ದೂರದ ನಕ್ಷತ್ರ/೨
೨
ತನ್ನ ಸಾಮಾನುಗಳನ್ನು ತಾನೇ ಎತ್ತಿಕೊಂಡು ಜಯದೇವ ಶಾಲೆಯನ್ನು ಸವಿಾಪಿಸಿದ. ಅದು ಮಂಗಳೂರು ಹೆಂಚಿನ ತಗ್ಗು ಗೋಡೆಯ ಹಳೆಯ ಕಟ್ಟಡ.
ಶಾಲೆಗೆ ಹುಡುಗರು ಅದೇ ಆಗ ಬರತೊಡಗಿದ್ದರು. ಅವರೆಲ್ಲರ ಗಮನವನ್ನು ಜಯದೇವ ಸಹಜವಾಗಿಯೇ ಸೆಳೆದ. ಈತ ಯಾರಿರಬಹುದು ಎಂಬ ಕುತೂಹಲ ಹುಡುಗರಿಗೆ. 'ಹೊಸ ಉಪಾಧ್ಯಾಯರು' ಎಂದು ಕೆಲವರೆಂದರೆ, 'ಯಾರೋ ಕಾಲೇಜ್ ವಿದ್ಯಾರ್ಥಿ ಇರಬೇಕು' ಎಂದು ಬೇರೆ ಕೆಲವರು. ಒಬ್ಬಿಬ್ಬರು ಹುಡುಗರು ಮುಂದೆ ಬಂದು, ಜಯದೇವನ ಹಾಸಿಗೆ ಮತ್ತು ಚೀಲಗಳನ್ನೆತ್ತಿಕೊಳ್ಳಲು ಕೈಚಾಚಿದರು. ಆದರೆ ಸ್ವಾವಲಂಬಿ ಜಯದೇವನಿಗೆ ಯಾರ ಸಹಾಯವೂ ಬೇಕಿರಲಿಲ್ಲ. ಬೇರೆ ಕೆಲ ಹುಡುಗರು, ಶಾಲೆಯೊಳಗೆ ಮೂಲೆಯ ಕೊಠಡಿಯಲ್ಲಿ ಏನನ್ನೊ ಬರೆಯುತ್ತ ಕುಳಿತಿದ್ದ ಮುಯ್ಯೋಪಾಧ್ಯಾಯರಿಗೆ,ಅಪರಿಚಿತರೊಬ್ಬರು ಬರುತ್ತಿದ್ದ ಸುದ್ದಿ ತಿಳಿಸಿದರು.
ಮುಖ್ಯೋಪಾಧ್ಯಾಯರೆದ್ದು ಬಂದರು ಬಾಗಿಲ ಬಳಿಗೆ. ವಯಸ್ಸಿನಲ್ಲಿ ತಮಗಿಂತಲೂ ಮೂವತ್ತು ವರ್ಷ ಚಿಕ್ಕವನಂತೆ ತೋರುತ್ತಿದ್ದ ಯುವಕ. ಆತನೇ ತಮ್ಮ ಶಾಲೆಯ ಹೊಸ ಉಪಾಧ್ಯಾಯರೆಂಬುದರಲ್ಲಿ ಅವರಿಗೆ ಸಂದೇಹವಿರಲಿಲ್ಲ.
“ನಮಸ್ಕಾರ, ಬನ್ನಿ!"
–ಎನ್ನುತ್ತ 'ಹೆಡ್ ಮೇಷ್ಟು? ರಂಗರಾಯರು ಮುಗುಳು ನಕ್ಕು ಸ್ವಾಗತ ಬಯಸಿದರು.
ಎರಡು ಕೈಯಲ್ಲೂ 'ಭಾರ'ಗಳಿದ್ದುವು. ಅವುಗಳನ್ನು ಕೆಳಗಿಳಿಸದೆ ಕೈಜೋಡಿಸಿ ನಮಸ್ಕರಿಸುವುದು ಸಾಧ್ಯವಿರಲಿಲ್ಲ, ಆಕಾರಣದಿಂದ ತಲೆಯನ್ನಷ್ಟೆ, ಬಾಗಿಸಿ ಜಯದೇವ “ನಮಸ್ಕಾರ” ಎಂದ.
ಆದರೆ ಅವನ ಮನಸ್ಸು ಒಂದು ಪ್ರಶ್ನೆಕೇಳಿತು : ಇವರು ಯಾರಿರಬಹುದು? ಶುಭ್ರವಾದ ಧೋತರ, ಷರಟು, ಸ್ವಲ್ಪಮಾಸಿದ ಕಂದು ಬಣ್ಣದ ಮುಚ್ಚುಕಾಲರಿನ ಕೋಟು, ಕೆಲವೇ ಕೂದಲುಗಳಿದ್ದ ಬಕ್ಕತಲೆ... ಇವರೇ ಮುಖ್ಯೋಪಾಧ್ಯಾಯರಿರಬಹುದೆ? ಸ್ವತಃ ಮುಖ್ಯೋಪಾಧ್ಯಾಯರೇ ಹೊರ ಬಂದು ತಾವೇ ಮೊದಲು ತನಗೆ ನಮಸ್ಕರಿಸಿದರೆ?
ಆ ಯೊಚನೆಯಿಂದಲೆ ಜಯದೇವನ ಮುಖ ಕೆಂಪಗಾಯಿತು.
“ಇವರ ಸಾಮಾನು ಆಫೀಸು ರೂಮ್ನಲ್ಲಿ ಇಡಪ್ಪ.”
–ಒಬ್ಬ ಹುಡುಗನಿಗೆ ಅವರೇ ಕೊಟ್ಟ ನಿರ್ದೇಶ.
- ಜಯದೇವ ಜುಬ್ಬದ ಜೇಬಿನಿಂದ ಕರವಸ್ತ್ರ ಹೊರತೆಗೆದು ಮುಖ ಒರೆಸಿಕೊಂಡು ಹೇಳಿದ:
"ನಾನು ಬೆಂಗಳೂರಿಂದ ಬಂದಿದೀನಿ.”
“ಗೊತ್ತು ಮಿ. ಜಯದೇವ–ಅಲ್ವೆ? ಅನುಜ್ಞೆಯ ಪ್ರತಿ ಆವತ್ತೆ ಬಂತು.”
“ಹೆಡ್ಮೇಷ್ಟ್ರು–”
“ನಾನೇ, ರಂಗರಾವ್ ಅಂತ. ಒಳಗ್ಬನ್ನಿ ಮಿ. ಜಯದೇವ್.”
ಜಯದೇವ ನಿರೀಕ್ಷಿಸಿದ್ದುದಕಿಂತಲೂ ನೂರುಪಾಲು ಮಿಗಿಲಾಗಿತ್ತು ಮುಖ್ಯೋಪಾಧ್ಯಾಯರು ತೋರಿದ ಆತ್ಮೀಯತೆ. ಆತನ ಹೃದಯ ಪ್ರಸನ್ನವಾಯಿತು. ಪಯಣದ ಯವ ಬಳಲಿಕೆಯೂ ಉಳಿಯಲಿಲ್ಲ.
ಪುಟ್ಟ ಮೇಜು, ಆದರ ಸುತ್ತಲೂ ನಾಲ್ಕು ಬಡಕಲು ಕುರ್ಚಿಗಳು. ಮುಖ್ಯ ಕುರ್ಚಿಯ ಹಿಂದೆ ಗೋಡೆಯ ಮೇಲೆ, ಅವಿಭಕ್ತ ಇಂಡಿಯಾದೇಶದ ಹಳೆಯ ನಕಾಶೆಯೊಂದು [ಭಾರತ ಸ್ವತಂತ್ರವಾಗಿದ್ದರೇನಂತೆ?] ತೂಗಾಡುತಿತ್ತು, ಯಾವು ಯಾವುದೋ ಪುಸ್ತಕಗಳು ತುಂಬಿದೊಂದು ಕಪಾಟ. ಅದರ ಗಾಜುಗಳು ಒಡೆದಿದ್ದುವು. ಮೇಲುಗಡೆ, ರಾಜದಂಡವನ್ನು ಹಿಡಿದ ಪಂಚಮ ಜಾರ್ಜರ ಹಳೆಯ ಬಣ್ಣದ ಚಿತ್ರವಿತ್ತು; ಅದರ ಗಾಜೂ ಒಡೆದಿತ್ತು. ಸಾಂಕೇತಿಕವಾಗಿ ! ಇತ್ತ ಜಯಚಾಮರಾಜರು ಬಾಯ್ ಸ್ಕೌಟು ಆಗಿದ್ದಾಗ ತೆಗೆದ ಭಾವ ಚಿತ್ರ, ಬಾಗಿಲ ಮೇಲುಭಾಗದಿಂದ ಮಹಾತ್ಮಾಗಾಂಧಿಯವರೂ ಜವಹರಲಾಲರೂ ನಗುತ್ತಿದ್ದರು. ಬೆಂಗಳೂರು ಪ್ರೆಸ್ಸಿನ ಕ್ಯಾಲೆಂಡರೊಂದು ಜೂನ್ ತಿಂಗಳನ್ನು ಸೂಚಿಸುತಿತ್ತು.
“ಬನ್ನಿ ಜಯದೇವ್. ಇದೇ ನಮ್ಮ ಆಫೀಸು ರೂಮು. ಟೀಚರ್ಸ್ ರೂಮು ಇದೇ. ಬನ್ನಿ–ಕುಳಿತುಕೊಳ್ಳಿ.”
ಟಿಕ್-ಟಾಕ್ ಟೀಕ್-ಟಾಕ್...ಜಯದೇವ ತಲೆ ಎತ್ತಿ ನೋಡಿದ. ರಾಜಾಧಿರಾಜರ ಮೇಲೆ ಗೋಡೆಯಲ್ಲಿ, ಹಳೆಯಕಾಲದ ಹತ್ತುರೂಪಾಯಿಯ ಜಪಾನೀ ಗೋಡೆ ಗಡಿಯಾರವೊಂದಿತ್ತು. 'ನನ್ನನು ನೀನು ನೋಡಲೇ ಇಲ್ಲ' ಎಂದು ಮುನಿದುಕೊಂಡವರ ಹಾಗೆ ಜಯದೇವನನ್ನೆ ಅದು ನೋಡುತಿತ್ತು.
ಬೆಂಗಳೂರಿನಲ್ಲಿ ಅಂತಹ ನೋಟ ಸಿಗುವುದು ಸಾಧ್ಯವಿರಲಿಲ್ಲ. ಮಾದರಿ ಶಾಲೆಯೆಂದು ಬೋರ್ಡು ತಗಲಿಸಿ, ಒಳಗೆ ಹುಡುಗರನ್ನೆಲ್ಲ ನೆಲದ ಮೇಲೆ ಕುಳ್ಳಿರಿಸಿ ಕಿರಿಚಿಕೊಂಡು ಪಾಠ ಹೇಳುವುದಿರಬಹುದಾದರೂ ಇಲ್ಲಿದ್ದ ಈ ಗಡಿಯಾರ, ಪಂಚಮ ಜಾರ್ಜರು, ಈ ವಾತಾವರಣ...ಇದೊಂದೂ ಬೆಂಗಳೂರಿನಲ್ಲಿ ಹೀಗೆ ಇರಲಿಲ್ಲ.
“ಏನು, ಗಡಿಯಾರ ನೋಡ್ತಿದೀರಾ? ಅದು ಹದಿನೈದು ನಿಮಿಷ ಹಿಂದಿದೆ," ಎಂದರು ಮುಖ್ಯೋಪಾಧ್ಯಾಯರು.
ಜಯದೇವ ಉತ್ತರವೀಯದೆ ಸಣ್ಣನೆ ನಕ್ಕ. ಗಡಿಯಾರ ಒಂದೇ ಎಂದೇನು ? ಇಲ್ಲಿ ಎಲ್ಲವೂ ಹಿಂದಿದ್ದುವು-ಬಲು ಹಿಂದೆ. ಇಲ್ಲಿ ಯಾವುದೂ ಚಲಿಸುತಿದ್ದಂತೆಯೇ ತೋರಲಿಲ್ಲ. ಚಲಿಸಿದರೂ ಆ ಚಲನೆ ಬಲು ನಿಧಾನವಾಗಿತ್ತು.
'ಹೊಸಮೇಷ್ಟ್ರು' ಬಂದ ಸುದ್ದಿ ಶಾಲೆಯಲ್ಲೆಲ್ಲಾ ಹಬ್ಬಿತು. ವಿದ್ಯಾರ್ಥಿಗಳು ಇಲ್ಲದ ನೆಪ ಮಾಡಿಕೊಂಡು ಆಫೀಸು ರೂಮಿನ ಎದುರುಗಡೆಯಿಂದ ಹಾದುಹೋದರು. ಬಾಗಿಲ ಹೊರಗೆ ನಿಂತು ಬಾಗಿಬಾಗಿ ನೋಡಿದರು. ಜಯದೇವನ ಬೆನ್ನಷ್ಟೆ ಕಾಣಿಸುತಿತ್ತು ಆತ ಅತ್ತಿತ್ತ ತಿರುಗಿದನೆಂದರೆ ಮುಖವೂ ಕೂಡಾ... ಬಳೆಗಳ, ಕಿಸಕ್ಕನೆ ನಕ್ಕ, ಸದ್ದು. ಹುಡುಗಿಯರ ಗುಂಪೂ ಅತ್ತಿಂದಿತ್ತ ಹಾದು ಹೋಯಿತು. ಜಯದೇವ ಅವರನ್ನು ನೋಡಿದ: ಹಲವು ಲಂಗಗಳು, ಕೆಲವು ಸೀರೆಗಳು.
ರಂಗರಾಯರು ನಕ್ಕು ನುಡಿದರು.
“ಹೊಸಮೇಷ್ಟ್ರು ಬಂದಿದಾರೇಂತ ಹುಡುಗರೆಲ್ಲಾ ಖುಷೀಲಿದ್ದಾರೆ.”
-ಆದರೆ ನಾಳೆಯ ದಿನ ತಾನು ಪಾಠಹೇಳಲು ತೊಡಗಿದಾಗ, ಹುಡುಗರಿಗೆಲ್ಲಿ ನಿರಾಶೆಯಾಗುವುದೋ ಎಂದು ಜಯದೇವನಿಗೆ ಭಯವಾಯಿತು.
“ಬೆಂಗಳೂರೇ ನಿಮ್ಮ ಸ್ವಂತ ಊರೇನು?”
“ಅಲ್ಲ ಸಾರ್. ನಾನು ಬೆಳೆದಿದ್ದು ಬೆಂಗಳೂರಲ್ಲಿ. ಹುಟ್ಟಿದ್ದು ಕಾನಕಾನಹಳ್ಳಿ-ಕನಕಪುರ.”
“ಹೊಸ ಹೆಸರು! ಗೊತ್ತು ಗೊತ್ತು-ಕೇಳಿದೀನಿ... ಇನ್ನೇನು ಇದ್ದೇ ಇದೆಯಲ್ಲ ಊರೂರು ಸುತ್ತೋ ಕೆಲಸ! ಉಪಾಧ್ಯಾಯ ವೃತ್ತಿ ಅಂದ್ಮೇಲೆ.”
ಆ ಮಾತಿನಲ್ಲಿ ಅಂತಹ ಸುತ್ತಾಟ ಒಳಿತು ಎಂಬ ಭಾವನೆ ಇತ್ತೋ ಅಥವಾ ಉಪಾಧ್ಯಾಯ ವೃತ್ತಿಯ ಹಣೇಬರಹವೇ ಇಷ್ಟು ಎಂಬ ಧ್ವನಿ ಇತ್ತೋ, ಜಯದೇವನಿಗೆ ಸ್ಪಷ್ಟವಾಗಲಿಲ್ಲ. ಆತ ಏನೂ ಪ್ರತ್ಯುತ್ತರ ಕೊಡದೆ ತುಟಿಗಳ ಮೇಲೊಂದು ನಗು ತೇಲಿಸುತ್ತ ಮೌನವಾಗಿ ಕುಳಿತ.
“ಈ ಮೊದಲು ಎಲ್ಲಾದರೂ ಉಪಾಧ್ಯಾಯರಾಗಿದ್ರಾ ಮಿ. ಜಯದೇವ್?"
“ಇಲ್ಲ ಸಾರ್. ಇದೇ ಮೊದಲನೆಯ ಅನುಭವ. ಹುಡುಗರಿಗೆ ಖಾಸಗಿ ಪಾಠ ಹೇಳಿದ್ದು ಎಷ್ಟೋ ಅಷ್ಟೇ.”
“ಅಷ್ಟಿದ್ದರೆ ಸಾಕು. ನಾನು ಉಪಾಧ್ಯಾಯನಾದಾಗ ಆ ಅನುಭವವೂ ನನಗಿರಲಿಲ್ಲ.”
ಧೈರ್ಯತುಂಬುವ ಆ ಸತ್ಯ ಸಂಗತಿ ಪರಿಣಾಮಕಾರಿಯಾಗಿತ್ತು.
ಬಿಳಿಯ ಟೋಪಿ ಧರಿಸಿದ್ದ, ಹದಿಮೂರು ಹದಿನಾಲ್ಕು ವರ್ಷ ಪ್ರಾಯದ, ಚುರುಕಾದ ಹುಡುಗನೊಬ್ಬ ಆಫೀಸು ರೂಮೀನೆದುರು ನಿಂತು ಮುಖ್ಯೋಪಾಧ್ಯಾಯರನ್ನು ಉದ್ದೇಶಿಸಿ, “ ಟೈಮು ಎಷ್ಟು ಸಾರ್? ಫಸ್ಟ್ ಬೆಲ್ ಹೊಡೀಲೆ ಸಾರ್?” ಎಂದು ಕೇಳಿದ. ಗೋಡೆಗಡಿಯಾರವನ್ನು ನೋಡಿ ಸಮಯ ತಿಳಿದುಕೊಳ್ಳಲು ಹುಡುಗರೂ ಸಿದ್ಧರಿರಲಿಲ್ಲ! ರಂಗರಾಯರು, ಎದೆಯತ್ತ ಕೈಒಯ್ದು. ಸರಪಳಿಯನ್ನು ಮುಟ್ಟಿ ಗಡಿಯಾರವನ್ನು ಹೊರಕ್ಕೆಳೆದರು.
“ಇನ್ನು ಐದು ನಿಮಿಷ. ಆ ಮೇಲೆ ಹೋಡೀಪ್ಪಾ.”
ಹುಡುಗ ಆಗ ಗೋಡೆ ಗಡಿಯಾರವನ್ನು ನೋಡಿದ. ಐದು ನಿಮಿಷಗಳ ಎಣಿಕೆಯ ಮಟ್ಟಿಗೆ ಅದನ್ನು ಆತ ನಂಬುವ ಹಾಗಿತ್ತು!
“ಹುಡುಗರು ಒಳ್ಳೆಯವರು. ನಿಮಗೆ ಈ ಜಾಗ ಊರು ಹಿಡಿಸುತ್ತೆ. ಯುವಕರಾದ ಮೇಷ್ಟ್ರನ್ನ ಕಂಡರೆ ಹುಡುಗರಿಗೂ ಇಷ್ಟ.”
“ಏನೋ ಸಾರ್. ನಾನೇ ಶಾಲೆ ಸೇರೋಕೆ ಬಂದ ಹುಡುಗನ ಹಾಗಿದೀನಿ!"
ರಂಗರಾಯರಿಗೆ ನಗುಬಂತು.
“ನಿಜವಾಗಿ ನೋಡಿದರೆ ನಿಮಗಿನ್ನೂ ಓದೋ ವಯಸ್ಸು. ಅಲ್ಲ ಅಂತೀರಾ?
“ಏನ್ಮಾಡೋಣ ಹೇಳಿ? ಕೋರ್ಸ್ ಮುಗಿಸೋಕೆ ಆಗ್ಲಿಲ್ಲ.”
“ಅದಕ್ಕೇನು? ಮುಂದೆ ಪೂರ್ತಿ ಮಾಡುವಿರಂತೆ... ಇಂಟರ್ ಯಾವ ವರ್ಷ ಮಾಡ್ಕೊಂಡ್ರಿ?"
"ಹೋದ ವರ್ಷವೇ ಸಾರ್.”
“ನಾನೂ ಹಾಗೇ ಅಂದ್ಕೊಂಡೆ.”
ಪಾಠಗಳು ಆರಂಭವಾಗುವ ಹೊತ್ತಾದರೂ ಬೇರೆ ಉಪಾಧ್ಯಾಯರ ಸುಳಿವೇ ತೋರದಿದ್ದುದು ಜಯದೇವನಿಗೆ ಸೋಜಿಗವನ್ನುಂಟು ಮಾಡಿತು.
“ಈವರೆಗೂ ಸ್ಟಾಫ್ ನಲ್ಲಿ ಎಷ್ಟು ಜನ ಸಾರ್?”.
"ಇಬ್ಬರು. ನೀವೇ ಹೊಸ ನೇಮಕ. ಇನ್ನು ಮುಂದೆ ಮೂರು ಜನ."
“ಇನ್ನೊಬ್ಬರು ಬಂದಿಲ್ವಲ್ಲಾ -ಅದಕ್ಕೆ ಕೇಳಿದೆ.”
ರಂಗರಾಯರು ಕಿಟಕಿಯಿಂದ ಹೊರನೋಡಿದರು. ಯಾರೂ ಕಾಣಿಸಲಿಲ್ಲ.
“ಬರ್ತಾರೆ. ಬರೋ ಹೊತ್ತಾಯ್ತು.”
ಆ ಮಾತಿನಲ್ಲಿ ಅವ್ಯಕ್ತವಾಗಿ ಇದ್ದ ಬೇಸರ ಜಯದೇವನ ಸೂಕ್ಷ್ಮ ನೋಟಕ್ಕೆ ಒಳಗಾಗದೆ ಹೋಗಲಿಲ್ಲ.
... ಕಿವಿಯೊಡೆಯುವ ಹಾಗೆ ಢೊಂಯ್ ಢೊಂಯ್ ಢೊಂಯ್ ಎಂದು ಗಂಟೆ ಬಾರಿಸಿತು.
ಆ ಸದ್ದು ನಿಂತ ಎರಡು ನಿಮಿಷಗಳಲ್ಲೆ ಸೂಟು ಧರಿಸಿದವರೊಬ್ಬರು ಒಳಬಂದರು. ಬರುತ್ತಲೇ ಜಯದೇವನನ್ನು ಅವರು ನೋಡಿದರು. ಹ್ಯಾಟ್ ತೆಗೆದು ಕಪಾಟದ ಮೇಲಿರಿಸಿದರು. ವಯಸ್ಸು ನಾಲ್ವತ್ತು ಆದ ಹಾಗಿತ್ತು. ನಮಸ್ಕಾರ ಚಮತ್ಕಾರಗಳೊಂದೂ ಇರಲಿಲ್ಲ.
ಜಯದೇವ ಕುತೂಹಲದಿಂದ ಅವರನ್ನೆ ನೋಡಿದ. ಅವರು ಬೀರುವಿ ನೊಳಗಿನಿಂದ ಮೂರು ನಾಲ್ಕು ಪುಸ್ತಕಗಳನೆತ್ತಿಕೊಂಡು ಹೊರಡಲು ಸಿದ್ಧರಾದರು.
ಅದನ್ನು ಗಮನಿಸಿದ ಮುಖ್ಯೋಪಾಧ್ಯಾಯರೆಂದರು:
“ಮಿಸ್ಟರ್ ನಂಜುಂಡಯ್ಯ, ಒಂದ್ನಿಮಿಷ."
ಹೊರಟಿದ್ದ ನಂಜುಂಡಯ್ಯ ತಡೆದು ನಿಂತು ತಿರುಗಿ ನೋಡಿದರು.
“ಇವರು ಮಿಸ್ಟರ್ ಜಯದೇವ್, ನಮ್ಮ ಸ್ಟಾಫಿನ ಹೊಸ ಸದಸ್ಯ... ಇವರು ಮಿಸ್ಟರ್ ನಂಜುಂಡಯ್ಯ. ನಮ್ಮ ಸಹಾಯಕ ಮುಖ್ಯೋಪಾಧ್ಯಾಯರು.”
“ಸಂತೋಷ! " Pleased to meet you !”
–ಎನ್ನುತ್ತ ನಂಜುಂಡಯ್ಯ ಕೈ ಮುಂದಕ್ಕೆ ಚಾಚಿದರು. ಜಯದೇವನೆದ್ದು ಮುಗುಳ್ನಗುತ್ತ ಅವರೊಡನೆ ಕೈಕುಲುಕಿದ.
ನಂಜುಂಡಯ್ಯ ರಂಗರಾಯರತ್ತ ತಿರುಗಿದರು.
"ಅದೇನು, ನನ್ನನ್ನ ಸಹಾಯಕ ಮುಖ್ಯೋಪಾಧ್ಯಾಯ ಮಾಡಿದ್ರಲ್ಲಾ?”
“ತಪ್ಪೆನು ನಂಜುಂಡಯ್ಯ? ಈವರೆಗೆ ಇಬ್ರೆ ಇದ್ವಿ, ನೀವು ಬರೇ ಅಸಿಸ್ಟೆಂಟ್ ಆಗಿದ್ರಿ. ಇನ್ನು ನಾವು ಮೂವರು. ಅಂದಮೇಲೆ ನೀವು ಅಸಿಸ್ಟೆಂಟ್ ಎಚ್. ಎಮ್. ಅಲ್ವೆ?"
“ಸರಿ! ಸರಿ!"
ಅವರಿಬ್ಬರನ್ನೂ ಜಯದೇವ ನೆಟ್ಟ ದೃಷ್ಟಿಯಿಂದ ನೋಡಿದ; ಆ ಸಂಭಾಷಣೆಯನ್ನು ಪೃಥಕ್ಕರಿಸಿದ. ರಂಗರಾಯರ ಮಾತಿನಲ್ಲಿ ಸೂಕ್ಷ್ಮ ವ್ಯಂಗ್ಯವಿದ್ದರೆ, ಅದನ್ನು ತಿಳಿದುಕೊಳ್ಳಲಾರದೆ ಹುಟ್ಟಿದ ಸಮಾಧಾನ ನಂಜುಂಡಯ್ಯನವರ ಮಾತಿನಲ್ಲಿತ್ತು.
ನಂಜುಂಡಯ್ಯ ಆತ್ಮಸಂತೋಷದಿಂದ ನಗುತ್ತಲೇ ಇದ್ದು, ಜಯದೇವನನ್ನು ಮೇಲಿನಿಂದ ಕೆಳಗಿನವರೆಗೂ ದೃಷ್ಟಿ ಹಾಯಿಸಿ ನೋಡಿದರು... ಬಸ್ ಪ್ರಯಾಣದಿಂದ ಮಲಿನವಾದ ಬಟ್ಟೆ... ಶಾಲೆಗೆ ಬರುವಾಗ ಬದಲಾಯಿಸಬೇಕೆಂದು ಕೂಡಾ ತೋರಲಿಲ್ಲವೇನೋ ಆತನಿಗೆ! ... ಕಡುಬಡವನೋ ಏನೋ...
“ನಿತ್ಯಾನಂದ ಸರ್ವೀಸಿನಲ್ಲಿ ಬಂದಿರಾ?"
“ಮೊದಲ್ನೆ ಬಸ್ನಲ್ಲೇ ಬಂದೆ.”
“ಅದೇ ನಿತ್ಯಾನಂದ.”
ನಿತ್ಯವೂ ಆನಂದ ಕೊಡುವ ಬಸ್ಸು! ಯಾರಿಗೊ?
...ನಂಜುಂಡಯ್ಯನ ಮನಸ್ಸಿನಲ್ಲಿದ್ದುದನ್ನು ಊಹಿಸಿಕೊಳ್ಳಲು ಸಮರ್ಥನಾದ ಜಯದೇವ ಹೇಳಿದ.
“ಧೂಳು ತಿಂದುಕೊಂಡೇ ಇಳಿದಿದ್ದೇನೆ. ಅಸಾಧ್ಯಾ ರಸ್ತೆಯಪ್ಪ!”
“ಗೊತ್ತು. ಬೆಂಗಳೂರು ನಗರದ ಜನಕ್ಕೆ ನಮ್ಮ ರಸ್ತೆಗಳು ಹಿಡಿಸೋದಿಲ್ಲ!”
ಆ ಮಾತನ್ನ ವಿಭಜಿಸಿ, ಅದರಲ್ಲಿದ್ದುದು ಇಂಥದೇ ಧ್ವನಿಯೆಂದು ಸುಲಭವಾಗಿ ಹೇಳಲಾಗದಂತಹ ಪರಿಸ್ಮಿತಿ. ಜಯದೇವ ನಕ್ಕು ಸುಮ್ಮನಿದ್ದ. ನಂಜುಂಡಯ್ಯನ ಮಾತಿನಿಂದ ಜಯದೇವನಿಗೆ ಎಲ್ಲಾದರೂ ನೋವಾಗಬಾರದೆಂದು ರಂಗರಾಯರು, ನಂಜುಂಡಯ್ಯ ಆಡಿದುದು ತಮಾಷೆಯು ನುಡಿ ಎಂಬಂತೆ ತಾವೂ ನಕ್ಕರು.
ಎರಡನೆಯ ಸಾರಿ ಗಂಟೆ ಬಾರಿಸಿತು. “ಸ್ವಾಮಿದೇವನೆ ಲೋಕ ಪಾಲನೆ” ಎಂದು ಎಲ್ಲ ಕಂಠಗಳಿಂದಲೂ ಸಾಮೂಹಿಕವಾಗಿ ಪಾರ್ಥನೆ ನಡೆಯಿತು. ಮೂವರು ಅಧ್ಯಾಪಕರು ತಮ್ಮ ಕೊಠಡಿಯಲ್ಲಿ ನಿಂತುಕೊಂಡೇ ಇದ್ದರು. ಹುಡುಗರ ಪ್ರಾರ್ಥನೆ ಮುಗಿಯುತ್ತ ಬಂದೊಡನೆ ನಂಜುಂಡಯ್ಯ ಜಯದೇವನಿಗೆ ಹೇಳಿದರು:
“ಕ್ಲಾಸಿದೆ, ಹೋಗ್ತೀನಿ. ನೀವು ಕೆಲಸ ಸೇರೋದು ನಾಳೇಂತ ತೋರುತ್ತೆ?"
"ಹೌದು ಸಾರ್."
"ಸರಿ ನೋಡೊಣ ಆಮೇಲೆ.”
—ಅಷ್ಟು ಹೇಳಿ ನಂಜುಂಡಯ್ಯ ಗಂಭೀರ ನಡಿಗೆಯಿಂದ ತರಗತಿಗಳಿಗೆ ಹೋದರು.
ತಾನು ಶಾಲೆಯೊಳಗೆ ಮೊದಲ ಬಾರಿ ಕಾಲಿಟ್ಟಾಗ ಮುಖ್ಯೋಪಾಧ್ಯಾಯರ ಮುಖದ ಮೇಲೆ ಕಂಡಿದ್ದ ಪ್ರಸನ್ನತೆಯನ್ನು ಜಯದೇವ ಈಗ ಕಾಣಲಿಲ್ಲ. ಇಲ್ಲಿ ಎಲ್ಲವೂ ಸರಿಯಾಗಿಲ್ಲವೆಂಬುದೇನೋ ಆತನ ಸೂಕ್ಷ ಬುದ್ಧಿಗೆ ಹೊಳೆದು ಹೋಯಿತು. ಅದರಿಂದ ಬೇಸರವಾಯಿತು. ತಾನು ಜತೆಯಲೆ ದುಡಿಯಬೇಕಾದ ಆ ಇಬ್ಬರು ಉಪಾಧ್ಯಾಯರ ವಿಷಯವಾಗಿ ಹೆಚ್ಚು ತಿಳಿಯುವ ಕುತೂಹಲವೂ ಆಯಿತು. ಆದರೆ ಅಂಥದೆಲ್ಲ, ಕೇಳಿ ತಿಳಿದುಕೊಳ್ಳುವ ವಿಷಯಗಳಾಗಿರಲಿಲ್ಲ, ಸೂಕ್ಷ್ಮ ನಿರೀಕ್ಷಣೆಯೊಂದೇ ಅದಕ್ಕಿದ್ದ ಮಾರ್ಗ. ತಾನು ಮಾತಿನಲ್ಲಿ ಜಾಗರೂಕನಾಗಿರಬೇಕು; ಅಪ್ಪಿ ತಪ್ಪಿ ಆಡಬಾರದ್ದನ್ನು ಅನ್ನಬಾರದು-ಎಂದುಕೊಂಡ ಜಯದೇವ.
ಮುಖ್ಯೋಪಾಧ್ಯಾಯರು ಬೀರುವಿನಿಂದ ಒಂದೆರಡು ಪುಸ್ತಕಗಳನ್ನೂ ತಮ್ಮ ಮೇಜಿನೊಳಗಿಂದ ಚಾಕ್ ತುಂಡನ್ನೂ ಎತ್ತಿಕೊಂಡು ಅಂದರು:
“ಜಯದೇವ, ನೀವು ಬಂದಾಗ ಏನನ್ನೂ ಕೇಳಲೇ ಇಲ್ಲ, ಪ್ರಾತರ್ವಿಧಿ ಆಗಿದೆಯೇನು ?
“ಆಯಿತು. ಎರಡುಸಾರೆ. ಈ ಊರಿನ ಹೋಟೆಲು ದರ್ಶನವೂ ಆಯಿತು.”
“ಹಾಗಾದರೆ ಸರಿ. ಇವತ್ತೊಂದು ದಿವಸ ನಮ್ಮನೇಲೆ ಇದ್ದಿಡಿ; ಸಾಯಂಕಾಲವೋ ನಾಳೆಯೋ ಬೇರೆ ಏರ್ಪಾಟು ಮಾಡೋಣ. ಸಧ್ಯಃ ಮೂರು-ನಾಲ್ಕನೆ ತರಗತಿ ಹುಡುಗರ ಹಾಜರಿ ತಕ್ಕೊಂಡು ಒಂದಿಷ್ಟು ಲೆಕ್ಕ ಕೊಟ್ಟು ಬರ್ತೀನಿ. ಆ ಮೇಲೆ ಮನೆಗೆ ಹೋಗೋಣ.”
“ಆಗಲಿ ಸಾರ್."
ಒಬ್ಬನೇ ಉಳಿದ ಮೇಲೆ ಜಯದೇವ ಮತ್ತೊಮ್ಮೆ ಸೂಕ್ಷ್ಮವಾಗಿ ಆ ಕೊಠಡಿಯಲ್ಲಿದುದೆಲ್ಲವನ್ನೂ ಪರೀಕ್ಷಿಸಿದ. ಅದಿನ್ನು ತನ್ನ ಕೊಠಡಿಯೂ ಹೌದು... ಜಯದೇವ ಎದ್ದು, ಅತ್ತಿತ್ತ ಶತಪಥ ತಿರುಗಿದ. ಮೇಜಿನ ಮೇಲಿದ್ದ ಪುಸ್ತಕಗಳನ್ನು-ಚೆಲಾಪಿಲ್ಲಿಯಾಗಿಯೇ ಹರಡಿದ್ದ ಹಲವನ್ನು ಒಂದರ ಮೇಲೊಂದಾಗಿ ಓರಣವಾಗಿ ಇರಿಸಿದ. ಆ ಕಪಾಟದ ಕೆಳಭಾಗ ಶಾಲೆಯ ಪುಸ್ತಕಭಂಡಾರವೂ ಆಗಿತ್ತು, ಅಲ್ಲಿ ನೂರಿನ್ನೂರು ಕನ್ನಡ ಪುಸ್ತಕಗಳಿದ್ದವು. ಅವು ಕೂಡಾ ನೋಡಿಕೊಳ್ಳುವವರಿಲ್ಲದೆ ಅನಾಥವಾಗಿದ್ದವು. ಬೇರೊಂದು ಪುಸ್ತಕ ಭಂಡಾರ ಒಳಗಿದೆಯೇನೋ' ಎನ್ನಿಸಿತು. ಆದರೆ ಆ ಬಡ ಶಾಲೆ-ಆತನಿಗೆ ತಿಳಿಯದೆ? 'ಈ ಕೊಠಡಿಯೇ ಶಾಲೆಯ ಸಕಲ ಸಂಪತ್ತಾಗಿರಬೇಕು.” ಶಾಲೆಗೊಂದು ಒಳ್ಳೆಯ ಪುಸ್ತಕ ಭಂಡಾರವಿಲ್ಲವೆನ್ನುವುದು ಖೇದದ ವಿಷಯವೇ. ಆದಷ್ಟು ಬೇಗನೆ ಒಳ್ಳೆ ಪುಸ್ತಕಗಳ-ಹೊಸ ಪುಸ್ತಕಗಳ-ಸಂಖ್ಯೆ ಹೆಚ್ಚಿಸಬೇಕು. ಮುಖ್ಯೋಪಾಧ್ಯಾಯರಿಗೆ ಬಿಡುವಿಲ್ಲ ವೇನೋ. ನಂಜುಂಡಯ್ಯನವರು-ಅವರಿಗೆ ಆಸಕ್ತಿಯೇ ಇಲ್ಲವೇನೋ. ಹಾಗಿದ್ದರೆ ತಾನಾದರೂ ಪುಸ್ತಕಭಂಡಾರವನ್ನು ನೋಡಿಕೊಳ್ಳುವ ಕೆಲಸ ಮಾಡಬೇಕು....
ಕಿಟಕಿಯ ಬಳಿ ನಿಂತು ಜಯದೇವ ಹೊರಕ್ಕೆ ನೋಡಿದ. ಸ್ವಲ್ಪದೂರದಲ್ಲೇ ಊರಿನ ಒಂದೇ ಬೀದಿ ಮಲಗಿತ್ತು. ಧೂಳು ಮುಚ್ಚಿತ್ತು ಅದರ ಮೈಯನ್ನು. ಜನಸಂಚಾರವೇ ಇರಲಿಲ್ಲ. ಅಕ್ಕಪಕ್ಕದಲ್ಲಿ ಕೆಲವು ಅಂಗಡಿಗಳಿದ್ದವು. ಬೀದಿಯಲ್ಲಿ ಒಂಟಿಎತ್ತಿನ ಗಾಡಿಯೊಂದು ನಿಧಾನವಾಗಿ ಚಲಿಸುತಿತ್ತು. ಬಿಸಲಿನ ಮೌನವನ್ನು ಮೆಲ್ಲನೆ ಸೀಳಿಕೊಂಡು ಆ ಗಾಡಿಯ 'ಗಡಕ್, ಗಜಲ್ ಗಡಕ್ ಗಜಲ್' ಸಪ್ಪಳ, ಜಯದೇವನ ಕಿವಿಗೂ ಬಂದು ತಟ್ಟುತಿತ್ತು.
ಈ ಶಾಲೆಗೆ ಸ್ವಂತ ಆಟದ ಬಯಲೇ ಇಲ್ಲವೇನೋ. ಸುತ್ತಮುತ್ತಲೂ ಬೇಕಷ್ಟು ಖಾಲಿ ಜಾಗವಿರುವ ಈ ಊರಿನಲ್ಲೂ ಆಟದ ಬಯಲು ಇಲ್ಲವೆಂದರೆ!... ಜಯದೇವನೇನೂ ಪಂದ್ಯಾಟದ ಪಟುವಾಗಿರಲಿಲ್ಲ. ಆಟದ ಉತ್ಸಾಹವನ್ನೆಲ್ಲ ಬಾಲ್ಯದ ಕಡು ಬಡತನ ಅಳಿಸಿ ಬಿಟ್ಟಿತ್ತು. ಆಟದ ಬಯಲಿನಲ್ಲಿ ಮನಸ್ಸನ್ನ ಉಲ್ಲಾಸವಾಗಿಡಲು ಆಸ್ಪದವಿಲ್ಲದೆ ಆತ, ಕತೆ ಕಾದಂಬರಿಗಳ ಪಾತ್ರಗಳೊಡನೆ ಬೆರೆತು ಅವರ ಸುಖದುಃಖಗಳಲ್ಲಿ ಪಾಲುಗಾರನಾಗುತಿದ್ದ. ಹೈಸ್ಕೂಲಿನಲ್ಲಿದ್ದಾಗಲೇ ಪಠ್ಯದ್ದಲ್ಲದ ಬೇರೆ ಪುಸ್ತಕಗಳನ್ನು ಓದುವ ಹುಚ್ಚು ಅವನಿಗೆ ಬಲವಾಗಿ ಅಂಟಿಕೊಂಡಿತ್ತು. ಒಮ್ಮೆ ಓದುವುದರಲ್ಲೇ ತನ್ಮಯನಾದುದರಿಂದ ಅನ್ನ ಸೀದು ಹೋಗಿತ್ತು. ಮತ್ತೊಮ್ಮೆ, ಹುಳಿಗೆ ಎರಡು ಸಾರೆ ಉಪ್ಪುಹಾಕಿದ್ದ. ಆಗ ಮನೆಯೊಡತಿಯೂ ಯಜಮಾನರೂ ಅವನನ್ನು ಹೀನಾಯವಾಗಿ ಬಯ್ದಿದ್ದರು. ಹತ್ತುಘಂಟೆಗೇ ಮನೆಯ ದೀಪಗಳನ್ನೆಲ್ಲ ಆರಿಸುತಿದ್ದುದರಿಂದ ರಾತ್ರೆ ಓದಲಾಗುತಿರಲಿಲ್ಲ... ಆ ಪರಿಸ್ಮಿತಿ ಬದಲಾದುದು ಜಯದೇವ ಕಾಲೇಜು ಸೇರಿದ ಮೇಲೆ ಮಾತ್ರ... ಪರೀಕ್ಷೆಯ ಸಮಯದಲ್ಲೆಲ್ಲ ವೇಣುಗೋಪಾಲನೊಡನೆ ಆತನ ಮನೆಯಲ್ಲೆ ಜತೆ-ಅಭ್ಯಾಸ, ಆಮೇಲೂ ವೇಣುಗೋಪಾಲ ಅಂದಿದ್ದ:
“ನಿನ್ನ ಸಾಹಿತ್ಯ ಪುಸ್ತಕ ಓದೋಕೆ ಈ ಮನೆ ಅನುಕೂಲವಾಗಿದೆ. ಇಲ್ಲಿಗೇ ಬಂದ್ಬಿಡಯ್ಯ."
ಸುನಂದಾ ಧ್ವನಿಗೂಡಿಸಿದ್ದಳು:
"ಹೂಂ ಜಯಣ್ಣ. ನೀವು ಇಲ್ಲಿಗ್ಬಂದ್ರೆ ನಮ್ಮಣ್ಣನೂ ಕಾದಂಬರಿ ಓದೋಕೆ ಕಲಿತ್ಕೋತಾನೆ."
ಸುನಂದಾ–ನಾಲ್ಕೈದು ವರ್ಷಗಳ ಹಿಂದೆ ತನಗೆ ಪರಿಚಯವಾದ ಪುಟ್ಟ ಹುಡುಗಿಯಲ್ಲ ಅವಳೀಗ...ವೇಣುವಿನಂತೆ ಆಕೆಯೂ ತನ್ನನ್ನು ಜಯಣ್ಣನೆಂದೇ ಕರೆಯುತಿದ್ದಳು. ಜಯಣ್ಣ ಎನ್ನುವ ಪದಕ್ಕೆ ವಿಶೇಷ ಅರ್ಥವೇನಾದರೂ ಇತ್ತೆ? ಚಂದ್ರಣ್ಣ, ಪುಟ್ಟಣ್ಣ, ರಾಜಣ್ಣರಿದ್ದ ಹಾಗೆ ತಾನೂ ಒಬ್ಬ ಅಣ್ಣ...ಆಕೆ ತನ್ನ ತಂಗಿಯಷ್ಟೇ ಯಾಕಾಗಬಾರದು? ಆವರೆ ಅದು ಹೇಗೆ ಸಾಧ್ಯ?... ಸುನಂದಾ...
ಅದರ ಬದಲು ಬೇರೇನನ್ನಾದರೂ ಯೋಚಿಸಲೆತ್ನಿಸಿದ ಜಯದೇವ. ಸಾಮಾನು ಹೇರಿಕೊಂಡು ಲಾರಿಯೊಂದು ಊರಮಾರ್ಗವಾಗಿ ಹಾದು ಹೋಯಿತು ಧೂಳೆಬ್ಬಿಸುತ್ತಾ...ಇಲ್ಲಿ ಪೌರಸಭೆ ಇದೆಯೋ ಇಲ್ಲವೋ. ಇರುವ ಒಂದೇ ಒಂದು ಮುಖ್ಯ ರಸ್ತೆಗೆ ಇಲ್ಲೇ ಅರ್ಧ ಫರ್ಲಾಂಗಿನಷ್ಟು ಉದ್ದಕ್ಕಾದರೂ ಡಾಮರು ಯಾಕೆ ಹಾಕಬಾರದು?... ಹುಡುಗಿಯರು... ವಿದ್ಯಾರ್ಥಿನಿಯರೂ ಇದ್ದಾರೆ ಈ ಶಾಲೆಯಲ್ಲಿ. ಸಹವಿದ್ಯಾಭ್ಯಾಸ ಇಂತಹ ಊರಲ್ಲಿರುವುದು ಒಂದು ರೀತಿಯ ಪ್ರಗತಿಯೇ ಸರಿ.
"ಮಿಸ್ಟರ್ ಜಯದೇವ್!"
ಸರಣಿಕಡಿದು ಯೋಚನೆಗಳು ಚೆಲ್ಲಾಪಿಲ್ಲಿಯಾದುವು. ಬೆಚ್ಚಿಬಿದ್ದು ಜಯದೇವ ತಿರುಗಿ ನೋಡಿದ. ರಂಗರಾಯರು ಮುಗುಳು ನಗುತ್ತ ಬಾಗಿಲಲ್ಲಿ ಸಿಂತಿದ್ದರು.
"ಏನು ಕಿಟಕಿ ಹತ್ತಿರ ನಿಂತು ಊರು ನೋಡ್ತಾ ಇದೀರಲ್ಲ? ಹೇಳಿ, ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ?"
ಅದು 'ಮೈಸೂರು ಮಲ್ಲಿಗೆ'ಯ ಒಂದು ಸಾಲು.. ಮುಖ್ಯೋಪಾಧ್ಯಾಯರ ಸಾಹಿತ್ಯಜ್ಞಾನವನ್ನೂ ರಸಿಕತೆಯನ್ನೂ ಕಂಡು ಜಯ್ತುದೇವನಿಗೆ ಸಂತೋಷವಾಯಿತು.
"ಯಾವುದು ಚೆಂದ ಅನ್ನೋದು ನೋಡುವ ದೃಷ್ಟಿ ಮೇಲಿದೆ ಸಾರ್."
"ಅದು ನಿಜ.... ಈಗ ಬನ್ನಿ, ಮನೆಗೆ ಹೋಗೋಣ."
ರಂಗರಾಯರ ಹಿಂದೆಯೆ ಇಬ್ಬರು ಹುಡುಗರಿದ್ದು, ಜಯದೇವನ ಸಾಮಾನುಗಳನ್ನು ಅವರು ಎತ್ತಿಕೊಂಡರು.
... ... ...ಕೂಗಳತೆಯ ದೂರದಲ್ಲೆ ಇತ್ತು ಮುಖ್ಯೋಪಾಧ್ಯಾಯರ ಮನೆ. ಹೊರಗೆ ಹಿತ್ತಿಲು. ಗಾಳಿ ಬೆಳಕು ಓಡಾಡುವ ಕಿಟಕಿಗಳು. ಮೇಲೆ ಹೆಂಚು ಹೊದಿಸಿತ್ತು. ಮನೆಯ ಮುಂದೆ ರಂಗೋಲೆ ಬಿಡಿಸಿದ್ದರು. ನೀರವವಾಗಿ ಶಾಂತವಾಗಿ ಮನಸಿಗೆ ನೆಮ್ಮದಿಯನ್ನುಂಟುಮಾಡುವ ಹಾಗಿತ್ತು ವಾತಾವರಣ.
“ಸಾವಿತ್ರೀ!"
ರಂಗರಾಯರು ಕರೆದರು. ಬಂದು ಬಾಗಿಲು ತೆರೆದಾಕೆ ಮಧ್ಯಮ ವಯಸ್ಸಿನ ಸ್ತ್ರೀ. ತಲೆಗೂದಲು ಅರ್ಧಕ್ಕರ್ಧ ಬಿಳಿಯಾಗಿತ್ತು. ನೋಡಿದವರಿಂದೆಲ್ಲಾ ಗೌರವವನ್ನು ಅಪೇಕ್ಷಿಸುವ ಭಾವವಿತ್ತು. ವಯೋಭಾರದಿಂದ ತುಂಬಿಕೊಂಡಿದ್ದ ಆ ಮುಖದ ಮೇಲೆ.
“ನಮ್ಮ ಹೊಸ ಮೇಷ್ಟ್ರು ಬಂದಿದ್ದಾರೆ ಸಾವಿತ್ರಿ, ಕರಕೊಂಡ್ಬಂದಿದೇನೆ.”
ಆಕೆ ಮನೆಯ ಯಜಮಾನಿತಿ ಎನ್ನುವುದು ಜಯದೇವನಿಗೆ ಖಚಿತವಾಯಿತು. ಯಜಮಾನಿತಿ ಸ್ವಲ್ಪ ಸಂಕೋಚದ ದೃಷ್ಟಿಯಿಂದಲೇ ತಮ್ಮ ಗಂಡನ ಭುಜದ ಮೇಲಿಂದ ಇಣಿಕಿ ನೋಡಿದರು. ವಿದ್ಯಾರ್ಥಿಯ ಹಾಗೆಯೇ ಇದ್ದ ಆ ಯುವಕ... ಅವರ ಮೊದಲನೆಯ ಹುಡುಗ ಗೋಪಣ್ಣನಿಗಿಂತಲೂ ಚಿಕ್ಕವನು...ಆಕೆ ಮುಗುಳ್ನಕ್ಕಳು.
ಮನೆಯ ಒಳಗೂ ಅಷ್ಟೇ. ಗೋಡೆಗೆ ಸುಣ್ಣ ಬಳೆದಿತ್ತು. ಹಜಾರದಲ್ಲಿದ್ದುದೊಂದೇ ದೇವರ ಪಠ—ಸರಸ್ವತಿಯದು. ಆದರೆ ಸುತ್ತಲೂ ಕಟ್ಟುಹಾಕಿದ್ದ ಭಾವಚಿತ್ರಗಳಿದ್ದವು -ಕೆಲವು ಹೊಸತು, ಕೆಲವು ಮಾಸಿದುವು. ಗಾಂಧೀಜಿಯ ಬಣ್ಣದ ಚಿತ್ರವಿತ್ತು. ಕಾಳಿಂಗನನ್ನು ಮರ್ದಿಸುತ್ತಿದ್ದ ಕೃಷ್ಣನ ಚಿತ್ರ ಹೊತ್ತ ತಾರೀಖುಪಟ್ಟಿಯೊಂದಿತ್ತು.
ಹುಡುಗರು, ಜಯದೇವನ ಹಾಸಿಗೆಯನ್ನೂ ಚೀಲವನ್ನೂ ಕೆಳಕ್ಕಿರಿಸಿ ಶಾಲೆಗೆ ವಾಪಸು ಹೋದರು.
ಹಜಾರದಲ್ಲಿದ್ದ ಕುರ್ಚಿಯತ್ತ ಬೊಟ್ಟುಮಾಡಿ ರಂಗರಾಯರೆಂದರು:
“ಕೂತಿರಿ ಜಯದೇವ್, ಈಗ ಬಂದೆ.”
“ಆಗಲಿ ಸಾರ್, ಏನೂ ಪರವಾಗಿಲ್ಲ.”
ರಾಯರು ಸ್ನಾನದ ಮನೆಯ ವ್ಯವಸ್ಥೆ ಮಾಡಿಬರಲೆಂದು ಒಳ ಹೋದರು. ಜಯದೇವ ಸೊಂಟದ ಮೇಲೆ ಕೈ ಇಟ್ಟು ಗೋಡೆಗೆ ತೂಗ ಹಾಕಿದ್ದ ಭಾವಚಿತ್ರಗಳನ್ನು ನೋಡುತ್ತ ನಿಂತ. ಉಪಾಧ್ಯಾಯರ ಶಿಕ್ಷಣ ಕೇಂದ್ರ... ಯಾವುದೋ ಶಾಲೆಯ ವಾರ್ಷಿಕೋತ್ಸವ... ಇನ್ನೊಂದು ವಿದಾಯ ಸತ್ಕಾರಕೂಟ....ರಂಗರಾಯರು ಹೆಂಡತಿಯೊಡನೆ ಕುಳಿತಿದ್ದ ಕುಟುಂಬ ಚಿತ್ರವೊಂದು... ಅದರಲ್ಲಿ ತನ್ನ ಸಮವಯಸ್ಕರಂತಿದ್ದ ಇಬ್ಬರು ಹುಡುಗರೂ ಒಬ್ಬ ಹುಡುಗಿಯೂ ನಿಂತಿದ್ದರು...
ಹಿಂತಿರುಗಿ ಬಂದ ರಂಗರಾಯರು, ಜಯದೇವ ಭಾವಚಿತ್ರಗಳನ್ನು ನೋಡುತ್ತಲಿದ್ದುದನ್ನು ಕಂಡು ನಕ್ಕರು.
“ಆಗಲೇ ನಮ್ಮ ಸಂಸಾರದ ಪರಿಚಯ ಮಾಡ್ಕೋತಾ ಇದೀರಿ ಅಲ್ವೆ?” ಅವರೂ ಜಯದೇವನ ಸಮೀಪಕ್ಕೆ ಬಂದರು.
“ನೋಡಿ ಈ ಚಿತ್ರ. ಇವನು ನಮ್ಮ ದೊಡ್ಡ ಹುಡುಗ ಗೋಪಾಲ ಕೃಷ್ಣ, ಬಿ.ಎಸ್.ಸಿ. ಮಾಡಿದಾನೆ. ಭದ್ರಾವತಿ ಕಾರ್ಖಾನೇಲಿ ಕೆಲಸ ಸಿಕ್ಕಿದೆ. ಇವನು ರಾಮಣ್ಣ, ಎಸ್.ಎಸ್.ಎಲ್.ಸಿ. ಆದ್ಮೇಲೆ ಮೆಡಿಕಲ್ ಸ್ಕೂಲಿಗೆ ಹಾಕಿದೀನಿ. ಬೆಂಗಳೂರಲ್ಲಿ ಓದ್ತಿದಾನೆ. ಇವಳು ನಮ್ಮ ಹುಡುಗಿ ಸರೋಜಾ, ಹೋದ ವರ್ಷ ಮದುವೆಯಾಯ್ತು. ಹುಡುಗ ಬಿ. ಇ.ಮಾಡ್ಕೊಂಡಿದಾನೆ. ಬೆಂಗಳೂರಲ್ಲಿ ಚೀಫ್ ಇಂಜಿನಿಯರ ಆಫೀಸ್ನಲ್ಲಿ ಕೆಲಸ. ಸರೋಜಾನೂ ಅಲ್ಲೇ ಇದಾಳೆ ಮಾವನ್ಮನೇಲಿ.”
ತಾನೂ ಏನಾದರೂ ಅನ್ನಬೇಕೆಂದು ಜಯದೇವನೆಂದ:
“ನಿಮ್ಮ ಎರಡ್ನೇ ಮಗನೂ ಅಳಿಯನ ಮನೇಲೆ ಇದಾರೇನೊ ?
“ಇಲ್ಲವಪ್ಪ, ಅದೆಲ್ಲಾ ಓದೋಕೆ ಅನುಕೂಲವಾಗಿರೊಲ್ಲ ಅಂತ ಹಾಸ್ಟೆಲ್ನಲ್ಲೆ ಇರಿಸಿದೀನಿ."
“ಅದೂ ನಿಜವೆನ್ನಿ. ಮೆಡಿಕಲ್ ಸ್ಕೂಲ್ನಲ್ಲಿ ಓದೋದು ಜಾಸ್ತಿ ಇರತ್ತೆ.”
“ಎಂ.ಬಿ.ಬಿ.ಎಸ್. ಓದಿಸ್ಬೇಕೂಂತಾನೇ ಇದ್ದೆ. ಆದರೆ ಅದಕ್ಕೆ ಇನ್ನೆರಡು ವರ್ಷ ಕಾಲೇಜ್ನಲ್ಲಿ ಓದ್ಬೇಕು. ಆಮೇಲೂ ಕೂಡಾ ಸೀಟು ಸಿಗುತ್ತೆ ಅನ್ನೋ ಭರವಸೆ ಏನು?"
“ಸರಿಯೆ. ಆದರೆ ಎಲ್ಲರೂ ಬೇರೆ ಬೇರೆ ಲೈನೇ ಹಿಡಿದಿದ್ದಾರಲ್ಲಾ ? ಉಪಾಧ್ಯಾಯವೃತ್ತಿ ಯಾರಿಗೂ ಇಷ್ಟವಾಗ್ಲಿಲ್ವೇನೊ ?"
ರಂಗರಾಯರು ನಕ್ಕರು. ಸ್ವಲ್ಪ ಹೊತ್ತು ಉತ್ತರವನ್ನೇ ಕೊಡಲಿಲ್ಲ, ಆ ಮೇಲೆ ನಿಧಾನವಾಗಿ ಅಂದರು:
“ನಿಮ್ಮ ಹತ್ತಿರ ಆ ವಿಷಯ ಹೇಳದೆ ಇರೋದೇ ಮೇಲು ಅನ್ನಿಸುತ್ತೆ. ಆದರೆ ಹಾಗೆ ಮಾಡೋದೂ ತಪ್ಪಾಗುತ್ತೇನೋ! ಜಯದೇವ, ನನ್ನ ಮಕ್ಕಳು ಯಾರೂ ಉಪಾಧ್ಯಾಯರಾಗಿ ಸಂಕಟ ಅನುಭವಿಸ್ಬಾರ್ದು ಅನ್ನೋದು ನನ್ನ ಅಪೇಕ್ಷೆ.”
ಉಗುಳು ಗಂಟಲಲ್ಲಿ ತೊಡಕಾಗಿ ನಿಂತ ಜಯದೇವನ ಮುಖಬಾಡಿತು.
“ಯಾಕೆ ಹಾಗಂತೀರಾ?”
“ಇವತ್ತು ಬೇಡಿ ಆ ಮಾತು. ಮುಂದೆ ಯಾವತ್ತಾದರೂ ಹೇಳ್ತೀನಿ.”
ರಂಗರಾಯರ ನೋವನ್ನು ತನ್ನದಾಗಿಮಾಡಿ ಆ ಕಹಿ ಉಗುಳನ್ನು ಜಯದೇವ ನುಂಗಿದ.
ಎಲ್ಲ ಭಾವಚಿತ್ರಗಳಿಗಿಂತಲೂ ಎತ್ತದಲ್ಲಿದ್ದ ಮಸಕಾಗಿದ್ದ ಇನ್ನೊಂದು ಚಿತ್ರವನ್ನು ರಂಗರಾಯರು ತೋರಿಸಿದರು.
“ಅದನ್ನು ನೋಡಿದಿರಾ ?”
ಜಯದೇವನಿಗೆ ಸ್ಪಷ್ಟವಾಗಿ ಏನೂ ಕಾಣಿಸುತ್ತಿರಲಿಲ್ಲ.
ರಂಗರಾಯರು ಆ ಭಾವ ಚಿತ್ರವನ್ನು ಮೊಳೆಯಿಂದ ಕೆಳಕ್ಕೆ ತೆಗೆದರು.
"ಗಾಂಧೀಜಿ!"
“ಹೌದು, ಅವರು ನಂದಿಬೆಟ್ಟಕ್ಕೆ ಬಂದಿದ್ದಾಗ ತೆಗೆದದ್ದು... ಸರಿಯಾಗಿ ನೋಡಿ, ನಿಮ್ಮ ಗುರಿತಿನವರು ಯಾರಾದರೂ ಇದಾರೇನೋ?”
ಜಯದೇವ ಆ ಗುಂಪಿನಲ್ಲಿ ರಂಗರಾಯರನ್ನು ಹುಡುಕಿದ. ಎಲ್ಲೂ ಕಾಣಿಸಲಿಲ್ಲ.
ರಂಗರಾಯರು ಗುಂಪಿನಲ್ಲಿದ್ದ ಒಂದು ವ್ಯಕ್ತಿಯತ್ತ ಬೊಟ್ಟುಮಾಡಿದರು.
“ಇವರು ಯಾರಹಾಗಿದಾರೆ ಹೇಳಿ."
ಅಡ್ಡಪಂಚೆ, ಷರಟು, ತಲೆಯ ಮೇಲೆ ಗಾಂಧಿ ಟೋಪಿ. ಹುಡುಗನ ಮುಖ, ಜಯದೇವನಿಗೆ ಗುರುತು ಸಿಕ್ಕಿತು; ಆತ ರಂಗರಾಯರತ್ತ ನೋಡಿ ನಕ್ಕ.
ಅಷ್ಟರಲ್ಲಿ ಅವರ ಹೆಂಡತಿ ಕಂಚಿನ ಎರಡು ಲೋಟಗಳಲ್ಲಿ ನಿಂಬೆಹಣ್ಣಿನ ಪಾನಕ ತಂದಿಟ್ಟರು....
... ಜಯದೇವ ಸ್ನಾನಮುಗಿಸಿ ಬಂದ.
ಹಜಾರದಲ್ಲೇ ಮುಖ್ಯೋಪಾಧ್ಯಾಯರೂ. ಜಯದೇವನೂ ಊಟಕ್ಕೆ ಕುಳಿತರು.
ಬಡಿಸುತ್ತ ಸಾವಿತ್ರಮ್ಮ ಗಂಡನನ್ನ ಉದ್ದೇಶಿಸಿ ಕೇಳಿದರು :
“ಮದುವೆ ಆಗಿದೆಯೇ !"
“ಮದುವೆಯಾಗಿ ಮೂರು ಮಕ್ಕಳ ತಾಯಿಯಾದ್ಮೇಲೂ ನನ್ನ ಹೀಗೆ ಕೇಳ್ತೀಯಲ್ಲೆ!”
“ಹೋಗಿ ನಿಮ್ಮನ್ನಲ್ಲ ಕೇಳಿದ್ದು.”
ಗಂಡ ಹೆಂಡಿರ ಹುಸಿಮುನಿಸಿನ ಆ ಸಂವಾದ ಸ್ವಾರಸ್ಯಕರವಾಗಿ ಜಯದೇವನಿಗೆ ತೋರಿತು. ಆತ ನಗುತ್ತ ಹೇಳಿದ:
*ಇನ್ನೂ ಇಲ್ಲವಮ್ಮ.”
ಆ ತಾಯಿ ಕೇಳಿದರು:
“ಬೆಂಗಳೂರೇನ ಊರು ?”
"ಹೂ೦. ಹಾಗೆಂತ್ಲೇ ಅನ್ನಬೇಕು.”
“ಹಾಗಾದರೆ ನಮ್ಮ ರಾಮಣ್ಣನೂ ಸರೋಜಾ ಗಂಡನೂ ನಿಮಗೆ ಗೊತ್ತೋ ಏನೋ ?”
ರಂಗರಾಯರು ನಕ್ಕರು.
“ನೀನೂ ಸರಿ. ಬೆಂಗಳೂರು ನೋಡದವರ ಹಾಗೆ ಮಾತಾಡ್ತಿಯಲ್ಲೇ! ನಿನ್ನ ಮಗ, ಮಗಳು, ಅಳಿಯ ಎಲ್ಲಿದ್ರೂ ಎಲ್ಲರಿಗೂ ಗೊತ್ತಾಗೋ ಮಹಾಪುರುಷರೂಂತ ತಿಳಿಕೊಂಡ್ಯಾ?"
ಸಾವಿತ್ರಮ್ಮನ ಮುಖ ಪೆಚ್ಚಾಯಿತು. ತಾಯಿಯಿಲ್ಲದ ಜಯದೇವ,ಸಾವಿತ್ರಮ್ಮನ ಪಕ್ಷವನ್ನೇ ವಹಿಸಿದ.
“ಗೊತ್ತಾಗದೆ ಏನು? ನಾನೇ ಪರಿಚಯ ಮಾಡಿಕೊಂಡಿಲ್ಲ, ಅಷ್ಟೆ.ಇನ್ನೊಂದ್ಸಲ ಹೋದಾಗ ವಿಳಾಸ ತಗೊಂಡು ಹೋಗ್ತೀನಿ"
ಆ ಮಾತು ಕೇಳಿ ಸಾವಿತ್ರಮ್ಮನಿಗೆ ಬಲು ಸಂತೋಷವಾಯಿತು. ಅವರು ಮೈಮರೆತವರ ಹಾಗೆ ಹುಳಿಯನ್ನು ಎರಡು ಮೂರು ಸೌಟು ಹೆಚ್ಚಾಗಿಯೇ ಜಯದೇವನಿಗೆ ಬಡಿಸಿದರು.“ಪಾಪ! ಬರೇ ಹುಳಿ ತಿನ್ನಿಸ್ತೀಯಲ್ಲೇ ಅವರಿಗೆ," ಎಂದು ನಗೆಯಾಡಿದರು ರಂಗರಾಯರು. ಜಯದೇವನನ್ನು ಮಾತ್ರ 'ನೀನು ತಿಳಿವಳಿಕೆಯುಳ್ಳವನು ಕಣಪ್ಪ'ಎಂದು ಮೆಚ್ಚುಗೆಯ ದೃಷ್ಟಿಯಿಂದ ನೋಡಿದರು.
ಊಟವಾದೊಡನೆಯೇ ಮತ್ತೆ ಶಾಲೆಗೆ ಹೊರಟರು ಮುಖ್ಯೋಪಾಧ್ಯಾಯರು, ಹೊರಡುತ್ತ ಅವರೆಂದರು:
"ನೀವು ಸ್ವಲ್ಪ ವಿಶ್ರಾಂತಿ ತಗೊಳ್ಳಿ ಜಯದೇವ. ಮಲಕ್ಕೊಂಡ್ಬಿಡಿ ಐದು ಘಂಟೆಗೆ ಸರಿಯಾಗಿ ಶಾಲೆಗ್ಬನ್ನಿ. ಒಳಗೆ ಹೇಳಿರ್ತೀನಿ. ಎಬ್ಬಿಸ್ತಾರೆ.ಚಾಪೆ ತಂದ್ಕೊಡ್ಲಾ ?"
ಶುಭ್ರವಾದ ಬಟ್ಟೆಬರೆಗಾಗಿ ಬಿಚ್ಚಿದ್ದ ಹಾಸಿಗೆ ಹಾಗೆಯೇ ಮುದುಡಿಕೊಂಡಿತ್ತು. ಅದನ್ನು ನೋಡುತ್ತ ಜಯದೇವನೆಂದ:
“ಬೇಡಿ. ಇದನ್ನೇ ಬಿಡಿಸ್ಕೊತೀನಿ.”
“ಸರಿ ಹಾಗಾದರೆ."
... ಸಾವಿತ್ರಮ್ಮ ಮನೆಗೆಲಸದಲ್ಲೇ ನಿರತರಾದರು. ಜಯದೇವ ಹೊರಗೆ ಹಜಾರದಲ್ಲಿ ಹಾಸಿಗೆಯ ಮೇಲೊರಗಿಕೊಂಡ. ಬಿಸಿಲಿನ ಕಬ್ಬಿಣದ ಕೋಟೆಯನ್ನೂ ಭೇದಿಸಿ ತಂಗಾಳಿ ನುಸುಳಿ ಬಂತು. ಯೌವ್ವನದ ಕೆಚ್ಚಿನಿಂದಯಾವ ಆಯಾಸಕ್ಕೂ ಮಣಿಯದೆ ಇದ್ದ ಮೈ, ಮಂಪರಿನ ಮಬ್ಬಿನಲ್ಲಿ ಸಡಿಲುಗೊಂಡೊಡನೆ ನಿದ್ದೆಗೆ ಶರಣು ಹೋಯಿತು.