ನಾಸ್ತಿಕ ಕೊಟ್ಟ ದೇವರು/ಮಣ್ಣಿನ ಮಗ ಗನ್ನು ತಂದ

ವಿಕಿಸೋರ್ಸ್ ಇಂದ
Jump to navigation Jump to search

 

ಕಥೆ : ಎರಡು

ಮಣ್ಣಿನ ಮಗ ಗನ್ನು ತಂದ


ಗುಲ್ಡು ... ಗುಲ್ಡೂ ..."
[ಯಾವ ಗವಿಯಿಂದಲೋ ಇದೊಂದು ಧ್ವನಿ ಬರುತ್ತಿದೆಯಲ್ಲ?]
"ಗುಲ್ಡು ... ಗುಲ್ಡೂ..."
[ಅಮ್ಮ? ನೀನಾ ಅಮ್ಮ ಕರೀತಿರೋದು?]
" ಗುಲ್ಡೂ!"
[ಎಳೆಯ ಕಂಠ. ತಂಗೀನೆ ಇರ್ಬೇಕು. ಸೀತೂ! ಏ ಸೀತಾ!]
"ಗುಲ್ಡು!"
[ನಮ್ಮ ಮೇಷ್ಟು! ಅಬ್ಬ! ರಾಮೇಶ್ವರಕ್ಕೆ ಹೋದರೂ ಬಿಡನಲ್ಲ, ಈ ಶನೀಶ್ವರ!]
" ಗುಲ್ಡು ... ಓ ಗುಲ್ಡೂ ..."
[ಯಾರಿದು? ಕಣ್ಣು ತೆರೆದು ನೋಡೋಣ ಅಂದರೆ ಯಾರೋಕಣ್ಣಿನ ರೆಪ್ಪೆಗಳನ್ನು ಬಲವಾಗಿ ಅದುಮಿ ಹಿಡಿದಿದಾದರಲ್ಲ ... ಅಲ್ಲ-ಹೀಗೇ ಮಲಗಿರಲೊ? ಬೇಜಾರು. ಯಾರು ಏಳೋರು? ಅಗೋ ತುತೂರಿಯ ಸದ್ದು! ತುತೂರಿ! ನಾನು ಏಳ್ಬೇಕು ಪರೇಡಿಗೆ. ಹೊತ್ತಾಯ್ತು! ಕರ್ನಾಯಿಲ್ ಭಾಯಿ! ಏಳು, ಕರ್ನಾಯಿಲ್ ಭಾಯಿ!]

****

" ಏಳು ಕರ್ನಾಯಿಲ್ ಭಾಯಿ!"
"ಶ್ ಗುಲ್ಡು! ನೀನು ಏಳ್ಬಾರ್ದು. ಸರ್ಜನ್ ಸಾಹೇಬರ ಆಜ್ಞೆಯಾಗಿದೆ ."
"ಹ್ಞು?"
"ಅಂತೂ ನಿನಗೆ ಎಚ್ಚರವಾಯ್ತಲ್ಲ, ಗುಲ್ಡು!”
"ಹೂಂ ಕರ್ನಾಯಿಲ್ ಭಾಯಿ. ಎಲ್ಲಿದೀಯಾ ನೀನು?” "ನಿನ್ನ ಮಗ್ಗುಲಲ್ಲಿ ತಿರುಗಿ ನೋಡು ..."
"ತುಂಬಾ ಅಶಕ್ತಿ."
"ಮಗ್ಗಲು ಹೊರಳ್ಬೇಡ. ಹುಚ್ಚಪ್ಪ! ಹಾಗೆ–ದೃಷ್ಟಿ ತಿರುಗಿಸು."
"ಆ, ಇದೇನು ಕರ್ನಾಯಿಲ್ ನಿನ್ನ ಕಾಲಿಗೆ? ರಗ್ಗಿನ ಸಂದಿಯಿಂದ ಏನೋ ಕಾಣಿಸ್ತಿದೆಯಲ್ಲ?"
"ಬ್ಯಾಂಡೇಜು, ಗುಲ್ಡು ... ಹಿಮ ಕಡಿದದ್ದು."
"ಹಿಮ?"
"ಹ್ಞು."
"ನಾನು?"
"ನನ್ನ ಪಕ್ಕದಲ್ಲೆ ಮಂಚದ ಮೇಲೆ ಮಲಗಿದೀಯಾ."
"ಇದು ಕ್ಯಾಂಪ್ ಅಲ್ಲ?"
"ಅಲ್ಲ ಗುಲ್ಡು. ಇದು ಆಸ್ಪತ್ರೆ ಡೇರೆ."
"ಆಸ್ಪತ್ರೆ? ನಾವು ಮಲಗಿದೀವಿ?"
"ಎದುರಿಗೆ, ಆಚೆ ಮಗ್ಗುಲಿಗೆ, ಎಲ್ಲಾ ಕಡೆ ನಮ್ಮವರು ಮಲಗಿದಾರೆ."
"ವೆಲಾಂಗ್?"
"ಇದು ತೇಜಪುರ, ಗುಲ್ಡು."
"ತೇಜಪುರ? ಇಲ್ಲಿಗೆ ನಾವು ಹ್ಯಾಗ್ಬಂದ್ವಿ? ಯಾಕ್ಬಂದ್ವಿ?"
"ಶ್! ಸ್ವರ ಏರಿಸ್ಬಾರ್ದು, ಗುಲ್ಡು. ನೀನು ಹೀರೋ. ನಮ್ಮ ಹೀರೋಗಳಲ್ಲಿ ಒಬ್ಬ."
"ಹೀರೋ? ನಾನು? ... ಆಯ್! ಏಳೋಕೆ ಆಗ್ತಿಲ್ವಲ್ಲ!"
"ನಿನ್ನ ಪಕ್ಕೆಗೆ ತಗಲಿದ ಎರಡು ತೋಟಾಗಳನ್ನ ಸರ್ಜನ್ ಸಾಹೇಬರು
ತೆಗೆದಿದಾರೆ."
"ನನ್ನ ಪಕ್ಕೆಗೆ ತಗಲಿದ ಎರಡು ತೋಟಾಗಳು? ಆ್ಹ. ಆ್ಹ. ಆ ದಿನ..."

*****

ವೆಲಾಂಗ್.
ಕತ್ತಲೆಯ ಮುಸುಕಿನಲ್ಲಿ ಚೀಣೀ ಪಡೆಗಳು ನುಸುಳಿಬಂದಿದ್ದುವು.ಒಮ್ಮಿಂದೊಮ್ಮೆಲೆ ಟ್ಯಾಂಕುಗಳು ಬೆಂಕಿಯುಂಡೆಗಳನ್ನು ಉಗುಳಿ ಬೆಳಕು ಮಾಡಿದ್ದುವು. ಸನ್ನದ್ಧರಾಗಿದ್ದ ಭಾರತೀಯ ಯೋಧರ ಗುಂಡುಗಳು ಪ್ರತ್ಯುತ್ತರ ನೀಡಿದ್ದುವು.

"ಹಿಂದೀ ಚೀನೀ ಭಾಯಿ ಭಾಯಿ!"

ಅಲ್ಲವೆ ಪಾಪ! ತಗೋ, ಇದೊಂದು.

ಇದು ಒಂದು, ಇನ್ನೊಂದು ...

ಗಿರಿಕಂದರಗಳ ತುಂಬ ಗುಂಡಿನ ಭೋರ್ಗರೆತದ ಧ್ವನಿ, ಪ್ರತಿಧ್ವನಿ.

"ಫಯರ್! ಫಯರ್!"

ನಿಕರದ ಕಾಳಗ. ಅಂಗುಲ ಅಂಗುಲ ನೆಲಕ್ಕೆ. ಆ ಇರುಳು. ಒಂದು ಹಗಲು, ಮತ್ತೊಂದು ಇರುಳು.

ಕರ್ಕಶವಾದ ಮೃಗೀಯ ಹೇಷಾರವಕ್ಕೆ ಉತ್ತರ :

"ಭಾರತ್ ಮಾತಾ ಕಿ ಜಯ್!"

ಹಿಮ್ಮೆಟ್ಟಬೇಕೆಂಬ ಆಜ್ಞೆ ಆಗ ಬಂತು. ಚೆಲ್ಲಾಪಿಲ್ಲಿಯಾಗಿ ಚೆದುರು ವುದಲ್ಲ. ಆಯಕಟ್ಟಿನ ಇನ್ನೊಂದು ಸ್ಥಳದಿಂದ ಮತ್ತೆ ಹೋರಾಡುವುದಕ್ಕಾಗಿ ಹಿನ್ನಡೆ; ಗಾಯಗೊಂಡವರನ್ನು ಎತ್ತಿಕೊಂಡು, ಆಯುಧಗಳಿಗೆ ಆತು ಕೊಂಡು.

"ಎಲ್ಲಿ ಒಡನಾಡಿಗಳು? ತುಕ್ಕಡಿಯಲ್ಲಿ ಸೇರ್ಪಡೆಯಾದ ದಿನದಿಂದ ಮೊದಲ್ಗೊಂಡು ತನ್ನ ಆತ್ಮೀಯ ಬಂಧುವಾಗಿ ಜತೆಗಿದ್ದ ಕರ್ನಾಯಿಲ್ ಸಿಂಗ್"? ಹಾಸ್ಯಪಟು ರಾಮನ್ ನಾಯರ್? ಚಲಚ್ಚಿತ್ರಗೀತೆಗಳನ್ನು ಅದ್ಭುತವಾಗಿ ಹಾಡುತ್ತಿದ್ದ ಶೇರ್ ಗಾಂವ್ಕರ್?

ಸೈನಿಕರು ಹರಿದುಹಂಚಿಹೋದಾಗ ತಾನೊಬ್ಬನೇ ಆದೆ. ಕೈಯಲ್ಲಿ ಬಂದೂಕಿತ್ತು. ಅದನ್ನೆತ್ತಿಕೊಂಡು ಹಿಂದಕ್ಕೆ ತಿರುಗಬೇಕೆನ್ನುವಷ್ಟರಲ್ಲೆ ಸಪ್ಪಳ ಕೇಳಿಸಿತು. ರಟಟಟ ಟ್ಟ-ತನ್ನ ಕಡೆಗೆ. ತಾನು ಅಂಗಾತ ಮಲಗಿ ಆ ಗುಂಡಿನೇಟುಗಳಿಂದ ತಪ್ಪಿಸಿಕೊಂಡೆ. ಕತ್ತಲಲ್ಲಿ ಮೂರು ಆಕೃತಿ ಗಳು ತನ್ನನ್ನು ಹುಡುಕಿಕೊ೦ಡು ಬರುತ್ತಿದ್ದುವು. ತಾನು ಸತ್ತಿರುವೆನೋ ಇಲ್ಲವೋ ಎಂಬುದನ್ನು ಖಚಿತಪಡಿಸುವುದಕ್ಕೋಸ್ಕರ ಇರಬೇಕು ...

... ಮಲಗಿದಲ್ಲಿಂದಲೇ ಗುಂಡು ಹಾರಿಸಿದೆ. ಒಂದು ಎರಡು ಮೂರು.

ಆಕೃತಿಗಳಲ್ಲಿ ಎರಡು ನೆಲಕ್ಕುರುಳಿದವು: ಇನ್ನೊಬ್ಬನಿಂದ ಬಂತು :
"ರಟ್-ಟಟ ಟಟ."
ಗುರಿ ಇಡಲು ಬಾರದ ಯೋಧ.
ತನ್ನ ಒಂದು ಗುಂಡಿಗೆ ಇವನೀಗ ಬಲಿಯಾಗಬೇಕು.
ಕ್ಲಕ್.
ಅಯ್ಯೋ! ಮದ್ದು ತೀರಿದೆಯಲ್ಲ! ಹತ್ತಿರವೇ ಬಂದ!
ಉ ಉ ಉ–ಅವನನ್ನೀಗ ಕಾಲು ಹಿಡಿದೆಳೆದು ನೆಲುಕ್ಕುರುಳಿಸಿ—
"ಹ್ವಾ ಯಾ!"
ಕೆಳಗೆ ಬಿದ್ದ ವೈರಿ ಸೈನಿಕನ ಆಯುಧದಿಂದ ಗುರಿತಪ್ಪಿದ ಗುಂಡುಗಳನೇಕ ಆಕಾಶದತ್ತ ಹಾರಿದುವು.
ಬಿದ್ದವನ ಎದೆಯ ಮೇಲೆ ತಾನು. ಲೈಟ್ ಮೆಷಿನ್ ಗನ್ ... ಅದನ್ನು ಹಿಡಿದೆಳೆದು, ಆದರಿಂದಲೇ ಅವನ ತಲೆಗೆ ಚಚ್ಚಿದೆ. ಎದ್ದು, ಆ ಆಯುಧವನ್ನೆತ್ತಿಕೊಂಡು ಓಡಿದೆ ... ಆದು, ಪರ್ವತಶ್ರೇಣಿಯ అంಚು. ಮುಂದೆ-ದಾರಿಯಿಲ್ಲ.
ಸುಂಯ್ ... ಸುಂಯ್ ...
ಗುಂಡುಗಳು ತನ್ನ ಎಡದಿಂದಲೂ ಬಲದಿಂದಲೂ ಧಾವಿ‍ಸಿ ಬರುತ್ತಿದ್ದುವು. ಓಡಲು ಎಡೆಯಿಲ್ಲ. ನಿಂತೆನೋ ಸಾವು ನಿಶ್ಚಿತ.
ಧುಮುಕಿದರೆ? ಆಳವೆಷ್ಟೊ? ಸಾವಿರ ಅಡಿಗಳೊ? ಅದಕ್ಕಿಂತಲೂ ಹೆಚ್ಚೊ? ಅಲ್ಲೇನಿದೆಯೊ ಕೆಳಗೆ?
ಯೋಚಿಸುತ್ತಲಿದ್ದಂತೆಯೇ ಆತ ಧುಮುಕಿದ ಕೆಳಕ್ಕೆ, ಭಾರವಾದ ಅಸ್ತ್ರದೊಡನೆ

****

"ನಾನು ಧುಮುಕಿದೆ ಕರ್ನಾಯಿಲ್ ಭಾಯಿ."
"ಹ್ಞ, ಬೇಟಾ. ನೀನು ಬಿದ್ದೆ. ಪ್ರಜ್ಞೆ ತಪ್ಪಿತು. ವೈರಿಗಳ ಪಡೆ ಬೇರೆ ದಾರಿಯಾಗಿ ಸೂರ್ಯೋದಯಕ್ಕೆ ಮುಂಚೆಯೇ ಸಾಗಿದ್ದರಿಂದ ಅವರ ಕಣ್ಣಿಗೆ ನೀನು ಬೀಳ್ಲಿಲ್ಲ."
" ಹುಂ."
"ಹಗಲು ನಿನಗೆ ಪ್ರಜ್ಞೆ ಬಂತು. ಆದರೆ ಎದ್ದು ನಿಲ್ಲೋಕಾಗ್ಲಿಲ್ಲ.ಕಾಲು ಉಳುಕಿತ್ತು."
"ಹೌದು."
"ಆ ಭಾರ ಬೇರೆ!"
“ ಹ್ಞ."
"ಹಾಗೇ ಮಲಗಿಬಿಟ್ಟೆ."
"ಹುಂ."
"ಮಾರನೆಯ ದಿನ ನಮ್ಮ ಶೋಧಕ ತಂಡದ ಕಣ್ಣಿಗೆ ಬಿದ್ದೆಯಂತೆ.ಹೆಲಿಕಾಪ್ಟರ್‍‍ನಲ್ಲಿ—"
"ನೆನಪಿದೆ."
"ನಿನ್ನನ್ನಿಲ್ಲಿಗೆ ತಂದ್ರು."
"ಹ್ಞ."
"... "
"ಭಾಯಿ ಸಾಬ್ ..."
"ಏನು ಬೇಟಾ?"
"ರಾಮನ್ ನಾಯರ್?"
"ಗೊತ್ತಿಲ್ಲ."
"ಶೇರ್‍ಗಾಂವ್‍ಕರ್?"
"ಇಲ್ಲಿಲ್ಲ."
"... "
"ಬೇಟಾ, ಕಣ್ಣೀರು ಹಾಕ್ಬಾರ್ದು. ರಕ್ತಸ್ರಾವವಾಗುತ್ತೆ."
"ನಾನು ಅಳ್ತಾ ಇಲ್ಲ, ಭಾಯಿ ಸಾಬ್."
"ಒಳ್ಳೇ ಹುಡುಗ."
"ಈಗ ಅದೆಲ್ಲಿದೆ, ಗೊತ್ತಾ? ಅದು-"
"ಅದೇ !? ಇದೆ-ಮೇಜರ್ ಸಾಹೇಬರ ಹತ್ತಿರ!"

****


ಒಂದು ದಿನ ಕಳೆದ ಬಳಿಕ-
"ಹಲ್ಲೋ ಗುಲ್ಡು, ಚೆನ್ನಾಗಿದೀಯಾ ಇವತ್ತು?"
ದೇವಕನ್ಯೆ. ನೋವಿನ ನರಕಕ್ಕೆ ಸಂದರ್ಶನವೀಯುವ ಸುಂದರಿ.
"ಹ್ಞ, ಸಿಸ್ಟರ್. ಯಾತಕ್ಕೆ ಕೈಗಳನ್ನು ಹಿಂದಕ್ಕೆ ಕಟ್ಕೊಂಡಿದೀರಾ?"
"ನಿಮಗಾಗಿ ಒಂದು ವಸ್ತು ತಂದಿದೀನಿ, ಏನೂಂತ ಹೇಳಿ."
"ಅವುಷಧಿ."
"ಅಲ್ಲ."
"ತಿಂಡಿ."
"ಅಲ್ಲ! ಸೋತಿರಿ. ಕಾಗದ, ನಿಮ್ಮೂರಿಂದ!"
ಊರಿನಿಂದ ಬಂದ ಕಾಗದ. ತಂಗಿ ಸೀತಮ್ಮ ದೊಡ್ಡ ದೊಡ್ಡ ಅಕ್ಷರ ಗಳಲ್ಲಿ ಬರೆದುದು.
ಸಿಪಾಯಿ ಗುಲ್ಡು ಬೀರಣ್ಣನವರಿಗೆ-

"ಅಣ್ಣ ಗುಲ್ಡು,"
ಒತ್ತಾರೆ ಅಂಚಿನ ಮನೆ ಇಸಕಂಟ ಬಂದು ಏಳ್ದ, ಯುದ್ದ ಸುರು
ವಾಗೈತೆ ಅಂತ.ನೀನು ತಕ್ಸಣ ಒಂಟು ಬರಬೈಕೂಂತ ಅಮ್ಮ ಗಲಾಟೆ
ಮಾಡ್ತಾ ಕುಂತವಳೆ, ನೀನು ಕ್ಸೇಮವಾಗಿರತೀಂತ ನನಗೇನೋ
ನಂಬ್ಕೆ ಐತೆ. ಆದರೂ ಅನುಮಪ್ಪಗೆ ಕಾಯಿ ಒಡಸ್ತೀನಿ ಅಂತ ಅರಕೆ
ಒತ್ತಿನ್ನಿ. ಬ್ಯಾಗ್ನೆ ಬಾ. ಅಮ್ಮನಿಗೆ ಮೈ ಉಸಾರಿಲ್ಲ. ಇಲ್ಲೀವ್ರು
ನಾಲ್ಕೈದು ಜನ ಮಿಲ್ಟ್ರೀಗೆ ಸೇರ್ಕೊತೀವಿ ಅಂತ ಏಳ್ತಾ ಅವರೆ.
ಅವರೇನೂ ಲಾಯಕ್ಕಿಲ್ಲ. ಜಾಗ್ರತೆ ಬಾ."

ಗುಲ್ಡು ಬೀರಣ್ಣ ಓದಿದ. ಸಹಿಯೇ ಇಲ್ಲದ ಕಾಗದ. ಕೊನೆಯಲ್ಲಿ ಹೆಸರು ಬರೆಯಬೇಕೆನ್ನುವುದೂ ತಿಳಿಯದು ಸೀತೂಗೆ.
ಬರೆದದ್ದೂ ಎಂಥಾ ಕಾಗದ. ಥುತ್.
ಪಕ್ಕದ ಮಂಚದಿಂದ:
"ಬೇಟಾ ಗುಲ್ಡೂ . . ."
"ಹ್ಞ."
"ತಂಗಿ ಬರೆದಿದಾಳಾ ?"
"ಹುಂ."
"ಮುಖ ಬಾಡಿಸ್ಕೊಂಡಿದೀಯಾ. ಕೆಟ್ಟ ಸುದ್ದಿ ಏನಾದರೂ . . ."
"ಏನಿಲ್ಲ ಭಾಯಿಸಾಬ್! ನಾನು ಊರ್‍ಗೆ ಬರ್‍ಬೇಕಂತೆ."
"ಯಾವಾಗ ಬರೆದ ಕಾಗದ ?"
"ಎರಡು ವಾರವಾಯ್ತು."
"ಹೋಗುವಿಯಂತೆ. ನಿನಗೆ ಲೀವ್ ಕೊಟ್ಟೇ ಕೊಡ್ತಾರೆ."
"ಅದಲ್ಲ! ಯಾರಿಗೆ ಬೇಕು ಲೀವು? ನಮ್ಮ ಹಳ್ಳೀ ಜನಕ್ಕೆ ಬುದ್ಧಿ ಇಲ್ಲಾಂತ ಬೇಸರ."

****

ಅವನ ಹಳ್ಳಿ ಮಣ್ಣೂರು. ಕನ್ನಡ ರಾಜ್ಯದ ಮಂಡ್ಯದಿಂದ ಊರು ಬಸ್ಸಿನಲ್ಲಿ, ಹದಿನೆಂಟು ಮೈಲಿ ಪ್ರಯಾಣ ಮಾಡಬೇಕು ಆ ಹಳ್ಳಿ ಯನ್ನು ತಲುಪಲು.
ಬೀರಣ್ಣ, ತಂಗಿ ಸೀತಮ್ಮ, ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡವರು. ತಾಯಿ, ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡವೆ.ಹಳ್ಳಿಯ ಸಾಲೆಗೆ ಅವಳ ಮಕ್ಕಳು ಸ್ವಲ್ಪ ದಿನ ಮಣ್ಣು ಹೊತ್ತಿದ್ದರು. ಬೀರಣ್ಣ ಅರೆ ಹೊಟ್ಟೆಯಲ್ಲಿದ್ದರೂ ಹೃಷ್ಟಪುಷ್ಟನಾಗಿದ್ದ. ಆಟ ಅವನಿಗೆ ಇಷ್ಟ. ಪಂದ್ಯಾಟದಲ್ಲಿ ಮೊದಲಿಗ. ಪಾಠ ಸೇರುತ್ತಿರಲಿಲ್ಲ. ಮಾಧ್ಯಮಿಕ ಶಾಲೆಯ ಕೊನೆಯ ವರ್ಷದಲ್ಲಿದ್ದಾಗ ಅವನ ಮೇಷ್ಟ್ರು ಗುಡುಗಿದರು :
"ದಡ್ಡ ಶಿಖಾಮಣಿ! ನೀನೊಬ್ಬ ಗುಲ್ಡು ಕಣೋ. ಯಾವ ದಂಡಕ್ಕೆ ಬರ್‍ತೀಯಾ ಶಾಲೆಗೆ? ಹೋಗು! ಎಮ್ಮೆ ಕಾಯೋಕೆ ಹೋಗು!"
ಹಾಗೆ ಹೊರಟ ಬೀರಣ್ಣ ಮತ್ತೆ ವಿದ್ಯಾಭ್ಯಾಸದ ಉಸಾಬರಿಗೆ ಹೋಗಲಿಲ್ಲ.
ಅವನ ಹೆಸರು ಮಾತ್ರ ಅಂದಿನಿಂದ 'ಗುಲ್ಡು'ಎಂದಾಯಿತು.
ತಾತ್ಸಾರದಿಂದ ಹಾಗೆ ಕರೆಯುವವರಿದ್ದರು. ಆದರೂ ಬೀರಣ್ಣನಿಗೆ ಆ ಹೆಸರು ಅಪ್ರಿಯವಾಗಿ ತೋರಲಿಲ್ಲ.
ಯಾರಾದರೂ ತನ್ನ ತಂಟೆಗೆ ಬಂದರೆ ಅವನೆನ್ನುತ್ತಿದ್ದ:
"ನಾನು ಯಾರು ಗೊತ್ತೇನ್ರೊ? ಗುಲ್ಡು! ಹುಷಾರ್!"
ಹಳ್ಳಿಯ ಉಳ್ಳವರ ಹೊಲ ಎತ್ತುಗಳನ್ನು ಗಲ್ಡು ಮೇಯಿಸ ಹೊರಟ. ಒಂದೆರಡು ಸಲ ಕೆಲವು ತಪ್ಪಿಸಿಕೊಂಡುವು. ಎಣಿಕೆಯಲ್ಲಿ ಕಡಮೆ ಬಂದು ಯಾರಾದರೂ ಗದರಿದಾಗ ಗುಲ್ಡು ಎನ್ನುತ್ತಿದ್ದ:

"ಲೆಕ್ಕ ಪಕ್ಕ ನನಗೆ ಬರದು. ಮೇಷ್ಟ್ರು ಸರಿಯಾಗಿ ಹೇಳ್ಕೊಟ್ಟೇ ಇಲ್ಲ."
ಹಳ್ಳಿಯಲ್ಲಿ ಪಾರ್ಟಗಳಿದ್ದುವು. ಮಾರಪ್ಪನದೊಂದು ; ಈಶ್ವರಪ್ಪನದೊಂದು. ದಿನವೂ ಬೈಗಳು, ಜಗಳ. "ಒಂದಿಷ್ಟು ಹೊಲ ಕೊಡಿಸ್ತೀನಿ, ಗುಲ್ಡು ಸಾಗುವಳಿ ಮಾಡ್ಲಿ" ಎಂದಿದ್ದ ಮಾರಪ್ಪ, ಬೀರಣ್ಣನ ತಾಯಿ. ಯೊಡನೆ. ಈಶ್ವರಪ್ಪನೂ ಅಂದಿದ್ದ "ನಾನು ಕೊಡಿಸ್ತೀನಿ ಹೊಲ" ಅಂತ. ಕೊಡಿಸಿದವರು ಮಾತ್ರ ಯಾರೂ ಇಲ್ಲ.
ಸೀತಮ್ಮ ಬೇರೆ, ದೊಡ್ಡವಳಾಗಿ ಬೆಳೆದಿದ್ದಳು. ಹಳ್ಳಿಯ ಯುವಕರು ಗುಲ್ಡುವನ್ನು ತಮ್ಮ ಜಗಳಗಳಿಗೆ ಎಳೆದರು.
ತಾಯಿ ಗೋಳಾಡಿ ಎಂಥ ಮಗ ಹುಟ್ಟಿದನಪ್ಪ ತನಗೆ-ಎಂದು ಕಹಿ ಮಾತು ಆಡಿದಳು.
ಆ ಮಾರನೆಯ ಬೆಳಗ್ಗೆ ಬೀರಣ್ಣ ಹಟ್ಟಿಯಲ್ಲಿರಲಿಲ್ಲ.
ಎರಡು ತಿ೦ಗಳಾದ ಮೇಲೆ ಅವನಿಂದ ಕಾಗದ ಬ೦ತು :
"ನಾನು ಮಿಲ್ಟ್ರಿಗೆ ಭರ್ತಿಯಾಗಿದೀನಿ; ನನ್ನ ಯೋಚ್ನೆ ಬುಟ್ಬುಡಿ."

****

ಹಳ್ಳಿಯ ಪುಢಾರಿ ರಂಗಪ್ಪನ ಕಾಲು ಹಿಡಿದು, ಮಗನ ಭೇಟಿಗೆಂದು. ಅವನನ್ನು ತಾಯಿ ಕಳುಹಿದ್ದಳು. ಬೆಂಗಳೂರಿನ ದಂಡಿನ ಶಿಬಿರದಲ್ಲಿ ಗುಲ್ಡು ವನ್ನು ಆತ ಕಂಡ.
ಅವನಿಗೆ ಗುಲ್ಡು ಕೊಟ್ಟದೊಂದೇ ಉತ್ತರ :
"ಮಿಲ್ಟ್ರಿ ಸೇರ್‍ಕೊಂಡಿನ್ನಿ, ಕೈನಲ್ಲಿ ಗನ್ನಿರ್ತೈತೆ!"
ರಂಗಪ್ಪ ವಿಧಾನಸೌಧದ ಉದ್ದಗಲಕ್ಕೆ ಓಡಾಡಿ ಊರಿಗೆ ಮರಳಿದ.
"ನನ್ನ ಯೋಚ್ನೆ ಬುಟ್ಬುಡಿ" ಎಂದು ಬರೆದಿದ್ದನಲ್ಲ ಗುಲ್ಡು?
ಅವರ ಯೋಚನೆ ಮಾತ್ರ ಇವನನ್ನೆಂದೂ ಬಿಟ್ಟಿರಲಿಲ್ಲ.
ಸಿಪಾಯಿ ಗುಲ್ಡು ಹದಿನೈದು ರೂಪಾಯಿಗಳನ್ನು ಮನಿಯಾರ್ಡರ್ ಮಾಡುತ್ತಿದ್ದ ತಾಯಿಗೆ. ಹದಿನೈದು ರೂಪಾಯಿ! ಮಗ ಹತ್ತಿರವಿಲ್ಲದ ದುಃಖವನ್ನು ಸ್ವಲ್ಪಮಟ್ಟಿಗೆ ಶಮನ ಮಾಡುವ ಸಾಮರ್ಥ್ಯವಿತ್ತು ಅದಕ್ಕೆ.
ಮುಂದೆ ಒಂದು ವರ್ಷದಲ್ಲಿ ಗುಲ್ಡು ಕಂಡ ಜಗತ್ತು ಎಷ್ಟೊಂದು ವಿಶಾಲವಾಗಿತ್ತು! ಮಿಲಿಟರಿ ಬದುಕೊಂದು ಬೇರೆಯೇ ಲೋಕ. ಆ ಒರಟು ಜೀವನ, ನಗೆಮಾತು, ಶಿಸ್ತು . . . ಇವೆಲ್ಲ ಗುಲ್ಡುವಿನ ಒಂದಂಶವಾದುವು. ಹಳ್ಳಿಯಲ್ಲಿ ಚಡಪಡಿಸುತ್ತಿದ್ದ ಮೀನು ಕೊನೆಗೊಮ್ಮೆ ಆಳದನೀರಿಗಿಳಿದಂತಾಗಿತ್ತು.
ದೇಶದ ನಾನಾ ಕಡೆಗಳಿಂದ ಆಯ್ದ ಸೈನಿಕರ ತುಕಡಿಯೊಂದನ್ನು ರಚಿಸಿದ್ದರು. ಹರಕು ಮುರುಕು ಹಿಂದಿ ಭಾಷೆಯ ಕುದುರೆಯನ್ನೇರಿ ನೂರಾರು ಮನಸುಗಳ ಕೋಟೆಗಳಿಗೆ ಗುಲ್ಡು ಲಗ್ಗೆ ಇಟ್ಟ.
ಪರಕೀಯರು ಈ ನಾಡಿನಮೇಲೆ ದುರಾಕ್ರಮಣ ನಡೆಸಿದಾಗ ಹೋರಾಡುವ ಅವಕಾಶ ದೊರೆಯಿತು ಗುಲ್ಡುವಿಗೆ.

***


ಹೋರಾಟದ ಬಳಿಕ ಈಗ ವೀರನಿಗೆ ಒಂದು ತಿಂಗಳ ರಜಾ
ಮೇಜರ್ ಅಂದರು :
"ನಿನ್ನ ವಿಷಯದಲ್ಲಿ ನನಗೆ ಹೆಮ್ಮೆ. ದೇಶದ ಎಲ್ಲಾ ಪತ್ರಿಕೆಗಳು ನಿನ್ನ ಸಾಹಸವನ್ನು ಕೊಂಡಾಡಿವೆ. ಡೆಕರೇಶನ್‌ಗೆ ನಿನ್ನ ಹೆಸರು ರೆಕಮೆ೦ಡ್ ಮಾಡ್ತೀನಿ. ಒಂದು ತಿಂಗಳ ಲೀವ್. ಊರಿಗೆ ಹೋಗಿ ಬಾ."
ಗುಲ್ಡು ಹಿಮ್ಮಡಿಗಳನ್ನು ತಾಕಿಸಿ ಸೆಲ್ಯೂಟ್ ಕೊಟ್ಟ.
ಮೇಜರ್ ಮತ್ತೂ ಅಂದರು:
"ಈ ಚೀಣೀ ಲೈಟ್ ಮೆಷಿನ್‌ಗನ್-ಇದು ನಿನಗೆ!”
ಸೆಲ್ಯೂಟಿನ ಭಂಗಿಯಲ್ಲಿ ನಿಂತಿದ್ದ ಗುಲ್ಡುವಿನ ತುಟಿಗಳು ಮಾನವಾಗಿ ಅಲುಗಿದುವು. ಬೆರಳುಗಳು ಅರೆ ಕ್ಷಣ ಕಂಪಿಸಿದುವು.
ಕರ್ನಾಯಿಲ್ ಸಿಂಗ್, ತನ್ನ ಬಂಧುವನ್ನು ಬೀಳ್ಕೊಡಲೆಂದು ಬಂದ. ಮೆಷಿನ್ ಗನ್ ಹೊತ್ತು ಹೊರಟ ಗುಲ್ಡುವಿಗೆ ಅದೆಷ್ಟೊಂದು ಕೈಗಳು ಚಾಚಿ ಬೀಸಿ ಬೀಸಿ ವಿದಾಯ ನುಡಿದುವು! ಅವನನ್ನು ಹಿಂಬಾಲಿಸಿಯೂ ಅದೆಷ್ಟು ಜನ ಬಂದರು!
ಗುಲ್ಡುವಿನ ಕಣ್ಣಗಳಲ್ಲಿ ಹನಿ ಆಡಿತು.
"ಯಾಕೆ ಬೇಟಾ ?”
"ಊರಿಗೆ ಹೋಗೋಕೆ ಮನಸ್ಸಿಲ್ಲ, ಕರ್ನಾಯಿಲ್ ಭಾಯಿ.”
"ಹಾಗನ್ನಬಾರದು ಬೇಟಾ! ಹೋಗಿ ಬಾ. ನೀನು ಬರೀ ಅಂತ ನಿಮ್ಮೂರಿಗೆ ತಂತಿ ಕೊಡ್ತೀನಿ."

****

ಡಕೋಟಾ ವಿಮಾನ ಗುಲ್ಡುವನ್ನೂ ಜೊತೆಗೆ ಬೇರೆ ಹತ್ತೊಂಬತ್ತು ಜನರನ್ನೂ ಕಲ್ಕತ್ತೆಗೆ ತಂದುಬಿಟ್ಟಿತು. ಅಲ್ಲಿಂದ ಮದರಾಸಿಗೆ, ಮುಂದೆ ಬೆಂಗಳೂರಿಗೆ, ಬಳಿಕ ಮಂಡ್ಯಕ್ಕೆ.
ಸಿಪಾಯಿ ಉಡುಗೆಯ ಯುವಕ; ಕುಡಿ ಮಿಾಸೆ ಮುಖದ ಮೇಲೆ. ಜಗತ್ತನ್ನು ದಿಟ್ಟನೋಟದಿಂದ ನೋಡುವ ಸಾಮಥ್ಯ. ಭರಣಗಳೇನೋ ಎಂಬಂತೆ ಒಂದು ಗಂಟನ್ನು'ಭದ್ರವಾಗಿ ಹಿಡಿದಿದ್ದ ಠೀವಿ.
“ ಅದೇನು ?”
__ಕೆಲವರು ಕೇಳಿದರು.
"ಏನಿಲ್ಲ."
__ಉತ್ತರ.
"ಗನ್ನೇ ಇರಬೇಕು."
__ಊಹೆ.

****

ಊರು ಬಸ್ಸು ಮಂಡ್ಯ ಬಿಟ್ಟಿತು. ಧೂಳೇಳುವ ಮಣ್ಣು ದಾರಿ ಮಣ್ಣೂರಿಗೆ.
ಇಲ್ಲ, ಅವನ ಹಳ್ಳಿಯವರೊಬ್ಬರೂ ಇರಲಿಲ್ಲ ಬಸ್ಸಿನಲ್ಲಿ.
ಗ್ರಾಮದಿಂದ ಯಾರೂ ಈ ದಿನ ಹೊರಬಿದ್ದೇ ಇಲ್ಲವೇನೋ.[ಯುದ್ಧ ಅ೦ತ ಹೆದರೊ೦ಡಿರಬೇಕು ನನ್ಮಕ್ಳು] ಸೀತಮ್ಮನ, ತನ್ನ ಅಮ್ಮನ, ನೆನಪುಗಳು ಗುಲ್ಡುವನ್ನು ಕಾಡಿದವು.
[ಏನೇ ಆಗಲಿ, ಆದಷ್ಟು ಬೇಗ ವಾಪಸು ಹೊರಟ್ಟಿಡ್ಬೇಕು, ಬೆಂಗ ಳೂರಲ್ಲಿ ದಿವಸ ಕಳೆದು ಲೀವ್ ಪೀರೆಡ್ ಮುಗಿಸಿದರಾಯ್ತು.]
ಎದೆ ಸುಮ್ಮನೆ ಹೊಡೆದುಕೊಳ್ಳುತ್ತಿತ್ತು.
ಕಂಡಕ್ಟರಿಗೆ ವಿಷಯ ತಿಳಿಯುವ ಚಪಲ. ಬಾಯಿ ಬಿಚ್ಚಿದೆನೋ ಯುದ್ದದ ಕಥೆಯನ್ನೆಲ್ಲ ಹೇಳಬೇಕು. ಮಾತನಾಡುವ ಮನಸ್ಸಿಲ್ಲ, ಗುಲ್ಡುಗೆ.
[೨]
ದಾರಿ ಮುಗಿಯುತ್ತು ಬಂತು.
ಆ ಗುಡ್ಡ ದಾಟ ಆಚೆಗಿಳಿದರೆ.
ಫಸ್ಟ್ ಗೇರಿನಲ್ಲಿ ಬಸ್ಸು ಹೊರಟಿತು, ಕೊರ್ಯೋ ಎಂದು ಸದ್ದುಮಾಡುತ್ತ.
ಗುಡ್ಡ ದಾಟಿದಾಗ—
ಒಬ್ಬರೆಂದರು:
"ಇಲ್ಲೇನಪ್ಪಾ ಜಾತ್ರೆ ಇದು?”
[ಜಾತ್ರೆ? ಹಳ್ಳಿಯ ಜಾತ್ರೆಗೆ ಇನ್ನೂ ತಿಂಗಳಿದೆ.]
"ಯಾರೋ ಮಿನಿಸ್ಟರು ಬರ್ತ್ತೈರೆಬೆಕು. "ಅಕೋ ಬಾವುಟ.”
ಅಲಂಕರಿಸಿದ ಎತ್ತಿನ ಬಂಡಿಗಳು ಹಲವು. ಬಾವುಟ ವಾದ್ಯ...
ಬಸ್ಸು ನಿಂತಿತು.
"ಎಲಾ! ಬಸ್ಸಿನ ಕಡೆಗೇ ಓಡಿ ಬರ್ತಿದರಲ್ಲಾ."
ಕಂಡಕ್ಟರೆಂದ :
"ಮಣ್ಣೂರ್!”
ಇಳಿಯಲಿದ್ದವನು ಸಿಪಾಯಿಯೊಬ್ಬನೇ.
ಹಲವರು ಯೋಚಿಸಿದರು :
"ಈತನಿಗೋಸ್ಕರ ಇರಲಾರದು ಈ ಸ್ವಾಗತ."
ಆತನಿಗೋಸ್ಕರವೇ!
ಜನ ಓಡಿ ಬರುತ್ತಿದ್ದರು-ಮಾರಪ್ಪ,ಈಶ್ವರಪ್ಪ,ರಂಗಣ್ಣ,ಶಾಲೆಯಮೇಷ್ಟ್ರು...
ಸೀತಮ್ಮ, ಅಮ್ಮ....
[ಎಲ ಎಲಾ!]
ಕೈಯಲ್ಲಿ ಹಾರಗಳು.
ಜಯಕಾರ.
"ಭಾರತಮಾತೆಗೆ ಜಯವಾಗಲಿ!"
ಗುಲ್ಡು ಬೀರಣ್ಣನಿಗೆ ಜಯವಾಗಲಿ!”
ಗುಲ್ಡು ತನ್ನನ್ನು ತಾನೇ ನಂಬದಾದ. ಕತ್ತಿನ ನರಗಳು ಬಿಗಿದುವು. ಉಸಿರು ಕಟ್ಟಿತು.
ಮಣ್ಣೂರಿಗೆ ಮಣ್ಣೂರೇ ಅಲ್ಲಿ ನೆರೆದಿತ್ತು.
ನಿಂತು ಮುಂದೆ ಹೊರಟ ಬಸ್ಸು ಮತ್ತೆ ನಿ೦ತಿತು. ಜನ ಇಳಿದುಸ್ವಾಗತದ ದೃಶ್ಯವನ್ನು ನೋಡಿದರು. ಕಂಡಕ್ಟರ್ ಖಾಲಿ ಕ್ಯಾನನ್ನೆತ್ತಿಕೊಂಡು ಹಳ್ಳಿಯಿಂದ ನೀರು ತರುವ ನೆಪಮಾಡಿ ಸಂದಣಿಯತ್ತ ನಡೆದು
ಹೋದ.

****

ಮಣ್ಣೂರು ಬದಲಾಗಿತ್ತು. ಹಿಂದೆಂದೂ ಇದ್ದಿರದ ಐಕಮತ್ಯವಿತ್ತುಈಗ.
ಅಮ್ಮ ಅಂದಳು
"ಸೀತಮ್ಮನ ಸೊಸೆಯಾಗಿ ಕರಕೋತೀವಿ ಅಂತ ಎಷ್ತೋ ಜನಕೇಳವರೆ.”
ನಾಚಿ ಚೇತರಿಸಿಕೊಂಡ ಸೀತಮ್ಮ ಅ೦ದಳು :
" ಯುದ್ಧ ಮುಗಿದ್ಮ್ಯಾಕೆ ನಿನಗೂ ಎಣ್ಣು, ಕೊಡ್ತಾರಂತೆ ಗುಲ್ಡು.”
"ಸುಮ್ಕಿರು !”
ಅಮ್ಮ ಅಂದಳು :

" ಸರಕಾರ ನಮಗೆ ಹೊಲ ಕೊಡುತ್ತಂತಪ್ಪ.”
ಗುಲ್ಡು ತಂದ ಚೀಣೀ ಗನ್ನು ಮಣ್ಣೂರಿನ ಮನೆ ಮಾತಾಯಿತು.
ಅದನ್ನು ಹಟ್ಟಿಯ ಒಳಗಿನ ಕೊಠಡಿಯಲ್ಲಿಟ್ಟು ಗುಲ್ಡು ಬೀಗ ತಗಲಿ ಸಿದ, ದೃಷ್ಟಿಯಾಗದಿರಲಿ ಎಂದು.
... ಮಾರನೆಯ ಸಂಜೆ ಶಾಲೆಯ ಆವರಣದಲ್ಲಿ ಮೇಷ್ಟ್ರ ಅದ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನೆರೆಯಿತು.
ಆ ಕಲರವದ ಕಡೆಗೆ ಮದುವೆಯ ಗಂಡಿನಂತೆ ಗುಲ್ಡುವನ್ನು ಕರೆದುತಂದರು.

ಬೊಂಬುಗಳ ಸಣ್ಣ ಅಟ್ಟಣಿಗೆಯ ಮೇಲೆ ಅದೇನನ್ನೋ ಇರಿಸಿಶಾಲು ಹೊದಿಸಿ ಮುಚ್ಚಿದ್ದರು.

ಕ್ಯಾಮರಾ ಇರಬೇಕು ಎಂದುಕೊಂಡ ಗುಲ್ಡು.
ವಾದ್ಯಗಳು ಮೊಳಗುತ್ತಿದಾಗ ಸಭೆಯ ಅಧ್ಯಕ್ಷರು ಶಾಲನ್ನು ಎತ್ತಿದರು.
ಅನಾವರಣಗೊ೦ಡುದು ಮೆಷಿನ್ ಗನ್ನು!
ಗುಲ್ಡುವಿನ ದೃಷ್ಟಿ ತನ್ನ ತಂಗಿಯನ್ನು ಹುಡುಕಿತು. ಅಣ್ಣನ ನೋಟವನ್ನು ತಪ್ಪಿಸಿಕೊಳ್ಳಲೆಂದು ಸೆರಗಿನಿಂದ ಮುಖವನ್ನು ಮರೆಸಿ ಆಕೆ ಕಿಸಕ್ಕನೆ ನಕ್ಕಳು.
['ಕಳ್ಳಿ! ಬೀಗ ತೆಗೆಸಿ ಪ್ರದರ್ಶನಕ್ಕೆ ಕೊಟ್ಟಿದ್ದಾಳೆ'.]
ಮೇಷ್ಟು ಗುಲ್ಡುವನ್ನು ಹೊಗಳಿ ಮಾತನಾಡಿದರು;ಗುಲ್ಡು ಬೀರಣ್ಣನನ್ನು ಕುರಿತು ಪತ್ರಿಕೆಗಳಲ್ಲಿ ಬಂದಿದ್ದುದನ್ನು ಓದಿದರು.
ಸಭೆ ಜಯಕಾರ ಮಾಡಿತು.
"ಗುಲ್ಡು ಬೀರಣ್ಣನಿಗೆ ಜಯವಾಗಲಿ!"
"ಭಾರತ ಮಾತೆಗೆ ಜಯವಾಗಲಿ!"