ಕುಮಾರವ್ಯಾಸ ಭಾರತ/ಸಟೀಕಾ (೫-ಉದ್ಯೋಗಪರ್ವ::ಸಂಧಿ-೦೪)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಉದ್ಯೋಗಪರ್ವ:೪ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಮುನಿವರನ ಕರುಣದಲಿ ಕೌರವ
ಜನಪನಮಳ ಬ್ರಹ್ಮವಿದ್ಯೆಯ
ನನುಕರಿಸಿ ಚರಿತಾರ್ಥಭಾವದಲಿರುಳನೂಕಿದನು|| ಸೂ ||

ಪದವಿಭಾಗ-ಅರ್ಥ:ಮುನಿವರನ(ಸನತ್ಸುಜಾತನ) ಕರುಣದಲಿ ಕೌರವಜನಪನು (ಧೃತರಾಷ್ಟ್ರನು)+ ಅಮಳ(ಅಮಲ- ಶ್ರೇಷ್ಠ) ಬ್ರಹ್ಮವಿದ್ಯೆಯನು+ ಅನುಕರಿಸಿ ಚರಿತಾರ್ಥಭಾವದಲಿ+ ಇರುಳ(ರಾತ್ರಿಯನ್ನು) ನೂಕಿದನು.
ಅರ್ಥ:ಮುನಿವರನಾದ ಸನತ್ಸುಜಾತ ಮುನಿಯ ಕರುಣದಿಂದ ಕೌರವಜನಪನಾದ ಧೃತರಾಷ್ಟ್ರನು ಶ್ರೇಷ್ಠವಾದ ಬ್ರಹ್ಮವಿದ್ಯೆಯನ್ನು ಅನುಕರಿಸಿ- ಕೇಳಿ ಚರಿತಾರ್ಥಭಾವದಿಂದ ರಾತ್ರಿಯನ್ನು ಕಳೆದನು. [೧][೨] [೩] [೪]

ಧೃತರಾಷ್ಟ್ರನಿಗೆ ವಿದುರನ ಬೋಧೆ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಬೋಧೆಗಂಧನೃ
ಪಾಲನಂತಃಕರಣಶುದ್ಧಿಯನೆಯ್ದಿದನು ಬಳಕ|
ಹೇಳು ಹೇಳಿನ್ನಾತ್ಮವಿದ್ಯೆಯ
ಮೂಲ ಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾವಿದುರ || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ಧರಿತ್ರೀಪಾಲ(ರಾಜನೇ) ವಿದುರನ ಬೋಧೆಗೆ+ ಅಂಧನೃಪಾಲನು(ಧೃತರಾಷ್ಟ್ರನು)+ ಅಂತಃಕರಣಶುದ್ಧಿಯನು+ ಐಯ್ದಿದನು(ಹೊಂದಿದನು) ಬಳಕ ಹೇಳು ಹೇಳಿನ್ನು+ ಆತ್ಮವಿದ್ಯೆಯಮೂಲ ಮಂತ್ರಾಕ್ಷರದ ಬೀಜವನು+ ಆಲಿಸುವೆನು + ಎನೆ ನಗುತ ಕೈಮುಗಿದು+ ಎಂದನು+ ಆ ವಿದುರ
ಅರ್ಥ:ವೈಶಂಪಾಯನ ಮುನಿ ಹೇಳಿದ ,'ಕೇಳು ಜನಮೇಜಯ ರಾಜನೇ ವಿದುರನ ಬೋಧೆಗಳಿಂದ ಅಂಧನೃಪಾಲ ಧೃತರಾಷ್ಟ್ರನು ಅಂತಃಕರಣ ಶುದ್ಧಿಯನ್ನು ಹೊಂದಿದನು. ಬಳಕ ಅವನು ಹೇಳು ಹೇಳು ಇನ್ನು ಆತ್ಮವಿದ್ಯೆಯ ಮೂಲ ಮಂತ್ರಾಕ್ಷರದ ಬೀಜವನ್ನು, ಅದನ್ನು ಆಲಿಸುವೆನು, ಎನ್ನಲು ವಿದುರನು ನಗುತ್ತಾ ಕೈಮುಗಿದು ಆ ವಿದುರನು ಹೀಗೆಂದನು.
ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು |
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ || ೨ ||
ಪದವಿಭಾಗ-ಅರ್ಥ:ಅವಧರಿಸು(ಮನಸ್ಸಿಟ್ಟು ಕೇಳು) ಪರತತ್ವ ವಿದ್ಯಾ ವಿವರ ಭೇದವನು+ ಅನ್ಯಜಾತಿಗಳ+ ಎವಗೆ ಸಲುವುದೆ(ತಕ್ಕುದಾಗಿರು), ಮುನಿವರನ ಕರುಣೋದಯದಲಿ+ ಅಹುದು ಅವರಿವರುಗಳ ಮುಖದಲಿ+ ಇದು ಸಂಭವಿಸುವುದೆ, ಬ್ರಹ್ಮೋಪದೇಶದ ಹವಣ ಬಲ್ಲವನು+ ಆವನೈ ಧೃತರಾಷ್ಟ್ರ ಕೇಳು+ ಎಂದ
ಅರ್ಥ:ವಿದುರನು ಧೃತರಾಷ್ಟ್ರನಿಗೆ,'ಮನಸ್ಸಿಟ್ಟು ಕೇಳು, ಪರತತ್ವ ವಿದ್ಯಾ ವಿವರವನ್ನೂ, ಅದರ ಭೇದವನ್ನೂ ಕೇಳು ಎಂದನು. ಅನ್ಯಜಾತಿಗಳಲ್ಲಿ ಜನಿಸಿದ ನಮಗೆ ಈ ಬ್ರಹ್ಮವಿದ್ಯೆ ನಮಗೆ ತಕ್ಕದ್ದಾಗಿರುವುದೆ? ಆಗದು; ಆದರೆ ನಮ್ಮ ಮೇಲೆ ಸನತ್ಸುಜಾತ ಮುನಿವರನ ಕರುಣೆಯ ಉದಯದಿಂದ, ಕರುಣೆ ಉಂಟಾದರೆ ಇದು ಸಾದ್ಯವಾಗುವುದು. ಸಾಮಾನ್ಯರ ಬಾಯಿಯಿಂದ ಈ ವಿದ್ಯೆ ಸಂಭವಿಸುವುದೆ- ಬರಲು ಸಾಧ್ಯವೇ? ಇಲ್ಲ, ಬ್ರಹ್ಮೋಪದೇಶದ ಕಟ್ಟಳೆ,ನಿಯಮಗಳನ್ನು ಬಲ್ಲವನು ಯಾವನಿರುವನು? ಯಾರೂ ಇಲ್ಲ. ಧೃತರಾಷ್ಟ್ರ ಕೇಳು ಎಂದ.
ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರ್ಣನಾತನ ಭಜಿಸಿದೊಡೆ ನೀನು |
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವನೆಯೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ || ೩ ||
ಪದವಿಭಾಗ-ಅರ್ಥ:ಒಬ್ಬನೇ ಬಲ್ಲವನು ಲೋಕದೊಳು(ಜಗತ್ತಿನಲ್ಲಿ ತಿಳಿದವನು, ಸರ್ವಜ್ಞ)+ ಇಬ್ಬರಿಲ್ಲ(ಒಬ್ಬನೇ,ಎರಡು ಪರಮಾತ್ಮರಿಲ್ಲ), ಸನತ್ಸುಜಾತನು ಸಂಪೂರ್ಣನು+ ಆತನ+ ಆತನ ಭಜಿಸಿದೊಡೆ ನೀನು ಸಭ್ಯನು+ ಅಹೆಯೆನಲಾ (ಆಹೆ- ಆಗುವೆ), ಮುನಿಯ ಕರ್ತವ್ಯಭಾವನೆಯೊಳು+ ಅರಸನಿರಲು+ ಆವಿರ್ಭವಿಸಿದನು(ಪ್ರತ್ಯಕ್ಷನಾದನು) ವಿಪ್ರಕುಲಕಮಲಾರ್ಕನು (ವಿಪ್ರಕುಲಕ್ಕೆ ಕಮಲದಂತಿರುವ ಸನತ್ಸುಜಾತನು)+ ಆ ಕ್ಷಣಕೆ.
ಅರ್ಥ:ವಿದುರನು ಧೃತರಾಷ್ಟ್ರನಿಗೆ,'ಜಗತ್ತಿನಲ್ಲಿ ತಿಳಿದವನು, ಸರ್ವಜ್ಞನಾದವನು ಒಬ್ಬನೇ ಇರುವನು,' ಇಬ್ಬರಿಲ್ಲ- ಒಬ್ಬನೇ, ಎರಡು ಪರಮಾತ್ಮರಿಲ್ಲ, ಸನತ್ಸುಜಾತನು ಸಂಪೂರ್ಣನು ಆತನನ್ನು ಭಜಿಸಿದರೆ ನೀನು ಸತ್ಪುರುಷನು ಆಗುವೆ ಎಂದು ವಿದುರನು ಹೇಳುತ್ತಿರುವಾಗ, ಬ್ರಹ್ಮಜ್ಞಾನಿ ಸನತ್ಸುಜಾತ ಮುನಿಯ ಭಜಿಸುವ ಕರ್ತವ್ಯ ಭಾವನೆಯಲ್ಲಿ ಅರಸನಿದ್ದಾಗ, ಆ ಕ್ಷಣಕ್ಕೆ ಸನತ್ಸುಜಾತನು ಪ್ರತ್ಯಕ್ಷನಾದನು. (ಸನತ್ಸುಜಾತನು ಬ್ರಹ್ಮನ ನಾಲ್ಕು ಮಾಸಪುತ್ರರಲ್ಲಿ ಒಬ್ಬನು.)
ನೆನೆಯಲೊಡನೆ ಸನತ್ಸುಜಾತನು
ಮನೆಗೆಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು |
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಜನಿತವೆನಲರುಹಿದನು ಪರಲೋಕಸಾಧನವ ||೪||
ಪದವಿಭಾಗ-ಅರ್ಥ:ನೆನೆಯಲು+ ಒಡನೆ ಸನತ್ಸುಜಾತನು ಮನೆಗೆ ಬರಲು+ ಇದಿರೆದ್ದು ಕೌರವಜನಕ (ಧೃತರಾಷ್ಟ್ರ) ಮೈಯಿಕ್ಕಿದನು(ಕಾಲಿಗೆ ಬಿದ್ದನು)+ ಎನಗೆ ಬ್ರಹ್ಮೋಪದೇಶವನು ಮುನಿಪ ನೀ (ನೀನು) ಕೃಪೆಮಾಡಬೇಕು (ಕೊಡಬೇಕು)+ ಎನಲು+ ಅನುನಯದೊಳು (ಪ್ರೀತಿಯಿಂದ)+ ಅವನೀಪತಿಗೆ (ಧೃತರಾಷ್ಟ್ರ) ಜನಜನಜನಿತವೆನಲು (ಎಲ್ಲರಿಗೂ ತಿಳಿಯುವಂತೆ)+ ಅರುಹಿದನು(ಹೇಳಿದನು) ಪರಲೋಕ ಸಾಧನವ.
ಅರ್ಥ:ಹೀಗೆ ಧ್ರತರಾಷ್ಟ್ರನು ಮನಸ್ಸಿನಲ್ಲಿ ನೆನೆಯಲು ಒಡನೆ ಸನತ್ಸುಜಾತನು ಮನೆಗೆ ಬರಲು, ಅವನ ಇದಿರು ಎದ್ದು ಧೃತರಾಷ್ಟ್ರಅವನಕಾಲಿಗೆ ಮೈಯಿಕ್ಕಿದನು. ಅವನು ಮುನಿಗಯನ್ನು ಕುರಿತು ತನಗೆ ಬ್ರಹ್ಮೋಪದೇಶವನ್ನು ಕೃಪೆಮಾಡಬೇಕು ಎನ್ನಲು ಮುನಿಯು ಪ್ರೀತಿಯಿಂದ ಧೃತರಾಷ್ಟ್ರನಿಗೆ ಎಲ್ಲರಿಗೂ ತಿಳಿಯುವಂತೆ ಪರಲೋಕ ಸಾಧನವನ್ನು ಹೇಳಿದನು.

ಸನತ್ಸಜಾತ ಮುನಿಯಿಂದ ಧೃತರಾಷ್ಟ್ರನಿಗೆ ಮೋಕ್ಷಧರ್ಮಬೋಧೆ[ಸಂಪಾದಿಸಿ]

ಚಿತ್ತವಿಸು ಧೃತರಾಷ್ಟ್ರ ನೃಪ ಪರ
ತತ್ವವಿದ್ಯಾವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು |
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||
ಪದವಿಭಾಗ-ಅರ್ಥ:ಚಿತ್ತವಿಸು(ಮನಗೊಟ್ಟು ಕೇಳು) ಧೃತರಾಷ್ಟ್ರ ನೃಪ ಪರ ತತ್ವವಿದ್ಯಾವಿಷಯ ಭೇದವ(ರಹಸ್ಯವನ್ನು ಬಹಿ ರಂಗ ಪಡಿಸುವುದು) ಬಿತ್ತರಿಸುವೆನು(ವಿಸ್ತರಿಸಿ ಹೇಳುವೆನು) ಸಕಲ ಸಚರಾಚರದೊಳಗೆ ನೀನು ಉತ್ತಮ+ ಅಧಮವು+ ಎನ್ನದೇ ಕಾಣುತ್ತ ಹರುಷ ವಿಷಾದದಲಿ ಮುಳುಗುತ್ತಿರದೆ ಸಮರಸದೊಳು+ ಇಹುದು+ ಉಪದೇಶ ನಿನಗೆಂದ
ಅರ್ಥ:ಸನತ್ಸುಜಾನು ಧೃತರಾಷ್ಟ್ರ ನೃಪನಿಗೆ,'ರಾಜನೇ ಮನಗೊಟ್ಟು ಕೇಳು, ಪರ ತತ್ವವಿದ್ಯಾವಿಷಯದ ರಹಸ್ಯವನ್ನು ವಿಸ್ತರಿಸಿ ಹೇಳುವೆನು. ಸಕಲ ಸಚರಾಚರದೊಳಗೆ ನೀನು ಉತ್ತಮ, ಅಧಮವು, ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತ, ಹರ್ಷ - ವಿಷಾದದಲ್ಲಿ ಮುಳುಗುತ್ತಿರದೆ ಸಮರಸದಲ್ಲಿ ಇರುವುದೇ ನಿನಗೆ ನಾನು ಕೊಡುವ ಮುಖ್ಯ ಉಪದೇಶ,'ಎಂದ
ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||
ಪದವಿಭಾಗ-ಅರ್ಥ:ಅವನಿಪತಿ ಕೇಳು+ ಆತ್ಮನಿಂ ಸಂಭವಿಸಿತು(ಹುಟ್ಟಿತು)+ ಅಂಬರವು(ಆಕಾಶ) + ಅಂಬರದಲಿ+ ಪವನ(ವಾಯು), ಆ ಪವನನಲಿ+ ಅಗ್ನಿ, ಅಗ್ನಿಯಲಿ+ ಆದುದು+ ಆ ಭುವನ (ನೀರು, ಜಗತ್ತು, ಪ್ರಪಂಚ), ಭುವನದಿಂ- ನೀರಿನೀದ, ಧರೆ(ಭೂಮಿ), ಧರಣಿಯಿಂದ+ ಉದ್ಭವಿಸಿತು+ ಓಷಧಿ (ಸಸ್ಯ) ಓಷಧಿಗಳಿಂದ+ ಅವತರಿಸಿತು+ ಆದಿಪುರುಷ, ಪ್ರಕೃತಿ, ವಿಕೃತಿಗಳು,(೧. ಪಂಚ ಭೂತಗಳು : ೧.ಪೃಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ.)
ಅರ್ಥ:ಮುನಿಯು,'ರಾಜನೇ ಕೇಳು ಆತ್ಮನಿಂದ ಆಕಾಶವು ಹುಟ್ಟಿತು, ಅಂಬರಿಂದ ಪವನ ಅಥವಾ ವಾಯು ಹುಟ್ಟಿತು. ಆ ಪವನದಲ್ಲಿ ಅಗ್ನಿ, ಅಗ್ನಿಯಲ್ಲಿ ಆ ಭುವನ- ನೀರು,(ಆಪ) ಹುಟ್ಟಿತು, ನೀರಿನಿಂದ, ಧರೆ(ಭೂಮಿ), ಧರೆ- ಧರಣಿಯಿಂದ ಓಷಧಿ (ಸಸ್ಯ)ಉದ್ಭವಿಸಿತು, ಓಷಧಿಗಳಿಂದ ಅವತರಿಸಿತು+ (ಆ)ಅನಾದಿಪುರುಷ, ಪ್ರಕೃತಿ, ವಿಕೃತಿಗಳು.
ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ |
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||
ಪದವಿಭಾಗ-ಅರ್ಥ:ನೇತ್ರ ನಾಸಿಕ ಪಾದ ಪಾಣಿ ಶೋತ್ರವೆಂಬ+ ಇವು (ಕಣ್ಣು, ಮೂಗು, ಕಾಲು-ಕೈ, ಕಿವಿ)ತಮ್ಮೊಳು+ ಒಂದೇ ಸೂತ್ರದಲಿ ಸಂಸೃಷ್ಟವಾಗಿ ಸಮಾನ ಬುದ್ಧಿಯಲಿ ಗಾತ್ರವಿಡಿದಿಹವೋಲು (ಹೊಂದಾಣಿಕೆಯಲ್ಲಿ ಇರುವಂತೆ) ವಿಶ್ವದ ಮೈತ್ರಿಯಲಿ ಮನಸಂದು(ಕೊಟ್ಟು) ಪಾತ್ರ+ ಅಪಾತ್ರವೆನ್ನದೆ (ಯೋಗ್ಯ- ಅಯೋಗ್ಯ ಎನ್ನದೆ) ಬೆರಸಿ (ಸಹಚರಿಸಿ) ಬದುಕುವುದು+ ಅಧಿಕ ಗುಣವು+ ಎಂದ.
ಅರ್ಥ:ಮುನಿಯು,' ರಾಜನೇ, ಕಣ್ಣು, ಮೂಗು, ಕಾಲು-ಕೈ, ಕಿವಿ, ಇವು ತಮ್ಮಲ್ಲಿ ಒಂದೇ ಸೂತ್ರದಲ್ಲಿ ಸಂಸೃಷ್ಟವಾಗಿ ಸಮಾನ ಬುದ್ಧಿಯಲಿ- ಪರಸ್ಪರ ಸಹಕರಿಸಿಕೊಂಡು ತಮ್ಮ ಶಕ್ತಿಯ ಅನುಸಾರ ಹೊಂದಾಣಿಕೆಯಲ್ಲಿ ಇರುವಂತೆ, ವಿಶ್ವದ ಮೈತ್ರಿಯಲಿ ಮನಸ್ಸು ಕೊಟ್ಟು ಪಾತ್ರ ಅಪಾತ್ರವೆನ್ನದೆ ಉತ್ತಮ ಕನಿಷ್ಠ ಎನ್ನದೆ ಸಹಚರಿಸಿ ಬದುಕುವುದು ಉತ್ತಮ ಗುಣವು,'ಎಂದ.
ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ |
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||
ಪದವಿಭಾಗ-ಅರ್ಥ:ಸೃಷ್ಟಿ ಸಂಹಾರದಲಿ ಭೂತದ (ಜೀವಿಗಳ, ಜಗತ್ತಿನ ಪ್ರಾಣಿವರ್ಗ, ಚರಾಚರಾತ್ಮಕ ಜೀವರಾಶಿ) ಕಟ್ಟಳೆಗಳ ಗತಾಗತಿಗಳಲಿ (ಗತ- ಆಗಿದ್ದು- ಹಿಂದಿನದು, ಆಗುತ್ತಿರುವುದು) ಮುಟ್ಟಿಸಿದ(ತಿಳಿದ) ವಿದ್ಯೆಯಲಿ+ ಅವಿದ್ಯೆಯಲಿ (ಜ್ಞಾನ ಅಜ್ಞಾನದಲ್ಲಿ)+ ಅಪ್ರತಿಮನು+ ಎನಿಸಿ ನಷ್ಟಿಯಲಿ(ನಷ್ಟದಲ್ಲಿ) ತುಷ್ಟಿಯಲಿ (ಅಧಿಕ ಲಾಭ) ಮನವನು ಬಿಟ್ಟು(ತೊಡಗಿಸಿ) ಹಿಡಿಯದೆ, ಕಾಲಕರ್ಮವ ಮೆಟ್ಟಿ (ಮೀರಿ) ನಿಲೆ (ನಿಲ್ಲಲು) ಭಗವಂತನು+ ಎನಿಸುವೆ ರಾಯ ಕೇಳೆಂದ
ಅರ್ಥ:ಮುನಿಯು,'ರಾಜನೇ, ಸೃಷ್ಟಿ ಸಂಹಾರದಲಿ ಜೀವಿಗಳ- ಜಗತ್ತಿನ ಪ್ರಾಣಿವರ್ಗ, ಚರಾಚರಾತ್ಮಕ ಜೀವರಾಶಿಗಳ ಕಟ್ಟಳೆಗಳಲ್ಲಿ ಆಗಿಹೋಗಿರುವ-ಆಗುತ್ತಿರುವ ಘಟನೆಗಳ ಅರಿತ ಜ್ಞಾನ ಅಜ್ಞಾನಗಳಲ್ಲಿ ಅಪ್ರತಿಮನು ಎನಿಸಿಕೊಂಡು ನಷ್ಟದಲ್ಲಿ- ಮತ್ತು ಅಧಿಕ ಲಾಭದಲ್ಲಿ ಮನವನ್ನು ತೊಡಗಿಸಿಕಕೊಂಡು ಅದರಲ್ಲೇ ಹಿಡಿದಿರದೆ, ಕಾಲಕರ್ಮವಗಳನ್ನು ಮೆಟ್ಟಿ ನಿಲ್ಲಲು ನೀನೇ ಭಗವಂತನು ಎನಿಸುವೆ, (ಸೋಹಂ, ಸಃ- ಅವನೇ, ಅಹಂ- ನಾನು) ಕೇಳು,'ಎಂದ.
ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ಪ್ರಕಟಿತ ಪರಿವಿಡಿಯ |
ಕುಣಿಕೆಗಳಲಿ ವಶಿತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||
ಪದವಿಭಾಗ-ಅರ್ಥ:ಅಣುವಿನಲಿ ಲಘುವಿನಲಿ (ಚಿಕ್ಕದು ಅಲ್ಪದ್ದು) ಗುರುವಿನ(ದೊಡ್ಡದು) ಯೆಣಿಕೆಯಲಿ(ಎಣಿಕೆ- ಆಲೋಚನೆ, ಯೋಚನೆ, ತಿಳಿವಳಿಕೆ, ಊಹೆ) ಮಹಿಮೆಯಲಿ ಪ್ರಾಪ್ತಿಯ ಭಣಿತೆಯಲಿ(ಮಾತು, ಹೇಳಿಕೆ; ವಕ್ರೋಕ್ತಿ) ಶೀಲತ್ವದಲಿ (ಪರಿಶುದ್ಧ ಗುಣ) ಪ್ರಕಟಿತ ಪರಿವಿಡಿಯ ಕುಣಿಕೆಗಳಲಿ(ಪಾಶದಲ್ಲಿ), ವಶಿತ್ವದಲಿ, ವೆಂಟಣಿಸಿ(ಆಕ್ರಮಿಸು, ವ್ಯಾಪಿಸು, ಆವರಿಸು) ರೇಚಕ ಪೂರಕದ (ಪ್ರಾಣಾಯಾಮದಲ್ಲಿ ಉಸಿರು ಬಿಡುವುದು ತೆಗೆದುಕೊಳ್ಳುವುದು) ರಿಂಗಣವನು(ಚಲನೆ)+ ಅರಿವುದು ಯೋಗಸಿದ್ಧಿಗೆ ಲಕ್ಷಣವನು+ ಎಂದ.
ಅರ್ಥ:ಚಿಕ್ಕದು ಅಲ್ಪವಾದುದು ಆಗಿರಲಿ, ದೊಡ್ಡದರ ಆಲೋಚನೆ, ಮಹಿಮೆಯಲಿ ಪ್ರಾಪ್ತಿಯ ಮಾತುಗಳಲ್ಲಿ, ಶೀಲತ್ವದಲಿ - ಪರಿಶುದ್ಧ ಗುಣದಲ್ಲಿ ಯಾ ಪ್ರಕಟಿತ ಕಾಣುವ ವಸ್ತುಗಳ ಪಾಶದಲ್ಲಿ ಸಿಲುಕದೆ, ಮೂಲ ತತ್ತ್ವವನ್ನು ವಶಮಾಡಿಕೊಳ್ಳಲು ಸತತ ಪ್ರಯತ್ನಿಸಿ ರೇಚಕ ಪೂರಕದ ಚಲನೆಯನ್ನು ಅರಿಯುವುದು ಯೋಗಸಿದ್ಧಿಗೆ ಲಕ್ಷಣವಾಗಿದೆ,'ಎಂದ.
ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು }
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||೧೦||
ಪದವಿಭಾಗ-ಅರ್ಥ:ತ್ಯಜಿಸುವುದು ದುಸ್ಸಂಗವನು, ನೀ ಸೃಜಿಸುವುದು ಸತ್ಸಂಗವನು, ಗಜಬಜಿಸದಿರು+ ಅಹೋರಾತ್ರಿಯಲಿ, ಧರ್ಮವನೆ ಸಂಗ್ರಹಿಸು, ಭಜಿಸು ನಿತ್ಯಾನಿತ್ಯವಸ್ತುವ ವಿಜಯನು+ ಅಹೆ(ಆಗುವೆ) ಇಹಪರಕೆ, ತತ್ವದ ನಿಜವು+ ಇದೆಲೆ ಧೃತರಾಷ್ಠ್ರ ಚಿತ್ತೈಸು+ ಎಂದನಾ ಮುನಿ.
ಅರ್ಥ:ಮುನಿಯು ಧೃತರಾಷ್ಠ್ರ ಚಿತ್ತೈಸು- ಕೇಳು,'ದುಸ್ಸಂಗವನ್ನು ಬಿಡಬೇಕು; ನೀನು ಸತ್ಸಂಗವನ್ನು ಸಂಪಾದಿಸಬೇಕು; ಅಹೋರಾತ್ರಿಯಲ್ಲಿಯೂ ಗೊಂದಲಕ್ಕೆ ಒಳಗಾಗದೆ ಇರು; ಧರ್ಮವನ್ನೇ ಸಂಗ್ರಹಿಸು- ಧರ್ಮಕಾರ್ಯಗಳನ್ನು ಮಾಡು; ಪರವಸ್ತುವನ್ನು ಭಜಿಸು- ನೆನೆ; ಆಗ ನೀನು ನಿತ್ಯಾನಿತ್ಯವಸ್ತುವನ್ನು ಅರಿತು ವಿಜಯಿಯಾಗುವೆ. ಇಹಕ್ಕೂ, ಪರಕ್ಕೂ, ಸಾಧನವಾದ ತತ್ವದ ನಿಜಸ್ಥತಿಯು ಇದೇ ಆಗಿದೆ,' ಎಂದನು ಆ ಮುನಿ.
ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯಾರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||
ಪದವಿಭಾಗ-ಅರ್ಥ:ಕಾಯವು+ ಇದು (ಈ ದೇಹವು) ನೆಲೆಯಲ್ಲ(ಶಾಶ್ವತ ಅಲ್ಲ) ಸಿರಿ ತಾ ಮಾಯಾರೂಪಿನ(ಸಂಪತ್ತು ಮಾಯೆ) ಮೃತ್ಯುದೇವತೆ ಬಾಯ ಬಿಡುತಿಹಳು+ ಆವುದು+ ಈತನ ಕಾಲಗತಿಯೆಂದು ದಾಯವ+ ಅರಿದು(ರೀತಿ; ಪಾಲು; ಸಮಯ, ಸಂದರ್ಭ- ತಿಳಿದು) ಮಹಾತ್ಮರು+ ಇದಕೆ ಸಹಾಯ ಧರ್ಮವ ರಚಿಸುವುದು ನಿರ್ದಾಯದಲಿ(ವಿಭಾಗವಿಲ್ಲದ,ಸಂಪೂರ್ಣ. ಸುಲಭ.) ಕೈಸೂರೆಗೊಂಬುದು(ಪಡೆಯುವುದು) ಮುಕುತಿರಾಜ್ಯವನು (ಮುಕ್ತಿಯನ್ನು).
ಅರ್ಥ:ಮುನಿಯು ಹೇಳಿದ,'ರಾಜನೇ ಈ ದೇಹವು ಶಾಶ್ವತ ಅಲ್ಲ. ಶ್ರೀ ಸಂಪತ್ತು ತಾನು ಮಾಯಾ ರೂಪಿನದು,- ಸಂಪತ್ತು ಮಾಯೆ; ಮೃತ್ಯುದೇವತೆಯು- ಸಾವು ಕಾಯುತ್ತಿದೆ. ಈತನ(ತನ್ನ) ಕಾಲಗತಿಯು ಯಾವುದೋ ಎಂದು ಸಮಯವನ್ನು ತಿಳಿದು ಮಹಾತ್ಮರು, ಇದು- ಈ ಜಗತ್ತು ಅಶಾಶ್ವತ; ಇದಕ್ಕಾಗಿ ಸಹಾಯ ಧರ್ಮವನ್ನು (ಪರೋಪಕಾರ) ಅನಸರಿಸುವರು. ಈ ಮಾರ್ಗದಿಂದ ಸಂಪೂರ್ಣವಾಗಿ ಸುಲಭವಾಗಿ ಮುಕ್ತಿಯೆಂಬ ರಾಜ್ಯವನ್ನು ಕೈವಶಮಾಡಿಕೊಳ್ಳಬೇಕು- ಪಡೆಯಬೇಕು.
ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ |
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||
ಪದವಿಭಾಗ-ಅರ್ಥ:ಕೆಟ್ಟ ಮಾರ್ಗದಲಿ+ ಇಂದ್ರಿಯಂಗಳ ಚಿಟ್ಟುಮುರಿಯಾಟದಲಿ (ಅಟ್ಟಿಸಿಕೊಂದು ಹೋಗಿ ಮುಟ್ಟಾಟ/ಲಟಿಕೆ ಮುರಿತ, ಬೇಸರವಾಗು, ಜುಗುಪ್ಸೆಯಾಗು; ಹಟಹಿಡಿದು ಬಯಸುವ ಬೇಸರಿಸುವ ಸ್ವಭಾವದಲ್ಲಿ) ಮನ ಸಂದಷ್ಟವಾಗಿಯ(ಕಚ್ಚಿದ,) ನಿತ್ಯಸಂಸಾರದ ಸುಖಕ್ಕೆ+ ಎಳಸಿ(ಪ್ರಯತ್ನಿಸಿ) ಹುಟ್ಟು ಸಾವಿನ ವಿಲಗದಲಿ( ತೊಂದರೆ, ಕಷ್ಟ) ಕಂಗೆಟ್ಟು ನಾನಾ ಯೋನಿಯಲಿ ತಟಗುಟ್ಟಿ (ಬಿದ್ದು ತೊಟ್ಟಿಕ್ಕು)ಬಳಲುವುದು+ ಉಚಿತವೇ ಭೂಪಾಲ ಕೇಳು+ ಎಂದ
ಅರ್ಥ:ಮುನಿಯು,'ರಾಜನೇ ಕೆಟ್ಟ ಮಾರ್ಗದಲ್ಲಿ ಹೋಗಿ ಇಂದ್ರಿಯಂಗಳ ಮುಟ್ಟಾಟದ ಸಂತಸದಲ್ಲಿ ಮುಳುಗಿ, ಹಟಹಿಡಿದು ಬಯಸುವ ಬೇಸರದ ಸ್ವಭಾವದಲ್ಲಿ ಮನಸ್ಸು ಗಟ್ಟಿಯಾಗಿ ಸಿಕ್ಕಿಕೊಂಡು, ನಿತ್ಯಸಂಸಾರದ ಸುಖಕ್ಕೆ ಪ್ರಯತ್ನಿಸಿ ಹುಟ್ಟು ಸಾವಿನ ತೊಂದರೆಯಲ್ಲಿ ಕಂಗೆಟ್ಟು ನಾನಾ ಯೋನಿಯಲಿ(ಜೀವಿಗಳಲ್ಲಿ ಜನ್ಮ ಎತ್ತಿ) ಬಿದ್ದು ಬಳಲುವುದು ಉಚಿತವೇ? ಕೇಳು,' ಎಂದ.
ಹಲವು ವರ್ಣದೊಳೆಸೆವ ಗೋ ಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ |
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||
ಪದವಿಭಾಗ-ಅರ್ಥ:ಹಲವು ವರ್ಣದೊಳು ಎಸೆವ(ತೋರುವ ) ಗೋಸಂಕುಲದೊಳು+ ಒಂದೇ ವರ್ಣದಲಿ ಕಂಗೊಳಿಸುವ (ಚಂದಕಾಣುವ)+ ಈ ಕ್ಷೀರಾಮೃತವು ಮೈಗೊಂಡು ತೋರ್ಪಂತೆ, ಹೊಲಬುಗೆಟ್ಟ (ದಾರಿಗೆಟ್ಟ- ಗೊತ್ತುಗುರಿ ಇಲ್ಲದ)ಚರಾಚರಂಗಳ ಸುಳಿವುನಲಿ (ಚರಾಚರಂಗಳ ಸುಳಿವುನಲಿ( ಸಜೀವ ನಿರ್ಜೀವಾದ ತೋರುವ ವಸ್ತುಗಳಲ್ಲಿ, ಗುರುತು, ಕುರುಹು, ಜಾಡು) ಸುಳಿದು(ಕಾಣಿಸಿಕೊಂಡು)+ ಅಡಗಿ ಕಡೆಯಲಿ ನಿಲುವ ನಿಜವೊಂದು+ ಅಲ್ಲದೆ+ ಎರಡಿಲ್ಲ+ ಎಂದನು+ ಆ ಮುನಿಪ
ಅರ್ಥ:ಆ ಮುನಿಪನು,'ರಾಜನೇ, ಹಲವು ಬಣ್ಣದಲ್ಲಿ ತೋರುವ ಗೋವಿನ ಸಂಕುಲಗಳಲ್ಲಿ ಅವು ಕೊಡುವ ಒಂದೇ ಬಣ್ನದಲ್ಲಿ ಕಂಗೊಳಿಸುವ ಈ ಕ್ಷೀರಾಮೃತವು- ಹಾಲು ಬಿಳಿಬಣ್ಣದಲ್ಲಿ ಮೈಗೊಂಡು ತೋರುವಂತೆ, ಈ ಜಗತ್ತಿನ ಗೊತ್ತುಗುರಿ ಇಲ್ಲದ ಸಜೀವ ನಿರ್ಜೀವಾದ ತೋರುವ ವಸ್ತುಗಳಲ್ಲಿ, ಸುಳಿದು- ಕಾಣಿಸಿಕೊಂಡು ಮತ್ತು ಅಡಗಿ ಕಡೆಯಲ್ಲಿ ನಿಲ್ಲುವ ನಿಜವು "ಒಂದೇ" ಅಲ್ಲದೆ ಎರಡಿಲ್ಲ,'ಎಂದನು. (ಏಕಮೇವಾದ್ವಿತೀಯ - ತತ್ತ್ವ; ಏಕಂ ಸತ್ಯಂ ವಿಪ್ರಾಃ ಬಹುದಾ ವದಂತಿ)
ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ |
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||
ಪದವಿಭಾಗ-ಅರ್ಥ:ಅತಿಶಯದ ಸುಕೃತವನು ವಿರಚಿಸಿ(ಪುಣ್ಯಕಾರ್ಯಗಳನ್ನು ಮಾಡಿ) ಗತಿವಡೆದು(ಉತ್ತಮ ಗತಿ ಪಡೆದು) ಸ್ವರ್ಗಾದಿ ಭೋಗ+ ಉನ್ನತಿಕೆಯನು ಭೋಗಿಸಿದ- ಸಮನಂತರದೊಳು+ ಅವನಿಯಲಿ ಪತನ(ಭೂಮಿಗೆ ಬೀಳುವುದು, ಭೂಮಿಯಲ್ಲಿ ಪುನಃ ಹುಟ್ಟುವುದು) ತಪ್ಪದು, ಮರಳಿ ಬಾರದ (ಪುನಃ ಜನನ ಮರಣಗಳಿರುವ ಭೂಮಿಯಲ್ಲಿ ಜನಿಸದ) ಗತಿಯನು+ ಅರಿದು (ಅರಿತು) ಮಹಾನುಭಾವರ (ಜ್ಞಾನಿಗಳ) ಮತವಿಡಿದು (ಅಭಿಪ್ರಾಯ ಹಿಡಿದು) ನಡೆವುದು ನಯವು(ವಿವೇಕ, ಯೋಗ್ಯವು) ಕೇಳು+ ಎಂದನು+ ಆ ಮುನಿಪ
ಅರ್ಥ:ಆ ಸನತ್ಸುಜಾತ ಮುನಿಪನು,'ರಾಜನೇ, ಅತಿಶಯದ ಸುಕೃತವಾದ ಪುಣ್ಯಕಾರ್ಯಗಳನ್ನು ಮಾಡಿ ಉತ್ತಮ ಗತಿ ಪಡೆದು ಸ್ವರ್ಗ ಮೊದಲಾದ ಭೋಗದ ಉನ್ನತಿಕೆಯನ್ನು - ಹೆಚ್ಚಿನ ಸುಖವನ್ನು, ಭೋಗಿಸಿದ ನಂತರದಲ್ಲಿ ಮತ್ತೆ ಮತ್ತೆ ಭೂಮಿಗೆ ಬೀಳುವುದು- ಭೂಮಿಯಲ್ಲಿ ಪುನಃ ಹುಟ್ಟುವುದು, ಸುಖ ದುಃಖ ಪಡೆಯುವುದು ತಪ್ಪದು. ಪುನಃ ಜನನ ಮರಣಗಳಿರುವ ಭೂಮಿಯಲ್ಲಿ ಜನಿಸದೇ ಇರುವ ಗತಿಯನ್ನು ಅರಿತು ಮಹಾನುಭಾವರಾದ ಜ್ಞಾನಿಗಳ ಅಭಿಪ್ರಾಯವನ್ನು ಹಿಡಿದು- ಅನುಸರಿಸಿ ನಡೆಯುವುದು ವಿವೇಕ ಮತ್ತು ಯೋಗ್ಯವು, ಕೇಳು,'ಎಂದನು.
ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ |
ಯುಕುತಿಯಿಂದದಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||
ಪದವಿಭಾಗ-ಅರ್ಥ:ಸಕಲ ಧರ್ಮದ ಸಾರವನು, ಮತಿ ವಿಕಳನಾಗದೆ (ಬುದ್ಧಿ ಭ್ರಮೆ, ಭ್ರಾಂತಿಗೊಳಗಾಗದೆ), ಚಿತ್ತವಿಸು (ಕೇಳು) ಬಾಧಕವು (ತೊಂದರೆ)+ ಅದು+ ಆವುದು ನಿನಗೆ+ ಅದನು ನೀನು+ ಅನ್ಯರುಗಳಲ್ಲಿ ಯುಕುತಿಯಿಂದ+ ಅದ ಮಾಡದಿರು; ನಿರ್ಮುಕುತನು+ ಅಹೆ; ಸಂಸಾರದಲಿ ಸಾಧಕವು+ ಇದೊಂದೇ ಸಕಲ ಜನಮತವು+ ಎಂದನು+ ಆ ಮುನಿಪ.
ಅರ್ಥ:ಆ ಮುನಿಯು,'ಸಕಲ ಧರ್ಮದ ಸಾರವನ್ನು, ಬುದ್ಧಿಯ ಭ್ರಾಂತಿಗೊಳಗಾಗದೆ ಕೇಳು; ಮುಕ್ತಿಗೆ ನಿನಗೆ ಅಡ್ಡಿ ಬರುವುದು ಅದು ಯಾವುದು, ನಿನಗೆ ಬೇರೆಯವರು ಯಾವುದನ್ನು ಮಾಡಬಾದೆಂದು ಬಯಸುವಿಯೋ, ಅದನ್ನು ನೀನು, ನಿನ್ನ ಯುಕ್ತಿಯಿಂದ- ವಿವೇಚನೆಯಿಂದ ತಿಳಿದು ಅದನ್ನು ನೀನು ಬೇರೆಯವರಿಗೆ ಮಾಡದಿರು; ಆಗ ನಿರ್ಮುಕ್ತನು ಆಗುವೆ; ಸಂಸಾರದಲಿ ಸಾಧಕವು ಇದೊಂದೇ, ಇದು ಸಕಲ ಜನರ ಅಭಿಪ್ರಾಯ,'ಎಂದನು.
ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ |
ದಂದುಗಂಬಡುತಿಹುದು ತತ್ವದ
ಹಿಂದುಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||
ಪದವಿಭಾಗ-ಅರ್ಥ:ಒಂದು ವಸ್ತುವನು+ ಎರಡು ಮಾಡುವೆನೆಂದು ಬುದ್ಧಿ ಭ್ರಾಂತಿಯಲಿ ಮನಸಂದು(ಮನಸ್ಸುಕೊಟ್ಟು) ಸಮ್ಯಗ್ಜ್ಞಾನದ+ ಉದಯದ ನೆಲೆಯ ಕಾಣಿಸದೆ ದಂದುಗಂ (ತೊಂದರೆ, ಕಷ್ಟ, ಕೋಟಲೆ) ಬಡುತಿಹುದು ತತ್ವದ ಹಿಂದುಮುಂದೆ(ಸರಿಯಾದ ಜ್ಞಾನ)+ ಅರಿಯದೆ ಮಹಾತ್ಮರು ಬಂದ ಪಥದಲಿ(ದಾರಿಯಲ್ಲಿ) ಬಾರದೇ ಕೆಡುತಿಹುದು ಜಗವೆಂದ(ಜಗ- ಜಗತ್ತಿನ ಜನ)
ಅರ್ಥ:ಮುನಿಯು ಕುರುರಾಜನಿಗೆ,'ತನ್ನಲ್ಲಿರುವ ಒಂದು ವಸ್ತುವನ್ನು ಎರಡು, ಅಥವಾ ಹೆಚ್ಚು ಮಾಡುವೆನೆಂಬ ಆಸೆಯಿಂದ ಬುದ್ಧಿಭ್ರಾಂತಿಗೆ ಮನಸ್ಸುಕೊಟ್ಟು ಸಮ್ಯಗ್ಜ್ಞಾನ- ಸರಿಯಾದ ಜ್ಞಾನದ ಉದಯದ- ನೆಲೆಯನ್ನು ಕಾಣದೆ ಜನರು ತೊಂದರೆ ಕಷ್ಟಗಳನ್ನು ಅನುಭವಿಸುತ್ತಿರುವರು. ತತ್ವದ ಹಿಂದುಮುಂದೆ ಅರಿಯದೆ, ಜನರು ಮಹಾತ್ಮರು ಬಂದ ದಾರಿಯಲ್ಲಿ ಬಾರದೇ ಜಗತ್ತು ಕೆಡುತ್ತಿರುವುದು,' ಎಂದನು.
ಪ್ರಣವದೊಂದಾ ವರ್ಣಮೂರರ
ಗುಣವಿಡಿದು ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು |
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||
ಪದವಿಭಾಗ-ಅರ್ಥ:ಪ್ರಣವದ+ ಒಂದು+ ಆ ವರ್ಣಮೂರರ(ವರ್ಣ- ಅಕ್ಷರ; ಅಕಾರ, ಉಕಾರ, ಮಕಾರ) ಗುಣವಿಡಿದು(ಹಿಡಿದು) ತೋರುವ ಚರಾಚರವ+ ಎಣಿಸಬಾರದು(ಎಣಿಸಲು ಸಾಧ್ಯವಿಲ್ಲ) ವಿಶ್ವದಲಿ ನಿಸ್ಯೂತವಾಗಿಹುದು(ಕೂಡಿಕೊಂಡಿರುವ) ಹಣಿದು(ಹಣಿ(ಕ್ರಿ). ಹೊಡೆ ಸಾಯಿಸುನಾಶವಾಗಿ) ಬೀಳಲು, ಹೊಳೆವ ಜ್ಯೋತಿರ್ಗಣದವೊಲು ತೊಳತೊಳಗಿ ಬೆಳಗುವ ಗುಣರಹಿತನ ನಿಜಸ್ವರೂಪವು+ ಇದು+ ಎಂದನಾ ಮುನಿಪ.
  • ಟಿಪ್ಪಣಿ:ಭಗವದ್ಗೀತೆ:ಎಂಟನೇ ಅಧ್ಯಾಯ: ಅಕ್ಷರ ಬ್ರಹ್ಮ ಯೋಗ:ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ । ಅಧಿಯಜ್ಞೋsಹಮೇವಾತ್ರ ದೇಹೇ ದೇಹಭೃತಾಂ ವರ ॥೪||
ಪ್ರಾಣಿಗಳಿಗೆ ಸಂಬಂಧಿಸಿದ ನಶ್ವರಭಾಗವೇ - ಎಂದರೆ ದೇಹವೇ ಅಧಿಭೂತವು. ಪುರುಷನೇ ಅಧಿದೈವತ. ದೇಹಧಾರಿಗಳಲ್ಲಿ ಉತ್ತಮವಾದ ಅರ್ಜುನ, ಈ ದೇಹದಲ್ಲಿ ನೆಲೆಸಿರುವ ವಿಷ್ಣುವಾದ ನಾನೇ ಅಧಿಯಜ್ಞನಾಗಿದ್ದೇನೆ.
ಅರ್ಥ:ಮುನಿಯು ಓಂ ಕಾರದ ತತ್ತ್ವವನ್ನು ಹೇಳಿದನು,'ಒಂದು ಓಂಕಾರವೆಂಬ ಪ್ರಣವದ- ಆ ಮೂರು ಅಕ್ಷರವಾದ, ಅಕಾರ, ಉಕಾರ, ಮಕಾರಗಳ ಗುಣವನ್ನು ಹಿಡಿದು ಅಧಿಭೂತ, ಅಧಿದೈವ,ಅಧಿಯಜ್ಞ (ಅಧ್ಯಾತ್ಮ) ಇವನ್ನು ಅರಿತು, ಹೊರಗೆ ತೋರುವ ಚರಾಚರವನ್ನು(ಅಧಿಭೂತ) ಎಣಿಸಲು ಸಾಧ್ಯವಿಲ್ಲ. ಅದು ವಿಶ್ವದಲ್ಲಿ ನಿಸ್ಯೂತವಾಗಿರುವುದು(ಕೂಡಿಕೊಂಡಿರುವುದು); ಅದನ್ನು ಜ್ಞಾನದಿಂದ ನಾಶಮಾಡಿದಾಗ ಅದು ಬೀಳಲು (ಹೊರ ಜಗತ್ತು ಕಾಣದಂತಾಗಲು), ಹೊಳೆಯುವ ಜ್ಯೋತಿರ್ಗಣದಂತೆ ತೊಳತೊಳಗಿ- ಪ್ರಕಾಶಮಾನವಾಗಿ ಬೆಳಗಿ ತೋರುವದೇ ಗುಣರಹಿತನಾದ ಪರಮಾತ್ಮನ ನಿಜಸ್ವರೂಪವು ಇದು,' ಎಂದನು.
ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗಿ
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಿಯನು |
ಕಳೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||
ಪದವಿಭಾಗ-ಅರ್ಥ:ನಳಿನಮಿತ್ರನು (ಕಮಲದ ಮಿತ್ರ; ಸೂರ್ಯ) ಪಶ್ಚಿಮಾಂಬುಧಿಗೆ+ ಇಳಿಯೆ ನಾನಾ ಪಕ್ಷಿಜಾತಿಗಿಳ+ ಉಲಿವುವು+ ಐತಂದು+ ಒಂದು ವೃಕ್ಷವನೇರಿ ರಾತ್ರಿಯನು ಕಳೆದು ನಾನಾ ದೆಸೆಗೆ ಹರಿವವೊಲು+ ಇಳೆಯ(ಭೂಮಿಯ) ಭೋಗದ ದೃಷ್ಟಿ ತೀರಿದ ಬಳಿಕ ಲೋಕಾಂತರವನು+ ಐಯ್ದುವರು+ ಏಂದನು+ ಆ ಮುನಿಪ.
ಅರ್ಥ:ಸೂರ್ಯನು ಪಶ್ಚಿಮ ಸಮುದ್ರದಲ್ಲಿ ಇಳಿಯಲು, ಸೂರ್ಯನು ಮುಳುಗಿ ಕತ್ತಲಾಗಲು, ನಾನಾ ಪಕ್ಷಿಜಾತಿಗಿಳು ಉಲಿಯತ್ತಾ- ಕೂಗುತ್ತಾ ಬಂದು, ಒಂದು ವೃಕ್ಷವನ್ನು ಏರಿ ರಾತ್ರಿಯನ್ನು ಕಳೆದು ಬೆಳಗಾಗಲು ನಾನಾ ದಿಕ್ಕಿಗೆ ಹಾರಿಹೋಗುವಂತೆ, ಈ ಭೂಮಿಯ ಭೋಗದ ದೃಷ್ಟಿ ತೀರಿದ ಬಳಿಕ ಜನರು ಲೋಕಾಂತರವನ್ನು ಹೊಂದುವರು ಏಂದನು- ಆ ಮುನಿಪ.
ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು |
ಮಡದಿ ಮಾಡಿದ ಪಾತಖವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||
ಪದವಿಭಾಗ-ಅರ್ಥ:ಪೊಡವಿಯೊಳಗೆ+ ಉದಯಿಸಿದ ದುಷ್ಕೃತ(ಕೆಟ್ಟಕೆಲಸ) ಬಿಡದು, ಭೂಪರನು(ರಾಜರನ್ನೂ )+ ಅದು(ಕೆಟ್ಟಕರ್ಮ ಪಲವು) ಪುರೋಹಿತರ+ ಎಡೆಗೆ ಬಳಿಕ+ ಆ ಮೂರ್ಖ ಶಿಷ್ಯನ ದೋಷ ಗುರುವಿನದು, ಮಡದಿ ಮಾಡಿದ ಪಾತಕವು ಪತಿಗೆ+ ಒಡಲಹುದು (ಪತ್ನಿಯ ಪಾಪವು ಪತಿಗೆ ದೇಹವಾಗಿರುವುದು- ಆವರಿಸುವುದು) ಪರಮಾರ್ಥವು+ ಇದು ಪರಿವಿಡಿಯನು(ನಿಯತವಾದ ಕ್ರಮವನ್ನು ಹಿಡಿ)+ ಅರಿಯದೆ ಕೆಡುವುದು+ ಈ ಜಗವು+ ಎಂದನು+ ಆ ಮುನಿಪ.
ಅರ್ಥ:ಮುನಿಯು,'ರಾಜನೇ ಭೂಮಿಯಲ್ಲಿ ಹುಟ್ಟಿ ಪಡೆದ ದುಷ್ಕೃತ ಕರ್ಮಫಲವು ರಾಜರನ್ನೂ ಬಿಡುವುದಿಲ್ಲ- ಅನುಭವಿಸಲೇ ಬೇಕು. ಅಲ್ಲದೆ ಕೆಟ್ಟಕರ್ಮ ಪಲವು ಬಳಿಕ ರಾಜನಿಗೆ ಮಾರ್ಗದರ್ಶನ ಮಾಡುವ ಪುರೋಹಿತರ ಕಡೆಗೆ ಹೋಗುವುದು. ತಪ್ಪು ಮಾಡಿದ ಮೂರ್ಖ ಶಿಷ್ಯನ ದೋಷ ಗುರುವಿನದು ಆಗುವುದು. ಅದೇ ರೀತಿ, ಮಡದಿ ಮಾಡಿದ ಪಾತಕವು- ಕೆಟ್ಟ ಕೆಲಸವು ಪತಿಗೆ ಆವರಿಸುವುದು. ಇದು ತಿಳಿಯಬೇಕಾದ ಪರಮಾರ್ಥವು. ಆದ್ದರಿಂದ ರಾಜನೇ ನೀನು ನಿಯತವಾದ ಕ್ರಮವನ್ನು ಹಿಡಿ. ಈ ತತ್ತ್ವವನ್ನು ಅರಿಯದೆ ಈ ಜಗವು ಕೆಡುತ್ತಿದೆ.' ಎಂದನು.
ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು |
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಜೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||
ಪದವಿಭಾಗ-ಅರ್ಥ:ದುರ್ಜನರಿಗೆ+ ಅಂಜುವುದು ಲೋಕವು(ಜನರು) ಸಜ್ಜನರ ಲೆಕ್ಕಿಸದು; ತಾರ್ಕ್ಷ್ಯನ(ಗರುಡ) ಸೆಜ್ಜೆಯೊಳಗೆ (ಅಂತ್ಃಪುರ)+ ಇಹ (ಇರುವ) ದಂದಶೂಕನನು (ಸರ್ಪ,ಹಾವು)+ ಅರ್ಚಿಸುವರು(ಪೂಜಿಸುವರು)+ ಒಲಿದು ಉಜ್ಜ್ವಲಿತ( ಹೊಳೆವ, ಅತಿಯಾದ) ಭಕ್ತಿಯಲಿ, ಬಹಳ ವಿತರ್ಜೆಯಲಿ (ಹೆದರಿಕೆಯಿಂದ) ಮೂಢಾತ್ಮರು+ ಇಕ್ಕಿದ (ಹಾಕಿದ) ಹಜ್ಜೆಯಿದು (ದಾರಿ ಇದು), ಲೋಕಕ್ಕೆ ಕೇಳು(ತಿಳಿದುಕೊ) ನೀನು+ ಎಂದನು+ ಆ ಮುನಿಪ
ಅರ್ಥ:ಮುನಿಯು,'ಎಲೈ ರಾಜನೇ, ಲೋಕವು ದುರ್ಜನರಿಗೆ ಅಂಜುವುದು. ಅದರೆ ಸಜ್ಜನರನ್ನು ಲೆಕ್ಕಿಸುವುದಿಲ್ಲ. ಗರುಡನ ಸೆಜ್ಜೆಯೊಳಗೆ ಇರುವ ಅಲ್ಪಾಯು ಸರ್ಪವನ್ನು ಒಲಿದು ಭಯದಿಂದ ಅತಿಯಾದ ಭಕ್ತಿಯಿಂದ ಅರ್ಚಿಸುವರು. ಲೋಕಕ್ಕೆ ಇದು ಮೂಢಾತ್ಮರು ಹಾಕಿದ ಹಜ್ಜೆ- ದಾರಿ; ನೀನು ತಿಳಿದುಕೊ,' ಎಂದನು.
ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ |
ಬಳಸುವುದು ಸನ್ಮಾರ್ಗದಲಿ ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡುವರ್ಗದಲಿ ಕೇಳೆಂದನಾ ಮುನಿಪ ||೨೧||
ಪದವಿಭಾಗ-ಅರ್ಥ:ತಳಪಟದೊಳು(ಬಯಲು, ಭೂಮಿ)+ ಆಯುಷ್ಯ ರಾಶಿಯನು+ (ಒಟ್ಟು ಜೀವತ ಅವಧಿಯನ್ನು) ಅಳೆವ ಕೊಳಗವು(ಅಳತೆಯ ಮಾಪಕ) ಸೂರ್ಯನೆಂಬುದ ತಿಳಿದು+ ಅಹೋರಾತ್ರಿಯಲಿ (ಹಗಲು ರಾತ್ರಿ) ಸಂಖ್ಯೆಯ ಸಲುಗೆಯ+ ಅಂಕಿಸದೆ ಬಳಸುವುದು ಸನ್ಮಾರ್ಗದಲಿ ಮುಂಕೊಳಿಸುವುದು(ಪೂರ್ವಸಿದ್ಧತೆ) ಸದ್ಧರ್ಮದಲಿ ಕಳವಳಿಸದಿರು (ಚಿಂತಿಸಬೇಡ) ಷಡುವರ್ಗದಲಿ (ಆರು ವರ್ಗದಲ್ಲಿ-ಅರಿಷಡ್ವರ್ಗ: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ) ಕೇಳು+ ಎಂದನಾ ಮುನಿಪ
ಅರ್ಥ:ಮುನಿಯು ರಾಜನೇ,'ಈ ಭೂಮಿಯಲ್ಲಿ ಆಯುಷ್ಯ- ರಾಶಿಯನ್ನು ಅಳೆಯುವ ಕೊಳಗವು ಸೂರ್ಯನು ಎಂಬುದನ್ನು ತಿಳಿದುಕೊಂಡು, ಹಗಲು ರಾತ್ರಿ ಸಂಖ್ಯೆಯನ್ನು ಸಲುಗೆಯ ಅಂಕಿಸದೆ- ವ್ಯರ್ಥಕಾಲ ಕಳೆಯದೆ ಬಳಸಬೇಕು; ಸನ್ಮಾರ್ಗದಲ್ಲಿ, ಸದ್ಧರ್ಮದಲ್ಲಿ ನೆಡೆದು ಮುಂದಿನ ಪರಲೋಕಕ್ಕೆ ತೆರಳಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಹೊಂದಿ ಕಳವಳಿಸಬೇಡ; ಕೇಳು,' ಎಂದನಾ ಮುನಿಯು.
ನಷ್ಟಿಯಿದು ಸಂಸಾರದೊಳಗು
ತ್ಕೃಷ್ಟವಿದು ಮನ್ವಾದಿ ಮಾರ್ಗದ
ದೃಷ್ಟವಿದು ಲೋಕಾಂತರದ ಸುಖದುಃಖದೇಳಿಗೆಯ |
ಹುಟ್ಟುಮೆಟ್ಟಿನ ಕಾಲಕರ್ಮದ
ಕಟ್ಟಳೆಯಿದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈಹೇಳೆಂದನಾ ಮುನಿಪ ||೨೨||
ಪದವಿಭಾಗ-ಅರ್ಥ:ನಷ್ಟಿಯಿದು(ನಷ್ಟಿ - ಚಂದ) ಸಂಸಾರದೊಳಗೆ+ ಉತ್ಕೃಷ್ಟವಿದು(ಅತಿ ಉತ್ತಮ) ಮನ್ವಾದಿ ಮಾರ್ಗದ ದೃಷ್ಟವಿದು(ದೃಷ್ಟ - ಕಂಡಿದ್ದು), ಲೋಕಾಂತರದ ಸುಖದುಃಖದ+ ಏಳಿಗೆಯ ಹುಟ್ಟು, ಮೆಟ್ಟಿನ(ತುಳಿದ) ಕಾಲಕರ್ಮದ ಕಟ್ಟಳೆಯಿದು (ನಿಯಮ)+ ಎಂದು+ ಅರಿದು ನಡೆವಂಗೆ+ ಇಟ್ಟಣಿಸುವುದು ( ಅಡೆತಡೆ, ಒಂದುಗೂಡು)+ ಅದಾವುದೈ ಹೇಳು+ ಎಂದನಾ ಮುನಿಪ.
ಅರ್ಥ:ಮುನಿಯು, 'ಸಂಸಾರದಲ್ಲಿ- ಜಗತ್ತಿನ ಜೀವನದಲ್ಲಿ ಇದು ಸೊಗಸಾದ ಮಾರ್ಗ. ಇದು ಅತಿ ಉತ್ತಮ; ಮನು ಮೊದಲಾದವರು ಹೇಳಿದ ಮಾರ್ಗದಲ್ಲಿ ಕಂಡಿದ್ದು, ಲೋಕಾಂತರದ ಸುಖದುಃಖದ ಏಳಿಗೆಯ ಹುಟ್ಟು ಇದು. ತಿಳಿದವರು ತುಳಿದ ಕಾಲಕರ್ಮದ ಕಟ್ಟಳೆಯಿದು. ಎಂದು ತಿಳಿದುಕೊಂಡು ನಡೆವಯುವವನಿಗೆ ಅಡೆತಡೆ ಅದಾವುದು ಇರುವುದು ಹೇಳು- ಇರುವುದಿಲ್ಲ,' ಎಂದನು.
ಶಿಲೆಯ ರೂಹನು ಮೂಢರುಗಳ
ಗ್ಗಳೆಯ ಪಾವಕನನು ಮಹೀಸುರ
ರಿಳೆಯೊಳಗೆ ಪರಮಾತ್ಮನೇ ಪರದೈವ ತಾನೆಂದು |
ಒಲಿದು ಪೂಜಿಸುತಿಹರು ಹೃದಯಾಂ
ಗದೊಳಗೆ ವರಯೋಗಿಗಳು ಕೈ
ವಳಸುವುದು ಜನವೀ ಪ್ರಕಾರದೊಳರಸ ಕೇಳೆಂದ ||೨೩||
ಪದವಿಭಾಗ-ಅರ್ಥ:ಶಿಲೆಯ ರೂಹನು(ಸಂಕೇತ- ಶಿವಲಿಂಗ, ಸಾಲಿಗ್ರಾಮ) ಮೂಢರುಗಳ+ ಅಗ್ಗಳೆಯ ಪಾವಕನನು ಮಹೀಸುರರು+ ಇಳೆಯೊಳಗೆ(ಈ ಲೋಕದಲ್ಲಿ) ಪರಮಾತ್ಮನೇ ಪರದೈವ ತಾನೆಂದು ಒಲಿದು ಪೂಜಿಸುತಿಹರು ಹೃದಯಾಂಗದೊಳಗೆ (ಹೃದಯದ ಒಳಗೆ) ವರಯೋಗಿಗಳು ಕೈವಳಸುವುದು(ಕೈವಳಿಸು, ವಶಪಡಿಸಿಕೊ) ಜನವು+ ಈ ಪ್ರಕಾರದೊಳು+ ಅರಸ ಕೇಳು+ ಎಂದ
ಅರ್ಥ:'ಮುನಿಯು,'ರಾಜನೇ, ಪತಮಾಪ್ಕತನೆಂದು) ಕಲ್ಲಿನ ಸಂಕೇತವನ್ನು ಮೂಢರೂ, ಶ್ರೇಷ್ಠ ಅಗ್ನಿಯನ್ನು ಬ್ರಾಹ್ಮಣರೂ ಈ ಲೋಕದಲ್ಲಿ ಪೂಜಿಸುವರು. ತಾನು ಪರಮಾತ್ಮನೇ ಪರದೈವ ಎಂದು ಒಲಿದು ಹೃದಯಾಂಗದಲ್ಲಿ ವರಯೋಗಿಗಳು ಪೂಜಿಸುತ್ತಿರುವರು. ಜನರು ಈ ರೀತಿಯಲ್ಲಿ ದೈವವನ್ನು ವಶಪಡಿಸಿಕೊಳ್ಳುವರು; ಕೇಳು,' ಎಂದ.

ಮೂಲ ಮಹಾಭಾರತದಲ್ಲಿ[ಸಂಪಾದಿಸಿ]

ಮೂಲ ಮಹಾಭಾರತದ ಕೆಲವು ಶ್ಲೋಕಗಳು
ಧೃತರಾಷ್ಟ್ರ ಉವಾಚ-

 ಕಥಂ ಸಮೃದ್ಧಮಪ್ಯೃದ್ಧಂ ತಪೋ ಭವತಿ ಕೇವಲಂ|
 ಸನತ್ಸುಜಾತ ತದ್ಬ್ರೂಹಿ ಯಥಾ ವಿದ್ಯಾಮ ತದ್ವಯಂ||
ಧೃತರಾಷ್ಟ್ರನು ಹೇಳಿದನು: “ತಪಸ್ಸು ಹೇಗೆ ಸಮೃದ್ಧ ಅಥವಾ ಕೇವಲವಾಗುತ್ತದೆ? ಸನತ್ಸುಜಾತ! ಅದನ್ನು ನಮಗೆ ತಿಳಿಯುವಂತೆ ಹೇಳು.”
ಸನತ್ಸುಜಾತ ಉವಾಚ|
ಕ್ರೋಧಾದಯೋ ದ್ವಾದಶ ಯಸ್ಯ ದೋಷಾಸ್
        ತಥಾ ನೃಶಂಸಾದಿ ಷಡತ್ರ ರಾಜನ್|
ಧರ್ಮಾದಯೋ ದ್ವಾದಶ ಚಾತತಾನಾಃ
        ಶಾಸ್ತ್ರೇ ಗುಣಾ ಯೇ ವಿದಿತಾ ದ್ವಿಜಾನಾಂ||
ಸನತ್ಸುಜಾತನು ಹೇಳಿದನು: “ರಾಜನ್! ಕ್ರೋಧವೇ ಮೊದಲಾದ ಹನ್ನೆರಡು ಹಾಗೂ ಕ್ರೂರತೆ ಮೊದಲಾದ ಆರು ಅದರ ದೋಷಗಳು. ಧರ್ಮ, ದಯೆ ಮೊದಲಾದ ಹನ್ನೆರಡು ಗುಣಗಳು ದ್ವಿಜರದ್ದು ಎಂದು ಶಾಸ್ತ್ರಗಳಲ್ಲಿ ವಿದಿತವಾಗಿವೆ.
 ಕ್ರೋಧಃ ಕಾಮೋ ಲೋಭಮೋಹೌ ವಿವಿತ್ಸಾ
        ಕೃಪಾಸೂಯಾ ಮಾನಶೋಕೌ ಸ್ಪೃಹಾ ಚ|
ಈರ್ಷ್ಯಾ ಜುಗುಪ್ಸಾ ಚ ಮನುಷ್ಯದೋಷಾ
        ವರ್ಜ್ಯಾಃ ಸದಾ ದ್ವಾದಶೈತೇ ನರೇಣ||
ಕ್ರೋಧ, ಕಾಮ, ಲೋಭ, ಮೋಹ, ಪ್ರಾಪಂಚಿಕ ವ್ಯವಹಾರಗಳಲ್ಲಿ ಆಸಕ್ತಿ, ನಿಷ್ಠುರತೆ, ಅಸೂಯೆ, ಜಂಭ, ಶೋಕ, ಆಸೆ, ಹೊಟ್ಟೆಕಿಚ್ಚು, ಮತ್ತು ಜುಗುಪ್ಸೆ ಈ ಹನ್ನೆರಡು ಮಾನುಷ ದೋಷಗಳನ್ನು ನರನು ಸದಾ ವರ್ಜಿಸಬೇಕು.
 ಏಕೈಕಮೇತೇ ರಾಜೇಂದ್ರ ಮನುಷ್ಯಾನ್ಪರ್ಯುಪಾಸತೇ|
 ಲಿಪ್ಸಮಾನೋಽಂತರಂ ತೇಷಾಂ ಮೃಗಾಣಾಮಿವ ಲುಬ್ಧಕಃ||
ರಾಜೇಂದ್ರ! ಇವುಗಳಲ್ಲಿ ಒಂದೊಂದೂ ಮನುಷ್ಯನನ್ನು ಪರ್ಯುಪಾಸಿಸಿ ಬೇಟೆಗಾರನು ಸಮಯ ಕಾದು ಎಚ್ಚರತಪ್ಪಿರುವ ಪ್ರಾಣಿಗಳನ್ನು ಬೇಟೆಯಾಡುವಂತೆ ಅಜಾಗರೂಕನಾಗಿರುವವನ ವಿನಾಶಕ್ಕೆ ಕಾರಣವಾಗುತ್ತವೆ.
 ವಿಕತ್ಥನಃ ಸ್ಪೃಹಯಾಲುರ್ಮನಸ್ವೀ
        ಬಿಭ್ರತ್ಕೋಪಂ ಚಪಲೋಽರಕ್ಷಣಶ್ಚ|
ಏತೇ ಪ್ರಾಪ್ತಾಃ ಷಣ್ನರಾನ್ಪಾಪಧರ್ಮಾನ್
        ಪ್ರಕುರ್ವತೇ ನೋತ ಸಂತಃ ಸುದುರ್ಗೇ||
ಆತ್ಮಶ್ಲಾಘನೆ, ದುರಾಸೆ, ಜಂಭದಿಂದ ಇತರರನ್ನು ಅವಮಾನಿಸುವುದು, ಕಾರಣವಿಲ್ಲದೇ ಕೋಪಗೊಳ್ಳುವುದು, ಚಪಲತೆ, ಅರಕ್ಷಣೆ ಈ ಆರು ಧರ್ಮಗಳನ್ನು ಪಾಪಿಷ್ಟ ನರರು ಪಾಲಿಸುತ್ತಾರೆ. ಕಷ್ಟದ ಸಮಯದಲ್ಲಿದ್ದರೂ ಅವರು ಇವುಗಳನ್ನು ಮಾಡಲು ಹೆದರುವುದಿಲ್ಲ.
|
|(With regards to BM.Ramesh )
|
(ಕುಮಾರವ್ಯಾಸನು ಮೂಲ ಮಹಾಭಾರತವನ್ನು ಅನುಸರಿಸಿದರೂ ಅದರಲ್ಲಿಯ ಸಂಕೀರ್ಣತೆ ಕ್ಲಿಷ್ಟತೆಯನ್ನು ಸರಳಗೊಳಿಸಿ ಸಂಕ್ಷಿಪ್ತವಾಗಿ ಸಾಮಾನ್ಯರಿಗೆ ಅರ್ಥವಾಗುವಂತೆ ತತ್ತ್ವಜ್ಞಾನವನ್ನು ಹೇಳಿದ್ದಾನೆ. ಕೆಲವುಕಡೆ ಅವನು ಶ್ರೀ ಶಂಕರರರನ್ನು ಅನುಸರಿಸಿದಂತೆ ಕಾಣುವುದು)

ಸತ್ಯವನ್ನು ಅರಿಯುವ- ಬೋಧಿಸುವ ಕಷ್ಟ[ಸಂಪಾದಿಸಿ]

ಜ್ಞಾನಿಗಳನೊಡಬಡಿಸಬಹುದ
ಜ್ಞಾನಿಗಳನಹುದೆನಿಸಬಹುದು
ಜ್ಞಾನಲವವನು ಕೂಡಿಕೊಂಡಿಹ ದುರ್ವಿದಗ್ಧರನು |
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ||೨೪||
ಪದವಿಭಾಗ-ಅರ್ಥ:ಜ್ಞಾನಿಗಳನು+ ಒಡಬಡಿಸಬಹುದು+ ಅಜ್ಞಾನಿಗಳನು+ ಅಹುದೆನಿಸಬಹುದು; ಜ್ಞಾನ+ ಲವವನು(ಅಲ್ಪ, ಸ್ವಲ್ಪ) ಕೂಡಿಕೊಂಡಿಹ ದುರ್ವಿದಗ್ಧರನು(ದುರ್ವಿದಗ್ಧ, ಅವಿವೇಕಿ/ಕೆಟ್ಟಪಂಡಿತ) ಏನ ತಿಳುಹಲುಬಹುದು ವಿಷ್ವಕ್ಸೇನಗಳು(ವ್ಯಂಗ್ಯವಾಗಿ ಅಲ್ಪಮತಿಗಳನ್ನು-> ವೈಕುಂಠದ ದ್ವಾರಪಾಲಕರು ಎಂದಿರುವುದು)+ ಅವಲ್ಲ+ ಅರಸ ಮಿಕ್ಕಿನ ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ.
ಅರ್ಥ:ಮುನಿಯು ರಾಜನಿಗೆ,'ಜ್ಞಾನಿಗಳನ್ನು ಈ ತತ್ತ್ವ ಹೇಳಿ ಒಡಬಡಿಸಬಹುದು- ಒಪ್ಪಿಸಬಹುದು; ಅಜ್ಞಾನಿಗಳನ್ನೂ ಅಹುದು ಎಂದು ಎನ್ನಿಸಬಹುದು; ಜ್ಞಾನದ ಅಲ್ಪಭಾಗವನ್ನು ತನ್ನಲ್ಲಿ ಕೂಡಿಕೊಂಡಿರುವ ಅವಿವೇಕಿಗಳಗೆ ಏನನ್ನು ತಾನೆ ತಿಳಿಸಲು ಸಾಧ್ಯ? ಅವರು ತಾವೇ ವೈಕುಂಠದ ದ್ವಾರಪಾಲಕರಾದ ವಿಷ್ವಕ್ಸೇನರಂತೆ ಮಾತನಾಡುವರು. ಇನ್ನು ಅರಸ ಮಿಕ್ಕ ಮಾನವರ ಪಾಡು- ಸ್ಥಿತಿ ಏನು,' ಎಂದನು.
ದಾನವೊಂದಾ ಪಾಲನೆಯ ಫಲ
ದಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು |
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲಕಿ
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ||೨೫||
ಪದವಿಭಾಗ-ಅರ್ಥ:ದಾನವೊಂದು+ ಆ ಪಾಲನೆಯ ಫಲ; ದಾನವೊಂದೇ ಉಭಯವು+ ಇದರೊಳು ದಾನದಿಂದ+ ಅಹುದು+ ಇಹಪರಂಗಳ ಸೌಖ್ಯ ಸಂಪದವು; ದಾನವೇ ಸಂಸಾರ ಸಾಧನ; ದಾನದಿಂ ಪಾಲನೆಯ ಫಲಕೆ+ ಇನ್ನೇನನು+ ಎಂಬೆನು ಕಡೆಯೊಳು+ ಅಚ್ಯುತ ಪದವಿ ಫಲವು+ ಎಂದ
ಅರ್ಥ:ಮುನಿಯು ರಾಜನಿಗೆ,'ಮುಕ್ತಿಗೆ ದಾನವೂ ಸಹ ಆ ಸತ್ಯ ಪಾಲನೆಯಂತೆ ಒಂದು ಫಲಕೊಡುವುದು; ದಾನವೊಂದೇ ಉಭಯವಾದ ಇಹ ಮತ್ತು ಪರ ಸಾಧನೆಗೆ ದಾರಿ. ಇದರಲ್ಲಿ ದಾನದಿಂದ ಆಗುವುದು ಇಹಪರಗಳ ಸೌಖ್ಯ ಸಂಪದವು- ಈ ಲೋಕದಲ್ಲೂ ಪರ ಲೋಕದಲ್ಲೂ ಸುಖಕ್ಕೆ ಸಾಧನವು. ದಾನವೇ ಸಂಸಾರ ಸುಖಕ್ಕೆ ಸಾಧನ; ದಾನದ ನೀತಿ ಪಾಲನೆಯನ್ನು ಮಾಡಿದರೆ ಸಿಗುವ ಫಲಕ್ಕೆ ಇದಕ್ಕಿಂತ ಇನ್ನೇನನ್ನು ಹೇಳಲಿ? ಕಡೆಯಲ್ಲಿ ಅಚ್ಯುತನಲೋಕದ ಪದವಿ ಫಲವು ಸಿಗುವುದು,' ಎಂದ.
ಅರಸನೊಡೆಯನು ದಂಡನಾಥನು
ಗುರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು |
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ||೨೬||
ಪದವಿಭಾಗ-ಅರ್ಥ:ಅರಸನು+ ಒಡೆಯನು. ದಂಡನಾಥನು, ಗುರು ಹಿರಿಯನು+ ಉತ್ತಮನು ದೈವಾಪರನು, ಸಾಹಿತ್ಯನು, ಸದಸ್ಯನು ಸತ್ಪುರುಷನೆಂದು ಪರಿಪರಿಯ ನಾಮಂಗಳಲಿ+ ಅಹಂ ಕರಿಸುವರು, ಜೀವಾತ್ಮ ತೊಲಗಿದ ಮರುದಿವಸ ಹೆಣನು+ ಎನ್ನರೇ ಹೇಳೆಂದನು+ ಆ ಮುನಿಪ
ಅರ್ಥ:ಮುನಿಯು ಹೇಳಿದ,,'ಅರಸನು ಒಡೆಯನು, ಅವನೇ ದಂಡನಾಥನು, ಗುರು ಹಿರಿಯನು, ಉತ್ತಮನು, ದೈವಾಪರನು, ಸಾಹಿತ್ಯನು, ಸದಸ್ಯನು, ಸತ್ಪುರುಷನು, ಎಂದು ಪರಿಪರಿಯ ಹೊಗಳಿಕೆಯ ಹೆಸರನ್ನು ಪಡೆದು ಅಹಂಕಾರ ಪಡುವರು. ಆದರೆ ಅವರ ಜೀವಾತ್ಮ ದೇಹದಿಂದ ತೊಲಗಿದ ಮರುದಿವಸವೇ ಅವನನ್ನು 'ಹೆಣವು' ಎನ್ನರೇ ಹೇಳು,' ಎಂದನು.
ವರುಷ ಮೂರರೊಳು ಮಾಸ ಮೂರರೊ
ಳಿರದೆ ಪಕ್ಷತ್ರಯದೊಳಗೆ ಬಂ
ದರುಹುವುದು ದಿನ ಮೂರರಲಿ ಸಂದೇಹಬೇಡಿದಕೆ |
ಧರೆಯೊಳುತ್ಕಟಪುಣ್ಯ ಪಾಪೋ
ತ್ಕರದ ಫಲವಿದು ತಪ್ಪಬಾರದು
ಮರಳುವುದು ಪರಲೋಕದೆಸೆಗವನೀಶ ಕೇಳೆಂದ ||೨೭||
ಪದವಿಭಾಗ-ಅರ್ಥ:ವರುಷ ಮೂರರೊಳು ಮಾಸ ಮೂರರೊಳು+ ಇರದೆ(ನಿಲ್ಲದೆ, ಸುಮ್ಮನಿರದೆ- ಸತತ) ಪಕ್ಷತ್ರಯದೊಳಗೆ(ಮೂರು ಪಕ್ಷದೊಳಗೆ- ಒಂದು ಪಕ್ಷ- ೧೪/೧೫ ದಿನ) ಬಂದು+ ಅರುಹುವುದು(ಹೇಳುವುದು) ದಿನ ಮೂರರಲಿ, ಸಂದೇಹಬೇಡ+ ಇದಕೆ ಧರೆಯೊಳು (ಧರೆ- ಭೂಮಿ)+ ಉತ್ಕಟಪುಣ್ಯ ಪಾಪ+ ಉತ್ಕರದ(ಸೀಳುವುದು) ಫಲವಿದು, ತಪ್ಪಬಾರದು, ಮರಳುವುದು(ಪುನಃ ಹಿಂದಕ್ಕೆ ಹೋಗುವುದು, ಬಂದಲ್ಲಿಗೇ ಹೋಗುವುದು;) ಪರಲೋಕ ದೆಸೆಗೆ+ ಅವನೀಶ ಕೇಳೆಂದ.
ಅರ್ಥ:ಮುನಿಯು,'ರಾಜನೇ ಈ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೂರು ವರುಷಗಳಲ್ಲಿ, ಮೂರಮಾಸಗಳಲ್ಲಿ ಸತತ, ಮೂರು ಪಕ್ಷದ ಮತ್ತು ಮೂರು ದಿನದಲ್ಲಿ ಬಂದು ಹೇಳುವುದು. ಇದಕ್ಕೆ ಸಂದೇಹಬೇಡ; ಭೂಮಿಯಲ್ಲಿ ಉತ್ಕಟಪುಣ್ಯವು ಪಾಪನಾಶಕವು- ಇದರ ಫಲ; ತಪ್ಪಬಾರದು; ಇದು ಪರಲೋಕದ ದೆಸೆಗೆ- ದಿಕ್ಕಿಗೆ ಮರಳಿ ತಲುಪಿಸುವುದು.'ಕೇಳು ಎಂದ. (ಸ್ವಲ್ಪ ಅಸ್ಪಷ್ಟವಾಗಿದೆ)(ಸೃಷ್ಟಿಯ ಆದಿಯಲ್ಲಿ ಜೀವರುಗಳು ಪರಮಾತ್ಮನಿಂದ ಬಂದಿದ್ದು ಪುನಃ ಅಲ್ಲಿಗೇ ಮರಳಿ ಹೋಗುವರು ಎಂದಿರಬಹುದು.)
ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು |
ಒಂದು ಪರವಸ್ತುವಿನ ಬಳಿಯಲಿ
ಬಂದುದಬುಜಭವಾಂಡ ಕೋಟಿಗ
ಳೆಂದೊಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ||೨೮||
ಪದವಿಭಾಗ-ಅರ್ಥ:ಒಂದು ಭೂಪಿಂಡದಲಿ ( ದಪ್ಪ ಗಾತ್ರದ ಉಂಡೆ,ಗರ್ಭದಲ್ಲಿ ಇರುವ ಭ್ರೂಣ) ನಾನಾ ಚಂದದಿಂ (ವಿಧದ, ಬಗೆಯ)ಪ್ರಾಣಿಗಳು ಜನಿಸುವುವು; ಒಂದು ಜ್ಯೋತಿಸ್ಸಿನಲಿ(ಜ್ಯೋತಿ- ಪ್ರಕಾಶಕಾಯ) ನಾನಾ ಜ್ಯೋತಿಯು+ ಉದಿಸುವುವು; ಒಂದು ಪರವಸ್ತುವಿನ ಬಳಿಯಲಿ ಬಂದುದು+ ಅಬುಜಭವಾಂಡ(ಅಬುಜಭವ- ಬ್ರಹ್ಮ; ಬ್ರಹ್ಮಾಂಡ) ಕೋಟಿಗಳೆಂದೊಡೆ+ ಅವು ಬೇರಿಲ್ಲ ಸರ್ವವು ವಿಷ್ಣುಮಯವು+ ಎಂದ.
ಅರ್ಥ:ಮುನಿಯು ದೃತರಾಷ್ಟ್ರ ರಾಜನಿಗೆ,'ಒಂದು ಭೂಮಿ ಎಂಬ ಪಿಂಡದಲ್ಲಿ ನಾನಾ ಬಗೆಯ ಪ್ರಾಣಿಗಳು ಜನಿಸುವುವು; ಒಂದು ಜ್ಯೋತಿಸ್ಸಿನಲಿ- ಪ್ರಕಾಶ ಕಾಯದಲ್ಲಿ ನಾನಾ ಜ್ಯೋತಿಯ ಕಾಯಗಳು ಉದಿಸುವುವು- ಹುಟ್ಟುವುವು; ಒಂದು ಪರವಸ್ತುವಿನ ಬಳಿಯಲ್ಲಿ ಬಂದು- ಹುಟ್ಟಿದ ಅಬುಜಭವಾಂಡಗಳು ಕೋಟಿಗಳು ಎಂದ ಮಾತ್ರಕ್ಕೆ, ಅವು ಬೇರೆಬೇರೆ ಅಲ್ಲ; ಸರ್ವವೂ ವಿಷ್ಣುಮಯವು.' ಎಂದ.
ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ |
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ ||೨೯||
ಪದವಿಭಾಗ-ಅರ್ಥ:ತಾನು(ರಾಜ, ನೀನು)+ ಇದಿರು ಹಗೆ ಕೆಳೆ (ಎದುರುಬಿದ್ದವರ ದ್ವೇಷವನ್ನು ಬಿಡು) ವಿವೇಕ ಜ್ಞಾನವ+ ಅಜ್ಞಾನಂಗಳ+ ಇಹಪರ ಹಾನಿ(ನಷ್ಟ) ವೃದ್ಧಿಯ(ಹೆಚ್ಚುವ) ಮಾರ್ಗದಲಿ ತಾನೇಕ ಚಿತ್ತದಲಿ ದಾನ ಧರ್ಮ ಪರೋಪಕಾರ ವಿಧಾನ ದೀಕ್ಷಾ ಕರ್ಮನಿಷ್ಠರು ಮಾನನೀಯರಲೇ(ಗೌರವಾನ್ವಿತರು ಅಲ್ಲವೇ.) ಮಹೀಪತಿ ಕೇಳು ನೀನು+ ಎಂದ.
ಅರ್ಥ: ಮುನಿಯು,'ರಾಜನೇ ಜ್ಞಾನವನ್ನು ಬಯಸುವವನು ತಾನು ಎದುರುಬಿದ್ದವರ ದ್ವೇಷವನ್ನು ಬಿಡಬೇಕು. ವಿವೇಕ, ಜ್ಞಾನದ, ಅಜ್ಞಾನಗಳಿಂದ ಆಗುವ ಇಹಪರ ಹಾನಿ ಮತ್ತು ವೃದ್ಧಿಯ ಮಾರ್ಗದಲ್ಲಿ ತಾನು ಏಕ ಚಿತ್ತದಲ್ಲಿ- ಒಂದೇ ಮನಸ್ಸಿನಿಂದ ದಾನ, ಧರ್ಮ, ಪರೋಪಕಾರ ನಿರತರಾಗಿರಬೇಕು. ಈ ವಿಧಾನದ ದೀಕ್ಷಾ ಕರ್ಮನಿಷ್ಠರಾದವರು ಗೌರವಾನ್ವಿತರು ಅಲ್ಲವೇ. ಮಹೀಪತಿ ನೀನು ಈ ವಿಚಾರವನ್ನು ಮನವಿಟ್ಟು ಕೇಳು,'ಎಂದ.
ಕರಣ ಗುಣ ಸಂಹಣ ಸಂಧ್ಯಾಂ
ತರದವಸ್ಥಾಂತರದಲೋಕೋ
ತ್ಕರದ ತಾಪತ್ರಯದ ಲಕ್ಷಣಲಕ್ಷಿತವನರಿದು |
ಪರಿವಿಡಿಯ ಮೂರ್ತಿತ್ರಯಂಗಳ
ಗುರು ಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ||೩೦||
ಪದವಿಭಾಗ-ಅರ್ಥ:ಕರಣ (ಜ್ಞಾನೇಂದ್ರಿಯ, ಕಿವಿ, ಮನಸ್ಸು) ಗುಣ ಸಂಹರಣ(ಲಯ) ಸಂಧ್ಯಾಂತರದ+ ಅವಸ್ಥಾಂತರದ (ಎಚ್ಚರ, ಸ್ವಪ್ನ, ನಿದ್ರೆ) ಲೋಕೋತ್ಕರದ(ಲೋಕ+ ಉತ್ಕರ - ರಾಶಿ, ಸಮೂಹ, ಸೀಳುವುದು) ತಾಪತ್ರಯದ ಲಕ್ಷಣ ಲಕ್ಷಿತವನು+ ಅರಿದು(ತಿಳಿದು) ಪರಿವಿಡಿಯ (ವ್ಯವಸ್ಥಿತವಾದ ಕ್ರಮ) ಮೂರ್ತಿ ತ್ರಯಂಗಳ(ತ್ರಿ ಮೂರ್ತಿ :- ೧.ವಿಷ್ಣು, ೨. ಬ್ರಹ್ಮ,೩.ಶಿವ) ಗುರುಲಘುವನು (ಹಿರಿಮೆ, ಕಿರಿದು)+ ಆರೈದು(ತಿಳಿದು) ನಡೆವಂಗೆ+ ಅರಿದು(ತಿಳಿಯಲಾರದ್ದು)+ ಎನಿಸುವುದು+ ಅದು+ ಆವುದೈ ಹೇಳೆಂದನು+ ಆ ಮುನಿಪ.
ಅರ್ಥ:ಮುನಿಯು,'ರಾಜನೇ,ಕರಣಗಳಾದ ಜ್ಞಾನೇಂದ್ರಿಯ, ಕಿವಿ, ಮನಸ್ಸು ವುಗಳ ಗುಣ ಸ್ವಭಾವವನ್ನು ಲಯಮಾಡಿ, ಸಂಧಿಯ ಅಂತರವನ್ನು ಅವಸ್ಥಾಂತರವಾದ ಎಚ್ಚರ, ಸ್ವಪ್ನ, ನಿದ್ರೆಗಳ, ಮತ್ತು ಲೋಕಗಳ ಸಮೂಹದ ತಾಪತ್ರಯವಾದ ಆಧ್ಯಾತ್ಮಿಕ, ಆಧಿಭೌತಿಕ, ಅಧಿದೈವಿಕ ಲಕ್ಷಣವನ್ನು ತಿಳಿದು, ಅವುಗಳ ಲಕ್ಷಿತವನ್ನು- ಗುರಿಯನ್ನು ಅರಿತು, ವ್ಯವಸ್ಥಿತವಾದ ಕ್ರಮದಲ್ಲಿ ಮೂರ್ತಿ ತ್ರಯಗಳನ್ನು ಅದರಲ್ಲಿ ಹಿರಿಮೆ, ಕಿರಿದುಗಳನ್ನು ತಿಳಿದು ನಡೆಯುವವನಿಗೆ ತಿಳಿಯಲಸಾದ್ಯ ಎನ್ನಿಸುವುದು, ಅದು ಯಾವುದಯ್ಯಾ ಹೇಳು,'ಎಂದನು.(ಈ ಪದ್ಯದಲ್ಲಿ ಸ್ವಲ್ಪ ಗೊಂದಲವಿದೆ)
ವೇದ ನಾಲ್ಕಾಶ್ರಮವು ತಾ ನಾ
ಲ್ಕಾದಿಮೂರುತಿ ನಾಲ್ಕು ವರ್ಣ ವಿ
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ |
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ ||೩೧||
ಪದವಿಭಾಗ-ಅರ್ಥ:ವೇದ, (ಋಕ್, ಯಜು, ಸಾಮ, ಅಥರ್ವ) ನಾಲ್ಕು ಆಶ್ರಮವು (ಬ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ, ಯತಿ -ಸಂನ್ಯಾಸ) ತಾ ನಾಲ್ಕು+ ಆದಿಮೂರುತಿ(ವಿಷ್ಣು, ಬ್ರಹ್ಮ, ಶಿವ, ದಕ್ಷಿಣಾಮೂರ್ತಿ), ನಾಲ್ಕು ವರ್ಣ(ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ), ವಿಭೇದ ನಾಲ್ಕು+ ಆ ಕರಣ ನಾಲುಕು (ಮನಸ್ಸು., ಬುದ್ಧಿ. ಅಹಂಕಾರ, ಚಿತ್ತ.)+ ಉಪಾಯ(ಸಾಮ, ದಾನ, ಬೇಧ (ಕಲಹ ಹುಟ್ಟಿಸುವುದು), ದಂಡ-ಹಿಂಸೆ ) ನಾಲ್ಕರಲಿ ಭೇದಿಸಲು, ಪುರುಷಾರ್ಥ ನಾಲ್ಕರ (4 ಪುರುಷಾರ್ಥಗಳು: ಧರ್ಮ, ಕಾಮ, ಮೋಕ್ಷ, ಮತ್ತು ಅರ್ಥಸಂಪತ್ತು) ಹಾದಿಯ+ ಅರಿದು ವಿಮುಕ್ತ ನಾಲುಕನು(ನಾಲ್ಕು ಮುಕ್ತಿಯಾದ ಸಲೋಕ್ಯ - ಪೂಜಿಸುವ ದೇವತೆಯ‘ಲೋಕ’ಕ್ಕೆ ಹೋಗುವುದು; ಸಾಮೀಪ್ಯ- ಪೂಜಿಸುವ ದೇವತೆಯ ಸಾಮೀಪ್ಯದಲ್ಲಿರುವುದು;ಸಾರೂಪ್ಯ - ಪೂಜಿಸಿದ ದೇವತೆಗೆ ಸಮಾನವಾಗಿ ಕಾಣುವ ರೂಪವನ್ನು ತೆಗೆದುಕೊಳ್ಳುವುದು; ಪೂಜಿಸುವ ದೇವತೆಯ ‘ದೇಹದಲ್ಲಿ’ ಸೇರಿ ಹೋಗುವುದು)+ ಐದುವನು, ಸಂದೇಹವೇ ಹೇಳು+ ಎಂದನಾ ಮುನಿಪ
ಅರ್ಥ:ನಾಲ್ಕು ವೇದಗಳಾದ, ಋಕ್, ಯಜು, ಸಾಮ, ಅಥರ್ವ ಇವಗಲನ್ನು ಅನುಸರಿಸಿ, ನಾಲ್ಕು ಆಶ್ರಮವಾದ ಬ್ರಹ್ಮಚಾರ್ಯ, ಗ್ರಹಸ್ಥ, ವಾನಪ್ರಸ್ಥ, ಯತಿ -ಸಂನ್ಯಾಸಗಳನ್ನು ದಾಟಿ ತಾನು ನಾಲ್ಕು ಆದಿಮೂರುತಿಗಳಾದ ವಿಷ್ಣು, ಬ್ರಹ್ಮ, ಶಿವ, ದಕ್ಷಿಣಾಮೂರ್ತಿಗಳನ್ನು(ಶಿಶುಕುಮಾರ?) ಪೂಜಿಸಿ, ನಾಲ್ಕು ವರ್ಣಗಳಾದದ ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ,ಈ ವಿಭೇದ ನಾಲ್ಕನ್ನು ಮೀರಿ, ಮನಸ್ಸು., ಬುದ್ಧಿ. ಅಹಂಕಾರ, ಚಿತ್ತ. ಆ ಕರಣ ನಾಲಕ್ಕನ್ನು ದಾಟಿ ಉಪಾಯವಾದ ಸಾಮ, ದಾನ, ಬೇಧ, ದಂಡಗಳನ್ನು ಅನುಸರಿಸಿ ನಾಲ್ಕರಲಿ ಭೇದಿಸಲು, ಪುರುಷಾರ್ಥವಾದ ಧರ್ಮ, ಕಾಮ, ಮೋಕ್ಷ, ಮತ್ತು ಅರ್ಥ- ಸಂಪತ್ತು ನಾಲ್ಕನ್ನೂ ಸಾಧಿಸಿ ಹಾದಿಯನ್ನು ಅರಿತು, ನಾಲ್ಕು ಮುಕ್ತಿಯಾದ ಸಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವನ್ನು ಹೊಂದುವನು, ಸಂದೇಹವೇ ಹೇಳು ಎಂದನು,' ಮುನಿಪ.(ಇದೊಂದು ಚಮತ್ಕಾರದ ಪದ್ಯ, ಕೆಲವು ಗೊದಲ ಇರುವಂತೆ ಕಾಣುವುದು.)
ಭೂತ ವರ್ಣಸ್ಥಾನ ಸರ್ಗ ನಿ
ಪಾತವದರೊಳು ಕೃತ್ಯಗಳ ಸಂ
ಜಾತಮುಖವಾವರಣಶರಸಂಗತಿಯ ಸೋಹೆಗಳ |
ಧಾತು ಮೂಲಾದಿಗಳನರಿವುದು
ಪ್ರೀತಿಯಿಂದಿಹಪರವ ಗೆಲುವುದು
ಭೂತಳದೊಳುತ್ತಮವಲೇ ಭೂಪಾಲ ಕೇಳೆಂದ ||೩೨||
ಪದವಿಭಾಗ-ಅರ್ಥ:ಭೂತ (ಜೀವ ಜಗತ್ತು) ವರ್ಣಸ್ಥಾನ,(ಚಾತುರ್ವರ್ಣ್ಯ) ಸರ್ಗ(ಸ್ವರ್ಗ) ನಿಪಾತವು (ಸ್ವರ್ಗದಿಂದ ಪುಣ್ಯ ಕಳೆದಾಗ ಬೀಳುವುದು)+ ಅದರೊಳು ಕೃತ್ಯಗಳ(ಕರ್ಮಗಳ,) ಸಂಜಾತ(ಉಂಟಾದ) ಮುಖವು+ ಆವರಣ(ಮುಸುಕು, ಎಲ್ಲೆಕಟ್ಟು) ಶರಸಂಗತಿಯ(ಬಾಣ; ನೀರು, ಸರೋವರ) ಸೋಹೆಗಳ(ಸುಳಿವು,ಸೋವು) ಧಾತು ಮೂಲಾದಿಗಳನು(ಪರಮಾತ್ಮ, ಮೂಲ ವಸ್ತು; ದೇಹದಲ್ಲಿರುವ ರಸ, ರಕ್ತ, ಮಾಂಸ, ಮೇಧಸ್ಸು, ಅಸ್ತಿ, ಮಜ್ಜೆ, ಶುಕ್ಲ ಎಂಬ ಏಳು ಧಾತುಗಳು; ವೀರ್ಯ; ಶಕ್ತಿ) + ಅರಿವುದು ಪ್ರೀತಿಯಿಂದ+ ಇಹಪರವ ಗೆಲುವುದು; ಭೂತಳದೊಳು+ ಉತ್ತಮವಲೇ ಭೂಪಾಲ ಕೇಳೆಂದ.
ಅರ್ಥ:ಮುನಿಯು,'ರಾಜನೇ,ಈ ಜೀವ ಜಗತ್ತನ್ನೂ, ಮಾನವರಲ್ಲಿ ವರ್ಣಸ್ಥಾನವನ್ನೂ, ಪುಣ್ಯ ಕಳೆದು ಸ್ವರ್ಗದಿಂದ ಬೀಳುವುದನ್ನೂ, ಅದರಲ್ಲಿ ಕರ್ಮಗಳಿಂದ ಉಂಟಾದ ಮುಖವು- ಫಲವು ಅದರ ಆವರಣ- ಮುಸುಕುನ್ನು- ಮಾಯೆಯನ್ನು ಅರಿತು ನೀರಿನ ಸುಳಿವನ್ನು ತಿಳಿಯುವಂತೆ ಪರಮಾತ್ಮ ಎಂಬ ಮೂಲ ವಸ್ತುವನ್ನು ಅರಿಯಬೇಕು; ದೇಹದಲ್ಲಿರುವ ರಸ, ರಕ್ತ, ಮಾಂಸ, ಮೇಧಸ್ಸು, ಅಸ್ತಿ, ಮಜ್ಜೆ, ಶುಕ್ಲ ಎಂಬ ಏಳು ಧಾತುಗಳ ಶಕ್ತಿಯನ್ನು ಅರಿಯಬೇಕು. ಈ ಭೂಮಿಯಲ್ಲಿ ಪ್ರೀತಿಯಿಂದ ಇಹವನ್ನೂ ಪರಲೋಕವನ್ನೂ ಗೆಲ್ಲುವುದು- ಪಡೆಯುವುದು ಉತ್ತಮವು ಕೇಳು,' ಎಂದ.
ಆರು ಗುಣ ಋತುವರ್ಣ ವರ್ಗವ
ದಾರು ದರ್ಶನ ಪಾತ್ರವಂಗವ
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ
ತೋರುವೀ ಮಾಯಾ ಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ||೩೩||
ಪದವಿಭಾಗ-ಅರ್ಥ:ಆರುಗುಣ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಋತುವರ್ಣ ವರ್ಗವದು+ ಆರು( ೧.ವಾದಿಸಾಚಿತ, ೨.ಬಾದಿಲಾಚಿತ, ೩.ಡಾದಿಫಾಂತ, ೪.ಕಾದಿಠಾಂತ, ೫.ಅಆದಿಔ ಅಚಿತ, ೬.ಹಂ ) ದರ್ಶನ ಪಾತ್ರವಂಗವು+ ಅದು+ ಆರು (೧.ಸಾಂಖ್ಯ, ೨.ಯೋಗ, ೩.ನ್ಯಾಯ, ೪.ವೈಶೇಷಿಕ, ೫.ಮೀಮಾಂಸ, ೬.ಉತ್ತರ ಮೀಮಾಂಸ.) ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ, ತೋರುವ+ ಈ ಮಾಯಾ ಪ್ರಪಂಚವ ಮೀರಿ ಕೇಡಿಲ್ಲದ ಪದವ ಕೈಸೂರೆಗೊಂಬುದು(ಪಡೆಯುವುದು) ಪರಮ ಮಂತ್ರವಿದು+ ಎಂದನಾ ಮುನಿಪ
ಅರ್ಥ:ಮುನಿಯು,' ರಾಜನೇ, ಆರುಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದ ದೋಷವನ್ನೂ ಮೂಲವನ್ನೂ ಅರಿಯಬೇಕು; ಆರು ವರ್ಣಗಳ ಅರ್ಥವನ್ನು ಅರಿಯಬೇಕು ಅವು- ೧.ವಾದಿಸಾಚಿತ, ೨.ಬಾದಿಲಾಚಿತ, ೩.ಡಾದಿಫಾಂತ, ೪.ಕಾದಿಠಾಂತ, ೫.ಅಆದಿಔ ಅಚಿತ, ೬.ಹಂ; ಆರು ದರ್ಸನಗಳ ಸಾರವನ್ನೂ ತಿಳಿಯಬೇಕು ಅವು ೧.ಸಾಂಖ್ಯ, ೨.ಯೋಗ, ೩.ನ್ಯಾಯ, ೪.ವೈಶೇಷಿಕ, ೫.ಮೀಮಾಂಸ, ೬.ಉತ್ತರ ಮೀಮಾಂಸ- ಇವುಗಳ ಸಾರವನ್ನೂ ಬೇಧವನ್ನೂ ಶಿಷ್ಟ ಮಾರ್ಗದಲ್ಲಿ ಗುರುವಿನಿಂದ ತಿಳಿಯುವುದು; ನಮ್ಮಕಣ್ನಿಗೆ ಕಾಣುವ ಈ ಮಾಯಾ ಪ್ರಪಂಚವನ್ನು ಮೀರಿ ಕೇಡಿಲ್ಲದ ಪರಮಪದವನ್ನು ಪಡೆಯುವುದು. ಅದಕ್ಕೆ ಇದು ಪರಮ- ಶ್ರೇಷ್ಠ ಮಂತ್ರವು,' ಎಂದನು. (ಮಗನ ಮೇಲೆ ಅತಿಯಾದ ಮೋಹವಿರುವ ಕುರುಡನಾದ ದೃತರಾಷ್ಟ್ರನಿಗೆ ಇದು ಸಾಧ್ಯವೇ? ನೀರಿಳಿಯದ ಗಂಟಲೊಳ್ ಕಡುಬಂ ತುರಿಕಿದವೊಲಾಯ್ತು. ಈ ಭಾಗದ ಉದ್ದೇಶ - ಮೋಹಪಾಶದಲ್ಲಿ ಸಿಕ್ಕಿದವನಿಗೆ ಸಾಕ್ಷಾತ್ ಬ್ರಹ್ಮನ ಮಾನಸ ಪುತ್ರನೇ ಬಂದು ಬ್ರಹ್ಮಜ್ಞಾನವನ್ನು ಬೋಧಿಸಿದರೂ ಅವನ ಮೋಹ ತೊಲಗದು ಎಂಬ ಸಂದೇಶ ಇರಬಹುದು.)
ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ |
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರಸಿಕೊಂಬರು ಮುಕ್ತಿ ರಾಜ್ಯವನು ||೩೪||
ಪದವಿಭಾಗ-ಅರ್ಥ:ಜಲಧಿ ಮಾತೃಕೆ(ಮೂಲರೂಪ ವ್ಯಾಕರಣದ ಧಾತು,ಮೊದಲ ಮಾದರಿ; ಮಾತೃಕೆ (ವರ್ಣಮಾಲೆಯ ಮೂಲಾಕ್ಷರಗಳು, ಹದಿ ನಾಲ್ಕು ಸ್ವರ ಸಮೂಹ, ತಾಯಿ,ಜನನಿ) ವಾರ(ಸರದಿ, ಪಾಳಿ, ಸಪ್ತಾಹ, ಕಟ್ಟಳೆ ) ಕುಲಗಿರಿಗಳು ವಿಭಕ್ತಿ ಭಾಷೆಯ ದ್ವೀಪ(ನಡುಗಡ್ಡೆ) ಸರ್ಪಾವಳಿ ಮುನೀಶ್ವರರುಗಳ ಧಾತು (ಮೂಲರೂಪ) ಗಡಣದ (ಗುಂಪು,ಸಮುಊಹ) ವೇದಿಗಳ(ಪಂಡಿತ, ವಿದ್ವಾಂಸ, ಯಾಗಭೂಮಿ, ಎತ್ತರವಾದ ಜಗಲಿ, ವೇದಿಕೆ) ತಿಳಿದು ಕಾಲದ ಗತಿಯ ಗಮಕಂಗಳನು+ ಅರಿದು (ತಿಳಿದು) ನಡೆವವರುಗಳು ನಿರ್ಮಳದಲಿ+ ಎಡಹದೆ ಬೆರಸಿಕೊಂಬರು ಮುಕ್ತಿ ರಾಜ್ಯವನು.
ಅರ್ಥ:ಮುನಿಯು ರಾಜನಿಗೆ,'ಜಲಧಿ- (ಜ್ಞಾನ) ಸಾಗರವು ಮೂಲರೂಪ, ಮೂಲಾಕ್ಷರಗಳು ಮಾತೃಕೆ, ವಾರವು ಸಪ್ತ ಸ್ವರಗಳು, ವಿಭಕ್ತಿಗಳು ಭಾಷೆಯ ಕುಲಗಿರಿಗಳು, ಸರ್ಪಗಳ ಸಂಚಾರದಂತೆ ಗಮಕವಾಚನದ ಮಧ್ಯದ ನಿಲುಗಡೆಯು- ದ್ವೀಪ, ಮುನೀಶ್ವರರುಗಳ ಕ್ರಿಯಾಮೂಲ ರೂಪದ ಧಾತುಗಳ ಗಡಣದಿಂದ ಕೂಡಿದ ವಿದ್ವಾಂಸರ ಬೋಧೆಯನ್ನು ತಿಳಿದು ಕಾಲದ ಗತಿಯ ಗಮಕಗಳನ್ನು ಅರಿತು ನಡೆಯುವವರು ನಿರ್ಮಲವಾದ- ಪರಿಶುದ್ಧತೆಯನ್ನು ಪಡೆದು, ಎಡವದೆ - ತಪ್ಪು ಮಾಡದೆ ಮುಕ್ತಿ ರಾಜ್ಯವನ್ನು ತಮ್ಮಲ್ಲಿ ಬೆರಸಿಕೊಳ್ಳುವರು - ತಮ್ಮಲ್ಲಿ ಸೇರಿಸಿ ಕೊಳ್ಳುವರು. (ಮುಕ್ತಿ ಮಾರ್ಗ ಪಡೆಯುವ ದಾರಿಯನ್ನು ಹೇಳಲು ಗಮಕ ಪ್ರಿಯನಾದ ಕವಿಯು ಇಲ್ಲಿ, ಕಾವ್ಯದ 'ಗಮಕ ವಾಚನ ಕ್ರಮವನ್ನು ರೂಪಕ ಅಲಂಕಾರವಾಗಿ' - ಎಳೆದು ತಂದಿದ್ದಾನೆಯೇ?- ತಿಳಿದವರು ಬೇರೆ ರೀತಿಯ ಅರ್ಥವನ್ನೂ ಮಾಡಬಹುದು.)
ಕಾಯ ದಿಗ್ಬಂಧ ಪ್ರಣಾಮ ವಿ
ಧೇಯವರ್ಚನೆ ಯೋಗಸಿದ್ಧಿ ನಿ
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು |
ಆಯವನು ವಿವರಿಸುತ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳೆಂದ ||೩೫||
ಪದವಿಭಾಗ-ಅರ್ಥ:ಕಾಯ ದಿಗ್ಬಂಧ, ಪ್ರಣಾಮ(ವಂದನೆ, ಪ್ರಾಣಾಯಾಮ?) ವಿಧೇಯವು (ಅನುಸರಿಸುವಂಥದ್ದು)+ ಅರ್ಚನೆ, ಯೋಗಸಿದ್ಧಿ, ನಿಕಾಯ(ಸಮೂಹ, ದೇಹ,), ನಾಲ್ಕರ (ಜಾಗ್ರತಿ ಸ್ವಪ್ನ, ನಿದ್ರೆ, ಸುಷುಪ್ತಿ- ತುರೀಯ?) ಇಂದ್ರಿಯಸ್ಥಿತಿ, ಗತಿಯನು ಆರೈದು (ಅಭ್ಯಾಸಮಾಡಿ) ಆಯವನು(ಒಳಗು, ಉದ್ದೇಶ, ಗುಟ್ಟು) ವಿವರಿಸುತ ಮೇಲಣ ಬೀಯವು+ ಇದು ತನಗೆ+ ಎಂಬುದನು ನಿರ್ದಾಯದಲಿ)(ಸಂಪೂರ್ಣ, ಪೂರ್ಣತೆಯಲ್ಲಿ) ನಿಶ್ಚಯಿಸಬೇಹುದು ರಾಯ ಕೇಳೆಂದ.
ಅರ್ಥ:ಮುನಿಯಿ ರಾಜನಿಗೆ,'ಕಾಯ ದಿಗ್ಬಂಧ, ಪ್ರಣಾಮ(ವಂದನೆ, ಪ್ರಾಣಾಯಾಮ?) ವಿಧೇಯವು (ಅನುಸರಿಸುವಂಥದ್ದು)+ ಅರ್ಚನೆ, ಯೋಗಸಿದ್ಧಿ, ನಿಕಾಯ(ಸಮೂಹ, ದೇಹ,), ನಾಲ್ಕರ (ಜಾಗ್ರತಿ ಸ್ವಪ್ನ, ನಿದ್ರೆ, ಸುಷುಪ್ತಿ- ತುರೀಯ?) ಇಂದ್ರಿಯಸ್ಥಿತಿ, ಗತಿಯನು ಆರೈದು (ಅಭ್ಯಾಸಮಾಡಿ) ಆಯವನು(ಒಳಗು, ಉದ್ದೇಶ, ಗುಟ್ಟು) ವಿವರಿಸುತ ಮೇಲಣ ಬೀಯವು+ ಇದು ತನಗೆ+ ಎಂಬುದನು ನಿರ್ದಾಯದಲಿ)(ಸಂಪೂರ್ಣ, ಪೂರ್ಣತೆಯಲ್ಲಿ) ನಿಶ್ಚಯಿಸಬೇಹುದು ರಾಯ ಕೇಳೆಂದ.
ನವ ನವ ವ್ಯೂಹಂಗಳಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧಗ್ರಹ ನಾಟಕಂಗಳ ಲಕ್ಷಣವನರಿದು |
ನವವಿಧಾಮಳ ಭಕ್ತಿರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದು ಭೂಪ ಕೇಳೆಂದ ||೩೬||
ಪದವಿಭಾಗ-ಅರ್ಥ:ನವ ನವ(ಹೊಸ ಹೊಸ) ವ್ಯೂಹಂಗಳು(ರಚನೆ, ವ್ಯವಸ್ಥೆ)+ ಅಬುಜೋದ್ಭವನ(ಬ್ರಹ್ಮ) ಪಾಳಿ( ಕ್ರಮಬದ್ಧ), ವಿಖಂಡ(ಖಂಡವಿಲ್ಲದ - ಪೂರ್ಣ) ನವರಸ ನವವಿಧ ಗ್ರಹ ನಾಟಕಂಗಳ ಲಕ್ಷಣವನು+ ಅರಿದು ನವವಿಧ (ಭಕ್ತಿಯು ೧. ಶ್ರವಣ ಭಕ್ತಿ ೨.ಕೀರ್ತನ ಭಕ್ತಿ, ೩. ಸ್ಮರಣ ಭಕ್ತಿ, ೪. ಪಾದಸೇವನ ಭಕ್ತಿ, ೫,ಅರ್ಚನ ಭಕ್ತಿ, ೬. ವಂದನ ಭಕ್ತಿ, ೭.ದಾಸ್ಯ ಭಕ್ತಿ, ೮.ಸಖ್ಯ ಭಕ್ತಿ, ೯.ಆತ್ಮನಿವೇದನ.)+ ಅಮಳ(ಅಮಲ, ಶ್ರೇಷ್ಠ) ಭಕ್ತಿರಸವನು ಸವಿದು ನಿತ್ಯ+ ಅನಿತ್ಯವಸ್ತುವ ನವರಸವನು (ಹೊಸ ರಸವನ್ನು- ಸಾರತತ್ತ್ವವನ್ನು)+ ಆರೈದು(ಪೋಷಣೆ ಮಾಡಿ) ನಡೆವುದು ಭೂಪ ಕೇಳೆಂದ.
ಅರ್ಥ:ಮುನಿಯು,'ರಾಜನೇ ಜಗತ್ತಿನ ನವ ನವ ರಚನೆ, ವ್ಯವಸ್ಥೆಗಳನ್ನೂ ಬ್ರಹ್ಮನ ಕ್ರಮಬದ್ಧವಾದ, ಖಂಡವಿಲ್ಲದ - ಪರಿಪೂರ್ಣ ನವರಸ- ಒಂಭತ್ತು ಬಗೆಯ ಆನಂದ ಕೊಡುವ, ನವವಿಧದ ಗ್ರಹ ಚಲನೆಯ ನಾಟಕಗಳ ಲಕ್ಷಣವನ್ನು ಅರಿತು, ನವವಿಧದ ಭಕ್ತಿಯಿಂದ ಶ್ರೇಷ್ಠ ಭಕ್ತಿರಸವನ್ನು ಸವಿದು ನಿತ್ಯ ಮತ್ತು ಅನಿತ್ಯವಸ್ತುಗಳ ಹೊಸ ರಸವನ್ನು- ಸಾರತತ್ತ್ವವನ್ನು ಮತ್ತು ಅರ್ಥವನ್ನು ಮನದಲ್ಲಿ ಪೋಷಣೆ ಮಾಡಿ ನಡೆಯುವುದು, ಜ್ಞಾನಕ್ಕೆ ಸಹಕಾರಿ, ಕೇಳು,'ಎಂದ.
ಹತ್ತು ಮುಖದಲಿ ಲೋಕದೊಳಗು
ತ್ಪತ್ತಿಯಾದ ಚರಾಚರಂಗಳ
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ |
ಸುತ್ತುವನು ನಾನಾ ತೆರದಲಿ ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೇಂದ ||೩೭||
ಪದವಿಭಾಗ-ಅರ್ಥ:ಹತ್ತು ಮುಖದಲಿ ( ನಾನಾ ವಿಧದಲ್ಲಿ; ದಿಕ್ಕುಗಳು:೧.ಪೂರ್ವ, ೨.ಆಗ್ನೇಯ, ೩.ದಕ್ಷಿಣ, ೪.ನೈರುತ್ಯ, ೫.ಪಶ್ಚಿಮ, ೬.ವಾಯವ್ಯ, ೭.ಉತ್ತರ, ೮.ಈಶಾನ್ಯ.೯.ಊರ್ಧ್ವ, ೧೦, ಅಧ.-ದಿಕ್ಕುಗಳು) ಲೋಕದೊಳಗೆ+ ಉತ್ಪತ್ತಿಯಾದ ಚರಾಚರಂಗಳಲಿ+ ಉತ್ತಮ+ ಅಧಮರು+ ಎನ್ನದೇ ಹರಿ ಸರ್ವಗತನಾಗಿ ಸುತ್ತುವನು ನಾನಾ ತೆರದಲಿ ವಿಚಿತ್ರಚರಿತನು ಕಪಟ ನಾಟಕ ಸೂತ್ರಧಾರಕನೆಂದು+ ಅರಿದು ಸುಖಿಯಾಗು ನೀನೇಂದ.(ವೈಶ್ವಾನರ - ಕಣ್ಣಿಗೆ ಕಾಣುವ ಜಗತ್ತಿನ ಯಾ ವಿಶ್ವದ ರೂಪ; ಹತ್ತು ಮುಖ- ಹತ್ತು ದಿಕ್ಕು)
ಅರ್ಥ:ಮುನಿಯು ರಾಜನಿಗೆ ಇದುವರೆಗಿನ ಬೋಧೆಯ ತತ್ತ್ವ ಸಾರವನ್ನು ಒಂದೇ ಮಾತಿನಲ್ಲಿ ಹೇಳುತ್ತಾನೆ. ,'ವಿಶ್ವದ ಹತ್ತುದಿಕ್ಕುಗಳನ್ನು ಮುಖವಾಗಿ ಉಳ್ಳ ದೃಶ್ಯ ಜಗತ್ತಿನ ರೂಪದ ವೈಶ್ವಾನರನಾದ-ಹರಿಯು ಜಗನ್ನಿಯಾಮಕನು. ಅವನು ನಾನಾ ವಿಧದಲ್ಲಿ ಲೋಕದೊಳಗೆ ಉತ್ಪತ್ತಿಯಾದ ಚರಾಚರಂಗಳಲ್ಲಿ ಉತ್ತಮರು ಅಧಮರು ಎನ್ನದೇ ಸರ್ವಗತನಾಗಿ ನಾನಾ ತೆರದಲ್ಲಿ ಸುತ್ತುವನು. ಈ ವಿಚಿತ್ರಚರಿತನು- ವಿಚಿತ್ರ ಸ್ವಭಾವದವನಾದ ಹರಿಯು ಕಪಟ ನಾಟಕ ಸೂತ್ರಧಾರಕನೆಂದು ಅರಿತು ನೀನು ಸುಖಿಯಾಗು,' ಎಂದ

ಮುನಿಗೆ ಧೃತರಾಷ್ಟ್ರನ ಕೃತಜ್ಞತೆ, ಮತ್ತೆ ಪ್ರಶ್ನೆ[ಸಂಪಾದಿಸಿ]

ಲೇಸು ಮಾಡಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ |
ಗಾಸಿಯಾದುದು ರಾಗ ಲೋಭದ
ಮೀಸಲಳಿದುದು ನಿಮ್ಮ ದೆಸೆಯಿಂ
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ||೩೮ ||
ಪದವಿಭಾಗ-ಅರ್ಥ:ಲೇಸು (ಒಳ್ಳೆಯದು) ಮಾಡಿದಿರಿ+ಎನ್ನ ಚಿತ್ತದ ಬೇಸರಿಕೆ ಬಯಲಾಯ್ತು(ಮಾಯವಾಯಿತು, ಹೋಯಿತು) ನಿಮ್ಮ+ ಉಪದೇಶದಿಂದ, ಕೃತಾರ್ಥನಾದೆನು, ಗೆಲಿದೆನು+ ಇಹಪರವ, ಗಾಸಿಯಾದುದು(ಗಾಸಿ- ಹಾನಿ, ತೊಂದರೆ, ನಷ್ಟ?) ರಾಗ(ಮೋಹ) ಲೋಭದ ಮೀಸಲು(ಪ್ರತ್ಯೇಕವಾಗಿ ತೆಗೆದಿರಿಸಿದ್ದು, ಮುಡಿಪು)+ ಅಳಿದುದು(ಇಲ್ಲವಾಯಿತು, ಹೋಯಿತು.) ನಿಮ್ಮ ದೆಸೆಯಿಂದ+ ಏಸು ಧನ್ಯರೊ ನಾವು ಚಿತ್ತೈಸು(ಕೇಳು)+ ಎಂದನು+ ಆ ಭೂಪ.
ಅರ್ಥ:ಧೃತರಾಷ್ಟ್ರನು ಸನತ್ಸುಜಾತ ಮುನಿಗೆ ಕೇಳಿರಿ,'ನೀವು ಈ ಬೋಧನೆಯನ್ನು ಮಾಡಿ ನನಗೆ ಬಹಳ ಒಳಿತನ್ನು ಮಾಡಿದಿರಿ. ನನ್ನ ಮನಸ್ಸಿನ ಬೇಸರಿಕೆ ನಿಮ್ಮ ಉಪದೇಶದಿಂದ ಮಾಯವಾಯಿತು. ಕೃತಾರ್ಥನಾದೆನು. ನಿಮ್ಮ ಉಪದೇಶದಿಂದ ಇಹಪರವನ್ನು ಗೆದ್ದೆನು. ಮೋಹ ಲೋಭಗಳಿಗೆ ಮೀಸಲಾಗಿದ್ದ ನನ್ನ ಮನಸ್ಸಿನ ದುರ್ಗುಣ ನಿಮ್ಮ ದೆಸೆಯಿಂದ ಹೋಯಿತು ನಾವು ಏಷ್ಡು ಧನ್ಯರೊ!- ಬಹಳ ಧನ್ಯರಾಗಿದ್ದೇವೆ. ಎಂದನು.
ಸ್ವರ್ಗವಾವುದು ನರಕವಾವುದು
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದರೇನು |
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ||೩೯||
ಪದವಿಭಾಗ-ಅರ್ಥ:ಸ್ವರ್ಗವು+ ಆವುದು (ಯಾವುದು) ನರಕವು+ ಆವುದು ವಿಗ್ರಹದಲಿ+ ಇಹ ಸಿದ್ಧಿ ಯಾವುದು+ ಅನುಗ್ರಹಿಸಲು+ ಎನು+ ಅಹುದು(ಆಗುವುದು) ಪಾತ್ರ+ ಅಪಾತ್ರವು(ಯೋಗ್ಯ, ಅಯೋಗ್ಯ)+ ಎಂದರೇನು ಉಗ್ರವಾವುದು ದೈವದೊಳಗೆ, ಸಮಗ್ರವಾವುದು ಧರ್ಮದೊಳಗೆ+ ಅವ್ಯಗ್ರದಿಂದ (ಸಿಟ್ಟು ಬೇಸರವಿಲ್ಲದೆ)+ ಉಪದೇಶಿಸಲುಬೇಕು+ ಎಂದನು+ ಆ ಭೂಪ
ಅರ್ಥ:ಆ ರಾಜನು ತನ್ನ ಅರಿವಿಗಾಗಿ ಪುನಃ ಪ್ರಶ್ನಿಸಿದನು,' ಮುನಿಯೇ,ಸ್ವರ್ಗವು ಯಾವುದು, ನರಕವು ಯಾವುದು, ವಿಗ್ರಹದಲ್ಲಿ ಇರುವ ಸಿದ್ಧಿ ಯಾವುದು? ಅದು ಅನುಗ್ರಹಿಸಲು ಎನು ಆಗುವುದು?ಪಾತ್ರ ಅಪಾತ್ರವು ಎಂದರೇನು? ದೈವದೊಳಗೆ ಉಗ್ರವು ಯಾವುದು, ಧರ್ಮದಲ್ಲಿ ಸಮಗ್ರವು ಯಾವುದು? ಸಿಟ್ಟು ಬೇಸರವಿಲ್ಲದೆ ಉಪದೇಶಿಸಲು ಬೇಕು,' ಎಂದನು.
ಸುಲಭನತಿ ಸಾಹಿತ್ಯ ಮಂಗಳ
ನಿಳಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ |
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ||೪೦||
ಪದವಿಭಾಗ-ಅರ್ಥ:ಸುಲಭನು (ವಿನಯಶೀಲ ಸರಳ ವ್ಯಕ್ತಿ)+ ಅತಿ ಸಾಹಿತ್ಯ ಮಂಗಳ ನಿಳಯನು(ವಿದ್ವಾಂಸ)+ ಅಗಣಿತ ಮಹಿಮನು+ ಅನ್ವಯ(ವಂಶ) ತಿಲಕನನು(ಉತ್ತಮನು)+ ಉಪಮಚರಿತ(ನಡವಳಿಕೆಲ್ಲಿ ಉತ್ತಮ) ದೈವಾಪರನು(ದೈವಭಕ್ತನು) ಪುಣ್ಯನಿಧಿ ಕುಲಯುತನು ಕೋವಿದನು ಕರುಣಾ ಜಲಧಿ ಕೌತುಕ ಯುಕ್ತಿವಿದನೆಂದು+ ಇಳೆ(ಭೂಮಿಯ ಜನ) ಹೊಗಳುತಿರು+ ಅದುವೆ ಕೇಳೈ ಸ್ವರ್ಗ ತಾನೆಂದ.
ಅರ್ಥ:ರಾಜನೇ,'ವಿನಯಶೀಲ ಸರಳ ವ್ಯಕ್ತಿ, ಅತಿ ಸಾಹಿತ್ಯ ಮಂಗಳ ನಿಲಯನು, ಬಹಳ ಮಹಿಮೆಯುಳ್ಳವನು, ವಂಶದಲ್ಲಿ ಉತ್ತಮನು; ಉತ್ತಮ ನೆಡವಳಿಕೆಯವನು ದೈವಾಪರನು, ಪುಣ್ಯನಿಧಿ- ಪರೋಪಕಾರಿ; ಕುಲಯುತನು, ಕೋವಿದನು- ವಿದ್ವಾಂಸನು; ಕರುಣಾ ಜಲಧಿ- ಕರಣಾಳು, ಕೌತುಕ ಯುಕ್ತಿವಿದನು ಎಂದು ಭೂಮಿಯ ಜನರು ಹೊಗಳುತ್ತಿದ್ದರೆ ಅದುವೆ ತಾನು ಸ್ವರ್ಗವು, ಕೇಳಯ್ಯಾ,' ಎಂದ.
ಪಾಯಕನು ಪತಿತನು ಕೃತಘ್ನನು
ಘಾತಕನು ಮರ್ಮನು ದುರಾಢ್ಯನ
ಭೀತಕನು ದೂಷಕನು ದುರ್ಜನನಪ್ರಯೋಜಕನು |
ನೀತಿಹೀನನು ಜಾತಿಧರ್ಮ ಸ
ಮೇತ ದೈವದ್ರೋಹಿಯೆಂಬುದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ ||೪೧||
ಪದವಿಭಾಗ-ಅರ್ಥ:ಪಾಯಕನು(ಸೇವಕ) ಪತಿತನು(ತಪ್ಪು ಮಾಡಿದವನು) ಕೃತಘ್ನನು(ಉಪಕಾರ ಮರೆತವನು) ಘಾತಕನು(ಮೋಸ ಕೊಲೆ ಮಾಡುವವನು) ಮರ್ಮನು(ರಹಸ್ಯವಾಗಿ ಕಾರ್ಯ ನಿರ್ವಹಿಸುವವನು) ದುರಾಢ್ಯನು+ ಅಭೀತಕನು(ಭಯವಿಲ್ಲದವನು) ದೂಷಕನು (ನಿಂದಕ) ದುರ್ಜನನು(ಕೆಟ್ಟವನು ಅಪ್ರಯೋಜಕನು ನೀತಿಹೀನನು ಜಾತಿಧರ್ಮಸಮೇತ ದೈವದ್ರೋಹಿಯು+ ಎಂಬುದು ಭೂತಳದೊಳೇ(ಭೂಮಿಯಲ್ಲೇ) ನರಕ ಚಿತ್ತೈಸು+ ಎಂದನು+ ಆ ಮುನಿಪ.
ಅರ್ಥ:ಮುನಿಯು ರಾಜನಿಗೆ,'ಸೇವಕತನ, ತಪ್ಪು ಮಾಡಿದವನು) ಕೃತಘ್ನನು(ಉಪಕಾರ ಮರೆತವನು) ಘಾತಕನು(ಮೋಸ ಕೊಲೆ ಮಾಡುವವನು) ಮರ್ಮನು(ರಹಸ್ಯವಾಗಿ ಕಾರ್ಯ ನಿರ್ವಹಿಸುವವನು) ದುರಾಢ್ಯನು+ ಅಭೀತಕನು(ಭಯವಿಲ್ಲದವನು, ನಿಂದಕ, ದುರ್ಜನನು, ಅಪ್ರಯೋಜಕನು, ನೀತಿಹೀನನು, ಜಾತಿಧರ್ಮಸಮೇತ ದೈವದ್ರೋಹಿಯು, ಎಂಬುದು- ಈ ವೃತ್ತಿ ಇದೇ ಭೂಮಿಯಲ್ಲೇ ನರಕವು ವಿಳಿದುಕೊ,' ಎಂದನು
ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ |
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರಚಿತ್ತೈಸೆಂದನಾ ಮುನಿಪ ||೪೨||
ಪದವಿಭಾಗ-ಅರ್ಥ:ದೇಹವ+ ಇಡಿದು+ ಇಹ(ತುಂಬಿರುವ) ಧರ್ಮವದು ನಿರ್ದೇಹದಲಿ(ದೇಹವಿಲ್ಲದೆ) ದೊರಕುವುದೆ? ಮಾನವ ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ ಐಹಿಕ(ಈ ಲೋಕದ)+ ಆಮುಷ್ಮಿಕದ(ಪರಲೋಕಕ್ಕೆ ಸಂಬಂಧಿಸಿದ, ಪಾರಮಾರ್ಥಿಕ) ಗತಿ ಸಂಮೋಹಿಸುವುದು(ಒದಗುವುದು) ಶರೀರದಲಿ ಸಂದೇಹವೇ ಧೃತರಾಷ್ಟ್ರ ಚಿತ್ತೈಸೆಂದನು(ಚಿತ್ತೈಸು (ಕೇಳು)+ ಎಂದನು)+ ಆ ಮುನಿಪ
ಅರ್ಥ:ಮುನಿಯು ರಾಜನೇ ಕೇಳು,'ದೇಹವನ್ನು ತುಂಬಿರುವ ಧರ್ಮವು ಅದು ದೇಹವಿಲ್ಲದೆಹೋದಾಗ ದೊರಕುವುದೆ?- ಇಲ್ಲ. ಸಕಲ ಪುರುಷಾರ್ಥಶೀಲರಿಗೆ ಮಾನವ ದೇಹವೇ ಸಾಧನ. ಈ ಲೋಕದ ಪರಲೋಕಕ್ಕೆ ಸಂಬಂಧಿಸಿದ, ಪಾರಮಾರ್ಥಿಕ ಗತಿ ಶರೀರದಲ್ಲಿ ಇದ್ದಾಗ ಒದಗುವುದು. ಸಂದೇಹವೇ ಧೃತರಾಷ್ಟ್ರ?'ಎಂದನು.
ಗರುಡ ಪಂಚಾಕ್ಷರಿಯೊಳಲ್ಲದೆ
ಗರಳ ಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ |
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ||೪೩||
ಪದವಿಭಾಗ-ಅರ್ಥ:ಗರುಡ ಪಂಚಾಕ್ಷರಿಯೊಳು+ ಅಲ್ಲದೆ ಗರಳ(ವಿಷ) ಭಯವು+ ಅಡಗುವುದೆ? ವಿಷ್ಣು ಸ್ಮರಣೆಯಿಂದ+ ಅಲ್ಲದೆ ಮಹಾಪಾತಕಕೆ ಕಡೆಯಹುದೆ (ಕೊನೆ)? ಹಿರಿದು ಸಂಸಾರಾಂಬುಧಿಯನು (ಸಂಸಾರವೆಂಬ ಸಮುದ್ರವನ್ನು)+ ಉತ್ತರಿಸುವೊಡೆ(ದಾಟುವುದಾದರೆ) ಗುರುಮುಖದೊಳು+ ಅಲ್ಲದೆ ನಿರತಿಶಯವು(ಸಾಟಿಯಿಲ್ಲದ, ಶ್ರೇಷ್ಠವಾದುದು)+ ಇನ್ನಾವುದೈ ಹೇಳೆಂದನು+ ಆ ಮುನಿಪ.
ಅರ್ಥ:ಮುನಿಯು,' ಗರುಡ ಮತ್ತು ಪಂಚಾಕ್ಷರಿ ಮಂತ್ರದಿಂದ ಅಲ್ಲದೆ ಸರ್ಪದ ವಿಷದ ಭಯವು ಬೇರೆ ರೀತಿಯಿಂದ ಅಡಗುವುದೆ? ಇಲ್ಲ. ವಿಷ್ಣು ಸ್ಮರಣೆಯಿಂದ ಅಲ್ಲದೆ ಮಹಾಪಾತಕಕ್ಕೆ ಬೇರೆ ರೀತಿಯಲ್ಲಿ ಪರಿಹಾರವಾಗುವುದೆ? ಇಲ್ಲ. ವಿಶಾಲವಾದ - ದೊಡ್ಡ ಸಂಸಾರವೆಂಬ ಸಾಗರವನ್ನು ದಾಟುವುದಾದರೆ, ಗುರುಮುಖದ ಉಪದೇಶದಿಂದ ಅಲ್ಲದೆ ನಿರತಿಶಯವಾದ ಸಾಟಿಯಿಲ್ಲದ, ಶ್ರೇಷ್ಠವಾದುದ ಪರಮಗತಿ ಇನ್ನಾವುದರಿಂದ ದೊರಕುವುದಯ್ಯಾ ಹೇಳು (ಅದೊಂದೇ ದಾರಿ),'ಎಂದನು.
ತನ್ನ ಮನೆಯಲಿ ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ |
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯವೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ||೪೪||
ಪದವಿಭಾಗ-ಅರ್ಥ:ತನ್ನ ಮನೆಯಲಿ ಮೂರ್ಖನು+ ಅತಿ ಸಂಪನ್ನ ಪೂಜ್ಯನು, ಭೂಮಿಪಾಲನು ತನ್ನ ದೇಶದೊಳು+ ಅಧಿಕ, ಸ್ವಗ್ರಾಮದಲಿ ಪ್ರಭು ಪೂಜ್ಯ, ಭಿನ್ನವಿಲ್ಲದೆ ಹೋದ ಠಾವಿನೊಳು(ಠಾವು- ಪ್ರದೇಶ)+ ಅನ್ಯವೆನಿಸದೆ ವಿಶ್ವದೊಳು ಸಂಪನ್ನ ಪೂಜಾಪಾತ್ರರೈ ವಿದ್ವಾಂಸರುಗಳು+ ಎಂದ
ಅರ್ಥ:ಮುನಿಯು ಸಮಾಜದ ಸಾಮಾನ್ಯ ಧರ್ಮವನ್ನು ಹೇಳುತ್ತಾನೆ,'ಮೂರ್ಖನು ತನ್ನ ಮನೆಯಲ್ಲಿ ಮಾತ್ರಾ ಅತಿ ಸಂಪನ್ನನು ಮತ್ತು ಪೂಜ್ಯನು. ಭೂಮಿಪಾಲನು ತನ್ನ ದೇಶದಲ್ಲಿ ಮಾತ್ರಾ ಅಧಿಕನು ಶ್ರೇಷ್ಠನು. ಗ್ರಾಮ ಮುಖ್ಯನಾದ ಪ್ರಭು ಸ್ವಗ್ರಾಮದಲ್ಲಿ ಮಾತ್ರಾ ಪೂಜ್ಯನೆನಿಸುವನು. ಹೀಗೆ ಭಿನ್ನ ವಾದ ಬೇರೆ ಬೇರೆ ಯವರು ಉತ್ತಮರಾದರೆ; ಈ ಭಿನ್ನವಿಲ್ಲದೆ ಹೋದ ಪ್ರದೇಶಗಳಲ್ಲಿ ಎಂದರೆ ಸರ್ವತ್ರ ಇವನು ಅನ್ಯನು ಎನಿಸದೆ ವಿಶ್ವದಲ್ಲಿ ಪೂಜಾಪಾತ್ರ ಸಂಪನ್ನರು ಯಾರೆಂದರೆ ಅವರು ವಿದ್ವಾಂಸರುಗಳು,' ಎಂದ.
ಒಬ್ಬನಹನೈ ಶೂರ ನೂರರೊ
ಳೊಬ್ಬನಹ ಸಾವಿರಕೆ ಪಂಡಿತ
ನೊಬ್ಬನಹನೈ ವಕ್ತ ಶತಸಾವಿರಕೆ ಲೋಕದಲಿ |
ಒಬ್ಬ ದಾನಿಯ ಕಾಣೆ ನಾನಿ
ನ್ನೊಬ್ಬರೊಬ್ಬರಿಗೊಂದು ಗುಣವದು
ಸರ್ಬಗುಣ ಸಂಪನ್ನರೈ ವಿದ್ವಾಂಸರುಗಳೆಂದ ||೪೫||
ಪದವಿಭಾಗ-ಅರ್ಥ:ಒಬ್ಬನು+ ಅಹನೈ (ಅಹನು ಆಗಿರುವನು, ಇರುವನು) ಶೂರ, ನೂರರೊಳು,+ ಒಬ್ಬನು+ ಅಹ ಸಾವಿರಕೆ ಪಂಡಿತನು+ ಒಬ್ಬನು+ ಅಹನೈ ವಕ್ತ ಶತಸಾವಿರಕೆ, ಲೋಕದಲಿ ಒಬ್ಬ ದಾನಿಯ ಕಾಣೆ ನಾನು+ ಇನ್ನೊಬ್ಬರು+ ಒಬ್ಬರಿಗೊಂದು ಗುಣವದು, ಸರ್ಬಗುಣ ಸಂಪನ್ನರೈ ವಿದ್ವಾಂಸರುಗಳೆಂದ.
ಅರ್ಥ: ಸನತ್ಸುಜಾತ ಮುನಿಯು,'ನೂರರಲ್ಲಿ ಒಬ್ಬನು ಶೂರನು ಇರುವನು. ಸಾವಿರಕ್ಕೆ ಒಬ್ಬನು ಪಂಡಿತನು ಇರುವನು. ವಕ್ತಾರನು ಶತಸಾವಿರಕೆ ಒಬ್ಬನು ಸಿಗುವನು. ಆದರೆ ಲೋಕದಲಿ ಒಬ್ಬ ನಿಜವಾದ ದಾನಿಯನ್ನು ನಾನು ಕಾಣೆನು, ಒಬ್ಬರಿಗೊಂದು ಇನ್ನೊಬ್ಬರಿಗೊಂದು ಗುಣವಿರುವುದು. ಆದರೆ ವಿದ್ವಾಂಸರುಗಳು ಸರ್ವಗುಣ ಸಂಪನ್ನರೈಯ್ಯಾ,ಕೇಳು,'ಎಂದ.
ಸತಿಯರಿಗೆ ಗತಿ ಯಾವುದೈ ನಿಜ
ಪತಿಗಳಲ್ಲದೆ ವಿಪ್ರಜಾತಿಗೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು |
ಕ್ಷಿತಿಯೊಳತಿಶಯವಾವುದೈ ಭೂ
ಪತಿಯೆ ಕೇಳಿಹಪರಕೆ ಸುಖಸಂ
ಗತಿಯನೊಲುವಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ||೪೬||
ಪದವಿಭಾಗ-ಅರ್ಥ:ಸತಿಯರಿಗೆ ಗತಿ ಯಾವುದೈ ನಿಜ(ತನ್ನ) ಪತಿಗಳಲ್ಲದೆ; ವಿಪ್ರಜಾತಿಗೆ ಹುತವಹನು(ಅಗ್ನಿ), ವರ್ಣತ್ರಯಕೆ (ಕ್ಷತ್ರಯ, ವೈಶ್ಯ, ಶೂದ್ರರಿಗೆ) ಭೂದೇವರುಗಳು (ಭೂಸುರರು- ಬ್ರಾಹ್ಮಣರು)+ ಇರಲು ಕ್ಷಿತಿಯೊಳು+ ಅತಿಶಯವು+ ಆವುದೈ ಭೂಪತಿಯೆ(ರಾಜನೇ), ಕೇಳು+ ಇಹಪರಕೆ ಸುಖಸಂಗತಿಯನು+ ಒಲುವಡೆ(ಒಲಿಸಿಕೊಳ್ಳಲು) ಪೂಜಿಸುವುದೈ(ಗೌರವಿಸುವುದು) ಬ್ರಾಹ್ಮಣೋತ್ತಮರ.
ಅರ್ಥ: ಮುನಿಯು, ರಾಜನೇ,'ಸತಿಯರಿಗೆ ತನ್ನ ಪತಿಗಳಲ್ಲದೆ ಗತಿ ಯಾವುದಯ್ಯಾ - ಅವರೇ ದೈವ; ವಿಪ್ರಜಾತಿಗೆ- ಬ್ರಾಹ್ಮಣರಿಗೆ ಅಗ್ನಿಯು ದೈವ., ವರ್ಣತ್ರಯಕ್ಕೆ ಭೂದೇವರುಗಳು ಇರಲು ಭೂಮಿಯಲ್ಲಿ ಅತಿಶಯವು ಯಾವುದಯ್ಯಾ; ಕೇಳು ಇಹಪರಕ್ಕೆ ಸುಖಸಂಗತಿಯನ್ನು; ಇಹಪರವನ್ನು ಬಯಸುವುದಾದರೆ ಬ್ರಾಹ್ಮಣೋತ್ತಮರನ್ನು ಗೌರವಿಸುವುದು,' ಎಂದನು.
ಚೋರನನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯ ವಿ
ಕಾರ ಭೇದಿನಿಯನಿಂತರುವರನು ಕಂಡು ಮನ್ನಿಸದೆ |
ದೂರದಲಿ ವರ್ಜಿಸವುದು ಬಹಿ
ಷ್ಕಾರಿಗಳು ಸರ್ವಕ್ಕಿವರುಗಳು
ಸಾರಿದುದು ಸರ್ವೇಶ್ವರನ ಮತವರಸ ಕೇಳೆಂದ ||೪೭||
ಪದವಿಭಾಗ-ಅರ್ಥ:ಚೋರನನು(ಕಳ್ಳ), ಕಂಟಕನ(ಹಿಂಸೆಕೊಡುವವ), ಹಿಸುಣನ(ಜಿಪುಣ) ಜಾರನನು(ಪರಸ್ತ್ರೀ ಸಹವಾಸಿ) ಷಂಡನನು(ನಪುಂಸಕ) ಸಮಯ ವಿ ಕಾರ ಭೇದಿನಿಯನಿಂ-ತರುವರನು (ಕಾಲದ ದೋಷ ವಿವಾರಣೆಯಿಂದ ಸೌಖ್ಯವನ್ನು ತರುವೆನು ಎಂಬುವವರನ್ನು) ಕಂಡು ಮನ್ನಿಸದೆ (ಗೌರವಿಸಿ ಕರೆಯದೆ) ದೂರದಲಿ ವರ್ಜಿಸವುದು (ಬಿಡುವುದು) ಬಹಿಷ್ಕಾರಿಗಳು ಸರ್ವಕ್ಕೆ+ ಇವರುಗಳು ಸಾರಿದುದು(ಹೇಳಲಾಗಿದೆ) ಸರ್ವೇಶ್ವರನ ಮತವು+ ಅರಸ ಕೇಳು+ ಎಂದ.
  • (ಶಿವಾನಂದ ಲಹರಿ:ಚಂದಃ-ಶಾಖಿ- ಶಿಖಾನ್ವಿತೈರ್-ದ್ವಿಜ-ವರೈಃ ಸಂಸೇವಿತೇ ಶಾಶ್ವತೇ ಸೌಖ್ಯಾಪಾದಿನಿ ಖೇದ-ಭೇದಿನಿ ಸುಧಾ- ಸಾರೈಃ ಫಲೈರ್-ದೀಪಿತೇ)
ಅರ್ಥ:ಮುನಿಯು ಚೋರನನ್ನು, ಹಿಂಸೆಕೊಡುವವನನ್ನು, ಜಿಪುಣನ್ನು ಜಾರನನ್ನು ನಪುಂಸಕನನ್ನು, ಕಾಲದ ದೋಷ ವಿವಾರಣೆಯಿಂದ ಸೌಖ್ಯವನ್ನು ತರುವೆನು ಎಂಬುವವರನ್ನು ಕಂಡು ಗೌರವಿಸಿ ಕರೆಯದೆ ದೂರದಲ್ಲಿಯೇ ಬಿಡುವುದು. ಇವರೆಲ್ಲರೂ ಸರ್ವ ಕಲಸಕ್ಕೂ ಬಹಿಷ್ಕಾರಿಗಳು ಎಂದು ಹೇಳಲಾಗಿದೆ. ಇದು ಸರ್ವೇಶ್ವರನ ಮತವು. ಅರಸನೇ ಕೇಳು,' ಎಂದ.
ಮೊದಲಲಾ ಮಾಹಿಷಿಕನ ಮ
ಧ್ಯದಲಿ ವೃಷಲೀವಲ್ಲಭನನಂ
ತ್ಯದಲಿ ವಾಗ್ಧೋಷಕನ ಕಂಡವರುಗಳ ಭಾಗ್ಯನಿಧಿ |
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥ ನಿಶ್ಚಯ
ವಿದನರಿದು ನಡಿವುದು ನಯವು ಭೂಪಾಲ ಕೇಳೆಂದ ||೪೮||
ಪದವಿಭಾಗ-ಅರ್ಥ:ಮೊದಲಲಿ+ ಆ ಮಾಹಿಷಿಕನ (ಕ್ಷತ್ರಿಯ ತಂದೆ ವೈಶ್ಯತಾಯಿಯ ಮಗ- ಸಂಕರ ಪುತ್ರ) ಮಧ್ಯದಲಿ ವೃಷಲೀವಲ್ಲಭನನು(ಅಂತ್ಯಜ;)+ ಅಂತ್ಯದಲಿ(ಕೊನೆಗೆ) ವಾಗ್ಧೋಷಕನ (ಅಸಭ್ಯ ಮಾತಿನವ) ಕಂಡು+ ಅವರುಗಳ ಭಾಗ್ಯನಿಧಿ ಕದಡಿ(ನಾಶವಾಗಿ) ಹರಿವುದು ಕಂಡ ಮುಖದಲಿ (ದೃಷ್ಠಾಂತದಲ್ಲಿ) ಸದಮಳಿತ(ಸದಮಲ- ಶುದ್ಧ) ಶಾಸ್ತ್ರಾರ್ಥ ನಿಶ್ಚಯವು+ ಇದನು+ ಅರಿದು(ತಿಳಿದು) ನಡಿವುದು ನಯವು(ಯೋಗ್ಯ ನೀತಿ) ಭೂಪಾಲ ಕೇಳೆಂದ.
  • ಮೂಲ: ವಿಶ್ವಸ್ತಸ್ಯೈತಿ ಯೋ ದಾರಾನ್ಯಶ್ಚಾಪಿ ಗುರುತಲ್ಪಗಃ । ವೃಷಲೀಪತಿರ್ದ್ವಿಜೋ ಯಶ್ಚ ಪಾನಪಶ್ಚೈವ ಭಾರತ ॥ 5-37-12
ಅರ್ಥ:ಮುನಿಯ ಭೂಪಾಲನೇ,'ಮೊದಲಲ್ಲಿ ಆ ಸಂಕರಪುತ್ರನನ್ನು ಮಧ್ಯದಲ್ಲಿ ಅಂತ್ಯಜನನ್ನು ಅಂತ್ಯದಲ್ಲಿ ಅಸಭ್ಯ ಮಾತಿನವವನನ್ನು ಕಂಡು ಸಹವಾಸ ಮಾಡಿದರೆ ಅವರುಗಳ ಭಾಗ್ಯನಿಧಿ ನಾಶವಾಗಿ ಹರಿಯುವುದು. ದೃಷ್ಠಾಂತದಲ್ಲಿ, ಪರಿಶುದ್ಧ ಶಾಸ್ತ್ರಾರ್ಥ ನಿಶ್ಚಯವು. ಇದನ್ನು ತಿಳಿದು ನೆಡೆಯುವುದು ಯೋಗ್ಯ ನೀತಿಯು ಕೇಳು,'ಎಂದ.
ಕುಲಮಹಿಷಿ ದುರ್ಮಾರ್ಗ ಮುಖದಲಿ
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು |
ಇಳೆಯೊಳವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತ
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳೆಂದ ||೪೯||
ಪದವಿಭಾಗ-ಅರ್ಥ:ಕುಲಮಹಿಷಿ ದುರ್ಮಾರ್ಗ ಮುಖದಲಿ ಗಳಿಸಿದ+ ಅರ್ಥವನುಂಡು (ಸಂಪತ್ತನ್ನು ಅನುಭವಿಸಿ) ಕಾಲವ ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು( ಹೆಂಡತಿಯ ವ್ಯಭಿಚಾರದಿಂದ ಹಣಗಳಿಸುವವನು,), ಇಳೆಯೊಳು+ ಅವರೊಡನಾಡಿದ+ ಅವದಿರುಗಳಿಗೆ ನರಕಾರ್ಣವದೊಳು (ಆರ್ಣವ- ಸಮುದ್ರ ) + ಆಳುತ ಮುಳುಗುತ+ ಇರುತಿಹುದು+ ಅಲ್ಲದೇ ಗತಿಯಿಲ್ಲ ಕೇಳೆಂದ
ಅರ್ಥ:ಪಟ್ಟದ ರಾಣಿಯನ್ನು ದುರ್ಮಾರ್ಗ ಮುಖದಲ್ಲಿ ತೊಡಗಿಸಿ ಗಳಿಸಿದ ಸಂಪತ್ತನ್ನು ಉಂಡುಕಾಲವ ಕಳೆವವವರು ನಿರ್ಭಾಗ್ಯರು ಕಣಾ! ಮಾಹಿಷಿಕರೆಂಬವರು ಭೂಮಿಯಲ್ಲಿ ಇದ್ದು ಅವರ ಒಡನಾಡಿದರುಗಳಿಗೆ ನರಕಾರ್ಣವದಲ್ಲಿ ಆಳುತ್ತಾ ಮುಳುಗುತ್ತಾ ಇರುತ್ತಿರುವರು. ಅದ ಅಲ್ಲದೇ ಬೇರೆ ಗತಿಯಿಲ್ಲ ಕೇಳು,'ಎಂದ.

ವಿಪ್ರ ಪ್ರಶಂಸೆ[ಸಂಪಾದಿಸಿ]

ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾದೀನವಾಗಿಹುದಾಗಿ ಲೋಕದಲಿ |
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವ
ದೈವವೆಂಬುದಾವುದೈ ಹೇಳೆಂದನಾ ಮುನಿಪ ||೫೦||
ಪದವಿಭಾಗ-ಅರ್ಥ:ದೈವದ+ ಅಧೀನದಲಿ ಜಗವು,+ ಆ ದೈವ ಮಂತ್ರಾಧೀನ(ಮಂತ್ರಕ್ಕೆ ಅಧೀನವಾಗಿದೆ.), ಮಂತ್ರವು ಭೂವಿಬುಧರ (ಬ್ರಾಕ್ಮಣರ)+ ಅದೀನವಾಗಿಹುದು+ ಆಗಿ ಲೋಕದಲಿ ದೈವವೇ ಬ್ರಾಹ್ಮಣನು+ ಅದಲ್ಲದೆ ಭಾವಿಸಲು ಬುಧರಿಂದ(ಬ್ರಾಕ್ಮಣರ)+ ಅಧಿಕವ+ ದೈವವೆಂಬುದು+ ಆವುದೈ ಹೇಳೆಂದನಾ ಮುನಿಪ.
ಅರ್ಥ:ಮುನಿಯು ರಾಜನಿಗೆ,'ದೈವದ ಅಧೀನದಲ್ಲಿ ಜಗತ್ತು ಇದೆ; ಆ ದೈವವು ಮಂತ್ರಕ್ಕೆ ಅಧೀನವಾಗಿದೆ. ಮಂತ್ರವು ಬ್ರಾಕ್ಮಣರ ಅದೀನವಾಗಿರುವುದು. ಹೀಗಾಗಿ ಲೋಕದಲ್ಲಿ ದೈವವೇ ಬ್ರಾಹ್ಮಣನು, ಅದಲ್ಲದೆ ಭಾವಿಸಲು ವಿಪ್ರರಿಂದ ಅಧಿಕವಾದ ದೈವವೆಂಬುದು ಯಾವುದಯ್ಯಾ ಹೇಳು,'ಎಂದನು.(ಆ ಮುನಿಪ.)
ಕೆಲಸ ಗತಿಯಲಿ ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ |
ಸಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ||೫೧||
ಪದವಿಭಾಗ-ಅರ್ಥ:ಕೆಲಸ ಗತಿಯಲಿ ಕಡೆದ ಶಿಲೆಯನು ಕಲುಕುಟಿಕನು+ ಇಳುಹುವನು+ ಅದಲ್ಲದೆ ಹಲವು ಪರಿಯಿಂದ+ ಅದನು ಲೋಕಕೆ ದೈವವನು ಮಾಡಿ ಸಲಿಸುವವರು+ ಉಂಟೇ ಸುರಾಸುರ ರೊಳಗೆ(ಸುರ+ ಮತ್ತು ಅಸುರರೊಳಗೆ - ದೇವ ರಾಕ್ಷಸರಲ್ಲಿ) ವಿಪ್ರೋತ್ತಮರು+ ಉಳಿಯೆ ಜಗದೊಳಗೆ ದೈವವು+ ಅದಾವುದೈ ಹೇಳೆಂದನು+ ಆ ಮುನಿಪ
ಅರ್ಥ:ಆ ಮುನಿಯು,'ಕೌಶಲಕೆಲಸದ ಗತಿಯಲ್ಲಿ ಕಡೆದ ಶಿಲೆಯನ್ನು ಕಲುಕುಟಿಕ ಶಿಲ್ಪಯು ದೇವೆರ ಗುಡಿಯಲ್ಲಿ ಸರಿಯಾದ ರೀತಿಯಲ್ಲಿ ಪೀಠದಲ್ಲಿ ಇಳಿಸುವನು. ಅದಲ್ಲದೆ ಹಲವು ಪರಿಯಿಂದ ಅದನ್ನು ಲೋಕಕ್ಕೆ ದೈವವನ್ನು ಮಾಡಿ ಸಲ್ಲಿಸುವವರು ವಿಪ್ರರಲ್ಲದೇ ಬೇರೆ ಉಂಟೇ? ಸುರ ಮತ್ತು ಅಸುರರಲ್ಲಿ ವಿಪ್ರೋತ್ತಮರು ಉಳಿಯಲು ಜಗದೊಳಗೆ ಮತ್ತೆ ಬೇರೆ ದೈವವು ಅದು+ ಯಾವುದಯ್ಯಾ ಹೇಳು ಎಂದನು.
ಎಣಿಸಬಹುದೂರ್ವರೆಯ ಸೈಕತ
ಮಣಿಯನೊಯ್ಯಾರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊಳಬಹುದು |
ಎಣಿಸಬಾರದದೊಂದು ದಿವಿಜರ
ಗಣಕೆಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ ||೫೨||
ಪದವಿಭಾಗ-ಅರ್ಥ:ಎಣಿಸಬಹುದು+ ಒರ್ವರೆಯ ಸೈಕತ ಮಣಿಯನು(ಮರಳಿನ ಕಣವನ್ನು, ಒಬ್ಬರೇ)+ ಒಯ್ಯಾರದಲಿ(ಸುಲಭದಲ್ಲಿ); ಗಗನಾಂಣದೊಳು+ ಐತಹ ವೃಷ್ಟಿ (ಬರುವ ಮಳೆ) ಬಿಂದುವ(ಆಕಾಶಗಿಂದ ಬರುವ ಮಳೆಯ ಹನಿಯನ್ನು) ಲೆಕ್ಕಗೊಳಬಹುದು, ಎಣಿಸಬಾರದು+ ಅದ+ ಒಂದು ದಿವಿಜರ ಗಣಕೆ ಗೋಚರವಾಗಿ ಸದ್ಬ್ರಾಹ್ಮಣನೊಳು+ ಒಬ್ಬನ ರಕ್ಷಿಸಿದ ಫಲವ+ ಅರಸ ಕೇಳೆಂದ.
ಅರ್ಥ: ಮುನಿಯು ರಾಜನನ್ನು ಕುರಿತು,'ಒಬ್ಬರೇ ಮರಳಿನ ಕಣವನ್ನು ಸುಲಭದಲ್ಲಿ ಎಣಿಸಬಹುದು; ಆಕಾಶದಿಂದ ಬರುವ ಮಳೆಯ ಹನಿಯನ್ನು ಲೆಕ್ಕಮಾಡಬಹುದು ಆದರೆ ಸದ್ಬ್ರಾಹ್ಮಣರ ಸಮೂಹದಲ್ಲಿ ಗೋಚರವಾಗುವಂತೆ ಒಬ್ಬನನ್ನು ರಕ್ಷಿಸಿದ ಫಲವನ್ನು ಎಣಿಸಸಲು ಸಾಧ್ಯವಿಲ್ಲ; ಅರಸನೇ ಕೇಳು+ ಎಂದ.
ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತ ಪರಗುಣಸ್ತುತಿ ನಿಂದೆಗಳನುಳಿದು |
ಭೂತನಾಥನ ಭಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಹಿರಿದಿರಲದುವೆ ಕೇಳ್ ಸುಕೃತಕಕೆ ಕಡೆಯೆಂದ ||೫೩||
ಪದವಿಭಾಗ-ಅರ್ಥ:ಜಾತಿಧರ್ಮವನು+ ಅನುಸರಿಸಿ ವರ ಮಾತೃಪಿತೃ ಪರಿಚರಿಯದಲಿ(ಸೇವೆಯಲ್ಲಿ) ಸಂಪ್ರೀತಿವಡೆಯುತೆ(ವ- ಪ; ಪಡೆಯುತ್ತಾ) ಪರಗುಣಸ್ತುತಿ ನಿಂದೆಗಳನು+ ಉಳಿದು(ಬಿಟ್ಟು) ಭೂತನಾಥನ(ಶಿವನ) ಭಕುತಿಯಲಿ ವಿಖ್ಯಾತವಹ, ಗುರುದೈವದಲಿ ಭಯ ಭೀತಿ ಹಿರಿದು (ಬಹಳ)+ ಇರಲು+ ಅದುವೆ ಕೇಳ್ ಸುಕೃತಕಕೆ (ಸುಕೃತಿಗೆ- ಒಳ್ಳೆಯ ಕೆಲಸ,ಸತ್ಕಾರ್ಯ) ಕಡೆಯೆಂದ (ಅಂತಿಮ ಗುರಿ).
ಅರ್ಥ:ಮುನಿಯು,'ರಾಜನೇ, ಜಾತಿಧರ್ಮವನ್ನು ಅನುಸರಿಸಿ, ಶ್ರೇಷ್ಠರಾದ ಮಾತೃಪಿತೃಗಳ ಸೇವೆಯಲ್ಲಿ ಸಂಪ್ರೀತಿ ಪಡೆಯುತ್ತಾ ಪರರ ಗುಣಸ್ತುತಿ ನಿಂದೆಗಳನ್ನು ಮಾಡದೆ, ಪರರು ಹೊಗಳಿ ಅಥವಾ ನಿಮದಿಸಿದರೂ ಅದನ್ನು ಗಣಿಸದೆ, ಭೂತನಾಥನಾದ ಶಿವನನ್ನು ಭಕ್ತಿಯಲ್ಲಿ ನಿರತನಾಗಿ ವಿಖ್ಯಾತವಾಗಿರುವ, ಗುರು, ದೈವದಲ್ಲಿ ಭಯ ಭೀತಿಗಳನ್ನು ಬಹಳವಾಗಿ ಹೊಂದಿರಲು, ಅದುವೆ ಕೇಳು ಸುಕೃತಿಗೆ- ಒಳ್ಳೆಯದಕ್ಕೆ ಕೊನೆಯ ದಾರಿ.' ಎಂದ.

ಧನ - ಸಂಪತ್ತಿನ ಮಹಿಮೆ[ಸಂಪಾದಿಸಿ]

ಅರ್ಥದಿಂದಹ ಸಿದ್ಧಿ ಯಾವುದ
ನರ್ಥವೆಂಬುದದೇನು ತನಗೆ
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ |
ತೀರ್ಥವಾವುದು ವಿಪ್ರರೊಳಗೆ ಸ
ಮರ್ಥರಾರು ಸುಧಾತ್ರಿಯೊಳಗೆಯು
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ||೫೪||
ಪದವಿಭಾಗ-ಅರ್ಥ:ಅರ್ಥದಿಂದ(ಧನದಿಂದ- ಹಣದಿಂದ)+ ಅಹ(ಆಗುವ) ಸಿದ್ಧಿ ಯಾವುದು+ ಅನರ್ಥವೆಂಬುದು+ ಅದೇನು ತನಗೆ ಸ್ವಾರ್ಥವು+ ಆರು ಪರಾರ್ಥದಿಂದ(ಬೇರೆಯವರ ಧನದಿಂದ)+ ಅಹುದು (ಆಗುವುದು)+ ಆವುದು(ಯಾವುದು)+ ಅವನಿಯಲಿ(ಭೂಮಿಯಲ್ಲಿ) ತೀರ್ಥವಾವುದು ವಿಪ್ರರೊಳಗೆ ಸಮರ್ಥರಾರು, ಸುಧಾತ್ರಿಯೊಳಗೆಯು(ಸು+ ಧಾತ್ರಿ; ಉತ್ತಮ ಭೂಮಿಯಲ್ಲಿ) ವ್ಯರ್ಥಜೀವಿಗಳು+ ಆರು ಚಿತ್ತೈಸು(ಕೇಳು)+ ಎಂದನು+ ಆ ಮುನಿಪ.
ಅರ್ಥ:ಮುನಿಯು,'ಧನದಿಂದ ಆಗುವ ಸಿದ್ಧಿ ಯಾವುದು, ಅನರ್ಥವೆಂಬುದು- ಧನವಿಲ್ಲದೆ ಜೀವಿಸುವುದು ಅದೇನು? ತನಗೆ ಸ್ವಾರ್ಥವು- ಧನಸಹಾಯಕರು ಯಾರು? ಬೇರೆಯವರ ಧನದಿಂದ ಅನುಕೂಲ ಆಗುವುದು ಯಾವುದು? ಭೂಮಿಯಲ್ಲಿ ಪುಣ್ಯಕ್ಷೇತ್ರ- ತೀರ್ಥವಾವುದು?(ಶಾಸ್ತ್ರ ಯಾವುದು?) ವಿಪ್ರರಲ್ಲಿ ಸಮರ್ಥರಾರು?, ಈ ಉತ್ತಮ ಭೂಮಿಯಲ್ಲಿ ವ್ಯರ್ಥಜೀವಿಗಳು ಯಾರು ಕೇಳು ಎಂದನು,' ಆ ಮುನಿಪ.
ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ |
ಧನಿಕನಂತೆ ಸಮಸ್ತ ಸುಖ ಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೫೫||
ಪದವಿಭಾಗ-ಅರ್ಥ:ಧನವನುಳ್ಳ ಮಹಾತ್ಮನು+ ಆವುದ ನೆನೆದೊಡೆ+ ಅದು ಕೈಸಾರುವುದು, ನಿರ್ಧನಿಕ(ಹಣವಿಲ್ಲದವ) ಬಯಸಿದ ಬಯಕೆ ಬಯಲಹುದು(ಶೂನ್ಯ)+ ಅಲ್ಲದೇ ಬೇರೆ ಧನಿಕನಂತೆ ಸಮಸ್ತ ಸುಖ ಸಂಜನಿಸುವುದೆ (ಸಿಗುವುದೇ)? ಸರ್ವಕ್ಕೆ ಸಾಧನ ಧನವದು+ ಅಲ್ಲದೆ ಭುವನದೊಳಗೆ+ ಅನ್ಯತ್ರವು (ಬೇರೆರೀತಿ)+ ಇಲ್ಲ+ ಎಂದ
ಅರ್ಥ:ಮುನಿಯು,'ಧನವನ್ನು ಹೊಂದಿದ ಮಹಾತ್ಮನು ಯಾವುದನ್ನಾದರೂ ನೆನೆದರೆ ಅದು ಕೈಸಾರುವುದು, ದೊರಕುವುದು. ನಿರ್ಧನಿಕನು ಬಯಸಿದ ಬಯಕೆ ಫಲಕೊಡದೆ ಶೂನ್ಯವಾಗುವುದು. ಅದು ಅಲ್ಲದೇ ಹನವಿಲ್ಲದವಗೆ ಬೇರೆ ಧನಿಕನಂತೆ ಸಮಸ್ತ ಸುಖ ಸಂಜನಿಸುವುದೆ? ಸರ್ವಕ್ಕೆ ಸಾಧನವು ಧನವು; ಅದಲ್ಲದೆ ಭೂಮಿಯಲ್ಲಿ ಅನ್ಯತ್ರವು ಇಲ್ಲ,' ಎಂದ.

ಧರ್ಮ[ಸಂಪಾದಿಸಿ]

ವ್ಯರ್ಥರುಗಳೊಡನಾಟ ತಮ್ಮ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ|
ಅರ್ಥವಿಲ್ಲದ ಸಿರಿಯ ಸಡಗರ
ಅರ್ಥಿಯಿಲ್ಲದ ಬಾಳುವೆಗಳಿವ
ನರ್ಥ ಪಾರಂಪರೆಯಲೇ ಕೇಳೆಂದನಾ ಮುನಿಪ ||೫೬||
ಪದವಿಭಾಗ-ಅರ್ಥ:ವ್ಯರ್ಥರುಗಳ (ಅಪ್ರಯೋಜಕರು)+ ಒಡನಾಟ ತಮ್ಮ ಸ್ವಾರ್ಥವಿಲ್ಲದರುಗಳ ಕೂಟ, ಪರಾರ್ಥದಿಂದ (ಬೇರೆಯವರ ಸಂಪತ್ತಿನಿಂದ) + ಉಜ್ಜೀವಿಸಿದವನ ಬದುಕು- ಜೀವನ, ಲೋಕದಲಿ ಅರ್ಥವಿಲ್ಲದ ಸಿರಿಯ ಸಡಗರ, ಅರ್ಥಿಯಿಲ್ಲದ (ಅರ್ಥಿ= ಸಂಪತ್ತು ಬೇಡುವವನು , ಸೇವಕ, ವಾದಿ)(ಅರ್ಥಿ+ ಇಲ್ಲದ-> ಅರ್ಥಕ್ಕೆ ಅನ್ವಯಿಸದು; ಅಥವಾ ಅರ್ಥ - ಹಣ ಇಲ್ಲದ ಅರ್ಥಿಯಾದವನ*??? - ಬಾಳುವೆಗಳು+ ಇವು+ ಅನರ್ಥ ಪಾರಂಪರೆಯಲೇ ಕೇಳು+ ಎಂದನು+ ಆ ಮುನಿಪ.
ಅರ್ಥ:ಮುನಿಯು,'ಅಪ್ರಯೋಜಕರೊಡನೆ ಒಡನಾಟ ಬೇಡ; ತಮ್ಮ ಸ್ವಾರ್ಥವಿಲ್ಲದರೊಎನರ ಕೂಟ ಒಳಿತು;, ಬೇರೆಯವರ ಸಂಪತ್ತಿನಿಂದ ಉಜ್ಜೀವಿಸಿದವನ ಜೀವನ ಲೋಕದಲ್ಲಿ ಅರ್ಥವಿಲ್ಲದ ಸಿರಿಯ ಸಡಗರವು; ಸಾಲ ಮಾಡಿ ಆಡಂಬರ ಮಾಡುವವನ ಆಡಂಬರ ಅರ್ಥವಿಲ್ಲದ್ದು ; ಬೇಡುವವನ ಬಾಳುವೆಗಳು ಇವೆಲ್ಲಾ ಅನರ್ಥ ಪಾರಂಪರೆಯಲೇ ಕೇಳು,' ಎಂದನು.
ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು |
ಆಡಲಾಗದು ದಸ್ಯುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ ||೫೭||
ಪದವಿಭಾಗ-ಅರ್ಥ:ಮಾಡುವುದು ಧರ್ಮವನು, ಸುಜನರ ಕೂಡುವುದು, ಪರಪೀಡೆಯೆಂಬುದ ಮಾಡಲಾಗದು, ಕರಣ ಮೂರರೊಳು(ಕಾಯ- ದೇಹ, ವಾಕ್ಕು ಮತ್ತು ಮನಸ್ಸು ಎಂಬ ಮೂರು ಅಂಗಗಳು)+ ಅಲ್ಲದ (ಮಾಡಬಾರದ)+ ಆಟವನು ಆಡಲಾಗದು(ಕೆಡುಕು ಕೆಲಸವನ್ನು ಮಾಡಬಾರದು) ದಸ್ಯುಜನವನು(ನಾಗರಿಕ; ಕಳ್ಳ, ತುಡುಗ) ಕೂಡಲಾಗದು, ಇದೆಂಬ ಮಾರ್ಗವ ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವು (ಸ್ವ+ ಅರ್ಥಕರ- ತನಗೆ ಹಿತ ಮತ್ತು ಲಾಭಕರ)+ ಎಂದ
ಅರ್ಥ:ಮುನಿಯು ರಾಜನಿಗೆ,'ಧರ್ಮವನ್ನು ಮಾಡಬೇಕು; ಸುಜನರ ಜೊತೆಗೆ ಒಡನಾಡಬೇಕು;, ಪರಪೀಡೆಯೆಂಬುದನ್ನು ಮಾಡಬಾಗದು; ಕಾಯಾ- ವಾಚಾ- ಮನಸಾ ಈ ಮೂರು ಅಂಗಗಳಿಂದ ಅಲ್ಲದ ಕೆಲಸವನ್ನು - ಕೆಡುಕು ಕೆಲಸವನ್ನು ಮಾಡಬಾರದು; ಕೆಟ್ಟ ಜನರ ಜೊತೆ ಕೂಡಬಾರದು, ಇದು ಯೋಗ್ಯವೆಂಬ ಮಾರ್ಗವನ್ನು ನೋಡಿ ನಡೆಯುವುದು ತನಗೆ ಪರಮ ಸ್ವಾರ್ಥಕರವು, ತನಗೆ ಲಾಭಕರವು,' ಎಂದ.
ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ |
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ||೫೮||
ಪದವಿಭಾಗ-ಅರ್ಥ:ಕರಿತುರಗ (ಆನೆ ಕುದುರೆ) ಮೊದಲಾದ ವಸ್ತುಗಳು+ ಅರಮನೆಗಳಲಿ ಪುತ್ರಮಿತ್ರರು ತರುಣಿಯರು ಸಹಭವರು(ಸಹೋದರರು) ಗೋತ್ರಜರು(ದಾಯಾದಿಗಳು)+ ಅಡವಿಯೊಳಗೆ+ ಇಕ್ಕಿ(ಹಾಕಿ) ತಿರುಗುವರು, ನಿಜ(ತಮ್ಮ) ಸುಕೃತ ದುಷ್ಕೃತವೆರಡು ಬೆಂಬಿಡವು+ ಅಲ್ಲದೆ+ ಉಳಿದುದನು+ ಅರಸ ಬಲ್ಲವರು+ ಆರು ಧರ್ಮರಹಸ್ಯ ವಿಸ್ತರವ.
ಅರ್ಥ:ಮುನಿಯು,'ಅರಮನೆಗಳಲ್ಲಿ ಆನೆ ಕುದುರೆ ಮೊದಲಾದ ವಸ್ತುಗಳು ಮತ್ತು ಪುತ್ರಮಿತ್ರರು, ತರುಣಿಯರು, ಸಹೋದರರು ದಾಯಾದಿಗಳು ಇರುವರು. ಆದರೂ ದಾಯಾದಿಗಳನ್ನು ಅಡವಿಯಲ್ಲಿ ಹಾಕಿ ಅವರು ಅಲ್ಲಿ ತಿರುಗುವರು; ತಮ್ಮ ಸುಕೃತ ದುಷ್ಕೃತವು ಎಂದು ಎರಡು ಬಗೆ ಬೆಂಬಿಡುವುದಿಲ್ಲ. ಅಲ್ಲದೆ ಉಳಿದುದನು- ಮುಂದಿನದನ್ನು ಅರಸನೇ ಧರ್ಮರಹಸ್ಯದ ವಿಸ್ತಾರವನ್ನು ಯಾರು ಬಲ್ಲರು? ಯಾರೂ ಅರಿಯರು.
ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂತರದ ಪಾತಕವ |
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸಕೇಳೆಂದ ||೫೯||
ಪದವಿಭಾಗ-ಅರ್ಥ:ಧರ್ಮದ+ ಆಧಾರದಲಿ+ ಇಹುದು ಜಗ, ಧರ್ಮವುಳ್ಳನನು+ ಆಶ್ರಯಿಸುವುದು, ಧರ್ಮವೇ ನೂಕುವುದು ಜನ್ಮಾಂತರದ ಪಾತಕವ, ಧರ್ಮವೇ ಸರ್ವ ಪ್ರತಿಷ್ಠಿತ, ಧರ್ಮವೆಂಬುದು ಪರಮಪದವು+ ಆ ಧರ್ಮವನು ಬಿಟ್ಟಿಹುದು ಬದುಕಲ್ಲ+ ಅರಸ ಕೇಳು+ ಎಂದ
ಅರ್ಥ:ಮನಿಯು ಅರಸನೇ,'ಧರ್ಮದ ಆಧಾರದಲ್ಲಿ ಜಗತ್ತು ಇರುವುದು; ಧರ್ಮವುಳ್ಳನನ್ನು ಧರ್ಮ ಆಶ್ರಯಿಸುವುದು; ಧರ್ಮವೇ ಜನ್ಮಾಂತರದ ಪಾತಕವನ್ನು ನೂಕಿ ಕಳೆಯುವುದು; , ಧರ್ಮವೇ ಸರ್ವಕಾಲದಲ್ಲಿ ಪ್ರತಿಷ್ಠಿತ- ಇರುವುದು; ಧರ್ಮವೆಂಬುದು ಪರಮಪದವು; ಆ ಧರ್ಮವನ್ನು ಬಿಟ್ಟಿರುವುದು ಬದುಕಲ್ಲ! ಕೇಳು,' ಎಂದ.
ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಬಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ |
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದೊಳವನೀಶ ಕೇಳೆಂದ ||೬೦||
ಪದವಿಭಾಗ-ಅರ್ಥ:ಪರಿಪರಿಯ ಯಜ್ಞವನು ವಿರಚಿಸಿ ಸುರಪತಿಯ(ಇಂದ್ರನ) ಸಂತುಷ್ಟಿ ಬಡಿಸಲು ಸುರಿವ ನವ ಸಂಪೂರ್ಣವಾಗಿ ಸುವೃಷ್ಟಿಯನು, ಜಗಕೆ ಹರಿಹಯನು(ಇಂದ್ರನು) ಸಸ್ಯಾಧಿಕಂಗಳ(ಸಸ್ಯ ಮೊದಲಾದವುಗಳನ್ನು) ಹೊರೆಯಲೋಸುಗ (ಸಾಕಿಬೆಳೆಸುವುದಕ್ಕಾಗಿ) ಮೈಗೆ ಮೈಯಾಗಿ+(ಎಲ್ಲ ರೀತಿಯಲ್ಲಿ ಸಹಾಯಕನಾಗಿ) ಇರುತಿಹನು ಭುವನದೊಳು(ಜಗತ್ತಿನಲ್ಲಿ)+ ಅವನೀಶ ಕೇಳೆಂದ.
ಅರ್ಥ:ಮುನಿಯು,'ಪರಿಪರಿಯ- ನಾನಾಬಗೆಯ ಯಜ್ಞಗಳನ್ನು ಕ್ರಮವಾಗಿ ನಮಾಡಿ ಇಂದ್ರನನ್ನು ಸಂತುಷ್ಟಿಪಡಿಸಲು ಅವನು ಸಂಪೂರ್ಣವಾಗಿ ಸುವೃಷ್ಟಿಯನ್ನು- ಮಳೆಯನ್ನು ಸುರಿಸುವನು. ಜಗತ್ತಿಗೆ ಇಂದ್ರನು ಸಸ್ಯ ಮೊದಲಾದವುಗಳನ್ನು ಸಾಕಿ ಬೆಳೆಸುವುದಕ್ಕಾಗಿ ಮೈಗೆ ಮೈಯಾಗಿ- ಸಹಾಯಕನಾಗಿ ಈ ಜಗತ್ತಿನಲ್ಲಿ ಇರುವನು. ರಾಜನೇ ಕೇಳು,' ಎಂದ.
ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವ ತೀರ್ಥದ
ಸತ್ವವನು ಸನ್ನಿಹಿತವಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ||೬೧||
ಪದವಿಭಾಗ-ಅರ್ಥ:ಎತ್ತಲು+ ಆನು(ನಾನು) ಸುತೀರ್ಥವೆಂಬುದ ಚಿತ್ತವಿಸುವೊಡೆ(ಮನವಿಟ್ಟು ಕೇಳುವುದಾದರೆ), ಸರ್ವ ತೀರ್ಥದ ಸತ್ವವನು ಸನ್ನಿಹಿತವಾಗಿ+ ಅವಧರಿಸು ನೀನು+ ಅದನು ವಿಸ್ತರಿಸುವೆನು; ವಿಪ್ರ-ಪಾದ ವಿಮುಕ್ತ(ಹೊರಟ) ವಿಮಳ(ವಿಮಲ, ಪವಿತ್ರ)+ ಉದಕವನು+ ಆವನು ನೆತ್ತಿಯಲಿ ಧರಿಸಿದವನು+ ಅವನು ಕೃತಾರ್ಥನು+ ಅಹನು(ಆಗುವನು)+ ಎಂದ.
ಅರ್ಥ:ಮುನಿಯು,'ನೀನು ಮನವಿಟ್ಟು ಕೇಳುವುದಾದರೆ, ಯಾವುದು ಸರ್ವ ತೀರ್ಥದ ಸತ್ವವನ್ನೂ ಸನ್ನಿಹಿತ- ತನ್ನಲ್ಲಿ ಇರಿಸಿಕೊಂಡ ಸುತೀರ್ಥವೆಂದು ನಾನು ವಿಸ್ತರಿಸಿ ಹೇಳುವೆನು. ನೀನು ಕೇಳು; ಯಾದನು ; ವಿಪ್ರಪಾದದಿಂದ ಹೊರಟ ಪವಿತ್ರ ಉದಕವನ್ನು- ನೀರನ್ನು, ಆವನು ತನ್ನ ನೆತ್ತಿಯಲಿ ಧರಿಸಿದವನೋ ಅವನು ಕೃತಾರ್ಥನು ಆಗುವನು,'ಎಂದ.

ವಿಪ್ರ ಸ್ತುತಿ[ಸಂಪಾದಿಸಿ]

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು |
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ||೬೨||
ಪದವಿಭಾಗ-ಅರ್ಥ: ಶರಧಿಯೊಳು(ಕ್ಷೀರರಸಾಗರದ ವೈಕುಂಠದಲ್ಲಿ ವಾಸುಕಿಯುಮೇಲೆ ) ಹರಿ(ವಿಷ್ಣು) ಯೋಗನಿದ್ರೆಯೊಳು+ ಇರಲು ಭೃಗುವು+ ಐತಂದು ಲಕ್ಷ್ಮೀ ಧರನ ವಕ್ಷಸ್ಥಳವನು (ಎದೆಯನ್ನು) ಒದೆಯಲು ಮುನಿಯ ಚರಣವನು(ಪಾದವನ್ನು ) ಸಿರಿಯ+ ಉದರದೊಳಗೆ+ ಒತ್ತಿ ಧರಣೀಸುರರ(ವಿಪ್ರರ) ಮೆರೆದನು, ತೀರ್ಥಪಾದವ(ಪಾದದಿಂದ ಬಂದ ತೀರ್ಥ) ಧರೆಯೊಳಗೆ ಬುಧರಿಂದ+ ಅಧಿಕವು+ ಅಹ(ಆಗಿರುವ) ತೀರ್ಥವು+ ಇಲ್ಲ+ ಎಂದ.
  • ಟಿಪ್ಪಣಿ: ಭೃಗು ಪ್ರಾಚೀನ ಭಾರತದ ಸಪ್ತರ್ಷಿಗಳಲ್ಲಿ ಒಬ್ಬನು. ಭೃಗುವನ್ನು ಬ್ರಹ್ಮನ ಮಾನಸಪುತ್ರನೆಂದು ಹೇಳಲಾಗಿದೆ. ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂದು ಸಪ್ತೃಋಷಿಗಳಲ್ಲಿ ಜಿಜ್ಞಾಸೆ ಯುಂಟಾದಾಗ, ಅವರು ಅಧಿಕವಾದ ತಪಃಸಿದ್ಧಿ ಪಡೆದ ಎಡದ ಅಂಗಾಲಿನಲ್ಲಿ ವಿಶೇಷ ಕಣ್ಣನ್ನು ಪಡೆದಿದ್ದ ಭೃಗುವನ್ನು ತ್ರಿಮೂರ್ತಿಗಳ್ಲಿ ಯಾರು ಉತ್ತಮರೆಂದು ನಿರ್ಧರಿಸಲು ಹೇಳಿದರು. ಅವನು ಕೂಡಲೆ ಶಿವನ ಬಳಿಗೆ ಹೋದಾಗ, ಶಿವನು ಪಾರ್ವತಿಯೊಡನೆ ಪ್ರೇಮಸಲ್ಲಾಪದಲ್ಲಿದ್ದನು. ಭೃಗುವನ್ನು ಗಮನಿಸಲಿಲ್ಲ; ಭೃಗುವು ಸಿಟ್ಟಿನಿಂದ ಶಿವನಿಗೆ ಇನ್ನು ಮುಂದೆ ಕೇವಲ ಲಿಂಗ ಪೂಜೆಯಾಗಲಿ ಎಂದು ಶಪಿಸಿದನು. ಅವನು ನಂತರ ಬ್ರಹ್ಮನ ಬಳಿ ಹೋದನು, ಅವನೂ ಭ್ರಗುವನ್ನು ಗಮನಿಸಲಿಲ್ಲ.ಸರಸ್ವತಿಯ ಜೊತೆ ವೇದ ಚರ್ಚೆಯಲ್ಲಿದ್ದನು. ಅವನಿಗೂ ಇನ್ನು ಕೇವಲ ಮಂತ್ರಪೂಜೆ ಇರಲಿ- ಭ್ರಹ್ಮನಿಗೆ ಮೂರ್ತಿಪೂಜೆಮಾಡದಿರಲಿ ಎಂದು ಶಪಿಸಿದನು. ನಂತರ ವೈಕುಂಠಕ್ಕೆ ಬಂದಾಗ ವಿಷ್ಣುವು ಯೋಗನಿದ್ರೆಯಲ್ಲಿದ್ದನು. ಸಿಟ್ಟಿನಿಂದ 'ಇವನಿಗೆ ಯಾವಾಗಲೂ ನಿದ್ದೆ' ಎಂದು ಅವನ ಎದೆಗೆ ಎಡದ ಕಾಲಿನಿಂದ ಒದ್ದನು. ಆಗ ಹರಿಯು ಮುನಿಯ ಚರಣವನ್ನು ನೋವಾಯಿತೇ ಎಂದು ತನ್ನ ಸಿರಿಯಉದರಕ್ಕೆ ಒತ್ತಿ ಕೈಯಿಂದ ಸವರಿ, ಅವನ ಅಹಂಕಾರಕ್ಕೆ ಕಾರಣವಾಗಿದ್ದ ಆ ಪಾದದಲ್ಲಿದ್ದ ಕಣ್ಣನ್ನು ಕಿತ್ತು ತನ್ನ ಎದೆಗೆ ಅಂಟಿಸಿಕೊಂಡನು (ಅದೇ ಕೌಸ್ತುಭರತ್ನವೆಂದು ಹೇಳುತ್ತಾರೆ; ಕೌಸ್ತಭವು ಸಮುದ್ರಮಥನದದಲ್ಲಿ ದೊರಕಿದ್ದು ಎಂಬ ಕಥೆಯೂ ಇದೆ). ಭೃಗುವಿನ ಅಹಂಕಾರವು ಇಳಿದು ತ್ರಿಮೂರ್ತಿಗಳಲ್ಲಿ ವಿಷ್ಣುವೇ ಶ್ರೇಷ್ಟನೆಂದು ತೀರ್ಮಾನಿಸಿ ಉಳಿದ ಋಷಿಗಳಿಗೆ ತಿಳಿಸಿದನು. ಸಪ್ತೃಷಿಗಳು ಸರಸ್ವತೀ ತೀರದಲ್ಲಿ ಮಾಡಿದ ಯಾಗದಲ್ಲಿ ಹರಿಗೆ ಪ್ರಥಮಸ್ಥಾನ ನೀಡಿದರು.
ಅರ್ಥ:ಮುನಿಯು,'ರಾಜನೇ, ಕ್ಷೀರರಸಾಗರದ ವೈಕುಂಠದಲ್ಲಿ ವಾಸುಕಿಯು ಮೇಲೆ ಹರಿಯು ಯೋಗನಿದ್ರೆಯಲ್ಲಿ ಮಲಗಿರಲು ಅಧಿಕ ತಪಃಸಿದ್ಧಿ ಪಡೆದ ಭೃಗುಮುನಿಯು ಸಾತ್ವಿಕತೆಯನ್ನು ಪರೀಕ್ಷೆ ಮಾಡಲು ವೈಕುಂಠಕ್ಕೆ ಬಂದು ಲಕ್ಷ್ಮೀಧರನಾದ ಹರಿಯ ವಕ್ಷಸ್ಥಳವನ್ನು ಒದೆಯಲು, ಹರಿಯು ಮುನಿಯ ಚರಣವನ್ನು ನೋವಾಯಿತೇ ಎಂದು ತನ್ನಸಿರಿಯ ಉದರಕ್ಕೆ ಒತ್ತಿ ವಿಪ್ರರ ಸೇವೆಮಾಡಿ ಮೆರೆದನು. ಅದರಿಂದ ವಿಪ್ರರ ಪಾದದಿಂದ ಬಂದ ತೀರ್ಥ ಈ ಭೂಮಿಯಲ್ಲಿ ಹೆಚ್ಚಿನದು. ಬುಧರಿಂದ ಅಧಿಕವಾಗಿರುವ ತೀರ್ಥವು ಬೇರೆ ಇಲ್ಲ.'ಎಂದ.
ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ |
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆ ||೬೩||
ಪದವಿಭಾಗ-ಅರ್ಥ: ಮಾಡುತಿಹ ಯಜ್ಞವನು, ಪರರಿಗೆ ಮಾಡಿಸುವ ವೇದಾಧ್ಯಯನವನು, ಮಾಡುತಿಹ ತದ್+ ವಿಷಯದಲಿ ಯೋಗ್ಯರನು, ಮಾಡಿಸುವ ಮಾಡುತಿಹ ದಾನವನು, ಲೋಗರು ನೀಡುತಿರಲು ಒಳಕೊಂಬ ಗುಣವನು ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆ.
ಅರ್ಥ:ಮುನಿಯು ರಾಜನಿಗೆ ಹೇಳಿದ,'ವಿಪ್ರನು ಮಾಡುತ್ತರುವ ಯಜ್ಞವನ್ನು, ಅವನು ಪರರಿಗೆ ಮಾಡಿಸುವ ವೇದಾಧ್ಯಯನವನ್ನು, ಅವನು ಮಾಡುತ್ತಿರುವ ಆ ವಿಷಯದಲ್ಲಿ ಯೋಗ್ಯರನ್ನು ಕುರಿತು ಮಾಡಬೇಕು. ಹೀಗೆ ಅವನು ಮಾಡಿಸುವ, ಮಾಡುತ್ತಿರುವ ದಾನವನ್ನು, ಲೋಗರು- ಜನರು ವಿಪ್ರರಿಗೆ ನೀಡುತ್ತಿರಲು, ಅದನ್ನು ಒಳಕೊಂಬ- ಪಡೆಯುವ ಅರ್ಹತೆಯ ಗುಣವನ್ನು ವಿಪ್ರರಲ್ಲಿ ಸಮರ್ಥನು ಕೂಡಿಕೊಂಡಿರುವನೇ ಎನ್ನುವುದ ತಿಳಿದಿರಬೇಕು (ಎನ್ನವುದು ಮುಖ್ಯ).
ವೇದಪುರುಷನ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜ ಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ನೇದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ ||೬೪||
ಪದವಿಭಾಗ-ಅರ್ಥ: ವೇದಪುರುಷನ (ವೇದ ಪುರುಷನ -ನಾರಾಯಣನ) ವಿಗ್ರಹದಲಿ- ದೇಹದಲ್ಲಿ- ಈ ಜಗತ್ತಿನಲ್ಲಿ, ವಿಭೇದವಿಲ್ಲದೆ (ತುಂಡಿಲ್ಲದೆ, ಬಿಡುವಿಲ್ಲದೆ) ಬಿಸಜಸಂಭವನು (ಕಮಲದಲ್ಲಿ ಹುಟ್ಟಿದ ಬ್ರಹ್ಮನ)+ ಆದಿಯಾದ(ಮೊದಲಾಗಿ) ಸಮಸ್ತ ದೇವರುಗಳು ನೆಲೆವನೆಗಳಾಗಿ (ಆಶ್ರಯ ಪಡೆದವರಾಗಿ) ನೇದುಕೊಂಡಿಹರು (ಮಧ್ಯೆ ಬಿಡುವಿಲ್ಲದಂತೆ ಇರುವರು)+ ಅಂತು ಕಾರಣ ವಾದಿಸದೆ (ವಿರೋಧಿಸದೆ) ವಿಪ್ರೋತ್ತಮರನು+ ಅಭಿವಾದಿಸುವುದು(ನಮಿಸುವುದು)+ ಉತ್ತಮವಲೇ ಕೇಳೆಂದನು+ ಆ ಮುನಿಪ.
ಅರ್ಥ: ಮುನಿಯು,'ವೇದಪುರುಷನಾದ ನಾರಾಯಣನ ದೇಹದಲ್ಲಿ ಬಿಡುವಿಲ್ಲದೆ ಬಿಸಜಸಂಭವನಾದ ಬ್ರಹ್ಮನೇ ಆಮೊದಲಾಗಿ ಸಮಸ್ತ ದೇವರುಗಳು ಆಶ್ರಯ ಪಡೆದು ಅವರವರ ಕರ್ತವ್ಯಮಾಡಲು ನೇದುಕೊಂಡಿರುವರು; ಇವರು ಮಧ್ಯೆ ಬಿಡುವಿಲ್ಲದಂತೆ ಇರುವರು. ಅವನೇ ವಿಪ್ರರಿಗೆ ಗೌರವಿಸಿದನು. ಆ ಕಾರಣ ವಾದಿಸದೆ- ವಿರೋಧಿಸದೆ ವಿಪ್ರೋತ್ತಮರನ್ನು ಅಭಿವಾದಿಸುವುದು- ನಮಿಸುವುದು ಉತ್ತಮವಯ್ಯಾ ಕೇಳು,' ಎಂದನು.
ಯುವತಿಯರು ಗಾಯಕರು ಕವಿಗಳು
ತವತವಗೆ ಕೈವಾರಿಸುವರಾ
ವವನವನೆ ಯಾವಗಲು ದೂಷಕನಿಹಪರಂಗಳಿಗೆ |
ಇವರು ಮೂವರು ನಿಂದಿಸುವರಾ
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ||೬೫||
ಪದವಿಭಾಗ-ಅರ್ಥ: ಯುವತಿಯರು ಗಾಯಕರು ಕವಿಗಳು ತವತವಗೆ ಕೈವಾರಿಸುವರು (ಹೊಗಳುವರು)+ ಆವವನು (ಆಗುವವನು- ಆತುಕೊಳ್ಳುವವನು, ಸಮಯಕ್ಕೆ ಸಹಾಯ ಮಾಡುವವನು)+ ಅವನೆ ಯಾವಗಲು ದೂಷಕನು (ನಿಂದಕ? - ನಿಂದನೆಗೆ ಒಳಗಾಗುವವನು)+ ಇಹಪರಂಗಳಿಗೆ ಇವರು ಮೂವರು ನಿಂದಿಸುವರು+ ಆವವನ+ ಅವನು ಸರ್ವಜ್ಞನೆನಿಸುವನು+ ಅವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ.
ಅರ್ಥ:ರಾಜನೇ ಕೇಳು,' ಯುವತಿಯರು ಗಾಯಕರು ಕವಿಗಳು ತಮತಮಗೆಯೇ ಹೊಗಳುವರು. ಸಮಯಕ್ಕೆ ಸಹಾಯ ಮಾಡುವವನು ಯಾರೋ ಅವನೆ ಯಾವಾಗಲೂ ನಿಂದನೆಗೆ ಒಳಗಾಗುವವನು. ಇಹಪರಗಳಿಗೆ ಇವರು ಮೂವರು - ನಿಂದಿಸುವರು, ಸಹಾಯ ಮಾಡುವವನು, ಯಾವನು ಸರ್ವಜ್ಞನೆನಿಸುವನೋ ಅವನು.'ಅವನಿಪತಿಯೇ, ಚಿತ್ತೈಸು- ಕೇಳು ವಿಸ್ತಾರವಾದ ಧರ್ಮರಹಸ್ಯದ ಚರ್ಚೆಯನ್ನು,' ಎಂದನು.
ಜ್ಞಾತವಾವ್ದಜ್ಞಾತವಾವುದು
ನೀತಿ ಯಾವುದನೀತಿ ಯಾವುದು
ದ್ವೈತವಾವ್ದದ್ವೈತವಾವುದು ವೈದಿಕಾಂಗದಲಿ |
ಖ್ಯಾತಿಯಾವ್ದಖ್ಯಾತಿ ಯಾವುದು
ಜಾತಿಯಾವುದಜಾತಿ ಯಾವುದು
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ||೬೬||
ಪದವಿಭಾಗ-ಅರ್ಥ: ಜ್ಞಾತವು(ತಿಳಿದಿದ್ದು)+ ಯಾವ್ದು (ಯಾವುದು)+ ಅಜ್ಞಾತವಾವುದು (ತಿಳಿಯದ್ದು,ತಿಳಿಯದೇ ಇರುವುದು ಯಾವುದು); ನೀತಿ ಯಾವುದು+ ಅನೀತಿ ಯಾವುದು; ದ್ವೈತವು+ ಯಾವ್ದು(ಯಾವುದು)+ ಅದ್ವೈತವು+ ಆವುದು (ಯಾವುದು), ವೈದಿಕಾಂಗದಲಿ ಖ್ಯಾತಿ+ ಯಾವ್ದು+ ಅಖ್ಯಾತಿ ಯಾವುದು; ಜಾತಿ ಯಾವುದು+ ಅಜಾತಿ ಯಾವುದು; ಭೂತಳದೊಳು+ ಅವನೀಶ ಚಿತ್ತೈಸು(ಕೇಳು)+ ಎಂದನು+ ಆ ಮುನಿಪ.
ಅರ್ಥ: ಮುನಿಯು, 'ರಾಜನೇ ಭೂಮಿಯಲ್ಲಿ ಜ್ಞಾತವು ಯಾವುದು, ಅಜ್ಞಾತವಾವುದು- ತಿಳಿಯದ್ದು ಯಾವುದು; ನೀತಿ ಯಾವುದು, ಅನೀತಿ ಯಾವುದು; ದ್ವೈತವು- ಎರಡುಳ್ಳ ತತ್ತ್ವ ಯಾವುದು, ಅದ್ವೈತವು- ಎರಡಿಲ್ಲದ ಒಂದೇ ಆದ ತತ್ತ್ವ ಯಾವುದು?, ವೈದಿಕಾಂಗದಲ್ಲಿ ಖ್ಯಾತಿ- ಪ್ರಸಿದ್ಧಿಯಾದುದು ಯಾವುದು, ಅಖ್ಯಾತಿ ಯಾವುದು? ಜಾತಿ ಯಾವುದು, ಅಜಾತಿ ಯಾವುದು, ಇವನ್ನು ಕೇಳು ಎಂದನು,' ಆ ಮುನಿಪ.
ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದನಾ ಮಹಾತ್ಮರಿಗೆ |
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ||೬೭||
ಪದವಿಭಾಗ-ಅರ್ಥ: ಧರಣಿಯ+ ಅಮರರ(ವಿಪ್ರರ) ಸೇವೆಯನು ವಿಸ್ತರಿಸಿ, ಸತ್ಕಾರದಲಿ+ ಅವರನು+ ಆದರಿಸಿ ಬಹುಮಾನವನು ವಿರಚಿಸಿದನು+ ಆ ಮಹಾತ್ಮರಿಗೆ ಎರವು(ಅಭಾವ, ದೋಷ, ಭೇದಭಾವ)+ ಅಹುದೆ; ಸ್ವರ್ಗ+ ಅಪವರ್ಗದ(ತ್ಯಾಗ, ದಾನ, ನಿಯಮಕ್ಕೆ ಹೊರತಾದುದು) ಸಿರಿಯು+ ಅದೆಂಬುದನು+ ಅರಿದು(ಅರಿತು, ತಿಳಿದು) ನಡೆವಂಗೆ+ ಅರಿದೆನಿಸುವದು ( ಅಸಾಧ್ಯವಾದುದು, ಅಪೂರ್ವವಾದುದು)+ ಆದು+ ಆವುದೈ ಹೇಳೆಂದನು+ ಆ ಮುನಿಪ.
ಅರ್ಥ: ಮುನಿಯು,'ವಿಪ್ರರ ಸೇವೆಯನ್ನು ವಿಸ್ತಾರವಾಗಿ ಮಾಡಿ, ಸತ್ಕಾರದಲ್ಲಿ ಅವರನ್ನು ಆದರಿಸಿ, ಬಹುಮಾನವನ್ನು ವಿರಚಿಸಿದವನು- ಮಾಡಿದಾಗ ಆ ಮಹಾತ್ಮರಿಗೆ ದೋಷ, ಭೇದಭಾವ, ಆಗುವುದೆ? ; ಸ್ವರ್ಗ ಅಪವರ್ಗವಾದ ತ್ಯಾಗ, ದಾನಕ್ಕೆ ಸಿರಿಯು- ಸಂಪತ್ತು ಅದಕ್ಕಾಗಿ ಎಂಬುದನ್ನು ಅರಿತು ನಡೆಯುವವನಿಗೆ ಅಸಾಧ್ಯವಾದುದು, ಆದು ಯಾವುದೈ ಹೇಳು,' ಎಂದನು.

ಕರ್ಮ ಮತ್ತು ಜನ್ಮ[ಸಂಪಾದಿಸಿ]

ಯೋನೀಮುಖವೆಂಬತ್ತುನಾಲ್ಕು ನ
ವೀನ ಜನ್ಮಂಗಳೊಳಗುದಯಿಸಿ
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ |
ಮಾನವರ ಬಸುರಿನಲಿ ಬಂದ
ಜ್ಞಾನತರರಾಗಳಿವುದಿದು ಕ
ರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ||೬೮||
ಪದವಿಭಾಗ-ಅರ್ಥ: ಯೋನೀಮುಖವು (ಗರ್ಭಕೋಶದಲ್ಲಿ ಬೆಳೆದು)+ ಎಂಬತ್ತುನಾಲ್ಕು ನವೀನ(ಹೊಸ) ಜನ್ಮಂಗಳೊಳಗೆ+ ಉದಯಿಸಿ(ಜನಿಸಿ) ಹಾನಿ ವೃದ್ಧಿಗಳ+ ಅರಿದು ಜ್ಞಾನದ ಕಡೆಯ ಕಣೆಯದಲಿ(ಬಿದಿರು ಕೋಲು-ಬಿದುರುಕೋಲಿನ ಕಣೆ,- ಅದರಲ್ಲಿರುವ ಗಂಟುಗಳ ಮಧ್ಯದಬಾಗ) ಮಾನವರ ಬಸುರಿನಲಿ ಬಂದು+ ಅಜ್ಞಾನ ತರರು+ ಆಗಿ+ ಅಳಿವುದು+ ಇದು ಕರ್ಮಾನುಗತವಾಗಿ+ ಇಹುದಲೇ ಭೂಪಾಲ ಕೇಳೆಂದ.
  • ಟಿಪ್ಪಣಿ: ಕನ್ನಡ ದಾಸರ ಪದ ಹೀಗೆ ಹೇಳುತ್ತದೆ: 'ಎಂಭತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ,';ಪದ್ಮ ಪುರಾಣವು ಭೂಮಿಯ ಮೇಲೆ ಜೀವ ಹೊಂದಿರುವ ಈ 84 ಲಕ್ಷ ಪ್ರಭೇದಗಳಲ್ಲಿ ವಿವಿಧ ವರ್ಗೀಕರಣಗಳ ಬಗ್ಗೆ ಉಲ್ಲೇಖಿಸುತ್ತದೆ:
ಅರ್ಥ: ಮುನಿಯು ರಾಜನೇ,'ಈ ಜಗತ್ತಿನಲ್ಲಿ ಇರುವ ಎಂಬತ್ತುನಾಲ್ಕು (ಲಕ್ಷ) ಜಾತಿಯ ಜೀವಿಗಳು ಗರ್ಭಕೋಶದಲ್ಲಿ ಬೆಳೆದು ಯೋನಿಯ ಮೂಲಕ ಹೊಸ ಹೊಸ ಜನ್ಮಗಳಲ್ಲಿ ಜನಿಸಿ, ಅವುಗಳಲ್ಲಿ ಹಾನಿ ವೃದ್ಧಿಗಳನ್ನು ತಿಳಿದುಕೊಂಡು, ಜ್ಞಾನದ ಕಡೆಯ ಕಣೆಯಲ್ಲಿ- ಅವಧಿಯ ಜನ್ಮದಲ್ಲಿ ಮಾನವರ ಬಸುರಿನಲ್ಲಿ ಹುಟ್ಟಿ ಬಂದು ಅಜ್ಞಾನ ಸ್ವಭಾವದವರಾಗಿ ಅಳಿವುದು- ಸಾಯುವುದು, ಇದು ಕರ್ಮಾನುಗತವಾಗಿ ಇರುವುಹದಲೇ, ಭೂಪಾಲನೇ ಕೇಳು,'ಎಂದ.
ಪಾನದಿಂ ಸೂಕರನು ಬುಧರವ
ಮಾನದಿಂ ಕ್ಷಯರೋಗಿ ಗುರುಜನ
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು |
ಹೀನಗತಿಯಿಂದುರಗ ನಾನಾ
ಯೋನಿಗಳಲಿ ಚರಾಚರವು ಕ
ರ್ಮಾನುಗತವಾಗುದಯಿಸುವುದವನೀಶ ಕೇಳೆಂದ ||೬೯||
ಪದವಿಭಾಗ-ಅರ್ಥ: ಪಾನದಿಂ ಸೂಕರನು (ಹಂದಿಯು) ಬುಧರ+ ಅವಮಾನದಿಂ ಕ್ಷಯರೋಗಿ, ಗುರುಜನ ಹಾನಿಯಿಂದವೆ ಕುಷ್ಠಿ, ಗರ್ವದಿ ಕುಕ್ಕುಟ+ ಆಹ್ವಯನು(ನಾಮಧೇಯ), ಹೀನಗತಿಯಿಂದು+ ಉರಗ(ಹಾವು), ನಾನಾ ಯೋನಿಗಳಲಿ ಚರಾಚರವು(ಚರ- ಚಲಿಸುವ ಜೀವಿಗಳು, ಅಚರ- ಚಲಿಸದ ಜೀವಿಗಳು- ಮರ- ಸಸ್ಯ) ಕರ್ಮಾನುಗತವಾಗಿ+ ಉದಯಿಸುವುದು(ಜನಿಸುವರು)+ ಅವನೀಶ ಕೇಳು+ ಎಂದ.
ಅರ್ಥ:ಮುನಿಯು, 'ರಾಜನೇ, ಮದ್ಯ ಪಾನದಿಂದ ಮನುಷ್ಯನು ಹಂದಿಯುಜನ್ಮದಲ್ಲಿ, ವಿಪ್ರರರ ಅವಮಾನ ಮಾಡುವುದರಿಂದ ಕ್ಷಯರೋಗಿಯಾಗಿ, ಗುರುಜನರಿಗೆ ಹಾನಿಮಾಡುವುದರಿಂದ ಕುಷ್ಠರೋಗಿಯಾಗಿ, ಗರ್ವದಿದ ಕುಕ್ಕುಟ- ಕೋಳಿಯ ನಾಮಧೇಯದವನಾಗಿ, ಹೀನಗತಿ- ನೆಡೆಯಿಂದ ಹಾವಿನ ಜನ್ಮ ಪಡೆದು, ಹೀಗೆ ನಾನಾ ಗರ್ಭ- ಯೋನಿಗಳಲ್ಲಿ ಚರಾಚರ ಜೀವಿಗಳು ಕರ್ಮಕ್ಕೆ ಅನುಗತವಾಗಿ- ಅನುಸಾರವಾಗಿ ಜನಿಸುವರು ಕೇಳು,' ಎಂದ.
ಪರರ ಪಟುತರವಾದದಲಿ ಮೂ
ಗರವೊಲಿಹ ಪರ ವಚನದುತ್ಕಟ
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು |
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕ್ಷಾ
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ ||೭೦||
ಪದವಿಭಾಗ-ಅರ್ಥ: ಪರರ ಪಟುತರ (ಸಮರ್ಥ) ವಾದದಲಿ ಮೂಗರವೊಲು(ಮೂಕರಂತೆ)+ ಇಹ(ಇರುವ); ಪರ ವಚನದ(ಮಾತಿನ)+ ಉತ್ಕಟ ವೊರೆಗೆ(ಶ್ರೇಷ್ಠತೆ, ಗುಣಕ್ಕೆ- ಉದಾ: ಚಿನ್ನದ ವರೆನೋಡು- ಗುಣ ನೋಡು) ಬಧಿರತ್ವವನು(ಕಿವುಡತನ); ಪರಗುಣ ದೋಷ ದರುಶನವು ದೊರಕಿದೊಡೆ ಜಾತ್ಯಂಧನು+ ಎನಿಸುವ ಪುರುಷನು+ ಆವ+ ಅವನು (ಯಾವನೋ ಅವನು)+ ಅವನು ಸಾಕ್ಷಾತ್+ ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ.
ಅರ್ಥ:ಮುನಿಯು,'ರಾಜನೇ, ಪರರ ಸಮರ್ಥ ವಾದದಲ್ಲಿ ಉತ್ತರ ತಿಳಿದೂ ಮೂಕರಂತೆ ಇರುವವ; ಪರರ ಮಾತಿನ ಉತ್ಕಟಪ್ರತಿಭೆಯ ಗುಣಕ್ಕೆ ವಾಗ್ಮಿಯಾದರೂ ಕಿವುಡತನ ತೋರುವವವನು; ಪರರಲ್ಲಿ ಗುಣದೋಷಗಳು ದರ್ಶನವಾಗಿ- ದೊರಕಿದರೂ ಅದನ್ನು ಕ್ಷಮಿಸಿ, ಕಂಡರೂ ಕಾಣದಂತೆ, ಜಾತ್ಯಂಧನೋ ಎನಿಸುವಂತಿರುವ ಪುರುಷನು, ಯಾವನೋ ಅವನು ಸಾಕ್ಷಾತ್ ಪರಮ ಪುರುಷೋತ್ತಮ ಕಾಣಯ್ಯಾ, ಕೇಳು,'ಎಂದ.
ಇಷ್ಟಸಂತರ್ಪಣವ ಮಾಡಿ ವಿ
ಶಿಷ್ಟಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ |
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜರನೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ ||೭೧||
ಪದವಿಭಾಗ-ಅರ್ಥ: ಇಷ್ಟಸಂತರ್ಪಣವ (ಭೋಜನ ವ್ಯವಸ್ಥೆ) ಮಾಡಿ ವಿಶಿಷ್ಟ ಪೂಜಾಪಾತ್ರರನು ಸಂತುಷ್ಟಿಬಡಿಸಿ (ತೃಪ್ತಿಪಡಿಸಿ) ಸಧರ್ಮದಲಿ ರಾಜ್ಯವನು ರಕ್ಷಿಸುತ ಕೊಟ್ಟವರ ಕೊಂಡವರ ಮತ್ತ+ ಒಡಬಟ್ಟವರನು+ ಅನುಜಾತ್ಮಜರನು+ ಒಳಗಿಟ್ಟುಕೊಂಡಿಹುದು+ ಉಚಿತವು+ ಅದು ಭೂಪಾಲ ಕೇಳೆಂದ.
  • ಟಿಪ್ಪಣಿ: ಇಲ್ಲಿ ಧೃತರಾಷ್ಟ್ರನು ತನ್ನನ್ನು ಗೌರವದಿಂದ ಕಂಡ ತಮ್ಮನ ಮಕ್ಕಳನ್ನು ಮೋಸದಿಂದ ಪಗಡೆ ಜೂಜಿನಲ್ಲಿ ದುರ್ಯೋಧನ ಸಕುನಿಗಳ ಮೂಲಕ ಸೋಲಿಸಿ ಹನ್ನರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸಕ್ಕೆ ಕಳಿಸಿ ಅವರು ಹಿಂದಿರುಗಿ ಬಂದು ಯುದ್ಧ ಸನ್ನಿಹಿತವಾದಾಗ ತಾನು ಮಾಡಿದ ಕೄರವಾದ ಪಾಪ ಕೆಲಸಕ್ಕೆ ಚಿಂತೆಗೆ ಒಳಗಾಗಿ ನಿದ್ದೆ ಬರದೆ ತಮ್ಮನಾದ ವಿದುರನನ್ನು ಕರೆಸಿ ಅವನಿಂದ ನೀತಿಪಾಠ ಕೇಳಿದನು. ಆದರೂ ಸಮಾಧಾನವಾಗದೆ ವಿದುರನ ಸಲಹೆಯಂತೆ ಬ್ರಹ್ಮನ ಮಾನಸ ಪುತ್ರನಿಂದ ಬ್ರಹ್ಮಜ್ಞಾನ ಪಾಠ ಕೇಳಿದನು. ಇನ್ನೂ ಬೆಳಗಾಗದೆ ಇರಲು ಸನತ್ಸುಜಾತ ಬಾಲಮುನಿಯು ಪುನಃ ನೀತಿಯನ್ನೇ ಹೇಳಿದನು.
ಆದರೂ ಪಾಂಡವರಿಗೆ ಅವರ ರಾಜ್ಯವನ್ನು ಕೊಡಲು ಮನಸ್ಸು ಬರಲಿಲ್ಲ. ಪಾಂಡವರು ಎರಡನೇ ಬಾರಿ ಪಗಡೆಯಲ್ಲಿ ಸೋತಾಗ, (ಧೃತರಾಷ್ಟ್ರನು ಗೆದ್ದ ರಾಜ್ಯವನ್ನು ಪಾಂಡವರಿಗೆ ಹಿಂತಿರುಗಿಕೊಟ್ಟಿದ್ದನು.) ಆ ತಮ್ಮ ಪಾಲಿನ ರಾಜ್ಯವನ್ನು ಪಣಕ್ಕೆ ಒಡ್ಡಿ ಸೋಲಲಿಲ್ಲ. ಬದಲಿಗೆ ವನವಾಸದ ಫಣ ಇಟ್ಟು ಸೋತರು. ಅವರ ಪಾಲಿನ ರಾಜ್ಯವು ಧೃತರಾಷ್ಟ್ರ-ಕೌರವರ ಬಳಿ ಹದಿಮೂರು ವರ್ಷ ಕೇವಲ ನ್ಯಾಸವಾಗಿ ಇತ್ತು. ಅವರು ರಾಜ್ಯವನ್ನು ಫಣದ ಷರತ್ತು ಪೂರೈಸಿದಾಗ ಹಿಂತಿರುಗಿ ಕೊಡಲು ಬಾಧ್ಯರಾಗಿದ್ದರು. ಆದರೆ ಕೈಗೆ ಸಿಕ್ಕಿದ ಒಡವೆಯನ್ನು ಕೊಡಲು ಕೌರವನಿಗೆ ಮನಸ್ಸು ಬರಲಿಲ್ಲ.ಪಾಂಡವರು ಸುಖವಾಗಿರುವುದನ್ನು ಅವನು ಸಹಿಸಲಾಗಲಿಲ್ಲ.
  • ಈ ನೀತಿಪಾಠ ಕೇಳುತ್ತಾ ಬೆಳಗಾಯಿತು.
ಅರ್ಥ: ಮುನಿಯು,'ರಾಜನೇ,ಇಷ್ಟವಾದ ಸಂತರ್ಪಣೆಯನ್ನು ಮಾಡಿ ವಿಶಿಷ್ಟವಾದ ಪೂಜಾಪಾತ್ರರನ್ನು ಸಂತುಷ್ಟಿಪಡಿಸಿ ಸಧರ್ಮದಲ್ಲಿ ರಾಜ್ಯವನ್ನು ರಕ್ಷಿಸುತ್ತಾ, ಹೆಣ್ಣು ಕೊಟ್ಟವರ, ಹೆಣ್ಣುನ್ನು ಕೊಂಡವರ, ಮತ್ತೆ ಒಡಹುಟ್ಟಿವರನ್ನು, ಅನುಜಾತ್ಮಜರನು- ತಮ್ಮಂದಿರ ಮಕ್ಕಳನ್ನು ತನ್ನಬಳಿ ಒಳಗಿಟ್ಟುಕೊಂಡಿರುವುದು, ಅದು ಉಚಿತವು ಕೇಳು,' ಎಂದನು.
ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು |
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ||೭೨||
ಪದವಿಭಾಗ-ಅರ್ಥ: ನುಡಿದುದನು ಪೂರೈಸಿ (ಮಾಡಿ), ಕಾಲದ ಕಡೆಯ ಕಾಣಿಸಿ(), ಹೋಹವರ(ಭೂಮಿಯಿಂದ ಮೇಲೆ ಹೋಗುವವರನ್ನು) ಬೀಳ್ಕೊಡುತ; ಹಳೆಯರನು (ಮುದುಕರು, ಹಿರಿಯರು)+ ಅಪ್ತರನು ಮನ್ನಿಸುತ(ಗೌರವಿಸುತ್ತಾ) ತನ್ನುವನು(ತನ್ನನ್ನು, ತನ್ನ ತನುವನ್ನು - ತನ್ನ ದೇಹವನ್ನು ರಕ್ಷಿಸಿಕೊಂಡು) ಹಿಡಿದು ಸೇವೆಯ ಮಾಡುವವರನು (ವಿಧಿ, ಕರ್ಮ,) ಬಿಡದೆ ನಾನಾ ತೆರದ(ಬಗೆಯ) ಪದವಿಯ ಕೊಡುತಲಿಹುದು+ ಇದು ನೀತಿ ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ: ಮುನಿಯು,'ಈ ಭೂಮಿಯಲ್ಲಿ ಮಾನವನಾಗಿ ಜನಿಸಿದವನು ನುಡಿದುದನ್ನು ಮಾಡಿ ಪೂರೈಸಿ, ಅfಧಕ್ಕೆ ಬಿಡದೆ ಅದರ ಅಂತ್ಯವನ್ನೂ- ಕಾಲದ ಕಡೆಯನ್ನು ಕಾಣಿಸಿ ಎಂದರೆ ಕಅರ್ಯವನ್ನು ಸಾಂಗವಾಗಿ ಪೂರೈಸಿ, ಆಯುಷ್ಯವು ಮುಗಿದು ಭೂಮಿಯಿಂದ ಮೇಲೆ ಹೋಗುವವರನ್ನು ಶಾಂತಿಯಿಂದ ಬೀಳ್ಕೊಡುತ್ತಾ; ಮುದುಕರು, ಹಿರಿಯರನ್ನೂ, ಅಪ್ತರನ್ನೂ ಗೌರವಿಸುತ್ತಾ, ತನ್ನ ತನುವನ್ನು - ತನ್ನ ದೇಹವನ್ನು ರಕ್ಷಿಸಿಕೊಂಡು ಹಿಡಿದು ಸೇವೆಯನ್ನು ಮಾಡುವವರನ್ನು ವಿಧಿಯು ಬಿಡದೆ ನಾನಾ ಬಗೆಯ ಪದವಿಯ ಫಲವನ್ನು ಕೊಡುತ್ತಿರುವುದು. ಇದು ಈ ಭೂಮಿಯಲ್ಲಿ ಅನುಸಿಸಬೇಕಾದ ನೀತಿಯು,ಕೇಳು,'ಎಂದನು.
ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು |
ಗಳಿಗೆ ಸಂಖ್ಯೆಗೆ ದಂಡ ದೋಷವ
ಕೊಳುತ ಕಡೆಯಲಧೋಗತಿಗಳೊಳ
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ||೭೩||
ಪದವಿಭಾಗ-ಅರ್ಥ: ವಿಲಗ (ವಿಲಗ, ತೊಂದರೆ , ಸಭಾ ಪರ್ವ,1,2; ಹೊಂದಿಕೆಯಿಲ್ಲದಿರುವಿಕೆ, ತೊಂದರೆ, ಕಷ್ಟ, ಹಿಂಸೆ, ಉಪದ್ರವ, ವೈರ, ದ್ವೇಷ, ಆಟೋಪ, ಪ್ರತಿರೋಧ ಅಪವಾದ, ದೂರು, ಅನುಚಿತ ಕಾರ್ಯ, ಕಟ್ಟು, ಬಂಧನ, ಸಂರಕ್ಷಣೆ, ಆಶ್ರಯ) ಸಾಗರನಾಗಿ (ಇವುಗಳನ್ನು ತುಂಬಿಕೊಂಡು) ದೇಶವ ಹಿಳಿದು (ಹಿಸುಕಿ ರಸವನ್ನು ತೆಗೆ, ಹಿಂಡು, ಸುರಿಸು, ವರ್ಷಿಸು) ಹಿಂಡುತ ದಾನ ಧರ್ಮವನು+ ಉಳಿದು(ಬಿಟ್ಟು) ದೇವ ಬ್ರಾಹ್ಮರೆನ್ನದೆ ಕಂಡವರನು+ ಎಳೆದು ಗಳಿಗೆ ಸಂಖ್ಯೆಗೆ ದಂಡ ದೋಷವ ಕೊಳುತ, ಕಡೆಯಲಿ+ ಅಧೋಗತಿಗಳೊಳಗೆ+ ಇಳಿದು ಹೋಹುದು+ ಅನೀತಿ ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ: ಮುನಿಯು,"ಕೄರತೆ, ವೈರ, ದ್ವೇಷ, ಒಳಿತಿಗೆ ಪ್ರತಿರೋಧ, ಅನುಚಿತ ಕಾರ್ಯ, ಇವುಗಳ ಸಾಗರನಾಗಿ ದೇಶವನ್ನು ಹಿಸುಕಿ ಹಿಂಡುತ್ತಾ, ದಾನ ಧರ್ಮಗಳನ್ನು ಬಿಟ್ಟು, ದೇವ ಬ್ರಾಹ್ಮರೆನ್ನದೆ ಕಂಡವರನ್ನು ಎಳೆದು ಗಳಿಗೆಸಂಖ್ಯೆಗೆ- ಪದೇಪದೇ ದಂಡ ದೋಷವನ್ನು ತೆಗೆದುಕೊಳ್ಳುತ್ತಾ, ಕಡೆಯಲ್ಲಿ ಅಧೋಗತಿಗಳೊಳಗೆ ಇಳಿದು ಹೋಗುವುದು- ಈಬಗೆಯ ಜೀವನ ಅನೀತಿ,ಎನ್ನಿಸುವುದು ಕೇಳು," ಎಂದನು.
ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ||೭೪||
ಪದವಿಭಾಗ-ಅರ್ಥ: ಯೋನಿಯಲ್ಲದ(ಯೋನಿ-> ಉತ್ಪತ್ತಿಸ್ಥಾನ,) ಠಾವುಗಳಲಿ(ಸ್ಥಾನ) ವಿಯೋನಿಯಹ(ಉತ್ಪತ್ತಿಸ್ಥಾನವಲ್ಲದ್ದು) ವಿಷಯಂಗಳಲಿ ಪಶು ಯೋನಿಯಲಿ ಸಂಭೋಗಿಸುವ (ಲೈಂಗಿಕ ಕ್ರಿಯೆ ನೆಡೆಸುವ) ಪಾತಕರ ಪರಿವಿಡಿಯ(ಮುಂದಿನ ವಿವರ) ಏನ ಹೇಳಲು ಬಹುದು; ನರಕ ವಿತಾನದೊಳಗೆ ((ಸಂ) ಸಮೂಹ, ಗುಂಪು)+ ಓಲಾಡಿ ಬಳಿಕ+ ಆ ಶ್ವಾನ ಯೋನಿಯೊಳು+ ಅವರು ಜನಿಸುವರು+ ಎಂದನು+ ಆ ಮುನಿಪ.
ಅರ್ಥ: ಮುನಿಯು,'ಯೋಗ್ಯವಾದ ಮಾನವ ಉತ್ಪತ್ತಿಸ್ಥಾನವಲ್ಲದ ಸ್ಥಾನಗಳಲ್ಗಿ- ಎಂದರೆ ಮಾನವರಿಗೆ ತಮ್ಮ ವಂಶದ ಉತ್ಪತ್ತಿಸ್ಥಾನವಲ್ಲದ ವಿಷಯಗಳಾದ ಪಶು ಯೋನಿಯಲ್ಲಿ ಸಂಭೋಗಿಸುವ -ಲೈಂಗಿಕ ಕ್ರಿಯೆ ನೆಡೆಸುವ ಪಾತಕರ ಮುಂದಿನ ಗತಿಯ ವಿವರವನ್ನು ಏನೆಂದು ಹೇಳಬಹುದು? ಅವರು ನರಕದಲ್ಲಿರುವ ಪಾಪಿಗಳ ಸಮೂಹದಲ್ಲಿ ಓಲಾಡಿ- ಕಷ್ಟ ಅನುಭವಿಸಿ, ಬಳಿಕ ಆ ಶ್ವಾನ ಯೋನಿಯಲ್ಲಿ ನಾಯಿಯಾಗಿ ಜನಿಸುವರು,'ಎಂದನು.
ಜೀವ ಪರಮನಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರವಿ
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ |
ಕೋವಿದರ ಸಂಗವನುಳಿದು ಮಾ
ಯಾ ವಿಲಾಸದ ನೆಲೆಯ ನೋಡದೆ
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ||೭೫||
ಪದವಿಭಾಗ-ಅರ್ಥ: ಜೀವ ಪರಮನ+ ಅಭೇದವನು ಸಂಭಾವಿಸದೆ(ಸಂಭಾವಿಸು- ಧ್ಯಾನ ಮಾಡು ೨ ಯೋಚಿಸು) ವೇದಾಂತ ಶಾಸ್ತ್ರವಿದು+ ಆವ ಮುಖವೆಂದು+ ಅರಿಯದೆಯೆ, ದಾಸೋಹವು(ದಾಸೋಹ- ನಾನು ದಾಸ ಎಂಬ ಭಾವನೆ,- ಉದ್ಯೋಗ ಪರ್ವ,4,75)+ ಎಂದೆನುತ ಕೋವಿದರ ಸಂಗವನು+ ಉಳಿದು(ವಿದ್ವಾಂಸರ ಸಹವಾಸವನ್ನು ಬಿಟ್ಟು) (ಜಗತ್ತಿನ) ಮಾಯಾ ವಿಲಾಸದ ನೆಲೆಯ ನೋಡದೆ(ಜೀವ ಪರಮಾತ್ಮ ಒಂದೇ ಎನ್ನುವ ವೇದಾಂತ ಶಾಸ್ತ್ರವು ಇದು ಯಾವ ಮುಖವೆಂದು ಅರಿಯದೆಯೆ- ತಿಳಿದುಕೊಳ್ಳದೆ,) ಸಾವುತಿಹುದೇ 'ದ್ವೈತ' ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ:ಮುನಿಯು,'ಪರಮಾತ್ಮನೊಡನೆ ಜೀವದ ಅಂತಿಮ ಸ್ಥಿತಿಯಾದ ಅಭೇದವನ್ನು ಧ್ಯಾನ ಮಾಡಿ ತಿಳಿಯದೆ, ಜೀವ ಪರಮಾತ್ಮ ಒಂದೇ ಎನ್ನುವ ವೇದಾಂತ ಶಾಸ್ತ್ರವು ಇದು ಯಾವ ಮುಖವೆಂದು ಅರಿಯದೆಯೆ- ತಿಳಿದುಕೊಳ್ಳದೆ, 'ದಾಸೋಹವು' ('ಪರಮಾತ್ಮನು ಒಡೆಯ ನಾನು ದಾಸ,') ಎಂದು ಹೇಳುತ್ತಾ ಜ್ಞಾನಿಗಳ ಸಹವಾಸವನ್ನು ಬಿಟ್ಟು ಜಗತ್ತಿನ ಮಾಯಾ ವಿಲಾಸದ ನೆಲೆಯನ್ನು ತಿಳಿಯದೆ ಸಾಯುತ್ತಿರುವುದೇ 'ದ್ವೈತ' ಕೇಳು,' ಎಂದನು.

ಸರ್ವಾತ್ಮಭಾವದ ನೆಡೆ[ಸಂಪಾದಿಸಿ]

ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು |
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ||೭೬||ವಿಷಯ
ಪದವಿಭಾಗ-ಅರ್ಥ: ಉತ್ತಮರ ಸಂಗದೊಳಗೆ+ ಓಲಾಡುತ್ತ (ಸಂತಸದಿಂದ ಇರುತ್ತಾ) ದುರ್ವಿಷಯಂಗಳನು (ಕೆಟ್ಟ ಭೋಗಾಭಿಲಾಷೆ, ಕಾಮಾಸಕ್ತಿ) ಮುರಿಯೊತ್ತಿ, ಸಕಲ ಚರಾಚರದ ಸುಖ ದುಃಖವನು ತಾನು ಹೊತ್ತು ನಡೆವುತ, ಪುಣ್ಯ ಪಾಪವಿದು+ ಎತ್ತಣದು ತನಗೆ+ ಎಂಬ ಕಾಣಿಕೆಯು (ಕಾಣ್ಕೆ- ಜ್ಞಾನ, ಅರಿವು)+ ಉತ್ತರೋತ್ತರ ಸಿದ್ಧಿ ಚಿತ್ತೈಸು (ಕೇಳು)+ ಎಂದನು+ ಆ ಮುನಿಪ
ಅರ್ಥ:ಮುನಿಯು, ಕುರುಡು ರಾಜನಿಗೆ,'ಉತ್ತಮರ ಸಂಗದಲ್ಲಿ ಸಂತಸದಿಂದ ಇರುತ್ತಾ, ಕೆಟ್ಟ ವಿಷಯಗಳಾದ ಇಂದ್ರಿಯಾಭಿಲಾಷೆಗಳು, ಭೋಗಾಭಿಲಾಷೆ, ಕಾಮಾಸಕ್ತಿ, ಅರಿಷಡ್ವರ್ಗಗಳನ್ನು ಮುರಿದು, ಎಂದರೆ ಅವನ್ನು ಮೆಟ್ಟಿ, ನೂಕಿ, ಸಕಲ ಚರಾಚರದ ಜೀವಿಗಳ ಸುಖ ದುಃಖವನ್ನು ತಾನು ಹೊತ್ತು ನಡೆಯುತ್ತಾ, ಪುಣ್ಯ ಪಾಪಗಳು ತನಗೆ ಎತ್ತಣದು ಎಂದು ಭಾವಿಸಿ ಚಿಂತಿಸದೆ, ಸಮ್ಯಕ್ ಜ್ಞಾನದ ಅರಿವನ್ನು ಹೊಂದಿದಾಗ ಉತ್ತರೋತ್ತರ ಸಿದ್ಧಿಯಾಗುವುದು ಚಿತ್ತೈಸು,' ಎಂದನು.
ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕು ವರಧೋಗತಿಗೆ |
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗಬಲವನು
ಹುಡುಹುಡಿಯ ಮಾಡುವರು ನಿರ್ಜರರರಸ ಕೇಳೆಂದ ||೭೭||
ಪದವಿಭಾಗ-ಅರ್ಥ: ಪೊಡವಿಯೊಳಗೆ (ಭೂಮಿಯಲ್ಲಿ) ಪುರೋಹಿತರನು+ ಅವಗಡಿಸಿ(ವಿರೋಧಿಸಿ,ಪ್ರತಿಭಟಿಸಿ,) ಧರ್ಮದ ಬಲದಿ ನಾಕಕೆ(ಸ್ವರ್ಗಕ್ಕೆ) ನಡೆವ ರಾಯರ(ರಾಜರನ್ನು) ಹೊಯಿದು (ಹೊಡದು)+ ಇಳಿಯಲಿಕ್ಕುವರು (ಕೆಳಗೆ ಭೂಮಿಗೆ ನೂಕುವರು)+ ಅಧೋಗತಿಗೆ, ಕೆಡಿಸುವರು ರಾಷ್ಟ್ರವನು, ಕ್ಷಾತ್ರವ ತಡೆಗಡಿಸಿ(ತಡೆಗಡಿಸಿ, ಕಡಿಸಿಹಾಕಿ , ಗದಾ ಪರ್ವ,5,17) ಚತುರಂಗ ಬಲವನು ಹುಡುಹುಡಿಯ ಮಾಡುವರು ನಿರ್ಜರರು(ಮುಪ್ಪಿಲ್ಲದವರು, ದೇವತೆಗಳು)+ ಅರಸ ಕೇಳೆಂದ.
ಅರ್ಥ:ಮುನಿಯು,' ಈ ಭೂಮಿಯಲ್ಲಿ ಪುರೋಹಿತರನ್ನು- ವಿಪ್ರರನ್ನು ವಿರೋಧಿಸಿ, ಪ್ರತಿಭಟಿಸಿ, ಧರ್ಮದ ಬಲದಿಂದ ಸ್ವರ್ಗಕ್ಕೆ ನಡೆಯುವ ರಾಯರನ್ನು ಹೊಡೆದು ಕೆಳಗೆ ಭೂಮಿಗೆ ಹೊಡೆದು ಅಧೋಗತಿಗೆ ನೂಕುವರು. ಅಂಥವರು ರಾಷ್ಟ್ರವನ್ನು ಕೆಡಿಸುವರು. ಆ ರಾಜರ ಕ್ಷಾತ್ರವನ್ನು ಕಡಿಸಿಹಾಕಿ ಅವರ ಚತುರಂಗ ಬಲವನ್ನು ದೇವತೆಗಳು ಹುಡುಹುಡಿಯನ್ನಾಗಿ ಮಾಡುವರು. ಅರಸನೇ ಕೇಳು,' ಎಂದ.
ಬಲಿಯ ರಾಜ್ಯವ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ |
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ ||೭೮||
ಪದವಿಭಾಗ-ಅರ್ಥ: ಬಲಿಯ ರಾಜ್ಯವ, ವಿಭೀಷಣನ ಸಿರಿ, ಜಲನಿಧಿಯ ಗಾಂಭೀರ್ಯ, ಬಾಣನ ಬಲುಹು, ಹನುಮಾನುವಿನ ಭುಜಬಲ, ವೀರ ರಾಘವನ(ರಾಮ) ಛಲ, ದಧೀಚಿಯ ದಾನ, ಪಾರ್ಥನ ಕೆಳೆ, ಯುಧಿಷ್ಠಿರ ನೃಪನ ಸೈರಣೆಗೆ+ ಅಳವಡುವ ಬದುಕುಳ್ಳಡೆ+ ಅದು ವಿಖ್ಯಾತಿ ಕೇಳು+ ಎಂದ.
ಅರ್ಥ:ಮುನಿಯು ಕುರುಡು ರಾಜನಿಗೆ,'ಬಲಿ ಚಕ್ರವರ್ತಿಯ ರಾಜ್ಯವನ್ನು, ವಿಭೀಷಣನ ಸಿರಿಯನ್ನು, ಸಮುದ್ರದ ಗಾಂಭೀರ್ಯವನ್ನು, ಬಾಣನ ಬಲುಹು- ಶಕ್ತಿಯನ್ನು, ಹನುಮಾನನ ಭುಜಬಲವನ್ನು, ವೀರ ರಾಘವನ ಛಲವನ್ನು, ದಧೀಚಿಯ ದಾನದ ಗುಣವನ್ನು, ಪಾರ್ಥನ ಕೆಳೆ ಅಥವಾ ತೇಜಸ್ಸನ್ನು, ಯುಧಿಷ್ಠಿರ ನೃಪನ ಸೈರಣೆಗೆ - ಎಂದರೆ ತಾಳ್ಮೆಗೆ ಅಳವಡುವ ಎಂದರೆ ಹೊಂದುವ ಬದುಕು ಇದ್ದರೆ ಅದು ವಿಖ್ಯಾತಿಯ ಬದುಕು, ಕೇಳು,' ಎಂದ.

ಸಮಾಜ ನೀತಿ[ಸಂಪಾದಿಸಿ]

ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ ||೭೯||
ಪದವಿಭಾಗ-ಅರ್ಥ: ಇರುಳು ಹಗಲು+ ಅನವರತ ಪತಿ ಪರಿಚರಿಯವನು ಮಾಡುತ್ತ ಪರಪುರುಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ ಇರುತ ದೇವ ಬ್ರಾಹ್ಮರನು ತಾ ನಿರುತ ಸತ್ಕರಿಸುತ್ತಲಿ+ ಅಂತಃಪುರದಲಿ+ ಎಸೆಯೆ (ಶೋಭಿಸಲು) ಗೃಹಸ್ಥೆಯೆನಿಸುವಳು+ ಅರಸ ಕೇಳೆಂದ
ಅರ್ಥ:ಮುನಿಯು ರಾಜನಿಗೆ,'ಹಗಲು ರಾತ್ರಿ ಅನವರತ-ಸದಾ ಪತಿಯ ಪರಿಚರ್ಯವನ್ನು- ಸೇವೆಯನ್ನು ಮಾಡುತ್ತಾ, ಪರಪುರುಷರನ್ನು ನೆನೆಯದೆ ಹಲವು ಸಂತತಿಗಳಿಗೆ- ಮಕ್ಕಳಿಗೆ ತಾಯಿಯಾಗಿ ಇರುತ್ತಾ ದೇವ ಬ್ರಾಹ್ಮರನು ತಾನು ನಿರುತ-ಸದಾ ಸತ್ಕರಿಸುತ್ತಲೂ, ಆಂತಃಪುರದಲಿ ಶೋಭಿಸಲು- ಅವಳು ಗೃಹಸ್ಥೆಯೆನಿಸುವಳು ಅರಸ ಕೇಳು,'ಎಂದ.
ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು |
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ||೮೦||
ಪದವಿಭಾಗ-ಅರ್ಥ: ಮಡದಿ ನಿಜ (ತನ್ನ)ನಿಳಯವನು (ಮನೆಯನ್ನು) ಬಿಟ್ಟು+ ಅಡಿಗಡಿಗೆ(ಪದೇಪದೆ) ಪರಗೃಹದೊಳಗೆ, ಬಾಯನು ಬಡಿದು(ದೊಡ್ಡದಾಗಿ) ಮನೆಮನೆವಾರ್ತೆಯು ಎನ್ನದೆ(ತಿಳಿಯದೆ, ಹೇಳದೆ) ಬೀದಿ+ಗ+ ಕಲಹವನು ಒಡರಿಚುವ (ಒಡರಿಚು, ಹುಟ್ಟಿಸು, ಉದ್ಯೋಗ ಪರ್ವ,4,80) ಪತಿಯೊಬ್ಬನುಂಟೆಂದು+ ಎಡಹಿ ಕಾಣದ ದಿಟ್ಟೆ ಹತ್ತನು (ಹತ್ತುಮಕ್ಕಳನ್ನು) ಹಡೆದೊಡೆಯು ವರ್ಜಿಸುವುದು+ ಉತ್ತಮ ಪುರುಷರುಗಳು+ ಎಂದ'
ಅರ್ಥ:ಮುನಿಯು,'ಪುರುಷನ ಮಡದಿಯು ತನ್ನ ಮನೆಯನ್ನು ಬಿಟ್ಟು ಪದೇಪದೇ ಪರಗೃಹದಲ್ಲಿ ಹೋಗಿ, ದೊಡ್ಡದಾಗಿ ಬೇರೆ ಮನೆಮನೆಯ ವಾರ್ತೆಯು, ತನಗೆ ಸಂಬಂಧವಿಲ್ಲದ್ದು, ಎಂದು ತಿಳಿದುಕೊಳ್ಳದೆ ಬೀದಿಯ ಕಲಹವನ್ನು ಹುಟ್ಟಿಸುವ ಕೆಲಸ ಮಾಡುತ್ತಾ, ಪತಿಯೊಬ್ಬನು ಇದ್ದಾನೆ ಎಂದು ಎಡಹಿ- ಎದುರು ಇದ್ದರೂ ಕಾಣದೆ ಇರುವ ದಿಟ್ಟೆಯು- ನಾಚಿಕೆ ಬಿಟ್ಟ ಹೆಂಡತಿಯು; ಅವಳು ಹತ್ತುಮಕ್ಕಳನ್ನು ಹಡೆದರೂ ಕೂಡ ಪುರುಷರುಗಳು ಅವರನ್ನು ಬಿಡುವುದು ಉತ್ತಮ,' ಎಂದ'

ನೀತಿ -ಅನೀತಿ[ಸಂಪಾದಿಸಿ]

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು |
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ||೮೦||
ಪದವಿಭಾಗ-ಅರ್ಥ: ಮಡದಿ ನಿಜ (ತನ್ನ)ನಿಳಯವನು (ಮನೆಯನ್ನು) ಬಿಟ್ಟು+ ಅಡಿಗಡಿಗೆ(ಪದೇಪದೆ) ಪರಗೃಹದೊಳಗೆ, ಬಾಯನು ಬಡಿದು(ದೊಡ್ಡದಾಗಿ) ಮನೆಮನೆವಾರ್ತೆಯು ಎನ್ನದೆ(ತಿಳಿಯದೆ, ಹೇಳದೆ) ಬೀದಿ+ಗ+ ಕಲಹವನು ಒಡರಿಚುವ (ಒಡರಿಚು, ಹುಟ್ಟಿಸು, ಉದ್ಯೋಗ ಪರ್ವ,4,80) ಪತಿಯೊಬ್ಬನುಂಟೆಂದು+ ಎಡಹಿ ಕಾಣದ ದಿಟ್ಟೆ ಹತ್ತನು (ಹತ್ತುಮಕ್ಕಳನ್ನು) ಹಡೆದೊಡೆಯು ವರ್ಜಿಸುವುದು+ ಉತ್ತಮ ಪುರುಷರುಗಳು+ ಎಂದ'
ಅರ್ಥ:ಮುನಿಯು,'ಪುರುಷನ ಮಡದಿಯು ತನ್ನ ಮನೆಯನ್ನು ಬಿಟ್ಟು ಪದೇಪದೇ ಪರಗೃಹದಲ್ಲಿ ಹೋಗಿ, ದೊಡ್ಡದಾಗಿ ಬೇರೆ ಮನೆಮನೆಯ ವಾರ್ತೆಯು, ತನಗೆ ಸಂಬಂಧವಿಲ್ಲದ್ದು, ಎಂದು ತಿಳಿದುಕೊಳ್ಳದೆ ಬೀದಿಯ ಕಲಹವನ್ನು ಹುಟ್ಟಿಸುವ ಕೆಲಸ ಮಾಡುತ್ತಾ, ಪತಿಯೊಬ್ಬನು ಇದ್ದಾನೆ ಎಂದು ಎಡಹಿ- ಎದುರು ಇದ್ದರೂ ಕಾಣದೆ ಇರುವ ದಿಟ್ಟೆಯು- ನಾಚಿಕೆ ಬಿಟ್ಟ ಹೆಂಡತಿಯು; ಅವಳು ಹತ್ತುಮಕ್ಕಳನ್ನು ಹಡೆದರೂ ಕೂಡ ಪುರುಷರುಗಳು ಅವರನ್ನು ಬಿಡುವುದು ಉತ್ತಮ,' ಎಂದ'
ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ |
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರವನಿತೆಯ
ಗೊಡವೆಗೊಳಗಾಗದವರುತ್ತಮಪುರುಷರುಗಳೆಂದ ||೮೧||
ಪದವಿಭಾಗ-ಅರ್ಥ: ಮುಡಿಯನು(ತಲೆಯ ಕೂದಲನ್ನು)+ ಓಸರಿಸುತ್ತ ಮೇಲುದನು+ ಅಡಿಗಡಿಗೆ (ಪದೇ ಪದೇ) ಸರಿವುತ್ತ (ಸರಿಸುತ್ತ) ಮೌನವ ಹಿಡಿದು+ ಅಧೋಮುಖಿಯಾಗಿ, ಕಿಗ್ಗಣ್ಣಿಕ್ಕಿ (ಕಿರಿದಾಗಿ ತೆರೆದ/ ಕಡೆ- ಓರೆ ಕಣ್ಣಿನ ದೃಷ್ಠಿಯನ್ನು ಹಾಕಿ ) ಕೆಲಬಲನ (ಅಕ್ಕಪಕ್ಕವನ್ನು ದಿಟ್ಟಿಸಿ) ಬಿಡದೆ ನೋಡುತ ಮುಗುಳು ನಗೆಯಲಿ ಜಡಿದು- (ನೋಟವನ್ನು ಹಾಕಿ) ಜಾರುವ - ಮೆಲ್ಲಗೆ ಹೋಗುವ ಜಾರವನಿತೆಯ (ವ್ಯಬಿಚಾರದ ಹೆಣ್ಣಿನ) ಗೊಡವೆಗೆ+ ಒಳಗಾಗದವರು+ ಉತ್ತಮಪುರುಷರುಗಳು+ ಎಂದ
ಅರ್ಥ:ಮುನಿಯು ಕುರುಡು ರಾಜನನ್ನು ಕುರಿತು,'ಯುವತಿಯು ತನ್ನ ಎದೆಯ ಭಾಗವನ್ನು ತೋರಲು ಕೈಯೆತ್ತಿ ತಲೆಯ ಕೂದಲನ್ನು ಓಸರಿಸುತ್ತ- ಮೇಲುಸೆರಗನ್ನು ಪದೇ ಪದೇ ಸ್ವಲ್ಪ ಸರಿಸುತ್ತಾ ಮೌನವ ಹಿಡಿದು- ಮಾತಾಡದೆ ಸ್ವಲ್ಪ ತಲೆಬಾಗಿಸಿ, ಕಿರಿದಾಗಿ ತೆರೆದ, ಓರೆ ಕಣ್ಣಿನ ದೃಷ್ಠಿಯನ್ನು ಹಾಕಿ ಅಕ್ಕಪಕ್ಕವನ್ನು ದಿಟ್ಟಿಸಿ ನೋಡುತ್ತಾ ಮುಗುಳುನಗೆಯಲ್ಲಿ (ಕಾರಣವಿಲ್ಲದ ನೆಗೆ) ನೋಟವನ್ನು ಪುರುಷರ ಮೇಲೆ ಜಡಿದು- ಹಾಕಿ, ಮೆಲ್ಲಗೆ ಹೋಗುವ ಜಾರವನಿತೆಯ ಗೊಡವೆಗೆ ಒಳಗಾಗದವರು ಉತ್ತಮ ಪುರುಷರುಗಳು,' ಎಂದ (ಪಾಪ, ಕುರುಡು ರಾಜನಿಗೆ ಹೆಣ್ಣಿನ ಈ ಬಗೆಯ ನಡೆ, ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಸುಂದರಿ ಗಾಂಧಾರಿಯನ್ನು ತಡವಿ ಗೊತ್ತು ಅವನಿಗೆ.)
ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು |
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ||೮೨||
ಪದವಿಭಾಗ-ಅರ್ಥ: ಗುರುವಿನಲಿ, ತಂದೆಯಲಿ, ತಾಯಲಿ, ಹಿರಿಯರಲಿ, ದೈವದಲಿ, ಪಾಪದ ಇರುಬಿನಲಿ(ಇರುಬು- ಇಕ್ಕಟ್ಟು, ತೊಡಕು), ಗೋವಿನಲಿ, ತೀರ್ಥದಲಿ, ಮಿಗೆ ತನ್ನುವನು ಹೊರೆವ ದಾತಾರನಲಿ (ಕಾಪಾಡುವ ಜೀವಾಧಾರ ಕೊಡುವ ಯಜಮಾನ), ಮಂತ್ರದ ಪರಮ ಸೇವೆಗಳಲ್ಲಿ, ಧರಣೀಸುರರೊಳು(ವಿಪ್ರರಲ್ಲಿ)+ ಅಂಜಿಕೆ ಹಿರಿದು+ ಇರಲು ಬೇಕು+ ಎಂದನು+ ಆ ಮುನಿಪ.
ಅರ್ಥ:ಆ ಮುನಿಯು,'ರಾಜನೇ, ಗುರುವಿನಲ್ಲಿ, ತಂದೆಯಲ್ಲಿ, ತಾಯಿಯಲ್ಲಿ, ಹಿರಿಯರಲ್ಲಿ, ದೈವದಲ್ಲಿ, ಪಾಪದ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವ ಬಗ್ಗೆ, ಗೋವಿನಲ್ಲಿ, ತೀರ್ಥದಲ್ಲಿ (ಪವಿತ್ರ ಕ್ಷೇತ್ರದಲ್ಲಿ), ಹೆಚ್ಚಾಗಿ ತನ್ನುನ್ನು ಹೊರೆವ ದಾತಾರನಲ್ಲಿ, ಮಂತ್ರದ ಪರಮ ಸೇವೆಗಳಲ್ಲಿ, ವಿಪ್ರರಲ್ಲಿ, ಅಂಜಿಕೆ ಬಹಳ ಇರಬೇಕು,' ಎಂದನು.
ನೀತಿವಿದನಲ್ಲದ ಕುಮಂತ್ರಿ ವಿ
ನೀತಿಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು |
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲಸಂಪದವರಸ ಕೇಳೆಂದ ||೮೩||
ಪದವಿಭಾಗ-ಅರ್ಥ: ನೀತಿವಿದನು+ ಅಲ್ಲದ ಕುಮಂತ್ರಿ ವಿನೀತಿಪರನು (ಒಳ್ಳೆಯ ನಡತೆ, ಸದ್ಗುಣ, ಗೌರವ, ಆದರ)+ ಅಲ್ಲದ ಪುರೋಹಿತನು+ ಏತಕೆ+ ಅವರಿಂದ+ ಆವ ಪುರುಷಾರ್ಥಂಗಳು+ ಎಯ್ದುವುವು?(ನೆಡೆ, ಆಗು, ಮಾಡು) ಕಾತರಿಸಿ ಸಮರಾಂಗಣಕೆ ಭಯ ಭೀತನಹ ಭೂಭುಜನ(ರಾಜನ) ದೆಸೆಯಿಂ ಬೀತು ಹೋಗದೆ ಸಕಲಸಂಪದವು+ ಅರಸ ಕೇಳು+ ಎಂದ
ಅರ್ಥ:ಮುನಿಯು ರಾಜನಿಗೆ,'ರಾಜನೀತಿಯನ್ನು ತಿಳಿವದವುನು ಅಲ್ಲದ ಕುಮಂತ್ರಿಯು, ವಿನೀತಿಪರನು ಅಲ್ಲದ ಪುರೋಹಿತನು, ಏಕೆ ಬೇಕು- ಬೇಡ! ಅವರಿಂದ ಯಾವ ಪುರುಷಾರ್ಥಗಳು ಆಗುವುವು? ಯುದ್ಧಭೂಮಿಗೆ ಕಾತರಿಸಿ- ಉದ್ದೇಶಪಟ್ಟು ಹೋಗಿ, ಅಲ್ಲಿ ಭಯ ಭೀತನಾಗುವ ರಾಜನ ದೆಸೆಯಿಂದ ಸಕಲಸಂಪದವು ಬೀತು-ನಾಶವಾಗಿ ಹೋಗದೆ? ಕೇಳು,' ಎಂದ.
ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜ ಮಂತ್ರದ
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ||೮೪||
ಪದವಿಭಾಗ-ಅರ್ಥ: ಧರ್ಮವು+ ಆವುದು(ಯಾವುದು) ಮೇಣು ಜಗದೊಳು+ ಅಧರ್ಮವಾವುದು? ರಾಜ ಮಂತ್ರದ ಧರ್ಮವು+ ಆವುದು? ಮಾರ್ಗವು+ ಯಾವುದು+ ಅಮಾರ್ಗವೆಂದು+ ಏನು? ಕರ್ಮವಾವುದು? ವಿಧಿವಿಹಿತ ದುಷ್ಕರ್ಮವು+ ಆವುದದು+ ಎಂಬ ಭೇದವ ನಿರ್ಮಿಸಾ ಸಾಕೆಂದು ಬಿನ್ನಹ(ವಿಜ್ಞಾಪನೆ, ಪ್ರಾರ್ಥನೆ, ವಿನಯದಿಂದ ಕೇಳುವಿಕೆ) ಮಾಡಿದನು ಭೂಪ.
ಅರ್ಥ:ಧೃತರಾಷ್ಟ್ರನು ಮುನಿಯನ್ನು ಕುರಿತು,'ಧರ್ಮವು ಯಾವುದು? ಮತ್ತೆ ಜಗದಲ್ಲಿ+ ಅಧರ್ಮವು ಯಾವುದು? ರಾಜಮಂತ್ರದ (ರಾಜನೀತಿಯ ಮಂತ್ರಾಲೋಚನೆ ಹೇಗೆ)? ಧರ್ಮವು ಯಾವುದು? ಧರ್ಮಮಾರ್ಗವು ಯಾವುದು? ಅಧರ್ಮದ ಮಾರ್ಗವೆಂದು ಯಾವುದಕ್ಕೆ ಹೇಳುವರು? ಕರ್ಮವಾವುದು? ವಿಧಿವಿಹಿತ ದುಷ್ಕರ್ಮವು ಯಾವುದು? ಎಂಬ ಇವುಗಳ ಭೇದವನ್ನು ವಿವರಿಸು ಸಾಕು,' ಎಂದು ಬಿನ್ನಹ ಮಾಡಿದನು.
ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗಳಲ್ಲದೆ ತನ್ನ ಸ್ವಾತಂತ್ರ್ರ್ಯದಲಿ ಮಾಡಿದುದು |
ಅತಿಶಯವನೆಯ್ದದು ಕಣಾ ಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೆ ಫಲಿಸುವುದು ಹುಸಿಯೆಂದ ||೮೫||
ಪದವಿಭಾಗ-ಅರ್ಥ: ಸತಿಸಹಿತ ವಿರಚಿಸಿದ ಧರ್ಮ ಸ್ಥಿತಿ ಸಮೃದ್ಧಿಕವಾಗಿ ಸಲುವುದು, ಪತಿಗಳು+ ಅಲ್ಲದೆ ತನ್ನ ಸ್ವಾತಂತ್ರ್ರ್ಯದಲಿ ಮಾಡಿದುದು ಅತಿಶಯವನು(ಹೆಚ್ಚಿನದನ್ನು)+ ಎಯ್ದದು(ಎಯ್ದು- ಮಾಡು, ಮಾಡದು; ಆಗದು) ಕಣಾ ಭೂಪತಿಯೆ ಕೇಳಿಹಪರದ ಗತಿ ನಿಜ ಸತಿಯ ದೆಸೆಯಿಂದಲ್ಲದೆ ಫಲಿಸುವುದು ಹುಸಿಯೆಂದ(ಸುಳ್ಳು ಎಂದ)
ಅರ್ಥ:ಮುನಿಯು ರಾಜನಿಗೆ,;ಸತಿಸಹಿತ ವಿರಚಿಸಿದ ಧರ್ಮ-ಕಾರ್ಯ ಸ್ಥಿತಿಯು- ಸಮೃದ್ಧವಾಗಿ ಸಲ್ಲುವುದು. ಪತಿಗಳು ಅದಲ್ಲದೆ ತನ್ನ ಸ್ವಾತಂತ್ರ್ರ್ಯದಲ್ಲಿ ಪತ್ನಿ ಇಲ್ಲದೆ ಮಾಡಿದುದು ಹೆಚ್ಚಿನದೇನನ್ನೂ ಮಾಡದು ಕಣಾ! ರಾಜನೇ ಕೇಳು ಇಹಪರದ ಗತಿ ತನ್ನಸತಿಯ ದೆಸೆಯಿಂದ ಆಗುವುದು; ಅದಲ್ಲದೆ ಫಲಿಸುವುದು ಸುಳ್ಳು,' ಎಂದ.
ಅತಿಥಿ ಪೂಜೆಯನುಳಿದ ಜೀವ
ಸ್ಥಿತರ ಧರ್ಮಸ್ಥಿತಿಯನಪಹರಿ
ಸುತ ಬಲದಲವನಿಯಲಿ ನಿರಿಯಣದ ಕಾಲದಲಿ
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕನರಕದೊಳಗ
ದ್ದುತ ಬಹನು ಕುಲಕೋಟಿಸಹಿತವನೀಶ ಕೇಳೆಂದ||೮೬||
ಪದವಿಭಾಗ-ಅರ್ಥ: ಅತಿಥಿ ಪೂಜೆಯನು+ ಉಳಿದ(ಬಿಟ್ಟ) ಜೀವಸ್ಥಿತರ (ಬದುಕಿರುವವರ) ಧರ್ಮಸ್ಥಿತಿಯನು+ ಅಪಹರಿಸುತ ಬಲದಲಿ (ಬಲಾತ್ಕಾರದಿಂದ)+ ಅವನಿಯಲಿ(ಭೂಮಿ) ನಿರಿಯಣದ(ನಿರ್ಯಾಣ- ಹೋಗುವ) ಕಾಲದಲಿ ಗತಿಗೆಡಿಸಿ ಕೊಂಡೊಯ್ದು ವೈವಸ್ವತನು ನಾಯಕ(?ನಾಯಕ- ಮಿಹಿರಸುತ, ಸೂರ್ಯನ ಮಗ, ಶಲ್ಯ ಪರ್ವ,3,69- ಯಮ) ನರಕದೊಳಗೆ+ ಅದ್ದುತ ಬಹನು ಕುಲಕೋಟಿಸಹಿತ+ ಅವನೀಶ ಕೇಳು+ ಎಂದ
ಅರ್ಥ:ಮುನಿಯು ರಾಜನೇ,'ಅತಿಥಿ ಪೂಜೆಯನ್ನು- ಅತಿಥಿಯನ್ನು ಗೌರವಿಸುವುದನ್ನು ಬಿಟ್ಟ ಜನರ ಧರ್ಮಸ್ಥಿತಿಯನ್ನು- ಪುಣ್ಯವನ್ನು ತನ್ನ ಶಕ್ತಿಯಿಂದ ಅಪಹರಿಸುತ್ತಾ ಭೂಮಿಯನ್ನು ಬಿಟ್ಟು ನಿರ್ಯಾಣ- ಹೋಗುವ ಕಾಲದಲ್ಲಿ, ಉತ್ತಮ ಗತಿಯಿಲ್ಲದಂತೆ ಗತಿಗೆಡಿಸಿ ಯಮನು ಕೊಂಡೊಯ್ದು ನರಕದೊಳಗೆ ಅದ್ದುತ್ತಾ ಬರುವನು; ಅದು ಅವನ ಕುಲಕೋಟಿಸಹಿತ ಮುಂದುವರಿಯುವುದು, ಕೇಳು,' ಎಂದ.
ತಮ್ಮ ಕಾರ್ಯ ನಿಮಿತ್ತ ಗರ್ವವ
ನೆಮ್ಮಿದರೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಶ್ರುತಿ
ಗುಮ್ಮಹವನೈದುವವೊಲೌಕುವ
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳೆಂದ ||೮೭||
ಪದವಿಭಾಗ-ಅರ್ಥ: ತಮ್ಮ ಕಾರ್ಯ ನಿಮಿತ್ತ ಗರ್ವವ ನೆಮ್ಮಿದರೆ(ಅನುಸರಿಸಿದರೆ- ಹೊಂದಿದರೆ) ತದ್+ ಗರ್ವದಿಂದ+ ಉರೆ ದಿಮ್ಮಿತಹುದ+ ಆ ಕಾರ್ಯ ಮರ್ತ್ಯ ಚರಾಚರಂಗಳಲಿ ನಿರ್ಮಮತೆಯಲಿ ನಡೆದು+ ಉಪಶ್ರುತಿ(ಗೆ)+ ಗುಮ್ಮಹವನು (ಜೂಟಾಟದಲ್ಲಿ ಮುಟ್ಟಬೇಕಾದ ಗುರಿ- ಗುಮ್ಮ)+ ಐದುವವೊಲು+ ಔಕುವ(ಕೆಳಗೆ ತಳ್ಳುವ) ಮರ್ಮಿಗಳನು(ಗುಟ್ಟಾಗಿ ತೊಂದರೆಕೊಡುವವರನ್ನು)+ ಒಳಹೊಯ್ದು ಕೊಂಬುದು ಭೂಪ ಕೇಳೆಂದ
ಅರ್ಥ:ತಮ್ಮ ಕಾರ್ಯ ನಿಮಿತ್ತ ಗರ್ವವವನ್ನು ಅನುಸರಿಸಿದರೆ ಆ ಗರ್ವದಿಂದ ಬಹಳ ದಿಮ್ಮಿತಹುದು - ದೊಡ್ಡ ವ್ಯಕ್ತಿ ಎನಿಸಿಕೊಳ್ಳಬಹುದು. ಆ ಕಾರ್ಯ ಮರ್ತ್ಯ- ಮಾನವ ಮೊದಲಾದ ಚರಾಚರಂಗಳಲ್ಲಿ ನಿರ್ಮಮತೆಯಲಿ ನಡೆದು ಉಪಶ್ರುತಿಗೆ ಮುಟ್ಟಬೇಕಾದ ಗುರಿಯನ್ನು ತಲಪುವಂತೆ ಕೆಳಗೆ ತಳ್ಳುವ ಗುಟ್ಟಾಗಿ ತೊಂದರೆಕೊಡುವ ಅವರನ್ನು ಒಳಗುಟ್ಟು ತಿಳಿದು ಮೇಲೇಳದಂತೆ ಬಡಿದುತಗ್ಗಿಸಿ ಕೊಳ್ಳಬೇಕು, ಕೇಳು,' ಎಂದ.
ಅರಸ ಕೇಳೈ ಮಾರ್ಗ ಮೂರಾ
ಗಿರುತಿಹವು ಸಂಪೂರ್ಣ ಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು |
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ ||೮೮||
ಪದವಿಭಾಗ-ಅರ್ಥ: ಅರಸ ಕೇಳೈ ಮಾರ್ಗ ಮೂರಾಗಿ+ ಇರುತಿಹವು, ಸಂಪೂರ್ಣ ಧನ, ಗುರು ಪರಿಚರಿಯ, ಪರಿವರ್ತನೆಗಳು (ಬದಲಾವಣೆ, ಮಾರ್ಪಾಟು, ಬಳಕೆ, ಚಾಲ್ತಿ) + ಎಂಬ+ ಇನಿತನು+ ಅತಿ+ ಗ+ ಕಳೆದು (ಅತಿ ಮಾಡದೆ ) ತಿರುಗಿ ಬಂದೊಡೆ, ನಾಲ್ಕನೆಯ ಮತ ದೊರಕಲು+ ಅರಿವುದೆ(ಅದನ್ನು ತಿಳಿಯುವುದೆ) ಕಲೆಗಳನು(ವಿದ್ಯೆಗಳನ್ನು) ಸಂವರಿಸುವ (ಸಂವರಿಸುವುದು, ಹೊಂದುವುದು, ಉದ್ಯೋಗ ಪರ್ವ,4,112)+ ನರೋತ್ತಮರಿಗೆ+ ಅವನೀಪಾಲ ಕೇಳೆಂದ.
ಅರ್ಥ:ಮುನಿಯು,' ರಾಜನೇ ಕೇಳು, ಮನುಷ್ಯನಿಗೆ ಮಾರ್ಗಗಳು ಮೂರು ಇವೆ, 'ಸಂಪೂರ್ಣ ಧನ- ಸಂಪತ್ತು ಸಂಗ್ರಹ, ಗುರು ಪರಿಚರ್ಯ ದಿಂದ ಜ್ಞಾನ ಸಂಪಾದನೆ, ಜೀವನ ಕ್ರಮದಲ್ಲಿ ಹೊಸ ಬದಲಾವಣೆಗಳು,' ಎಂಬ ಇವುಗಳನ್ನು ಅತಿಯಾಗಿ ಮಾಡದೆ, ಅದರಿಂದ ತಿರುಗಿ ಬಂದರೆ ನಾಲ್ಕನೆಯ ಮತ ದೊರಕುವುದು. ಅದನ್ನು ತಿಳಿಯುವುದು ಅಗತ್ಯ ವಿದ್ಯೆಗಳನ್ನು ಹೊಂದುವುದು,ಉತ್ತಮ ಜನರಿಗೆ ಯೋಗ್ಯವು,' ಎಂದ.
ಕಾದುದಕದಾಸ್ನಾನ ಸಿದ್ಧಿಯ
ವೈದಿಕಾಂಗದ ಮಂತ್ರ ಸಾಧನ
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ |
ಐದದಿಹ ದಕ್ಷಿಣೆಗಳೆಂಬಿವು
ಬೂದಿಯಲಿ ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ಭೂಪ ಕೇಳೆಂದ ||೮೯||
ಪದವಿಭಾಗ-ಅರ್ಥ: ಕಾದ+ ಉದುಕದಾ (ಬಿಸಿ ನೀರಿನ) ಸ್ನಾನ, ಸಿದ್ಧಿಯ ವೈದಿಕಾಂಗದ ಮಂತ್ರ ಸಾಧನ, ವೇದ ಹೀನರಿಗೆ+ ಇತ್ತ ಫಲವು+ ಆ ಶ್ರಾದ್ಧ ಕರ್ಮದಲಿ, ಐದದಿಹ(ಐದಿದ- ಬಂದ, ಐದದೆ+ ಇಹ; ಬರದ) ದಕ್ಷಿಣೆಗಳು+ ಎಂಬಿವು ಬೂದಿಯಲಿ ಬೇಳಿದ (ಹಾಕಿದ; ಬೇಳಿದ, ಅರ್ಪಿಸಿದ, ಉದ್ಯೋಗ ಪರ್ವ,4,89) ಹವಿಸ್ಸಿನ ಹಾದಿಯು+ ಅಲ್ಲದೆ ಫಲವನು+ ಈಯವು(ಕೊಡವು) ಭೂಪ ಕೇಳೆಂದ.(ಐದಿದ- ಬಂದ, ವಿರಾಟ ಪರ್ವ,2,16)
ಅರ್ಥ:ಮುನಿಯು,'ಬಿಸಿಯಾದ ನೀರಿನ ಸ್ನಾನವೂ, ಸಿದ್ಧಿಯ ವೈದಿಕಾಂಗದ ಮಂತ್ರ ಸಾಧನವೂ, ವೇದ ಹೀನರಿಗೆ ಕೊಟ್ಟ ಫಲವೂ, ಆ ಶ್ರಾದ್ಧ ಕರ್ಮದಲ್ಲಿ ಬಾರದ(?) ದಕ್ಷಿಣೆಗಳು ಎಂಬಿವು ಬೂದಿಯಲ್ಲಿ ಅರ್ಪಿಸಿದ ಹವಿಸ್ಸಿನ ಹಾದಿಯಂತೆ; ಅದು ಅಲ್ಲದೆ ಫಲವನು ಕೊಡವು, ಭೂಪನೇ ಕೇಳು,'ಎಂದ.
ಇಹಪರದ ಗತಿ ದಾನ ಧರ್ಮದ
ಬಹುಳತಿಗಳನು ತತ್ತ್ವಭಾವದ
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ |
ಬಹುದು ಸದ್ವಂಶದಲಿ ಜನಿಸಿಹ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳೆಂದ ||೯೦||
ಪದವಿಭಾಗ-ಅರ್ಥ: ಇಹಪರದ ಗತಿ, ದಾನ ಧರ್ಮದ ಬಹುಳತಿಗಳನು(ಹೆಚ್ಚಾಗಿರುವುದನ್ನು) ತತ್ತ್ವಭಾವದ ವಿಹಿತಪುಣ್ಯದ(ಯೋಗ್ಯ) ಬೆಳವಿಗೆಯ(ಬೆಳವಿಗೆ, ಏಳಿಗೆ/ಬೆಳವಣಿಗೆ., ಉದ್ಯೋಗ ಪರ್ವ,8,10) ಫಲವೊಂದು ನೂರಾಗಿ ಬಹುದು ಸದ್ವಂಶದಲಿ(ಸತ್ + ವಂಶದಲ್ಲಿ) ಜನಿಸಿಹ ಮಹಿಮನು+ ಇರೆ ಲೋಕಾಂತರದ ಸುಖವಹುದು ಸಂತಾನ+ ಅಭಿವೃದ್ಧಿಯು ನೃಪತಿ ಕೇಳೆಂದ
ಅರ್ಥ:ಮುನಿಯು,'ಇಹ ಲೋಕ,ಪರಲೋಕದ ಗತಿಯು, ದಾನ ಧರ್ಮದ ಹೆಚ್ಚಾಗಿರುವುದನ್ನು ತತ್ತ್ವಭಾವದ ಯೋಗ್ಯ ಪುಣ್ಯದ ಬೆಳವಣಿಗೆಯ ಫಲವು- ಒಂದು ನೂರಾಗಿ ಬರುವುದು; ಉತ್ತಮ ವಂಶದಲ್ಲಿ ಜನಿಸಿರುವ ಮಹಿಮನಾದವನು ಇರಲು ಲೋಕಾಂತರದ- ಸ್ವರ್ಗದ ಸುಖವು ಸಿಗುವುದು; ಸಂತಾನ ಅಭಿವೃದ್ಧಿಯು ಆಗುವುದು, ನೃಪತಿಯೇ ಕೇಳು,' ಎಂದ.
ಚೋರನನು ಕಾಣುತ್ತ ಮರಳಿದು
ಚೋರನೆಂದೊಡೆ ಪತಿತನನು ನಿ
ಷ್ಟೂರತನದಿಂ ಪತಿತನೆಂದೊಡೆ ಸಾಮ್ಯದೋಷವದು |
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪಧವನೀಪಾಲ ಕೇಳೆಂದ ||೯೧||
ಪದವಿಭಾಗ-ಅರ್ಥ: ಚೋರನನು(ಕಳ್ಳನನ್ನು) ಕಾಣುತ್ತ ಮರಳಿದು ಚೋರನೆಂದೊಡೆ, ಪತಿತನನು(ಪಾಪಿಯನ್ನು) ನಿಷ್ಟೂರತನದಿಂ ಪತಿತನೆಂದೊಡೆ ಸಾಮ್ಯದೋಷವು+ ಅದು ಸಾರುವುದು, ಮಿಥ್ಯ+ ಉತ್ತರದಲಿ(ಮುಂದೆ) ವಿಚಾರಿಸದೆ ನುಡಿದವರಿಗೆ+ ಇಮ್ಮಡಿ ನಾರಕದ ಫಲ ತಪ್ವದು+ ಅವನೀಪಾಲ ಕೇಳು+ ಎಂದ
ಅರ್ಥ:ಮುನಿಯು,'ಕಳ್ಳನನ್ನು ಕಾಣುತ್ತಲೆ ಅವನ ಕಡೆ ತಿರುಗಿ,'ನೀನು ಚೋರನು,' ಎಂದರೆ, ದಾರಿತಪ್ಪಿದ ಪಾಪಿಯನ್ನು ಕುರಿತು ನಿಷ್ಟರತನದಿಂದ, 'ನೀನು ಪಾಪಿಯು,' ಎಂದರೆ ಸಾಮ್ಯದೋಷವು- ಇರುವುದನ್ನೇ ಹೇಳಿ ಅವಮಾನಿಸುವುದು- ಅದು ಸಾರುವುದು, ಅದು ಮಿಥ್ಯವಾದಲ್ಲಿ ಮುಂದೆ ವಿಚಾರಿಸದೆ ನುಡಿದವರಿಗೆ ಇಮ್ಮಡಿಯಾಗಿ ನರಕದ ಫಲವು ತಪ್ವದು, ಅವನೀಪಾಲನೇ ಕೇಳು,' ಎಂದ. (ಅದು ನಿಜವಾಗಿದ್ದರೂ ಕುಡುಕನಿಗೆ 'ಕುಡುಕ' ಎಂದರೆ ಅವನು ಸಹಿಸುವುದಿಲ್ಲ; ಹಾಗೆಯೇ ವ್ಯಬಿಚಾರಿಗೆ ವ್ಯಬಿಚಾರಿ ಎಂದರೆ ಸಹಿಸರು. ಸಾಮಾನ್ಯವಾಗಿ ಗೊತ್ತಿದ್ದರೂ ಹಾಗೆ ಹೇಳುವುದಿಲ್ಲ!)
ವಿನುತ ಮಧುಕೈಟಬರ ಮೇಧ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ |
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ ||೯೨||
ಪದವಿಭಾಗ-ಅರ್ಥ: ವಿನುತ (ಸ್ತುತಿಗೊಂಡ)ಮಧುಕೈಟಬರ ಮೇಧಸ್ಸಿನಲಿ(ದೇಹದ ಮಾಂಸದಿಂದ) ಮೇದಿನಿಯಾದುದು+ ಇದ ನೀನು+ ಅನುಭವಿಸುವೊಡೆ ಪುಣ್ಯಕೀರುತಿಯೆಂಬ (ಪುಣ್ಯದಿಂದ ಗಳಿಸಿದ ಕೀರ್ತಿ) ಪರಿಮಳದ ಹೊನಲಿನಲಿ(ಪ್ರವಾಹ) ತರವಿಡಿದು(ತರವಿಡಿ- ಹೊಂದಿಕೊ, ಉದ್ಯೋಗ ಪರ್ವ,4,92) ಲೇಸಾ ಗಿ+ ಅನುಭವಿಸುವುದು+ ಅದಲ್ಲದಿದ್ದೊಡೆ ಮನುಜ ಮಾಂಸವ ಭಕ್ಷಿಸಿದ ಫಲವು+ ಅರಸ ಕೇಳು+ ಎಂದ
ಅರ್ಥ:ಮುನಿಯು,'ಮಹಾ ವೀರರೆಂದು ಹೊಗಳಲ್ಪಟ್ಟ ಮಧುಕೈಟಬರ ಮೇಧಸ್ಸಿನಿಂದ ಭೂಮಿಯು ಆಗಿದೆ, ಇದ್ನು ನೀನು ಅನುಭವಿಸುವುದಾದರೆ ಪುಣ್ಯದಿಂದ ಗಳಿಸಿದ ಕೀರ್ತಿಯ ಪರಿಮಳದ ಪ್ರವಾಹಕ್ಕೆ ಹೊಂದಿಕೊಂಡು, ಚೆನ್ನಾಗಿ ಅನುಭವಿಸುವುದು. ಅದಲ್ಲದಿದ್ದರೆ ಮನುಷ್ಯನ ಮಾಂಸವನ್ನು ಭಕ್ಷಿಸಿದ- ತಿಂದ ಫಲವುನಿನಗೆ ಸಿಗುವುದು ಅರಸ ಕೇಳು,' ಎಂದ.
  • ಪೂರ್ವ ಕಥೆ: ದೇವಿ ಭಾಗವತ ಪುರಾಣದ ಪ್ರಕಾರ, ಮಧು ಮತ್ತು ಕೈಟಭರು ವಿಷ್ಣುವಿನ ಕಿವಿಯ ಕೊಳೆಯಿಂದ ಹುಟ್ಟಿದವರು. ಅವರು ಮಹಾದೇವಿಯನ್ನು ಕುರಿತು ಸುದೀರ್ಘ ತಪಸ್ಸನ್ನು ಮಾಡಿದರು. ದೇವಿಯಲ್ಲಿ ಅವರು ತಮಗೆ ಅಜೇಯತೆಯನ್ನೂ ಮತ್ತು ತಮ್ಮಲ್ಲಿ ಪರಸ್ಪರ ಯುದ್ಧದಿಂದ ಮಾತ್ರಾ ತಮ್ಮ ಸಾವು ಆಗಬೇಕೆಂದು ವರವವನ್ನು ಕೇಳಿದರು; ದೇವಿ ಆವರಗಳನ್ನು ನೀಡಿದಳು. ಅಹಂಕಾರ ತುಂಬಿದ ಆ ದೈತ್ಯರು ನಂತರ ಬ್ರಹ್ಮವನ್ನು ಆಕ್ರಮಣ ಮಾಡಲು ಆರಂಭಿಸಿದರು. ಬ್ರಹ್ಮ ವಿಷ್ಣುವಿನ ಸಹಾಯವನ್ನು ಕೋರಿದನು. ಆದರೆ ಅವರಿಗೆ ವಿಷ್ಣುವನ್ನು ಎಚ್ಚರಗೊಳಿಸಲು ಸಾಧ್ಯವಾಗಲಿಲ್ಲ. ವಿಷ್ಣುವು ಆಳವಾದ ಯೋಗ ನಿದ್ರೆಯಲ್ಲಿದ್ದನು. ನಂತರ ಬ್ರಹ್ಮನು ಮಹಾದೇವಿಗೆ ಪ್ರಾರ್ಥಿಸಿದನು. ಅಷ್ಟರಲ್ಲಿ ವಿಷ್ಣು ಎಚ್ಚರಾದನು. ಈ ಎರಡು ರಾಕ್ಷಸರು ವಿಷ್ಣುವಿನೊಡನೆ ಹೋರಾಡಿ ಅವನನ್ನು ಸೋಲಿಸಿದರು. ಮಹಾದೇವಿಯ ಸಲಹೆಯ ನಂತರ, ವಿಷ್ಣು ಈ ಎರಡು ರಾಕ್ಷಸರನ್ನು ನಾಶಮಾಡಲು ಒಂದು ಉಪಾಯವನ್ನು ಬಳಸಿಕೊಳ್ಳುತ್ತಾನೆ. ವಿಷ್ಣು ಇಬ್ಬರೂ ರಾಕ್ಷಸರ ಯುದ್ಧದ ಶಕ್ತಿಗಳನ್ನು ಶ್ಲಾಘಿಸುತ್ತಾನೆ ಮತ್ತು ಅವರಿಗೆ ತಮಗೆ ಬೇಕಾದ ವರವನ್ನು ಕೇಳಲು ವಿಷ್ಣುವು ಹೇಳಿದಾಗ, ಅವರು ತಾವು ಪೂರ್ಣ ತೃಪ್ತಿ ಹೊಂದಿದ್ದಾಗಿ ಹೇಳುತ್ತಾರೆ. ವಿಷ್ಣುವಿನ ವಿರುದ್ಧ ತಮ್ಮ ವಿಜಯದ ಬಗ್ಗೆ ಹೆಮ್ಮೆಪಡುತ್ತಾರೆ; ಅವರು ಬದಲಿಗೆ ವಿಷ್ಣುವನ್ನು ಕುರಿತು ತಾವೇ ಅವನಿಗೆ ಬೇಕಾದ ಎರಡು ವರಗಳನ್ನು ನೀಡಲು ಸಿದ್ಧವೆನ್ನತ್ತಾರೆ; ವಿಷ್ಣು ಬುದ್ಧಿವಂತಿಕೆಯಿಂದ ಮಧು ಮತ್ತು ಕೈಟಭರ ಜೀವವನ್ನು ಕೇಳುತ್ತಾನೆ. ಅಗ ಅವರು ಪರಸ್ಪರ ಹೋರಾಡಿ ಸಾಯುವರು. ಅವರ ದೇಹವೇ ಭೂಮಿ ಎಂಬ ಕಥೆ ಇದೆ. ಬೇರೆ ಪುರಾಣಗಳಲ್ಲಿ ಕಥೆ ಸ್ವಲ್ಪ ಬೇರೆ ರೀತಿ ಇದೆ. ಕಥೆಯ ಅಂತ್ಯ ಒಂದೇ ರೀತಿ ಇದೆ.

ಧರ್ಮ[ಸಂಪಾದಿಸಿ]

ತನ್ನ ದಾನವಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ |
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ||೯೩||
ಪದವಿಭಾಗ-ಅರ್ಥ: ತನ್ನ ದಾನವ+ ಅಪಹರಿಸಿ ಕೊಂಡು+ ಅನ್ಯರು+ ಇತ್ತುದಕೆ+ ಅಡ್ಡ ಬೀಳುವ ಧನ್ಯರುಗಳು+ ಅರವತ್ತು ಸಾವಿರ ವರುಷ ಪರಿಯಂತ ಖಿನ್ನವು (ದುಃಖ ತುಂಬಿದ)+ ಅಹ ವಿಷ್ಠೆಯೊಳು(425. ವಿಷ್ಠೆ, ಹೊಲಸು, ಉದ್ಯೋಗ ಪರ್ವ,4,93) ಕ್ರಿಮಿಗಳ ಜನ್ಮದಲ್ಲಿ+ ಇಹರು+ ಇದನರಿದು ನೀನು+ ಇನ್ನು ಕೊಟ್ಟುದನು+ ಉಳುಹಿಕೊಂಬುದು ಧರ್ಮವಲ್ಲ+ ಎಂದ.
  • ಟಿಪ್ಪಣಿ: ಧರತರಾಷ್ಟ್ರನು, ಪಾಂಡವರು ಸಂಪತ್ತು, ರಾಜ್ಯ ಮತ್ತು ದ್ರೌಪದಿಯನ್ನು ಪಗಡೆಯಲ್ಲಿ ಪಣವಿಟ್ಟು ಸೋತಾಗ ದ್ರೌಪದಿಯನ್ನು ಸಭೆಗೆ ಕೂದಲು ಹಿಡಿದು ಎಳದುತಂದು, ಸೀರೆಯನ್ನು ಎಳೆಯಲು ಅದು ಅಕ್ಷಯವಾಯಿತು. ಭೀಮನು ಕೌರವನ ತಟ್ಟಿದ ತೊಡೆಯನ್ನು ಮುರಿಯುವುದಾಗಿಯೂ, ದುಶ್ವಾಸನನ ಕರಳುಬಗೆದು ರಕ್ತ ಕುಡಿಯುವುದಾಗಿಯೂ, ಆ ರಕ್ತವನ್ನು ದ್ರೌಪದಿಯ ಕೂದಲಿಗೆ ಹಚ್ಚಿ ಮುಡಿಕಟ್ಟುವುದಾಗಿಯೂ ಪ್ರತಿಜ್ಞೆಮಾಡಲು ಸಭೆಯು ತಲ್ಲಣಿಸಿ, ಧೃತರಾಷ್ಟ್ರನು ಪಾಂಡವರ ರಾಜ್ಯವನ್ನೂ ಸಂಪತ್ತನ್ನೂ ಮರಳಿ ಅವರಿಗೇ ಕೊಟ್ಟು ಇಂದ್ರಪ್ರಸ್ತಕ್ಕೆ ಕಳುಹಿದನು. ಆದರೆ ಕೌರವನ ಒತ್ತಡಕ್ಕೆ ಮಣಿದು ಪುನಃ ಕರೆಸಿ ಪಗಡೆ ಜೂಜಿನಲ್ಲಿ ಶಕುನಿಯ ಸಹಾಯದಿಂದ ಪಾಂದವರ ನ್ನು ಹನ್ನರಡುವರ್ಷ ಕಾಡಿಗೂ ಒಮದು ವರ್ಷ ಅಜ್ಞಾತ ವಾಸಕ್ಕೂ ಹೋಗುವಂತೆ ಮಾಡಿದನು. ಅವರ ರಾಜ್ಯವು ಕೌರವರ ಬಳಿ ಅನಾಥವಾಗಿ ಉಳಿಯಿತು. ಅದನ್ನು ಹಿಂತಿರುಗೆ ಕೊಡದೆ ಅಪಹರಿಸುವ ಯೋಜನೆ ಮಾಡಿದನು. ಬ್ರಹ್ಮನ ಪುತ್ರ ಸನತ್ಸುಜಾತ ಮುನಿಯು ಅದೇ ಕೊಟ್ಟ ದಾನವನ್ನು ಅಪಹರಿಸಿದವರು ಹೊಲಸು ಗುಂಡಿಯಲ್ಲಿ ಕ್ರಿಮಿಯಾಗಿ ಇರುವರು ಎಂದನು, ಮತ್ತು, 'ನೀನಿನ್ನು ಕೊಟ್ಟುದನ್ನು ನಿನ್ನಲ್ಲಿಯೇ ಉಳುಹಿಕೊಂಳ್ಲುವುದು ಧರ್ಮವಲ್ಲ,' ಎಂದ. ಆದರೆ ಕುರುಡು ರಾಜನು ಮುನಿಯ ಉಪದೇಶಕ್ಕೆ ಕಿವುಡನೂ ಆದನು.
ಅರ್ಥ:ಮುನಿಯು, ಧೃತರಾಷ್ರ್ಟನಿಗೆ' ತಾನು ಕೊಟ್ಟ- ತನ್ನ ದಾನವನ್ನು, ತಾನೇ ಅಪಹರಿಸಿಕೊಂಡು, ಅನ್ಯರು ತನಗೆ ಕೊಟ್ಟ ದಾನಕ್ಕೆ ಅಡ್ಡ ಬೀಳುವ- ನಮಿಸುವ ಧನ್ಯರುಗಳು- ಧನ್ಯರೆಂದುಕೊಳ್ಳುವ ಪಾಪಿಗಳು, ಅರವತ್ತು ಸಾವಿರ ವರುಷ ಪರಿಯಂತ ದುಃಖ ತುಂಬಿರುವ ಹೊಲಸುಗುಂಡಿಯಲ್ಲಿ ಕ್ರಿಮಿಗಳ ಜನ್ಮದಲ್ಲಿ ಇರುವರು. ಇದನ್ನು ಅರಿತು ನೀನು ಇನ್ನು ಕೊಟ್ಟುದನ್ನು ಇನ್ನಬಳಿ ಉಳುಹಿಕೊಳ್ಳುವುದುದು ಧರ್ಮವಲ್ಲ,' ಎಂದ.
ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ |
ಹಿರಿದಹುದು ದಾನ ಪ್ರಶಂಸೆಯ
ನಿರಿಸಿಕೊಂಡಿಹ ದಾನ ನರಕವ
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ||೯೪||
ಪದವಿಭಾಗ-ಅರ್ಥ: ಕರಣ ಮೂರರೊಳು (ಕಾಯ.೨.ವಾಕ್ಕು, ೩.ಮನಸ್ಸು, )+ ಇತ್ತ (ಕೊಟ್ಟ) ವಸ್ತುವನು+ ಇರಿಸಿಕೊಂಡರೆ ಮಾಸ ಮಾಸಾಂತರದೊಳು+ ಒಂದಕೆ ನೂರು ಗುಣದಲಿ ಕೋಟಿ ಪರಿಯಂತ, ಹಿರಿದಹುದು ದಾನ ಪ್ರಶಂಸೆಯನು+ ಇರಿಸಿಕೊಂಡಿಹ ದಾನ ನರಕವನು+ ಎರಡಕೆ+ ಒಂದೇ ದಾನ ಕಾರಣವು+ ಎಂದನು+ ಆ ಮುನಿಪ
ಅರ್ಥ:ಮುನಿಯು ರಾಜನಿಗೆ,' ಕಾಯಾ ವಾಚಾ ಮನಸಅ ಕೊಟ್ಟ ವಸ್ತುವನ್ನು , ಮತ್ತೆ ಕಅಸಿದು ತಾನೇ ಇರಿಸಿಕೊಂಡರೆ, ಮಾಸ ಮಾಸಾಂತರದಲ್ಲಿ ತಿಂಗಳು - ಅಥವಾ ಕೆಲವೇ ದಿನದಲ್ಲಿ ಒಂದಕ್ಕೆ ನೂರು ಗುಣದಿಂದ ಕೋಟಿ ಪರಿಯಂತ ಅದು ಹಿರಿದಾಗಿ ಬೆಳೆಯುವುದು. ದಾನ ಪ್ರಶಂಸೆಯನ್ನು ಹೇಳುವುದಾದರೆ, ಕೊಟ್ಟ ದಾನವನ್ನು ತಾನೇ ಇರಿಸಿಕೊಂಡರೆ ಆ ದಾನ ನರಕದ ಫಲವನ್ನು ಕೊಡುವುದು. ಪಾಪ ಪುಣ್ಯ ಈ ಎರಡಕ್ಕೆ ಒಂದೇ ದಾನವು ಕಾರಣವಾಗುವುದು,' ಎಂದನು.
ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು |
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ ||೯೫||
ಪದವಿಭಾಗ-ಅರ್ಥ: ದ್ಯೂತದಲಿ, ಮದ್ಯದಲಿ (ಹೆಂಡ), ಘನ ಕಂಡೂತಿಯಲಿ (ತುರಿಕೆ, ನವೆ), ನಿದ್ರೆಯಲಿ, ಕಲಹ ವಿಘಾತಿಯಲಿ (ಏಟಿನ ಗಾಯದಲ್ಲಿ), ಮೈಥುನದಲಿ (ಸ್ತ್ರೀ ಸಂಭೊಗದಲ್ಲಿ)+ ಆಹಾರದಲಿ ಬಳಿ ಸಂದು (ಹತ್ತಿರ ಬಂದು) ಕೈತವದ (ಕಪಟ, ವಂಚನೆ, ಜೂಜು, ದ್ಯೂತ) ಉದ್ಯೋಗದಲಿ, ದುರ್ನೀತಿಯಲಿ, ಪರಸತಿಯರಲಿ ಸಂಪ್ರೀತಿ, ಬಲಿವುದು (ಬಲಿ- ಗಟ್ಟಿಯಾಗಿ ಚುಚ್ಚು, ಕೂರು) ಬೆದಕ (ಇರಿ, ತಿವಿ, ಬೆಸೆ, ಕುತ್ತು, ಸದೆ, ಅಪ್ಪಳಿಸು, ಅಣೆ,, ತಾಟು, ಅರೆ, ಗೀರು) ಬೆದಕಲು ಭೂಪ ಕೇಳೆಂದ
ಅರ್ಥ:ಮುನಿಯು, 'ರಾಜನೇ, ದ್ಯೂತದಲ್ಲಿ, ಮದ್ಯದಲ್ಲಿ, ಬಹಳ ತುರಿಕೆಯಲ್ಲಿ, ನಿದ್ರೆಯಲ್ಲಿ, ಕಲಹದ ಏಟಿನ ಗಾಯದಲ್ಲ್ಲಿ, ಮೈಥುನದಲ್ಲಿ - ಸ್ತ್ರೀ ಸಂಭೊಗದಲ್ಲಿ)+ ಆಹಾರದಲ್ಲಿ, ಹತ್ತಿರ ಬಂದು ವಂಚನೆಯನ್ನು ಮಾಡುವ ಉದ್ಯೋಗದಲ್ಲಿ, ದುರ್ನೀತಿಯಲ್ಲಿ, ಪರಸತಿಯರಲ್ಲಿ ಸಂಪ್ರೀತಿಪಡುವುದು, ಇವು ಜೀವನವನ್ನು ತಿವಿದು, ಬೆದಕಲು- ನೋಯಿಸಲು ಗಟ್ಟಿಯಾಗಿ ನೆಲಸುವುದು, ಕೇಳು,' ಎಂದ
ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು |
ಇಕ್ಕದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ||೯೬||
ಪದವಿಭಾಗ-ಅರ್ಥ: ದುಷ್ಕೃತವನು+ ಎಸಗುವರು(ಕೆಟ್ಟಕಾರ್ಯವನ್ನು ಮಾಡುವರು) ಫಲದಲಿ ಕಕ್ಕುಲಿಸುವರು(ಪ್ರೀತಿಸು, ಬಯಸುವರು; ಕಕ್ಕುಲಿಸು, ಹಂಬಲಿಸು, ಉದ್ಯೋಗ ಪರ್ವ,4,96 ) ಸುಕೃತವೆಂಬುದ ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು ಇಕ್ಕದೆ (ಕೊಡದೆ)+ ಎರೆಯದೆ ಬಿತ್ತಿ ಬೆಳೆಯದೆ ಪುಕ್ಕಟೆಯ ಸ್ವರ್ಗಾದಿ ಭೋಗವು ಸಿಕ್ಕಲು+ ಅರಿವುದೆ ರಾಯ ಚಿತ್ತೈಸು+ ಎಂದನು.
ಅರ್ಥ:ಆ ಮುನಿಪನು,'ರಾಜನೇ ಕೇಳು,ಜನರು ಕೆಟ್ಟಕಾರ್ಯವನ್ನು ಮಾಡುವರು; ಆದರೆ ಉತ್ತಮ ಫಲಕ್ಕಾಗಿ ಹಂಬಲಿಸಸುವರು; ಸುಕೃತವೆಂಬುದ- ಉತ್ತಮ ಕಾರ್ಯಗಳನ್ನು ಮಾಡಲು ಲೆಕ್ಕಿಸುವುದೆ ಉತ್ತಮ ಕಾರ್ಯದ ಫಲವನ್ನೇ ಮಾನವರು ಬಯಸುವರು. ಕೊಡದೆ ಎರೆಯದೆ- ನೀರುಹಾಕದೆ, ಬಿತ್ತಿ ಬೆಳೆಯದೆ, ಪುಕ್ಕಟೆಯಾಗಿ ಸ್ವರ್ಗಾದಿ ಭೋಗಗಳು ಸಿಕ್ಕಲು ಸಾಧ್ಯವೇ, ರಾಯನೇ,' ಎಂದನು.
ವರ ಶ್ರುತಿ ಸ್ಮೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ |
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ||೯೭||
ಪದವಿಭಾಗ-ಅರ್ಥ: ವರ(ಉತ್ತಮ) ಶ್ರುತಿ ಸ್ಮೃತಿಗಳು (ವೇದೋಪನೊಇಷತ್ತುಗಳು, ಪುರಾಣಗಳು) ಕಣಾ ಭೂಸುರರ ದೃಷ್ಟಿಗಳು+ ಇವರೊಳು+ ಒಂದಕೆ ಕೊರತೆಯಾಗಲು, ಕಾಣನು+ ಎನಿಸುವನು+ ಎರಡನು+ ಅರಿಯದಿರೆ ನಿರುತವಿದು(ನಿರುತವು+ ಇದು; ಸದಾ ಇದು) ಜಾತ್ಯಂಧನೆನಿಸುವನು+ ಅರಸ ಕೇಳು+ ಈ ಮಾಂಸ ದೃಷ್ಟಿಗಳ+ ಎರವಲೇ(432. ಎರವು, ಕುಂದು. ಲೋಪ, ಉದ್ಯೋಗ ಪರ್ವ,4,67) ಸರ್ವತ್ರ ಸಾಧಾರಣವು ಲೋಕದಲಿ.
ಅರ್ಥ:ಮುನಿಯು ರಾಜನಿಗೆ,'ಭೂಸುರರಾದ ವಿಪ್ರರ ದೃಷ್ಟಿಗಳು- ಗಮನವು ಶ್ರೇಷ್ಠವಾದ ಶ್ರುತಿ ಸ್ಮೃತಿಗಳು ಕಣಾ; ಇವರಲ್ಲಿ ಒಂದಕ್ಕೆ ಕೊರತೆಯಾದರೆ, ಅವನು ಸತ್ಯವನ್ನು ಕಾಣದವನು ಎನಿಸುವನು. ಎರಡನ್ನೂ ಅರಿಯದಿದ್ದರೆ ಅವನು ಸದಾ ಕುರುಡನಂತೆ- ಹುಟ್ಟು ಕುರುಡನಂತೆ- ಜಾತ್ಯಂಧನು ಎನಿಸುವನು, ಅರಸನೇ ಕೇಳು, ಈ ಲೋಕದ ರಕ್ತ ಮಾಂಸಗಳಿಂದ ಕೂಡಿದ ಕಣ್ಣಿನ ಮಾಂಸ ದೃಷ್ಟಿಗಳ ಕುಂದುಳ್ಳ ದೃಷ್ಟಿಯು ಲೋಕದಲ್ಲಿ ಎಲ್ಲೆಡೆ ಸಾಧಾರಣವಾಗಿರುವುದು,'ಎಂದ.
ವಾಚಿಸದೆ ವೇದಾರ್ಥ ನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚನಾಗಿ ಪರಾನ್ನ ಪೂರಿತ ತಪ್ತ ತನುವಾದ |
ನೀಚನಹ ಭೂಸುರನ ಕರುಳನು
ತೋಚುವಳಲೈ ಮೃತ್ಯುವವನನು
ನಿಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ||೯೮||
ಪದವಿಭಾಗ-ಅರ್ಥ:ವಾಚಿಸದೆ(ಓದು, ಪಠಿಸು) ವೇದಾರ್ಥ ನಿಚಯವನು (ಸಮೂಹ, ರಾಶಿ, ಗುಂಪು)+ ಆಚರಿಸದೆ+ ಆಲಸ್ಯದಿಂದ+ ಉತ್ಕೋಚನಾಗಿ (ಮೇಲಕ್ಕೆ ಬಾಗುವುದು, ಲಂಚ, ಮೋಸ) ಪರಾನ್ನ ಪೂರಿತ ತಪ್ತ (ಬೆಂದ, ಕಾಯಿಸಿದ, ಶಾಖ ಹೊಂದಿದ, ನೊಂದ, ಸಂಕಟ ಹೊಂದಿದ) ತನುವಾದ(ತನು- ದೇಹ) ನೀಚನು+ ಅಹ(ಆಗಿರುವ) ಭೂಸುರನ (ವಿಪ್ರನ) ಕರುಳನು ತೋಚುವಳಲೈ(ದೋಚುವಳು ಮೃತ್ಯು; -594. ತೋಚು, ದೋಚು, ಉದ್ಯೋಗ ಪರ್ವ,4,98) ಮೃತ್ಯುವು+ ಅವನನು, ನಿಶಾಚರನು ದ್ವಿಜನು+ ಅಲ್ಲ ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ:ಮುನಿಯು,'ರಾಜನೇ,ವೇದಸಂಹಿತೆಯನ್ನೂ, ವೇದಾರ್ಥವನ್ನೂ ಪಠಿಸದೆ ಆಚರಿಸದೆ, ಆಲಸ್ಯದಿಂದಿದ್ದು ತಾನು ವೇದಪಂಡಿತನಾಗಿ ಉನ್ನತನೆಂದು, ಪರಾನ್ನವನ್ನು ಉಂಡು ಸಂಕಟಪಡುವ ದೇಹದ ನೀಚನಾಗಿರವ ವಿಪ್ರನ ಕರುಳನ್ನೂ, ಅವನನ್ನೂ ಮೃತ್ಯವು ದೋಚುವಳು; ಎಲೈ ರಾಜನೇ, ಅವನು ನಿಶಾಚರನು ವಿಪ್ರನಲ್ಲ ಕೇಳು,' ಎಂದನು.
ಸರಸಿಜಾಕ್ಷನ ವಿಷ್ಣು ನಾಮ
ಸ್ಮರಣೆಯಲಿ ಶ್ರುತಿಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು |
ಪರವಚನವನು ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ||೯೯||
ಪದವಿಭಾಗ-ಅರ್ಥ: ಸರಸಿಜಾಕ್ಷನ ವಿಷ್ಣು ನಾಮ ಸ್ಮರಣೆಯಲಿ ಶ್ರುತಿಮೂಲ ವಾಕ್ಯೋತ್ಕರುಷೆಯಲಿ (ವಾಕ್ಯ+ ಉತ್ಕರ್ಷೆಯಲ್ಲಿ- (ಸಂ)ಹೆಚ್ಚಳ, ಮೇಲ್ಮೆ, ಏಳಿಗೆ, ಅಭಿವೃದ್ಧಿ) ಭೂತಕ್ಕೆ(ಜೀವಿಗಳಿಗೆ) ಹಿತವಹ ನಡವಳಿಯನು+ ಅರಿದು (ತಿಳಿದು) ಪರ-ವಚನವನು(ಬೇರೆ - ವಚನ?) (ತಿಳಿದು 'ಹೇಳಬೇಕು': ಅಧ್ಯಾಹಾರ) ತ್ರಿಕರಣದೊಳು (ಕಾಯಾ,ವಾಚಾ, ಮನಸಾ)+ ಉಚ್ಚರಿಸಲಾಗದು ಸರ್ವಥಾ ಸತ್ಪುರುಷರ+ ಅಭಿಮತವು+ ಇದು ಚಿತ್ತೈಸು+ ಎಂದನು+ ಆ ಮುನಿಪ.
ಅರ್ಥ:,'ಮುನಿಯು ಧೃತರಾಷ್ಟ್ರನಿಗೆ ಸರಸಿಜಾಕ್ಷನಾದ ವಿಷ್ಣು ನಾಮ ಸ್ಮರಣೆಯಲ್ಲಿ ಶ್ರುತಿಮೂಲವಾದ ವಾಕ್ಯದ ಶ್ರೇಷ್ಠತೆಯನ್ನು ತಿಳಿದು ಜೀವಿಗಳಿಗೆ ಹಿತವಾಗುವ ನಡವಳಿಕೆಯನ್ನು ತಿಳಿದು ಹೇಳಬೇಕು. ಅವಕ್ಕೆ ಎಂದರೆ ಜೀವಿಗಳಿಗೆ ವಿರುದ್ಧವಾದ- ಕೆಡುಕಾಗುವ ಪರ- ಬೇರೆಬಗೆಯ ವಚನವನ್ನು ತ್ರಿಕರಣದೊಳು ಉಚ್ಚರಿಸಬಾರದು. ಇದು ಸರ್ವಥಾ- ಸದಾ ಸತ್ಪುರುಷರ ಅಭಿಮತವು; ಚಿತ್ತೈಸು ಕೇಳು,' ಎಂದನು.

ಪ್ರಾಪಂಚಿಕ ಧರ್ಮ[ಸಂಪಾದಿಸಿ]

ಲೋಕಸಮ್ಮತವಾದುದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು |
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ ||೧೦೦||
ಪದವಿಭಾಗ-ಅರ್ಥ: ಲೋಕಸಮ್ಮತವಾದುದನು ನಿರಾಕರಿಸುವವರುಗಳು ತಾವು+ ಏನು+ ಆಕೆವಾಳರೆ(ತಿಳುವಳಿಕೆಯುಳ್ಳವರೆ?) ಜಗಕೆ ತಮ್ಮನು+ ಅದಾರು ಬಲ್ಲವರು ಬೇಕು ಬೇಡೆಂಬುದಕೆ ತಾವು+ ಅವೇವೇಕಿಗಳು ಮೊದಲಿಂಗೆ ಪ್ರಾಮಾಣೀಕರುಗಳು+ ಅವರಲ್ಲ ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ:ಆ ಮುನಿಪನು,'ಲೋಕಸಮ್ಮತವಾದುದನ್ನು ನಿರಾಕರಿಸುವವರು ತಾವು ಏನು ತಿಳುವಳಿಕೆಯುಳ್ಳವರೆ?) ಜಗಕ್ಕೆ ತಮ್ಮನ್ನು ಅದು ಯಾರು ಬಲ್ಲವರು? ಬೇಕು ಬೇಡ ಎನ್ನಲು ತಾವು ಮೊದಲೇ ಅವೇವೇಕಿಗಳು; ಅವರುಪ್ರಾಮಾಣೀಕರುಗಳು ಅಲ್ಲ.ಕೇಳು,'ಎಂದನು.
ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮ ಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು |
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಗಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ||೧೦೧||
ಪದವಿಭಾಗ-ಅರ್ಥ: ಉತ್ತಮರುಗಳ ನಿಂದಿಸುತ ದುರ್ವೃತ್ತನಾಗಿಯು+ ಅಧರ್ಮ ಕೋಟಿಯೆ ನಿತ್ಯವಿಧಿತನು+ ಆಗಾಗಿ, ಧರ್ಮದ ತಾರತಮ್ಯವನು ಎತ್ತಲೆಂದು+ ಅರಿಯದೆ ಜಗಕ್ಕೆ ಜಡಾತ್ಮರಾಗಿ+ ಇಹ ವೇದಬಾಹ್ಯರ ಮೃತ್ಯುದೇವತೆ ಮುರಿದು ಮೋದದೆ (ತಿನ್ನದೆ) ಬಿಡುವಳೇ?+ ಯೆಂ+ ಎಂದ.
ಅರ್ಥ:ಮುನಿಯು ಧೃತರಾಷ್ಟ್ರನಿಗೆ,'ಉತ್ತಮ ಜನರನ್ನು ನಿಂದಿಸುತ್ತಾ ದುರ್ವೃತ್ತನಾಗಿದ್ದುಕೊಂಡು, ಅಧರ್ಮ ಕೋಟಿಯನ್ನು ನಿತ್ಯ ಆಚರಿಸುವವನಾಗಿ, ಧರ್ಮದ ತಾರತಮ್ಯವನ್ನು ಏನು-ಎತ್ತ ಎಂದು ತಿಳಿಯದೆ ಜಗಕ್ಕೆ ಜಡಾತ್ಮರಾಗಿ ಇರುವ ವೇದನೀತಿಯಿಂದ ಹೊರಗಿರುವವರನ್ನು ಮೃತ್ಯುದೇವತೆಯು ಮುರಿದು ತಿನ್ನದೆ ಬಿಡುವಳೇ?,' ಎಂದ.
ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ |
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ||೧೦೨||
ಪದವಿಭಾಗ-ಅರ್ಥ: ಲೋಕದೊಳಗಣ ಪುಣ್ಯ ಪಾಪ+ ಆನೀಕವನು(ಸಮೂಹ) ಯಮರಾಜನ+ ಆಲಯದ+ ಆಕೆವಾಳಂಗೆ (ಧರ್ಮನಿಗೆ,ಜ್ಞಾನಿಗೆ)+ ಆರುಹುವರು(ಹೇಳುವರು) ಹದಿನಾಲ್ಕು ಮುಖವಾಗಿ ನಾಲ್ಕು ಕಡೆಯಲಿ ಕವಿದು ಬರಿಸುವರು (ಯಮಲೋಕಕ್ಕೆ ಕರೆತರುವರು)+ ಔಕಿ (ಒತ್ತಿಹಿಡಿದು) ದಿನದಿನದಲ್ಲಿ ಗರ್ವೋದ್ರೇಕದಲಿ ಮೈಮರೆದು ಕೆಡಬೇಡ+ ಎಂದನು+ ಆ ಮುನಿಪ
ಅರ್ಥ:ಮುನಿಯು ರಾಜನಿಗೆ,'ಲೋಕದಲ್ಲಿ ಮಾಡಿದ ಪುಣ್ಯ ಪಾಪಗಳ ಸಮೂಹವನ್ನು ಯಮರಾಜನ ಮನೆಯ ಧರ್ಮನಿಗೆ ಅವನ ದೂತರು ಹೇಳುವರು. ಹದಿನಾಲ್ಕು (ಮೇಲಿನ ಏಳು ಲೋಕ ಮತ್ತು ಕೆಳಗಿನ ಏಳು ಲೋಕದ ಮುಖವಾಗಿ ತಿಳಿದು, ನಾಲ್ಕು ದಿಕ್ಕಿನ ಕಡೆಯಿಂದಲೂ ಕವಿದು- ಮುತ್ತಿ ಜೀವಿಯನ್ನು ಒತ್ತಿಹಿಡಿದು ಯಮಲೋಕಕ್ಕೆ ಕರೆತರುವರು. ದಿನದಿನದಲ್ಲಿ- ಸದಾಕಾಲವೂ ಗರ್ವೋದ್ರೇಕದಿಂದ ಮೈಮರೆತು ಕೆಡಬೇಡ,' ಎಂದನು.
ಚಕ್ರಿಯೊಬ್ಬಗೆ ಹತ್ತು ಕಡಿಕರ
ಲೆಕ್ಕವಂತಾ ಚಕ್ರಿ ಹತ್ತರ
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ
ಮಿಕ್ಕ ವೇಸಿಗೆ ವೇಸಿ ಹತ್ತರ
ಲೆಕ್ಕವೊಬ್ಬರಸಂಗೆ ಪಾತಕ
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ||೧೦೩||
ಪದವಿಭಾಗ-ಅರ್ಥ: ಚಕ್ರಿಯೊಬ್ಬಗೆ(ಕೃಷ್ಣನೊಬ್ಬನಿಗೆ) ಹತ್ತು ಕಡಿಕರ(ತುಂಡು ತುಂಡು ಮಾಡುವವ) ಲೆಕ್ಕವು+ ಅಂತು+ ಆ ಚಕ್ರಿ ಹತ್ತರ ಲೆಕ್ಕದೊಳಗೆ+ ಆ ಧ್ವಜಿ ಕಣಾ ಧ್ವಜಿ(ಮಾರುತಿಯ ಧ್ವಜದವ? ಅರ್ಜುನ) ಹತ್ತರ ಸಮಾನ (ಹತ್ತು ವೀರರ ಸಮಾನ); ಮಿಕ್ಕವು+ ಏಸಿಗೆ (ಎಷ್ಟಕ್ಕೆ) ವೇಸಿ(ವೇಷಗಾರ, ವೇಶ್ಯೆ, ಗಣಿಕೆ??) ಹತ್ತರ ಲೆಕ್ಕವು+ ಒಬ್ಬ+ ಅರಸಂಗೆ ಪಾತಕವು+ ಒಕ್ಕಲಿಕ್ಕುವುದು (ಹೊಡೆದು ನಾಶ ಮಾಡು., ಉದ್ಯೋಗ ಪರ್ವ,4,103)+ ಅರಸುತನ ಸಾಮಾನ್ಯವಲ್ಲ+ ಎಂದ
ಅರ್ಥ:ಮುನಿಯು ರಾಜನಿಗೆ, ಕೃಷ್ಣನೊಬ್ಬನಿಗೆ ಹತ್ತು ಮಹಾವೀರರ ಲೆಕ್ಕವು; ಅಂತು ಆ ಕೃಷ್ನನ ಹತ್ತರ ಲೆಕ್ಕದಲ್ಲಿ ಆ ಅರ್ಜುನ ಒಬ್ಬನೇ ಕಣಾ ಹತ್ತ ವೀರರ ಸಮಾನ; ಮಿಕ್ಕವು ಯಾವ ಲೆಕ್ಕಕ್ಕೆ? ಒಬ್ಬ ವೇಷಗಾರ- ಮೋಸಗಾರನು ಹತ್ತರ ಲೆಕ್ಕವು. ಆ ಒಬ್ಬ ಮೋಸಗಾರನೇ ಅರಸನಿಗೆ ಪಾತಕವಾಗುವನು, ಹೀಗೆ ಅರಸನನ್ನು ನಾಶಮಾಡುವುದು. ಅರಸುತನ ಸಾಮಾನ್ಯವಲ್ಲ,' ಎಂದ.
ಬಲುಕರಿಸಿ ಭೂಮಿಯೊಳಗೊಂದಂ
ಗುಲವನೊತ್ತಿದವಂಗೆ ಪಶು ಸಂ
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ |
ಅಳುಪಿ ಕನ್ಯಾರತ್ನದೊಳಗೊ
ಬ್ಬಳನು ಭೋಗಿಸಿದಂಗೆ ನರಕದೊ
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ||೧೦೪ ||
ಪದವಿಭಾಗ-ಅರ್ಥ: ಬಲುಕರಿಸಿ(ಬಲವಂತವಾಗಿ) ಭೂಮಿಯೊಳಗೆ+ ಒಂದಂಗುಲವನು+ ಒತ್ತಿದವಂಗೆ, ಪಶು ಸಂಕುಲದಲಿ+ ಒಂದೇ ಗೋವನು+ ಅಪಹರಿಸಿದ ದುರಾತ್ಮಂಗೆ, ಅಳುಪಿ(ಮನಸೋತು) ಕನ್ಯಾರತ್ನದೊಳಗೆ+ ಒಬ್ಬಳನು ಭೋಗಿಸಿದಂಗೆ, ನರಕದೊಳು+ ಇಳಿವುದಲ್ಲದೆ ಬೇರೆ ಗತಿಯಿಲ್ಲ+ ಎಂದನು+ ಆ ಮುನಿಪ.
ಅರ್ಥ:ಮುನಿಯು ರಾಜನಿಗೆ,'ಬಲವಂತವಾಗಿ ಪರರ ಭೂಮಿಯಲ್ಲಿ ಒಂದು ಅಂಗುಲವನ್ನು ಒತ್ತಿದವವನಿಗೆ, ಪಶು ಸಂಕುಲ- ಸಮೂಹದಲ್ಲಿ ಒಂದೇ ಒಂದು ಗೋವನ್ನು ಅಪಹರಿಸಿದ ದುರಾತ್ಮನಿಗೆ, ಮನಸೋತು ಕನ್ಯಾರತ್ನರಲ್ಲಿ ಒಬ್ಬಳನ್ನು ಭೋಗಿಸಿದವನಿಗೆ, ನರಕದಲ್ಲಿ ಇಳಿಯುವುದಲ್ಲದೆ ಬೇರೆ ಗತಿಯಿಲ್ಲ,' ಎಂದನು.
ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನಸುಕೃತಿಗಳಾಗಿಯದರಿಂ ಘೋರತರ ನರಕ |
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನ ಮಾಡಿಯು ಬೆನ್ನಬಿಡದವನೀಶ ಕೇಳೆಂದ ||೧೦೫||
ಪದವಿಭಾಗ-ಅರ್ಥ: ದಾನವಿರಹಿತರಾಗಿ (ಹಿಂದಿನ ಜನ್ಮಗಳಲ್ಲಿ ದಾನವನ್ನು ಮಾಡದೆ) ಜನಿಸಿದ ಮಾನವರು ದಾರಿದ್ರರು+ ಅದರಿಂ ಹೀನ-ಸುಕೃತಿಗಳಾಗಿಯು+ ಅದರಿಂ- ಅದಕ್ಕಿಂತ- ಘೋರತರ ನರಕ, ಆ ನರಕದಿಂ ಮರಳಿ ಪಾತಕ ಯೋನಿ ಮರಳಿ ದರಿದ್ರವು+ ಅದು, ತಾನು+ ಏನ ಮಾಡಿಯು ಬೆನ್ನಬಿಡದು+ ಅವನೀಶ ಕೇಳು+ ಎಂದ.
ಅರ್ಥ:ಮುನಿಯು ರಾಜನೇ,'ಹಿಂದಿನ ಜನ್ಮಗಳಲ್ಲಿ ದಾನವನ್ನು ಮಾಡದೆ ಜನಿಸಿದ ಮಾನವರು ದರಿದ್ರರಾಗುವರು. ಅದರಿಂದ ಹೀನರಾಗಿದ್ದು, ಸುಕೃತಿಗಳನ್ನು ಮಾಡಿದರೂ, ಅದರಿಂದ- ಹಿಂದಿನ ಸ್ವಾರ್ಥಜೀವನದಿಂದ ಘೋರತರ ನರಕ ಪ್ರಾಪ್ತಿಯಾಗುವುದು; ಆ ನರಕದಿಂದ ಪುನಃ ಪಾತಕ ಯೋನಿಯಲ್ಲಿ ಜನಿಸಿ ದರಿದ್ರವನ್ನು ಅವುಭವಿಸುವುದು ಜೀವಿ. ತಾನು ಏನನ್ನೇ ಮಾಡಿದರೂ ಪ್ರಾರಬ್ಧವು ಬೆನ್ನಬಿಡದು ಕೇಳು,' ಎಂದ.
ಪಾಕಶಾಸನನೈದಿ ವೃತ್ರನ
ಢಾಕುಗೆಡಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ |
ತೂಕ ಕುಂದಿ ಜಲಾಧಿದೇವತೆ
ಯಾ ಕಪರ್ದಿಯ ಕರುಣದಲಿ ದ
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ ||೧೦೬||
ಪದವಿಭಾಗ-ಅರ್ಥ: ಪಾಕಶಾಸನನು (ಇಂದ್ರ,)+ ಐದಿ (ಬಂದು-/ ಹೋಗಿ) ವೃತ್ರನ ಢಾಕುಗೆಡಸಿ(ಸೋಲಿಸಿ; ಢಾಕು- ಪ್ರತಿಭಟನೆ, ಎದಿರುಬೀಳು, ಹಗೆತನ) ದಧೀಚಿಯ+ ಅಸ್ಥಿಯಲಿ+ ಔಕಿ ಹೊಯ್ಯಲು (ಹೊಡೆಯಲು) ದಾನವನ ತನು(ದೇಹ) ನೀರೊಳು+ ಅಡಗೆಡೆಯೆ (ಕೆಡೆ- ಬೀಳು; ಬೀಳಲು) ತೂಕ ಕುಂದಿ (ಹಗುರವಾಗಿ) ಜಲಾಧಿದೇವತೆಯು+ ಆ ಕಪರ್ದಿಯ(ಶಿವನ) ಕರುಣದಲಿ ದರ್ಭಾಕೃತಿಯ ಕೈಕೊಂಡುದು+ ಅವನೀಶ ಕೇಳು+ ಎಂದ
ಅರ್ಥ:ಮುನಿಯು ರಾಜನೇ,'ಇಂದ್ರನು ಹೋಗಿ ವೃತ್ರಾಸುರನನ್ನು ಸೋಲಿಸಲು ದಧೀಚಿಯ ಎಲುಬಿನಿಂದ ಒತ್ತಿ ಹೊಡೆಯಲು ಹೊಡೆಯಲು ಆ ದಾನವನ ದೇಹವು ನೀರಲ್ಲಿ ಬಳಲಿ ಬೀಳಲು ಅವನ ದೇಹ ತೂಕ ಹೋಗಿ ಹಗುರವಾಯಿತು. ಜಲಾಧಿದೇವತೆಯು ಆ ಶಿವನ ಕರುಣದಿಂದ ದರ್ಭಾಕೃತಿಯನ್ನು ಹೊಂದಿತು ಕೇಳು.' ಎಂದ.

*ಟಿಪ್ಪಣಿ:([ವೃತ್ರಾಸುರ]) (ವೃತ್ರನ ಬಗ್ಗೆ ಎರಡು ಮೂರು ಬಗೆಯ ಕಥೆಗಳಿವೆ; ವೃತ್ರನು ದರ್ಭೆಯಾದ ಕಥೆ ಯಾವ ಪುರಾಣದಿಂದ ಬಂದಿದೆಯೋ ತಿಳಿಯದು)

ದರ್ಭೆಯ ಹಿರಿಮೆಯ ವರ್ಣನೆ[ಸಂಪಾದಿಸಿ]

ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ
ಕಾದುಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ ||೧೦೭||
ಪದವಿಭಾಗ-ಅರ್ಥ: ಆದಿಯಲಿ ಕಮಲಾಸನನು, ಮಧುಸೂದನನು ಮಧ್ಯದಲಿ, ಮೇಲಣ ಹಾದಿಯಲಿ ಗಿರಿಜೇಶನಿರೆ, ತ್ರೈಮೂರ್ತಿಮಯವಾಗಿ. ಕಾದುಕೊಂಡಿಹರು+ ಅಖಿಳ ಲೋಕವನು+ ಐದೆ - ದರ್ಭಾಂಕುರದ ಮಹಿಮೆಯ ಭೇದವನು ಬಣ್ಣಿಸುವನು+ ಆವನು ಭೂಪ ಕೇಳೆಂದ.
ಅರ್ಥ:ಮುನಿಯು ರಾಜನೇ, ದರ್ಭೆಯಆದಿಯಲ್ಲಿ ಕಮಲಾಸನ ಬ್ರಹ್ಮನು, ಮಧುಸೂದನ ವಿಷ್ಣುವು, ಮಧ್ಯದಲ್ಲಿ ಮೇಲಿನ ಹಾದಿಯಲ್ಲಿ ಗಿರಿಜೇಶ ಶಿವನು ಇರಲು, ತ್ರೈಮೂರ್ತಿಮಯವಾಗಿ ಅಖಿಲ ಲೋಕವನ್ನು ಬಂದು ಕಾದುಕೊಂಡಿರುವರು. ಹೀಗಿರುವ ದರ್ಭಾಂಕುರದ ಮಹಿಮೆಯನ್ನು, ಅದರ ಭೇದವನ್ನು- ಸೀಳನ್ನು ಬಣ್ಣಿಸುವವನು ಯಾವನು ಇದ್ದಾನೆ- ಯಾರೂ ಇಲ್ಲ; ಕೇಳು,'ಎಂದ.
ಬೆರಳ ಮೊದಲಲಿ ಭೂಸುರರು ನಡು
ವೆರಳೆಡೆಗಳಲಿ ಪಾರ್ಥಿವರು ತುದಿ
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು |
ಧರಿಸಬೇಹುದು ದಕ್ಷಿಣ ಕರಾಂ
ಬುರುಹದಲಿ ದಿನದಿನದ ಸಂಧ್ಯಾಂ
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ||೧೦೮||
ಪದವಿಭಾಗ-ಅರ್ಥ: ಬೆರಳ ಮೊದಲಲಿ ಭೂಸುರರು, ನಡು ವೆರಳೆಡೆಗಳಲಿ ಪಾರ್ಥಿವರು (ರಾಜರ, ಕ್ಷತ್ರಿಯರು), ತುದಿ ವೆರಳೊಳಗೆ ವೈಶ್ಯರುಗಳು+ ಈ ಕ್ರಮದಲಿ ಪವಿತ್ರವು+ ಇದು(ಈ) ಧರಿಸಬೇಹುದು, ದಕ್ಷಿಣ ಕರಾಂಬುರುಹದಲಿ (ಬಲಹಸ್ತದಲ್ಲಿ) ದಿನದಿನದ ಸಂಧ್ಯಾಂತರದ ಸಮಯದಲಿ+ ಅರಸ ಚಿತ್ತೈಸು+ ಎಂದನು+ ಆ ಮುನಿಪ.
ಅರ್ಥ:ಆ ಮುನಿಯು,'ರಾಜನೇ ಕೇಳು, ಮೊದಲ ಬೆರಳಲ್ಲಿ ವಿಪ್ರರು (ಈಗ ಅನಾಮಿಕದಲ್ಲಿ ಧರಿಸುವರು.), ನಡು ಬೆರಳಗಳಲ್ಲಿ ಕ್ಷತ್ರಿಯರು, ತುದಿ ಬೆರಳೊಳಗೆ ವೈಶ್ಯರುಗಳು- ಈ ಕ್ರಮದಲ್ಲಿ ಈ ದರ್ಭೆಯ ಪವಿತ್ರವನ್ನು ಧರಿಸಬೇಕು. ಬಲಹಸ್ತದಲ್ಲಿ ದಿನದಿನದ ಸಂಧ್ಯಾಕ್ರಿಯೆಯ ಸಮಯಗಳಲ್ಲಿ ಧರಿಸಬೇಕು,' ಎಂದನು.
ಮೇರೆದಪ್ಪಿದ ಜಪ ಸುಕಲ್ಪಿತ
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು |
ಪಾರವೆಯ್ದದ ಶೌಚ ವಿನಯ ವಿ
ಹಾರವಿಲ್ಲದ ಪೂಜೆಗಳುಪ
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ||೧೦೯||
ಪದವಿಭಾಗ-ಅರ್ಥ: ಮೇರೆ (ಎಲ್ಲೆ, ಗಡಿ,ಆಶ್ರಯ, ನೆಲೆ)+ ದ+ ತಪ್ಪಿದ ಜಪ, ಸುಕಲ್ಪಿತ ಧಾರೆಯು (ಉತ್ತಮ ಉದ್ದೇಶ ಹೇಳಿ ನೀರುಬಿಡುವುದು)+ ಉಡುಗಿದ(ಇಲ್ಲದ) ದಾನ, ದರ್ಭಾಕಾರ ವಿರಹಿತವಾದ(ಇಲ್ಲದ) ಸಂಧ್ಯಾವಂದನಾದಿಗಳು ಪಾರವ(ತುದಿ)+ ಎಯ್ದದ ಶೌಚ, ವಿನಯ ವಿಹಾರವಿಲ್ಲದ ಪೂಜೆಗಳು+ ಉಪಕಾರವು+ ಅಹುದೇ ರಾಯ ಚಿತ್ತೈಸು+ ಎಂದನು+ ಆ ಮುನಿಪ.
  • ಟಿಪ್ಪಣಿ:(ಈಗ ವಿಶೇಷ ಪೂಜಾ, ಧಾರ್ಮಿಕ ಕಾರ್ಯಗಳಿಗೆ ಮಾತ್ರಾ ದರ್ಭೆ ಧರಿಸುವರು- ಉಂತೆ ಇಲ್ಲ.)
ಅರ್ಥ:ಮುನಿಯು, 'ರಾಜನೇ ಕೇಳು, ನೆಲೆ ತಪ್ಪಿದ ಜಪ, ಉತ್ತಮ ಉದ್ದೇಶದಿಂದ ಧಾರೆಯುನೀರುಬಿಡದೆ ಕೊಟ್ಟ ದಾನ; ದರ್ಭಾಕಾರ -ದರ್ಭೆಧರಿಸದ ಸಂಧ್ಯಾವಂದನಾದಿಗಳು, ತುದಿ ಮುಟ್ಟದ- ಪಾದಗಳು ಪೂರ್ನವಾಗಿ ತೊಳೆಯದ ಶೌಚ- ಶುಚಿತ್ವ, ವಿನಯ ವಿಹಾರವಿಲ್ಲದ- ಯಾತ್ರೆ ಇಲ್ಲದ ಪೂಜೆಗಳು, ಇವುಗಳಿಂದ ಪ್ರಜನ ಆಗುವುದೇ? ಇಲ್ಲ,'ಎಂದನು.

ಸಹಜ ನೀತಿ[ಸಂಪಾದಿಸಿ]

ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ |
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ||೧೧೦||
ಪದವಿಭಾಗ-ಅರ್ಥ: ದೇವತಾ+ ಆಸ್ಥಾನದಲಿ, ವಿಪ್ರ ಸಭಾವಳಯದಲಿ (ವಿಪ್ರರ ಸಭೆಯಲ್ಲಿ), ರಾಜಪುರುಷರ ಸೇವೆಯಲಿ. ಗುರುಸದನದಲಿ(ಸದನ- ಮನೆ), ನದಿಯಲಿ, ತಟಾಕದಲಿ (ಕೆರೆ, ಜಲಾಶಯ), ಗೋವುಗಳ ನೆರವಿಯಲಿ, ವರ ವೃಂದಾವನದೊಳು+ ಉಪಹತಿಯ(ಆಘಾತ ಹಿಂಸೆ) ಮಾಡುವುದು+ ಆವ ಗುಣ ಗರುವರಿಗೆ(ಗೌರವವುಳ್ಳವರಿಗೆ, ತಿಳಿದವರಿಗೆ) ಚಿತ್ತೈಸು+ ಎಂದನು+ ಆ ಮುನಿಪ
ಅರ್ಥ:ಮುನಿಯು,'ರಾಜನೇ ಕೇಳು, ದೇವತಾ ಸನ್ನಿಧಿಯಲ್ಲಿ, ವಿಪ್ರರ ಸಭೆಯ ವಲಯದಲ್ಲಿ, ರಾಜಪುರುಷರ ಸೇವೆಯಲ್ಲಿ. ಗುರುಸದನದಲ್ಲಿ, ನದಿಯಲ್ಲಿ, ತಟಾಕದಲ್ಲಿ, ಗೋವುಗಳ ಮಂದೆಯಲ್ಲಿ, ವರ ವೃಂದಾವನದಲ್ಲಿ, ಆಘಾತ ಹಿಂಸೆ ಮಾಡುವುದು ಗೌರವವುಳ್ಳವರಿಗೆ ಯಾವ ಗುಣ? ಉತ್ತಮ ಗುಣವಲ್ಲ,'ಎಂದನು.
ದೆಸೆಗಳೇ ವಾಸಸ್ಸು ರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ದೂಸರದ ಗಂಗಾಧರನವೋಲು |
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ||೧೧೧||
ಪದವಿಭಾಗ-ಅರ್ಥ: ದೆಸೆಗಳೇ ವಾಸಸ್ಸು(ಉಡುಪು) ರಾಜ್ಯ ಪ್ರಸರಣವು ನಿರ್ಲಜ್ಜೆ (ನಾಚಿಕೆಯಿಲ್ಲದಿರುವುದು), ಜಟೆ ರಂಜಿಸುವ ಧೂಳೀ ದೂಸರದ(ಕಾರಣ) ಗಂಗಾಧರನವೋಲು ಎಸೆವ (ಶೋಭಿಸುವ) ಸುತರುಗಳಿಲ್ಲದಿರೆ(ಗಂಡುಮಕ್ಕಳಿಲ್ಲದಿದ್ದರೆ) ಶೋಭಿಸುವುದೇ ಸಂಸಾರವೆಂಬುದು, ವಸುಧೆಯೊಳು ಪುಣ್ಯಾಧಿಕರುಗಳಿಗೆ+ ಅಲ್ಲದೆ+ ಇಲ್ಲ+ ಎಂದ
ಅರ್ಥ:ಮುನಿಯು,'ದಿಕ್ಕುಗಳನ್ನೇ ಉಡುಪು ಆಗಿ ಉಳ್ಳ ರಾಜ್ಯ ಪ್ರಸರಣವು; ನಾಚಿಕೆಯಿಲ್ಲದಿರುವುದು, ಧೂಳು ತುಂಬಿದ ಜಟೆಯು ಹೀಗೆ ರಂಜಿಸುವ ಕಾರಣ ಗಂಗಾಧರ ಶಿವನಂತೆ ಶೋಭಿಸುವ ಗಂಡುಮಕ್ಕಳಿಲ್ಲದಿದ್ದರೆ ಸಂಸಾರವೆಂಬುದು ಈ ಭೂಮಿಯಲ್ಲಿ ಪುಣ್ಯವಂತರಿಗೆ ಶೋಭಿಸುವುದೇ? ಇಲ್ಲ,'ಎಂದ.

ದೈವಕೃಪೆಯ ಪ್ರಭಾವ[ಸಂಪಾದಿಸಿ]

ಗುರುಸುತನವೋಲಾಯು ನೀಲಾಂ
ಬರನವೊಲುಬಲ ದಶರಥನವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು |
ಅರಿವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲು ಗತಿ ಸಂ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ||೧೧೨||
ಪದವಿಭಾಗ-ಅರ್ಥ: ಗುರುಸುತನವೋಲು (ಅಶ್ವತ್ಥಾಮ)+ ಆಯು, ನೀಲಾಂಬರನವೊಲು- (ಬಲರಾಮ) ಬಲ, ದಶರಥನವೋಲ್ ಸಿರಿ, ನದೀಜನವೋಲು(ಭೀಷ್ಮ) ಶೌರ್ಯವು, ರಘುಪತಿಯವೋಲು(ರಾಮ) ಅರಿವಿನಾಶನ (ಶತ್ರು ಸಂಹಾರಕ), ನಹುಷನವೊಲು+ ಐಶ್ವರಿಯ- ಐಶ್ವರ್ಯ- ಇಂದ್ರಪದವಿಯಲ್ಲಿದ್ದ, ಮಾರುತಿಯವೊಲು(ಹನುಮಂತ) ಗತಿ (ವೇಗ), ಸಂವರಿಸುವುದು(ಬಂದು ಸೇರುವುದು; ಸಂವರಣ + ಇಸು- ಸಂಗ್ರಹಿಸು), ಶಿವನು+ ಒಲಿದವರುಗಳಿಗೆ+ ಅಲ್ಲದೆ+ ಇಲ್ಲ+ ಎಂದ
ಅರ್ಥ:ಮುನಿಯು ರಾಜನಿಗೆ,'ಗುರುಸುತನಂತೆ ದೀರ್ಘಾಯುಷ್ಯ, ಬಲರಾಮನಮತೆ ಬಲ, ದಶರಥನಹಾಗೆ ಸಿರಿ ಸಂಪತ್ತು, ಭೀಷ್ಮಂತ ಶೌರ್ಯವು, ರಘುಪತಿ- ರಾಮನಂತೆ ಶತ್ರು ಸಂಹಾರಕಶಕ್ತಿ, ಇಂದ್ರಪದವಿಯನ್ನು ಅನುಭಿಸಿದ ನಹುಷನಂತೆ ಐಶ್ವರ್ಯ-, ಹನುಮಂತ ಚಲನ ಗತಿ- ವೇಗ,ಇವು ಶಿವನು (ದೇವರು) ಒಲಿದವರುಗಳಿಗೆ ಬಂದು ಸೇರುವುದು; ಅದಲ್ಲದೆ ಆಗದು,' ಎಂದ.ಭೂಮಿ
ಕ್ಷಿತಿಯವೊಲು ಪಾವನತೆ ಕುರು ಭೂ
ಪತಿಯವೋಲಭಿಮಾನ ಲಕ್ಷ್ಮೀ
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ |
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ||೧೧೩||
ಪದವಿಭಾಗ-ಅರ್ಥ: ;ಕ್ಷಿತಿಯವೊಲು(ಭೂಮಿಯಂತೆ) ಪಾವನತೆ (ಇಲ್ಲಿ ಗಂಗೆಯಂತೆ ಎಂದು ಇದ್ದರೆ ಸರಿಯಾಗುತ್ತಿತ್ತು; ಪಾವನತೆಗೆ ಗಂಗೆ ಪ್ರಸಿದ್ಧ), ಕುರು ಭೂಪತಿಯವೋಲು(ಕೌರವ- ದುರ್ಯೋಧನ)+ ಅಭಿಮಾನ, ಲಕ್ಷ್ಮೀ ಪತಿಯವೊಲು(ಕೃಷ್ಣ) ಸತ್ಕೀರ್ತಿ ವಿದುರನವೋಲು ವಿಜ್ಞಾನ, ಕ್ಷಿತಿಯವೊಲು(ಭೂಮಿಯಂತೆ) ಸೈರಣೆ( ತಾಳ್ಮೆ, ಸಹನೆ), ಸುಹೃತ್ (ದಯಾಮಯಿ; ಗೆಳೆಯ)+ ಸಂತತಿಯವೊಲು ಪರಿಣಾಮ, ಕುಂತೀಸುತರವೊಲು(ಪಾಂಡವರಂತೆ) ಸತ್ಯಾಧಿಕರುಅಧಿಕವಾದ ಸತ್ಯವಂತರು ಲೋಕದೊಳಗೆ+ ಇಲ್ಲ+ ಎಂದ.
ಅರ್ಥ:ಮುನಿಯು,'ಭೂಮಿಯಂತೆ ಪಾವನತೆಯು, ಕುರು ಭೂಪತಿಯಾದ ದುರ್ಯೋಧನನಂತೆ ಅಭಿಮಾನ, ಲಕ್ಷ್ಮೀಪತಿಯಾದ ಕೃಷ್ಣನಂತೆ ಸತ್ಕೀರ್ತಿ; ವಿದುರನಹಾದೆ ವಿಜ್ಞಾನದ ಅರಿವು, ಭೂಮಿಯಂತೆ ತಾಳ್ಮೆ, ಸಹನೆ, ಸುಹೃತ್- ದಯಾಮಯಿ ಗೆಳೆಯನ ಸಂತತಿಯಹಾಗೆ ಪರಿಣಾಮ, ಕುಂತೀಸುತರಾದ ಪಾಂಡವರಂತೆ ಸತ್ಯಾಧಿಕರು- ಅಧಿಕವಾದ ಸತ್ಯವಂತರು ಲೋಕದೊಳಗೆಮತ್ಯಾರೂ ಇಲ್ಲ,' ಎಂದ.
ಗಗನದಗಲದಿನುಗುವವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ |
ಒಗುಮಿಗೆಯ ದೈವದ ಪದಾಂಬುಜ
ಯುಗಳದರ್ಚನೆ ಪೂಜನೆಗಳಿವು
ಜಗದುದರನನು ಮುಟ್ಟವೇ ಭೂಪಾಲ ಕೇಳೆಂದ ||೧೧೪||
ಪದವಿಭಾಗ-ಅರ್ಥ: ಗಗನದ+ ಅಗಲದಿನುಗುವ (ಇನುಗುವ- ಜಿನುಗುವ?)+ ವೃಷ್ಟಿಯೊಳು(ಮಳೆ)+ ಒಗೆದ(ಕಾಣುವ) ಕೀಲಾಲವು(ಅಮೃತ, ಜೇನುತುಪ್ಪ; ನೀರು, ಸಮುದ್ರ; ನೆತ್ತರು,), ಸಮುದ್ರವ ಹೊಗುವ ನದಿ, ನಾನಾ ಪ್ರಕಾರದ ರೂಪುಗಳಲಿ+ ಎಸೆವ(ಕಾಣುವ) ಒಗುಮಿಗೆಯ (ಅಧಿಕ, ಹೆಚ್ಚಳ; ಸಂಭ್ರಮ) ದೈವದ ಪದಾಂಬುಜಯುಗಳದ (ಎರಡು ಪಾದಗಳ)+ ಅರ್ಚನೆ ಪೂಜನೆಗಳು+ ಇವು ಜಗದ+ಉದರನನು(ಜಗತ್ತನ್ನು ಹೊಟ್ಟೆಯಲ್ಲಿ ಉಳ್ಳವನು) ಮುಟ್ಟವೇ, ಭೂಪಾಲ ಕೇಳು+ ಎಂದ
ಅರ್ಥ:ಮುನಿಯು,'ರಾಜನೇ,ಅಗಲವಾದ ಆಕಾಶದಿಂದಬೀಳುವ ಮಳೆಯಲ್ಲಿ ಕಾಣುವ ನೀರು ಹರಿದು ನದಿಯಾಗಿ, ಸಮುದ್ರವನ್ನು ಹೊಗುವ ನದಿ, ನಾನಾ ಪ್ರಕಾರದ ರೂಪುಗಳಲ್ಲಿ ಕಾಣುವ ಸೌಂದರ್ಯದ ಸಂಭ್ರಮಗಳು ದೈವದ ಎರಡು ಪಾದಗಳ ಅರ್ಚನೆ ಪೂಜನೆಗಳು. ಇವು ಜಗತ್ತನ್ನು ಹೊಟ್ಟೆಯಲ್ಲಿ ಉಳ್ಳ ದೇವನನ್ನು ಮುಟ್ಟವೇ- ತೋರಿಸದೇ? ಇವು ದೇವನ ಮಹಿಮೆಗಳು, ಕೇಳು,'ಎಂದ.
ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು |
ಸಲಹುತಿಹನೊಮ್ಮೆಯು ಜಗತ್ರಯ
ದೊಳಗು ಹೊರಗೆನ್ನದನುದಿನ
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ||೧೧೫||
ಪದವಿಭಾಗ-ಅರ್ಥ: ಜಲದೊಳಗೆ ವಾರಾಹ, ವಿಷ್ಣುಸ್ಥಳದೊಳಗೆ (ವಿಷ್ಣುಸ್ಥಳದೊಳಗೆ- ಆಕಾಶದಲ್ಲಿ) ವಾಮನನು, ವನ ಸಂಕುಳದೊಳಗೆ (ಕಾಡುಗಳಲ್ಲಿ) ನರಸಿಂಹನಾಗಿಯೆ, ಭಕ್ತನಿಕರವನು(ಸಮೂಹ) ಸಲಹುತಿಹನು+ ಒಮ್ಮೆಯು ಜಗತ್ರಯದ+ ಒಳಗು- ಹೊರಗೆನ್ನದೆ ( ಎಲ್ಲೆಲ್ಲೂ)+ ಅನುದಿನ ಜಲರುಹಾಕ್ಷನು(ಜಲರುಹ+ ಅಕ್ಷನು- ಕಮಲದಂತೆ ಕಣ್ಣುಳ್ಳವನು) ಕೃಷ್ಣ ಕೇಶವನಲ್ಲದೆ+ ಇಲ್ಲ+ ಎಂದ
ಅರ್ಥ:ಮುನಿಯು ಹೇಳಿದ,'ರಾಜನೇ, ನೀರಿನಲ್ಲಿ ವರಾಹನಾಗಿ, ಆಕಾಶದಲ್ಲಿ ವಾಮನನಾಗಿ, ಅರಣ್ಯಗಳಲ್ಲಿ ನರಸಿಂಹನಾಗಿ ತನ್ನ ಭಕ್ತರಸಮೂಹವನ್ನು ಮೂರು ಲೋಕಗಳಲ್ಲಿ ಎಲ್ಲೆಲ್ಲೂ ಅನುದಿನವೂ ರಕ್ಷಿಸುವವನು ಶ್ರೀಕೃಷ್ಣನಲ್ಲದೆ ಇನ್ನಾರು ಇಲ್ಲ(ಅಲ್ಲ),' ಎಂದ.
ಕತ್ತಲೆಯ ಕಾಲಾಟ ಸೂರ್ಯನ
ನೊತ್ತುವುದೆ ದುಷ್ಕರ್ಮ ಕೋಟಿಗ
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ |
ತತ್ತುದೇ ವಿಷ ಕೃಷ್ಣರಾಯನ
ಭಕ್ತರುಗಳನುಭವಿಸುವುದು ತಾ
ಪಥ್ಯವೇ ಜಡಜೀವರಿಗೆ ಹೇಳೆಂದನಾ ಮುನಿಪ ||೧೧೬||
ಪದವಿಭಾಗ-ಅರ್ಥ: ಕತ್ತಲೆಯ ಕಾಲಾಟ(ನೆಡೆ) ಸೂರ್ಯನನು+ ಒತ್ತುವುದೆ? ದುಷ್ಕರ್ಮ ಕೋಟಿಗಳು(ಅನೇಕ)+ ಎತ್ತ ಮುಟ್ಟುವುವೈ ಮಹಾಪುರುಷರನು, ಖಗಪತಿಯ (ಗರಡನನ್ನು) ತತ್ತುದೇ(ಅಪ್ಪು, ಆಲಂಗಿಸು, ಗಂಡಾಂತರ, ಅಪಾಯ) ವಿಷ, ಕೃಷ್ಣರಾಯನ ಭಕ್ತರುಗಳು+ ಅನುಭವಿಸುವುದು ತಾ ಪಥ್ಯವೇ(ಯೋಗ್ಯವಾದುದು, ಉಚಿತವಾದುದು) ಜಡಜೀವರಿಗೆ ಹೇಳೆಂದನು+ ಆ ಮುನಿಪ.
ಅರ್ಥ:ಆ ಮುನಿಪನು,ರಾಜನಿಗೆ,'ಕತ್ತಲೆಯ ಬಂದು ಸೂರ್ಯನನ್ನು ಆವರಿಸಿ ಒತ್ತುವುದು ಸಾಧ್ಯವೇ? ಅನೇಕ ದುಷ್ಕರ್ಮಗಳು ಮಹಾಪುರುಷರನ್ನು ಎಲ್ಲಿ ಮುಟ್ಟುವುದಯ್ಯಾ, ಮುಟ್ಟಲು ಸಾಧ್ಯವಿಲ್ಲ. , ಗರಡನನ್ನು ಸರ್ಪದ ವಿಷವು ಅಪಾಯಕ್ಕೆ ನೂಕುವುದೇ? ಇಲ್ಲ.) ಕೃಷ್ಣರಾಯನ ಭಕ್ತರುಗಳು ಕಷ್ಟವನ್ನು ಅನುಭವಿಸುವುದು ತಾನು ಉಚಿತವಾದುದೇ? ಉಚಿತವಲ್ಲ. ಜಡಜೀವರು ಅದನ್ನು ಸರಿಯೆಂದು ಹೇಳುವರೇ; ಸಹಿಸುವರೇ? ಹೇಳು,'ಎಂದನು.
  • ಟಿಪ್ಪಣಿ: ಪಾಂಡವರು ಕೃಷ್ಣನ ಭಕ್ತರು- ಅವರನ್ನು ಕಾಡಿಗೆ ಅಟ್ಟಿ ಕಷ್ಟಕ್ಕೆ ನುಕಿದ್ದು ಸರಿಯೇ? ಎಂದು ಮುನಿಯ ಮಾತು.
ಅರುಹಬಾರದು ಮುಂದೆ ಬಹ ದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ||೧೧೭||
ಪದವಿಭಾಗ-ಅರ್ಥ: ಅರುಹಬಾರದು (ಹೇಳಬಾರದು) ಮುಂದೆ ಬಹ(ಬರುವ) ದಿನ ಬಿರಿಸು(ಬಿರುಸು- ರಭಸ,) ನೀನು+ ಎಚ್ಚೆತ್ತು ನಡೆ, ಮೈ ಮರೆಯದಿರು, ನಿನ್ನ+ ಆತ್ಮಜರ (ಆತ್ಮಜ- ಮಗ) ವೈರ+ ಅನುಬಂಧದಲಿ ಬರಿದಹುದು ಬ್ರಹ್ಮಾಂಡ (ಲೋಕ, ಬಹಳ ದೊಡ್ಡ ಪರಿನಾಮ) ನೀನು+ ಅದನು+ ಅರಿಯೆ (ತಿಳಿಯೆ), ಮೇಲಣ ತಾಗು ಬಾಗಿನ(ಅನಾಹುತ- 258. ತಾಗುಬಾಗು, ಹಿಗ್ಗುಕುಗ್ಗು, ಉದ್ಯೋಗ ಪರ್ವ,3,49) ಹೊರಿಗೆ (ಹೊರಿಗೆ- ಜವಾಬ್ದಾರಿ., ಉದ್ಯೋಗ ಪರ್ವ,4,117) ದೈವಾಧೀನವಾಗಿಹುದು+ ಎಂದನು+ ಆ ಮುನಿಪ
ಅರ್ಥ:ಆ ಮುನಿಯು ರಾಜನಿಗೆ,'ಮುಂದೆ ಆಗುವುದನ್ನು ಅಮೊದಲೇ ಹೇಳಬಾರದು. ಮುಂದೆ ಬರುವ ದಿನಗಳು ಬಹಳ ಕಷ್ಟಕರ ರಭಸದಿಂದ ಕೂಡಿದ್ದು; ನೀನು ಎಚ್ಚೆತ್ತುಕೊಂಡು ನಡೆಯಬೇಕು, ಮೈ ಮರೆಯಬೇಡ. ನಿನ್ನ ಮಕ್ಕಳ ವೈರದ ಅನುಬಂಧದಲ್ಲಿ ಬಹಳ ದೊಡ್ಡ ಪರಿಣಾಮವಾಗುವುದು; ಭೂಮಿಯು ಬರಿದಾಗುವುದು. ನೀನು ಅದನು ತಿಳಿಯೆ; ಮೇಲಣ ತಾಗು ಬಾಗಿನ ಹಿಗ್ಗುಕುಗ್ಗುಗಳು ದೈವಾಧೀನವಾಗಿರುವುದು,' ಎಂದನು.

ಕೃಷ್ಣನ ಮಹಿಮೆ[ಸಂಪಾದಿಸಿ]

ತೆರಹುಗುಡದೆ ಧರಿತ್ರಿಯೊಳಗೀ
ಡಿರಿದ ದೈತ್ಯ ಸಹಸ್ರ ಕೋಟಿಯ
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು |
ಹರಿದು ಹಾಯಿಕಿ ಭಕ್ತರನು ನೆರೆ
ಮೆರೆಯಲೋಸುಗ ಜನಿಸಿದನು ಹರಿ
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ||೧೧೮||
ಪದವಿಭಾಗ-ಅರ್ಥ: ತೆರಹುಗುಡದೆ (ಬಿಡುವುಕೊಡದೆ, ಎಡೆ ಇಲ್ಲದಂತೆ) ಧರಿತ್ರಿಯೊಳಗೆ(ಭೂಮಿ)+ ಈಡಿರಿದ (ತುಂಬಿದ) ದೈತ್ಯ ಸಹಸ್ರ ಕೋಟಿಯನು+ ಇರಿದು(ಚುಚ್ಚಿ, ಕಡಿದು) ಭೂಭಾರವನು+ ಇಳುಹಿ ನಿರ್ಜರರ ( ದೇವತೆಗಳ) ದುಗುಡವನು (ಚಿಂತೆಯನ್ನು) ಹರಿದುಹಾಯಿಕಿ (ಇಲ್ಲದಂತೆ ಮಾಡಿ) ಭಕ್ತರನು ನೆರೆ- ಬಹಳ ಮೆರೆಯಲೋಸುಗ (ಶೋಭಿಸುಸುವಂತೆ ಮಾಡಲು) ಜನಿಸಿದನು ಹರಿಯು+ ಅರಿಯಲಾ ಶ್ರೀಕೃಷ್ಣರಾಯನು ಮನುಜನು+ ಅಲ್ಲ+ ಎಂದ.
ಅರ್ಥ:ಮುನಿಯು ರಾಜನಿಗೆ,'ಭೂಮಿಯಲ್ಲಿ ಎಡೆಇಲ್ಲದಂತೆ ತುಂಬಿರುವ ದೈತ್ಯ- ರಾಕ್ಷಸ ಕೋಟಿಯನ್ನು ಕಡಿದು ನಾಶಮಾಡಿ ಭೂಭಾರವನ್ನು ಇಳಿಸಿ ದೇವತೆಗಳ ಚಿಂತೆಯನ್ನು ಇಲ್ಲದಂತೆ ಮಾಡಿ ಭಕ್ತರನ್ನು ಚೆನ್ನಾಗಿ ಶೋಭಿಸುಸುವಂತೆ ಮಾಡಲು ಹರಿಯು ಜನಿಸಿರುವನು. ಅವನೇ ಶ್ರೀಕೃಷ್ಣರಾಯನು; ಅದನ್ನು ನೀನು ಅರಿಯಲಾ! ಅದನ್ನು ತಿಳಿದುಕೋ; ಕೃಷ್ನನು ಸಾಮನ್ಯ ಮನುಷ್ಯನಲ್ಲ,' ಎಂದ.
ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ |
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ||೧೧೯||
ಪದವಿಭಾಗ-ಅರ್ಥ: ಆತನು+ ಆ ಪಾಂಡವರ ಹರಿಬವನು (ಕಾರ್ಯ, ಕರ್ತವ್ಯ, ಹೊಣೆಗಾರಿಕೆ)+ ಆತು (ಪಡೆದು, ಹೊತ್ತುಕೊಂಡು) ಪಾರ್ಥನ ರಥಕೆ ತಾನೇ ಸೂತನಾದನು; ನಿಮಗೆ ಜಯವೆಲ್ಲಿಯದು ಭೂಪತಿಯೆ ಭೂತಳವನು+ ಒಪ್ಪಿಸುವುದು+ ಅಸುರಾರಾತಿಯನು(ರಾಕ್ಷಸರ ಶತ್ರು) ಮರೆಹೊಕ್ಕು ಬದುಕುವುದು+ ಈ ತತುಕ್ಷಣವಲ್ಲದಿರ್ದೊಡೆ (ತತುಕ್ಷಣ ಮಾಡದಿದ್ದರೆ) ಕೆಡುವಿರಿ+ ಅಕಟ+ ಎಂದ
ಅರ್ಥ:ಮುನಿಯು ಧೃತರಾಷ್ಟ್ರನನ್ನು ಕುರಿತು,"ಆತನು- ಆ ಶ್ರೀಕೃಷ್ಣನು ಆ ಪಾಂಡವರ ಕ್ಷೇಮದ ಹೊಣೆಗಾರಿಕೆಯನ್ನು ಹೊತ್ತುಕೊಂಡು, ಪಾರ್ಥನ ರಥಕ್ಕೆ ತಾನೇ (ಖಾಂಡವದಹನದಲ್ಲಿ ಅರ್ಜುನನ ಸಾರಥಿಯಾದನು- ಕುರುಕ್ಷೆತ್ರಯುದ್ದಕ್ಕೆ ಇನ್ನೂ ಹದಿಮೂರು ವರ್ಷವಿದೆ.) ಸೂತನಾದನು; ನಿಮಗೆ ಜಯವೆಲ್ಲಿಯದು? ನಿಮಗೆ ಜಯ ಸಿಗದು. ಭೂಪತಿಯೆ- ರಾಜನೇ ನೀನು ಭೂಮಿಯನ್ನು ಪಾಂಡವರಿಗೆ ಒಪ್ಪಿಸುವುದು ಮತ್ತು ರಾಕ್ಷಸರ ಶತ್ರುವಾದ ಕೃಷ್ಣನನ್ನು ಮರೆಹೊಕ್ಕು ಬದುಕುವುದು ನಿನಗೆ ಕ್ಷೇಮ. ಈ ಕಾರ್ಯವನ್ನು ಈ ಕೂಡಲೆ ಮಾಡದಿದ್ದರೆ ಕೆಡುವಿರಿ, ಅಕಟ!' ಎಂದ.
ಜಲಧಿಯೊಳು ದುಗ್ಧಾಭ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ |
ಜಲರುಹಾಕ್ಷನೆ ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ||೧೨೦||
ಪದವಿಭಾಗ-ಅರ್ಥ: ಜಲಧಿಯೊಳು(ಸಮುದ್ರಗಳಲ್ಲಿ) ದುಗ್ಧಾಭ್ಧಿ(ಕ್ಷೀರಸಮುದ್ರ), ತೀರ್ಥಾವಳಿಗಳೊಳು(ತೀರ್ಥಗಳಲ್ಲಿ) ಸುರನದಿ(ಗಂಗಾನದಿ) ಮುನೀಶ್ವರ ರೊಳಗೆ ವೇದವ್ಯಾಸನು+ ಆ ವ್ರತಿಗಳೊಳು(ವ್ರತನಿಷ್ಠರಲ್ಲಿ) ಹನುಮಂತ, ಜಲರುಹಾಕ್ಷನೆ(ಮಹಾವಿಷ್ಣು) ದೈವದೊಳು, ಕೇಳು+ ಉಳಿದ ಧರಣೀಪಾಲರೊಳಗೆ (ರಾಜರಲ್ಲಿ)+ ಅಗ್ಗಳೆಯನೈ ()ಶ್ರೇಷ್ಠನಯ್ಯಾ) ಧರ್ಮಜನು, ಚಿತ್ತೈಸು- ಕೇಳು+ ಎಂದನು+ ಆ ಮುನಿಪ
ಅರ್ಥ:ಮುನಿಯು ರಾಜನನ್ನು ಕುರಿತು,'ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥಗಳಲ್ಲಿ ಗಂಗಾನದಿ ಮುನೀಶ್ವರರಲ್ಲಿ ವೇದವ್ಯಾಸನು, ಆ ವ್ರತನಿಷ್ಠರಲ್ಲಿ ಹನುಮಂತ, ಮಹಾವಿಷ್ಣುವು ದೈವಗಳಲ್ಲಿ, ಕೇಳು ಈಗ ಜೀವಿಸಿ ಉಳಿದ ಧರಣೀಪಾಲರಲ್ಲಿ ಧರ್ಮಜನು ಶ್ರೇಷ್ಠನಯ್ಯಾ! ಕೇಳು,' ಎಂದನು.

ಸನತ್ಸುಜಾತನು- ಧೃತರಾಷ್ಟ್ರನನ್ನು ಸಂತೈಸಿ ತನ್ನಾಶ್ರಮಕೆ ತಿರುಗಿದ[ಸಂಪಾದಿಸಿ]

ಈ ಪರಿಯ ಬೋಧೆಯಲಿ ನೃಪನನು
ತಾಪವನು ಮಾಣಿಸಿ ಕುಬುದ್ಧಿ
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ |
ಕಾಪಥಂಗಳ ನಿಲಿಸಿ ತತ್ವ ಕ
ಳಾಪ ವಿಮಲ ಜ್ಞಾನದುದಯದ
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ||೧೨೧||
ಪದವಿಭಾಗ-ಅರ್ಥ: ಈ ಪರಿಯ ಬೋಧೆಯಲಿ ನೃಪನ+ ಅನುತಾಪವನು (ಸಂಕಟವನ್ನು) ಮಾಣಿಸಿ(ಇಲ್ಲದಂತೆಮಾಡಿ- ಕಡಿಮೆಮಾಡಿ) ಕುಬುದ್ಧಿ ವ್ಯಾಪಕನು (ಕೆಟ್ಟಬುದ್ಧಿಯವನು) ಧೃತರಾಷ್ಟ್ರನೆಂಬ+ ಅಪಕೀರ್ತಿಯನು ಬಿಡಿಸಿ(ಹೋಗಲಾಡಿಸಿ) ಕಾಪಥಂಗಳ(ಕೆಟ್ಟದಾರಿಗಳನ್ನು) ನಿಲಿಸಿ, ತತ್ವ ಕಳಾಪ(ಕಲಾಪ) ವಿಮಲ ಜ್ಞಾನದ+ ಉದಯದ ರೂಪು ತಾನು+ ಎಂಬಂತೆ ಸೂರ್ಯೋದಯವ ಕಾಣಿಸಿದ.
ಅರ್ಥ:ಮುಇಯು ಧೃತರಾಷ್ಟ್ರನಿಗೆ ಈ ಪರಿಯ ನೀತಿಧರ್ಮಗಳ ಬೋಧೆಯಿಂದ ನೃಪನ ಸಂಕಟವನ್ನು ಕಡಿಮೆಮಾಡಿ, ಧೃತರಾಷ್ಟ್ರನೆಂಬ ರಾಜನು ಕೆಟ್ಟಬುದ್ಧಿಯವನು ಎಂಬ ಅಪಕೀರ್ತಿಯನ್ನು ಹೋಗಲಾಡಿಸಿ, ಕೆಟ್ಟದಾರಿಗಳನ್ನು ನಿಲ್ಲಿಸಿ, ತತ್ವಕಲಾಪ ವಿಮಲ ಜ್ಞಾನದ ಉದಯದ ರೂಪು ತಾನು ಎಂಬಂತೆ ಸೂರ್ಯೋದಯವನ್ನು ಮುನಿ ಕಾಣಿಸಿದನು.
ಧರಣಿಪನ ಸಂತೈಸಿದನು ಮುನಿ
ವರನು ತನ್ನಾಶ್ರಮಕೆ ತಿರುಗಿದ
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು |
ಹರಿಯದಮಳಾನಂದ ರಸದಲಿ
ಹೊರೆದು ಹೊಂಪುಳಿಯೋಗಿ ಲಕ್ಷ್ಮೀ
ಧರನ ನೆನೆದು ರಾಯ ಗದುಗಿನ ವೀರನರಯಣನ ||೧೨೨||
ಪದವಿಭಾಗ-ಅರ್ಥ: ಧರಣಿಪನ ಸಂತೈಸಿದನು, ಮುನಿವರನು ತನ್ನಾಶ್ರಮಕೆ ತಿರುಗಿದನು (ಹಿಂತಿರುಗಿ ಹೋದ ನಂತರ+ ಉರುತರ (ಬಹಳ) ಪ್ರೇಮದಲಿ ಧೃತರಾಷ್ಟ್ರ+ ಅವನೀಶ್ವರನು ಹರಿಯದ (ತುಂಡಾಗದ-ಸದಾಇರುವ)+ ಅಮಳಾನಂದ ರಸದಲಿ ಹೊರೆದು (ಪೊರೆ, ರಕ್ಷಿಸು, ಕಾಪಾಡು,) ಹೊಂಪುಳಿಯೋಗಿ(ರೋಮಾಂಚನ, ಪುಳಕ) ಲಕ್ಷ್ಮೀಧರನ ನೆನೆದು ರಾಯ ಗದುಗಿನ ವೀರನರಯಣನ
ಅರ್ಥ:ಹೀಗೆ ಸನತ್ಕುಮಾರ ಮುನಿಯು ರಾಜನನ್ನು ಸಂತೈಸಿದನು. ನಂತರ ಮುನಿವರನು ತನ್ನಾಶ್ರಮಕೆ ಹಿಂತಿರುಗಿ ಹೋದನು; ನಂತರ ಬಹಳ ಪ್ರೇಮದಲ್ಲಿ ಧೃತರಾಷ್ಟ್ರ ಅವನೀಶ್ವರನು ತುಂಡಾಗದ ಅಮಲ ಆನಂದರಸದಲ್ಲಿ ಹೊರೆದು- ಕಾಪಾಡಲ್ಪಟ್ಟು ರೋಮಾಂಚನಗೊಂಡು, ರಾಯ ಗದುಗಿನ ವೀರನರಯಣನಾದ ಲಕ್ಷ್ಮೀಧರನನ್ನು ನೆನೆದನು.
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು