ದ್ರೋಣಪರ್ವ: ೧೫. ಹದಿನೈದನೆಯ ಸಂಧಿ

ವಿಕಿಸೋರ್ಸ್ದಿಂದ
Jump to navigation Jump to search

<ಕುಮಾರವ್ಯಾಸ ಭಾರತ

ದ್ರೋಣ ಪರ್ವ-ಹದಿನೈದನೆಯ ಸಂಧಿ[ಸಂಪಾದಿಸಿ]

ಸೂ. ರಾಯ ಕಟಕಾಚಾರ‍್ಯನೊಡ್ಡಿದ
ರಾಯ ಥಟ್ಟಿನೊಳಿರುಳು ಕೊಂದನು
ವಾಯುತನಯನ ತನುಜನಗ್ಗದ ದೈತ್ಯಕೋಟಿಗಳ ||

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣಾರ್ಜುನರು ಬರೆ ಭೂ
ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ
ಹೇಳಲರಿಯೆನು ಹರುಷದುದಯನ
ನಾಲಿ ಹೂಳಿದವಶ್ರುಜಲದಲಿ
ಮೇಲುವಾಯ್ದಪ್ಪಿದನು ದೇವನ ಪಾದಪಂಕಜವ ೧

ಮಾತುದೋರದು ಹೆಚ್ಚಿದಾನಂ
ದಾತಿರೇಕಕೆ ಚಿತ್ತ ನೆರೆಯದು
ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ
ಕಾತರಿಸಿದನು ಮೇಲೆ ಮೇಲೆ ಮ
ಹೀತಳಾಧಿಪ ಮೈಮರೆಯೆ ತೆಗೆ
ದಾತನನು ತಕ್ಕೈಸಿದನು ಕಾರುಣ್ಯನಿಧಿ ನಗುತ ೨

ಫಲಿಸಿತರಸಾ ನಿನ್ನ ಭಾಗ್ಯದ
ಬೆಳಸು ನಿನ್ನೊಡವುಟ್ಟಿದನ ನುಡಿ
ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ
ಕಳಿದುದೊಂದಪಮೃತ್ಯುವೆನೆ ನೃಪ
ತಿಲಕ ನುಡಿದನು ನಿನ್ನ ಭಾಷೆಯ
ಬಲಿದೆ ನಿನ್ನಯ ಬಿರುದ ಸಲಿಸಿದೆ ನಮಗಿದೇನೆಂದ ೩

ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮ ನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮ ಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ ೪

ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ ೫

ಇನ್ನು ನೋಡಾದಡೆ ಕಿರೀಟಿಯ
ಬೆನ್ನಲುಗಿವೆನು ಕರುಳನರ್ಜುನ
ಗನ್ನಗತಕದಲರಿಯ ಹೊಯ್ದನು ಹಾಯ್ಕು ವೀಳೆಯವ
ನಿನ್ನ ಕಂಗಳ ಬರನ ಕಳೆವೆನು
ಬೆನ್ನಲಿರು ನೃಪ ನೋಡು ಚಿತ್ರವ
ನಿನ್ನು ತೋರುವೆನೆನುತ ಭಾಷೆಯ ಕೊಟ್ಟನಾ ಕರ್ಣ ೬

ಉಂಟು ಗರುಡನನೊಳ್ಳೆ ತುಡುಕುವ
ದುಂಟಲೇ ಲೋಕದಲಿ ರಾಯನ
ನಂಟರಿಷ್ಟರೊಳಧಿಕನಲ್ಲಾ ಕರ್ಣ ಕಿರುಕುಳನೆ
ಕಂಟಣಿಸಬೇಡಿನ್ನು ಭಾಷೆಗ
ಳುಂಟು ನಿನ್ನಲಿ ನಗುವರಾವ
ಲ್ಲೆಂಟುಮಡಿಯನು ಸೊರಹು ಸಾಕೆಂದನು ಕೃಪಾಚಾರ‍್ಯ ೭
ಗರುವರನು ಮಾನ್ಯರನು ರಣಧೀ
ರರನು ದೂರದಲಿರಿಸುವರು ಹ
ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು
ಅರಸುಗಳು ದುಶ್ಶೀಲರೆಂಬುವ
ನರಿಯದೇ ಜಗವಕಟ ಟೆಕ್ಕೆಯ
ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ‍್ಯ ೮

ನೀವು ಮಾಡುವುದೇನು ರಣದಲಿ
ಕಾವೆವೆಂದಿರಿ ಸೈಂಧವನ ನಾ
ನಾವಿಧದ ವ್ಯೂಹದಲಿ ನಿಮ್ಮೀ ದ್ರೋಣನೇಗಿದನು
ತಾವು ಭಟರಾದರೆ ವಿಭಾಡಿಸಿ
ಹೇವಗೆಡಿಸುವುದುಚಿತ ಭಂಡರು
ತಾವು ಲೋಗರ ಚುನ್ನವಾಡುವರೆಂದನಾ ಕರ್ಣ ೯

ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ ೧೦

ಬೆಂದುದೊಳತೋಟಿಯಲಿ ಕೌರವ
ವೃಂದವಕಟಕಟೆನಲು ಜನವೈ
ತಂದು ನಿಂದನು ನಡುವೆ ಕೌರವರಾಯ ಖಾತಿಯಲಿ
ಇಂದಿನಾಹವ ಲೇಸು ಲೇಸಿದು
ಮಂದಭಾಗ್ಯನು ತಾನು ಸಾಕಿ
ನ್ನೆಂದು ಮಾಡುವುದೇನು ನಿಮ್ಮೊಳು ಕದನ ಬೇಡೆಂದ ೧೧

ಹೇವವುಳ್ಳರೆ ಭೀಮ ಪಾರ್ಥರ
ನೀವು ಕೊಲುವುದು ಮೇಣು ರಣದಲಿ
ಸಾವುದಲ್ಲದೆ ಗರುವರೊಳತೋಟಿಯಲಿ ತೊಡಕುವರೆ
ಕಾವೆವೆಂದಿರಿ ಸೈಂಧವನ ಸುಭ
ಟಾವಳಿಯ ಮೂಗುಗಳನರ್ಜುನ
ದೇವ ಕೊಯ್ದನು ಸಾರಿ ನೀವೆಂದರಸ ಮಾಣಿಸಿದ ೧೨

ನೆರೆವಣಿಗೆಯುಳ್ಳರೆ ವಿರೋಧಿಯ
ನಿರಿವುದೋಲೆಯಕಾರತನವನು
ಮೆರೆವುದುಚಿತವಿದೇಕೆ ಡೊಂಬಿನ ಶೌರ‍್ಯವೊಳಗೊಳಗೆ
ಕಿರುಕುಳರು ನೀವಲ್ಲ ನಿಮ್ಮಲಿ
ಕೊರತೆಯಿಲ್ಲದು ನಮ್ಮ ಪುಣ್ಯದ
ಬರನ ದಿನ ನೀವೇನ ಮಾಡುವಿರೆಂದು ಬಿಸುಸುಯ್ದ ೧೩

ಖಾತಿಯೇಕೈ ಸೆಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ ೧೪

ಒಂದು ಹರ ಹಿಡಿವಂಬು ಶಕ್ರನ
ದೊಂದು ಕೌಬೇರಾಗ್ನಿ ವಾಯುವ
ದೊಂದು ಪಾರ್ಥನ ಬತ್ತಳಿಕೆ ದಿವ್ಯಾಸ್ತ್ರ ತುಂಬಿಹವು
ಕೊಂದಡಲ್ಲದೆ ಮಾಣವವು ನಾ
ವೊಂದಕೊಬ್ಬರು ಗುರಿ ನಿದಾನಿಸ
ಲಿಂದು ನಮಗಳವಡದು ಜಯವಿಲ್ಲೆಂದನಾ ದ್ರೋಣ ೧೫

ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ ೧೬

ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ ೧೭

ಜರಿದ ಜೋಡನು ನೆರೆ ಹರಿದ ಹ
ಕ್ಕರಿಕೆಗಳ ನುಗ್ಗಾದ ಗುಳವನು
ಬಿರಿದ ಸೀಸಕ ಬಾಹುರಕ್ಕೆಯ ಮುರಿದ ಬಲ್ಲೆಹದ
ಅರೆಗಡಿದ ಬಿಲ್ಲುಗಳ ನೆಗ್ಗಿದ
ಹರಿಗೆಯನು ಮುಕ್ಕಾದ ಕೈದುವ
ತರಿಸಿ ಕಳುಹಿಸುತಿರ್ದನತಿರಭಸದಲಿ ಕಲಿದ್ರೋಣ ೧೮

ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಳದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ‍್ಯನಿದಿರಿನಲಿ ೧೯

ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡುಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರವನು ಕಲಿದ್ರೋಣ ೨೦

ಉರವಣಿಸುವುದು ಕೊಂಡ ಹಜ್ಜೆಗೆ
ಮುರಿಯಲಾಗದು ಶಸ್ತ್ರಧಾರಾ
ಪರಮತೀರ್ಥಸ್ನಾನ ತೊಳೆವುದು ಭವದ ಕಿಲ್ಬಿಷವ
ಹರಣದಲಿ ಕಕ್ಕುಲಿತೆ ಬೇಡು
ದ್ಧರಿಸುವುದು ಸತ್ಕುಲತೆಯನು ಸಂ
ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ ೨೧

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಮೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ ೨೨

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ ೨೩

ಹಿಂದೆ ಸೆಳೆದುದು ವೈರಿ ಬಲ ಭಟ
ವೃಂದ ನಿಲಲಿ ಕಿರೀಟಿ ಭೀಮರ
ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ
ಬಂದ ಜಯವಕ್ಕುವುದು ರಜನಿಯ
ಕೊಂದೆವಾದರೆ ನಮಗೆ ಸರಿಯಿ
ಲ್ಲೆಂದು ಧೃಷ್ಟದ್ಯುಮ್ನ ಕರಸಿದನಖಿಳನಾಯಕರ ೨೪

ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರುಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ ೨೫

ಇಳಿದುದೀ ಕಣನೊಳಗೆ ದಿಗುಮಂ
ಡಲದ ಸಂಧ್ಯಾರಾಗವೆನೆ ಪರಿ
ದಳಿತ ಚತುರಂಗದಲಿ ಮಸಗಿದುದರುಣಜಲರಾಶಿ
ಕಲಿಗಳುಬ್ಬಿನ ರೋಷ ತಾಮಸ
ತುಳುಕಿತೆನೆ ದಿಗುವಳಯದಲಿ ಕುಡಿ
ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ ೨೬

ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನ ಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ಧಾಳಿ ದೆಸೆದೆಸೆಗೆ ೨೭

ಖಳರ ಹೃದಯದ ಗರುಡಿ ಘೂಕಾ
ವಳಿಯ ನಯನಾಂಜನ ಧರಿತ್ರಿಯ
ನಳಿನಕೆರಗಿದ ತುಂಬಿ ಸುಭಟಸ್ವಾಂತ ಶಶಿರಾಹು
ಪ್ರಳಯ ತಿಮಿರದ ಬೀಜ ನೀಲಾ
ಚಳದ ಸಾಯುಜ್ಯವೊ ನಭೋಮಂ
ಡಲದೊಳದನೇವೊಗಳುವೆನು ಮಸಗಿತು ತಮಸ್ತೋಮ ೨೮

ದಳದ ಬೊಬ್ಬೆಯ ಸಿಡಿಲ ಬಲುಗ
ತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ
ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ
ಬಲುಸರಿಯ ನಾರಾಚಜಾಳದ
ಮಳೆಯ ನೆತ್ತರ ಹೊನಲುಗಳ ರೌ
ಕುಳದ ಮಳೆಗಾಲದಲಿ ಹೆಚ್ಚಿತು ಭಟರ ಶೌರ‍್ಯಶಿಖಿ ೨೯

ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು
ಹಣಿದದಲಿ ತಮ್ಮೊಳಗೊಳಗೆ ಸಂ
ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ
ರಣಮಹೀಸಂತಮಸಶಾಂತೇ
ಕ್ಷಣರು ದಿಗುಭ್ರಮೆಯಲಿ ಸ್ವಕೀಯ
ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ ೩೦

ಆರ ವಂಗಡದಾಳಿದನು ನೀ
ನಾರು ಹೇಸರೇನೆಂದು ಬಳಿಕ ವಿ
ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ
ಭಾರಿಸಿತು ಬಲುತಿಮಿರ ಬಲ ಸಂ
ಹಾರವನು ವಿವರಿಸುವನಾವನು
ಭೂರಿ ಭಟರಂಘವಣೆ ಬೀತುದು ಭೂಪ ಕೇಳೆಂದ ೩೧

ತೆಗೆಸು ಚೂಣಿಯ ಬಲವ ದೀವ
ಟ್ಟಿಗರ ಕರೆ ಕರೆ ತೈಲಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ
ಬಿಗಿದ ಮಳವೆಯನೆಣ್ಣೆಗೊಪ್ಪರಿ
ಗೆಗಳೊಳದ್ದಲಿ ಗಳೆಗಳಲಿ ಸೀ
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿದ್ರೋಣ ೩೨

ಬೆಳಗಿದವು ಬೊಂಬಾಳದೀವಿಗೆ
ಬಲದೊಳಾನೆಗೆ ಹತ್ತು ರಥಿಕಾ
ವಳಿಗೆ ನಾಲುಕು ಹಯಕೆರಡು ಕಾಲಾಳಿಗೊಂದೊಂದು
ಬಲಸಮುದ್ರದೊಳೊಗೆದ ವಡಬಾ
ನಳನ ಝಳವೋ ಮೃತ್ಯುವಿನ ದೀ
ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ ೩೩

ಬಗೆಯಲರಿದಿದು ಗರ್ಭ ಬಲಿಯದೆ
ಹಗಲನೀದುದೊ ರಾತ್ರಿ ಕುಡಿ ಕುಡಿ
ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
ಹೊಗರುಗೆಟ್ಟುದು ಕುಮುದ ಕಮಳದ
ಬೆಗುಹು ಬಿಟ್ಟುದು ಚಕ್ರವಾಕದ
ತಗಹು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ ೩೪

ತಿಮಿರವಡಗಿತು ಮನದ ರೋಷದ
ತಿಮಿರವಡಗದ ಮುನ್ನ ಭುಜವಿ
ಕ್ರಮದ ವಿತರಣೆಯುಳ್ಳಡವಸರವಿದು ನೃಪಾಲರಿಗೆ
ನಿಮನಿಮಗೆ ಮುಂಕೊಂಡು ವಂಶ
ಕ್ರಮ ಸಮಾಗತ ಕೀರ್ತಿಸತಿಯಲಿ
ಮಮತೆಗಳ ನೆರೆ ಮಾಡಿಯೆಂದನು ದ್ರೋಣ ನಿಜಬಲಕೆ ೩೫

ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ ೩೬

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾದರೆ ಜೋಡಿಸೆನುತಿದಿರಾದನಾ ದ್ರೋಣ ೩೭

ತವಕ ತಗ್ಗಿತು ಭಟರ ತಾಳಿಗೆ
ಜವಳಿದೆಗೆದುದು ಮನಕೆ ಭೀತಿಯ
ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ
ಸವೆದ ಶೌರ‍್ಯದ ಘಾಯ ಘಲ್ಲಿಸಿ
ತವಯವದ ಮಡಮುರಿವ ಮೋಹರ
ದವನಿಪತಿಗಳ ನಿಲವ ನೋಡಿದನಸುರರಿಪು ನಗುತ ೩೮

ನಿಲ್ಲಿ ಭಯ ಬೇಡಾವ ರಣವಿದು
ತಲ್ಲಣಕೆ ತರುವಾಯೆ ದೀವಿಗೆ
ಪಲ್ಲವಿಸಿದರೆ ತಳಿತುದೇ ಭುಜಶೌರ‍್ಯ ಕುರುಬಲಕೆ
ಖುಲ್ಲರಾರೋ ಬಲವ ತಿರುಹಿದ
ರಿಲ್ಲಿ ನಿಲಲಂಜಿದರೆನುತ ಕರ
ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ ೩೯

ಆವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ ೪೦

ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೋಮಾಂಚನದ ರಣ
ರಂಗ ಧೀರರು ತರುಬಿ ನಿಂದರು ಮತ್ತೆ ಕಾಳೆಗವ ೪೧

ಭಟರು ಬಳಲಿದರಿಂದು ರಣವು
ತ್ಕಟವು ಧೀವಶಿಗಳು ಮಹಾರಥ
ಕಟಕಟಿಸುತಿದೆ ಮತ್ತೆ ನಾವಿದನೇನ ಹೇಳುವೆವು
ಕುಟಿಲ ಭಾರದ್ವಾಜನಿವನು
ಬ್ಬಟೆಗೆ ಮದ್ದರೆವೆನು ನಿಶಾಪರಿ
ಯಟನಪಟುಗಳು ಬರಲಿ ಕಾಳೆಗಕೆಂದನಸುರಾರಿ ೪೨

ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ ೪೩

ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮುರಿದಲೆಯ ಚರಣದ
ತೊಡರ ಮೊಳಗಿನ ಬಾವುಲಿಗಳಲಿ ಘಣ ಘಣ ಧ್ವನಿಯ
ನಿಡಿಯೊಡಲ ಮುರಿಮೀಸೆಗಳ ಕೆಂ
ಪಡರ್ದ ಕಂಗಳ ಹೊಳೆವ ದಾಡೆಯ
ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈತಂದ ೪೪

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ ೪೫

ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ (೪೬
ದಡಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ ಕಾಳ

ರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು ೪೭

ಸಾಲು ಮಿಗೆ ಮೋಹರದೊಳಗೆ ಬೊಂ
ಬಾಳ ದೀವಿಗೆ ಬೆಳಗಿದವು ಶರ
ಜಾಳ ದೀಧಿತಿ ತೊಳಗಿದವು ರಕ್ಕಸರ ಕೈಗಳಲಿ
ಬಾಳ ಹೊಳಹನು ಜರೆದು ದಾಡೆಯ
ಢಾಳ ಮಿಗೆ ಗಜಗಲಿಸೆ ದಾನವ
ಕಾಳೆಗಕ್ಕನುವಾಗಿ ನಿಂದನು ಬಿಗಿದ ಬಿಲುದೆಗೆದು ೪೮

ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಟರ ಗಡಣದಲಿ
ನಿಯತ ಚಾತುರ್ಬಲವೆರಡು ನಿ
ರ್ಭಯದಲೊದಗಿತು ಮಕುಟಮಸ್ತಕ (೪೯
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ

ಕೌರವನ ತಳತಂತ್ರ ಕಟಕಾ
ಚಾರಿಯನ ಕಾಹಿನಲಿ ರಿಪುಪರಿ
ವಾರ ನಿಂದುದು ಭೀಮಸೇನನ ಸುತರ ಬಳಸಿನಲಿ
ಆರಿದನು ಜಗ ನಡುಗೆ ಬೊಬ್ಬೆಯ
ಭಾರದಲಿ ವೈರಿಗಳ ಬಲಸಂ
ಹಾರ ರುದ್ರನು ಕಲಿಘಟೋತ್ಕಚ ಹೊಕ್ಕನಾಹವವ ೫೦

ಬೆಳೆದವೋ ಕೈಕಾಲು ನೀಲಾ
ಚಲಕೆ ಹೇಳೆನೆ ಮುಗಿಲ ತುಡುಕುವ
ತಲೆಯ ತೋಕೆಯ ತೋರಹತ್ತನ ಕಂಡು ಕುರುಸೇನೆ
ಕಳವಳಿಸಿದರು ಕಾಯದಲಿ ಕ
ಕ್ಕುಲಿತೆಗಾರರು ಕೈದೆಗೆದರ
ಗ್ಗಳೆಯನುರುಬೆಗೆ ಬೀಳುಕೊಟ್ಟರು ಭಟರು ಸೈರಣೆಯ ೫೧

ಏನ ಹೇಳುವೆನವರ ರಣಸು
ಮ್ಮಾನವನು ನಮ್ಮವರ ಮೊಗದು
ಮ್ಮಾನವನು ಪ್ರಥಮಪ್ರವೇಶದೊಳಾದುದೀ ಹದನು
ದಾನವರ ಥಟ್ಟಣೆಗೆ ನಿಲುವರ
ನಾನು ಕಾಣೆನು ದಿಟ್ಟತನದಲಿ
ತಾನೆ ನಿಂದನು ಕೌರವೇಂದ್ರನು ಸಕಲ ಬಲಸಹಿತ ೫೨

ಫಡ ನಿಶಾಚರ ಹೋಗು ಹೋಗಳ
ವಡದು ಕರೆ ನಿಮ್ಮಯ್ಯನನು ಹೇ
ರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ
ಮಿಡುಕುವರೆ ಕರೆ ನಿಮ್ಮ ತೆತ್ತಿಗ
ನಡಗಲೇತಕೆ ಕೃಷ್ಣ ನಿಮಗಿ
ನ್ನೊಡಲ ಬಳಿನೆಳಲವಸಹಿತ ಬಾಯೆಂದು ಗರ್ಜಿಸಿದ ೫೩

ಮರುಳು ಕೌರವ ಜಂಗಮ ಸ್ಥಾ
ವರದ ದೇಹಕೆ ನೆಳಲಹುದು ದಿನ
ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ
ಸುರ ನಿಶಾಚರ ಮರ್ತ್ಯರೊಳು ತಾ
ನೆರವ ಬಯಸುವುದುಂಟೆ ಹರಿಯಂ
ತಿರಲಿ ಚೈತನ್ಯಾತ್ಮ ನಾತನ ಮಾತದೇಕೆಂದ ೫೪

ಹೆಣನನರಸುತ ರಕುತಪಾನಕೆ
ಸೆಣಸಿ ಶಾಕಿನಿ ಢಾಕಿನಿಯರೊಳು
ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ
ರಣದೊಳಗ್ಗದ ಕೈದುಕಾರರ
ಕೆಣಕಿ ಗೆಲುವುದ ಕೇಳಿದರಿಯೆವು
ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ ೫೫

ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯಬೇಡಾ ಸಿಂಹಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ ೫೬

ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ ೫೭
ಬಸಿಯೆ ಬಿರಿದುದು ಶೌರ‍್ಯ ಬಿಗಿದುದು ಭೀತಿ ಭೂಪತಿಗೆ

ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ ೫೮

ಬಕನ ಮಕ್ಕಳು ಜಟನ ಕಿಮ್ಮೀ
ರಕನ ಸುತರು ಹಿಡಿಂಬತನುಜರು
ವೃಕಜರಾಸಂಧಾತ್ಮಜರು ಶಿಶುಪಾಲನಂದನರು
ಸಕಲ ಸನ್ನಾಹದಲಿ ದೈತ್ಯ
ಪ್ರಕರ ಹೊಕ್ಕುದು ರಾಯ ರಥಪಾ
ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ ೫೯

ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾವ ಸದರವೊ ನೋಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆ ಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ ೬೦

ಹೆಸರುಗೊಂಡರೆ ಕಿವಿಗಳಿಗೆ ಕ
ರ್ಕಶರು ರಕ್ಕಸರೆಂಬ ಹೆಸರಿದು
ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ
ಹೊಸ ಮಸೆಯ ಹೊಗರಂಬುಗಳನೆ
ಬ್ಬಿಸಿದನುಬ್ಬಿಸಿದನು ವಿರೋಧಿಗ
ಳಸು ಸಮೀರಣನಿಂದ ನಿಜಭುಜ ವಿಕ್ರಮಾನಳನ ೬೧

ಓಡಲೀಯದೆ ಸದರಗೊಡುತ ವಿ
ಭಾಡಿಸುತ ಮೇಲಿಕ್ಕಿದರೆ ಕೈ
ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ
ಖೇಡತನವನು ಬಿಡಿಸಿ ಸಲೆ ಕೊಂ
ಡಾಡಿ ಕಾದಿದನಸುರಜಾತಿಯೊ
ಳೋಡೆ ಪರಿಭವ ತನ್ನದೆಂಬ ಪದಸ್ತತನದಿಂದ ೬೨

ಎಸುಗೆಯೊಳ್ಳಿತಲಾಯುಧನ ಲಂ
ಬುಸನ ಪರಿ ತಪ್ಪಲ್ಲ ತಪ್ಪ
ಲ್ಲಸುರನಹೆಯೋ ಜಾಗು ಕಿಮ್ಮೀರಾತ್ಮಜಾಯೆನುತ
ಅಸಿ ಪರಶು ಪಟ್ಟಿಸ ಮುಸುಂಡಿ
ಪ್ರಸರ ಧಾರಾಪಾತದಲಿ ಮೈ
ಬಸಿಯೆ ರಕುತದ ಸಾರ ಸಾಲಿಡೆ ಬಲದೊಳೊಳಹೊಕ್ಕ ೬೩

ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ ೬೪

ಜಾಗು ದೈತ್ಯರ ರಭಸದಲಿ ಲೇ
ಸಾಗಿ ಕಾದಿದಿರೀಸು ನಮ್ಮಲಿ
ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ
ಆಗಲಿನ್ನಾವುದು ನಮಗೆ ಕೈ
ಲಾಗು ನಿಮ್ಮ ಸುಗಳು ಶರೀರವ
ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ ೬೫

ಸಿಡಿಲು ಮೊರೆದರೆ ಸರ್ಪನಂಜುವು
ದಡಗುವನೆ ಗರುಡನು ವೃಥಾ ಕೆಡೆ
ನುಡಿಯ ನುಡಿದರೆ ದಿಟ್ಟನೆಂಬರೆ ವೀರರಾದವರು
ಫಡ ಫಡೆನುತ ಬಕಾಸುರನ ಮಗ
ನಡಸಿದನು ಕೂರಂಬನಾತನ ೬೬
ಕಡುಹ ಹೊಗಳುತ ಹೊಕ್ಕು ಹಿಡಿದನು ಬೀಸಿದನು ಖಳನ

ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ ೬೭

ಬರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ ೬೮

ಎನಲು ಕವಿದುದು ಸೇನೆ ಕಂಗನೆ
ಗನಲಿ ಕರ್ಣ ದ್ರೋಣರಿಗೆ ನೀ
ನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ
ತನತನಗೆ ಕಾಲಾಳು ಮೇಲಾ
ಳನುಪಮಿತರೌಕಿದರು ಚಾಪ ೬೯
ಧ್ವನಿಯೊಳಗೆ ನೆರೆ ಮುಳುಗೆ ಬಹುವಿಧವಾದ್ಯ ನಿರ್ಘೋಷ

ಆಳಹಿರಿ ನಿಮಗಂಜುವೆನು ಕಾ
ಲಾಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳವನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ ೭೦

ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ ||೭೧||[೧]

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವಗಳು[ಸಂಪಾದಿಸಿ]

ಪರ್ವಗಳು: ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.