ನಾಸ್ತಿಕ ಕೊಟ್ಟ ದೇವರು/ಸ್ವಸ್ತಿಪಾನ

ವಿಕಿಸೋರ್ಸ್ ಇಂದ
Jump to navigation Jump to search

 

ಕಥೆ : ಐದು
ಸ್ವಸ್ತಿಪಾನದುರುಬದುರಾಗಿ ಕುಳಿತ ಗೆಳೆಯರಿಬ್ಬರು ಬೀರ್ ತುಂಬಿದ ಮಗ್ಗುಗಳನ್ನು ಹಿಡಿದೆತ್ತಿದರು. 'ಸರಮನಿ'ಯ ಮೊದಲ ಹೆಜ್ಜೆಯಾಗಿ ಅವರ ತಲೆಗಳು ಪರಸ್ಪರ ಸಮಿಾಪಕ್ಕೆ ಬಾಗಿದುವು.
ಇಬ್ಬರೂ ಒಟ್ಟಾಗಿ ಅ೦ದರು :
"ಮೊದಲ ಭೇಟಿಯ ಸವಿ ನೆನಪಿಗೆ!”
ಸ್ವಸ್ತಿಪಾನ.
ಬದರಿಯ ದಪ್ಪ ಗಂಟಲಿನಿಂದ ಹೊರಟ ನಗೆಯೊಡನೆ ಚಿಕ್ಕಣ್ಣಯ್ಯನ ನಗು ಲೀನವಾಯಿತು.
[ಆ ಮೊದಲ ಭೇಟಿ ಹತ್ತು ಹದಿನಾರು ವರುಷಗಳಿಗೆ ಹಿಂದಿನ ಮಾತು. ಯುದ್ಧದ ಕಾಲ. ಬದರಿಯೂ-ಚಿಕ್ಕಣ್ಣಯ್ಯನೂ ವಿಮಾನ ಕಾರಖಾನೆಯಲ್ಲಿ ಆಗ ದುಡಿಯುತ್ತಿದ್ದರು. ಬಿಳಿಯ ಕೊರಳ ಪಟ್ಟಿಯ ಕಾರ್ಮಿಕರು. ಹಲವು ಸಹಸ್ರ ದುಡಿಮೆಗಾರರಲ್ಲಿ ಇವರು ಒಬ್ಬರು. ವಿಚಿತ್ರವೆಂದರೆ ಮೊದಲ ಬಾರಿ ಪರಸ್ಪರರನ್ನು ಅವರು ಕಂಡುದು, ಪರಿಚಿತ ರಾದುದು, ಕಾರಖಾನೆಯಲ್ಲಲ್ಲ-ಪಾನಮಂದಿರದಲ್ಲಿ. ಆಗ, ಎಲ್ಲಿಯೂ ಜಾಗ ದೊರೆಯದೆ ವಿಪರೀತ ಗದ್ದಲ. ಒಂಟಿಯಾಗಿ ಬರುವುದೇ ರೂಢಿಯಾಗಿದ್ದ ಚಿಕ್ಕಣ್ಣಯ್ಯ ಮೂಲೆಯ ಒಂದು ಮೇಜನ್ನು ಆಕ್ರಮಿಸಿದ್ದ. ಆಗಂತುಕನೊಬ್ಬ-ತನ್ನದೇ ವಯಸ್ಸಿನ ಯುವಕ- ಆ ವಿಶಾಲಭವನವನ್ನು ಹೊಕ್ಕು, ಆತ್ಮವಿಶ್ವಾಸದ ಠೀವಿಯಿಂದ ಸುತ್ತಲೂ ನೋಡುತ್ತಲಿದ್ದುದು ಅವನಿಗೆ ಕಂಡಿತು. ಆ ವ್ಯಕ್ತಿಯ ದೃಷ್ಟಿ ಚಿಕ್ಕಣ್ಣಯ್ಯನ ಮೂಲೆಯತ್ತ ಹರಿಯಿತು. ಅಲ್ಲಿಗೆ ಅವನು ನಡೆದು ಬಂದ. ವಿನಯದಿಂದ, “ಇಲ್ಲಿ ಕೂತ್ಕೊಬಹುದೆ? ನಾನೊಬ್ಬನೇ ಇದೇನೆ” ಎಂದ. " ಧಾರಾಳವಾಗಿ, ನಾನೂ ಒಬ್ಬನೇ ಇದೇನೆ” ಎಂದು ಉತ್ತರವಿತ್ತ ಚಿಕ್ಕಣ್ಣಯ್ಯ. ಆರಂಭ ಸ್ನೇಹಪರವಾಗಿತ್ತಾದರೂ, ಮುಂದಿನ ಮಾತುಗಳನ್ನು ಅವರು ಆಡಿದುದು ಅರ್ಧ ಗಂಟೆಯ ಬಳಿಕ. ಮುಂದೆ ಮಂದಿರದಿಂದ ಅವರು ಹೊರಬಿದ್ದುದು, ಗಾಢ ಸ್ನೇಹಿತರಾಗಿ.
ಅ೦ದಿನಿಂದ ಬದರಿ, ಪಾನಯಾತ್ರೆಗೆ ಸಂಬಂಧಿಸಿ ಇತರಗೆಳೆಯರನ್ನು ಬಿಟ್ಟುಕೊಟ್ಟ. ಒಂಟಿ ಚಿಕ್ಕಣ್ಣಯ್ಯ ಬದರಿಗೆ ಅಂಟಿಕೊಂಡ. ಇಬ್ಬರೂ ಜೊತೆಯಾಗಿಯೇ ಚಿಕ್ಕಣ್ಣಯ್ಯನ ಪ್ರೀತಿಪಾತ್ರ ಮಂದಿರಕ್ಕೆ ಬರುತಿದ್ದರು, ತಿಂಗಳ ಪೂರ್ವಾರ್ಧದಲ್ಲಿ. ಒಟ್ಟು ಎರಡು ಮೂರು ಸಾರಿ.
ಯುದ್ಧ ಮುಕ್ತಾಯವಾದಾಗ ಕೆಲವು ಸಹಸ್ರ ಜನರೊಡನೆ ಬದರಿಗೂ ಬರ್ತರ್ಫ್ ಆಯಿತು. ವೇತನ ತುಸು ಕಡಮೆಯಾಯಿತಾದರೂ ಚಿಕ್ಕಣ್ಣಯ್ಯ ಉದ್ಯೋಗವನ್ನು ಉಳಿಸಿಕೊಂಡ. ಇದ್ದಕ್ಕಿದ್ದಂತೆ ಬದರಿ ಮಾಯವಾದುದನ್ನು ಕಂಡು ಅವನ ಮಿತ್ರನಿಗಾದ ವ್ಯಥೆ ಅಷ್ಟಿಷ್ಟಲ್ಲ. ಬೇಗನೆ ಚಿಕ್ಕಣ್ಣಯ್ಯನಿಗೆ ಮದುವೆಯಾಯಿತು. ಆರತ್ಯಕ್ಷತೆಯ ವೇಳೆಯಲ್ಲಿ ಬದರಿ ಕಾಣಿಸಿಕೊಳ್ಳಬೇಕೆ!
ಮದುವೆಯ ಅನಂತರ ಚಿಕ್ಕಣ್ಣಯ್ಯನ ಪಾನಯಾತ್ರೆ ಕಡಮೆಯಾಯಿತು. ತಿಂಗಳಿಗೊಮ್ಮೆಯಷ್ಟೇ ತಪ್ಪದೆ—ಮೊದಲ ವಾರ-ಆತ 'ಸರಮನಿ'ಗೆ ಬರುತ್ತಿದ್ದ. ನಿರುದ್ಯೋಗಿಯಾದ ಮೇಲೆ ಬದರಿ, ಸಣ್ಣ ಪುಟ್ಟ ನೌಕರಿಗಳ ದೀರ್ಘ ಸರಪಣಿಯನ್ನೇ ಹೆಣೆದ. ಆ ಸಂಸ್ಥೆಯ ಸೇಲ್ಸ್ ಮನ್, ಈ ಸಂಸ್ಥೆಯ ಪ್ರತಿನಿಧಿ-ಹೀಗೆ . . . ಯಾವ ದಿಕ್ಕಿಗೆ ಪ್ರವಾಸ ಹೋಗಿದ್ದರೂ ತಿಂಗಳ ಕೊನೆಯಲ್ಲಿ ಬದರಿ ಊರು ಸೇರುತ್ತಿದ್ದ. ಮೊದಲ ವಾರದ ಒಂದು ಸಂಜೆ ಗೆಳೆಯರು ಜೊತೆಯಾಗಿರುತ್ತಿದ್ದರು.
. . . ಚಿಕ್ಕಣ್ಣಯ್ಯನೀಗ ಐದು ಮಕ್ಕಳ ತಂದೆ. ವಾಸೆಕ್ಟಮಿ ಮಾಡಿಸಿಕೊಂಡಿರುವ, ಯೋಜಿತ ಕುಟುಂಬದ ಮುಖ್ಯಸ್ಥ. ಉದರ ಪ್ರದೇಶ ಸ್ವಲ್ಪ ಅಭಿವೃದ್ಧಿ ಹೊಂದಿದೆ; ಮೈ ಕೈಗಳು ತುಂಬಿಕೊಂಡಿವೆ. ಆದರೂ ತಲೆಗೂದಲ ಬಣ್ಣ ಅಚ್ಚಗಪ್ಪು. ಬದರಿ ಮಾತ್ರ ಇನ್ನೂ ಒಬ್ಬಂಟಿಗ. ವರ್ಷಗಳು ದಾಟಿದ್ದರೂ ಪಂದ್ಯಾಟದ ಪಟುವಿನ ಅಂಗಸೌಷ್ಠವವೇ ಈಗಲೂ. ತಲೆಯ ತುಂಬ ಬೆಳ್ಳಿ ಕೂದಲ ಪೊದೆ. ಅವನೀಗ ಯಾವ ಸಂಸ್ಥೆಯ ಪತಿನಿಧಿಯೋ ಹೇಳುವುದು ಕಷ್ಟ. ಟ್ರಾನ್ಸಿಸ್ಟರ್ ರೇಡಿಯೋಗಳು; ಬೆಲೆ ಬಾಳುವ ಕೈ ಗಡಿಯಾರಗಳು, ಅಮೂಲ್ಯ ಪೆನ್ನುಗಳು-ಏನು ಬೇಕಾದರೂ ಆತನಲ್ಲಿ ಸಿಗುತ್ತವೆ. 'ಕೈ ತುಂಬ ಸಂಪಾದನೆ ಇರುವ ಮನುಷ್ಯ'... ]
ಕಹಿ ಗುಟುಕನ್ನು ನುಂಗಿ, ತುಟಿಗಳನ್ನು ಬಿಗಿದು, ಮಿತ್ರನನ್ನು ಕಂಡು ಯುಗಗಳೇ ಕಳೆದುವೇನೋ ಎನ್ನುವಂತೆ ಚಿಕ್ಕಣ್ಣಯ್ಯ, ಬದರಿಯನ್ನು ದಿಟ್ಟಿಸಿದ.
"ಮನೆಯಿಲ್ಲ, ಸಂಸಾರವಿಲ್ಲ-ಆದರೂ ಊರಿಗೆ ವಾಪಸು ಬರೋದು ಅ೦ದರೆ ಎ೦ಥ ಸುಖ ಅ೦ತೀಯಾ !” ಎಂದ ಬದರಿ.
"ಹೂಂ.”
ಚಿಕ್ಕಣ್ಣಯ್ಯ ಅಪ್ರತಿಮ ಶ್ರೋತೃ. ಬದರಿಯೇ ಮಾತುಗಾರ, ಯಾವಾಗಲೂ.
" ಈ ಸಲ ಕಾರವಾರದ ಕಡೆಗೆ ಪ್ರವಾಸ ಹೋಗಿದ್ದೆ. ಒಣ ನೆಲದಿಂದ ವಾಪಸಾದವರಿಗೆಲ್ಲಾ ಈ ಊರು ನಂದನವೇ ಅಂತೀಯೇನೋ?”
“ಹಹ್ಹ.”
"ಹೆಸರಿಗೆ ಒಣ ನೆಲ. ಅಲ್ಲಿ ಸಿಗದ ವಸ್ತುವಿಲ್ಲ. ಬೆಲೆ ವಿಷಯದಲ್ಲಿ ಚೌಕಾಶಿ ಮಾಡದೇ ಇದ್ದರಾಯ್ತು !”
"ಹುಂ."
"ಈ ಟ್ರಿಪ್ನಲ್ಲಿ ಒಬ್ಬ ಅದ್ಭುತ ಮನುಷ್ಯನನ್ನು ಕಂಡೆ."
ಕಣ್ಣುಗಳನ್ನು ಕಿರಿದುಗೊಳಿಸಿ ಚಿಕ್ಕಣ್ಣಯ್ಯ ಒ೦ದು ಮಾತು ಅ೦ದ.
"ಕಳ್ಳಭಟ್ಟಿ ಉದ್ಯಮಗಳ ಅರಸನೋ?”
“ಛೆ! ಇಂಥವರನ್ನ ನೋಡೋಕೆ ಅಲ್ಲಿಗೆ ಹೋಗ್ಬೇಕೆ? ನಾನು ಸಂಧಿಸಿದ್ದು ಅಸಾಧಾರಣ ಮನುಷ್ಯನನ್ನು!” ಎಂದ ಬದರಿ, ಬಟಾಟೆ ಚಿಪ್ಗಳನ್ನು ಬಾಯಿಗಿಟ್ಟ ಕುರುಕುತ್ತ.
ಕಥನವನ್ನು ಎಲ್ಲಿ ಹೇಗೆ ಆರಂಭಿಸಬೇಕು ಎಂದು ಆತ ಯೋಚಿಸುವಂತಿತ್ತು.
ಇನ್ನೊಂದು ಗುಟುಕು ಹೀರಿ ಚಿಕ್ಕಣ್ಣಯ್ಯನೆಂದ:
“ನಾನು ಸಿದ್ಧವಾಗಿದೀನಿ.”

****

ಅದ್ಭುತ ಮನುಷ್ಯನನ್ನು ಬದರಿ ಸಂಧಿಸಿದ್ದು ಕಡಲ ದಂಡೆಯಲ್ಲಲ್ಲ,- ಮೂವತ್ತು ನಾಲ್ವತ್ತು ಮೈಲಿಗಳ ಒಳಭಾಗದಲ್ಲಿ, ಅಡವಿಯ ನಡುವೆ.

ಅಲ್ಲಿಗೆ ಬದರಿ ಹೋಗಲು ಕಾರಣವಿತ್ತು. ಅವನ ಪರಿಚಿತರೊಬ್ಬರು, "ಡೈನಿಂಗ್ ಟೇಬಲು ಮಾಡಿಸೋಕೆ ಮೂರಡಿ ಅಗಲ ಆರಡಿ ಉದ್ದದ ಒಂದು ಅಖಂಡ ಹಲಿಗೆ ಬೇಕು. ಎಲ್ಲಾದರೂ ಇದ್ದರೆ ಕೊಡಿಸಿ," ಎಂದಿದ್ದರು.
ಕಾರವಾರದ ವ್ಯಾಪಾರಿ ಮಿತ್ರನೊಬ್ಬನನ್ನು ಬದರಿ ಕೇಳಿದ.
"ಎಲ್ಲಿ ಸಿಗಬಹುದು?"
ಆತ ಕೊಟ್ಟುದು ದಯಾನಂದ ಸಾವ್ಕಾರರ ವಿಳಾಸವನ್ನು.
"ನೀವು ಹೋಗೋದಿದ್ದರೆ ಬೆಳಗ್ಗಿನ ಆರು ಘಂಟೆ ಬಸ್ನಲ್ಲೇ ಹೊರಡ್ಬೇಕು. ಮಧ್ಯಾಹ್ನ ಹನ್ನೆರಡು ಘಂಟೆ ಆದ್ಮೇಲೆ ಸಾವ್ಕಾರ್ರು ವ್ಯಾಪಾರ ಮಾಡೋದಿಲ್ಲ !"
"ಅಂದರೆ?"
"ಅವರ ಪದ್ಧತಿ ಹಾಗೆ! ನೀವು ಬನ್ನಿ. ಸಾಯಂಕಾಲ ವಾಪಸಾಗ್ಬಹುದು."
ಮಾರನೆಯ ಬೆಳಗ್ಗೆ ನಸುಕಿನಲ್ಲೆದ್ದು ಬದರಿ, ಧೂಳೆಬ್ಬಿಸುವ ಕೆಂಪು ಬಸ್ಸಿನಲ್ಲಿ ಕುಳಿತು ಅಡವಿಯ ಮಾರ್ಗವಾಗಿ ಪ್ರಯಾಣ ಬೆಳಸಿದ.
ಅವನು ಆ ಊರನ್ನು ತಲಪಿದ್ದು ಹತ್ತು ಘಂಟೆಯ ಹೊತ್ತಿಗೆ. ಬಸ್ಸಿನಿಂದಿಳಿದವನಿಗೆ ವಿಳಾಸದಾರರನ್ನು ಹುಡುಕುವ ಕಷ್ಟವೇನೂ ಒದಗಲಿಲ್ಲ. ಅಲ್ಲಿದ್ದುದು ಒಂದೇ ರಸ್ತೆ. ರಸ್ತೆಯ ಮೇಲಿದ್ದವರು ಸಾಗುತ್ತಿದ್ದುದೆಲ್ಲ ಒಂದೇ ದಿಕ್ಕಿಗೆ-ಸಾಹುಕಾರರ ಅಡ್ಡೆಗೆ. ಕಾಡು ಕಡಿದು ಮಾಡಿದ ನಾಲ್ಕೆಕರೆ ಬಯಲು ಸ್ಥಳದಲ್ಲಿ ಮರದ ತೊಲೆಗಳು ಅಸಂಖ್ಯವಾಗಿ, ಸಾಲಾಗಿ, ಕೊನೆಯೆ ಇಲ್ಲ ಎಂಬಂತೆ ಪಿರಮಿಡ್ಡುಗಳಾಗಿ ವಿರಮಿಸುತ್ತಿದ್ದುವು. ಬಲಶಾಲಿ ಟ್ರಕ್ಕುಗಳು ಓಡಾಡುತ್ತಿದ್ದುವು. ಎರಡು ಆನೆಗಳು ದಿಮ್ಮಿಗಳನ್ನು ಒಟ್ಟುವ ಕೆಲಸ ನಡೆಸಿದ್ದುವು. ದೇಶದ ವಿವಿಧ ಭಾಗಗಳಿಂದ ಬಂದ ಗಿರಾಕಿಗಳು, ಧೂಳುಮುಚ್ಚಿದ ದುಡಿಯುವರ ನಡುವೆ ಎದ್ದು ಕಾಣಿಸುತ್ತಿದ್ದರು. ಇದು ಆಫೀಸು, ಇದು ಡಿಪೋ ಎಂದು ತೋರಿಸುವ ಯಾವ ಬೋರ್ಡೂ ಅಲ್ಲಿರಲಿಲ್ಲ. ಸ್ವತಃಸಾಹುಕಾರರೇ ಆ ಊರಿಗೆ ಒಂದು ಬೋರ್ಡು. ಅವರಿಂದ ಊರಿಗೊಂದು ಪ್ರಸಿದ್ಧಿ. ಆ ಊರು ನಿರ್ಮಾಣವಾದುದೂ ಅವರ ಉದ್ಯಮದ ಫಲವಾಗಿ.
ಬದರಿ ಕಾರ್ಯಾಗಾರವನ್ನು ಸಮಿಾಪಿಸಿದಂತೆ, ಕಟ್ಟಿಗೆ ಕೊರೆಯುವ ಮರಕುಯ್ಯುವ-ಯಂತ್ರಗಳ ಸಪ್ಪಳ ಬಲಗೊಂಡಿತು.
ಮೂಲೆಯಲ್ಲಿ, ಮರದ ಹಲಗೆಗಳನ್ನಷ್ಟೆ ಜೋಡಿಸಿ ಕಟ್ಟಿದ ಒಂದಂತಸ್ತಿನ ಪುಟ್ಟ ಮನೆಯೊಂದಿತ್ತು. ಛಾವಣಿಗೂ ಹಲಗೆಗಳು. ಇಡಿಯ ಮನೆಗೇ ಅಂಟಿಕೊಂಡಿತ್ತು, ಹಲವು ಟಿನ್ನುಗಳನ್ನು ಒಡೆದು ಹೊರಬಂದ ಹಸುರು ವಾರ್ನಿಷ್ ಬಣ್ಣ. ಕಿಟಕಿ ಬಾಗಿಲುಗಳ ಚೌಕಟ್ಟುಗಳಿಗೆ ಮಾತ್ರ ಕಂದು ವರ್ಣವಿತ್ತು. ಹಸುರು ಕಾಡಿನ ಸಾರಸರ್ವಸ್ವ, ಆ ಗೃಹದ ಕುಶಲ ಕಲೆಗಾರಿಕೆಯಲ್ಲಿ ಘನೀಭವಿಸಿದಂತಿತ್ತು. ಸಾ ಮಿಲ್ಲುಗಳಿಗೆ ತುಸುದೂರದಲ್ಲಿ, ಕಟ್ಟಿಗೆಯಿಂದಲೇ ಕಟ್ಟಿದ ಚಪ್ಪರದಂತಹ ಒಂದು ಭವನ. ಅಲ್ಲಿ ಹತ್ತಾರು ಕುರ್ಚಿಗಳಲ್ಲಿ ಜನರು ಕುಳಿತಿದ್ದರು. ಚಪ್ಪರದಲ್ಲಿ ಒಂದು ಕೊನೆಯಲ್ಲಿ ವೇದಿಕೆ. ಆ ವೇದಿಕೆಯ ಮೇಲೆ ಒರಗುದಿಂಬುಗಳು. ಅತಿ ದೊಡ್ಡದಾದ ದಿಂಬಿಗೊರಗಿ ಭವ್ಯಾಕೃತಿಯ ಆರವತ್ತು ದಾಟಿರಬಹುದಾದ ವೃದ್ಧರೊಬ್ಬರು ಕುಳಿತಿದ್ದರು. ಅವರ ಮಗ್ಗುಲಲ್ಲಿ ಫೋನಿತ್ತು. ಆ ಕಾಡಿನಲ್ಲಿ ಫೋನ್! ವೇದಿಕೆಯ ಕೆಳಗೆ ಆ ಗೃಹಸ್ಥರ ಬಲ ಮಗ್ಗುಲಲ್ಲಿ ನಾಲ್ಕಾರು ಜನ ಕಾರಕೂನರು ಸಾಲಾಗಿ ಕುಳಿತಿದ್ದರು, ಮಸಿ ಕುಡಿಕೆಗಳಿಗೆ ಅದ್ದಿ ಅದ್ದಿ ದೊಡ್ಡ ಪುಸ್ತಕಗಳಲ್ಲಿ ಬರೆಯುತ್ತ. ಆಳುಗಳು ಬರುತ್ತಲಿದ್ದರು, ಹೋಗುತ್ತಲಿದ್ದರು. ಟ್ರಕ್ ಡ್ರೈವರುಗಳು ಲೆಕ್ಕ ಒಪ್ಪಿಸುತ್ತಿದ್ದರು. ಸಲಾಂ ಮಾಡುತ್ತಿದ್ದರು.
ಬದರಿ ಮೂಕವಿಸ್ಮಿತನಾಗಿ ಆ ಚಪ್ಪರವನ್ನು ಪ್ರವೇಶಿಸಿದ. ಅಂತಹ ಜಗತ್ತೊಂದು ಅಲ್ಲಿತ್ತೆಂಬುದೇ ಅವನಿಗೆ ಅಚ್ಚರಿಯ ವಿಷಯವಾಗಿತ್ತು.
ತಾನು ಹೋದೊಡನೆಯೇ ಸಂಭಾಷಣೆ ಈ ರೀತಿಯಾಗಿ ನಡೆಯಬಹುದೆಂದು ಬದರಿ ತರ್ಕಿಸಿದ್ದ.
“ನಮಸ್ಕಾರ ಬರಬೇಕು.”
“ನಮಸ್ಕಾರ. ದಯಾನಂದ ಸಾವ್ಕಾರ್ರನ್ನು ನೋಡಬೇಕಿತ್ತು.”
“ನಾನೇ ದಯಾನಂದ ಸಾವ್ಕಾರ. ಹೇಳೋಣಾಗಲಿ.”
ಊಹೂಂ. ತರ್ಕ ತಪ್ಪಾಗಿತ್ತು. ಬದರಿಯನ್ನು ಯಾರೂ ಸ್ವಾಗತಿಸಲಿಲ್ಲ, ಯಾರೂ ಮಾತನಾಡಿಸಲಿಲ್ಲ.
ಅಲ್ಲಿ ನೆರೆದ ಸಭೆಯ ಕೇಂದ್ರಬಿಂದುವಾಗಿದ್ದ ವ್ಯಕ್ತಿ ಮಾತ್ರ ರಾಜ ಠೀವಿಯಿಂದ ಹೊಸಬನನ್ನು ನೋಡಿತು. ಬದರಿ ತನಗರಿವಿಲ್ಲದಂತೆಯೇ ತುಸು ತಲೆಬಾಗಿದ. ಈತ ಈ ಪ್ರದೇಶದ ಆರಸು; ಇದು ದರಬಾರು; ಕುಳಿತಿದ್ದವರು ಸುತ್ತಮುತ್ತಲಿನ ಪಾಳೆಯಗಾರರು; ತಾನೊಬ್ಬನೇ ದೂರ ದೇಶದಿಂದ ಬಂದಿರುವ ಯಾತ್ರಿಕ-ಎಂದೆಲ್ಲ ಬದರಿಗೆ ಅನಿಸಿತು. ಪ್ರವೇಶ ದ್ವಾರದ ಬಳಿಯಲ್ಲೊಂದು ಕುರ್ಚಿ ಖಾಲಿ ಇತ್ತು. ಅತಿಥಿ ಸತ್ಕಾರದ ಹಾದಿನೋಡದೆ ಬದರಿ ಅದರಲ್ಲಿ ಕುಳಿತುಕೊಂಡ.
ವೇದಿಕೆಯ ಮಧ್ಯದಲ್ಲಿ ವಿರಾಜಮಾನರಾಗಿದ್ದವರೇ ಸಾಹುಕಾರರೆಂಬುದು ಸ್ಪಷ್ಟವಾಗಿತ್ತು. ಸ್ವಲ್ಪ ಕಾಲ, ತಾನು ಬಂದುದರ ಉದ್ದೇಶವನ್ನೇ ಮರೆತು, ಬದರಿ ಬರಿಯ ಪ್ರೇಕ್ಷಕನಾಗಿ ಅಲ್ಲಿ ನಡೆಯುತ್ತಿದ್ದುದನ್ನು ದಿಟ್ಟಿಸಿದ.
ಸಂಭಾಷಣೆಗಳು-ನಗೆ. ಹಿಂದಿಯಲ್ಲಿ, ಮರಾಠಿಯಲ್ಲಿ, ಕೊಂಕಣಿಯಲ್ಲಿ, ತಮಿಳಿನಲ್ಲಿ, ಕನ್ನಡದಲ್ಲಿ, ಟ್ರಂಕ್ ಕಾಲುಗಳು-ಮುಂಬಯಿಯಿಂದ, ಮದರಾಸಿನಿಂದ, ವಿಲಾಯಿತಿಗೆ ಹೊರಡಲು ಹಡಗು ಸಿದ್ಧವಾಗಿ ನಿಂತಿದ್ದ ಧಕ್ಕೆಯಿಂದ.
ಜನಸಂದಣಿ ಕರಗತೊಡಗಿತು. ಸಾಹುಕಾರರೂ ಕೈ ಗಡಿಯಾರವನ್ನು ನೋಡಿದರು. ಅದನ್ನು ದಿಟ್ಟಿಸಿದ ಬದರಿ, ತಾನೂ ತನ್ನ ವಾಚಿನತ್ತ ದೃಷ್ಟಿ ಹರಿಸಿದ. ಹನ್ನೊಂದೂವರೆ. ಇದ್ದಕ್ಕಿದ್ದಂತೆ ಅವನಿಗೆ ನೆನಪಾಯಿತು. "ಮಧ್ಯಾಹ್ನ ಹನ್ನೆರಡು ಘಂಟೆ ದಾಟ್ಟಿದ್ಮೇಲೆ ಸಾವ್ಕಾರ್ರು ವ್ಯಾಪಾರ ಮಾಡೋದಿಲ್ಲ.”
ಕಾತರಗೊಂಡ ಬದರಿ ಕುಳಿತಲ್ಲೆ ಮಿಸುಕಿದ.
ಅಷ್ಟರಲ್ಲಿ ಒಬ್ಬ ಆಳು ಅವನೆಡೆಗೆ ಬಂದ.
"ಸಾವ್ಕಾರ್ರು ಕರೀತಾರೆ. ಮೇಲೆ ಬರಬೇಕಂತೆ.”
ಹಿಂದೂಸ್ಥಾನಿಯಲ್ಲಿ ಹೇಳಿದ ಮಾತು. ಮೇಲೆ ಅಂದರೆ ವೇದಿಕೆಗೇ ಇರಬೇಕು-ಎಂದುಕೊಂಡ ಬದರಿ.
ಆತ ಎದ್ದು ತನ್ನ ಬ್ರೀಫ್ ಕೇಸಿನೊಡನೆ ಸಾಹುಕಾರರತ್ತ ಸಾಗಿದ.
ಅಪರಿಚಿತ ಬಾಲಕನ ಬಗೆಗೆ ಪ್ರೀತಿ ತೋರುವ ಹಿರಿಯನಂತೆ ಸಾಹುಕಾರರು ಮುಗುಳುನಕ್ಕು, ಹತ್ತಿರ ಬರಲು ಸನ್ನೆ ಮಾಡಿದರು. ಬದರಿ ತನ್ನ ವ್ಯಕ್ತಿತ್ವವನ್ನು ರಕ್ಷಿಸಲೆತ್ನಿಸುತ್ತ, ಸಾಕಷ್ಟು ಠೀವಿಯಿಂದಲೆ ಅವರ ಬಳಿ ಕುಳಿತ.
ಏನು ಬೇಕಿತ್ತು?-ಎನ್ನುವ ಪ್ರಶ್ನೆಯನ್ನು ಅವರ ಮುಖಭಾವ ಪ್ರಕಟಿಸಿತು.
ಬೆಳಗ್ಗಿನಿಂದ ಮೌನಾಚರಣೆಯಲ್ಲಿದ್ದ ಗಂಟಲನ್ನು ಸರಿಪಡಿಸುತ್ತ ಬದರಿಯೆಂದ:
“ಮೂರಡಿ ಅಗಲ, ಆರಡಿ ಉದ್ದದ ಹಲಗೆ . . .”
“ಎಷ್ಟು?”
ಮುದುಕನಿಗೆ ಕಿವಿ ದೂರವೇನೋ ಎಂಬ ಶಂಕೆಯಿಂದ ಬದರಿ ತುಸು ಧ್ವನಿ ಏರಿಸಿ ನುಡಿದ:
“ಮೂರಡಿ ಅಗಲ, ಆರಡಿ ಉದ್ದ . . .”
ಬದರಿಗೇ ಕಿವಿ ಮ೦ದವಿರಬಹುದೆಂದು ಸಾಹುಕಾರರು ಭಾವಿಸಿದರೇನೋ ಎನ್ನುವಂತೆ ಅವರು ಗಟ್ಟಿಯಾಗಿ ಅಂದರು :
“ಅದೇ-ಎಷ್ಟು ಬೇಕು?”
ಬದರಿ ಕಕ್ಕಾವಿಕ್ಕಿಯಾಗಿ ಪಿಳಿಪಿಳಿ ಕಣ್ಣುಬಿಟ್ಟ, ತಾನೆಂತಹ ಆಭಾಸಕರ ಸನ್ನಿವೇಶಕ್ಕೆ ತುತ್ತಾದೆನೆಂಬುದರ ಪೂರ್ಣ ಅರಿವು ಅವನಿಗಾಯಿತು. ಮುದುಕ ಉತ್ತರಕ್ಕಾಗಿ ಕಾದು ಅದೆಷ್ಟೋ ವರ್ಷಗಳಾದುವೆಂಬಂತೆ ಆತನಿಗೆ ಭಯವಾಯಿತು. ಥಟ್ಟನೆ ಅವನೆಂದ:
“ಹತ್ತು.”
ಕಬ್ಬಿಣ ಉಕ್ಕುಗಳ ರಖಂ ವ್ಯಾಪಾರಿಯ ಬಳಿಗೆ ಹೋಗಿ ಒಂದು ಬಿಡಿ ಸೂಜಿಯನ್ನು ಕೊಡಿರೆನ್ನುವುದೇ?
ಸಾಹುಕಾರರು ತಮ್ಮ ನೀಳವಾದ ತೋಳನ್ನು ಮುಂದಕ್ಕೆ ಚಾಚಿ, ತೋರು ಬೆರಳಿನಿಂದ ಏನನ್ನೊ ಬೊಟ್ಟುಮಾಡಿ ತೋರಿಸಿದರು. ಅವರ ಬೆರಳಿನ ಗುರಿಯತ್ತ ಬದರಿ ನೋಡಿದ. ಏಳೆಂಟು ಜನ ಕೈ ಕೈ ಹಿಡಿದು ಸುತ್ತುವರಿದು ತಬ್ಬಬೇಕಾದಂತಹ ದೈತ್ಯಾಕೃತಿಯ ಮರದ ಕಾಂಡಗಳು ಹತ್ತಾರು ಅಲ್ಲಿ ಬಿದ್ದಿದ್ದುವು.
ಬದರಿ ಬೇಗನೆ ಅರ್ಥಮಾಡಿಕೊಂಡ-ಆ ಕಾಂಡಗಳಲ್ಲೊಂದನ್ನು ಸೀಳಿ ತನಗೆ ಬೇಕಾದ ಹತ್ತು ಹಲಗೆಗಳನ್ನು ಸಿದ್ಧಗೊಳಿಸಲಾಗುವುದೆಂದು.
“ಒಂದೊಂದಕ್ಕೆ ಎಂಬತ್ತೈದು ರೂಪಾಯಿ.”
ಅಷ್ಟು ದೊಡ್ಡ ಮರದ ಕಾಂಡಕ್ಕೆ ಎಂಬತ್ತೈದು ರೂಪಾಯಿ?
ಬದರಿ ತನ್ನ ಕಿವಿಗಳನ್ನು ತಾನು ನಂಬದಾದ. [ಕೊಡಗಿನಲ್ಲಿ ಮಾತ್ರ ಕಾಫಿ ಅಗ್ಗವಲ್ಲ!] ಆದರೂ, ತನ್ನ ತಿಳಿವಳಿಕೆ ಖಚಿತವಾಗಲೆಂದು– “ಒಂದೊಂದಕ್ಕೇ?” ಎಂದು ಕೇಳಿದ.
“ಹ್ಞ, ಹತ್ತು ಹಲಿಗೆಗೆ ಒಟ್ಟು ಎಂಟು ನೂರಾ ಐವತ್ತು ರೂಪಾಯಿ.”
ಹುಡುಗನಿಗೆ ಲೆಕ್ಕ ತಪ್ಪದಿರಲೆಂದು ಅವರು ಬಿಡಿಸಿ ಹೇಳಿದ್ದರು.
ಬದರಿ ಉಗುಳು ನುಂಗಿದ. ತನ್ನ ಸಂಕಟವನ್ನು ತೋರ್ಪಡಿಸದೆ ಬ್ರೀಫ್ ಕೇಸಿನಿಂದ ಚೆಕ್ ಪುಸ್ತಕ ತೆರೆದು ೮೫೦ ರೂ.ಗೆ ಚೆಕ್ ಬರೆದ.
“ಇದು ಕ್ಯಾಷ್ ಆದ್ಮೇಲೆ ಹಲಗೆಗಳನ್ನು ತಾವು ಕಳಿಸಿಕೊಡబಹುದು," ಎಂದ.
ಬ್ಯಾಂಕಿನ ಹೆಸರನ್ನೂ ಊರು ಯಾವುದೆಂಬುದನ್ನೂ ನೋಡಿದ ಸಾಹುಕಾರರು ಅ೦ದರು :
“ಅಂಥಾದ್ದೇನೂ ಇಲ್ಲ. ಇವತ್ತೇ ಕುಯ್ಯಿಸ್ತೇವೆ. ನಾಳೆ ನಮ್ಮ ಟ್ರಕ್ಕು ಹುಬ್ಬಳ್ಳಿಗೆ ಒಯ್ತದೆ. ಇಷ್ಟು ಫ್ರೀ ಡೆಲಿವರಿ, ಮುಂದೆ ನಿಮ್ಮೂರಿಗೆ ಟುಪೇ ಗೂಡ್ಸ್ ಪಾರ್ಸಲ್ ಮಾಡ್ತೇವೆ. ಅಡ್ರಸ್ ಕೊಟ್ಟು ಹೋಗ್ರಿ.”
ಯೋಚಿಸುವುದಕ್ಕೆ ಒಂದೆರಡು ನಿಮಿಷಗಳ ಅವಧಿಯೂ ಇರಲಿಲ್ಲ ಬದರಿಗೆ. ಕಾರಕೂನ ಬಂದು ಆರ್ಡರು ಪುಸ್ತಕವನ್ನು ಮುಂದಿರಿಸಿದ. ವಿಳಾಸ ಹಾಗೂ ಸಹಿಗೆ. ಬದರಿ ಧೈರ್ಯವಾಗಿ ಆ ಸಾಲುಗಳನ್ನು ತುಂಬಿದ.
ಸಾಹುಕಾರರು ತನ್ನ ಕೈ ಗಡಿಯಾರವನ್ನು ನೋಡಿದರು.
"ಈಗ ಯಾವ ಕಡೆಗೆ ಹೋಗ್ತೀರಿ?”
“ಕಾರವಾರಕ್ಕೆ.”
“ದಾಂಡೇಲಿಯಿಂದ ಹನ್ನೆರಡಕ್ಕೊಂಡು ಬಸ್ ಬರ್ತದೆ. ನಶೀಬ ಇದ್ರೆ ಸೀಟು ಸಿಗಬಹುದು.”
“ನೋಡ್ತೀನಿ.”
“ಸಿಗದೇ ಇದ್ದರೆ ಬರ್ರಿ. ಊಟಕ್ಕ ವ್ಯವಸ್ಥೆ ಮಾಡುವಾ.”
"ಆಗಲಿ. ನಮಸ್ಕಾರ."
"ಹ್ಞ-ಹ್ಞ-" ಜೀವಮಾನದಲ್ಲೆಂದೂ ಯಾರಿಗೂ ಆತ ನಮಿಸಿಯೇ ಇಲ್ಲವೇನೋ ಎನ್ನುವ ಹಾಗೆ.
ನಿರೂಪ ಪಡೆದ ಬದರಿ ಬಸ್ ನಿಲ್ದಾಣಕ್ಕೆ ಧಾವಿಸಿದ. ಆ ದಿನದ ಮಟ್ಟಿಗೆ ಅವನಿಗಿದ್ದುದು 'ಖೊಟ್ಟಿ ನಸೀಬ.' ಹೊಟ್ಟೆ ಚುರ್ ಚುರ್ ಎನ್ನುತ್ತಿತ್ತು. ಎಂಟು ನೂರ ಐವತ್ತು ತೆತ್ತಾಯಿತು. ಒಂದು ಊಟ ಪ್ರತಿಯಾಗಿ ಪಡೆದರೆ ತಪ್ಪಲ್ಲ-ಅದೂ ಆ ಕಾಡಿನಲ್ಲಿ ಬೇರೆ ಅಂಗಡಿಗಳಾಗಲೀ ಮನೆಗಳಾಗಲೀ ಕಾಣಿಸದೇ ಇರುವಾಗ, ಎನ್ನುತ್ತ ಬದರಿ ನಿಧಾನವಾಗಿ ಅಡ್ಡೆಗೆ ಹಿಂತಿರುಗಿದ.
ಮಧ್ಯಾಹ್ನದ ವಿರಾಮವೆಂದು ಕಾರ್ಯಾಗಾರವೀಗ ನಿರ್ಜನವಾಗಿತ್ತು.
ಚಪ್ಪರದಲ್ಲಿದ್ದುದು ಕಾವಲುಗಾರನೊಬ್ಬನೇ.
ಅವನೆಂದ:
"ಹನ್ನೆರಡಾಯ್ತು, ಇನ್ನು ಮಾರಾಟವಿಲ್ಲ."
ಕೊಳ್ಳುವ ಕೆಲಸವನ್ನು ತಾನಾಗಲೇ ಮುಗಿಸಿರುವೆನೆಂದು ಬದರಿ ವಿವರಿಸಿದ. ಕುರ್ಚಿಯಲ್ಲಿ ಕುಳಿತಿರಲು ಸಮ್ಮತಿ ದೊರೆಯಿತು.
"ಇನ್ನು ಮೋಟಾರು ನಾಲ್ಕೂವರೆಗೆ," ಎಂದ ಕಾವಲುಗಾರ.
ಬದರಿ ಕೇಳಿದ:
"ಇಲ್ಲಿ ಊಟ ಎಲ್ಲಿ ಸಿಗುತ್ತಪ್ಪ?"
"ಈ ಊರಲ್ಲಿ ಖಾನಾವಳಿ ಇಲ್ರೀ. ಹ್ವಾರೆ ಮಂದಿ ಬುತ್ತಿ ತರ್ತಾರೆ."
ಹತ್ತಿರದಲ್ಲಿದ್ದ ಹಸುರು ಮನೆಯೊಳಗೆ ಜನರಿದ್ದಂತೆಯೇ ತೋರಲಿಲ್ಲ.
ಸಾಹುಕಾರರು ಊಟದ ವ್ಯವಸ್ಥೆ ಮಾಡುವಾ ಎಂದಿದ್ದರೆಂದು ತಿಳಿಸಲು, ಬದರಿಯ ಸ್ವಾಭಿಮಾನ ಅಡ್ಡಿಯಾಯಿತು. ಕಪ್ಪಿಟ್ಟ ಮುಖದೊಡನೆ ಆತ ಕುಳಿತ.
ಅಷ್ಟರಲ್ಲಿ ಹಸುರು ಮನೆಯ ಮೇಲಣ ಅಂತಸ್ತಿನಲ್ಲಿ ಸಾಹುಕಾರರು ಕಾಣಿಸಿಕೊಂಡರು. ಅವರೀಗ ತೊಟ್ಟಿದ್ದುದು ಅಡ್ಡಪಂಚೆ ಮತ್ತು ಬರಿಯ ಬನೀನು. ಅವರ ಕೈಯಲ್ಲೊಂದು ನೀಳವಾದ ಲೋಟವಿತ್ತು. ಅದರಿಂದ ತುಸು ತುಸುವಾಗಿ ದ್ರಾವಕವನ್ನೇನೋ ಕುಡಿಯುತ್ತ, ದೃಷ್ಟಿ ಹರಿಯುವವರೆಗೂ ತಮ್ಮ ರಾಜ್ಯವನ್ನು ದಿಟ್ಟಿಸಿ ನೋಡುತ್ತ, ಅವರು ನಿಂತರು. ಮಹಡಿಯ ಜಗಲಿಯಲ್ಲೊಂದು ಕುರ್ಚಿಯಿತ್ತು. ಅದನ್ನೆಳೆದು ಕುಳಿತರು. ಲೋಟದಲ್ಲಿದ್ದುದನ್ನು ಕುಡಿಯುತ್ತಲಿದ್ದಂತೆ ಒಬ್ಬರೇ ಮಾತನಾಡುವುದಕ್ಕೂ ಅವರು ಆರಂಭಿಸಿದರು. ಎಂಥ ಮಾತುಗಳು! ಅಶ್ಲೀಲವೆನಿಸುವ ಭೀಭತ್ಸವೆನಿಸುವ ಬೈಗುಳ. ಎದ್ದು ನಿಂತು ಕಣ್ಣಿಗೆ ಬಿದ್ದ ಆಳುಗಳನ್ನು ಅವರು ಹತ್ತಿರಕ್ಕೆ ಕರೆದರು. ಹೀನಾಯವಾಗಿ ಅವರನ್ನು ಜರೆದರು. ಬಳಸಿದ ಪದಗಳೋ ತುಚ್ಛತಮ!
ನೋಡುತ್ತಲಿದ್ದ ಕೇಳುತ್ತಲಿದ್ದ ಬದರಿ ದಂಗಾಗಿ ಹೋದ. ಸ್ವಲ್ಪವೇ ಹೊತ್ತಿಗೆ ಮುಂಚೆ ತಾನು ಸಂಧಿಸಿದ ಭವ್ಯ ವ್ಯಕ್ತಿ ಈತನೇ ಏನು? ಇದೆಂತಹ ಹೊಸ ಅವತಾರ? ಯಾವ ಬಗೆಯ ನಾಟಕ ಇದು?
ಪೆಚ್ಚಾಗಿ ಯೋಚಿಸುತ್ತಿದ್ದ ಬದರಿ ಸಾಹುಕಾರರ ಕಣ್ಣಿಗೆ ಬಿದ್ದ. ಬರಿದಾಗಿದ್ದ ಲೋಟವನ್ನು ಅವರು ಅಂಗಳಕ್ಕೆ ಎಸೆದರು. ಕಂಪಿಸುವ ಕೀರಲು ಧ್ವನಿಯಲ್ಲಿ ಸುತ್ತಮುತ್ತಲ ಪ್ರದೇಶಕ್ಕೆಲ್ಲ ಕೇಳಿಸುವಂತೆ ಕಾವಲುಗಾರನನ್ನು ದೇಶಿಸಿ ಅವರೆಂದರು:
"ಲೋ ನಾಯಿ ಮಗನೆ! ಯಾರನ್ನು ಒಳಗೆ ಬಿಟ್ಟದೀಯೋ! ಕಳಿಸೋ ಅವನನ್ನು! ಕತ್ತು ಹಿಡಿದು ದಬ್ಬೋ ಹೊರಗೆ!”
ಬದರಿ ಧಿಗ್ಗನೆದ್ದು ನಿಂತ. ಕಾವಲುಗಾರ ಮಾತ್ರ ನಿಶ್ಚಲನಾಗಿದ್ದ. ಶಾಂತ ಸ್ವರದಲ್ಲಿ ಮೆಲ್ಲನೆ ಅವನೆಂದ:
"ನೀವು ಹೋಗಿಬಿಡಿ. ಹನ್ನೆರಡು ಆದ ಮೇಲೆ ಸಾಹುಕಾರ್ರು ಯಾವಾಗಲೂ ಹೀಗೆಯೇ. ಮೋಟಾರ್ ಸ್ಟಾಂಡಿನ ಹತ್ತಿರ ರುಕ್ಮಾಬಾಯಿಾದು ಚಾದುಕಾನ ಉಂಟು. ಅಲ್ಲಿ ನಿಮಗೆ ಚಾ ಸಿಕ್ಕಾತು..."
ಬದರಿ ,ಉರಿಯತೊಡಗಿದ ಅರಗಿನ ಮನೆಯಿಂದ ಓಡುವವನಂತೆ ಬೇಗ ಬೇಗನೆ ಹೆಜ್ಜೆ ಇಡುತ್ತ ಅಲ್ಲಿಂದ ನಡೆದ. ಸಾಹುಕಾರರ ಮಾತು ಕೇಳಿಸದಷ್ಟು ದೂರ ಆತ ಹೋದ ಮೇಲೂ ಆ ಪದಗಳು ಮಾತ್ರ ಆತನ ಕಿವಿಯಲ್ಲಿ ಮೊರೆಯುತ್ತಲೇ ಇದ್ದುವು.

ರುಕ್ಮಾಬಾಯಿಯ ಚಾ ಕಷಾಯವನ್ನು ಕುಡಿಯುವ ಧೈರ್ಯ ಬದರಿಗಾಗಲಿಲ್ಲ. ಬದಲು ಒಂದು ಡಜನ್ ಮಿಟ್ಲೆ ಬಾಳೆಹಣ್ಣು ತಿಂದು, ಒಂದು ಪಾಕೆಟ್ ಹನಿಡ್ಯೂವನ್ನು [ಅದೇ ಅಲ್ಲಿ ದೊರೆಯುತ್ತಿದ್ದ ಅತ್ಯುತ್ತಮ ಸಿಗರೇಟು] ಒಂದರ ಮೇಲೊಂದಾಗಿ ಸೇದಿದ.

ಮೂರು ಘಂಟೆಯ ಸುಮಾರಿಗೆ ಕಾರವಾರಕ್ಕೆ ಹೊರಟಿದ್ದ ಒಂದು ಟ್ರಕ್ ದಾಂಡೇಲಿಯಿಂದ ಬಂತು. ಅದರಲ್ಲಿ ಡ್ರೈವರನ ಎಡಕ್ಕೆ ನಾಲ್ಕನೆಯವನಾಗಿ ಬದರಿ ಆ ಊರು ಬಿಟ್ಟ.
ಕಾರವಾರವನ್ನು ತಲುಪಿದ ಮೇಲೆ ಆತ ಮಾಡಿದ ಮೊದಲ ಕೆಲಸವೆ೦ದರೆ ಮೈಗಂಟಿದ ಕೊಳೆಯನ್ನು ತೊಳೆಯುವ ಸ್ನಾನ. ಅದಾದೊಡನೆ ಹೊಟ್ಟೆ ತುಂಬ ತಿಂಡಿ. ಅನಂತರ ತನ್ನೂರಿನ ಪರಿಚಯದ ಫರ್ನೀಚರ್ ಮಾರ್ಟಿನವರಿಗೆ ಒಂದು ಕಾಗದ. “ಆಶ್ಚರ್ಯಕರವಾದ ಹತ್ತು ಹಲಗೆಗಳನ್ನು [೩'×೬'] ಕೊಂಡು ರವಾನಿಸಿದ್ದೇನೆ. ರೈಲ್ವೆಫ್ರೇಯಿಟ್ ಕೊಟ್ಟು ಪಾರ್ಸೆಲ್ ಬಿಡಿಸಿಕೊಳ್ಳಿ. ನಾನು ಬಂದ ಮೇಲೆ ಅದರ ವಿಲೇವಾರಿ."
ಆ ಸಂಜೆಯೇ ಬದರಿ ತನ್ನ ವ್ಯಾಪಾರೀ ಮಿತ್ರನನ್ನು ಕಂಡ.
"ಹಲಗೆ ಚೆನ್ನಾಗಿತ್ತು. ಹತ್ತು ತಗೊಂಡ್ಬಿಟ್ಟೆ. ಗಿರಾಕಿಗಳಿದ್ದಾರೆ. ಇಮ್ಮಡಿ ಬೆಲೆಗೆ ಮಾರಬಹುದು.”
ಬದರಿಯ ಈ ಮಾತನ್ನು ನಂಬಲು ಮನಸಾಗಲಿಲ್ಲವಾದರೂ, ಇದ್ದರೂ ಇರಬಹುದೆಂದು ಆತ ಸುಮ್ಮನಾದ.
ಬದರಿಯ ಒಳಗಿನ ಬೇಗುದಿ ಹಾಗೆಯೇ ಇತ್ತು. ಅವನೆಂದ:
"ಹನ್ನೆರಡಕ್ಕೆ ಮುಂಚೆಯೇ ವ್ಯಾಪಾರ ಮುಗೀಬೇಕೂಂತ ನೀವು ಹೇಳಿದ್ದು ಅರ್ಥವಾಯ್ತು. ಅಲ್ರೀ, ಸಾಹುಕಾರ್ರು ಕುಡುಕನೇನ್ರಿ?"
"ಯಾತರ ಮೇಲಿಂದ ಹೇಳ್ತೀರಿ?"
"ಕಣ್ಣಾರೆ ಕಂಡದ್ದರ ಮೇಲಿಂದ. ಇಷ್ಟುದ್ದದ ಲೋಟ ಕೈಲಿ ಹಿಡಕೊಂಡಿದ್ರು."
"ಅದರಲ್ಲೇನಿತ್ತು ಅಂದ್ಕೊಂಡ್ರಿ?"
"ಏನು?"
"ನೀವು ಹೇಳಿ."
"ರಮ್ಮೆ?"
"ಅಲ್ಲ!"
“ಮೆಶಿರಾ?”
“ ಊಹೂಂ, ಸೋತಿರಿ. ಬನ್ನಿ, ಹೊರಗೆ ಹೋಗೋಣ. ನಿಧಾನವಾಗಿ ಹೇಳ್ತೀನಿ.”
ಅಂಗಡಿಯನ್ನು ಮಗನ ಉಸ್ತುವಾರಿಗೊಪ್ಪಿಸಿ, ಬೆಳುದಿಂಗಳು ಹರಡ ತೊಡಗಿದ್ದ ಸಮುದ್ರ ತೀರಕ್ಕೆ ಬದರಿಯೊಡನೆ ಬಂದು, ದಯಾನಂದ ಸಾವ್ಕಾರ್ರ ಕತೆಯನ್ನು ಆ ವ್ಯಾಪಾರೀ ಮಿತ್ರ ಹೇಳಲಾರಂಭಿಸಿದ.
ಕಡು ಬಡವನಾಗಿ ಬದುಕು ಆರಂಭಿಸಿ ಕೋಟ್ಯಧೀಶನಾಗಿರುವ ವ್ಯಕ್ತಿ, ದಯಾನಂದ ಸಾಹುಕಾರರು. ಇಪ್ಪತ್ತನೆಯ ವಯಸ್ಸಿನಲ್ಲಿ ಅವರು, ಕಾರವಾರದಲ್ಲೇ ತಮ್ಮ ಅಣ್ಣನ ಅ೦ಗಡಿಯಲ್ಲಿ ದುಡಿಯುತ್ತಿದ್ದರು. ಆಗ ಅವರ ಪತ್ನಿ, ಚೊಚ್ಚಲ ಹೆರಿಗೆಯ ಅವಾಂತರದಲ್ಲಿ ಸತ್ತ ಶಿಶುವಿಗೆ ಜನ್ಮವಿತ್ತು, ತಾನೂ ಅಸು ನೀಗಿದಳು. ಅ೦ದಿನಿಂದ ದಯಾನಂದರು ಮನೋರೋಗಕ್ಕೊಳಗಾದರು, ಕುಡಿದರು. ಆ ಕುಡಿತ, ಸಂತೋಷ ಪಡುವುದಕ್ಕಲ್ಲ-ದುಃಖವನ್ನು ಮರೆಯುವುದಕ್ಕೆ. ಅಣ್ಣ, ತಮ್ಮನನ್ನು ಮನೆಯಿಂದ ಹೊರ ಹಾಕಿದ. ದಯಾನಂದ, ಹಳ್ಳಿ ಗುಡ್ಡಗಳಲ್ಲಿ ಅಲೆದು ಅಡವಿಯಲ್ಲಿ ನೆಲಸಿದರು. ಮುಂದೆ ಅವರ ಹೊಸ ಜೀವನ ಶುರುವಾಯಿತು. ಸಣ್ಣ ಪ್ರಮಾಣದಲ್ಲಿ ಆರಂಭಿಸಿ, ಮರಮಟ್ಟಗಳ ವಾಣಿಜ್ಯ ಲೋಕದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿಯುಳ್ಳ ಉದ್ಯಮ ಕಟ್ಟಿದರು.
ಹೆಂಡತಿ ಸತ್ತಂದಿನಿಂದ ಮೊದಲ್ಗೊಂಡು ಅವರು ಮದ್ಯ ಸೇವಿಸದದಿನವಿಲ್ಲ. ವ್ಯವಹಾರವನ್ನೆಲ್ಲ ಮಧಾಹ್ನದೊಳಗಾಗಿ ಮುಗಿಸಿ, ಆಮೇಲೆ ಕುಡಿಯತೊಡಗುತ್ತಿದ್ದರು. ಅವರಿಗೆ ಮತ್ತೊಂದು ಮದುವೆ ಮಾಡಿಸಬೇಕೆಂದು ಎಷ್ಟೊಂದು ಜನ ಪ್ರಯತ್ನ ಪಟ್ಟರು! ಊಹೂಂ. ಯಾವ ಬಂಧನವೂ ಇಲ್ಲದ ಹೆಮ್ಮರವಾಗಿ ಅವರು ಬೆಳೆದರು. ಹೀಗೆ ನಾಲ್ವತ್ತು ವರ್ಷಗಳ ಕಾಲ ಅವರು ದುಡಿದರು, ಕುಡಿದರು. ಮೊದಲಿನ ಕೆಲ ವರ್ಷಗಳನ್ನು ಬಿಟ್ಟರೆ ಮುಂದೆ ಅವರು ಕುಡಿದದ್ದೆಲ್ಲಾ ರಾಜಯೋಗ್ಯವಾದ ಪೇಯ. ಅಪ್ಪಟ ವಿದೇಶೀ. ಮಧಾಹ್ನದವರೆಗೆ ಅವರ ಜತೆಯಲ್ಲಿರುತ್ತಿದ್ದವರು, ಹನ್ನೆರಡು ದಾಟಿದ ಬಳಿಕ ಅವರ ಹತ್ತಿರ ಸಾರುತ್ತಿರಲಿಲ್ಲ. ಅವರೆದುರು ನಿಲ್ಲುವ ಧೈರ್ಯವೇ ಯಾರಿಗೂ ಇರಲಿಲ್ಲ.
 ಅಂಥಾದ್ದರಲ್ಲಿ ಮದ್ಯಪಾನ ನಿಷೇಧದ ಮಸೂದೆ ಬಂತು. ಅದು ಶಾಸನವಾದಮೇಲೆ ದಯಾನಂದರ ಗತಿ ಏನು ? ಎ೦ದು ಅವರ ಆತ್ಮೀಯರೆಷ್ಟೋ ಜನ ಗಾಬರಿಗೊಂಡರು. ಆರೋಗ್ಯದ ಕಾರಣದಿಂದ ಪರ್ಮಿಟ್ ದೊರಕಿಸಿಕೊಳ್ಳುವುದೇನೂ ಕಷ್ಟವಿರಲಿಲ್ಲ. ಒಂದು ಅರ್ಜಿಗೆ ಸಹಿ ಮಾಡಿದ್ದರೆ ಸಾಕು, ಪರ್ಮಿಟ್ ದೊರೆಯುತ್ತಿತ್ತು. ಆದರೆ ದಯಾನಂದರು ಒಪ್ಪಲಿಲ್ಲ. ಅವರಂತಹ ಪ್ರಬಲ ಶ್ರೀಮಂತರಿಗೆ ಕಳ್ಳತನದಲ್ಲಿ ಮದ್ಯ ದೊರಕಿಸಿಕೊಳ್ಳುವುದೂ ಪ್ರಯಾಸದ ಮಾತಾಗಿರಲಿಲ್ಲ. ಪ್ರಾಯಶಃ ಅವರು ಹಾಗೆ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ ಆ ಗೊಡವೆಗೂ ದಯಾನಂದರು ಹೋಗಲಿಲ್ಲ. ಮಸೂದೆ ಶಾಸನವಾಗಿ ಅದು ಜಾರಿಗೊಳ್ಳುವ ದಿನ ಬಂತು. ದಯಾನಂದರ ಬದುಕು ಯಥಾಪ್ರಕಾರವಾಗಿ ಸಾಗಿತ್ತೇ ಹೊರತು, ಯಾವುದೇ ಬಗೆಯ ಕಳವಳವೂ ಅವರಲ್ಲಿ ತೋರಿ ಬರಲಿಲ್ಲ.
ಕೊನೆಯ ದಿನವೂ ಬಂತು. ತಮ್ಮಲಿ ಉಳಿದಿದ್ದ ಬಾಟ್ಲಿಯೊಂದನ್ನು ಬರಿದುಗೊಳಿಸಿದರಲ್ಲದೆ ನಿತ್ಯಕ್ಕಿಂತ ಒಂದು ತೊಟ್ಟನ್ನೂ ಅವರು ಹೆಚ್ಚು ಸೇವಿಸಲಿಲ್ಲ.
ಮಾರನೆಯ-ಮದ್ಯಪಾನ ನಿಷೇಧದ ಮೊದಲ-ದಿನ!
ಪೂರ್ವಾಹ್ನ ಎಂದಿನಂತೆ ವ್ಯವಹಾರಗಳು ನಡೆದುವು. ದಯಾನಂದರ ಮನಸ್ಸು ಒಂದಿಷ್ಟೂ ಅಸ್ತವ್ಯಸ್ತವಾಗಿರಲಿಲ್ಲ. ಅವರನ್ನು ಬಲ್ಲವರು ಮಾತ್ರ ಆತಂಕಕ್ಕೊಳಗಾಗಿದ್ದರು. ಸಾಹುಕಾರರಿಗೆ ಮತಿಭ್ರಮಣೆಯಾಗಬಹುದೆಂಬ ಭಯ ಅವರಿಗಿತ್ತು.
ಹನ್ನೆರಡು ದಾಟಿತು !
ದಯಾನಂದರು ಮನೆಗೆ ಹೋದರು.
"ಅಡುಗೆಯಾಯ್ತೆ?” ಎಂದು ಚಾಕರನನ್ನು ಕೇಳಿದರು.
"ಮಹಡಿಗೆ ಒಂದು ಸ್ಟವ್ ತಾ,” ಎಂದರು.
ಸ್ಟವ್ ಹಚ್ಚಿ, ಅದರ ಮೇಲೆ ನೀರನ್ನು ಕುದಿಯಲಿಟ್ಟು, ತಾವು ಕುರ್ಚಿಯ ಮೇಲೆ ಕುಳಿತರು.
ನೀರು ಮರಳತೊಡಗಿದಂತೆ ಅವರ ಮನಸ್ಸು ಹತೋಟಿ ತಪ್ಪಿತು. ಕೊತ ಕೊತ ಕುದಿದು ನೀರು ಸಿಡಿಯಲಾರಂಭಿಸಿದಂತೆ ಅವರ ಮೌನದ ಕಟ್ಟೆಯೊಡೆಯಿತು. ಸುಡುನೀರನ್ನು ಒಂದು ಲೋಟಕ್ಕೆ ಸುರುವಿ ಅವರು ತುಟಿಗಿಟ್ಟರು. ಒಂದು ಚೂರು ಕುಡಿದರು. ನಾಲಿಗೆ ಗಂಟಲು ಸುಟ್ಟು ಹೋದುವು. ಮತ್ತಿಷ್ಟು ಸ್ವಲ್ಪ ಸ್ವಲ್ಪವಾಗಿ ಇಷ್ಟಿಷ್ಟೇ-ಕುಡಿಯುತ್ತ ಹೋದರು. ಒಳಬಾಯಿಯೆಲ್ಲ ಚುರ್ ಚುರ್ ಎಂದಂತೆ, ಅವಾಚ್ಯ ಪದಗಳು ನಿತ್ಯದಂತೆ ಉರುಳುತ್ತ ಬಂದುವು. ಅವರಿಗೆ ಮತ್ತೇರಿತು.
ಅಂದಿನಿಂದ ಇಂದಿನವರೆಗೂ ಅವರದು ಆ ಬಗೆಯ ಕುಡಿತ ಪ್ರತಿದಿನವೂ. ಒಂದು ನೀಳಲೋಟದ ತುಂಬ ಬಿಸಿ ನೀರು :
"ಎಂಥ ಬದುಕು !” ಎಂದು ಬದರಿ, ವ್ಯಾಪಾರೀ ಮಿತ್ರ ಮಾತು ಮುಗಿಸಿದಾಗ.
ಆ ರಾತ್ರಿ ಹೋಟೆಲಿಗೆ ಮರಳಿದ ಬದರಿಗೆ ಬೇಗನೆ ನಿದ್ದೆ ಹತ್ತಲಿಲ್ಲ. ನಿದ್ರೆ ಬಂದಾಗಲೂ ದಯಾನಂದರದೇ ಕನಸು. ಒಮ್ಮೆ “ ಅದೇ – ಎಷ್ಟು ಬೇಕು?” ಎಂಬ ಅವರ ಗುಡುಗು ಧ್ವನಿ ಕೇಳಿ, ಅವನು ಬೆಚ್ಚಿ ಎಚ್ಚೆತ್ತ. ಪುನಃ ನಿದ್ದೆ ಹತ್ತಿದಾಗ, ದಯಾನಂದರು ಕೈಯಲ್ಲಿ ಲೋಟ ಹಿಡಿದು ಶಬ್ದ ಬ್ರಹ್ಮನಾಗಿ ಪದ ಸೃಷ್ಟಿಯಲ್ಲಿ ತೊಡಗಿದ್ದ ಚಿತ್ರಮಾಲೆ ಅವನ ಕಣ್ಣಿಗೆ ಕಟ್ಟಿತು.

****

“ಅದ್ಭುತ !” ಎ೦ದ ಚಿಕ್ಕಣ್ಣಯ್ಯ.
ಇಬ್ಬರ ಬಾಟಲಿಗಳೂ ಮಗ್ಗು ಗಳೂ ಬರಿದಾಗಿದ್ದುವು.
ಬರವಣಿಗೆಯ ಮುಖ್ಯ ಅಂಶಗಳ ಕೆಳಗೆ ಗೆರೆ ಎಳೆಯುವವನಂತೆ ಬದರಿಯೆಂದ.
“ನಾಲ್ವತ್ತು ವರ್ಷ ಆ ಸಾಹುಕಾರ ಒಂದೇ ಸಮನೆ ಕುಡೀತಾ ಇದ್ದ. ಇದನ್ನ ಮರೀಬೇಡ.”
ನಮ್ಮದೂ ಇಪ್ಪತ್ತು ವರ್ಷ ಆಗ್ತಾ ಬಂತು ಅಂತೀನಿ.”
ಬದರಿ ತನ್ನ ಕೋಟಿನ ಕಿಸೆಯೊಳಗಿಂದ ಗೋಲ್ಡ್ ಪ್ಲೇಕ್ ಸಿಗರೇಟ್ ಪ್ಯಾಕೆಟನ್ನೂ ಲೈಟರನ್ನೂ ಹೊರತೆಗೆದ. ಪ್ಯಾಕೆಟ್ ಒಡೆದು ಒಂದನ್ನ ಹಚ್ಚಿ ತೆರೆದ ಪ್ಯಾಕಟ್ಟನ್ನೂ ಆರಿಸಿದ ಲೈಟರನ್ನೂ ಗೆಳೆಯನೆಡೆಗೆ ತಳ್ಳಿದ.
ಹೊಗೆ ಬಿಡುತ್ತ ಬದರಿಯೆಂದ :
“ಅಂದ್ಹಾಗೆ ಚಿಕ್ಕಣ್ಣಯ್ಯ, ನೀನ್ಹೊಂದು ಡೈನಿಂಗ್ ಟೇಬಲ್ ಯಾಕೆ ಮಾಡಿಸಬಾರದು?”
ಗೆಳೆಯ ಕಣ್ಣಂಚಿನಲ್ಲೇ ನಕ್ಕು ಅ೦ದ :
"ಮೂರಡಿ, ಆರಡಿ ಮಂಚ ಕೂಡಾ ಮಾಡಿಸ್ಬಹುದು. ಆದರೆ ಬದರಿ, ವ್ಯವಹಾರದ ಮಾತೆಲ್ಲ ಹಗಲು ಹನ್ನೆರಡು ಘಂಟೆಗೆ ಮುಂಚೆ!”
"ಹಹ್ಹ! "
ಆ ದಿವ್ಯಾತ್ಮ ದಯಾನಂದನ ಮಹಿಮಾಗಾನ ಕೇಳಿದ್ಮೇಲೆ ಅವನ ಆರೋಗ್ಯಕ್ಕೆ ಸ್ವಸ್ತಿಪಾನ ಮಾಡಬೇಕಾದ್ದು ನಮ್ಮಂಥ ಭಕ್ತರ ಕರ್ತವ್ಯ.”
ಬದರಿ ಕತ್ತು ತಿರುಗಿಸಿ ಅತ್ತಿತ್ತ ನೋಡಿದ. ಹತ್ತಿರದಲ್ಲೇ ಸುಳಿದಾಡಿದಂತೆ ಕಂಡ ಮಂದಿರದ ಸೇವಕನನ್ನುದ್ದೇಶಿಸಿ, ಉಚ್ಚಕಂಠದಲ್ಲಿ ಅವನೆ೦ದ :
"ಬೇರರ್! ಇನ್ನೆರಡು ಬೀಯರ್ ಮತ್ತು ಒಂದು ಪ್ಲೇಟ್ ನಟ್ಸ್.”