ದೂರದ ನಕ್ಷತ್ರ/೫

ವಿಕಿಸೋರ್ಸ್ ಇಂದ
Jump to navigation Jump to search

ಮೊದಲ ಮೂರು ತರಗತಿಗಳಿಗೆ ಕನ್ನಡ-ಇತಿಹಾಸ-ಭೂಗೋಳಗಳ ಉಪಾಧ್ಯಾಯನಾದ ಜಯದೇವ.

ರಂಗರಾಯರು ಪ್ರತಿಯೊಂದು ತರಗತಿಗೂ ಆತನನ್ನೊಯ್ದು ಪರಿಚಯ ಮಾಡಿಕೊಟ್ಟರು. ಪ್ರತಿಯೊಂದು ತರಗತಿಯಲ್ಲೂ ಹುಡುಗರು, ಮುಖ್ಯೋಪಾಧ್ಯಾಯರ ಸೂಚನೆಯಂತೆ, ಗಂಟಲು ಬಿರಿದು ಹೋಗುವ ಹಾಗೆ ಜಯ ದೇವನನ್ನು ಕುರಿತು ನಮಸ್ಕಾರ ಎಂದರು.

ನಾಲ್ಕನೇ ತರಗತಿಯವರೋ ಎಲ್.ಎಸ್. ಪರೀಕ್ಷೆ ಕಟ್ಟುವ ಹುಡುಗರು. ಕೆಲವರಂತೂ ದೊಡ್ಡ ಹುಡುಗರಾಗಿದ್ದರು. ಆರೇಳು ಜನ ಹುಡುಗಿಯರೂ ಇದ್ದರು. ಲಂಗ ಸೀರೆಗಳು. ಹಿಂದಿನ ದಿನ ಆಫೀಸು ಕೊಠಡಿಯಲ್ಲಿ ತಾನು ಕುಳಿತಿದ್ದಾಗ ಆ ಹುಡುಗಿಯರೇ ಅತ್ತಿತ್ತ ಹಾದು ಹೋಗಿರಬೇಕು.. ಅದು ಶಾಲೆಯ ಹಿರಿಯ ಹುಡುಗರ ಬಳಗ, ಅವರೆದುರು ತಾನೂ ಒಬ್ಬ ಹುಡುಗನೇ ಎನಿಸಿತು ಜಯದೇವನಿಗೆ.. ಅವರೆಲ್ಲರನ್ನೂ ಅಂಕೆಯೊಳಗಿಡುವುದು ತನ್ನಿಂದ ಆಗದ ಮಾತು–ಎಂಬ ಅಳುಕು ಹುಟ್ಟಿತು. ಈ ಉಪಾಧ್ಯಾಯ ವೃತ್ತಿ ತನಗೆ ಸರಿಹೋಗುವುದೋ ಇಲ್ಲವೋ ಎಂಬ ಶಂಕೆ ಮೂಡಿತು... ... .....

ಆದರೆ ಬೇಗನೆ ಆತ ಮೊದಲ ತರಗತಿಗೆ ಹಿ೦ತಿರುಗಿ ಬಂದು ಬಡಕಲಾದ ಮೇಜಿನ ಹಿಂದಿದ್ದ ಹಳೆಯ ಕುರ್ಚಿಯ ಮೇಲೆ ಹಸನಮ್ಮಖಿಯಾಗಿ ಕುಳಿತ.

ಒಂದು ಕ್ಷಣ ಆತನ ದೃಷ್ಟಿಗೆ ಆ ಕೊಠಡಿ ತೇಲುತ್ತಿದ್ದ ತಲೆಗಳ ಸಾಗರವಾಯಿತು. ಮೆದುಳು ಯೋಚಿಸುವುದನ್ನೆ ನಿಲ್ಲಿಸಿತು. ಮಾತನಾಡುವ ಶಕ್ತಿಯನ್ನೆ ಕಳೆಧುಕೊಂಡ ಹಾಗಾಯಿತು ನಾಲಿಗೆ.

ಆದರೆ ತುಟಿಗಳ ಮೇಲಿನ ನಗು ಅಳಿಸಿಹೋಗಲಿಲ್ಲ, ಮೊಗ್ಗು, ಬಿರಿಯುವಂತೆ ಅದು ಅರಳಿತು. ತಮ್ಮದಲ್ಲದ ಗಾಂಭೀರ್ಯವನ್ನು ನಟಿಸುತ್ತ ಕುಳಿತಿದ್ದ ವಿದ್ಯಾರ್ಥಿಗಳು ಮುಖ ಸಡಿಲಿಸಿ ತಾವೂ ನಕ್ಕರು.

ಎಳೆಯರ ಆ ನಗು ಜಯದೇವನಿಗೆ ನವಚೇತನವನ್ನು ನೀಡಿತು. ಆತ, ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರು ಕೇಳಬೇಕೆಂದುಕೊಂಡ. ಆದರೆ ಮರು ಕ್ಷಣವೆ, 'ನಾನೊಬ್ಬ ಹುಚ್ಚ, ಹಾಜರಿ ಪುಸ್ತಕ ಇದೆಯಲ್ಲ' ಎಂದು ಆ ಪುಸ್ತಕವನ್ನು ತೆರೆದ.

“ಶೇಷಪ್ಪ ಕೆ.ಬಾಲಕೃಷ್ಣ ಎಸ್.ರಾಮಚಂದ್ರ ಶೆಟ್ಟಿ ಟಿ.ಗರುಡಚಾರ್ ಎಲ್...'

ಹುಡುಗರು “ಪ್ರಸೆಂಟ್ ಸಾರ್” ಎನ್ನುತ್ತ ಹೋದರು. ಜಯದೇವ ಗುರುತು ಹಾಕುತ್ತ ನಡೆದ.

ಕೊನೆಯಲ್ಲಿ ಹುಡುಗಿಯರ ಹೆಸರುಗಳು...

“ನೀಲಮಣಿ ಎಂ....ಸುಮಿತ್ರಾ ಎಸ್....ಗಂಗೂಬಾಯಿ ಎಂ...."

..' ಐವರು ಹುಡುಗಿಯರೂ ತರಗತಿಗೆ ಬಂದಿದ್ದರು.ಆದರೆ ಹುಡುಗರಲ್ಲಿ ಹತ್ತಾರು ಜನ ಇರಲಿಲ್ಲ. ಒಂದು ವಾರದಿಂದಲೂ ಅವರು ಬ೦ದಿರಲಿಲ್ಲ.

‘ಯಾಕೆ ಇಷ್ಟೊಂದು ಜನ ಬಂದಿಲ್ಲ?

ಉತ್ತರ ಕೊಡುವುದೆಲ್ಲ ತನ್ನ ಹಕ್ಕು ಎಂಬಂತೆ ಮೊದಲ ಸಾಲಿನಲ್ಲಿದ್ದ ಒಬ್ಬ ಹುಡುಗ ಎದ್ದು ಕೈಕಟ್ಟಿ ನಿಂತ:

“ಅವರು ಯಾರೂ ಪುಸ್ತಕ ಕೊಂಡ್ಕೊಂಡಿಲ್ಲ ಸಾರ್, ಪುಸ್ತಕ ತರೋವರ್ಗೂ ಕ್ಲಾಸಿಗೆ ಬರ್ಕೂಡ್ದಂತ ನಂಜುಂಡಯ್ಯ, ಮೇಷ್ಟ್ರು ಹೇಳಿದಾರೆ ಸಾರ್"

ಜಯದೇವ, ಆ ಹುಡುಗನಿಗೆ ಕುಳಿತುಕೊಳ್ಳಲು ಸನ್ನೆ ಮಾಡಿದ.

ಶುಭಸೂಚಕವಾಗಿರಲಿಲ್ಲ ಆ ಆರಂಭ, ಪುಸ್ತಕ ಕೊಳ್ಳದೆ ಇದ್ದ ಹುಡುಗರು...ಅವನಿಗೆ ಗೊತ್ತಿತ್ತು....ಪುಸ್ತಕ ಕೊಳ್ಳಲಾಗದ ಹುಡುಗರು... ಹಳೆಯ ಕಥೆಯೇ, ಹಲವು ವರ್ಷಗಳ ಹಿಂದೆ ಮಾಧ್ಯಮಿಕ ಶಾಲೆಯಲ್ಲಿ ಆತ ಓದುತ್ತಿದ್ದಾಗಲೂ ಅಂತಹ ಹುಡುಗರಿದ್ದರು. ಮತ್ತೆ ಈಗಲೂ.

ಆ ವರ್ಷವೇ ಹೊಸದಾಗಿ ಅಚ್ಚಾಗಿ ಬಂದಿದ್ದ ಮೊದಲ ತರಗತಿಯ ಪುಸ್ತಕವನ್ನು-ಕನ್ನಡ ಐದನೆಯ ಪುಸ್ತಕವನ್ನು-ಆಫೀಸು ಕೊಠಡಿಯಿಂದ ಹಿಡಿದುಕೊಂಡು ಜಯದೇವ ಬಂದಿದ್ದ... ಮೊದಲ ಪಾಠದಿಂದಲೇ ಆರಂಭಿಸಬೇಕೆಂದೇನೂ ಇರಲಿಲ್ಲ, ಪುಟಗಳನ್ನು ಮಗುಚುತ್ತಾ ಯಾವುದಾದರೂ ಪದ್ಯವನ್ನು ಓದೋಣವೆಂದುಕೊಂಡ,

ಒಂಬತ್ತನೆಯ ಪಾಠವಾಗಿತು ಆ ಹಾಡು,

“ಹರಹರ ಮಹಾದೇವ ಶಂಭೋ”

ಆ ಪಲ್ಲವಿಯ ಬಳಿಕ –

“ಬಾಲದಳದವರಾವು ಕಾಲಿಗೆರಗುವೆವು

ಬಾಲಭಟರಾವುಗಳು ಹರಕೆ ಬೇಡುವೆವು”

ಬಾಲದಳದವರ-ಸ್ಕೌಟು ಚಳವಳಿಯ-ಹಾಡು.. ಎದುರು ಪುಟದಲ್ಲಿ ಸ್ಕೌಟೊಬ್ಬನ ಚಿತ್ರವೇನೋ ಇತ್ತು, ಆದರೂ ಸ್ಕೌಟು ಚಳುವಳಿಯ ಕಲ್ಪನೆ ಆ ಹುಡುಗರಿಗೆ ಇರಲಿಲ್ಲ, ಆ ಹಾಡು ಅಷ್ಟಾಗಿ ಅವರಿಗೆ ರುಚಿಸಲಿಲ್ಲ.

ಒಂದೆಡೆ ಇತ್ತು:

“ಆವ ಸಮಯದೊಳಾರು ಸಾಹ್ಯ ಬೇಡಿದರು

ನಾವೊಡನೆ ಸಿದ್ಧರಾಗಿರುವ ವೃತ್ತಿಯನು”

ಸಾಹ-ಅದೆಂತಹ ಪದವೋ! ಜಯದೇವ ಕೊನೆಯ ಪುಟಗಳನ್ನು ಮಗುಚಿ ಟಿಪ್ಪಣಿಯನ್ನೋದಿದ. ಅಲ್ಲೇನೂ ಇರಲಿಲ್ಲ, ಸಹಾಯ ಎಂದೇ ಇರಬೇಕೆಂದು ಕೊ೦ಡ.

'ಈ ಪದ್ಮವನು ಯಾರಾದರೂ ಓದ್ದೀರೇನಪ್ಪಾ?"

ಒಬ್ಬ ಹುಡುಗನೆದ್ದು ಹೇಳಿದ:

“ನನಗೆ ಬಾಯಿಪಾಠ ಬರುತ್ತೆ ಸಾರ್.”

“ಹೇಳು ಹಾಗಾದರೆ.”

“ಹರ ಹರ ಮಹಾದೇವ್ವ ಶಮ್ ಭೋ...”

ಆ ಉಚ್ಚಾರವೂ ತಾಳಲಯವೂ ವಿಚಿತ್ರವಾಗಿದ್ದವು.

ಕೊನೆಯ ಸಾಲುಗಳನ್ನಾತ, ಎರಡೂ ಕೈಗಳನ್ನೆತ್ತಿ, ಛಾವಣಿಯ ಹೆಂಚು ಹಾರಿಹೋಗುವ ಹಾಗೆ ಗಟ್ಟಿಯಾಗಿ ಹೇಳಿದ:

“ಭೀಮ ಬಲವನು ಎಮ್ಮ ಬಾಹುವಿಗೆ ಬರಿಸು

ಎಮ್ಮ ದಂಡದೊಳಿರಿಸು ಭೀಮ ಗದೆಯನ್ನು.”

ಅವನು ಹೇಳಿದ ರೀತಿ ಏನೂ ಚೆನಾಗಿರಲಿಲ್ಲ.ಆದರೂ ಜಯದೇವನೆಂದ: * ಚೆನ್ನಾಗಿ ಹೇಳ್ದೆ. ಕೂತ್ಕೊ”

ಸತ್ಯಕ್ಕೆ ದೂರವಾದ ಪ್ರಶಂಸೆ! ಆದರೆ ಆ ಸಂದರ್ಭದಲ್ಲಿ ಉತ್ತೇಜನವೀಯುವ ಮಾತುಗಳೇ ಮುಖ್ಯವಾಗಿದ್ದುವು.

ಅದೇ ಊರಿನ ಪಾಥಮಿಕ ಶಾಲೆಯಿಂದ ಉತ್ತೀರ್ಣರಾಗಿ ಬಂದಿದ್ದ ಹುಡುಗರು.ಉಪಾಧ್ಯಾಯನಾದ ತನ್ನಿಂದ ಮೊದಲ ಪಾಠ ಹೇಳಿಸಿ ಕೊಂಢ ತಂಡ...,

ಮುಂದಿನ ಪೀರಿಯಡಿನಲ್ಲಿ ಎರಡನೆಯ ತರಗತಿಗೆ ಜಯದೇವ ಹೋದ. ಅಲ್ಲಿಯೂ ಆಗ ಕನ್ನಡವೇ.

ಅಲ್ಲಿ ಹಾಜರಿ ಕರೆದುದಾಗಿತ್ತು, ಬೇರೆ ಹಾದಿಯಿಲ್ಲದೆ ಒಂದೊಂದಾಗಿ ಎಲ್ಲರ ಹೆಸರನ್ನೂ ಕೇಳಿದ. ಎಷ್ಟೊಂದು ವಿಭಿನ್ನವಾದ ಹೆಸರುಗಳು! ದೇವರ ಸಹಸ್ರಹೆಸರುಗಳಿಲ್ಲದೇ ಹೋಗಿದ್ದರೆ ಎಷ್ಟೊಂದು ಕಷ್ಟವಾಗುತ್ತಿತ್ತೊ ನಾಮಕರಣ! ವಿವಿಧ ಜಾತಿಗಳು.ಇಲ್ಲಿ ಅಧ್ಯಯನಕ್ಕೆಂದು ಯಾವ ವ್ಯತ್ಯಾಸವೂ ಇಲ್ಲದೆ ಒಂದಾಗಿ ಕುಳಿತಿದ್ದರು.ಅಲ್ಲೆ ಕೊನೆಯ ಸಾಲಿನಲ್ಲಿ ಹರಿಜನರ ಇಬ್ಬರು ಹುಡುಗರೂ ಕೂಡಾ.

ಪಠ್ಯಪುಸ್ತಕದ ಹಾಳೆಗಳನ್ನು ಮಗುಚುತ್ತಾ ಮೊದಲ ಈ ಪೀರಿಯಡನ್ನು ಹೇಗೆ ಕಳೆಯೋಣವೆಂದು ಜಯದೇವ ಯೋಚಿಸಿದ.

ಹತ್ತನೆಯ ಪಾಠ, ಪುರಂದರದಾಸರು.

'ಈ ಪರಿಯ ಸೊಬಗಾವ ದೇವರೊಳು ಕಾಣೆ

ಗೋಪೀಜನಪ್ರಿಯ ಗೋಪಾಲಗಲ್ಲದೇ”

ಮೃದುಮಧುರವಾಗಿ ನಿನದಿಸಿತು ಆ ಹಾಡು ಜಯದೇವನ ಕಿವಿಯಲ್ಲಿ.ಅದು ಸುನಂದೆಗೆ ಬಲು ಪ್ರಿಯವಾದ ಹಾಡು. ಎಷ್ಟೊಂದು ಸೊಗಸಾಗಿ ಹಾಡುತ್ತಿದ್ದಳು ಅದನ್ನಾಕೆ!

“ಯಾರಾದರೂ ಈ ಪಾಠ ಓದ್ರಿರಾ? ಹತ್ತನೆಯ ಪಾಠ-ಮೂವತ್ತೆಂಟನೆಯ ಪುಟ”

ಹುಡುಗರು ಒಬ್ಬರೊಬ್ಬರ ಮುಖ ನೋಡಿದರು.

“ಯಾರು ಓದ್ತೀರಾ?

ಎರಡು ಕೈಗಳು ಮೇಲಕ್ಕೆ ಹೋದವು. ಅವರಲ್ಲಿ ಕಿರಿಯವನಾಗಿದ್ದ ಹುಡುಗನನ್ನು ಜಯದೇವ ಆರಿಸಿದ.

“ನೀನು ಓದಪ್ಪಾ..”

ಹುಡುಗ ಓದಿದ ಬಲು ವೇಗವಾಗಿ.

“ಸ್ವಲ್ಪ ನಿಧಾನಿಸಿ ಓದಪ್ಪಾ.”

ಆ ಹುಡುಗ ನಿಧಾನಿಸಿ, ಸ್ಫುಟವಾಗಿ, ಹೆಚ್ಚು ತಪ್ಪು ಉಚ್ಚಾರಗಳನ್ನು ಮಾಡದೆಯೇ ಓದಿದ,

ಕೃಷ್ಣಪ್ಪನಾಯಕನು ಪುರಂದರ ದಾಸರಾದ ಬಗೆ... ದಾಸ ಪರಂಪರೆ ...ದಾಸ ಕೂಟ... -

ಅದು ಕನ್ನಡನಾಡಿನ ಗತ ಇತಿಹಾಸದೊಂದು ಉಜ್ವಲ ಅಧ್ಯಾಯ. ಎಷ್ಟೊಂದು ಅರ್ಥಪೂರ್ಣವಾಗಿತ್ತು ಆ ಪಾಠ ! ಆದರೆ ಆ ಹುಡುಗರು? ಆ ವಿದ್ಯಾರ್ಥಿಗಳೆಲ್ಲ ಒಮ್ಮೆ ಓದುತ್ತಿದ್ದವನ ಮುಖವನ್ನೂ, ಮತ್ತೊಮ್ಮೆ ಮುಗುಳ್ನಗುತ್ತ ತಲೆದೂಗುತ್ತ ಕುಳಿತಿದ್ದ ಜಯದೇವನ ಮುಖವನ್ನೂ ನೋಡುತ್ತಲಿದ್ದರು. ಪಾಠದ, ವಿಷಯವೇನೆಂಬುದರ ಬಗೆಗೆ ಹುಡುಗರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಇದ್ದಂತೆ ತೋರಲಿಲ್ಲ!

ಆ ಪರಿಸ್ಮಿತಿಗೆ ಅವಕಾಶ ಕೊಡಬಾರದೆಂದು ಜಯದೇವ, ಓದು ಮುಗಿದೊಡನೆ, ಪುರಂದರದಾಸರ ಜೀವನವನ್ನು ತಾನೇ ತನ್ನ ಮಾತುಗಳಲ್ಲೇ ಕಥೆಯ ರೂಪದಲ್ಲಿ ತಿಳಿಸಿದ. ಆ ಕಥನಕ್ರಮ ಸಾರಸ್ಯಕರ ವಾಗಿತ್ತು, ಹುಡುಗರು ತದೇಕಚಿತ್ತರಾಗಿ ಕೇಳಿದರು. ಗಂಟೆ ಬಾರಿಸಿದರೂ ಪಾಠ ನಿಲ್ಲಲಿಲ್ಲ... ನಂಜುಂಡಯ್ಯ ಬಗಿಲಬಳಿ ಸುಳಿದ ಹಾಗಾಯ್ತು. ಜಯದೇವ ಒಮ್ಮೆಲೆ ಕಥೆ ನಿಲ್ಲಿಸಿದ... ಹೊತ್ತು ಮಿಾರಿದ್ದ ಹಾಗೆ ತೋರಿತು. ಮನಸ್ಸಿಲ್ಲದ ಮನಸಿನಿಂದ ಒಬ್ಬ ಹುಡುಗನೆಂದ:

“ಬೆಲ್ಲಾಯ್ತು, ಸಾರ್.”

"ಓ ಹೌದೆ?'

ಇನ್ನೊಬ್ಬ ಹುಡುಗ ಕೇಳಿದ :

“ಮುಂದೆ ಪುರಂದರದಾಸರೇನ್ಮಾಡಿದರು ಸಾರ್?”

“ನಾಳೆ ಹೇಳ್ತೀನಿ-ನಾಳೆ.”

“ಆ ಮೇಲೆ ಭೂಗೋಳಕ್ಕೆ ಬಲ್ತಿರಲಾ ಸಾರ್, ಆಗ ಹೇಳಿ.”

“ಛೆ-ಛೆ? ಭೂಗೋಳದ ಪೀರಿಯಡಿನಲ್ಲಿ ಭೂಗೋಳ!”

ಜಯದೇವ ಹಾಗೆ ನಕ್ಕು ನುಡಿದು ಪುಸ್ತಕವನ್ನೆತ್ತಿಕೊಂಡು ಹೊರ ಬಂದ.

ಗಂಭೀರ ಮುಖ ಮುದ್ರೆಯೊಡನೆ ಜಗಲಿಯಲ್ಲಿ ನಿಂತಿದ್ದ ನಂಜುಂಡಯ್ಯ, ಜಯದೇವನನ್ನು ನೋಡಿ ಮುಗುಳ್ಳಕ್ಕರು.

“ಪಾಠ ಚೆನ್ನಾಗಿ ನಡೀತೂಂತ ಕಾಣುತ್ತೆ.”

“ಏನೋ ಕತೆ ಹೇಳ್ದೆ ಸಾರ್.”

ಒಮ್ಮೆಲೆ ಮಾಯವಾದ ನಗೆಯನ್ನು ಮತ್ತೊಮ್ಮೆ ಪ್ರಯತ್ನಪೂರ್ವಕವಾಗಿ ನಂಜುಂಡಯ್ಯ ತಂದುಕೊಂಡರು.

ಅಭಿನಂದನೆ ಜಯದೇವರಾವ್. ಹುಡುಗರ್ನ ಹತೋಟೀಲಿ ಇಟ್ಕೊಳ್ಳೋ ಜಾಣ್ಮೆ ನಿಮಗಿದೆ."

ಅಷ್ಟು ಹೇಳಿ ಅವರು ಒಳಹೋದರು. ಮುಂದಿನ ಪೀರಿಯಡು ಜಯದೇವನಿಗೆ ಪಾಠವಿರಲಿಲ್ಲ. ಆತ ಆಫೀಸ್ ಕೊಠಡಿಗೆ ಹೋಗಿ ಕುಳಿತುಕೊಂಡ.

ಒಮ್ಮೆಲೆ ಆತನಿಗೆ ಹೊಳೆಯಿತು... ನಂಜುಂಡಯ್ಯ ತನ್ನನು ಜಯದೇವರಾವ್ ಎಂದು ಸಂಬೋಧಿಸಿದ್ದರಲ್ಲವೆ?ತಮಾಷೆಗೆ ಹಾಗೆಂದರೇನೋ ... ಆದರೆ ಆ ರಾವ್' ಕಿವಿಗೆ ಇಂಪಾಗಿರಲಿಲ್ಲ...

ಜಯದೇವ ಕರವಸ್ತ್ರವನ್ನು ಹೊರತೆಗೆದು ಮುಖದ ಬೆವರೊರಿಸಿದ. ಆತನ ಆತ್ಮವಿಶಾಸ ಬಲಿಯಿತು. ತಾನು ಯಶಸ್ವಿಯಾದ ಉಪಾಧ್ಯಾಯನಾಗುವುದರಲ್ಲಿ ಸಂದೇಹವಿರಲಿಲ್ಲ. ವೇಣುಗೋಪಾಲ ಎಷ್ಟೋ ಸಾರಿ ತನ್ನನ್ನ ಕುರಿತು ನಗೆಯಾಡಿರಲಿಲ್ಲವೆ ?

“ನೀನು ಮೇಷ್ಟ್ರಾಗೋಕೆ ಹುಟ್ದೋನು ಕಣೋ, ಆ ವೃತ್ತಿಗುಣ ನಿನ್ನ ರಕ್ತದಲ್ಲೇ ಇದೆ.”

“ಪಾಠ ಹೇಳಿಕೊಡುವುದೂ ಒಂದು ಕಲೆ, ನಿಜ, ಉಪಾಧ್ಯಾಯ ಮನಃಶಾಸ್ತ್ಯವನ್ನು ಚೆನ್ನಾಗಿ ಬಲ್ಲವನಾಗಿರಬೇಕು. ಅಪಾರವಾದ ಸಹನಶೀಲತೆ ಆತನಿಗೆ ಇರಬೇಕು.

... ಜಯದೇವ ಯೋಚಿಸುತ್ತ ಹೋದ

ಅಷ್ಟೇ ಅಲ್ಲ, ಮಕ್ಕಳನಾತ ಪ್ರೀತಿಸಬೇಕು ; ಅಷ್ಟೇ ಚೆನ್ನಾಗಿ ತನ್ನ ವೃತ್ತಿಯನ್ನೂ ಆತ ಪ್ರೀತಿಸಬೇಕು.

..............

ಮಧಾಹ್ನದ ವಿರಾಮ ಕಾಲದಲ್ಲಿ ಮುಖೋಪಾಧ್ಯಾಯರು ಕೇಳಿದರು :

“ಹ್ಯಾಗಿದೀರಾ?”

“ಒಳ್ಳೆ ಹುಡುಗರು ಸಾರ್.”

“ಹುಡುಗರ ಒಳ್ಳೆತನ ಅಲ್ಲ, ಜಯದೇವ್.. ನಿಮ್ಮ ಮುಖ ನೋಡಿಯೇ ತಿಳ್ಕೊಂಡೆ. ಹುಡುಗರು ನಿಮಗೆ ಅಂಟ್ಕೊತಾರೆ. ಪಾಠ ಮಾಡೋದು ಲೀಲಾಜಾಲವಾಗಿ ಬರುತ್ತೆ ನಿಮಗೆ.”

ಏನಾದರೂ ಮಾರುತ್ತರ ಕೊಡಬೇಕೆಂದು ಜಯದೇವ ತೊದಲಿದ. ಆದರೆ ಮಾತುಗಳು ಗಂಟಲೊಳಗೇ ಸಿಲುಕಿಕೊಂಡವು.

ಮುಖ್ಯೋಪಾಧ್ಯಾಯರೇ ಹೇಳಿದರು :

“ಮೂರು ಜನ ನಾಲ್ಕು ತರಗತಿಗಳಿಗೆ ಪಾಠ ಹೇಳ್ಕೊಡೋದು ಸುಲಭ ಅಲ್ಲ, ಒಂದೊಂದು ಪೀರಿಯಡು ಲೆಕ್ಕ ಪಕ್ಕ ಅಂತ ಮಂತ್ರ, ತಂತ್ರ ಮಾಡ್ಬೇಕು. ನೋಡಿ ಜಯದೇವ್, ನಾಲ್ಕನೆ ತರಗತಿಯವರ್ಗೂ ನೀವೇ ಕನ್ನಡ ತಗೊಂಡ್ಬಿಡಿ. ಸುಲಭ... ಏನಂತೀರಾ ?

"ಆಗಲಿ ಸಾರ್."

" ಬೇರೇನೂ ಅನ್ನುವ ಹಾಗಿರಲಿಲ್ಲ. ರಂಗರಾಯರು ಮಧಾಹ್ನದ ಊಟಕ್ಕೆಂದು ಮನೆಗೆ ಹೋದರು. ಇಷ್ಟೊಂದು ತಡವಾಗಿ ಊಟಮಾಡ್ತಾರಲ್ಲ-ಎಂದುಕೊಂಡ ಜಯದೇವ.

ನಂಜುಂಡಯ್ಯ ಕೊಠಡಿಯೊಳಕ್ಕೆ ಬಂದವರೇ ಕೇಳಿದರು :

"ತಿಂಡಿ ಏನು ತರಿಸೋಣ ಜಯದೇವ್?"

“ತಿಂಡಿ?”

“ಹೂಂ.. ಉಪಹಾರಕ್ಕಿರೋದು ಕಣ್ರೀ ಈ ವಿರಾಮ!”

“ನಿಮ್ಮನೆ ಊಟ ಭರ್ಜರಿಯಾಗಿತ್ತು ಅದಾದ್ಮೇಲೆ-”

ఆ ಹೊಗಳಿಕೆಯಿಂದ ನಂಜುಂಡಯ್ಯನಿಗೆ ಉಂಟಾದ ಸಂತೃಪ್ತಿ, ತುಟಿಗಳ ಮಾಸಿದ ಕನ್ನಡಿಯ ಮೇಲೆ ಕಂಡೂ ಕಾಣದಂತೆ ನಗೆಯಾಗಿ ಪ್ರತಿಬಿಂಬಿಸಿತು. -

“ಆ ಊಟ ಯಾವ ಲೆಕ್ಕಕ್ಕೆ? ನಿಮ್ಮ ವಯಸ್ನಲ್ಲಿ ನಾನು-ನಾನ್ಯಾಕೆ ಹೇಳ್ಲಿ ಅದನ್ನ? ಬೆಂಗಳೂರಿಗೆ ಹೋದಾಗ ಬಳೇಪೇಟೆ ಹೋಟ್ಲಲ್ಲಿ ನೀವೇ ವಿಚಾರ್ಸಿ... ಈಗ ಹೇಳಿ, ಇಡ್ಲಿ-ವಡೆ ತರೋಣ್ವೊ?”

ಜಯದೇವ ಒಪ್ಪಿಕೊಳ್ಳದೆ ನಿರ್ವಾಹವಿರಲಿಲ್ಲ.

“ಆದರೆ ಒಂದು ಶರತು ಸಾರ್, ದುಡ್ಕೊಡೋನು ನಾನು!

“ಯಾಕೊ ! ಇವತ್ತು ಒಂದಿನ ಸುಮ್ನಿದ್ಬಿಡಿ. ನಾಳೆಯಿಂದ ನೀವೇ ಕೊಟ್ಟರಾಯ್ತು, ಬೇಡಾ ಅಂತ ನಾನೇನೂ ತಡೆಯೊಲ್ಲ...”

ನಂಜುಂಡಯ್ಯನ ತಮ್ಮ ವಿರೂಪಾಕ್ಷನೂ ಅವನ ಜೊತೆಯಲ್ಲಿ ಇನ್ನೊಬ್ಬ ಹುಡುಗನೂ ಆನಂದವಿಲಾಸಕ್ಕೆ ಹೋಗಿ ತಿಂಡಿ-ಕಾಫಿ ತಂದರು.

ತೊಂಡಿ ತಿನ್ನುತ್ತ ನಂಜುಂಡಯ್ಯ ಹೇಳಿದರು :

“ಆಗ ನಾನು ನಿಮ್ಮನ್ನ ಜಯದೇವರಾವ್ ಅಂತ ಕೂಗ್ದೆ.

” ಒಂದು ಗುಟುಕು ಕಾಫಿ ಕುಡಿದು ತಿಂಡಿಯನ್ನು ಗಂಟಲಿನೊಳಗಿಂದ ಕೆಳಕ್ಕೆ ತಳ್ಳುತ್ತಾ ಜಯದೇವನೆಂದ:

“ಹೌದು. ಆಗ್ಲೇ ಹೇಳೋಣಾಂತಿದ್ದೆ. ಮರ್ತೊಯ್ತು.”

“ಏನು, ಹಾಗೆ ಕೂಗ್ಬಾರ್ದೂಂತ್ಲೆ ?”

“ಯಾಕೋ ಆ ಸಂಬೋಧನೆ ನನಗೆ ಇಷ್ಟವಿಲ್ಲ.”

“ಹೋಗಲಿ ಬಿಡಿ, ತಮಾಷೆಗಂದೆ.. ಮನಸ್ಸಿಗೆ ಹಚ್ಕೊಬೇಡಿ.”

ಅಂತೂ ಜಯದೇವ ಸ್ವಲ್ಪ ವಿಚಿತ್ರವಾಗಿಯೆ ನಂಜುಂಡಯ್ಯನಿಗೆ ತೋರಿದ.

ಉಪಾಹಾರ ಮುಗಿದು ನಂಜುಂಡಯ್ಯ ಸಿಗರೇಟು ಹಚ್ಚಿದರು. ಸಿಗರೇಟಿನ ಹೊಗೆಯೊಡನೆ ಅವರ ಯೋಚನೆಗಳೂ ಸುರುಳಿ ಬಿಚ್ಚಿದುವು.

“ಈ ಶಾಲೇನ ನಾವು ತುಂಬಾ ಸುಧಾರಿಸ್ಬೇಕು ಜಯದೇವ್.”

“ಹೌದು, ಹಾಗ್ಮಾಡ್ಬೇಕು.”

“ನಿಮ್ಮಂಥವರ ಸಹಾಯ ಇದ್ರೆ ಈ ಸುಧಾರಣೆಯೆಲ್ಲ ದೊಡ್ಡ ಕೆಲಸವಲ್ಲ.”

-ಅದು, 'ನೀವು ಮತಕೊಟ್ಟರೆ ನಾನು ಚುನಾಯಿಸಿ ಬರುತ್ತೇನೆ' ಎನ್ನುವ ಧ್ವನಿಯಾಗಿತ್ತು ಜಯದೇವನಿಗೆ ಎನೊಂದು ಸ್ಪಷ್ಟವಾಗಲಿಲ್ಲ.

“ನಾನು ಇರೋದೇ ದುಡಿಯೋದಕ್ಕೋಸ್ಕರ ಅಲ್ವೆ?”

“ದುಡಿಯೋದಕ್ಕೇನ್ರಿ—ಎಲ್ರೂ, ದುಡೀತಾರೆ. ಆದರೆ, ಸುಧಾರಣೆ ಏನೂಂತ ತಿಳ್ಕೊಂಡು ಮಾಡೋರು ಬೇಡ್ವೆ?”

-ಹಾಗಾದರೆ ಈ ವರೆಗೂ ಸುಧಾರಣೆ ಎಂದರೇನೆಂಬುದು ರಂಗರಾಯರಿಗೆ ತಿಳಿದೇ ಇರಲಿಲ್ಲವೆಂದು ಅರ್ಥವೆ? ಪರೋಕ್ಷವಾಗಿ ಬಲು ಸೂಕ್ಷ್ಮವಾಗಿ ರಂಗರಾಯರನ್ನು ನಂಜುಂಡಯ್ಯ ಅವಹೇಳನ ಮಾಡಿದಂತಾಯಿತಲ್ಲವೆ?

ಯೋಚನೆಗಳನ್ನೆಲ್ಲ ಮರೆಮಾಡಿ ಜಯದೇವ ಹೇಳಿದ: “

ಅದಕ್ಕೇನು? ನಾವು ಮೂವರೂ ಕೂತು ಚರ್ಚಿಸಿದರಾಯಿತು.”

ನಂಜುಂಡಯ್ಯ ಕಿಟಕಿಯ ಮೂಲಕ ಹೊರನೋಡುತ್ತ ಅಂದರು.

“ರಂಗರಾಯರ ಕೈಲಿ ಚರ್ಚೆ ಅನ್ನೋದೇ ಇಲ್ಲ, ಬೆಳಗ್ಗೆ ನೋಡಿದ್ರೋ ಇಲ್ಲೋ? ನಾನು ಏನು ಹೇಳಿದ್ದೆ? ನಾವು ಬರೋಕ್ಮುಂಚೇನೆ ಟೈಂ ಟೇಬಲ್ ಮಾಡಿ ಇಟ್ಟಿದ್ದಿಲ್ವೆ?”

ಆ ಮಾತಿನಲ್ಲಿ ಸತಾಂಶವೂ ಇದ್ದಂತೆ ತೋರಿತು. ಆದರೆ ಹಾಗೆ ಅವರೊಬ್ಬರೇ ತಯಾರಿಸಿದ ಟೈಂ ಟೇಬಲು ಅಸಮರ್ಪಕವೇನೂ ಆಗಿರಲಿಲ್ಲ.

ಒಂದು ರೀತಿಯ ಗೌರವ ಸೂಚನೆ ಎಂಬಂತೆ ಜಯದೇವನೆಂದ:

"ಅವರದು ಹಳೇ ಕಾಲದ ಮರ್ಜಿ.”

ಅದಕ್ಕೆ ತಾತ್ಕಾರದ ಒಪ್ಪಕೊಡುತ್ತ ನಂಜುಂಡಯ್ಯ ಅಂದರು.

“ಹೌದು; ಬಹಳ ಹಳೇ ಕಾಲದ ಮರ್ಜಿ.”