ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೨)

ವಿಕಿಸೋರ್ಸ್ ಇಂದ
Jump to navigation Jump to search
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೨ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸಕಲ ಯದುಬಲ ಸಹಿತ ಭಕ್ತ
ಪ್ರಕರ ಪಾಲಕನೊಲವಿನಲಿ ಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ||ಸೂ||

ಪದವಿಭಾಗ-ಅರ್ಥ:ಸಕಲ ಯದುಬಲ ಸಹಿತ ಭಕ್ತಪ್ರಕರ(ಪ್ರಕರ-ಸಂ- ಗುಂಪು, ಸಮೂಹ,) ಪಾಲಕನು+ ಒಲವಿನಲಿ ಕಾಮ್ಯಕ ಮಹಾಕಾನನಕೆ ಬಿಜಯಂಗೈದನು+ ಅಸುರಾರಿ
ಅರ್ಥ:ಸಕಲ ಯದುಗಳು ಮತ್ತು ಸೇನೆ ಸಹಿತ ಭಕ್ತರ ಸಮೂಹವನ್ನು ಪಾಲಿಸುವ ಅಸುರಾರಿಯಾದ ಕೃಷ್ಣನು ಪ್ರೀತಿಯಿಂದ ಕಾಮ್ಯಕ ಮಹಾಅರಂfಯಕ್ಕೆ ಬಂದನು.[೧][೨] [೩] [೪][೫]

ಕೃಷ್ಣನಿಗೆ ಪಾಂಡವರ ದುರ್ಗತಿಯ ಸುದ್ದಿ[ಸಂಪಾದಿಸಿ]

ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ |
ಧರೆಸಹಿತ ನಿಜವಸ್ತು ವಾಹನ
ಪರಮವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು || ೧ ||
ಪದವಿಭಾಗ-ಅರ್ಥ: ಅರಸ ಕೇಳೈ ದ್ವಾರಕಾಪುರವರಕೆ(ವರ- ಶ್ರೇಷ್ಠ) ಬಂದುದು ವಾರ್ತೆ, ಪೀತಾಂಬರನ ಬಹಳ+ ಆಸ್ಥಾನದಲಿ ವರ್ತಿಸಿದುದು(ವಾರ್ತೆ ಸುದ್ದಿಯಾಯಿತು.)+ ಅಡಿಗಡಿಗೆ ಧರೆ(ರಾಜ್ಯ) ಸಹಿತ ನಿಜವಸ್ತು ವಾಹ ಪರಮ ವಿಭವವ(ವೈಭವ) ಬಿಸುಟು ಭಾರಿಯ ಪರಿಭವದಿ(ದೊಡ್ಡ ಸೋಲನ್ನು ಅನುಭವಿಸಿ ) ನಟ್ಟಡವಿಯ+ ಒಕ್ಕರು ಪಾಂಡುಸುತರೆಂದು
ಅರ್ಥ: ಜನಮೇಜಯ ಅರಸನೇ ಕೇಳು,'ಶ್ರೇಷ್ಠವಾದ ದ್ವಾರಕಾಪುರಕ್ಕೆ ಪಾಂಡವರ ವಾರ್ತೆ ಬಂದಿತು. ಪೀತಾಂಬರಧಾರಿಯಾದ ಕೃಷ್ಣನ ದೊಡ್ಡ ಆಸ್ಥಾನದಲ್ಲಿ, ರಾಜ್ಯ ಸಹಿತ ತನ್ನ ವಸ್ತು, ವಾಹನ, ಪರಮ ವೈಭವದ ಸಂಪತ್ತನ್ನು ಬಿಟ್ಟು ಭಾರಿ- ದೊಡ್ಡ ಸೋಲನ್ನು ಅನುಭವಿಸಿ, ಪಾಂಡವರು ನಟ್ಟಡವಿಯನ್ನು ಹೊಕ್ಕರು ಎಂದು ಪದೇಪದೇ ಸುದ್ದಿಯಾಯಿತು,' ಎಂದನು ವೈಶಂಪಾಯನ ಮುನಿ.
ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ |
ಹೂಳಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನುಸುರಾರಿ ದೂತವ್ರಜದ ಬಿನ್ನಪವ || ೨ ||
ಪದವಿಭಾಗ-ಅರ್ಥ: ಕೇಳಿ ತಲೆದೂಗಿದನು ಮೂಗಿನ ಮೇಲು+ವೆ+ ಬೆರಳಿನ ಹೊತ್ತ ದುಗುಡದ(ಚಿಂತೆಯ,) ತೂಳಿದ (ತೂಳು- ಕಳವಳ, ತಲ್ಲಣ, ಆವೇಶ ತುಂಬಿದ)+ ಅಬ್ಬೆಯ(ತಾಯಿ,- ಭೂಮಿತಾಯಿಯ /ಅಥವಾ ತಾಯಿಯ ಸಮಾನ ಸೋದರ-ಅತ್ತೆ ಕುಂತಿ; ಸಂಸ್ಕೃತ ಅಬ್ರ= ತದ್ಭವ-ಅಬ್ಬೆ -ಕಾಪಾಡಿ ಎಂದು ರಕ್ಷಣೆಗಾಗಿ ಮೊರೆಯಿಡುವ ಕೂಗು) ನಟ್ಟನೋಟದ(ಎಲ್ಲಿ ನೋಡುವಂತೆ ಚಿಂತೆಯನೋಟ- ದೂರದ ಮೊರೆಯನ್ನು ಕೇಳುವ ಭಾವ) ನೆಗ್ಗಿದ (ಕುಂದಿದ)+ ಉತ್ಸವದ(ಸಂತೋಷ, ಉತ್ಸಾಹ?) ಹೂಳಿದ(ನೆಲದಲ್ಲಿ-ಅಡಗಿದ, ಏಕಾಗ್ರತೆ, ತನ್ಮಯತೆ, ಹೇಳಿದ್ದು ಕೇಳದ)+ ಊಹೆಯ, ಹಿಳಿದ(ಹಿಸುಕು, ಹಿಳಿ, ತಿರುಚು) ನೆಗಹಿನ(ಮೇಲೆತ್ತಿದ,) ಹೇಳಲು+ ಅರಿದು+ ಎನೆ(ಅರಿದು= ಆಗದು, ಎನೆ= ಎನ್ನುವಂತಿರುವ) ಹುದಿದ(ಗೊಂದಲ,ಅಡಗಿದ,) ಭಾವದಲಿ+ ಆಲಿಸಿದನು(ಮನಸ್ಸಿಟ್ಟು ಕೇಳಿದನು)+ ಅಸುರಾರಿ()ಕೃಷ್ಣನು ದೂತವ್ರಜದ(ದೂತರ) ಬಿನ್ನಪವ(ಅರಿಕೆ ಮಾಡಿದ್ದನ್ನು).(ಆಲಿಸಿದನು, ಕೇಳಿದನು, ವ್ಯತ್ಯಾಸ; listen(ಆಲಿಸು) - listened, hear(ಕಿವಿಯಿಂದ ಕೇಳು)- heard, ಇದ್ದಹಾಗೆ)
ಅರ್ಥ:೧:ಕೃಷ್ನನು ತನ್ನ ಆಸ್ಥಾನದಲ್ಲಿ ದೂತರು ಬಂದು ಅರಿಕೆ ಮಾಡಿದ್ದನ್ನು ಕೇಳಿ ತಲೆದೂಗಿದನು; ಕಳವಳದಿಂದ ಕೂಡಿ ಚಿಂತೆಯನ್ನು ತಾಳಿ -ಅಧರ್ಮದ ಪಾಪಿ ಜನರ ಭಾರವನ್ನು ಕಳೆದು ಧರ್ಮಸ್ಥಾಪನೆ ಮಾಡಿ 'ಕಾಪಾಡು' ಎಂದು ಭೂಮಿತಾಯಿಯು ರಕ್ಷಣೆಗಾಗಿ ಮೊರೆಯಿಡುವ ಕೂಗನ್ನು ಮೂಗಿನ ಮೇಲೆ ಬೆರಳಿನ್ನು ಇಟ್ಟು ಆಲಿಸುವಂತೆ ನಟ್ಟನೋಟದ ಸಂತಸ ಕುಂದಿದ ಭಾವದಲ್ಲಿ ಎಲ್ಲಿಯೋ ನೋಡುವಂತೆ ಮನಸ್ಸು ಕುಂದಿ, ಚಿಂತೆಯ ಭಾವದಲ್ಲಿ, ಕತ್ತು ಓರೆಮಾಡಿ ತಲೆಯನ್ನು ಸ್ವಲ್ಪ ಮೇಲೆತ್ತಿದ ಭಂಗಿಯಲ್ಲಿ ಹೇಳಲು ಆಗದು ಎನ್ನುವಂತಿರುವ, ಒಳಗೆ ಅಡಗಿದ ದುಗುಡದ ಭಾವದಲ್ಲಿ ಅಸುರಾರಿ ಕೃಷ್ಣನು ಧೂತರ ಮಾತನ್ನು ಆಲಿಸಿದನು.(ಮುಂದಿ ಪದ್ಯ ೪:ವಿಶ್ವಂಭರಾ-ವಿಶ್ವಂಭರೆ, ಭೂದೇವಿ; ಭೂದೇವಿಯ ಭಾರ+ ಅಪನೋದನಕೆ- ಧರಣಿಯಲಿ ಮೈಗೊಂಡು- ಭೂಮಿಯಲ್ಲಿ ಅವತರಿಸಿ) ; ಇದಕ್ಕೆ ಹೊಂದುವಂತೆ ಅರ್ಥಮಾಡುವುದಾದರೆ ಕುರಕ್ಷೇತ್ರ ಯುದ್ಧವು ಇದಕ್ಕೆ ಪರಿಹಾರ ಎಂದು ಯೋಚಿಸಿದನೆ?)
ಅರ್ಥ:೨:ಕೃಷ್ನನು ತನ್ನ ಆಸ್ಥಾನದಲ್ಲಿ ದೂತರು ಬಂದು ಅರಿಕೆ ಮಾಡಿದ್ದನ್ನು ಕೇಳಿ ತಲೆದೂಗಿದನು; ಮೂಗಿನ ಮೇಲೆ ಬೆರಳಿನ್ನು ಇಟ್ಟು ಚಿಂತೆಯನ್ನು ತಾಳಿ ಕಳವಳದಿಂದ ಕೂಡಿದ ತಾಯಿಯ ಸಮಾನಳಾದ ಸೋದರತ್ತೆ ಕುಂತಿಯು 'ಕಾಪಾಡಿ' ಎಂದು ರಕ್ಷಣೆಗಾಗಿ ಮೊರೆಯಿಡುವ ಕೂಗನ್ನು ಕೇಳುವಂತೆ, ಎಲ್ಲಿಯೋ ನೋಡುವಂತೆ ನಟ್ಟನೋಟದಲ್ಲಿ, ಮನಸ್ಸು ಕುಂದಿ, ಚಿಂತೆಯ ಭಾವದಲ್ಲಿ, ಕತ್ತು ಓರೆಮಾಡಿ ತಲೆಯನ್ನು ಸ್ವಲ್ಪ ಮೇಲೆತ್ತಿದ ಭಂಗಿಯಲ್ಲಿ ಹೇಳಲು ಆಗದು ಎನ್ನುವಂತಿರುವ, ಒಳಗೆ ಅಡಗಿದ ದುಗುಡದ ಭಾವದಲ್ಲಿ ಅಸುರಾರಿ ಕೃಷ್ಣನು ಧೂತರ ಮಾತನ್ನು ಆಲಿಸಿದನು..
ಟಿಪ್ಪಣಿ:- ಕೃಷ್ನನು ತಲೆಯನ್ನು ಎತ್ತಿ ಸ್ವಲ್ಪ ಓರೆಮಾಡಿ ಎಲ್ಲಿಯೋ ದೃಷ್ಟಿ ನೆಟ್ಟು ಚಿಂತೆಯಿಂದ ಕುಳಿತ ಭಂಗಿಯ ಚತ್ರಣವನ್ನು ಕಲ್ಪಿಸಿಕೊಳ್ಳಬೇಕು. ಇಲ್ಲಿ ಅಬ್ಬೆ ಎನ್ನುವ ಪದವು ಯಾರ ಬಗೆಗೆ ಎಂಬುದು ಊಹೆಗೆ ಬಿಟ್ಟ ವಿಚಾರ.(ಕವಿಯ ಭಾವ ಏನು?)
ಅಕಟ ಕಪಟ ದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ |
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರ ವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ || ೩ ||
ಪದವಿಭಾಗ-ಅರ್ಥ:ಅಕಟ ಕಪಟ ದ್ಯೂತದಲಿ ನೃಪಮುಕುರನ(ನೃಪ- ರಾಜ, ಮುಕುರ- ಮುತ್ತು, ಮುತ್ತಿನಂಥ ರಾಜ, ಮುತ್ತಿನಂತೆ ಶ್ರೇಷ್ಠನು)+ ಉನ್ನತಿ ಮುರಿದುದೇ,(ಏಳಿಗೆ ಹಾಳಾಯಿತಲ್ಲಾ) ಕೌಳಿಕದಲಿ(ಮೋಸ, ವಂಚನೆ)+ ಈ ಕೌರವರು ಕೊಂಡರೆ ಧರ್ಮಜನ ನೆಲನ(ರಾಲ್ಯ), ಅಕುಟಿಲರಿಗೆ(ಕುಟಿಲರಲ್ಲದ ನೀತಿವಂತರು)+ ಏಕಿದು ನಿರಾಬಾಧಕರಿಗೆ (ಬಾಧಕರು- ಹಿಂಸೆಕೊಡುವವರು. ನಿರಾ- ಅಲ್ಲದವರು.)+ ಏಕಿದು ಸಕಲ ಸುಜನಪ್ರಕರ ವಂದ್ಯರಿಗೆ+ ಏಕೆ?+ ಎನುತ್ತ+ ಅಸುರಾರಿ(ಕೃಷ್ಣ) ಚಿಂತಿಸಿದ.
ಅರ್ಥ:ಕೃಷ್ನನು,'ಅಕಟ! ಕಪಟ ದ್ಯೂತದಲ್ಲಿ ನೃಪಶ್ರೇಷ್ಠನ ಉನ್ನತಿ ಮುರಿದು ಹೋಯಿತೇ!, ಮೋಸದಿಂದ ಈ ಕೌರವರು ಧರ್ಮಜನ ರಾಜ್ಯವನ್ನು ಪಡೆದುಕೊಂಡರೆ? ಕುಟಿಲರಲ್ಲದ ನೀತಿವಂತರಿಗೆ ಏಕೆ ಇದು- ಈ ದುರ್ಗತಿ, ಕಷ್ಟ? ಯಾರಿಗೂ ಕೆಡುಕು ಮಾಡದಿರುವವರಿಗೆ ಏಕೆ ಇದು- ಈ ಕಷ್ಟ? ಸಕಲ ಸುಜನಸಮೂಕ್ಕೇ ನಮಸ್ಕಾರಕ್ಕೆ ಯೋಗ್ಯರಾದ ಈ ಪಾಂಡವರಿಗೆ ಏಕೆ ಈಗತಿ? ಎನ್ನುತ್ತಾ,' ಚಿಂತೆಗೆ ಒಳಗಾದನು- ಯೋಚಿಸಿದನು.
ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪನೋದನಕೆ |
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ ೪
ಪದವಿಭಾಗ-ಅರ್ಥ: ಹಿರಿದು(ಹೆಚ್ಚು, ಬಹಳ, ದೊಡ್ಡಮಟ್ಟದಲ್ಲಿ) ಹರಿ ಚಿಂತಿಸಿದನು(ಯೋಚಿಸಿದನು)+ ಈ ವ್ಯತಿಕರವನು (ಜೋಡಣೆ, ಮುಂದಿನ ಪ್ರಸಂಗ,)+ ಅರಿಯದ ಮುಗುದರು(ಮುಗ್ಧರು, ಅಮಾಯಕರು)+ "ಇದನು (ಭವಿಷ್ಯದ ದೊಡ್ಡ ಯೋಜನೆ - ಮುಂದಿನ ಮಹಾ ಸಂಹಾರ)+ ಆರು+ ಅರಿವರೈ, ವಿಶ್ವಂಭರಾ (ವಿಶ್ವಂಭರೆ- ಭೂದೇವಿ,) ಭಾರ+ ಅಪನೋದನಕೆ (ಅಪನೋದನ= ಅಪನ್ನ+ ಓದನ(ಆಪನ್ನ- ಕಷ್ಟಕ್ಕೆ ಗುರಿಯಾದವ, ಆರ್ತ; ಓದನ- ಬೇರ್ಪಡುಗೆ- ಕಷ್ಟದ ಪರಿಹಾರ) ಧರಣಿಯಲಿ ಮೈಗೊಂಡು (ಭೂಮಿಯಲ್ಲಿ ಅವತರಿಸಿ) ದೈತ್ಯರನು+ ಒರಸಿದನು(ಇಲ್ಲವಾಗಿಸಿದನು) ಬಳಿಕ+ ಉಳಿದ ಪಾಂಡವ ಕುರುನೃಪರ ಕದಡಿಸುದನು(ಬೆರೆಸಿದನು, ಅಲ್ಲಾಡಿಸಿದನು, ಹೋರಾಡಿಸಿದನು)+ ಎಲೆ ಭೂಪಾಲ ಕೇಳೆಂದ.
ಅರ್ಥ: 'ಕೃಷ್ಣನು ಬಹಳ ಚಿಂತಿಸಿದನು. ಈ ಘಟನೆಯ ಮುಂದಿನ ಜೋಡಣೆಯನ್ನು ಅರಿಯದಷ್ಟು ಮುಗ್ದರು ಜನರು; ಮುಂದಿನ ರಹಸ್ಯವಾದ 'ಇದನ್ನು' ಯಾರು ಅರಿಯಲುಸಾಧ್ಯ? ಮುಂದಿನದು (ಭವಿಷ್ಯಘಟನೆಗಳು) ರಹಸ್ಯವಾದುದು. ಹಿಂದೆ ಭೂದೇವಿಯು ಹೊತ್ತ ಭಾರದ ಕಷ್ವವನ್ನು ಪರಿಹಾರಮಾಡಲು, ಅನ್ಯಾಯ, ಮೋಸ, ಅಧರ್ಮಗಳನ್ನು ನಿವಾರಿಸಲು ಈ ಕೃಷ್ಣನು ಧರಣಿಯಲ್ಲಿ- ಭೂಮಿಯಲ್ಲಿ ಅವತರಿಸಿ ದೈತ್ಯರನ್ನು ನಾಶಮಾಡಿದನು. ಬಳಿಕ- ಈಗ ಈ ಪಾಂಡವ ವನವಾಸದ ಘಟನೆಯ ೧೪ ವರ್ಷಗಳ ನಂತರ ಉಳಿದ ಪಾಂಡವರು ಮತ್ತು ಕುರುನೃಪರನ್ನು ಕದಡಿಸಿದನು (ಪರಸ್ಪರ -ಕಲಸುಮಲಸು ಮಾಡಿದನು, ಹೋರಾಡಿಸಿದನು),' ಎಲೆ ಜನಮೇಜಯ ಭೂಪಾಲನೇ ಕೇಳು ಎಂದ ಮುನಿ.

ಕಾಮ್ಯಕವನಕ್ಕೆ ಶ್ರೀ ಕೃಷ್ಣನ ಆಗಮನ[ಸಂಪಾದಿಸಿ]

ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ |
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ || ೫ ||
ಪದವಿಭಾಗ-ಅರ್ಥ: ಏನನು+ ಎಂಬೆನು ಜೀಯ ಕಡು(ಬಹಳ) ದುಮ್ಮಾನದಲಿ() ಹೊರವಂಟು ಬಂದನು ದಾನವಾಂತಕನು+ ಐದಿದವು (ಬಂದವು) ದಂಡಿಗೆಗಳು+ ಅರಸಿಯರ ಆ ನಿಖಿಳ ನೃಪವರ್ಗ(ರಾಜ ಸಮೂಹ) ಯಾದವ ಸೇನೆ ಕವಿದುದು(ಒಟ್ಟಾಗಿ ಬಂದಿತು), ಪಾಂಡುಪುತ್ರರ ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ,
ದುಮ್ಮಾನ:- ಖಿನ್ನತೆ,ವಿಷಣ್ಣತೆ,ಖೇದ,ವ್ಯಾಕುಲತೆ ಮನಸ್ಸಿನ ಉಮ್ಮಳ,ಚಿತ್ತಕ್ಷೋಭೆ ದುಃಖ,ದುಗುಡ,ಅಳಲು ಕಷ್ಟ,ತೊಂದರೆ ಅವಮಾನ
ಅರ್ಥ:ಆ ವಿಚಾರವಾಗಿ ಏನನ್ನು ಹೇಳಲಿ ಜೀಯ- ರಾಜನೇ, ದಾನವಾಂತಕ ಕೃಷ್ಣನು ಬಹಳ ವ್ಯಾಕುಲತೆಯಿಂದ ದ್ವಾರವತಿಯಿಂದ ಹೊರಹೊರಟು ಪಾಂಡವರಿದ್ದ ಕಾಡಿಗೆ ಬಂದನು. ಅವನ ಜೊತೆ ಅವನ ಅರಸಿಯರನ್ನು ಹೊತ್ತ ದಂಡಿಗೆಗಳು, ಆ ಎಲ್ಲಾ ರಾಜವರ್ಗ, ಯಾದವ ಸೇನೆಯು ಒಟ್ಟಾಗಿ ಅವನ ಜೊತೆ ಬಂದವು. ಹೀಗೆ ಕರುಣಾಳು ಕೃಷ್ಣನು ಅಲ್ಲಿಲ್ಲಿ ಬೀಡುಬಿಡುತ್ತಾ ಅನೇಕ ಪಯಣದಲ್ಲಿ ಪಾಂಡುಪುತ್ರರು ಇದ್ದ ಕಾಮ್ಯಕವನ್ನು ಹೊಕ್ಕನು,
ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ಧೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು |
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ || ೬ ||
ಪದವಿಭಾಗ-ಅರ್ಥ: ಕೇಳಿದಾಗಳೆ ಬಂದರು+ ಆ ಪಾಂಚಾಲ, ಕೇಕಯ, ಧೃಷ್ಟಕೇತು ನೃಪಾಲ, ಕುಂತೀಭೋಜ, ಸೃಂಜಯ, ಸೋಮಕಾದಿಗಳು, ಮೇಲೆ ಮೇಲೆ+ ಈ ನಾಲ್ಕು ದಿನದಲಿ ಮೂಲೆಯ+ ಅರಸುಗಳು+ ಇವರ ಕಂಡು+ ಉಪಲಾಲಿಸಲು ಬರುತಿರ್ದರು+ ಆ ಕಾಮ್ಯಕ ವನಾಂತರಕೆ.
ಅರ್ಥ:ಹೀಗೆ ಪಾಂಡವರು ರಾಜ್ಯವನ್ನು ಕಳೆದುಕೊಂಡು ವನವಾಸಕ್ಕೆ ಹೋದುದನ್ನು ಕೇಳಿದ ಕೂಡಲೆ ಬಂದರು+ ಆ ಪಾಂಚಾಲರು, ಕೇಕಯರಾಜ್ಯದವರು, ಧೃಷ್ಟಕೇತು ನೃಪಾಲ, ಕುಂತೀಭೋಜ, ಸೃಂಜಯ, ಸೋಮಕ ಮೊದಲಾದವರು, ಒಬ್ಬರ ಮೇಲೆ ಒಬ್ಬರಂತೆ ಈ ನಾಲ್ಕು ದಿನದಲ್ಲಿ ಮೂಲೆ ಮೂಲೆಯ ಅರಸುಗಳು ಇವರನ್ನು ಕಂಡು ಉಪಚರಿಸಲು ಆ ಕಾಮ್ಯಕ ವನಾಂತರಕ್ಕೆ ಬರುತ್ತಿದ್ದರು.
ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ |
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳೆಂದ || ೭ ||
ಪದವಿಭಾಗ-ಅರ್ಥ: ಇವರು- ಬಂದರು ನಿಖಿಳ ಭೂಸುರನಿವಹ(ನಿಹವ- ಸಮೂಹ) ಸಹಿತ+ ಇದಿರಾಗಿ(ಸ್ವಾಗತಕ್ಕೆ ಎದುರುಗೊಂಡು) ವರ(ಉತ್ತಮ) ಬಾಂಧವರೊಳು+ ಅಭಿವಂದ್ಯರಿಗೆ(ನಮಸ್ಕಾರಕ್ಕೆ ಯೋಗ್ಯರಾದವರಿಗೆ) ತತ್+ ಸಮರಿಗೆ ಕನಿಷ್ಠರಿಗೆ (ಸಮಾನರು ಮತ್ತು ಕೆಳಗಿನ ಸ್ಥಾನವರರಿಗೆ) ಅವರಿಗೆ+ ಅವರ+ ಅವರ+ ಉಚಿತ(ಯೋಗ್ಯ) ಸತ್ಕಾರವನು ಮಾಡಿ, ಮುರಾರಿಯ+ ಅಂಘ್ರಿಯನು+ ಅವಿರಳ(ಬಹಳ)+ ಅಶ್ರುಗಳಿಂದ(ಕಣ್ಣೀರಿನಿಂದ) ನಾದಿದರು(ಒರೆಸಿದರು,ಒದ್ದೆಮಾಡಿದರು. ತೊಳೆದರು)+ ಅರಸ ಕೇಳು+ ಎಂದ.
ಅರ್ಥ:ಹೀಗೆ ಬಂಧುಗಳು ಹಿತೈಷಿಗಳಾದ ಇವರೆಲ್ಲಾ ಕಾಮ್ಯಕ ವನಕ್ಕೆ ಬಂದರು. ಬಹಳ ಜನ ವಿಪ್ರರಸಮೂಹ ಸಹಿತ ಧರ್ಮಜನು ಮತ್ತು ಅವನ ಸೋದರರು ಬಂದವರಿಗೆ ಸ್ವಾಗತಕ್ಕೆ ಎದುರುಗೊಂಡು, ಶ್ರೇಷ್ಠ ಬಾಂಧವರಲ್ಲಿ ನಮಸ್ಕಾರಕ್ಕೆ ಯೋಗ್ಯರಾದವರಿಗೆ ನಮಸ್ಕರಿಸಿ, ತಮಗೆ ಸಮಾನರಾದವರಿಗೆ ಮತ್ತು ಕೆಳಗಿನ ಸ್ಥಾನವರರಿಗೆ, ಅವರವರ ಉಚಿತ ಯೋಗ್ಯತೆಗೆ ತಕ್ಕಂತೆ ಸತ್ಕಾರವನ್ನು ಮಾಡಿ, ನಂತರ ಕೃಷ್ಣನ ಪಾದಗಳಿಗೆ ತಲೆಯಿಟ್ಟು ಬಹಳವಾಗಿ ಸುರಿವ ಕಣ್ಣೀರಿನಿಂದ ಅವನ ಪಾದಗಳನ್ನು ತೊಳೆದರು. ಅರಸನೇ ಕೇಳು ಎಂದ ಮುನಿ.
ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ |
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ || ೮ ||
ಪದವಿಭಾಗ-ಅರ್ಥ: ಬೇರೆ ಬೇರೆ+ ಐವರನು ತೆಗೆದು ಮುರಾರಿಯು+ ಅಪ್ಪಿದನು+ ಅಡಿಗಡಿಗೆ ದೃಗುವಾರಿಗಳನು+ ಒರಸಿದನು ಪೀತಾಂಬರದ ಸೆರಗಿನಲಿ ಸಾರುಸಾರು(ಪಕ್ಕಕ್ಕೆ ಸರಿ, ಬದಿಗೆ ಹೋಗು, ದಾರಿ ಬಿಡಿ, ಕೂಗಿ ಹೇಳುವಿಕೆ)+ ಎನಲು+ ಉಗ್ಗಡಣೆಯ(ಬಿರುದಾವಳಿಯ ಹೊಗಳಿಕೆ) ವಿಕಾರವು+ ಇನ್ನೇಕೆ+ ಎನುತ ರಾಯನ+ ನಾರಿ(ಪತ್ನಿ ದ್ರೌಪದಿ) ಬಂದಳು ಕವಿದು(ಮುಚ್ಚಿ) ಬಿದ್ದಳು ಹರಿಯ(ಕೃಷ್ಣನ) ಚರಣದಲಿ(ಪಾದಗಳ ಮೇಲೆ)
ಅರ್ಥ: ಕೃಷ್ಣನು ಪಾಂಡವರ ಐವರ ಪ್ರತಿಯೊಬ್ಬರನ್ನೂ ಬೇರೆ ಬೇರೆಗಯಾಗಿ ಎಳೆದುಕೊಂಡು ಅಪ್ಪಿ ಸಂತೈಸಿದನು. ಅವನು ಮತ್ತೆ ಮತ್ತೆ ಉಕ್ಕುತ್ತಿರುವ ಅವರ ಕಣ್ಣೀರನ್ನು ತನ್ನ ಉಟ್ಟಿರುವ ಪೀತಾಂಬರದ ಸೆರಗಿನಲ್ಲಿ ಒರಸಿದನು. ಅಕ್ಕಪಅಕ್ಕದವರು ಸರಿಯಿರಿ ಪಕ್ಕಕ್ಕೆ ಸರಿಯಿರಿ ಎನ್ನುತ್ತಿರಲು, ಕೃಷ್ನನಿಗೆ ವೃಥಾ ಹೊಗಳಿಕೆಯ ಮಾತಿನ ಉಪಚಾರ ಏಕೆ ಎನ್ನುತ್ತಾ ಧರ್ಮರಾಯನ ಪತ್ನಿ ದ್ರೌಪದಿ ಬಂದಳು. ಹಾಗೆ ಬಂದವಳು, ಕೃಷ್ಣನ ಪಾದಗಳು ಕವಿದುಮುಚ್ಚುವಂತೆ ಹರಿಯ ಚರಣಗಳ ಮೇಲೆ ಬಿದ್ದಳು.

ದ್ರೌಪದಿಯಿಂದ ಕೃಷ್ಣನ ಭಕ್ತಿಯ ಶೋಕಾರ್ತಸ್ತುತಿ[ಸಂಪಾದಿಸಿ]

ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿ ಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ ||
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗು ಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ || ೯ ||
ಪದವಿಭಾಗ-ಅರ್ಥ: ಒರಲಿದಳು(ದನಿಎತ್ತಿ ಅತ್ತಳು) ದೆಸೆಯೊಡನೆ(ದಿಕ್ಕು ದೆಸೆಯಿಲ್ಲದ ಸ್ಥಿತಿ, ದುರ್ದೆಸೆ, ನಮಸ್ಕಾರ)+ ಒರಲೆ ಮಿಗೆ(ಬಹಳ)+ಹೊರಳಿದಳು ಹರಿ(ಕೃಷ್ಣನ) ಪಾದದಲಿ, ಮೈಮರೆದಳು(ಎಚ್ಚರತಪ್ಪಿದಳು)+ ಅಂಗನೆ ತನುವ(ದೇಹವನ್ನು) ಮುಸುಕಿದ ಕೇಶಪಾಶದಲಿ(ಮುಚ್ಚಿದ ಬಿಟ್ಟಕೂದಲ ರಾಶಿಯಲ್ಲಿ); ಕರಗಿದಳು, ಕಂದಿದಳು, ಮಮ್ಮಲಮರುಗಿ(ಅತಿಯಾಗಿ ದುಃಖಿಸಿ) ಕರು(ಸುಡು, ಸಂಕಟಪಡು)+ಗ+ ಕಂದಿದಳು, ದೃಗು(ಕಣ್ಣು) ಜಲದ+ ಒರತೆಯು+ ಉಕ್ಕಿತು ಮೇಲೆ ಮೇಲೆ ಮಹೀಶನ+ ಅಂಗನೆಗೆ(ಧರ್ಮಜನ ಪತ್ನಿಗೆ).
ಅರ್ಥ:ಪಾಂಡವರನ್ನು ಕೃಷ್ಣನು ಸಂತೈಸಿದ ನಂತರ ದ್ರೌಪದಿಯು ದಾರಿ ಮಾಡಿಕೋಡು ಕೃಷ್ಣ ಬಳಿಗೆ ಬಂದಳು. ಬಳಿಗೆ ಬಂದವಳಿಗೆ ಆಪದ್‍ಬಾಂಧವನನ್ನು ಕಂಡು ಹೊಟ್ಟೆಯಲ್ಲಿ ಅಡಗಿಸಿಟ್ಟಿದ್ದ ದುಃಖ ಉಕ್ಕಿ ಹರಿಯಿತು; ಅದುವರೆಗೆ ದನಿ ಎತ್ತಿ ಅಳದೆ ಇದ್ದ ಅವಳು ಕೃಷ್ಣನ ಕಾಲಿಗೆ ಬೀಳುವಾಗ ದುಃಖ ಉಕ್ಕಿ ಒರಲಿದಳು; ದಿಕ್ಕು ದೆಸೆಯಿಲ್ಲದ ಸ್ಥಿತಿಯಲ್ಲಿ ದುರ್ದೆಸೆಯಿಂದ ನಮಸ್ಕರಿಸುತ್ತಾ ಅಳುಉಕ್ಕಲು ಕೃಷ್ಣನ ಪಾದಗಳ ಮೇಲೆ ಬಹಳ ಹೊರಳಿದಳು. ಆ ದುಃಖದಲ್ಲಿ ಮೈಮರೆತು ಎಚ್ಚರತಪ್ಪಿದಳು. ದ್ರೌಪದಿ ತನ್ನ ಬಿಚ್ಚಿದ ತುಂಬಿದ ಉದ್ದ ಬಿಟ್ಟಕೂದಲ ರಾಶಿಯಲ್ಲಿ ದೇಹವನ್ನು ಮುಚ್ಚಿದ ಸ್ಥತಿಯಲ್ಲಿ ಕೃಷ್ನನ ಪಾದಗಳ ಮೇಲೆ ಬಿದ್ದು ಕರಗಿದಳು; ಕಂದಿದಳು; ಮಮ್ಮಲಮರುಗಿ, ಸುಡುವ ಸಂಕಟದಿಂದ ಕಂದಿದಳು.ರಾಜ ಧರ್ಮಜನ ಪತ್ನಿಯಾದ ಅವಳ ಕಣ್ಣುಗಳಿಂದ ಅದುವರೆಗೆ ತಡೆದ ಜಲದ ಒರತೆಯು ತಡೆದಷ್ಟೂ ಮೇಲೆ ಮೇಲೆ ಉಕ್ಕಿತು.
ಟಿಪ್ಪಣಿ:- ತನ್ನ ಆಪ್ತನೂ ಆಪದ್‍ಬಾಂಧವನೂ ಅದ ಕೃಷ್ಣನನ್ನು ಕಂಡು, ದ್ರೌಪದಿಯ ಉಕ್ಕಿದ ದುಃಖವನ್ನು ಕುಮಾರವ್ಯಾಸನ ಭಾಷೆಯಲ್ಲಿ ಅಲ್ಲದೆ ಬೇರೆ ಪದಗಳಿಂದ ಹೇಳಲು ಆಗದು.
ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ |
ಇಂದಿರಾಪತಿಯೇ ಯಶೋದಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ || ೧೦ ||
ಪದವಿಭಾಗ-ಅರ್ಥ: ಹಿಂದೆ ಸೆಳೆಸೀರೆಯಲು+ ಅಕಟ ಗೋವಿಂದ ರಕ್ಷಿಸು+ ಅನಾಥನಾಥ ಮುಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸು+ ಅಸುರಾರಿ ಇಂದಿರಾಪತಿಯೇ ಯಶೋದಾ ನಂದನನೆ ಕಾರುಣ್ಯನಿಧಿ ಸಲಹೆಂದರೆ+ ಉಳುಹಿದ ದೈವ ನೀ ಮೈದೋರಿದೈ(ಪ್ರತ್ಯಕ್ಷನಾದೆಯಲ್ಲಾ) ತನಗೆ.
ಅರ್ಥ:ದ್ರೌಪದಿ ಕೃಷ್ಗ್ಣನನ್ನು ಕುರಿತು,' ಹಿಂದೆ ಕೌರವನ ಸಭೆಯಲ್ಲಿ ದುಶ್ಶಾಸನನು ಸೆಳೆಯುವ ಸೀರೆಯಲ್ಲಿ (ಇರುವಾಗ) ತಾನು ಅಕಟ, ಗೋವಿಂದ ರಕ್ಷಿಸು, ಅನಾಥರ ನಾಥನೇ, ಮುಕುಂದ, ತನ್ನ್ನು ಕಾಯಬೇಕಯ್ಯಾ ಕೃಷ್ಣಾ, ರಕ್ಷಿಸು, ಕರುಣಿಸು, ಅಸುರಾರಿ, ಇಂದಿರಾಪತಿಯೇ, ಯಶೋದಾ ನಂದನನೆ ಕಾರುಣ್ಯನಿಧಿಯೇ ಸಲಹು ಎಂದು ಮೊರೆಇಟ್ಟರೆ, ತನ್ನನ್ನು ಉಳಿಸಿದ ದೈವ ನೀನು; ತನಗೆ ಮೈದೋರಿದೈ- ಕಾಣಿಸಿಕೊಡೆಯಲ್ಲಾ, ಎಂದು ಹೊಗಳಿದಳು.(ಅವನು ಈಗ ಮತ್ತೆ ಕರೆಯದೆ ಬಂದಿದ್ದಾನೆ!)
ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆ ಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಜ್ಞಾನ ದೀಧಿತಿಗೆ |
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ || ೧೧ ||
ಪದವಿಭಾಗ-ಅರ್ಥ:ಶ್ರುತಿಗಳಿಗೆ ಮೈದೋರೆ(ನೀನು ತೋರಿಕೊಳ್ಳುವುದಿಲ್ಲ, ಕಾಣಿಸನು) ಸುಪತಿವ್ರತೆಯರಿಗೆ ಗೋಚರಿಸೆ(ಗೋಚರಿಸುವುದಿಲ್ಲ) ಯತಿ ಸಂತತಿಯ ನಿರ್ಮಳ ಸಾರ ಸಮ್ಯಜ್ಞಾನ ದೀಧಿತಿಗೆ(ಬೆಳಕಿಗೆ, ಹೊಳಪು, ಕಾಂತಿ) ಮತಿಗೊಡದ(ಮನಸ್ಸುಕೊಡದ) ಮಹಿಮಾಂಬುನಿಧಿಯೆ(ಅಂಬು+ ನಿಧಿ - ಸಮುದ್ರ)+ ಎನಗೆ+ ಅತಿಶಯವನೇ (ಪ್ರಾಮುಖ್ಯತೆಯನ್ನು ಕೊಟ್ಟು) ಮಾಡಿ ಲಜ್ಜಾಸ್ಥಿತಿಯನು+ ಉಳುಹಿದ ದೈವ ನೀ ಮೈದೋರಿದೈ ತನಗೆ()ಪ್ರತ್ಯಕ್ಷವಾದೆಯಲ್ಲಾ)
ಅರ್ಥ:ದ್ರೌಪದಿಯು,"ಕೃಷ್ಣಾ ಶ್ರುತಿಗಳಿಗೆ- ವೇದಗಳನ್ನು ಪಠಿಸುವವರಿಗೆ ನೀನು ಕಾಣಿಸುವುದಿಲ್ಲ; ಮಹಾ ಪತಿವ್ರತೆಯರಿಗೆ ಗೋಚರಿಸುವುದಿಲ್ಲ; ಯತಿಗಳ ಸಮೂಹದ ನಿರ್ಮಲವಾದ ಸಾರ ಸಮ್ಯಜ್ಞಾನದ ಬೆಳಕಿಗೆ ಕಾಣಿಸಿಕೊಳ್ಳಲು ಮನಸ್ಸುಕೊಡದ ಮಹಿಮೆಯಸಾಗರನೇ ನೀನು ತನಗೆ ಅತಿಶಯವಾದ ಕೃಪೆಮಾಡಿ ಪ್ರಾಮುಖ್ಯತೆಯನ್ನು ಕೊಟ್ಟು ತನ್ನನ್ನು ಲಜ್ಜಾಸ್ಥಿತಿಯಿಂದ ಉಳಿಸಿದ ದೈವ ನೀನು ತನಗೆ ಪ್ರತ್ಯಕ್ಷವಾದೆಯಲ್ಲಾ! - ಎಂದಳು.
ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ |
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ || ೧೨ ||
ಪದವಿಭಾಗ-ಅರ್ಥ:ಪೆಸರುಗೊಂಡರೆ (ಹೆಸರು ಕೊಂಡರೆ- ಹೇಳಿದರೆ) ಹಿಂದೆ(ಜೊತೆಗೆ ಹಿಂದೆ ನಿಂತು) ಬಂದು+ ಉಬ್ಬಸದ(ಕಷ್ಟದ) ಭಾರ ವ್ಯಸನವನು(ಚಿಂತೆ) ಹಿಂಗಿಸಿದೆ (ಇಲ್ಲವಾಗಿಸಿದೆ) ಸಾಕ್ಷಾತ್+ದ್ + ದೃಷ್ಟ(ಪ್ರತ್ಯಕ್ಷ) ದರುಶನವ+ ಏನನು+ ಇತ್ತಪುದೊ(ಕೊಡುವುದೋ) ಹೆಸರುಗೊಳಲು(ಹೆಸರು+ ಕೊಳಲು-ಕೊಳ್ಳು, ಸ್ವೀಕರಿಸು, ಹೇಳಲು)+ ಅರಿಯದೆ ಮನೋವಾಕ್+ ಗ್+ ವಿಸರ(ತ್ಯಾಗ, ದಾನ, ಹೊರಕ್ಕೆ ತೆಗೆ) ಮರಳಿದ(ಹಿಂದಿನಿಂದ ಬಂದ, ಹೇಳಿದ) ತರ್ಕ ನಿಗಮ ಪ್ರಸರಣದ(ರಶ್ಮಿ, ಹರಡುವಿಕೆ, ಪ್ರಸಾರ) ಪರದೈವ ನೀ ಮೈದೋರಿದೈ ತನಗೆ.
ಅರ್ಥ:ಕೃಷ್ಣಾ ನಿನ್ನ ಹೆಸರು ಹೇಳಿದ ಮಾತ್ರದಲ್ಲಿ ನನ್ನ ಹಿಂದೆ ನಿಂತು ಸಹಾಯಕ್ಕೆ ಬಂದು ಕಷ್ಟದ ಭಾರವನ್ನು ಮತ್ತು ಚಿಂತೆನ್ನು ಹಿಂಗಿಸಿದೆ; ಏನನ್ನು ಕೊಡಬೇಕು ಎಂದು ಸಾಕ್ಷಾತ್‍ ಬಂದು ಪ್ರತ್ಯಕ್ಷ ದರ್ಶನವನ್ನೇ ಕೊಡುವದೇ! ಮನೋವಾಕ್ ನಿಂದ ಹೊರತಾಗಿರುವ ನೀನು ಹಿಂದಿನಿಂದ ಬಂದ ತರ್ಕಕ್ಕೂ ನಿಗಮ- ವೇದದ ಜ್ಞಾನದ ಬೆಳಕಾದ ನೀನು ಹೆಸರು ಕೊಳ್ಳಲು ಅರಿಯದ- (ಹೆಸರೇ ಇಲ್ಲದ ಜ್ಞಾನ ಸ್ವರೂಪನಾದ) ಪರದೈವವು ನೀನು, ಕರೆದಾಗ ತನಗೆ ಮೈದೋರಿದೆಯಲ್ಲವೇ? ಎಂದಳು.
ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು |
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ಬಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ || ೧೩ ||
ಪದವಿಭಾಗ-ಅರ್ಥ: ಪತಿಗಳಿವರು+ ಅಂಜಿದರು ಧರ್ಮಸ್ಥಿತಿಯನು+ ಅರಿದವರು(ತಿಳಿದವರು)+ ಅಳುಕಿದರು(ಕಾಪಾಡಲು ಹಿಂಜರಿದರು) ತತ್+ ಪಿತೃ(ಧೃತರಾಷ್ರ) ಪಿತಾಮಹ ಗುರುಗಳು(ಭೀಷ್ಮದ್ರೋಣ)+ ಅಡಗಿದರು+ ಅವನಿಯಲಿ(ಅವನಿ= ಭೂಮಿ) ಬಗಿದು(ಅಗೆದು, ತೋಡಿ) ಗತಿವಿಹೀನೆಗೆ ಕೃಷ್ಣ ನೀನೇ ಗತಿಯೆನುತ ಬಾಯ್ಬಿಡಲು ಲಜ್ಜಾಸ್ಥಿತಿಯನು+ ಉಳುಹಿದ ದೈವ ನೀ ಮೈದೋರಿದೈ ತನಗೆ.
ಅರ್ಥ:ದ್ರೌಪದಿಯು ಅಳುತ್ತಾ, 'ಪತ್ನಿಯನ್ನು ಪಣಕ್ಕಿಟ್ಟು ಸೋತು ಪತಿಗಳಾದ ಇವರು ಐದೂ ಜನ ಜೂಜಿನ ಮಾತಿಗೆ ತಪ್ಪಬಾರದೆಂದು ಅಂಜಿದರು. ಧರ್ಮಸ್ಥಿತಿಯನ್ನು ತಿಳಿದವರಾದ ಆ ಪಿತೃ ಧೃತರಾಷ್ರ, ಪಿತಾಮಹ ಭೀಷ್ಮ, ಗುರುಗಳಾದ ದ್ರೋಣ ಕೃಪರು ಅಳುಕಿದರು; ಅವರು ಭೂಮಿಯನ್ನು ಬಗಿದು ಅದರಲ್ಲಿ ಅಡಗಿದಂತಿದ್ದರು. ಗತಿವಿಹೀನೆಯಾದ ತನಗೆ ಕೃಷ್ಣಾ- ನೀನೇ ಗತಿಯೆನ್ನುತ್ತಾ ಬಾಯ್ಬಿಟ್ಟು ಕೂಗಲು, ತನ್ನ ಲಜ್ಜಾಸ್ಥಿತಿಯನ್ನು ಕಳೆದು ಅಕ್ಷಯ ಸೀರೆಯನ್ನು ಕರುಣಿಸಿ ಮಾನವನ್ನು ಉಳಿಸಿದ ದೈವ ನೀನು- ಆಗ ತನಗೆ ಮೈದೋರಿದೆಯಲ್ಲವೇ!' ಎಂದು ಹೇಳಿದಳು.
ದಾನ ಯಜ್ಞ ತಪೋವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ |
ಜ್ಞಾನಮಧ್ಯ ತ್ರಿಪುಟಿಯನು ಸಂ
ಧಾನ ರಹಿತ ಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ || ೧೪ ||
ಪದವಿಭಾಗ-ಅರ್ಥ: ದಾನ ಯಜ್ಞ ತಪ+ವ್ರತ+ ಅನುಷ್ಠಾನ ನಿಷ್ಠರು ಕಾಣರು+ ಅಷ್ಟ ವಿಧಾನ ಯೋಗದ ಸಿದ್ಧರು+ ಅರಿಯರು(ತಿಳಿಯರು) ನಿನ್ನ ಸುಳಿವುಗಳ; ಜ್ಞಾನಮಧ್ಯ ತ್ರಿಪುಟಿಯನು ಸಂಧಾನ ರಹಿತ ಜ್ಞಪ್ತಿರೂಪನು ತಾನು+ ಎನಿಪ(ಎನ್ನುವ) ಪರಬೊಮ್ಮ(ಪರಬ್ರಹ್ಮ) ನೀ ಮೈದೋರಿದೈ ತನಗೆ.
ಅರ್ಥ:ದ್ರೌಪದಿಯು ಮುಂದುವರಿದು,'ದಾನ, ಯಜ್ಞ, ತಪಸ್ಸು, ವ್ರತ, ಅನುಷ್ಠಾನ ನಿಷ್ಠರು ನಿನ್ನನ್ನು ಕಾಣರು. ಅಷ್ಟಾಂಗ ವಿಧಾನ ಯೋಗದ ಸಿದ್ಧರು ಸಹ ನಿನ್ನ ಸುಳಿವುಗಳನ್ನು ಅರಿಯರು. ಹುಬ್ಬುಗಳ ಮಧ್ಯದ ಜ್ಞಾನಮಧ್ಯ ತ್ರಿಪುಟಿಯಲ್ಲಿ ಸಹ ನಿನ್ನನ್ನು ಕಾಣರು. ಕಾರಣ ನೀನು 'ತಾನು' ಎನ್ನುವ ಸಂಧಾನ ರಹಿತನಾದ ಜ್ಞಾನಸ್ವರೂಪನಾದ ಪರಬ್ರಹ್ಮನು; ಹೀಗಿರುವ ನೀನು ತನಗೆ ಮೈದೋರಿದೆಯಲ್ಲಾ- ಸಾಕ್ಷಾತ್ಕಾರವಾದೆಯಲ್ಲಾ!, ಎಂದಳು.
ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ |
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ || ೧೫ ||
ಪದವಿಭಾಗ-ಅರ್ಥ: ಕಾಯಿದೈ ಪ್ರಹ್ಲಾದ, ಮಾರ್ಕಂಡೇಯ, ವನಗಜವ+, ಅಂಬರೀಷನ ಕಾಯಿದೈ, ಕಾರುಣ್ಯದಲಿ ಪಾತಕಿಯ+ ಅಜಾಮಿಳನ ಕಾಯಿದೈ ಗೋವಿಂದ+ ಯೆನೆ ತನ್ನ+ ಆಯತಿಕೆಯ(ಘನತೆ, ಅತಿಶಯ, ಆಧಿಕ್ಯ)+ ಅಭಿಮಾನವನು ನೀ ಕಾಯಿದೈ ಹರಿ+ ಯೆನುತ ಪದದಲಿ ಹೊರಳಿದಳು ತರಳೆ.
ಅರ್ಥ: ಪಾಂಚಾಲಿಯು ತನ್ನ ಕಷ್ಟಕ್ಕೆ ನೆರವಾದ ಕೃಷ್ಣನನ್ನು ಕಂಡ ಆನಂದ, ಜೊತೆಗೆ ಹಿಂದಿನ ತನ್ನ ಆಪತ್ತಿನ ನೆನಪುಗಳ ದುಃಖದಿಂದ ಅಳುತ್ತಾ ಕೃಷ್ಣನನ್ನು ಸ್ತುತಿಸುತ್ತಾಳೆ; 'ಕೃಷ್ಣಾ ನೀನು ಪ್ರಹ್ಲಾದನನ್ನು ಕಾಪಾಡಿದೆ,:ಅಲ್ಪಾಯುಷಿ ಮಾರ್ಕಂಡೇಯನು ಆಯುಷ್ಯಕ್ಕಾಗಿ ಶಿವ ಮತ್ತು ಉಮಾ ಕುರಿತು ತಪಸ್ಸನ್ನು ಮಾಡುವಾಗ ಅದನ್ನು ಕೆಡಿಸಲು ಇಂದ್ರನು ಮನ್ಮಥನನ್ನು ಕಳುಹಿಸಿದಾಗ, ಮಾರ್ಕಾಂಡೇಯನು ನಾರಾಯಣನನ್ನು ಪ್ರಾರ್ಥಿಸಿದಾಗ ಅವನನ್ನು ರಕ್ಷಿಸಿದೆ. ಮೊಸಳೆಯಿಂದ ವನಗಜವನ್ನು ಅದು ಮೊರೆಯಿಡಲು ರಕ್ಷಿಸಿದೆ, ಅಂಬರೀಷನನ್ನು ದೂರ್ವಾಸರಿಂದ ಕಾಯಿದೆಯಲ್ಲವೇ, ಪಾತಕಿಯಾದ ಅಜಾಮಿಳನನ್ನು ಕರುಣೆಯಿಂದ ಕಾಯಿದೆಯಪ್ಪಾ; ತಾನು 'ಗೋವಿಂದಾ' ಎನ್ನಲು ತನ್ನ ಘನತೆಯ ಅಭಿಮಾನವನ್ನು 'ಹರಿಯೇ ನೀನು ಕಾಪಾಡಿದೆಯಲ್ಲಾ' ಎನ್ನುತ್ತಾ ಅವನ ಪಾದಗಳ ಮೇಲೆ ಬಿದ್ದು ಹೊರಳಿದಳು, ಆ ತರಳೆ ದ್ರೌಪದಿ.
ಟಿಪ್ಪಣಿ: ಮಾರ್ಕಂಡೇಯನನ್ನು ಮೃತ್ಯವಿನಿಂದ ಕಾಪಾಡಿದೆ-$(ಭಾಗವತ ದಶಮಸ್ಕಂದ)
ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ |
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ || ೧೬ ||
ಪದವಿಭಾಗ-ಅರ್ಥ: ಏಳು ತಾಯೆ ಸರೋಜಮುಖಿ ಪಾಂಚಾಲೆ ನೊಂದೌ ತಂಗಿಯೆನುತ ಕೃಪಾಳು(ಕರುಣೆಯುಳ್ಳವನು) ಕಂಬನಿ+ ದ+ ತೊಡೆದು(ಒರೆಸಿ) ಕೊಡಹಿದನು+ ಅವಯವದ ರಜವ(ಧೂಳು) ಮೇಲು ಮುಚ್ಚಳ ತೆರೆದ ತನುವಿನ ಹೇಳಿಗೆಯ(ಮಣ್ಣು ಮುದ್ದೆ, ಹೆಂಟೆ) ಶೋಕ+ ಅಹಿಯಂತಿರೆ( ಹಾವು, ರಾಹು) ಲೋಲಲೋಚನೆಯ(ಚಂಚಲ ಕಣ್ಣಿನ)+ ಅಳಲು ಮಿಗೆ ಹೆಕ್ಕಳಿಸಿತು(ಅಧಿಕವಾಗು, ಹೆಚ್ಚಾಗು, ಹಿಗ್ಗು)+ ಅಡಿಗಡಿಗೆ(ಮತ್ತೆಮತ್ತೆ).
ಅರ್ಥ:ದ್ರೌಪದಿಯ ದುಃಖವನ್ನು ನೋಡಿ ಕೃಷ್ಣನು ಕಾಲಿನ ಮೇಲೆ ಬಿದ್ದಿದ್ದ ಅವಳನ್ನು, "ಏಳು ತಾಯೆ ಕಮಲಮುಖಿ, ಪಾಂಚಾಲೆ, ತಂಗಿಯೆ, ನೀನು ಬಹಳ ನೊಂದುಬಿಟ್ಟೆ, ಎನ್ನುತ್ತಾ, ಕೃಪಾಳು ಕೃಷ್ಣನು ಅವಳ ಕಣ್ಣೀರನ್ನು ಒರೆಸಿ ಮೈಗೆ, ಅವಯುವಗಳಿಗೆ ಅಂಟಿದ ಧೂಳನ್ನು ತನ್ನ ಉತ್ತರೀಯದಿಂದ ಕೊಡಹಿದನು. ಮೇಲು ಮುಚ್ಚಳ ತೆರೆದ ದೇಹವೆಂಬ ಮಣ್ಣಿನ ಕೊಡದ ಶೋಕವು ಅದರೊಳಗಿನ ಸರ್ಪದಂತಿರಲು ಸುಂದರಕಣ್ಣಿನ ದ್ರೌಪದಿಯ ಅಳಲು- ಆಪದ್ಭಾಂದವನನ್ನು ಕಂಡನಂತರ ಒಳಗಿನ ದುಃಖ ಮತ್ತೆ ಮತ್ತೆ ಹೆಚ್ಚುತ್ತಲೇ ಇತ್ತು.
ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕ ವ್ರಾತ |
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲ ವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳೆಂದ || ೧೭ ||
ಪದವಿಭಾಗ-ಅರ್ಥ: ಆ ಸಕಲ ಪರಿವಾರವು+ ಆ ಧರಣೀಶರು+ ಆ ಮುನಿ ನಿಕರವು+ ಆ ಜನವು+ ಆ ಸತೀ ನಿಕುರುಂಬವು+ ಆ ಗಜ ಘೋಟಕ ವ್ರಾತ (ಕುದುರೆ ಸಮೂಹ?)ಆ ಸರೋಜಾನನೆಯ(ಕಮಲಮುಖಿ) ಬಹಳ ಕ್ಲೇಶಗಳ ಕಂಡು+ ಅಕ್ಷಿಜಲ ವಾರಾಸಿಯಲಿ(ಕಣ್ಣೀರಿನ ಸಮುದ್ರ) ತೇಕಾಡುತಿರ್ದುದು(ತೇಲಾಡು) ರಾಯ ಕೇಳೆಂದ.
ಅರ್ಥ:ದ್ರೌಪದಿಯು ಕೃಷ್ಣನನ್ನು ಕಂಡುಅದುವರೆಗೆ ತಡೆದ ಶೋಕವು ಕಟ್ಟೆಯೊದೆಸು ಹೊರಬರಲು, ಅಳುತ್ತಾ ನಮಿಸಿ ಎದ್ದಾಗ ಅವನು ಸಂತಯಸಿದರೂ ಅವಳು ತಡೆಯದೆ ದುಃಖದಿಂದ ಉಮ್ಮಳಿಸಿ ಕಣ್ಣೀರು ಸುರಿಸುತ್ತಿದ್ದಳು. ಅದನ್ನು ನೋಡಿ ಆ ಸಕಲ ಪರಿವಾರವೂ, ಆ ಧರಣೀಶರಾದ ರಾಜರೂ, ಆ ಮುನಿ ಸಮೂಹವೂ, ಆ ಜನವೂ, ಅಲ್ಲಿದ್ದ ಆ ಸತೀ ಜನರೂ- ವನಿತೆಯರೂ, ಆ ಆನೆ ಕುದುರೆಗಳೂ ಆ ದ್ರೌಪದಿಯ ಬಹಳ ಸಂಕಟ, ನೋವು, ಕಷ್ಟಗಳನ್ನು ಕಂಡು ಕಣ್ಣೀರಿನ ಸಮುದ್ರದಲ್ಲಿ ತೇಲಾಡುತ್ತಿದ್ದರು, ರಾಯನೇ ಕೇಳು ಎಂದ ಮುನಿ.

ದ್ರೌಪದಿಗೆ ಕೃಷ್ಣನ ವಚನಪ್ರದಾನ[ಸಂಪಾದಿಸಿ]

ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು |
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ || ೧೮ ||
ಪದವಿಭಾಗ-ಅರ್ಥ: ಮುಡಿಯ(ತಲೆಕೂದಲನ್ನು) ಸಂವರಿಸು+ ಅಬಲೆ ಸೀರೆಯನು+ ಉಡು ನವಾಂಬರವು(ಹೊಸಬಟ್ಟೆ)+ ಇದೆ ವಿರೋಧವ ಬಿಡು, ಸುಯೋಧನ ರಾಜಸಂತತಿಯು+ ಉರಿದುದು(ಸುಟ್ಟುಹೊಯಿತು)+ ಇನ್ನೇನು ಕೆಡಿಸಿಕೊಂಡರು ನಾಯ್ಗಳು+ ಇನ್ನು+ ಅದ ನುಡಿದು ಫಲವೇನು+ ಅಕಟ; ಕೈಕೊಂಡು+ ಅಡವಿಯ+ ಅನುಭವ ಸವೆಯೆ ಸೈರಿಪುದು+ ಎಂದನು+ ಅಸುರಾರಿ.
ಅರ್ಥ:ಕೃಷ್ಣನು ದ್ರೌಪದಿಗೆ, ಬಿಚ್ಚಿ ಕೆದರಿದ ತಲೆಕೂದಲನ್ನು ಸರಿಪಡಿಸಿಕೊ - ಕೂದಲನ್ನು ಕಟ್ಟು; ಅಬಲೆ, ತಂಗಿ ಹೊಸ ಸೀರೆಯನ್ನು ಉಡು, ನಮ್ಮ ಬಳಿ ಹೊಸಬಟ್ಟೆ ಇದೆ. ಮನಸ್ಸಿನಲ್ಲಿರುವ ವಿರೋಧದ ಸಿಟ್ಟನ್ನು ಬಿಡು. ಸುಯೋಧನನ ರಾಜಸಂತತಿಯು ಸುಟ್ಟುಹೊಯಿತು ಎಂದು ತಿಳಿ. ಮತ್ತೆ ಇನ್ನೇನು, ಅವರು ತಮ್ಮ ಬಾಳನ್ನು ಕೆಡಿಸಿಕೊಂಡರು,- ನಾಯಿಗಳು. ಇನ್ನು ಅದನ್ನು ಹೇಳಿ ಫಲವೇನು, ಅಕಟ! ಈಗ ಕೈಕೊಂಡಿರುವ ಅಡವಿಯ ಅವಧಿಯು ಅನುಭವಿಸಿ ಸವೆಯಲಿ- ಅದು ಮುಗಿಯುವವರೆಗೆ ನಿನ್ನ ದುಃಖವನ್ನು ಸಹಿಸಿಕೊಳ್ಳಬೇಕು,' ಎಂದನು.
ತುರುಬು ಕಟ್ಟುವ ಹದನ ನಿಮ್ಮಡಿ
ಯರಿಯದೆಂಬೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ |
ತೈದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ || ೧೯ ||
ಪದವಿಭಾಗ-ಅರ್ಥ: ತುರುಬು ಕಟ್ಟುವ ಹದನ(ವಿಚಾರ) ನಿಮ್ಮಡಿಯು(ಪೂಜ್ಯರಿಗೆ- 'ನಿಮಗೆ' ಎನ್ನುವ ಬದಲಿಗೆ 'ನಿಮ್ಮ ಪಾದಗಳಿಗೆ' ಎನ್ನುವುದು ಹಿಂದಿನ ರೂಢಿ)+ ಅರಿಯದೆಂಬೆನೆ(ತಿಳಿಯದೆನ್ನಲೆ?) ಸಕಲ ಸಚರಾಚರದ ಚೇತನರೂಪ ದೇಹಿ ನಿಕಾಯ(ಶರೀರ) ಕೃತಸಾಕ್ಷಿತ+ ಐ+ ಇದು ದುಶ್ಯಾಸನನ ವಕ್ಷದೊಳು+ ಒರೆವ(ಹೊರಸೂಸುವ) ರಕುತದೊಳು+ ಅದ್ದಿ ಕಟ್ಟುವ+ ದು+ ತುರುಬನು+ ಅರಿಯಾ ಕೃಷ್ಣ+ ಯೆಂದಳು ಕಮಲಮುಖಿ ನಗುತ.
ಅರ್ಥ:ಕೃಷ್ಣನ ಮಾತಿನಿಂದ ಸ್ವಲ್ಪ ಸಅಮಾಧಾನ ಹೊಂದಿದ ದ್ರೌಪದಿ ನಗುತ್ತಾ, ಕೃಷ್ನನಿಗೆ,'ನನ್ನ ತುರುಬನ್ನು ಕಟ್ಟುವ ವಿಚಾರ ನಿಮ್ಮ ಪಾದಗಳಿಗೆ ತಿಳಿಯದು ಎನ್ನಲೆ? ಸಕಲ ಸಚರಾಚರದ ಚೇತನರೂಪನೂ, ದೇಹಿಯೂ, ದೇಹದಕೃತ ಸಾಕ್ಷಿಸ್ವರೂಪನೂ ಅದ ನಿನಗೆ ತಿಳಿಯದೆ. ಈ ನನ್ನ ಬಿಚ್ಚಿದ ಮುಡಿ- ಇದು ದುಶ್ಯಾಸನನ ಎದೆಯಿಂದ ಹೊರಸೂಸುವ ರಕ್ತದಲ್ಲಿ ಅದ್ದಿ ಕಟ್ಟುವ ತುರುಬು, ಇದನ್ನು ಅರಿಯೆಯಾ ಕೃಷ್ಣ? ಎಂದಳು.
ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ |
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ || ೨೦ ||
ಪದವಿಭಾಗ-ಅರ್ಥ: ಐಸಲೇ ದುರ್ಯೋಧನಾದಿಗಳು+ ಈಸರು (ಈಸು- ಈಜು; ಈಜರು - ಜೀವನದಲ್ಲಿ ಈಜಲಾರರು- ಬದುಕರು)+ ಅವದಿರು ಭೀಮ ಪಾರ್ಥರ ಬೀಸರಕೆ(ಹೊಡೆತಕ್ಕೆ, ನಾಶ, ಕೇಡು) ಬಲುಗೈಯೆ (ಬಲುಗೈ= ಪರಾಕ್ರಮ; ಶೌರ್ಯತೋರಲು) ಬರ್ಹಿರ್ಮುಖರ(ಎದುರು ನಿಲ್ಲುವವರ; ಬಹಿರಂಗವಾಗಿ ಮುಖಾಮುಖಿಯಾಗುವವರ, ಎದುರು ನಿಂತು ಯುದ್ಧಮಾಡುವ ಭೀಮ ಪಾರ್ಥರ) ಭಾರವಣೆ(ಹೊಣೆ) ದೂಸಕನ(ದೂಷಕ- ಅವಿವೇಕಿ, ಮೂರ್ಖ) ರಕ್ತದಲಿ ನಿನ್ನಯ ಕೇಶವನು ಕಟ್ಟಿಸುವೆ ನಿನ್ನಯ ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ.
ಅರ್ಥ:ದ್ರೌಪದಿಯು ಕೃಷ್ಣನಿಗೆ,'ನಿನಗೆ ತಿಳಿಯದೇ, ಈ ನನ್ನ ತುರುಬನ್ನು ದುಶ್ಶಾಸನನು ಹಿಡಿದೆಳೆದು ಬಿಚ್ಚಿದ; ಈ ಬಿಚ್ಚಿದ ಕೂದಲು ದುಶ್ಶಾಸನನ ರಕ್ತದಲ್ಲಿ ಅದ್ದಿ ಕಟ್ಟುವೆನೆಂದು ಶಪಥಮಾಡಿರುವೆನು. ಎನ್ನಲು, ಕೃಷ್ಣನು,'ಐಸಲೇ- ಅದು ಹಾಗೋ! ಹಾಗಿದ್ದರೆ ದುರ್ಯೋಧನಾದಿಗಳು ಬದುಕರು, ಅವರು- ಭೀಮ ಮತ್ತು ಪಾರ್ಥರು- ಪ್ರಸಿದ್ಧ ಪರಾಕ್ರಮದ ಹೊಡೆತಕ್ಕೆ ಬಲಯಾಗುವರು; ಎದುರು ಬಹಿರಂಗವಾಗಿ ಮುಖಕೊಟ್ಟ ನಿಂತು ಯುದ್ಧಮಾಡುವ ಭೀಮ ಮತ್ತು ಪಾರ್ಥರ ಮೂಲಕ ತಾನು ಹೊಣೆಹೊತ್ತು ಆ ಅವಿವೇಕಿಯ ರಕ್ತದಲಿ ನಿನ್ನಯ ತಲೆಕೂದಲನ್ನು ಅವರಿಂದ ಕಟ್ಟಿಸುವೆನು. ನಿನ್ನಯ ಭಾಷೆ ತನ್ನದು ತಾಯೆ! ನೀನು ಆತುರಪಡಬೇಡ,'ಎಂದ.(ಹದಿಮೂರು ವರ್ಷ ಕಾಯಬೇಕಾಗುವುದು.)
ವರ ತಪಸ್ವಿನಿ ನೀನು, ನಿನ್ನನು
ಕೆರಳಿಚಿದರೇ ಕುನ್ನಿಗಳು, ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ |
ಕುರುಡನರಿಯದೆ ಹೋದರೆಯು, ಕಂ
ಗುರುಡಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ || ೨೧||
ಪದವಿಭಾಗ-ಅರ್ಥ: ವರ(ಶ್ರೇಷ್ಠ) ತಪಸ್ವಿನಿ ನೀನು, ನಿನ್ನನು ಕೆರಳಿಚಿದರೇ ಕುನ್ನಿಗಳು, ಮಿಗೆ(ಇನ್ನು ಹೆಚ್ಚು) ಭರತಸಂತತಿ ಫಲಿತ (ಹಣ್ಣುಬಿಟ್ಟ)ಕದಳಿಯ(ಬಾಳೆಯಮರ) ತೆರದೊಳು+ ಆಯಿತಲ, ಕುರುಡನು+ ಅರಿಯದೆ ಹೋದರೆಯು, ಕಂಣ್+ ಗು+ ಕುರುಡಾದರೆ ಭೀಷ್ಮ ವಿದುರ+ ಆದ್ಯರು ಮಹಾದೇವ+ ಎನುತ ಮುರರಿಪು ತೂಗಿದನು ಶಿರವ.
ಅರ್ಥ:ಕೃಷ್ಣನು ಹೇಳಿದ,'ಶ್ರೇಷ್ಠಳಾದ ತಪಸ್ವಿನಿಯು ನೀನು; ನಿನ್ನನನು ಕೆರಳಿಸಿದರೇ ಆ ಕುನ್ನಿಸಾಮಾನ ದುರ್ಯೋಧನ ದುಶ್ಶಾಸನರು? ದುಷ್ಟತನ ಹೆಚ್ಚಲು, ಭರತಸಂತತಿಯು ಫಲವನ್ನು ಬಿಟ್ಟಿರುವ ಬಾಳೆಯಮರದ ಹಾಗೆ ಆಯಿತಲ್ಲಾ; ಕುರುಡ ಧೃತರಾಷ್ಟ್ರನು ಇದನ್ನು ಅರಿಯದೆ ಹೋದರೆಯೂ ತಿಳಿಯದಿದ್ದರೂ, ಕಂಣ್+ ಗು+ಭೀಷ್ಮ ಮತ್ತು ವಿದುರ ಮೊದಲಾದವರು ಕಣ್ಣಿಲ್ಲದ ಕುರುಡಾದರೆ ಮಹಾದೇವ,' ಎನ್ನುತ್ತಾ, ಕೃಷ್ಣನು ಹೀಗಾಗಬಾರದಿತ್ತು ಎಂದು ತಲೆಯನ್ನು ಅಡ್ಡಅಡ್ಡಲಾಗಿ ಮೆಲ್ಲಗೆ ಬೇಸರದಿಂದ ತೂಗಿದನು.(ಬಾಳೆಯಮವು ಗೊನೆಬಿಟ್ಟು ಅದು ಹಣ್ಣಾದ ನಂತರ ಗಿಡ ಸತ್ತುಹೋಗುವುದು, ಅದರ ಗಡ್ಡೆಯಿಂದ ಅದರ ಪಕ್ಕದಲ್ಲಿ ಹೊಸ ಸಸಿ ಮೊಳಕೆ ಏಳುವುದು)
ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು |
ಸಕಲ ಜೀವರ ಕರ್ಣಸಾಕ್ಷಿ
ಪ್ರಕರ ಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ || ೨೨ ||
ಪದವಿಭಾಗ-ಅರ್ಥ: ಶಕುನಿ ಕಲಿಸಿದ ಕಪಟವೇ ಕೌಳಿಕದ(ಮೋಸದ) ಜೂಜು+ ಇದು(ಈ) ನಿಮ್ಮನು ಈ ಕಾಮ್ಯಕಕೆ ತಂದುದು ಜೂಜಿನಲಿ ತಾನು+ ಇಲ್ಲಲೇ+ ಯೆ+ ಎನಲು ಸಕಲ ಜೀವರ ಕರ್ಣಸಾಕ್ಷಿ ಪ್ರಕರ(ದಂಟು, ದೇಟು,ಪ್ರಕರಣ, ವಿವಾದ, ಮರದ ಕೆಳಭಾಗ,-> ಆಧಾರ? ) ಚೈತನ್ಯ ಸ್ವರೂಪಾತ್ಮಕನು ನೀನು+ ಅಲ್ಲಿಲ್ಲ ಹುಸಿಯಲ್ಲ+ ಎಂದಳು+ ಇಂದುಮುಖಿ.(ಕರ್ಣಸಾಕ್ಷಿ; ಕಿವಿಯಿಂದ ಕೇಳುವಿಕೆಗೆ, ಶ್ರವಣಕ್ಕೆ ಮೂಲ ಜ್ಞಾನಶಕ್ತಿ, ಎಲ್ಲಾ ಜ್ಞಾನಕ್ಕೂ ಸಾಕ್ಷಿರೂಪನು.)
ಅರ್ಥ: ಶಕುನಿ ಕಲಿಸಿದ ಕಪಟವೇ ಇದು; ಮೋಸದ ಈ ಜೂಜು ನಿಮ್ಮನ್ನು ಈ ಕಾಮ್ಯಕ ವನಕ್ಕೆ ತಂದಿತು. ಜೂಜಿನಸಮಯದಲ್ಲಿ ತಾನು ಇರಲಿಲ್ಲವಲ್ಲಾ, ಎನಲು ದ್ರೌಪದಿಯು, 'ಸಕಲ ಜೀವರ ಕರ್ಣಸಾಕ್ಷಿಯ ಆಧಾರದ ಕಾಂಡ ನೀನು; ಚೈತನ್ಯ ಸ್ವರೂಪಾತ್ಮಕನು ನೀನು; ಅಲ್ಲಿಲ್ಲ ಎನ್ನುವುದು ಹುಸಿಯಲ್ಲವೇ,' ಎಂದಳು.

ದ್ವಾರಾವತಿಯ ಮೇಲೆ ಸಾಲ್ವನ ಆಕ್ರಮಣ- ಸಾಲ್ವ- ಯಾದವರ ಯುದ್ಧ[ಸಂಪಾದಿಸಿ]

ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ |
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ || ೨೩ ||
ಪದವಿಭಾಗ-ಅರ್ಥ: ದೇವಿ ಪಾಂಚಾಲಿ, ತಾನು + ಇದನು+ ಅರಿದೊಡೆ(ತಿಳಿದಿದ್ದರೆ) ಆ ವಸುದೇವನಾಣೆ; ಮಹಾದ್ಭುತವನು+ ಅದನು+ ಏ+ ವೊಗಳ್ವೆನು(ವಿವರಿಸಲಿ) ಯದುನೃಪಾಲ ವಿಪತ್+ ಪರಂಪರೆಯ; ನೀವು ಮಾಡಿದ ಯಜ್ಞ ಮುಖದ+ ಅವಳಾವಳಿಯೊಳು(ಗಡಿಬಿಡಿಯಲ್ಲಿ)+ ಆವಿರಲು(ಆವು=ನಾವು+ ಇರಲು) ಮುತ್ತಿತು ದೇವರಿಪುಬಲ(ದೇವರಿಪು= ದೈತ್ಯರ ಬಲ= ಸೇನೆ) ನಿಕರವು(ಸಮೂಹ)+ ಅಸ್ಮತ್(ನನ್ನ,ನಮ್ಮ)+ ದ್ವಾರಕಾಪುರಿಯ
ಅರ್ಥ:ಕೃಷ್ಣ ಹೇಳಿದ,'ದೇವಿ ಪಾಂಚಾಲಿ, ತಾನು ಈ ಜೂಜಿನ ವಿಚಾರವನ್ನು ತಿಳಿದಿದ್ದರೆ ಆ ವಸುದೇವನಾಣೆ; ಆಸಮಯದಲ್ಲಿ ನೆಡೆದದ್ದು ಮಹಾ ಅದ್ಭುತ; ಯದುನೃಪಾಲನಿಗೆ ಬಂದ ವಿಪತ್ತಿನ ಪರಂಪರೆಯನ್ನು- ಅದನ್ನು ಏನೆಂದು ವಿವರಿಸಲಿ. ನೀವು ಮಾಡಿದ ರಾಜಸುಯದ ಯಜ್ಞ ಮುಖದ ಗಡಿಬಿಡಿಯಲ್ಲಿ ನಾವು ಇರುವಾಗ ನಮ್ಮ ದ್ವಾರಕಾಪುರಿಯನ್ನು ದೈತ್ಯರ ಸೇನೆಯ ಸಮೂಹವು ಮುತ್ತಿತು.
ಲಗ್ಗೆಗಳುಕುವುದಲ್ಲಲೇ ಬಲು
ದುರ್ಗಮದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು |
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗುನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ || ೨೪ ||
ಪದವಿಭಾಗ-ಅರ್ಥ: ಲಗ್ಗೆಗೆ+ ಅಳುಕುವುದು+ ಅಲ್ಲಲೇ ಬಲು+ ದುರ್ಗಮು+ ಅದು ದುರ್ಭೇದವು+ ಅವರೊಳು(ಯಾದವರಲ್ಲಿ)+ ಅಗಗ್ಗಳೆಯರು(ಮಹಾವೀರರು)+ ಇದ್ದುದು ಹಲಾಯುಧ ಮನ್ಮಥಾದಿಗಳು ಬಗ್ಗಿ ಕವಿವ ಕಠೋರ ದೈತ್ಯರ ನುಗ್ಗುನುರಿ ಮಾಡಿದರು ಹರಣದ(ಜೀವ ಹರಣ- ಸತ್ತವರು) ಸುಗ್ಗಿ ಮೆರೆದುದು ಮಾರ್ಬಲದೊಳು(ಶತ್ರು ಸೇನೆಯಲ್ಲಿ)+ ಅಬುಜಾಕ್ಷಿ ಕೇಳೆಂದ.
ಅರ್ಥ:ಕೃಷ್ಣನು,'ನಮ್ಮ ದ್ವರಕಾಪುರಿ ಲಗ್ಗೆಗೆ- ಆಕ್ರರಮಣಕ್ಕೆ ಸೊಲುವುದು ಅಲ್ಲವೇ ಅಲ್ಲ; ಅದು ಬಹಳ ದುರ್ಗಮುವಾದ ಕೋಟೆ. ಅದು ದುರ್ಭೇದವು ಬೇಧಿಸಲಾಗದ ಕೋಟೆ. ಯಾದವರಲ್ಲಿ ಮಹಾವೀರರು ಇದ್ದರು, ಅವರಲ್ಲಿ ಹಲಾಯುಧನಾದ ಬಲರಾಮ, ಮನ್ಮಥ ಮೊದಲಾದವರು ಕೋಟೆಯ ಮೇಲಿನಿಂದ ಬಗ್ಗಿ ಮುತ್ತಿದ ಗಟ್ಟಿಗರಾದ ದೈತ್ಯರನ್ನು ನುಗ್ಗುನುರಿ ಮಾಡಿದರು. ಆ ಯುದ್ಧದಲ್ಲಿ ಸೇನೆಗಳಲ್ಲಿ ಸತ್ತವರ ಸುಗ್ಗಿ ಮೆರೆಯಿತು. ದ್ರೌಪದಿಯೇ ಕೇಳು ಎಂದ.
ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ವುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು |
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ || ೨೫ ||
ಪದವಿಭಾಗ-ಅರ್ಥ: ಅಳುಕಿ ಮುತ್ತಿಗೆ+ ದೆ+ ತೆಗೆದು ಸಾಲ್ವನದಳ(ಸೇನೆ) ಮುರಿದು(ಹಿಂತಿರುಗಿ) ನಿಜಪುರಕೆ ಹಾಯ್ವುದು, ಗೆಲವು ಸಾತ್ಯಕಿ, ರಾಮ, ಕಾಮ+ ಆದಿಗಳ ವಶವಾಯ್ತು; ಬಳಿಕ ನಿಮ್ಮಯ ರಾಜಸೂಯಕೆ ಕಳಶವಿಟ್ಟು ಮದೀಯ(ನಮ್ಮ) ನಗರಿಯ ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ.
ಅರ್ಥ:ಹೀಗೆ ದೈತ್ಯ ಸಾಲ್ವನು,'ಹಿಮ್ಮಟ್ಟಿ ದ್ವಾರಕೆಯ ಮುತ್ತಿಗೆಯನ್ನು ತೆಗೆದು, ಸಾಲ್ವನಸೇನೆ ಹಿಂತಿರುಗಿ ತಮ್ಮ ಪುರಕ್ಕೆ ಓಡಿಹೋಯಿತು. ಗೆಲವು ಸಾತ್ಯಕಿ, ಬಲರಾಮ, ಕಾಮ-ಪ್ರದ್ಯುಮ್ನ ಮೊದಲಾದವರ ವಶವಾಯಿತು. ಬಳಿಕ ನಿಮ್ಮ ರಾಜಸೂಯಕ್ಕೆ ಕಳಶವಿಟ್ಟು- ಪರಿಸಮಾಪ್ತಿ ಮಾಡಿ ನಮ್ಮ ದ್ವರಕಾನಗರದ ನಗರದ ಸಂತ್ರಸ್ತರ ಕಳವಳವನ್ನು - ಚಿಂತೆಯನ್ನು ಹೋಗಲಾಡಿಸಿ, ಸಂತೈಸಿ ನಾವು ಸಾಲ್ವನ ಪಟ್ಟಣಕ್ಕೆ ನಡೆದೆವು.
ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ |
ದಾನವನ ಮಾಯಾಪುರದ ಸಂ
ಸ್ಥಾನ ವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ || ೨೬ ||
ಪದವಿಭಾಗ-ಅರ್ಥ: ಏನನು+ ಎಂಬೆನು ಸಾಲ್ವಪುರದ ನವೀನ ಮಾಯಾ-ರಚನೆಯನು ನಮಗೆ+ ಆನಲು(ಎದುರಿಸು)+ ಅಸದಳವು(ಅಸಾಧ್ಯ)+ ಉಳಿದ ಗೀರ್ವಾಣರಿಗೆ (ದೇವತೆಗಳಿಗೆ) ಗೋಚರವೆ? ದಾನವನ ಮಾಯಾಪುರದ ಸಂಸ್ಥಾನ(ರಾಜ್ಯ), ವರ್ಮವನು(ಕವಚ; ಗುಟ್ಟು, ಮರ್ಮ, ರಹಸ್ಯ)+ ಅರಿದು(ತಿಳಿದು) ಶರ ಸಂಧಾನದಲಿ ಸಂಹರಿಸಿದೆವು ಸಾಲ್ವ+ ಆದಿ ರಿಪುಭಟರ.
ಅರ್ಥ:ಕೃಷ್ಣನು ಮುಂದುವರಿದು,'ತಂಗಿ ದ್ರೌಪದೀ ಏನನ್ನು ಹೇಳಲಿ ಸಾಲ್ವನ ಪುರದ ನವೀನ ಮಾಯಾ ರಚನೆಯನ್ನು. ನಮಗೇ ಎದುರಿಸಲು ಅಸಾಧ್ಯವಾಗಿತ್ತು. ಹೀಗಿರುವಾಗ ಉಳಿದ ದೇವತೆಗಳಿಗೆ ಅವರನ್ನು ಎದುರಿಸುವ ಉಪಾಯ ಗೋಚರವೆ? ಅವರಿಗೂ ಅಸಾಧ್ಯವಾಗುವಂತಿರುವ ಮಾನಗರಿ ಅದು. ಆ ದಾನವ ಸಾಲ್ವನ ಮಾಯಾಪುರ ರಾಜ್ಯದ ರಹಸ್ಯವನ್ನು ಅರಿತುಕೊಂಡು, ಧನುರ್ವಿದ್ಯೆಯ ಶರ ಸಂಧಾನದಿಂದ ಶತ್ರು ಸಾಲ್ವನನ್ನೂ ಅವನ ಕಡೆಯವರನ್ನೂ ಸಂಹರಿಸಿದೆವು,' ಎಂದನು.
ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ |
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ || ೨೭ ||
ಪದವಿಭಾಗ-ಅರ್ಥ:ಅತ್ತಲು+ ಆ ಕೋಳಾಹಳದಲಿ+ ಇರಲು+ ಇತ್ತಲು+ ಆದುದು ಜೂಜು, ನಿಮ್ಮ ವಿಪತ್ತು ಕಂಡುದು, ತೆರಹ(ತೆರಪು? ವಿಶ್ರಾಂತಿ ಸಮಯ) ತಪ್ಪಿಸಿ ನಮ್ಮ ಸುಳಿವುಗಳ, ಇತ್ತಲು+ ಆವಿರೆ ಮೇಣು ದೋರಕಿಯತ್ತಲು+ ಇರೆ ನೀವು+ ಅಡವಿವೊಕ್ಕರೆ, ಹೆತ್ತಳೋ ದೇವಕಿ ಮಗನನು+ ಎಂದನು ಮುರಧ್ವಂಸಿ.
ಅರ್ಥ:ಕೃಷ್ಣನು ದ್ರೌಪದಿಯನ್ನು ಕುರಿತು,'ಅತ್ತ ಸಾಲ್ವನ ದೇಶದಲ್ಲಿ ಆ ಕೋಲಾಹಲದ ಯುದ್ಧದಲ್ಲಿ ನಾವು ತೊಡಗಿರುವಾಗ, ಇತ್ತ ಹಸ್ತಿನಾವತಿಯಲ್ಲಿ ಜೂಜು ಪ್ರಸಂಗ ಆಯಿತು. ಹೀಗೆ ನನ್ನ ವಿಶ್ರಾಂತಿ ಸಮಯವನ್ನೂ, ನಮಗೆ ಸುಳಿವು ಕೊಡುವುದನ್ನೂ ತಪ್ಪಿಸಿ, ನಿಮ್ಮ ಜೂಜಿನ ಸೋಲಿನ ವಿಪತ್ತು ಸಂಭವಿಸಿತು. ಹೀಗೆ ಇತ್ತ ಸಾಲ್ವನೊಡನೆ ಯುದ್ಧಮಾಡುತ್ತ ನಾವು ಇರಲು, ಮತ್ತೆ ನಾವಿಲ್ಲದ ದ್ವಾರಕಾನಗರ ಅತ್ತ ಶಾಂತವಾಗಿ ಇರಲು, ನೀವು ಅಡವಿಯನ್ನು ಹೊಕ್ಕರೆ ನಾನುನಿಮ್ಮ ಬಳಿಗೆ ಬಾರದಂತೆ ಆಯಿತು. ಏನಾದರಾಗಲಿ ಕಷ್ಟದಲ್ಲಿರವ ಬಂದುಗಳ ಸಹಾಯಕ್ಕೆ ಹೋಗಿ ಸಹಾಯ ಮಾಡಲಾರದ ಎಂಥ ಮಗನನ್ನು ದೇವಕಿ ಹೆತ್ತಳೋ!'ಎಂದನು.

ಕೃಷ್ಣನು ದ್ರೌಪದಿಯನ್ನು ಸಂತೈಸಿ, ಮುಂದಿನ ವ್ಯವಸ್ಥೆಮಾಡಿದನು[ಸಂಪಾದಿಸಿ]

ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ |
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ || ೨೯ ||
ಪದವಿಭಾಗ-ಅರ್ಥ: ಮಗನ ಕರೆದರೆ ಯಮನ ದೂತರ ತಗುಳುವಂದು(ಅಟ್ಟು,) ಸಮೀಪವರ್ತಿಯೆನು+ ಅಗಧರ(ನಗ- ಬೆಟ್ಟ; ಬೆಟ್ಟವನ್ನು ಹೊತ್ತವನು) ಶ್ರೀಕಾಂತ ಸಲಹೆನೆ ಮುನಿ ಕುಮಾರಕನ ಉಗುಳಿಚಿದೆಲಾ(ಹೊರಹಾಕು) ಮೃತ್ಯುವಿನ ತಾಳಿಗೆಯೊಳು(ಪಾತ್ರೆ, ಬಾಯಿ)+ ಅಂದು ಸಮೀಪವರ್ತಿಯೆ(ಆಪ್ತ) ಜಗದ+ ಉದರ ನೀ ಜಾಣನು+ಅಹೆ+ ಯೆಂದಳು ಸರೋಜಮುಖಿ
ಅರ್ಥ:ದ್ರೌಪದಿಯು, 'ಎಂಥ ಮಗನನ್ನು ಹೆತ್ತಳೋ ದೇವಕಿ,'ಎಂದ ಕೃಷ್ಣನಿಗೆ,'ಹಿಂದೆ ಅಜಾಮಿಳನು ಸಾಯುವಾಗ ಮಗನನ್ನು 'ನಾರಾಯಣ' ಎಂದು ಕರೆದರೆ, ನೀನು ಬಂದು ಯಮನ ದೂತರನ್ನು ಓಡಿಸಿ ಅವನನ್ನು ಕಾಪಾದಿದೆ. ಇಂದ್ರನಿಂದ ಗೋವುಗಳನ್ನೂ ಗೋಪಾಲಕರನ್ನೂ ರಕ್ಷಿಸಲು ಬೆಟ್ಟವನ್ನು ಹೊತ್ತೆ. ಹಿಂದೆ ಶ್ರೀಕಾಂತ ಸಲಹು ಎನ್ನಲು, ಗುರು ಸಂದೀಪಿನಿಯ ಪತ್ನಿಯು ಮರಣಿಸಿದ ಮಗನನ್ನು ಗುರುದಕ್ಷಿಣೆಯಾಗಿ ಕರೆತಂದು ಕೊಡು,ಎಂದು ಕೇಳಿದರೆ ಯಮನ ದೂತರನ್ನು ಓಡಿಸಿ ಮಗನನ್ನು ತಂದು ಕೊಟ್ಟು ಆಪ್ತನಾದೆ. ತಾಯಿ ಯಶೋದೆಗೆ ಮಣ್ಣು ತಿಂದ ಬಾಯಿ ತೆರೆದು ಹೊಟ್ಟೆಯಲ್ಲಿರುವ ಜಗತ್ತನ್ನು ತೋರಿಸಿದ ಜಗದುದರ ನೀನು ಬಹಳ ಜಾಣನಿರುವೆ,' ಎಂದಳು.
ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ |
ವಾಯುತನುಜನ ಕೈಯಲೇ ನಿ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ || ೩೦ ||
ಪದವಿಭಾಗ-ಅರ್ಥ: ಆಯಿತು+ ಏಳೌ ತಂಗಿ ನೀ ಪಿರಿದು(ಬಹಳ)+ ಆಯಸವನು(ಕಷ್ಟ)+ ಅನುಭವಿಸಲು+ ಉದಿಸಿದೆ, ರಾಯನಾಡಿದ ಭಾಷೆ ಸಲಲಿ, ವನಪ್ರವಾಸದಲಿ ವಾಯುತನುಜನ ಕೈಯಲೇ ನಿನ್ನ+ ಆಯತಿಕೆಯು(ಪ್ರಭಾವ, ಘನತೆ)+ ಅಹುದು+ ಆ ಪ್ರತಿಜ್ಞೆಗೆ ತಾಯೆ ತಾ(ತಾನು) ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ(ಭರವಸೆ).
ಅರ್ಥ:ಕೃಷ್ಣನು ಕೈಮುಗಿದು ತನ್ನ ಕಾಲಬುಡದಲ್ಲಿ ಇದ್ದ ದ್ರೌಪದಿಗೆ,'ಆಯಿತು ತಂಗಿ ಏಳಮ್ಮಾ, ನೀನು ಬಹಳ ಕಷ್ಟವನ್ನು ಅನುಭವಿಸಲು ಹುಟ್ಟಿದೆ. ಧರ್ಮರಾಯನು ಆಡಿದ ಭಾಷೆ ವನಪ್ರವಾಸದಲ್ಲಿ ಸಲ್ಲಲಿ; ನಂತರ ವಾಯುತನುಜ ಭೀಮನ ಕೈಯಿಂದಲೇ ನಿನ್ನ ವಚನದ ಘನತೆಯು ನೆರವೇರುವುದು. ಆ ನಿನ್ನ ಪ್ರತಿಜ್ಞೆಗೆ ತಾಯೆ ತಾನು ಹೊಣೆಯೆಂದು ಕೃಷ್ಣನು ದ್ರೌಪದಿಗೆ ಭರವಸೆ ಕೊಟ್ಟನು.
ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳ ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ |
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ || ೩೧ ||
ಪದವಿಭಾಗ-ಅರ್ಥ: ಸಂತವಿಟ್ಟನು ಬೇರೆ ಬೇರೆ ಕೃತಾಂತಸುತ(ಯಮನ ಮಗ- ಧರ್ಮಜ) ಭೀಮಾದಿಗಳ ಮುನಿಸಂತತಿಯ ಮನ್ನಿಸಿದನು+ ಅವರವರ+ ಉಚಿತ ವೃತ್ತಿಯಲಿ ಎಂತು ಹದಿಮೂರು+ ಅಬುದವು+ ಈ ನೃಪಸಂತತಿಗೆ ಸೌಹಾರ್ದವು+ ಅಕಟ ವನಾಂತರದೊಳೆಂದು+ ಅಸುರರಿಪು(ಕೃಷ್ಣ) ನುಡಿದನು ಯುಧಿಷ್ಠಿರಗೆ.
ಅರ್ಥ: ಕೃಷ್ಣನು ಬೇರೆ ಬೇರೆಯಾಗಿ ಪ್ರಯೊಬ್ಬರಿಗೂ, ಧರ್ಮಜ) ಭೀಮ ಮೊದಲಾದವರಿಗೆ ಸಂತೈಸಿದನು; ಮುನಿ ಸಮೂಹಕ್ಕೆ ಮನ್ನಿಸಿದನು; ಅವರವರ ಯೋಗ್ಯತೆಗೆ ತಕ್ಕಂತೆ ಉಚಿತ ರೀತಿಯಲ್ಲಿ ಉಪಚರಿಸಿದನು. ಯುಧಿಷ್ಠಿರನಿಗೆ ಒಟ್ಟು ಹದಿಮೂರು ಅಬ್ದವಾದ ಈ ನೃಪಸಂತತಿಗೆ ಸ್ನೇಹ ಸೌಹಾರ್ದವು ಅಕಟ ವನಾಂತರದಲ್ಲಿ ಸಹ ಇರುವುದಲ್ಲಾ, ಎಂದು ಕೃಷ್ಣನು ಹೇಳಿದನು.
ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ ||
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳೆಂದ || ೩೨ ||
ಪದವಿಭಾಗ-ಅರ್ಥ: ಕಳುಹುವುದು ಸೌಭದ್ರೆಯನು ನಿಜ(ತಮ್ಮ)ಲಲನೆಯರನು+ ಅವರವರ ತಾಯ್ವನೆಗಳಿಗೆ, ಬೀಳ್ಕೊಡು(ಕಳುಹಿಸು) ನಿಮ್ಮ ಪಂಚದ್ರೌಪದೀಸುತರ ಹಳುವ ದಾಟಲಿ ದ್ರುಪದ ನಂದನೆಯು+ ಅಳಲ(ಅಳಲು- ದುಃಖ) ಶಿಖಿಗೆ(ಬೆಂಕಿ)+ ಇಂಧನವಲೇ(ಉರುವಲು) ಕುರುಕುಲದ ಕರಡದ(ಕರಡವೆಂಬ ಹುಲ್ಲು) ಬಣಬೆ(ಒಟ್ಟಿದ ರಾಶಿ) ಕಾದು(ಕಾಯಿಸು-ಕ್ರಿ= ಬಿಸಿಮಾಡು ಕಾದು- ಬಿಸಿಯಾಗಿ )+ ಉರುಹುವುದು ಕೇಳೆಂದ.
ಅರ್ಥ:ಕೃಷ್ನನು ಪಾಂಡವರನ್ನು ಕುರಿತು, ಸುಭದ್ರೆಯನ್ನು ಮತ್ತು ಇತರರು ತಮ್ಮಪತ್ನಿಯರನ್ನು ಅವರವರ ತಾಯಿಯ ಮನೆಗೆ ಕಳಿಸುವುದು ಸೂಕ್ತ. ಹಾಗೆಯೇ ನಿಮ್ಮ ಪಂಚದ್ರೌಪದೀಸುತರನ್ನು (ಉಪಪಾಂಡವನ್ನು) ಪಾಂಚಾಲ ನಗರಕ್ಕೆ ಕಳುಹಿಸಿ. ದ್ರುಪದ ನಂದನೆ ದ್ರೌಪದಿಯು ಮಾತ್ರಾ ಹಳುವ/ ಕಾಡಿನ ವಾಸದ ಅವಧಿಯನ್ನು ಪತಿಗಳೊಂದಿಗೆ ದಾಟಿ ಮುಗಿಸಲಿ. ಅವಳ ದುಃಖದ ಬೆಂಕಿಗೆ ಈ ವನವಾಸದ ಕಷ್ಟದ ಬಾಳು ಇಂಧನವಲ್ಲವೇ! ಕುರುಕುಲದ ಕರಡವೆಂಬ ಹುಲ್ಲಿನ ಬಣಬೆಯು ಅವಳ ದುಃಖದ ಬೆಂಕಿಯಿಂದ ಕಾದು ಸುಡುವುದು.' ಕೇಳು ಎಂದ.
ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ (ಪಾ> ಕಳುಹಿದನಾ) ಪಾಂಚಾಲ ನೃಪನೊಡನೆ |
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ || ೩೩ ||
ಪದವಿಭಾಗ-ಅರ್ಥ: ಎಂದು ಕಳುಹಿ ಸುಭದ್ರೆಯನು ನರನಂದನನ(ಅಭಿಮನ್ಯವನ್ನು) ಬೀಳ್ಕೊಡಿಸಿದನು ನೃಪನಂದನರ(ದ್ರೌಪದೀ ಮಕ್ಕಳಾದ ಉಪ ಪಾಡವರ) ಕಳುಹಿಸಿದನಾ (ಪಾ: ಕಳುಹಿದನಾ)+ ಆ ಪಾಂಚಾಲ ನೃಪನೊಡನೆ ಇಂದುವದನೆಯ ಸಂತವಿಟ್ಟು ಮುಕುಂದ ರಥವೇರಿದನು ಕುಂತೀನಂದನರು ಕಳುಹುತ್ತ ಬಂದರು ಕಮಲಲೋಚನನ(ಕೃಷ್ಣನ).
ಅರ್ಥ:ದ್ರೌಪದಿ ಪಾಂವರೊದನೆ ಕಾಡಿನಲ್ಲಿ ಕಳೆಯಲಿ ಎಂದು ಕೃಷ್ಣನು ಕಳುಹಿ ಸುಭದ್ರೆಯನ್ನು ಮತ್ತು ಅಭಿಮನ್ಯವನ್ನು ದ್ವಾರಕೆಗೆ ಕಳಿಸಿದನು. ದ್ರೌಪದೀ ಮಕ್ಕಳಾದ ಉಪ ಪಾಡವರನ್ನು ಆ ಪಾಂಚಾಲ ರಾಜರೊಡನೆ ಕಳಿಸಿದನು. ಇಂದುವದನೆ ದ್ರೌಪದಿಯನ್ನು ಸಂತಯಿಸಿ ಮುಕುಂದ ಕೃಷ್ನನು ರಥವನ್ನು ಹತ್ತಿ ದ್ಕುಂವಾರಕೆಗೆ ಹೊರಟನು. ಕುಂತೀನಂದನರಾದ ಪಾಂಡವರು ಕಮಲಲೋಚನನ ಕೃಷ್ಣನನ್ನು ಕಳುಹುತ್ತ ಸ್ವಲ್ಪದೂರ ಬಂದರು.
ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ |
ಬೀಳುಕೊಟ್ಟರು ಧೃಷ್ಟಕೇತು ನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ || ೩೪ ||
ಪದವಿಭಾಗ-ಅರ್ಥ: ಬೀಳುಗೊಂಡರು ಕೃಷ್ಣನನು, ಪಾಂಚಾಲಪತಿಯನು, ಪಂಚ ಕೇಕಯಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ ಬೀಳುಕೊಟ್ಟರು, ಧೃಷ್ಟಕೇತು ನೃಪಾಲ ಮೊದಲಾದಖಿಳ ಧರಣೀಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ.
ಅರ್ಥ:ಪಾಂಡವರು ಕೃಷ್ಣನ್ನೂ ಯಾದವಸಮೂಹವನ್ನೂ ಸ್ವಲ್ಪ ದೂರದವರೆಗೆ ಅವರ ಜೊತೆ ಹೋಗಿ ದ್ವಾರಕೆಗೆ ಬೀಳಕೊಟ್ಟರು. ಹಾಗೆಯೇ ನಂತರ ಪಾಂಚಾಲಪತಿ ದ್ರುಪದನನ್ನೂ ಅವರ ಸಂಗಡಿಗರನ್ನೂ ಮಕ್ಕಳು ಉಪಪಾಂಡವರ ಜೊತೆಮಾಡಿ ಕಳುಹಿಸಿಕೊಟ್ಟರು. ಪಂಚ ಕೇಕಯರು ಚೋಳ ಕೇರಳರು, ಪಾಂಡ್ಯರು ಕುಂತೀಭೋಜರು ಮತ್ತು ಅವರ ಮಕ್ಕಳನ್ನೂ ಬೀಳ್ಕೊಟ್ಟರು. ಹೀಗೆ ಬೀಳ್ಕೊಂಡ ಧೃಷ್ಟಕೇತು ನೃಪಾಲ ಮೊದಲಾದ ಎಲ್ಲಾ ಧರಣೀಪಾಲಕರು- ರಾಜರು ಪಾಂಡವರ ಕಷ್ಟದ ಸ್ಥಿತಿಯನ್ನು ನೆನೆದು ದುಗುಡದಿಂದ- ಬೇಸರದಿಂದ ತಮ್ಮ ನಗರಗಳನ್ನು ಪ್ರವೇಶಮಾದಿದರು.
ಸಂತವಿಸಿ ಪಾಂಡುವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ |
ಅಂತಕಾಂತಕ ನಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ || ೩೫ ||
ಪದವಿಭಾಗ-ಅರ್ಥ: ಸಂತವಿಸಿ ಪಾಂಡುವರನು+ ಆ ಮುನಿಸಂತತಿಯ ಮನ್ನಿಸಿ ಮಹೀಭಾರಾಂತರವ(ಮಹಿ= ಭೂಮಿ+ ಭಾರ+ ಅಂತರ) ನಿಶ್ಚಯಿಸಿ ಭಾರತ ಪಾರಿಶೇಷಕವ(ಪಾರಿತೋಷ- ಉಡುಗೊರೆ,ತೆಗೆದುಕೊಳ್ಳುವುದು; ಪಾರಿಶೇಷ= ಕೊಡುವುದು, ನಿಗ್ರಹ ) ಅಂತಕನ+ ಅಂತಕ ನಲವು(ಸಂತಸ) ಮಿಗೆ(ಹೆಚ್ಚು) ಜಗದಂತರಂಗ+ ಸ್ಥಾಯಿ(ಶಾಶ್ವತನು) ಲಕ್ಷ್ಮೀಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ.
ಅರ್ಥ: ಹೀಗೆ ಪಾಂಡುವರನ್ನು ಸಂತೈಸಿ ಅಲ್ಲಿದ್ದ ಆ ಮುನಿಸಂತತಿಯನ್ನು ಗೌರವದಿಂದ ಮನ್ನಿಸಿ, ಭೂಮಿಯ ಭಾರ ವಿಮೋಚನೆಯನ್ನು ನಿಶ್ಚಯಿಸಿ, ಭಾರತದ ದುಷ್ಟ ನಿಗ್ರಹವನ್ನು ನಿಶ್ಚಯಿಸಿ ಮೃತ್ಯುವನ್ನು ಗೆದ್ದಿರುವ- ಶಾಶ್ವತನಾಗಿರುವ ಜಗದಂತರಂಗನೂ ಸ್ಥಾಯಿಯೂ ಆದ ಲಕ್ಷ್ಮೀಕಾಂತನು ಸಂತಸವು ತುಂಬಿರಲು ಕಾಮ್ಯಕವನದಿಂದ ಬಿಜಯಂಗೈದು ದ್ವಾರಕಾಪುರಿಯನ್ನು ಹೊಕ್ಕನು- ಪ್ರವೇಶಮಾಡಿದನು.
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು
  5. ಸಿರಿಗನ್ನಡ ಅರ್ಥಕೋಶ