ದೂರದ ನಕ್ಷತ್ರ/೩
೩
ಎಚ್ಚರಗೊಂಡು ಜಯದೇವ ಎದ್ದು ಕುಳಿತ. ಬಿಸಿಲಿನ ಶಾಖಕ್ಕೆ ಮೈಯೆಲ್ಲ ಬೆವತುಹೋಗಿತ್ತು ಕಣ್ಣುಗಳು ಉರಿಯುತಿದ್ದುವು. ಎಷ್ಟು ಹೊತ್ತಾಯಿತೋ ಏನೋ--ಎಂದುಕೊಂಡ ಜಯದೇವ.
ಹಾಗೆ ಮೂರು ನಾಲ್ಕು ನಿಮಿಷ ಕಳೆದಿದುವೋ ಇಲ್ಲವೋ ಮನೆಯೊಡತಿ ಒಳಬಾಗಿಲಿನಿಂದ ಹಚಾರಕ್ಕೆ ಇಣಿಕಿನೋಡಿ ಅಂದರು:
“ಎದ್ದಿರಾ ? ಘಂಟೆ ನಾಲ್ಕೂವರೆ ಆಗ್ತಾ ಬಂತು."
"ಅಷ್ಟಾಯ್ತೆ? ಚನ್ನಾಗಿ ನಿದ್ದೆ ಬಂದ್ಬಿಡ್ತು ನಂಗೆ."
ಆ ತಾಯಿಗೆ ಅದು ತಿಳಿಯದೆ? ತಮ್ಮ ಮಕ್ಕಳೇ ದೂರ ಪ್ರವಾಸದಿಂದ ಬಂದಾಗ ಈ ಲೋಕವನ್ನು ಮರೆತು ನಿದ್ದೆಹೋಗುವುದನ್ನು ಅವರು ಕಂಡಿರಲಿಲ್ಲವೆ?
ಮುಖಕ್ಕೆ ಒಂದಿಷ್ಟು ನೀರು ಹನಿಸಿಕೊಳ್ಳಲು ಬಯಸಿದ ಜಯದೇವ. ಆತನ ಮನಸ್ಸಿನಲ್ಲಿದುದನ್ನು ಸುಲಭವಾಗಿ ಊಹಿಸಿಕೊಂಡು ಸಾವಿತ್ರಮ್ಮ ಅ೦ದರು:
“ಏಳಿ, ಬಚ್ಚಲು ಮನೆಗೆ ಹೋಗಿ ಮುಖ ತೊಳಕೊಂಡು ಬನ್ನಿ. ಕಾಫಿ ಇಳಿಸಿದೀನಿ."
ಆ ಉಪಚಾರದ ಮಾತು ಕೇಳಿ ಜಯದೇವನಿಗೆ ಸಂಕೋಚವೆನಿಸಿತು. ಆದರೆ ಆ ತಾಯಿಯ ದೃಷ್ಟಿಯಿಂದ ಏನನ್ನು ಮರೆಮಾಚುವುದೂ ಸಾಧ್ಯವಿರಲಿಲ್ಲ ಆತನಿಗೆ--
“ಸಂಕೋಚಪಟ್ಕೋಬೇಡಿ. ಏಳಿ !"
ಜಯದೇವನೆದ್ದು ಮುಖ ತೊಳೆದುಕೊಂಡು ಬಂದ. ಟವಲಿನಿಂದ ನೀರೊರೆಸಿ, ಎರಡಾಣೆ ಕೊಟ್ಟಕೊಂಡಿದ್ದ ಪಾಸ್ಟಿಕ್ ಬಾಚಣಿಗೆಯನ್ನು ಬೆಳಗ್ಗೆ ತೊಟ್ಟಕೊಂಡಿದ್ದ ಮಲಿನವಾದ ಜುಬ್ಬದ ಜೇಬಿನಿಂದ ಹೊರತೆಗೆದ. ಅವನ ಕಣ್ಣಿಗೆ ಎಲ್ಲೂ ಕನ್ನಡಿ ಬೀಳಲಿಲ್ಲ, ಅದರ ಅವಶ್ಯಕತೆಯೂ ಇರಲಿಲ್ಲ ಅವನಿಗೆ ಬಾಚಣಿಗೆ ನೀಳವಾದ ತಲೆಗೂದಲನ್ನು ನುಣುಪಾಗಿ ಬಾಚಿ ಹಿಂದಕ್ಕೆ ತಳ್ಳಿತು. ಅಷ್ಟರಲ್ಲೆ ಸಾವಿತ್ರಮ್ಮ ಕನ್ನಡಿ ತಂದು ಹೊರಕ್ಕಿಟ್ಟರು.
“ಬೇಡೀಮ್ಮಾ.”
ಆ ತಾಯಿಗೆ ಆಶ್ಚರ್ಯವಾಗದಿರಲಿಲ್ಲ... ಬೆಂಗಳೂರಿನ ಈತ ಷೋಕಿ ಹುಡುಗನಲ್ಲ, ಕನ್ನಡಿ ಇಲ್ಲದೆಯೇ ಕ್ರಾಪು ಬಾಚಿಕೊಳ್ಳುವ ಈ ಸರಳತೆ ಎಷ್ಟೊಂದು ಒಳ್ಳೆಯ ಗುಣ !...ಅವರು ಒಂದು ಲೋಟದ ತುಂಬ ಕಾಫಿ ತಂದು ಕೊಟ್ಟರು.
ಆ ಕಾಫಿ ರುಚಿಕರವಾಗಿತ್ತು. ಆ ತಾಯಿಗೆ ಅದು ತಿಳಿದಿದ್ದರೂ ಅತಿಥಿಯ ಬಾಯಿಂದ ಪ್ರಶಂಸೆ ಅವರಿಗೆ ಬೇಕಿತ್ತು.
“ನಮ್ಮನೆ ಕಾಫಿ ಚೆನ್ನಾಗಿದೆಯೋ ಇಲ್ಲವೋ ?”
“ಹೋಟಲುಗಳ ಕೆಟ್ಟ ಕಾಫಿ ಕುಡಿದು ರುಚಿ ಕೆಡಿಸಿಕೊಂದ ನಾಲಿಗೆಗೂ ಚೆನ್ನಾಗಿ ಕಾಣ್ತದೆ ಅಂದಮೇಲೆ-"
ಅದು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಪ್ರಶಂಸೆಯಾಗಿತ್ತು.
“ನೀವು ಹೋಟಿಲಿಗೆ ಹೋಗಬೇಡಿ. ಮನೆಮಾಡೋತನಕ ನಮ್ಮಲ್ಲೇ ಇದ್ಬಿಡಿ.”
ಆ ಆಹ್ವಾನ ಜಯದೇವನನ್ನು ಚಕಿತಗೊಳಿಸಿತು. ಆತ ಏನನ್ನೂ ಹೇಳಲಿಲ್ಲ. ತಾನು ಮನೆ ಮಾಡುವುದರ ಪ್ರಸ್ತಾಪದಿಂದ ನಗು ಬಂತು...
ಆತ ಮೌನವಾಗಿ ಲೋಟವನ್ನು ಬರಿದುಗೊಳಿಸಿದ.
ಮತ್ತೆ ತಡಮಾಡದೆ ಜಯದೇವ ಬೀದಿಗಿಳಿಯುತಿದ್ದಂತೆ ಆ ತಾಯಿ ಅ೦ದರು:
“ಹಾದಿ ಗೊತಾಗುತ್ತೆ ತಾನೆ?"
“ಓಹೋ !”
ಬೆಂಗಳೂರಿನಲ್ಲಾದರೆ ಬಂದ ಹೊಸಬರಿಗೆ ಆ ಪ್ರಶ್ನೆ ಕೇಳಬಹುದು. ಆದರೆ ಆ ಪುಟ್ಟ ಊರಲ್ಲಿ ಯಾರಿಗಾದರೂ ಹಾದಿ ತಪ್ಪುವುದೆಂದರೇನು?
ಸರಸರನೆ ನಡೆದು ಜಯದೇವ ಶಾಲೆ ಸೇರಿದಾಗ ಆಗಿನ್ನೂ ಐದು ಹೊಡೆದಿರಲಿಲ್ಲ, ದಿನದ ಸಾಠ ಮುಗಿದು ವಿದಾರ್ಥಿಗಳೆಲ್ಲ ಹೊರಟುಹೋಗಿ ಶಾಲೆ ಬರಿದಾಗಿತ್ತು. ರಂಗರಾಯರು ಆ ಬೆಳಗ್ಗೆ ಬಂದಿದ್ದ ದಿನಪತ್ರಿಕೆಯ ನೋದುತ್ತಲೂ ನಂಜುಂಡಯ್ಯ ಸಿಗರೇಟು ಸೇದುತ್ತಲೂ ಕುಳಿತಿದ್ದರು. ಜಯದೇವನನ್ನು ಮೊದಲು ನೋಡಿದ ನಂಜುಂಡಯ್ಯ “ಹಲೋ” ಎಂದರು. ಜಯದೇವ ನಸುನಕ್ಕು ವಂದನೆ ಸ್ವೀಕರಿಸಿ ಅಲ್ಲೇ ಕುರ್ಚಿಯ ಮೇಲೆ ಕುಳಿತ.
ಹಳೆಯ ಸ್ನೇಹಿತನಂತೆ ನಂಜುಂಡಯ್ಯ ಕೇಳಿದರು:
“ಚೆನಾಗಿ ನಿದ್ದೆ ಮಾಡಿದಿರಾ ?"
ಔಪಚಾರಿಕವಾದ ಆ ಪ್ರಶ್ನೆಗೆ ಉತ್ತರ ಅನಗತ್ಯವೆಂದು ಜಯದೇವ ಮುಗುಳ್ನಕು ಸುಮ್ಮನಾದ.
ನಂಜುಂಡಯ್ಯ ಬಂಗಾರದ ಗಿಲೀಟು ಹಾಕಿದ್ದ ಕೇಸನ್ನು ಹೊರ ತೆಗೆದು ಕೇಳಿದರು.
"ಸಿಗರೇಟು?"
“ಇಲ್ಲ ಕ್ಷಮಿಸಿ. ನಾನು ಸೇದೋದಿಲ್ಲ.”
“ಆಶ್ಚರ್ಯ! ಈ ತನಕ ಸಿಗರೇಟು ಮುಟ್ಟಿಯೇ ಇಲ್ಲೊ?”
“ಹಾಗೇನೂ ಇಲ್ಲ, ಆದರೆ ಅಭ್ಯಾಸ ಮಾಡ್ಕೋಂಡಿಲ್ಲ, ಬೇಡಿ.”
ಈ ಮಾತುಕತೆ ತಮಗೆ ಸಂಬಂಧಿಸಿದ್ದೇ ಅಲ್ಲವೆಂಬಂತೆ ಕುಳಿತಿದ್ದ ರಂಗರಾಯರು ಕೊನೆಗೊಮ್ಮೆ ಪತ್ರಿಕೆ ಮಡಚಿ, ಕನ್ನಡಕವನ್ನು ತೆಗೆದು ರಕ್ಷೆಯೊಳಗಿರಿಸಿದರು. ಕರವಸ್ತ್ರದ ಅಂಚಿನಿಂದ ಕಣ್ಣುಗಳನ್ನೂ ತಲೆಯನ್ನೂ ಒರೆಸಿದರು. ಕಿಟಕಿಯಿಂದ ಹೊರನೋಡುತ್ತಾ ಅವರೆಂದರು:
“ಅಬ್ಬಾ ಎಂಥ ಸೆಖೆ! ಮಳೆ ಬರೋ ಹಾಗಿದೆ ಇವತ್ತು.”
ಹವಾಮಾನವನ್ನು ಕುರಿತಾದ ಮಾತು ಮುಂದುವರಿಸುವ ಉತ್ಸುಕತೆಯೇನನ್ನೂ ನಂಜುಂಡಯ್ಯ ತೋರಿಸಲಿಲ್ಲ. ಜಯದೇವನೂ ಸುಮ್ಮನಿದ್ದ.
ಅವರಿಬ್ಬರನ್ನೂ ನೋಡುತ್ತ, ತಲೆಗೆ ಟೋಪಿಯನ್ನೇರಿಸಿ ರಂಗರಾಯರೆಂದರು:
“ಹೋಗೋಣ್ವೆ ?"
ಸಿಗರೇಟನ್ನು ಬೂಟಿನ ಕೆಳಭಾಗಕೆ ಮುರಟಿಸಿ ಹೊರಕ್ಕೆಸೆದು ಕೊನೆಯ ಹೊಗೆಯುಗುಳಿನೊಡನೆ ನಂಜುಂಡಯ್ಯ ಹೇಳಿದರು.
"ಬನ್ನಿ, ವಾಕಿಂಗ್ ಹೋಗೋಣ. ಮಿಸ್ಟರ್ ಜಯದೇವರ ಗೌರವಾರ್ಥ ಆನಂದವಿಲಾಸದಲ್ಲಿ ಕಾಫಿ ಕೊಡಿಸ್ತೀನಿ ಬನ್ನಿ”
ಅಂತೂ ಜಯದೇವನಿನ್ನು ಅಪರಿಚಿತನಲ್ಲ. ಉಳಿದ ಇಬ್ಬರ ಸಹೋದ್ಯೋಗಿ, ಮುಂದೆ ಅವರೊಡನೆ ಕಳೆಯಬೇಕಾದ ಸಹಸ್ರ ಸಂಜೆಗಳಲ್ಲಿ ಇದೊಂದು, ಅಷ್ಟೆ. ಆ ವಾತಾವರಣಕ್ಕೆ ಹೊಂದಿ ನಡೆಯುವುದನ್ನು ಅಂದಿನಿಂದಲೇ ಅಭ್ಯಾಸ ಮಾಡಬೇಕು ಆತ.
“ಅಯ್ಯೋ, ಆಗ್ಲೇ ಹಾಗಂದಿದ್ರೆ ರಾತ್ರಿಗೆ ಅಕ್ಕಿಹಾಕ್ಬೇಡಾಂತ ಮನೇಲಿ ಹೇಳ್ತಿದ್ನಲ್ಲಾ” ಎಂದು ರಂಗರಾಯರು ನಕ್ಕು, ಜಯದೇವನನ್ನು ಉದ್ದೇಶಿಸಿ ಅಂದರು:
"ನಮ್ಮ ನಂಜುಂಡಯ್ಯ ಕಾಫಿ ಕುಡಿಸೋ ದಿವಸ ಆನಂದವಿಲಾಸದ ಮಾಲಿಕನ ಭಾಗ್ಯ ಕಣ್ಣು ತೆರೆದ ಹಾಗೆ. ನಡೀರಿ ಹೋಗೋಣ...”
ಅವರು ಮೂವರೂ ಹಾದಿ ನಡೆಯುತ್ತಿದ್ದಂತೆ ಜಯದೇವನ ವಿಷಯವಾಗಿ ಮಾತು ಹೊರಟಿತು.
ನಂಜುಂಡಯ್ಯ ಕೇಳಿದರು:
“ಒಬ್ಬಂಟಿಗ ತಾನೆ?”
“ಹೌದು ಸಾರ್, ಒಬ್ಬಂಟಿಗ..”
“ಹಾಗಾದರೆ ಇಲ್ಲಿ ವಸತಿ ಏರ್ಪಾಟು ಹ್ಯಾಗ್ಮಾಡ್ತೀರ?”
ಜಯದೇವ ರಂಗರಾಯರ ಮುಖದತ್ತ ನೋಡಿದ. ಅವರೂ ಜಯದೇವನ ಉತ್ತರವನ್ನು ಕುತೂಹಲದಿಂದ ಇದಿರು ನೋಡುತ್ತಿದ್ದರು.
“ಇಲ್ಲಿ ಬಾಡಿಗೆಗೆ ರೂಮುಗಳು ಸಿಗೊಲ್ವೆ?"
“ಓಹೋ! ಅದಕ್ಕೇನು ? ಆದರೆ ಊಟ-”
"ಹ್ಯಾಗಾದರೂ ಆಗುತ್ತೆ. ಹೋಟೆಲಲ್ಲಿ ಮಾಡಿದರಾಯಿತು.”
ನಂಜುಂಡಯ್ಯ ಸೂಕ್ಷ್ಮವಾಗಿ ಜಯದೇವನನ್ನು ಪರೀಕ್ಷಿಸುತ್ತಲೇ ಇದ್ದರು. ಆ ಪರೀಕ್ಷೆಯ ಒಂದಂಶವಾಗಿಯೇ ಅವರ ಪ್ರಶ್ನೆ ಬಂತು:
“ನೀವು ಯಾವ ಜನ ಮಿಷ್ಟರ್ ಜಯದೇವ್ ? ಹೀಗೆ ಕೇಳಿದೆ ಅಂತ ತಪ್ಪು ತಿಳ್ಕೋಬೇಡಿ.”
ಆ ಬೆಳಗಿನಿಂದಲೇ ನಂಜುಂಡಯ್ಯನವರನ್ನು ಪೀಡಿಸುತ್ತಿದ್ದ ಪ್ರಶ್ನೆ ಅದು. ರಂಗರಾಯರೂ ಆ ವಿಚಾರವಾಗಿ ಯೋಚಿಸಿದ್ದರು. ಆ ಕಾರಣದಿಂದಲೇ ಅವರಿಬ್ಬರ ಊಟವೂ ಮನೆಯ ಒಳಕೊಠಡಿಯಲ್ಲಿ ಆಗಿರಲಿಲ್ಲ. ಆದರೆ ನೇರವಾಗಿ ಜಯದೇವನನ್ನು ಕೇಳುವುದು ತಪ್ಪೆಂದು, ರಂಗರಾಯರಿಗೆ ತೋರಿತ್ತು. ನಂಜುಂಡಯ್ಯ ಒಮ್ಮೆಲೆ ಕೇಳಿದ್ದನ್ನು ಕಂಡು ರಂಗರಾಯರಿಗೆ ಒಂದು ವಿಧವಾಯಿತು. ಆದರೆ ತಮ್ಮ ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನೆಗೂ ಈಗ ಉತ್ತರ ದೊರೆಯುವುದೆಂಬ ಸಮಾಧಾನವೂ ಆಗದಿರಲಿಲ್ಲ.
6ನೀವು ಯಾವ ಜನ?- ಜಯದೇವ ನಿರೀಕ್ಷಿಸಿದ್ದ ಪ್ರಶ್ನೆ ಬಂದಿತ್ತು. ಆದರೆ ಉತ್ತರ?
ಆತನ ಮೌನ ನಂಜುಂಡಯ್ಯ-ರಂಗರಾಯರಿಬ್ಬರ ಕೌತುಕವನ್ನೂ ಮತ್ತಷ್ಟು ಹೆಚ್ಚಿಸಿತು.
“ನಾನು ಆ ಪ್ರಶ್ನೆ ಕೇಳಬಾರದಾಗಿತ್ತೇನೊ? ತಪಾಗಿದ್ದರೆ ಕ್ಷಮಿಸಿ.”
“ಛೆ! ಛೆ! ಅದರಲ್ಲೇನು? ಆದರೆ ನನ್ನ ಉತ್ತರದಿಂದ ಪ್ರಶ್ನೆ ಕೇಳೋವರಿಗೆ ಯಾವಾಗ್ಲೂ ತೃಪ್ತಿಯಾಗೋದೇ ಇಲ್ಲ.”
“ಹಾಗಂದ್ರೆ ?"
“ನನಗೆ ಜಾತಿ-ಮತದಲ್ಲಿ ನಂಬಿಕೆ ಇಲ್ಲ.”
“ಓ!"
ಉದ್ಗರಿಸಿದರು ನಂಜುಂಡಯ್ಯ, ರಂಗರಾಯರಿಗೂ ಆಶ್ಚರ್ಯವೆನಿಸದಿರಲಿಲ್ಲ.
ಅನಂತರದ ಮೌನವನ್ನೂ ನಂಜುಂಡಯ್ಯನೇ ಭೇದಿಸಬೇಕಾಯಿತು.ತಮಗೇನೋ ಅವಮಾನವಾದವರಂತೆ ಅವರ ಮುಖ ಕೆಂಪಗಾಗಿತ್ತು.
“ಜಾತಿಗೀತೀಲಿ ಯಾರಿಗೆ ನಂಬಿಕೆ ಇದೆ? ನಮಗಿದ್ಯೇನು? ಸುಮ್ನೆ ಕೇಳಿದೆ, ಅಷ್ಟೆ, ಮನುಷ್ಯರಾಗಿ ಹುಟ್ಟಿದ್ಮೇಲೆ ಜಾತಿ ಅಂತ ಒಂದಿರುತ್ತೆ ಅಲ್ವೆ ?"
ರಂಗರಾಯರಿಗೇನೋ ಜಯದೇವನ ಉತ್ತರ ಅಪ್ರಿಯವಾಗಿ ತೋರಲಿಲ್ಲ. ಆದರೆ, ಹೊಸದಾಗಿ ಅಧ್ಯಾಪಕ ವೃತ್ತಿಗಿಳಿದಿದ್ದ ಆತನ ವ್ಯಕ್ತಿತ್ವ ಸ್ವಲ್ಪ ವಿಚಿತ್ರವಾಗಿಯೇ ಕಂಡಿತು.
ತನ್ನ ಉತ್ತರವನ್ನು ವಿವರಿಸುವ ತವಕವನ್ನೇನೂ ಜಯದೇವ ತೋರಿಸಲಿಲ್ಲ. ಮನಸ್ಸಿನೊಳಗಿನ ವಿವಿಧ ಭಾವನೆಗಳಿಗೆಲ್ಲ ನಗೆಯನ್ನು ಮುಖವಾಡವಾಗಿ ಮಾಡಿ ಆತ ಮೌನವಾಗಿಯೆ ನಿಂತ.
ಆದರೆ ಉಗುಳು ನುಂಗಿ ಸುಮ್ಮನಾಗುವ ವ್ಯಕ್ತಿಯಾಗಿರಲಿಲ್ಲ ನಂಜುಂಡಯ್ಯ.
“ಹೆಸರು ಜಯದೇವ ಅಂತಿದೆಯಲ್ಲ-ಅದಕ್ಕೆ ಕೇಳಿದೆ.”
ಹೆಸರಿನಿಂದಲೆ ಜಾತಿಯನ್ನು ನಿರ್ಧರಿಸುವ ಜಾಣ್ಮೆ-!
“ಹೆಸರಿನ ವಿಷಯ ಕೇಳಿದಿರಾ? ಅದೇನೋ ಸಾರಸ್ಯವಾಗಿಯೇ ಇದೆ” ಎಂದು ನುಡಿದು ಜಯದೇವ ವಿವರಣೆಯನ್ನಿತ್ತ:
“ಮೂಲ ನಾಮಕರಣ ಜಯ ಅಂತ. ತಂದೆಯ ದಾಖಲೆಯಲ್ಲಿ ಜಯರಾವ್ ಅಂತಾಯ್ತು. ಮನೆಯಲ್ಲಿ ಜಯಣ್ಣನಾದೆ. ಆದರೆ ತಬ್ಬಲಿಯಾದ ನನ್ನನ್ನ ಕೆಲವು ವರ್ಷ ನಿಜವಾಗಿ ಪಾಲಿಸಿ ಪೋಷಿಸಿದವರು ನಮ್ಮ ಪಕ್ಕದ್ಮನೆಯವರು-ಲಿಂಗಾಯತ ದಂಪತಿಗಳು. ಅವರಿಗೆ ಮಕ್ಕಳಿರ್ಲಿಲ್ಲ. ನಾನು ಅವರಿಗೆ ಪ್ರೀತಿಯ ಜಯದೇವನಾದೆ. ಕೊನೆಗೆ ಅದೇ ಖಾಯಂ ಆಗ್ಹೋಯ್ತು!... ಯಾಕೆ-ಜಯದೇವ ಅಂತ ಹೆಸರು ಇರ್ಕೂಡ್ದೆ ?”
ನಂಜುಂಡಯ್ಯ ಆ ಮಾತಿನಲ್ಲಿ ಪುರಸ್ಕಾರವೀಯಲು ನಿರಾಕರಿಸುವ ಧ್ವನಿಯಲ್ಲಿ ಅಂದರು:
“ಇಡದೇ ಏನು ? ಅಂತೂ ನೀವು ಹೇಳಿದ್ದು ಸ್ವಾರಸ್ಯವಾಗಿಯೇ ಇದೆ !"
ರಂಗರಾಯರಿಗೇನೋ ಈ ಮನೋವೃತ್ತಿ ಹೊಸದಾಗಿರಲಿಲ್ಲ. ಒಂದು ಕಾಲದಲ್ಲಿ ಅವರಿಗೂ ಅಂತಹ ಭಾವನೆಗಳು ಬಂದಿದ್ದವು. ಯೌವನದ ಆ ಆದರ್ಶಗಳನ್ನು ಬೇರೆ ಕೆಲವರಲ್ಲೂ ಅವರು ಕಂಡಿದ್ದರು. ಆ ಆದರ್ಶಗಳ ಬಗೆಗೆ ಅವರಿಗೆ ಉಪೇಕ್ಷೆ ಇರಲಿಲ್ಲ.
ಆದರೆ ಜಯದೇವನ ಉತ್ತರದಿಂದ ನಂಜುಂಡಯ್ಯನ ಮೇಲಾದ ಪ್ರತಿಕ್ರಿಯೆಗಳೇ ಬೇರೆ. ಹೊಸನೇಮಕದ ಅನುಜ್ಞೆ ಪತ್ರ ನೋಡಿದಂದಿನಿಂದ ಜಯದೇವ ಎಂಬ ವ್ಯಕ್ತಿ ತಮ್ಮ ಜನವೇ ಎಂದು ಅವರು ಭಾವಿಸಿದ್ದರು.ವಿದ್ಯಾರ್ಥಿಯಾಗಿದ್ದಾಗಲೆ ಅವರಲ್ಲಿ ಮೈಗೂಡಿ ಬಂದಿದ್ದ ಸ್ವಜಾತಿ ಅಭಿಮಾನ ಜಯದೇವನ ಆಗಮನದಲ್ಲಿ ವಿಶೇಷ ಆಸಕ್ತಿಯನ್ನು ಅವರು ವಹಿಸುವಂತೆ
ಮಾಡಿತ್ತು. ಆ ಕಾರಣದಿಂದ ಸಂಜೆ ನಡೆದ ಮಾತುಕತೆಯಿಂದ ಅವರಿಗೆ ಅಸಮಾಧಾನವಾಗದೆ ಇರಲಿಲ್ಲ.
ಆದರೂ ಆದಷ್ಟು ಮಟ್ಟಿಗೆ ಸುಪ್ರಸನ್ನರಾಗಿಯೇ ಅವರು ಆನಂದ ವಿಲಾಸದಲ್ಲಿ ಬೂಂದಿಲಾಡಿಗೂ ತುಪ್ಪದೋಸೆಗೂ 'ಆರ್ಡರು' ಕೊಟ್ಟರು.'ಸ್ಪೆಷಲ್' ಕಾಫಿ ಬಂತು. ಬೆಂಗಳೂರು ಮತ್ತು ಆ ಊರುಗಳ ಕಾಫಿ ತಿಂಡಿಗಳ ನಡುವಿನ ತಾರತಮ್ಮವೇ ಮಾತುಕತೆಯ ಮುಖ್ಯ ವಿಷಯವಾಯಿತು. ಅಲ್ಲಿ ನೆರೆದಿದ್ದವರ ಕುತೂಹಲದ ದೃಷ್ಟಿಗಳ ನಡುವೆ ಜಯದೇವ ತನ್ನ ಗೌರವವಾಗಿ ತರಿಸಲಾದ ತಿಂಡಿ ತೀರ್ಥಗಳನ್ನು ಸ್ವೀಕರಿಸಿದ.
ಹೋಟಲಿನಲ್ಲಿ ನಂಜುಂಡಯ್ಯನವರ ಲೆಕ್ಕವಿತ್ತು. ಅವರು ಆ ಪುಸ್ತಕದಲ್ಲಿ ದಿನದ ಬಿಲ್ಲನ್ನು ಬರೆದ ಬಳಿಕ, ಮೂವರು ಉಪಾಧ್ಯಾಯರೂ ಹೊರ ಹೊರಟರು. ಬೀದಿಗಿಳಿದಾಗ ನಂಜುಂಡಯ್ಯ ಸಿಗರೇಟಿನ ಕೇಸು ತೆರೆದರು.ಕಡ್ಡಿ ಕೊರೆದು ಹಚ್ಚಿಕೊಳ್ಳುತ್ತಾ ಅವರೆಂದರು:
“ನೀವು ಕಾಂಗ್ರೆಸ್ ಚಳುವಳೀಲಿ ಇದ್ದಿರಾ ಜಯದೇವ್?"
“ಇಲ್ಲ. ಯಾಕೆ ಕೇಳಿದಿರಿ.”
ಯಾಕೆ ಕೇಳಿದರೊ? ಜಾತಿಯಲ್ಲಿ ನಂಬಿಕೆ ಇಲ್ಲವೆಂಬ ವಾದಕ್ಕೆ ಆ ಉತ್ತರದಲ್ಲೇನಾದರೂ ತಳಹದಿ ದೊರೆಯುವುದೇನೋ ಎಂದಿದ್ದರು ಅವರು. ಆದರೆ ಆ ಉತ್ತರವೂ ನಿರಾಸೆಯನ್ನೇ ಉಂಟುಮಾಡಿತು.
ಸಿಗರೇಟಿನ ಹೊಗೆಯನ್ನೇನೋ ಅವರು ಸ್ವಲ್ಪ ನುಂಗಿದರು. ಆದರೆ ಜಯದೇವನ ವರ್ತನೆ ನುಂಗಲಾರದ ತುತ್ತಾಗಿತ್ತು.
"ಸುಮ್ನೆ ಕೇಳ್ದೆ-"
ಅದು ಮಾತು ಹಾರಿಸುವ ಯತ್ನ.
“ಬೆಂಗಳೂರಲ್ಲೆಲ್ಲಾ ರಾಜಕೀಯದಲ್ಲಿ ವಿದ್ಯಾರ್ಥಿಗಳಿಗೆ ಜಾಸ್ತಿ ಆಸಕ್ತಿ ನೋಡಿ. ಹಾಗೆ ನಿಮಗೂ ಎಲ್ಲಾದ್ರೂ–--”
ಸುಲಭವಾಗಿ ಗುರುತಿಸುವ ಸುಳ್ಳು.
“ಇಲ್ಲ, ನನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ, ಅಲ್ದೆ, ನಾನು ಕಾಲೇಜು ಸೇರಿದ ವರ್ಷವೇ ಸ್ವಾತಂತ್ರವೂ ಬಂತು. ಜವಾಬ್ದಾರಿ ಸರ್ಕಾರ ಹೋರಾಟದ ಸಮಯದಲ್ಲಿ ಎಲ್ಲರ ಜತೇಲಿ ನಾಲ್ಕು ದಿವಸ ಮುಷ್ಕರ ಮಾಡಿದ್ದು ಎಷ್ಟೋ ಅಷ್ಟೆ...."
“ನಮಗಿಂತೆಲ್ಲಾ ನೀವು ಬಹಳ ಚಿಕ್ಕವರು ಹಾಗಾದರೆ.”
“ಹೌದು ಚಿಕ್ಕವ, ಹೊಸಬ. ನಿಮ್ಮ ಜತೇಲಿದ್ರೆ ನಾನೊಬ್ಬ ವಿದ್ಯಾರ್ಥಿಯೋ ಏನೋ ಅನಿಸುತ್ತೆ!”
ಜಯದೇವ ಸಹಜವಾಗಿಯೇ ಪಾಮಾಣಿಕವಾಗಿಯೇ ಹಾಗಂದ. ತಮ್ಮ ಹಿರಿತನವನ್ನು ಹೊಸ ಉಪಾಧ್ಯಾಯ ಮೆಚ್ಚಿಕೊಂಡುದಕ್ಕಾಗಿ ನಂಜುಂಡಯ್ಯನಿಗೆ ಸಂತೋಷವೇ ಆಯಿತು. ರಂಗರಾಯರು, ಜಾತಿಯ ಪ್ರಶ್ನೆಯಿಂದ ಕದಡಿದ್ದ ವಾತಾವರಣವನ್ನು ಮಧುರಗೊಳಿಸಲೆಂದು ಮಾತು ತಿರುಗಿಸಿದರು:
“ನೀವೇ ಭಾಗ್ಯವಂತರು ಜಯದೇವ್. ನಾನಂತೂ ಹಣ್ಣೆಲೆ.ನಂಜುಂಡಯ್ಯನೂ ಹಲವು ವರ್ಷಗಳ ಅನುಭವಿಕರು. ಯುವಕರು ನೀವೊಬ್ಬರೇ ಹೆಚ್ಚು ವರ್ಷಕಾಲ ಉಪಾಧ್ಯಾಯರಾಗಿರೋ ಭಾಗ್ಯ ಈಗಿರೋದು ನಿಮಗೆ!"
ಜಯದೇವನಿಗೆ ನಗು ಬಂತು.
“ಹಣ್ಣೆಲೆಯನ್ನು ನೋಡಿ ಚಿಗುರೆಲೆ ನಗುತ್ತದಂತೆ”
ನಂಜುಂಡಯ್ಯ ಬಲು ಬುದ್ಧಿವಂತಿಕೆಯ ಒಂದು ಮಾತನ್ನು ತಾವು ಹೇಳುತಿದ್ದೇವೆಂದು ಭಾವಿಸುತ್ತ, ಅಂದರು. ಆಗಿನ ಸನ್ನಿವೇಶಕ್ಕೆ ಆ ಮಾತು ತಕ್ಕುದಾಗಲಿಲ್ಲವೆಂಬ ಅಂಶ ಅವರಿಗೆ ಹೊಳೆಯಲಿಲ್ಲ.
“ಆದರೆ ಗಿಡ-ಬಳ್ಳಿಗೆ ಹಣ್ಣು, ಕಾಯಿ ಎಲ್ಲವೂ ಭೂಷಣ ಅಲ್ವೆ?”
ಜಯದೇವನ ಆ ಮಾತಿನಲ್ಲಿ ವಿಶೇಷವಾದ ಬುದ್ಧಿವಂತಿಕೆಯೇನೂ ಇರಲಿಲ್ಲ. ಆದರೂ ರಂಗರಾಯರಿಗೆ ಆ ಮಾತು ಪ್ರೌಢವಾಗಿ ತೋರಿತು.
... ಕತ್ತಲಾಗುತಿದ್ದಂತೆ ಆ ಮೂವರೂ ಮತ್ತೆ ಶಾಲೆಯನ್ನು ದಾಟಿ ರಂಗರಾಯರ ಮನೆಯನ್ನು ಸಮೀಪಿಸಿದರು.
"ಜಾತಿಯಲ್ಲಿ ನಂಬಿಕೆ ಇಲ್ಲಾ ಅಂದ್ರಿ. ಹಾಗಾದರೆ ಎಲ್ಲಿ ಬೇಕಾದರೂ ಊಟ ಮಾಡೋಕೆ ಸಿದ್ಧತಾನೆ?""
ನಂಜುಂಡಯ್ಯ ನಗುತ್ತ ಆ ಪ್ರಶ್ನೆ ಕೇಳಿದ್ದರೂ ಅದಕ್ಕೆ ನೇರವಾದ ಉತ್ತರದ ಅವಶ್ಯಕತೆಯಿತ್ತು.
“ಓಹೋ ! ಧಾರಾಳವಾಗಿ!”
“ಹಾಗಾದರೆ ನಾಳೆ ನಮ್ಮಲ್ಲಿಗೆ ಊಟಕ್ಬನ್ನಿ ಇವತ್ತಂತೂ ಹೆಡ್ಮೇಷ್ಟ್ರೇ ನಿಮ್ಮನ್ನು ಉಳಿಸ್ಕೊಂಡ್ಬಿಟ್ಟಿದಾರೆ... ಬರ್ತೀರಾ?”
“ಖಂಡಿತ ಬರ್ತೀನಿ."
ಥಟಕ್ಕನೆ ಬಂದ ಆ ಉತ್ತರದಿಂದ ನಂಜುಂಡಯ್ಯ ಚಕಿತರಾದರು. ರಂಗರಾಯರಿಗೂ 'ಈ ಜಯದೇವ ಆಳವಾದ ವ್ಯಕ್ತಿ' ಎನಿಸಿತು. ಇದು ತನ್ನ ವಿಜಯ ಎನ್ನುವಂತೆ ನಂಜುಂಡಯ್ಯ ಮುಖ್ಯೋಪಾಧ್ಯಾಯರ ಮುಖನೋಡಿದರು.
ತಮ್ಮ ಮನೆಯ ಬಾಗಿಲ ಮುಂದೆ ನಿಂತು ರಂಗರಾಯರೆಂದರು :
“ಬನ್ನಿ ನಂಜುಂಡಯ್ಯನವರೇ, ಎರಡು ನಿಮಿಷ ಕೂತು ಹೋದರಾಯ್ತು.”
“ಇಲ್ಲ ಇಲ್ಲ, ಆಗಲೇ ಲೇಟಾಯ್ತು. ಹೀಗೇ ಹೊರಡ್ತೀನಿ. ನಾಳೆ ಸಿಗ್ತೀನಿ ಮಿ. ಜಯದೇವ್. ಬೆಳಗ್ಗೆ ಬೇಗ್ನೆ ಬಂದು ಊಟಕ್ಕೆ ಕರಕೊಂಡು ಹೋಗ್ತೀನಿ."
ನಂಜುಂಡಯ್ಯ ಕತ್ತಲೆಯಲ್ಲಿ ಮರೆಯಾದಂತೆ ರಂಗರಾಯರು ಜಯದೇವನೊಡನೆ ತಮ್ಮ ಮನೆಯನ್ನು ಹೊಕ್ಕರು.
ಮಂದವಾದ ವಿದ್ಯುದೀಪ ಮನೆಯ ಹಜಾರವನ್ನು ಬೆಳಗಿತ್ತು.ಬರುತ್ತಿದ್ದ ಸಪ್ಪಳವನ್ನು ದೂರದಿಂದಲೆ ಕೇಳಿದ ಸಾವಿತ್ರಮ್ಮ, ಹೊರಬಾಗಿಲಿನ ಅಗಣಿ ತೆಗೆದು ಅಲ್ಲೆ ನಿಂತಿದ್ದರು.
“ಹೋಟೆಲಿನಿಂದ ಬರ್ತಿದೀರಿ ತಾನೆ? ನಾನಿಲ್ಲಿ ನಿಮಗೇಂತ ಕಾಫಿ ಉಳಿಸ್ಕೊಂಡು ತಿಂಡಿ ಮಾಡಿಟ್ಟು ಕಾದಿರೋದಕ್ಕೂ ನೀವು ಹೀಗ್ಮಾಡೋದಕ್ಕೂ–”
ಅದು ಮನೆಯೊಡತಿಯ ಬೇಸರದ ಧ್ವನಿ.
“ನಾನೇನು ಮಾಡ್ಲೆ? ಹೊಸ ಮೇಷ್ಟ್ರು ಬಂದಿದ್ದಾರೆ, ಕಾಫಿಗೆ ಹೋಗೋಣ ಬನ್ನಿಂತ ನಂಜುಂಡಯ್ಯ ಎಳಕೊಂಡು ಹೋದ್ರು.”
“ನಂಜುಂಡಯ್ನೋ-ಸರಿ, ಸರಿ!”
ಜಯದೇವ ಕೈಕಾಲು ತೊಳೆದು ಬಂದು, ಹಜಾರದಲ್ಲಿ ತನ್ನ ಹಾಸಿಗೆಯ ಮೇಲೆ ಕಾಲು ನೀಡಿ ಕುಳಿತ.
ಈ ಊರಲ್ಲಿ ಆತ ಕಳೆದ ಮೊದಲ ದಿನ ಸಪ್ಪೆಯಾಗಿರಲಿಲ್ಲ ಅಂತೂ!
... ಊಟದ ಶಾಸ್ತ್ರ ಮುಗಿಸುತಿದ್ದಾಗಲೇ ಸಿಡಿಲು ಗುಡುಗುಗಳು ಸದ್ದು ಮಾಡಿದುವು. ಮಿಂಚು ಮಿಂಚಿತು, ಮಳೆ ಸುರಿಯಿತು. ಹಂಚು ಸೋರುತಿದ್ದ ಎರಡು ಕಡೆಗಳಲ್ಲಿ ನೀರು ಹಿಡಿಯಲೆಂದು ಸಾವಿತ್ರಮ್ಮ ಪಾತ್ರೆಗಳನ್ನು ತಂದಿಟ್ಟರು.
...ರಂಗರಾಯರು ಎಲೆ ಅಡಿಕೆ ಹಾಕಿಕೊಂಡರು. ಈ ಅಭ್ಯಾಸವೂ ತನಗಿಲ್ಲವೆಂದ ಜಯದೇವ.
ಮುಖ್ಯೋಪಾಧ್ಯಾಯರು ಸಾವಿತ್ರಮ್ಮನತ್ತ ನೋಡಿ ನಕ್ಕು ಅಂದರು:
“ನನಗೂ ಈ ಅಭ್ಯಾಸ ಇರ್ಲಿಲ್ಲ ಜಯದೇವ, ಆದರೆ ಈ ಅಮ್ಮ ಬಂದ್ಮೇಲೆ--"
"ಸಾಕು ತಮಾಷೆ"
ಹಾಗೆ ನುಡಿದು ಸಾವಿತ್ರಮ್ಮ ಒಳಕ್ಕೆ ಹೊರಟು ಹೋದರು.
ವಯಸ್ಸಾದ ಆ ದಂಪತಿಗಳ ಸರಸ ಕಂಡು ಜಯದೇವನಿಗೆ ನಗುಬಂತು. ಹಾಸಿಗೆಯ ಮೇಲೆ ಅಡ್ಡಾಗುತ್ತಾ ಆತ ತನ್ನಷ್ಟಕ್ಕೆ ಹೇಳಿಕೊಂಡ: ಆ ಅಮ್ಮ ಬಂದ್ಮೆಲೆ... ಯಾರಿಗೆ ಗೊತ್ತು? ನನಗೂ ಆ ಅಭ್ಯಾಸವಾಗುತ್ತೋ ಏನೊ...!'
ಹಳೆಯ ಆರಾಮ ಕುರ್ಚಿಯ ಮೇಲೆ ಕುಳಿತಿದ್ದ ರಂಗರಾಯರು ಏನನ್ನೋ ಸ್ಮರಿಸಿಕೊಳ್ಳುತ್ತ ಮಾತನಾಡಿದರು.
“ನಮ್ಮ ನಂಜುಂಡಯ್ಯ ಹೇಳಿದ್ದನ್ನೆಲ್ಲಾ ಕೇಳಿದ್ರೋ ಇಲ್ಲೋ?
“ಕೇಳ್ದೆ ಸಾರ್, ಇದೆಲ್ಲಾ ನನಗೆ ಹೊಸ ಅನುಭವ.”
“ಈಗಿನ್ನೂ ಷುರು ಜಯದೇವ!”
“ಇದ್ದೀತು. ರಾಜಕೀಯದಲ್ಲೇನೋ ಜಾತಿ-ಜಾತೀಂತ ಕಚ್ಚಾಡೋದು ಉಂಟಂತೆ, ವಿದ್ಯಾರ್ಥಿಗಳಿಗೆ ಸೀಟು ಸಿಗೋ ವಿಷಯದಲ್ಲಂತೂ ಈ ಗಲಾಟೆ ಇದ್ದದ್ದೆ, ಆದರೆ ಉಪಾಧ್ಯಾಯ ವೃತ್ತಿಲೂ ಹೀಗಿರುತ್ತೆ ಅಂತ ನಾನು ಭಾವಿಸಿರ್ಲಿಲ್ಲ"
“ನಿಮ್ಮ ಮಾತು ಕೇಳಿ ನಗಬೇಕೆನಿಸುತ್ತೆ.”
“ಅದು ನಿಜ..ನನಗೇನೂ ತಿಳೀದು.'
“ಹಾಗಲ್ಲ, ಏನೇನೋ ಒಳ್ಳೆಯ ಗುರಿ ಇಟ್ಕೊಂಡು ನೀವು ಬಂದಿದೀರಿ ಅಲ್ವೆ? -
ಆ ವಿಷಯ ಜಯದೇವನಿಗೆ ಅತ್ಯಂತ ಆತ್ಮೀಯವಾದುದು.
“ಹೌದು! ಉಪಾಧಾಯನಾಗ್ವೇಕು ಅನ್ನೋದು ನನಗೆ ಮೊದಲಿಂದಲೂ ಇದ್ದ ಆಸೆ. ನಾನು ಬೇರೆ ಕೆಲಸ ಹುಡುಕಲೂ ಇಲ್ಲ.”
ರಂಗರಾಯರು ಮಾತುಗಳಿಗೆ ತಡವರಿಸಿದಂತೆ ಕಂಡಿತು. "
“ಕನಸು ಕಾಣೋದು ಯಾವಾಗ್ಲೂ ಒಳ್ಳೆದು ಜಯದೇವ್, ಒಳ್ಳೆ ಕನಸು ಕಾಣೋ ಸಾಮರ್ಥ್ಯವಿಲ್ಲದೋರು ಬದುಕಿನಲ್ಲಿ ಹೆಚ್ಚೇನನ್ನೂ ಸಾಧಿ ಸೋಕಾಗಲ್ಲ.ಆದರೆ ಒಂದು ವಿಷಯ. ಈ ಪ್ರಪಂಚದಲ್ಲಿ ನಾವು ಯಾವಾಗ್ಲೂ ಹೆಚ್ಚು ನಿರೀಕ್ಷೆ ಇಟ್ಕೋಬಾರ್ದು, ನಮಗೆ ಯಾವ ಭ್ರಮೇನೂ ಇರಬಾರ್ದು, ಆಗ, ನಿರಾಶೆಯಾದರೆ ಹೆಚ್ಚು ದುಃಖವಾಗೋದಿಲ್ಲ, ಸಂಕಟ ಸಹಿಸ್ಕೋಳ್ಳೋ ಸಾಮರ್ಥ್ಯವಿರುತ್ತೆ, ಅಲ್ವೇ?
"ಹೌದು."
“ಇದು ನಿರಾಶಾವಾದಿಯ ವೇದಾಂತ ಅಂತ ದಯವಿಟ್ಟ ಭಾವಿಸ್ಬೇಡಿ. ನಿಷಾವಂತರಾಗಿ ಉಪಾಧಾಯ ವೃತ್ತಿಯ ಹಿರಿಮೆಯನ್ನು ಕಾಪಾಡಿಕೊಂಡಿ ರುವ ಜನ ಈಗಲೂ ಅಲ್ಲಿ ಇಲ್ಲಿ ಇದಾರೆ. ನೀವೂ ಅವರಲ್ಲಿ ಒಬ್ಬರು ಯಾಕೆ ಆಗಕೂಡದು?
ಜಯದೇವನೂ ಅದನ್ನೇ ಯೋಚಿಸಿದ-ಯಾಕೆ ಆಗಕೂಡದು?
ಆ ಪ್ರಶ್ನೆಗೆ ಪೂರಕವಾಗುವಂತೆ ರಂಗರಾಯರು ಮತ್ತೂ ಒಂದು ಮಾತೆಂದರು:
“ಅದಕ್ಕೆ ತುಂಬಾ ತಾಗ ಮಾಡ್ಬೇಕು. ಈ ಉಪಾಧಾಯ ವೃತ್ತಿ ಅನ್ನೋದು ಒಂದು ಮಹಾಯಜ್ಞ.”