ನಾಸ್ತಿಕ ಕೊಟ್ಟ ದೇವರು/ಅನ್ನದೇವರ ರೈಲು ಪ್ರಯಾಣ

ವಿಕಿಸೋರ್ಸ್ದಿಂದ

pages ೧೧೭-೧೨೩

೧೧೧

ಕಥೆ : ಎಂಟು
ಅನ್ನದೇವರ ರೈಲು ಪ್ರಯಾಣ



ಕಿಷ್ಕಿಂಧೆಯ ರಾಜದಾನಿಯಲ್ಲಿ ಆ ದಿನ ಎಲ್ಲಿಲ್ಲದ ಸಡಗರ. ಆ ಸಮಾರಂಭಕ್ಕೆಂದು ರಜಾ ದಿನವಾದ ಭಾನುವಾರವನ್ನೆ ಆಳುವವರು ಆರಿಸಿದ್ದರು. ಐತಿಹಾಸಿಕ ಮಹತ್ವದ ಆ ಘಟನೆಗೆ ಪ್ರೇಕ್ಷಕರಾಗುವ ಅವಕಾಶ ಭಾಗ್ಯನಗರದ ಪೌರರಿಗೆ ಲಭಿಸಿತ್ತು. ಬೆಳಗ್ಗೆ ಬೇಗನೆದ್ದು ಜನ, ಮನೆಗಳಿಂದಲೂ ಹೊರಬಿದ್ದರು. ಹತ್ತು ಮೂಲೆಗಳಿಂದಲೂ ಹರಿದು ಬಂದುವು ಜನನದಿಗಳು. ಆ ಪ್ರವಾಹಗಳ ಸಂಗಮ, ನಗರದ ರೈಲು ನಿಲ್ದಾಣದಲ್ಲಿ. ವಿಶೇಷ ಆಸ್ಥೆಯಿಂದ ಅಲಂಕರಿಸಿದ್ದ ಭವ್ಯ ಕಟ್ಟಡ. ತಳಿರು ತೋರಣ, ಹೂ ಹಸಿರು, ಮೊಳಗುತ್ತಿದ್ದ ಮಂಗಳ ವಾದ್ಯಗಳು. ಭೂಮಿಯ ಮೈ ಮೇಲೆ ಕಾದ ಕಬ್ಬಿಣದಿಂದ ಎಳೆದು ಬರೆಗಳ ಕರಿಯ ಗೆರೆಗಳಂತೆ, ರೈಲು ಕಂಬಿಗಳು ಕಟ್ಟಡದೆದುರು ಮಲಗಿದ್ದುವು. ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳತ್ತ ಪ್ರವಾಸ ಹೊರಟಿದ್ದ ಪ್ರಯಾಣಿಕರಿದ್ದರು, ಪ್ಲಾಟ್ಫಾರ್ಮಿನ ಮೇಲೆ. ಊರ ಜನರ ಗುಂಪು ಗುಂಪಾಗಿ ಬರತೊಡಗಿದಂತೆ ಕೆಲ ಪ್ರಯಾಣಿಕರು ಹಿಂದೀ ಭಾಷೆಯಲ್ಲಿ ಕೇಳಿದರು:
" ಏನು ವಿಶೇಷ ?"
ಕನ್ನಡ ಬಾಂಧವನೊಬ್ಬ ತನಗೆ ಬರುತಿದ್ದ ಹರುಕು ಮುರುಕು ಹಿಂದಿಯಲ್ಲಿ ಉತ್ತರವಿತ್ತ:
"ರೂಪಾಯಿಗೆ ಎರಡು ಸೇರು."
ಅರ್ಥವಾಗದೆ ಆ ಮಹಾನುಭಾವ ಕೇಳಿದ:
"ಏನು?"
ಆ ಪರಿಸ್ಥಿತಿಯಲ್ಲಿ ಇಂತಹ ಪ್ರಶ್ನೆ ಬಂದುದನ್ನು ಕಂಡು ಕನ್ನಡಿಗನಿಗೆ ಆಶ್ಚರ್ಯವೆನಿಸಿತು.
"ಅಕ್ಕಿ !"

ಕನ್ನಡ ಬರುತ್ತಿದ್ದರೂ ಹಿಂದಿ ಅರ್ಥವಾಗುತ್ತಿದ್ದರೂ ಹತ್ತಿರದಲ್ಲೇ ಇದ್ದೊಬ್ಬ ತಮಿಳ ತನ್ನ ಭಾಷೆಯಲ್ಲಿ ಕೇಳಿದ:
"ಏನು ಸಮಾಚಾರ ?"
ತನಗೆ ಬರುತ್ತಿದ್ದ ಹರುಕು ಮುರುಕು ತಮಿಳಿನಲ್ಲಿ ಕನ್ನಡಿಗ ಸಂತೋಷದಿಂದ ಸಮರ್ಪಕವಾಗಿ ಉತ್ತರಿಸಿದ.
ಗುಜು ಗುಜು ಸದ್ದಾಯಿತು. "ದಾರಿ ಬಿಡಿ! ದಾರಿ ಬಿಡಿ!" ಎಂದರು ಯಾರೋ. ಕಿಷ್ಕಿಂಧೆಯ ಮುಖ್ಯಮಂತ್ರಿ ಆಗಮಿಸಿದರು.
ಜುಕು ಜುಕು ಸದ್ದಾಯಿತು. ಅಗೋ ಬಂತು!ಅಗೋ ಬಂತು! ಎಂದರು ಜನ. ಅಲಂಕರಿಸಿದ್ದ ರೈಲುಗಾಡಿ, ಷೆಡ್ಡಿನಿಂದ ಹೊರಬಂದು ಜನರಿಗೆ ಸಮಿಪವಾಗಿ ನಿಂತಿತು.
'ಗೂಡ್ಸ್ ಗಾಡಿಗೆ ಅಲಂಕಾರ,' ಎಂದು ಮೂಲೆಯಲ್ಲಿ ನಿಂತಿದ್ದ ಒಬ್ಬರು ಗೊಣಗಿದರು.
ಆದರೆ ಅನ್ನ ದೇವರು ಪ್ರಯಾಣ ಮಾಡಲು ಬಯಸಿದ್ದುದು ಆ ಗಾಡಿಯಲ್ಲೇ.
ಪ್ರವಾಸದ ರೈಲುಗಳು ಸಿದ್ಧವಾಗಿ ನಿಂತಿದ್ದುವು. ಆದರೆ ಪ್ರಯಾಣಿಕರು ಯಾರೂ ಅತ್ತ ಸುಳಿಯಲಿಲ್ಲ. ಕಿಷ್ಕಿಂಧೆಯ ಸುಂದರ ಸ್ಥಳಗಳನ್ನು ನೋಡಲು ಬಂದಿದ್ದ ಆ 'ಪರಊರಿನ' ಜನರು, ಧರ್ಮಪುರದವರ ಉತ್ಸಾಹ ಕಂಡು ತಾವೂ ಉತ್ಸುಕರಾಗಿ ಅಲ್ಲೇ ನಿಂತರು.
ಸಂದೇಹಗ್ರಸ್ತ ಮನುಷ್ಯನಿಲ್ಲದ ಪ್ರಪಂಚ ಸಾಧ್ಯವೇ?
ಒಬ್ಬ ಕೇಳಿದ:
"ಆ ಗಾಡೀಲಿದೆಯಾ ಅಕ್ಕಿ?"
"ಹೂಂ," ಎಂದ. ಎಲ್ಲವನ್ನೂ ತಿಳಿದಿದ್ದ ಇನ್ನೊಬ್ಬ.
"ಈವರೆಗೆ ಎಲ್ಲಿತ್ತು?"
"ಉತ್ತರ ದೇಶದಿಂದ ನಿನ್ನೆಯೇ ಬಂತು ಕಣ್ರೀ. ದಿಲ್ಲಿಯ ರಾಜರು ಕೊಟ್ಟ ಉಡುಗೊರೆ."
"ಓ!"
"ಇವತ್ತು ಇಲ್ಲಿಂದ ಹೊರಡುತ್ತೆ ನಮ್ಮ ರೈಲಿನಲ್ಲಿ."
"ಯಾವ ಊರಿಗೆ?"

'ಎಲ್ಲಾ ಊರಿಗೂ. ಕಿಷ್ಕಿಂಧೆಯ ಮೂಲೆ ಮೂಲೆಗೂ.'
ಅಕ್ಕಿಯ ಅಭಾವ ಉಂಟಾಗಿತ್ತು, ಕಿಷ್ಕಿಂಧೆಯಲ್ಲಿ. ಜನ, ಒಂದು ಊರಿನಿಂದ ಇನ್ನೊಂದು ಊರಿಗೆ, 'ಕ್ಷಾಮ ಸಮಾಚಾರ'ದ ವಿಷಯ ಕಾಗದ ಬರೆಯ ತೊಡಗಿದ್ದರು. ಹಾಹಾಕಾರವೆದ್ದಿತು ಬಡಬಗ್ಗರಿಂದ. [ಅಂಥವರ ಸಂಖ್ಯೆಯೇ ಹೆಚ್ಚು ಎಲ್ಲ ಕಡೆಗಳಲ್ಲೂ.] ಅಕ್ಕಿ ಪಲ್ಲಕ್ಕೆ ಅರವತ್ತು ರೂಪಾಯಿ, ಎಪ್ಪತ್ತು, ಎಂಬತ್ತು... ನೂರಾದರೆ ಗತಿ? ರೂಪಾಯಿಗೆ ಒಂದೂ ಮುಕ್ಕಾಲು ಸೇರು ಚಟಾಕು, ಚಟಾಕು ಕಡಮೆ ಒಂದೂ ಮುಕ್ಕಾಲು ಸೇರು, ಒಂದೂವರೆ, ಒಂದೂಕಾಲು . . . ಒಂದಾದರೆ ಗತಿ? ಅಷ್ಟರಲ್ಲೇ ಅನ್ನ ದೇವರ ಅಭಯ ದೊರೆತಿತ್ತು: 'ಹೆದರಬೇಡಿ!' ಆ ಅಭಯವಾಣಿಯನ್ನು ದೇವರ ಪೂಜಾರಿಗಳಾಗಿ ಮಂತ್ರಿವರ್ಯರು ಜನತೆಗೆ ಮುಟ್ಟಿಸಿದರು.
ಜನ ಹರ್ಷಧ್ವನಿ ಮಾಡಿದರು, ಆ ಸಂದೇಶ ತಲುಪಿದಾಗ. ಕಿಷ್ಕಿಂಧೆಯ ಜನರು ಅನ್ನ ಸಂಕಟ ನೀಗುವ ಸನ್ನಿವೇಶ ಸ್ವಾಗತಾರ್ಹವಾಗಿತ್ತು.
ಸರಕಾರದ ವಕ್ತಾರರು ಖಾಸಗಿಯಾಗಿ ಹೇಳಿದ ಮಾತು ಪತ್ರಿಕೆಗಳಲ್ಲಿ ಪ್ರಕಟವಾಯಿತು:
'ಇನ್ನು ಯಾವ ಯೋಚನೆಯೂ ಇಲ್ಲ. ಒಮ್ಮೆ ಫುಡ್ ಸ್ಪೆಷಲ್ಲು ಹೋಗಿ ಬರಲಿ. ಅನ್ನದೇವರು ಎಲ್ಲ ಕಡೆಗಳಲ್ಲೂ ಪ್ರತ್ಯಕ್ಷವಾಗಲಿ. ಆ ಮೇಲೆ ನೋಡುವಿರಂತೆ. ಅಕ್ಕಿ ತಾನೇ ತಾನಾಗಿ ಹೊರ ಬರುತ್ತೆ...!'
ರಾಹು ಕಾಲ ಕಳೆದಿತ್ತು. ಅರ್ಚಕರು ಮಂತ್ರಗಳನ್ನು ಪಠಿಸಿದರು. ಶಂಖಧ್ವನಿಯಾಯಿತು. ಅದನ್ನು ಮೀರಿಸಿ ಧ್ವನಿವರ್ಧಕದ ಮೂಲಕ ಮಂತ್ರಿವರ್ಯರ ಮಾತು ಕೇಳಿಬಂತು:
'ನಾವು ಕೊಟ್ಟ ಮಾತನ್ನು ನಡೆಸುವವರಲ್ಲಿ ಎಂತ ಯಾರು ಹೇಳುತ್ತಾರೆ? ಇಗೋ, ಜನರ ಸಹಾಯಕ್ಕೆ ಬಂದಿ ದ್ದೇ ವೆ. ಕಳೆದ ಚುನಾವಣೆಯಲ್ಲೇ ನಾವು ಜನಸೇವಕರೂಂತ ಹೇಳಿಕೊಂಡಿದ್ವಿ - ಮುಂದಿನ ಚುನಾವಣೆಯಲ್ಲಿ ಅದೇ ಮಾತನ್ನ ಹೇಳ್ತೀವಿ. ಮಾತಿಗೆ ತಪ್ಪುವವರು ನಾವಲ್ಲ. ದುರ್ಭಿಕ್ಷದಿಂದ ಜನ ಸಾಯ್ತಿದಾರೇಂತ ಪತ್ರಿಕೆಗಳಲ್ಲಿ ಪ್ರಕಟವಾದರು ನಂಬಬೇಡಿ. ನಮ್ಮ ರಾಮರಾಜ್ಯದಲ್ಲಿ ಯಾರೂ ಹೊಟ್ಟೆಗಿಲ್ಲದೆ ಸಾಯುವುದಿಲ್ಲ ! ಸಾಯಲು ನಾವು ಸಮ್ಮತಿ ಕೊಡುವುದಿಲ್ಲ ! ಉತ್ತರ ದೇಶದ ರಾಜರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ನೋಡಿದಿರಾ ರೈಲು? ಇದರಲ್ಲಿ ಅಕ್ಕಿ ಇದೆ. ರೂಪಾಯಿಗೆ ಎರಡು ಸೇರು ! ಎಲ್ಲಿ, ಜಯಘೋಷ ಮಾಡಿ ! ನನ್ನ ಜತೆಯಲ್ಲಿ ಗಟ್ಟಿಯಾಗಿ ಹೇಳಬೇಕು. ನಾನು 'ರೂಪಾಯಿಗೆ' ಅಂದಾಗ ನೀವು 'ಎರಡು ಸೇರು' ಎನ್ನಬೇಕು. ಹೇಳಿ, ರೂಪಾಯಿಗೆ__!'
ಜನಸ್ತೋಮದ ಕಟ್ಟಿಟ್ಟ ಭಾವನೆಗಳ ಕಟ್ಟೆಯೊಡೆದು ಧ್ವನಿ ಕೇಳಿಸಿತು:
'ಎರಡು ಸೇರು !'
ಮಂತ್ರಿವರ್ಯರೆಂದರು:
'ಇನ್ನೊಮ್ಮೆ-ರೂಪಾಯಿಗೆ__!'
ಉತ್ತರ.
ಮತ್ತೂ ಒಮ್ಮೆ,
ಖಾದಿಯಂತೆ ನುಣುಪಾಗಿದ್ದ ಸಣಬಿನ ಚೀಲದಲ್ಲಿ ಹತ್ತು ಸೇರು ಅಕ್ಕಿಯನ್ನು ಧಾಂಡಿಗ ಜವಾನನೊಬ್ಬ ಮಂತ್ರಿವರ್ಯರ ಮುಂದೆ ಹಿಡಿದ. ಮಂತ್ರಿವರ್ಯರು ಆ ಭಾರವನ್ನು ಎತ್ತಲಿಲ್ಲ. ಬೆರಳಲ್ಲೇ ಮುಟ್ಟಿ ಆಹಾರ ಸಚಿವರ ಕಡೆಗೆ ದಾಟಿಸಿದರು. ಆಹಾರ ಸಚಿವರ ಹಸ್ತಸ್ಪರ್ಶದ ಬಳಿಕ ಚೀಲ ಅವರ ಜವಾನನ ಬಳಿ ಸೇರಿತು.
ಅರ್ಚಕರು ರೈಲುಗಾಡಿಯ ಎಂಜಿನಿನ ಕರಿಯ ಮುಖವನ್ನು ಆರತಿಯಿಂದ ಬೆಳಗಿದರು. ಅದರ ಹಣೆಗೆ ಕುಂಕುಮವಿಟ್ಟರು.
ಜಯಘೋಷ ಮೊರೆಯಿತು.
ಭಾವಚಿತ್ರಗಳನ್ನು ತೆಗೆದುಕೊಳ್ಳುವವರು ತಾಮುಂದು ನಾಮುಂದು ಎಂದು ಸೆಣಸಾಡಿದರು. ಮಂತ್ರಿವರ್ಯರು ಬಹಳ ಹೊತ್ತು ಮುಗುಳುನಗುತ್ತಲೇ ಇರಬೇಕಾಯಿತು.
ಗಾರ್ಡ್ ಶೀಟಿಯೂದಿದ, ಹಸುರು ಬಾವುಟ ಬೀಸುತ್ತಾ. ಗಾಡಿ ಶಿಳ್ಳು ಹಾಕಿತು, ಗಗನಕ್ಕೆ ಗುರಿ ಇಟ್ಟು.
ಜುಕು ಜುಕು-ಜೂ . . . ಮೈಲೂರಿನ ಕಡೆಗೆ ರೈಲು, ಎಂಜಿನ್ನು. ಸಂಗ್ರಹ ಸಾಲದೆ ಹೋಗಬಹುದೆಂದು ಒಂದು ಡಬ್ಬಿ ತುಂಬ ಕಲ್ಲಿದ್ದಲು. ಇನ್ನೊಂದು ಡಬ್ಬಿಯಲ್ಲಿ ತಳಿರುತೋರಣದ ಸಾಮಗ್ರಿ-ಬಾಡಿದ ಹಸುರನ್ನು ಬದಲಾಯಿಸುವುದಕ್ಕೋಸ್ಕರ. ತಿಂಡಿತೀರ್ಥಗಳಿಗೆ ಏರ್ಪಾಟು ಇನ್ನೊಂದರಲ್ಲಿ. ಚಿಲ್ಲರೆ ಅಕ್ಕಿ ತುಂಬಿದ ಡಬ್ಬಿಯೊಂದು. ಉಳಿದ ಹಲವಾರು ಡಬ್ಬಿಗಳು-ಗುಡು ಗುಡು ಗುಡು ಗೂಡ್ಸ್ ಗಾಡಿ- ಅನ್ನ ದೇವರಿಗೆ ಅವು ಮೀಸಲು. ಕೊನೆಯಲ್ಲಿ ಗಾರ್ಡು. ಬಳಿಯಲ್ಲೇ ಸುರುಳಿ ಸುತ್ತಿದ ಬಾವುಟಗಳು. ಕೈಯಲ್ಲಿ ಸುರುಳಿ ಹೊಗೆ ಬಿಡುತ್ತಿದ್ದ ಸಿಗರೇಟು . . .
ಯಾವುದೋ ಹಳೆಯ ಹಾಡಿನ ನೆನಪು ಅವನಿಗೆ:
' ದುನಿಯಾ ರಂಗ್ ರಂಗೇಲಿ ಬಾಬಾ ದುನುಯಾ ರಂಗ್ ರಂಗೇಲಿ.'

****

ಜುಕು ಜುಕು ಜುಕು...
ಸೇತುವೆಗಳ ಮೇಲಿಂದ,ಕ ಣಿವೆಯ ಮಾರ್ಗವಾಗಿ, ಬಯಲುಗಳನ್ನು ಹಾದು, ಬೆಟ್ಟಗಳನ್ನು ಕೊರೆದು ಧಾವಿಸುತ್ತಿತ್ತು. ಲೋಹದೈತ್ಯ, ಹತ್ತಿರದಿಂದ; ದೂರದ ನೋಟಕ್ಕೆ, ಸಾವಿರ ಕಾಲಿನ ಹುಳು.
ಗಾಡಿಗಿಂತ ಮುಂಚೆಯೇ ಸುದ್ದಿ ಹೋಗಿತ್ತು. ಸ್ವಾಗತಕ್ಕೆ ಸಿದ್ದತೆಯಾಗಿತ್ತು. ಎಲ್ಲ ಊರುಗಳಲ್ಲೂ- ಬಾವುಟ - ಘೋಷಣೆ ಜಯಕಾರ. ರೈಲು ಎಲ್ಲಿಯೂ ನಿಲ್ಲದೆಯೇ ಸಾಗಿತು! ಒಂದು ಊರಿನಿಂದ ಇನ್ನೊಂದು ಊರಿಗೆ. ಅಲ್ಲಿಂದ ಬೇರೊಂದು ಊರಿಗೆ. ಎದುರು ಬದಿಯಿಂದ ಬರುತಿದ್ದ ರೈಲುಗಾಡಿಗಳು ಸರಿದು ನಿಂತು 'ಫುಡ್ ಸ್ಪೆಷಲ್ಲಿಗೆ' ಹಾದಿಮಾಡಿ ಕೊಟ್ಟವು. ಅಲ್ಲಲ್ಲಿ ಕಂಬಿ ಸರಿಪಡಿಸುತಿದ್ದ ಕೆಲಸಗಾರರು ದೂರ ಸರಿದು ನಿಂತರು. ಎಮ್ಮೆ ದನಗಳು ಕಂಬಿಯನ್ನು ದಾಟಲಿಲ್ಲ. ಜನ ಗಾಡಿಯನ್ನು ಕಂಡಲ್ಲೆಲ್ಲ ಕೈಬೀಸಿದರು, ಹರ್ಷಧ್ವನಿ ಮಾಡಿದರು, ಸಂತೋಷದಿಂದ ಕುಣಿದರು.
ಆ ಸಂತೋಷದಲ್ಲಿ ಭಾಗಿಗಳಾದ ಮೇಲೂ ಸಂದೇಹಗ್ರಸ್ತರು ಅಲ್ಲಲ್ಲಿ ಕೇಳುವುದಿತ್ತು:
'ಅನ್ನದೇವರು ಯಾವ ಊರಿಗೆ ಹೊರಟಿದ್ದಾರೆ?'
ಉತ್ತರ ಸಿದ್ದವಾಗಿರುತಿತ್ತು:
'ಯಾವ ಊರಿಗೆ? ಅಯ್ಯೋ ಬೆಪ್ಪೆ! ಕಾಣಿಸೋದಿಲ್ವೆ? ಮುಂದಿನ ಊರಿಗೆ!'
ಅಲ್ಲಿಯೂ ಬಲ್ಲವರಿಂದ ಉತ್ತರ ಬಂತು:
'ಅಯ್ಯೋ ಬೆಪ್ಪೆ! ಮುಂದಿನ ಊರಿಗೆ.'
ಹಾಗೆಯೇ ಮುಂದಕ್ಕೂ...
ಆ ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ. ಅಲ್ಲಿಂದ ಇನ್ನೊಂದಕ್ಕೆ ಬಳಸಿಕೊಂಡು.
ಮೈಲೂರು, ಚಿತ್ರಾವತಿ, ಭಧ್ರಾನಗರ,ಬಹುಮನಿಪುರ . . .
ಎಲ್ಲೆಡೆಗಳಲ್ಲೂ ಅದೇ ವೈಭವಯುತ ಸ್ವಾಗತ.
ಜನ ಮಾತನಾಡಿಕೊಂಡರು:
' ಕುರುಡನಿಗೆ ದೃಷ್ಟಿ ಬಂದಂತಾಯ್ತು.'
' ಕತ್ತಲೇಲಿ ಬೆಳಕು ಕಂಡ ಹಾಗಾಯ್ತು.'
' ಇನ್ನು ಅಕ್ಕಿಯ ಅಭಾವ ಇಲ್ಲವಲ್ಲ!'

****

ಅಂತೂ ಕೊನೆಗೊಮ್ಮೆ ರೈಲುಗಾಡಿ__ಹಗಲು ಇರುಳುಗಳ ಬಳಿಕ__ಒಂದೆಡೆ ತಂಗಬೇಕಾಯಿತು. ಅದಕ್ಕೆ ಕಾರಣವಿಷ್ಟೆ. ಅಲ್ಲಿಂದ ಮುಂದೆ ಹಾದಿ ಇರಲಿಲ್ಲ. ಅದೇ ಕೊನೆಯ ನಿಲ್ದಾಣ. ಭಾಗ್ಯನಗರದ ಕಾರ್ಯಕ್ರಮವನ್ನು ಮೀರಿಸಲೆತ್ನಿಸುವಂತಹ ಸಮಾರಂಭ ಏರ್ಪಟ್ಟಿತ್ತು ಆ ಊರಲ್ಲಿ. ಮಂತ್ರಿವರ್ಯರು ಮಾತ್ರ ಇರಲಿಲ್ಲ, ಅಷ್ಟೆ.
ಆಯಾಸಗೊಂಡು ಬಸವಳಿದಿದ್ದ ಗಾರ್ಡು, ಚಾಲಕರು ಕೆಳಗಿಳಿದರು. ತಮ್ಮ ಕೆಲಸ ಮುಗಿಯಿತೆಂದು ಅವರಿಗೆ ಸಮಾಧಾನವಾಗಿತ್ತು. ಅವರು ಮುಗುಳು ನಗಲಿಲ್ಲ. ಮಂತ್ರಿಗಳಂತೆ ಮುಗುಳು ನಕ್ಕು ಅವರಿಗೆ ಅಭ್ಯಾಸವಿರಲಿಲ್ಲ.
ಅಲ್ಲಿಯೂ ಒಬ್ಬಿಬ್ಬರು ಕೇಳಿದರು:
'ಎಲ್ಲಿದ್ದಾರೆ? ಎಲ್ಲಿದೆ?'
ಉತ್ತರವಿದ್ದೇ ಇತ್ತು:
'ಎಷ್ಟೊಂದು ಊರು ದಾಟಿ ಬಂದಿರೋದು! ಏನ್ಕಥೆ! ರೈಲುಗಾಡಿಯಾದರೂ ಇಲ್ಲೀತನಕ ಬಂತಲ್ಲಾ ಅಂತ ನಾವು ಸಂತೋಷಪಡ್ಬೇಕು.'
ಕೆಲವರಿಗೆ ಸಮಾಧಾನವಾಯಿತಾದರು ಅಲ್ಲೊಂದು ಇಲ್ಲೊಂದು ಸ್ವರ ಮತ್ತೂ ಕೆಳಿಸಿತು:
' ಎಲ್ಲಿ ದೇವರು? ಅನ್ನ ದೇವರು?' ಉತ್ತರವಿರಲಿಲ್ಲ, ಆಕ್ಷೀಣ ಧ್ವನಿಯ ಪ್ರಶ್ನೆಗೆ.
ಚಿಲ್ಲರೆ ಅಕ್ಕಿಯನ್ನಿರಿಸಿದ್ದ ಡಬ್ಬಿಯಿಂದ ಬಲಿತ ಹೆಗ್ಗಣಗಳೆರಡು ಎದುರು ಮಗ್ಗುಲಿನಿಂದ ಕೆಳಕ್ಕೆ ಹಾರಿ ಊರು ಸೇರಿದುವು.

****

'ಫುಡ್ ಸ್ಪೆಷಲ್ಲು' ಕಿಷ್ಕಿಂಧೆಯನ್ನು ಸುತ್ತಿ ದಿನಗಳು ಕಳೆದುವು.
ಶೆಟ್ಟರು ಎಂದಿನಂತೆ ಹೇಳಿದರು:
'ಅಕ್ಕಿ ಇದೆ. ಒಳ್ಳೇ ಅಕ್ಕಿ. ರೂಪಾಯಿಗೆ ಒಂದೂ ಕಾಲು ಸೇರು ಇಡೀ ಪಲ್ಲ ತಗೊಳೋದಾದರೆ___'
ಗಿರಾಕಿಗಳು ಮೆಲು ದನಿಯಲ್ಲಿ ಅಂದರು:
___'ಪತ್ರಿಕೆಗಳಲ್ಲಿ ಬಂದಿದೇ '...
___'ರೂಪಾಯಿಗೆ ಎರಡು ಸೇರಂತೇ.'
___'ಮಂತ್ರಿಗಳು ಹೇಳಿದಾರಂತೆ ಕಣ್ರೀ.'
ಶೆಟ್ಟರು ಆಗಲೂ ಶಾಂತ ಚಿತ್ತರಾಗಿಯೇ ಇದ್ದರು:
' ನಾವೇನ್ರಿ ಮಾಡೋದು ? ಮಂಡಿಯಿಂದ ಇಷ್ಟಕ್ಕೆ ತಂದಿದೀವಿ. ಗಾಡಿ ಖರ್ಚು ಇಷ್ಟು. ನಮಗೆ ಮಾರ್ಜಿನು ಎಷ್ಟಪ್ಪಾ? ನೀವೇ ಲೆಕ್ಕ ಹಾಕಿ ನೋಡಿ.'
' ಏನಾಯಿತ್ರೀ ಹಾಗಾದ್ರೆ ರೈಲ್ನಲ್ಲಿ ಬಂದಿದ್ದು?'
' ಬಂದಿತ್ತೆ?'
' ಏನು ಹಾಗಂದ್ರೆ? ನಾನು ಕಣ್ಣಾರೆ ನೋಡಿದೀನಿ.'
' ಏನನ್ನ?'
' ರೈಲನ್ನ.'
' ಸರಿ ಮತ್ತೆ ! ರೈಲಿದೆ !'
' ಅನ್ನ ದೇವರು?'
ಶೆಟ್ಟರ ಬದಲು ಗಿರಾಕಿಗಳಲ್ಲೇ ಒಬ್ಬ ಉತ್ತರವಿತ್ತ:
' ಅನ್ನ ದೇವರೆ ? ಎಲ್ಲಾ ದೇವರ ಹಾಗೆಯೇ. ಎಲ್ಲಾ ಕಡೇಲೂ ಇರೋದು ನಿಜ. ಎಲ್ಲಿಯೂ ಕಾಣಿಸೋದಿಲ್ಲ, ಅದೂ ನಿಜ !'