ಕುಮಾರವ್ಯಾಸ ಭಾರತ/ಸಟೀಕಾ (೫-ಉದ್ಯೋಗಪರ್ವ::ಸಂಧಿ-೦೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಉದ್ಯೋಗಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

|| ಸೂಚನೆ ||

ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯ ನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ|| ಸೂ||

ಪದವಿಭಾಗ-ಅರ್ಥ:ತಿಳುಹಿದನು ವಿದುರನು ಮಹೀಪತಿ ತಿಲಕನನು ನಯ ನೀತಿ ಧರ್ಮಂಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ(ಇರುಳನ್ನು)|
ಅರ್ಥ:ವಿದುರನು ಮಹೀಪತಿ ತಿಲಕನಾದ ಧೃತರಾಷ್ಟ್ರನನ್ನು ಕುರಿತು ನಯ ನೀತಿ ಧರ್ಮಗಳನ್ನು ತಿಳುಹಿಸಿದನು. ಹೀಗೆ ಆ ರಾತ್ರಿಯನ್ನು ಸುಸಂಗತಿಯ ಕಲಾಪದಿಂದ ಕಳೆದರು.[೧] [೨] [೩] [೪]

ವಿದುರನಿಂದ ಧೃತರಾಷ್ಟ್ರನಿಗೆ ನೀತಿಬೋಧೆ[ಸಂಪಾದಿಸಿ]

ಬಂದನಾ ಧೃತರಾಷ್ಟ್ರರಾಯನ
ಮಂದಿರಕೆ ಕಂಡನು ಮಹೀಶನ
ನೊಂದೆರೆಡು ಮಾತಿನಲಿ ಸೂಚಿಸಿ ಮನೆಗೆ ಮರಳಿದನು |
ಅಂದಿನಿರುಳೊಳು ನಿದ್ರೆಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ || ೧ ||
ಪದವಿಭಾಗ-ಅರ್ಥ: (ಸಂಜಯನು) ಬಂದನು+ ಆ ಧೃತರಾಷ್ಟ್ರರಾಯನ ಮಂದಿರಕೆ, ಕಂಡನು ಮಹೀಶನನ+ ಒಂದೆರೆಡು ಮಾತಿನಲಿ ಸೂಚಿಸಿ ಮನೆಗೆ ಮರಳಿದನು ಅಂದಿನಿರುಳೊಳು (ಆ ದಿನ ರಾತ್ರಿ) ನಿದ್ರೆಬಾರದೆ ನೊಂದು ವಿದುರನ ಕರೆದು ರಾಯನ(ಕೌರವನ) ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ.
ಅರ್ಥ:ಸಂಜಯನು ವಿರಾಟನ ರಾಜ್ಯದಲ್ಲಿ ಬೀಡು ಬಿಟ್ಟಿದ್ದ ಧರ್ಮಜನ ಸಭೆಯಿಂದ ಹಸ್ತಿನಾವತಿಯ ಅರಮನೆಗೆ ಬಂದನು. ಅಲ್ಲಿ ಆ ಧೃತರಾಷ್ಟ್ರರಾಯನ ಮಂದಿರದಲ್ಲಿ ಧೃತರಾಷ್ಟ್ರ ರಾಜನನ್ನು ಕಂಡನು. ಚಿಂತೆಯಲ್ಲಿದ್ದ ಧೃತರಾಷ್ಟ್ರ ರಾಜನಿಗೆ ಒಂದೆರೆಡು ಮಾತಿನಲ್ಲಿ ಪಾಂಡವರ ಅಭಿಪ್ರಾಯ ತಿಳಿಸಿ ಸಂಜಯನು ಮನೆಗೆ ಮರಳಿದನು. ಪಾಂಡವರು ತಮ್ಮ ಅವದಿಯ ವನವಾಸ ಅಜ್ಞಾತ ವಾಸ ಮುಗಿಸಿ ವಿರಾಟನ ನಗರದ ಬಳಿಬೀಡು ಬಿಟ್ಟಿರುವುದನ್ನು ನೆನೆದು ಚಿಂತಿಸಿ ಆ ದಿನ ರಾತ್ರಿ ಅವನು ನಿದ್ರೆಬಾರದೆ ನೊಂದು, ವಿದುರನನ್ನು ಕರೆದು ಕೌರವನರಾಯನ ತಂದೆಯು ಬಿಸುಸುಯ್ಯುತ್ತ ವಿದುರದೇವನಿಗೆ ಹೀಗೆ ನುಡಿದನು.
ನಾಳೆ ಸಭೆಯಲಿ ಬಂದು ಸಂಜಯ
ಹೇಳುವನು ಸುದ್ದಿಯನು ಸಂಧಿಯೊ
ಕಾಳಗವೊ ಮುಂದರಿಯಬಾರದು ದುಗುಡ ವಾಯ್ತೆನಗೆ |
ಹೇಳು ನಿರುತವನಿಂದಿನಿರುಳೊಳು
ಬೀಳುಕೊಂಡುದು ನಿದ್ರೆಯೆನೆ ಭೂ
ಪಾಲಕನ ಸಂತೈಸಿ ಬಳಿಕಿಂತೆಂದನಾ ವಿದುರ || ೨ ||
ಪದವಿಭಾಗ-ಅರ್ಥ: ನಾಳೆ ಸಭೆಯಲಿ ಬಂದು ಸಂಜಯ ಹೇಳುವನು ಸುದ್ದಿಯನು ಸಂಧಿಯೊ ಕಾಳಗವೊ ಮುಂದೆ+ ಅರಿಯಬಾರದು ದುಗುಡವಾಯ್ತೆನಗೆ ಹೇಳು ನಿರುತವನು (ಧರ್ಮ, ಸತ್ಯ, ನಿತ್ಯ, ನಿಶ್ಚಯ; ಧರ್ಮವಿಚಾರ)+ ಇದಿನಿರುಳೊಳು ಬೀಳುಕೊಂಡುದು ನಿದ್ರೆಯೆನೆ ಭೂಪಾಲಕನ ಸಂತೈಸಿ ಬಳಿಕ+ ಇಂತೆಂದನು+ ಆ ವಿದುರ
ಅರ್ಥ:ರಾಜನ ಕರೆಯಂತೆ ಬಂದ ವಿದುರನಿಗೆ ಧೃತರಾಷ್ಟ್ರನು,'ಪಾಂಡವರ ಬಳಿಯಿಂದ ಸಂಜಯನು ಬಂದಿದ್ದಾನೆ, ಅವನು ನಾಳೆ ಸಭೆಗೆ ಬಂದು 'ಸಂಧಿಯೊ ಕಾಳಗವೊ' ಎಂಬ ಸುದ್ದಿಯನ್ನು ಹೇಳುವನು. ಮುಂದೆ ಎನೆಂದು ಅರಿಯಲಾರೆ; ನನಗೆ ಬಹಳ ಚಿಂತೆ- ದುಗುಡವಾಗಿದೆ.ಧರ್ಮವಿಚಾರವನ್ನು ಹೇಳು. ಇಂದಿನ ರಾತ್ರಿ ನನಗೆ ನಿದ್ದೆ ಹೊರಟುಹೋಗಿದೆ ಎನ್ನಲು,ವಿದುರನು ಭೂಪಾಲಕನನ್ನು ಸಂತೈಸಿ, ಬಳಿಕ ಆ ವಿದುರನು ಹೀಗೆ ಹೇಳಿದನು.
ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಲವಂಗೆ ಕಾಮದ
ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ |
ಕಳವಿನೊಳು ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ || ೩ ||
ಪದವಿಭಾಗ-ಅರ್ಥ: ಬಲವಿಹೀನನು ಬಲ್ಲಿದನ ಕೂಡೆ+ ಒಲಿದು ತೊಡಕಲು+ ಅವಂಗೆ ಕಾಮದ ಕಳವಳದೊಳು(ಚಿಂತೆ)+ ಇರ್ದಂಗೆ, ಧನದ+ ಅಳಲಿನೊಳು ಮರುಗುವಗೆ, ಕಳವಿನೊಳು ಕುದಿವಂಗೆ, ದೈವದ ನೆಲೆಯನು+ ಅರಿಯದವಂಗೆ, ದಿಟವು+ ಇದು ತಿಳಿಯೆ ಬಾರದು ನಿದ್ರೆ+ ಯೆಂದನು ಭೂಪತಿಗೆ ವಿದುರ.
ಅರ್ಥ:ವಿದುರನು ಧೃತರಾಷ್ಟ್ರನನ್ನು ಕುರಿತು,' ಬಲಷ್ಠನೊಡನೆ ವಿರೋಧವನ್ನು ಕಟ್ಟಿಕೊಂಡು ಹೋರಾಟದಲ್ಲಿ ತೊಡಕಿದ ದುರ್ಬಲನಿಗೆ, ಕಾಮದಿಂದ ಚಿಂತೆಗೆ ಒಲಗಾದವನಿಗೆ, ಹಣವನ್ನು ಬಯಸಿ ಅಥವಾ ಕಳೆದುಕೊಂಡು ದುಃಖಿಸುವವನಿಗೆ, ಕಳ್ಳತನ ಮಾಡಲು ಬಯಸುತ್ತಿರುವವನಿಗೆ, ದೈವದ ನೆಲೆಯನ್ನು ಅರಿಯದವನಿಗೆ ನಿದ್ರೆ ಬರುವುದಿಲ್ಲ. (ಧೃತರಾಷ್ಟ್ರನಿಗೆ ಏಕೆ ನಿದ್ದೆ ಬರುತ್ತಿಲ್ಲ- ಎನ್ನವುದಕ್ಕೆ ಉತ್ತರ)
ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದಿಸದಿರೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ || ೪ ||
ಪದವಿಭಾಗ-ಅರ್ಥ: ಒಂದರಿಂದ ಎರಡು ಅಹುದನು ಅರಿ, ಮೂರು ಅಂದವನು ತಿಳಿ, ನಾಲ್ಕರಲಿ ಮನ , ಕುಂದದಿರು, ಐದರಲಿ , ವರ್ಜಿಪುದು, ಆರು ಏಳರಲಿ ಒಂದಿಸದಿರು, ಎಂಟನು ವಿಚಾರಿಸಿ, ಮುಂದುವರಿದು ಒಂಭತ್ತರಲಿ, ಮನ ಕುಂದಿಸದಿರು ಈರು ಐದರಲಿ, ಭುಪಾಲ ಕೇಳು ಎಂದ.
ಅರ್ಥ:ವಿದುರನು ಹೇಳಿದನು,'ಬ್ರಹ್ಮವು ಒಂದೇ ಎಂದು ತಿಳಿ (ಒಂದು), ಒಂದರಿಂದ - ಮೂಲ ಚೈತನ್ಯವಾದ ಆ ಪರಬ್ರಹ್ಮ ದಿಂದ ; ಎರಡು ಅಹುದನು ಅರಿ - ಪರಮಾತ್ಮ ಜೀವಾತ್ಮವಾಗಿ ಈ ಮಾನವ ಸೃಷ್ಟಿಯಾಗಿರುವುದನ್ನು ತಿಳಿ ; ಮೂರು ಅಂದವನು ತಿಳಿ - ಈ ಜಗತ್ತಿನ ನಡವಳಿಕೆಗೆ ಸತ್ವ, ರಜ,,ತಮ, ಈ ಮೂರು ಗಣತ್ರಯಗಳು ಕಾರಣವೆಂಬುದನ್ನು ತಿಳಿದುಕೋ ; ನಾಲ್ಕರಲಿ ಮನ - ಧರ್ಮ,ಅರ್ಥ, ಕಾಮ, ಮೋಕ್ಷ ಈ ನಾಲ್ಕರಲ್ಲೂ ಮನಸ್ಸಿರಲಿ, ಅವನ್ನು ಸಾಧಿಸಬೇಕೆಂಬ ಗುರಿ ಇರಲಿ ; ಕುಂದದಿರು, ಐದರಲಿ - ಪಂಚೇಂದ್ರಿಗಳಿಗೆ (ನೇತ್ರಗಳು, ನಾಸಿಕ, ಶ್ರೋತೃ/ ಕಿವಿ , ಜಿಹ್ವಾ/ನಾಲಿಗೆ, ತ್ವಕ್ / ಚರ್ಮ) ; ವರ್ಜಿಪುದು -ಇವುಗಳಿಗೆ ವಶನಾಗಬೆಡ ; ಆರು ಏಳರಲಿ -ಅರಿಷಡ್ವರ್ಗಗಳನ್ನೂ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮತ್ತು ಸಪ್ತ ವ್ಯಸನ ಗಳಾದ ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ , ಅರ್ಥದೂಷಣೆ , ದಂಡಪಾರುಷ್ಯ -ಇವುಗಳಿಂದ ; ಒಂದಿಸದಿರು - ದೂರವಿರು, ; ಎಂಟನು ವಿಚಾರಿಸಿ - ಅಷ್ಠಾಂಗ ಯೋಗವನ್ನು ಅರಿತು (ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿ) ; ಮುಂದುವರಿದು ಒಂಭತ್ತರಲಿ - ನವ ವಿಧ ಭಕ್ತಿಯಲ್ಲಿ (ಶ್ರವಣ, ಸ್ಮರಣ, ಕ್ಭಿರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ) ಮನಸ್ಸನ್ನಿಡು (ಮುಂದುವರಿ) ; ಮನ ಕುಂದಿಸದಿರು ಈರು ಐದರಲಿ, (ಎರಡು+ಐದು=ಹತ್ತು) ; ಇವುಗಳ ಜೊತೆಯಲ್ಲಿ ಕ್ಷಮೆ, ಮಾರ್ದವತೆ, ಆರ್ಜವ (ಪ್ರಾಮಣಿಕತೆ), ಶೌಚ, ಸತ್ಯ,ಸಂಯಮ, ತಪಸ್ಸು (ಶುದ್ಧ ಚಿಂತನೆ), ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯ ಈ ಹತ್ತು ಸಾಮಾನ್ಯ ಧರ್ಮಗಳನ್ನು ; ಮನ ಕುಂದದಿರು -ಮನಸ್ಸನ್ನು ಕುಂದಿಸಬೇಡ- ಧರ್ಮವನ್ನು ಬಿಡದೆ ಅನುಸರಿಸು, ಭೂಪಾಲ ಕೇಳು ಎಂದ.
ರಾಜನೀತಿಯ ಅರ್ಥಕ್ಕೆ ನೋಡಿ:ಕುಮಾರವ್ಯಾಸನ ಮುಂಡಿಗೆಗಳು- ವಿಕಿಪೀಡಿಯ ಇಂದ
ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನ ಮುಖ ನಾಲ್ಕು |
ತನ್ನ ನೆನಹೆಂತಂತೆ ಕಾರ್ಯವು
ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ || ೫ ||
ಪದವಿಭಾಗ-ಅರ್ಥ: ತನ್ನ ಚಿಂತೆಯದು(ಯೋಜನೆ, ಯೋಚನೆ)+ ಒಂದು, ದೈವದ ಗನ್ನಗತಕವದು(ಮೋಸ)+ ಎರಡು, ಭಾವದ ಬನ್ನಣೆಯ( ವರ್ಣನೆ, ತೋರಿಕೆ, ಸೋಗು) ಬಗೆ ಮೂರು, ದೈವದ ಭಿನ್ನ (ಬೇರೆ, ಚೂರು, ತುಂಡು, ವ್ಯತ್ಯಾಸ, ಭೇದ) ಮುಖ ನಾಲ್ಕು, ತನ್ನ ನೆನಹು (ನೆನೆಯುವುದು- ಬಯಕೆ+ಎಂತು (ಹೇಗೆ)+ ಅಂತೆ (ಹಾಗೆ) ಕಾರ್ಯವು ಚೆನ್ನಹಡೆ(ಚೆನ್ನವು- (ಚೆನ್ನಾಗಿ)+ ಅಹಡೆ-> ಆಗುವುದಾದರೆ) ಲೋಕಕ್ಕೆ ತಾ ಬೇರೆ+ ಇನ್ನು ದೈವವು+ ಅದೇಕೆ ತಾನೇ ದೈವರೂಪ+ ಎಂದ.
ಅರ್ಥ:ವಿದುರನು ಲೋಕ ವ್ಯವಹಾರವನ್ನು ಹೇಳಿದನು,'ಮನುಷ್ಯನು ತಾನು (ಯೋಚನೆ)ಯೋಜನೆ ಮಾಡುವುದು ಒಂದು; ಆದರೆ ಕಾನದ ದೈವದ ಮೋಸದಿಂದ ಅದು ಆಗದಿರುವುದು ಎರಡು; ಮಾನವನ ಭಾವದ ತೋರಿಕೆ ಅಥವಾ ಸೋಗು, ದೈವ ಅದನ್ನು ಕೆಡಿಸುವುದು ಮೂರು; ಮಾನವನಿಗೆ ತಿಳಿಯದ ದೈವದ ಭಿನ್ನ ಬೇರೆ ಬೇರೆಮುಖ ನಾಲ್ಕು; ಮುಷ್ಯನಿಗೆ ತನ್ನ ಬಯಕೆ ಹೇಗೆ ಇರುವುದೋ ಅಂತೆಯೆ ಕಾರ್ಯವು ಚೆನ್ನಾಗಿ ಆಗುವುದಾದರೆ ಲೋಕಕ್ಕೆ ತಾ ಬೇರೆ ಇನ್ನೊಂದು ದೈವವು ಅದೇಕೆ ಬೇಕು? ತಾನೇ ದೈವರೂಪನಾದಂತೆ ಆಗದೇ? ಆದರೆ ದೈವ ಅಥವಾ ವಿಧಿ ಹಾಗಿಲ್ಲ, ಅದನ್ನು ತಿಳಿ,' ಎಂದ.
ಒಂದು ವರ್ಣವನರುಹಿದವ ಗುರು
ವೊಂದಪಾಯದೊಳುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮ ಗುರು |
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲಯೋನಿಯೊಳರಸ ಕೇಳೆಂದ || ೬ ||
ಪದವಿಭಾಗ-ಅರ್ಥ: ಒಂದು ವರ್ಣವನು+ ಅರುಹಿದವ (ಅಕ್ಷರವನ್ನು ಬೋಧಿಸಿದವನು) ಗುರುವು;+ ಒಂದು+ ಅಪಾಯದೊಳು+ ಉಳುಹಿದವ ಗುರು; ಬಂದ ವಿಗ್ರಹದೊಳಗೆ (ಯುದ್ಧದಲ್ಲಿ) ರಕ್ಷಿಸಿದಾತ ಪರಮ(ಶ್ರೇಷ್ಠ) ಗುರು; ಒಂದು+ ಎರಡು ಮೂರು+ ಐಸಲೇ (ಅಷ್ಟೇತಾನೆ) ತಾನೆ+ ಎಂದು ಗರ್ವೀಕರಿಸಿದವರುಗಳು (ಅಹಂಕಾರಪಟ್ಟವರು)+ ಒಂದುವರು(ಹೊಂದುವರು) ಚಾಂಡಾಲಯೋನಿಯೊಳು+ ಅರಸ ಕೇಳು+ ಎಂದ.
ಅರ್ಥ:ವಿದುರನು,'ರಾಜನೇ ಕೇಳು, ಒಂದು ಅಕ್ಷರವನ್ನು ಬೋಧಿಸಿದವನನ್ನೂ ಗುರುವು ಎಂದು ತಿಳಿಯಬೇಕು; ಒಂದು ಅಪಾಯದಲ್ಲಿ ತನ್ನನ್ನು ಉಳಿಸಿದವನನ್ನೂ ಸಹ ಗುರು ಎಂದು ತಿಳಿಯಬೇಕು; ತನ್ನಮೇಲೆ ಬಂದ ಯುದ್ಧದಲ್ಲಿ ರಕ್ಷಿಸಿದಾತನನ್ನು ಶ್ರೇಷ್ಠ ಗುರು ಎಂದು ಗೌರವಿಸಬೇಕು; ಒಂದೆರಡು ಮೂರು ಬಾರಿಯಷ್ಟೇ ಸಹಾಯ, ಅಷ್ಟೇತಾನೆ ಎಂದು ಅಹಂಕಾರಪಟ್ಟವರು ಚಾಂಡಾಲಯೋನಿಯಲ್ಲಿ ಜಜ್ಮಹೊಂದುವರು,ಎಂದ.
ತನ್ನ ಕಾರಿಯ ಕಾರಣವನುಳಿ
ದನ್ನಿಗರ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು |
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ || ೭ ||
ಪದವಿಭಾಗ-ಅರ್ಥ: ತನ್ನ ಕಾರಿಯ(ಕಾರ್ಯ) ಕಾರಣವನು+ ಉಳಿದು (ಬಿಟ್ಟು)+ ಅನ್ನಿಗರ (ಇತರರ) ಚಿಂತೆಯನು ಮಾಡುವುದು+ ಉನ್ನತಿಕೆ (ಉತ್ತಮನೆಡೆ) ತಾನು(ಅದು)+ ಅಲ್ಲ ನೀತಿಜ್ಞರಿಗೆ(ತಿಳಿದವರಿಗೆ) ಭಾವಿಸಲು (ವಿಚಾರಮಾಡಿ ನೋಡಿದರೆ), ಮನ್ನಿಸುವುದು+ ಆತ್ಮನನು ಮಿಕ್ಕುದನು+ ಅನ್ಯರಿಗೆ (ಬೇರೆಯವರಿಗೆ) ಮಾಡುವುದದು+ ಅಲ್ಲದೆ ತನ್ನ ತಾ ಮರೆದಿಹುದು ಮತವಲ್ಲ (ಅಭಿಪ್ರಅಯ, ರೀತಿಯಲ್ಲ)+ ಎಂದನು+ ಅ ವಿದುರ
ಅರ್ಥ:ವಿದುರನು ರಾಜನಿಗೆ,' ತನ್ನ ಕಾರ್ಯ ಕಾರಣವನ್ನು- ಕರ್ತವ್ಯಗಳನ್ನು ಮಾಡುವುದನ್ನು ಬಿಟ್ಟು ಇತರರ ಚಿಂತೆಯನ್ನು- ಅವರ ಸರಿತಪ್ಪುಗಳನ್ನು ಕುರಿತು ಚಿಂತೆ ಮಾಡುವುದು- ಭಾವಿಸಿದರೆ ಅದು ನೀತಿಜ್ಞರಿಗೆ ಉತ್ತಮನೆಡೆ ಅಲ್ಲ. ನೀತಿಜ್ಞರಿಗೆ; ತನ್ನನ್ನು ತಾನು ತನ್ನ ಆತ್ಮ ವಿಶ್ವಾಸವನ್ನು ಮನ್ನಿಸಬೇಕು- ಅದಕ್ಕೂ ಮಿಕ್ಕ ವಿಚಾರಗಳನ್ನು ತಿಳಿದ ಅನ್ಯರಿಗೆ ಪರಿಹರಿಸಲು ಸೂಚನೆ ಮಾಡುವುದದು; ಅದಲ್ಲದೆ ತನ್ನನ್ನು ತಾನೇ ಮರೆತು ಕಾರ್ಯದಲ್ಲಿ ಬೇರೆಯವರನ್ನು ಆಶ್ರಯಿಸುವುದು ನನ್ನ ಅಭಿಪ್ರಾಯದಲ್ಲಿ ಸರಿಯಲ್ಲ,'ಎಂದನು.
ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿಭಾರಕರ |
ಭಾವಿಸಲು ಸರ್ವಜ್ಞ ಸರ್ವ ಗು
ಣಾವಲಂಬನನೊಬ್ಬ ನರ್ಜುನ
ದೇವ ಸಾಲದೆ ನಾಡ ನಾಯ್ಗಳಲೇನು ಫಲವೆಂದ || 8 ||
ಪದವಿಭಾಗ-ಅರ್ಥ:ಹಾವು ಹಲವನು ಹಡೆದು ಲೋಕಕೆ ಸಾವ ತಹವೊಲು(ತರುವಂತೆ) ನೂರು ಮಕ್ಕಳನು+ ಆವ ಪರಿಯಲಿ ಹಡೆದು ಕೆಡಿಸಿದೆ; ಭೂಮಿಭಾರಕರ (ಭೂಮಿಗೆ ಭಾರವಾದವರು, ಮತ್ತೇನೂ ಉಪಯೊಗವಿಲ್ಲ.) ಭಾವಿಸಲು (ಯೋಚಿಸಿದರೆ) ಸರ್ವಜ್ಞ ಸರ್ವ ಗುಣಾವಲಂಬನನು+ ಒಬ್ಬನರ್ಜುನದೇವ ಸಾಲದೆ ನಾಡ ನಾಯ್ಗಳಲೇನು ಫಲವೆಂದ.
ಅರ್ಥ: ವಿದುರನು ರಾಜನಿಗೆ,'ವಿಷದ ಹಾವು ಹಲವು ಮರಿಗಳನ್ನು ಹಡೆದು ಲೋಕಕ್ಕೆ ಕೆಡುಕನ್ನೂ, ಸಾವನ್ನೂ ತರುವಂತೆ, ನೀನು ನೂರು ಮಕ್ಕಳನ್ನು ಯಾವ ಪರಿಯಲ್ಲಿ ಹಡೆದೆಯೋ ತಿಳಿಯದು! ಹಾಗೆ ದುಷ್ಟರನ್ನು ಹಡೆದು ಲೋಕವನ್ನು ಕೆಡಿಸಿದೆ; ಯೋಚಿಸಿದರೆ ಅವರು ಭೂಮಿಭಾರಕರು- ಅಪ್ರಯೋಜಕರು; ಸರ್ವಜ್ಞನೂ ಸರ್ವ ಗುಣಾವಲಂಬನೂ ಆದ ಒಬ್ಬನು ಮಗ, ಅರ್ಜುನದೇವನಂಥವನು ಇದ್ದರೆ ಸಾಲದೆ? ಉಪಯೋಗವಿಲ್ಲದ ನಾಡ ನಾಯಿಗಳಂತಿರುವ ಅನೇಕ ಮಕ್ಕಳಿಂದ ಎನು ಉಪಯೋಗ?' ಎಂದ. (ಮಾತು ಬಹಳ ಕಟುವಾಗಿದೆ)
ದೀಪ ದೀಪವ ತೊಳಲಿ ಕರ್ಮಕ
ಳಾಪದಲಿ ಕುದಿ ಕುದಿದು ನಾನಾ
ರೂಪಿನಿಂದಾರ್ಜಿಸಿದ ಧರ್ಮದ ಗೊಡವೆ ತಾನೇಕೆ|
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ || ೯ ||
ಪದವಿಭಾಗ-ಅರ್ಥ: ದೀಪ ದೀಪವ(ಅಗ್ನಿ- ಯಜ್ಞದಿಂದ ಯಜ್ಞಕ್ಕೆ) ತೊಳಲಿ( ಬವಣೆ, ಸಂಕಟ, ಅಲೆದಾಡಿ) ಕರ್ಮಕಳಾಪದಲಿ (ಕರ್ಮ ಕಲಾಪ - ಯಜ್ಞ ಯಾಗಾದಿಗಳು) ಕುದಿ ಕುದಿದು (ಕಷ್ಟವನ್ನು ಅನುಭವಿಸಿ) ನಾನಾರೂಪಿನಿಂದ+ ಆರ್ಜಿಸಿದ (ಗಳಿಸಿದ) ಧರ್ಮದ ಗೊಡವೆ ತಾನೇಕೆ? ಭೂಪ ಕೇಳೈ ಸತ್ಯವೊಂದೇ ಸೋಪನವು (ಸೋಪಾನ- ಸೋಪಾನ- ಮೆಟ್ಟಿಲು) ಸಗ್ಗಕ್ಕೆ ಜನ್ಮದ ಕೂಪರಕ್ಕಿದು(ಕೂಪಾರ,ಸಾಗರ,ಸಮುದ್ರ) ನಾವೆಯಾಗಿಹುದು+ ಎಂದನು+ ಆ ವಿದುರ.
ಅರ್ಥ: ವಿದುರನು ,'ಸ್ವರ್ಗಕ್ಕ ಹೋಗಲು, ಯಜ್ಞ ಯಾಗಾದಿಗಳನ್ನು ಮಾಡಿ ಆಯಾಸಪಟ್ಟು, ಕರ್ಮ ಕಲಾಪಗಳಲ್ಲಿ ಬೆಂಕಿಯ ಎದುರು ಕುಳಿತು, ಕುದಿ ಕುದಿದು ಕಷ್ಟವನ್ನು ಅನುಭವಿಸಿ ನಾನಾರೂಪಿನಿಂದ ಗಳಿಸಿದ ಧರ್ಮದ ಗೊಡವೆ ಏಕೆ ತಾನೇ ನೇಕು? ರಾಜನೇ ಕೇಳಯ್ಯಾ, ಸ್ವರ್ಗಕ್ಕೆ ಹೋಗಲು ಸತ್ಯವೊಂದೇ ಮೆಟ್ಟಿಲು. ಜನ್ಮ ಜನ್ಮದ- ಸಂಸಾರ ಸಾಗರಕ್ಕೆ ಸತ್ಯವೇ ನಾವೆಯಾಗಿರುದು,' ಎಂದನು.

ರಾಜಧರ್ಮ[ಸಂಪಾದಿಸಿ]

ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಲ್ಲದೆ ವಿಷದ ಫಣಿಯಂತೆ |
ಕಾಪಥವ ನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ || ೧೦ ||
ಪದವಿಭಾಗ-ಅರ್ಥ: ಪಾಪದಿಂದ+ ಆರ್ಜಿಸಿದೊಡೆ(ಗಳಿಸಿದರೆ)+ ಅರ್ಥವನು (ಸಂಪತ್ತನ್ನು)+ ಆ ಫಲವನುಂಬವರಿಗೆ+ ಇಲ್ಲಾ ಪಾಪವು+ ಒಬ್ಬಂಗೆ+ ಅಪ್ಪುದಲ್ಲದೆ (ಒಬ್ಬನಿಗೆ ಆಗುವುದು- ಅಂಟುವುದು ಅದಲ್ಲದೆ) ವಿಷದ ಫಣಿಯಂತೆ(ಹಾವಿನಂತೆ) ಕಾಪಥವನು (ಕೆಟ್ಟದಾರಿಯನ್ನು)+ ಆಶ್ರಯಿಸಿ ಕೋಪಾಟೋಪದಿಂದ+ ಉತ್ತಮರ ಸರ್ವಸ್ವ+ ಅಪಹಾರವ ಮಾಡಿ ಬದುಕುವುದು+ ಆವ ಗುಣವು+ ಎಂದ
ಅರ್ಥ:ವಿದುರನು,'ಪಾಪದಿಂದ ಸಂಪತ್ತನ್ನು ಗಳಿಸಿದರೆ ಆ ಫಲವನನ್ನು ಉಣ್ಣುವವರಿಗೆ ಪಾಪವು ಇಲ್ಲಾ. ಆ ಪಾಪವು ಒಬ್ಬನಿಗೆ ಒಬ್ಬನಿಗೆ ಅಂಟುವುದು. ಅದಲ್ಲದೆ ವಿಷದ ಹಾವಿನಂತೆ ಕೆಟ್ಟದಾರಿಯನ್ನು ಆಶ್ರಯಿಸಿ ಕೋಪಾಟೋಪದಿಂದ ಉತ್ತಮರ ಸರ್ವಸ್ವ ಅಪಹಾರವ ಮಾಡಿ ಬದುಕುವುದು ಯಾವ ಗುಣವು?' ಎಂದ.
ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವೊಡೆ |
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ || ೧೧ ||
ಪದವಿಭಾಗ-ಅರ್ಥ: ಬವರ(ಯುದ್ಧ) ಮುಖದಲಿ ವೈರಿರಾಯರನು+ ಅವಗಡಿಸಿ (ಸೋಲಿಸಿ) ತಂದಾ ಧನವ ಭೂದಿವಿಜ (ವಿಪ್ರ) ಸಂತತಿಗೆ+ ಇತ್ತ (ಕೊಟ್ಟ) ಫಲವು+ ಇನಿತೆಂದು (ಇಷ್ಟೇಎಂದು) ಗಣಿಸುವೊಡೆ (ಎಣಿಸವುದಾದರೆ) ದಿವಿಜಪತಿಗಾಗದು(ಇಂದ್ರನಿಗೂ ಆಗದು) ಕಣಾ ಮಾನವಪತಿಗೆ(ರಾಜನಿಗೆ) ಸದ್ಧರ್ಮವಿದು ನಿನ್ನವನು(ನಿನ್ನ ಮಗ) ನೀತಿಯನು+ ಅರಿಯನೈ (ತಿಳಿದಿಲ್ಲ) ಧೃತರಾಷ್ಟ್ರ ಕೇಳು+ ಎಂದ
ಅರ್ಥ:ವಿದುರನು,'ಯುದ್ಧದ ಮೂಲಕ ವೈರಿರಾಯರನ್ನು ಸೋಲಿಸಿ ತಂದ ಆ ಧನವನ್ನು ವಿಪ್ರ ಸಂತತಿಗೆ ಕೊಟ್ಟ ಫಲವು ಇಷ್ಟೇ ಎಂದು ಎಣಿಸವುದಾದರೆ ದಿವಿಜಪತಿ ಇಂದ್ರನಿಗೂ ಆಗದು ಕಣಾ! ರಾಜನಿಗೆ ಇದು ಸದ್ಧರ್ಮವವು. ನಿನ್ನ ಮಗ ನೀತಿಯನ್ನು ಅತಿಳಿದಿಲ್ಲ, ಧೃತರಾಷ್ಟ್ರನೇ ಕೇಳು,' ಎಂದ.
ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ |
ಜರಿದು ನಸಿವುದು ವಾಹಿನಿಗೆ ಮಲೆ
ತುರೆ ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜ ಬೇಕೆಂದ || ೧೨ ||
ಪದವಿಭಾಗ-ಅರ್ಥ: ಧರಣಿಯ+ ಅಮರರ (ವಿಪ್ರರ) ಧನದಿ ಸಲಹಿದ ಕರಿ ತುರಗ ಮೊದಲಾದ ದಳವು+ ಉಬ್ಬರದಿ ಹೆಚ್ಚಿಹುದು+ ಅರಿನೃಪಾಲರ ಯುದ್ಧ ಪರಿಯಂತ ಜರಿದು(ಬಿದ್ದು) ನಸಿವುದು (ಇಲ್ಲವಾಗುವುದು) ವಾಹಿನಿಗೆ(ಸೇನೆಗೆ) ಮಲೆತುರೆ(ಯುದ್ಧಕ್ಕೆ ನಿಂತರೆ) ಮಳಲ ಕಟ್ಟೆಯವೊಲು+ ಇದನು+ ಅರಿದ+ ಅರಸುಗಳು ವರ್ಣೋತ್ತಮರ ದೆಸೆಗೆ+ ಅಂಜಬೇಕು+ ಎಂದ
ಅರ್ಥ:ವಿದುರನು,'ವಿಪ್ರರ ಧನದಿಂದ ಸಲಹಿದ ಕರಿ ತುರಗ ಮೊದಲಾದ ದಳವು- ಸೇನೆಯು ಅತಿಯಗಿ ಉಬ್ಬರದಿಂದ ಹೆಚ್ಚಾಗಿದೆ. ಅದು ಶತ್ರುರಾಜರು ಯುದ್ಧಕ್ಕೆ ಬರುವ ಪರಿಯಂತ ಇರುವುದು. ಶತ್ರು ಸೇನೆಗೆ ಎದುರಾಗಿ ಯುದ್ಧಕ್ಕೆ ನಿಂತರೆ ಮಳೆಗೆ ಜರಿದು- ಬಿದ್ದು ಮರಳ ಕಟ್ಟೆಯಂತೆ ಇಲ್ಲವಾಗುವುದು. ಇದನ್ನು ಅರಿತ ಅರಸುಗಳು ವರ್ಣೋತ್ತಮರಾದ ಬ್ರಾಹ್ಮಣರಿಗೆ ಅಂಜಿ ನಡೆಯಬೇಕು,'ಎಂದ
ಉರಗನೌಡಿದೊಡದರ ವದನದೊ
ಳಿರದೆ ಮೇಣಾ ದಷ್ಟದೇಹದೊ
ಳಿರದೆ ರುಧಿರವು ಹರೆವವೊಲು ದುಷ್ಟಾಧಿಕಾರಿಗಳ |
ಒರಸೊರಸಿನಿಂ ಜನಪದದ ಧನ
ಹರೆವುದರಸಂಗಲಸಿದಾ ಪ್ರಜೆ
ಗಿರದುಭಯ ಹಿಂಗುವುದನರಿ ಭೂಪಾಲ ಕೇಳೆಂದ || ೧೩ ||
ಪದವಿಭಾಗ-ಅರ್ಥ: ಉರಗನು+ ಔಡಿದೊಡೆ (ಹಲ್ಲಿನಿಂದ ಕಚ್ಚು)+ ಅದರ ವದನದೊಳಿರದೆ (ವದನ - ಮುಖ) ಮೇಣಾ ದಷ್ಟ (ಕಚ್ಚಿದ, ಹಾವು ಮೊದಲಾದವುಗಳಿಂದ ಕಚ್ಚುವಿಕೆ ಮತ್ತು ಕಚ್ಚಿದ ಜಾಗ) ದೇಹದೊಳಿರದೆ ರುಧಿರವು ಹರೆವವೊಲು ದುಷ್ಟಾಧಿಕಾರಿಗಳ ಒರಸಿ (ತೊಲಗಿಸಿ)+ ಒರಸಿನಿಂ(ತೊಲಗಿಸುವುದಿಂದ) ಜನಪದದ ಧನ ಹರೆವುದರ (ವ್ಯರ್ಥ ಹರಿದು ಹೋಗುವುದನ್ನು) ಸಂಗಲಸಿದ (ಜೊತೆಗೂಡು, ಕೂಡಿಸು ಸಂಗ್ರಹಿಸು)+ ಆ ಪ್ರಜೆಗೆ+ ಇರದು, ಭಯ ಹಿಂಗುವುದು (ಹೋಗುವುದು)+ ಅರಿ (ತಿಳಿ) ಭೂಪಾಲ ಕೇಳೆಂದ.ಸಂಗಲಿಸು
ಅರ್ಥ:ವಿದುರನು,'ರಾಜನೇ ಕೇಳು, ಹಾವು ಹಲ್ಲಿನಿಂದ ಕಚ್ಚಿದರೆ ಅದರ ವಿಷ ಬಾಯಲ್ಲಿ ಇರುವುದಿಲ್ಲ; ಮತ್ತೆ ಕಚ್ಚಿದ ಜಾಗದಿಂದ ದೇಹದಲ್ಲಿ ಇರದೆ ವಿಷವು ರಕ್ತವು ಹರಿಯುವಂತೆ ದೇಹದಲ್ಲಿ ಹರಿಯುವುದು; ಹೀಗೆ ದುಷ್ಟ ಅಧಿಕಾರಿಗಳ ನೆಡತೆ ಇರುವುದು. ಅವರನ್ನು ತೊಲಗಿಸು; ತೊಲಗಿಸುವುದಿಂದ ಜನಪದದ (ಪ್ರಜೆಗಳ) ಧನವು ವ್ಯರ್ಥ ಹರಿದು ಹೋಗುವುದನ್ನು ಸಂಗ್ರಹಿಸು. ಆಗ ಆ ಪ್ರಜೆಗಳಿಗೆ ದುಷ್ಟ ಅಧಿಕಾರಿಗಳ ಭಯ ಇರದು; ಅವರ ಭಯ ಹೋಗುವುದು. ಇದನ್ನು ತಿಳಿ.' ಎಂದ.
ಹರಿವ ನದಿ ತನ್ನಿಚ್ಛೆಯೊಳು ದಡ
ವೆರಡ ಕಿಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದೊಡುಭಯ ವಂಶವನು |
ನೆರಹುವಳು (ನೆರಪುವರು- ಪಾಠಬೇಧ) ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದೊಳು ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ || ೧೪ || (ಪದ್ಯ ೧೬)
ಪದವಿಭಾಗ-ಅರ್ಥ: ಹರಿವ ನದಿ ತನ್ನಿಚ್ಛೆಯೊಳು ದಡವ+ ಎರಡ ಕಿಡಿಸುವವೋಲು(ಕೆಡಿಸುವಂತೆ) ನಾರಿಯರ+ ಉರವಣೆಗೆ(ಅಬ್ಬರ) ಕೈಗೊಟ್ಟು ನಡೆಸಿದೊಡೆ+ ಉಭಯ ವಂಶವನು ನೆರಹುವಳು(ನೆರಪುವರು;- ನದಿಯ ನರೆ?- ಉಬ್ಬರದಂತೆ ಕೆಡಿಸುವಳು- ???) ನೀರೊಳಗೆ ಮೇರೆಯ ಮುರಿಯಲು+ ಈಯದೆ ಮಾರ್ಗದೊಳು ಮತ್ಸರಿಸದೆ (ಹೊಟ್ಟೆಕಿಚ್ಚು ಪಡದೆ)+ ಆಳುವುದು+ ಅನುನಯವು(ಸೂಕ್ತವಾದ ಕ್ರಮ) ಭೂಪಾಲ ಕೇಳೆಂದ
ಅರ್ಥ:ವಿದುರನು,'ರಾಜನೇ ಹರಿಯುವ ನದಿಯು ತನ್ನಿಚ್ಛೆಯಂತೆ ಎರಡೂ ದಡವಗಳನ್ನು ಕೆಡಿಸುವಂತೆ ನಾರಿಯರ ಅಬ್ಬರದ ಮಾತಿಗೆ ಕೈಗೊಟ್ಟು ರಾಜ್ಯಭಾರ ನಡೆಸಿದರೆ ಉಭಯ ವಂಶವನ್ನೂ ನದಿಯ ನರೆಯ- ಉಬ್ಬರ ದಡಗಳನ್ನು ಕೆಡಿಸಿದಂತೆ ಕೆಡಿಸುವಳು. ಆದ್ದರಿಂದ ಉಬ್ಬರದ ನೀರಿನಿಂದ ಮೇರೆಯನ್ನು ಮುರಿಯಲು ಅವಕಾಶ ಕೊಡದಂತೆ, ಆಡಳಿತ ಮಾರ್ಗದಲ್ಲಿ ಅವರ ಮೇಲೆ ಮತ್ಸರಪಡದೆ ಆಳುವುದು ಅನುನಯವು.'ಎಂದ .(ಅರ್ಥ- ತೊಂದೆರೆ- ಗೊಂದಲ ಇದೆ.)
ಧರೆಯೊಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರ್ಯೋಧನನು ದಶ
ಶಿರನು ಗೋಗ್ರಹಣದೊಳು ವನಭಂಗದೊಳು ಮುಂಕೊಂಡು |
ಅರಿಭಟರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಹೇಳೆಂದನಾ ವಿದುರ || ೧೫ ||
ಪದವಿಭಾಗ-ಅರ್ಥ: ಧರೆಯೊಳಗೆ(ಈ ಭೂಮಿಯಲ್ಲಿ) ಕಡು(ಬಹಳ) ಮೂರ್ಖರು+ ಇವರು+ ಇಬ್ಬರು ಕಣಾ, ದುರ್ಯೋಧನನು, ದಶಶಿರನು, ಗೋಗ್ರಹಣದೊಳು, ವನಭಂಗದೊಳು (ಭಂಗ- ಅವಮಾನ), ಮುಂಕೊಂಡು (ಈ ಮೊದಲೇ) ಅರಿಭಟರ ಸತ್ವಾತಿಶಯದ (ಅತಿಶಯ ಶಕ್ತಿ)+ ಉಬ್ಬರದ (ಪರಾಕ್ರಮದ) ಬಲುಹನು (ಶಕ್ತಿಯನ್ನು) ಕಂಡು ಕಂಡು+ ಎಚ್ಚರದೆ (ತಿಳಿಯದೆ) ಮರುಳು+ ಅಹುದು+ ಉಚಿತವೇ ಹೇಳು+ ಎಂದನು+ ಆ ವಿದುರ.
ಅರ್ಥ:ವಿದುರನು,ರಾಜನೇ ಕೇಳು,'ಈ ಭೂಮಿಯಲ್ಲಿ ಕಡು ಮೂರ್ಖರು ಇವರಿಬ್ಬರು ಕಣಾ: ಅವರು ದುರ್ಯೋಧನನು ಮತ್ತು ಹಿಂದೆ ಇದ್ದ ದಶಶಿರ ರಾವಣನು. ದುರ್ಯೋಧನನು ಗೋಗ್ರಹಣದಲ್ಲಿ ಸೋತು, ಅದಕ್ಕೆ ಮೊದಲೇ ವನದಲ್ಲಿ ಗಂಧರ್ವರಿಂದ ಭಂಗಪಟ್ಟು ಪಾಡವರು ಅವನ ಜೀವ ಉಳಿಸಿದರು, ಈ ಮೊದಲೇ ಅರಿಭಟರಾದ ಪಾಂಡವರ ಸತ್ವಾತಿಶಯದ ಪರಾಕ್ರಮದ ಶಕ್ತಿಯನ್ನು ಕಂಡು ಕಂಡೂ ಎಚ್ಚರಗೊಳ್ಳದೆ ಇರುವ ಮರುಳುತನಕ್ಕೆ ಒಳಗಾಗುವುದು ಉಚಿತವೇ ಹೇಳು,' ಎಂದನು.
  • ಟಿಪ್ಪಣಿ:(ಕವಿ ರಾಮಾಯಣದ ಜನಸ್ಥಾನದ ವಿಷಯ ಹೇಳಿದ್ದಾನೆಯೇ- ಇರಲಾರದು, ವನಭಂಗಪಟ್ಟಿರುವುದು ದುರ್ಯೋಧನನೇ ಸರಿ. ಪಾಂಡವರನ್ನು ಅವಮಾನಿಸಲು ವನವಿಹಾರಕ್ಕೆ ಬಂದ ದುರ್ಯೋಧನನ್ನು ಗಂದರ್ವರು ಸರೆ ಹಿಡಿದುಕೊಂಡು ಹೋದರು; ಆರ್ಜುನ ಭೀಮ ಹೋಗಿ ಬಿಡಿಸಿಕೊಂಡು ಬಂದು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಧರ್ಮಜನ ಮುಂದೆ ತಂದು ಹಾಕಿದಾಗ, ದ್ರೌಪದಿಯೇ ಅವನ ಕೈಕಾಲು ಕಟ್ಟನ್ನು ಹಾಸ್ಯಮಾಡುತ್ತಾ ಬಿಚ್ಚುತ್ತಾಳೆ. ಧರ್ಮಜನು ಅವನಿಗೆ ಜೀವದಾನ ಮಾಡಿ ಕಳಿಸುವನು. ಅಪಮಾನಗೊಂಡ ಕೌರವ ಹಸ್ತಿನಾವತಿಗೆ ಹೋಗದೆ ಪ್ರಯೋಪವೇಶ ಮಾಡಲು ತೊಡಗುತ್ತಾನೆ. ರಾವಣನು ದಂಡಕಾರಣ್ಯದ ಜನಸ್ಥಾನದಲ್ಲಿ ರಾವಣನ ಸೋದರರಾದ ಖರ ದೂಷಣರನ್ನೂ ಅವನ ಸಾವಿರಾರು ಸೈನಿಕರನ್ನೂ ರಾಮನೊಬ್ಬನೇ ಯುದ್ಧದಲ್ಲಿ ಕೊಂದುದು ಗೊತ್ತಿದ್ದೂ, ಸೀತೆಯನ್ನು ಅಪಹರಿಸಿ ರಾಮನಿಂದ ಕೊಲ್ಲಲ್ಪಟ್ಟನು. ರಾವಣನು ಅಶೋಕ ವನದಲ್ಲಿ ಅಪಹರಿಸಿದ ಸೀತೆಯಿಂದ ತಿರಸ್ಕರಿಸಲ್ಪಟ್ಟು ಭಂಗಪಟ್ಟುದು ಇಲ್ಲಿ ಹೊಂದಲಾರದು- ಅದು ಸೀತೆಯ ಅಪಹರಣದ ನಂತರದ ಘಟನೆ.)
ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದೊಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿ ನೃಪಾಲಕರ|
ಧರೆಸಹಿತ ತತ್ಸಕಲಬಲಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ || ೧೬ ||
ಪದವಿಭಾಗ-ಅರ್ಥ: ಉರಗನು (ಸರ್ಪವು)+ ಅಗಿದೊಡೆ (ಕಚ್ಚಿದರೆ), ಮೇಣು ( ಅಥವಾ, ಮತ್ತು) ಶಸ್ತ್ರದಲಿ+ ಇರಿದೊಡೆ (ಇರಿದಾಗ)+ ಒಬ್ಬನೆ ಸಾವನು(ಸಾಯುವನು)+ ಅದರಿಂದ+ ಅರಸು ನೆಗಳಿದ ( ಪ್ರಸಿದ್ಧ) ಮಂತ್ರ (ಮಂತ್ರಾಲೋಚನೆ- ಉಪಾಯಗಳು) ಭೇದಿಸಲು (ಗೆಲ್ಲಲು, ನಾಶಪಡಿಸಲು)+ ಅರಿ(ಶತ್ರು) ನೃಪಾಲಕರ ಧರೆಸಹಿತ (ರಾಜ್ಯ ಸಹಿತ) ತತ್ಸಕಲ (ಆ ಸಕಲ) ಬಲಸಂಹರಣವಹುದು (ಸೇನೆಯ ನಾಶ)+ ಇದನು+ ಅರಿದು ಭೂಪೋತ್ತರ (ಇದನ್ನು ತಿಳಿದ ರಾಜರ) ರಹಸ್ಯದ ಮಂತ್ರವುಂಟೇ (ಉಪಾಯ) ರಾಯ ನಿನಗೆ+ ಎಂದ.
ಅರ್ಥ:ವಿದುರನು, 'ರಾಜನೇ, ಸರ್ಪವು ಕಚ್ಚಿದರೆ, ಅಥವಾ ಶಸ್ತ್ರದಲ್ಲಿ ಇರಿದಾಗ ಒಬ್ಬನೆ ಸಾಯುವನು. ರಾಜರ ಜಯಸಾಧನೆಗೆ ಉಪಯೋಗವಿಲ್ಲ. ಅದರಿಂದ ಶತ್ರು ರಾಜರನ್ನು ರಾಜ್ಯ ಸಹಿತ ಗೆಲ್ಲಲು ಆ ಸಕಲ ಸೇನೆಯ ನಾಶವಾಗುವ ರಾಜರು ಅನುಸರಿಸುವ ಪ್ರಸಿದ್ಧ ಮಂತ್ರಾಲೋಚನೆಯ ಉಪಾಯಗಳಿವೆ; ಇದನ್ನು ತಿಳಿದ ರಾಜರ ರಹಸ್ಯದ ಮಂತ್ರವು- ಉಪಾಯಗಳು ನಿನಗೆ ತಿಳಿದಿದೆಯೇ?,' ಎಂದ
ಏಸುಧರ್ಮದಲಾರ್ಜಿಸಿದ ಧನ
ವೈಸು ಸಿರಿವರ್ಧಿಸುವುದದರಿಂ
ದೇಶ ಮಂಗಳ ಪುತ್ರಮಿತ್ರ ಕಳತ್ರವರಿವಿಜಯ |
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮದ ಹಿಡಿಯಧರ್ಮವ ಬಿಟ್ಟು ಕಳೆಯೆಂದ || ೧೭ ||
ಪದವಿಭಾಗ-ಅರ್ಥ: ಏಸು (ಎಷ್ಟು ಎಷ್ಟೊಂದು) ಧರ್ಮದಲಿ+ ಆರ್ಜಿಸಿದ (ಗಳಿಸಿದ) ಧನವು+ಏಸು (ಎಷ್ಟೋ- ಬಹಳ) ಸಿರಿ ವರ್ಧಿಸುವುದು (ಹೆಚ್ಚುವುದು)+ ಅದರಿಂ+ ದೇಶ ಮಂಗಳ(ದೇಶಕ್ಕೆ ಶುಭ) ಪುತ್ರಮಿತ್ರ ಕಳತ್ರವು (ಪತ್ನಿ, ಹೆಂಡತಿ)+ ಅರಿವಿಜಯ ಪೈಸರಿಸುವುದು(ವಿಸ್ತಾರ, ವ್ಯಾಪ್ತಿ, ಹರಹು), ಬಂದ ಬಳಿವಿಡಿದ(ಈಗ ಬಳಿ ಇರುವ)+ ಆಸುರದ ಪಥವು (ದುಷ್ಟ ದಾರಿಯು)+ ಇದನು+ ಅರಿದು(ತಿಳಿದು) ಭೂಮೀಶ ಧರ್ಮದ ಹಿಡಿ,+ ಯ+ ಅಧರ್ಮವ ಬಿಟ್ಟು ಕಳೆ,+ ಯ+ ಎಂದ.
ಅರ್ಥ:ವಿದುರನು, ರಾಜನಿಗೆ,'ಅನೇಕ ಉತ್ತಮ ರಾಜಧರ್ಮಗಳಿಂದ ಗಳಿಸಿದ ಬಹಳ ಧನವು ಬಹಳವಾಗಿ ಹೆಚ್ಚುವುದು. ಅದರಿಂದ ದೇಶಕ್ಕೆ ಶುಭು; ಮತ್ತು ಪುತ್ರಮಿತ್ರ, ಪತ್ನಿಯರಿಗೂ ಶುಭವು; ಶತ್ರುಗಳ ಮೇಲೆ ವಿಜಯವೂ ಆಗುವುದು. ಈಗ ಹತ್ತಿರ ಬಂದಿರುವ ದಾಯಾದಿ ಪಾಂಡವರ ಮೇಲಿನ ಯುದ್ಧ, ಅವರ ರಾಜ್ಯವನ್ನು ಕಸಿಯಲು ಮಾಡಿರುವ ಯೋಜನೆಯು ದುಷ್ಟ ದಾರಿಯು. ಇದನ್ನು ತಿಳಿದು ರಾಜನೇ ಧರ್ಮದ ದಾರಿಯನ್ನು ಹಿಡಿ; ಅಧರ್ಮ ದಾರಿಯನ್ನು ಬಿಟ್ಟು ಕಳೆ,' ಎಂದ.
ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಯದು |
ಅರಸಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ವಿಪ್ರವೈರಿಗೆ
ನಿರುತ ಬದ್ಧದ್ವೇಷ ಲೇಸಲ್ಲೆಂದನಾ ವಿದುರ || ೧೮ ||
ಪದವಿಭಾಗ-ಅರ್ಥ:ಕರಣಿಕನ (ರಾಜಧನದ ಲೆಕ್ಕಿಗ) ಹಗೆಗೊಂಡವಂಗೆ (ಶತ್ರುತ್ವ ಮಾಡಿಕೊಂಡರೆ)+ ಐಶ್ವರಿಯ ಹಾನಿ, ಚಿಕಿತ್ಸಕನ (ವೈದ್ಯನನ್ನು)+ ಅನಾದರಿಸದಾತಂಗೆ (ಅವಮಾನಿಸಿದವನಿಗೆ)+ ಅಗದು+ ಆಯುಷ್ಯಾಭಿವೃದ್ಧಿಯು+ ಅದು, ಅರಸಕೇಳು+ ಆಯುಷ್ಯ ಭಾಗ್ಯಗಳು+ ಎರಡು ಕೆಡುವುವು ವಿಪ್ರವೈರಿಗೆ, ನಿರುತ ಬದ್ಧದ್ವೇಷ ಲೇಸಲ್ಲೆ (ಒಳ್ಳೆದಲ್ಲ)+ ಎಂದನು+ ಆ ವಿದುರ
ಅರ್ಥ:ವಿದುರನು ರಾಜನನ್ನು ಕುರಿತು,'ರಾಜಧನದ ಲೆಕ್ಕಿಗನಾದ ಕರಣಿಕನೊಡನೆ ಶತ್ರುತ್ವ ಮಾಡಿಕೊಂಡರೆ+ ಐಶ್ವರ್ಯದ ಹಾನಿಯಾಗುವುದು., ಚಿಕಿತ್ಸೆಮಾಡುವ ವೈದ್ಯನನ್ನು ಅಅವಮಾನಿಸಿದವನಿಗೆ ಆಯುಷ್ಯಾಭಿವೃದ್ಧಿಯು ಅಗುವುದಿಲ್ಲ. ಅದನ್ನು ಅರಸಕೇಳು, ವಿಪ್ರರ ವೈರಿಗೆ ಆಯುಷ್ಯ ಮತ್ತು ಭಾಗ್ಯಗಳು- ಈ ಎರಡೂ ಕೆಡುವುವು. ತಪ್ಪು ಮಾಡಿದಾಗ ಗದರಿಸಿ ತಿದ್ದಬೇಕು, ಅದರೆ ನಿರುತ- ಸತತವಾದ ಬದ್ಧದ್ವೇಷ ಒಳ್ಳೆದಲ್ಲ.'ಎಂದನು.

೧೯-೨೦[ಸಂಪಾದಿಸಿ]

ಧರೆಯೊಳಗೆ ರವಿ ಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು ಕಣಾ ಸಂನ್ಯಾಸಿಯಾಗಿಯೆ ಯೋಗ ಮಾರ್ಗದಲಿ |
ಹರಣವನು ಬಿಟ್ಟವರು ಘನಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ || ೧೯ ||

ಪದವಿಭಾಗ-ಅರ್ಥ: ಧರೆಯೊಳಗೆ ರವಿ ಮಂಡಲವನು+ ಒದೆದು(ದಾಟಿ)+ ಉರವಣಿಸಿ (ಪರಾಕ್ತಮದಿಂದ) ಹಾಯ್ವವರು(ಹೋಗುವವವರು) ತಾವು+ ಇಬ್ಬರು ಕಣಾ; ಸಂನ್ಯಾಸಿಯಾಗಿಯೆ ಯೋಗ ಮಾರ್ಗದಲಿ ಹರಣವನು(ಜೀವ) ಬಿಟ್ಟವರು, ಘನಸಂಗರದೊಳು+ ಅಭಿಮುಖರಾಗಿ (ಎದುರುನಿಂತು) ಮರಣಾಂತರವನೆಯ್ದುವರು+ ಅವರು ಅವನೀಪಾಲ ಕೇಳು+ ಎಂದ.
ಅರ್ಥ: ವಿದುರನು ಧ್ರತರಾಷ್ಟ್ರ ರಾಜನನ್ನು ಕುರಿತು,'ಈ ಭೂಮಿಯಲ್ಲಿ ರವಿ ಮಂಡಲವನ್ನು ದಾಟಿ ಪರಾಕ್ತಮದಿಂದ ಹೋಗುವವರು ತಾವು ಇಬ್ಬರು ಕಣಾ; ಮೊಲನೆಯನು, ಸಂನ್ಯಾಸಿಯಾಗಿಯೆ ಇದ್ದು ಯೋಗ ಮಾರ್ಗದಲ್ಲಿ ಜೀವವನ್ನು ಬಿಟ್ಟವರು, ಎರಡನೆಯದಾಗಿ ಘನ ಯುದ್ಧದಲ್ಲಿ ಅಭಿಮುಖರಾಗಿ ಹೋರಾಡಿ ಮರಣಾಂತರವನ್ನು ಹೊಂದಿದವರು. ಅವರು ಎಂದ.


ಮಾತೃ ಪಿತೃಗಳು ಶತ್ರು ಭಾವವ
ನಾಂತು ನಿಜ ಸಂತಾನದಲಿ ಸಂ
ಪ್ರೀತಿಯನು ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ |
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ || ೨೦ ||

ಪದವಿಭಾಗ-ಅರ್ಥ: ಮಾತೃ ಪಿತೃಗಳು ಶತ್ರು ಭಾವವನು+ ಆಂತು(ಹೊಂದಿ) ನಿಜ ಸಂತಾನದಲಿ(ತನ್ನ ಮಕ್ಕಳಲ್ಲಿ ನಿಷ್ಟುರವಾಗಿದ್ದುಕೊಂಡು) ಸಂಪ್ರೀತಿಯನು ನೆಲೆಗೊಳಿಸಿ, ಸರ್ವಜ್ಞಾಧಿಕಾರದಲಿ ಖ್ಯಾತರನು ಮಾಡದಡೆ ಹಂಸವ್ರಾತ (ವ್ರಾತ - ಗುಂಪು) ಮಧ್ಯದ ಬಕನವೊಲು ವಿಖ್ಯಾತ ಸಭೆಯೊಳು ಯೋಗ್ಯರು+ ಅಹರೇ(ಆಗುವರೇ?) ಭೂಪ ಕೇಳೆಂದ
ಅರ್ಥ:ವಿದುರನು,' ತಂದೆತಾಯಿಯರು ತನ್ನ ಮಕ್ಕಳಲ್ಲಿ ಸಂಪ್ರೀತಿಯನು ಇಟ್ಟುಕೊಂಡಿದ್ದೂ, ನಿಷ್ಟುರವಾಗಿದ್ದುಕೊಂಡು ಸರ್ವಜ್ಞಾಧಿಕಾರದಲ್ಲಿ- ತಿಳುವಳಿಕೆಯುಳ್ಳವರಾಗಿ ತಂದೆಯ ಅಧಿಕಾರ ಉಪಯೋಗಿಸಿ ಮಕ್ಕಳನ್ನು ಪ್ರಖ್ಯಾತರನ್ನು ಮಾಡದಿದ್ದರೆ, ಹಂಸಗಳ ಸಮೂಹದಲ್ಲಿರುವ ಬಕಪಕ್ಷಿಯಂತೆ ವಿಖ್ಯಾತ ಸಭೆಯಲ್ಲಿ ಅವರು ಯೋಗ್ಯರು ಆಗುವರೇ? ಇಲ್ಲ! ಭೂಪನೇ ಕೇಳು,' ಎಂದ.

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು