ವಿಷಯಕ್ಕೆ ಹೋಗು

ದೂರದ ನಕ್ಷತ್ರ/೪

ವಿಕಿಸೋರ್ಸ್ದಿಂದ

ಮರುದಿನ ಬೆಳಗ್ಗೆ ನಂಜುಂಡಯ್ಯ ಬರಲಿಲ್ಲ. ಆದರೆ ಒಂಬತ್ತು ಘಂಟೆಗೆ ಒಬ್ಬ ಹುಡುಗ ಬಂದ.

“ನಂಜುಂಡಯ್ಯನವರ ತಮ್ಮ ಬಂದಿದ್ದಾಬೆ ಜಯದೇವ,” ಎಂದರು ರಂಗರಾಯರು.

“ನಮ್ಮ ಅಣ್ಣ ಹೊಸ ಮೇಷ್ಟ್ರನ್ನ ಕರಕೊಂಡು ಬಾ ಅಂದ್ರು ಸಾರ್.” ಎಂದ ಆ ಹುಡುಗನೂ, ಗೌರವದಿಂದ ಆತ ಜಯದೇವನನ್ನೇ ದಿಟ್ಟಿಸುತಿದ್ದ ಆ ಕಣ್ಣುಗಳ ಸ್ವಚ್ಛತೆ ಮುಗ್ಧತೆ ಮೋಹಕವಾಗಿದ್ದವು.

ಅದೇ ಆಗ ಸ್ನಾನ ಮುಗಿಸಿದ್ದ ಜಯದೇವ ಹೊರಡಲು ಸಿದ್ಧನಾಗುತಿದ್ದಂತೆ ರಂಗರಾಯರೆಂದರು:

ನಾನು ಶಾಲೆಗೆ ಹೋಗಿರ್ತೀನಿ. ನಂಜುಂಡಯ್ಯನವರ ಜತೇಲೆ ನೀವು ಹಾಗೇನೆ ಬಂದ್ಬಿಡಿ.”

“ಆಗಲಿ.”

“ಐದು ನಿಮಿಷ ಬೇಗನೆ ಬನ್ನಿ, ಪಾಠ ಗೊತ್ಮಾಡೋಣ.”

“ಹೂಂ......"

ಹಾದಿಯಲ್ಲಿ ಹುಡುಗ ಸಂಕೋಚದಿಂದ ಜಯದೇವನಿಗಿಂತ ಒಂದು ಹೆಜ್ಜೆ ಹಿಂದೆ ಆತನ ಎಡಭಾಗದಲ್ಲಿ ನಡೆದ.

“ನೀನು ಹಿಂದೇನೇ ಇದ್ರೆ ಹ್ಯಾಗಪ್ಪ ನಡೆಯೋದು ? ನಾನು ಹಾದಿ ತಿಳೀದ ಹೊಸಬ.*

“ಪರವಾಗಿಲ್ಲ ಸಾರ್. ನಾನಿದೀನಿ"

“ನಿನ್ನ ಹೆಸರು?

“ವಿರೂಪಾಕ್ಷ”

“ಯಾವ ಕ್ಲಾಸು?”

“ಈ ವರ್ಷ ನಾಲ್ಕನೆ ತರಗತಿ ಸಾರ್.”

“ಆಮೇಲೆ ಹೈಸ್ಕೂಲ್ಗೆ ಹೋಗ್ವೇಕು ಅಲ್ವೆ?

*ಹೂಂ ಸಾರ್."

'ಅಲ್ಲಿ ಮನೆ ಇರೊಲ್ಲ, ಹಾಸ್ಟಲಲ್ಲಿರ್ಬೇಕು.”

“ಹೌದು ಸಾರ್, ಹೈಸ್ಕೂಲು-ಕಾಲೇಜು ಎರಡೂ ಬೆಂಗಳೂರಲ್ಲೇ ಓದ್ಬಿಡೂಂತ ನಮ್ಮಣ್ಣ ಅಂತಿದ್ರು.”

ಬೆಂಗಳೂರು ಎಂಬ ಹೆಸರನ್ನು ಬಲು ಭಕ್ತಿಯಿಂದ ಆ ಹುಡುಗ ಉಚ್ಚರಿಸಿದ್ದ, ಅದು ಆತನ ಪಾಲಿನ ಮಾಯಾನಗರಿ.

ಜಯದೇವನೇನೋ ಹುಡುಗನ ಮಾತಿಗೆ 'ಹೂಂ'ಗುಟ್ಟಿದ. ಆದರೆ ಅವನ ಮನಸ್ಸು ಬೆಂಗಳೂರಿಗೆ ಧಾವಿಸಿತ್ತು, ಆತನ ಓದಿನ ವೈಖರಿ ವಿಚಿತ್ರವಾದುದು. ಪ್ರತಿವರ್ಷವೂ ಮುಂದಿನ ವರ್ಷದ ಓದಿನ ನಂಬಿಕೆ ಇಲ್ಲದೆಯೇ ಆತ ಪರೀಕ್ಷೆಗೆ ಕುಳಿತಿದ್ದ, ಆತನ ಪಾಲಿಗೆ ಪಾಧ್ಯಾಪಕರ ಪಾಠಗಳಲ್ಲದೆ, ತರಗತಿಯ ಅಧ್ಯಯನಗಳಲ್ಲದೆ, ಬಾಹ್ಯ ಪ್ರಪಂಚವೂ ದೊಡ್ಯ, ವಿಶ್ವವಿದ್ಯಾನಿಲಯವಾಗಿತ್ತು... .

ನಂಜುಂಡಯ್ಯ ಮನೆಯ ಹೆಬ್ಬಾಗಿಲಲ್ಲೇ ನಿಂತಿದ್ದು, ಸ್ವಾಗತಬಯಸಿದರು. ಅವರುಟ್ಟಿದ್ದ ಅಡ್ನ ಪಂಚೆ, ಮಲ್ಲಿನ ಜುಬ್ಬ, ಅವರ ಪ್ರಕೃತಿಗೆ ಸೌಮ್ಯತೆಯ ವಾತಾವರಣವನ್ನು ಕಲ್ಪಿಸಿದುವು.

ಅವರ ಕೊಠಡಿಯೂ ಊರಿನ ಆವರಣಕ್ಕಿಂತ ಭಿನ್ನವಾಗಿತ್ತು, ಪುಸ್ತಕಗಳು ತುಂಬಿದ ಬೀರುಗಳೆರಡು. ರಾಜಾ ರವಿವರ್ಮನಿಂದ ಮೊದಲಾಗಿ ಒಂದು ಪಾಶ್ಚಾತ್ಯ ವಕ್ರ ಕೃತಿಯವರೆಗೆ, ನಾನಾ ಬಗೆಯ ಚಿತ್ರಗಳು ಅಲ್ಲಿದ್ದುವು. ಬಾಗಿಲಿಗೆ, ಬಣ್ಣ ಬಣ್ಣದ ಗಾಜಿನ ಮಣಿಗಳನ್ನು ಹೊತ್ತಿದ್ದ ತೆಳು ಪರದೆ ಯನ್ನು ಇಳಿಬಿಟ್ಟಿದ್ದರು. ನಯ ನಾಜೂಕು ಇಲ್ಲದೆ ಹೋದರೂ ಒಳ್ಳೆಯ ಮರದಿಂದ ಮಾಡಿದ್ದ ಮೇಜು-ಕುರ್ಚಿಗಳು, ಹಳೆಯ ಕಾಲದ ಮನೆ ಕಿಟಕಿ ಗಳು ಚಿಕ್ಕವಾಗಿದ್ದರೂ ಗೋಡೆಗಳು ದಪ್ಪಗಿದ್ದು ಭದ್ರವಾಗಿದ್ದುವು.

ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತ ಜಯದೇವ ಕಪಾಟಗಳಲ್ಲಿಟ್ಟಿದ್ದ ಪುಸ್ತಕಗಳನ್ನೆ ದಿಟ್ಟಿಸಿದ.

“ಒಳ್ಳೆಯ ಗ್ರಂಥಸಂಗ್ರಹ ಇಟ್ಟಿದ್ದೀರಿ!”

ಹಾಗೆ ಹೊಗಳುವುದರಿಂದ ನಂಜುಂಡಯ್ಯನವರಿಗೂ ಸ್ವಲ್ಪ ತೃಪ್ತಿ ಯಾಗುವುದೆಂಬುದು ಜಯದೇವನಿಗೆ ತಿಳಿಯದೆ ಇರಲಿಲ್ಲ, ಆ ಮಾತು ಕೇಳಿ ನಂಜುಂಡಯ್ಯನ ಮುಖ ಸ್ವಾಭಾವಿಕವಾಗಿಯೇ ಅರಳಿತು.

“ಪುಸ್ತಕ ಕೊಂಡುಕೊಳ್ಳೋದು ನನ್ನದೊಂದು ಚಟ.. ಇಂಥದೇ ಅಂತ ಇಲ್ಲ, ಮೈಸೂರಿಗೋ ಬೆಂಗಳೂರಿಗೋ ಹೋದಾಗಲೆಲ್ಲ ನೂರುನೂರು ರೂಪಾಯಿ ಪುಸ್ತಕ ತಂದು ಹಾಕ್ತಿನಿ.”

ಒಂದೊಂದು ಸಾರೆಯೂ ನೂರು-ನೂರು ರೂಪಾಯಿ ಬೆಲೆಯ ಪುಸ್ತಕ! ಬಡ ಮಾಧ್ಯಮಿಕ ಶಾಲೆಯ ಉಪಾಧ್ಯಾಯರು ಅಷ್ಟು ಖರ್ಚುಮಾಡುವುದು ಎಂದಾದರೂ ಸಾಧ್ಯವೆ? ಉಪಾಧಾಯ ವೃತ್ತಿ ಅವರ ಸಂಪಾದನೆಯ ಸಾಧನವಾಗಿರಲಿಲ್ಲವೋ ಏನೋ ? ಅಷ್ಟು ದೊಡ್ಡ ಮನೆ-ಅವರು ಶ್ರೀಮಂತರೇ ಇರಬೇಕು.

ಆ ಪುಸ್ತಕಗಳು... ಕೈ ಬೆರಳು ಅವುಗಳನ್ನು ಹೆಚ್ಚಾಗಿ ತಡವಿದಂತೆಯೇ ತೋರಲಿಲ್ಲ.

"ಇಂಗ್ಲಿಷ್ ಪುಸ್ತಕಗಳೇ ಜಾಸ್ತಿ, ಅಲ್ವೆ?"

“ಹೌದು, ಹೌದು. ಕನ್ನಡದಲ್ಲಿ ಏನಿದೇಂತ ಕೊಂಡ್ಕೋಬೇಕು?"

ಕನ್ನಡವನ್ನು ಕುರಿತಾದ ಆ ಟೀಕೆ ಜಯದೇವನಿಗೆ ಹಿಡಿಸಲಿಲ್ಲ, ಅದು ನಿಜವಾಗಿರಲಿಲ್ಲ, ಅದರ ವಿಷಯಪಾಗಿ ದೀರ್ಘ ಚರ್ಚೆ ನಡೆಸುವುದಕ್ಕೂ ಅವನು ಸಿದ್ಧವಾಗಿದ್ದ. ಆದರೆ ಮನೆಗೆ ಊಟಕ್ಕೆ ಕರೆದಾಗ ಹಾಗೆಲ್ಲ ಮಾತನಾಡದಿರುವುದೇ ಮೇಲೆನಿಸಿತು.

ಹೀಗಿದ್ದರೂ ತಡೆಯಲಾಗದೆ ಹೃದಯದೊಳಗಿನ ನೋವು, ನಾಲಿಗೆಯ ತುದಿ ಚಲಿಸುವಂತೆ ಮಾಡಿತು.

“ಕನ್ನಡದಲ್ಲೇನೂ ಇಲ್ಲ ಅಂತೀರಾ?” -

ಸೂಕ್ಷ್ಮಗ್ರಾಹಿಯಾದ ನಂಜುಂಡಯ್ಯ, ಜಯದೇವನ ಮನಸ್ಸಿನಲ್ಲಿದುದನ್ನು ಊಹಿಸಿಕೊಂಡರು. ಜಯದೇವನ ಆತ್ಮೀಯನಾಗಲೆತ್ನಿಸುತ್ತಿದ್ದ ಅವರೂ ಆ ದಿನ ವೃಥಾವಾದಕ್ಕೆ ಸಿದ್ಧರಿರಲಿಲ್ಲ.,

“ಹಾಗಲ್ಲ, ಇಂಗ್ಲಿಷಿನಲ್ಲಿರೋ ರೀತಿ ಪುಸ್ತಕಗಳು ಕನ್ನಡದಲ್ಲಿ ಎಲ್ಲಿವೆ ಹೇಳಿ?”

“ಅದು ನಿಜ.”

ಅದು ನಿಜವಾಗಿತ್ತು, ಆದರೆ ಹಾಗೆಂದು, ಕನ್ನಡವನ್ನು ದೂಷಿಸುವುದರಲ್ಲಿ ಅರ್ಥವಿರಲಿಲ್ಲ.

ಜಯದೇವ ಪ್ರತುತ್ತರ ಹೇಳುವುದನ್ನು ತಡೆಯಬೇಕೆಂದೊ ಏನೋ ನಂಜುಂಡಯ್ಯ ತಮ್ಮ ಮನೆಯ ವೃತ್ತಾಂತ ಹೇಳತೊಡಗಿದರು:

“ನಾವು ನಾಲ್ಕುಜನ ಅಣ್ಣ ತಮ್ಮಂದಿರು. ಮೂವರು ತಂಗಿಯರು. ನಿಮ್ಮನ್ನು ಕರಕೊಂಡು ಬಂದ್ನಲ್ಲ ವಿರೂಪಾಕ್ಷ, ಅವನೇ ಕೊನೆಯವನು. ಹೆಣ್ಣುಮಕ್ಕಳಿಗೆಲ್ಲಾ ಮದುವೆಯಾಗಿದೆ. ತಂದೆಯವರು ತೀರಿಕೊಂಡ್ಮೇಲೆ ಪಾಲಾಯ್ತು, ದೊಡ್ಕಣ್ಣ ಇದೇ ಮನೆಯ ಇನ್ನೊಂದು ಭಾಗದಲ್ಲಿದಾನೆ. ಪೇಟೇಲಿ ಅವನ ರಖಂ ವ್ಯಾಪಾರದ ಅಂಗಡಿ ಇದೆ. ಅವನಿಗಿಂತ ಚಿಕ್ಕೋನು ರೆವಿನ್ಯೂ ಖಾತೇಲಿದಾನೆ-ಲಿಂಗಣ್ಣಯ್ಯ ಅಂತ.. ನೀವು ಹೆಸರು ಕೇಳಿದೀರೋ ಏನೋ... ಆತನೂ ಗ್ರ್ಯಾಜುಯೇಟ್...”

ಕೊನೆಯ ಪದಗಳೆರಡು-'ಆತನೂ ಗಾಜುಯೇಟ್' ನಂಜುಂಡಯ್ಯನಿಗೆ ಪದವೀಧರರನ್ನು ಕುರಿತು ಹೆಚ್ಚು ವಿಶ್ವಾಸವಿತ್ತೆಂಬುದರಲ್ಲಿ ಸಂದೇಹವಿರಲಿಲ್ಲ.ತಾನು? ತಾನು ಪದವೀಧರನಲ್ಲ, ಇನ್ನೂ ಎರಡು ವರ್ಷ ಕಲಿಯುವುದು ಸಾಧ್ಯವಾಗಲಿಲ್ಲ ತನ್ನಿಂದ.

ಪುಟ್ಟ ಹೆಣ್ಣು ಮಗುವೊಂದು ತಪ್ಪು ಹೆಜ್ಜೆಗಳನ್ನಿಡುತ್ತಾ “ಅಪ್ಪಾ ಅಪ್ಪಾ,” ಎನ್ನುತ್ತಾ ಒಳಕ್ಕೆ ಬಂತು. ಅಪರಿಚಿತನನ್ನು ನೋಡಿ ಅಪ್ಪನೆಡೆಗೆ ಬೇಗ ಬೇಗನೆ ಧಾವಿಸಿತು.

“ನೋಡು, ಯಾರು ನೋಡು.. ಮಾವ ಬಂದವ್ರೆ, ಮಾವ...!”

ಹಾಗೆನ್ನುತ್ತ ನಂಜುಂಡಯ್ಯ, ಜಯದೇವನನ್ನ ಮಗುವಿಗೆ ತೋರಿಸಲೆತ್ನಿಸಿದರು. ಆದರೆ ಆ ಮಗು, ನೋಡಲು ನಿರಾಕರಿಸಿ ತಂದೆಯ ಎದೆಯೊಳಗೆ ಮುಖವನ್ನು ಬಚ್ಚಿಟ್ಟಿತು.

“ಮಗಳು ಅಲ್ವೆ?”

ಅಪರಿಚಿತನ ಸ್ವರ ಕೇಳಿ ತನ್ನ ಮುದ್ದು ಮುಖವನ್ನೆತ್ತಿ ಒಂದು ಆರೆಕ್ಷಣ ಬೆರಗು ನೋಟದಿಂದ ಜಯದೇವನನ್ನು ನೋಡಿತು. ಜಯದೇವ ಮುಗುಳ್ನಕ್ಕ, ಆದರೆ ಆತನ ದೃಷ್ಟಿಯನ್ನು ಸಂಧಿಸಿದೊಡನೆಯೇ ಮಗು ಮತ್ತೆ ತಂದೆಯ ಎದೆಯ ಮರೆಯಲ್ಲಿ ಆಶ್ರಯ ಪಡೆಯಿತು.

“ಹೌದು; ಇನ್ನೊಬ್ಬಳಿದಾಳೆ ದೊಡ್ಡವಳು.”

“ಇಬ್ಬರೇನಾ?”

"ಹೂಂ"

ಸ್ವಲ್ಪ ತಡೆದು ನಂಜುಂಡಯ್ಯನೇ ಅಂದರು:

"ಮೊದಲಿಂದೆರಡೂ ಗಂಡು. ಎರಡೂ ತೀರಿಕೊಂಡ್ವು–”

"ಓ!"

ವಿರೂಪಾಕ್ಷ ಬಂದು, ಊಟದ ಸಿದ್ಧತೆಯಾಗಿದೆಯೆಂದು ಸೂಚನೆಯನ್ನಿತ್ತ, ಆಮಂತ್ರಿತನನ್ನು ಕರೆದುಕೊಂಡು ನಂಜುಂಡಯ್ಯ ಒಳನಡೆದರು.

ಆ ರೀತಿಯ ಊಟ ಜಯದೇವನಿಗೆ ಹೊಸತಾಗಿರಲಿಲ್ಲ.

ದಿನದ ಊಟಕ್ಕಿಂತಲೂ ಆ ದಿನ ಒಂದು ಸಿಹಿ ಜಾಸ್ತಿಯಾಗಿತ್ತು. ಮನೆಯೊಡತಿ ಬಡಿಸಲು ಹತ್ತಿರ ಬಂದೊಡನೆ ನಂಜುಂಡಯ್ಯನೆನ್ನುತ್ತಿದ್ದರು:

“ನೀಡು,ಇನ್ನೂ ಅಷ್ಟು ನೀಡು. ಬೆಂಗಳೂರ್ನೋರ್ಗೆ, ಸಂಕೋಚ ಜಾಸ್ತಿ”

ಆ ಮನೆಯೊಡತಿ ಮಾತನಾಡುತ್ತಿರಲಿಲ್ಲ, ಗಾಂಭೀರ್ಯ ತಳೆದಿದ್ದ ಆ ಮುಖದಲ್ಲಿ ಕಣ್ಣುಗಳಷ್ಟೆ ನಿರಂತರವಾಗಿ ಚಲಿಸುತ್ತಾ ಮುಗುಳುನಗು ಸೂಚಿಸುತ್ತಿದ್ದವು. ಎರಡು ಗಂಡು ಮಕ್ಕಳನ್ನು ಕಳೆದುಕೊಂಡಿದ್ದ ಆ ತಾಯಿಯು ಹೃದಯದಲ್ಲಿ ಒಬ್ಬಂಟಿಗನಾದ ಈ ಎಳೆಯನಿಗಾಗಿ-ಜಯದೇವನಿಗಾಗಿ-ವಾತ್ಸಲ್ಯವಿತ್ತು. ಅವರನ್ನು ನೋಡುತ್ತಲಿದ್ದಂತೆ ಜಯದೇವನಿಗೆ ಅವರ ಬಗೆಗೆ ಗೌರವ ಉತ್ಪನ್ನವಾಯಿತು.

ದೂರದಲ್ಲಿ ಬಾಗಿಲ ಬಳಿ ತುಂಬಾ ವಯಸಾಗಿದ್ದವರೊಬ್ಬರು ಕುಳಿತಿದ್ದರು. ಅಪರನು ತೋರಿಸುತ್ತ ನಂಜುಂಡಯ್ಯನೆಂದರು:

"ನಮ್ಮವ್ವ"

ಆ ಬಳಿಕ ಗಟ್ಟಿಯಾಗಿ ಆ ಅವ್ವನನ್ನುದ್ದೇಶಿಸಿ ಅವರೆಂದರು:

“ಏ ಅವ್ವಾ..ಇವರೇ ನೋಡು ಒಸ್ಮೇಷ್ಟ್ರು.'

ಆ ಮಾತು ಕೇಳಿಸಿದಂತೆ ಹಲ್ಲಿಲ್ಲದ ಆ ಬಾಯಿ ಸ್ವಾಗತದ ನಗೆ ನಕ್ಕಿತು. ಕಣಗಳನ್ನು ಕಿರಿದುಗೊಳಿಸುತ್ತಾ ಆ ಮುದುಕಿ ಹೆಚ್ಚು ಸೂಕ್ಷ್ಮವಾಗಿ ಹೊಸ ಮೇಷ್ಟ್ರನ್ನು ನೋಡಲೆಳಸಿದಳು ಆದರೆ ಪ್ರಟ್ಟ ಮೊಮ್ಮಗಳು ಅಜ್ಜಿಯ ಬಳಿಗೋಡಿ ಮಡಿಲನ್ನೇರಲೆತ್ನಿಸುತ್ತಾ ತೊಂದರೆ ಕೊಟ್ಟಳು.

ರುಚಿಕರವಾಗಿದ್ದ ಆ ಊಟ ಮುಗಿಯುತ್ತ ಬಂದಂತೆ ನಂಜುಂಡಯ್ಯ ಅಂದರು;

“ನಿನ್ನೆ ನಿಮ್ಮನ್ನ ಊಟಕ್ಕೆ ಕರೆದಾಗ ನೀವು ಬರ್ತಿರಿ ಅಂತ ನನಗೆ ನಂಬಿಕೆ ಇರಲಿಲ್ಲ.”

"ಯಾಕೆ?"

“ನಿಮ್ಮ ಜನ ಸಾಮಾನ್ಯವಾಗಿ ನಮ್ಮವರಲ್ಲಿ ಊಟ ಮಾಡೋದಿಲ್ಲ.”

ಜಯದೇವನಿಗೆ ನೋವಾಯಿತು.

“ನಮ್ಮ ಜನ ಅಂದರೆ? ದಯವಿಟ್ಟ ಹಾಗೆ ಮಾತಾಡ್ಬೇಡಿ ಸಾರ್. ಜಾತಿ ವಿಷಯದಲ್ಲಿ ನನ್ನ ಅಭಿಪ್ರಾಯ ಏನೂ೦ತ ನಿನ್ನೆಯೇ ಹೇಳಿಲ್ವೇ?"

"ಸಾರಿ, ಕ್ಷಮಿಸಿ"

ಆದರೆ ಮತ್ತೊಮ್ಮೆ ಜಯದೇವನ ಬಾಯಿಂದ ಆ ಮಾತು ಕೇಳಬೇಕೆಂದೇ ನಂಜುಂಡಯ್ಯ ಹಾಗೆ ಅಂದಿದ್ದರು. ಮುಂದಿನ ಅವರ ಬೇರೆ ಮಾತುಗಳಿಗೆ ಆ ನೆಲೆಗಟ್ಟು ಅವಶ್ಯವಾಗಿತ್ತು,

ಅದನ್ನು ತಿಳಿಯಲಾರದೆ ಜಯದೇವ, 'ಈ ಜಾತಿ ಮತಗಳ ಗೀಳಿನಿಂದ ನಮ್ಮ ದೇಶಕ್ಕೆ ಯಾವತ್ತು ಮುಕ್ತಿಯೋ? ಎಂದು ಚಿಂತಿಸುತ್ತ ಕೊನೆಯ ತುತ್ತನ್ನೆತ್ತಿ ಬಾಯಿಗಿಟ್ಟ.

ಕೈತೊಳೆದು ಬಂದು ಮತ್ತೆ ಕುರ್ಚಿಯ ಮೇಲೆ ವಿರಮಿಸಲೆಂದು ಕುಳಿತಾಗಲೂ ಜಯದೇವನ ಮೆದುಳು ಕೆಲಸ ಮಾಡುತ್ತಲೇ ಇತ್ತು.

—ನಂಜುಂಡಯ್ಯ ಸುಸಂಸ್ಕೃತ ನಾಗರಿಕರು, ಪದವೀಧರರು. ಮನೆಯಲ್ಲಿ ಒಳ್ಳೆಯ ಯಜಮಾನ.. ಊರಲ್ಲೂ ಅವರಿಗೆ ಗೌರವವಿದ್ದೇ ಇರಬೇಕು. ಇಂಥವರ ದೃಷ್ಟಿ ವಿಶಾಲವಾಗುವುದು ಸಾಧ್ಯವಿಲ್ಲವೆ?

“ಸಿಗರೇಟಂತೂ ನೀವು ಸೇದೊಲ್ಲ, ಎಲೆ ಹಾಕಿಕೊಳ್ತಿರೇನು?

ಜಯದೇವನನ್ನು ಉದ್ದೇಶಿಸಿ ಪ್ರಶ್ನೆ ಬಂತು.

“ಇಲ್ಲ ಸಾರ್... ಅದನ್ನೂ ಅಭ್ಯಾಸ ಮಾಡಿಲ್ಲ. . . . . ."

ನಂಜುಂಡಯ್ಯ ನಕ್ಕರು.

“ನೀವು ಯಾವುದಾದರೂ ಒಂದು ಅಭ್ಯಾಸ ಮಾಡ್ಬೇಕು ಜಯದೇವ್. ಕಡೆಪಕ್ಷ ನಶ್ಯನಾದರೂ ಹಾಕಿ!! ಹುಡುಗರು ಗುರುದಕ್ಷಿಣೆ ಏನಪ್ಪಾ ಕೊಡೋದೂಂತ ತಬ್ಬಿಬ್ಬಾಗ್ಬಾರ್ದು."

ತಾನು ಮತ್ತು ನಶ್ಯ! ತಲೆಗೆ ರುಮಾಲು, ಮೂಗಿನ ಮೇಲೆ ಕನ್ನಡಕ, ನುಚ್ಚುಕಾಲರಿನ ಕೋಟು, ಕೈಯಲ್ಲಿ ಬೆತ್ತ.. ಡಬ್ಬ ಹೊರತೆಗೆದು ತೋರು ಬೆರಳಿಂದ ಅದರ ತಲೆಯನ್ನೊಮ್ಮೆ ತಟ್ಟಿ ಮುಚ್ಚಳ ತೆರೆದು ಒಂದು ಚಿಟಿಕೆ ನಶ್ಯವನ್ನು ಮೂಗಿಗೇರಿಸಿ..

ಜಯದೇವನಿಗೆ ನಗು ತಡೆಯಲಿಲ್ಲ, ಕಣ್ಣ ಮುಂದೆ ಕಟ್ಟಿದ ಆ ಚಿತ್ರ ಕಾಲ್ಪನಿಕವಾಗಿರಲಿಲ್ಲ. ಕಾನಕಾನಹಳ್ಳಿಯ ಮಾಧ್ಯಮಿಕ ಶಾಲೆಯಲ್ಲಿ ಆ ಉಪಾಧಾಯರಿದ್ದರು. ತಾನೂ ಹಾಗೆಯೇ–

ನಶ್ಯದ ಗುರುದಕ್ಷಿಣೆಯ ಪ್ರಸ್ತಾಪ ಕೇಳಿ ಜಯದೇವ ನಗುತಿದ್ದಾನೆಂದು ನಂಜುಂಡಂಯ್ಯನೂ ನಕ್ಕರು.

ಅವರು ಕೈಗಡಿಯಾರ ನೋಡಿದರು.

“ಹತ್ತೂಕಾಲು ಈಗ, ಹತ್ತೂವರೆಗೆ ಹೊರಟು ಬಿಡೋಣ.”

“ಹೂಂ, ಪಾಠ ಗೊತ್ತುಮಾಡೋದಕ್ಕಿದೆಯಲ್ಲ, ಐದು ನಿಮಿಷ ಮೊದಲೇ ಬಂದ್ಬಿಡೀಂತ ಮುಖ್ಯೋಪಾಧ್ಯಾಯರು ಹೇಳಿದ್ರು”

“ರಂಗರಾಯರು? ನೀವೇನೂ ಯೋಚಿಸ್ಬೇಡಿ, ಟೈಂ ಟೇಬಲ್ ಮೊದಲೇ ಮಾಡಿ ಇಟ್ಟಿರ್ತಾರೆ. ನಾವು ಹೋದ ತಕ್ಷಣ ಮುಂದೆ ಇಟ್ಟು ನಮ್ಮಿಂದ ಸರಿ ಅನ್ನಿಸ್ಕೊಳ್ತಾರೆ ! ನಿಮಗಿನ್ನೂ ಅವರ ಪರಿಚಯ ಇಲ್ಲ. ಅವರು ಹಳೇ ಕಾಲದ ಮೆಟ್ರಿಕುಲೇಟ್ ಜಯದೇವ್, ಸಾಮಾನ್ಯ ಅಂತ ತಿಳಕೋಬೇಡಿ!"

ನಂಜುಂಡಯ್ಯ ನಗುತ್ತ ಹಾಗೆ ಅಂದಿದ್ದರೂ ಅದು ತಮಾಷೆಯ ಮಾತಷ್ಟೇ ಆಗಿರಲಿಲ್ಲ, ಆ ಸ್ವರದೊಡನೆ ಸೂಕ್ಷ್ಮವಾಗಿ ಬೆರೆತಿದ್ದ ಅಸಹನೆಯನ್ನು ಜಯದೇವ ಗುರುತಿಸಿದ. ರಂಗರಾಯರೂ ನಂಜುಂಡಯ್ಯನವರೂ ಅನ್ನೋನ್ಯವಾಗಿಲ್ಲವೆಂಬುದಷ್ಟು ಆ ಮಾತಿನಿಂದ ಸ್ಪಷ್ಟವಾಯಿತು. ಅಥವಾ ತಾನೇ ಹಾಗೆಂದು ತಪ್ಪು ತಿಳಿದಿರಬಹುದು: ರಂಗರಾಯರನ್ನು ಅವರು ಹೊಗಳುವುದರಲ್ಲಿ ಕೊಂಕು ಎಲ್ಲಿಯದು?-ಎಂದೂ ಒಂದು ಕ್ಷಣ ಜಯದೇವ ಯೋಚಿಸಿದ.

ಆದರೆ ನಂಜುಂಡಯ್ಯನ ಮುಂದಿನ ಪ್ರಶ್ನೆ, ಅಂತಹ ಯೋಚನೆ ಅನವಶ್ಯವೆಂದು ಸಾರಿತು.

*ರಂಗರಾಯರು ಏನಾದರೂ ಅಂದ್ರಾ ಜಯದೇವ್?”

ಜಯದೇವ ಯಾಕೋ ಇದೆಲ್ಲಾ ಸರಿಯಾಗಿಲ್ಲಾ ಎಂದುಕೊಂಡರೂ,ಆವನ ಕುತೂಹಲ ಕೆರಳಿತು.

“ಇಲ್ಲ!!”

ಆ ಮಾತನ್ನು ನಂಬದವರ ಹಾಗೆ ನಂಜುಂಡಯ್ಯ ಜಯದೇವನನ್ನೆ ನೋಡಿ, ಆತ ನಿಜವನ್ನೆ ಆಡುತ್ತಿದ್ದನೆಂಬುದು ಮನವರಿಕೆಯಾದ ಬಳಿಕ ಸಿಗರೇಟನ್ನು ಎರಡು ಸಾರೆ ಮೇಲಿಂದ ಮೇಲೆ ಸೇದಿ ಹೊಗೆಬಿಡುತ್ತ ಅಂದರು:

*ರಂಗರಾಯರಿಗೆ ಬೇಗನೆ ವರ್ಗವಾಗಬಹುದು.”

“ಓ! ನನಗೆ ಗೊತ್ತೇ ఇల్లి. ಹಾಗೇನು ?

“ಹೂಂ.. ಕಾರಣ ಗೊತ್ತೆ ? ಅವರ ಮೇಲೆ ಆರೋಪಗಳಿವೆ. ಡಿ.ಪಿ.ಐ. ಯವರವರೆಗೂ ಹೋಗಿದೆ ವಿಷಯ. ದೂರ, ಬೇರೆ ಜಿಲ್ಲೆಗೇ ವರ್ಗಮಾಡ್ತಾರೆಂತ ಸುದ್ದಿ.”

ಆ ಮಾತುಕತೆಯೇನೂ ಹಿತಕರವಾಗಿರಲಿಲ್ಲ. ಹಿಂದಿನ ದಿನವಷ್ಟೇ ಬಲು ಒಳ್ಳೆಯವರೆಂದು ತಾನು ಭಾವಿಸಿದ್ದ ರಂಗರಾಯರೇ ಇಂಥವರಾಗಬೇಕೇ?... ಅಥವಾ ಈ ಶಾಲೆಗೆ ಇಬ್ಬರು ಉಪಾಧ್ಯಾಯರೇ ಸಾಕು ಎನ್ನುವುದಕ್ಕೋಸ್ಕರ ಅವರನ್ನು ವರ್ಗಾಯಿಸುತ್ತಿರಬಹುದೆ?

“ಹಾಗಾದರೆ ಇಲ್ಲಿ ಸಾಲೆಗೆ ಸಾಕೇನು??”

“ಯಾಕೆ, ಇನ್ನೂ ಒಬ್ಬರ್ನ ಸಹಾಯಕ್ಕೆ ಕಳಿಸ್ತಾರೆ.”

'ಸಹಾಯಕ್ಕೆ' ಎನ್ನುವ ಪದ ಹೊಸ ವಿಷಯವನ್ನು ಜಯದೇವನಿಗೆ ತಿಳಿಸಿತು. ಹಾಗಾದರೆ, ನಂಜುಂಡಯ್ಯನೇ ಇನ್ನು ಮುಖೇಯ್ಯೋಪಾಧ್ಯಾಯರಾಗುವರು... :

ಆ ತಿಳಿವಳಿಕೆ ಜಯದೇವನಿಗೆ ಆಯಿತೆ ಇಲ್ಲವೆ ಎಂಬುದನ್ನೂ ನಂಜುಂಡಯ್ಯ ಗವುನಿಸಿದಂತೆ ತೋರಿತು.

ಅವರು ಪೋಷಾಕು ಧರಿಸಿದರು. ಹಿಂದಿನ ದಿನ ತಾನು ಅದೇ ಸೂಟಿನಲ್ಲಿದ್ದ ಅವರನ್ನು ಕಂಡಿದ್ದ.

“ಸೈನ್ಸ್ ಗ್ರಾಜುಯೇಟು ನಾನು ಈ ಕೊಂಪೇಲಿ ಯಾಕಿದೀನೀಂತ ನಿವುಗೆ ಆಶ್ಚರ್ಯ ಆಗ್ಬಹುದಲ್ವೆ?"

“ಮನೆ ಇಲ್ಲೇ ಇದೆ, ಅದಕ್ಕೋಸ್ಕರ.”

“ಹೌದು, ಸರಿಯಾಗೇ ಊಹಿಸಿದಿರಿ. ಊರಲ್ಲೆಲ್ಲಾ ಇಲ್ಲಿ ಒತ್ತಾಯ ಮಾಡ್ತಿದ್ದಾರೆ: ಬೇಗ್ನೇ ಒಂದು ಹೈಸ್ಕೂಲು ತೆರೀಬೇಕು, ನಾನು ಎಚ್.ಎಂ.ಆಗ್ಬೇಕೂಂತ..ಇವತ್ತಲ್ಲ ನಾಳೆ ಆಗಿಯೇ ಆಗುತ್ತೆ.”

ಅದೂ ಜಯದೇವ ಊಹಿಸದೇ ಇದ್ದ ವಿಷಯವಾಗಿತ್ತು, ಆ ಕೊಂಪೆಗೊಂದು ಹೈಸ್ಕೂಲು....

“ಹೈಸ್ಕೂಲು ತೆರೆಯೋಕೆ.ವಿದ್ಯಾರ್ಥಿಗಳು ಸಾಕಷ್ಟ ಇದಾರೆ ಅಲ್ವೆ?

“ಇಲ್ದೆ ಏನು? ಈ ರೇಂಜಿನವರೆಲ್ಲಾ ಬರ್ತಾರೆ. ಊರೂ ಬೆಳೆಯುತ್ತೆ.”

ನಾಳೆಯ ದಿನ ಬೆಳೆಯುವ ಬದಲಾಗುವ ಕಲ್ಪನೆಯ ಚಿತ್ರ ಸೊಗಸಾಗಿತ್ತು, ರಂಗರಾಯರೂ ಅಂದಿದ್ದರು-ಕನಸು ಕಾಣುವುದು ಒಳ್ಳೆಯದೆಂದು. ಆ ವಿಷಯದಲ್ಲಿ ನಂಜುಂಡಯ್ಯ ರಂಗರಾಯರಿಬ್ಬರಲ್ಲೂ ಒಂದೇ ಗುಣವಿತ್ತು.

“ಇಷ್ಟು ಚಟುವಟಿಕೆ ಉತ್ಸಾಹ ಇರೋ ಊರು ಸಿಕ್ಕಿದ್ದು ನನ್ನ ಭಾಗ್ಯ” ಎಂದ ಜಯದೇವ ಮರುಕ್ಷಣವೆ, ನಂಜುಂಡಯ್ಯನವರ ಪ್ರೀತ್ಯರ್ಥವಾಗಿ ತಾನು ಹಾಗೆ ಹೇಳಿದೆನೆ, ಎಂಬ ಯೋಚನೆಯುಂಟಾಗಿ ಮನಸ್ಸಿನಲ್ಲಿ ಕಸಿವಿಸಿಯೆನಿಸಿತು

.ನಂಜುಂಡಯ್ಯ-ಜಯದೇವ ಇಬ್ಬರು ಶಾಲೆಗೆ ಹೊರಟರು, ಹೊಸ ಉಪಾಧ್ಯಾಯರು ತಮ್ಮ ಮನೆಗೆ ಊಟಕ್ಕೆ ಬಂದಿದ್ದರೆಂಬ ಹೆಮ್ಮೆಯಿಂದ ಉಬ್ಬಿದ್ದು ವಿರೂಪಾಕ್ಷನೂ ಪಾಠದ ಪುಸ್ತಕಗಳನ್ನೆತ್ತಿಕೊಂಡು ಅವರಿಬ್ಬರ ಹಿಂದೆಯೇ ನಡೆದ.

ಹಾದಿ ಸಾಗುತಿದ್ದಂತೆ ನಂಜುಂಡಯ್ಯನೆಂದರು

“ನಾನು ತಿಳಿಸಿದ ವಿಷಯ ದಯವಿಟ್ಟ ನಿಮ್ಮಲ್ಲೇ ಇರ್ಲಿ, ರಂಗರಾಯರಿಗೆ ಹೇಳ್ಬೇಡಿ.”

“ಇಲ್ಲ ಇಲ್ಲ. ನಾನ್ಯಾಕೆ ಹೇಳ್ಲಿ?

ಹಾಗನ್ನುತಾ ಜಯದೇವ ವಿರೂಪಾಕ್ಷನನ್ನ ನೋಡಿದ. ಆ ಹುಡುಗನೆದುರಿನಲ್ಲಿ ಈ ಮಾತನ್ನು ನಂಜುಂಡಯ್ಯ ಆಡಬಾರದಿತ್ತು ಎನಿಸಿತು ಜಯದೇವನಿಗೆ. ಮುಗ್ದನಾದ, ಒಳ್ಳಿತಿನ ಬಗೆಗೆ ಗೌರವವಿದ್ದ, ಹೊಸತಿನ ಬಗೆಗೆ ಕುತೂಹಲವಿದ್ದ ಹುಡುಗ. ಅವನ ಮನಸ್ಸಿನಲ್ಲೀಗ ಕಲ್ಮಷವೇನೂ ಇರುವುದು ಸಾಧ್ಯವಿರಲಿಲ್ಲ, ಆದರೆ ಇಂತಹ ಮಾತುಗಳನ್ನು ಕೇಳುತ್ತ ಹೋದಂತೆ ಸಂದೇಹಗಳು ಮೂಡಬಹುದು. ದೃಷ್ಟಿ ಕಲುಷಿತವಾಗಬಹುದು. ಒಳ್ಳೆಯ ಮನಸಿಗೆ ಆತುಕೊಂಡು ಅಲ್ಪ ವಿಚಾರಗಳ ಬದನಿಕೆ ಬೆಳೆಯಬಹುದು.

ನಡೆಯುತಿದ್ದಂತೆ ಮೌನ ತರವಲ್ಲವೆಂದು ಜಯದೇವನೆಂದ:

“ರಂಗರಾಯರು ಬೆಳಗ್ಗೆ ಬೇಗ್ನೆ ಶಾಲೆಗೆ ಹೋಗ್ತಾರೇಂತ ಕಾಣುತ್ತೆ”

“ಹೌದು, ಮಧಾಹ್ನದ ವಿರಾಮದಲ್ಲಿ ಊಟಕ್ಕೆ ಹೋಗಿಬರ್ತಾರೆ.”

ಮುಂದೇನು ಹೇಳಬೇಕೆಂದು ತಿಳಿಯದೆ ಜಯದೇವ ಮೌನವಾದ, ಒಮ್ಮೆಲೆ ಬೇಸರದ ಛಾಯೆಯೊಂದು ಆತನನ್ನು ಆವರಿಸಿ, ಉಸಿರಾಡುವುದು ಕಷ್ಟವಾಯಿತು. ಎಳೆಯ ವಿದ್ಯಾರ್ಥಿಗಳೊಡನೆ ಬೆರೆತು, ಆ ಸುಂದರಲೋಕದಲ್ಲಿ ಅವರ ಒಡನಾಡಿಯಾಗಿ, ಭಾವೀ ಪ್ರಜೆಗಳನ್ನು ರೂಪಿಸಲು ನೆರವಾಗುವ ಹಲವೊಂದು ಕನಸುಗಳನು ಆತ ಕಂಡಿದ್ದ, ಆದರೆ ವಸ್ತುಸ್ಥಿತಿ ಅಷ್ಟು ಸರಳವಾಗಿರಲಿಲ್ಲ; ಆತನ ಕೆಲಸ ಅಷ್ಟು ಸುಲಭವಾಗಿರಲಿಲ್ಲ.

"ತರಗತಿ ವಿಷಯ ಯೋಚಿಸ್ತಿದೀರಾ?

ಜಯದೇವ ನಿರ್ದಿಷ್ಟವಾಗಿ ಆಲೋಚನೆಯನ್ನು ಮಾದುತ್ತಿರಲಿಲ್ಲ. ಆದರೂ, ಮನಸಿನಲ್ಲಿದ್ದುದನ್ನೆ ಹೇಳಲಾಗದೆ, ಅವನೆಂದ, ಆದರೂ, ಮನಸಿನಲ್ಲಿದುದನ್ನೆ ಹೇಳಲಾಗದೆ, ಅವನೆಂದ:

"ಹೂಂ ಒಂದು ರೀತಿ ಹಾಗೆಂತ ಅನ್ಬಹುದು."

“ನನ್ನ ಕೇಳಿದರೆ, ಈ ಪಾಠ ಹೇಳ್ಕೊಡೋದೆಲ್ಲ ಬಹಳ ಸುಲಭ. ಅದರ ಬದಲು ನೀವು ವಸತಿ ಊಟದ ಯೋಚನೆ ಮಾಡ್ಬೇಕು.”

“ಅದೂ ನಿಜವೇ!"

“ಏನು ತೀರ್ಮಾನ ಮಾಡಿದಿರಿ? ರಂಗರಾಯರು ಏನಂದ್ರು?

“ಇನ್ನೂ ಏನೂ ಇಲ್ಲ.”

“ಸ್ವಲ್ಪ ಸಮಯ ನೀವು ಶಾಲೆಯಲ್ಲೇ ವಾಸವಾಗಿರೋದು ಮೇಲು. ಊಟ ಬೇಕಾದ್ರೆ--"

“ಸದ್ಯ ಯಾವುದಾದರೂ ಹೋಟೆಲ್ನಲ್ಲೇ ಊಟ ಮಾಡೋಣಾಂತಿದೀನಿ.”

“ಹಾಗೂ ಆಗ್ಬಹುದು. ಆನಂದವಿಲಾಸದವನಿಗೆ ಹೇಳ್ತೀನಿ. ಸ್ನಾನಕ್ಕೆಲ್ಲ ಅಲ್ಲೇ ಅನುಕೂಲ."

'ಹೊ೦.'

ನಿಟ್ಟುಸಿರು ಬಿಟ್ಟು ಹುಬ್ಬು ಹಾರಿಸಿ ನಂಜುಂಡಯ್ಯ ಅಂದರು :

“ನಿಮ್ಮನ್ನ ನೋಡಿದ್ರೆ ನಂಗೆ ಅಸೂಯೆಯಾಗುತ್ತೆ.'

“ಯಾಕ್ಸಾರ್?”

“ನೀವು ಭಾಗ್ಯಶಾಲಿ, ಒಬ್ಬರೇ ಇದ್ದೀರ! ಭುಜಕ್ಕಿನ್ನೂ ನೊಗ ತಗಲಿಸಿಕೊಂಡಿಲ್ಲ !”

ಬೆಂಗಳೂರಲ್ಲಿ ಆವರೆಗೂ ಯಾರೂ ಆ ರೀತಿ ಜಯದೇವನನ್ನು ಲೇವಡಿ ಮಾಡುತ್ತಿರಲಿಲ್ಲ, ಯಾಕೆಂದರೆ ಅವರೆಲ್ಲರ ಪಾಲಿಗೆ ಆತ ವಿದ್ಯಾರ್ಥಿ, ಈ ಊರಲ್ಲಾದರೆ ಹಾಗಲ್ಲ, ಜಯದೇವ, ಶಾಲೆಯ ಉಪಾಧ್ಯಾಯ, ಸಂಬಳ ಎಷ್ಟಾದರೇನಂತೆ? ತಿಂಗಳ ಸಂಪಾದನೆಯಿದೆ. ಯಾಕಿನ್ನೂ ಮದುವೆಯಿಲ್ಲ?ಎಂದು ಹತ್ತಾರು ಜನ ಕೇಳುವುದರಲ್ಲಿ ಆಶ್ಚರ್ಯವೇನಿತ್ತು?

ಪ್ರತಿಯೊಬ್ಬ ಗಂಡಸೂ ಹೊತ್ತುಕೊಳ್ಳಬೇಕಾದ ನೊಗದ ಮಾತನ್ನೆತ್ತಿ ನಂಜುಂಡಯ್ಯ ನಕ್ಕರು. ಜಯದೇವನಿಗೂ ನಗು ಬಂತು.

ಅಷ್ಟರಲ್ಲೇ ದೃಷ್ಟಿಯಎದುರು ಕಾಣಿಸಿದ ಶಾಲೆಯಿಂದ ಬಾರಿಸಿದ ಘಂಟೆಯ ಸದ್ದು ಕೇಳಿಸಿತು. ಜಯದೇವ ನಗು ನಿಲ್ಲಿಸಿ ಮುಖ ಸಪ್ಪಗೆ ಮಾಡಿಕೊಂಡ.

-ತಡವಾಗಿತ್ತು, ಮೊದಲ ದಿನವೇ!

ನಂಜುಂಡಯ್ಯ ಜಯದೇವನ ಮುಖದ ಮೇಲಿನ ಭಾವನೆಯನ್ನು ಗಮನಿಸಿ, ಬೇಗ ಬೇಗನೆ ಹೆಜ್ಜೆ ಇಟ್ಟರು.

“ಬನ್ನಿ, ರಂಗರಾಯರು ಪಾಠಪಟ್ಟಿ ಹಾಗೆ ಸಿದ್ಧಪಡಿಸಿ ಇಟ್ಟಿದಾರೋ ನೋಡೋಣ.”