ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)

ವಿಕಿಸೋರ್ಸ್ ಇಂದ
Jump to navigation Jump to search
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: 8 ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಭಯಭರಿತ ಭಕ್ತಿಯಲಿ ಕಾಮಾ
ರಿಯನು ಗೆಲಿದನರ್ಜುನನು ಹರ ವೈ
ರಿಯನು ಗೆಲಿದನು ಧೈರ್ಯದಿ೦ದೂರ್ವಶಿಯ ಶಾಪದಲಿ|
ಪದವಿಭಾಗ-ಅರ್ಥ:ಭಯಭರಿತ ಭಕ್ತಿಯಲಿ ಕಾಮಾರಿಯನು(ಶಿವನನ್ನು) ಗೆಲಿದ+ನ+ ಅರ್ಜುನನು ಹರವೈರಿಯನು(ಕಾಮನನ್ನು - ಮನ್ಮಥನನ್ನು) ಗೆಲಿದನು ಧೈರ್ಯದಿ೦ದ+ ಊರ್ವಶಿಯ ಶಾಪದಲಿ.
ಅರ್ಥ:ಭಯಭರಿತ ಭಕ್ತಿಯನ್ನು ತೋರಿ ಕಾಮಾರಿಯಾದ ಶಿವನನ್ನು ಗೆದ್ದ ಅರ್ಜುನನು, ಹರವೈರಿಯಾದ ಮನ್ಮಥನನ್ನು ಧೈರ್ಯದಿ೦ದ ಗೆದ್ದನು. ಅದರಲ್ಲಿ ಊರ್ವಶಿಯ ಶಾಪವನ್ನು ಪಡೆದನು.[೧][೨] [೩] [೪]

ಬಳ್ಳಿ ಮಿ೦ಚಿನ ಊರ್ವಸಿ ಬ೦ದಳು ಅರ್ಜುನನ ಬಳಿಗೆ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲ ಪಾರ್ಥನ ಮೈಯ ಹುಲು ರೋ
ಮಾಳಿ ಹರಿಯದು ಮನುಮಥನ ಖ೦ಡೆಯದ ಗಾಯದಲಿ |
ಬೀಳುಕೊಟ್ಟಳು ಚಿತ್ರಸೇನನ
ನಾ ಲತಾ೦ಗಿ ಸಹಸ್ರ ಸ೦ಖ್ಯೆಯ
ಖೇಳ ಮೇಳದ ಸತಿಯರನು ಕರಸಿದಳು ಹರುಷದಲಿ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ದರಿತ್ರೀಪಾಲ ಪಾರ್ಥನ ಮೈಯ ಹುಲು ರೋಮ+ ಆಳಿ(ಸಮೂಹ) ಹರಿಯದು ಮನುಮಥನ ಖ೦ಡೆಯದ ಗಾಯದಲಿ, ಬೀಳುಕೊಟ್ಟಳು ಚಿತ್ರಸೇನನನು; ಆ ಲತಾ೦ಗಿ ಸಹಸ್ರ ಸ೦ಖ್ಯೆಯಖೇಳ ಮೇಳದ ಸತಿಯರನು ಕರಸಿದಳು ಹರುಷದಲಿ
ಅರ್ಥ:ವೈಶಂಪಾಯನ ಮುನಿ ಹೇಳಿದ,'ಜನಮೇಜಯ ದರಿತ್ರೀಪಾಲನೇ ಕೇಳು, 'ಪಾರ್ಥನ ದೇಹದ ಮೇಲಿನ ಹುಲು ರೋಮಗಳು ಕೂಡಾ ಮನ್ಮಥನ ಕತ್ತಿಯ ಗಾಯದಲ್ಲಿ ಹರಿಯುವುದಿಲ್ಲ. ಊರ್ವಸಿಯು ಚಿತ್ರಸೇನನನ್ನು ಕಳಿಸಿಕೊಟ್ಟಳು. ಆ ಲತಾ೦ಗಿ ಊರ್ವಸಿ ಬಹಳ ಹರ್ಷದಿಂದ ಸಹಸ್ರ ಸ೦ಖ್ಯೆಯ ನೃತ್ಯ ಮೇಳದ ದೇವಕನ್ಯೆಯರನ್ನು ಕರಸಿದಳು.
ವನಜ ಲೋಚನೆ ಮಾಡಿದಳು ಮ
ಜ್ಜನವನಮಳ ದೂಕೂಲ ಪರಿ ಮ೦
ಡಲದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ |
ತನತನಗೆ ಭರಣಿಗಳಲನುಲೇ
ಪನವ ತ೦ದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ || ೨ ||
ಪದವಿಭಾಗ-ಅರ್ಥ: ವನಜ ಲೋಚನೆ(ಕಮಲಲೋಚನೆ- ವಿಶಾಲ ಕಣ್ಣಿನವಳು) ಮಾಡಿದಳು ಮಜ್ಜನವನು+ ಅಮಳ(ಶುದ್ಧ) ದೂಕೂಲ ಪರಿ ಮ೦ಡಲದಲಿ+ ಎಸೆದಳು(ಶೋಭಿಸಿದಳು) ವಿವಿಧ ರತ್ನಾಭರಣ ಶೋಭೆಯಲಿ, ತನತನಗೆ ಭರಣಿಗಳಲಿ+ ಅನುಲೇಪನವ ತ೦ದರು, ವಿಳಸದ+ ಅಧಿವಾಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ(ಚಂದ ತಲೆಕೂದಲನ್ನು.)
ಅರ್ಥ:ಕಮಲಲೋಚನೆಯಾದ ಊರ್ವಸಿ ಚೆನ್ನಾಗಿ ಸ್ನಾನ ಮಾಡಿದಳು, ಅವಳು ಉತ್ತಮ ದೂಕೂಲವನ್ನು ಉಟ್ಟು ಪರಿಪೂರ್ಣವಾಗಿ ಶೋಭಿಸಿದಳು. ನಂತರ ವಿವಿಧ ರತ್ನಾಭರಣನ್ನು ಧರಿಸಿ ಆ ಶೋಭೆಯಲ್ಲಿರವ ಊರ್ವಸಿಗೆ ದಾಸಿಯರು ತಾವು ತಾವೇ ಭರಣಿಗಳಲ್ಲಿ ಸುಗಂಧದ ಅನುಲೇಪನವನ್ನು ತ೦ದರು. ವಿಲಾಸದಲ್ಲಿ ಉತ್ತಮ ಹೆಚ್ಚಿನ ಪರಿಮಳದ ಕುಸುಮದ ಮೊಗ್ಗೆಯಿಂದ ಅವಳ ಸಿರಿಮುಡಿಯನ್ನು ಅಲಂಕರಿಸಿದರು.
ತಿಗುರಗೆಲಿದಳು ತಿಲಕವನು
ತ್ತೆತ್ತಿಗರಲ೦ಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ |
ಉಗಿದೊರೆಯ ಕೂರಲಗು ಧಾರೆಯ
ಮಿಗೆಹಿಡಿದ ಖ೦ಡೆಯವೊ ಕಾಮನ
ಹಗೆಗೆ ಹುಟ್ಟಿದ ದೂಮಕೇತುವೊ ರೂಫು ಸುರಸತಿಯ || ೩ ||
ಪದವಿಭಾಗ-ಅರ್ಥ:ತಿಗುರ(ಪರಿಮಳದ್ರವ್ಯಗಳನ್ನು ಲೇಪಿಸು, ಪೂಸು) ಗೆಲಿದಳು, ತಿಲಕವನು ತ್ತೆತ್ತಿಗರು+ ಅಲ೦ಕರಿಸಿದರು, ಹೊಳಹಿನ ಹೊಗರ(ಪ್ರಭೆ) ಹೊಸ ಜವ್ವನದ ಜೋಡಿಯ ಜಾಡಿ(ಹೆಚ್ಚಳ, ಆಧಿಕ್ಯ) ಯಿ+ ಇಮ್ಮಡಿಸೆ ಉಗಿದ+ ಒರೆಯ ಕೂರಲಗು ಧಾರೆಯ, ಮಿಗೆಹಿಡಿದ ಖ೦ಡೆಯವೊ(ಖಡ್ಗ), ಕಾಮನ ಹಗೆಗೆ(ಶತ್ರುವಿಗೆ) ಹುಟ್ಟಿದ ದೂಮಕೇತುವೊ ರೂಫು ಸುರಸತಿಯ,
ಅರ್ಥ:ಪರಿಮಳದ್ರವ್ಯಗಳನ್ನು ಲೇಪಿಸಿಕೊಂಡು ಗೆಲುವಾದಳು; ಹಣೆಗೆ ತಿಲಕವನ್ನು ದಾಸಿಯರು ಅಲ೦ಕರಿಸಿದರು; ಅವಳ ಹೊಳಹಿನ ಪ್ರಭೆಯು ಹೊಸ ಯವ್ವನದ ಜೋಡಿಯ ಹೆಚ್ಚಳವು ಇಮ್ಮಡಿಸಲು, ಅವಳು ಒರೆಯಿಂದ ಉಗಿದ ಕಾಮನ ಕೂರಲಗು ಧಾರೆಯ ಎತ್ತಿ ಹಿಡಿದ ಖಡ್ಗದಂತೆ ಇದ್ದಳು. ದೇವಕನ್ಯೆಯ ಆ ರೂಪ ಶತ್ರುವನ್ನು ನಾಶಮಾಡಲು ಹುಟ್ಟಿದ ದೂಮಕೇತುವೊ ಎಂಬತಿತ್ತು.(ಅಷ್ಟು ಪ್ರಕಾಶಮಾನವಾಗಿತ್ತು)
ಪರಿಮಳದ ಪುತ್ಥಳಿಯೋ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರು ಫಲವೊ
ಸ್ಮರನವಿಜಯದ್ವಜವೊಮನ್ಮಥ
ಪರಮ ಶಾಸ್ತ್ರದ ಮೂಲ ಮ೦ತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆ೦ದ || ೪ ||
ಪದವಿಭಾಗ-ಅರ್ಥ: ಪರಿಮಳದ ಪುತ್ಥಳಿಯೋ(ಗೊಂಬೆ), ಚೆಲುವಿನ ಕರುವಿನ+ ಎರಕವೊ, ವಿಟರ ಪುಣ್ಯದ ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರು ಫಲವೊ, ಸ್ಮರನವಿಜಯದ್ವಜವೊ, ಮನ್ಮಥ ಪರಮ ಶಾಸ್ತ್ರದ ಮೂಲ ಮ೦ತ್ರವೊ, ಸುರಸತಿಯರ(ದೇವಕನ್ಯೆಯರ)+ ಅಧಿ ದೇವತೆಯೊ ವರ್ಣಿಸುವೊಡೆ+ ಅರಿದೆ೦ದ
ಅರ್ಥ:ಹೀಗೆ ಸಿಂಗರಿಸಿಕೊಂಡ ಊರ್ವಸಿಯು, 'ಪರಿಮಳದ ಪುತ್ಥಳಿಯೋ, ಚೆಲುವೆಂಬ ಕರುವಿನ ಎರಕವೊ, ವಿಟರ ಪುಣ್ಯದ ಪರಿಣತೆಯೊ, ಕಾಮುಕರ ಭಾಗ್ಯದ ಕಲ್ಪತರು ಫಲವೊ, ಸ್ಮರನ ವಿಜಯದ್ವಜವೊ, ಮನ್ಮಥ ಪರಮ ಶಾಸ್ತ್ರದ ಮೂಲ ಮ೦ತ್ರವೊ, ದೇವಕನ್ಯೆಯರ ಅಧಿ ದೇವತೆಯೊ ವರ್ಣಿಸುವುದು ತನಗೆ ತಿಳಿಯದು ಎಂದ.
ಲೋಕವಶ್ಯದ ತಿಲಕವೊ ಜಗ
ದೇಕ ರತ್ನವೊ ವಿಗಡ ಮುನಿ ಚಿ
ತ್ತಾಕರುಷಣದ ಮ೦ತ್ರವಾದವೊ ಋಷಿತಪಃಫಲವೊ |
ಲೋಕಸೌ೦ದರ್ಯೈಕ ಸರ್ಗವೊ
ನಾಕಸುಖ ಸಾಕಾರವೊ ರೂ
ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ || ೫ ||
ಪದವಿಭಾಗ-ಅರ್ಥ: ಲೋಕ- ವಶ್ಯದ ತಿಲಕವೊ, ಜಗದ+ ಏಕ ರತ್ನವೊ, ವಿಗಡ(ಗಟ್ಟಿಮನಸ್ಸಿನ) ಮುನಿ ಚಿತ್ತಾಕರುಷಣದ ಮ೦ತ್ರವಾದವೊ, ಋಷಿತಪಃ+ಫಲವೊ; ಲೋಕಸೌ೦ದರ್ಯ+ ಏಕ ಸರ್ಗವೊ; ನಾಕಸುಖ ಸಾಕಾರವೊ; ರೂಪೈಕ ತಾಣವೊ(ತಾಣ- ಸ್ಥಳ); ಚಿತ್ರವಾಯ್ತು+ ಊರ್ವಶಿಯ ಬರವಿನಲಿ.
ಅರ್ಥ:ಊರ್ವಸಿಯ ಸೌಂದರ್ಯ ನೋಡಲು,'ಲೋಕವನ್ನು ವಶಗೊಲಿಸುವ ತಿಲಕವೊ; ಜಗದ ಒಂದು ರತ್ನವೊ; ಗಟ್ಟಿಮನಸ್ಸಿನ ಮುನಿಯ ಚಿತ್ತವನ್ನು ಆಕರ್ಷಣದ ಮ೦ತ್ರವಾದವೊ; ಸ್ವರ್ಗವನ್ನು ಬಯಸಿ ಮಾಡಿದ ಋಷಿಯ ತಪಃಸ್ಸಿನ ಫಲವೊ; ಲೋಕಸೌ೦ದರ್ಯದ ಏಕ ಸ್ವರ್ಗವೊ; ನಾಕ- ಸ್ವರ್ಗ ಸುಖದ ಸಾಕಾರವೊ; ರೂಪವೆಲ್ಲವನ್ನೂ ಸೇರಿಸಿದ ಏಕತಾಣವೊ; ಊರ್ವಶಿಯ ಬರವಿನ್ನು ನೋಡಿದಾಗ ಅದು ಚಿತ್ರವಾಯ್ತು- ವಿಚತ್ರವೂ ಆಗಿತ್ತು.
ನೆರೆದರಬಲೆಯರ೦ಗವಟ್ಟದ
ಪರಿಮಳದ ಮುತ್ತಿಗೆಯ ತು೦ಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ |
ಪರಿಪರಿಯ ಹೊ೦ದೊಡಿಗೆಗಳ ಪರಿ
ಪರಿಗಳುಡುಗೆಯ ದೇಶಿ ಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ || ೬ ||
ಪದವಿಭಾಗ-ಅರ್ಥ:ನೆರೆದರು(ಒಟ್ಟು ಸೇರಿದರು.)+ ಅಬಲೆಯರು(ದೇವಕನ್ಯೆಯರು)+ ಅ೦ಗವಟ್ಟದ(ಹೊದೆಯುವ ಬಟ್ಟೆ ; ವಲ್ಲಿ ಮೈಕಟ್ಟು ಸೌಂದರ್ಯ) ಪರಿಮಳದ ಮುತ್ತಿಗೆಯ ತು೦ಬಿಯ(ಜೇನುಹುಳು) ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ ಪರಿಪರಿಯ ಹೊ೦ದೊಡಿಗೆಗಳ(ಹೊನ್ನಿನ ಉಡುಗೆಗಳ) ಪರಿಪರಿಗಳು+ ಉಡುಗೆಯ, ದೇಶಿ(ಹಳ್ಳಿ) ಮಿಗೆ ಪರಿಪರಿಯ ಮುಡಿಗಳ, ಮುಗುದೆಯರು(ಮುಗ್ದೆಯರು) ಬಳಸಿದರು ಬಾಲಕಿಯ(ಬಾಲಕಿ- ಹೆಣ್ಣು)- (ಊರ್ವಸಿಯ)
ಅರ್ಥ: ಊರ್ವಸಿಯನ್ನು ಅರ್ಜುನನ ಅರಮನೆಗೆ ಕಳಿಸಲು ದೇವಕನ್ಯೆಯರು ಒಟ್ಟು ಸೇರಿದರು. ಅವರ ಬಟ್ಟೆ, ಸೌಂದರ್ಯ ಮೈಕಟ್ಟುಗಳ ಪರಿಮಳದ ಮುತ್ತಿಗೆಯ, ತು೦ಬಿಯ ತೆರಳಿಕೆಯ-ಚಲನೆಯ- ವೇಗದಲ್ಲಿ ಚಲಿಸುವ ಕಣ್ಣುನೋಟವು ಕತ್ತಲೆಯನ್ನು ಕೆದರುವ ಕಣ್ಣ ಬೆಳಗುಗಳ ಸುಂದರಿಯರಿಂದ ಕೂಡಿತ್ತು. ಪರಿಪರಿಯ ಹೊನ್ನಿನ ಜರತಾರಿಯ ಉಡುಗೆಗಳ ಪರಿಪರಿ ಉಡುಗೆಗಳು, ದೇಶಿಯಕ್ರಮ ಮತ್ತೂಗ ಪರಿಪರಿಯ ತುರುಬು ಮೊದಲಾದ ಮುಡಿಗಳಿಂದ ಕೂಡಿದ ಮುಗುದೆಯರು ಊರ್ವಸಿಯನ್ನು ಬಳಸಿ ನಿಂತರು.
ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬ೦ಧ ಕಳಸದ ತಾಳವೃ೦ತಕದ |
ಮುಗದೆಯರು ಮನುಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದು
ಡಿಗೆಯ ಮೈಕಾ೦ತಿಗಳ ದುವಾಳಿಗಳ ಲಹರಿಯಲಿ || ೭ ||
ಪದವಿಭಾಗ-ಅರ್ಥ: ಹೆಗಲು ಹಡಪದ(ಹೆಗಲ ಚೀಲ-ಕನ್ನಡಿ ಅಲಂಕಾರದ ವಸ್ತುಗಳಿರುವ ಜಂಬದ ಚೀಲ- ವ್ಯಾನಿಟಿ ಬ್ಯಾಗು) ಹಿಡಿದ ಮುಕುರ+ ಆಳಿಗಳ(ಅನೇಕ) ಚಿಮ್ಮುವ ಸೀಗುರಿಯ(ಚಾಮರ), ಹಾವುಗೆಯ(ಚಪ್ಪಲಿ) ಹೇಮನಿಬ೦ಧ (ಚಿನ್ನದ ಕಟ್ಟಿನ) ಕಳಸದ, ತಾಳವೃ೦ತಕದ(ಕಿಣಿ ಕಿಣಿ ಸದ್ದುಮಾದುವ ಕಂಚಿನ ವಾದ್ಯ) ಮುಗದೆಯರು ಮನುಮಥನ ಮೊನೆಯಾಳುಗಳು(ಬಾಣಗಳು) ಮುಸುಕಿತು ಮಾನಿನಿಯ ದು+ ಉಡಿಗೆಯ ಮೈಕಾ೦ತಿಗಳ ದುವಾಳಿಗಳ(ರಭಸದ ನೆಡಿಗೆಯ) ಲಹರಿಯಲಿ
ಅರ್ಥ: ಹೆಗಲು ಚೀಲವನ್ನು ಹಾಕಿಕೊಂಡು, ಅನೇಕ ಕನ್ನಡಿ(ಕಳಸ) ಹಿಡಿದ ಚಿಮ್ಮುವ ಚಾಮರದೊಡನೆ, ಚಂದದ ಹಾವುಗೆಗಳನ್ನು ಮೆಟ್ಟಿಕೊಂಡು, ಚಿನ್ನದ ಕಟ್ಟಿನ ಕಳಸ ಹಿಡಿದ, ಕಿಣಿ ಕಿಣಿ ಸದ್ದುಮಾದುವ ಕಂಚಿನ ವಾದ್ಯ ಮಾಡುತ್ತಾ, ಮುಗ್ದೆಯರು ಮನ್ಮಥನ ಬಾಣಗಳಂತಿರುವ ಮೊನೆಯಾಳುಗಳಾದ ಮಾನಿನಿಯರ ಸಮೂಹ ಚಂದದ ಉಡಿಗೆಯ ಮೈಕಾ೦ತಿಗಳ ದೇವಕನ್ಯೆಯರು ರಭಸದ ನೆಡಿಗೆಯ ಲಹರಿಯಲ್ಲಿ (ಅರ್ಜುನನ ರಾಜಭವನವನ್ನು) ಮುತ್ತಿದರು.
ತುರಗಮೇಧದ ರಾಜಸೂಯದ
ವರ ಮಹಾಕ್ರತುಕಾರರೀಕೆಯ
ಚರಣದು೦ಗುಟ ತುದಿಯ ಕಾ೦ಬರೆ ಪೂತು ಫಲುಗುಣನ |
ಪರಮ ಪುಣ್ಯವದೇನು ತಾನಿ
ದ್ದರಮನೆಗೆ ಸತಿ ಬ೦ದಳೇನ
ಚ್ಚರಿ ಯೆನುತ ಹೊಗಳಿದರು ಮಾಗಧರಿ೦ದ್ರ ನ೦ದನನ || ೮ ||
ಪದವಿಭಾಗ-ಅರ್ಥ: ತುರಗಮೇಧದ(ಅಶ್ವಮೇಧ ಯಾಗ ಮಾಡಿದ) ರಾಜಸೂಯದವರ ಮಹಾಕ್ರತುಕಾರರು(ಮಹಾಯಾಗ, ಯಜ್ಞ)+ ಈಕೆಯ ಚರಣದ(ಪಾದದ)+ ಉ೦ಗುಟ ತುದಿಯ ಕಾ೦ಬರೆ? ಪೂತು ಫಲುಗುಣನ ಪರಮ ಪುಣ್ಯವು+ ಅದೇನು ತಾನಿದ್ದ+ ಅರಮನೆಗೆ ಸತಿ ಬ೦ದಳು+ ಏನಚ್ಚರಿ ಯೆನುತ ಹೊಗಳಿದರು ಮಾಗಧರು( ಹೊಗಳುಭಟರು)+ ಇ೦ದ್ರ ನ೦ದನನ.
ಅರ್ಥ:ಇಂದ್ರಲೋಕದ ಹೊಗಳುಭಟರು,' ಅಶ್ವಮೇಧ ಯಾಗಮಾಡಿದವರು, ರಾಜಸೂಯ ಯಾಗಮಾಡಿದವರು, ಈ ಬಗೆಯ ಮಹಾಯಾಗ ಯಜ್ಞ ಮಾಡಿದವರು ಈಕೆಯ ಪಾದದ ಉ೦ಗುಟ ತುದಿಯನ್ನು ಕಾಣಬಲ್ಲರೆ? ಇಲ್ಲ ಇಲ್ಲ! ಪೂತು- ಭೇಷ್! ಫಲ್ಗುಣನ ಪರಮ ಪುಣ್ಯವು ಅದೇನು ದೊಡ್ಡದೊ! ತಾನಿದ್ದ ಅರಮನೆಗೆ ಸತಿ ಊರ್ವಸಿ ಬ೦ದಳು. ಏನು ಅಚ್ಚರಿ ಇದು,' ಎನ್ನುತ್ತ ಇ೦ದ್ರ ನ೦ದನನ್ನು ಹೊಗಳಿದರು.
ದರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು |
ವರುಣಸೂನು ಜಯ೦ತ ನಳ
ಕೂಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ || ೯ ||
ಪದವಿಭಾಗ-ಅರ್ಥ: ದರಣಿಪತಿ ಕೇಳು+ ಅವರ ತೊತ್ತಿರ ಹೊರಗೆಲಸದವದಿರ ಪಸಾಯಿತೆಯರಿಗೆ(ಉಡಗೆತೊಡಿಗೆ ಇಟ್ಟುಕೊಳ್ಳವ ಸೇವಕಿ) ಪಡಿಗವ(ಬಟ್ಟಲು ಉಗುಳುವ ಪೀಕದಾನಿ) ನೀಡಸಲ್ಲರು ಸೋಮಯಾಜಿಗಳು, ವರುಣಸೂನು, ಜಯ೦ತ, ನಳಕೂಬರರು, ಸಮಯವನೊಮ್ಮೆ ಕಾಣದೆ ವರುಷ ವೋಲೈಸುವರು ಸೌಧದ ದಾರವಟ್ಟದಲಿ(ಹೆಬ್ಬಾಗಿಲು, ಗೋಪುರ ೨ ಹೊಸ್ತಿಲು ೩ ಕೈಸಾಲೆ, ಮೊಗಸಾಲೆ).
ಅರ್ಥ:ಮುನಿ ಹೇಳಿದ ರಾಜನೇ ಕೇಳು, ಊರ್ವಸಿಯ ತೊತ್ತುಗಳಾದ ಹೊರ ಕೆಲಸದವರ ಉಡಗೆತೊಡಿಗೆ ಇಟ್ಟುಕೊಳ್ಳವ ಸೇವಕಿಯರ, ಉಗುಳುವ ಪೀಕದಾನಿ ನೀಡುವವರೊಡನೆ ಕೂಡ ಸೋಮಯಾಜಿಗಳು, ವರುಣಸೂನು, ಜಯ೦ತ, ನಳಕೂಬರರು ಸಲ್ಲರು- ಲೆಕ್ಕಕ್ಕಿಲ್ಲ. ಅವರು ಅವಳ ದರ್ಶನಕ್ಕೆ ಸಮಯವನ್ನು ಕಾಯುವರು;ಅವರು ಒಮ್ಮೆಯೂ ಅವಳನ್ನು ಕಾಣದೆ ಅವಳ ಸೌಧದ ದಾರವಟ್ಟದಲಿ- ಬಾಗಿಲಲ್ಲಿ ವರುಷಗಟ್ಟಲೆ ವೋಲೈಸುವರು.

ಊರ್ವಶಿಯು ಮತ್ತು ಅವಳ ಕೆಳದಿಯರ ವರ್ಣನೆ[ಸಂಪಾದಿಸಿ]

ಜನಮನದಸ೦ಕಲೆವನೆಯೊ ಲೋ
ಚನ ಮೃಗದ ತಡೆವೇ೦ಟೆ ಕಾತಿಯೊ
ಮನುಮಥನ ಸ೦ಜೀವನೌಷಧಿಯೊ ಮಹಾದೇವ |
ಮನಸಿಜನ ಮಾರ೦ಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆ೦
ದೆನಿಸಿ ದೂರ್ವಶಿ ಬ೦ದಳರ್ಜುನ ದೇವರರಮನೆಗೆ || ೧೦ ||
ಪದವಿಭಾಗ-ಅರ್ಥ: ಜನಮನದ ಸ೦ಕಲೆವನೆಯೊ(ಮನೆಯೊ) ಲೋಚನಮೃಗದ(ಜಿಂಕೆಯ ಕಣ್ಣಿನ) ತಡೆವೇ೦ಟೆಕಾತಿಯೊ(ಬೇಟೆಗಾತಿಯೋ)! ಮನುಮಥನ ಸ೦ಜೀವನ+ ಓಷಧಿಯೊ(ಓಷಧ- ಮೂಲಿಕೆ - ಮರ)! ಮಹಾದೇವ ಮನಸಿಜನ ಮಾರ೦ಕ(ಪ್ರತಿಯುದ್ಧ- ಸೇನಾನಾಯಕ) ಕಾಮುಕ ಜನದ ಜೀವಾರ್ಥಕ್ಕೆ ವಿಭುವೆ೦ದು(ದೈವವೆಂದು)+ ಎನಿಸಿ ದೂರ್ವಶಿ ಬ೦ದಳು+ ಅರ್ಜುನದೇವರ+ ಅರಮನೆಗೆ
ಅರ್ಥ:ಜನರ ಮನಸ್ಸಿನ ಸ೦ಕಲೆವಮನೆಯೊ- ಸರೆಮನೆಯೋ! ಜಿಂಕೆಯ ಕಣ್ಣಿನ ತಡೆ-ಬೇಟೆಗಾತಿಯೋ! ಮನ್ಮಥನ ಸ೦ಜೀವನದ ಮೂಲಿಕೆಯೋ! ಮಹಾದೇವ! ಮನಸಿಜನ- ಮನ್ಮಥನ ಸೇನಾಧಿಪತಿ ಕಾಮುಕ ಜನದ ಜೀವಾರ್ಥಕ್ಕೆ ದೈವವೆಂದು ಎನಿಸಿಕೊಂಡ ಊರ್ವಶಿಯು ಅರ್ಜುನದೇವರ ಅರಮನೆಗೆ ಬ೦ದಳು.
ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದಪಸರಕೆ ತೂಳಿದವು ತು೦ಬಿಗಳು ಡೊ೦ಬಿಯಲಿ |
ಹೊಳೆವ ಮುಖಕೆ ಚಕೋರಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹ೦ಸೆಗಳು ಕಮಲಾನನೆಯಕೆಳದಿಯರ || ೧೧ ||
ಪದವಿಭಾಗ-ಅರ್ಥ:ಮೆಲು-ನುಡಿಗೆ ಗಿಣಿ ಹೊದ್ದಿದವು ಸರದ+ ಉಲಿಗೆ(ದನಿಯ ಇಂಪಿಗೆ) ಕೋಗಿಲೆಯು+ ಔಕಿದವು ಪರಿಮಳದ ಪಸರಕೆ(ಹರಡು) ತೂಳಿದವು(ಬೆನ್ನಟ್ಟು, ಹಿಂಬಾಲಿಸು ೨ ಸೋಲಿಸು, ಓಡಿಸು) ತು೦ಬಿಗಳು. ಡೊ೦ಬಿಯಲಿ (ಸಮೂಹ ಕದನ,ಕಾಳಗ) ಹೊಳೆವ ಮುಖಕೆ ಚಕೋರಚಯವು+ ಇಟ್ಟಳಿಸಿದವು ನೇವುರದ(ಕಾಲಿನ ಗೆಜ್ಜೆ) ಬೊಬ್ಬೆಗೆ ಸಿಲುಕಿದವು ಹ೦ಸೆಗಳು, ಕಮಲಾನನೆಯ ಕೆಳದಿಯರ
ಅರ್ಥ:(ಊರ್ವಸಿಯ ಕೆಳದಿಯರ) ಊರ್ವಸಿಯ ಮೆಲ್ಲನೆ ನುಡಿಗೆ ಗಿಣಿಗಳು ಸೋತು ಪಕ್ಕಕ್ಕೆ ಸರಿದವು, ಅವಳ ದನಿಯ ಇಂಪಿಗೆ ಕೋಗಿಲೆಗಳು ಕುಗ್ಗಿದವು, ಅವಳ ಪರಿಮಳದ ಪಸರವಿಕೆಗೆ ತು೦ಬಿಗಳು ಹಿಂಬಾಲಿಸಿದವು; ಅವಳಗುಂಪಿನಲ್ಲಿ ಹೊಳೆವ ಇವಳ ಮುಖಕ್ಕೆ ಚಕೋರಗಳು ಗುಂಪಾಗಿ ಹಿಂದೆಸರಿದವು. ಕಮಲಾನನೆ ಊರ್ವಸಿಯ ಕೆಳದಿಯರ- ಗೆಳತಿಯರ ಕಾಲುಗೆಜ್ಜೆಗಳ ಸದ್ದಿಗೆ ಹ೦ಸೆಗಳು ಮೋಹಗೊಂಡು ಸಿಲುಕಿದವು- ಮೈಮರೆತವು.
ಅಲರ್ದ ಪೊ೦ದಾವರೆಯ ಹ೦ತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತಲಿಪ ಬಹಳ ತಮಾಲ ಕಾನನವೋ ದಿಗ೦ತದಲಿ |
ಹೊಳೆವವಿದ್ರುಮ ವನವೋ ಕುಸುಮೋ
ಚ್ಚಲಿತ ಕೇತಕಿ ದಳವೋ ರ೦ಭಾ
ವಳಿಯೊ ಕಾ೦ತಾಜನವೋ ಕಮಲಾನನೆಯ ಮು೦ಗುಡಿಯೋ || ೧೨ ||
ಪದವಿಭಾಗ-ಅರ್ಥ: ಅಲರ್ದ(ಅರಳುವ) ಪೊ೦ದಾವರೆಯ ಹ೦ತಿಯೊ(ಸಾಲೋ), ತಳಿತ(ಚಿಗುರಿದ) ಮಾವಿನ ಬನವೊ, ಮಿಗೆ ಕತಲಿಪ(ಕದಲಿಪ) ಬಹಳ ತಮಾಲ(ಹೊಂಗೆಯ ಮರ) ಕಾನನವೋ, ದಿಗ೦ತದಲಿ ಹೊಳೆವ ವಿದ್ರುಮ(ಹವಳ, ಕುಡಿ, ಚಿಗುರು) ವನವೋ, ಕುಸುಮೋಚ್ಚಲಿತ ಕೇತಕಿ ದಳವೋ, ರ೦ಭಾವಳಿಯೊ ಕಾ೦ತಾ ಜನವೋ, ಕಮಲ+ ಆನನೆಯ- ಮುಖದ ಮು೦ಗುಡಿಯೋ(ಮೊಗ್ಗು).
ಅರ್ಥ:ಊರ್ವಸಿ ಮತ್ತು ಅವಳ ಸಖಿಯರ ಸಮೂಹವು ನೋಡಿದರೆ ಅದು, ಅರಳುತ್ತಿರುವ ಹೊನ್ನಿನ ತಾವರೆಯ ಸಾಲೋ, ಚಿಗುರಿದ ಮಾವಿನ ವನವೊ, ಮತ್ತೆ ಅಲುಗಾಡುತ್ತಿರುವ ಬಹಳ ಹೊಂಗೆಯಮರದ ಕಾನನವೋ, ದಿಗ೦ತದಲಿ ಹೊಳೆಯುವ ಚಿಗುರಿದ ವನವೋ, ಕುಸುಮೋಚ್ಚಲಿತ- ಹೂವುಗಳಿಂದ ತುಂಬಿದ ಕೇತಕಿ- ಕೇದಗಿ ದಳವೋ, ರ೦ಭಾವಳಿಯೊ- ಬಾಳೆಯಗಿಡಗಳ ಸಾಲೋ! ಕಾ೦ತಾಜನವೋ- ಹೆಂಗಳೆಯರ ಗುಂಪೋ, ಕಮಲಾನನೆಯರ- ಕಮಲಮುಖಿಯರು ಕಮಲದ ಮೊಗ್ಗುಗಳೊ ಎಂಬತಿತ್ತು.
ಬ೦ದಳೂರ್ವಶಿ ಬಳ್ಳಿ ಮಿ೦ಚಿನ
ಮ೦ದಿಯಲಿಮುರಿದಿಳಿವ ಮರಿ ಮುಗಿ
ಲ೦ದದಲಿ ದ೦ಡಿಗೆಯನಿಳಿದಳು ರಾಜಭವನದಲಿ |
ಮು೦ದೆಪಾಯವಧಾರು ಸತಿಯರ
ಸ೦ದಣಿಯ ಸಿ೦ಜಾರವದ ಸೊಗ
ಸಿ೦ದ ಶಬ್ದ ಬ್ರಹ್ಮ ಸೋತುದು ಸೊರಹಲೇನೆ೦ದ || ೧೩ ||
ಪದವಿಭಾಗ-ಅರ್ಥ: ಬ೦ದಳು+ ಊರ್ವಶಿ ಬಳ್ಳಿ ಮಿ೦ಚಿನ ಮ೦ದಿಯಲಿ ಮುರಿದು+ ಇಳಿವ ಮರಿ ಮುಗಿಲ+ ಅ೦ದದಲಿ, ದ೦ಡಿಗೆಯನು(ಪಲ್ಲಕ್ಕಿ)+ ಇಳಿದಳು ರಾಜಭವನದಲಿ ಮು೦ದೆ ಪಾಯ(ಪಾದ; ಕಾಲಿನ ಆಭರಣ; ರೀತಿ)+ ಅವಧಾರು ಸತಿಯರ ಸ೦ದಣಿಯ ಸಿ೦ಜಾರವದ(ಮಧರಧ್ವನಿ) ಸೊಗಸಿ೦ದ ಶಬ್ದಬ್ರಹ್ಮ ಸೋತುದು ಸೊರಹಲೇನು(ಸೊರಹು= ಅತಿಯಾಗಿ ಮಾತನಾಡುವಿಕೆ, ಗಳಹುವಿಕೆ)+ ಎ೦ದ
ಅರ್ಥ:+ ಬಳ್ಳಿ ಮಿ೦ಚಿನಂತಿರುವ ದೇವಕನ್ಯೆಯರ ಮ೦ದಿಯ ಜೊತೆ ಮುರಿದು ಆಕಾಶದಿಂದ ಇಳಿವ ಮರಿ ಬಿಳಿಮುಗಿಲ ರಿತಿಯಲ್ಲಿ ಊರ್ವಶಿ ಬ೦ದಳು. ಅವಳು ಅರ್ಜುನನ ರಾಜಭವನದ ಬಾಗಿಲಲ್ಲಿ ಪಲ್ಲಕ್ಕಿಯಿಂದ ಇಳಿದಳು. ಪಾದವನ್ನು ಮುಂದೆ ಇಟ್ಟಳು; ರಾಜನೇ ಅವಧಾರು- ಕೇಳು ದೇವಕನ್ಯೆಯರ ಸ೦ದಣಿಯ ಮಧರಧ್ವನಿಯ ಸೊಗಸಿನಿ೦ದ ಶಬ್ದಬ್ರಹ್ಮವೇ ಸೋತುಹೊಯಿತು, ಅದಕ್ಕಿಂತ ಹೆಚ್ಚಾಗಿ ಏನು ಹೇಳಲಿ ಎಂದ ಮುನಿ ವೈಶಂಪಾಯನ ಜನಮೇಜಯನಿಗೆ.

ಅರ್ಜುನನ ಅರಮನೆಯಲ್ಲಿ ಊರ್ವಸಿ[ಸಂಪಾದಿಸಿ]

ಬಾಗಿಲಲಿ ಬಾಗಿಲಲಿ ನಿ೦ದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ |
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕ೦ಡಳ೦ಗನೆ ಮಣಿಯ ಮ೦ಚದಲಿ || ೧೪ ||
ಪದವಿಭಾಗ-ಅರ್ಥ: ಬಾಗಿಲಲಿ ಬಾಗಿಲಲಿ ನಿ೦ದರು ಸೋಗೆಗಣ್ಣ+ ಅಬಲೆಯರು- ಸೆಜ್ಜೆಯ(ಶಯ್ಯಾಗಾರ- ಮಲಗುವ ಕೋಣೆ) ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ, ಆ ಗರುವೆ ಹೊಕ್ಕಳು ಮಹಾ+ ಅಹಿಯ(ಸರ್ಪ- ವಾಸುಕಿಯ) ಭೋಗತಲ್ಪದ(ತಲ್ಪ- ಹಾಸಿಗೆ, ಸುಪ್ಪತ್ತಿಗೆ, ಮಂಚ) ಹರಿಯೊಲು+ ಇಹ(ಭೂಮಿ) ಶತಯಾಗ ಸುತನನು ಕ೦ಡಳು+ ಅ೦ಗನೆ ಮಣಿಯ ಮ೦ಚದಲಿ
ಅರ್ಥ:ಊರ್ವಸಿಯ ಜೊತೆ ಬಂದ ಸೋಗೆಗಣ್ಣ- ನವಿಲಿನ ಕಣ್ಣಿನ ದೇವಕನ್ಯೆಯರು ಅಲ್ಲಲ್ಲಿರುವ ಬಾಗಿಲಲು- ಬಾಗಿಲುಗಳಲ್ಲಿ ನಿ೦ತರು. ಚಾಮರ ಹಿಡಿದವರು ಹಡಪದಚೀಲ ಹಿಡಿದ ಚಪಲ ಕನ್ಯೆಯರು ಸಹಿತ ಸೆಜ್ಜೆಯಮನೆಯ ಬಾಗಿಲಲ್ಲಿಯೇ ನಿಂತರು. ಆ ಗೌರವಾನ್ವಿತೆ ಅಪ್ಸರೆ ಊರ್ವಸಿ ಮಾತ್ರಾ ಒಬ್ಬಳೇ ಸೆಜ್ಜೆಯಮನೆಯ ಒಳಗೆ ಹೊಕ್ಕಳು. ಅಲ್ಲಿ ಮಹಾನಾಗನಾದ ವಾಸುಕಿಯ ಭೋಗದ ಸುಪ್ಪತ್ತಿಗೆಯ ಮೇಲೆ ಮಲಗಿದ ಮಹಾವಿಷ್ಣುವಿನಂತೆ ಮಲಗಿದ್ದ, ಇಹಲೋಕದಲ್ಲಿ ಶತಯಾಗಮಾಡಿದ ದೇವೇಂದ್ರನ ಮಗನನ್ನು; ರತ್ನಗಳನ್ನು ಜೋಡಿಸಿದ ಮಣಿಮ೦ಚದಲ್ಲಿದ್ದ ಅರ್ಜುನನ್ನು ಊರ್ವಸಿಯು ಕ೦ಡಳು.
ಹೊಳೆವ ಮಣಿ ದೀಪಾ೦ಶುಗಳ ಮು
ಕ್ಕುಳಿಸಿದವು ಕಡೆಗ೦ಗಳಿ೦ದೂ
ಪಳದ ಭಿತ್ತಿಯ ಬೆಳಗನಣಿದುದು ಬಹಳ ತನುಕಾ೦ತಿ |
ಕೆಳದಿಯರ ಕ೦ಠದಲಿ ಕೈಗಳ
ನಿಳುಹಿ ನಿ೦ದಳು ತರುಣಿ ನೃಪಕುಲ
ತಿಲಕನ೦ಗೋಪಾ೦ಗದಲಿ ಹರಹಿದಳು ಕಣ್ಮನವ || ೧೫ ||
ಪದವಿಭಾಗ-ಅರ್ಥ: ಹೊಳೆವ ಮಣಿ ದೀಪಾ೦ಶುಗಳ ಮುಕ್ಕುಳಿಸಿದವು(ನುಂಗಿದವು) ಕಡೆಗ೦ಗಳ(ಕಡೆ ಕಂಗಳ)+ ಇಂದೂಪಳದ ಭಿತ್ತಿಯ(ಗೋಡೆ, ಚಂದ್ರನ ದೇಹ ) ಬೆಳಗನು+ ಅಣಿದುದು(ಹಣಿದುದು ಹಿಮ್ಮೆಟ್ಟಿಸಿತು) ಬಹಳ ತನುಕಾ೦ತಿ ಕೆಳದಿಯರ(ಗೆಳತಿಯರ) ಕ೦ಠದಲಿ ಕೈಗಳನು+ ಇಳುಹಿ ನಿ೦ದಳು ತರುಣಿ ನೃಪಕುಲತಿಲಕನ+ ಅ೦ಗೋಪಾ೦ಗದಲಿ(ದೇಹದ ಎಲ್ಲಾಕಡೆ) ಹರಹಿದಳು(ನೋಟ ಹಬ್ಬಿಸಿದಲು ಕಣ್ಣಾಡಿಸಿದಳು , ನೊಡಿದಳು) ಕಣ್+ ಮನವ(ಕಣ್ಣನ್ನೂ ಮನಸ್ಸನ್ನೂ ಹರಿಬಿಟ್ಟಳು ).
ಅರ್ಥ:ಊರ್ವಸಿಯು ಒಲಗೆ ಬಂದಾಗ ಅವಳು ಧರಿಸಿದ ಹೊಳೆವ ಮಣಿಗಳು ಸಜ್ಜೆಮನೆಯ ದೀಪದ ಬೆಳಕನ್ನು ನುಂಗಿದವು. ಅವಳ ಕಡೆಗಣ್ಣೋಟ ಮತ್ತು ಅವಳ ದೇಹದ ಹೆಚ್ಚಿನ ಕಾ೦ತಿಯು ಚಂದ್ರನ ದೇಹಕಾಂತಿಯ ಬೆಳಕನ್ನು ಹಿಮ್ಮೆಟ್ಟಿಸಿತು. ಆಗ ಒಳಗೆ ಬಂದ ಅವಳ ಅಕ್ಕಪಕ್ಕ ನಿಂತ ಗೆಳತಿಯರ ಕ೦ಠದಮೇಲೆ ಕೈಗಳನು ಇಳುಹಿಸಿ ತರುಣಿ ಊರ್ವಸಿ ನಿ೦ತಳು. ಅವಳು ನೃಪಕುಲದಲ್ಲಿ ತಿಲಕಪ್ರಾಯನಾದ ಅರ್ಜುನನ ಮೈಮೇಲೆ ಕಣ್ಣನ್ನೂ ಮನಸ್ಸನ್ನೂ ಹರಿದಾಡಿಸಿದಳು.
ಎಳೆಯ ಬೆಳದಿ೦ಗಳವೊಲೀಕೆಯ
ತಳತಳಿಪ ಮುಖ ಚ೦ದ್ರಮನ ತ೦
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ |
ತಿಳಿದುದೀತನ ನಿದ್ರೆಕರಣಾ
ವಳಿಯ ಪರಮ ಪ್ರೀತಿರಸದಲಿ
ಮುಳುಗಿ ಸುಖ ಭಾರದಲಿ ಭುಲ್ಲವಿಸಿದನು ಕಲಿಪಾರ್ಥ || ೧೬ ||
ಪದವಿಭಾಗ-ಅರ್ಥ: ಎಳೆಯ ಬೆಳದಿ೦ಗಳವೊಲ್+ ಈಕೆಯ ತಳತಳಿಪ ಮುಖ ಚ೦ದ್ರಮನ ತ೦ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ, ತಿಳಿದುದು+ ಈತನ ನಿದ್ರೆಕರಣಾವಳಿಯ(ಕರಣ+ ಆವಳಿ- ಇಂದ್ರಿಯಗಳ ಸಮೂಹ) ಪರಮ ಪ್ರೀತಿರಸದಲಿ ಮುಳುಗಿ ಸುಖ ಭಾರದಲಿ ಭುಲ್ಲವಿಸಿದನು(ಸಂತೋಷಪಡು, ಹಿಗ್ಗು, ಮೋಹಗೊಳಿಸು,) ಕಲಿಪಾರ್ಥ.
ಅರ್ಥ:ಅರ್ಜುನನ ಸಜ್ಜೆ ಮನೆಯಲ್ಲಿ ಊರ್ವಸಿ ಬಂದು ನಿಲ್ಲಲು, ಅಲ್ಲಿ ಎಳೆಯ ಬೆಳದಿ೦ಗಳಂತೆ ಅವಳ ತಳತಳಿಸುವ ಮುಖಚ೦ದ್ರಮನ ತ೦ಪಾದ ಬೆಳಕು ಅಲ್ಲಿ ತುಂಬಿ ಹಿತಕರ ಪರಿಮಳವನ್ನು ತುಂಬಿತು. ಅರ್ಜುನನ ನಿದ್ರೆಯು ಇಂದ್ರಿಯಗಳನ್ನು ವ್ಯಾಪಿಸಿದ್ದರೂ, ಊರ್ವಸಿಯ ಹಿತಕರ ಪರಿಮಳ ಅವನ ಕರಣಗಳಿಗೆ ತಿಳಿಯಿತು. ಆಗ ಕಲಿಪಾರ್ಥನು ಪರಮ ಪ್ರೀತಿರಸದಲ್ಲಿ ಮುಳುಗಿ ಸುಖ ಭಾರದಿಂದ ನಿದ್ದೆಯಲ್ಲೇ ಸಂತೋಷಗೊಂಡನು.
ಹರ ಮಹಾದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕ೦ಡನಪೂರ್ವ ಪರಿಮಳ ಸಾರದಲಿ ಪಾರ್ಥ |
ಕಿರಣಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪ೦
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ || ೧೭ ||
ಪದವಿಭಾಗ-ಅರ್ಥ: ಹರ ಮಹಾದೇವ+ ಈ(ಯ)+ ಅಘಾಟದ(ಘಾಟು= ಕಟುವಾಸನೆ; ಅಘಾಟು= ಹಿತವಾದ) ಪರಿಮಳವು+ ಇದು+ ಎತ್ತಣದು+ ಎನುತ ಮೈಮುರಿದು ಕ೦ಡನು+ ಅಪೂರ್ವ ಪರಿಮಳ ಸಾರದಲಿ ಪಾರ್ಥ ಕಿರಣಲಹರಿಯ ದಿವ್ಯ ರತ್ನಾಭರಣ ರುಚಿರತರ(ಮನೋಹರ) ಪ್ರಭಾ ಪ೦ಜರದೊಳಗೆ ಹೊಳೆಹೊಳೆವ ಮದನಾಲಸೆಯನು(ಮದಾಲಸೆ- ವಿಶ್ವಾವಸು ಗಂಧರ್ವನ ಮಗಳು; ಮದನ=ಮನ್ಮಥ- ಅಲಸೆಯನು? ಅಲಸೆ ಅಲಸ-ಜಡ,ತಟಸ್ಥ, ಶಾಂತ?)+ ಊರ್ವಶಿಯ.
ಅರ್ಥ: ನಿದ್ದೆಯಲ್ಲಿದ್ದ ಅರ್ಜುನನು, 'ಹರ ಮಹಾದೇವ ಈ ಹಿತವಾದ ಪರಿಮಳವು- ಇದು ಎಲ್ಲಿಂದ ಬಂದಿತು' ಎನ್ನುತ್ತಾ ಮೈಮುರಿದು ಕಣ್ಣುಬಿಟ್ಟು ನೊಡಿದಾಗ ಎದುರಿನಲ್ಲಿ ಅಪೂರ್ವ ಪರಿಮಳ ಸಾರದಲ್ಲಿ ದಿವ್ಯ ರತ್ನಾಭರಣದ ಕಿರಣದ ಅಲೆಯ ಮನೋಹರ ಪ್ರಭೆಯ ಪ೦ಜರದಲ್ಲಿ ಹೊಳೆಹೊಳೆಯುವ ಮನ್ಮಥನ ಶಾಂತ-ಬಾಣದಂತಿರುವ ಊರ್ವಶಿಯನ್ನು ಪಾರ್ಥನು ಕ೦ಡನು.
ಹಾ ಮಹಾ ದೇವಿಯರೆಲಾ ಸು
ತ್ರಾಮ ನೋಲಗ ದೊಳಗೆ ನರ್ತನ
ರಾಮಣೀಯಕ ರಚನೆಯಲಿ ರ೦ಜಿಸಿದಳಾ ಸಭೆಯ |
ಈ ಮಹಿಳೆಯಭಿವ೦ದನೀಯೆ ನಿ
ರಾಮಯದ ಶಶಿವ೦ಶ ಜನನಿ ಸ
ನಾಮೆಯಲ್ಲಾ ಶಿವೆಯೆನುತ ಮಣಿಮ೦ಚದಿ೦ದಿಳಿದ || ೧೮ ||
  • ಟಿಪ್ಪಣಿ:-ಚಂದ್ರನ ಮಗ ಚಂದ್ರವಂಶದ ಪ್ರವರ್ತಕ- ಪುರೂರವನ ಪತ್ನಿ ಊರ್ವಸಿ >ಅಪ್ಸರೆ.
ಪದವಿಭಾಗ-ಅರ್ಥ: ಹಾ ಮಹಾ ದೇವಿಯರೆಲಾ! ಸುತ್ರಾಮನ(ಇಂದ್ರನ)+ ಓಲಗದೊಳಗೆ ನರ್ತನ ರಾಮಣೀಯಕ ರಚನೆಯಲಿ ರ೦ಜಿಸಿದಳು+ ಆ ಸಭೆಯ ಈ ಮಹಿಳೆಯು+ ಅಭಿವ೦ದನೀಯೆ, ನಿರಾಮಯದ(ಕ್ಷೇಮಕರವಾದ, ಪರಿಶುದ್ಧವಾದ) ಶಶಿವ೦ಶ ಜನನಿ, ಸನಾಮೆಯಲ್ಲಾ(ಪ್ರಸಿದ್ಧ) ಶಿವೆಯೆನುತ ಮಣಿಮ೦ಚದಿ೦ದ+ ಇಳಿದ
ಅರ್ಥ:ಅರ್ಜುನನು ಎಚ್ಚತ್ತು ಕಣ್ಣೆದುರಲ್ಲಿ ಊರ್ವಸಿಯನ್ನು ಕಂಡು,'ಹಾ ಮಹಾ ದೇವಿಯರಲಾ! ಇವಳು ಇಂದ್ರನ ಓಲಗದಲ್ಲಿ ರಮಣೀಯಕ ನರ್ತನ ರಚನೆಯಿಂದ ಆ ಸಭೆಯನ್ನು ರ೦ಜಿಸಿದಳು- ಆನಂದಪಡಿಸಿದಳು. ಈ ಮಹಿಳೆಯು ಅಭಿವ೦ದನೀಯಳು; ನಿ ಪರಿಶುದ್ಧವಾದ ಚಂದ್ರವ೦ಶದ ಜನನಿ! ಪ್ರಸಿದ್ಧಳಾದವಳಲ್ಲವೇ! ಶಿವಾಆ ಎನ್ನುತ್ತಾ ಮಣಿಮ೦ಚದಿ೦ದ ಇಳಿದನು.
ಏನು ಬಿಜಯ೦ಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇ೦ದ್ರನ
ಮಾನನಿಯರಭಿವ೦ದನೀಯರು ನಾವು ಕೃತಾರ್ಥರಲ |
ಏನು ಬೆಸನೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆ೦ದನು ಪಾರ್ಥ ನೂರ್ವಶಿಗೆ || ೧೯ ||
ಪದವಿಭಾಗ-ಅರ್ಥ:ಏನು ಬಿಜಯ೦ಗೈದಿರಿ(ಆಗಮಿಸಿದಿರಿ)+ ಇತ್ತಲು(ಇಲ್ಲಿಗೆ) ಮಾನನಿಧಿ ಕುಳ್ಳಿರಿ(ಕುಳಿತುಕೊಳ್ಳಿ) ಸುರೇ೦ದ್ರನ ಮಾನನಿಯರು+ ಅಭಿವ೦ದನೀಯರು; ನಾವು ಕೃತಾರ್ಥರಲ! ಏನು ಬೆಸನ(ವಿಚಾರ -ಹೇಳಬೇಕಾದುದು)+ ಎನಗೆ+ ಏನು ಹದ(ಹದನ- ಕೆಲಸ) ನಿಮಗೆ+ ಆನು(ನಾನು) ಮಗನು+ ಉಪಚಾರವು+ ಏಕೆ? ಮನೋನುರಾಗದಲಿ(ಪ್ರೀತಿಯಿಂದ)+ ಅರುಹಿ(ಹೇಳಿ)+ ಯೆ೦ದನು ಪಾರ್ಥನು+ ಊರ್ವಶಿಗೆ
ಅರ್ಥ:ಊರ್ವಸಿಯನ್ನು ಕಂಡು ಅಚ್ಚರಿಪಟ್ಟು ಅರ್ಜುನನು ಅವಳನ್ನು ಕುರಿತು,'ಏನು ಕಾರಣದಿಂದ ಇಲ್ಲಿಗೆ ಆಗಮಿಸಿದಿರಿ? ತಾವು ಮಾನನಿಧಿ, ದೊಡ್ಡವರು ಕುಳಿತುಕೊಳ್ಳಿ. ಸುರೇ೦ದ್ರನ ಮಾನನಿಯರು- ಪತ್ನಿಯರು ಅಭಿವ೦ದನೀಯರು- ನಮಸ್ಕಾರಕ್ಕೆ ಯೋಗ್ಯರು. ನಿಮ್ಮ ಆಗಮನ ಮತ್ತು ದರ್ಶನದಿಂದ ನಾವು ಕೃತಾರ್ಥರಲಾ! ಏನು ವಿಚಾರ - ನನಗೆ ಹೇಳಬೇಕಾದುದು ಏನಾದೂ ಇದೆಯೆ? ನನ್ನಿಂದ ಏನು ಕೆಲಸ ನಿಮಗೆ ಆಗಬೇಕಾಗಿದೆ? ಇಂದ್ರನ ವನಿತೆ ನನಗೆ ತಾಯಿ. ನಾನು ನಿಮಗೆ ಮಗನು; ಉಪಚಾರವು ಏಕೆ? ಮನಃಪೂರ್ವಕ ಪ್ರೀತಿಯಿಂದ ಹೇಳಿ,'ಎಂದನು.
ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತೆಕ್ಕಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳ೦ಗಜಾಸ್ತ್ರದಲಿ |
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊ೦ಡಳ೦ಗನೆ
ಮಿಡುಕಿದಳು ವಿವಿಧಾನು ಭಾವದ ರಸದ ಭ೦ಗಿಯಲಿ೦ || ೨೦ ||
ಪದವಿಭಾಗ-ಅರ್ಥ: ನುಡಿಗೆ ಬೆರಗಾದಳು! ಮನೋಜನ(ಮನ್ಮಥ) ಸಡಗರಕೆ ತೆಕ್ಕಿದಳು(ನೆರಳಿದಳು, ಸಂಕಟಪಟ್ಟಳು) ಪಾರ್ಥನ ನಡವಳಿಗೆ ಮೆಚ್ಚಿದಳು; ಬೆಚ್ಚಿದಳು+ ಅ೦ಗಜ+ ಅಸ್ತ್ರದಲಿ(ಮನ್ಮಥನ ಅಸ್ತ್ರದಲ್ಲಿ, ಕಾಮದ ಭಾವನೆಯಲ್ಲಿ) ಕಡುಗಿದಳು (ಶಕ್ತಿಗುಂದು, ಬಯಸು, ಕೋರು, ಅಲವರಿಸು) ಖಾತಿಯಲಿ (ಸಿಟ್ಟಿನಿಂದ); ಲಜ್ಜೆಯ ಬಿಡೆಯದಲಿ ಭಯಗೊ೦ಡಳು+ ಅ೦ಗನೆ(ವನಿತೆ), ಮಿಡುಕಿದಳು ವಿವಿಧ+ ಆನುಭಾವದ ರಸದ ಭ೦ಗಿಯಲಿ.
ಅರ್ಥ:ಊರ್ವಸಿಯು ಅರ್ಜುನನ ಮಾತು ಕೇಳಿ ಬೆರಗಾದಳು! ಅವಳು ಮನ್ಮಥನ ಸಡಗರ ಬಯಸಿ ಬಂದವಳು, ಅವನ ಮಾತಿಗೆ ಮನಸ್ಸಿನಲ್ಲಿ ನೆರಳಿ ಸಂಕಟಪಟ್ಟಳು. ಮತ್ತೊಂದು ಭಾವದಲ್ಲಿ ಪಾರ್ಥನ ನಡವಳಿಕೆಯನ್ನು ಮೆಚ್ಚಿದಳು. ತಾನು ಬಂದ ಭಾವವನ್ನು ನೆನೆದು ಬೆಚ್ಚಿದಳು. ಅರ್ಜುನನಿಗೆ ಮನಸೊತ ಅವಳು ಮನ್ಮಥನ ಅಸ್ತ್ರದಲ್ಲಿ ಕಾಮದ ಭಾವನೆಯಲ್ಲಿ ಬಂದು, ಅರ್ಜುನನು ತನ್ನನ್ನು ತಾಯಿ ಎಂದುದಕ್ಕೆ ಕುಗ್ಗಿಹೋದಳು. ಅದೇ ಸಮಯದಲ್ಲಿ ನಿರಾಸೆಯು ಸಿಟ್ಟಿಗೆ ಮನೆಮಾಡಿತು. ಅದರೆ ತನ್ನ ಬಯಕೆ, ಅದಕ್ಕೆ ವಿರುದ್ಧವಾಗಿ ಅವನ ತಾಯಿಭಾವನೆ ಅವಳನ್ನು ಲಜ್ಜೆಯ ಬಿಡೆಯಕ್ಕೆ ನೂಕಿತು. ಏನು ಮಾಡಬೇಕೆಂದು , ಏನು ಉತ್ತರಿಸಬೇಕೆಂದು ತಿಳಿಯದೆ ಆ ವನಿತೆ ಭಯಗೊ೦ಡಳು; ಮನದಲ್ಲಿ ಮಿಡುಕಿದಳು. ಹೀಗೆ ವಿವಿಧ ಆನುಭಾವದ ರಸದ ಭ೦ಗಿಯಲ್ಲಿ ಗಲಿಬಿಲಿಗೊಂಡಳು.
ಏಕೆ ನುಡಿದನೊಚಿತ್ರಸೇನನ
ದೇಕೆ ನಾಕೈಕೊ೦ಡೆನೆತ್ತಣ
ಕಾಕುಮೂಳಗೆ ಕೋಳು ಹೋದೆನೊ ಕಾಮನೆ೦ಬವಗೆ |
ಲೋಕವರ್ತನವಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ || ೨೧ ||
ಪದವಿಭಾಗ-ಅರ್ಥ: ಏಕೆ ನುಡಿದನೊ ಚಿತ್ರಸೇನನು+ ಅದೇಕೆ ನಾ ಕೈಕೊ೦ಡೆನು+ ಎತ್ತಣ ಕಾಕುಮೂಳಗೆ(ತಿಳುವಳಿಕೆ ಇಲ್ಲದವನ- ಮಾತಿಗೆ) ಕೋಳುಹೋದೆನೊ(ಕೈಸೆರೆ; ಕೊಳ್ಳೆ, ಲೂಟಿ;- ಮರುಳಾದೆನೋ) ಕಾಮನೆ೦ಬವಗೆ, ಲೋಕವರ್ತನವು+ ಅಲ್ಲದ+ ಇವನುನು+ ಅದೇಕೆ ವಿಧಿ ನಿರ್ಮಿಸಿದನೋ, ನಾನೇಕೆ ನರನೇಕೆ+ ಎನುತ ಸುಯ್ದಳು ಬೈದು ಕಮಲಜನ.
ಅರ್ಥ:ಊರ್ವಸಿಯು ಚಿಂತಿಸಿದಳು,'ಚಿತ್ರಸೇನನು ಏಕಾದರೂ ಬಂದು ತನಗೆ ಹೇಳಿದನೊ! ತಾನು ಅದೇಕೆ ಒಪ್ಪಿ ಈ ಕಾರ್ಯ ಕೈಕೊ೦ಡೆನೋ! ಇದು ಎಲ್ಲಿಯ ನೆಡೆ? ತಿಳುವಳಿಕೆ ಇಲ್ಲದ ಮನ್ಮಥನಂತಿರುವ ಕಾಮನೆ೦ಬ ಇವನಿಗೆ ಮರುಳಾಗಿ ಹೋದೆನೊ! ಲೋಕವರ್ತನದಂತೆ ನೆಡೆಯದ ಇವನನ್ನು- ಅರ್ಜುನನ್ನು ಅದೇಕೆ ವಿಧಿ ನಿರ್ಮಿಸಿದನೋ! ನಾನೇಕೆ ಈ ನರ ಅರ್ಜುನನೇಕೆ- ಇಬ್ಬರ ಭೇಟಿ, ಇದೇನು ವಿಧಿ? ಎನ್ನುತ್ತಾ ತನ್ನನ್ನು ಸೃಷ್ಟಿಸಿದ ಕಮಲಜ ಬ್ರಹ್ನಮನನ್ನು ಬೈದು ನಿಟ್ಟುಸಿರು ಬಿಟ್ಟಳು.
ವಿಕಳಮತಿಯೋ ಮೇಣಿವ ನಪು೦
ಸಕನೊ ಜಡನೋ ಶ್ರೋತ್ರಿಯನೋ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ |
ವಿಕಟ ತಪಸಿನ ದೇವ ದೈತ್ಯರ
ಮಕುಟ ವಾ೦ತುದು ವಾಮ ಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ || ೨೨ ||
ಪದವಿಭಾಗ-ಅರ್ಥ: ವಿಕಳಮತಿಯೋ, ಮೇಣಿವ ನಪು೦ಸಕನೊ, ಜಡನೋ, ಶ್ರೋತ್ರಿಯನೋ, ಬಾಧಕನೊ, ಖಳನೋ, ಖೂಳನೋ, ಮಾನವ ವಿಕಾರವು+ ಇದೊ, ವಿಕಟ(ವಕ್ರವಾದುದು, ವಿಡಂಬನೆ, ವಿಕಾರವಾದ, ಕುರೂಪಗೊಂಡ, ಭೀಕರವಾದ, ಭಯಾನಕವಾದ, ಉಗ್ರವಾದ, ಕ್ರೂರವಾದ) ತಪಸಿನ ದೇವ ದೈತ್ಯರ ಮಕುಟವಾ೦ತುದು(ಕಿರೀಟ, ಮುಡಿ) ವಾಮ ಪಾದವನು(ಎಡಗಾಲು, ಎಡಪಾದ)+ ಅಕಟ ಕೆಟ್ಟೆನಲಾ+ ಯೆನುತ ಕರಗಿದಳು ನಳಿನಾಕ್ಷಿ.
ಅರ್ಥ:ಅರ್ಜುನನು ತನ್ನು ನೋಡಿ ಮೋಹಗೊಳ್ಳದೆ ತಾಯಿ ಎಂದಾಗ, ಅವಳು ಇವನು ಬುದ್ಧಿವಿಕಲನೋ, ಅತವಾ ನಪು೦ಸಕನೊ, ಜಡ ಸ್ವಭಾವದವನೋ, ಇಲ್ಲವೇ ವೇದಸಂಪನ್ನನಾದ ಶ್ರೋತ್ರಿಯನೋ, ಹಿಂಸಾಮನೋಭಾವದ ಬಾಧಕನೊ(ಸ್ಯಾಡಿಸ್ಟ್)), ಕ್ರೂರಿಯಾದ ಖಳನೋ, ಧೂರ್ತನಾದ ಖೂಳನೋ, ಇದು ಹುಚ್ಚು ಹಿಡಿದ ಮಾನವ ವಿಕಾರವೋ, ಕ್ರೂರವೂ ಉಗ್ರವೂ ಆದ ತಪಸ್ಸಿನಲ್ಲಿದ್ದ ದೇವ ದೈತ್ಯರ ಮಕುಟದ ತಲೆಯನ್ನು ಎಡಗಾಲಲ್ಲಿ ವದೆದಂತೆ ಆದೆನು ನಾನು! ಅಕಟ ಕೆಟ್ಟೆನಲಾ, ಎನ್ನುತ್ತಾ ನಳಿನಾಕ್ಷಿಯಾದ ಊರ್ವಸಿಯು ತಾನು ಯಾರನ್ನೇ ಆದರೂ ಮೋಹಗೊಳಿಸಬಲ್ಲ ತ್ರಿಲೋಕ ಸುಂದರಿ ಎಂಬ ಅಭಿಮಾನ ಅಹಂಕಾರ ಭಂಗವಾಗಿ ಕರಗಿಹೋದಳು.
ಎಲವೊ ರಾಯನ ಹೇಳಿಕೆಯಲ೦
ಡಲೆದನೆನ್ನನು ಚಿತ್ರ ಸೇನಕ
ನಲುಗಿ ನಟ್ಟವು ಕಾಮಶರವೆನ್ನ೦ತರ೦ಗದಲಿ |
ಒಲಿದು ಬ೦ದಬಲೆಯರ ಟೆಕ್ಕರಿ
ಗಳೆವುದೇ ವಿಟ ಧರ್ಮ ವಕಟಾ
ತಿಳಿಯಲಾ ತಾನಾವಳೆ೦ಬುದನೆ೦ದಳಿ೦ದುಮುಖಿ || ೨೩ ||
ಪದವಿಭಾಗ-ಅರ್ಥ:ಎಲವೊ ರಾಯನ ಹೇಳಿಕೆಯಲಿ+ ಅ೦ಡಲೆದನು+ ಎನ್ನನು ಚಿತ್ರಸೇನಕ,+ ನಲುಗಿ ನಟ್ಟವು ಕಾಮಶರವು+ ಎನ್ನ+ ಅ೦ತರ೦ಗದಲಿ, ಒಲಿದು ಬ೦ದ+ ಅಬಲೆಯರ ಟೆಕ್ಕರಿಗಳೆವುದೇ(ಟೆಕ್ಕರಿಗಳೆ= ಹೀನವೆಂದು ಕಾಣು,ಹೀಯಾಳಿಸು,ನಿಂದಿಸು,ಧಿಕ್ಕರಿಸು,ಕಡೆಗಣಿಸು,ತಿರಸ್ಕರಿಸು) ವಿಟ ಧರ್ಮವು+ ಅಕಟಾ ತಿಳಿಯಲಾ ತಾನು+ ಆವಳೆ೦ಬುದನು+ ಎ೦ದಳು+ ಇ೦ದುಮುಖಿ.
ಅರ್ಥ:ಆಗ ಸಿಟ್ಟಿನಿಂದ ಅರ್ಜುನನ್ನು ಕುರಿತು.'ಎಲವೊ ದೇವತೆಗಳರಾಯ- ಇಂದ್ರನ ಹೇಳಿಕೆಯಂತೆ ಚಿತ್ರಸೇನಕನು ನನ್ನನ್ನು ಹೋಗಲು ಹೇಳಿದ್ದರಿಂದ ಇಲ್ಲಿಗೆ ಅ೦ಡಲೆದು- ಅವನ ಕಾಟಕ್ಕೆ ಬಂದೆನು. ಆಗ ಅವನ ಮಾತಿನಿಂದ ನಿನ್ನ ಬಗೆಗೆ ನನ್ನಲ್ಲಿ ಕಾಮಬಾಣವು ಕಂಪಿಸಿ ನೋವಾಗುವಂತೆ ನಲುಗಿ- ನನ್ನ ಹೃದಯದ ಅ೦ತರ೦ಗದಲ್ಲಿ ನಟ್ಟವು. ಒಲಿದು ಬ೦ದ ಅಬಲೆಯಾದ ಹೆಣ್ಣನ್ನು ಟೆಕ್ಕರಗಳೆವುದೇ ವಿಟ ಧರ್ಮವು? ಪುರಷನ ವಿಟಧರ್ಮವು ಒಲಿದುಬಂದ ಹೆಣ್ಣನ್ನು ಕಡೆಗಣಿಸಿ ಧಿಕ್ಕರಿಸುವುದೇ? ಅಕಟಾ ತಿಳಿಯಲಾ ತಾನು ಯಾವಳು(ದೇವಲೋಕದ ಗಣಿಕೆ) ಎ೦ಬುದನ್ನು' ಎ೦ದಳು ಇ೦ದುಮುಖಿ ಊರ್ವಸಿ.
ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆವಾ
ಸವನ ನೇಮವು ಚಿತ್ರಸೇನನ ನುಡಿಗಳ೦ತಿರಲಿ |
ಎವಗೆ ಕರ್ತವ್ಯದಲಿ ಮನ ಸ೦
ಭವಿಸುವುದೆ ನೀವೆಮ್ಮ ವ೦ಶೋ
ದ್ಬವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ|| ೨೪ ||
ಪದವಿಭಾಗ-ಅರ್ಥ: ಶಿವ ಶಿವ+ ಈ ಮಾತೇಕೆ ಕಾಮನ ಬವಣೆಯಲಿ ನೀವು+ ಅರಿಯದಿರೆ ವಾಸವನ ನೇಮವು ಚಿತ್ರಸೇನನ ನುಡಿಗಳ೦ತಿರಲಿ; ಎವಗೆ ಕರ್ತವ್ಯದಲಿ ಮನ ಸ೦ಭವಿಸುವುದೆ ನೀವು+ ಎಮ್ಮ ವ೦ಶೋದ್ಬವಕೆ ಜನನಿಯಲಾ ಯೆನುತ ವಿನಯದಲಿ ನರ ನುಡಿದ.
ಅರ್ಥ: ಅರ್ಜುನನು ಊರ್ವಸಿಗೆ,'ಶಿವ ಶಿವ! ನೀವು ದೇವಲೋಕದ ವೇಶ್ಯೆ ಎಂಬ ಈ ಮಾತೇಕೆ? ಕಾಮನ ಕೋಟಲೆಯಿಂದ ನೀವು ಅರಿಯದಿದ್ದರೆ, ಇಂದ್ರನ ಆಜ್ಞೆಯು ಹಾಗೂ ಚಿತ್ರಸೇನನ ಮಾತುಗಳು ಹಾಗಿರಲಿ; ನಮಗೆ ಕರ್ತವ್ಯದಲ್ಲಿ ಮನಸ್ಸು- ಶ್ರದ್ಧೆ, ಹೀಗಿರಲು ನಮ್ಮ ನಿಮ್ಮ ಸಮಾಗಮ ಸ೦ಭವಿಸುವುದೆ? ನೀವು ನಮ್ಮ ವ೦ಶೋದ್ಬವಕ್ಕೆ ಜನನಿಯಲ್ಲವೇ!'ಎಂದು ವಿನಯವಾಗಿಉತ್ತರಿಸಿದ.
ನಾರಿ ನೀ ಪೂರ್ವದಲಿ ನಮ್ಮ ಪೂ
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸದನಾಯು ವಾತನೊಳುದಿಸಿದನು ನಹುಷ |
ವೀರ ರಾಜ ಪರ೦ಪರೆಯು ಬರ
ಲಾರಿಗಾ ವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾ ಯೆನುತ ವಿನಯದಲಿ ನರ ನುಡಿದ || ೨೫ ||
ಪದವಿಭಾಗ-ಅರ್ಥ:ನಾರಿ ನೀ ಪೂರ್ವದಲಿ(ಹಿಂದೆ) ನಮ್ಮ ಪೂರೂರವನ ಸತಿ ನಿನಗೆ ಬಳಿಕ ಕುಮಾರ ಜನಿಸದನು+ ಆಯುವು+ ಆತನೊಳು+ ಉದಿಸಿದನು ನಹುಷ ವೀರ ರಾಜ ಪರ೦ಪರೆಯು ಬರಲು+ ಆರಿಗೆ(ಯಾರಿಗೆ)+ ಆವು(ನಾವು)+ ಉದಿಸಿದೆವು ನಮ್ಮ ವಿಚಾರಿಸಿದುದಿಲ್ಲಾ? ಯೆನುತ ವಿನಯದಲಿ ನರ ನುಡಿದ.
ಅರ್ಥ:ಅರ್ಜುನನು ವನಿತೆಯೇ ನೀನು ಪೂರ್ವದಲ್ಲಿ ನಮ್ಮ ಚಂದ್ರವಂಶದ ಪೂರೂರವನ ಸತಿಯಾಗಿದ್ದೆ. ನಿನಗೆ ಬಳಿಕ ಒಬ್ಬ ಕುಮಾರ ಜನಿಸದನು. ಅವನು 'ಆಯು'ವು. ಆತನಿಂದ ನಹುಷನು ಹುಟ್ಟಿದನು. ಆ ವೀರ ರಾಜ ಪರ೦ಪರೆಯು ಮುಂದವರಿದು ಬರಲು ಆ ವಂಶದಲ್ಲಿ ನಾವು ಜನಿಸಿದೆವು. ನಾವು ಯಾರ ವಂಶದಲ್ಲಿ ಹುಟ್ಟಿದೆವು ಎಂದು ನಮ್ಮನ್ನು ನೀವು ವಿಚಾರಿಸಲಿಲ್ಲವಲ್ಲಾ?'ಎಂದು ವಿನಯವಾಗಿ ಅರ್ಜುನ ಉತ್ತರಿಸಿದ.
ಪ್ರಣವದೆತ್ತ ವಿಚಾರವೆತ್ತಲು
ಗಣಿಕೆಯರಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ |
ಬಣಗು ಭಾರತ ವರ್ಷ ದವದಿರ
ಭಣಿತ ನಮ್ಮೀ ದೇವಲೋಕಕೆ
ಸಣಬಿನಾರವೆ ಚೈತ್ರರಥ ದೊಳಗೆ೦ದಳಿ೦ದುಮುಖಿ || ೨೬ ||
ಪದವಿಭಾಗ-ಅರ್ಥ: ಪ್ರಣವ(ಓಂಕಾರ- ವೇದಾಂತ)+ ಅದು+ ಎತ್ತ, ವಿಚಾರವು+ ಎತ್ತಲು? ಗಣಿಕೆಯರ(ವೇಶ್ಯೆಯರ, ಸೂಳೆಯರ) ಮನೆಯ ಸ್ವರಾಕ್ಷರ ಗಣಿತ ಲಕ್ಷಣವು+ ಎತ್ತ ರತಿಕೇಳೀ ವಿಧಾನದಲಿ? ಬಣಗು(ಅಲ್ಪ, ತಿಳಿಗೇಡಿ, ದರಿದ್ರ, ನಿಸ್ಸಾರ, ತುಚ್ಛ, ನೀಚ) ಭಾರತ ವರ್ಷದ+ ಅವದಿರ(ಅವರ) ಭಣಿತ(ಬಣಿತೆ= ಮಾತು,ವಚನ; ಚತುರೋಕ್ತಿ, ಜಾಣ್ಣುಡಿ, ಹೇಳಿದುದು, ಉಕ್ತವಾದುದು, ಜಾಣ್ಮೆ, ಚಾತುರ್ಯ, ಮೂದಲಿಕೆ) ನಮ್ಮ+ ಈ ದೇವಲೋಕಕೆ ಸಣಬಿನಾರವೆ ಚೈತ್ರರಥದೊಳಗೆ+ ಎ೦ದಳು+ ಇ೦ದುಮುಖಿ.
ಅರ್ಥ: ಪ್ರಣವದ ವೇದಾಂತ ಅದು ಯಾವ ಬಗೆಯ ವಿಚಾರವು; ಇತ್ತ ವೇಶ್ಯೆಯರ, ಸೂಳೆಯರ ಮನೆಯ ಸ್ವರಾಕ್ಷರ ಗಣಿತ ಲಕ್ಷಣದ ಮಾತುಕತೆ ವಿಚಾರ ಯಾವ ಲಕ್ಷಣದ್ದು? ಕೇವಲ ಶೃಂಗಾರ ರಸದ್ದು. ಮಾನವ ಧರ್ಮಶಾಸ್ತ್ರವಾದ ಅದಕ್ಕೂ ಇದಕ್ಕೂ ಹೋಲಿಕೆ ಇದೆಯೇ? ಕಾಮನಾಟದ ರತಿಕೇಳೀ ವಿಧಾನದಲ್ಲಿ ತಿಳಿಗೇಡಿ, ನಿಸ್ಸಾರ ಭಾರತವರ್ಷದ, ಅವರ ವಂಶದ ಮಾತು, ಚತುರೋಕ್ತಿಗಳು, ಸಂಬಂಧಗಳಿಗೆ ನಮ್ಮ ಈ ದೇವಲೋಕದಲ್ಲಿ ಚೈತ್ರರಥದೊಳಗೆ- ಚೈತ್ರದ ಶೃಂಗಾರ-ರಥದಲ್ಲಿ ಒಂದು ಸಣಬಿನದಾರದ ಬೆಲೆ,'(ಕವಡೆ ಕಿಮ್ಮತ್ತಿಲ್ಲ) ಎ೦ದಳು ಇ೦ದುಮುಖಿ ಊರ್ವಸಿ.
ಅಯ್ಯನಯ್ಯನ ನಿಮ್ಮವರ ಮು
ತ್ತಯ್ಯ ನಾತನ ಭಾವ ಮೈದುನ
ನಯ್ಯ ನಗ್ರಜರನುಜರೆ೦ಬೀ ಜ್ಞಾತಿ ಭಾ೦ಧವರ |
ಕೈಯಲರಿಗಳ ಹೊಯ್ದು ಶಿರನರಿ
ದುಯ್ಯ ಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆ೦ದಳು ನಗುತ ನಳಿನಾಕ್ಷಿ || ೨೭ ||
ಪದವಿಭಾಗ-ಅರ್ಥ: ಅಯ್ಯನ+ ಅಯ್ಯನ ನಿಮ್ಮವರ ಮುತ್ತಯ್ಯನು+ ಆತನ ಭಾವ ಮೈದುನನ+ ಅಯ್ಯನು+ ಅಗ್ರಜರ+ ಅನುಜರು+ ಎ೦ಬ+ ಈ ಜ್ಞಾತಿ ಭಾ೦ಧವರ ಕೈಯ+ ಅಲರಿಗಳ (ವಿಕಾಸ ) ಹೊಯ್ದು ಶಿರನರಿದು+ ಅಯ್ಯಲಾಡಿದವರ್ಗೆ, ಮೇಣ್ ಮಖದಯ್ಯಗಳಿಗೆ(ಮಖ- ಯಾಗ ಯಜ್ಞ)+ ಆನು(ನಾನು)+ ಒಬ್ಬಳೆ+ ಎ೦ದಳು ನಗುತ ನಳಿನಾಕ್ಷಿ.
ಅರ್ಥ:ಮುಂದುವರಿದು ಅವಳು,'ಅಪ್ಪ, ಅಪ್ಪನ ಅಪ್ಪ, ಅವನ ನಿಮ್ಮವರ ಮುತ್ತಜ್ಜನ ಮತ್ತು ಆತನ ಭಾವ ಮೈದುನ, ಅವನ ಅಪ್ಪ, ಅವನ ಅಣ್ಣಂದಿರು, ತಮ್ಮಂದಿರು, ಎ೦ಬ ಈ ಜ್ಞಾತಿಭಾ೦ಧವರ ಕೈಯ ಅಲರಿಗಳ- ವಂಶವೃಕ್ಷದ ಅರಳಿದ ಕವಲುಗಳನ್ನು- ಜ್ಞಾತಿ ಬಾಂದವರನ್ನು ರಾಜ ಕುಟುಂಬದವರನ್ನು- ಹೊಡೆದು, ಅವರೊಡನೆ ಯುದ್ಧಮಾಡಿ ತಲೆಗಳನ್ನು ಕತ್ತರಿಸಿ, ಶಿರವನ್ನು ಕತ್ತರಿಸಿ ಚೆಂಡಾಡಿದ, ಅದೇ ಅಶ್ವಮೇದಯಾಗ ಯಜ್ಞ ಮಾಡಿದವರಿಗೆಲ್ಲಾ ಸ್ವರ್ಗಕ್ಕೆ ಬಂದಾಗ ನಾನು ಒಬ್ಬಳೆ ರತಿಸುಖ ಕೊಡುವ ದೇವಕನ್ಯೆ,' ಎ೦ದು ನಗುತ್ತಾ ಕಮಲಲೋಚನೆಯಾದ ಊರ್ವಸಿ ಹೇಳಿದಳು.(ದಂಡಯಾತ್ರೆಯನ್ನು ಮಾಡಿ ಯುದ್ಧದಲ್ಲಿ ಜಯಿಸಬೇಕಾದ ರಾಜಸೂಯ ಯಾಗ, ಅಶ್ವಮೇಧ ಯಾಗ ಮಾಡಿದವ ಮಗ- ಅವನ ಅಪ್ಪ- ಅವನಅಜ್ಜ, ಇರಬಹುದು- ಅವರು ಸ್ವರ್ಗಕ್ಕೆ ಬಂದಾಗ ಅವರ ಜೊತೆ ಮಲಗುವವಳು ತಾನೊಬ್ಬಳೆ ಎಂದಳು ನಗುತ್ತಾ.)
ಮರೆಯ ಮಾತ೦ತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಚೆಯ
ನರಿಯದವನು ಸುರೇ೦ದ್ರನಾಗಲಿ ಚ೦ದ್ರನಾಗಿರಲಿ |
ಕುರಿಕಣಾ ಫಡ ಖೂಳ ನೀ
ನೆ೦ತರಿವೆಯೆನೆ ನಡನಡುಗಿ ಕೈಮುಗಿ
ದೆರಗಿ ಮಗುಳೀ ಮಾತನೆ೦ದನು ಪಾರ್ಥ ನೂರ್ವಶಿಗೆ || ೨೮ ||
ಪದವಿಭಾಗ-ಅರ್ಥ:ಮರೆಯ(ಗಂಡು ಹೆಣ್ಣಿನ ಸಂಬಂಧಮಾಡುವಾಗ ಬರುವ ಅಣ್ಣ, ಚಿಕ್ಕಪ್ಪ, ದಾಯಾದಿ, ಗೋತ್ರದೋಷ- ಇವು ಮರೆಯ ದೋಷ) ಮಾತ೦ತಿರಲಿ ಸಾಕು+ ಅದ ಮರೆದು ಕಳೆ, ಮಾನಿನಿಯರ+ ಇಚ್ಚೆಯನು+ ಅರಿಯದವನು ಸುರೇ೦ದ್ರನಾಗಲಿ ಚ೦ದ್ರನಾಗಿರಲಿ ಕುರಿ ಕಣಾ ಫಡ ಖೂಳ ನೀನು+ ಎ೦ತು+ ಅರಿವೆ+ ಯೆ+ ಎನೆ, ನಡನಡುಗಿ ಕೈಮುಗಿದು+ ಎರಗಿ ಮಗುಳು+ ಈ ಮಾತನು+ ಎ೦ದನು ಪಾರ್ಥನು+ ಊರ್ವಶಿಗೆ
ಅರ್ಥ:ಊರ್ವಸಿಯು,'ಹಳೆಯ ಸಂಬಂಧದಿಂದ ಬರುವ ಮರೆಯ-ದೋಷದ ಮಾತು ಹಾಗಿರಲಿ. ಸಾಕು ಅದನ್ನು ಮರೆತುಬಿಡು. ವನಿತೆಯರ ಆಸೆಯನ್ನು ಅರಿಯದವನು ಸುರೇ೦ದ್ರನಾಗಲಿ, ಚ೦ದ್ರನಾಗಿರಲಿ, ಅವನು ಕುರಿ ಕಣಾ! ಫಡ ಖೂಳನೇ ನೀನು ಅದನ್ನು ಹೇಗೆ ಅರಿತುಕೊಳ್ಳಬಲ್ಲೆ,' ಎನ್ನಲು, ಅರ್ಜುನನು ಅವಳ ಕೋಪಕ್ಕೆ ನಡನಡುಗಿ ಕೈಮುಗಿದು ಅವಳ ಪಾದಕ್ಕೆ ಬಿದ್ದು, ತಿರುಗಿ, ಪಾರ್ಥನು ಊರ್ವಶಿಗೆ ಈ ಮಾತನ್ನು ಹೇಳಿದನು.
ಇದು ಮನುಷ್ಯಶರೀರ ತದ್ದ
ರ್ಮದಲಿ ತನ್ನವಸಾನ ಪರಿಯ೦
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ |
ತ್ರಿದಶರಲ್ಲಿಗೆ ಬ೦ದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷವಿಧಿಯೆ೦ದ|| ೨೯ ||
ಪದವಿಭಾಗ-ಅರ್ಥ:ಇದು ಮನುಷ್ಯಶರೀರ ತತ್+ ಧರ್ಮದಲಿ ತನ್ನ+ ಅವಸಾನ ಪರಿಯ೦ತ+ ಇದರೊಳ್‍ವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ, ತ್ರಿದಶರುಲ್ಲಿಗೆ (ದೇವತೆಗಳ ಸಾಲಿಗೆ) ಬ೦ದರೆ+ ಆ ಮಾರ್ಗದಲಿ ನಡೆವುದು ದೇವತಾ ದೇಹದಲಿ ಬಲವತ್ತರವು ದೇಹ ವಿಶೇಷವಿಧಿಯೆ೦ದ.
ಅರ್ಥ:ಅರ್ಜುನನು ಭಯದಿಂದ,'ಇದು ತನ್ನದು ಮನುಷ್ಯಶರೀರ; ಆ ಧರ್ಮದಲ್ಲಿ ತನ್ನ ಅವಸಾನ- ಸಾವಿನ ಪರಿಯ೦ತ ಇದರಲ್ಲಿ ವ್ಯಭಿಚಾರದಿಂದ ವರ್ತಿಸಿದ ಬಳಿಕಿನಲಿ ತ್ರಿದಶರಲ್ಲಿಗೆ ಬ೦ದರೂ ಆ ಮಾರ್ಗದಲ್ಲಿಯೇ ನಡೆಯಬೇಕಾಗುದು. ದೇವತೆಗಳ ಸಾಲಿಗೆ ಸೇರಿದದಾಗ ದೇವತಾ ದೇಹದಲ್ಲಿ ವಿಶೇಷಬಲವು ದೇಹ ವಿಶೇಷವಿಧಿನಿಯಮ ಇರುವುದು ಎ೦ದ.
ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ಥಲವಿಧಿ ಸ
ನ್ನಿಹಿತರೆ೦ಬುದನರಿಯದೇ ಮೂಜಗದ ಜನವೆಲ್ಲ |
ಮಹಿಮೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲವೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರ ಯೆ೦ದಳಿ೦ದುಮುಖಿ || ೩೦ |
ಪದವಿಭಾಗ-ಅರ್ಥ:ಅಹುದಹುದಲೇ ಶ್ರೌತ ಪಥದಲಿ ಬಹಿರಿ, ನೀವೇ ಸ್ಮಾರ್ಥಲ ವಿಧಿ ಸನ್ನಿಹಿತರು+ ಎ೦ಬುದನು+ ಅರಿಯದೇ ಮೂಜಗದ ಜನವೆಲ್ಲ ಮಹಿಮೆಯೊಬ್ಬಳೊಳು+ ಐವರೊಡಗೂಡಿಹರು ನೀವು+ ಏನಲ್ಲವೇ? ನಿಸ್ಪೃಹರು ನೀವ್ ನಮ್ಮಲ್ಲಿ ಹರಹರ ಯೆ೦ದಳು+ ಇ೦ದುಮುಖಿ
ಅರ್ಥ:ಅದಕ್ಕೆ ಊರ್ವಸಿಯು, ಅಹುದು, ಅಹುದಲೇ; ನಿಜನಿಜ. ನೀವು ವೇದಸಮ್ಮತ ಶ್ರೌತ ಪಥದಲಿ ನೆಡೆದುಕೊಂದು ಬಂದಿರುವಿರಿ; ಉಪದೇಶಮಾಡುವ ನೀವೇ ಸ್ಮಾರ್ಥಕ್ರಮ ವಿಧಿ ಸನ್ನಿಹಿತರು ಎ೦ಬುದನ್ನು ಮೂರುಲೋಕದ ಜನರೆಲ್ಲ ಅರಿಯರೇ? ಸೌಂದರ್ಯದ ಮಹಿಮೆಯ ಒಬ್ಬ ಹೆಣ್ಣಿನಲ್ಲಿ ಐವರು - ನೀವು ಐದು ಜನರು ಒಡಗೂಡಿರುವಿರಿ. ಏನಲ್ಲವೇ?- ಇದು ಸುಳ್ಳೇ? ನೀವು ನಮ್ಮಲ್ಲಿ ನಿಸ್ಪೃಹರು, ಹರಹರ,'ಎ೦ದಳು ಇ೦ದುಮುಖಿ ಊರ್ವಸಿ.
ತಾಯ ನೇಮದಲ೦ದು ಕಮಲದ
ಳಾಯತಾಕ್ಷಿಯ ಕೂಟವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲೈ೦ಘ್ಯವಲೆ |
ಕಾಯಸೌಖ್ಯಕೆ ಕಾಮ ಸುಖದ ವಿ
ಡಾಯ ತತುವಕೆ ವೇಡೆಗೊ೦ಡು ನ
ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆ೦ದ || ೩೧ ||
ಪದವಿಭಾಗ-ಅರ್ಥ: ತಾಯ ನೇಮದಲಿ(ಆಜ್ಞೆಯಂತೆ)+ ಅ೦ದು ಕಮಲದಳಾಯತಾಕ್ಷಿಯ(ದ್ರೌಪದಿಯ) ಕೂಟವು(ವಿವಾಹವು)+ ಐವರಿಗಾಯಿತು+ ಅದು ತಪ್ಪೇನು ಜನನಿಯ ನುಡಿಯು+ ಅಲೈ೦ಘ್ಯವಲೆ(ಉಲ್ಲಂಗಿಸುವಹಾಗಿಲ್ಲವು); ಕಾಯಸೌಖ್ಯಕೆ ಕಾಮ ಸುಖದ ವಿಡಾಯ(ತೋರಿಕೆ, ಆಡಂಬರ, ಸಂಭ್ರಮ) ತತುವಕೆ(ತತ್ವಕ್ಕೆ) ವೇಡೆಗೊ೦ಡು(ಆಕ್ರಮಣ, ಆವರಣ, ಬಂಧನ. ಬಲೆ, ಜಾಲ) ನವಾಯಿಯಲಿ(ಹೊಸತನ, ನಾವಿನ್ಯ) ದುರ್ಗತಿಗೆ ದುವ್ವಾಳಿಸುವನು(ತೀವ್ರಗತಿ, ವೇಗವಾದ ನಡೆ)+ ಅಲ್ಲ+ ಎ೦ದ.
ಅರ್ಥ:ಅರ್ಜುನನು ಊರ್ವಸಿಯ ಭರ್ತ್ಸನೆಗೆ,'ತಾಯಿಯ ಆಜ್ಞೆಯಂತೆ ಅ೦ದು ದ್ರೌಪದಿಯ ವಿವಾಹವು ನಮ್ಮ ಐವರಿಗಾಯಿತು. ಅದು ತಪ್ಪೇನು? ಜನನಿಯ ನುಡಿಯು ಉಲ್ಲಂಗಿಸುವಹಾಗಿಲ್ಲವು; ದೇಹಸುಖಕ್ಕಾಗಿ, ಕಾಮಸುಖದ ಸಂಭ್ರಮ ಪಡುವ ಮಾರ್ಗದ ಬಲೆಯ ಜಾಲದಲ್ಲಿ ಹೊಸ ನೀತಿಯನನ್ನು ಅನುಸರಿಸಿ ದುರ್ಗತಿಗೆ ನುಗ್ಗುವವನು ಅಲ್ಲ,' ಎ೦ದ.
ತಾಯ ನೇಮದಲೈವರಿಗೆಕಮ
ಲಾಯಿತಾಕ್ಷಿಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲ೦ಘ್ಯವೆ ನಿನಗೆ ಪಿತೃವಚನ |
ರಾಯನಟ್ತಲು ಬ೦ದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀಬಲ್ಲೆಯೆ೦ದಳು ವನಿತೆ ವಿನಯದಲಿ || ೩೨ ||
ಪದವಿಭಾಗ-ಅರ್ಥ: ತಾಯ ನೇಮದಲಿ+ ಐವರಿಗೆ ಕಮಲಾಯಿತಾಕ್ಷಿಯ ಕೂಟವೇ? ಸುರರಾಯ ನಿಮ್ಮಯ್ಯನು ವಿಲ೦ಘ್ಯವೆ? ನಿನಗೆ ಪಿತೃವಚನರಾಯನು+ ಅಟ್ಟಲು ಬ೦ದೆನು+ ಈ ಕುಸುಮಾಯುಧನ ಕಗ್ಗೊಲೆಯ ಕೆದರುವ+ ಉಪಾಯವನು ನೀಬಲ್ಲೆಯೆ೦ದಳು ವನಿತೆ ವಿನಯದಲಿ.
ಅರ್ಥ:ಆಗ ಊರ್ವಸಿಯು ವಿನಯದಿಂದ,'ನೀನು ತಾಯಿಯ ನೇಮದಂತೆ ನೀವು ಐವರಿಗೆ ದ್ರೌಪದಿಯ ಕೂಟವಾಯಿತಲ್ಲವೇ? ಈಗ ಸುರರಾಯ ಇಂದ್ರನು ನಿಮ್ಮ ಅಯ್ಯನು- ತಂದೆ. ತಂದೆಯ ಮಾತು, ಪಿತೃವಚನ ಉಲ್ಲಂಘನೀಯವೇ ನಿನಗೆ? ರಾಯ ಇಂದ್ರನು ಕಳುಹಿಸಿದ್ದರಿಂದ ಬ೦ದೆನು. ನನ್ನಲ್ಲಿರುವ ಈ ಕುಸುಮಾಯುಧನ-ಮನ್ಮಥನ ಕಗ್ಗೊಲೆಯನ್ನು ತಪ್ಪಿಸುವ ಉಪಾಯವನ್ನು ನೀನು ಬಲ್ಲೆ.' ಎ೦ದಳು.
ಸರಸಿಜದ ಮಧು ಮಧುಕರನನು
ಕರಸಿದೊಡೆ ಚ೦ದ್ರಿಕೆ ಚಕೋರನ
ವರಿಸಿದರೆ ನಿಧಿಲಕ್ಷಿ ಸುಳಿದರೆ ನಯನ ವೀಧಿಯಲಿ |
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚ೦ದ್ರಿಕೆಯನಾ ನಿಧಿಯನಾ ವಧುವ || ೩೩ ||
ಪದವಿಭಾಗ-ಅರ್ಥ: ಸರಸಿಜದ(ಕಮಲ) ಮಧು ಮಧುಕರನ(ಜೇನು- ದುಂಬಿ) ಅನುಕರಸಿದೊಡೆ(ಅರಸಿ ಹೋದರೆ?) ಚ೦ದ್ರಿಕೆ ಚಕೋರನ(ಚಕೋರ ಜೊನ್ನವಕ್ಕಿ ಬೆಳದಿ೦ಗಳನ್ನು ಸೇವಿಸಿ ಬದುಕುವುದೆ೦ದು ನ೦ಬಲಾಗಿರುವ ಪಕ್ಷಿ) ವರಿಸಿದರೆ, ನಿಧಿಲಕ್ಷಿ ಸುಳಿದರೆ ನಯನ ವೀಧಿಯಲಿ, (ಕಣ್ಣಿನ ನೋಟದಲ್ಲಿ) ಗರುವೆಯರು(ಉತ್ತಮರು) ಮೇಲಿಕ್ಕಿ ಪುರುಷನನು+ ಅರಸಿದರೆ(ಬಯಸಿದರೆ) ಜಾರುವರೆ(ಓಡಿ ತಪ್ಪಸಿಕೊಳ್ಳುವರೆ?) ಸುಡಲಿ+ ಆ ಸರಸಿಜವನು+ ಆ ಚ೦ದ್ರಿಕೆಯನು+ ಆ ನಿಧಿಯನು+ ಆ ವಧುವ.
ಅರ್ಥ: ಊರ್ವಸಿ ಕೋಪ ಮತ್ತು ದುಃಖದಿಂದ ಹೇಳಿದಳು,'ಕಮಲದ ಮಧುವನ್ನು ದುಂಬಿ ಅನುಕರಸಿದರೆ, ಚ೦ದ್ರಿಕೆ ಚಕೋರನನ್ನು ವರಿಸಿದರೆ- ಬಯಸಿದರೆ; ನಿಧಿಲಕ್ಷಿಯು ಕಣ್ಣಿನ ನೋಟದಲ್ಲಿ ಕಾಣುವಂತೆ ಸುಳಿದರೆ; ಉತ್ತಮವನಿತೆಯರು) ಮೇಲೆಬಿದ್ದು ಪುರುಷನನು ಬಯಸಿದರೆ ಓಡಿ ತಪ್ಪಸಿಕೊಳ್ಳುವರೆ? ಹಾಗಿದ್ದರೆ ಸುಡಲಿ ಆ ಸರಸಿಜವನು, ಆ ಚ೦ದ್ರಿಕೆಯನು, ಆ ನಿಧಿಯನ್ನು ಆ ವಧುವನ್ನು (ತನ್ನನ್ನು ಎಂದು ಸೂಚನೆ- ಕೋಪದ ಮಾತು).
ತಿಳುಹಿದರೆ ಸುರ ಲೋಕದವರತಿ
ಗಳಹೆಯರಲಾಯೆ೦ಬೆ ಮನ್ಮಥ
ಖಳ ಕಣಾ ನಿಷ್ಕರುಣಿ ನೀಸೌಭಾಗ್ಯ ಗರ್ವದಲಿ |
ಬಲುಮೆ ಬಿದ್ದುದು ವಾಸಿಯಲಿಕ೦
ದೊಳಸುಗೊ೦ಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆ೦ದಳಿ೦ದುಮುಖಿ || ೩೪ ||
ಪದವಿಭಾಗ-ಅರ್ಥ:ತಿಳುಹಿದರೆ ಸುರ ಲೋಕದವರು+ ಅತಿಗಳಹೆಯರಲಾ(ಅತಿ ಮಾತನಾಡುವವರು)+ ಯೆ೦ಬೆ ಮನ್ಮಥ ಖಳ(ದುಷ್ಟ) ಕಣಾ! ನಿಷ್ಕರುಣಿ, ನೀಸೌಭಾಗ್ಯ ಗರ್ವದಲಿ ಬಲುಮೆ (ಶ್ರೇಷ್ಠತೆ, ಬಲಾತ್ಕಾರ) ಬಿದ್ದುದು, ವಾಸಿಯಲಿ( ಹುರುಡು,ಛಲ,ಹಠ ಕೀರ್ತಿ,ಹೆಸರು ಗುಣಮಟ್ಟ,ಸ್ಥೈರ್ಯ ಘನತೆ,ಮೇಲ್ಮೆ ಅಹಂಕಾರ,ಗರ್ವ) (ದೇಹ ಸ್ಥಿತಿಯಲ್ಲಿ ಉಂಟಾಗುವ)ಸುಧಾರಣೆ) ಕ೦ದೊಳಸುಗೊ೦ಡುದು(ಕಣ್ಣು+ ತೊಳಸುಗೊ೦ಡುದು- ಹೊಟ್ಟೆಯಲ್ಲಿ ಕಲಕಿದಂತಾಗುವಿಕೆ, ಓಕರಿಕೆ ಬರುವಂತಾಗುವಿಕೆ, ಘರ್ಷಣೆ, ತಿಕ್ಕಾಟ) ಕಾಮಶರ(ಮನ್ಥಥನ ಬಾಣ) ಮನವ+ ಅಳುಕೆ ಕೆಡಹಿತು ವಿರಹತಾಪದಲಿ+ ಎ೦ದಳು+ ಇಂ೦ದುಮುಖಿ- ಊರ್ವಸಿ.
ಅರ್ಥ:ತಿರಸ್ಕಾರದಿಂದ ನೊಂದ ಊರ್ವಸಿ ಮನಸೋತು,'ನಾನು ನಿನಗೆ ವಿವರವಾಗಿ ತಿಳುಹಿಸಿದರೆ, ನೀನು ಸುರ ಲೋಕದವರು ಅತಿ ಮಾತನಾಡುವವರು ಎನ್ನುವೆ; ಮನ್ಮಥನು ದುಷ್ಟ ಕಣಾ! ನಿಷ್ಕರುಣಿ, ನಿನ್ನಲ್ಲಿ ನನ್ನ ಮನಸ್ಸನ್ನು ತೊಡಗಿಸಿ ಸಂಕಟಕೊಡುತ್ತಿದ್ದಾನೆ. ನೀನು ತ್ರಿಲೋಕ ಸುಂದರಿ ದೇವಕನ್ಯೆ ಬಯಸಿ ಬಂದ ಸೌಭಾಗ್ಯದ ಗರ್ವದಲ್ಲಿ ನಿನಗೆ ಶ್ರೇಷ್ಠತೆಯ ಹೆಮ್ಮೆ ಬಿದ್ದಿದೆ, ನಿನಗೆ ಘನತೆಯ ಅಹಂಕಾರ, ಗರ್ವಮೆತ್ತಿಕೊಂಡಿದೆ. ಬಯಸಿಬಂದ ನನಗೆ ಕಣ್ಣು ಕತ್ತಲೆಗಟ್ಟಿ ಹೊಟ್ಟೆ ತೊಳಸಿದಂತಾಗಿದೆ. ಒಮ್ಮೆ ಮನಸ್ಸುಕೊಟ್ಟು ಬಯಕೆಯಿಂದ ಮನ್ಥಥನ ಬಾಣ ಮನವನ್ನು ವಿರಹತಾಪದಿಂದ ಅಳುಕಿ ಕುಗ್ಗಿಸಿ ಕೆಡಹಿತು. ಎ೦ದಳು.

ಸಂಗಕ್ಕೆ ಅರ್ಜುನನ ನಿರಾಕರಣೆ - ಊರ್ವಸಿಯ ಕೋಪ[ಸಂಪಾದಿಸಿ]

ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ದೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯ೦ಬು ನಾಟುವುದೆ |
ಖೋಡಿಯೇಕಿದಕವ್ವೆ ಮಕ್ಕಳ
ನೋಡಬ೦ದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯ೦ಗೈಯಿ ನೀವೆ೦ದ || ೩೫ ||
ಪದವಿಭಾಗ-ಅರ್ಥ: ಕಾಡಲಾಗದು, ನಿಮ್ಮೊಡನೆ ಮುರಿದಾಡಲು(ಜಗಳವಾಡಲು)+ ಅಮ್ಮೆನು(ಆಗದು, ಶಕ್ತಿಇಲ್ಲ, ಇಷ್ಟವಿಲ್ಲ.), ಮನಕೆ ದೈರ್ಯದ ಜೋಡ ತೊಟ್ಟು(ವೇಷತೊಟ್ಟು)+ಇದಿರಾಗಿ ನಿಲೆ(ನಿಂತರೆ, ನಿಲ್ಲಲು) ನನೆಯ೦ಬು(ಹೂಬಾಣ, ಕಾಮನ ಬಾಣ) ನಾಟುವುದೆ ಖೋಡಿಯೇಕೆ(ಸಿಟ್ಟು ಏಕೆ)+ ಇದಕೆ+ ಅವ್ವೆ ಮಕ್ಕಳನೋಡ ಬ೦ದರೆ ಬೇರೆ ಕಷ್ಟವನು (ಆಗದ, ಅನುಚಿತ ವಿಚಾರವನ್ನು)+ ಆಡುವರೆ ಬಲ್ಲವರು(ತಿಳಿದವರು); ಬಿಜಯ೦ಗೈಯಿ ನೀವು+ ಎ೦ದ
ಅರ್ಥ:ಅರ್ಜುನನು ಊರ್ವಸಿಯನ್ನು ಕುರಿತು,'ನನ್ನನ್ನು ಕಾಡಬಾರದು, ನಿಮ್ಮೊಡನೆ ಜಗಳವಾಡಲು ಇಷ್ಟವಿಲ್ಲ. ಮನಸ್ಸಿಗೆ ದೈರ್ಯದ ವೇಷತೊಟ್ಟು ನಿಮಗೆ ಎದುರಾಗಿ ನಿಲ್ಲಲು ಕಾಮನ ಹೂಬಾಣ, ನಾಟುವುದೆ? ನನ್ನಲ್ಲಿ ನಿಮ್ಮಬಗೆಗೆ ಕಾಮಭಾವನೆ ಉದಿಸುವುದೆ? ಇಲ್ಲ. ಇದಕ್ಕೆ ಹಟ ಸಿಟ್ಟು ಏಕೆ? ತಾಯಿಯು ಮಕ್ಕಳನೋಡಲು ಬ೦ದರೆ, ಬಲ್ಲವರು ಬೇರೆ ಕಷ್ಟವನ್ನು ಆಡುವರೆ? ನೀವು ನಿಮ್ಮ ಮನೆಗೆ ಬಿಜಯ೦ಗೈಯಿರಿ,' ಎ೦ದ.
ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲು ವಿಧದ ಬಹು
ವಾಸಿಗಳು ಪಲ್ಲವಿಸಿದವು ಕಲ್ಲವಿಸಿತನುತಾಪ |
ಆಸೆ ಪೈಸರವೋಯ್ತು ಕಡು ಝಳ
ಸೋಸಿದುದು ಸುಯ್ಲಿನಲಿ ಕ೦ಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ || ೩೬ ||
ಪದವಿಭಾಗ-ಅರ್ಥ:ರೋಷವು+ ಈರೆಲೆಯಾಯ್ತು(ಈರೆಲೆ-ಈರ್+ ಎಲೆ= ಎರಡು ಎಲೆ, ಈರೆಲೆಯಾಯ್ತು= ಇಮ್ಮಡಿಸಿತು ) ಲಜ್ಜೆಯ ಮೀಸಲು+ ಅಳಿದುದು ಬಲು ವಿಧದ ಬಹುವಾಸಿಗಳು ಪಲ್ಲವಿಸಿದವು, ಕಲ್ಲವಿಸಿತು+ ಅನುತಾಪ (ಬೇಗೆ, ಸಂತಾಪ) ಆಸೆ ಪೈಸರವೋಯ್ತು(ಪೈಸರ- ಕುಗ್ಗುವುದು, ಕುಸಿಯುವುದು), ಕಡು ಝಳ(ಅತಿ ಶಾಖ) ಸೋಸಿದುದು ಸುಯ್ಲಿನಲಿ ಕ೦ಗಳು ಕೇಸುರಿಯ(ಕೆಂಪನ್ನು) ಮುಕ್ಕುಳಿಸಿದವು ಹೆಕ್ಕಳಿಸಿ(ಹೆಕ್ಕಳಿಸು- ಅಧಿಕವಾಗು, ಹೆಚ್ಚಾಗು) ಕಾಮಿನಿಯ.
ಅರ್ಥ:ಅರ್ಜುನನ ಮಾತು ಕೇಳಿ ಊರ್ವಸಿಯ ರೋಷವು ಇಮ್ಮಡಿಸಿತು. ಲಜ್ಜೆಯ ಮಿತಿ ತಪ್ಪಿತು. ಅವಳಲ್ಲಿ ಬಹಳ ವಿಧದ ಭಾವನೆಗಳು ಅರಳಿದವು. ದುಃಖ, ಸಂಕಟ ಹೆಚ್ಚಿತು; ಆಸೆ ಕುಗ್ಗಿತು; ದೇಹ ಬಿಸಿಯಾಗಿ ಆಕೆಯ ಉಸಿರಿನಲ್ಲಿ ಅತಿಯಾಗಿ ಶಾಖ ಹೊರಹೊಮ್ಮಿತು. ಊರ್ವಸಿಯ ಕಣ್ಣುಗಳು ಕೆಂಪಾಗಿ, ದೊಡ್ಡದಾಗಿ ಅರಳಿ ಹೊರಹೊಮ್ಮದವು.
ಸೊ೦ಪಡಗಿತು ಮುಖೇ೦ದು ತನುಲತೆ
ಕ೦ಪಿಸಿದು ದಡಿಗಡಿಗೆ ಮೈ ತನಿ
ಗ೦ಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ |
ತ೦ಪಿನಲಿ ಶಿಖಿ ಮಧುರದಲಿ ಕಟು
ನು೦ಪಿನಲಿ ಬಿರಿಸಮೃತದಲಿ ವಿಷ
ಗು೦ಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ || ೩೭ ||
ಪದವಿಭಾಗ-ಅರ್ಥ:ಸೊ೦ಪು+ ಅಡಗಿತು ಮುಖೇ೦ದು ತನುಲತೆ ಕ೦ಪಿಸಿದು ದಡಿಗಡಿಗೆ(ಪದೇಪದೇ), ಮೈ ತನಿಗು೦ಪಿನಲಿ(ಹಿತವಾಧ ಕಂಪಿನಿಂದ) ಮಘಮಘಿಸಿತು+ ಅಮಲ ಸ್ವೇದ(ಬೆವರು) ಸಲಿಲದಲಿ(ನೀರು, ಜಲ) ತ೦ಪಿನಲಿ ಶಿಖಿ(ಬೆಂಕಿ), ಮಧುರದಲಿ ಕಟು, ನು೦ಪಿನಲಿ ಬಿರಿ, ಸಮೃತದಲಿ ವಿಷ, ಗು೦ಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ.
ಅರ್ಥ:ಊರ್ವಸಿಯ ಚಂದಿರನ ಹೋಲುವ ಮುಖ, ಕೋಮಲ ಸೌಂದರ್ಯ ಅಡಗಿತು. ಅವಳ ಬಳ್ಳಿಯದೇಹ ಸಿಟ್ಟಿನಿಂದ ಅಡಿಗಡಿಗೆ ಕ೦ಪಿಸಿತು. ಅವಳ ಮೈ ಹಿತವಾಧ ಕಂಪಿನಿಂದ ಮಘಮಘಿಸಿ ದೇವಕನ್ಯೆಯಾದ ಅವಳ ಬೆವರನ ನೀರಿನಿಂದ ಪರಿಮಳ ಬೀರಿತು; ಹೀಗೆ ತ೦ಪಿನ ದೇಹದಲ್ಲಿ ಬೆಂಕಿ, ನುಡಿಯ ಮಧುರದಲ್ಲಿ ಕಟುತ್ವ; ನುಣುಪಿನಲ್ಲಿ ಬಿರಿ-ಒರಟು, ಸ+ ಅಮೃತದಲಿ ವಿಷ, ಹೀಗೆ ವಿಷಮರೀತಿಯ ಸ್ಥಿತಿಗಳು ಒಟ್ಟಾಗಿ ಗು೦ಪಿನಲ್ಲಿ ನೆಲೆಯಾದಂತೆ ಘನರೋಷವು ಊರ್ವಸಿಯಲ್ಲಿ ತೊರಿತು.
ಕೆತ್ತಿದವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ದಾರೆಗ೦ಗಳಲಿ ||
ಎತ್ತಿದುಬ್ಬೇಗದ ವಿಕಾರದ
ಚಿತ್ತಬುದ್ಧಿ ಮನ೦ಗಳಾತ್ಮನ
ಜೊತ್ತಿಸಿದವದ್ಭುತದಹ೦ಕಾರದಲಿ ಕಾಮಿನಿಯ || ೩೮ ||
ಪದವಿಭಾಗ-ಅರ್ಥ: ಕೆತ್ತಿದವು ತುಟಿ ಕದಪಿನಲಿ(ಕೆನ್ನೆ) ಕೈಹತ್ತಿಸುತ(ತಿಕ್ಕುತ್ತಾ) ತೂಗಿದಳು ಶಿರವನು, ತತ್ತ ರೋಷಾಯುಧವ ಮಸೆದಳು, ದಾರೆಗ೦ಗಳಲಿ(ಕಣ್ಣೀರಿನ ಕೆಂಪು ಕಣ್ಣಿನಲ್ಲಿ) ಎತ್ತಿದ+ ಉಬ್ಬೇಗದ ವಿಕಾರದ ಚಿತ್ತಬುದ್ಧಿ ಮನ೦ಗಳು+ ಆತ್ಮನ ಜೊತ್ತಿಸಿದವು(ಜೊತ್ತು= ಜೊತೆ; ಸೇರಿಸು)+ ಅದ್ಭುತದ+ ಅಹ೦ಕಾರದಲಿ ಕಾಮಿನಿಯ(ಊರ್ವಸಿಯ).
ಅರ್ಥ:ಸಿಟ್ಟಿನಲ್ಲಿ ಅವಡುಗಚ್ಚಿದ ಊರ್ವಸಿಯ ತುಟಿಗಳು ಕೆನ್ನೆಗಳಿಗೆ ಸೆರಿದವು; ಅವಳು ಕೈಗಳನ್ನು ತಿಕ್ಕುತ್ತಾ ತಲೆಯನ್ನು ತೂಗಿದಳು. ಅವಳ ರೋಷದ ಆಯುಧವನ್ನು ಕೆಂಪು ಕಣ್ಣಿನ ಕಣ್ಣೀರಿನ ದಾರೆಗ೦ಗಳಲ್ಲಿ ಮಸೆದಳು. ಊರ್ವಸಿಯ ಅದ್ಭುತದ ಅಹ೦ಕಾರದಿಂದ, ಹೆಚ್ಚಿದ ಉದ್ವೇಗದಿಂದ ವಿಕಾರದ ಚಿತ್ತಬುದ್ಧಿ ಮನಸ್ಸುಗಳು ಅವಳ ಆತ್ಮನಲ್ಲಿ ಸೇರಿದವು.

ಊರ್ವಸಿಯ ಶಾಪ[ಸಂಪಾದಿಸಿ]

ಎಲವೊ ಭ೦ಡರ ಭಾವ ಖೂಳರ
ನಿಳಯ ಖಳರಧಿನಾಥ ವ೦ಚಕ
ತಿಲಕ ಗಾವಿಲರೊಡೆಯ ಬ೦ಧುವೆ ದುಷ್ಟ ನಾಯಕರ |
ಎಲೆ ಮರುಳೆ ತಾನಾವಳೆ೦ಬುದ
ತಿಳಿಯಲಾ ನೀನಾವನೆ೦ಬುದ
ನಿಳೆಯರಿಯದೇ ಭ೦ಡ ಫಡ ಹೋಗೆ೦ದಳಿ೦ದುಮುಖಿ || ೩೯ ||
ಪದವಿಭಾಗ-ಅರ್ಥ:ಎಲವೊ ಭ೦ಡರ ಭಾವ, ಖೂಳರ ನಿಳಯ(ವಾಸಸ್ಥಾನ), ಖಳರ+ ಅಧಿನಾಥ(ಒಡೆಯ), ವ೦ಚಕತಿಲಕ(ವಂಚಕರಲ್ಲಿ ಶ್ರೇಷ್ಠ), ಗಾವಿಲರ(ಹೆಡ್ಡ, ದಡ್ಡ)+ ಒಡೆಯ, ಬ೦ಧುವೆ ದುಷ್ಟ ನಾಯಕರ, ಎಲೆ ಮರುಳೆ ತಾನು+ ಯಾವಳೆ೦ಬುದ ತಿಳಿಯಲಾ! ನೀನು+ ಆವನು+ ಎ೦ಬುದನು+ ಇಳೆಯು(ಭೂಲೋಕ)+ ಅರಿಯದೇ (ರೋಗ ರುಜಿನ- ಜರೆ-ಮುಪ್ಪು ಮರಣ ಇರುವವ) ಭ೦ಡ ಫಡ ಹೋಗು+ ಎ೦ದಳು+ ಇ೦ದುಮುಖಿ.
ಅರ್ಥ:ಮುಪ್ಪು, ರೋಗ, ಮರಣವಿಲ್ಲದ ಅತ್ಯುನ್ನತ ದೇವಕನ್ಯೆ ಸಾಮಾನ್ಯ ಮಾನವನ ಬಳಿ ಸಂಗ ಬಯಸಿ ಬಂದಾಗ ತಿರಸ್ಕಾರಕ್ಕೆ ಒಳಗಾಗಿ ತನ್ನ ಅಭಿಮಾಣ ಅಹಂಕಾರಕ್ಕೆ ಭಂಗಪಟ್ಟು- ಅದರಿಂದ ಉಂಟಾದ ಕೋಪದಿಂದ ನಡುಗುತ್ತಾ, ತ್ರಿಲೋಕಸುಂದರಿ ಊರ್ವಸಿಯು ಅರ್ಜುನನ್ನು ಕುರಿತು,'ಎಲವೊ ಭ೦ಡರ ಭಾವ, ಖೂಳರ ನಿಲಯ, ಖಳರ ಅಧಿನಾಥ, ವ೦ಚಕತಿಲಕ, ಹೆಡ್ಡರ ಒಡೆಯ, ದುಷ್ಟ ನಾಯಕರ ಬ೦ಧುವೆ, ಎಲೆ ಮರುಳೆ, ತಾನು ಯಾವಳು ಎಂಬುದ ತಿಳಿಯಲಾ! ತಿಳಿದುಕೋ- ಸಾಮಾನ್ಯಳಲ್ಲ ಅತ್ಯುನ್ನಯ ಬ್ರಹ್ಮನ ಮಾನಸ ಸೃಷ್ಠಿಯ ಸೌಂದರ್ಯ ದೇವತೆ. ನೀನು ಯಾವನು ಎ೦ಬುದನ್ನು ಲೋಕವು ತಿಳಿಯದೇ? ಜರಾಮರಣವುಳ್ಳ ಸಾಮಾನ್ಯ ಮಾನವ! ನನ್ನನ್ನು ತಿರಸ್ಕರಿಸಿ ಅವಮಾನ ಮಾಡುವೆಯಾ? ಭ೦ಡ ಫಡ! ಹೋಗು ಎ೦ದಳು.'
ಒಲಿದು ಬ೦ದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿ೦ಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇ೦ದ್ರ ಕಟಕದಲಿ |
ಎಲೆ ನಪು೦ಸಕ ಗ೦ಡು ವೇಷದ
ಸುಳಿವು ನಿನಗೇಕನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ || ೪೦ ||
ಪದವಿಭಾಗ-ಅರ್ಥ: ಒಲಿದು ಬ೦ದವರು+ ಆವು(ನಾವು) ಸೊಬಗಿನೊಳು+ ಒಲಿಸಿ ಮರುಗಿಪ(ಮರುಗಿಸುವ- ದುಃಖ ಕೊಡುವ) ಮಿ೦ಡ(ಅನೀತಿ ಮಾರ್ಗದವ,) ನೀನು+ ಅತಿಸುಲಭರು+ ಆವ್? ದುರ್ಲಭನು ನೀ ದೇವೇ೦ದ್ರ ಕಟಕದಲಿ? ಎಲೆ ನಪು೦ಸಕ ಗ೦ಡು ವೇಷದ ಸುಳಿವು ನಿನಗೇಕೆ ಎನುತ ಸತಿ ಕಳವಳಿಸಿ ಕರವ+ ಎತ್ತಿದಳು ಹಿಡಿ ಹಿಡಿ ಶಾಪವಿದೆ+ ಯೆನುತ.
ಅರ್ಥ:ಅರ್ಜುನಾ, 'ನಾವು ಒಲಿದು ಪ್ರೀತಿಯಿಂದ ಬ೦ದವರು; ಸೊಬಗಿನಿಂದ ಒಲಿಸಿ ನಂತರ ದುಃಖ ಕೊಡುವ ಮಿ೦ಡನು ನೀನು. ಅತಿಸುಲಭರು ನಾವು?(ಅಲ್ಲ) ದೇವೇ೦ದ್ರ ಗುಂಪಿನಲ್ಲಿ ದುರ್ಲಭನು ನೀನು?(ಅಲ್ಲ); ಎಲೆ ನಪು೦ಸಕ, ಗ೦ಡು ವೇಷದ ಸುಳಿವು-ಒಡನಾಟ ನಿನಗೇಕೆ? ಎನ್ನುತ್ತಾ 'ಹಿಡಿ ಹಿಡಿ ಶಾಪವಿದೆ' ಎನ್ನುತ್ತಾ ಸತಿ ಊರ್ವಸಿ ಕಳವಳ,ದುಃಖ, ಸಂಕಟದಿಂದ ಕೈಯನ್ನು ಎತ್ತಿದಳು.
ತುಳುಕಿದದ್ಭುತ ರೋಷ ಸುಯ್ಲಿನ
ಝಳ ಹೊಡೆದು ಮೂಗುತಿಯ ಮುತ್ತಿನ
ಬೆಳಕು ಕು೦ದಿತು ಕು೦ದಿತಮಳಚ್ಚವಿ ಮುಖಾ೦ಬುಜದ |
ಹೊಳೆ ಹೊಳೆವ ಕೆ೦ದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ಗಳ ಮರೀಚಿಯಲೆಸೆದುದೆತ್ತಿದ ಹಸ್ತ ವೂರ್ವಶಿಯ || ೪೧ ||
ಪದವಿಭಾಗ-ಅರ್ಥ: ತುಳುಕಿದ+ ಅದ್ಭುತ ರೋಷ ಸುಯ್ಲಿನ(ಉಸಿರುಬಿಡುವ) ಝಳ ಹೊಡೆದು ಮೂಗುತಿಯ ಮುತ್ತಿನ ಬೆಳಕು ಕು೦ದಿತು, ಕು೦ದಿತು+ ಅಮಳ(ಶುದ್ಧ) ಚ್ಚವಿ ಮುಖಾ೦ಬುಜದ, ಹೊಳೆ ಹೊಳೆವ ಕೆ೦ದಳದ ಸೆಳ್ಳ+ ಉಗುರೊಳ ಮಯೂಖದ(ಕಿರಣ, ರಶ್ಮಿ, ಕಾಂತಿ) ಮಣಿಯ ಮುದ್ರಿಕೆಗಳ ಮರೀಚಿಯಲಿ+ ಎಸೆದುದು+ ಎತ್ತಿದ ಹಸ್ತ ವೂರ್ವಶಿಯ.
ಅರ್ಥ:ಅದ್ಭುತ ರೋಷ ತುಳುಕುತ್ತಿರುವ ಉಸಿರಿನ ಝಳ ಹೊಡೆಯಿತು. ಅದು ಅವಳ ಮೂಗುತಿಯ ಮುತ್ತಿನ ಬೆಳಕನ್ನು ಕು೦ದಿಸಿತು. ಅವಳ ಅಮಲ ದೇಹಚ್ಚವಿ- ದೇಹದ, ಅ೦ಬುಜದ ಮುಖದ, ಕಾಂತಿ ಕು೦ದಿತು. ಹೊಳೆ ಹೊಳೆವ ಕೆ೦ಪು ದಳದ ಸೆಳ್ಳ-ತೆಳು ಉಗುರ, ಕಿರಣದ ಮಣಿಯ ಮುದ್ರಿಕೆಗಳ ಬೆಳಕಿನಲ್ಲಿ ವೂರ್ವಶಿಯ ಎತ್ತಿದ ಹಸ್ತ ಎಸೆದುದು- ಶೋಭಿಸಿತು.
ರಾಹು ತುಡುಕಿದ ಶಶಿಯೋ ಮೇಣ್ ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತ ಸಿ೦ಹದ ಗುಹೆಯ ಮೃಗ ಮದವೊ |
ಲೋಹಧಾರೆಯ ಮಧುವೊ ಕಳಿತ ಹ
ಲಾಹಳದಕಜ್ಜಾಯವೆನಿಸಿತು
ರೂಹು ಸುಮನೋಹರ ಭಯ೦ಕರವಾಯ್ತು ಸುರಸತಿಯ || ೪೨ ||
ಪದವಿಭಾಗ-ಅರ್ಥ: ರಾಹು ತುಡುಕಿದ ಶಶಿಯೋ(ಚಂದ್ರನೋ)? ಮೇಣ್ ರೌದ್ರ+ ಅಹಿ(ಸರ್ಪ) ಮಸ್ತಕ(ತಲೆಯ) ಮಾಣಿಕವೊ? ಕಡುಗಾಹಿನ(ಕಡು- ಉಗ್ರ, ಕಾಹಿನ- ಬಟ್ಟಲ ಅಮೃತವೊ? ಕುಪಿತ- ಕೋಪಗೊಂಡ ಸಿ೦ಹದ ಗುಹೆಯ ಮೃಗ ಮದವೊ? ಲೋಹಧಾರೆಯ ಮಧುವೊ? ಕಳಿತ(ಪೂರ್ಣ ಹಣ್ಣಾದ?) ಹಲಾಹಳದ ಕಜ್ಜಾಯವೋ?+ ಎನಿಸಿತು ರೂಹು(ರೂಪ) ಸುಮನೋಹರ ಭಯ೦ಕರವಾಯ್ತು. ಸುರಸತಿಯ.
ಅರ್ಥ:ಸುರಸತಿಯಾದ ಊರ್ವಸಿಯ ಆವೇಶ ಸ್ಥಿತಿಯು, ರಾಹು ಹಿಡಿದ ಚಂದ್ರನೋ? ಅಥವಾ ಸಿಟ್ಟಿನ ಸರ್ಪ ತಲೆಯ ಮಾಣಿಕ್ಯವೊ? ಕಡುಗಾಹಿನ+ ಅಮೃತವೊ? ಕುಪಿತ ಸಿ೦ಹದ ಗುಹೆಯ ಮೃಗ ಮದವೊ? ಲೋಹಧಾರೆಯ ಮಧುವೊ? ಪಕ್ವವಾದ ಹಲಾಹಲ ವಿಷದ ಕಜ್ಜಾಯವೋ? ಎನ್ನುವಂತೆ ಸುರಸತಿ ಊರ್ವಸಿಯ ರೂಪ ವಿರೋಧಾಭಾಸಗಳಿಂದ ಕೂಡಿದ್ದರೂ ಸುಮನೋಹರವೂ ಭಯ೦ಕರವೂ ಆಯ್ತು ಎನಿಸಿತು.
ನರ ಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊ೦ದು ವರುಷಾ೦
ತರ ನಪು೦ಸಕ ನಾಗಿ ಚರಿಸು ನಿರ೦ತರಾಯದಲಿ |
ಹರಿಯ ಮೊರೆವೊಗು ಹರನ ನೀನನು
ಸರಿಸು ನಿಮ್ಮಯ್ಯ೦ಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ || ೪೩ ||
ಪದವಿಭಾಗ-ಅರ್ಥ: ನರ(ಮಾನವ) ಮೃಗಾಧಮ(ಮೃಗ+ ಅಧಮ- ನೀಚ) ನಿಮ್ಮ ಭಾರತವರುಷ ಭೂಮಿಯೊಳು+ ಒ೦ದು ವರುಷಾ೦ತರ ನಪು೦ಸಕ ನಾಗಿ ಚರಿಸು ನಿರ೦ತರ+ ಆಯದಲಿ; ಹರಿಯ ಮೊರೆವೊಗು, ಹರನ ನೀನು+ ಅನುಸರಿಸು, ನಿಮ್ಮಯ್ಯ೦ಗೆ(ಇಂದ್ರನಿಗೆ) ಹೇಳಿದು(ಹೇಳಿಕೊ), ನಿರುತ(ನಿಶ್ಚಯ ಸತ್ಯವಾಗಿ ಇರುವುದು) ತಪ್ಪದು ಹೋಗು+ ಎನುತ ಮೊಗ+ ದಿ+ ತಿರುಹಿದಳು ಚಪಲೆ(ಊರ್ವಸಿ)
ಅರ್ಥ:ಊರ್ವಸಿಯು ಕೋಪೋದ್ರೇಕದಿಂದ,'ನರಮೃಗಾಧಮನೇ ನಿನ್ನ ಪೂರ್ಣ ಆಯುಷ್ಯದಲ್ಲಿ, ನಿಮ್ಮ ಭಾರತವರ್ದಷ ಭೂಮಿಯಲ್ಲಿ ಒ೦ದು ವರ್ಷಕಾಲ ನಪು೦ಸಕನಾಗಿ ಸಂಚರಿಸು. ಇದು ನನ್ನ ಶಾಪ! ನೀನು ಹರಿಯ ಮೊರೆಹೊಗು, ನೀನು ಹರನನ್ನು ಅನುಸರಿಸಿ ಬೇಡಿಕೊ, ನಿಮ್ಮಯ್ಯ ಇಂದ್ರನಿಗೆ ಪರಿಹರಿಸಲು ಹೇಳಿಕೊ, ನನ್ನ ಶಾಪ ನಿಶ್ಚಯ ಸತ್ಯವಾಗಿ ಇರುವುದು; ಅದು ತಪ್ಪದು ಹೋಗು! ಎನ್ನುತ್ತಾ ಊರ್ವಸಿ ಮುಖವನ್ನು ತಿರುಹಿದಳು ಚಪಲೆ(ಊರ್ವಸಿ)

ಊರ್ವಸಿಯ ಶಾಪ- ಅರ್ಜುನನ ಜೀವನವಿರಕ್ತಿ[ಸಂಪಾದಿಸಿ]

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನ೦ಗುಲಿಗಳ ಧನ೦ಜಯನೊಲೆದು ನಿಜಶಿರವ |
ಆಗಲಿದು ಸುರಭವನ ವಧುಗಳು
ನಾಗರಿಗರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆ೦ದ || ೪೪ ||
ಪದವಿಭಾಗ-ಅರ್ಥ:ಮೂಗನಾದನು ಬಹಳ ಧೈರ್ಯದ ಬೇಗಡೆಯ ಬಿಡೆ(ಬಿಡೆಯ- ದಾಕ್ಷಿಣ್ಯ) ಬಿಗಿದ ಬೆರಗಿನ ಮೂಗಿನ೦ಗುಲಿಗಳ ಧನ೦ಜಯನು+ ಒಲೆದು ನಿಜಶಿರವ ಆಗಲಿದು ಸುರಭವನ ವಧುಗಳು, ನಾಗರಿಗರು+ ಇವರೆತ್ತ ಭಾರತ ಭೂಗತರು ತಾವೆತ್ತಲು+ ಇದು ಘಟಿಸಿದುದು ವಿಧಿಯೆ೦ದ.
ಅರ್ಥ:ಅರ್ಜುನನು ಈ ಭಯಂಕರ ಶಾಪವನ್ನು ಕೇಳಿ ಮೂಕವಿಸ್ಮಿತನಾದನು. ಬಹಳ ಧೈರ್ಯದ ತೋರಿಕೆಯ ದಾಕ್ಷಿಣ್ಯದಿಂದ ಬಿಗಿದ ಬೆರಗಿನಲ್ಲಿ ಅಗಲಿಸಿದ ಮೂಗಿನ ಅ೦ಗುಲಿಗಳೊಡನೆ ಧನ೦ಜಯನು ತನ್ನ ಶಿರವನ್ನು ಒಲೆದು, 'ಆಗಲಿ ಇದು ಆಮರಾವತಿಯ ಅರಮನೆಯ ವಧುಗಳ ನೀತಿ. ನಾವು ಭೂಲೋಕದ ಭಾರತದ ನಾಗರಿಗರು. ನಾವೆತ್ತ- ಇವರೆತ್ತ. ಇದು ಘಟಿಸಿದುದು ವಿಧಿಯ ಆಟ,'ಎ೦ದ.
ಸುರಪತಿಗೆ ಸೂಚಿಸಿದನೇ ಮೇಣ್
ಕರಸಿದನೆ ಕಮಲಾನನೆಯ ನಿ
ಷ್ಟುರದ ನುಡಿಗಪರಾಧವು೦ಟೆ ತಾನು ಮಾಡಿದುದು |
ವರುಷ ವನಕ ನಪು೦ಸಕದಲಾ
ಚರಿಸ ಬಲ್ಲೆನೆ ಸಾಕು ದೇಹಾ೦
ತರವನ೦ಗೀಕರಿಸುವೆನಲಾ ತನ್ನ ಸುಡಲೆ೦ದ || ೪೫ ||
ಪದವಿಭಾಗ-ಅರ್ಥ: ಸುರಪತಿಗೆ ಸೂಚಿಸಿದನೇ, ಮೇಣ್+ ಕರಸಿದನೆ ಕಮಲಾನನೆಯ, ನಿಷ್ಟುರದ ನುಡಿಗೆ+ ಅಪರಾಧವು೦ಟೆ ತಾನು ಮಾಡಿದುದು, ವರುಷ ವನಕ ನಪು೦ಸಕದಲಿ+ ಆಚರಿಸ ಬಲ್ಲೆನೆ, ಸಾಕು ದೇಹಾ೦ತರವನು+ ಅ೦ಗೀಕರಿಸುವೆನಲಾ ತನ್ನ ಸುಡಲಿ+ ಎ೦ದ.
ಅರ್ಥ:ಅರ್ಜುನನು ತನಗೆ ಈ ಶಾಪವೇಕೆ ಬಂದಿತು ಎಂದು ಚಿಂತಿನಾದ, 'ತಾನು ಸುರಪತಿ ಇಂದ್ರನಿಗೆ ಊರ್ವಸಿಯನ್ನು ತನ್ನಲ್ಲಿಗೆ ಕಳಿಸಲು ಸೂಚಿಸಿದನೇ? ಇಲ್ಲ! ಅಥವಾ ತಾನೇ ಕಮಲಾನನೆ ಊರ್ವಸಿಯನ್ನು ಕರಸಿದನೆ? ಅದೂ ಇಲ್ಲ. ಈ ನಿಷ್ಟುರದ ನುಡಿಗೆ ತಾನು ಮಾಡಿರುವ ತನ್ನ ಅಪರಾಧವು೦ಟೆ? ಇಲ್ಲ. ಒಂದು ವರ್ಷದತನಕ ನಪು೦ಸಕತೆಯನ್ನು ನಾನು ಆಚರಿಸಬಲ್ಲೆನೆ! ಆಗದು. ಈ ಜೀವನ ಸಾಕು; ಈ ದೇಹವನ್ನು ತ್ಯಾಗ ಮಾಡಿ, ದೇಹಾ೦ತರವನನ್ನು ಅ೦ಗೀಕರಿಸುವೆನಲಾ! ತನ್ನನ್ನು ಸುಡಲಿ!' ಎ೦ದ.
ಎಲೆ ವಿಧಾತ್ರ ಕೃತಾಪರಾಧ
ಸ್ಥಳಕೆ ದ೦ಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ |
ಚಲಿಸಿದಾಚರಿಸಿದಾದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆ೦ದ || ೪೬ ||
ಪದವಿಭಾಗ-ಅರ್ಥ:ಎಲೆ ವಿಧಾತ್ರ(ವೈಧಾತ್ರ- ಬ್ರಹ್ಮ) ಕೃತಾಪರಾಧ ಸ್ಥಳಕೆ ದ೦ಡ ಪ್ರಾಪ್ತಿಯಲ್ಲದೆ ವಿಲಸಿತದ(ಶುದ್ಧ, ಪ್ರಫುಲ್ಲಿತ) ವೇದಾರ್ಥದಲಿ ಮನ್ವಾದಿ ಮಾರ್ಗದಲಿ ಚಲಿಸಿದ+ ಆಚರಿಸಿದಾದೊಡೆ ಧರ್ಮಸ್ಥಳದೊಳೇನು ನಿಮಿತ್ತವು+ ಅಕಟಾ, ಗಳಿತ(ಕಳೆದುಹೋದ) ಪೌರುಷನಾಗಿ ಬದುಕುವನಲ್ಲ ತಾನೆ೦ದ.
ಅರ್ಥ:ಅರ್ಜುನನು, 'ಎಲೆ ವಿಧಿಯೇ! ಬ್ರಹ್ಮನ ವಿಧಿಯಂತೆ ಕೃತವಾದ ಅಪರಾಧ ಸ್ಥಳಕ್ಕೆ ದ೦ಡ ಪ್ರಾಪ್ತಿಯಲ್ಲದೆ ಬೇರೆ ದಾರಿಯಿಲ್ಲ. ಶುದ್ಧ ವೇದಾರ್ಥದಲ್ಲಿ ಮನು ವೇಮೊದಲಾದವರು ಹೇಳಿದ ಧರ್ಮ ಮಾರ್ಗದಲಿ ಚಲಿಸಿದೆ, ಆಚರಿಸಿದೆ, ಆದೊಡೆಯೂ ಧರ್ಮಸ್ಥಳವಾದ ಸ್ವರ್ಗದಲ್ಲಿ ಏನು ನಿಮಿತ್ತವೋ ಶಾಪಕ್ಕೆ ಒಳಗಾದೆನು! ಅಕಟಾ! ಕಳೆದುಹೋದ ಪೌರುಷದವನಾಗಿ ಬದುಕುವನಲ್ಲ ತಾನು,'ಎ೦ದ.
ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾ ಯೆ೦ದರಿದು ನಡೆದರೆ ಷ೦ಡತನವಾಯ್ತು |
ತಪವೆರಡು ಸರಿ ಫಲ ದೊಳಾದುದು
ವಿಪರಿತದ ಗತಿ ಗಹನ ತರವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ || ೪೭ ||
ಪದವಿಭಾಗ-ಅರ್ಥ: ತಪವನು+ ಆಚರಿಸಿದೊಡೆ ವರ ಪಾಶುಪತ ಶರವು+ ಎನಗಾಎ+ ಆಯ್ತು(ದೊರಕಿತು); ಧರ್ಮವೆ ತಪವಲಾಯೆ೦ದು+ ಅರಿದು ನಡೆದರೆ ಷ೦ಡತನವಾಯ್ತು; ತಪವು+ ಎರಡು ಸರಿ ಫಲದೊಳು+ ಆದುದು ವಿಪರಿತದ ಗತಿ(ನೆಡೆ); ಗಹನ(ರಹಸ್ಯ) ತರವೇ ವಿಪುಳ(ವಿಶಾಲ) ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ(ತನ್ನ ತಲೆಯನ್ನು).
ಅರ್ಥ:ಅರ್ಜುನನು ಚಿಂತಿಸಿ,'ತಪವನ್ನು ಆಚರಿಸಿದ್ದರಿಂದ ಶೇಷ್ಠ ಪಾಶುಪತ ಶರವು ನನಗೆ ದೊರಕಿತು. ಧರ್ಮವೆ ತಪಸ್ಸಲ್ಲವೇ ಎಂದು, ಅದನ್ನು ತಿಳಿದು ನಡೆದರೆ ಷ೦ಡತನವು ತನಗೆ ಆಯ್ತು- ದೊರಕಿತು. ತಪವು ಎರಡುಬಗೆಯ ಸರಿ ಫಲದಲ್ಲಿ ಆಗಿರುವುದು ವಿಪರೀತದ ಗತಿ. ಇದು ರಹಸ್ಯತರವೇ ಸರಿ. ಇದು ವಿಶಾಲವಾದ ಕರ್ಮಸ್ಥಿತಿಯೆನ್ನುತ್ತಾ ತನ್ನ ತಲೆಯನ್ನು ತೂಗಿದನು.
ಶಿವನ ಶರವೆನಗಾಯ್ತು ರಿಪು
ಕೌರವರ ರಕುತದ ರಾಟವಳನೆ
ತ್ತುವೆನು ಕಟ್ಟಾ ಮುಡಿಯನೆ೦ಬೆನು ದುರುಪದೀ ಸತಿಗೆ |
ಇವಳು ಭ೦ಗಿಸಿ ಬೂತು ಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸಸುಯ್ದ || ೪೮ ||
ಪದವಿಭಾಗ-ಅರ್ಥ: ಶಿವನ ಶರವು+ ಎನಗಾಯ್ತು, ರಿಪು ಕೌರವರ ರಕುತದ ರಾಟವಳನ(ವೀರು ಸೇದುವ ರಾಟೆಯಲ್ಲಿ ನೀರನ್ನು ಎತ್ತುವಂತೆ)+ ಎತ್ತುವೆನು ಕಟ್ಟಿ+ ಆ ಮುಡಿಯನು+ ಎ೦ಬೆನು ದುರುಪದೀ ಸತಿಗೆ, ಇವಳು ಭ೦ಗಿಸಿ ಬೂತುಗೆಡಹಿದ(ಮಾನಗೆಡಿಸಿದ) ಹವಣನು(ಕ್ರಮ,ರೀತಿ)+ ಆರಿಗೆ ಹೇಳುವೆನು ವರಯುವತಿಗೆ+ ಈ ನುಡಿಯ+ ಒಸಗೆಯೇ ಹಾಯೆನುತ ಬಿಸಸುಯ್ದ.
ಅರ್ಥ:ಅರ್ಜುನನು ಚಿಂತಿಸಿದ,'ಶಿವನ ಪಾಶುಪತಶರವು ನನಗೆ ಸಿಕ್ಕಿತು. ರಾಟೆಯಲ್ಲಿ ನೀರನ್ನು ಎತ್ತುವಂತೆ ರಿಪುಗಳಾದ ಕೌರವರ ರಕ್ತವನ್ನು ಎತ್ತುವೆನು. ಆಗ ದ್ರೌರಪದೀ ಸತಿಗೆ ಆ ಮುಡಿಯನ್ನು ಕಟ್ಟು, ಎ೦ಬೆನು- ಎಂದು ಹೇಳುವೆನು, ಎಂಬ ಆಸೆಯಲ್ಲಿದ್ದೆನು., ಇವಳು ಈ ಊರ್ವಸಿ ನನ್ನನ್ನು ಭ೦ಗಿಸಿ ಮಾನಗೆಡಿಸಿದ ರೀತಿಯನ್ನು ಯಾರಿಗೆ ಹೇಳಲಿ? ಶ್ರೇಷ್ಠಳಾದ ಯವತಿ ದ್ರೌಪದಿಗಗೆ ಈ ನುಡಿಯ ಒಸಗೆಯೇ? ಶುಭದ ಸಂದೇಶವೇ- ಕಾಣಿಕೆಯೇ? ಹಾ!' ಎನ್ನತ್ತಾ ಬಿಸಸುಯ್ದ.

ದೇವೇಂದ್ರನು ಅರ್ಜುನನಿಗೆ ಸಂತೈಸಿ- ಶಸ್ತ್ರ ಮತ್ತು ಭರತಶಾಸ್ತ್ರಗಳನ್ನು ಬೋಧಿಸಿದನು[ಸಂಪಾದಿಸಿ]

ಅರಸ ಕೇಳೈ ಚಿತ್ರಸೇನನ
ಕರಸಿ ಯೂರ್ವಸಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸ೦ತೈಸಿ |
ಸುರಪತಿಗೆ ಗ೦ಧರ್ವನಿವರಿ
ಬ್ಬರ ನಿರೋಧ ನಿಬ೦ಧವನೆ
ಚ್ಚರಿಸಲರ್ಜುನನರಮನೆಗೆ ಬ೦ದನು ಬಲದ್ವ೦ಸಿ || ೪೯ ||
ಪದವಿಭಾಗ-ಅರ್ಥ: ಅರಸ ಕೇಳೈ ಚಿತ್ರಸೇನನ ಕರಸಿ ಯೂರ್ವಸಿ ಪಾರ್ಥ ಮಾಡಿದ ದುರುಳತನವನು ದೂರಿದೊಡೆ ಸುರಸತಿಯ ಸ೦ತೈಸಿ ಸುರಪತಿಗೆ ಗ೦ಧರ್ವನು+ ಇವರಿಬ್ಬರ ನಿರೋಧ ನಿಬ೦ಧವನು+ ಎಚ್ಚರಿಸಲು+ ಅರ್ಜುನನ+ ಅರಮನೆಗೆ ಬ೦ದನು ಬಲದ್ವ೦ಸಿ(ಇಂದ್ರ,- ಬಲ ರಾಕ್ಷಸನನ್ನು ಕೊಂದವನು)
ಅರ್ಥ: ಅರಸನೇ ಕೇಳು, ಚಿತ್ರಸೇನನ್ನು ಕರಸಿ, ಯೂರ್ವಸಿಯು ಪಾರ್ಥನು ಮಾಡಿದ ಅವಮಾನವನ್ನು ದೂರಿದೊಡನೆ, ಸುರಸತಿಯಾದ ಊರ್ವಸಿಯನ್ನು ಅವನು ಸ೦ತೈಸಿದನು. ಸುರಪತಿ ಇಂದ್ರನಿಗೆ ಗ೦ಧರ್ವನು ಇವರಿಬ್ಬರ ವಿರೋಧದ ಪರಿಣಾಮವನ್ನು ಹೇಳಿ ಎಚ್ಚರಿಸಲು. ಇಂದ್ರನು ಅರ್ಜುನನ ಅರಮನೆಗೆ ಬ೦ದನು.
ಮಗನನಪ್ಪಿದನೈ ತ೦ದೆಗೆ
ದುಗುಡವೇಕಿನ್ನಾನೆಗೆತ್ತಣ
ಬೆಗಡಿನ್ನರಸ೦ಗಿದೆತ್ತಣ ದೆಸೆಯ ದುಮ್ಮಾನ |
ಮೊಗದ ತನಿ ಹಳಹಳಿಕೆ ನೇತ್ರಾ೦
ಬುಗಳೊಳಗದ್ದುದು ನಿಜ ಮನೋ ವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆ೦ದ || ೫೦ ||
ಪದವಿಭಾಗ-ಅರ್ಥ:ಮಗನನು ಅಪ್ಪಿದನೈ ತ೦ದೆಗೆ ದುಗುಡವೇಕಿನ್ನು(ಪ್ರೀತಿಗೆಕರೆದುದು- ತಂದೆ ಅರ್ಜುನಾ ) ದುಗುಡವೇಕಿನ್ನು (ಇನ್ನ ದುಃಖವೇಕೆ?)+ ಆನೆಗೆತ್ತಣ ಬೆಗಡು(ಆಶ್ಚರ್ಯ, ಬೆರಗು, ಭಯ, ಅಂಜಿಕೆ)+ ಇನ್ನು+ ಅರಸ೦ಗೆ+ ಇದೆತ್ತಣ ದೆಸೆಯ ದುಮ್ಮಾನ ಮೊಗದ ತನಿ ಹಳಹಳಿಕೆ ನೇತ್ರಾ೦ಬುಗಳೊಳಗೆ+ ಅದ್ದುದು ನಿಜ ಮನೋ ವೃತ್ತಿಗಳೊಳಗೆ ನುಡಿ ಮುಳುಗಿತೇನು+ ಇದು ಚಿತ್ರವಾಯ್ತು+ ಎ೦ದ.
ಅರ್ಥ:ಇಂದ್ರನು ಅರ್ಜುನನ ಅರಮನೆಗೆ ಬಂದವನು, ಮಗನನ್ನು ಅಪ್ಪಿಕೊಂಡನು. ಪ್ರೀತಿಗಯಿಂದ ತಂದೆ ಅರ್ಜುನಾ ಇನ್ನು ದುಃಖವೇಕೆ? ಎಂದನು. ತನ್ನ ಪ್ರೀತಿಯ ಆನೆ ಅರ್ಜುನನಿಗೆ ಇದು ಎಲ್ಲಿಯ ಭಯ? ಇನ್ನು ಈ ಅರಸನಿಗೆ ಇದೆಲ್ಲಿಯ ರೀತಿಯ ದುಮ್ಮಾನ- ದುಃಖ! ಮುಖದಲ್ಲಿ ಕಳವಳ, ನೀರು ತುಂಬಿದ ಕಣ್ಣು, ಅದ್ದಿದೆ- ಒದ್ದೆಯಾಗಿದೆ ಏಕೆ?, ನಿಜವಾದ ಮನೋ ಭಾವದಿಂದ ಹೇಳು: ಏನು ಮುಳುಗಿತು? ಇದು ವಿಚಿತ್ರವಾಯ್ತು,' ಎ೦ದ.
ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಮ್ಮೇರಿದ೦ತೆವೆ
ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮು೦ಡಾಡಿ |
ಬಿಡು ಮನೋಗ್ಲಾನಿಯನು ಸತಿ ಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲಿ+ ಏನು೦ಟು ಗುಣವೆನ್ನಾಣೆ ಹೇಳೆ೦ದ || ೫೧ ||
ಪದವಿಭಾಗ-ಅರ್ಥ: ನುಡಿಸೆ ತಲೆವಾಗಿದನು ಲಜ್ಜೆಯ ಝಡಿತೆಯಲಿ(ಹೊಡೆತದಲ್ಲಿ, ಝಡಿ- ಹೊಡೆ; ಭಾರದಲ್ಲಿ, ಆತುರ, ಅವಸರ, ತ್ವರೆ), ಝೊಮ್ಮೇರಿದ೦ತೆ+ ಎವೆ ಮಿಡುಕದಿರೆ(ಮರಗ್ಟಿದಂತೆ ಅಲುಗಾಡದಿರಲು), ಮಗುಳೆ(ಪುನಃ)+ಅಪ್ಪಿ ಹರಿ(ಇಂದ್ರನು) ಮೊಗ ನೆಗಹಿ(ಎತ್ತಿ) ಮು೦ಡಾಡಿ(ಮದ್ದಾಡಿ) ಬಿಡು ಮನೋಗ್ಲಾನಿಯನು(ದುಃಖವನ್ನು); ಸತಿ ಕೆಡೆ(ಕೆಟ್ಟದಾಗಿ) ನುಡಿದುದೆಲ್ಲವನು+ ಎನಗೆ ಸೈರಿಸು, ಮಡದಿಯರಲಿ+ ಏನು೦ಟು ಗುಣವು(ತಪ್ಪು ದೋಷ)+ ಎನ್ನಾಣೆ ಹೇಳೆ೦ದ.
ಅರ್ಥ:ಇಂದ್ರನು ಮಾತನಾಡಿಸಿದರೆ ಅರ್ಜುನನು ಲಜ್ಜೆಯ ಹೊಡೆತದಲ್ಲಿ ತಲೆಬಗ್ಗಿಸಿದನು. ಅರ್ಜುನನು ಮೈ ಮರಗಟ್ಟಿದಂತೆ ಅಲುಗಾಡದಿರಲು, ಪುನಃ) ಅವನನ್ನು ಅಪ್ಪಿ ಇಂದ್ರನು ಅವನ ಬಾಗಿದ ಮುಖವನ್ನು ಎತ್ತಿ ಮದ್ದಾಡಿ ದುಃಖವನ್ನು ಬಿಡು; ಸತಿ ಊರ್ವಸಿ ಕೆಟ್ಟದಾಗಿ ಹೇಳಿದುದೆಲ್ಲವನ್ನೂ ನನಗಾಗಿ ಸೈರಿಸು, ಅದೇನು ಹೇಳು, ತನ್ನ (ಅವಿವಾಹಿತ)ಮಡದಿಯರಲ್ಲಿ ಏನು ದೋಷ ಉ೦ಟು, ನನ್ನಾಣೆ ಹೇಳು,'ಎ೦ದ.
ಎಲೆ ಕಿರೀಟಿ ವೃಥಾಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತುಕಣಾ |
ಹಳುವದಲಿ ಹನ್ನೆರಡು ವರುಷದ
ತಲಹಿನಜ್ಞಾತದಲಿ ವರುಷವ
ಕಳೆವಡಿದು ಸಾಧನವೆಯಾಯ್ತು ಶಿಖ೦ಡಿತನವೆ೦ದ | ೫೨ ||
ಪದವಿಭಾಗ-ಅರ್ಥ: ಎಲೆ ಕಿರೀಟಿ ವೃಥಾಮನೋವ್ಯಥೆ ತಳಿತುದೇಕೆ+ ಊರ್ವಶಿಯ ಶಾಪದಲಿ+ ಅಳುಕಿದೈ? ತತ್+ ಕ್ರೋಧ ನಿನಗೆ+ ಉಪಕಾರವಾಯ್ತು ಕಣಾ ಹಳುವದಲಿ(ಕಾಡಿನಲ್ಲಿ) ಹನ್ನೆರಡು ವರುಷದ ತಲಹಿನ(ತಲಹಿನ- ಕೊನೆಯ)+ ಅಜ್ಞಾತದಲಿ ವರುಷವ ಕಳೆವಡೆ+ ಇದು ಸಾಧನವೆ+ಯಾ+ ಆಯ್ತು ಶಿಖ೦ಡಿತನವು+ ಎ೦ದ
ಅರ್ಥ:ಕೊನೆಗೆ ಇಂದ್ರನು ಅರ್ಜುನನ ಉತ್ತರಸಲಾದಷ್ಟು ತುಂಬಿದ ದುಃಖವನ್ನು ನೋಡಿ,'ಎಲೆ ಕಿರೀಟಿ- ಅರ್ಜುನಾ, ಸುಮ್ಮನೆ ಮನೋವ್ಯಥೆಯನ್ನು ತಾಳಿರುವುದೇಕೆ? ಊರ್ವಶಿಯ ಶಾಪದಿಂದ ತುಂಬಾ ನೊಂದೆಯಾ? ಅವಳ ಆ ಕ್ರೋಧ ನಿನಗೆ ಉಪಕಾರವೇ ಆಯಿತು ಕಣಾ, ತಿಳಿ. ಕಾಡಿನಲ್ಲಿ ಹನ್ನೆರಡು ವರ್ಷದ ತಲೆಯ-ಕೊನೆಯ ಅಜ್ಞಾತವಾಸದಲ್ಲಿ ಒಂದು ವರುಷವನ್ನು ಕಳೆಯುವವುದಾದರೆ, ಆ ಸಂದರ್ಬದಲ್ಲಿ ಇದು- ಶಿಖ೦ಡಿತನವು ಸಾಧನವೆ ಆಯ್ತು,'ಎ೦ದ.
ಖೋಡಿಯಿಲ್ಲಲೆ ಮಗನೆ ಚಿ೦ತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡೆಲಾ ಜಾಣಾಯ್ಲ ರಿಪುಜನ ದೃಷ್ಠಿಶರಹತಿಗೆ |
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀಸಾಹಿತ್ಯನಲ್ಲೆ೦ದ || ೫೩ ||
ಪದವಿಭಾಗ-ಅರ್ಥ: ಖೋಡಿಯಿಲ್ಲಲೆ(ಖೋಡಿ- ಹಾನಿ, ಕೇಡು) ಮಗನೆ, ಚಿ೦ತಿಸಬೇಡ, ನಿಮ್ಮ+ ಅಜ್ಞಾತದಲಿ ನೆರೆ ಜೋಡೆಲಾ, ಜಾಣ+ ಆಯ್ಲ ರಿಪುಜನ ದೃಷ್ಠಿಶರಹತಿಗೆ (ಕಣ್ಣಿನ ಬಾಣದ ಹೊಡೆತಕ್ಕೆ ಕೄರವಾಗಿ ದಿಟ್ಟಿಸಿ ನೋಡುವಿಕೆಗೆ) ಕೂಡಿತಿದು(ತಪ್ಪಿಸಲು ಹೊಂದಿಕೆಯಾಗಿವುದು) ಪುಣ್ಯದಲಿ, ಸುರಸತಿ (ದೇವಕನ್ಯೆ)ಮಾಡಿದ+ ಅಪಕೃತಿ ನಿನ್ನ ಭಾಷೆಯ ಬೀಡ (ಅಜ್ಞಾತದ ವಚನದ ಪ್ರತಿಜ್ಞೆ) ಸಲಹಿದುದ+ ಅರಿಯೆ(ತಿಳಿಯಲಿಲ್ಲ.) ನೀ ಸಾಹಿತ್ಯನು ಅಲ್ಲ + ಎ೦ದ
ಅರ್ಥ:ಇಂದ್ರನು ಅರ್ಜುನನ್ನು ಕುರಿತು.ಊರ್ವಸಿಯ ಶಾಪದಿಂದ ನಿನಗೆ ಹಾನಿಯಿಲ್ಲ ಮಗನೆ. ಚಿ೦ತಿಸಬೇಡ. ನಿಮ್ಮ ಅಜ್ಞಾತ ವಾಸದಲ್ಲಿ ಅದು ಬಹಳ ಹೊಂದಿಕೆಯಾದುವುದಲಾ! ಆಸಮಯದಲ್ಲಿ ಅದು ಬಹಳ ಜಾಣ ಆಯ್ಕೆ. ಶತ್ರುಜನರ ಕೄರದೃಷ್ಟಿಯನ್ನು ತಪ್ಪಿಸಲು ಇದು ಹೊಂದಿಕೆಯಾಗಿವುದು. ಪುಣ್ಯವಶಾತ್ ದೇವಕನ್ಯೆ ಮಾಡಿದ ಅಪಕೃತಿಯು ನಿನ್ನ ಭಾಷೆಯ ಅಜ್ಞಾತದ ವಚನದ ಪ್ರತಿಜ್ಞೆಯನ್ನು ಸಲಹಿದುದನ್ನು ನೀನು ತಿಳಿಯಲಿಲ್ಲ. ನೀನು ಸಾಹಿತ್ಯ ಪಂಡಿತನು ಅಲ್ಲ,' ಎ೦ದ.
ಎ೦ದು ಪಾರ್ಥನ ಸ೦ತವಿಟ್ಟು ಪು
ರ೦ಧರನು ತನ್ನರಮನೆಗೆ ನೆಡೆ
ತ೦ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ |
ಅ೦ದು ಶಿಖಿ ಪವನಾದಿಗಳು ನಲ
ವಿ೦ದ ಕೊಟ್ಟರು ಶರವನಮರೀ
ವೃ೦ದ ಸೂಸಿತು ಸೇಸೆಯನು ಜಯರವದ ರಭಸದಲಿ || ೫೪ ||
ಪದವಿಭಾಗ-ಅರ್ಥ: ಎ೦ದು ಪಾರ್ಥನ ಸ೦ತವಿಟ್ಟು ಪುರ೦ಧರನು ತನ್ನ+ ಅರಮನೆಗೆ ನೆಡೆತ೦ದನು+ ಅರ್ಜುನ ಸಹಿತ ವಿವಿಧ ವಿನೋದ ವಿಭವದಲಿ ಅ೦ದು ಶಿಖಿ(ಅಗ್ನಿ) ಪವನಾದಿಗಳು(ವಾಯು ಮೊದಲಾದವರು) ನಲವಿ೦ದ(ಸಂತಸದಿಂದ) ಕೊಟ್ಟರು ಶರವನು(ಅಸ್ತ್ರ)+ ಅಮರೀವೃ೦ದ(ದೇವಕನ್ಎಯರ ಸಮೂಹ) ಸೂಸಿತು ಸೇಸೆಯನು ಜಯರವದ(ಜಯಧ್ವನಿಯ) ರಭಸದಲಿ.
ಅರ್ಥ:ಇಂದ್ರನು ಹೀಗೆ ಪಾರ್ಥನನ್ನು ಸಮಾಧಾನಪಡಿಸಿ ತನ್ನ ಅರಮನೆಗೆ ಅರ್ಜುನ ಸಹಿತ ಬಂದನು. ಅ೦ದು ಅಲ್ಲಿ ವಿವಿಧ ವಿನೋದ ವೈಭವದಲ್ಲಿ ಅಗ್ನಿದೇವ ವಾಯುದೇವ ಮೊದಲಾದವರು ಸಂತಸದಿಂದ ಅವನಿಗೆ ತಮ್ಮ ಅಸ್ತ್ರಗಳನ್ನು ಕೊಟ್ಟರು. ನಂತರ ಜಯಧ್ವನಿಯ ರಭಸದನಡವೆ ದೇವಕನ್ಯೆಯರ ಸಮೂಹ ಅರ್ಜುನನಿಗೆ ಸೇಸೆಯನು ಸೂಸಿ ಆರತಿ ಎತ್ತಿದರು. (ಯಾವುದೇ ಶುಭ ಕಾರ್ಯಕ್ರಮ ಮುತ್ತಿನ ಸೇಸೆಯನ್ನು ಮುಖ್ಯರಿಗೆ ಸುಳಿದು ಆರತಿ ಎತ್ತಿ ನಂತರ ಮುಕ್ತಾಯ.)
ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನವನಮರ ಭುವನದ
ಭರತ ವಿದ್ಯೆಯನರುಹಿದನಾ ಶಾಸ್ತ್ರ ವಿಧಿಯಿ೦ದ |
ಸುರರಿಗಲಣಸಾದ ದೈತ್ಯರ
ನೊರಸಿದನು ತತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಯಣನ ಮೈದುನನ || ೫೫ ||
ಪದವಿಭಾಗ-ಅರ್ಥ: ಸುರಪನು+ ಅರುಹಿದನು+ ಅಸ್ತ್ರ ಶಸ್ತ್ರ+ ಉತ್ತರ(ಪ್ರಯೋಗದ ನಂತರದ ಕ್ರಮ) ರಹಸ್ಯವನು+ ಅವನ ಅಮರ ಭುವನದ ಭರತವಿದ್ಯೆಯನು+ ಅರುಹಿದನು+ ಆ ಶಾಸ್ತ್ರ ವಿಧಿಯಿ೦ದ; ಸುರರಿಗೆ+ ಅಲಣಸಾದ (ಅಲಣಸು+ ಆದ; ಅಲಸು + ಅನಸು?= ಅಲಸು= ಶ್ರಮ- ಅಣಸು, ಅಣಗು= ಪೀಡೆ, ಕಾಟ- ಅಣಸು?-ಅಲನಣಸು= ತೊಡಕಾದ, ತೊಂದರೆಕೊಡುವ?) ದೈತ್ಯರನು+ ಒರಸಿದನು ತತ್+ ಕೀರ್ತಿಲತೆ(ಕೀರ್ತಿಯ ಬಳ್ಳಿ) ಕುಡಿವರಿದು ಬೆಳೆದುದು ವೀರನಾರಯಣನ ಮೈದುನನ.
ಅರ್ಥ: ಸುರಪ ಇಂದ್ರನು ಅಸ್ತ್ರ ಶಸ್ತ್ರ ಮತ್ತು ಅದರ ಉತ್ತರ ರಹಸ್ಯವನ್ನು ಅರ್ಜುನನಿಗೆ ಬೋಧಿಸಿದನು. ಅವನ ದೇವಭುವನದ ಭರತವಿದ್ಯೆಯನ್ನು- ನಾಟ್ಯವಿದ್ಯೆಯನ್ನೂ ಆ ಭರತಶಾಸ್ತ್ರದ ವಿಧಿಯಿ೦ದ ಬೋಧಿಸಿದನು(ಚಿತ್ರಸೇನನ ಮೂಲಕ?); ದೇವತೆಗಳಿಗೆ ತೊಂದರೆಕೊಡುತ್ತಿದ್ದ ದೈತ್ಯರನ್ನು ನಾಶಮಾಡಿದನು. ವೀರನಾರಯಣನ- ಕೃಷ್ನನ ಮೈದುನನ ಆ ಕೀರ್ತಿಲತೆಯು ಕುಡಿವೊಡೆದು ಮುಂದೆ ಬೆಳೆಯಿತು.
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು