ದೂರದ ನಕ್ಷತ್ರ/ಮೊದಲ ಮಾತು

ವಿಕಿಸೋರ್ಸ್ ಇಂದ
Jump to navigation Jump to search

ಮೊದಲ ಮಾತು

'ದೂರದ ನಕ್ಷತ್ರ'ದ ಮೊದಲ ಮುದ್ರಣದ ಮುನ್ನುಡಿಯ ಕೆಲ ಅಂಶಗಳು ಹೀಗಿವೆ:

xxx

ಉಪಾಧ್ಯಾಯರ ಶಾಲಾ ಶಿಕ್ಷಕರು, ಅಧ್ಯಾಪಕರು, ಮಾಸ್ತರರು] ಪೀವನವನ್ನು ಚಿತ್ರಿಸುವ ಸಣ್ಣ ಕತೆ, ಕಾದಂಬರಿ, ಏಕಾಂಕ ನಾಟಕಗಳು ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿವೆ....

...ಇಷ್ಟಿದ್ದರೂ ವಿದ್ಯಾಕ್ಷೇತ್ರದಿಂದಲೇ ಈ ಕಾದಂಬರಿಗೆ ವಸ್ತುವನ್ನು ಆಯ್ದುಕೊಂಡಿದ್ದೇನೆ. ಇದಕ್ಕೆ ಕಾರಣ, ಆ ಕ್ಷೇತ್ರದ ವೈಶಾಲ್ಯ. ಈ ಕಾದಂಬರಿಯೊಂದಕ್ಕೇ ಅಲ್ಲ, ಇನ್ನಷ್ಟು ಕೃತಿಗಳಿಗೂ ಆ ಕ್ಷೇತ್ರ ವಸ್ತುವಾಗಿರುವುದರಲ್ಲಿ ಸಂದೇಹವಿಲ್ಲ.

ತಿ, ಹಲವು ಉಪಾಧ್ಯಾಯರೊಡನೆ ನನ್ನ ಒಡನಾಟದ ಹಾಗೂ ನ ಸೂಕ್ಷ್ಮ ನಿರೀಕ್ಷಣೆಯ ಫಲ, ನನ್ನ ಪಾತ್ರಗಳು ಜೀವಂತ ವ್ಯಂಗ್ಯ ಚಿತ್ರಗಳಲ್ಲ, ಅಥವಾ ಪ್ರತಿರೂಪಗಳೂ ಅಲ್ಲ, ವಾಸ್ತ .೦ಚದಿಂದ ಈ ಕಾಲ್ಪನಿಕ ಚಿತ್ರಗಳನ್ನು ಬರೆದಿದ್ದೇನೆ. ವಿದ್ಯಾ ಸಮಸ್ಯೆಯ ಹಿನ್ನೆಲೆಯಲ್ಲಿ ಮಾನವೀಯವಾದ ಕಥೆಯನ್ನು ಬರೆಯಲು ಯತ್ನಿಸಿದ್ದೇನೆ.

ಇತ್ತೀಚೆಗೆ, ದೂರದ ನಕ್ಷತ್ರ'ವನ್ನು ನಾನು ಬರೆಯುತ್ತಿದಾಗಲೆ; ಬೆಂಗಳೂರಲ್ಲಿ ಮೈಸೂರು ಸಂಸ್ಥಾನದ ಪಾಥಮಿಕ, ಮಾಧ್ಯಮಿಕ, ಹೈಸ್ಕೂಲು ಉಪಾಧಾಯರೆಲ್ಲರ ಸಮ್ಮೇಳನ ಜರುಗಿತು. ಹಿರಿಯ ವಿದ್ಯಾ? తె రేణబ్బరి ಆಹಾನದ ಮೇರೆಗೆ, ಸಂದರ್ಶಕನಾಗಿ ಹೋಗಿ ಉಪಾಧಾ ಯರ ಜತೆಯಲ್ಲಿ ಕುಳಿತು, ವಿಧವಿಧದ ಭಾಷಣಗಳಿಗೆ ನಾನು ಕಿವಿಕೊಟ್ಟೆ, ಅಲ್ಲಿ ನನ್ನ ಕಾದಂಬರಿಯ ಪಾತ್ರಗಳ ಸಾಮೂಹಿಕ ಸ್ವರೂಪವನ್ನು ಕಂಡೆ. ಈ ಅನುಭವ, ನನ್ನ ಪಾತ್ರಗಳು ಹೆಚ್ಚು ಸ್ಫುಟಗೊಳ್ಳಲು ಸಹಾಯಕವಾಯಿತು...

... ಈ ಕಾದಂಬರಿಯಲ್ಲಿ ಒಂದೆಡೆ ಹೀಗಿದೆ:

'ಜಯದೇವನೋ, ಭ್ರಮೆ ಇಟ್ಟು ಕೊಂಡೇ ಬಂದಿದ್ದ; ವಿದ್ಯಾ ಸರಸ್ವತಿಯ ಮಂದಿರಕ್ಕೇ ಬಂದಿದ್ದ, ಅನನ್ಯ ಭಕ್ತಿಯಿಂದ. ಆದರೆ, ಬಾಗಿಲು ಎಂದು ಭಾವಿಸಿ ಒಳನುಗ್ಗಿದಲ್ಲೇ, ಬಂಡೆಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು...'

ಅದು. ಉಚ್ಚ ಆದರ್ಶಗಳನ್ನಿರಿಸಿಕೊಂಡು ಉಪಾಧ್ಯಾಯರಾಗಲು ಹೊರಟ ವಿದ್ಯಾವಂತ ತರುಣನಿಗಾದ ಅನುಭವ.

ಆದರೆ ಆತ ನಿರಾಶಾವಾದಿಯಲ್ಲ. ಒಂದು ವರ್ಷದ ಉಪಾಧ್ಯಾ ಜೀವನದ ಕೊನೆಯಲ್ಲಿ---

ವಾಸ್ತವತೆ ಅಣಕಿಸಿದ್ದರೂ ಜಯದೇವ ಸೋತಿರಲಿಲ್ಲ. ಜೀವನ ಕಟು ಸತ್ಯಗಳನ್ನು ತಿಳಿಸಿಕೊಟ್ಟು ಆತನ ದೃಷ್ಟಿಯನ್ನು ಸ್ವಚ್ಛಪಡಿಸಿತ್ತು.

ಹೃದಯದಲ್ಲಿ ಹುಮ್ಮಸಿತ್ತು: ಬಲವಿತ್ತು ಬಾಹುಗಳಲ್ಲಿ.

ತನ್ನ ಬದುಕಿನ ಗುರಿ ದೂರವಿದ್ದಂತೆ-ಬಲು ದೂರವಿದ್ದಂತೆ--ಆತನಿಗೆ ಕಂಡರೂ 'ಹಾದಿಯನ್ನು ನಾನು ಬಲ್ಲೆ, ಗುರಿ ಸೇರಬಹುದು' ಎಂದು ಆತ್ಮವಿಶ್ವಾಸದಿಂದ ಒಳದನಿ ಉಸುರುತಿತ್ತು.

ಇಂತಹ ಚಿತ್ರಣವನ್ನು ಓದುಗರ ಮುಂದಿರಿಸಿದಾಗ, ಒಳಗೊಂದು ಅಳುಕು ನನ್ನನ್ನು ಬಾಧಿಸುತ್ತಿತ್ತು. ಆ ಅಳುಕಿಗೆ ಕಾರಣವಿಷ್ಟೆ. ವಿಚಾರದ ಅಂಶವೂ ಕಲೆಯ ಅಂಶವೂ ಸೃಷ್ಟಿ ಸಾಹಿತ್ಯದಲ್ಲಿ ಸರಿಸಮಾನವಾಗಿರಬೇಕೆಂಬ-ಸಮರಸಗೊಂಡಿರಬೇಕೆಂಬ-ಅಭಿಪ್ರಾಯ ಕನ್ನಡದಲ್ಲಿ ತೀರಾ ಇತ್ತೀಚಿನದು. ನಮ್ಮಲ್ಲಿ ವಿಪುಲವಾಗಿ ಸೃಷ್ಟಿಯಾಗುತ್ತಿರುವುದು'ಮನೋರಂಜನೆಯೊಂದೇ ಗುರಿಯಾಗುಳ್ಳ ಸಾಹಿತ್ಯ. ಓದುಗರ ಅಭಿರುಚಿ ಹೆಚ್ಚಾಗಿ ರೂಪುಗೊಂಡಿರುವುದೂ ಆ ದಿಕ್ಕಿನಲ್ಲೇ. ಹೀಗಿರುತ್ತ, ಸಿಹಿ ಎಂದು ನಾಲಗೆ ಚಪ್ಪರಿಸುವವರಿಗೆ ಶುಂಠಿಸಕ್ಕರೆಯನ್ನು ಕೊಡಲು ಹೊರಡುವುದು ಸುಲಭದ ಕೆಲಸ ಹೇಗಾದೀತು?

ಆದರೆ ಕನ್ನಡ ಓದುಗರು;ಆ ಭಯವನ್ನು ಬಹಳ ಮಟ್ಟಿಗೆ ನಿವಾರಣೆ ಮಾಡಿರುವರೆನ್ನುವುದು ವಿಚಾರಪರರೆಲ್ಲರಿಗೂ ಸಮಾಧಾನದ ವಿಷಯ; ಮನೋರಂಜನೆಯ ಜತೆಗೆ ವಿಚಾರ ಪ್ರಚೋದನೆಯನ್ನೂ ಮಾಡಬಯಸುವ ಬರಹಗಾರರೆಲ್ಲರಿಗೂ ಸಂತೋಷದ ವಿಷಯ. ದೂರದ ನಕ್ಷತ್ರವನ್ನು ಕುರಿತು 'ಸಪ್ಪೆ' ಎಂದು ಹೇಳಿದವರಿಗಿಂತಲೂ ಒಪ್ಪಿಗೆ ಸೂಚಿಸಿದವರ ಸಂಖ್ಯೆಯೇ ಹೆಚ್ಚಿನದು. ಅದನ್ನು ಓದಿರುವ ಉಪಾಧ್ಯಾಯರು ಯಾರೂ "ಇದು ನಮ್ಮ ಕಥೆಯಲ್ಲ," ಎಂದು ಹೇಳಿಲ್ಲ. "ಬರೆದಿರುವುದೊಂದು, ವಸ್ತು ಸ್ಥಿತಿ ಇನ್ನೊಂದು, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.

ಓದುಗರು, ಸೃಷ್ಟನೆಯ ಸಾಹಿತ್ಯವನ್ನು ಬದುಕಿನಲ್ಲಿರುವ ಮೂಲದೊಡನೆ ಹೋಲಿಸಿನೋಡುವ ಪ್ರವೃತ್ತಿಯೂ ಹೊಸದು. ಇಂಥವರ ಸಂಖ್ಯೆ ಸಣ್ಣದಾದರೂ ತೃಪ್ತಿಕರವಾದುದು. ಬದುಕಿಗೂ ಸಾಹಿತ್ಯಕ್ಕೂ ನಿಕಟ ಸಂಬಂಧವಿದೆ ಎನ್ನುವ ವಿಚಾರ. ದಿನದಿಂದ ದಿನಕ್ಕೆ ಬಡಕಲಾಗುತ್ತಿಲ್ಲ-ಬೆಳೆಯುತ್ತ ಸಾಗಿದೆ...

'ದೂರದ ನಕ್ಷತ್ರ'ವನ್ನು ನಾನು ಬರೆದು ಮುಗಿಸಿದಾಗ, 'ಇದು ಅಪೂರ್ಣ' ಎನ್ನುವ ಭಾವನೆ ನನ್ನಲ್ಲಿ ಮೂಡಿ ಬಲಗೊಂಡಿತು. ಹಲವಾರು ಓದುಗರೂ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಲೆಂದು ನಗರಕ್ಕೆ ಹಿಂತಿರುಗಿದ ಜಯದೇವ, ಪುನಃ ಆ ಹಳ್ಳಿಗೆ ಮರಳುವನೆ? ಅದೇ ವೃತ್ತಿಯನ್ನು ಕೈಗೊಳ್ಳುವನೆ? ಎಂದು ಅವರು ನನ್ನನ್ನು ಕೇಳಿದರು.

ಆ ಪ್ರಶ್ನೆಗಳಿಗೆ ಉತ್ತರ, ನನ್ನ ಇತ್ತೀಚಿನ ಕಾದಂಬರಿಯಾದ 'ನವೋದಯ'. ಜಯದೇವನ ವೈಯಕ್ತಿಕ ಜೀವನ, ನಾಡಿನ ಬದುಕಿನೊಡನೆ ಹಾಸುಹೊಕ್ಕಾಗಿ ಬೆರೆತು ಮುಂದುವರಿಯುವ ಚಿತ್ರ ಅದರಲ್ಲಿದೆ. 'ದೂರದ ನಕ್ಷತ್ರ'ದ ಮುಂದಿನ ಭಾಗವೆಂದು, ವಾಸ್ತವತೆಯ ಮೂಸೆಯಲ್ಲಿ ಆದರ್ಶವನ್ನು ಪುಟಕ್ಕಿಡುವ ಜಯದೇವನ ಕಥೆಯೆಂದು, ಓದುಗರು 'ನವೋದಯ'ವನ್ನು ಬರಮಾಡಿಕೊಳ್ಳುವರೆಂಬ ನಂಬಿಕೆ ನನಗಿದೆ.ಕವಿಕಾವ್ಯ ಪಕ್ಷಪಾತಿಯಾದ ಸನ್ಮಿತ್ರ ಜೆ. ಕೆ. ಪ್ರಾಣೇಶಾಚಾರ್ಯರ ನೂತನ ಉದ್ಯಮವಾದ ಸಾಧನಾ ಪ್ರಕಾಶನದ ಮೂಲಕ 'ನವೋದಯ' ಬೆಳಕು ಕಂಡಿದೆ. ಅದರ ಜೊತೆಯಲ್ಲೇ, ಮೊದಲ ಆವೃತ್ತಿ ಎಂದೋ ಮುಗಿದಿದ್ದ 'ದೂರದ ನಕ್ಷತ್ರ'ವನ್ನೂ ಓದುಗರ ಅನುಕೂಲಕ್ಕೆಂದು ಅವರು ಪುನಃ ಪ್ರಕಟಿಸುತ್ತಿದ್ದಾರೆ. ಹೀಗೆ, ಈ ಎರಡು ಕೃತಿಗಳೂ ವಿಷಯದಲ್ಲಿ ಆಸಕ್ತಿ ವ್ಯಕ್ತಪಡಿಸಿರುವ ಜೆ. ಕೆ. ಪ್ರಾಣೇಶಾಚಾರ್ಯರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕಾದುದು ನನ್ನ ಕರ್ತವ್ಯ.

ನಿರಂಜನಸೆಪ್ಟೆಂಬರ್ ೧೯೫೬
ಗೋಕುಲ ವಿಸ್ತರಣ
ವಾಣಿವಿಲಾಸ ಮೊಹಲ್ಲಾ
ಮೈಸೂರು