ಟಿ.ಎಸ್ ವೆಂಕಣ್ಣಯ್ಯನವರಿಗೆ

ವಿಕಿಸೋರ್ಸ್ದಿಂದ
<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


  • ಅರ್ಪಣೆ: ಶ್ರೀ ರಾಮಾಯಣ ದರ್ಶನಂ: ಶ್ರೀ ವೆಂಕಣ್ಣಯ್ಯನವರಿಗೆ

<poem> ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯಗುರುವೆ. ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ, ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತಕೃತ್ಯನಂ ಧನ್ಯನಂ ಮಾಡಿ. ನೀಮುದಯರವಿಗೈತಂದು ಕೇಳಲೆಳಸಿದಿರಂದು. ಕಿರುಗವನಗಳನೋದಿ ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ ; ರಾಮಾಯಣಂ ಅದು ವಿರಾಮಾಯಣಂ ಕಣಾ !” ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ ; ೧೦ ದಿಟದ ಮನೆಗೈದಿದಿರಿ ! ಇದೊ ಬಂದಿರುವೆನಿಂದು ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ, ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ : ಸಂಘಕೆ ಮಹಾಧ್ಯಕ್ಷರಲ್ತೆ ನೀಂ ? ಕಿರಿಯನಾಂ ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ ! ೨೦ ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್ ಆಲಿಸಾ ಗುರುಕೃಪೆಯ ಶಿಷ್ಯಕೃತಿ ಸಂಕೀರ್ತಿಯಂ : “ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ, ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ ! ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ, ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ ! ೩೦ ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ ! ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ, ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ ;- ಶ್ರೀ ರಾಮನಾ ಲೋಕದಿಂದವತರಿಸಿ ಬಂದು ಈ ಲೋಕಸಂಭವೆಯನೆಮ್ಮ ಭೂಜಾತೆಯಂ ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ ೪೦ ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;- ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ ದೀಪ್ಯ ದೈವೀಪ್ರಜ್ಞೆಯಮೃತ ಗೋಪುರಕೇರ್ವವೋಲ್ ! ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್ ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್ !”


<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ