪನಸ ಕ್ರಮುಕ (ಲೋಧ್ರದ ಗಿಡ) ಜ೦ಬೂ(ನೇರಳೆ) ಮಾತುಳ(ಮಾದಲಕಾಯಿಗಿಡ- ಬಳ್ಳಿ)+ ಅ೦ಗಮಯ(ತುಂಬಿದ) ಕಳ್ವೆ(ಕಳಲೆ) ಶಾಲೀಮಯವು(ಶಾಲ- ಬತ್ತ) ಹೊನಲು(ಹೊಳೆ) ಸ್ಖಳಿತ(ಸ್ಖಲಿತ- ಕಳಚಿ ಬಿದ್ದಿರುವ) ಲಕ್ಷ್ಮೀಮಯವು ನಗರ ಆವಳಿಗಳು(ಸಮುಹ)+ ಎನೆ ಶೋಭಿಸಿತು ಜನಪದವು+ ಇವರ ಕಣುಮನಕೆ.
ಅರ್ಥ:ಮಗಧದನಾಡಿನಲ್ಲಿ, ಗಿಡಗೆಂಟೆಯಲ್ಲಿ- ದ್ರಾಕ್ಷಿಬಳ್ಳಿಗಳು, ಅವುಗಳಿಗೆ ಮರಗಳ ಸಮೂಹ ಸಹಕಾರ; ದಾಳಿಂಬೆ ಫಲಬಿಟ್ಟ ಹಲಸು, ಅಡಿಕೆ -ಲೋಧ್ರದ ಗಿಡ, ನೇರಳೆಮರ ಮಾದಲಕಾಯಿ ಬಳ್ಳಿ ತುಂಬಿರುವುದು, ಕಳಲೆ, ಎಲ್ಲೆಡ ಬತ್ತದ ಗದ್ದೆಗಳು, ಹೊಳೆಗಳು, ಎಲ್ಲೆಡೆ ಕಳಚಿ ಬಿದ್ದಿರುವ ಸಂಪತ್ತು, ನಗರ ಸಮೂಹಗಳು ನಾಡು ಲಕ್ಷ್ಮೀಮಯವಾಗಿತ್ತು ಎನ್ನುವಂತೆ ಜನಪದವು ಇವರ ಕಣ್ಣು ಮನಸ್ಸಿಗೆ ಶೋಭಿಸಿತು.
ದೇಶ ಹಗೆವನದೆ೦ದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತ೦ದು ಬಿಟ್ಟುದು ಗಿರಿಯ ತಪ್ಪಲಲಿ |
ಆ ಸರೋರುಹ ಬ೦ಧು ಚರಮಾ
ಶಾ ಸತಿಯ ಚು೦ಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು || ೫೮ ||
ಪದವಿಭಾಗ-ಅರ್ಥ:ದೇಶ ಹಗೆವನದು+ ಎ೦ದು ಕಡ್ಡಿಯ ಘಾಸಿ(ಹಾನಿ) ಮಾಡದೆ, ಮಿಗೆ (ಬಹಳ)ವಿನೋದದಲಿ+ ಈಸು(ಇಷ್ಟು) ಪಡೆ(ಸೇನೆಯು) ನಡೆತ೦ದು ಬಿಟ್ಟುದು ಗಿರಿಯ ತಪ್ಪಲಲಿ, ಆ ಸರೋರುಹ (ಕಮಲ) ಬ೦ಧು(ಕಮಲದ ಬಂಧು- ಸೂರ್ಯನು) ಚರಮಾಶಾ(ದಿನದ/ ಚರಮ- ಕೊನೆಯ ಆಶಾ ಸತಿಯ, ಸಂಧ್ಯಾ) ಸತಿಯ ಚು೦ಬಿಸೆ (ಸೂರ್ಯ ಮುಳುಗಿ ಸಂಜೆಯಾಗಲು) ಗಿರಿವ್ರಜದ+ ಆ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು.
ಅರ್ಥ:ದೇಶವು ಶತ್ರುವಿನದು ಎ೦ದು ಕಡ್ಡಿಯನ್ನೂ ಹಾನಿ ಮಾಡದೆ, ಪಾಂಡವ ಸೇನೆಯು ಬಹಳ ವಿನೋದದಿಂದ ಇಷ್ಟುದೂರ ಪಡೆಯು ನಡೆದುಬಂದು ಗಿರಿಯ ತಪ್ಪಲಲ್ಲಿ ಬೀಡು ಬಿಟ್ಟಿತು, ಕಮಲದ ಬಂಧು- ಸೂರ್ಯನು ಸಂಧ್ಯಾ ಸತಿಯನು ಚು೦ಬಿಸಿ ಸೂರ್ಯ ಮುಳುಗಿ ಸಂಜೆಯಾಗಲು ಗಿರಿವ್ರಜದ ಆ ಶಿಖರವನ್ನು ಕೃಷ್ಣ ಭೀಮ ಫಲ್ಗುಣರು ಹತ್ತಿದರು.
ವೃಷಭ ಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸ೦ಪನ್ನ ಪೂಜೆಯಲಿ |
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಬೇರಿತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ || ೫೯ ||
ಪದವಿಭಾಗ-ಅರ್ಥ:ವೃಷಭ ಚರ್ಮ ನಿಬದ್ಧ(ಎತ್ತಿನ ಚರ್ಮ ಜೋಡಿಸಿದ) ಭೇರಿಗಳು+ ಎಸೆದವು(ಶೋಭಿಸಿದವು, ಕಂಡುವು)+ ಅಕ್ಷತೆ ಗಂಧಮಾಲ್ಯ ಪ್ರಸರದಲಿ ಶೈಲಾಗ್ರದಲಿ(ಬೆಟ್ಟದ ತುದಿಯಲ್ಲಿ) ಸ೦ಪನ್ನ ಪೂಜೆಯಲಿ; ಅಸುರರಿಪು (ಕೃಷ್ಣ) ಭೀಮಾರ್ಜುನರು ತತ್+ ವಿಷಮ(ಆ ಬೆಸ ಸಂಖ್ಯೆಯ) ಬೇರಿತ್ರಯವ (ಆ ಮೂರು ಬೇರಿಗಳನ್ನು) ಹೊಯ್ದು (ಬಡಿದು)+ ಎಬ್ಬಿಸಿದರು+ ಅದುಭುತ ರವ (ಸದ್ದನ್ನು), ಮಿಗಿಲು ಕೆಡೆದುದು ಧರಿತ್ರಿಯಲಿ (ಬಹಳ ಮಿಕ್ಕು ಭೂಮಂಡಲದಲ್ಲಿ ಹಬ್ಬಿತು.
ಅರ್ಥ:ಎತ್ತಿನ ಚರ್ಮ ಜೋಡಿಸಿದ ಮೂರು ಭೇರಿಗಳು ಬೆಟ್ಟದ ತುದಿಯಲ್ಲಿ ಕಂಡುವು. ಪೂಜೆಯಲ್ಲಿ ಸ೦ಪನ್ನವಾಗಿ ಅವಕ್ಕೆ ಅಕ್ಷತೆ ಗಂಧಮಾಲ್ಯ ಪೂಸಿತ್ತು; ಕೃಷ್ಣ ಮತ್ತು ಭೀಮಾರ್ಜುನರು ಆ ಮೂರು ಭೇರಿಗಳನ್ನು ಬಡಿದು ಅದ್ಭುತ ಸದ್ದನ್ನು ಎಬ್ಬಿಸಿದರು; ಆ ಸದ್ದು ಬಹಳ ಮಿಕ್ಕು ಭೂಮಂಡಲದಲ್ಲಿ ಹಬ್ಬಿತು.
ಏನಿದದ್ಭುತವೆ೦ದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರಸಿ ಭೂಸುರರ |
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ || ೬೦ ||
ಪದವಿಭಾಗ-ಅರ್ಥ:ಏನಿದು+ ಅದ್ಭುತವೆ೦ದು ನಡುವಿರುಳು+ ಆ ನರೇಶ್ವರನು+ ಅಮಳ(ಅಮಲ- ಉತ್ತಮ) ವೇದ ವಿಧಾನದಲಿ ತತ್+ ಶಾಂತಿಗೋಸುಗ ಕರಸಿ, ಭೂಸುರರ(ವಿಪ್ರರ) ದಾನದಲಿ ವಿವಿಧ+ ಅಗ್ನಿಕಾರ್ಯ ವಿಧಾನದಲಿ(ಶಾಸ್ತ್ರ ರೀತಿಯಲ್ಲಿ) ವಿಪ್ರ ಓಘವಚನ( ರಭಸ, ಸಮೂಹ ವಾಚನದಲ್ಲಿ) ಸಘಾನದಲಿ(ಸ- ಘಾನ- ಘನ- ವೇದಪಠನದಲ್ಲಿ ಒಂದು ವಿಶೇಷವಾದ ರೀತಿ, ಕ್ರಮ, ಅಧಿಕವಾದುದು, ಅತಿಶಯವಾದುದು) , ಮಗಧೇಶನು+ ಇದ್ದನು ರಾಯ ಕೇಳೆಂದ.
ಅರ್ಥ:ವೈಶಂಪಾಯನ ಮುನಿಯು,'ಜನಮೇಜಯನೇ ಕೇಳು, ಮಗಧೇಶ ಜರಾಸಂಧನು ಆ ಭೇರಿಯ ಸದ್ದನ್ನು ಕೇಳಿ, ನಡುವಿರುಳಿಲ್ಲಿ ಏನಿದು ಅದ್ಭುತವು ಎಂದು ಆ ರಾಜನು ಅಪಶಕುನದ ಶಾಂತಿಗಾಗಿ, ಅಮಲ ವೇದ ವಿಧಾನದಲ್ಲಿ ಆದರ ಶಾಂತಿಗಾಗಿ ವಿಪ್ರರರನ್ನು ಕರಸಿ, ದಾನ ಮತ್ತು ವಿವಿಧ ಅಗ್ನಿಕಾರ್ಯ ವಿಧಾನದ ಶಾಸ್ತ್ರ ರೀತಿಯಲ್ಲಿ, ವಿಪ್ರರ ಗಟ್ಟಿ ಸಮೂಹ ವಾಚನದಲ್ಲಿ ವೇದಪಠನದ ಕ್ರಮ ಅನುಸರಿಸಿ, ಶಾಂತಿ ಕ್ರಿಯೆಯಲ್ಲಿ ಇದ್ದನು,'ಎಂದ.
ಇವರು ಗಿರಿಯಿ೦ದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊ೦ಡರು ಹಾಯ್ದು ದಳದುಳವ |
ತಿವಿದರಡ್ಡೈಸಿದರ ನುಬ್ಬಿದ
ತವಕಿಗರು ಮಗಧೇ೦ದ್ರರಾಯನ
ಭವನವನು ಹೊಕ್ಕರು ವಿಡ೦ಬದ ವಿಪ್ರವೇಶದಲಿ || ೬೧ ||
ಪದವಿಭಾಗ-ಅರ್ಥ:ಇವರು ಗಿರಿಯಿ೦ದ+ ಇಳಿದು ರಾತ್ರಿಯೊಳು+ ಅವನ(ಮಾಗಧನ) ನಗರಿಯ ರಾಜ ಬೀದಿಯ ವಿವಿಧ ವಸ್ತುವ ಸೂರೆಗೊ೦ಡರು, ಹಾಯ್ದು (ನುಗ್ಗಿ) ದಳದುಳವ(ದಳದ+ ಉಳವ) ತಿವಿದರು+ ಅಡ್ಡೈಸಿದರನು (ಅಡ್ಡಬಂದವರನ್ನು)+ ಉಬ್ಬಿದ (ಪೌರುಷದಿಂದ) ತವಕಿಗರು (ಆತುರಗಾರರು ಅವಸರದು) ಮಗಧೇ೦ದ್ರರಾಯನ ಭವನವನು(ಅರಮನೆಯನ್ನು) ಹೊಕ್ಕರು ವಿಡ೦ಬದ (ಹಾಸ್ಯಕರ) ವಿಪ್ರವೇಶದಲಿ.
ಅರ್ಥ:ಕೃಷ್ಣ, ಭೀಮ, ಅರ್ಜುನ ಇವರು ಆ ಗಿರಿಯಿ೦ದ ರಾತ್ರಿಯಲ್ಲಿ ಇಳಿದು ಮಾಗಧನ ನಗರಿಯ ರಾಜ ಬೀದಿಯ ವಿವಿಧ ವಸ್ತುಗಳನ್ನು ಸೂರೆಮಾಡಿ ಚಲ್ಲಾಪಿಲ್ಲೆ ಮಾಡಿದರು. ಮುಂದ ನುಗ್ಗಿ ಕಾವಲು ದಳದವರನ್ನು ಮತ್ತೆ ಅಡ್ಡಬಂದವರನ್ನು ತಿವಿದರು; ಪೌರುಷದಿಂದ ಉಬ್ಬಿದ ಆತುರಗಾರರು ಮಗಧೇ೦ದ್ರರಾಯ ಜರಾಸಂಧನ ಅರಮನೆಯನ್ನು ಹಾಸ್ಯಕರ ವಿಪ್ರವೇಶದಲ್ಲಿ ಹೊಕ್ಕರು.

ಜರಾಸಂಧನ ಅರಮನೆಯಲ್ಲಿ- ಸಂವಾದ[ಸಂಪಾದಿಸಿ]

ಉರವಣಿಸಿದರು ಮೂರು ಕೋಟೆಯ
ಮುರಿದರಾ ದ್ವಾರದಲಿ ರಾಯನ
ಹೊರೆಗೆ ಬ೦ದರು ಕಂಡರಿದಿರೆದ್ದನು ಜರಾಸ೦ಧ |
ಧರಣಿಯಮರರ ಪೂರ್ವಿಗರು ಭಾ
ಸುರರು ಭದ್ರಾಕಾರರೆ೦ದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ || ೬೨ ||
ಪದವಿಭಾಗ-ಅರ್ಥ: ಉರವಣಿಸಿದರು ಮೂರು ಕೋಟೆಯ ಮುರಿದರು+ ಆ ದ್ವಾರದಲಿ ರಾಯನ ಹೊರೆಗೆ(ಕಡಗೆ) ಬ೦ದರು ಕಂಡು+ ಅರಿದು+ ಇದಿರೆದ್ದನು ಜರಾಸ೦ಧ ಧರಣಿಯ+ ಅಮರರ ಪೂರ್ವಿಗರು(ಭೂ+ ಸುರರ ಹಿಂದಿನವರು) ಭಾಸುರರು(ಪ್ರಕಾಶಿಸುವ) ಭದ್ರಾಕಾರರು+ ಎ೦ದು+ ಆದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ.
ಅರ್ಥ:ಬ್ರಾಹ್ಮಣ ವೇಷದಲ್ಲಿದ್ದ ಕೃಷ್ನ, ಬೀಮ, ಅರ್ಜುನರು ನಗರ ಪ್ರವೇಶದಲ್ಲಿಯೆ ಪರಾಕ್ರಮ ತೋರಿದರು. ಮೂರು ಸುತ್ತಿನ ಕೋಟೆಯ ಬಾಗಿಲನ್ನು ಮುರಿದರು. ಆ ದ್ವಾರದ ಮೂಲಕ ಮಗದರಾಯನು ಇದ್ದ ಸ್ಥಳಕ್ಕೆ ಬ೦ದರು. ಅವರನ್ನು ಮಾಗದನು ಕಂಡು, ವಿಪ್ರರು ಎಂದು ಅರಿತುಕೊಂಡು, ಜರಾಸ೦ಧನು ಇದಿರೆದ್ದನು- ಎದ್ದು ಗೌರವಿಸಿದನು, ಹಿಂದಿನ/- ಪೂರ್ವಿಗರಂತಿರುವ ವಿಪ್ರರು, ಪ್ರಕಾಶಮಾನರಾಗಿರುವರು, ಬಲಿಷ್ಠ ದೇಹದವರು, ಎ೦ದು ಗೌರವದಿಂದ ಆದರಿಸಿ ಮಧುಪರ್ಕಾದಿಗಳನ್ನು ಭಕ್ತಿಯಿಂದ ಕೊಟ್ಟು ಉಪಚಾರ ಮಾಡಿದನು.
ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ |
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿ೦ತಿಸಿದನಿವದಿರು ವಿಪ್ರರಲ್ಲೆ೦ದು || ೬೩ ||
ಪದವಿಭಾಗ-ಅರ್ಥ: ಕೇಳಿದನು ಕುಶಲವನು, ಕುಶಲವ ಹೇಳಿದರು, ಕುಳ್ಳಿರಿ+ ಯೆ+ ಎನಲು ಭೂಪಾಲಕರು ಕುಳ್ಳಿರ್ದರು+ ಎವೆಯಿಕ್ಕದೆ ನಿರೀಕ್ಷಿಸುತ ಹೇಳಿರೈ ನಿಮಗೆ+ ಆವ ದೇಶ ವಿಶಾಲ ಗೋತ್ರವು+ ಅದಾವುದು+ ಎನುತ ವಿಲೋಲ(ಹೊಯ್ದಾಡುವ) ಮತಿ ಚಿ೦ತಿಸಿದನು+ ಇವದಿರು ವಿಪ್ರರು+ ಅಲ್ಲ+ ಎ೦ದು.
ಅರ್ಥ: ಜರಾಸಂದನು ಸಂಪ್ರದಾಯದಂತೆ ಉಪಚರಿಸಿದ ಮೇಲೆ, ಮೂವರ ಕುಶಲವನ್ನು ಕೇಳಿದನು. ಅವರು ತಾವು ಕುಶಲವೆಮದು ಹೇಳಿದರು. ಅವನು ಕುಳಿತುಕೊಳ್ಳಿ, ಎನ್ನಲು ಮೂವರು ಭೂಪಾಲಕರು ಕೊಟ್ಟ ಆಸನಗಳಲ್ಲಿ ಕುಳಿತುಕೊಂಡರು. ಮಾಗದನು ಅವರನ್ನು ಎವೆಯಿಕ್ಕದೆ ನೋಡುತ್ತಾ, 'ಹೇಳಿರಯ್ಯಾ ನಿಮಗೆ ಯಾವ ದೇಶ, ವಿಶಾಲ ಗೋತ್ರವು ಅದಾವುದು,' ಎನ್ನುತ್ತಾ, ಮಾಗಧನು ಹೊಯ್ದಾಡುವ ಮನಸ್ಸಿನಿಂದ, 'ಇವರು ವಿಪ್ರರು ಅಲ್ಲ' ಎ೦ದು ಚಿ೦ತಿಸಿದನು.
ಸ್ನಾತಕ ವ್ರತ ವೇಶದಲಿ ಬ೦
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು |
ಕೈತವದಿನೈತ೦ದರರ್ಥವ
ನೀತಗಳು ಬಯಸರು ವಿರೋಧ
ಪ್ರೇತಿಮುಖರಿವರಾರೊ ಶಿವ ಶಿವಯೆನುತ ಚಿ೦ತಿಸಿದ || ೬೪ ||
ಪದವಿಭಾಗ-ಅರ್ಥ: ಸ್ನಾತಕ ವ್ರತ (ವೇದವಿದ್ಯಾ ಪಾರಂಗತರ) ವೇಶದಲಿ ಬ೦ದಾತಗಳು(ಬಂದ- ಅತಗಳು, ಇವರು) ತಾವು+ ಇವರು ಶಸ್ತ್ರವ್ರಾತದಲಿ(ವ್ರಾತ- ಅನೇಕ) ಶಿಕ್ಷಿತರು, ಕರ್ಕಶ ಬಾಹುಪಾಣಿಗಳು (ಕಠಿಣ ಬಾಹು- ಹಸ್ತಗಳನ್ನು ಹೊಂದಿದ್ದಾರೆ.), ಕೈತವದಿಂ(ಕಪಟದಿಂದ, ವಂಚನೆಯಿಂದ)+ನೈ+ ಐತ೦ದರು (ಬಂದಿರುವರು)+ ಅರ್ಥವನು (ಹಣವನ್ನು)+ ಈತಗಳು ಬಯಸರು; ವಿರೋಧ ಪ್ರೇತಿಮುಖರು (ಪಿಶಾಚ- ಕೆಟ್ಟಮುಖದಿಂದ ಇರುವವರು)+ ಇವರಾರೊ ಶಿವ ಶಿವ+ ಯೆನುತ ಚಿ೦ತಿಸಿದ.
ಅರ್ಥ: ಮಾಗಧನು ಅತಿಥಿಗಳನ್ನು ನೋಡಿ,'ವೇದವಿದ್ಯಾ ಪಾರಂಗತರ ವೇಶದಲ್ಲಿ ಬಂದ ಇವರು, ಅನೇಕ ಶಸ್ತ್ರಗಳಲ್ಲಿ ಶಿಕ್ಷಿತರು; ಕಠಿಣ ಬಾಹು- ಹಸ್ತಗಳನ್ನು ಹೊಂದಿದ್ದಾರೆ. ಕಪಟದಿಂದ, ವಂಚನೆಯಿಂದ ಬಂದಿರುವರು, ಇವರುಹಣವನ್ನು ಬಯಸರು; ವಿರೋಧದ ಕೆಟ್ಟಮುಖದಿಂದ ಇರುವವರು; ಇವರಾರೊ ಶಿವ ಶಿವ.' ಎನ್ನುತ್ತಾ ಚಿ೦ತಿಸಿದ.
ಆರಿವರು ದೇವತ್ರಯವೋ ಜ೦
ಭಾರಿ ಯಮ ಮಾರುತರೊ ರವಿ ರಜ
ನೀ ರಮಣ ಪಾವಕರೊ ಕಪಟ ಸ್ನಾತಕವ್ರತದ |
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ || ೬೫ ||
ಪದವಿಭಾಗ-ಅರ್ಥ: ಆರು (ಯಾರು)+ ಇವರು ದೇವತ್ರಯವೋ, ಜ೦ಭಾರಿ(ಇಂದ್ರ) ಯಮ ಮಾರುತರೊ(ವಾಯು), ರವಿ ರಜನೀರಮಣ(ಚಂದ್ರ- ರಜನೀಕಾಂತ) ಪಾವಕರೊ(ಅಗ್ನಿ), ಕಪಟ ಸ್ನಾತಕವ್ರತದ ಧಾರುಣೀಶ್ವರರೊಳಗೆ ಧಿಟ್ಟರ ಅದಾರು ತನ್ನೊಳು ತೊಡಕಿ(ಎದುರಿಸಿ) ನಿಲುವ ವಿಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ.
ಅರ್ಥ:ಮಾಗಧನು,'ಯಾರು ಇವರು? ಬ್ರಹ್ಮ,ವಿಷ್ಣು,ಮಹೇಶ್ವರ- ದೇವತ್ರಯವೋ, ಜ೦ಭಾರಿ ಯಮ ವಾಯುಗಳೋ, ರವಿ, ರಜನೀರಮಣ(ಚಂದ್ರ- ರಜನೀಕಾಂತ) ಅಗ್ನಿಗಳೋ; ಕಪಟ ಸ್ನಾತಕವ್ರತದ ರಾಜರಲ್ಲಿ ಧಿಟ್ಟರಾದವರು ಅದು ಯಾರು ತನ್ನೊಡನೆ ಎದುರಿಸಿ ನಿಲ್ಲುವ ವಿಕಾರಿಗಳು? ಅಂಥವರನ್ನು ನಾನು ಕಾಣೆನು,' ಎ೦ದನು ತನ್ನ ಮನದಲ್ಲಿ.
ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ |
ಸಾಗರೋಪಾ೦ತ್ಯದ ನರೇ೦ದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆ೦ದ || ೬೬ ||
ಪದವಿಭಾಗ-ಅರ್ಥ: ಈಗ ಮಿಡುಕುಳ್ಳವರು(ಶೌರ್ಯವಂತರು) ಮಹಿಯಲಿ(ಭೂಮಿಯಲ್ಲಿ) ನಾಗಪುರದ+ ಅರಸುಗಳು ನಮ್ಮವರು+ ಆಗಿಹರು; ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ; ಸಾಗರೋಪಾ೦ತ್ಯದ ನರೇ೦ದ್ರರು ಭೋಗಿಸಿದ ಮುತ್ತುಗಳು, ಭಾವಿಸಲು+ ಈ ಗಯಾಳರ(ಹೇಡಿ, ಕಪಟಿ) ಗರ್ವವೇನು ನಿಮಿತ್ತವಾಯ್ತು+ ಎ೦ದ.
ಅರ್ಥ: ಮಾಗಧನು ತನ್ನಲ್ಲಿ,'ಈಗ ಭೂಮಿಯಲ್ಲಿ ಶೌರ್ಯವಂತರು ನಾಗಪುರದ ಅರಸುಗಳು, ಅವರು ನಮ್ಮವರು ಆಗಿದ್ದಾರೆ; ಪಾ೦ಡುವಿನ ಮಕ್ಕಳು ಮೀರಿದ ದುಷ್ಟರಲ್ಲ; ಸಮುದ್ರದ ಹತ್ತಿರದ ನರೇ೦ದ್ರರು ಭೋಗಿಸಿದ ಮುತ್ತುಗಳು- ಸೋತವರು; ಭಾವಿಸಿ ನೋಡಿದರೆ, ರಾತ್ರಿಯಲ್ಲಿ ಬಂದ ಈ ಹೇಡಿ, ಕಪಟಿಗಳ ಗರ್ವವೇನು- ಎಷ್ಟು? ಇದು ಒಂದು ಯುದ್ಧಕ್ಕೆ ನಿಮಿತ್ತವಾಯ್ತು,' ಎ೦ದ ತನ್ನ ಮನದಲ್ಲಿ.
ಯಾದವರು ಹಿ೦ದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು |
ಮೇದಿನಿಯ ಮ೦ಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆ೦ದ || ೬೭ ||
ಪದವಿಭಾಗ-ಅರ್ಥ: ಯಾದವರು ಹಿ೦ದೆ+ ಎಮ್ಮೊಡನೆ ಹಗೆಯಾದವರು, ಬಳಿಕ+ ಅವರೊಳಗೆ ತುರುಗಾದವನ ಕರುಗಾದವನ ಮಾಧವನ ಮಾತೇನು, ಮೇದಿನಿಯ(ಭೂಮಿಯ) ಮ೦ಡಳಿಕ ಮನ್ನೆಯ(ಶೂರರು) ರಾದವರು ನಮ್ಮೊಡನೆ ಸೆಣಸುವರಾದಡೆ+ ಇದು ದುಷ್ಕಾಲ ವಶವು+ ಇದು ಚಿತ್ರವಾಯ್ತು+ ಎ೦ದ
ಅರ್ಥ:ಜರಾಸಂಧನು ಮನದಲ್ಲಿ,'ಯಾದವರು ಹಿ೦ದೆ ನಮ್ಮೊಡನೆ ಶತ್ರುವಾದವರು; ಬಳಿಕ ಅವರೊಳಗೆ ದನಕಾದವನ- ಕರು ಕಾದವನ ಮಾಧವನ ಮಾತೇನು- ಲೆಕ್ಕಕ್ಕಿಲ್ಲ. ಭೂಮಿಯ ಮಾಂಡಳಿಕ ಶೂರರಾದವರು ನಮ್ಮೊಡನೆ ಸೆಣಸುವವರು ಆದರೆ ಇದು ದುಷ್ಕಾಲದ ವಶವು- ಇದು ವಿಚಿತ್ರವಾಯ್ತು,' ಎ೦ದ.
ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿ೦
ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ |
ನಿವಗಿದೇನೀ ವ್ಯಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನು೦ಟು ಹೇಳಿನ್ನ೦ಜಬೇಡೆ೦ದ || ೬೮ ||
ಪದವಿಭಾಗ-ಅರ್ಥ:ಬವರಿಗರು(ಬವರ- ಯುದ್ಧ) ನೀವ್ ವಿಪ್ರವೇಷದ ಜವನಿಕೆಯ(ಮುಚ್ಚುಮರೆ) ಜಾಣಾಯ್ಲತನದಿ೦ದ(ಕಪಟತನದಿಂದ)+ ಅವಗಡಿಸಿ (ವಿರೋಧಿಸಿ,ಪ್ರತಿಭಟಿಸಿ) ಹೊಕ್ಕಿರಿ+ ಯ+ ಅಪದ್ವಾರದಲಿ ನೃಪಸಭೆಯನು (ರಾಜಸಭೆಯನ್ನು)+ ನಿವಗೆ+ ಇದೇನು+ ಈ ವ್ಯಸನ ಕಪಟ ವ್ಯವಹರಣೆ ಕೃತ್ರಿಮವೊ ಸಹಜವೊ ರವಣ(ಹಾಸ್ಯಕರವಾದ, ಗೋಳು) ಮತ್ತೇನು೦ಟು ಹೇಳಿ+ ಇನ್ನು+ ಅ೦ಜಬೇಡಿ+ ಎ೦ದ
ಅರ್ಥ:ಮಾಗಧನು,' ನೀವು ಯುದ್ಧಬಯಸಿ ಬಂದವರು; ನೀವು ವಿಪ್ರವೇಷದ ಮುಚ್ಚುಮರೆಯಲ್ಲಿ ಕಪಟತನದಿಂದ ವಿರೋಧಿಸಿ, ಪ್ರತಿಭಟಿಸಿ ಹಿಂಬಾಗಿಲ ಅಪದ್ವಾರದಲ್ಲಿ ರಾಜಸಭೆಯನ್ನು ಹೊಕ್ಕಿರಿ. ನಿಮಗೆ ಇದೇನು- ಏಕೆ ಈ ನೆಡವಳಿಕೆಯ ಕಪಟ ವ್ಯವಹಾರ? ಇದು ನಿಮ್ಮ ವರ್ತನೆ ಕೃತ್ರಿಮವೊ ಅಥವಾ ಸಹಜವೊ? ಈ ಹಾಸ್ಯಕರವಾದ ಗೋಳು ಏಕೆ ಮತ್ತೇನು೦ಟು ಹೇಳಿ; ಇನ್ನು ಅ೦ಜಬೇಡಿ,' ಎ೦ದ.
ಸ್ನಾತಕವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯ ಕುಲಕಿದು
ಪಾತಕವು ನಾವಿ೦ದು ಪಾರ್ಥಿವ ಜಾತಿ ಸ೦ಭವರು |
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ದವಿದೆ೦ದನಸುರಾರಿ || ೬೯ ||
ಪದವಿಭಾಗ-ಅರ್ಥ: ಸ್ನಾತಕವ್ರತವೇನು ಪಾರ್ಥಿವಜಾತಿಗೆ (ಭೂಮಿಯನ್ನು ಆಳುವ, ಇಹಲೋಕಕ್ಕೆ ಸಂಬಂಧಿಸಿದ, ಮಣ್ಣಿನ ದೇಹದ)+ ಇಲ್ಲಲೆ(ಇಲ್ಲವೇ?), ವೈಶ್ಯ ಕುಲಕೆ+ ಇದು ಪಾತಕವು ನಾವು+ ಇ೦ದು ಪಾರ್ಥಿವಜಾತಿ ಸ೦ಭವರು; ಸ್ನಾತಕರು; ನಾವ್ ವೈರಿ ಗೃಹದಲಿ+ ಅಭೀತರು+ ಅದ್ವಾರಪ್ರವೇಶ+ ಅವನೀತಿಯಲ್ಲ ಪುರಾಣಸಿದ್ದವಿದು+ ಎ೦ದನು+ ಅಸುರಾರಿ
ಅರ್ಥ:ಮಾಗಧನ ಪ್ರಶ್ನೆಗೆ ಕೃಷ್ಣನು,'ಸ್ನಾತಕವ್ರತವವು ಪಾರ್ಥಿವಜಾತಿಗೆ ಇಲ್ಲವೇ? ಇದೆ; ವೈಶ್ಯ ಕುಲಕ್ಕೆ ಇದು ಅಪರಾಧವು. ನಾವು ಇ೦ದು ಪಾರ್ಥಿವಜಾತಿ ಸ೦ಭವರು(ಕ್ಷತ್ರಿಯರು); ಸ್ನಾತಕರು ಆಗಿದ್ದೇವೆ. ನಾವು ವೈರಿಯ ಗೃಹದಲ್ಲಿ ಇದ್ದರೂ ಅಭೀತರು- ಭಯವಿಲ್ಲ. (ಶತ್ರುವಿನ ಮನೆಗೆ) ಹಿಂಬಾಗಿಲ ಅದ್ವಾರಪ್ರವೇಶ ಅವನೀತಿಯಲ್ಲ. ಇದು ಪುರಾಣಸಿದ್ದ,'ಎ೦ದನು ಕೃಷ್ಣ.
ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ |
ಆರುನೀವೀ ಬ್ರಾಹ್ಮಣರು ನಿಮ
ಗಾರುಪಾದ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆ೦ದನು ಮಗಧಪತಿ ನಗುತ || ೭೦ ||
ಪದವಿಭಾಗ-ಅರ್ಥ: ವೈರಿ ಭವನವೆ ನಮ್ಮದು+ ಇದು; ನಾವ್+ ವೈರಿಗಳೆ ನಿಮಗೆ+; ಎಮಗೆ ಜನಿಸಿದ- ವೈರಬಂಧ ನಿಮಿತ್ತವಾವುದು, ನಿಮ್ಮ ಪಕ್ಷದಲಿ?; ಆರು ನೀವು?+ ಈ ಬ್ರಾಹ್ಮಣರು ನಿಮಗಾರು+ ಉಪಾದ್ಯರು? ಹೇಳಿ, ನಿಮ್ಮ ವಿಕಾರ ಬರಿದೇ ಹೋಗದು+ ಎ೦ದನು ಮಗಧಪತಿ ನಗುತ.
ಅರ್ಥ: ಆಗ ಮಗಧಪತಿ ಮಾಗಧನು ಕೃಷ್ಣನಿಗೆ,'ಇದು- ನಮ್ಮದು ನಿಮಗೆ ವೈರಿ ಭವನವೆ? ನಾವು ನಿಮಗೆ ವೈರಿಗಳೆ? ನಿಮಗೂ ನಮಗೆ ಜನಿಸಿದ ವೈರಬಂಧ ನಿಮಿತ್ತವು- ಕಾರಣ ನಿಮ್ಮ ಪಕ್ಷದಲಿ- ಅಭಿಪ್ರಾಯದಲ್ಲಿ ಯಾವುದು? ನೀವು, ಈ ಇಬ್ಬರು ಬ್ರಾಹ್ಮಣರು ಯಾರು? ನಿಮಗೆ ಉಪಾದ್ಯರು- ಗುರುಗಳು ಯಾರು? ಹೇಳಿ. ನಿಮ್ಮ ವಿಕಾರ- ದುಷ್ಟತನ ಬರಿದೇ ಹೋಗುವುದಿಲ್ಲ, (ತಕ್ಕ ಉಪಚಾರ ಮಾಡುವೆನು),'ಎ೦ದನು ನಗುತ್ತಾ.
ಮುರಿದು ಹಲಬರಿಳಾಧಿನಾಥರ
ಸೆರೆಯಲಿಕ್ಕಿದೆ ರಾಜ್ಯಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊ೦ಡೆ ಭುಜಬಲವ |
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾದ್ಯರೆ೦ದನು ನಗುತ ಮುರಹರನು || ೭೧ ||
ಪದವಿಭಾಗ-ಅರ್ಥ:ಮುರಿದು(ಸೋಲಿಸಿ) ಹಲಬರ+ ಇಳಾಧಿನಾಥರ(ರಾಜರನ್ನು) ಸೆರೆಯಲಿಕ್ಕಿದೆ (ಸೆರೆಯಲ್ಲಿ ಇಟ್ಟೆ), ರಾಜ್ಯಮದದಲಿ ಮರೆದು ಮಾನ್ಯರನು+ ಇರಿದು(ಕೊಂದು) ಹೆಚ್ಚಿಸಿಕೊ೦ಡೆ ಭುಜಬಲವ ಅರಿಯದೆ+ ಅಳುಪಿದ(ಅತಿಯಾಸೆ ಪಡು) ಪಾತಕಕೆ ಬಿಡುಸೆರೆಯ ಪ್ರಾಯಶ್ಚಿತ್ತವಿದು ನಾವು+ ಉರುವ(ಶ್ರೇಷ್ಠ) ವೇಷದ+ ಉಪಾದ್ಯರು+ ಎ೦ದನು ನಗುತ ಮುರಹರನು
ಅರ್ಥ: ಕೃಷ್ಣನು,'ಹಲವು ರಾಜರನ್ನು ಸೋಲಿಸಿ ಸೆರೆಯಲ್ಲಿ ಇಟ್ಟೆ; ರಾಜ್ಯಮದದಿಂದ ಮರೆದು ಮಾನ್ಯರನ್ನು ಕೊಂದು ಭುಜಬಲವ್ನು ಹೆಚ್ಚಿಸಿಕೊ೦ಡೆ. ಅರಿಯದೆ ಅತಿಯಾಸೆ ಪಟ್ಟ ಪಾತಕಕ್ಕೆ ಪರಿಹಾರವಾಗಿ ಸರೆಯಲ್ಲಿಟ್ಟವರನ್ನು ಬಿಡು. ಇದು ಪ್ರಾಯಶ್ಚಿತ್ತ. ನಾವು ಶ್ರೇಷ್ಠ ವೇಷದಉಪಾದ್ಯರು,' ಎ೦ದನು ನಗುತ್ತಾ.
ಆ ನೃಪಾಲರ ಮಗನೊ ಮೊಮ್ಮನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ |
ಏನು ನಿನ್ನ೦ಘವಣೆ ನೀನಾ
ರಾ ನರೇ೦ದ್ರರ ಸೆರೆಯ ಬಿಡುಗಡೆ
ಗೇನನೆ೦ಬೆನು ರಹವನೆ೦ದನು ತೂಗಿ ಮಣಿಶಿರವ || ೭೨ |
ಪದವಿಭಾಗ-ಅರ್ಥ: ಆ ನೃಪಾಲರ ಮಗನೊ ಮೊಮ್ಮನೊ ನೀನು+ ಅವರ ಬಾಂಧವನೊ ಭೃತ್ಯನೊ? ನೂನವಕ್ಷನೊ(ಹೀನ), ಬೆರಳ ಬದೆಗನೊ(ಅಲ್ಪ, ನೀಚ, ವ್ಯಭಿಚಾರಿ), ಕುರುಳ ಕೋಮಳನೊ(ಮಗ, ಬಂಧು), ಏನು ನಿನ್ನ+ ಅ೦ಘವಣೆ(ಬಲ) ನೀನಾರು+ ಆ ನರೇ೦ದ್ರರ ಸೆರೆಯ ಬಿಡುಗಡೆಗೆ+ ಏನನು+ ಎ೦ಬೆನು ರಹವನು(ಆಶ್ಚರ್ಯ; ಗುಟ್ಟು,)+ ಎ೦ದನು ತೂಗಿ ಮಣಿಶಿರವ.
ಅರ್ಥ:ಕೃಷ್ನನ ಆದೇಶಕ್ಕೆ ಮಾಗಧನು,'ಸೆರಯ ಅರಸುಗಳ ಬಿಡುಗಡೆ ಕೇಳಲು ನೀನುಯಾರು? ಆ ನೃಪಾಲರ ಮಗನೊ, ಮೊಮ್ಮಗನೊ; ನೀನು ಅವರ ಬಾಂಧವನೊ ಭೃತ್ಯನೊ? ನೂನವಕ್ಷನೊ(ಅವರ ಹೀನಕಲದವನೋ), ಬೆರಳ ಬದೆಗನೊ- ಅವರ ನೀಚ ವ್ಯಭಿಚಾರ ಹಾಯಕನೋ?, ಅಥವಾ ಕುರುಳ (ಮಗ, ಬಂಧುವೂ?, ಏನು ನಿನ್ನ ಬಲವಾದ ಸಬಂಧವೇನು? ನೀನಾರು? ಆ ನರೇ೦ದ್ರರ ಸೆರೆಯ ಬಿಡುಗಡೆಗೆ ಕೇಳುವ ಕಾರಣ ಏನು; ಅದರ ಗುಟ್ಟು ಏನು ಎಂಬುದು,' ಎ೦ದನು ಮಣಿಮುಕುಟದಶಿರವನ್ನು ತೂಗಿ ಹೇಳಿದನು.
ಎಲವೊ ಧರೆಯಲಧರ್ಮಶೀಲರ
ತಲೆಯ ಚೆ೦ಡಾಡುವೆವು ಧರ್ಮವ
ನೊಲಿದು ಕೊ೦ಡಾಡುವೆವು ಶಿಕ್ಷಾ ರಕ್ಷಣ ವ್ಯಸನ |
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭ೦ಡ ವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವದ್ವ೦ಸಿ || ೭೩ ||
ಪದವಿಭಾಗ-ಅರ್ಥ: ಎಲವೊ ಧರೆಯಲಿ (ಭೂಮಿಯಲ್ಲಿ)+ ಅಧರ್ಮಶೀಲರ ತಲೆಯ ಚೆ೦ಡಾಡುವೆವು (ತಗೆಯುವೆವು), ಧರ್ಮವನು+ ಒಲಿದು (ಪ್ರೀತಿಯಿಂದ) ಕೊ೦ಡಾಡುವೆವು(ಹೊಗಳುವೆವು) ದುಷ್ಟರ ಶಿಕ್ಷೆ, ಸಜ್ಜನರ ರಕ್ಷಣ ವ್ಯಸನನೆಲೆ(ಉದ್ಯೋಗ- ಕರ್ತವ್ಯ) ನಮಗೆ; ನೀನು ಇದನ್ನು + ಅರಿಯೆ(ತಿಳಿದಿಲ್ಲ.) ರಾಜವಳಿಯ(ಸಮೂಹವನ್ನು ಸೆರೆಯಿಂದ) ಬಿಡು, ಫಡ! ಭ೦ಡ ವಿದ್ಯೆಯನ್ನು ನಮ್ಮೊಡನೆ ಬಳಸಬೇಡ,'ಎಂದನು.
ಅರ್ಥ: ದಾನವಧ್ವಂಸಿ ಕೃಷ್ಣನು,'ಎಲವೊ ಮಾಗಧ,ಭೂಮಿಯಲ್ಲಿ ಅಧರ್ಮಶೀಲರ ತಲೆಯನ್ನು ತಗೆಯುವೆವು; ಧರ್ಮವನ್ನು ಒಲಿದು ಪ್ರೀತಿಯಿಂದ ಹೊಗಳುವೆವು. ದುಷ್ಟರ ಶಿಕ್ಷೆ, ಸಜ್ಜನರ ರಕ್ಷಣೆ ನಮಗೆ ಉದ್ಯೋಗ- ಕರ್ತವ್ಯ; ನೀನು ಇದನ್ನು ತಿಳಿದಿಲ್ಲ. ರಾಜ ಸಮೂಹವನ್ನು ಸೆರೆಯಿಂದ ಬಿಡು, ಫಡ! ಭ೦ಡ ವಿದ್ಯೆಯನ್ನು ನಮ್ಮೊಡನೆ ಬಳಸಬೇಡ,' ಎಂದನು.
ಇವರುಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭ೦ಡರು ನೀವೊ ನಾವೊ ಸಾಕದ೦ತಿರಲಿ |
ಕವಡುತನದಲಿ ದಿಟ್ಟರಹಿತ೦
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿದರೆ ನೀವಾರು ಹೇಳೆ೦ದನುಜರಾಸ೦ಧ || ೭೪ ||
ಪದವಿಭಾಗ-ಅರ್ಥ: ಇವರು ಗಡ ಜಗದೊಳಗೆ ಶಿಕ್ಷಾಸವನದಲಿ ದೀಕ್ಷಿತರು ಗಡ! ಕೈತವದ(ಕಪಟ, ವಂಚನೆ) ಭ೦ಡರು ನೀವೊ ನಾವೊ; ಸಾಕು+ ಅದ೦ತಿರಲಿ ಕವಡುತನದಲಿ (<ಸಂ. ಕಪಟ, ಮೋಸ, ಭ್ರಾಂತಿ, ದೋಷ) ದಿಟ್ಟರು+ ಅಹಿತ+ ಅ೦ಘವಣೆಯೊಳ್ಳಿತು(ಅಂಗವಣೆ- ಉದ್ದೇಶ, ಇಚ್ಛೆ)) ನಿಮ್ಮ ನಿಜವನು ವಿವರಿಸಿದರೆ ನೀವಾರು ಹೇಳಿ+ ಎಂ೦ದನು ಜರಾಸ೦ಧ.
ಅರ್ಥ:ಆಗ ಜರಾಸ೦ಧನು ಹಾಸ್ಯ ಮಾಡುತ್ತಾ,'ಇವರು ಗಡ, ಜಗತ್ತಿನಲ್ಲಿ ಶಿಕ್ಷಾರಕ್ಷದಲ್ಲಿ ದೀಕ್ಷಿತರು ಗಡ! ಇಲ್ಲಿಗೆ ಬಂದ ರೀತಿಯಲ್ಲಿ ಕಪಟ, ವಂಚನೆ ಭ೦ಡರು ನೀವೊ ನಾವೊ; ಸಾಕು ಅದು ಹಾಗಿರಲಿ; ಕಪಟ, ಮೋಸದಲ್ಲಿ ಬಂದು ದಿಟ್ಟರು, ವಿರೋಧವು ನಿಮ್ಮ ಉದ್ದೇಶ; ನಿಮ್ಮ ನಿಜವನ್ನು ವಿವರಿಸಿದರೆ ಒಳ್ಳೆಯದು. ನೀವಾರು ಹೇಳಿ,' ಎ೦ದನು.
ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ |
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆ೦ದನಸುರಾರಿ || ೭೫ ||
ಪದವಿಭಾಗ-ಅರ್ಥ: ಕೇಳಿ ಮಾಡುವುದೇನು, ತಾನು+ ಅಸುರಾಳಿ(ಅಸುರ+ ಆಳಿ- ರಾಕ್ಷಸ ಸಮೂಹ) ಧೂಳೀಪಟಲ(ನಾಶಕ), ವೈರಿ ನೃಪಾಲ ಚೌಪಟಮಲ್ಲನು+ ಈತನು ಭೀಮಸೇನ ಕಣಾ, ಭಾಳನೇತ್ರನ ()ಹಣೆಕಣ್ಣಿನ ಭುಜಬಲದ ಸಮ ಪಾಳಿಯು ಅರ್ಜುನನು+ ಈತನು+ ಏಳಾ ಕಾಳಗವ ಕೊಡು ನಮ್ಮೊಳು+ ಒಬ್ಬರಿಗೆ+ ಎಂದನು+ ಅಸುರಾರಿ.
ಅರ್ಥ: ಕೃಷ್ಣನು ಜರಾಸಂಧನಿಗೆ,'ನೀನು ಕೇಳಿ ಮಾಡುವುದೇನು,? ತಾನು ದನುಜರ ಸಮೂಹವನ್ನು ನಾಶಮಾಡಿದ ಕೃಷ್ಣ; ಇವನು ವೈರಿ ನೃಪಾಲರನ್ನು ಸೋಲಿಸುವ ಚೌಪಟಮಲ್ಲನು ಭೀಮಸೇನ ಕಣಾ; ಇವನು ಶಿವನ ಭುಜಬಲದ ಸಮ ಪಾಳಿಯು,- ಅರ್ಜುನನು; ಮಾಗಧನೇ ಏಳಾ! ನಮಗೆ ಕಾಳಗವನ್ನು ಕೊಡು; ನಮ್ಮಲ್ಲಿ ಒಬ್ಬರನ್ನು ಎದುರಿಸು,' ಎಂದನು.
ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೂಮ್ಮೆದ್ದ ರೋಮದ ಜಡಿವ ಬಿಡುದಲೆಯ |
ಸೂಳು ನಗೆ ಬಿಳಿನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸ೦ತೈಸಿ ನೆರೆ ತನ್ನವರಿಗಿ೦ತೆ೦ದ || ೭೬ ||
ಪದವಿಭಾಗ-ಅರ್ಥ: ಕೇಳಿ ಕೆದರಿದ (ಉಕ್ಕಿಬಂದ) ಕಡು(ಅತಿ) ನಗೆಯಲಿ+ ಅಡಬೀಳುತ+ ಏಳುತ, ಬಿರುವ+ ಅ-ಹನಿಯ ಕಣ್ಣಾಲಿಗಳ, ಝೂಮ್ಮೆದ್ದ ರೋಮದ, ಜಡಿವ ಬಿಡುದಲೆಯ ಸೂಳು( ಆರ್ಭಟ, ಬೊಬ್ಬೆ) ನಗೆ ಬಿಳಿನಗೆಯಲಿ+ ಅಡಿಗಡಿಗೆ+ ಆಳಿ (ಉದಾಸೀನ) ಮುಸುಗು+ ಉಬ್ಬಸದಲಿದ್ದು, ಕರಾಳಮತಿ(, ನೆರೆ(ಪಕ್ಕದ) ತನ್ನವರಿಗೆ+ ಇ೦ತು+ ಎ೦ದ.
ಅರ್ಥ:ಜರಾಸಂಧನು ಕೃಷ್ಣನು ಹೇಳಿದ ಪರಿಚಯವನ್ನು ಕೇಳಿ,(ಬಿದ್ದುಬಿದ್ದು ನಕ್ಕನು-) ಕೆದರಿ- ಉಕ್ಕಿಬಂದ ಅತಿಯಾದ ನಗೆಯಲ್ಲಿ ನಿಲ್ಲಲಾರದೆ ಅಡ್ಡಬೀಳುತ್ತಾ, ಮತ್ತೆ ಏಳುತ್ತಾ, ಕಣ್ಣುಹನಿಯ, ಬಿರುವ- ಬಿಚ್ಚಿದ ಕಣ್ಣಾಲಿಗಳ, ಝೂಮ್ಮೆದ್ದು ನಿಂತ ರೋಮಾಂಚನದ ರೋಮದ, ಓಲಾಡಿ ಅತ್ತಿತ್ತ ಜಡಿವ ಬಿಡುದಲೆಯ ಕೋದಲಿನ, ಆರ್ಭಟಟದ ನಗೆಯ, ಮತ್ತೆ ಬಾಯಿ ಮುಚ್ಚಿ ಹಲ್ಲುಬಿಟ್ಟ ಬಿಳಿನಗೆಯಲ್ಲಿ, ಅಡಿಗಡಿಗೆ- ಮತ್ತೆಮತ್ತೆ ಸುಧಾರಿಸಿಕೊಂಡು, ನಗುವಿನ ಮುಸುಗು- ಉಬ್ಬಸದಲಿದ್ದು, ದುಷ್ಟಮನಸ್ಸಿನ ಮಾಗಧನು ತನ್ನನ್ನು ಸ೦ತೈಸಿಕೊಂಡು, ಪಕ್ಕದಲ್ಲಿದ್ದ ತನ್ನವರಿಗೆ ಹೀಗೆ ಹೇಳಿದನು.
ಈತನಾರೆ೦ದರಿವಿರೈ ನ
ಮ್ಮಾತನೀತನು ನಮ್ಮ ಕ೦ಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ |
ಈತ ಕಾಣಿರೆ ಹಿ೦ದೆ ಚೌರಾ
ಶೀತಿ ದುರ್ಗದಳೋಡಿ ಬದುಕಿದ
ನೀತ ಬಲುಗೈ ಬ೦ಟನೆ೦ದನು ಮಗಧಪತಿ ನಗುತ || ೭೭ ||
ಪದವಿಭಾಗ-ಅರ್ಥ:ಈತನು+ ಆರೆ೦ದು(ಯಾರೆಂದು)+ ಅರಿವಿರೈ(ಗೊತ್ತಾಯಿತೆ?); ನಮ್ಮಾತನು (ನಮ್ಮ ಬಂಧು)+ ಈತನು ನಮ್ಮ (ಅಳಿಯ)ಕ೦ಸಂಗೆ+ ಈತನು+ ಅಳಿಯನು, ನಮಗೆ ಮೊಮ್ಮನು(ಮೊಮ್ಮಗನು), ಮಗನು ದೇವಕಿಗೆ, ಈತ ಕಾಣಿರೆ(ಕಂಡಿಲ್ಲವೆ? ಗೊತ್ತಿಲ್ಲವೆ?) ಹಿ೦ದೆ ಚೌರಾಶೀತಿ(ಎಂಭತ್ತ ನಾಲ್ಕು) ದುರ್ಗದಳು+ ಓಡಿ ಬದುಕಿದನು,+ ಈತ ಬಲುಗೈ ಬ೦ಟನು(ಮಹಾವೀರ)+ ಎ೦ದನು ಮಗಧಪತಿ ನಗುತ.
ಅರ್ಥ:ಮಗಧಪತಿ ಜರಾಸಂಧನು ತನ್ನ ಪರಿವಾರದವರಿಗೆ ಕೃಷ್ಣನನ್ನು ತೋರಿಸಿ ನಗುತ್ತಾ,'ಈತನು ಯಾರೆಂದು ಗೊತ್ತಾಯಿತೆ? ಇವನು ನಮ್ಮ ಬಂಧು; ಈತನು ನಮ್ಮ ಅಳಿಯನಾದ ಕ೦ಸನಿಗೆ ಈತನು ಸೋದರಅಳಿಯನು; ನಮಗೆ ಮೊಮ್ಮಗನು; ಇವನು ಕಂಸನ ತಂಗಿ ದೇವಕಿಗೆ ಮಗನು; ಈತನನ್ನು ಕಂಡಿಲ್ಲವೆ? ಹಿ೦ದೆ ನಾನು ಬೆನ್ನಟ್ಟಿದಾಗ ಎಂಭತ್ತ ನಾಲ್ಕು ದುರ್ಗಗಳಲ್ಲಿ ಓಡಿ ಅಡಗಿ ಬದುಕಿದನು. ಈತನು ಬಲುಗೈ ಬ೦ಟನು- ಮಹಾವೀರನು,' ಎ೦ದನು.
ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ ||
ಬಲು ಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆ೦ದ ||೭೮ ||
ಪದವಿಭಾಗ-ಅರ್ಥ: ಕೊಳಲ ರಾಗದ ರಹಿಯೊ(ರೀತಿ, ಪದ್ಧತಿ; ವೈಭವ, ಆಡಂಬರ), ಕಲ್ಲಿಯ (ಸರಗುಣಿಕೆಯ ಬಲೆ) ಕಲಸುಗಳೋ ಹಳ್ಳಿಕಾತಿಯರ+ ಒಳಗುಡಿಯ ಹಾದರವೊ, ತುರುಗಾಹಿಗಳ ತೋಹುಗಳೋ,( ಮರಗಳ ಗುಂಪು, ಸಮೂಹ, ತೋಪು)+ ಬಲು ಸರಳ(ಬಾಣದ) ಸರಿವಳೆಯ(ಧಾರಕಾರ ಮಳೆಯ) ಮಿದುಳ+ ಒಡೆಗಲಸುಗಳ (ಬೆರಿಸಿದ- ಸೇರಿಸಿದ)+ ಅಡಾಯುಧದ( ಕತ್ತಿ, ಖಡ್ಗ) ತಳುಕಿನ ಕೊಳಗುಳದ(ಕಾಳಗ, ಯುದ್ಧ) ಜಯಸಿರಿಯ ಕಾಹಿನೊಳು(,ಕಾವಲಿರುವಿಕೆ,ಕಾವಲು)+ ಆರು ನೀನೆ೦ದ.
ಅರ್ಥ:ಜರಾಸಂಧನು ಕೃಷ್ನನಿಗೆ,'ನೀನು ಕೊಳಲ ರಾಗದ ವೈಭವದ ಆಡಂಬರನೋ? ಕವಣೆಯ ಸರಗುಣಿಕೆಯ ಬಲೆ ಕಲಸುಗಳ ಹಿಡಿದವನೊ? ಹಳ್ಳಿಕಾತಿಯರ ಒಳಗುಡಿಯ ಹಾದರವೊ? ತೋಪಿನಲ್ಲಿ ದನಕಾಯುವವರ ಸಮೂಹದವನೋ? ಬಹಳ ಬಾಣಗಳ ಮಳೆಯ ಕರೆಯುವವನೋ? ಮಿದುಳನ್ನು ಬೆರಿಸಿದ ತಂತ್ರಗಾರ ಕತ್ತಿಯೋ?, ತಳುಕಿನ- ಆಡಂಬರದ ಕಾಳಗದ ಜಯಲಕ್ಷ್ಮಿಯ ಕಾವಲುಗಅರನೋ? ಇವರಲ್ಲಿ ನೀನು ಯಾರು,' ಎಂದ.
ಹೋರಿ ಹೆ೦ಗುಸು ಬ೦ಡಿ ಪಕ್ಷಿ ಸ
ಮೀರಣಾಶ್ವಾಜಗರ ಗರ್ದಭ
ವೀರರೀತನ ಘಾತಿಗಳುಕಿತು ಕ೦ಸ ಪರಿವಾರ |
ಆರುಭಟೆಯುಳ್ಳವನು ಕ೦ಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನು೦ಟು ಶಿವಶಿವಯೆ೦ದನಾ ಮಗಧ || ೭೯ ||
ಪದವಿಭಾಗ-ಅರ್ಥ: ಹೋರಿ-(ಧೇನುಕಾಸುರ), ಹೆ೦ಗುಸು (ಪೂತನಿ), ಬ೦ಡಿ(ಶಕಟಾಸುರ), ಪಕ್ಷಿ (ಬಕಾಸುರ), ಸಮೀರಣ(ವಾಯುದೇವರು- ಸುಂಟರಗಾಳಿ)+ ಅಶ್ವ (ಕೇಶಿ ರಾಕ್ಷಸ)+ ಅಜಗರ(ಸರ್ಪ,ಕಾಲೀಯ- ಕಾಳಿಮಗ ಸರ್ಪ;) ಗರ್ದಭ(ಗಾರ್ದಭ- ಕತ್ತೆ, ರಾಸಭ) ವೀರರು(ಚಾಣೂರ ಮತ್ತು ಇತರರು)+ ಈತನ ಘಾತಿಗೆ (ಹೊಡತಕ್ಕೆ)+ ಅಳುಕಿತು(ಸೋತರು, ಸತ್ತರು) ಕ೦ಸ ಪರಿವಾರ ಆರುಭಟೆಯ(ಆರ್ಭಟೆ) ಉಳ್ಳವನು ಕ೦ಸನ ತೋರಹತ್ತನ(ಮಾವನನ್ನು??ಬಲಿಷ್ಠನ) ತೊಡಕಿದನು(ಆಕ್ರಸಿದನು,ಹೋರಾಡು,ಅಡ್ಡಿ ಮಾಡು, ನಿರೋಧಿಸು, ತೊಡರಿಕೊಳ್ಳು,) ಗಡ, ಭಾರಿಯ+ ಆಳು+ ಅಹನು (ಇವನು ಭಾರಿ ಬಲಿಷ್ಠ ಆಳು- ಉ೦ಟು- ಆಗಿರುವನು)+ ಉ೦ಟು ಶಿವಶಿವಯೆ೦ದನು ಆ ಮಗಧ
ಅರ್ಥ:ಆ ಮಗಧ ಜರಾಸಂಧನು, 'ಈ ಕೃಷ್ಣನು ಹೋರಿ, ಹೆ೦ಗುಸು, ಬ೦ಡಿ, ಪಕ್ಷಿ,ಸುಂಟರಗಾಳಿ, ಅಶ್ವ, ಕಾಳಿಂಗ ಸರ್ಪ, ಕತ್ತೆ, ಚಾಣೂರ ವೀರರು ಈತನ ಹೊಡತಕ್ಕೆ ಸೋತರ ಮತ್ತು ಸತ್ತರು. ಕ೦ಸನು ಪರಿವಾರದ ಆರ್ಭಟೆಯನ್ನು ಉಳ್ಳವನು; ಕ೦ಸನಂಥ ಬಲಿಷ್ಠನನ್ನು ಹೊಡೆದು ಕೊಂದನು ಗಡ! ಇವನು ಭಾರಿ ಬಲಿಷ್ಠ ಆಳಾಗಿರುವನು ಶಿವಶಿವಾ,'ಎಂದನು.
ಎಲವೊ ಗೋವಳ ನಿನ್ನ ಕ೦ಸನ
ನಿಳಯವೋ ಪೌ೦ಡ್ರಕನ ಕದನದ
ಕಳನೊ ಹ೦ಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ |
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿ೦ಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆ೦ದ || ೮೦ ||
ಪದವಿಭಾಗ-ಅರ್ಥ: ಎಲವೊ ಗೋವಳ(ದನ ಕಾಯುವವ) ನಿನ್ನ ಕ೦ಸನ ನಿಳಯವೋ(ಅರಮನೆಯೋ) ಪೌ೦ಡ್ರಕನ ಕದನದ ಕಳನೊ(ಯುದ್ಧ ಭೂಮಿಯೋ) ಹ೦ಸನ ಹೋರಟೆಯೊ(ಹೋರಾಟವೋ, ಕಾಳಗ, ಯುದ್ಧ ) ಮೇಣ್ ಡಿಬಿಕನ (ಹಂಸನ ಸೋದರ ಡಿಬಿಕನನ್ನು ಕೊಂದವನು ಕೃಷ್ಣ) + ಅಡುಪಾಯೊ (ಸೆಣಸಾಟವೋ), ಹುಲಿಗೆ ಮೊಲನು+ ಅಭ್ಯಾಗತನೆ(ಅತಿಥಿಯೇ?) ಕರಿ (ಆನೆ) ಕಳಭ(ಆನೆ ಮರಿ) ಸಿ೦ಹಕೆ ಸರಿಯೆ(ಸರಿಸಾಟಿಯೇ?) ನೀ ನಿನ್ನ+ ಅಳವನು (ಸಾಮರ್ಥ್ಯವನ್ನು)+ ಅರಿಯದೆ (ಇಲ್ಲಿ)ಹೊಕ್ಕು ಕೆಣಕಿದೆ, ಕೆಟ್ಟೆ ಹೋಗು+ ಎಂ೦ದ
ಅರ್ಥ:ಮಾಗಧನು ಕೃಷ್ಣನನ್ನ್ನು ಕುರಿತು,'ಎಲವೊ ಗೋವಳ- ದನ ಕಾಯುವವನೆ, ನಿನ್ನ ಕ೦ಸನ ಅರಮನೆಯೆಂದು ಭಾವಿಸಿದೆಯೋ? ಪೌ೦ಡ್ರಕನೊಡನೆ ಸೆಣಸಿದ ಯುದ್ಧ ಭೂಮಿಯೆಂದುಕೊಂಡಯೋ?) ಹ೦ಸನೊಡನೆ ಹೋರಾಟಮಾಡಿದಂತೆ ಎಂದು ಭಾವಿಸಿದೆಯೊ?, ಅಥವಾ ಡಿಬಿಕನೊಡನೆ ಸೆಣಸಾಟವೆಂದು ಭಾವಿಸಿದಯೋ?, ಹುಲಿಗೆ ಮೊಲವು ಅತಿಥಿಯೇ- ಅಲ್ಲ ಆಹಾರ; ಆನೆಯ ಮರಿ ಸಿ೦ಹಕ್ಕೆ ಸರಿಸಾಟಿಯೇ? ನೀನು ನಿನ್ನ ಸಾಮರ್ಥ್ಯವನ್ನು ಅರಿಯದೆ, ಇಲ್ಲಿ ಹೊಕ್ಕು ಕೆಣಕಿದೆ; ನೀನು ಕೆಟ್ಟೆ ಹೋಗು' ಎ೦ದ
ಇದುವೆ ಪಿತ್ತದ ವಿಕಳವೊ ಮ
ದ್ಯದ ವಿಕಾರವೊ ಭ೦ಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ |
ಸದನ ನಿನ್ನದು ಸೂಳೆಯರ ಮು೦
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆ೦ದನು ದಾನವದ್ವ೦ಸಿ || ೮೧ ||
ಪದವಿಭಾಗ-ಅರ್ಥ: ಇದುವೆ(ಈ ನಿನ್ನ ವರ್ತನೆ) ಪಿತ್ತದ ವಿಕಳವೊ(ವಿಕೃತಿ, ಭ್ರಮೆ, ಭ್ರಾಂತಿ) ಮದ್ಯದ ವಿಕಾರವೊ, ಭ೦ಗಿ ತಲೆಗೇರಿದುದೊ, ಭಟನಾದರೆ ವಿಘಾತದಲಿ(ಹೊಡೆತ)+ ಏಳು ಕಾಳಗಕೆ, ಸದನ(ಮನೆ) ನಿನ್ನದು ಸೂಳೆಯರ ಮು೦ದೆ+ ಒದರಿ (ಆರ್ಭಟಿಸಿ) ಫಲವೇನು, ಎದ್ದು ಬಾ ಭಾಳದಲಿ (ಹಣೆಯಲ್ಲಿ) ಬರೆದುದ ತೊಡೆವೆನು (ಅಳಿಸು- ಹಣೆಯಲ್ಲಿ ಬರೆದ ಆಯುಷ್ಯದನ್ನು ಅಳಿಸುವೆನು)+ ಎ೦ದನು ದಾನವದ್ವ೦ಸಿ(ದಾನವರನ್ನು ಕೊಂದವನು).
ಅರ್ಥ:ಕೃಷ್ನನು ಜರಾಸಂಧನಿಗೆ,'ಈ ನಿನ್ನ ವರ್ತನೆ ಪಿತ್ತದ ವಿಕೃತಿಯೋ, ಮದ್ಯ ಕುಡಿದ ವಿಕಾರವೊ, ಭ೦ಗಿಯನ್ನು ಸೇವಿಸಿ ತಲೆಗೇರಿದುದೊ, ನೀನು ಭಟನಾದರೆ ಹೊಡೆತದಲ್ಲಿ ತೋರಿಸು; ಏಳು ಕಾಳಗಕ್ಕೆ, ಈ ರಾಜಭವನ ನಿನ್ನದು. ನಿನ್ನನ್ನು ಸುತ್ತುವರಿದ ಸೂಳೆಯರ ಮು೦ದೆ ಆರ್ಭಟಿಸಿ ಫಲವೇನು ಎದ್ದು ಬಾ, ನಿನ್ನ ಹಣೆಯಲ್ಲಿ ಬರೆದ ಆಯುಷ್ಯದನ್ನು ಅಳಿಸುವೆನು,'ಎ೦ದನು.
ಎಲವೊ ಗೋಪಕುಮಾರ ಕ೦ಸನ
ಲಲನೆಯರ ವೈಧವ್ಯ ದುಃಖಾ
ನಲನ ನ೦ದಿಸಲಾಯ್ತು ನಿನ್ನಯ ರುಧಿರ ಜಲಧಾರೆ |
ಅಳಿದ ಕ೦ಸನ ಕಾಲಯವನನ
ಕಳನಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆ೦ದನಾ ಮಗಧ ೮೨
ಪದವಿಭಾಗ-ಅರ್ಥ: ಎಲವೊ ಗೋಪಕುಮಾರ ಕ೦ಸನ ಲಲನೆಯರ ವೈಧವ್ಯ ದುಃಖ+ ಅನಲನ(ಬೆಂಕಿ) ನ೦ದಿಸಲಾಯ್ತು ನಿನ್ನಯ ರುಧಿರ(ರಕ್ತ) ಜಲಧಾರೆ, ಅಳಿದ ಕ೦ಸನ ಕಾಲಯವನನ ಕಳನ(ಯುದ್ಧದ, ರಣರಂಗದ) ಹರಿಬವ (ಕರ್ತವ್ಯ, ಹೊಣೆಗಾರಿಕೆ) ಗೆಲಿದು ದೈತ್ಯಾವಳಿಯ ಬಂಧುತ್ವವನು ಬಳಸುವೆನು+ ಎ೦ದನು+ ಆ ಮಗಧ.
ಅರ್ಥ:ಆ ಮಾಗಧನು ಕೃಷ್ಣನಿಗೆ,'ಎಲವೊ ಗೋಪಕುಮಾರ, ಕ೦ಸನ ಪತ್ನಿಯರ ವೈಧವ್ಯದ ದುಃಖದ ಬೆಂಕಿಯನ್ನು ನ೦ದಿಸಲು ನಿನ್ನ ರಕ್ತವು ಆಯ್ತು ಜಲಧಾರೆ. ಅಳಿದ ಕ೦ಸನ, ಕಾಲಯವನನ, ಯುದ್ಧದಲ್ಲಿ ಕೊಂದ,ಪ್ರತೀಕಾರದ ಹೊಣೆಗಾರಿಕೆಯನ್ನು ನಿನ್ನನ್ನು ಗೆದ್ದು ದೈತ್ಯರ ಸಮೂಹದ ಬಂಧುತ್ವವನ್ನು ಬಳಸುವೆನು,'ಎ೦ದನು.
ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬ೦ದಿರಿ ತಪ್ಪ ಮಾಡಿದಿರಿ |
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ || ೮೩ ||
ಪದವಿಭಾಗ-ಅರ್ಥ:ಗೋವಳರು ನಿರ್ಲಜ್ಜರು+ ಅದರೊಳು ನೀವು ಗರುವರು(ಉತ್ತಮರು) ರಾಜಪುತ್ರರು ಸಾವ ಬಯಸುವನೊಡನೆ ಬ೦ದಿರಿ, ತಪ್ಪ ಮಾಡಿದಿರಿ, ನೀವು ಮಕ್ಕಳು ನಿಮ್ಮ ಹಿರಿಯರ ಠಾವಿನಲಿ(ಸ್ಥಾನದಲ್ಲಿ) ಬುಧರಿಲ್ಲಲಾ (ತಿಳುವಳಿಕೆಯುಳ್ಳವರು ಇಲ್ಲವಲ್ಲಾ;) ನಿಮಗೆ ಆವ ಹದನ+ ಅಹುದು(ಔಚಿತ್ಯ, ರೀತಿ, ಸರಿಯೇ? )+ ಎನುತ ನುಡಿದನು ಭೀಮ ಫಲುಗುಣರ.
ಅರ್ಥ:ಮಾಗಧನು ಭೀಮ ಫಲ್ಗುಣರನ್ನು ಕುರಿತು,'ಗೋವಳರು ನಿರ್ಲಜ್ಜರು - ಮಾನವಿಲ್ಲದವರು; ಅದರ ಸಂಗಡ ನೀವು ಉತ್ತಮರು- ರಾಜಪುತ್ರರು ಸಾವನ್ನು ಬಯಸುವನೊಡನೆ ಬ೦ದಿರುವಿರಲ್ಲಾ! ತಪ್ಪ ಮಾಡಿದಿರಿ. ನೀವು ಮಕ್ಕಳು. ನಿಮ್ಮ ಹಿರಿಯರ ಸ್ಥಾನದಲ್ಲಿ ಯಾರೂ ತಿಳುವಳಿಕೆಯುಳ್ಳವರು ಇಲ್ಲವಲ್ಲಾ; ನಿಮಗೆ ಯಾವುದು ಔಚಿತ್ಯವೆಂದು ತಿಳಿಯದು,' ಎಂಉ ನುಡಿದನು.
ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾ೦ಡಿತ್ಯವುಳ್ಳರೆ ತೋರಿಸುವುದೆಮಗೆ |
ಈ ಕಮಲನೇತ್ರ೦ಗೆ ಫಡ ನೀ
ನಾಕೆವಾಳನೆ ಶಿವ ಶಿವಾ ಜಗ
ದೇಕ ದೈವದ ಕೂಡೆ ದ೦ಡಿಯೆಯೆಂದನಾ ಭೀಮ || ೮೪ ||
ಪದವಿಭಾಗ-ಅರ್ಥ: ಸಾಕು+ ಇದೇತಕೆ ಹೊಳ್ಳು ನುಡಿಗೆ ವಿವೇಕಿಗಳು ಮೆಚ್ಚುವರೆ, ಯುದ್ಧವ್ಯಾಕರಣ ಪಾ೦ಡಿತ್ಯವುಳ್ಳರೆ ತೋರಿಸುವುದು+ ಎಮಗೆ, ಈ ಕಮಲನೇತ್ರ೦ಗೆ, ಫಡ ನೀನು+ ಆಕೆವಾಳನೆ(ವೀರ, ಪರಾಕ್ರಮಿ) ಶಿವ ಶಿವಾ ಜಗದೇಕ ದೈವದ ಕೂಡೆ ದ೦ಡಿಯೆಯೆಂದನು (ದಂಡಿ- ಸಮ,,ಹಿರಿಮೆ,ಮೇಲ್ಮೆ,ಹೆಗ್ಗಳಿಕೆ,ಹೆಚ್ಚುಗಾರಿಕೆ,ಘನತೆ,ಹಿರಿಮೆ ಹೋರಾಟ, ವಿರೋಧ)+ ಆ ಭೀಮ.
ಅರ್ಥ: ಆಗ ಭೀಮನು,'ಇದೇತಕೆ ಮಾತು, ಸಾಕು. ಪೊಳ್ಳು ಮಾತಿಗೆ ವಿವೇಕಿಗಳು ಮೆಚ್ಚುವರೆ? ಯುದ್ಧವ್ಯಾಕರಣ ಪಾ೦ಡಿತ್ಯವು ಇದ್ದರೆ ಅದನ್ನು ನಮಗೆ, ಈ ಕಮಲನೇತ್ರ ಕೃಷ್ಣನಿಗೆ ತೋರಿಸುವುದು. ಫಡ! ನೀನು ಪರಾಕ್ರಮಿಯೇ? ಶಿವ ಶಿವಾ ಜಗದೇಕ ದೈವದ ಎದರು ನೀನು ಅವನಿಗೆ ಸರಿಸಮವೇ, ಹೆಚ್ಚೇ,' ಎಂದನು,
ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳುಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ |
ಚಟ್ಟಳೆಯ ಚತುರಾಸ್ಯನಿವರೊಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ || ೮೫ ||
ಪದವಿಭಾಗ-ಅರ್ಥ:ದಿಟ್ಟರು+ ಅಹಿರೋ (ಆಗಿರುವಿರೋ), ಸಾವನು+ ಅರಿಯದೆ ಕೆಟ್ಟಿರಿ+ ಅಕಟಾ ಕಾಳುಗೋಪನ (ಸಾಮಾನ್ಯ ದನಕಾಯುವವನ) ಗೊಟ್ಟಿಯಾಟಕೆ(ಗೋಷ್ಠಿ- ಜೊತೆ, ಒಡನಾಟ) ಗುರಿಗಳಾದಿರಿ ನಿಮ್ಮ ಗುರುಸಹಿತ ಚಟ್ಟಳೆಯ(ಚಪ್ಪಟೆ,ಸಮತಲ) ಚತುರಾಸ್ಯನು(ಚತುರ್ಮುಖ ಬ್ರಹ್ಮ)+ ಇವರ+ ಒಡಹುಟ್ಟಿದರ ಸಮಜೋಳಿ(ಸರಿಸಾಟಿ) ಗಡ!, ಜಗಜಟ್ಟಿಗಳು ತಾವಿವರು+ ಎನುತ ತಲೆದೂಗಿದನು ಮಗಧ.
ಅರ್ಥ:ಮಾಗದನು,'ನೀವು ನಿಜವಾಗಿ ದಿಟ್ಟರು- ದೈರ್ಯಶಾಲಿಗಳು ಆಗಿದ್ದೀರಯ್ಯಾ!, ಬರುವ ಸಾವನ್ನು ಅರಿಯದೆ ಕೆಟ್ಟಿರಿ, ಅಕಟಾ! ಸಾಮಾನ್ಯ ದನಕಾಯುವವನ ಒಡನಾಟಲ್ಲಿ ಆಪತ್ತಿಗೆ ಗುರಿಗಳಾದಿರಿ. ನಿಮ್ಮ ಗುರುಸಹಿತ ಕಮಲದಲ್ಲಿ ಚಟ್ಟಳೆಯಾಗಿ ಕುಳಿತ ಬ್ರಹ್ಮನು ಇವರ- ಒಡಹುಟ್ಟಿದವರ ಸರಿಸಾಟಿಯೇ? ಗಡ!, ಜಗಜಟ್ಟಿಗಳು ತಾವು ಇವರು (ಎಂದುಕೊಂಡಿರುವರು)) ಎನ್ನುತ್ತಾ ಮಗಧನು ತಲೆದೂಗಿದನು.
ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇ ದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ |
ಕೈದುವು೦ಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆ೦ದನಾ ಮಗಧ ೮೬
ಪದವಿಭಾಗ-ಅರ್ಥ: ಬೈದು ಫಲವೇನು+ ಎಮಗೆ ಮೇಳದ(ಜೊತೆಗೂಡಿದ) ಮೈದುನರು ನೀವಲ್ಲಲೇ(ನೀವಲ್ಲವೇ?), ದಳವು(ಸೇನೆ, ಗುಂಪು, ತಂಡ )+ ಐದೆ(ಬಂದ) ನೂಕಲಿ- (ನೆಡೆಯಲಿ), ನಿಮ್ಮ ಮೂವರು ಸಹಿತ ನಮ್ಮೊಡನೆ, ಕೈದುವು+ ಉ೦ಟೇ(ಆಯುಧ ಇದೆಯೇ?) ತರಿಸಿ ಕೊಡಿಸುವೆನು+ ಐದಿ(ಬನ್ನಿ) ನೀವು+ ಆಳಾಗಿ(ಶೂರ ಭಟನಾಗಿ) ನಿಮ್ಮೊಡನೆ+ ಐದುವೆನು; ಬಲರಾಮನು+ ಉಳಿದಾನು+ ಎ೦ದನು+ ಆ ಮಗಧ.
ಅರ್ಥ:ಕೊನೆಗೆ ಆ ಮಗಧನು,' ಬೈದು ಫಲವೇನು? ನಮಗೆ ಹೋರಾಟಕ್ಕೆ ಜೊತೆಗೂಡಿ ಬಂದ ಭಾವ ಮೈದುನರು ನೀವಲ್ಲವೇ? ಬಂದ ನಿಮ್ಮ ಮೂವರು ಸಹಿತದ ತಂಡದೊಡನೆ ನಮ್ಮದು ಹೋರಾಟ ನೆಡೆಯಲಿ. ಆಯುಧ ಇದೆಯೇ? ಇಲ್ಲದಿದ್ದರೆ ತರಿಸಿ ಕೊಡಿಸುವೆನು; ನೀವು ಶೂರ ಭಟರಾಗಿ ಬನ್ನಿ, ನಿಮ್ಮೊಡನೆ ನಾನು ಕಾದಲು ಬರುವೆನು; (ನಿಮ್ಮ ಮೂವರ ಸಾವು ನಿಶ್ಚಿತ; ನಮ್ಮ ಶತ್ರು ಜೀವಸಹಿತ,) ಬಲರಾಮನೊಬ್ಬನು ಉಳಿದನು,' ಎ೦ದನು.
ಎಲವೊ ಬಾಹಿರ ಮಗಧ ಹಲಧರ
ನುಳಿಯೆ ಪಾ೦ಡವ ನೃಪರು ಪರಿಯ೦
ತಳವು ನಿನಗೊಬ್ಬ೦ಗೆ ಸೇರುವುದೇ ಮಹಾದೇವ |
ಅಳಿವು ತಪ್ಪದು ನುಡಿಯೊಳೆಲ್ಲವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆ೦ದನಸುರಾರಿ || ೮೭ ||
ಪದವಿಭಾಗ-ಅರ್ಥ:ಎಲವೊ ಬಾಹಿರ (ಹೀನಮನುಷ್ಯ) ಮಗಧ ಹಲಧರನು (ಬಲರಾಮ)+ ಉಳಿಯೆ ಪಾ೦ಡವ ನೃಪರು ಪರಿಯ೦ತ+ ಅಳವು(ಸಾಮರ್ಥ್ಯ) ನಿನಗೊಬ್ಬ೦ಗೆ ಸೇರುವುದೇ? ಮಹಾದೇವ ಅಳಿವು ತಪ್ಪದು ನುಡಿಯೊಳು+ ಎಎಲ್ಲವ ಬಳಸಲೇತಕೆ ವೀರನು+ ಅಹೆ(ಆಗಿರುವೆ) ನಮ್ಮೊಳಗೆ ಮೂವರೊಳು+ ಒಬ್ಬನನು ವರಿಸು(ಆರಿಸಿಕೊ)+ ಎ೦ದನು+ ಅಸುರಾರಿ.
ಅರ್ಥ: ಮಾಗಧನು 'ಬಲರಾಮನು ಒಬ್ಬ ಉಳಿದ' ಎನ್ನುತ್ತಲೆ, ಕೃಷ್ನನು ಕೋಪಗೊಂಡು ಹೇಳಿದ,'ಎಲವೊ ಹೀನಮನುಷ್ಯ ಮಗಧನೇ ಹಲಧರನು ಉಳಿಯಲು, ಪಾ೦ಡವ ನೃಪರು ಲೆಕ್ಕಕ್ಕಿಲ್ಲವೇ? ಅವರ ಇರುವ ಪರಿಯ೦ತ ಹಾಗೆ ಹೇಳಲಾಗದು, ಸಾಮರ್ಥ್ಯ ನಿನಗೊಬ್ಬನಿಗೆ ಸೇರುವುದೇ? ಮಹಾದೇವ! ಅಳಿವು ತಪ್ಪದು ನುಡಿಯಲ್ಲಿ ಎಲ್ಲವನ್ನೂ ಬಳಸವುದು ಏಕೆ? ನೀನು ವೀರನು ಇರುವೆ ನಮ್ಮೊಳಗೆ ಮೂವರಲ್ಲಿ ಒಬ್ಬನನ್ನು ಯುದ್ಧಕ್ಕೆ ವರಿಸು.' ಎ೦ದನು.
ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ |
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವ೦ಜುವೆವು ರಣ ನಾ
ಟಕ ಪಲಾಯನ ಪ೦ಡಿತರು ನೀವೆ೦ದನಾ ಮಗಧ || ೮೮ ||
ಪದವಿಭಾಗ-ಅರ್ಥ: ಅಕಟ ನಿಮಗ+ ಈ ಸಮರವು (ಯುದ್ಧವು)+ ಅವಶ್ಯಕವೆ? ನಮಗೆ+ ಖ್ಯಾತಿಯಲ್ಲ (ನಾನು ಬಯಸಿ ದುರ್ಬಲರೊಡನೆ ಯುದ್ಧಮಾಡವುದು ಕೀರ್ತಿ ತರುವುದಿಲ್ಲ.)+ ಇದು ಸಕಲ ಜನವು+ ಅರಿದಿರೆಯೆನುತ(ತಿಳಿಯಿರಿ) ನೋಡಿದನು ತನ್ನವರ; ಪ್ರಕಟವೈ(ಸ್ಪಷ್ಟವಾಗಿ ಪ್ರಚಾರವಾಗಿದೆ) ನಿಮ್ಮಾಳುತನ (ಶೌರ್ಯ) ಯದು ನಿಕರಕೆ+ ಆವ೦ಜುವೆವು ರಣ ನಾಟಕ ಪಲಾಯನ ಪ೦ಡಿತರು ನೀವೆ೦ದನು+ ಆ ಮಗಧ.
ಅರ್ಥ:ಆ ಮಗಧನು,'ಅಕಟ! ನಿಮಗ+ಈ ಯುದ್ಧವು ಅವಶ್ಯಕವೆ? ನಾನು (ಬಯಸಿ) ದುರ್ಬಲರೊಡನೆ ಯುದ್ಧಮಾಡವುದು ಕೀರ್ತಿ ತರುವುದಿಲ್ಲ. ಇದನ್ನು ಇಲ್ಲಿರುವ ಸಕಲ ಜನವು ತಿಳಿಯಿರಿ, ಎಂದು ತನ್ನವರನನು ನೋಡಿದನು; ಕೃಷ್ಣಾ, ನಿಮ್ಮಾಳುತನ- ಶೌರ್ಯವು ಯದುಗಳ ಸಮೂಹಕ್ಕೆ ಸ್ಪಷ್ಟವಾಗಿ ಪ್ರಚಾರವಾಗಿದೆ. ನಾವು ನಿಮಗೆ ಆ೦ಜುವೆವು! ಏಕೆಂದರೆ ನೀವು "ರಣನಾಟಕ ಪಲಾಯನ ಪ೦ಡಿತರು",' ಎ೦ದನು.
ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತ೦ಗೆ ಕೊಟ್ಟೆನು ಕಳನ ಕಾಳಗವ |
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕ೦ಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆ೦ದನಾ ಮಗಧ || ೮೯ ||
ಪದವಿಭಾಗ-ಅರ್ಥ:ಮಗಧನು ಮುಂದುವರಿದು,'ಪಾರ್ಥ ನೀ ಮಗುವು+ ಎಮ್ಮೋಡನೆ! ರಣದ (ಯುದ್ಧದ)+ ಅರ್ಥಿಯಾದರೆ(ಬಯಸುವಿರಾದರೆ) ಭೀಮಸೇನ ಸಮರ್ಥನು+ ಅಹನು+ ಆತ೦ಗೆ ಕೊಟ್ಟೆನು ಕಳನ ಕಾಳಗವ(ಯುದ್ಧದ ಆಹ್ವಾನವನ್ನು.) ವ್ಯರ್ಥವಿದು ತಾ ಹೋಗಲಿ+ ಇನ್ನು ಪರಾ+ ಅರ್ಥ- ಪರರ ಆಸಗೆ ಕ೦ಟಕವಾಗಲೇತಕೆ? (ಪೂಜೆಯ ನಂತರ ತೀರ್ಥ- ಇಲ್ಲಿಯವರಗೆ ಮಾಗಧ ಬೈಗುಳದ ಪೂಜೆ ಮಾಡಿದ್ದಾನೆ, ಕೊನೆಗೆ ತೀರ್ಥ-ದೇವರಿಗೆ ಅಭಿಷೇಕ ಮಾಡಿದ ಪವಿತ್ರವಾದ ನೀರು,- ಇಲ್ಲಿ ಶಸ್ತ್ರವೇ ತೀರ್ಥಧಾರೆ ಅಥವಾ) ತೀರ್ಥವು(ತೀರ್ಥ= ಶಾಸ್ತ್ರ, ದರ್ಶನ)+ ಐಸಲೆ(ಹಾಗೇ ಅಲ್ಲವೆ ಅಷ್ಟೆ,) ಶಸ್ತ್ರಧಾರೆಯಿದೆ+ ಎ೦ದನು+ ಆ ಮಗಧ.
ಅರ್ಥ:ಮಗಧನು ಮುಂದುವರಿದು,'ಪಾರ್ಥ ನೀನು ನಮ್ಮೋಡನೆ ಮಗುವು! ಯುದ್ಧದ ಬಯಕೆ ಇದ್ದರೆ, ಭೀಮಸೇನ ಸಮರ್ಥನಾಗಿರುವನು. ಆತನಿಗೆ ರಣರಂಗದಲ್ಲಿ ಯುದ್ಧದ ಆಹ್ವಾನವನ್ನು ಕೊಟ್ಟೆನು. ಈ ಯುದ್ಧ ವ್ಯರ್ಥವು; ತಾನು ಹೋಗಲಿ; ಇನ್ನು ಪರಾರ್ಥ- ಪರರ ಆಸಗೆ ಏಕೆ ಕ೦ಟಕವಾಗಲಿ? ಶಾಸ್ತ್ರ ಹಾಗೇ ಅಲ್ಲವೆ? ಯುದ್ಧಕ್ಕೆ ಬೇಕಾದ ಶಸ್ತ್ರಧಾರೆಯಿದೆ.' ಎ೦ದನು.
ತರಿಸಿದನು ಚ೦ದನದ ಸಾದಿನ
ಭರಣಿಗಳ ಕರ್ಪೂರವರಕ
ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ |
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾ೦
ಬರ ವಿಲೇಪನದಿ೦ದಲ೦ಕರಿಸಿದರು ನಿಜತನುವ || ೯೦ ||
ಪದವಿಭಾಗ-ಅರ್ಥ: ತರಿಸಿದನು ಚ೦ದನದ ಸಾದಿನ (ಹಣೆಗಿದುವ ಕಪ್ಪು ಅಥವಾ ಕೆಂಪು ಸುವಾಸನೆಯ ಕಸ್ತೂರಿ ಬೊಟ್ಟು-) ಭರಣಿಗಳ ಕರ್ಪೂರ ವರ (ಉತ್ತಮ)+ಕತ್ತುರಿ ಜವಾಜಿ, ಪ್ರಮುಖ ಬಹುವಿಧ ಯಕ್ಷ ಕರ್ದಮವ(ಸುಗಂಧವನ್ನು ಬೆರೆಸಿದ ನೀರು), ಹರಿ(ಕೃಷ್ಣ) ವೃಕೋದರ(ಭೀಮ) ಪಾರ್ಥರ+ ಇದಿರಲಿ ಭರಣಿಗಳ ನೂಕಿದನು, ಮಾಲೆ+ ಅ೦ಬರ(ಬಟ್ಟೆ) ವಿಲೇಪನದಿ೦ದ+ ಅಲ೦ಕರಿಸಿದರು ನಿಜ(ತಮ್ಮ)+ತನುವ(ದೇಹವನ್ನು)
ಅರ್ಥ:ಮಾಗದನು, ಪರಿಮಳದ, ತಂಪಿನ ಚ೦ದನದ ಸಾದಿನ, ಕರ್ಪೂರ ಉತ್ತಮ ಕತ್ತೂರಿ ಜವಾಜಿ, ಪ್ರಮುಖ ಬಹುವಿಧ ಯಕ್ಷಕರ್ದಮವ ಭರಣಿಗಳನ್ನು ತರಿಸಿದನು. ಕೃಷ್ಣ, ಭೀಮ, ಪಾರ್ಥರ ಎದುರಿಗೆ ಭರಣಿಗಳನನು ನೂಕಿದನು. ಅವರು ಮಾಲೆ ಮತ್ತು ಗಂದ ಕಸ್ತೂರಿಗಳನ್ನು ತಮ್ಮ ದೇಹಕ್ಕೆ ವಿಲೇಪನದ ಮಾಡಿಕೊಂಡು ಅಲ೦ಕರಿಸಿಕೊಂಡರು.

ಭೀಮ ಜರಾಸಂದರ ಮಲ್ಲಯುದ್ಧ[ಸಂಪಾದಿಸಿ]

ಅ೦ಕಕಿಬ್ಬರು ಭಟರು ತಿಲಕಾ
ಲ೦ಕರಣಶೋಭೆಯಲಿ ರಣನಿ
ಶ್ಶ೦ಕರನುವಾದರು ಸುಕರ್ಪುರ ವೀಳೆಯ೦ಗೊ೦ಡು |
ಬಿ೦ಕದುಬ್ಬಿನ ರೋಮ ಪುಳಕದ
ಮು೦ಕುಡಿಯ ಸುಮ್ಮಾನದ೦ಕೆಯ
ಝ೦ಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ || ೯೧ ||
ಪದವಿಭಾಗ-ಅರ್ಥ: ಅ೦ಕಕೆ (ಜಟ್ಟಿ ಕಾಳಗದ ಭೂಮಿಗೆ) + ಇಬ್ಬರು ಭಟರು ತಿಲಕ+ ಅಲ೦ಕರಣ ಶೋಭೆಯಲಿ ರಣನಿಶ್ಶ೦ಕರು (ಯುದ್ಧನಿಪುಣರು)+ ಅನುವಾದರು ಸುಕರ್ಪುರ ವೀಳೆಯ೦ಗೊ೦ಡು, ಬಿ೦ಕದ(ಹೆಮ್ಮೆಯ)+ ಉಬ್ಬಿನ ರೋಮ ಪುಳಕದ, ಮು೦ಕುಡಿಯ ಸುಮ್ಮಾನದ+ ಅ೦ಕೆಯ ಝ೦ಕೆಗಳ(ಜಟ್ಟಿಗಳು ಕುಸ್ತಿಯ ಅಂಣದಲ್ಲಿ ನಿಂದಿಸುವಿಕೆ- ಅಭಿನಯ) ಭರ (ಬಹಳ) ಭುಲ್ಲವಿಸಿದುದು(ಉತ್ಸಾಹಗೊಳ್ಳು, ಹುಮ್ಮಸ್ಸಿನಿಂದ ಕೂಡಿರು) ಭೀಮ ಮಾಗಧರ.
ಅರ್ಥ:ಂಆಗಧ ಭೀಮರು ಕುಸ್ತಿಯ- ಕಾಳಗದ ಅ೦ಕಕ್ಕೆ ಇಬ್ಬರು ಭಟರೂ ತಿಲಕಗಳಿಂದ ಅಲ೦ಕರಣ ಮಾಡಿಕೊಂಡ ಶೋಭೆಯಲ್ಲಿ, ಯುದ್ಧನಿಪುಣರು ಅನುವಾದರು. ಸುವಾಸನೆಯ ಕರ್ಪುರ ವೀಳೆಯಗಳನ್ನುಹಾಕಿಕೊ೦ಡು, ಹೆಮ್ಮೆಯಿಂ ಉಬ್ಬಿನಿಂತ ರೋಮ ಪುಳಕದಲ್ಲಿ ಮು೦ಕುಡಿಯ-ಮುನ್ನುಗ್ಗುವ ಸುಮ್ಮಾನದಲ್ಲಿ ಅ೦ಕೆಯ ಝ೦ಕೆಗಳನ್ನು ತೋರುತ್ತಾ ಭರದಿಂದ ಉತ್ಸಾಹಗೊಂಡು ನಿಂತರು.
ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊ೦
ಕಣಿಯೊ ಗದೆಯೋ ಬಿ೦ಡಿವಾಳವೊ ಪರಶು ತೋಮರವೊ |
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆ೦ದನು ಭೀಮ ಮಾಗಧನ || ೯೨ ||
ಪದವಿಭಾಗ-ಅರ್ಥ: ರಣದೊಳು+ ಆವುದು ಕೈದು (ಆಯುಧ), ಹಿರಿಯು+ ಅಬ್ಬಣವೊ(ದೊಣ್ಣೆ?), ಪರಿಘವೊ, ಸುರಗಿಯೋ(ಕತ್ತಿ), ಡೊ೦ಕಣಿಯೊ, ಗದೆಯೋ, ಬಿ೦ಡಿವಾಳವೊ ಪರಶು ತೋಮರವೊ, ಕಣೆ, ಧನುವೊ, ಕಕ್ಕಡೆಯೊ ಮುಷ್ಟಿಯೊ, ಹಣಿದಕೆ+ ಆವುದು ಸದರವು (ಅನುಕೂಲ)+ ಅದರಲಿ ಕೆಣಕಿ ನೋಡಾ ತನ್ನನೆ೦ದನು ಭೀಮ ಮಾಗಧನ.
ಅರ್ಥ:ಭೀಮನು ಜರಾಸಂಧನಿಗೆ,' ಕಾಳಗದಲ್ಲಿ ಯಾವುದು ಆಯುಧ? ದೊಡ್ಡ ಅಬ್ಬಣವೊ, ಪರಿಘವೊ, ಕತ್ತಿಯೊ, ಡೊ೦ಕಣಿಯೊ, ಗದೆಯೋ, ಬಿ೦ಡಿವಾಳವೊ ಪರಶು- ಕೊಡಲಿ, ತೋಮರವೊ, ಕಣೆಯೋ, ಧನುವೊ, ಕಕ್ಕಡೆಯೊ- ಕಠಾರಿಯೋ? ಮುಷ್ಟಿಯೊ, ಹಣಿದಕೆ- ಹೊಡೆಯಲು, ಸೋಲಿಸಲು ಯಾವುದು ನಿನಗೆ ಅನುಕೂಲವು? ಅದರಲ್ಲಿ ನನ್ನನ್ನು ಕೆಣಕಿ ನೋಡಾ,' ಎ೦ದನು.
ಅಯುಧ೦ಗಳಲೇನು ನೀ ನಾ
ಗಾಯುತದ ಬಲವೆ೦ಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ |
ಆಯಿತೇ ಸಮಜೋಳಿ ನಿನಗದು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾ ಹತ್ತಿಗನುವಾದ || ೯೩ ||
ಪದವಿಭಾಗ-ಅರ್ಥ: ಅಯುಧ೦ಗಳಲಿ+ ಏನು; ನೀ ನಾಗು+ ಆಯುತದ(ಒಂದುಸಾವಿರ) ಬಲವೆ೦ಬರು+ ನುಡಿವಾಯವೋ(ಕೇವಲ ನುಡಿಗಟ್ಟೊ) ಕಲಿಭೀಮ ದಿಟವವೊ- ನಿಜವೊ; , ನೋಡಬೇಹುದಲೆ, ಆಯಿತೇ ಸಮಜೋಳಿ ನಿನಗದು+ ಉಪಾಯವೋ ಚೊಕ್ಕೆಯವೊ (ಚಾತುರ್ಯ ೨ ಮಲ್ಲಯುದ್ಧದಲ್ಲಿ ಒಂದು ಪಟ್ಟು) ನುಡಿ, ಮನದಾಯತು(ಆಯತ- ವಿಸ್ತಾರ)+ ಎನೆ,+ ಎನಗೆ+ ಎನುತ ಹತ್ತಾ ಹತ್ತಿಗೆ+(ಕೈ ಕೈ ಯುದ್ಧ, ಮಲ್ಲಯುದ್ಧ) ಅನುವಾದ.
ಅರ್ಥ: ಮಾಗಧನು,'ಅಯುಧಗಳಿಂದ ಏನು ಹೋರಾಟ; ನೀನು ಒಂದುಸಾವಿರ ಆನೆಯ ಬಲದವ ಎನ್ನುವರು ಇದು ಕೇವಲ ನುಡಿಗಟ್ಟೊ ಕಲಿಭೀಮ ನಿಜವೊ;, ನಾವು ನೋಡಬಹುದಲ್ಲವೆ?, ಆಯಿತೇ ಸಮಜೋಳಿ, ನಿನಗದು ಉಪಾಯವೋ? ಚಾತುರ್ಯವೊ ನುಡಿ ಎಂದಾಗ, ನನಗೆ ಮನದಶಕ್ತಿ ಎನ್ನಲು, ಹಾಗೋ ಎನ್ನುತ್ತಾ ಕೈ ಕೈ ಜೋಡಿಸಿ ಮಲ್ಲಯುದ್ಧಕ್ಕೆ ಅನುವಾದನು.
ಧರಣಿಪತಿ ಕೇಳ್ಮಾಗಧನ ಮ೦
ದಿರದ ರಾಜಾ೦ಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು |
ಎರಡು ಬಲ ಮೋಹರಿಸಿ ನಿ೦ದುದು
ಪುರದ ಹೊರ ಬಾಹೆಯಲಿ ಕೃತ ಸ೦
ಚರಣ ಕಾರ್ತಿಕ ಶುದ್ದ ಪಾಡ್ಯದೊಳಾಹವಾರ೦ಭ || ೯೪ ||
ಪದವಿಭಾಗ-ಅರ್ಥ:ಧರಣಿಪತಿ(ಜನಮೇಜಯ) ಕೇಳ್+ ಮಾಗಧನ ಮ೦ದಿರದ ರಾಜಾ೦ಗಣದೊಳು+ ಅವನೀಸುರರು (ವಿಪ್ರರು) ನೋಟಕರಾದರು+ ಅಲ್ಲಿ ಮುರಾರಿ ಫಲುಗುಣರು ಎರಡು ಬಲ ಮೋಹರಿಸಿ ನಿ೦ದುದು ಪುರದ ಹೊರ ಬಾಹೆಯಲಿ(ಪಕ್ಕದಲ್ಲಿ) ಕೃತ ಸ೦ಚರಣ ಕಾರ್ತಿಕ ಶುದ್ದ ಪಾಡ್ಯದೊಳು+ ಆಹವ+ ಆರ೦ಭ.
ಅರ್ಥ:ಧರಣಿಪತಿ ಜನಮೇಜಯನೇ ಕೇಳು,'ಮಾಗಧನ ಅರಮನೆಯ ರಾಜಾ೦ಗಣದಲ್ಲಿ ವಿಪ್ರರು ಅಲ್ಲಿದ್ದ ಮುರಾರಿ-ಕೃಷ್ಣ ಫಲ್ಗುಣರು ನೋಟಕರಾದರು. ಎರಡು ಸೇನೆ ಮೋಹರಿಸಿ- ಒಟ್ಟಾಗಿ ಪುರದ ಹೊರಬದಿಯಲ್ಲಿ)ನಿ೦ತಿತು. ಕೃತಸಂವತ್ಸರದ ಸ೦-ಚರಣ ಕಾರ್ತಿಕ ಶುದ್ದ ಪಾಡ್ಯಲ್ಲಿ ಈ ಯುದ್ಧ ಆರ೦ಭವಾಯಿತು.
ಸಿಡಿಲು ಬೊಬ್ಬಿಡುವ೦ತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ |
ತುಡುಕದಲೀಯದೆ ತಿರುಗಿದರು ಗಡ
ಬಡಿಸಿ ದ೦ಡೆಯ ಲೊತ್ತಿದರು ಸಮ
ಚಡಿಸಿ ನಿ೦ದರು ನೀಲ ನಿಷಧಾಚಲಕೆ ಮಲೆವ೦ತೆ || ೯೫ ||
ಪದವಿಭಾಗ-ಅರ್ಥ: ಸಿಡಿಲು ಬೊಬ್ಬಿಡುವ೦ತೆ ಹೊಯ್ದರು(ಹೊಡೆದರು) ಮುಡುಹುಗಳ(ಹೆಗಲು, ಭುಜಾಗ್ರ, ಕೊಲ್ಲು, ಸಾಯುವಂತೆ ಮಾಡು) ಮಝ ಪೂತು ಮಲ್ಲೆನುತ+ ಅಡಿಗಡಿಗೆ ನೂಕಿದರು ಲವಣಿಯ(ಲವಣಿ- ಕಾಂತಿ, ಚುರುಕಾಗಿ, ಚಮತ್ಕಾರ, ಹಿಂದೂ ಮುಂದೂ ಬಾಗುವುದು, ಪಲ್ಟಿ) ನೀಡಿ ಸಾರದಲಿ ತುಡುಕದಲಿ(ಹೊಡೆತದಲ್ಲಿ)+ ಈಯದೆ(ಕೊಡದೆ) ತಿರುಗಿದರು ಗಡಬಡಿಸಿ(ಅವಸರದಿಂದ) ದ೦ಡೆಯಲಿ+ ಒತ್ತಿದರು ಸಮಚಡಿಸಿ(ಸರಿಸಮವಾಗಿ) ನಿ೦ದರು, ನೀಲ ನಿಷಧಾಚಲಕೆ ಮಲೆವ೦ತೆ(ಎದುರುನಿಂತಂತೆ).
ಅರ್ಥ: ಭೀಮ ಮಾಗಧರು, ಸಿಡಿಲು ಬೊಬ್ಬಿಡುವ೦ತೆ ಆರ್ಬಟಿಸಿ ಹೊಡೆದರು. ಹೆಗಲಿಗೆ ಹೆಗಲು ಕೊಟ್ಟು, ಮಝ ಪೂತು ಮಲ್ಲೆನುತ ಅಡಿಗಡಿಗೆ- ಪದೇಪದೇ ನೂಕಿದರು ಹಿಂದೂ ಮುಂದೂ ಬಾಗುವುದು, ಪಲ್ಟಿಯನ್ನು ನೀಡಿ ಸಾರದಲಿ ಹೊಡೆತದಲ್ಲಿ ಪೆಟ್ಟಿಗೆ ಅವಕಾಶ ಕೊಡದೆ ತಿರುಗಿದರು. ಗಡಬಡಿಸಿ- ಅವಸರದಿಂದ ಕೈ ದ೦ಡೆಯಲ್ಲಿ ಒತ್ತಿದರು. ಸಮಚಡಿಸಿ- ಸಂವರಿಸಿಕೊಂಡು ಸರಿಸಮವಾಗಿ ನಿ೦ತರು. ಅವರ ಹೋರಾಟ ನೀಲಪರ್ವತ ಮತ್ತು ನಿಷಧಾಚಲ ಬೆಟ್ಟಗಳು ಹೋರಾಟಕ್ಕೆ ಎದುರುನಿಂತಂತೆ ಕಂಡಿತು.
ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊ೦ಡ ಹೆಜ್ಜೆಯ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮ೦ಡಿಗಳ |
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ || ೯೬ ||
ಪದವಿಭಾಗ-ಅರ್ಥ: ಸಿಕ್ಕರು+ ಒಬ್ಬರಿಗೊಬ್ಬರು+ ಉರೆ(ಹೆಚ್ಚು) ಕೈಮಿಕ್ಕು() ಹರಿಯರು(ಹರಿ- ಚಲಿಸು), ಕೊ೦ಡ(ತೆಗೆದುಕೊಂಡ, ಇಟ್ಟ) ಹೆಜ್ಜೆಯ ಠಕ್ಕಿನಲಿ ಮೈಗೊಡರು, ತಿರಿಮುರಿವುಗಳ ಮ೦ಡಿಗಳ ಇಕ್ಕಿದರು(ಮಂಡಿಯಲ್ಲಿ ತಿರುಗಿದರು, ಹೊಡೆದರು), ಗಳಹತ್ತದಲಿ(ಗಳ-, ಕೊರಳು, ಕುತ್ತಿಗೆ) ಸಲೆ(ಚೆನ್ನಾಗಿ, ಬಹಳ) ಮಿಕ್ಕು ಸತ್ರಾಣದಲಿ(ಬಲವಾಗಿ) ಮಿಗೆ ಸರಿವೊಕ್ಕು(ಹೊಕ್ಕು) ಹಿಡಿದರು ಬಿನ್ನಣದ(ಸೊಗಸಾದ) ಚೊಕ್ಕೆಯದ(ಚಳಕ,ಕೈಚಳಕ,) ಜೋಡಿಯಲಿ.
ಅರ್ಥ:ಭೀಮ ಮಾಗಧರು, ಕುಸ್ತಿಯ ಹೋರಾಟದಲ್ಲಿ ಒಬ್ಬರಿಗೊಬ್ಬರು ಸಿಕ್ಕರು; ಬಹಳಕೈಮಿಕ್ಕು ಮುಂದೆ ಚಲಿಸರು; ಇಟ್ಟ ಹೆಜ್ಜೆಯ ಠಕ್ಕಿನಿಂದ ಮೈಗೊಡರು- ಸಿಕ್ಕಿಕೊಳ್ಳರು; ತಿರಿಮುರಿವುಗಳ ಮ೦ಡಿಗಳ ಊರಿ, ಮಂಡಿಯಲ್ಲಿ ತಿರುಗಿದರು, ಹೊಡೆದರು; ಒಬ್ಬರಿಗೊಬ್ಬರು ಕುತ್ತಿಗೆಹಿಡಿತದಲ್ಲಿ ಚೆನ್ನಾಗಿ, ಶಕ್ತಿಮೀರಿ ಬಲವಾಗಿ ಬಹಳ ಸರಿ ಹೊಕ್ಕು ಹಿಡಿದರು. ಸೊಗಸಾದ ಕೈಚಳಕದ ಜೋಡಿಯಲ್ಲಿ ಮೆರೆದರು.
ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆಮುರಿವ ಸಕುಟು೦ಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ |
ತಡೆವ ಚೌವ೦ಗಲ ದುವ೦ಗಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆ೦ದ || ೯೭ ||
ಪದವಿಭಾಗ-ಅರ್ಥ:ಬಿಡಿಸಿ ಗಳಹತ್ತವನು(ಕುತ್ತಿಗೆಯ ಹಿಡಿತವನ್ನು) ಡೊಕ್ಕರ(ಗುದ್ದು, ಹೊಡೆತ) ಕೊಡೆಮುರಿವ ಸಕುಟು೦ಬ (ಎರಡೂ ಒಟ್ಟು) ಡೊಕ್ಕರಕೆ+ ಅಡಸಿ ( ಬಿಗಿಯಾಗಿ ಒತ್ತು ತುರುಕು, ಮೇಲೆ ಬೀಳು, ಮೆಟ್ಟು) ಕತ್ತರಿ ಘಟ್ಟಿಸುವ, ಗಳಹತ್ತಡೆ (ಕುತ್ತಿಗೆ ಹಿಡಿತದ)+ ಒಕ್ಕರವ ತಡೆವ ಚೌವ೦ಗಲ ದುವ೦ಗಲ ಕೊಡೆಮುರಿವ ಪಟ್ಟಸಕೆ(ಖಡ್ಗದಂತಹ ಒಂದು ಬಗೆಯ ಆಯುಧ) ಚಾಚುವ ಝಡಿತೆಗೆ+ ಒದಗುವ ಭಟರು ಹೆಣಗಿದರು+ ಅರಸ ಕೇಳೆ೦ದ.
ಅರ್ಥ:ಭೀಮ ಮಾಗಧರು, ಪರಸ್ಪರ ಬಿಡಿಸಿ ಕುತ್ತಿಗೆಯ ಹಿಡಿತವನ್ನು ಬಿಡಿಸಿಕೊಂಡು. ಗುದ್ದನ್ನು ಕೊಡಲು, ಮುರಿವ ಎಲ್ಲಾ ಹೊಡೆತಕ್ಕೆ ಒಟ್ಟು ಸೇರಿಸಿ ಮೇಲೆಬಿದ್ದು ಕತ್ತರಿ ಘಟ್ಟಿಸುವ- ಪಟ್ಟುಹಾಕಿದಾಗ, ಗಳಹತ್ತಡೆ-ಕುತ್ತಿಗೆಹಿಡಿತದ ಒಕ್ಕರವ- ಪಟ್ಟನ್ನು ತಡೆವ ಚೌವ೦ಗಲ ಕ್ರಮದಲ್ಲಿ ಎದುರಿಸಿ, ದುವ೦ಗಲ ಪಟ್ಟಿನ ಕ್ರಮದಲ್ಲಿ ಕೊಡೆಮುರಿಯುವರು; ಕೈಯನ್ನು ಖಡ್ಗದಂತೆ ಚಾಚುವ ಝಡಿತೆಗೆ- ಹೊಡೆತಕ್ಕೆ ಒದಗುವ ಭಟರು ಗೆಲುವಿಗಾಗಿ ಹೆಣಗಿದರು.' ವೈಶಮಪಾಯನ ಮುನಿ ಅರಸ ಜನಮೇಜಯನೇ ಕೇಳು ಎಂದ.
ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ |
ಸುಳಿದು ಮರ್ಕಟ ಬ೦ಧದಲಿ ಕರ
ವಳಯದಲಿ ಕೈದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು || ೯೮ ||
ಪದವಿಭಾಗ-ಅರ್ಥ:(ಒಬ್ಬರೊಬ್ಬರನ್ನು )ಎಳೆದು ದಣುವಟ್ಟೆಯಲಿ(ಎಂಬ ಕುಸ್ತಿ ಪಟ್ಟು) ಬೊಪ್ಪರದೊಳಗೆ ಜಾಳಿಸಿ(ಚಲಿಸಿ) ಚಿಮ್ಮಿ (ತಪ್ಪಸಿಕೊಂಡು,) ಝಡಸೆಳೆದು (ಝಾಡಿಸಿ ಎಳೆದು) ಮುಡುಹಿನಲೌಕಿ (ಮೊಣಕೈಯಿಂದ ಒತ್ತಿ) ಬಿಗಿದರು ಪಟ್ದ ಮರ್ಕಟ ಬ೦ಧದಲಿ; ಕರವಳಯದಲಿ (ಕೈಗೆ ಸಿಗುವಾಗ) ಕೈದುಡುಕಿ (ಕೈ ಚಾಚಿ) ಶಿರವಟ್ಟಳೆಯ (ತಲೆಯ ಮೇಲೆ) ಚಲ್ಲಣ ಪಟ್ಟಿಯವರು+ ಒದಗಿದರು(ಆಕ್ರಮಿಸಿದರು) ಪಟುಭಟರು.
ಅರ್ಥ: ಭೀಮ ಜರಾಸಂದರು, ಒಬ್ಬರೊಬ್ಬರನ್ನು ಎಳೆದು ದಣುವಟ್ಟೆ ಎಂಬ ಕುಸ್ತಿ ಪಟ್ಟಿನಲ್ಲಿ ಬೊಪ್ಪರದೊಳಗೆ ಚಲಿಸಿ, ಚಿಮ್ಮಿ ತಪ್ಪಸಿಕೊಂಡು, ಝಾಡಿಸಿ ಎಳೆದು ಮೊಣಕೈಯಿಂದ (ತೋಳಿನಿಂದ ಕತ್ತಿಗೆಯನ್ನು ಸುತ್ತಿ ಹಿಡಿದು,) ಒತ್ತಿ ಮರ್ಕಟ ಬ೦ಧದಲ್ಲಿ ಪಟ್ದನ್ನು ಬಿಗಿದರು; ಕರವಳಯದಲಿ- ಕೈಗೆ ಸಿಗುವಾಗ) ಕೈದುಡುಕಿ- ಕೈ ಚಾಚಿ ತಲೆಯ ಮೇಲೆ ಅಟ್ಟಳೆ, ಚಲ್ಲಣ ಮತ್ತು ಪಟ್ಟಿಯನ್ನು ಧರಿಸಿದ ಮಲ್ಲ ಪಟುಭಟರು ಆಕ್ರಮಿಸಿದರು.
ಅಗಡಿಯಲಿ ಲೋಟಿಸಿ ನಿರ೦ತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬ೦ಧಗಳ|
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರ೦ಭದ ಸಗಾಡರು ಹೊಕ್ಕು ಹೆಣಗಿದರು || ೯೯ ||
ಪದವಿಭಾಗ-ಅರ್ಥ: ಅಗಡಿಯಲಿ(ಒರಟು) ಲೋಟಿಸಿ(ಉರುಳಿಸು, ಬೀಳಿಸು) ನಿರ೦ತರಲಿ(ಸತತವಾಗಿ )+ ಅಗಡಿಯಲಿ ಲಾಗಿಸಿ, ನಿಬಂಧದ ಬಿಗುಹುಗಳ ಕುಮ್ಮರಿಯ(ಕಡಿದ) ಕುಹರದ( ತೂತು, ರಂಧ್ರ) ನಾಗಬ೦ಧಗಳ ತೆಗಹುಗಳ (ಬಿಡಿಸುವುದು) ತೊಡಕುಗಳ ತುಳುಕಿನ(ತುಂಬಿದ? ಹೊರಸೂಸು?) ಜಗಳುಗಳ(ಹೊಡೆದಾಟದ) ಜೋಡಣೆಯ ನಿಡು ಸುಯ್ಲುಗಳ(ಉದ್ದ ಉಸಿರು) ಸೌರ೦ಭದ ಸಗಾಡರು(ಜೋರು, ಬಲಿಷ್ಠರು) ಹೊಕ್ಕು ಹೆಣಗಿದರು.
ಅರ್ಥ:ಭೀಮ ಮಾಗಧರು ಒರಟಾಗಿ ಒಬ್ಬರನ್ನೊಬ್ಬರು ಉರುಳಿಸಿ, ಬೀಳಿಸಿ, ಸತತವಾಗಿ ಅಗಡಿಯಲಿ- ಒರಟಾಗಿ ಹಾರಿಸಿ, ನಿಬಂಧದ/ಪಟ್ಟನ ಬಿಗುಹುಗಳಿಂದ ಬಿಡಿಸಿಕೊಳ್ಲುತ್ತಾ, ಕೈಕಾಲು ಸಂದುಗಳ ನಾಗಬ೦ಧಗಳನ್ನು ಬಿಡಿಸಿಕೊಂಡು, ತೊಡಕುಗಳ ತುಳುಕಿನ/ ಹೆಚ್ಚಿನ ಹೊಡೆದಾಟದ ಜೋಡಣೆಯೊಂದಿಗೆ ಹೋರಾಡಿದರು. ಅವರು ಹೋರಾಡುವಾಗ ನಿಡುಸುಯ್ಲುಗಳ ಉಸಿರುಬಿಡುತ್ತಿದ್ದರು. ಸೌರ೦ಭದ-ಕಸ್ತೂರಿ ಚಂದನ ಲೇಪಿತ ಸುವಾಸನೆಯ ದೇಹದ ಬಲಿಷ್ಠರು ಪರಸ್ಪರ ಹೊಕ್ಕು ಹೆಣಗಿದರು.
ಧೂಳಿ ಕುಡಿದುದು ಬೆಮರನಾ ಕೆ೦
ಧೂಳಿನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ |
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು || ೧೦೦ ||
ಪದವಿಭಾಗ-ಅರ್ಥ: ಧೂಳಿ ಕುಡಿದುದು ಬೆಮರನು+ ಆ ಕೆ೦ಧೂಳಿ ನೆನೆದುದು ಬೆವರಿನಲಿ, ತಳಮೇಲು ನಿಮಿಷಕೆ ಮೇಲು ತಳ, ಬಿಡುಹುಗಳ ಬಿಗುಹುಗಳ ಸೂಳು(ಸರದಿ, ಸಮಯ, ಆರ್ಭಟ, ಬೊಬ್ಬೆ) ನಾಸಾ ಪುಟದ (ಮೂಗಿನ ಹೊಳ್ಳೆ) ಪವನನ ತಾಳಿಗೆಯ(ನಾಲಿಗೆ ಬಾಯಿ) ಕರ್ಪುರದ ಕವಳದ ತೋಳತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು (ವೀರರು).
ಅರ್ಥ:ಭೀಮ ಮಾಗಧರ ಹೋರಾಟದ ಗರಡಿಯ ಭೂಮಿಯ ಧೂಳು ಅವರ ಬೆವರನ್ನು ಕುಡಿದು ಒದ್ದೆಯಾಯಿತು; ಆ ಕೆ೦ಧೂಳಿ ಬೆವರಿನಿಂದ ನೆನೆಯಿತು; ದೂಳು ಕೆಸರಾಗಿ ತಳ ಮೇಲಕ್ಕೆ ಬಂತು, ನಿಮಿಷಕೆ ಮೇಲುಭಾಗದ ಕೆಸರು ತಳಕ್ಕೆ ಹೋಯಿತು; ಹೋರಾಟದಲ್ಲಿ ಒಬ್ಬರು ಮತ್ತೊಬ್ಬರನ್ನು ಹಿಡಿದಾಗ, ಅದರ ಬಿಡುಹುಗಳ, ಮತ್ತೆ ಮತ್ತೆ ಹಿಡಿದ ಬಿಗುಹುಗಳ ಸರದಿಯಾಯಿತು. ಆ ಸಮಯ ಆರ್ಭಟ, ಬೊಬ್ಬೆಗಳು ಹೊರಟವು; ಅವರು ಮೂಗಿನ ಹೊಳ್ಳೆಯ ಗಾಳಿಯ, ಬಾಯಿನಾಲಿಗೆಯ ಕರ್ಪುರದ ಕವಳದ ಸೊಂಪಿನಲ್ಲಿ ಹೋರಾಡಿದರು. ಆ ಪಟುಭಟರು ತೋಳತೆಕ್ಕೆಯಲ್ಲಿ ಹಿಡಿದು ಸೊಲಿಸುವ ತವಕವುಳ್ಳ ಅವರು ಹೆಣಗಿದರು- ವಿರೋಧಿಯನ್ನು ಸೋಲಿಸಲು ಬಹಳ ಪ್ರಯಾಸ ಪಟ್ಟರು.
ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜ ಬಲಾಟೋಪ |
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು || ೧೦೧ ||
ಪದವಿಭಾಗ-ಅರ್ಥ: ತೀರದು+ ಇಬ್ಬರ ಸತ್ವವವು+ ಅನಿಯ (ಭೂಮಿಯ) ಸಾರದ (ಬೀಳದ, ಸೇರದ)+ ಇಬ್ಬರ ಬಲುಹು(ಶಕ್ತಿ) ಗಾಣದು ಪಾರುಖಾಣೆಯವ(ಅಂತ್ಯ),+ ಅದಟರು+ ಇಬ್ಬರ ಭುಜ ಬಲಾಟೋಪ ಸಾರವು (ಸತ್ವ)+ ಅಳಿಯದು ಮುಳಿಸು(ಕೋಪ) ದರ್ಪದಧಾರೆ ಮುರಿಯದು ಜಯದ ತೃಷ್ಣೆಯ (ಬಯಕೆ, ಬಾಯಾರಿಕೆ, ಆಸೆ, ಅಪೇಕ್ಷೆ) ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು
ಅರ್ಥ:ಕಲಿಭೀಮ ಮಾಗಧ ಇವರ ಇಬ್ಬರ ಸತ್ವವು ಕುಂದದು. ಭೂಮಿಗೆ ಬೀಳದೆ ಹೋರಾಡುವ ಬಲವು ಅಂತ್ಯವನ್ನು ಕಾಣದು. ಇಬ್ಬರು ಶೂರರು ಭುಜದ ಬಲಾಟೋಪ- ಪರಾಕ್ರಮ ಸಾರವು ಕಡಿಮೆಯಾಗದು. ಕೋಪ ದರ್ಪದಧಾರೆ ಮುರಿಯಲಿಲ್ಲ; ಜಯದ ತೃಷ್ಣೆಯನ್ನು ತೋರುತ್ತಾ ಇಬ್ಬರೂ ಹೆಣಗಿದರು.
ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲ ಭಯ೦ಕರ
ಸೋತನೋ ಪ್ರತಿಮಲ್ಲನೆ೦ದರು ಕೃಷ್ಣ ಫಲುಗುಣರು |
ಭೀತನಾದನು ಭೀಮನಹಿತ ವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿ ವಜ್ರನೆ೦ದುದು ಮಗಧ ಪರಿವಾರ || ೧೦೨ ||
ಪದವಿಭಾಗ-ಅರ್ಥ: ಪೂತು ಮಝ(ಭಲೇ ಭೇಷ್!) ಜಗಜಟ್ಟಿ ಧಣು ಧಣು (ಬೇಷ ಭೇಷ್; (ಧಣುಪಟ್ಟು?- ಭಲೇ ಭಲೇಪಟ್ಟು)) ವಾತಸುತ (ವಾಯುಪುತ್ರ) ಪರಬಲ (ಪರಸೇನೆಗೆ) ಭಯ೦ಕರ ಸೋತನೋ ಪ್ರತಿಮಲ್ಲನೆ೦ದರು ಕೃಷ್ಣ ಫಲುಗುಣರು, ಭೀತನಾದನು ಭೀಮ ನಹಿತ, ವಿಘಾತಿ ಮಾಗಧರಾಯ ಮಲ್ಲವ್ರಾತ(ವ್ರಾತ- ಗುಂಪು, ದೇಹ ಶ್ರಮ) ಕುಲಗಿರಿ ವಜ್ರನೆ೦ದುದು ಮಗಧ ಪರಿವಾರ.
ಅರ್ಥ:ಈ ಮಲ್ಲಯುದ್ಧ ನೋಡುಗರು ಭಲೇ ಭೇಷ್! ಎಂದು ಕೂಗಿದರು. ಜಗಜಟ್ಟಿ ಬೀಮನೇ ಧಣು ಧಣು, ಭಲೇ ಭಲೇಪಟ್ಟು) ವಾಯುಪುತ್ರ ಪರಸೇನೆಗೆ ಭಯ೦ಕರನು ಪ್ರತಿಮಲ್ಲನು ಸೋತನೋ- ಬಳಲಿದನೋ? ಎ೦ದರು ಕೃಷ್ಣ ಫಲ್ಗುಣರು. ಆಯಾಸವೇ ಇಲ್ಲದೆ ಹೊರಾಡುವ ವೃದ್ಧ ಮಾಗದನನ್ನು ಕಂಡು ಭೀಮನೂ ನಹಿತ ಭೀತನಾದನು, ಈ ಮಾಗಧರಾಯನು ಸೋಲದವ, ಸಾಯದವ; ಇವನು ಬಹುಮಲ್ಲರ ಮಲ್ಲ! ಮಗಧನ ಪರಿವಾರದವರು ಇವನು ಕುಲಗಿರಿಯಂತೆ ವಜ್ರದಹಾಗೆ ಗಟ್ಟಗನು ಎಂದರು.
ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ |
ತೊಲಗಿ ನಿ೦ದರು ಕರ್ಪುರದ ತನಿ
ಹಳುಕನಣಲೊಳಗಡಿಸಿ ದ೦ಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ || ೧೦೩ ||
ಪದವಿಭಾಗ-ಅರ್ಥ: ಅಲಸಿದರು(ಹೋರಾಡಿ ಯಾರೂ ಸೊಲದೆ, ಅಲಸ್ಯ ಹೊಂದಿದರು;) ಬಿನ್ನಣಕೆ,(ಕುಸ್ತಿಯ ಬಿನ್ನಾನ- ಜಾಣತನಕ್ಕೆ) ಬಿಗುಹಿನ ಕಳಿವುಗಳ( ಸಾವು, ನಾಶ, ಸೋಲು) ಬೇಸರಿಕೆಯಲಿ, ಕಡುಲುಳಿ(ಕಡು ತಿವ್ರ, ಲುಳಿ- ವೇಗ) ಮಸಗಿ(ಆಕ್ರಮಿಸಿ) ಡಾವರಿಸಿ(ಸುತ್ತು,ತಿರುಗಾಡು ಬಾಯಾರಿಕೆಯಾಗು ) ಮನವ+ ಅನುಪಾಯ ಡಾವರಕೆ ತೊಲಗಿ ನಿ೦ದರು ಕರ್ಪುರದ ತನಿ ಹಳುಕನು+ ಅಣಲೊಳು+ ಅಗಡಿಸಿ(ಅಡಗಿಸಿ); ದ೦ಡೆಯ ಬಲಿದು (ವ್ಯಾಯಾಮದ ದಂಡೆಯೊತ್ತಿ ಶಕ್ತಿ ತುಂಬಿಕೊಂಡು) ಬರಸಿಡಿಲ+ ಎರಕವೆನೆ ತಾಗಿದರು (ಮೇಲೆಬಿದ್ದರು) ಬಳಸಿನಲಿ (ಸುತ್ತುಬಂದು).
ಅರ್ಥ: ಭೀಮ ಮಾಗಧರು ಹೋರಾಡಿ ಯಾರೂ ಸೊಲದೆ, ಅಲಸ್ಯ ಹೊಂದಿದರು; ಕುಸ್ತಿಯ ಬಿನ್ನಾನ- ಜಾಣತನಕ್ಕೆ, ಬಿಗುಹಿನ ಕಳಿವುಗಳ- ಸಡಿಲತೆಯ ಬೇಸರಿಕೆಯಿಂದ, ಕಡು ತೀವ್ರವಾಗಿ ಆಕ್ರಮಿಸಿ, ಕುಸ್ತಿಯ ಅಂಕಣದಲ್ಲಿ ಸುತ್ತಿ, ಸುತ್ತಿ ತಿರುಗಾಡಿ ಬಾಯಾರಿಕೆಯಾಗುತ್ತಲೆ ಮನಸ್ಸನ್ನು ಅನುಪಾಯ- ಸಿದ್ಧಗೊಳಿಸಲು ದೂರದಲ್ಲಿ ತೊಲಗಿ ನಿ೦ತರು. ಅಲ್ಲಿ ಕರ್ಪುರದ ಹೊಸ ಚೂರನ್ನು ಅಂಕಲು- ದವಡೆಯಲ್ಲಿ ಅಗಡಿಸಿ, ವ್ಯಾಯಾಮದ ದಂಡೆಯೊತ್ತಿ ಶಕ್ತಿ ತುಂಬಿಕೊಂಡು) ಬರಸಿಡಿಲ ಹೊಡೆತ-ಎರಕವೆನ್ನುವಂತೆ ಅಂಕಣದ ಸುತ್ತುಬಂದು ಒಬ್ಬರಮೇಲೆಓಬ್ಬರು ಬಿದ್ದರು.
ಬಾಳ ಹೋಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೋ ಬಿರು ಹೊಯ್ಲ ಧಾರೆಯ ಕಿಡಿಯ ತು೦ಡುಗಳೊ |
ತೋಳನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ || ೧೦೪ ||
ಪದವಿಭಾಗ-ಅರ್ಥ:ಬಾಳ ಹೋಯ್ಲೋ ಸಿಡಿಲ ತೊಡರಿನ ಸೂಳುಗಳೊ ಸಿಡಿದಲೆಯ ಗಿರಿಗಳ ಬೀಳುಗಳೋ ಬಿರು ಹೊಯ್ಲ ಧಾರೆಯ ಕಿಡಿಯ ತು೦ಡುಗಳೊ, ತೋಳನೆಗಹಿನ ಮುಷ್ಟಿ ಘಾತದ ಮೇಲು ಘಾಯದ ಲುಳಿಯ ಘೋಳಾಘೋಳಿಗಳನು+ ಆರು(ಯಾರು)+ ಎಣಿಸುವರು ಕಲಿಭೀಮ ಮಾಗಧರ.
ಅರ್ಥ:'ಭೀಮ ಮಾಗಧರು ವೇಗದ ಆಕ್ರಮಣ ಕತ್ತಿಯ ಹೊಡೆತದಹಾಗಿತ್ತು; ಸಿಡಿಲ ತೊಡರಿ ಒಟ್ಟೊಟ್ಟಿಗೆ ಆರ್ಭಟದಂತಿತ್ತು; ಸಿಡಿದಲೆಯ ಗಿರಿಗಳ ಬೀಳುಗಳೋ ಎನ್ನುವಹಾಗೆ, ಬಂಡೆಗಳ ಬಿರುಸಾದ ಹೊಹೊಡೆತದ ಧಾರೆಯ ಕಿಡಿಯ ತು೦ಡುಗಳೊ ಎನ್ನುವಂತಿತ್ತು. ಕಲಿಭೀಮ ಮಾಗಧರ ಎತ್ತಿದ ತೋಳುಗಳ ಮುಷ್ಟಿ ಘಾತದ ದೊಡ್ಡ ಘಾಯದ, ಚಾಕಚಕ್ಯತೆಯ ಘೋಳಾ- ಘೋಳಿಗಳನ್ನು ಯಾರು ಎಣಿಸಬಲ್ಲರು- ಎಣಿಸಲು ಅಸಾಧ್ಯ.
ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೋಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಥಟ್ಟಿಸುವ |
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು || ೧೦೫ ||
ಪದವಿಭಾಗ-ಅರ್ಥ: ಕುಸಿದು ಘಾಯವ ಕಳೆದು (ಕುಳಿತು ಘಾಯವನ್ನು ಉಪಚರಿಸಿ- ), ವಕ್ಷದ (ಎದೆಯ) ಬೆಸುಗೆ ಬಿಡೆ ಸಿಡಿದೆದ್ದು ಹೋಯ್ಲಿಗೆ (ಹೊಡೆತಕ್ಕೆ) ಮುಸುಡ (ಮೂತಿಯನ್ನು ಮುರಿಯುತ್ತಾ) ತಿರುಹುವ ಮೈಯನ+ ಒಡ್ಡಿದಡೆ+ ಔಕಿ (ವತ್ತಿ) ಥಟ್ಟಿಸುವ ಅಸಮಸೆಗೆ (ಸಣ್ಣಗಾಯ) ಮೈಯ+ ಅಳುಕದೆ+ ಎರಗುವ (ಮೇಲೆಬೀಳುವ) ಹುಸಿವ ಜಾರುವ ಹೊಳೆವ ಹಣುಗುವ ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು.
ಅರ್ಥ:ಭೀಮ ಮಾಗಧರು, ಕುಳಿತು ಘಾಯವನ್ನು ಉಪಚರಿಸಿ ಸುಧಾರಿಸಿಕೊಂಡು ಎದೆಯ ಬೆಸುಗೆ-ಜೋಡಣೆ ಬಿಡುವಂತೆ ಸಿಡಿದೆದ್ದು ಹೊಡೆತಕ್ಕೆ ಮೂತಿಯನ್ನು ಮುರಿಯುತ್ತಾ ತಿರುವುತ್ತಾ, ಮೈಯನ್ನು ಒಡ್ಡಿದರೆ ವತ್ತಿ ಥಟ್ಟಿಸುವ-ಬಡಿಯುವ ಮೈಯ ಸಣ್ಣಗಾಯಕ್ಕೆ ಅಳುಕದೆ- ಹಂಜರಿಯದೆ ಮೇಲೆಬೀಳುವ ಹುಸಿವ, ಜಾರುವ, ಹೊಳೆವ, ಹಣುಗುವ, ಬೆಸುವ, ಬಿಡಿಸುವ, ದಿಷ್ಟ ಶೂರರು ಹೊಕ್ಕು ಹೆಣಗಿದರು.
ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೋಯ್ಲಿವರೊಳಗೆ ಜೋಡಿಸವೇನ ಹೇಳುವೆನು |
ಶಿವನ ಡಮರುಗದಾಟವೊ ಭೈ
ರವನ ಫಣೆಗಣ್ಣಾಟವೊಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ || ೧೦೬ ||
ಪದವಿಭಾಗ-ಅರ್ಥ: ಪವನಜನ(ಮಾರತಿ), ರಾವಣನ, ಝಾಡಿಯ ತಿವಿತಗಳು(ವೇಗದ ಹೊಡೆತಳು) ಚಾಣೂರ ಕೃಷ್ಣರ ಜವಳಿ ಹೋಯ್ಲು(ಏಟು, ಹೊಡೆತ )+ ಇವರೊಳಗೆ ಜೋಡಿಸವು(ಜೊಡಿ- ಸಮ)+ ಏನ ಹೇಳುವೆನು ಶಿವನ ಡಮರುಗದಾಟವೊ ಭೈರವನ ಫಣೆಗಣ್ಣಾಟವೊ, ಬಿರುದು+ ಇವುಗುಳಿನ(ಇವುಗಳ) ದೆಖ್ಖಾಳ(ಬಹಳ, ಅತಿಶಯ) ಮಸಗುತು(ಹರಡು; ಕೆರಳು; ತಿಕ್ಕು) ಭೀಮ ಮಾಗಧರ.
ಅರ್ಥ:ಭೀಮ ಮಾಗಧರ ಮಲ್ಲಯುದ್ಧವು, ಮಾರುತಿ ರಾವಣನ ವೇಗದ ಹೊಡೆತಗಳಂತೆ, ಚಾಣೂರ ಕೃಷ್ಣರ ಜವಳಿ- ಜೋಡಿ ಹೊಡೆತದಂತೆ, ಇವರೊಳಗೆ ಜೋಡಿಸವು ಸಮವಾಗಲಾರವು ಏನನ್ನು ಹೇಳಲಿ; ಆ ಆರ್ಭಟ ಶಿವನ ಡಮರುಗದಾಟವೊ, ಭೈರವನ ಫಣೆಗಣ್ಣಾಟವೊ ಎನ್ನುವಂತೆ ಇದ್ದು, ಬಿರುದು- ಹೊಗಳಿಕೆ ಇವುಗಳ ಅತಿಶಯ ಸದ್ದು ಎಲ್ಲಾಕಡೆ ಹಬ್ಬಿತು.
ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕ೦ದದಲಿ ಶಿರದಲಿ ಬದಿಯಲುದರದಲಿ |
ಝಣು ವಿರೋಧಿ ವಿಭಾಡ ಝುಣು ಝುಣು
ಝುಣು ಜಗತ್ರಯ ಜಟ್ಟಿ ಝುಣು ಝುಣು
ಝುಣು ಝುಣೆ೦ಬಬ್ಬರಣೆ ಮಸಗಿದುದೆರಡು ಭಾಹೆಯಲಿ || ೧೦೭ ||
ಪದವಿಭಾಗ-ಅರ್ಥ: ಕುಣಿದವು+ ಇಬ್ಬರ ಮುಷ್ಟಿಯು+ ಇಬ್ಬರ ಹಣೆಯಲಿ,+ ಎದೆಯಲಿ, ಮೋರೆಯಲಿ(ಮುಖದಲ್ಲಿ), ಭುಜದ+ ಅಣಸಿನಲಿ, ಕ೦ದದಲಿ(ಕುತ್ತಿಗೆಯಲ್ಲಿ), ಶಿರದಲಿ ಬದಿಯಲಿ,+ ಉದರದಲಿ, ಝಣು ವಿರೋಧಿ, ವಿಭಾಡ ಝುಣು, ಝುಣುಝುಣು ಜಗತ್ರಯ ಜಟ್ಟಿ, ಝುಣು ಝುಣುಝುಣು ಝುಣೆ೦ಬ+ ಉಬ್ಬರಣೆ ಮಸಗಿದುದು+ ಎರಡು ಭಾಹೆಯಲಿ ಪಕ್ಕಗಳಲ್ಲಿ.
ಅರ್ಥ:ಭೀಮ ಮಾಗಧರಿಬ್ಬರ ಮುಷ್ಟಿಗಳು ಪರಸ್ಪರಇಬ್ಬರ ಹಣೆಯಲ್ಲಿ ಎದೆಯಲ್ಲಿ ಮುಖದಲ್ಲಿ, ಭುಜದ ಸಂದಿನಲ್ಲಿ, ಕುತ್ತಿಗೆಯಲ್ಲಿ, ತಲೆಯಮೇಲೆ, ಬದಿಯಲ್ಲಿ, ಹೊಟ್ಟೆಯಮೇಲೆ ಕುಣಿದವು- ಅಪ್ಪಳಿಸಿದವು. ಇದನ್ನು ನೂಡಿದ ಎರಡು ಭಾಹೆಯಲಿ ಪಕ್ಕಗಳಲ್ಲಿದ್ದ ಜನರು, ಉತ್ಸಾಹದಿಂದ ಕೂಗಿದರು. ಝಣು ವಿರೋಧಿ, ವಿಭಾಡ ಝುಣು, ಝುಣುಝುಣು ಜಗತ್ರಯ ಜಟ್ಟಿಗಳೆ, ಝುಣು ಝುಣುಝುಣು ಝುಣೆ೦ಬ ಉಬ್ಬರಣೆಯ ಕೂಗು ಎರಡು ಬದಿಗಳಲ್ಲಿ ಆವರಿಸಿತು.
ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲ೦ಬಿಸಿತು ಕಡುಹಿನ ಖತಿಯ ಕೈ ಮಸಕ |
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾ ಮುಷ್ಟಿ ಗತಿಯ ದೃ
ಡಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ಪದ್ಯ || ೧೦೮ ||
ಪದವಿಭಾಗ-ಅರ್ಥ:ಹೊಯ್ಲ ಹೊದರೆದ್ದವು (ಹೊಯಿಲ ಹೊದರು+ ಎದ್ದವು= ಸಮೂಹದಲ್ಲಿ ಸದ್ದು ಎದ್ದವು,) ವಿಘಾತದ ಕಯ್ + ಲುಳಿಯ (ಕೈಯ ವೇಗದ) ಕಡುಘಾಯ (ದೊಡ್ಡಘಾಯ) ಘಾಯಕೆ ಮೆಯ್+ ಲವಣೆ (ಹೊಳಪು; ಲಾವಣ್ಯ) ಲ೦ಬಿಸಿತು(ಲಾವಣ್ಯ - ಅಂದ ಹೆಚ್ಚಿತು) ಕಡುಹಿನ ಖತಿಯ(ಅತಿ ಸಿಟ್ಟಿನ) ಕೈ ಮಸಕ (ಆಧಿಕ್ಯ, ಹೆಚ್ಚಳಮ ರಭಸ, ವೇಗ) ಹೊಯ್ಲ ಹೊಗೆಗಳ ಹೋರಟೆಯ ವೇಗಾಯ್ಲ ಮುಷ್ಟಾ ಮುಷ್ಟಿ ಗತಿಯ ದೃಡಾಯ್ಲರು(ಮುಷ್ಟಾ ಮುಷ್ಟಿ ಗತಿಯನ್ನು ಅನುಸರಿಸಿದ ದೃಡ ವೇಗಿಗಳು)+ ಅಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ
ಅರ್ಥ:ಹೀಗೆ ಭಿಮ ಮಾಗಧರು ಹೋರಾಡುತ್ತಿರಲು ಕೂಗು ಸಾಮುಹಿಕವಅಗಿ ಎದ್ದಿತು. ವಿಘಾತದ- ಬಹಲನೋವಾಗುವ ಕಯ್ಯ ವೇಗದ ಹೊಡೆತಕ್ಕೆ ದೊಡ್ಡ ಘಾಯಕ್ಕೆ ಮೆಯ್ಯ ಲಾವಣ್ಯ - ಅಂದ ಹೆಚ್ಚಿತು. ಅತಿ ಸಿಟ್ಟಿನ ಕೈ ರಭಸದ ಹೊಡೆತದ (ಹೊಗೆಗಳುಏಳುವಂತೆ) ಹೋರಾಟದ ವೇಗನೆಡೆ, ಮುಷ್ಟಾ ಮುಷ್ಟಿ ಗತಿಯನ್ನು ಅನುಸರಿಸಿದ ದೃಡ ವೇಗಿಗಳು ಒಬ್ಬರನ್ನೊಬ್ಬರು ಅಪ್ಪಳಿಸಿದರು. ಅವರ ಪಾದದ ಘಟ್ಟಣೆಗೆ ನೆಲವು ಕುಸಿಯಿತು.
ಆವ ಸಾಧನೆಯೊ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈ ವಳಿಯಲುಕ್ಕಿದುದು ಕಡುಹಿನ ಖತಿಯ ಕೈ ಮಸಕ |
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲುನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ || ೧೦೯ ||
ಪದವಿಭಾಗ-ಅರ್ಥ: ಆವ(ಯಾವ) ಸಾಧನೆಯೊ ವಿಘಾತಿಯ ((ಅಪಾಯವಾಗುವ))ಲಾವಣಿಗೆಗೆ(ವೇಗ, ಜೋರು, ವೀರಕಥೆ)+ ಅದ್ರಿಗಳು(ಬೆಟ್ಟಗಳು) ಬಿರಿದವು; ಮೈ ವಳಿಯಲಿ(ತಿರುಗಿದುದು, ಬಾಗಿದುದು, ಸಂದುಗಳು)+ ಉಕ್ಕಿದುದು ಕಡುಹಿನ (ಸಾಹಸ, ಹುರುಪು, ಉತ್ಸಾಹ) ಖತಿಯ(ಸಿಟ್ಟಿನ) ಕೈ ಮಸಕ(ರಭಸ, ವೇಗ) ತಾವರೆಯ ತೆತ್ತಿಗನ(ಬಂಧು, ನಂಟ- ಸೂರ್ಯ) ಕುಮುದದ ಜೀವಿಗನ ( ನೈದಿಲೆಯ ಗೆಳೆಯ- ಚಂದ್ರ) ಮಿಗೆ (ಮೀರಿಸಿ) ಮೇಲುನೋಟದೊಳು+ ಆ ವಿಗಡರುಗಳು(ವೀರರು)+ ಅಡಸಿ(ಆಕ್ರಮಿಸಿ) ತಿವಿದಾಡಿದರು ಬೇಸರದೆ(ಬೇಸರವಿಲ್ಲದೆ).
ಅರ್ಥ:ಭೀಮ ಮಾಗಧರದ್ದು ಯಾವ ಸಾಧನೆಯೊ, ಅಪಾಯವಾಗುವ ಅವರ ಜೋರು ಹೊಡೆತಕ್ಕೆ ಬೆಟ್ಟಗಳು ಬಿರಿದವು; ಮೈ ಬಾಗು ಸಂದುಗಳಲ್ಲಿ ಉಕ್ಕಿದುದು ಕಡುಹಿನ- ಬಲವಾದ ಸಿಟ್ಟಿನ ಕೈರಭಸದ ವೇಗವು ಸೂರ್ಯ ಚಂದ್ರರ ಗತಿಯನ್ನು ಮೀರಿಸಿತು; ಮೇಲುನೋಟಕ್ಕೇ ಕಾಣುವಂತೆ ಆ ಬಲಿಷ್ಠವೀರರು ಬೇಸರವಿಲ್ಲದೆ ಆಕ್ರಮಿಸಿ ತಿವಿದಾಡಿದರು.
ತೆಗೆದರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಲ್ಲ ಮಜ್ಜನ ಭೋಜನಾದಿಗಳ |
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ || ೧೧೦ ||
ಪದವಿಭಾಗ-ಅರ್ಥ:ತೆಗೆದರು+ ಅರ್ಜುನ ಕೃಷ್ಣರು+ ಈತನ+ ಅನುಗಿಯರ (ಪ್ರೀತಿಪಾತ್ರರು, ಮಕ್ಕಳು)+ ಅವನ+ ಅವರವನನು (ಅವನಕಡೆಯವರನ್ನು)+ ಇರುಳಿನ ಹಗಲ ವಿವರಣೆಯಲ್ಲ (ಲೆಕ್ಕವಿಲ್ಲ,ಗನನೆಯಿಲ್ಲ) ಮಜ್ಜನ ಭೋಜನಾದಿಗಳ(ಸ್ನಾನ- ಪಾನ- ಊಟ) ಬಗೆಗೆ(ಮನಸ್ಸಿಗೆ) ತಾರರು ಬಾಹುಸತ್ವದ ಹೊಗರು(ಗಟ್ಟಿತನ- ಕಾಂತಿ, ಹೆಚ್ಚಳ,) ಹೋಗದು, ಮನದ ಖಾತಿಯ(ಕೋಪದ) ತೆಗಹು (ಭಾವ) ತಗ್ಗದು, ಹೊಕ್ಕು ತಿವಿದಾಡಿದರು ಬೇಸರದೆ.
ಅರ್ಥ:ಭೀಮ ಮಾಗಧರ ಬಿಡುವಿಲ್ಲದ ಹೋರಾಟವನ್ನು ನೋಡಿ ಅರ್ಜುನ ಕೃಷ್ಣರು ಮಾಗಧನ ಪ್ರೀತಿಪಾತ್ರರು, ಮಕ್ಕಳನ್ನು, ಅವನ ಅಭಿಮಾನಿಗಳನ್ನು -ಅವನಕಡೆಯವರನ್ನು ಊಟ ವಿಶ್ರಾಂತಿಗೆ ಕಳಿಸಿದರು. ಈ ವೀರರ ಹೋರಾಟಕ್ಕೆ ರಾತ್ರಿ- ಹಗಲಿನ ಗಣನೆಯಿಲ್ಲದೆ ಹೋಯಿತು. ಸ್ನಾನ- ಪಾನ- ಊಟ- ನಿದ್ದೆಗಳ ವಿಚಾರವನ್ನು ಮನಸ್ಸಿಗೆ ತಾರದೆ ಹೋರಾಡಿದರು; ಅವರ ಬಾಹುಸತ್ವದ ಗಟ್ಟಿತನ- ಕಾಂತಿ ಹೋಗದು- ಕುಗ್ಗಲಿಲ್ಲ. ಅವರ ಮನದ ಕೋಪದ ಭಾವ ತಗ್ಗದು; ಹೀಗೆ ಬೇಸರವಿಲ್ಲದೆ ಇಬ್ಬರೂ ಹೊಕ್ಕು ತಿವಿದಾಡಿದರು.
ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದು ಬಿ೦ಕ ಬೀಯದು ನೋಯದಾಟೋಪ |
ತೆತ್ತ ಕೈ ಕ೦ಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋ೦ಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ || ೧೧೧ ||
ಪದವಿಭಾಗ-ಅರ್ಥ: ಸತ್ವ ಸವೆಯದು, ಮನದ ಮುಳಿಸಿನ(ಸಿಟ್ಟು) ಬಿತ್ತು ಬೀಯದು, ಜಯದ ಬಯಕೆಯ ಸುತ್ತು ಸಡಿಲದು, ಬಿ೦ಕ ಬೀಯದು(ಅಭಿಮಾನ ಕುಂದದು), ನೋಯದ+ ಆಟೋಪ ತೆತ್ತ- (ಹೊಡೆತಕೊಡುವ) ಕೈ ಕ೦ಪಿಸದು(ಹೆದರಿ ನಡುಗದು) ಮುಷ್ಟಿಯ ಹತ್ತುಗೆಗೆ (ಜೋಡಣೆಗೆ, ಸಂಬಂಧ) ಮನ ಝೋ೦ಪಿಸದು(ಎಚ್ಚರತಪ್ಪದು) ಮದವ+ ಎತ್ತಿ(ಹೆಚ್ಚಿಸಿಕೊಂಡು) ಮೆಟ್ಟಿದರು+ ಒಬ್ಬರೊಬ್ಬರ ಮರ್ಮಘಾತದಲಿ (ಆಯದ ದೇಹಭಾಗಕ್ಕೆ ಹೊಡೆದು).
ಅರ್ಥ:ಭೀ ಮತ್ತು ಮಾಗದರ ಮಲ್ಲಯುದ್ಧದಲ್ಲಿ, ಅವರ ಸತ್ವ ಕಡಿಮೆಯಾಗದು; ಮನದಲ್ಲಿನ ಸಿಟ್ಟಿನ ಬಿತ್ತು-ಬಿತ್ತಿದ ಗಿಡ ಬೀತುಬರಿದಾಗದು; ಜಯದ ಬಯಕೆಯ ಸುತ್ತು- ಬಿಗಿ ಸಡಿಲವಾಗದು, ಅಭಿಮಾನ ಕುಂದದು, ಪೌರುಷದ ನೆಡೆ ಆಟಾಟೋಪ ನೋಯದು- ನೊಂದು ಕಡಿಮೆಯಾಗದು. ಹೊಡೆತಕೊಡುವ ಕೈ ಕ೦ಪಿಸದು; ಮುಷ್ಟಿಯ ಮೈಗೆ ತಾಗುವಿಕೆಗೆ ಮನ ಝೋ೦ಪಿಸದು; ಹೀಗೆ ಇಬ್ಬರೂ ಮದವನ್ನು ಹೆಚ್ಚಿಸಿಕೊಂಡು ಒಬ್ಬರನ್ನೊಬ್ಬರು ಮರ್ಮಘಾತದಲ್ಲಿ ಮೆಟ್ಟಿದರು.
ಅರಸ ಕೇಳೈದನೆಯ ದಿವಸದೊ
ಳುರು ಭಯ೦ಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ |
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರ೦ಗದಲಿ || ೧೧೨ ||
ಪದವಿಭಾಗ-ಅರ್ಥ: ಅರಸ ಕೇಳು+ ಐದನೆಯ ದಿವಸದೊಳು+ ಉರು(ಬಹಳ) ಭಯ೦ಕರವಾಯ್ತು, ಕದನದ ಭರದೊಳು+ ಎಡೆ+ ದೆ+ ತೆರಹಿಲ್ಲ ವಿಶ್ರಮವಿಲ್ಲ, ನಿಮಿಷದಲಿ ಎರಡು ದೆಸೆಯಲಿ ವೀಳೆಯದ ಕರ್ಪುರದ ಕವಳದ ಕೈಚಳಕದಲಿ ತೆರಹನು (ತೆರಪು, ಬಿಡುವು)+ ಅಲ್ಲದೆ ಮತ್ತೆ ಕಾಣೆನು ಯುದ್ಧರ೦ಗದಲಿ.
ಅರ್ಥ:ಜನಮೇಜಯ ಅರಸನೇ ಕೇಳು, ಐದನೆಯ ದಿವಸದಲ್ಲಿ ಕದನ ಬಹಳ ಭಯ೦ಕರವಾಯ್ತು; ಕದನದ ಭರದಲ್ಲಿ ಎಡೆ- ಬಿಡುವು- ತೆರಹಿಲ್ಲ- ತೆರಪು, ವಿಶ್ರಮವಿಲ್ಲ, ನಿಮಿಷದಲ್ಲಿ ಎರಡು ದೆಸೆಯಲಿ ವೀಳೆಯದ ಕರ್ಪುರದ ಕವಳದ ಕೈಚಳಕದಲ್ಲಿ ಮಾತ್ರಾ ಬಿಡುವು ಇತ್ತು; ಅದು ಅಲ್ಲದೆ ಮತ್ತೆ ಯುದ್ಧರ೦ಗದಲ್ಲಿ ಬಿಡುವನ್ನ ಕಾಣೆನು,' ಎಂದ.

ಎರಡು ಕಾಲನು ಹಿಡಿದು ಸೀಳಿದು ಧರೆಗೆ ಬಿಸುಟನು ಭೀಮ ಮಾಗಧನ[ಸಂಪಾದಿಸಿ]

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭಯದ ಬಿಗುಹಿನಲಿ |
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ || ೧೧೩ ||
ಪದವಿಭಾಗ-ಅರ್ಥ: ಭರದ (ಹೊತ್ತುಕೊಳ್ಳುವುದು ಭಾರ, ಹೊಣೆ,) ಭಾರಣೆಯಲಿ(ಮಹಿಮೆ, ಗೌರವ) ಚತುರ್ದಶಿಯ+ ಇರುಳು(ರಾತ್ರಿ) ಮಗಧನ ಬಾಹುಸತ್ವದ ಮುರಿವು(ಕುಗ್ಗುವಿಕೆ, ಬಾಗು) ಮೊಳೆತುದು(ಆರಂಭವಾಯಿತು) ಶೌರ್ಯ ಸೆಡೆದುದು (ಸೆಟೆದುಕೊಂಡು- ಯುದ್ಧಕ್ಕೆ ಒಗ್ಗದೆ, ಕುಗ್ಗು, ವಕ್ರವಾಗು) ಭಯದ ಬಿಗುಹಿನಲಿ (ಹಿಡಿತ,ಹೆಚ್ಚುವಿಕೆ); ಉರು(ಹೆಚ್ಚಿನ) ಪರಾಕ್ರಮ ತೇಜ ಪಡುವಣ (ಪಶ್ಚಿಮದ) ತರಣಿಯಾದುದು(ಸೂರ್ಯ) ಧಟ್ಟಣೆಯ(ಗಟ್ಟಿ, ದಟ್ಟ) ಧರಧುರಕೆ ನಿರ್ದ್ರವ ಜಿಹ್ವೆಯಾದುದು(ಒಣಗಿದ ನಾಲಿಗೆ) ನಿಮಿಷ ನಿಮಿಷದಲಿ.
ಅರ್ಥ:ಬೀಮ ಮಾಗಧರು ಮಲ್ಲ ಯುದ್ಧಮಾಡುತ್ತಿದ್ದ ಚತುರ್ದಶಿಯಂದು(೧೪ನೆಯ ದಿನ) ಗೆಲ್ಲುವ ಭರವಸೆಯ ಹೊಣೆಯೊಂದಿಗೆ ಹದಿಮೂರು ದಿನ ಕಳೆದು ಚತುರ್ದಶಿಯ ರಾತ್ರಿ ಮಗಧನ ಬಾಹುಸತ್ವದ ಮುರಿವು ಆರಂಭವಾಯಿತು. ಶೌರ್ಯ ಸೆಡೆತು ಕುಗ್ಗಿತು; ಅವನ ನೆಡೆಯಲ್ಲಿ ಭಯದ ಹಿಡಿತ ಕಂಡಿತು; ಅವನ ಮಹಾ ಪರಾಕ್ರಮದ ತೇಜಸ್ಸು ಮುಳುಗುವ ಪಶ್ಚಿಮದ ಸೂರ್ಯನಂತೆ ಕಂದಿತು, ಗಟ್ಟಿಯಚುರುಕು ಯುದ್ಧಕ್ಕೆ ನಿಮಿಷ ನಿಮಿಷದಲ್ಲಿ ನಾಲಿಗೆ ಒಣಗಿತ್ತಿತ್ತು.
ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆ೦ಪು ಕರಿದಾಯ್ತು |
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ || ೧೧೪ ||
ಪದವಿಭಾಗ-ಅರ್ಥ: ಬೇಸರಿಕೆ ಬೇರೂರಿದುದು, ಜಯದಾಸೆ ಜಾರಿತು, ದಿಟ್ಟತನದ ವಿಳಾಸ(ವಿಲಾಸ- ಆನಂದ) ಹಾರಿತು, ಸುಪ್ರತಾಪದ ಕೆ೦ಪು ಕರಿದಾಯ್ತು; ಮೀಸಲು (ಆಪತ್ತಿನ ಸಮಯದಲ್ಲಿ ಬಳಸಲಾಗುವ ಶಕ್ತಿ)+ ಅಳಿದುದು ಮುಳಿಸು (ಸಿಟ್ಟು) ಶೌರ್ಯದವಾಸಿ ಪೈಸರವಾಯ್ತು(ಕುಗ್ಗುವುದು, ಕುಸಿಯುವುದು, ಜಾರುವುದು) ರಣದ (ಯುದ್ಧ)+ ಆವೇಶವು+ ಇಳಿದುದು ಮಗಧಪತಿಗೆ,+ ಇದನು+ ಅರಿದನು+ ಅಸುರಾರಿ(ಕೃಷ್ಣ)
ಅರ್ಥ: ಮಲ್ಲಯುದ್ಧದ ಹದಿನಾಲ್ಕನೆಯ ದಿನರಾತ್ರಿ ಜರಾಸಂಧನಿಗೆ, ಬಳಲಿ ಯುದ್ಧದಲ್ಲಿ ಬೇಸರಿಕೆ ಬೇರೂರಿತು. ಅವನಿಗೆ ಜಯದಾಸೆ ಜಾರಿತು; ದಿಟ್ಟತನದ ಗೆಲ್ಲುವೆನೆಂಬ ಆನಂದ ಹಾರಿತು; ಅವನ ಶ್ರೇಷ್ಠ ಪ್ರತಾಪದ ಕೆ೦ಪು ಕರಿದಾಯಿತು; ಆಪತ್ತಿನ ಸಮಯದಲ್ಲಿ ಬಳಸಲಾಗುವ ಆತ್ಮವಿಶ್ವಾಸದ ಶಕ್ತಿ ಇಲ್ಲವಾಗಿ, ಸಿಟ್ಟು ಶೌರ್ಯದಲ್ಲಿ ಮನೆಮಾಡಿ ಮನಸ್ಸು ಕುಗ್ಗಿತು. ಮಗಧಪತಿ ಮಾಗದನಿಗೆ ರಣದ ಆವೇಶವು ಇಳಿಯಿತು. ಇದನ್ನು ಸೂಕ್ಷ್ಮಜ್ಞನಾದ ಕೃಷ್ಣನು ಅರಿತನು.
ಹೊರಗೆ ಬಲಿದೊಳಡಿಳ್ಳವನು ಪರ
ರರಿಯದ೦ತಿರೆ ತಿವಿದ ಮಗಧನ
ಪರಿಯನರಿದನು ದನುಜರಿಪುಪರರಿ೦ಗಿತಜ್ಞನಲೆ |
ಅರಿವುದರಿದೆ ಚರಾಚರ೦ಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೇ ಶಿವಯೆ೦ದನಾ ಜನಮೇಜಯನು ನಗುತ || ೧೧೫ ||
ಪದವಿಭಾಗ-ಅರ್ಥ:ಹೊರಗೆ ಬಲಿದ+ ಒಳ ಡಿಳ್ಳವನು(ಟೊಳ್ಳಾದವನು) ಪರರು+ ಅರಿಯದ೦ತಿರೆ(ಬೇರೆಯವರಿಗೆ ತಿಳಿಯಬಾರದಂತೆ ಇರಲು) ತಿವಿದ ಮಗಧನ ಪರಿಯನು (ರೀತಿಯನ್ನು)+ ಅರಿದನು ದನುಜರಿಪು ಪರರಿ೦ಗಿತಜ್ಞನಲೆ ಅರಿವುದ+ ಅರಿದೆ ಚರಾಚರ೦ಗಳ(ಚರ+ ಅಚರ; ಚಲಿಸುವ ಚಲಿಸದಿರುವ ಜೀವಿಗಳಲ್ಲಿ) ಹೊರಗ+ ಒಳಗು ತಾನಲ್ಲದಿಲ್ಲಿ+ ಇದನರಿಯನೇ? ಶಿವಯೆ೦ದನು+ ಆ ಜನಮೇಜಯನು ನಗುತ.
ಅರ್ಥ: ವೈಶಂಪಾಯನ ಮುನಿಯು,'ಮಾಗಧನು ಹೊರಗೆ ಬಲವಂತ, ಒಳಗೆ ಟೊಳ್ಳಾದನು; ಇದು ಬೇರೆಯವರಿಗೆ ತಿಳಿಯಬಾರದಂತೆ ಇರಲು, ಮಾಗಧನು ಭಿಮನ್ನು ತಿವಿದನು. ಈ ಮಾಗಧನ ಪರಿಯನ್ನು ದನುಜರಿಪು ಕೃಷ್ನನು ಅರಿತನು ಎಂದನು. ವೈಶಂಪಾಯನ ಮುನಿ ಜನಮೆಜಯನಿಗೆ ಮಾಗದನು ಕುಗ್ಗಿದುದನ್ನು ಕೃಷ್ನನು ಅರಿತನು ಎಂದಾಗ, ಜನಮೇಜಯ ರಾಜನು,'ಕೃಷ್ಣನು ಪರರ ಇ೦ಗಿತಜ್ಞನಲ್ಲವೇ! ಅವನು ಅರಿಯಬೇಕಾದುದನ್ನು ಅರಿಯದೆ ಇರುವನೇ? ಅವನು ಚರಾಚರಗಳಲ್ಲಿ ಹೊರಗೂ ಒಳಗೂ ತಾನಲ್ಲದೆ ಇರುವವನು; ಇಲ್ಲಿ ಇದನ್ನು ಅರಿಯದಿರುವನೇ? ತಿಳಿಯುವನು, ಶಿವಾ,' ಎಂದನು ಆ ಜನಮೇಜಯನು ನಗುತ್ತಾ.
ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನತ೦ದೆಯ
ಬಲುಹುಗೊ೦ಡೀ ರಿಪುವ ಮುರಿ ನೆನೆ ನೆನೆ ಸಮೀರಣನ |
ಬಲುಮುಗಿಲು ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿವೃಕೋದರನನಿಲರೂಪಧ್ಯಾನಪರನಾದ || ೧೧೬ ||
ಪದವಿಭಾಗ-ಅರ್ಥ: ಎಲೆಲೆ ಪವನಜ ಮಾಗಧೇಶ್ವರನ (ಮಾಗಧನ)+ ಅಳವನು (ಅಳವು- ಸಾಮರ್ಥ್ಯ, ಸತ್ವ)+ ಅರಿದಾ (ಅರಿ- ತಿಳಿ, ತಿಳಿಯಾ) ನಿನ್ನ ತ೦ದೆಯ(ವಾಯುವಿನ) ಬಲುಹುಗೊ೦ಡು (ಸತ್ವ ಪಡೆದು)+ ಈ ರಿಪುವ ಮುರಿ (ಶತ್ರುವನ್ನು ಕೊಲ್ಲು), ನೆನೆ ನೆನೆ ಸಮೀರಣನ (ವಾಯುದೇವನನ್ನು), ಬಲುಮುಗಿಲು ಬಿರುಗಾಳಿಯ+ ಒಡ್ಡಿನೊಳು+ ಅಳುಕದೇ(ಹಿಂಜರಿಯದೆ) ಫಡ, ಬೇಗ ಮಾಡು,+ ಎನೆ(ಎನ್ನಲು), ಕಲಿ ವೃಕೋದರನು (ಭೀಮನು)+ ಅನಿಲರೂಪಧ್ಯಾನಪರನಾದ (ವಾಯುದೇವನನ್ನು ನೆನೆದ).
ಅರ್ಥ:ಆಗ ಕೃಷ್ನನು,'ಎಲೆಲೆ ಭೀಮ ಮಾಗಧನ ಸಾಮರ್ಥ್ಯ, ತಗ್ಗಿದುದನ್ನು ತಿಳಿಯಾ! ನಿನ್ನ ತ೦ದೆ ವಾಯುವಿನ ಸತ್ವ ಪಡೆದು, ಈ ಶತ್ರುವನ್ನು ಕೊಲ್ಲು; ನೆನೆ ನೆನೆ ವಾಯುದೇವನನ್ನು; ಬಲುಮುಗಿಲು ಬಿರುಗಾಳಿಯ ಒಡ್ಡಿನಲ್ಲಿ- ಒಟ್ಟಾಗಿ ಬಂದಾಗ ಹಿಂಜರಿಯದೆ ಫಡ! ಬೇಗ ಆಕ್ರಮಣ ಮಾಡು ಎನ್ನಲು, ಶೂರ ಭೀಮನು ವಾಯುದೇವಧ್ಯಾನಪರನಾಗಿ ವಾಯುದೇವನನ್ನು ನೆನೆದನು.
ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇ೦ದ್ರನ ತುಡುಕಿ ಹಿಡಿದನು ಮಲ್ಲಗ೦ಟಿನಲಿ |
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮ೦ಡಲದ೦ತೆ ತಿರುಗಿದನಾ ಜರಾಸ೦ಧ || ೧೧೭ ||
ಪದವಿಭಾಗ-ಅರ್ಥ: ಧ್ಯಾನದಲಿ ತನ್ಮಯತೆಯಾಗಲು+ ಅನೂನ (ಕೊರತೆ ಇಲ್ಲದ; ಅತ್ಯತ್ತಮ;) ಸಾಹಸನಾಗಿ ಮಗಧ ಮಹಾ ನರೇ೦ದ್ರನ ತುಡುಕಿ(ಆಕ್ರಮಿಸಿ) ಹಿಡಿದನು ಮಲ್ಲಗ೦ಟಿನಲಿ; ಆ ನಗೆಯನು+ ಏವಣ್ಣಿಸುವೆನು (ನೆಗೆತವನ್ನು ಏನು ವರ್ಣಿಸಲಿ)+ ಅನುಮಾನಿಸದೆ ಬೀಸಿದನು ಬವಣೆಯ(ಭ್ರಮಣೆ, ಸುತ್ತಾಟ, ಸಂಚಾರ ) ಭಾನುಮ೦ಡಲದ೦ತೆ(ಸೂರ್ಯಮಂಡಲ) ತಿರುಗಿದನು ಆ ಜರಾಸ೦ಧ.
ಅರ್ಥ:ಭೀಮನು ಕೆಲವು ಕ್ಷಣ ಧ್ಯಾನದಲಿ ತನ್ಮಯನಾಗಲು ಅತ್ಯತ್ತಮ ಸಾಹಸಿಯಾಗಿ ಮಗಧ ಮಹಾ ನರೇ೦ದ್ರ ಮಾಗಧನ್ನ್ನು ನುಗ್ಗಿ ಆಕ್ರಮಿಸಿ ಮಲ್ಲಗ೦ಟಿನ ಬಂಧದಲ್ಲಿ ಹಿಡಿದನು; ಆ ನೆಗೆತವನ್ನು ಏನು ವರ್ಣಿಸಲಿ; ಅನುಮಾನಿಸದೆ ಬೀಸಿದನು ಸುತ್ತಿ, ಆ ಜರಾಸ೦ಧನು ಭಾನುಮ೦ಡಲದ೦ತೆ ತಿರುಗಿದನು.
ಬರಸೆಳೆದು ಕರದಿ೦ದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸ೦ಧಿಸಿದುವಾಸೀಳು ತತುಕ್ಷಣಕೆ |
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸ೦ಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ || ೧೧೮ ||
ಪದವಿಭಾಗ-ಅರ್ಥ: ಬರಸೆಳೆದು (ವೇಗವಾಗಿ ಎಳೆದು) ಕರದಿ೦ದ(ಕೈಯಿಂದ) ಮಾಗಧನ+ ಎರಡು ಕಾಲನು ಹಿಡಿದು ಸೀಳಿದು ಧರೆಗೆ ಬಿಸುಟನು; ಸ೦ಧಿಸಿದುವು+ ಆ ಸೀಳು ತತು ಕ್ಷಣಕೆ ಮರಳಿ(ಪುನಃ), ಪವನಜ ಹಿಡಿದು ಸೀಳುವನ+ ಇರದೆ ಮಗುಳವು ಸ೦ಧಿಸುವವು+ ಈ ಪರಿ(ರೀತಿ) ಹಲವು ಸೂಳಿನಲಿ(ಆವೃತ್ತಿ, ಬಾರಿ), ಭೀಮನೊಳು+ ಒದಗಿದನು ಮಗಧ
ಅರ್ಥ:ಭೀಮನ ಹೊಡೆತಕ್ಕೆ ಮಾಗದನು ತಿರುಗಿದಾಗ, ಭೀಮನು ಅವನನ್ನು ಕೈಯಿಂದ ವೇಗವಾಗಿ ಎಳೆದು, ಮಾಗಧನ ಎರಡು ಕಾಲುಗಳನ್ನು ಹಿಡಿದು ಸೀಳಿದ್ದೇ ಭೂಮಿಗೆ ಬಿಸುಟನು; ಆದರೆ ಆ ಸೀಳುಗಳು ಮತ್ತೆ ತತ್‍ ಕ್ಷಣಕ್ಕೆ ಸ೦ಧಿಸಿದುವು. ಭೀಮನು ಪುನಃ ಅವನ ಕಾಲುಗಳನ್ನು ಹಿಡಿದು ಸೀಳುವನು, ಅವು ಗಾಗೇ ಬಿದ್ದಿರದೆ ಪುನಃ ಸೇರಿಕೊಳ್ಳುವವು. ಈ ರೀತಿ ಮಾಗಧನು ಹಲವು ಬಾರಿ ಭೀಮನಿಗೆ ಎದುರು ನೀಂತನು.
ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸ೦ಧಿಸ
ಲರಿ ವಿದಾರಣ ಭೀಮ ನೋಡುತ ಮರಳಿ ಮಾಗಧನ |
ಎರಡು ಸೀಳನುಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನ೦ಬೆನುನ್ನತ ಬಾಹುಸತ್ವದಲಿ || ೧೧೯ ||
ಪದವಿಭಾಗ-ಅರ್ಥ: ಮುರಮಥನನು+ ಅದನು+ ಅರಿತು ನಿಜಕರವ(ತನ್ನ ಹಸ್ತಗಳನ್ನು)+ ಎರಡನ್ನು ಪಲ್ಲಟವಾಗಿ ಸ೦ಧಿಸಲು+ ಅರಿ ವಿದಾರಣ(ಶತ್ರು ಸಂಹಾರಕ) ಭೀಮ ನೋಡುತ ಮರಳಿ ಮಾಗಧನ ಎರಡು ಸೀಳನು ಮಾಡಿ ಹೊಯ್ದು+ ಅಬ್ಬರಿಸಿ ಪಲ್ಲಟವಾಗಿ ಸೇರಿಸಿ ತಿರುಗಿಸಿದನು+ ಏನ೦ಬೆನು+ ಉನ್ನತ ಬಾಹುಸತ್ವದಲಿ.
ಅರ್ಥ:'ಇದನ್ನು ಣೋಡುತ್ತಿದ್ದ ಮುರಮಥನ ಕೃಷ್ಣನು, ಪುನಃ ಪುನಃ ಜರಾಸಂಧನ ಸೀಳುಗಳು ಜೊಡುತ್ತಿರುವುದನ್ನು ಅರಿತುಕೊಂಡು, ಅದಕ್ಕೆ ಪರಿಹಾರವಾಗಿ ತನ್ನ ಎರಡು ಹಸ್ತಗಳನ್ನು ಭೀಮನಿಗೆ ಕಾಣುವಂತೆ ಪಲ್ಲಟವಾಗಿ- ಹಿಂದುಮುಂದಾಗಿ ಜೋಡಿಸಲು, ಶತ್ರು ಸಂಹಾರಕ ಭೀಮ ಅದನ್ನು ಕಂಡು, ಪುನಃ ಮಾಗಧನನ್ನು ಹಿಡಿದು ಎರಡು ಸೀಳನ್ನು ಮಾಡಿ ಹೊಡೆದು ಅಬ್ಬರಿಸಿ, ತಲೆಗೆ ಕಾಲಿನಭಾಗ ಬರುವಂತೆ ಸೀಳುಗಳನ್ನು ಪಲ್ಲಟವಾಗಿ ಸೇರಿಸಿ, ಉನ್ನತ ಬಾಹುಸತ್ವದಿಂದ ತಿರುಗಿಸಿದನು.,'ಭೀಮನ ಸಾಹಸವನ್ನು ಏನೆಂದು ಹೇಳಲಿ ಎಂದನು ಮುನಿ.
ತಿರುಹಿದನು ನೂರೆ೦ಟು ಸೂಳನು
ಧರೆಯೊಳಪ್ಪಳಿಸಿದನುಬಳಿಕಾ
ಪುರ ಜನದ ಪರಿಜನದ ಹಾ ಹಾ ರವದ ರಹಿ ಮಸಗೆ |
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರು ಹೊಯ್ಲಿನಲಿ ಹೊರವ೦ಟರು ನಿಜಾಲಯವ || ೧೨೦ ||
ಪದವಿಭಾಗ-ಅರ್ಥ:ತಿರುಹಿದನು ನೂರೆ೦ಟು ಸೂಳನು, ಧರೆಯೊಳು+ ಅಪ್ಪಳಿಸಿದನು, ಬಳಿಕ+ ಆ ಪುರ ಜನದ ಪರಿಜನದ ಹಾ ಹಾ ರವದ ರಹಿ ಮಸಗೆ(ತುಂಬಲು) ತೆರಳಿತು (ಹಬ್ಬಿತು)+ ಅಲ್ಲಿಯದಲ್ಲಿ ಮಾಗಧನ+ ಅರಸಿಯರು ಬಿಡುಮುಡಿಯ (ಬಿಚ್ಚುಮಂಡೆಯಲ್ಲಿ ) ಜಠರದ (ಹೊಟ್ಟೆ) ಕರದ ಬಿರು ಹೊಯ್ಲಿನಲಿ (ಸದ್ದು, ಗೋಳಾಟದ ಸದ್ದಿನೊಡನೆ) ಹೊರವ೦ಟರು ನಿಜಾಲಯವ (ಅರಮನೆಯಿಂದ).
ಅರ್ಥ: ಬೀಮನು ಜರಾಸಂಧನ ಸೀಳಿದ ದೇಹದ ಹೋಳುಗಳನ್ನು ತಿರುವುಮುರುವಾಗಿ ಜೋಡಿಸಿ, ಅದನ್ನು ನೂರಾ ಎಂಟು ಬಾರಿ ಸುತ್ತ ತಿರುಗಿಸಿದನು. ನಂತರ ಅವನ ದೇಹವನ್ನು ಭೂಮಿಗೆ ಅಪ್ಪಳಿಸಿದನು. ಬಳಿಕ ಆ ಪುರದ ಜನರ, ಸೇವಕಪರಿಜನರ ಹಾ ಹಾ ಕಾರ ಸದ್ದಿನ ಗೋಳಾಟ ಅಲ್ಲಿ ಆವರಿಸಿ ತೆರಳಿತು ಎಲ್ಲಡೆ ಹಬ್ಬಿತು. ಆಗ ಮಾಗಧನ ಪತ್ನಿಯರು (ಇದ್ದಲ್ಲಿಂದ) ಬಿಚ್ಚುಮಂಡೆಯಲ್ಲಿ ಹೊಟ್ಟೆಯಮೇಲೆ ಕೈಯಿಟ್ಟುಕೊಂಡು ಬಿರುಸಾದ ಹೊಯಿಲಿಡುತ್ತಾ ತಮ್ಮ ಅರಮನೆಯಿಂದ ಹೊರಹೊರಟರು.ವ೦ಟರು ನಿಜಾಲಯವ.
ಮನೆಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವ೦ಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು |
ಜನದ ಕೊಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕ೦ಡಸುರಹರ ಸಾರಿದನು ಕೈ ನೆಗಹಿ || ೧೨೧ ||
ಪದವಿಭಾಗ-ಅರ್ಥ: ಮನೆಮನೆಯ ಕದವಿಕ್ಕಿದವು (ಬಾಗಿಲು ಮುಚ್ಚಿದವು) ನೃಪವನಿತೆಯರು ಹೊರವ೦ಟರು+ ಅಲ್ಲಿಯ ಮನುಜರು+ ಅಡಗಿದರು+ ಅದ್ರಿ ಗುಹೆಯಲಿ ಬೇಹ ಬೇಹವರು ಜನದ ಕೊಲಾಹಲವನು+ ಆತನ ತನುಜರ+ ಓಟವನು+ ಅವನ ಸತಿಯರ ನಿನದವನು(ಸದ್ದು, ಕೂಗನ್ನು) ಕ೦ಡು+ ಅಸುರಹರ(ಕೃಷ್ಣ) ಸಾರಿದನು ಕೈ ನೆಗಹಿ
ಅರ್ಥ:ಜರಾಸಂದನು ಮಡಿದ ಸುದ್ದಿ ಹರಡುತ್ತಲೆ, ನಗರದ ಮನೆಮನೆಯ ಬಾಗಿಲು ಮುಚ್ಚಿದವು ರಾಜನ ಪತ್ನಿಯರು ಹೊರಹೊಟರು. ಅಲ್ಲಿಯ ಜನರು ಬೆಟ್ಟದ ಗುಹೆಯಲಿ ಅಡಗಿದರು. ಕಾವಲಿನವರು ಬೇಹುಗಾರರು, ಜನರ ಕೊಲಾಹಲವನ್ನು, ಆತನ ಮಕ್ಕಳ ಓಟವನ್ನು ಕಂಡು, ಅವನ ಸತಿಯರ ಕ೦ಡು+ ಅಸುರಹರ ಕೃಷ್ಣನು ಸಾರಿದನು ಕೈ ನೆಗಹಿ/ಮೇಲೆ ಎತ್ತಿ ಎಲ್ಲರಿಗೂ ಅಭಯವನ್ನು ಸಾರಿದನು.

ಮಾಗಧನ ವಧೆಯ ನಂತರ ರಾಜರ ಬಿಡುಗಡೆ, ಮಾಗಧನ ಮಗ ಸಹದೇವನಿಗೆ ಪಟ್ಟ[ಸಂಪಾದಿಸಿ]

ಅ೦ಜದಿರಿ ಪುರದವರು ವನಿತೆಯ
ರ೦ಜದಿರಿ ಮಾಗಧನ ಪರಿಜನ
ವ೦ಜದಿರಿ ಮ೦ತ್ರಿ ಪ್ರಧಾನ ಪಸಾಯ್ತರಾದವರು |
ಅ೦ಜದಿರಿ ಕರೆಯಿವನ ಮಗನನು
ಭ೦ಜಿಸುವುದಿಲ್ಲಕಟಭೀಮ ಧ
ನ೦ಜಯರು ಕೊಟ್ಟಭಯವೆ೦ದನುನಗುತ ಮುರವೈರಿ || ೧೨೨ ||
ಪದವಿಭಾಗ-ಅರ್ಥ: ಅ೦ಜದಿರಿ ಪುರದವರು ವನಿತೆಯರು+ ಅ೦ಜದಿರಿ ಮಾಗಧನ ಪರಿಜನವು+ ಅ೦ಜದಿರಿ ಮ೦ತ್ರಿ ಪ್ರಧಾನ ಪಸಾಯ್ತರಾದವರು(ಸಾಮಂತರು) ಅ೦ಜದಿರಿ ಕರೆಯಿವನ ಮಗನನು ಭ೦ಜಿಸುವುದಿಲ್ಲ (ಅವಮಾನಮಾಡು, ಸಂಹರಿಸು)+ ಅಕಟ ಭೀಮ ಧನ೦ಜಯರು ಕೊಟ್ಟು+ ಅಭಯವೆ೦ದನು ನಗುತ ಮುರವೈರಿ.
ಅರ್ಥ:ಮಾಗಧನ ಕಡೆಯವರು ಅಂಜಿ ಓಡುತ್ತಿರಲು, ಕೃಷ್ನನು ಅವರಿಗೆ, ನಗುತ್ತಾ,,'ಪುರದವರೇ ಅ೦ಜಬೇಡಿ; ವನಿತೆಯರೇ ಅ೦ಜಬೇಡಿ, ಮಾಗಧನ ಪರಿಜನರೇ ಅ೦ಜದಿರಿ; ಮ೦ತ್ರಿ ಪ್ರಧಾನ ಸಾಮಂತರಾದವರು ಅ೦ಜದಬೇಡಿ. ಮಾಗಧನ ಮಗನನ್ನು ಕರೆಯಿರಿ. ಯಾರಿಗೂ ಅವಮಾನ ಮಾಡುವುದಿಲ್ಲ, ಹಿಂಸಿಸುವುದಿಲ್ಲ. ಅಕಟ! ಇದು ಭೀಮ ಧನ೦ಜಯರು ಕೊಟ್ಟ ಅಭಯವು,'ಎಂದನು.
ಮುರಿದು ಕೆಡಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದನು ನಾನಾ ದ್ವೀಪ ಪಾಲಕರ |
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊ೦ಡು ನಗರದ
ಹೊರವಳಯದಲಿ ಬ೦ದುಹೊಕ್ಕರು ತಮ್ಮ ಪಾಳೆಯವ || ೧೨೩ ||
ಪದವಿಭಾಗ-ಅರ್ಥ: ಮುರಿದು ಕೆಡಹಿದರು+ ಅರಿಯನು (ಶತ್ರುವನ್ನು)+ ಅಲ್ಲಿಯ ಸೆರೆಯ ಮನೆಗಳ ಹೊಕ್ಕು ರಾಯರ ಸೆರೆಗಳನು ಬಿಡಿಸಿದನು, ನಾನಾ ದ್ವೀಪ ಪಾಲಕರ, ಮೆರೆವ ಮಣಿಮಯ ರಶ್ಮಿವಳಯದ ಮಿರುಪ ರಥವನು ಕೊ೦ಡು, ನಗರದ ಹೊರವಳಯದಲಿ ಬ೦ದು ಹೊಕ್ಕರು ತಮ್ಮ ಪಾಳೆಯವ.
ಅರ್ಥ:ಕೃಷ್ಣ, ಭೀಮ, ಪಾರ್ಥರು ಶತ್ರುವನ್ನು ಮುರಿದು ಕೆಡವಿದರು. ನಂತರ ಕೃಷ್ಣನು ತನ್ನವರೊಡನೆ ಹೋಗಿ ಅಲ್ಲಿಯ ಸೆರೆಮನೆಗಳನ್ನು ಹೊಕ್ಕು ನಾನಾ ದ್ವೀಪ ಪಾಲಕರಾದ ರಾಜರನ್ನು ಸೆರೆಯಿಂದ ಬಿಡಿಸಿದನು. ಶೋಭಿಸುವ ಮಣಿಮಯ ರಶ್ಮಿವಲಯದ ಮಿರುಗುವ ರಥವನ್ನು ತೆಗೆದುಕೊಂಡು, ನಗರದ ಹೊರವಳಯದಲ್ಲಿ ಬ೦ದು ತಮ್ಮ ಪಾಳೆಯವನ್ನು ಹೊಕ್ಕರು.
ಪೌರಜನ ಕಾಣಿಕೆಗಳಲಿ ಕ೦
ಸಾರಿ ಭೀಮಾರ್ಜುನರ ಕ೦ಡುದು
ಧಾರುಣೀಪಾಲಕರು ಬ೦ದರು ಬೆನ್ನಲಿವರುಗಳ |
ಘೋರವಡಗಿದುದೆಮ್ಮ ಕಾರಾ
ಗಾರ ಬ೦ಧವಿಮುಕ್ತವಾಯ್ತುಪ
ಕಾರವೆಮ್ಮಿ೦ದಾವುದೆ೦ದರು ನೃಪರು ಕೈಮುಗಿದು || ೧೨೪ ||
ಪದವಿಭಾಗ-ಅರ್ಥ: ಪೌರಜನ ಕಾಣಿಕೆಗಳಲಿ ಕ೦ಸಾರಿ ಭೀಮಾರ್ಜುನರ ಕ೦ಡುದು; ಧಾರುಣೀ ಪಾಲಕರು(ರಾಜರು) ಬ೦ದರು ಬೆನ್ನಲಿ (ಅವರ ಹಿಂದೆ)+ ಇವರುಗಳ ಘೋರವು+ಅಡಗಿದುದು+ ಎಮ್ಮ ಕಾರಾಗಾರ ಬ೦ಧವಿಮುಕ್ತವಾಯ್ತು+ ಉಪಕಾರವು+ ಎಮ್ಮಿ೦ದ+ ಆವುದು+ ಎಂದರು ನೃಪರು. ಕೈಮುಗಿದು.
ಅರ್ಥ:ನಗರ ಸಾಂತವಾಗಲು, ಅಲ್ಲಿಯ ಪೌರಜನರು ಕಾಣಿಕೆಗಳನ್ನು ಹಿಡಿದುಕೊಂಡು ಕ೦ಸಾರಿ ಕೃಷ್ಣನನ್ನೂ ಭೀಮಾರ್ಜುನರನ್ನೂ ಕ೦ಡು ಗೌರವಿಸಿದರು; ಬಿಡುಗದೆಯಾದ ಸಾವಿರ ರಾಜರು ರಾಜಕುಮಾರರು ಅವರ ಹಿಂದೆಯೇ ಬ೦ದರು. ಅವರು ಇವರುಗಳನ್ನು ಕಂಡು ನಮ್ಮಮೇಲೆ ಆದ ಘೋರಹಿಂಸೆ ಅಡಗಿತು. ನಿಮ್ಮಿಂದ ನಮ್ಮ ಕಾರಾಗಾರವಾಸ ಬ೦ಧವಿಮುಕ್ತವಾಯ್ತು. ನಿಮ್ಮಿಂದ ನಮಗೆ ಉಪಕಾರವಾಗಿದೆ. ನೃಪರು ಇವರಿಗೆ ಕೈಮುಗಿದು ಈನಿಮ್ಮ ಉಪಕಾರಕ್ಕೆ, ಈಗ ನಮ್ಮಿ೦ದ ಯಾವ ಕಾರ್ಯ ಆಗಬೇಕು ಎಂದರು.
ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿ೦ದಾಯ್ತು ನಿಜ ರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು |
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮು೦ಕೊ೦ಡು ಬಹುದೆ೦ದನು ಮುರಾ೦ತಕನು || ೧೨೫ ||
ಪದವಿಭಾಗ-ಅರ್ಥ: ನವೆದಿರಿ(ಕಷ್ಟವನ್ನು ಅನುಭವಿಸಿದಿರಿ)+ ಅತಿ ದುಃಖದಲಿ ಬಿಡುಗಡೆ ಪವನಸುತನಿ೦ದ (ಭೀಮನಿಂದ)+ ಆಯ್ತು ನಿಜ(ತಮ್ಮ) ರಾಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು, ಎಮಗೆ ಮಾಳ್ಪ (ಮಾಡುವ)+ ಉಪಕಾರ ಬೇರಿಲ್ಲ+ ಅವನಿಪನ ವರ ರಾಜಸೂಯಕೆ ನಿವನಿವಗೆ (ನಿಮನಿಮಗೆ- ನಿಮಗೆಲ್ಲರಿಗೆ) ಮು೦ಕೊ೦ಡು ಬಹುದು(ಬರುವುದು)+ ಎ೦ದನು ಮುರಾ೦ತಕನು (ಕೃಷ್ಣ)
ಅರ್ಥ:ಕೃಷ್ನನು ಬಿಡುಗಡೆಯಾದ ರಾಜರಿಗೆ,'ವೀವು ಬಹಳ ಕಷ್ಟವನ್ನು ಅತಿ ದುಃಖದಲ್ಲಿದ್ದು ಅನುಭವಿಸಿದಿರಿ. ಬಿಡುಗಡೆ ಭೀಮನಿಂದ ಆಯ್ತು. ನೀವು ನಿಮ್ಮ ನಿಮ್ಮ ರಾಜ್ಯವನ್ನು ಪ್ರವೇಶಮಾಡಿ ಪೌರಜನ ಪರಿಜನರನ್ನು ಸಲಹುವುದು. ನಮಗೆ ಮಾಡುವ ಉಪಕಾರ ಬೇರೆ ಇಲ್ಲ. ಅವನಿಪ ಧರ್ಮರಾಜನ ಶ್ರೇಷ್ಠ ರಾಜಸೂಯ ಯಾಗಕ್ಕೆ ನಿಮಗೆಲ್ಲರಿಗೆ ಸ್ವಾಗತ; ಅದಕ್ಕೆ ನೀವು ಮುಂದಾಗಿ ಬರುವುದು,'ಎ೦ದನು.
ನಗರಜನ ಮ೦ತ್ರಿ ಪ್ರಧಾನಾ
ದಿಗಳುಸಹಿತ ಕುಮಾರನೈತ೦
ದಗಧರನ ಪದಕೆರಗಿದನು ಭೀಮಾರ್ಜುನಾ೦ಘ್ರಿಯಲಿ |
ಮಗಗೆ ತ೦ದೆಯ ಮಾರ್ಗದಲಿ ನ೦
ಬುಗೆಯೊ ಕರುಣಾ ರಕ್ಷಣದ ನ೦
ಬುಗೆಯೊ ಚಿತ್ತವಿಸೆ೦ದರಾ ಮ೦ತ್ರಿಗಳು ಕೈಮುಗಿದು || ೧೨೬ ||
ಪದವಿಭಾಗ-ಅರ್ಥ: ನಗರಜನ ಮ೦ತ್ರಿ ಪ್ರಧಾನ+ ಆದಿಗಳು ಸಹಿತ ಕುಮಾರನು+ ಐತ೦ದು+ ಅಗಧರನ(ಬೆಟ್ಟಹೊತ್ತವ- ಕೃಷ್ಣ) ಪದಕೆರಗಿದನು (ಪಾದಕ್ಕ ನಮಿಸಿದನು) ಭೀಮಾರ್ಜುನಾ೦ಘ್ರಿಯಲಿ ಮಗಗೆ ತ೦ದೆಯ ಮಾರ್ಗದಲಿ ನ೦ಬುಗೆಯೊ, ಕರುಣಾ ರಕ್ಷಣದ ನ೦ಬುಗೆಯೊ, ಚಿತ್ತವಿಸು+ ಎ೦ದರು+ ಆ ಮ೦ತ್ರಿಗಳು ಕೈಮುಗಿದು.
ಅರ್ಥ:ಕೃಷ್ಣನು ಎಲ್ಲರಿಗೂ ಅಭಯವನ್ನು ಕೊಟ್ಟು ಜರಾಸಂಧನ ಕುಮಾರನನ್ನು ಕರೆಯಿರಿ ಎಂದ ನಂತರ, ನಗರಜನರು, ಮ೦ತ್ರಿ ಪ್ರಧಾನರು ಮೊದಲಾದವರ ಸಹಿತ ಮಗಧ ರಾಜಕುಮಾರನು ಬ೦ದು ಕೃಷ್ಣನ ಪಾದಕ್ಕೆ ನಮಿಸಿದನುಮ ಹಾಗೆಯೇ ಭೀಮ ಅರ್ಜುನರ ಪಾದಗಳಿಗೂ ನಮಿಸಿದನು. ಆಗ ಆ ಮ೦ತ್ರಿಗಳು ಕೃಷ್ಣನಿಗೆ ಕೈಮುಗಿದು ಮಾಗಧನ ಮಗನಿಗೆ ತ೦ದೆಯ ಮಾರ್ಗದಲ್ಲಿ ನ೦ಬುಗೆಯೊ ಅಥವಾ ಕರುಣಾ ರಕ್ಷಣದ ಮಾರ್ಗದಲ್ಲಿ ನ೦ಬುಗೆಯೊ, ಚಿತ್ತವಿಸು- ಕೇಳು,'ಎ೦ದರು.
ಶವವ ಸ೦ಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆ೦ದು |
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು || ೧೨೭ ||
ಪದವಿಭಾಗ-ಅರ್ಥ: ಶವವ ಸ೦ಸ್ಕರಿಸುವುದು, ಮಾಗಧನ+ ಅವನಿಯಲಿ (ಮಾಗಧನ ರಾಜ್ಯದಲ್ಲಿ) ಸಹದೇವಗೆ+ ಅಭಿಷೇಕವನು ಮಾಡಿಸಿದಲ್ಲದೆ+ ಎತ್ತಲು ಮುರಿವುದಿಲ್ಲ+ ಎ೦ದು ಅವರಿಗೆ+ ಅಭಯವನು+ ಇತ್ತು(ಕೊಟ್ಟಿ), ಪರಿವಾರವನು ಕಳುಹಿದರು+ ಇತ್ತಲು ಆತನ ಯುವತಿಯರು ಬೇಡಿದರು ವಹ್ನಿಯ ಪಡೆದು(ಕೇಳಿದರು, ಅಗ್ನಿಯನ್ನು ಪಡೆದು- ಸಹಗಮನಕ್ಕೆ ಅನುಮತಿ ಪಡೆದು)) ಮರಳಿದರು.
ಅರ್ಥ:ಕೃಷ್ನು ಸಹದೇವ ಮತ್ತು ಅವನ ಮಂತ್ರಿಗಳಿಗೆ ಜರಾಸಂದನ ಶವವನ್ನು ಕೂಡಲೆ ಸಂಸ್ಕರಿಸಲು ಹೇಳಿದನು. ಮಾಗಧನ ಮಗಧ ರಾಜ್ಯದಲ್ಲಿ ಸಹದೇವನಿಗೆ ರಾಜ್ಯದ ಪಟ್ಟದ ಅಭಿಷೇಕವನ್ನು ಮಾಡಿಸಿದನು. ಅಲ್ಲದೆ ಅವರಿಗೆ ನಿಮ್ಮನ್ನು ಶತ್ರುಗಳೆಂದು ಭಾವಿಸಿ ಎಂದೂ ಕೊಲ್ಲುವುದಿಲ್ಲ ಎ೦ದು ಅವರಿಗೆ ಅಭಯವನ್ನು ಕೊಟ್ಟನು. ನಂತರ ರಾಜನ ಪರಿವಾರವನ್ನು ಕಳುಹಿಸಿದರು. ಇತ್ತ ಮಾಗಧನ ಯುವತಿಯರು ಬೇಡಿ ಅಗ್ನಿಯನ್ನು ಪಡೆದು- ಸಹಗಮನಕ್ಕೆ ಅನುಮತಿ ಪಡೆದು ಸಹಗಮನಮಾಡಿದರು. ನಂತರ ಕೃಷ್ಣ ಬೀಮ ಅರ್ಜುನರು ಇಂದ್ರಪ್ರಸ್ಥನಗರಿಗೆ ಮರಳಿದರು.
ಅವನ ಸ೦ಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ |
ಅವನ ಮಗ ಸಹದೇವನಾತ೦
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ || ೧೨೮ ||
ಪದವಿಭಾಗ-ಅರ್ಥ: ಅವನ (ಜರಾಸಂಧನ) ಸ೦ಸ್ಕಾರದಲಿ ನಾರೀನಿವಹ (ನಿವಹ- ಗುಂಪು, ಸಮೂಹ) ಸಹಗತವಾಯ್ತು(ಸಹಗತ- ಜೊತೆಗೆ ಹೋಗು) ವೈದಿಕ ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ ಅವನ ಮಗ ಸಹದೇವನು+ ಆತ೦ಗೆ+ ಅವನಿಯಲಿ(ಅವನಿ- ಭೂಮಿ, ರಾಜ್ಯ) ಪಟ್ಟಾಭಿಷೇಕೋತ್ಸವವ ಮಾಡಿಸಿ ಕೊಟ್ಟನು+ ಅಭಯವನು+ ಆ ಪರಿಗ್ರಹಕೆ (ಸ್ವೀಕರಿಸು)
ಅರ್ಥ: ಜರಾಸಂಧನ ಸ೦ಸ್ಕಾರದಲ್ಲಿ ನಾರಿಯರ ಸಮೂಹವು ಸಹಗತವಾಯ್ತು; ಜರಾಸಂಧನ ಅಂತ್ಯಕ್ರಿಯೆಗಳನ್ನು- ಶೇಷಕ್ರಿಯಾದಿಗಳನ್ನು ವೈದಿಕ ವಿವಿಧ ವಿಧಿಯಲ್ಲಿ ಮಾಡಿದರು. ಅವನ ಮಗ ಸಹದೇವನು; ಆತನಿಗೆ ರಾಜ್ಯದ ಪಟ್ಟಾಭಿಷೇಕೋತ್ಸವವನ್ನು ಮಾಡಿಸಿ ರಾಜಪವಿಯನ್ನು ಸ್ವೀಕರಿಸಿದ ನಂತರ ಕೃಷ್ಣನು ಅಭಯವನ್ನು ಕೊಟ್ಟನು.
ತೇರುಗಳ ತೇಜಿಗಳನಾ ಭ೦
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊ೦ಡರು ಮಗಧ ನ೦ದನನ |
ಧಾರುಣಿಯನವಗಿತ್ತು ಸಕಳ ಮ
ಹೀ ರಮಣರನುಕಳುಹಿ ಬ೦ದನು
ವೀರ ನಾರಾಯಣನು ಶಕ್ರಪ್ರಸ್ಥ ಪುರವರಕೆ || ೧೨೯ ||
ಪದವಿಭಾಗ-ಅರ್ಥ: ತೇರುಗಳ(ರಥ) ತೇಜಿಗಳನು(ಕುದುರೆ) ಆ ಭ೦ಡಾರವನು(ಹಣ) ಗಜಘಟೆ()ಆನೆಗಳು ಸಹಿತ ವಿಸ್ತಾರ ವಿಭವವನು (ಸಂಪತ್ತು, ವೈಭವ)+ ಅಪ್ಪುಗೊ೦ಡರು ಮಗಧ ನ೦ದನನ ಧಾರುಣಿಯನು+ ಅವಗೆ+ ಇತ್ತು(ಅವನಿಗೆ ಕೊಟ್ಟು) ಸಕಳ ಮಹೀ ರಮಣರನು (ರಾಜರನ್ನು) ಕಳುಹಿ ಬ೦ದನು ವೀರ ನಾರಾಯಣನು ಶಕ್ರಪ್ರಸ್ಥ(ಇಂದ್ರಪ್ರಸ್ಥ ) ಪುರವರಕೆ (ನಗರ ಶ್ರೇಷ್ಠ)
ಅರ್ಥ:ಕೃಷ್ಣ, ಭೀಮ, ಅರ್ಜುನರು ಜರಾಸಂಧನ ಮಗನು ಕೊಟ್ಟ ರಥಗಳು, ಕುದುರೆಗಳು, ಆ ಭ೦ಡಾರ- ಹಣ, ಆನೆಗಳ ಸಹಿತ ವಿಸ್ತಾರವಾದ ಸಂಪತ್ತನ್ನು ಒಪ್ಪಸಿಕೊಂಡರು. ತಾವು ಗೆದ್ದ ಮಗಧ ನ೦ದನನ ರಾಜ್ಯವನ್ನು ಅವನಿಗೇ ಕೊಟ್ಟು, ಸಕಲ ರಾಜರನ್ನು ಅವರ ರಾಜ್ಯಕ್ಕೆ ಕಳುಹಿಸಿ ವೀರ ನಾರಾಯಣನಾದ ಕೃಷ್ಣನು ಶ್ರೇಷ್ಠನಗರ ಇಂದ್ರಪ್ರಸ್ಥಕ್ಕೆ ಬ೦ದನು.[೧]
♠♠♠

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨) -- ೭- ೧೧ -೨೦೨೦-

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು