ದೂರದ ನಕ್ಷತ್ರ/೧

ವಿಕಿಸೋರ್ಸ್ ಇಂದ
Jump to navigation Jump to search

ಜಯದೇವ, ಜಮಖಾನದೊಳಗೆ ಸುತ್ತಿದ್ದ ಪುಟ್ಟ ಹಾಸಿಗೆಯನ್ನು ಒಂದು ಕೈಯಲ್ಲೂ ಪುಸ್ತಕಗಳು ತುಂಬಿದ್ದ ಚೀಲವನ್ನು ಇನ್ನೊಂದು ಕೈಯಲ್ಲೂ ಹಿಡಿದುಕೊಂಡು, ರೈಲುನಿಲ್ದಾಣದಿಂದ ಹೊರಬಂದ. ಆಗಿನ್ನೂ ಬೆಳಗ್ಗೆ ಏಳು ಘಂಟೆ. ಮುಖಕ್ಕೆ ಒಂದಿಷ್ಟು ನೀರು ಹನಿಸಿ, ಗುಟುಕು ಕಾಫಿ ಕುಡಿದು, ಮುಂದಿನ ಪ್ರಯಾಣ ಬೆಳೆಸಬೇಕೆಂಬುದು ಆತನ ಆಪೇಕ್ಷೆಯಾಗಿತ್ತು.

ಆದರೆ ಸ್ವಲ್ಪ ದೂರದಲ್ಲೆ ನಿಂತಿದ್ದ ಬಸ್ಸು, ಅದರತ್ತ ಓಡುತಿದ್ದ ಜನರು, ತನ್ನ ಮುಂದಿನ ಪ್ರಯಾಣದ ಹೊರತಾಗಿ ಬೇರೇನನ್ನು ಯೋಚಿಸುವುದಕ್ಕೂ ಜಯದೇವನಿಗೆ ಅವಕಾಶಕೊಡಲಿಲ್ಲ. ಎಲ್ಲರಂತೆ ಆತನೂ ಬಸ್ಸಿನತ್ತ ಓಡಿದ. ಟಿಕೆಟು ಪಡೆದುಕೊಳ್ಳಲು ಯಾವ ವ್ಯವಸ್ಯೆಯೂ ಇದ್ದಂತೆ ತೋರಲಿಲ್ಲ ಆ ಖಾಸಗಿ ಬಸ್ಸಿನಲ್ಲಿ. ಮೊದಲು ಸ್ಥಾನದ ಆಕ್ರಮಣ. ಆ ಬಳಿಕ ಟಿಕೆಟಿನ ಮಾತು. ಪುಟ್ಟ ಪುಟ್ಟ ಬಾಗಿಲುಗಳ ಮೂಲಕ ಒಳಹೊಗಲು ಸ್ಪರ್ಧೆಯೇ ನಡೆದಿತ್ತು. ಗದ್ದಲ ಕಡಮೆಯಾಗಲೆಂದು ದೂರ ನಿಂತರೆ ಸೀಟು ಸಿಗದೇ ಹೋಗಬಹುದು. 'ಬಲವಿದ್ದರೇ ಬದುಕು'-ಇದೊಂದೇ ಅಲ್ಲಿದ್ದ ತತ್ವ ಬೇರೆ ಉಪಾಯವಿಲ್ಲದೆ, ಬಸ್ಸನ್ನು ಮುತ್ತಿದ ಯೋಧರಲ್ಲಿ ಜಯದೇವನೂ - ಒಬ್ಬನಾದ. ಹೃಷ್ಟಪುಷ್ಟನಾದ ಇಪ್ಪತ್ತೆರಡರ ನವಯುವಕ ಜಯದೇವ ಬಸ್ಸನ್ನೇರುವುದರಲ್ಲಿ ಯಶಸ್ವಿಯಾಗದಿರಲಿಲ್ಲ.

ಮೂರನೆಯ ಸಾಲಿನ ಮೂಲೆಯಲ್ಲಿ ಬಾಗಿಲ ಬಳಿಯಲ್ಲೆ ಕುಳಿತು, ಸೀಟಿನ ಕೆಳಗೆ ಹಾಸಿಗೆ ಕೈಚೀಲಗಳನ್ನು ತಳ್ಳಿ, ಕ್ರಾಪಿನಮೇಲೆ ಕೈಯೋಡಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಾಗ, ಒಮ್ಮೆಲೆ ಜಯದೇವನಿಗೆ ಕೆಡುಕೆನಿಸಿತು. ತನಗಿಂತ ಕಡಮೆ ಶಕ್ತಿಯವರನ್ನೋ ಕೈಲಾಗದವರನ್ನೋ ಬದಿಗೆ ತಳ್ಳಿ ಆತ ಒಳಗೆ ಬಂದಿದ್ದನಲ್ಲವೆ? ತಾನು ಹಾಗೆಮಾಡಿದ್ದು ಸರಿ ಎಂದು ಸಮರ್ಥಿಸುವುದು ಸಾಧ್ಯವಿತ್ತೆ? ಸದ್ವರ್ತನೆ ಶಿಷ್ಟಾಚಾರಗಳ ಸಂಪತ್ತು ತನ್ನಲ್ಲಿದೆಯೆಂದು ತಾನು ಭಾವಿಸಿದ್ದು ಸುಳ್ಳಾಯಿತಲ್ಲವೆ?

ಈ ಪ್ರಯಾಣದಲ್ಲಿ ಹೀಗಾದುದು ಇದು ಎರಡನೆಯ ಸಲ. ಹಿಂದಿನ ರಾತ್ರಿ ಬೆಂಗಳೂರಿನ ರೈಲುನಿಲ್ದಾಣದಲ್ಲೂ ಅಂಥದೇ ಅನುಭವವಾಗಿತ್ತು. ಬೀಳ್ಕೊಡಲೆಂದು ಬಂದಿದ್ದ ವೇಣುಗೋಪಾಲನೂ ಜಯದೇವನೂ ಪ್ಲಾಟ್ ಫಾರಂ ಸೇರಿದಾಗ, ಹೊರಡುವ ಗಾಡಿಯಿನ್ನೂ ಬಂದು ನಿಂತಿರಲಿಲ್ಲ.

ಆಗ ವೇಣುಗೋಪಾಲ ಹೇಳಿದ್ದ:

“ಒಂದು ಮಾಡೋಣ ಜಯಣ್ಣ, ಗಾಡಿ ಬರುತ್ಲೆ ನಾನು ಬೇಗ್ನೆ ಹತ್ಕೊಂಡ್ಬಿಟ್ಟೂ ಮೇಲ್ಗಡೆ ಜಾಗ ಹಿಡೀತೀನಿ. ನೀನು ಮಲಕೊಂಡ್ಬಿಡು!”

ಇತರರು ಕುಳಿತೋ ನಿಂತೋ ಪ್ರಯಾಣ ಮಾಡುವಾಗ ತಾನು ಮಲಗಿರುವ ಸನ್ನಿವೇಶ......

“ಸಾಕು, ಗೊತ್ತು, ಯಾಕೆ ನಿದ್ದೆ ಬರೊಲ್ವೋ ನೋಡ್ರೀನಿ. ನೋಡಪ್ಪ, ಜಯಣ್ಣ, ಈ ಸಂಕೋಚ ಎಲ್ಲಾ ಬಿಟ್ಟಿಡು. ಹ್ಯಾಗಾದರೂ ಮಾಡಿ ಜಾಗ ಹಿಡೀತೀನಿ, ಸ್ವಸ್ಥ ಮಲಕೋ ರಾತ್ರೆಯೆಲ್ಲಾ ಜಾಗರವಿದ್ದು, ಬೆಳಗ್ಗೆ ಬಾಡಿದ ಸೋರೆಕಾಯಿ ಹಾಗೆ ಮುಖ ಮಾದ್ಕೊಂಡು ಅದೇನು ಹೋಗಿ ನೋಡಿಯೋ ಅವರ್ನೆಲ್ಲಾ!"

ಜಯದೇವನಿಗೂ ಅದು ಹೌದೆನಿಸಿತು.

ಗಾಡಿ ಬಂದು ಪೂರ್ತಿ ನಿಲ್ಲುವುದಕ್ಕೂ ಇಲ್ಲ, ಅಷ್ಟರಲ್ಲೆ ವೇಣು ಗೋಪಾಲ ನೂಕು ನುಗ್ಗಲಿನಲ್ಲಿ ಮುಂದಾಗಿ ಮೂರನೆ ತರಗತಿಯ ಡಬ್ಬಿಯೊಂದನ್ನೇರಿದ, ಹೊರಗಿಂದ ಹಾಸಿಗೆಯ ಸುರುಳಿ-ಚೀಲ ಎತ್ತಿಕೊಂಡು ಗಾಡಿ ನಿಲ್ಲುವವರೆಗೆ ಜಯದೇವನೂ ಓಡಬೇಕಾಯಿತು. ಸದ್ದು ಗದ್ದಲ ಮಾಡುತ್ತ ಕಿಟಕಿಯ ಮೂಲಕ ಜಯದೇವನ ಸಾಮಾನುಗಳನ್ನು ಒಳಕ್ಕೆಳೆದುಕೊಂಡು ವೇಣು ಮೇಲಿನ ಹಲಿಗೆಗೆ ಏರಿಸಿದ. ಕೈಕೊಟ್ಟು ಜಯದೇವನನ್ನೂ ಕಿಟಕಿಯ ಮೂಲಕವೆ ಒಳಕ್ಕೆ ಬರಸೆಳೆದುಕೊಂಡು, ಮೇಲಕ್ಕೆ ಕಳುಹಿಕೊಟ್ಟ, ಹಾಸಿಗೆ ತಲೆದಿಂಬಾಯಿತು. ಚೀಲ ಬಲಮಗುಲು ಸೇರಿತು. ಜಯದೇವ ಕಾಲುನೀಡಿ ಮಲಗಿಕೊಂಡ.

ಗಾಡಿ ಹೊರಡಲು ಆಗಿನ್ನೂ ಅರ್ಧ ಘಂಟೆಯಿತ್ತು.

“ಕಣ್ಣ ಮುಚ್ಚಿ ನಿದ್ದೆ ಬಂದವರ ಹಾಗೆ ಮಲಕೊ ಜಯಣ್ಣ, ನಾನು ಇನ್ನು ನಿಂತು ಪ್ರಯೋಜನವೂ ಇಲ್ಲ, ಟಾ ಟಾ ಬೈ ಬೈ ಎಲ್ಲಾ ಇಲ್ಲೇ! ಹೊರಡ್ತೀನಿ ಇನ್ನು.”

ವೇಣು ವ್ಯವಹಾರಕುಶಲನಾಗಿದ್ದ. ಅವನು ಹೇಳಿದುದು ಸರಿಯಾಗಿತ್ತು.

“ಹೌದು ವೇಣು. ಹೋಗಪ್ಪ ಇನ್ನು.”

“ಕಾಗದ ಬರೀತಿಯೇನಯ್ಯ ತಪ್ಪದೆ?”

“ಆ ಪ್ರಶ್ನೇನ ನಾನೇ ಕೇಳ್ಬೇಕೂಂತಿದ್ನಲ್ಲೋ!”

ವೇಣು ನಕ್ಕು, ಜಯದೇವನ ಭುಜ ಮುಟ್ಟೀ ಮೃದುವಾಗಿ ಅದುಮಿದ. ಅನಂತರ ಮಾತಿಗೆ ಆಸ್ಪದವಿರಲಿಲ್ಲ. ತಲೆಯಾಡಿಸಿ, ಕಿಟಿಕಿಯ ಮೂಲಕವೆ ಕೆಳಕ್ಕೆ ಧುಮುಕಿ, ವೇಣುಗೋಪಾಲ “ಬರ್ತೀನಿ ಜಯಣ್ಣ!” ಎಂದು ಅಲ್ಲಿಂದಲೇ ಅಂದು, ಹೊರಟು ಹೋದ.

ಆದರೆ ಹಾಗೆ ದೊರೆತಿದ್ದ ಜಾಗ, ಮೊದಲ ಜಯ ಮಾತ್ರ. ಜನರು ಒಳನುಗ್ಗಿದಂತೆ ಸಾಮಾನುಗಳು ಹೆಚ್ಚಿದುವು. ಯಾವನೋ ಇನ್ನೊಬ್ಬ ಮಲಗಿದ್ದ ಜಯದೇವನ ಎದುರುಗಡೆ. ಆತನೊಡನೆ ಪ್ರಯಾಣಿಕರು ಜಗಳವನ್ನೇ ಆರಂಭಿಸಿದರು. ಸ್ವಲ್ಪ ಕಾಲು ಮುದುಡಿಸಿಕೊಂಡು ಕೆಲವು ಸಾಮಾನುಗಳಿಗೆ ಜಯದೇವ ಜಾಗ ಮಾಡಿಕೊಟ್ಟ. ತಮಿಳುನಾಡಿನ ಕೂಲಿಯಾಳುಗಳ, ಅವರ ಹೆಂಗಸರು, ಮುದುಕರು, ಚಿಳ್ಳೆ ಪಿಳ್ಳೆಗಳ-ದೊಡ್ಡದೊಂದು ತಂಡವೇ ಒಳಬಂತು. ಮಾರವಾಡಿಗಳ ದೊಡ್ಕ ದೊಡ್ಡ ಟ್ರಂಕುಗಳು ಎರಡು ಮೂರು ಜಯದೇವನತ್ತ ಸುಳಿದಾಡಿದುವು.

ಯಾರೋ ಕೂಗಾಡಿದರು:

“ಆ ಜಾಗ ಇರೋದು ಮಲಗೋಕಲ್ಲ, ಏಳ್ರಿ !”

ಅವಕಾಶ ದೊರೆತಿದ್ದರೆ ಹಾಗೆ ಹೇಳಿದವರೇ ಆ ಜಾಗದಲ್ಲಿ ಮೊದಲು ಮಲಗುತ್ತಿದ್ದರೆಂಬುದು ಜಯದೇವನಿಗೆ ಗೊತ್ತಿರಲಿಲ್ಲವೆ?...ಅಂತಹ ಮಾತು ಕೇಳಿದಾಗ 'ಹಾಳಾಗಿ ಹೋಗಲಿ, ಇಳಿದು ಬಿಡೋಣ' ಎನ್ನಿಸಿತು ಅವನಿಗೆ. ಆದರೆ, ಹಾಗೆ ಇಳಿದುದು ಮುಂದೆ ತಿಳಿದಾಗ ವೇಣುಗೋಪಾಲ ಮಾಡಬಹುದಾದ ಪರಿಹಾಸ್ಯದ ನೆನಪಾಗಿ, ಜಯದೇವ ಇಳಿಯಲು ಇಷ್ಟಪಡಲಿಲ್ಲ. ನಿದ್ದೆ ಹೋದವನಂತೆ ನಟಿಸುತ್ತ ಆತ ಮಲಗಿದ. ಆಗಾಗ್ಗೆ ಕಳ್ಳ ನೋಟ ದಿಂದ ನೋಡಿದ ಅವನಿಗೆ, ಇದ್ದ ಜಾಗದ ಮೂರರಷ್ಟು ಜನ ಸೇರಿಕೊಂಡು ಬೇಗೆಯಲ್ಲಿ ನರಳುತಿದ್ದ ದೃಶ್ಯ ಕಾಣುತಿತ್ತು.

ಸ್ವಲ್ಪ ಹೊತ್ತಿನಲ್ಲೆ ಗಾಡಿ ಚಲಿಸಿ ತಣ್ಣನೆ ಗಾಳಿ ಬೀಸಿತು. ಬೇರೆ ಹಾದಿಯಿಲ್ಲದೆ ಒಂದು ರಾತ್ರಿಯನ್ನು ಹಾಗೆಯೇ ಕಳೆಯಲು ಸಿದ್ಧರಾದವರಂತೆ ಜನರು ಸುಮ್ಮನಾದರು.

ಎಲ್ಲ ಮಾನವ ಪ್ರಾಣಿಗಳಂತೆಯೇ ತಾನೂ ಕೂಡಾ ಎಂದು ಭಾವಿಸಿದ್ದ ಜಯದೇವ. ತಾನು ಪರೋಪಕಾರಿಯಾಗಿ ಬಾಳಬೇಕೆಂದು ಆತನ ಬಯಕೆ. ಆದರೆ ಮನಸ್ಸಿನಲ್ಲಿದ್ದುದಕ್ಕೂ ಕೃತಿಯಲ್ಲಿ ನಡೆದುದಕ್ಕೂ ವ್ಯತ್ಯಾಸವಿತ್ತಲ್ಲವೆ? ತಾನು ಸ್ವಾರ್ಥಿ ಎಂದು ತೋರಿಸಿಕೊಂಡ ಹಾಗಾಯಿತಲ್ಲವೆ?

ಮನಸು ಕದಡುವುದಕ್ಕೆ ಮುಂಚೆಯೆ ರಾತ್ರಿಯ ತಂಗಾಳಿ ಜಯದೇವನ ನೆರವಿಗೆ ಬಂತು. ಡಬ್ಬಿಯಲ್ಲಿ ನಡೆಯುತಿದ್ದ ಮಾತುಕತೆಗಳೂ ಕ್ರಮೇಣ ಕಡಮೆ-ಬಲು ಕಡಮೆ-ಯಾದುವು. ಗಾಡಿಯ ಚಲನೆಯ ಗುಸು ಗುಸು ಧ್ವನಿಯೇ ಜಯದೇವನ ಪಾಲಿಗೆ ಜೋಗುಳವಾಯಿತು. ಡಬ್ಬಿಯ ಮಾಡದಿಂದ ಬೆಳಕು ಬಿರುತ್ತಿದ್ದ ವಿದ್ಯುದ್ದೀಪವನ್ನೂ ಗಮನಿಸದೆ, ನಿದ್ದೆ ಆತನ ಮೇಲೆ ತನ್ನ ಹೊದಿಕೆಯನ್ನೆಳೆಯಿತು.

..............

ಆದರೆ ಈಗ ಬಸ್ಸಿನಲ್ಲಿ ಕುಳಿತ ಜಯದೇವನಿಗೆ ಆಂತಹ ಅನುಕೂಲತೆಗಳಿರಲಿಲ್ಲ. ಆತನಿದ್ದುದು ಎಚ್ಚರಗೊಂಡಿದ್ದ ಜಗತ್ತಿನಲ್ಲಿ. ಇಲ್ಲಿ ನಿದ್ದೆ ಹೋದವರ ಹಾಗೆ ಕಣ್ಣು ಮುಚ್ಚಿಕೊಂಡು ಯಾರಿಂದಲೂ ಏನನ್ನೂ ಆತ ಮರೆಮಾಚುವ ಹಾಗಿರಲಿಲ್ಲ.

ಆ ಕಾರಣದಿಂದಲೆ, ತನ್ನ ಮನಸಿನ ಹೊಯ್ದಾಟ ಕಂಡು ಆತನಿಗೆ ನಗು ಬಂತು.

ಬಸ್ಸು ಹೊರಡುವ ಲಕ್ಷಣವೇ ಕಾಣಿಸಲಿಲ್ಲ, ಅದರ ಸಾರಥಿಯಾಗಲೀ ಸಹಾಯಕನಾಗಲೀ ಅಲ್ಲಿ ಇರಲಿಲ್ಲ. ಅಂತೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ದೊರೆಯಿತು.

ಕಂಡಕ್ಟರ್ ಟಿಕೆಟು ಕೊಡಲು ಬಂದಾಗ ಜಯದೇವ ಕೇಳಿದ:

"ಬಸ್ಸು ಹೊರಡೋದು ಎಷ್ಟು ಹೊತ್ತಿಗೆ ಇವರೇ?"

"ಇನ್ನೇನು ಟೇಮು ಆಗೋಯ್ತು ಸಾರ್.”

"ಕಾಫಿಗೆ ಪುರಸೊತ್ತು ಇದೆಯೊ?"

“ಓ! ಅದಕ್ಕೇನ್ಸಾರ್ ಹೋಗ್ಬನ್ನಿ..”

ಒಂದು ರೂಪಾಯಿ ಒಂದಾಣೆ ಕೊಟ್ಟ ಜಯದೇವ ಟಿಕೆಟು ಪಡೆದು ಕೊಂಡ. ಪುಸ್ತಕಗಳ ಚೀಲವನ್ನು ತಾನು ಕುಳಿತಿದ್ದ ಸಾನಕ್ಕೇರಿಸಿ, “ಸ್ವಲ್ಪ ನೋಡ್ಕೋತೀರಾ?” ಎಂದು ಪಕ್ಕದವರನ್ನು, 'ದಯವಿಟ್ಟ ನೋಡಿಕೊಳ್ಳಿ' ಎಂಬರ್ಥದಲ್ಲಿ ಕೇಳಿ, ಕೆಳಕ್ಕಿಳಿದ.

ಅಲ್ಲೇ ಇತ್ತು ಉಡುಪಿ ಬ್ರಾಹ್ಮಣರ ಹೋಟೆಲು.

“ಈ ಸಾಹಸಿಗಳಿಲ್ಲದ ಊರೇ ಇಲ್ಲ."

-ಎಂದುಕೊಂಡು ಜಯದೇವ ಆತ್ತ ಸಾಗಿದ. ಆತ ಕಾಫಿಗೆಂದು

'ನಮ್ಮ ಜನರೇ ಹಾಗೆ. ಒಬ್ಬರು ಮುನ್ನುಗ್ಗದೇ ಇದ್ದರೆ ಅವರಿಗೆ ಧೈರ್ಯವೇ ಬರೋದಿಲ್ಲ.'

ಆತ ಅವಸರವಾಗಿ ಮುಖ ತೊಳೆದು, ಎರಡು ಇಡ್ಲಿ ತಿಂದು, ಕಾಫಿ ಕುಡಿದು ದುಡ್ಡು ಕೊಡುತ್ತಿದ್ದಂತೆ, ಹೊಸತಾಗಿ ತೋರಿದ ದಿನಪತ್ರಿಕೆಯೊಂದು ಅವನ ಕಣ್ಣಿಗೆ ಬಿತ್ತು.

"ಇವತ್ತಿನ್ದೆ ಪೇಪರು?"

ದುಡ್ಡು ಪಡೆಯುತ್ತಿದ್ದವರು "ಹೌದು" ಎಂದರು,

ಮಡಚಿದ್ದ ಪತ್ರಿಕೆಯನ್ನು ಎತ್ತಿ ಬಿಡಿಸಿದ ಜಯದೇವ. ಆದರೆ ಪುಟದ ಅಗಲಕ್ಕೂ ಇದ್ದ ಶಿರೋನಾಮೆ....... ಅದನ್ನು ಈಗಾಗಲೇ ತಾನು ಓದಿದ್ದನಲ್ಲವೆ?

"ಇದು ಹಳೇದು."

ಆದರೆ ಹೋಟ್ಲಿನವನು ಬುದ್ಧಿವಂತನಾಗಿದ್ದಂತೆ ತೋರಿತು.

"ನೀವು ಬೆಂಗಳೂರಿಂದ ಬಂದಿರಾ?"

"ಹೌದು."

"ಸರಿ ಮತ್ತೆ ! ನೀವು ನಿನ್ನೆ ಅಲ್ಲಿ ಓದಿದ್ದೇ ನಮಗೆ ಇಲ್ಲಿ ಇವತ್ತಿನ್ದು!"

ಜಯದೇವ ನಕ್ಕು, ಪತ್ರಿಕೆಯನ್ನು ಮೇಜಿನ ಮೇಲಿರಿಸಿ, ಹೊರಕ್ಕಿಳಿದ. ಒಂದು ಊರಿನಿಂದ ಇನ್ನೊಂದು ಊರಿಗಿರುವ ಕಾಲದ ಆಂತರ. ಬೆಂಗಳೂರಲ್ಲಿ ನಿನ್ನೆ ಸಂಜೆ ಬಿಸಿಬಿಸಿ ಸುದ್ದಿಯಾಗಿದ್ದುದು ಈ ಊರಲ್ಲಿ ಈಗ ಬಿಸಿ ಸುದ್ದಿಯಾಗಲು ಇನ್ನೂ ತಡವಾಗಬಹುದು, ತನ್ನ ಜತೆಯಲ್ಲೇ ಆದೇ ಗಾಡಿಯಲ್ಲೇ ಆ ಪತ್ರಿಕೆಯೂ ಪ್ರವಾಸ ಮಾಡಿರಬೇಕು ಹಾಗಾದರೆ. ಈಗ ಈ ಬಸ್ಸಿನಲ್ಲೂ ಜತೆಯಲ್ಲಿರಬಹುದು, ಮುಂದಿನ ಊರುಗಳಿಗೆ ಹೊರಟ ಪತ್ರಿಕೆ. ಕಾಗದ ಪತ್ರಗಳೂ ಆಷ್ಟೇ... ಆ ರೀತಿ ಜಗತ್ತಿನ ವ್ಯವಹಾರಗಳು ಕೆಲವನ್ನು ನಿರೀಕ್ಷಿಸಿ ತಿಳಿದುಕೊಂಡ ಜಯದೇವನಿಗೆ, ಅಲ್ಲಿ ತಾನು ಒಂಟಿ ಎಂಬ ಭಾವನೆ ಹೊರಟು ಹೋಯಿತು.

ಬಸ್ಸು ಪೊಂ ಪೊಂ ಸದ್ದು ಮಾಡಿತೆಂದು ಜಯದೇವ ಲಗುಬಗೆಯಿಂದ ಅದರತ್ತ ಹೋದ. ಆದರೆ ಆ ಕರೆ, ಹೊರಡುವ ಲಕ್ಷಣವೇನೂ ಆಗಿರಲಿಲ್ಲ. ಮತ್ತೆ ಆಸೀನನಾದ ಜಯದೇವ ತನ್ನ ಸುತ್ತಮುತ್ತಲೂ ದೃಷ್ಟಿಯೋಡಿಸಿದ...ಮೊದಲ ಸೀಟಿನಲ್ಲಿ ಒಬ್ಬ ಯುವಕನೊಡನೆ ಭಾರೀ ಗಾತ್ರದ ಹಿರಿಯರೊಬ್ಬರು ಕುಳಿತಿದ್ದರು. ಜರಿಯಂಚಿನ ಪೇಟ, ಉಣ್ಣೆಯ ಕೋಟು.....ಯಾರೋ ಹಳ್ಳಿಗಾಡಿನ ಶ್ರೀಮಂತರಿರಬೇಕು... ಎರಡನೆಯ ಸಾಲು ಹೆಂಗಸರದು. ಮೊದಲ ಸೀಟಿನವರ ಕುಟುಂಬವಿರಬಹುದು. ಹಾಗೆಯೇ ಬೇರೆಯವರೂ ಕೂಡಾ, ಎರಡು ಮಕ್ಕಳು ಆಳುತ್ತಿದ್ದುವು, ಹೆಂಗಸರ ಗಿಲಿಗಿಲಿ ಮಾತುಕತೆ ನಡೆದಿತ್ತು, ತಲೆಯಿಂದಿಳಿದು ಸೀಟಿಗೂ ಸೀರೆಯ ಸೆರಗಿಗೂ ನಡುವೆ ಮರೆಯಾಗಿದ್ದ ಅದೊಂದು ಜಡೆ– ಎಷ್ಟು ಮಾಟವಾಗಿತ್ತು ! ನೋಡಬೇಕೆನಿಸುತಿತ್ತು ಮತ್ತೆ ಮತ್ತೆ. ಮುಡಿದಿದ್ದ ಸಂಪಗೆ ಹೂಗಳು ಬಾಡಿದ್ದರೂ ಪ್ರತಾಪ ತೋರಿಸುತ್ತಿದ್ದವು. ಆ ಜಡೆಯ ಒಡತಿಯ ಮುಖ ದರ್ಶನವಾದರಾದೀತೆಂದು ತೋರಿತು ಜಯದೇವನಿಗೆ.

ಒಮ್ಮೆ ಹಿಂದಕ್ಕೆ ತಿರುಗಿದಳು ಆ ಯುವತಿ. ಜಯದೇವನಿಗೆ ನಿರಾಸೆಯಾಯಿತು.

ಅಂತೂ ಬಸ್ಸು ಚಲಿಸಿತು.

ಬಸ್ಸು ಪಶ್ಚಿಮಕ್ಕೆ ಓಡಿದಂತೆ ಸೂರ್ಯ ಪೂರ್ವದಿಂದ ಅದನ್ನು ಬೆನ್ನಟ್ಟಿಕೊಂಡೇ ಬಂದ. ಆದರೆ ನೆಲ ಗಿಡ ಮರ, ಮುಂಗಾರು ಮಳೆಯ

ರುಚಿ ನೋಡಿದ್ದುವು ಆಗಲೆ. ಸೂರ್ಯನ ಏಕಾಧಿಪತ್ಯವಿದ್ದ ಸುಡುಬೇಸಗೆ ಕಳೆದು ಹೋಗಿತ್ತು. ಆದರೂ ಸೋಲನ್ನೊಷ್ಟಿಕೊಳ್ಳದೆ ಆ ಸೂರ್ಯ ಗಹಗಹಿಸಿ ನಗುತ್ತಿದ್ದ.

ಬಸ್ಸು ಹಾರಿ ಎದ್ದು ಬಿದ್ದು ತನ್ನ ಮೈಯನ್ನೂ ಪ್ರಯಾಣಿಕರ ಮೈಗಳನ್ನೂ ಕುಲುಕುತ್ತಾ ಕೊರಕಲು ಹಾದಿಯಲ್ಲಿ ಓಡುತ್ತಿದ್ದಂತೆ, ಜಯದೇವ ಆಗಾಗ್ಗೆ ಮುಗುಳು ನಕ್ಕ–ಸೂರ್ಯನ ಪರಿವೆ ಇಲ್ಲದೆ. ಹೊರಗಿನ ದೃಷ್ಟಿಯೇನೋ, ಗೋಚರವಾಗಿ ಮರೆಯಾಗುತ್ತಿದ್ದ ಹೊಲ ಗುಡಿಸಲು ಹುಲ್ಲು ಗಾವಲು ಪೊದೆ ಪೊದರು ಮರಗಳನ್ನು ನೋಡುತ್ತಿತ್ತು. ಆದರೆ ಮನಸಿನೊಳಗೆ ನಡೆಯಿತ್ತಿದ್ದ ನೆನಪಿನ ಆಟವೇ ಬೇರೆ. ಸ್ಮರಣೆಯ ಲೋಕದ ವಿವಿಧ ವ್ಯಕ್ತಿಗಳೊಡನೆ ಓಡಾಡುತ್ತಾ ಸಹಪ್ರಯಾಣಿಕರನ್ನೆಲ್ಲ ಜಯದೇವ ಮರೆತ.

..............

ಉದ್ಯೋಗದ ಆಜ್ಞಾಪತ್ರ ಕೈಸೇರಿದಮೇಲೆ ಜಯದೇವ ತನ್ನ ಹುಟ್ಟೂರಿಗೆ ಹೋಗಿದ್ದ-ತನ್ನ ಮನೆಗೆ. ಅದು ಕಾನಕಾನಹಳ್ಳಿಯ ಪ್ರವಾಸ. ಸ್ವಾತಂತ್ರ ಬಂದಮೇಲೆ ಆದ ಮಾರ್ಪಾಟುಗಳಲ್ಲಿ ಆತನ ಊರಿನ ಹೆಸರು ಬದಲಾದುದೂ ಒಂದು. ಕನಕಪುರ. ಬಂಗಾರ ಅಲ್ಲಿ ಬೇಕಷ್ಟು ಇದೆಯೋ ಇಲ್ಲವೋ! ದಟ್ಟದರಿದ್ರರಾದ ಲಕ್ಷ್ಮೀನಾರಾಯಣರಿರುವುದಿಲ್ಲವೆ? -ಹಾಗೆ ಎಂದುಕೊಂಡರಾಯಿತು. ಆದರೂ ಜಯದೇವನಿಗೆ ಕಾನಕಾನಹಳ್ಳಿ ಎಂಬ ಹೆಸರೇ ಇಷ್ಟ.

ಕಾನಕಾನಹಳ್ಳಿ ಸೇರಿದ ಜಯದೇವ ಆಲ್ಲಿ ಒಂದು ದಿನವೂ ಇರಲಿಲ್ಲ. ಅದು ಹೆಸರಿಗೆ ಮಾತ್ರ ಆತನ ಮನೆ. ಆದರೆ ಆತನದಾಗಿ ಆಲ್ಲೇನಿತ್ತು? ಜಯದೇವ ತಬ್ಬಲಿಯಾಗಿ ಬೆಳೆದವನು. ತಂದೆಗೆ ಎದಡನೆಯ ಮದುವೆಯಾಯಿತು. ಆ ಮಲತಾಯಿ ಎರಡು ಮೂರು ವರ್ಷ ವಾತ್ಸಲ್ಯಮಯಿಯಾಗಿಯೇ ಇದ್ದಳು. ತನ್ನದೇ ಆದ ಮಗು ಬರುವತನಕ...ಅನಂತರ ಒಂದಲ್ಲ ಎರಡು ಮೂರು. ತಂದೆ, ತನ್ನ ಕೆಲಸ ಕಾರ್ಯಗಳಲ್ಲಷ್ಟೆ ನಿರತನಾಗಿದ್ದ ಶಾನುಭೋಗ. ಮಕ್ಕಳ ಲಾಲಸೆ ಪಾಲನೆಗಾಗಿ ಹೆಚ್ಚು ಕಾಲ ವ್ಯಯಮಾಡುವುದು ಆತನಿಂದಾಗಲಿಲ್ಲ.

'ಲೋಯರ್ ಸೆಕೆಂಡರಿ' ಪರೀಕ್ಷೆ ಮುಗಿಸಿಕೊಂಡು ಜಯದೇವ ಬೆಂಗಳೂರಿಗೆ ಬಂದು ಬಿಟ್ಟ. ಬಲುದೂರದ ಸಂಬಂಧಿಕರೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತ ಊಟ ಸಂಪಾದಿಸುತ್ತ ಆತ ಓದು ಕಲಿತ. ಹೈಸ್ಕೂಲು ಮುಗಿದ ಮೇಲೆ ಒಂದು ವರ್ಷ ಉಚ್ಚಶಿಕ್ಷಣದ ಆಸೆ ಇಲ್ಲದೆ ಜಯದೇವ ದಿನ ಕಳೆಯಬೇಕಾಯಿತು. ಕೊನೆಗೆ ಒಂದು ವಿದಾರ್ಥಿ ವೇತನ ಆತನ ನೆರವಿಗೆ ಬ೦ತು. ಬಡ ಹಾಸ್ಟಲೊಂದರಲ್ಲಿ ಪುಕ್ಕಟಿಯಾಗಿ ತುತ್ತು ಆನ್ನ ದೊರೆಯಿತು. ಸಣ್ಣ ಹುಡುಗರಿಗೆ ಪಾಠ ಹೇಳಿಕೊಟ್ಟು, ಬಟ್ಟೆಬರೆಗಾಗಿ ಕಾಫಿ ತಿಂಡಿಗಾಗಿ ಒಂದಿಷ್ಟು ಸಂಪಾದಿಸುತ್ತ, ಇಂಟರ್ ಮೀಡಿಯೆಟ್ ಓದಿ ಮುಗಿಸಿದ. ಅದಕ್ಕೂ ಹೆಚ್ಚಿನ ಓದು ಬಲು ಪ್ರಯಾಸದ್ದಾಗಿ ತೋರಿತು.

ಒಂದು ವರ್ಷ ತಾನು ಬಯಸಿದ್ದ ಉದ್ಯೋಗ ದೊರಕಿಸಲು ಶತ ಪ್ರಯತ್ನ ಮಾಡುತ್ತಾ ಕಾಲ ಕಳೆದ ಮೇಲೆ ಈಗ ಈ ವೃತ್ತಿ......

ಮನೆಯಲ್ಲಿ ತನಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಚಿಕ್ಕವನಾದ ತಮ್ಮ, ಆರು ವರ್ಷ ಚಿಕ್ಕವಳಾದ ತಂಗಿ... ಒಬ್ಬನೇ ತಂದೆಯ ಮಕ್ಕಳು ತಾವು ಮೂವರೂ.

ತಂದೆ ಕೇಳಿದ :

"ಅಂತೂ ಬಿ. ಎ. ಮುಗಿಸೋಕೆ ಆಗಿಲ್ಲ, ಅಲ್ವೇನೋ!"

“ಅದರ ಯೋಚನೆಯೇ ಇಲ್ಲ ಆಪ್ಪಾ...”

ಜಯದೇವನ ತಮ್ಮನನ್ನು ಆ ವರ್ಷ ಕಾಲೇಜು ಸೇರಿಸಬೇಕೆಂಬ ಮಾತು ಬಂತು. ತಂಗಿಯ ಮದುವೆಯ ಪ್ರಸ್ತಾಪವೂ ಕೂಡಾ.

"ಮದುವೆಗೇನು ಅವಸರ?"

“ಹಾಗಂದ್ರೇನೋ ಜಯಣ್ಣ. ಹೆಚ್ಚೆಂದರೆ ಇನ್ನು ಒಂದೆರಡು ವರ್ಷ ಕಾಯಬಹುದು. ಆದರೂ ಈಗ್ಲೇ ನೋಡೋದು ಬೇಡ್ವೆ?"

ಜಯದೇವ ಅಲ್ಲವೆನ್ನಲೂ ಇಲ್ಲ, ಹೌದೆನ್ನಲೂ ಇಲ್ಲ.

“ನಾನು ಇವತ್ತೇ ಹೊರಡ್ಬೇಕು ಅಪ್ಪ.”

"ಒಂದೆರಡು ದಿನ ಇದ್ದು ಹೋಗು. ನಿಮ್ಮಮ್ಮನ್ನ ಕೇಳಿನೋಡು– ಏನಂತಾಳೊ?”

ಆ ತಂದೆ ಅಮ್ಮ ಎಂದುದು ತನ್ನ ಎರಡನೆಯ ಹೆಂಡತಿಯನ್ನುದ್ದೇಶಿಸಿ... ವಾಸ್ತವವಾಗಿ ಹಿರಿಯ ಮಗನೊಡನೆ ಇನ್ನೂ ಒಂದಷ್ಟು ಮಾತನಾಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. ಮಗಳ ಮದುವೆಯ ಜತೆಯಲ್ಲೇ ಜಯದೇವನಿಗೂ ಒಂದು ಹೆಣ್ಣು ತಂದುಬಿಡಬೇಕೆಂದು ಆತ ಆಶಿಸಿದ್ದ. ಆದರೆ ಮನೆಯಾಕೆ ಸೊಸೆಯನ್ನು ತರುವ ವಿಷಯವಾಗಿ ಉತ್ಸುಕಳಾಗಿರಲಿಲ್ಲ. ಆ ಕಾರಣದಿಂದ ಮಗನೊಡನೆ ಅದರ ಪ್ರಸ್ತಾಪ ಮಾಡುವ ಧೈರ್ಯ ಆ ತಂದೆಗಿರಲಿಲ್ಲ.

ಅಡುಗೆ ಮನೆಗೆ ಹೋಗಿ ಬಾಗಿಲಲ್ಲೆ ನಿಂತು ಜಯದೇವ ಹೇಳಿದ.

"ಅಮ್ಮ, ಇವತ್ತು ಸಾಯಂಕಾಲದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗ್ತೀನಿ."

"ಎರಡು ದಿವಸ ಇದ್ದು ಹೋಗಬಾರದೇನೋ" ಎಂದು ಆಕೆಯೂ ಧ್ವನಿ ತೆಗೆದಳು.

"ಇಲ್ಲ ಅಮ್ಮ. ಅಲ್ಲಿಂದ ಹೊರಡೋ ತಯಾರೀನೂ ಮಾಡ್ಬೇಕಲ್ಲ. ಆ ಮೇಲೆ ತಡವಾಗುತ್ತೆ."

"ಹೂನಪ್ಪಾ ಹಾಗಾದರೆ. ನಾನು ಇರೂ ಅಂದರೂ ಯಾಕೆ ಕೇಳ್ತೀಯ ನೀನು?"

"ಹಾಗಲ್ಲಮ್ಮ--"

ಏನೋ ನೆನಪಾಗಿ ಆ ತಾಯಿ, ಮಗಳನ್ನು ಕರೆದಳು.

"ಸಾಯಂಕಾಲ ಹೊರಡ್ತಾನಂತಲ್ಲೇ ನಿಮ್ಮಣ್ಣ. ತಿಂಡಿಗಿಂಡಿ ಏನೇನಿದೆಯೋ ಅದನ್ನೆಲ್ಲಾ ಇಷ್ಟಿಷ್ಟು ಕಟ್ಕೊಡು."

ಆ ತಂಗಿಯನ್ನು ಕಂಡಾಗಲೆಲ್ಲ ಜಯದೇವನಿಗೆ ತನ್ನ ತಾಯಿಯ ನೆನಪಾಗುತಿತ್ತು. ಆಕೆ ಇದ್ದು ಮತ್ತೊಂದು ಹೆಣ್ಣು ಹೆತ್ತಿದ್ದರೆ, 'ತನ್ನ' ತಂಗಿಯೇ ಒಬ್ಬಳು ದೊರೆಯುತಿದ್ದಳಲ್ಲವೆ?

ಹಲವು ವರ್ಷಗಳ ಕಾಲ ತಾನು ಮನೆಯ ಪಾಲಿಗೆ ಹೊರ ಹೊರಗಿನವನಾಗಿಯೇ ಇದ್ದ ಕಾರಣವೋ ಏನೋ, ಈ ತಂಗಿ ಮತ್ತು ಜಯದೇವನ ನಡುವೆ ಗಾಢವಾದ ಆತ್ಮೀಯತೆ ಬೆಳೆದು ಬಂದಿರಲಿಲ್ಲ. ದೊಡ್ಡಣ್ಣನಾದ ಜಯದೇವ ಮನೆಗೆ ಬಂದಾಗ, ಆತನೊಡನೆ ಬೆಂಗಳೂರಿನ ಚಲಚ್ಚಿತ್ರಗಳ ವಿಷಯ ಆಕೆ ಚರ್ಚಿಸುವುದಿತ್ತು. ಜಯದೇವ ಆಗಾಗ್ಗೆ ಒಳ್ಳೆಯ ಚಲ ಚ್ಚಿತ್ರಗಳನ್ನು ನೋಡುತ್ತಿದ್ದನಾದರೂ ಎಲ್ಲ ಪ್ರಶ್ನೆಗಳಿಗೂ ಉತ್ತರವೀಯುವಷ್ಟು ಜ್ಞಾನಿಯಾಗಿರಲಿಲ್ಲ. ಕೆಲವು ವಿಷಯಗಳಲ್ಲಿ ಆತನಿಗಿಂತಲೂ ಆಕೆಗೇ ಹೆಚ್ಚು ಮಾಹಿತಿ ತಿಳಿದಿರುತಿತ್ತು. "ಇವೆಲ್ಲಾ ಎಲ್ಲಿಂದ ತಿಳಕೊಂಡ್ಯೇ?"ಎಂದು ಕೇಳಿದರೆ, ಸಣ್ಣಣ್ಣ ಮನೆಗೆ ತರುತಿದ್ದ ವಾರಪತ್ರಿಕೆಯನ್ನು ಆಕೆ ತೋರಿಸುತಿದ್ದಳು. ವಾರ ಪತ್ರಿಕೆಗಳಲ್ಲಿ ಸಾಹಿತ್ಯ ವಿಷಯಕವಾದ ಲೇಖನಗಳನ್ನೇ ಹೆಚ್ಚು ಆಸಕ್ತಿಯಿಂದ ಓದುತಿದ್ದ ಜಯದೇವನಿಗೆ ತನ್ನ ಚಲಚಿತ್ರಜ್ಞಾನ ಕಡಮೆಯೇ ಎನಿಸುತ್ತಿತ್ತು.

ಅಮ್ಮನಿಗೆ ಹೇಳಿದಂತೆ, ಹೊರಡುವ ತಯಾರಿಯೇ ಮುಖ್ಯವಾಗಿದ್ದುದರಿಂದ ಜಯದೇವ ಆ ಸಂಜೆಯೆ ಬೆಂಗಳೂರಿಗೆ ಹೊರಟನೆ?

ಅದು ನಿಜವಾಗಿರಲಿಲ್ಲ.

ಬೆಂಗಳೂರು ಆತನ ಪ್ರೀತಿಯ ಊರು. ಬೆವರು ಹನಿಗಳನ್ನು ಮೂಡಿಸಿ ಮುಖದ ಬಾಲಮುಗ್ಧತೆಯನ್ನು ಅಳಿಸಿ, ಆತ್ಮಾವಲಂಬನದ ಗಾಂಭೀರ್ಯದ ಒಪ್ಪವಿಟ್ಟ ಮಹಾನಗರ. ಕಾಲು ನಡಿಗೆಯಲ್ಲೇ ಸಹಸ್ರಸಾರೆ ಎಷ್ಟೊಂದು ಬೀದಿಗಳನ್ನು ಆತ ಸುತ್ತಿದ್ದ! ಆತನಿಗೆ ವಿದ್ಯಾದಾನ ಮಾಡಿದ್ದ ಫೋರ್ಟ್ ಹೈಸ್ಕೂಲು-ಇಂಟರ್ ಮೀಡಿಯೆಟ್ ಕಾಲೇಜು; ಪ್ರೀತಿಯ ಅಧ್ಯಾಪಕರು, ಪ್ರಾಧ್ಯಾಪಕರು...ಆ ಸಂಬಂಧಗಳನ್ನೆಲ್ಲ ತೊರೆದು ದೂರದ ಊರಿಗೆ ಹೊರಟು ಹೋಗುವುದು ಸುಲಭವಾಗಿರಲಿಲ್ಲ.

ಆ ಒಂದು ವರ್ಷ ತಾನು ಪಾಠಹೇಳಿಕೊಟ್ಟಿದ್ದ ಎರಡು ಮನೆಗಳ ನಾಲ್ವರು ಹುಡುಗರು. ಆ ರಜಾ ದಿನಗಳಲ್ಲಿ ಪಾಠವಿರೊಲ್ಲ ನಿಜ. ಆದರೂ ಜಯದೇವನನ್ನು ಹುಡುಕಿಕೊಂಡು ಹುಡುಗರು ಆತನ ಕೊಠಡಿಗೆ ಬರುತಿದ್ದರು. ಆ ಹರಟೆ, ಹುಡುಗರೊಡನೆ ಸಂಜೆ ವಾಯುವಿಹಾರ ಅವನಿಗೆ ಪ್ರಿಯವಾಗಿದ್ದುವು.

ಮೊದಲು ಬೆಂಗಳೂರಿಗೆ ಬಂದಾಗ ತಾನು ಅಡುಗೆಯವನಾಗಿದ್ದ ದೂರದ ಸಂಬಂಧಿಕರ ಸಂಬಂಧ ಈಗೇನೂ ಉಳಿದಿರಲಿಲ್ಲ. ಆದರೆ ಹೈಸ್ಕೂಲು ಅಧ್ಯಯನದ ದಿನಗಳಲ್ಲೆ ಜಯದೇವನಿಗೆ ಬೇರೊಂದು ಮನೆಯ ಪರಿಚಯವಾಗಿತ್ತು. ಅದು ಸಹಪಾಠಿ ವೇಣುಗೋಪಾಲನ ಮನೆ. ವೇಣುವಿನ ತಾಯ್ತಂದೆಯರು ತಮ್ಮ ಮಗನ ಸ್ನೇಹಿತನನ್ನು ಮನೆಯವನಾಗಿಯೇ ಕಂಡರು.

ವೇಣುಗೋಪಾಲನ ತಂಗಿ ಸುನಂದಾ....

ಈ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆ ಕಟ್ಟಿ ಆಕೆ ಉತ್ತೀರ್ಣಳಾಗಿದ್ದಳು. ಜಯದೇವನ ತಂಗಿಯ ವಯಸ್ಸೇ ಅವಳಿಗೂ. ಸುರಸುಂದರಿಯಲ್ಲದೆ ಹೋದರೂ ನೋಡಿದವರು ಮತ್ತೆ ನೋಡುವಂತೆ ಮಾಡುವ ಸಾಮರ್ಥ್ಯ ಅವಳಿಗಿತ್ತು. ಆ ಪ್ರೀತಿಯ ಸ್ವರೂಪವೇನೆಂಬುದು ಖಚಿತವಾಗಿ ನಿರ್ಧಾರವಾಗದೇ ಇದ್ದರೂ ಜಯದೇವ ಆಕೆಯನ್ನು ಪ್ರೀತಿಸುತಿದ್ದ.

ಈಗ ಅವರನ್ನು ಬಿಟ್ಟು ಹೋಗುವ ಪ್ರಮೇಯ....

....ಹಿಂದಿನ ರಾತ್ರೆ ರೈಲು ನಿಲ್ದಾಣಕ್ಕೆಂದು ಜಯದೇವ ಜಟಕಾಗಾಡಿ ಹತ್ತಿದ್ದು ವೇಣುಗೋಪಾಲನ ಮನೆಯಿಂದಲೆ. ವೇಣುವೂ ಆತನ ಜತೆಯಲ್ಲಿ ಬಂದಿದ್ದ. ವೇಣುವಿನ ತಂದೆ-ತಾಯಿ ಮತ್ತು ಸುನಂದಾ ಬೀದಿಯವರೆಗೂ ಬಂದು ಜಯದೇವನನ್ನು ಬೀಳ್ಕೊಟ್ಟರು. ಸುನಂದಳ ತುಂಬು ಮುಖ ಮುಗುಳುನಗುತಿತ್ತು. ಕಣ್ಣುಗಳು ಮಾತ್ರ ಆಶ್ರುಭಾರದಿಂದ ಕಿತ್ತು ಬರುತಿದ್ದವು. ಆ ಮನೆಯವರು ತೋರುತಿದ್ದ ಪ್ರೀತಿಯಿಂದಾಗಿ ಮಾತು ಬಾರದೆ ಮೂಕನಾಗಿದ್ದ ಜಯದೇವ, ಸುನಂದಳ ಹೃದಯದೊಳಗಿನ ಆಳಲನ್ನು ಗುರುತಿಸದೆ ಇರಲಿಲ್ಲ.

..............

ಮೋಟಾರು ಬಸ್ಸು ಓಡುತಿತ್ತು. ನಡುವೆ ನಿಂತು ಯಾರನ್ನೋ ಇಳಿಸಿ ಯಾರನ್ನೋ ಹತ್ತಿಸಿಕೊಂಡು ಮುಂದುವರಿಯುತಿತ್ತು. ಆ ಧೂಳೋ ಅಸಾಧ್ಯ. ಜಯದೇವನ ಮೈಯ ಒಂದು ಭಾಗಕ್ಕೆಲ್ಲ ಧೂಳಿನ ಸ್ನಾನವಾಗದೆ ಇರಲಿಲ್ಲ. ಎಂದೋ ಒಮ್ಮೆ ಸುನಂದಾ ಈ ಬಣ್ಣ ಚೆನ್ನಾಗಿದೆ ಎಂದಿದ್ದಳೆಂದು, ಬಿಸ್ಕತ್ತು ಬಣ್ಣದ ಜುಬ್ಬವನ್ನೇ ಜಯದೇವ ಹೊರಡುವಾಗ ಹಾಕಿಕೊಂಡಿದ್ದ. 'ಬಿಳೇ ಜುಬ್ಬ ಹಾಕಿಕೊಳ್ಳದಿದ್ದುದೇ ಮೇಲಾಯಿತೆಂದೂ ಆತ ಈಗ ಸಮಾಧಾನ ಪಟ್ಟುಕೊಂಡ.

ಮತ್ತೆ ಗಾಡಿ ಚಲಿಸಿದಂತೆಯೇ ಯೋಚನೆಗಳು. ಒಂದಕ್ಕೊಂದು ಸಂಬಂಧವಿರಲಿಲ್ಲ. ಸಾವಿರ ತುಂಡುಗಳಿಗೆ ತೇಪೆಹಾಕಿ ಮಾಡಿದಂತಿತ್ತು ಯೋಚನೆಗಳ ಆ ಸುರುಳಿ.

ಓಡುತಿದ್ದ ಗಾಡಿಯನ್ನು ಬೆನ್ನಟ್ಟುತಿದ್ದ ಸೂರ್ಯನ ಕೈಯೇ ಮೇಲಾಯಿತೇನೋ ಎಂಬಂತೆ, ಬಿಸಿಲಿನ ಝಳ ಒಳಗೆ ಕುಳಿತಿದ್ದವರಿಗೆ ತಾಕಿತು, ಜಯದೇವನ ಮೈ ಬೆವರೊಡೆಯಿತು. ಎರಡನೆಯ ಸಾಲಿ ನಲ್ಲಿದ್ದ ಎಳೆಯ ಮಗುವೊಂದು ರುಯ್ಯೋ ಎಂದು ಅಳತೊಡಗಿತು. ಮಾರ್ಗದಲ್ಲಿದ್ದೊಂದು ತಗ್ಗನ್ನು ದಾಟುವ ಗದ್ದಲದಲ್ಲಿ ಮೋಟಾರು ಏರಿ ಇಳಿದಾಗ ಹಿಂದಿನ ಭಾಗದಲ್ಲಿದ್ದವರೊಬ್ಬರು ಯಾರೋ ಹಿಂದೂಸ್ಥಾನೀ ಭಾಷೆಯಲ್ಲಿ ಏನೋ ಕೆಟ್ಟ ಮಾತೆಂದರು. ಇನ್ನೊಬ್ಬರು ಖೋ ಖೋ ಎಂದು ನಕ್ಕರು. ಒಬ್ಬ ಬೀಡಿಯನ್ನು ಬಾಯಿಗಿಟ್ಟ ಕಡ್ಡಿಗೀರಿದ. ಕಂಡಕ್ಟರೆಂದ:

“ಯಾರ್ರೀ ಅದು? ಸೇದ್ಬೇಡ್ರೀ... ಬೋರ್ಡು ಕಾಣೋಲ್ವೇನ್ರಿ?

“ಬೋರ್ಡು!” ಎಂದು ಯಾರೋ ಅಣಕಿಸುವ ಧ್ವನಿಯಲ್ಲಿ ಅಂದರು.

ಇನ್ನೊಬ್ಬ ಸಿಗರೇಟು ಹೊರತೆಗೆದ.

“ಇದೇನು ಸರಕಾರಿ ಬಸ್ಸು ಕೆಟ್ಟೋಯ್ತೆ? ಬೆಂಕಿಪೊಟ್ಣ ಕೊಡ್ರೀ ಇಲ್ಲಿ ಸ್ವಲ್ಪ."

ಬೇಡವೆಂದರೂ ಜಯದೇವನ ಕಿವಿಗಳಿಗೆ ಈ ಮಾತುಗಳೆಲ್ಲ ಬಂದು ತಾಕುತ್ತಿದುವು. ದೇಹಕ್ಕೂ ಮೆದುಳಿಗೂ ಆಯಾಸವಾದಹಾಗೆ ತೋರಿತು. ತೂಡಿಕೆ ಬಂತು...ಅದೆಲ್ಲಾ ನಿಮಿಷ ನಿದ್ದೆ. ಎಚ್ಚರ, ನಿದ್ದೆ, ಎಚ್ಚರ.

ಅಷ್ಟರಲ್ಲೆ ಊರು ಸಮೀಪಿಸಿತು. ಒಂದು ಘಂಟೆಯ ಪ್ರಯಾಣ. ಒಂಭತ್ತೂವರೆ ಆಗಿರಬೇಕು ಆಗ.

ಅಲ್ಲೇ, ಕಲ್ಲಿನ ಹಲಿಗೆಯಮೇಲೆ ಊರಿನ ಹೆಸರನ್ನು ಕೊರೆದು ಬರೆದಿದ್ದರು. ಜಯದೇವ, ಬದುಕಿನ ಹೊಸತೊಂದು ಅಧ್ಯಾಯವನ್ನು ಆರಂಭಿಸಬೇಕಾದ ಊರು. ತಕ್ಕಮಟ್ಟಿಗೆ ವಿಶಾಲವಾಗಿಯೇ ಇದ್ದ ನಿಲ್ದಾಣದಲ್ಲಿ ಬಸ್ ನಿಂತಿತು. ಬರುತ್ತೇನೆಂದು ಯಾರಿಗೂ ಜಯದೇವ ಬರೆದಿರಲಿಲ್ಲ. ಆದರೂ ಬಸ್ಸಿನಿಂದಿಳಿಯುತ್ತ ದೃಷ್ಟಿ ಅತ್ತಿತ್ತ ಓಡಾಡಿತು. ಎಷ್ಟು ನೋಡಿದರೇನು? ಅಪರಿಚಿತ ಊರಿನಲ್ಲಿ ಪರಿಚಿತ ಮುಖ ಎಲ್ಲಿಂದ ಕಾಣಿಸಬೇಕು?

ಜಯದೇವ, ಹಾಸಿಗೆ-ಚೀಲ ಮತ್ತು ತನ್ನ ಉಡುಗೆಯಿಂದ ಧೂಳು ಜಾಡಿಸಿದ. ಆ ನಿಲ್ದಾಣದಲ್ಲೂ ಉಡುಪಿಮಾವನ ಒಂದು ಹೋಟಲಿತ್ತು. ನೀರು ಕೇಳಿ ಇಸಗೊಂಡು ಮುಖ ತೊಳೆದ. ಒಂದು ಕಪ್ ಕಾಫಿ ಕುಡಿದ.

ದಣುವಾರಿದಾಗ ಜಯದೇವ ಕಾಫಿ ಕೊಟ್ಟ ಹುಡುಗನನ್ನು ಕೇಳಿದ;

“ಏನಪಾ, ಇಲ್ಲಿ ಮಾಧ್ಯಮಿಕ ಶಾಲೆ ಎಲ್ಲಿದೆ?”

ಬೆರಗಾದವನಂತೆ ಕ್ಷಣ ಹೊತ್ತು ನಿಂತ ಆ ಹುಡುಗ.

“ಇಲ್ಲೇ ಮೇಲ್ಗಡೆ. ಅರ್ಧ ಫರ್ಲಾಂಗ್ ಕೂಡಾ ಇಲ್ಲ.”

ಅಷ್ಟು ಹೇಳಿಯೂ ಹುಡುಗ ಜಯದೇವನನ್ನು ನೋಡುತ್ತಲೇ ಇದ್ದ.

“ಯಾಕೆ ಹಾಗೆ ನೋಡ್ತೀಯೋ?”

ಹುಡುಗನಿಗೆ ಪೆಚ್ಚು ಪೆಚ್ಚಾಯಿತು.

“ನೀವು ಮೇಷ್ಟೇ ಸಾರ್?”

ಇನ್ನೂ ಮೊದಲ ಪಾಠ ಹೇಳುವುದಕ್ಕಿಲ್ಲ, ಅಷ್ಟರಲ್ಲೇ–

“ಹ್ಯಾಗೆ ಗೊತ್ತಾಯ್ತು ನಿಂಗೆ?”

“ಶಾಲೆ ಎಲ್ಲೀಂತ ನೀವೇ ಕೇಳ್ಳಿಲ್ವೆ? ಹೊಸಮೇಷ್ಟ್ರು ಬರ್ತಾರೇಂತ ಹುಡುಗರೂ ಅಂತಿದ್ರು."

'ಹೊಸ ಮೇಷ್ಟ್ರ'ನ್ನು ಮೊತ್ತಮೊದಲು ನೋಡಿದವನು ತಾನು ಎಂಬ ಹೆಮ್ಮೆಯಿತ್ತು ಆ ಧ್ವನಿಯಲ್ಲಿ.

“ನೀನು ಸ್ಕೂಲಿಗೆ ಹೋಗ್ತೀಯಾ?”

ಹುಡುಗನ ಮುಖ ಒಮ್ಮೆಲೆ ಕಪ್ಪಿಟ್ಟು ಧ್ವನಿ ಕುಂಠಿತವಾಯಿತು.

“ಇಲ್ಲಾ ಸಾರ್...”