ಕುಮಾರವ್ಯಾಸ ಭಾರತ/ಸಟೀಕಾ (೫-ಉದ್ಯೋಗಪರ್ವ::ಸಂಧಿ-೦೧)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಉದ್ಯೋಗಪರ್ವ::ಸಂಧಿ-೦೧[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ||ಸೂ||

ಪದವಿಭಾಗ-ಅರ್ಥ: ನಂಬಿದವರಿಗೆ ತನ್ನ ತೆತ್ತಿಹನೆಂಬ(ಕೊಟ್ಟಿರುವೆನು ಎಂಬ) ಬಿರುದನು ಮೆರೆದು ಭಕ್ತ ಕುಟುಂಬಿ ಸಾರಥಿಯಾದನು+ ಒಲಿದು+ ಅರ್ಜುನಗೆ ಮುರವೈರಿ
ಅರ್ಥ: ಭಕ್ತ ಕುಟುಂಬಿಯಾದ ಕೃಷ್ನನು, 'ನಂಬಿದವರಿಗೆ ತನ್ನನ್ನೇ ಕೊಟ್ಟಿರುವೆನು' ಎಂಬ ಬಿರುದನ್ನು ಮೆರೆದು- ಪ್ರಸಿದ್ದಪಡಿಸಿ, ಮುರವೈರಿಯಾದ ಕೃಷ್ಣನು ಅರ್ಜುನನಿಗೆ ಒಲಿದು- ಪ್ರೀತಿಯಿಂದ ಸಾರಥಿಯಾದನು. [೧][೨] [೩] [೪]

ಸಾಮದಲ್ಲಿ ಪಾಂಡವರ ರಾಜ್ಯವನ್ನು ಕೇಳಲು ದೂತರನ್ನು ಕಳಿಸಲು ತೀರ್ಮಾನ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀ ತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ |
ಶ್ರೀಲತಾಂಗಿಯ ರಮಣನನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ, ಕುಂತೀ ತನಯರ+ ಉನ್ನತದ+ ಏಳಿಗೆಯನು+ ಏನೆಂಬೆನೈ, ಕಾರುಣ್ಯ ಸಿಂಧುವಲ ಶ್ರೀಲತಾಂಗಿಯ ರಮಣನು (ಶ್ರೀ- ಲಕ್ಷ್ಮಿ)+ ಅನಿಬರೊಳು+ (ಅವರಲ್ಲಿ,- ಪಾಂಡವರಲ್ಲಿ) ಆಳು+ ಒಡೆಯನು+ ಎಂದೆಂಬ ಭೇದವ ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ.
ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ, ಕುಂತಿಯ ಮಕ್ಕಳ ಉನ್ನತದ ಏಳಿಗೆಯನ್ನು ಏನೆಂಬೆನೈ- ಏನೆಂದು ಹೇಳಲಿ, ಕಾರುಣ್ಯ ಸಿಂಧುವಲ ಶ್ರೀಲತಾಂಗಿಯ ರಮಣ, ಕೃಷ್ನನು ಪಾಂಡವರಲ್ಲಿ ತನ್ನ ಮೈದುನರ ವಿಷಯದಲ್ಲಿ ಆಳು- ಒಡೆಯನು ಎಂದೆಂಬ ಭೇದವನ್ನು ಬಿಟ್ಟು ವ್ಯವಹಾರ ನೆಡೆಸುತ್ತಿದ್ದನು.
ಹೋಲಿಕೆಗೆ ಬಾಯ್ಬಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ನನ್ನದು ಘನತೆಯೆಂಬುದನತ್ತ ಬೇರಿರಿಸಿ |
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯ ಮುನಿ ನುಡಿದ || ೨ ||
ಪದವಿಭಾಗ-ಅರ್ಥ: ಹೋಲಿಕೆಗೆ ಬಾಯ್ಬಿಡುವ ವೇದದ ತಾಳಿಗೆಗಳು (ನಾಲಿಗೆ, ಗಂಟಲು, ಅಂಗುಳ)+ ಒಣಗಿದವು; ಘನತೆಯ ಮೇಲೆ ನನ್ನದು ಘನತೆಯೆಂಬುದನು+ ಅತ್ತ ಬೇರೆ+ ಇರಿಸಿ ಕಾಲಿಗೆರಗುವನು+ ಆ ಯುಧಿಷ್ಠಿರನು ಏಳಲು+ ಒಡನೆ+ ಏಳುವನು ಕೃಷ್ಣನ ಲೀಲೆಯು+ ಅನುಪಮವೆಂದು ವೈಶಂಪಾಯ ಮುನಿ ನುಡಿದ.
ಅರ್ಥ: ಕೃಷ್ಣನ ಗುಣವನ್ನು ವಿವರಿಸುವಾಗ ಹೋಲಿಕೆಗೆ ಬಾಯ್ಬಿಡುವ ವೇದದ ಗಂಟಲುಗಳು ಒಣಗಿದವು; ಅವಕ್ಕೂ ಅಸಾಧ್ಯವು. ಘನತೆಯ ಮೇಲೆ ತನ್ನದು ಘನತೆಯೆಂಬುದನ್ನು ಅತ್ತ ಬೇರೆ ಇರಿಸಿ, ಹಿರಿಯನಾದ ಧರ್ಮಜನ ಕಾಲಿಗೆ ಬೀಳುವನು; ಆ ಯುಧಿಷ್ಠಿರನು ಸಂಕೊಚದಿಂದ ಏಳಲು, ಕೃಷ್ಣನೂ ಒಡನೆಯೇ ಏಳುವನು. ಕೃಷ್ಣನ ಲೀಲೆಯು ಅನುಪಮವು - ಸರಿಸಾಟಿ ಇಲ್ಲದ್ದು ಎಂದು ವೈಶಂಪಾಯ ಮುನಿ ನುಡಿದನು.
ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು |
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡುತನಯರಿಗೆ || ೩ ||
ಪದವಿಭಾಗ-ಅರ್ಥ: ಒಂದು ದಿನ ವೊಡ್ಡೋಲಗಕ್ಕೆ+ ಐತಂದನು (ಬಂದನು)+ ಅಖಿಳ+ ಅವನಿಯ(ಭೂಮಂಡಲದ) ರಾಯರ ಮಂದಿಯಲಿ(ರಾಜರ ಸಮೂಹದಲ್ಲಿ) ಮುರವೈರಿ(ಕೃಷ್ಣನು) ನುಡಿದನು ರಾಜಮಂತ್ರವನು(ರಾಜತಂತ್ರವನ್ನು), ಹಿಂದೆ ಜೂಜಿನ ವಿಲಗದಲಿ(ತೊಂದರೆ, ಕಷ್ಟ, ಹಿಂಸೆ, ಉಪದ್ರವ, ಅನುಚಿತ ಕಾರ್ಯ) ಮನನೊಂದರು+ ಇವರು+ ಅಡವಿಯಲಿ ಧರೆಗೆ+ ಇನ್ನು+ ಎಂದು ಸೇರುವರು+ ಏನು ಹದನ+ ಈ ಪಾಂಡು ತನಯರಿಗೆ.
ಅರ್ಥ: ಒಂದು ದಿನ ಕೃಷ್ಣನು ಧರ್ಮಜನ ಒಡ್ಡೋಲಗಕ್ಕೆ ಬಂದನು. ಅಖಿಲ ಭೂಮಂಡಲದ ರಾಜರ ಸಮೂಹದಲ್ಲಿ ಕೃಷ್ನನು ರಾಜತಂತ್ರವನ್ನು ಕುರಿತು ಹೇಳಿದನು. ಪಾಂಡವರು ಹಿಂದೆ ಜೂಜಿನ ಕಾರ್ಯದಲ್ಲಿ ಸಿಕ್ಕಿಕೊಂಡು ಮನನೊಂದರು. ಇವರು ಅಡವಿಯಲ್ಲಿ ಹನ್ನೆರಡು ವರ್ಷ ಕಳೆದರು. ಇನ್ನು ಪುನಃ ಭೂ ಒಡೆತನಕ್ಕೆ ಇನ್ನು ಯಾವಾಗ ಸೇರುವರು? ಈ ವಿಚಾರದಲ್ಲಿ ಪಾಂಡುತನಯರಿಗೆ ಮುಂದಿನ ಕಾರ್ಯ ಏನು?' ಎಂದನು.
ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು |
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ || ೪ ||
ಪದವಿಭಾಗ-ಅರ್ಥ: ದೇವ ನೀನೇ ಬಲ್ಲೆ ನಿಮ್ಮಯ ಭಾವನು+ ಈ ಧರ್ಮಜನ ಬಹುಮಾನ+ ಅವಮಾನದ ಹೊರಿಗೆ(ಭಾರ) ನಿನ್ನದು ಹರಣ ಭರಣವನು ನೀವು ಬಲ್ಲಿರಿ ಕಾಲಲಿ+ ಒದೆದುದನು+ ಓವಿ(ಓವು- ರಕ್ಷಿಸು, ಕಾಪಾಡು, ಪೊರೆ) ತಲೆಯಲಿ ಹೊತ್ತು ನಡೆಸುವಡೆ+ ಆವು ಬಲ್ಲೆವು ಜೀಯ+ ಯೆಂದನು ದ್ರುಪದ ಭೂಪಾಲ.
ಅರ್ಥ: ಹಿರಿಯನೂ ಪಾಂಡವರಿಗೆ ಹೆಣ್ಣು ಕೊಟ್ಟ ಮಾವನೂ ಆದ ದ್ರುಪದ ಭೂಪಾಲನು ಕೃಷ್ಣನಿಗೆ,'ದೇವ ಪಾಂಡವರಿಗೆ ರಾಜ್ಯವನ್ನು ಪಡೆಯಲು ಮಾಡಬೇಕಾದ ಮುಂದಿನ ಕಾರ್ಯವನ್ನು ನೀನೇ ಬಲ್ಲೆ. ನಿಮ್ಮ ಭಾವನಾದ ಈ ಧರ್ಮಜನ ಬಹುಮಾನ ಅಥವಾ ಅವಮಾನದ ಭಾರ ನಿನ್ನದು. ಹರಣ ಭರಣವನು (ತೆಗೆ- ತುಂಬು)- ನಷ್ಟ ಲಾಭವನ್ನು ನೀವು ಬಲ್ಲಿರಿ. ನೀವು ಕಾಲಲ್ಲಿ ಒದೆದು ತೋರಿಸಿದ್ದನ್ನು ಗೌರವಿಸಿ ತಲೆಯಲಿ ಹೊತ್ತು ನಡೆಸುವುದನ್ನು ನಾವು ಬಲ್ಲೆವು ಜೀಯ,' ಎಂದನು.
ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ |
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ || ೫ ||
ಪದವಿಭಾಗ-ಅರ್ಥ:ಕಳುಹುವುದು ಶಿಷ್ಟರನು(ಯೋಗ್ಯರನ್ನು) ಧರಣೀತಳವ(ರಾಜ್ಯವನ್ನು) ಬೇಡಿಸುವಲ್ಲಿ, ಸಾಮವ(ಸಾಮೋಪಾಯ) ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ. ತಿಳಿವುದು+ ಆತನ ನೆಲೆಯನು (ಮನಸ್ಸನ್ನು)+ ಅಲ್ಲಿಂ+ ಬಳಿಕ ನಯವಿಲ್ಲ (ಮೃದುತ್ವ ರಾಜನೀತಿ ಫಲವಿಲ್ಲ;)+ ಎಂದಡೆ+ ಆಹವದೊಳಗೆ(ಯುದ್ಧದಲ್ಲಿ) ಕೈದೋರುವುದು(ಶಕ್ತಿಯನ್ನು ತೋರಿಸುವುದು.) ಮತವು (ನನ್ನ ಅಭಿಪ್ರಾಯ)+ ಎಂದನು
ಅರ್ಥ: ದ್ರುಪದನ ಮಾತಿಗೆ ಮುರಧ್ವಂಸಿ ಕೃಷ್ಣನು,'ಯೋಗ್ಯರನ್ನು ರಾಜ್ಯವನ್ನು ಹಿಂತಿರುಗಿಸಲು ಕೇಳುವುದಕ್ಕೆ ಕಳುಹಿಸುವುದು. ರಾಜ್ಯವನ್ನು ಕೇಳುವಾಗ ಸಾಮೋಪಾಯವನ್ನು ಬಳಸುವುದು. ವೀರರಾದ ಭೀಷ್ಮಾದಿಗಳನ್ನು ವಿನಯದಿಂದ ಕೌರವರ ಪಕ್ಷವಹಿಸದಂತೆ ಕಟ್ಟುವುದು. ಹೀಗೆ ಮೊದಲು ಕೌರವನ ಮನಸ್ಸನ್ನು ತಿಳಿಯಬೇಕು. ಅಲ್ಲಿಂದ ಮುಂದೆ ಮೃದುತ್ವ ರಾಜನೀತಿಗೆ ಫಲವಿಲ್ಲ ಎಂದಾದರೆ, ಯುದ್ಧದಲ್ಲಿ ನಮ್ಮ ಶಕ್ತಿಯನ್ನು ತೋರಿಸುವುದು. ಇದು ನನ್ನ ಅಭಿಪ್ರಾಯ' ಎಂದನು.
ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ |
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ || ೬ ||
ಪದವಿಭಾಗ-ಅರ್ಥ: ಎಲೆ ಮರುಳೆ ಮುರವೈರಿ(ಕೃಷ್ಣ) ಕೌರವರು+ ಒಲಿಯರು+ ಈ ಹದನನು(ವಿಚಾರ) ಯುಧಿಷ್ಠಿರನು+ ಇಳೆಯ(ಭೂಮಿ - ರಾಜ್ಯ) ಸೋತನು ಜೂಜುಗಾರರ ಮೇರೆ(ಮಿತಿ, ಪ್ರಕಾರವಾಗಿ, ರೀತಿಯಲ್ಲಿ) ಮಾರ್ಗದಲಿ; ನೆಲನನು(ಭೂಮಿ, ರಾಜ್ಯ)+ ಒಡ್ಡಲಿ ಮತ್ತೆ ಗೆಲಿದೇ ಕೊಳಲಿ ಮೇಣ್ (ಅಥವಾ) ಕಾದಲಿ(ಯುದ್ಧಮಾಡಲಿ) ಸುಯೋಧನನೊಳಗೆ ತಪ್ಪಿಲ್ಲ+ ಎಂದು ನುಡಿದನು ನಗುತ ಬಲರಾಮ.
ಅರ್ಥ: ಆಗ ಬಕರಾಮನು ಕೃಷ್ಣನಿಗೆ, "ಎಲೆ ಮರುಳೆ ಮುರವೈರಿಯೇ, ಕೌರವರು ಬಾಯಿಮಾತಿಗೆ ಒಲಿಯುವುದಿಲ್ಲ, ರಾಜ್ಯವನ್ನು ಕೊಡುವುದಿಲ್ಲ. ಈ ವಿಚಾರದಲ್ಲಿ- ಯುಧಿಷ್ಠಿರನು ರಾಜ್ಯವನ್ನು ಜೂಜುಗಾರರ ಮಾರ್ಗದಲ್ಲಿ ಪಣಕ್ಕಿಟ್ಟು ಸೋತನು. ಈಗ ಅವನು ಪುನಃ ರಾಜ್ಯವನ್ನು ಪಣಕ್ಕೆ ಒಡ್ಡಲಿ ಮತ್ತೆ ಗೆದ್ದೇ ರಾಜ್ಯವನ್ನು ಪಡೆದುಕೊಳ್ಳಲಿ ಅಥವಾ ಯುದ್ಧಮಾಡಲಿ. ಇದರಲ್ಲಿ ಸುಯೋಧನನ ತಪ್ಪಿಲ್ಲ' ಎಂದು ನಗುತ್ತಾ ಹೇಳಿದನು.
ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ |
ಆಸುರದ ಕತ್ತಲೆಯ ಬೀಡು ಮ
ಹಾಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ || ೭ ||
ಪದವಿಭಾಗ-ಅರ್ಥ: ಲೇಸನಾಡಿದೆ ರಾಮ ಬಳಿಕೇನು+ ಆ ಸುಯೋಧನನು+ ಅಧಮನೇ ನೀನು+ ಈಸನು ಏರಿಸಿಕೊಂಡು ನುಡಿವಾ? ಮತ್ತೆ ಕೆಲಬರಲಿ ಆಸುರದ ಕತ್ತಲೆಯ ಬೀಡು ಮಹಾಸಹಾಯವು ಗೂಗೆಗಳಿಗೆ+ ಉಪಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ.
ಅರ್ಥ: ಬಲರಾನ ಮಾತಿಗೆ ಸಾತ್ಯಕಿಯು ಸಿಟ್ಟಿನಿಂದ ವ್ಯಂಗವಾಗಿ,'ಲೇಸನಾಡಿದೆ- ಒಳ್ಳೆಯ ಮಾತನ್ನು ಆಡಿದೆ, ರಾಮ! ಬಳಿಕ ಏನು ಆ ಸುಯೋಧನನು ಅಧಮನೇ (ನಿನಗೆ ಒಳ್ಳೆಯವನು), ನೀನು ಇಷ್ಟನ್ನು ಏರಿಸಿಕೊಂಡು- ಬೆಂಬಲಿಸಿ ನುಡಿವಾ- ನುಡಿಯಬಹುದೇ? ಮತ್ತೆ ಕೆಲವರಲ್ಲಿ (ಬಲರಾಮನಲ್ಲಿ ಎಂದು ಭಾವ) ಆಸುರದ(ರಾಕ್ಷಸರ) ಕತ್ತಲೆಯ ಬೀಡು ಇರುವುದು; ಅದು ಗೂಗೆಗಳಿಗೆ (ಕೌರವರಿಗೆ) ಮಹಾ ಸಹಾಯವು; ಬಲರಾಮನ ಉಪಹಾಸವೇ ದಿಟವು ಎಂದುಕೊಂಡು ಸಾತ್ಯಕಿ ಕೃತಕವಾಗಿ ನಗುತ್ತಾ ಕೋಪಗೊಂಡ.
ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ |
ನೆಲವನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು || ೮ ||
ಪದವಿಭಾಗ-ಅರ್ಥ: ಬಲನ ಮಾತೇನು+ ಇವರ (ಪಾಂಡವರ)ಭಾಗ್ಯದ ನೆಲೆಯೆ ಫಡ ಕೌರವರ ಶತಕದ (ನೂರು) ತಲೆಗೆ ತಾ ವೀಳೆಯವನು+ ಎಲೆ ಕುಂತೀ ಕುಮಾರಕನೆ ನೆಲವನು (ರಾಜ್ಯವನ್ನು)+ ಅಲಗಿನ ಮೊನೆಯಲಿ+ ಅಲ್ಲದೆ ಮೆಲುನುಡಿಯ ಸಾಮದಲಿ ಗೀಮದಲಿ+ ಇಳೆಯ(ರಾಜ್ಯವ) ಕೊಂಬರೆ(ತೆಗೆದುಕೊಳ್ಳುವರೆ) ಧರೆಯೊಳು+ ಅಧಿಕ ಕ್ಷತ್ರಿಯಾತ್ಮಜರು (ಕ್ಷತ್ರಿಯರ ಮಕ್ಕಳು).
ಅರ್ಥ: ಸಾತ್ಯಕಿಯು ಮುಂದುವರಿದು,'ಬಲರಾಮನ ಮಾತೇನು ಪಾಂಡವರ ಭಾಗ್ಯದ ನೆಲೆಯೆ- ಆಧಾರವೇ? ಫಡ! ಕೌರವರ ನೂರು ತಲೆಗೆ - (ತಲೆಯನ್ನು ತೆಗೆಯಲು) ನನಗೆ ತಾ ವೀಳೆಯವನು, ಆಜ್ಞೆಯನ್ನು ಕೊಡು! ನಾನು ತರುವೆನು! ಎಲೆ ಕುಂತೀ ಕುಮಾರಕನೆ- ಧರ್ಮಜನೇ, ರಾಜ್ಯವನ್ನು ಬಾಣದ ಅಲಗಿನ ಮೊನೆಯಲ್ಲಿ ಪಡೆಯದೆ, ಮೆಲುನುಡಿಯಲ್ಲಿ - ಸಾಮ-ಗೀಮದಲ್ಲಿ (ಸಾಮೋಪಾಯದಲ್ಲಿ) ರಾಜ್ಯವನ್ನು ಅಧಿಕ ಕ್ಷತ್ರಿಯಾತ್ಮಜರು ಈ ಭೂಮಿಯಲ್ಲಿ ಪಡೆಯುವರೇ?' ಎಂದನು.
ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನವಿದು ಕ್ಷತ್ರಿಯರ ಮಕ್ಕಳಿಗೆ |
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ || ೯ ||
ಪದವಿಭಾಗ-ಅರ್ಥ: ಕಾದಿ (ಯುದ್ಧಮಾಡಿ) ಸಾವುದು, ಮೇಣು ರಿಪು ಭಟನಾದವನ ನೆತ್ತಿಯಲಿ ಸಬಳವ ಕೋದು(ಭರ್ಚಿಯನ್ನು ಚುಚ್ಚಿ) ಕೊಂಬುದು(ಪಡೆದುಕೊಳ್ಲುವುದು) ನೆಲನ+ ವಿ+ ಇದು ಕ್ಷತ್ರಿಯರ ಮಕ್ಕಳಿಗೆ, ಮೇದಿನಿಯ(ಭೂಮಿಯನ್ನು) ಬೇಡುವೊಡೆ, ಮಟ್ಟಿಯ(ಗೋಪಿಚಂದನ-ಮಣ್ಣಿನ ಉಂಡೆ) ತೇದು ಹಣೆಯಲಿ ಬಡಿದು ದರ್ಭೆಯ ಕೋದು ಸ್ವಸ್ತಿಯ ಹಾಕುವುದು ಹಾರುವರ (ಬ್ರಾಹ್ಮಣರ) ಮಕ್ಕಳಿಗೆ.
ಅರ್ಥ: ಸಾತ್ಯಕಿಯು, 'ಯುದ್ಧಮಾಡಿ ಸಾಯುವುದು ಅಥವಾ ಶತ್ರು ಭಟನಾದವನ ನೆತ್ತಿಯಲ್ಲಿ ಭರ್ಚಿಯನ್ನು ಚುಚ್ಚಿ ಭೂಮಿಯನ್ನು ಪಡೆದುಕೊಳ್ಲುವುದು, ಇದು ಕ್ಷತ್ರಿಯರ ಮಕ್ಕಳಿಗೆ ಯೋಗ್ಯವು. ಭೂಮಿಯನ್ನು ಬೇಡುವುದು, ಗೋಪಿಚಂದನದ ಮಣ್ಣಿನ ಉಂಡೆಯನ್ನು ತೇಯಿದು ಹಣೆಯಲ್ಲಿ ಬಡಿದುಕೊಂಡು ದರ್ಭೆಯನ್ನು ಜೋಡಿಸಿ ಸ್ವಸ್ತಿಯ ವಾಚನ ಹಾಕುವ ಬ್ರಾಹ್ಮಣರ ಮಕ್ಕಳಿಗೆ ಸರಿಯಾದುದು' ಎಂದ.
ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು |
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆವೊಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬೆಳೆಸಿ ನೋಡುವುದು || ೧೦ ||
ಪದವಿಭಾಗ-ಅರ್ಥ: ಎನಲು(ಹೇಳಲು) ನಕ್ಕನು ದ್ರುಪದನು+ ಇದು ನಮ್ಮ+ ಅನುಮತವು (ಒಪ್ಪಿತವು) ಕಾಳಗದೊಳು+ ಅಲಗಿನ ಮೊನೆಯೊಳು+ ಅಲ್ಲದೆ ಮಹಿಯ(ರಾಜ್ಯವ) ಕೊಡುವನೆ ಕೌರವೇಶ್ವರನು, ವಿನುತ(ಶ್ರೇಷ್ಠ) ಸಾತ್ಯಕಿ ಕೇಳು ನೆಲೆಯಿದು(ಸ್ಥಾನ,ಸರಿಯಾದ ಮಾರ್ಗ) ಜನಪನಲ್ಲಿಗೆ + ಒಬ್ಬ ದೂತನ ವಿನಯದಲಿ ಕಳುಹುವುದು ಸಾಮವ ಬೆಳೆಸಿ(ಎತ್ತಿ ಹಿಡಿದು) ನೋಡುವುದು.
ಅರ್ಥ: ಸಾತ್ಯಕಿ ಹಾಗೆ ಹೇಳಲು, ದ್ರುಪದನು ನಕ್ಕನು; ಅವನು,'ಇದು ನಮ್ಮ ಒಪ್ಪಿತ ಅಭಿಪ್ರಾಯವು. ಯುದ್ಧದಲ್ಲಿ ಬಾಣದ ಅಲಗಿನ ಮೊನೆಯಲ್ಲಿ ಅಲ್ಲದೆ ಕೌರವೇಶ್ವರನು ರಾಜ್ಯವ ಕೊಡುವನೆ? ಇಲ್ಲ. ಶ್ರೇಷ್ಠನಾದ ಸಾತ್ಯಕಿಯೇ ಕೇಳು, ರಾಜನೀತಿಯ ಸರಿಯಾದ ಮಾರ್ಗವೆಂದರೆ ಕೌರವರಾಜನ ಬಳಿಗೆ ಒಬ್ಬ ದೂತನನ್ನು ಒಳ್ಳೆಯತನದಲ್ಲಿ ಕಳುಹಿಸುವುದು; ಮೊದಲು ರಾಜನೀತಿಯಂತೆ ಸಾಮೋಪಾಯವನ್ನು ಬೆಳೆಸಿ ನೋಡುವುದು ಉತ್ತಮ' ಎಂದನು.
ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ |
ಬಹಳ ಸಂವರಣದಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ || ೧೧ ||
ಪದವಿಭಾಗ-ಅರ್ಥ: ವಿಹಿತವು (ಯೋಗ್ಯವು)+ ಇದು ಪಾಂಚಾಲಕನ ಮತವು (ಅಭಿಪ್ರಾಯ)+ ಅಹುದು ರಾಯರಿಗೆ (ರಾಜರಿಗೆ)+ ಅಟ್ಟುವುದು(ಅಟ್ಟು- ಕಳಿಸು) ವಿಗ್ರಹವ(ವಿರೋಧ ಯುದ್ಧ) ಸೂಚಿಸಿ ಕರೆದುಕೊಂಬುದು ಬೇಹ(ಜಾಣತನ, ದಕ್ಷತೆ, ಧೀಮಂತಿಕೆ, ಬುದ್ಧಿವಂತಿಕೆ) ಭೂಭುಜರ (ರಾಜರ) ಬಹಳ ಸಂವರಣದಲಿ(ಮರೆಮಾಡುವುದು, ಗುಟ್ಟು, ರಹಸ್ಯ) ರಣ ಸನ್ನಿಹಿತವಾಗಿಹುದು+ ಇತ್ತಲು+ ಅತ್ತಲು ಮಹಿಯ ಬೇಡಿಸ ಕಳುಹುವುದು ತೆರನು(ವಿಧಾನ, ಪದ್ಧತಿ)+ ಎಂದನು+ ಅಸುರಾರಿ (ಕೃಷ್ನನು).
ಅರ್ಥ: ಅಸುರಾರಿ ಕೃಷ್ಣನು, 'ಪಾಂಚಾಲಕನ ಅಭಿಪ್ರಾಯ ಯೋಗ್ಯವಾಗಿದೆ. ಇದು ಸರಿಯಾದ ಮಾರ್ಗ; ಮಿತ್ರ ರಾಜರಿಗೆ ದೂತರನ್ನು ಕಳಿಸಿ ಬಹಳ ರಹಸ್ಯದಲ್ಲಿ ಯುದ್ಧವು ಸನ್ನಿಹಿತವಾಗಿದೆ ಎಂದು ಸೂಚಿಸಿ, ಇತ್ತಲು ರಾಜರನ್ನು ಸಹಾಯಕ್ಕೆ ಕರೆದುಕೊಳ್ಳುವುದು ಜಾಣತನ- ಬುದ್ಧಿವಂತಿಕೆ; ಅತ್ತಲು ಕೌರವನಿಗೆ ರಾಜ್ಯವನ್ನು ಹಿಂತಿರುಗಿ ಕೊಡಲು ಕಳುಹಿಸುವುದು ಸರಿಯಾದ ವಿಧಾನ,' ಎಂದನು.
ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ |
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ || ೧೨ ||
ಪದವಿಭಾಗ-ಅರ್ಥ: ಮದುವೆಗೋಸುಗ (ಅಭಿಮನ್ಯು ಉತ್ತರೆಯ) ಬಂದೆವು+ ಆವು (ನಾವು)+ ಇನ್ನಿದರ ಮೇಲಣ(ಮುಂದಿನ) ರಾಜಕಾರ್ಯದ ಹದನನ (ವಿಚಾರ)+ ಅಟ್ಟುವುದು+ ಅರುಹುವುದು(ಹೇಳುವುದು) ಬಹೆವು(ಬರುವೆವು)+ ಆವು (ನಾವು) ಕರೆಸಿದೊಡೆ (ಕರೆಸಿದರೆ) ಹದುಳವು(ಆರೋಗ್ಯ, ಕ್ಷೇಮ, ಚೆನ್ನು; ಸಂತೋಷ)+ ಇಹುದು+ ಎಂದು+ ಅಸುರರಿಪು(ಕೃಷ್ಣನು) ಕರುಣದಲಿ ಕುಂತೀಸುತರನು(ಪಾಂಡವರನ್ನು)+ ಆ ದ್ರೌಪದಿಯನು+ ಅಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ (ಹೊರಟನು).
ಅರ್ಥ: ಕೃಷ್ಣನು ಪಾಂಡವರಿಗೆ, 'ಅಭಿಮನ್ಯು ಉತ್ತರೆಯ ಮದುವೆಗೋಸುಗ ಈ ವಿರಾಟನಗರಕ್ಕೆ ನಾವು ಬಂದೆವು. ಇನ್ನು ಇದರ ಮುಂದಿನ ರಾಜಕಾರ್ಯದ ವಿಚಾರವಿದ್ದಾಗ, ದೂತರನ್ನು ಕಳಿಸಿ ನಮ್ಮಿಂದ ಆಗಬೇಕಾದ ಕಾರ್ಯವನ್ನು ಹೇಳುವುದು. ನಾವು ಕರೆಸಿದರೆ ಸಂತೋಷದಿಂದ ಬರುವೆವು. ನೀವು ಆರೋಗ್ಯ ಮತ್ತು ಕ್ಷೇಮದಿಂದ ಇರುವುದು' ಎಂದು ಅಸುರರಿಪು ಕೃಷ್ಣನು ಕರುಣೆಯಿಂದ ಕುಂತೀಸುತರನ್ನು, ಆ ದ್ರೌಪದಿಯನ್ನು, ಅಭಿಮನ್ಯುವನ್ನು, ಸುಭದ್ರೆಯನ್ನು ಹರಸಿ ಹಸ್ತಿನಾತಿಗೆ ಹೊರಟನು.
ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು |
ಕೂಡೆ ಶೋಧಿಸಿ ಸಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ || ೧೩ ||
ಪದವಿಭಾಗ-ಅರ್ಥ: ಕೂಡಿಕೊಂಡಿಹುದು+ ಇವರ ಮಕ್ಕಳ ನೋಡಲಾಗದು ಹೆಚ್ಚು ಕುಂದನು, ನಾಡ (ರಾಜ್ಯವ) ಬೇಡಲು (ಕೇಳಲು) ಬುದ್ಧಿವಂತರನು+ ಅಲ್ಲಿಗೆ+ ಅಟ್ಟುವುದು(ಕಳಿಸುವುದು), ಕೂಡೆ(ಇದರ ಕೂಡೆ; ಇದರೊಡನೆ) ಶೋಧಿಸಿ ಸಜ್ಜೆಯಲಿ(ಮಲಗುವ ಮನೆ, ಶಯ್ಯಾಗೃಹ) ಮೈಗೂಡಿಯು(ಜೊತೆಯಲ್ಲಿದ್ದು)+ ಆರೋಗಣೆಗಳಲಿ(ಊಟ ಉಪಾಹಾರ) ಕೈಮಾಡಿ(ಕೈಮಸಕು- ವಿಷ) ಬೆರೆಸಿಹುದ + ಎಂದು ದ್ರುಪದ ವಿರಾಟರಿಗೆ ನುಡಿದ.
ಅರ್ಥ: ಕಷ್ಣನು ಪಾಂಡವರ ಬೀಗರಾದ ದ್ರುಪದ ವಿರಾಟರನ್ನು ಕುರಿತು, 'ನಮ್ಮ ಸಂಬಂಧ ಪಾಂಡವರೊಡನೆ ಕೂಡಿಕೊಂಡಿರುವುದು. ರಾಜ್ಯಹೀನರಾದ ಇವರ ಮಕ್ಕಳ ಸ್ಥಿತಿಯನ್ನು ಮತ್ತೂ ಹೆಚ್ಚು ಕುಂದನ್ನು- ಕೆಡುಕನ್ನು ನೋಡಲಾಗದು; (ನಮ್ಮಿಂದ ನೋಡಲು ಸಾದ್ಯವಿಲ್ಲ); ಕೌರವನಿಂದ ರಾಜ್ಯವನ್ನು ಕೇಳಲು ಬುದ್ಧಿವಂತರನ್ನು ಅಲ್ಲಿಗೆ ಕಳಿಸುವುದು. ಇದರರೊಡನೆ ಶತ್ರುಗಳ ಸಂಚಿನ ಬಗ್ಗೆ ಪಾಂಡವರ ಮಲಗುವ ಮನೆಯಲ್ಲಿ ಶೋಧಿಸಿ ನೋಡುತ್ತಿರಬೇಕು, ಜೊತೆಯಲ್ಲಿದ್ದು ಊಟ ಉಪಾಹಾರಗಳಲ್ಲಿ ವಿಷವನ್ನು ಬೆರೆಸಿರಬಹುದೇ ಎಂದು ಶೋಧಿಸಿ ನೋಡುತ್ತಿರಬೇಕು' ಎಂದು ನುಡಿದನು.
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ |
ಒಂದು ದಿನವಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವರ ಪಟ್ಟಣಕೆ || ೧೪ ||
ಪದವಿಭಾಗ-ಅರ್ಥ: ಎಂದು ಕಳುಹಿಸಿಕೊಂಡು ನಾರೀವೃಂದ(ವನಿತೆಯರ) ಯದುಕುಲ(ಜನರ) ಸಹಿತ ದೇವ ಮುಕುಂದ ಬಿಜಯಂಗೈದು(ಹೋಗಿ) ಹೊಕ್ಕನು ದ್ವಾರಕಾಪುರವ; ಒಂದು ದಿನವು+ ಆಲೋಚನೆಯ ನೆಲೆಯಿಂದ ಕರೆದು ಪುರೋಹಿತನ, ನಲವಿಂದ(ಸಂತಸದಿಂದ) ಕಳುಹಿದ ದ್ರುಪದನು + ಆ ಕೌರವರ ಪಟ್ಟಣಕೆ.
ಅರ್ಥ: ಹೀಗೆ ಕೃಷ್ಣನು ಎಚ್ಚರಿಕೆ ಹೇಳಿ ದ್ರುಪದ ವಿರಾಟರಿಂದ ಬೀಳ್ಕೊಂಡು- ಕಳುಹಿಸಿಕೊಂಡು ವನಿತೆಯರ ಮತ್ತು ಯಾದವರ ಸಹಿತ ದೇವ ಮುಕುಂದ ಕೃಷ್ನನು ಹೋಗಿ ದ್ವಾರಕಾಪುರವನ್ನು ಹೊಕ್ಕನು; ವಿರಾಟನಗರದ ಹತ್ತಿರದ ಉಪಪ್ಲಾವ್ಯನಗರದಲ್ಲಿ ಒಂದು ದಿವಸ ದ್ರುಪದನು ಪಾಂಡವರೊಡನೆ ಆಲೋಚನೆಯನ್ನು ಮಾಡಿ ರಹಸ್ಯದಿಂದ ಕರೆದು ಪುರೋಹಿತನನ್ನು, ಸಂತಸದಿಂದ ಆ ಕೌರವರ ಪಟ್ಟಣವಾದ ಹಸ್ತನಾವತಿಗೆ ಕಳುಹಿಸಿದನು.
ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ |
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡುತನಯರಿಗೆ || ೧೫ ||
ಪದವಿಭಾಗ-ಅರ್ಥ: ಓಲೆಯ + ಉಡುಗೊರೆ ಸಹಿತ ಧರಣೀಪಾಲರಿಗೆ ಪಾಂಡವರು ಶಿಷ್ಟರು(ನ್ಯಾಯಯುತರು, ಒಳ್ಳೆಯ ನಡವಳಿಕೆ, ಸದಾಚಾರ, ಯೋಗ್ಯರು) ಕಾಳಗಕೆ ನೆರವಾಗಲೋಸುಗ ಕರೆದರು+ ಅಲ್ಲಲ್ಲಿ ಆಳು(ಸೇನೆ, ಯೋಧರು) ಕುದುರೆಯ ಕೂಡಿ ದೆಸೆಗಳ (ದಿಕ್ಕು) ಮೂಲೆಯ+ ಅರಸುಗಳೆಲ್ಲ ಕುರು ಭೂಪಾಲನಲ್ಲಿಗೆ ಕೆಲರು ಕೆಲಬರು ಪಾಂಡುತನಯರಿಗೆ.
ಅರ್ಥ: ದ್ರುಪದ ಮತ್ತು ಪಾಂಡವರು, ಧರಣೀಪಾಲರಿಗೆ ಉಡುಗೊರೆ ಸಹಿತ ಓಲೆಯನ್ನು "ಪಾಂಡವರು ಶಿಷ್ಟರು ಕಾಳಗಕೆ (ಪಾಂಡವರು ಯುದ್ಧವನ್ನು) ನ್ಯಾಯಕ್ಕಾಗಿ ಮಾಡುವವರಿದ್ದಾರೆ, ಅದಕ್ಕೆ ನೆರವಾಗಲು ಬರಬೇಕು" ಎಂದು ಕರೆದರು. ಅಲ್ಲಲ್ಲಿ ಯೋದರು ಮತ್ತು ಕುದುರೆಗಳನ್ನು ಕೂಡಿಕೊಂಡು ದೆಸೆಗಳ ಮೂಲೆಯ ಅರಸುಗಳೆಲ್ಲ ಕೆಲವರು ಕುರು ಭೂಪಾಲನಲ್ಲಿಗೆ ಮತ್ತು ಕೆಲಬರು ಪಾಂಡುತನಯರೊಂದಿಗೆ ಸೇರಲು ಹೊರಟರು.
ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ |
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯವಹುದಿ
ನ್ನುರವಣಿಸಬೇಕೆಂದು ದುರ್ಯೋಧನನು ಚಿಂತಿಸಿದ || ೧೬ ||
ಪದವಿಭಾಗ-ಅರ್ಥ: ಧರಣಿಯು+ ಎಡೆಗೆಡೆ(ಭೂಮಿಯು ಆಧಾರ ತಪ್ಪುವಂತೆ) ರಾಯ(ರಾಜರ) ಮೋಹರ ತೆರಳಿತು+ ಇಬ್ಬರು ರಾಯರಿಗೆ ಕೈನೆರವು + ತೋರಲು (ಸಹಾಯ ಮಾಡಲು) ಕವಿದು ಬಂದುದು ಕಾಣೆನು+ ಅಳತೆಗಳ ಅರಿಗಳು+ ಅತಿ ಹೆಚ್ಚಿದರು ಮೈಮರೆದಿರಲು ಧರಣಿಗೆ+ ಅಮಾನ್ಯನು+ ಅಹುದು+ ಇನ್ನು+ ಉರವಣಿಸಬೇಕೆಂದು(ಉರವಣಿಸು- ಪರಾಕ್ರಮವನ್ನು ತೋರಿಸ) ದುರ್ಯೋಧನನು ಚಿಂತಿಸಿದ.
ಅರ್ಥ: ಭೂಮಿಯು ಆಧಾರ ತಪ್ಪುವಂತೆ ದೊಡ್ಡ ದೊಡ್ಡ ರಾಜರ ಸೈನ್ಯ ಮುಂದೆ ತೆರಳಿತು; ಕೌರವ ಮತ್ತು ಧರ್ಮಜ ಈ ಇಬ್ಬರು ರಾಯರಿಗೆ ಸಹಾಯ ಮಾಡಲು ಸೇನೆಗಳು ಭೂಮಿಯನ್ನು ಮುಚ್ಚುವಂತೆ ಕವಿದು ಬಂದವು; ಅವುಗಳ ಅಳತೆಗಳನ್ನು ಕಾಣೆನು; ಕೌರವನು 'ಶತ್ರುಗಳು ಅತಿ ಹೆಚ್ಚಿದರು, ಇನ್ನು ಮೈಮರೆತು ಇದ್ದರೆ ರಾಜ್ಯಕ್ಕೆ ಅಮಾನ್ಯನು/ಅನರ್ಹನು ಆಗುವೆನು' ಎಂದು ಯೋಚಿಸಿ, "ಅಹುದು, ಇನ್ನು ನಮ್ಮ ಪರಾಕ್ರಮವನ್ನು ತೋರಿಸಬೇಕು" ಎಂದು ದುರ್ಯೋಧನನು ಚಿಂತಿಸಿದ.
ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ |
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರನಂದನನ || ೧೭ ||
ಪದವಿಭಾಗ-ಅರ್ಥ: ಹದನನು (ವಿಚಾರವನ್ನು)+ ಆಪ್ತರಿಗೆ+ ಅರುಹಿದನು(ಹೇಳಿದನು) ಗುಪ್ತದಲಿ ಕೃಷ್ಣನನು+ ಒಳಗು ಮಾಡುವ ಮುದದಿ(ಸಂತಸದಲ್ಲಿ) ಬಂದನು ಕೌರವೇಂದ್ರನು ದ್ವಾರಕಾಪುರಿಗೆ; ಇದನು ಭೇದಿಸಿ(ಗುಟ್ಟನ್ನು ತಿಳಿದು) ಬೇಹಿನವರು(ಗುಪ್ತಚಾರರು)+ ಅರುಹಿದರು(ಹೇಳಿದರು) ಕುಂತೀಸುತರಿಗೆ(ಪಾಂಡವರಿಗೆ)+ ಅತಿವೇಗದಲಿ ಧರ್ಮಜನು+ ಅಳುಕಿ(ಹೆದರಿ) ಕಳುಹಿದನು+ ಇಂದ್ರನಂದನನ(ಅರ್ಜುನನನ್ನು).
ಅರ್ಥ: ಮುಂದಿನ ಯುದ್ಧಸಿದ್ಧತೆಯ ವಿಚಾರವನ್ನು ಕೌರವನು ತನ್ನ ಆಪ್ತರಿಗೆ ಹೇಳಿದನು. ಗುಪ್ತವಾಗಿ ಕೃಷ್ಣನನ್ನು ತನ್ನಕಡೆ ಬರುವಂತೆ ಒಳಗು ಮಾಡುವ ಸಂತಸದಲ್ಲಿ ಕೌರವೇಂದ್ರನು ದ್ವಾರಕಾಪುರಿಗೆ ಬಂದನು; ಇದನ್ನು ಭೇದಿಸಿ ತಿಳಿದು ಗುಪ್ತಚಾರರು ಪಾಂಡವರಿಗೆ ಹೇಳಿದರು. ಧರ್ಮಜನು ಹೆದರಿ ಅತಿ ವೇಗದಿಂದ ಅರ್ಜುನನನ್ನು ದ್ವಾರಕಾಪುರಿಗೆ ಕಳುಹಿಸಿದನು.

ದ್ವಾರಕೆಗೆ ಅರ್ಜುನನ ಪಯಣ[ಸಂಪಾದಿಸಿ]

ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳದ ಹಾಯ್ದು |
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ || ೧೮ ||
ಪದವಿಭಾಗ-ಅರ್ಥ: ಬೀಳುಕೊಂಡು+ ಅರ್ಜುನನು ಲಕ್ಷ್ಮೀಲೋಲನಲ್ಲಿಗೆ ಬರುತ ಕಂಡನು ಲೀಲೆಯಲಿ ನರ್ತಿಸುವ ನವಿಲನು, ಬನದೊಳು+ ಅದ (ಬನ- ಕಾಡು) ಹಾಯ್ದು ಮೇಲೆ ಹಂಗನ ಬಲನ(ಶಕುನದ ಹಕ್ಕಿ, ಕಳಿಂಗ ಪಕ್ಷಿ) ಹರಿಣೀಜಾಲದ (ಜಿಂಕೆ ಹಿಂಡು)+ ಎಡನನು ತಿದ್ದುವಳಿಯ ವಿಶಾಲ ಶಕುನವನು ಆಲಿಸುತ ಹರುಷದಲಿ ನಡೆತಂದ.
ಅರ್ಥ: ಅರ್ಜುನನು ಧರ್ಮಜನನ್ನು ಬೀಳ್ಕೊಂಡು ಲಕ್ಷ್ಮೀಲೋಲ ಕೃಷ್ಣನ ಬಳಿಗೆ ಬಂದ. ಬರುವಾಗ ಲೀಲೆಯಲಿ ನರ್ತಿಸುವ ನವಿಲನ್ನು ಕಂಡನು. ಕಾಡಿನಲ್ಲಿ ಅದನ್ನು ದಾಟಿ ಮುಂದೆ ಬರುವಾಗ ಮೇಲೆ ಹಂಗಪಕ್ಷಿಯು ಶುಭಸೂಚಕವಾಗಿ ಬಲಭಾಗದಲ್ಲಿ ಹಾರಿದುದನ್ನು ಕಂಡ; ಮುಂದೆ ಹರಿಣೀಜಾಲವನ್ನು ಎಡಭಾಗದಲ್ಲಿ ನೋಡಿ, ಹೀಗೆ ತಿದ್ದುವಳಿಯ ವಿಶಾಲ ಶುಭಶಕುನಗಳನ್ನು ನೋಡುತ್ತಾ, ಆಲಿಸುತ್ತಾ ಹರುಷದಿಂದ ದ್ವಾರಕೆಗೆ ಬಂದ.
ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಟುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ |
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೊಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ || ೧೯ ||
ಪದವಿಭಾಗ-ಅರ್ಥ: ಮೊರೆದು(ಗರ್ಜಿಸಿ) ಮಿಗೆ(ಮತ್ತೆ) ತಲೆಯೊತ್ತಿ ತೆರೆ ಮೈಮುರಿದು(ಮೇಲೆ ಸುರಳಿಯಾಗಿ) ಘುಳುಘುಳು ಘುಳಿತ ಘನ ನಿಷ್ಟುರ ನಿನಾದದ(ಸದ್ದಿನ) ಗಜರು(ಆರ್ಭಟದ) ಗಾಢಿಸಿ (ಉಬ್ಬಿ, ಮೇಲೆದ್ದು) ಬಹಳ ಲಹರಿಯಲಿ ತೆರೆ ತೆರೆಯ ತಿವಿದು+ ಎದ್ದು ಗಗನವನು+ (ಹಾಗೇ) ಇರದೆ (ಕೂಡಲೆ)+ ಒದೆದು ವಿತಳಕ್ಕೆ (ಕೆಳಕ್ಕೆ) ಸುಳಿ ಭೊಂಕರಿಸಿ(ದೊಡ್ಡ ಸದ್ದುಮಾಡಿ) ಸಾಗರನು+ ಉಬ್ಬು+ಕವಳವ ಕೊಂಡವೊಲು (ಸಮುದ್ರನು) ಕುಣಿದ.
ಅರ್ಥ: ಅರ್ಜುನನು ಬರುವಾಗ ಸಮುದ್ರವನ್ನು ಕಂಡ; ಅದು ಗರ್ಜಿಸಿ ಮತ್ತೆ ತೆರೆಯ ತಲೆಯೊತ್ತಿ, ಆ ತೆರೆ ಮೈಮುರಿದು, ಘುಳುಘುಳು ಘುಳಿತದ ಘನ ನಿಷ್ಠುುರವಾದ ಸದ್ದಿನ ಆರ್ಭಟದೊಡನೆ ಉಬ್ಬಿ, ಮೇಲೆದ್ದು ಬಹಳ ಲಹರಿಯಿಂದ ತೆರೆ ತೆರೆಯನ್ನು ತಿವಿದು ಎದ್ದು, ಗಗನವನ್ನು ಕೂಡಲೆ ಒದೆದು ವಿತಳಕ್ಕೆ ಸುಳಿಯು ಭೊಂಕರಿಸಿ- ದೊಡ್ಡ ಸದ್ದುಮಾಡಿ ಸಾಗರೆಂಬುವವನು ಎಲೆ ಅಡಕೆಯ ಉಬ್ಬುಗವಳವನ್ನು ತಿಂದು ಕೆನ್ನೆಯು ಉಬ್ಬಿಕೊಂಡಂತೆ ಸಾಗರನು ಕುಣಿದ. (ಅದನ್ನು ಅರ್ಜುನನು ಕಂಡು ಭಲೇ ಸಮುದ್ರನೇ ಎಂದ.)
ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ |
ಈತ ನಮಗಂಜುವನೆಯೆನುತ ವಿ
ಧೂತರಿಪುಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ || ೨೦ ||
ಪದವಿಭಾಗ-ಅರ್ಥ: ಪೂತು ಮಝ ಸಾಗರನ (ಸಮುದ್ರದ) ಬಿಗುಹು ಮಹಾತಿಶಯವೈ- ಯಿವನನು+ ಅಂಜಿಸಲು+ ಆತಗಳು(ಅವರು) ಮರ್ಮಿಗಳು(ಮರ್ಮಿ - ರಹಸ್ಯ ರೀತಿಯವ,) ಬೆಟ್ಟವನೊಟ್ಟಿ ನೆತ್ತಿಯಲಿ ಈತ ನಮಗೆ+ ಅಂಜುವನೆ+ ಎನುತ ವಿಧೂತರಿಪುಬಲ (ಅರ್ಜುನ; ವಿಧೂತ= ಅಲುಗಾಡುವ, ಅಲ್ಲಾಡುವ, ತೊರೆದ, ತ್ಯಜಿಸಿದ) ಮುಂದೆ ಕಂಡನು ಪಾತಕದ ಹೆಡತಲೆಯ(ಹಿಂದಲೆ, ಹಿಂಭಾಗ) ದಡಿಯನು(ದಡಿ- ಅಂಚು, ದಂಡೆ, ದಡ, ತೀರ) ದ್ವಾರಕಾಪುರವ.
ಅರ್ಥ: ಪೂತು! ಮಝ!(ಭಲೇ) ಈ ಸಾಗರನ ಬಿಗುಹು- ಬಲವು ಮಹಾತಿಶಯವೇ ಸರಿ; ಇವನನ್ನು ಅಂಜಿಸಲು ಮರ್ಮಜ್ಞರಾದ (ಗೋಪ್ಯರೀತಿಯವರಾದ) ಆ ದೇವತೆಗಳು- ಇವನ ನೆತ್ತಿಯಲ್ಲಿ ಬೆಟ್ಟವನ್ನು ಒಟ್ಟಿ- ತಂದು ಹಾಕಿ ಸೋತರು, ಹೀಗಿರುವಾಗ ಈತ ನಮಗೆ ಅಂಜುವನೆ? ಎನ್ನುತ್ತಾ ಅರ್ಜುನನು ಪಾಪಗಳ ಹಿಂದಿನ ಅಂಚಿನಂತಿರುವ (ಪಾಪಗಳಿಗೆ ಗಡಿಯಂತಿರುವ) ದ್ವಾರಕಾಪುರವ ಕಂಡನು. (ಇಂದ್ರನು ಹಾರಾಡುತ್ತಿದ್ದ ಬೆಟ್ಟಗಳ ರೆಕ್ಕೆಗಳನ್ನು ಕಡಿದು ಅವುಗಳನ್ನು ಸಮುದ್ರದಲ್ಲಿ ಕೆಡವಿದನೆಂಬ ಕಥೆ ಇದೆ.)
ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ |
ಹುಟ್ಟು ಸಾವಿನ ವಿಲಗ ಜೀವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ || ೨೧ ||
ಪದವಿಭಾಗ-ಅರ್ಥ: ಅಟ್ಟಿ(ಅಟ್ಟು- ಬೆನ್ನುಹತ್ತಿ ಹೋಗು) ಬಳಲಿದ ಶ್ರುತಿಗೆ (ವೇದಗಳಿಗೆ) ಹರಿ ಮೈಗೊಟ್ಟ(ಕಾಣಿಸಿದ, ಪ್ರತ್ಯಕ್ಷ) ಠಾವು+ ಇದು(ಸ್ಥಳ ಇದು), ತಾಪಸರು ಜಪಗುಟ್ಟಿ (ಜಪ ಕುಟ್ಟಿ- ಮಾಡಿ) ಜಿನುಗಿದಡೆ(ಜಿನುಗು - ಅಸ್ಪಷ್ಟವಾಗಿ ಧ್ವನಿಮಾಡು, ಮೊರೆ)+ ಅವರನು+ ಉಜ್ಜೀವಿಸಿದ(ಉಜ್ಜೀವಿಸು; ಬದುಕುವಂತೆ ಮಾಡು, ಚೈತನ್ಯವನ್ನು ತುಂಬು) ಠಾವಿದಲ(ಸ್ಥಳವಿದಲ್ಲವೇ.) ಹುಟ್ಟು ಸಾವಿನ ವಿಲಗ(ತೊಂದರೆ, ಕಷ್ಟ, ಹಿಂಸೆ) ಜೀವರ ಬಿಟ್ಟ ಠಾವಿದು; ಕಾಲ ಕರ್ಮದ ಥಟ್ಟು(ಪಕ್ಕ, ಕಡೆ, ಗುಂಪು, ಸಮೂಹ) ಮುರಿವಡೆದು(ನಾಶವಾಗಿ)+ ಓಡಿದ+ ಎಡೆಯಿದು(ಎಡೆ- ಸ್ಥಳ) ಶಿವ ಶಿವಾಯೆಂದ.
ಅರ್ಥ: ಅರ್ಜುನನು ಮನಸ್ಸಿನಲ್ಲಿ, 'ಪರಮಾತ್ಮನನ್ನು ಹುಡುಕುತ್ತಾ ಬೆನ್ನುಹತ್ತಿ ಹೋಗಿ ಬಳಲಿದ ಶ್ರುತಿಗೆ- ವೇದಗಳಿಗೆ ಹರಿಯು ಕಾಣಿಸಿದ ಸ್ಥಳ ಇದು. ತಾಪಸರು ಜಪವನ್ನು ಮಾಡುತ್ತಾ ಪಿಸುಗುಟ್ಟಿ ಮೊರೆ ಇಟ್ಟ ಅವರನ್ನು ಉಜ್ಜೀವಿಸಿದ ಸ್ಥಳವಿದಲ್ಲವೇ. ಹುಟ್ಟು ಸಾವಿನ ತೊಂದರೆಯನ್ನು ಜೀವರು ಬಿಟ್ಟ ಸ್ಥಳವು ಇದು; ಕಾಲ ಕರ್ಮದ ರಾಶಿ ನಾಶವಾಗಿ ಓಡಿದ ಸ್ಥಳವು ಇದು, ಶಿವ ಶಿವಾ' ಎಂದ.
ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ |
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ || ೨೨ ||
ಪದವಿಭಾಗ-ಅರ್ಥ: ಪರಮ ನಾರಾಯಣ ಪರಾಯಣನು+ ಇರವೆ ಪರತರವೆಂದು ಮುರಹರ ಬರೆದ ಠಾವಿದು; ಮುಕುತಿಯು+ ಇದರೊಳು ಕರತಳಾಮಲಕ ಭರಿತ (ಸ್ಪಷ್ಠವಾಗಿ ತುಂಬಿದ) ಬೊಮ್ಮದ(ಬ್ರಹ್ಮ ತತ್ವ) ಸುತ್ತುಗೊಳಸನು (ನಾನಾ ಬಗೆಯ ಯೋಗ ಕ್ರಮವನ್ನು) + ಉಸರಿದ ಠಾವು+ ಈ ತರ್ಕ ತಂತ್ರದ ತರದ(ರೀತಿಯ) ಯುಕುತಿಗೆ (ತರ್ಕಕ್ಕೆ) ತೊಳಸುಗೊಳ್ಳದ (ಸಂಶಯಕ್ಕೆ ಎಡೆಕೊಡದ) ಠಾವಲಾ+ ಎಂದ.
ಅರ್ಥ: ಅರ್ಜುನನು, 'ಪರಮ ನಾರಾಯಣ ಪರಾಯಣನ ಇರುವಿಕೆಯೆ ಪರತರವು- ಶ್ರೇಷ್ಠವು ಎಂದು ಮುರಹರ ಕೃಷ್ಣನು ಬರೆದ ಸ್ಥಳವು ಇದು; ಮುಕ್ತಿಯು ಈ ದ್ವಾರಕೆಯಲ್ಲಿ ಸ್ಪಷ್ಠವಾಗಿ ತುಂಬಿದೆ. ಬ್ರಹ್ಮತತ್ವದ ಅರಿವಿಗೆ ನಾನಾ ಬಗೆಯ ಯೋಗ ಕ್ರಮವನ್ನು ಉಸರಿಸಿದ- ಬೋಧಿಸಿದ ಸ್ಥಳವು ಇದು; ಈ ತರ್ಕ ತಂತ್ರದ ರೀತಿಗೆ, ಉಪಾಯಗಳಿಗೆ ಗೊಂದಲಗೊಳ್ಳದ ಸಂಶಯಕ್ಕೆ ಎಡೆಕೊಡದ ಸ್ಥಳವಲ್ಲವೇ ಇದು' ಎಂದ.

ಕೃಷ್ಣನ ಸನ್ನಿಧಿಯಲ್ಲಿ ಅರ್ಜುನ[ಸಂಪಾದಿಸಿ]

ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ |
ಸೊಗಸುಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ || ೨೩ ||
ಪದವಿಭಾಗ-ಅರ್ಥ: ಹೊಗಳುತ+ ಅರ್ಜುನನು+ ಅಸುರರಿಪುವಿನ(ಕೃಷ್ಣನ) ನಗರಿಗೆ+ ಐತಂದು (ಬಂದು)+ ಅರಮನೆಯ ಹೊಗಲು+ ಅಗಧರನು(ಬೆಟ್ಟಹೊತ್ತವ- ಕೃಷ್ಣನು) ಮಂಚದಲಿ ನಿದ್ರಾಂಗನೆಯ ಕೇಳಿಯಲಿ(ನಿದ್ರಾದೇವಿಯೊಡನೆ ಕ್ರೀಡೆ, ವಿನೋದದಲ್ಲಿ) ಸೊಗಸು ಮಿಗಲು(ಬಹಳ ಆನಂದದಲ್ಲಿ)+ ಅರೆ+ ತೆರೆದ ಲೋಚನಯುಗಳ(ಕಣ್ಣುಗಳ) ಸಮತಳಿಸಿದ (ಒಗ್ಗೂಡಿದ) ಸುಷುಪ್ತಿಯ (ಗಾಢನಿದ್ದೆಯ) ಬಿಗುಹಿನಲಿ(ಹಿಡಿತದಲ್ಲಿ) ಪರಮಾತ್ಮನು+ ಎಸೆದನು(ಶೋಭಿಸಿದನು) ಭ್ರಾಂತಿಯೋಗದಲಿ (ನಿದ್ದೆ ಎಂಬುದು ಕರೆದಾಗ ಬರುವ ಯೋಗ).
ಅರ್ಥ: ಅರ್ಜುನನು ಹೀಗೆ ದ್ವಾರಕೆಯನ್ನು ಹೊಗಳುತ್ತಾ, ಅಸುರರಿಪುವಾದ ಕೃಷ್ಣನ ನಗರಕ್ಕೆ ಬಂದು ಅರಮನೆಯನ್ನು ಹೊಗಲು, ಅಲ್ಲಿ ಕೃಷ್ಣನು ಮಂಚದಮೇಲೆ ನಿದ್ರಾದೇವಿಯೊಡನೆ ವಿನೋದದ ಕೇಳಿಯಲ್ಲಿ ಬಹಳ ಆನಂದದಲ್ಲಿ ಮುಳುಗಿದ್ದನು. ಅರೆ-ತೆರೆದ ಕಣ್ಣುಗಳ ಒಗ್ಗೂಡಿದ ಗಾಢನಿದ್ದೆಯ ಹಿಡಿತದಲ್ಲಿ ಪರಮಾತ್ಮ ಕೃಷ್ಣನು ಭ್ರಾಂತಿಯೋಗದ ಭಾವದಲ್ಲಿ ಶೋಭಿಸಿದನು.
ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ |
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ || ೨೪ ||
ಪದವಿಭಾಗ-ಅರ್ಥ: ಮುಕುಳ ಕರಪುಟನಾಗಿ(ಮುಗಿದ ಕೈಯವನಾಗಿ) ಭಯಭರ ಭಕುತಿಯಲಿ, ಕಲಿಪಾರ್ಥನು+ ಅಬುಜಾಂಬಕನನು (ಅಬುಜ- ಕಮಲ, ಅಂಬಕ-ಕಣ್ಣು)+ ಎಬ್ಬಿಸಲು+ ಅಮ್ಮದೆ (ಅಮ್ಮು- ಸಾಧ್ಯ) ಸಾಧ್ಯವಾಗದೆ+ ಒಯ್ಯನೆ (ಕೂಡಲೆ), ಚರಣ ಸೀಮೆಯಲಿ(ಅವನ ಪಾದದ ಕಡೆಯ ಸ್ಥಳದಲ್ಲಿ) ಅಕುಟಿಲನು(ಮೋಸಮಾಡದವನು, ಸಜ್ಜನನು) ಸಾರಿದನು (ಹೋದನು). ಬಳಿಕ+ ಈ, ವಿಕಳ (ವಿಕಲ- ಭ್ರಷ್ಟ) ದುರ್ಯೋಧನು ನಿಗಮಪ್ರಕರ ಮೌಳಿಯ (ವೇದ ಸಾಹಿತ್ಯದ ತಲೆಯ- ಶ್ರೇಷ್ಠನ) ಮೌಳಿಯತ್ತಲು(ತಲೆಯಕಡೆ) ಸಾರ್ದು(ಹೋಗಿ) ಮಂಡಿಸಿದ (ಕುಳಿತನು).
ಅರ್ಥ: ಕೃಷ್ಣನು ನಿದ್ದೆಯಲ್ಲಿರುವುದನ್ನು ಕಂಡು, ಕೈ ಮುಗಿದುಕೊಂಡು ಭಯ ತುಂಬಿದ ಭಕ್ತಿಯಿಂದ, ಕಮಲನಯನನಾದ ಕೃಷ್ಣನನ್ನು ಎಬ್ಬಿಸಲು ಸಾಧ್ಯವಾಗದೆ ಮೆಲ್ಲನೆ ಅವನ ಪಾದದ ಕಡೆಯ ಸ್ಥಳದಲ್ಲಿ ಸಜ್ಜನನಾದ ಕಲಿಪಾರ್ಥನು/ ಅರ್ಜುನನು ಹೋಗಿ ಕುಳಿತನು. ಬಳಿಕ ಈ ಕೆಟ್ಟ ಬುದ್ಧಿಯ ದುರ್ಯೋಧನನು ವೇದಪುರುಷನ ತಲೆಯಕಡೆ ಹೋಗಿ ಕುಳಿತನು.
ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ |
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ || ೨೫ ||
ಪದವಿಭಾಗ-ಅರ್ಥ: ಇರಲು ನಿಮಿಷದೊಳು+ ಆಸುರರಿಪು ಮೈಮುರಿದನು+ ಉಪ್ಪವಡಿಸಿದನು (ಪವಡಿಸು - ಮಲಗು; ಉಪ್ಪವಡಿಸು-ಏಳುು)+ ಇದಿರಲಿ ಸುರಪತಿಯ ಸೂನುವನು(ಇಂದ್ರನ ಮಗ- ಅರ್ಜುನ) ಕಂಡನು ನಗೆಯ ಮೊನೆ ಮಿನುಗೆ, ತಿರುಗಿ ನೋಡುತ ತಲೆಯ ದೆಸೆಯಲಿ ಕುರುಕುಲೇಶನನ (ಕೌರವನ)+ ಅತಿ ವಿಕಾರತೆಯ (ಗಂಟಿಕ್ಕಿದ ಮುಖ?)+ ಇರವ ಕಂಡನು+ ಇದೇನು+ ಇದೇನೆಂದು+ ಅಸುರರಿಪು(ಕೃಷ್ಣ) ನುಡಿದ.
ಅರ್ಥ: ಹೀಗೆ ಅರ್ಜುನ ಕೌರವರು ಕುಳಿತಿರಲು, ನಿಮಿಷದಲ್ಲಿ ಆಸುರರಿಪು ಕೃಷ್ಣನು ಮೈಮುರಿದು ಎಚ್ಚರಾದನು. ಕೂಡಲೆ ಎದ್ದುಕುಳಿತನು. ಎದುರಿನಲ್ಲಿ ಅರ್ಜುನನನ್ನು ಕಂಡನು. ಅವನ ಮುಖದಲ್ಲಿ ನಗೆಯ ಕುಡಿ ಮಿನುಗಿತು. ಕೃಷ್ಣನು ತಿರುಗಿ ನೋಡುತ್ತಾ, ತಲೆಯ ದೆಸೆಯಲ್ಲಿ ಕುರುಕುಲೇಶನಾದ ಕೌರವನು ಅತಿ ಅಸಮಾಧಾನದ ಮುಖದಲ್ಲಿ ಇರುವುದನ್ನು ಕಂಡನು. ಕೃಷ್ಣನು ಇಬ್ಬರೂ ಇರುವುದನ್ನು ಕಂಡು,'ಇದೇನು ಇದೇನು ಆಶ್ಚರ್ಯ!' ಎಂದು ನುಡಿದನು.
ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು |
ಹೇಳಿರೈ ಬರವಘಟಿತವಲಾ
ಮೇಳವೇ ಕಡುಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ || ೨೬ ||
ಪದವಿಭಾಗ-ಅರ್ಥ: ವೀಳಯವ ತಾ ಕೊಂಡು(ಹಾಕಿಕೊಂಡು), ಕುರು ಭೂಪಾಲ ಪಾರ್ಥರಿಗೆ+ ಇತ್ತು(ಕೊಟ್ಟು) ಲಕ್ಷ್ಮೀಲೋಲ(ಕೃಷ್ಣನು) ನುಡಿದನು, ಉಭಯ (ಇಬ್ಬರು) ರಾಯರಿಗೆ+ ಇತ್ತ ಬರವೇನು(ಬರವು- ಬರುವಿಕೆ ಏನು ಕಾರಣ) ಹೇಳಿರೈ ಬರವು+ ಅಘಟಿತವಲಾ (ಆಗುವಂತದ್ದಲ್ಲ) ಮೇಳವೇ (ಜೊತೆಗೂಡುವುದು) ಕಡುಮಾನ್ಯರು (ಬಹಳ ಗೌರವಾನ್ವಿತರು)+ ಎಮ್ಮ+ ಈ+ ಆಲಯಕೆ (ಅರಮನೆಗೆ) ಬರಲು+ ಏನು+ ಎನಲು ಕುರು ರಾಯನು+ ಇಂತೆಂದ.
ಅರ್ಥ: ಕೃಷ್ಣನು ಎದ್ದವನು ವೀಳಯವನ್ನು ತಾನು ಹಾಕಿಕೊಂಡು, ಕುರು ಭೂಪಾಲ ಪಾರ್ಥರಿಗೆ ಕೊಟ್ಟು, ಹೇಳಿದನು, "ಉಭಯ ರಾಯರು ಇತ್ತ- ನಮ್ಮಕಡೆ ಬಂದ ಕಾರಣ ಏನು ಹೇಳಿರಯ್ಯಾ. ಒಟ್ಟಿಗೆ ನಿಮ್ಮಿಬ್ಬರ ಬರುವಿಕೆಯು ಅಘಟಿತವಲಾ; ಬಹಳ ಗೌರವಾನ್ವಿತರಾದ ನೀವು ಜೊತೆಗೂಡುವುದು ಅಸಂಭವ. ನಮ್ಮ ಈ ಅರಮನೆಗೆ ಬರಲು ಏನು ಕಾರಣ" ಎನ್ನಲು, ಕುರುರಾಯನು ಹೀಗೆ ಹೇಳಿದನು.
ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ |
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗಬೇಕೆಂದ || ೨೭ ||
ಪದವಿಭಾಗ-ಅರ್ಥ: ಯಾದವರು ಕೌರವರೊಳು+ ಉಂಟೇ ಭೇದವು+ ಆವು (ನಾವು)+ ಅಯಿತಂದರೆ (ಐತಂದರೆ)+ ಎಮ್ಮೊಳಗೆ+ ಆದ ಲಾಘವವು (ಸಣ್ಣತನ ತೀವ್ರತೆ, ತ್ವರಿತತೆ, ಶೀಘ್ರತೆ, ಹೀನಾಯವಾದುದು)+ ಏನು ನಿಮ್ಮವೊಲು+ ಆರು ಸಖರು+ ಎಮಗೆ; ಸೋದರರ ಮನ ಕದಡಿದವು ದಾಯಾದ ವಿಷಯದಲಿ, + ಇನ್ನು ಧರಣಿಗೆ (ಭೂಮಿಗೆ, ರಾಜ್ಯಕ್ಕೆ) ಕಾದುವೆವು(ಹೋರಾಡುವೆವು); ನಮ್ಮಿಬ್ಬರಿಗೆ ಬಲವಾಗಬೇಕು+ ಎಂದ
ಅರ್ಥ: ಕೌರವನು ಕೃಷ್ಣನನ್ನು ಕುರಿತು, 'ಯಾದವರು ಮತ್ತು ಕೌರವರಲ್ಲಿ ಭೇದವು ಉಂಟೇ*? ನಾವು ಇಲ್ಲಿಗೆ ಬಂದರೆ ನಮಗೆ ಆದ ಲಾಘವವು- ಸಣ್ಣತನವು ಏನು? ನಿಮ್ಮಂತೆ ಯಾರು ಸಖರು ನಮಗೆ? ದಾಯಾದಿ ಹಕ್ಕಿನ ವಿಷಯದಲ್ಲಿ ಕೌರವ - ಪಾಂಡವ ಸೋದರರ ಮನ ಕದಡಿದವು- ಕೆಟ್ಟಿತು. ಇನ್ನು ನಾವು ರಾಜ್ಯಕ್ಕಾಗಿ ಕಾದುವೆವು; ನಮ್ಮಿಬ್ಬರಿಗೆ ಕೃಷ್ಣಾ ನೀನು ಬೆಂಬಲವಾಗಬೇಕು' ಎಂದ. (*ಇವರ ಪೂರ್ವಜರು ಯಯಾತಿಯ ಮಕ್ಕಳು, ಯದು ಮತ್ತು ಪುರು. ಪುರು ವಂಶದವರಿಗೆ ರಾಜ್ಯವನ್ನು ಕೊಟ್ಟಿದ್ದರಿಂದ ಅವರು ಚಂದ್ರವಂಶದವರಾದರು, ಯದುವಿನ ಮಕ್ಕಳು ಯದುವಂಶದವರಾದರು. ಕೃಷ್ಣ ನೆಂಟನೂ ಹೌದು- ಕೃಷ್ಣನ ಮಗ ಸಾಂಬನ ಪತ್ನಿ 'ಲಕ್ಷಣಾ' ದುರ್ಯೋಧನನ ಮಗಳು)
ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡ ವುರಿಯ ಹಾಯಿದಳು |
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮವೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ || ೨೮ ||
ಪದವಿಭಾಗ-ಅರ್ಥ: ಕೌರವೇಶ್ವರ ಕೇಳು ಧರಣೀನಾರಿಯು+ ಅನಿಬರಿಗೆ (ಎಲ್ಲರಿಗೆ)+ ಒಕ್ಕತನವಿದ್ದು(ಜೊತೆಗತಿಯಾಾಗಿದ್ದು)+ ಆರ(ಯಾರ) ಮೆಚ್ಚಿದಳು+ ಆರ (ಯಾರ) ಸಂಗಡ ವುರಿಯ(ಉರಿ ಬೆಂಕಿಯ) ಹಾಯಿದಳು(ಧರಣಿ- ಪತಿ ಸತ್ತನೆಂದು ನುಗ್ಗಿದಳು); ಭೂರಿ (ಅತಿಯಾದ) ಮಮಕಾರದಲಿ (ಆಸೆಯಿಂದ) ನೃಪರು (ರಾಜರು) ವಿಚಾರಿಸದೆ ಧರೆಯು ಭೂಮಿಯು+ ಎಮ್ಮವೆಂದೇ (ನಮ್ಮದು ಎಂದೇ ತಿಳಿದು) ನಾರಕದ (ನರಕದ) ಸಾಮ್ರಾಜ್ಯಕೆ+ ಐದುವರು (ಹೋಗುವರು)+ ಎಂದು ಹರಿ ನುಡಿದ.
ಅರ್ಥ: ಕೃಷ್ಣನು ನಯವಾಗಿ, 'ಕೌರವೇಶ್ವರನೇ ಕೇಳು, ಧರಣೀ ಎಂಬ ನಾರಿಯು ಎಲ್ಲ ರಾಜರಿಗೆ- ಸತಿ- ಜೊತೆಗಾತಿಯಾಗಿದ್ದು, ಯಾರನ್ನು ಮೆಚ್ಚಿದಳು? ಯಾರ ಸಂಗಡ ಪತಿ ಸತ್ತನೆಂದು ಸಹಗಮನದಲ್ಲಿ ಬೆಂಕಿಯ ಹಾಯ್ದಳು? ಅತಿಯಾದ ಮಮಕಾರದಲ್ಲಿ ಆಸೆಪಟ್ಟು ರಾಜರು ವಿಚಾರಮಾಡದೆ ಭೂಮಿಯು ತಮ್ಮದೇ ಎಂದು ತಿಳಿದು ಹೋರಾಡಿ ಸತ್ತು ನರಕದ ಸಾಮ್ರಾಜ್ಯಕ್ಕೆ ಹೋಗುವರು' ಎಂದು ನುಡಿದ.
ನಾಡಿಗೋಸುಗ ಸೋದರರು ಹೊ
ಯ್ದಾಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ ||
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ || ೨೯ ||
ಪದವಿಭಾಗ-ಅರ್ಥ: ನಾಡಿಗೋಸುಗ (ರಾಜ್ಯಕ್ಕಾಗಿ) ಸೋದರರು ಹೊಯ್ದಾಡಿ (ಯುದ್ಧಮಾಡಿ) ಹರಿಹಂಚಾದರು+ ಎಂಬುದನು+ ಆಡದಿಹುದೇ(ಹೇಳದೆ ಇರುವುದೇ) ಲೋಕ ಕಮಲಜನು (ಬ್ರಹ್ಮನು) + ಉಸಿರಿಹ+ ಅನ್ನೆಬರ ಬೇಡ+ ಅಕಟ; ನಿಮ್ಮೊಳಗೆ ನೀವ್ ಕೈಗೂಡಿ ಬದುಕುವುದು+ ಒಳ್ಳಿತು+ ಆವ್ ನೆರೆ (ಹೆಚ್ಚು,ಚೆನ್ನಾಗಿ)ನೋಡಿ ಸಂತಸಬಡುವೆವು+ ಎಂದನು ರುಕ್ಮಿಣೀರಮಣ- ಕೃಷ್ಣ.
ಅರ್ಥ: ಕೃಷ್ಣನು ಕೌರವನಿಗೆ, 'ರಾಜ್ಯಕ್ಕಾಗಿ ಸೋದರರು ಹೊಡೆದಾಡಿ ಹರಿಹಂಚಾದರು' ಎಂದು ಲೋಕವು ಆಡದಿರುವುದೇ? ಬ್ರಹ್ಮನೂ ಹೇಳುವನಲ್ಲವೇ? ಅಲ್ಲಿಯವರೆಗೆ ಬೇಡ. ಅಕಟ!- ಅಯ್ಯೋ! ನಿಮ್ಮೊಳಗೆ ನೀವು ಕೈಗೂಡಿಕೊಂಡು - ಪರಸ್ಪರ ಸಹಕರಿಸಿಕೊಂಡು ಬದುಕುವುದು ಒಳ್ಳೆಯದು. ನಾವು ನೀವಿಬ್ಬರೂ ಚೆನ್ನಾಗಿರುವುದನ್ನು ನೋಡಿ ಸಂತಸಪಡುವೆವು' ಎಂದನು.
ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು |
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ || ೩೦ ||
ಪದವಿಭಾಗ-ಅರ್ಥ: ತಗರ+ ಎರಡ ಖತಿಗೊಳಿಸಿ (ಟಗರು ಎರಡನ್ನು ರೇಗಿಸಿ), ಬಲು+ ಕಾಳಗವ ನೋಡುವರಂತೆ ನಿಮ್ಮನು ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು(ನೀಚರು) ನಗುತ ಹೆರೆ (ಗಟ್ಟಿಯಾಗು) ಹಿಂಗುವರು( ಹಿಂದಕ್ಕೆ ಹೋಗು) ಪಿಸುಣರು ಬಗುಳಿದ (ಹೇಳಿದ)+ ಅವದಿರು (ಹೇಳಿದ ಅವರು), ಬಳಿಕ ಕಡೆಯಲಿ ಹೊಗುವಿರೈ ನೀವಿಬ್ಬರು+ ಅಪಕೀರಿತಿಯ ಹಾದರಕೆ(ಕೆಟ್ಟಕಾರ್ಯಕ್ಕೆ).
ಅರ್ಥ: ಕೃಷ್ಣನು ಮುಂದುವರಿದು, 'ಎರಡು ಟಗರುಗಳನ್ನು ರೇಗಿಸಿ, ಬಹಳ ತೀವ್ರ ಕಾಳಗವನ್ನು ನೋಡುವವರಂತೆ ನಿಮ್ಮನ್ನು ತೆಗೆತೆಗೆದು ಕಲಿಮಾಡಿ- ಪ್ರೋತ್ಸಾಹಿಸಿ ನೀಚರು ಹೊರಾಟಕ್ಕೆ ಬಿಡುವರು. ಹೋರಾಡಲು ಹೇಳಿದ ಆ ಪಿಸುಣರು, ಅವರು ನಗುತ್ತಾ ಹಿಂದೆ ಸರಿಯುವರು. ಬಳಿಕ ಕಡೆಯಲ್ಲಿ ನೀವಿಬ್ಬರೂ ಯುದ್ಧದ ಕೆಟ್ಟಕಾರ್ಯಕ್ಕೆ ಅಪಕೀರ್ತಿಯನ್ನು ಹೊಗುವಿರಯ್ಯಾ' ಎಂದನು.
ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು |
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು || ೩೧ ||
ಪದವಿಭಾಗ-ಅರ್ಥ: ಅವಧರಿಸು (ಮನಗೊಟ್ಟು ಕೇಳು) ಮುರವೈರಿ (ಕೃಷ್ಣ) ಧರ್ಮಶ್ರವಣಕೋಸುಗ ಬಾರೆವು+ ಅವ್ ಪಾರ್ಥಿವರ (ರಾಜ, ಕ್ಷತ್ರಿಯ ಪಾರ್ಥಿವ- ಭೂಮಿಯವ) ಪಂಥದ ಕದನ ವಿದ್ಯಾಕಾಮವು+ ಎಮಗಾಯ್ತು, ನಿವಗೆ ನಾವು+ ಇತ್ತಂಡ (ಎರಡೂ ಕಡೆ) ಸರಿ ಪಾಂಡವರಿಗೆಯು ಮನದ+ ಒಲವಿನಲಿ (ಇಷ್ಟಪಟ್ಟು) ಕೌರವರಿಗೆಯು ಬಲವಾಗಬೇಕು+ ಎಂದನು ಸುಯೋಧನನು.
ಅರ್ಥ: ಸುಯೋಧನನು ಕೃಷ್ಣನಿಗೆ, 'ಕೃಷ್ಣಾ ಮನಗೊಟ್ಟು ಕೇಳು, ನಾವು ರಾಜಧರ್ಮದ ಕ್ಷತ್ರಿಯರು, ಇಲ್ಲಿಗೆ ನಿನ್ನಿಂದ ಧರ್ಮವಿಚಾರವನ್ನು ಕೇಳಲಿಕ್ಕಾಗಿ ಬಂದಿಲ್ಲ. ಪಾರ್ಥಿವರಾಗಿ, ಕ್ಷತ್ರಿಯರಾಗಿ ರಾಜಧರ್ಮದಂತೆ ಪಂಥದಲ್ಲಿ ಯುದ್ಧವಿದ್ಯಾಕಾಮವು- ಯುದ್ಧಮಾಡುವ ಬಯಕೆಯು ನಮಗೆ ಆಗಿದೆ. ನಿಮಗೆ ನಾವು ಬಂಧುಗಳು ನೀನು ಎರಡೂ ಕಡೆ ಸರಿಸಮ ಬಂಧು. ಸರಿ, ಪಾಂಡವರಿಗೆ ಹಾಗೂ ಕೌರವರಿಗೆ ಮನದ ಪ್ರೀತಿಯಿಂದ ಬಲವಾಗಬೇಕು' ಎಂದನು. [ಪಾಂಡವರಿಗೆ ಮನದೊಲವಿನಲಿ ಹಾಗೂ ಕೌರವರಿಗೆ ಬಲ (ಸೇನೆ) ಸೇರಬೇಕು' ಎಂದನು.]
ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು |
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ್ಯವಿಲ್ಲೆಂದ || ೩೨ ||
ಪದವಿಭಾಗ-ಅರ್ಥ: ಎನಲು ತಂಬುಲ(ಬಾಯಲ್ಲಿದ್ದ ತಾಂಬೂಲ) ಸೂಸೆ ನಗುತ+ ಅರ್ಜುನನ ನೋಡಿದನು+ ಅಸುರರಿಪು(ಕೃಷ್ಣನು) ನಿನ್ನ+ ಅನುವ(ಆಸ್ಪದ, ಅನುಕೂಲ) ಹೇಳೈ ಪಾರ್ಥ+ ಎನೆ ತಲೆವಾಗಿ ಕೈಮುಗಿದು ಎನಗೆ ಮತ ಬೇರೆ+ ಏನು ದುರಿಯೋಧನನ ಮತವೇ ನನ್ನ ಮತ; ನಿಮ್ಮ+ ಅನುನಯವೆ ನಯವು (ಶಾಸ್ತ್ರ, ರಾಜನೀತಿ, ನ್ಯಾಯ, ನೀತಿ, ರಾಜನೀತಿ ;)+ ಎಮ್ಮೊಳು+ ಈ ಸ್ವಾತಂತ್ರ್ಯವು+ ಇಲ್ಲೆಂದ.
ಅರ್ಥ: ಕೌರವನು ಕೃಷ್ಣನಿಗೆ ಯುದ್ಧದಲ್ಲಿ ನಿಮ್ಮ ಬೆಂಬಲ ಬೇಕು ಎನ್ನಲು, ಕೃಷ್ಣನು, ಬಾಯಲ್ಲಿದ್ದ ತಾಂಬೂಲವು ಹೊರಗೆ ಸೂಸುವಂತೆ ನಗುತ್ತಾ, ಅರ್ಜುನನನ್ನು ನೋಡಿದನು. ಕೃಷ್ಣನು ಅರ್ಜುನನಿಗೆ ನಿನ್ನ ಅನಿಸಿಕೆ ಹೇಳಯ್ಯಾ ಪಾರ್ಥ, ಎನ್ನಲು, ಅರ್ಜುನನು ತಲೆಬಾಗಿ ಕೈಮುಗಿದು, ನನಗೆ ಬೇರೆ ಅಭಿಪ್ರಾಯ ಏನಿದೆ. ದುರ್ಯೋಧನನ ಮತವೇ ನನ್ನ ಮತ ಎಂದನು; ನಿಮ್ಮ ಅನುನಯವೆ (ನೀತಿಯೇ) ನಮಗೆ ನಯವು. ನಮ್ಮಲ್ಲಿ ದುರ್ಯೋಧನನ ಈ ಸ್ವಾತಂತ್ರ್ಯವು ಇಲ್ಲ' ಎಂದ.

ಕೃಷ್ಣಾ, ನಮಗೆ ನೀನೇ ಸಾಕು, ಎಂದ ಅರ್ಜುನ[ಸಂಪಾದಿಸಿ]

ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ |
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ || ೩೩ ||
ಪದವಿಭಾಗ-ಅರ್ಥ: ಆದಡೆ (ಹಾಗೆ ಆದಡೆ- ಹಾಗಾದರೆ- ಹಾಗಿದ್ದರೆ)+ ಆವು(ನಾವು)+ ಇಹೆವು(ಇರುವೆವೆವು)+ ಒಂದು ಕಡೆಯಲಿ, ಕಾದುವವರು+ ಆವಲ್ಲ (ನಾವಲ್ಲ; ನಾವು ಯುದ್ಧಮಾಡುವವರು ಅಲ್ಲ), ಬಲನೊಳು(ಬಲ- ಸೇನೆ; ಸೇನೆಯಲ್ಲಿ) ಯಾದವರು ಕೃತವರ್ಮ ನಾರಾಯಣ ಮಹಾಸೇನೆ(ಯಾದವ ಸೇನೆ) ಕಾದುವವರು(ಯುದ್ಧಮಾಡುವರು)+ ಇವರು+ ಒಂದು ದೆಸೆ(ದಿಕ್ಕು- ಕಡೆ)+ ಎರಡಾದುದು(ಯಾದವ ಪಂಗಡ ಎರಡು ವಿಭಾಗವಾಯಿತು)+ ಇವರೊಳು ಮೆಚ್ಚಿದುದ ನೀನು+ ಅದರಿಸಿ ವರಿಸು (ಸ್ವೀಕರಿಸು) + ಎಂದು ಪಾರ್ಥಂಗೆ+ ಅಸುರರಿಪು(ಕೃಷ್ಣ) ನುಡಿದ.
ಅರ್ಥ: ಅರ್ಜುನನು ನೀನು ಹೇಳಿದಂತೆಯೇ ಅನುಸರಿಸುವುದು- ನಮ್ಮ ರಾಜನೀತಿ; ನೀವು- ಯಾದವರು ಇಬ್ಬರಿಗೂ ಸಹಾಯಮಾಡಬೇಕೆಂದು ಕೌರವ ಹೇಳಿದ ಮಾತಿಗೆ ನನ್ನ ಒಪ್ಪಿಗೆ ಇದೆ ಎನ್ನಲು, ಕೃಷ್ಣನು,'ಹಾಗಿದ್ದರೆ ಕೇಳು, ನಾವು ಒಂದು ಕಡೆಯಲ್ಲಿ ಇರುವೆವು; ನಾವು ಯುದ್ಧಮಾಡುವವರಲ್ಲ. ನಮ್ಮ ಸೇನೆಯಲ್ಲಿ ಯಾದವರು- ಕೃತವರ್ಮ ನಾರಾಯಣ ಮಹಾಸೇನೆ ಯುದ್ಧಮಾಡುವವರು. ಇವರು ಒಂದು ಕಡೆ. ಹೀಗೆ ಯಾದವ ಪಂಗಡ ಎರಡು ವಿಭಾಗವಾಯಿತು. ಇವರಲ್ಲಿ ಮೆಚ್ಚಿದುದನ್ನು - ಇಷ್ಟವಾದುದನ್ನು ನೀನು ಅದರಿಸಿ ಸ್ವೀಕರಿಸು' ಎಂದು ಪಾರ್ಥನಿಗೆ ಅಸುರರಿಪು ಕೃಷ್ಣನು ಹೇಳಿದನು. (ಟಿಪ್ಪಣಿ:ಕೃಷ್ನನು ತಾನು ಯುದ್ಧಮಾಡುವುದಕ್ಕಿಂತ ಅರ್ಜುನನೊಡನೆ ಸಾರಥಿಯಾಗಿ ಇದ್ದು ಕೌರವರ ಕಡೆ ಇರುವ ಮಹಾವೀರರನ್ನು ಗೆಲ್ಲಲು ಸಹಾಯ ಮಾಡಬೇಕೆಂದು ಮೊದಲೇ ನಿರ್ಧರಿಸಿದಂತೆ ತೋರುವುದು.)
ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯ ಸಾಗರವ |
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ || ೩೪ ||
ಪದವಿಭಾಗ-ಅರ್ಥ: ಮುರಮಥನ(ಕೃಷ್ಣ- ಮುರನನ್ನು ಕೊಂದವ) ಚಿತ್ತೈಸು(ಕೇಳು) ಕೌರವರ+ ಅರಸನು+ ಅತಿ ಸಿರಿವಂತನು+ ಇದ (ಯಾದವ ಸೇನೆಯನ್ನು) ಸಂತರಿಸಲು+ ಅಪನು(ಸಾಕಲು ಸಾಧ್ಯನು) ಬಹಳ ಯಾದವ ಸೈನ್ಯ ಸಾಗರವ, ಧರೆಯ ಸಂಪದವಿಲ್ಲದ+ ಅಡವಿಯ ತಿರುಕರು+ ಆವು (ನಾವು)+ ಅನಿಬರನು(ಅವರೆಲ್ಲರನ್ನೂ) ಸಲೆ(ಚೆನ್ನಾಗಿ) ಸಂತರಿಸಲು+ ಆಪೆವೆ(ಸಂತುಷ್ಟಗೊಳಿಸಲು ಆಗುವೆವೆ, ನಮಗೆ ಸಾಧ್ಯವೇ?) ಕೃಷ್ಣ ನೀನೇ ಸಾಕು ನಮಗೆ+ ಎಂದ.
ಅರ್ಥ: ಅರ್ಜುನನು ಕೃಷ್ಣನಿಗೆ,'ಮುರಮಥನ ಕೃಷ್ಣಾ, ಕೇಳು ಕೌರವ ಅರಸನು ಅತಿಸಿರಿವಂತನು; ಬಹಳ ದೊಡ್ಡ ಸಾಗರವಾದ ಯಾದವಸೇನೆಯನ್ನು ಸಾಕಲು ಸಮರ್ಥನು. ರಾಜ್ಯದ ಸಂಪತ್ತಿಲ್ಲದ ಅಡವಿಯ ತಿರುಕರು ನಾವು, ಅವರೆಲ್ಲರನ್ನೂ ಚೆನ್ನಾಗಿ ಸಂತುಷ್ಟಗೊಳಿಸಲು ನಮಗೆ ಆಗುವುದೆ? ಕೃಷ್ಣಾ, ನಮಗೆ ನೀನೇ ಸಾಕು' ಎಂದ.
ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು |
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು || ೩೫ ||
ಪದವಿಭಾಗ-ಅರ್ಥ: ನಾವು ಬಡವರು ಬಡವರಿಗೆ ದಿಟ(ನಿಜ) ನೀವೆ ಬೆಂಬಲವೆಂಬ ಬಿರುದನು ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು; ನೀವು ಸುಖದಲಿ ಪಾಂಡವರನು+ ಉಜ್ಜೀವಿಸುವುದು (ಬದುಕುವಂತೆ ಮಾಡು, ಚೈತನ್ಯವನ್ನು ತುಂಬು)+ ಎಮಗೆ+ ಉಳಿದ ಯದು ಭೂಪ(ರಾಜ)+ ಆವಳಿಯ(ಸಮೂಹವನ್ನು) ಕೃಪೆ ಮಾಡಬೇಕು (ಕೃಪೆಮಾಡು- ಕೊಡು)+ ಎಂದನು ಸುಯೋಧನನು.
ಅರ್ಥ: ಅರ್ಜುನನು ಕೃಷ್ಣನಿಗೆ ಕೈಮುಗಿದು,'ನಾವು ಬಡವರು, ಬಡವರಿಗೆ ದಿಟವಾಗಿ ನೀವೇ ಬೆಂಬಲವು,ಎಂಬ ಬಿರುದನ್ನು ದೇವ ನಾವು ಕೇಳಿ ಬಲ್ಲೆವು, ಎಂದನು. ಆಗ ಸುಯೋಧನನು ಕೃಷ್ಣನಿಗೆ,'ನೀವು ಸುಖದಲ್ಲಿ ಪಾಂಡವರನ್ನು ಉದ್ಧಾರಮಾಡುವುದು; ನಮಗೆ ಉಳಿದ ಯದುರಾಜರ ಸೇನಾಸಮೂಹವನ್ನು ಕೃಪೆ ಮಾಡಬೇಕು' ಎಂದನು.
ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ |
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ || ೩೬ ||
ಪದವಿಭಾಗ-ಅರ್ಥ: ಮರೆಯ ಮಾತುಗಳು+ ಏಕೆ ಪಾಂಡವರ+ ಎರಕ(ಪ್ರೀತಿ, ಅನುರಾಗ) ನಿಮ್ಮಲಿ ಹಿರಿದು; ಪಾರ್ಥಗೆ ಮರುಗುವಿರಿ (ಚಿಂತಿಸುವಿರಿ) ಹಿರಿದಾಗಿ (ಬಹಳ) ಮನ ಮೆಚ್ಚುಂಟು ನಿಮ್ಮೊಳಗೆ, ಉರುವ(ಶ್ರೇಷ್ಠ) ಕಾರ್ಯಕೆ (ಯುದ್ಧ) ಕಡೆಯಲಿ+ ಆವೇ(ಆವೇ- ನಾವೇ) ಹೊರಗು, ಸಾಕು+ ಅಂತಿರಲಿ ನೀ ಹೊಕ್ಕು+ ಇರಿಯಲಾಗದು(ಸೇನೆಯಲ್ಲಿ ಸೇರಿ ಯುದ್ಧ ಮಾಡಬಾರದು) ಕೃಷ್ಣ+ ಎಂದನು ಕೌರವರರಾಯ (ದುರ್ಯೋಧನ).
ಅರ್ಥ: ದುರ್ಯೋಧನನು ಕೃಷ್ಣನಿಗೆ, ಇರುವ ವಿಚಾರದಲ್ಲಿ ಗುಟ್ಟಿನ ಮಾತುಗಳು ಏಕೆ? ಪಾಂಡವರಲ್ಲಿ ಪ್ರೀತಿ ನಿಮ್ಮಲ್ಲಿ ಬಹಳ ಇದೆ; ಪಾರ್ಥನಿಗೆ ತೊಂದರೆಯಾದರೆ ಬಹಳ ಮರುಗುವಿರಿ. ಅವನ ಬಗೆಗೆ ನಿಮ್ಮ ಮನಸ್ಸಿನಲ್ಲಿ ಮೆಚ್ಚುಗೆ ಇದೆ. ಮುಂದಿನ ದೊಡ್ಡ ಕಾರ್ಯದಲ್ಲಿ ನಾವೇ ಹೊರಗು- ಬೇಡದವರು. ಸಾಕು ಅದು ಹಾಗಿರಲಿ. ನೀನು ಮುಂದಿನ ಯುದ್ಧದಲ್ಲಿ ಕಾದುವುದಿಲ್ಲ ಎಂದಿದ್ದೀಯೆ; ಕೃಷ್ಣಾ ಆ ಮಾತನ್ನು ಉಳಿಸಿಕೊಳ್ಳಬೇಕು ಯುದ್ಧದಲ್ಲಿ ಹೊಕ್ಕು ಇರಿಯಬಾರದು' ಎಂದನು.
ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕ ವತ್ಸ ನಗ ಹಯ ವೃಷಭ ಭುಜಗರನು |
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ || ೩೭ ||
ಪದವಿಭಾಗ-ಅರ್ಥ: ಮೊಲೆಯನು+ ಉಂಬಂದು (ಉಂಬ ಅಂದು ಅಂದು ಉಣ್ಣುವಾಗ)+ ಒಬ್ಬ ದನುಜೆಯ ಹಿಳಿದೆವು( ಹಿಸುಕಿ ರಸವನ್ನು ತೆಗೆ, ಹಿಂಡು, ಸಂಹರಿಸು).+ ಒದೆದೆವು ಶಕಟನನು. ತನು (ದೇಹ)+ ಕಳೆದೆ ಧೇನುಕ, ವತ್ಸ, ನಗ(ಬೆಟ್ಟ), ಹಯ(ಕುದುರೆ), ವೃಷಭ (ಹೋರಿ), ಭುಜಗರನು(ಹಾವು, ಸರ್ಪ), ಬಲುಗಜವ(ಕಂಸನ ಆನೆ) ಮಲ್ಲರನು(ಚಾಣೂರ), ಮಾವನನು (ಕಂಸನನ್ನು)+ ಎಳೆದು ಮಾಗಧ(ಜರಾಸಂಧ) ಬಲವ ಬರಿ ಕೈದಳಿಸಿದೆವು (ಕೈ+ ತಳಿಸು; ತಳಿಸು- ಕುಟ್ಟು- ಪುಡಿಮಾಡು), ದಾನವರ ಹಿಂಡಿದೆವು (ನಾಶ ಮಾಡಿದೆವು)+ ಆಹವ(ಯುದ್ಧ)+ ಅಗ್ರದಲಿ.
ಅರ್ಥ: ಕೃಷ್ಣನು, ದುರ್ಯೋದನನಿಗೆ, 'ಕೇಳು ಹಿಂದೆ ತಾನು ಮಗುವಾಗಿದ್ದು ಮೊಲೆಯನ್ನು ಉಣ್ಣುವಾಗ ಮೋಸಮಾಡಲು ಬಂದ ಒಬ್ಬ ದನುಜೆ- ಪೂತನಿಯನ್ನು ಹಿಂಡಿಕೊಂದೆವು; ಚಿಕ್ಕ ಬಾಲಕನಾಗಿದ್ಧಾಗ ಶಕಟಾಸುರನನ್ನು ಒದೆದು ಕೊಂದೆವು; ಧೇನುಕಾಸುರನ- ಜೀವ ತೆಗೆದೆ, ವತ್ಸನ, ನಗನ, ಹಯದ ರೂಪದ ರಾಕ್ಷಸನನ್ನು, ವೃಷಭ, ಭುಜಗರನ್ನು, ಕಂಸನ ಆನೆಯನ್ನು ಮತ್ತು ಚಾಣೂರ ಮಲ್ಲರನ್ನು, ಮಾವ ಕಂಸನನ್ನು ಎಳೆದು ಕೊಂದೆ; ಮಾಗಧ ಜರಾಸಂಧನ ಬಲವನ್ನು ಭೀಮನ ಮೂಲಕ ಬರಿ ಕೈಹೋರಾಟದಲ್ಲಿ ಪುಡಿಮಾಡಿದೆ; ಹೀಗೆ ಅನೇಕ ದಾನವರನ್ನು ಯುದ್ಧಮುಖೇನ ನಾಶ ಮಾಡಿದೆವು' ಎಂದನು.
ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ |
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ || ೩೮ ||
ಪದವಿಭಾಗ-ಅರ್ಥ: ಕಾಲಯವನನ, ದಂತವಕ್ತ್ರನ ಸೀಳಿದೆವು, ಮುರ, ನರಕ, ಕುಂಭನ,ಸಾಲುವನ, ಪೌಂಡ್ರಕನ, ಡಿಬಿಕನ, ಹಂಸ ಮೋಹರವ(ಸೇನೆ) ಇಟ್ಟೊರಸಿ(ಇಟ್ಟು + ಬಾಣನ ತೋಳನ್ನು ತರಿವ (ಕತ್ತರಿಸುವ) ಅಂದು (ಆ ದಿನ) ಆಯ್ತು ಧಾಳಾಧೂಳಿಯು+ ಆಹವವು (ದೊಡ್ಡ ಯುದ್ಧ)+ ಇಂದುಮೌಳಿಯೊಳು+ ಎಮಗೆ ಮುಳಿಸಿನಲಿ(ಕೋಪದಲ್ಲಿ)
ಅರ್ಥ: ಮತ್ತೆ ಆ ಕಾಲಯವನನನ್ನು, ದಂತವಕ್ತ್ರನನ್ನು ಸೀಳಿ ಕೊಂದೆವು. ಮುರನನ್ನು, ನರಕನನ್ನು, ಕುಂಭನನನ್ನು, ಸಾಲ್ವನನ್ನು, ಪೌಂಡ್ರಕನನ್ನು, ಡಿಬಿಕನನ್ನು, ಹಂಸನನ್ನು ಅವರ ಸೇನೆಯನ್ನು ಕಾಳಗದಲ್ಲಿ ಹೊಡೆದು ಕೊಂದು, ಬಾಣನ ತೋಳುಗಳನ್ನು ಕತ್ತರಿಸುವಾಗ ಇಂದುಮೌಳಿ ಶಿವನೊಡನೆ ನಮಗೆ ಕೋಪದಲ್ಲಿ ಆ ದಿನ ದೊಡ್ಡ ಯುದ್ಧವಾಯಿತು.
ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ |
ಮಿಸುಕಲಾರೆವು ಚಕ್ರಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳೆಂದ || ೩೯ ||
ಪದವಿಭಾಗ-ಅರ್ಥ: ಹಸುಳೆತನ ಮೊದಲಾಗಿ ಬಲು ರಕ್ಕಸರೊಡನೆ ತಲೆಯೊತ್ತಿ(ಹೋರಾಡಿ) ರಣದಾಯಸವ ಸೈರಿಸಿ ಹೊಯ್ದು(ಹೊಡೆದು) ಕೊಂದೆವು ಕೋಟಿ ದಾನವರ; ಮಿಸುಕಲಾರೆವು (ಚಲಿಸಲಾರೆನು) ಚಕ್ರ ಭಂಡಾರಿಸಿತು(ಬೊಕ್ಕಸ, ಭಂಡಾರ- ವಸ್ತುಗಳನ್ನಡುವ ಕೋಶ, ಕೋಶಕ್ಕೆ ಸೇರಿದೆ) ಮುನ್ನಿನ (ಮೊದಲಿನ) ಜವ್ವನದ (ಯೌವನದ)ಬಲ ಮಸುಳಿತು(ಮಂಕಾಗು)+ ಆವು (ನಾವು)+ ಉಂಡಾಡಿ(ಊಟಮಾಡಿ ಓಡಾಡುವ) ಭಟ್ಟರು ನೃಪತಿ ಕೇಳೆಂದ.
ಅರ್ಥ: ಕೃಷ್ಣನು ನೃಪತಿಯೇ ಕೇಳು, 'ಚಿಕ್ಕಂದಿನಿಂದ ಬಹಳ ರಕ್ಕಸರೊಡನೆ ಹೋರಾಡಿ ರಣದ ಆಯಾಸವನ್ನು ಸೈರಿಸಿ, ಕೋಟಿ ದಾನವರನ್ನು ಹೊಡೆದು ಕೊಂದೆವು. ಈಗ ಚಲಿಸಲಾರೆನು. ಚಕ್ರವು ಭಂಡಾರ- ಕೋಶಕ್ಕೆ ಸೇರಿದೆ. ಮೊದಲಿನ ಯೌವನದ ಬಲವು ಮಂಕಾಗಿದೆ; ನಾವು ಉಂಡಾಡಿ ಭಟ್ಟರು' ಎಂದ.
ಎನಲು ಕರ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ |
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸುನಗುತಲಿಂತೆಂದನು ಧನಂಜಯಗೆ || ೪೦ ||
ಪದವಿಭಾಗ-ಅರ್ಥ: ಎನಲು ಕರ(ಬಹಳ) ಲೇಸು+ ಎಂದು ದುರಿಯೋಧನನು ಕಳುಹಿಸಿಕೊಂಡು(ಬೀಳ್ಕೊಂಡು) ಬಲರಾಮನನು, ಕೃತವರ್ಮನನು, ಕಂಡನು ನಿಖಿಳ (ಎಲ್ಲಾ) ಯಾದವರ ವಿನುತಬಲ (ಉತ್ತಮ ಸೇನೆ) ಸಹಿತ+ ಒಲವಿನಲಿ (ಸಂತಸದಿಂದ) ಹಸ್ತಿನಪುರಿಗೆ ಹಾಯಿದನು (ವೇಗವಾಗಿ ಹೋದನು). ಬಳಿಕ+ ಈ ದನುಜರಿಪು(ಕೃಷ್ಣನು) ನಸುನಗುತಲಿ+ ಇಂತು+ ಎಂದನು(ಹೀಗೆ ಹೇಳಿದನು) ಧನಂಜಯಗೆ.
ಅರ್ಥ: ಕೃಷ್ಣನು ಹಾಗೆ ಎನ್ನಲು ದುರ್ಯೋಧನನು, 'ಬಹಳ ಒಳ್ಳೆಯದು' ಎಂದು ಅವನನ್ನು ಬೀಳ್ಕೊಂಡು, ಬಲರಾಮನನ್ನು, ಕೃತವರ್ಮನನ್ನೂ ಕಂಡನು. ಅವರಿಗೆ ವಿಷಯ ತಿಳಿಸಿ, ಎಲ್ಲಾ ಯಾದವರ ಉತ್ತಮ ಸೇನೆಯ ಬೆಂಬಲ ಸಹಿತ ಸಂತಸದಿಂದ ಹಸ್ತಿನಾಪುರಕ್ಕೆ ವೇಗವಾಗಿ ಹೋದನು. ಬಳಿಕ ಈ ಕೃಷ್ಣನು ನಸುನಗುತ್ತಾ ಧನಂಜಯನಿಗೆ ಹೀಗೆ ಹೇಳಿದನು.
ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗಟ್ಟದೆ ಮಾಣ್ಪರೇ ನಿಮ್ಮಣ್ಣ ತಮ್ಮದಿರು || ೪೧ ||
ಪದವಿಭಾಗ-ಅರ್ಥ: ಸುರಗಿಯನು (ಕತ್ತಿಯನ್ನು) ಬಿಸುಟು+ ಒರೆಯನು (ಕತ್ತಿಯನ್ನಿಡುವ ಚೀಲ. ಗೂಡು)+ ಅಂಗೀಕರಿಸಿದ+ ಅಂದದಲಿ (ರೀತಿಯಲ್ಲಿ)+ ಆಹವದ(ಯುಧ್ಧ ಮಾಡುವ) ಧುರಭರದ(ವೀರ) ಯಾದವ ಬಲವನು+ ಒಲ್ಲದೆ (ಪಡೆಯಲು ಒಪ್ಪದೆ) ಮಂದಮತಿಯಾಗಿ, ಮರುಳೆ ಕಾದದ(ಯುದ್ಧಮಾಡದ) ಕಟ್ಟದ (ಯುದ್ಧದ ಉಡುಪು ಧರಿಸದ)+ ಎಮ್ಮನು(ನಮ್ಮನ್ನು) ಬರಿದೆ ಬಯಸಿದೆ+ ಇದನು ಕೇಳ್ದೊಡೆ ಮರುಳುಗಟ್ಟದೆ ಮಾಣ್ಪರೇ(ಬಿಡುವರೇ) ನಿಮ್ಮ+ ಅಣ್ಣ ತಮ್ಮದಿರು.
ಅರ್ಥ: ಕೃಷ್ಣನು ಅರ್ಜುನನನ್ನು ಕುರಿತು,'ಯುದ್ಧಮಾಡಲು ಕತ್ತಿಯನ್ನು ಬಿಸುಟು ಒರೆಯನ್ನು ಅಂಗೀಕರಿಸಿದ ರೀತಿಯಲ್ಲಿ, ಯುಧ್ಧ ಮಾಡುವ ವೀರ ಯಾದವ ಸೇನೆಯನ್ನು ಪಡೆಯಲು ಒಪ್ಪದೆ, ಮಂದಮತಿಯಾಗಿ, ಮರುಳೆ ಯುದ್ಧಮಾಡದ, ದಟ್ಟಿ ಚಲ್ಲಣ ಕಟ್ಟದ ನಮ್ಮನ್ನು ಬರಿದೆ ಬಯಸಿದೆ. ಇದನ್ನು ಕೇಳಿದರೆ ನಿನಗೆ ಮರುಳು ಎನ್ನದೆ ಬಿಡುವರೇ ನಿಮ್ಮ ಅಣ್ಣ ತಮ್ಮಂದಿರು' ಎಂದನು.
ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ |
ಎನಗೆ ಶ್ರಮವುಂಟದು ನಿಲಲಿಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ || ೪೨ ||
ಪದವಿಭಾಗ-ಅರ್ಥ: ಎನಲು ಗಹಗಹಿಸಿದನು+ ಇದು+ ಆರಿಗೆ ಮನವ ಕದ್ದು+ ಆಡುವಿರಿ(ಮನಸ್ಸಿನಲ್ಲಿ ಇದ್ದುದನ್ನು ಮುಚ್ಚಿಟ್ಟುಕೊಂಡು ಹೇಳುವಿರಿ.) ನಿಜ(ತನ್ನ) ಶಿಷ್ಯನಲಿ, ನಾಟಕದ+ ಇಂದ್ರಜಾಲವೆ ನಿಮ್ಮ ಗರುಡಿಯಲಿ ಎನಗೆ ಶ್ರಮವುಂಟು(ಶ್ರಮದಿಂದ ಕಲಿತ ಪಾಠವುಂಟು)+ ಅದು ನಿಲಲಿ+ ಎನ್ನ+ ಅನುಜರು+ ಅಗ್ರಜರು (ಸೋದರರು, ತಮ್ಮಂದಿರು ಅಣ್ಣಂದಿರು)+ ಅರಿಯರೇ ನಿಮ್ಮ+ ಅನುಪಮಿತ ಮಹಿಮಾವಲಂಬವನು+ ಎಂದನು+ ಆ ಪಾರ್ಥ (ಅವಲಂಬ- (ಸಹಾಯಕ್ಕಾಗಿ ಪಡೆಯುವ ಆಸರೆ, ಆಶ್ರಯ)
ಅರ್ಥ: ಕೃಷ್ಣನು ಹಾಗೆ ಎನ್ನಲು, ಪಾರ್ಥನು ಗಹಗಹಿಸಿ ನಕ್ಕನು. "ಇದನ್ನು ಯಾರಿಗೆ ಮನಸ್ಸಿನಲ್ಲಿ ಇದ್ದುದನ್ನು ಮುಚ್ಚಿಟ್ಟುಕೊಂಡು ಹೇಳುವಿರಿ. ನಿಮ್ಮ ಶಿಷ್ಯನೊಡನೆ ನಾಟಕದ ಇಂದ್ರಜಾಲವೆ? ನಿಮ್ಮ ಗರುಡಿಯಲ್ಲಿ ನನಗೆ ಶ್ರಮದ ಪಾಠವುಂಟು. ಅದು- ಹಾಸ್ಯ ಅಲ್ಲಿಗೆ ನಿಲ್ಲಲಿ; ಎನ್ನ ತಮ್ಮಂದಿರು ಅಣ್ಣಂದಿರು ನಿಮ್ಮ ಅನುಪಮವಾದ ಮಹಿಮಾವಲಂಬವನ್ನು ಅರಿಯರೇ?" ಎಂದನು ಆ ಪಾರ್ಥ.
ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ |
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವುದೇನು ಹೇಳೆಂದ || ೪೩ ||
ಪದವಿಭಾಗ-ಅರ್ಥ: ನಾವು ಬರಿಗೈಯವರು, ಬರಲು+ ಎಮಗೆ+ ಆವುದು+ ಅಲ್ಲಿಯ ಕೆಲಸ ಉಂಡುಂಡು+ ಆವು(ನಾವು) ಕುಳ್ಳಿಹರು+ ಅಲ್ಲ, ಹಂಗಾಗಿ+ ಇರೆವು (ಇರಲಾರೆವು) ಕದನದಲಿ, ದೇವನೆಂದೇ ನೀವು ಬಗೆವಿರಿ, ದೇವತನ ನಮ್ಮಲ್ಲಿ ಲವವು+ ಇಲ್ಲ;+ ಆವು ಬಲ್ಲೆವು ಬಂದು ಮಾಡುವುದೇನು ಹೇಳೆಂದ.
ಅರ್ಥ: ಕೃಷ್ಣನು ಅರ್ಜುನನಿಗೆ,'ನಾವು ಬರಿಗೈಯವರು; ಖಾಲಿ ಕೈಯಿಂದ ಬರುವವರು; ಅಲ್ಲಿಗೆ ಬಂದರೆ ನಮಗೆ ಕೆಲಸ ಯಾವುದು? ಕೇವಲ ಉಂಡುಂಡು ನಾವು ಕುಳಿತುಕೊಳ್ಳುವವರು ಅಲ್ಲ. ಕದನದಲ್ಲಿ ಊಟ ಮಾಡಿ ಹಂಗಿನಲ್ಲಿ ಇರಲಾರೆವು. ನೀವು ನಮ್ಮನ್ನು ದೇವನೆಂದೇ ತಿಳಿಯುವಿರಿ; ದೇವತನ ನಮ್ಮಲ್ಲಿ ಲವಲೇಶವೂ ಇಲ್ಲ; ಅದನ್ನು ನಾವು ಬಲ್ಲೆವು. ನಾವು ಬಂದು ಅಲ್ಲಿ ಮಾಡುವುದೇನು ಹೇಳು' ಎಂದ.

ಸಾರಥಿಯಾದನು ಒಲಿದು ಅರ್ಜುನಗೆ ಮುರವೈರಿ[ಸಂಪಾದಿಸಿ]

ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ || ೪೪ ||
ಪದವಿಭಾಗ-ಅರ್ಥ: ದೇವ ಮಾತ್ರವೆ ನೀವು ದೇವರದೇವರು+ ಒಡೆಯರು ಹೊಗಳುವರೆ ವೇದಾವಳಿಗಳ+ ಅಳವಲ್ಲ(ಶಕ್ತವಲ್ಲ) ಸಾಕು+ ಆ ಮಾತು+ ಅದು+ ಅಂತಿರಲಿ ನಾವು ಭಕುತರು ಭಕುತ ಭೃತ್ಯರು(ಸೇವಕರು), ನೀವು ಸಾರಥಿಯಾಗಿ ಭೃತ್ಯನ ಕಾವುದೆಂದು+ ಅರ್ಜುನನು ಹಣೆ ಚಾಚಿದನು ಹರಿಪದಕೆ (ಕೃಷ್ಣನ ಪಾದಕ್ಕೆ).
ಅರ್ಥ: ಅರ್ಜುನನು, 'ನೀವು ದೇವ ಮಾತ್ರವೆ ಅಲ್ಲ; ನೀವು ದೇವರ ದೇವರು- ಒಡೆಯರು; ನಿಮ್ಮನ್ನು ಹೊಗಳುವುದಾದರೆ ಆ ವೇದಗಳ ಸಮೂಹವೂ ಶಕ್ತವಲ್ಲ. ಸಾಕು ಆ ಮಾತು ಅದು ಹಾಗಿರಲಿ. ನಾವು ಭಕ್ತರು, ನೀವು ಭಕ್ತನ ಸೇವಕರು; ನೀವು ನನಗೆ ಯುದ್ಧದಲ್ಲಿ ಸಾರಥಿಯಾಗಿ ಈ ಭೃತ್ಯನ- ಸೇವಕನನ್ನು ಕಾಯಬೇಕು' ಎಂದು ಹೇಳಿ, ಅರ್ಜುನನು ಕೃಷ್ಣನ ಪಾದಕ್ಕೆ ಹಣೆಯನ್ನು ಚಾಚಿದನು.
ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ |
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ || ೪೫ ||
ಪದವಿಭಾಗ-ಅರ್ಥ: ಎನಲು ನಗುತ+ ಎತ್ತಿದನು, ಸಾರಥಿತನವ ಕೈಕೊಂಡನು, ಕೃಪಾಳುವಿನ+ ಅನುನಯವ ನಾನು+ ಎತ್ತ(ಹೇಗೆ, ಎಷ್ಟು) ಬಲ್ಲೆನು, ಭೃತ್ಯವರ್ಗದಲಿ ತನಗೆ+ ಅಹಂಕೃತಿಯಿಲ್ಲ(ಅಹಂಕಾರವಿಲ್ಲ) ವೈರೋಚನಿಯ(ಬಲಚಕ್ರವರ್ತಿಯ) ಪಡಿಹಾರಿಕೆ(ಸೇವಕತನಕ್ಕೆ) ಕಿರೀಟಿಯ(ಅರ್ಜುನನ) ಮನೆಯ ಬಂಡಿಯ ಬೋವನಾದನು(ಗಾಡಿ ಹೊಡೆಯುವವನಾದನು) ವೀರನಾರಯಣ.
ಅರ್ಥ: ಮುನಿಯು ಜನಮೇಜಯನಿಗೆ ಹೇಳಿದ, 'ಪಾರ್ಥನು ಹಾಗೆ ಬೇಡಿಕೊಳ್ಳಲು ಕೃಷ್ಣನು ನಗುತ್ತಾ ಪಾರ್ಥನನ್ನು ಎತ್ತಿದನು ಮತ್ತು ಸಾರಥಿತನವನ್ನು ಕೈಕೊಂಡನು. ಕೃಪಾಳು ಕೃಷ್ಣನ ಅನುನಯವನ್ನು ನಾನು (ವೈಶಂಪಾಯನ ಮುನಿ) ಹೇಗೆ ತಿಳಿಯಬಲ್ಲೆನು? ಭೃತ್ಯವರ್ಗದಲ್ಲಿ ತನಗೆ ಅಹಂಕಾರವಿಲ್ಲ ಎಂದು ಹಿಂದೆ ಬಲಿಚಕ್ರವರ್ತಿಯ ಬಾಗಿಲು ಕಾಯುವ ಸೇವಕತನಕ್ಕೆ ಒಪ್ಪಿದವನು ಅರ್ಜುನನ ಮನೆಯ ಗಾಡಿ ಹೊಡೆಯುವವನಾದನು ಆ ವೀರನಾರಯಣ.'

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು